ದರುವು

ಪ್ರಾಣಕಾಂತ ಹೋದ ಮೇಲೆ
ಪ್ರಾಣದಾಶೆ ಇನ್ಯಾತಕ್ಕೋ ॥
ಕಾಣದಿನ್ನೂ, ಭಯವೂ ಕಾಯ
ತ್ರಾಣಗುಂದಿದೇ, ಬಾಲಾ ॥

ಚಿತ್ರಾಂಗದೆ: ಯಲಾ ಬಭೃವಾಹನ ನನ್ನ ಜೀವವೇ ತನ್ನದೆಂದು, ಮಾಂಗಲ್ಯ ಕಟ್ಟಿದ ಪ್ರಾಣಪತಿಯು ಹೋದಬಳಿಕ, ಈ ಪ್ರಾಣದಾಶೆ ಇನ್ಯಾತಕ್ಕೆ. ನಮ್ಮ ದೇಹಗಳು, ತ್ರಾಣಗುಂದುತ್ತಾ ಬಂತು. ಈ ತನುವಿನ ಆಶೆಯನ್ನು ತೊರೆದು ಇದ್ದೇವೋ ದುರ್ಮಾರ್ಗ ॥

ಕಂದ

ಸುಡು ಸುಡು ಇನ್ಯಾತಕೆ, ಈ ಭೋಗ ಭಾಗ್ಯ
ಸಿರಿಸಂಪತ್ತುಗಳ್ಯಾವತ್ತೂ ಸುಟ್ಟು ಹೋಗಲೀ
ಯಲೆ ಮಗನೇ, ಈ ಮಣಿಪುರದ ಸಡಗರವೂ
ಬೇಕಾದಡವಿಯಾಗಲೀ ಜಾಲಿಕಂಟಿಯು
ಬೆಳೆಯಲೀ  ಇದರ ಸುಖ ನಮಗೇನು ?
ಹೋಗುವ ನಡಿಯೆಂದಳು ॥

ಚಿತ್ರಾಂಗದೆ: ಯಲಾ ಮಗನೇ ಈ ಭೋಗಭಾಗ್ಯ ಸಿರಿ ಸಂಪತ್ತು, ಯಲ್ಲಾ ಸುಟ್ಟು ಬೂದಿಯಾಗಲಿ. ಈ ಮಣಿಪುರವೆಂಬುವಂಥದ್ದು ಹಾಳಾಗಿ ಹೋಗಲಿ, ಜಾಲಿಕಂಟಿ ಬೆಳೆದು ಹೋಗಲಿ, ಇದರಾಸೆ ಯಾತಕ್ಕೆ ನಮಗೆ. ಏನು ಭಯವಾದರೂ ಆಗಲಿ. ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಪ್ರಾಣೇಶನಾದ ಪಾರ್ಥನನ್ನೂ ಎಲ್ಲಿ ಕೊಂದು ಇದ್ದೀಯೊ ಜಾಗ್ರತೆಯಿಂದ ತೋರೋ ಬಾಲಾ ಅತಿ ದುರ್ಜನ ಶೀಲಾ.

(ತಾಯಂದಿರೊಡನೆ ರಣಭೂಮಿಗೆ ಬರುವಿಕೆ)

ಬಭೃವಾಹನ: ಅಮ್ಮಾ ಜನನೀ ನಾನು ಪರಿಪರಿ ವಿಧದಿಂದ, ಹೇಳಿಕೊಂಡಾಗ್ಯೂ ನಿಮ್ಮ ಮನಕ್ಕೆ ಬಾರದೇ ಹೋಯಿತು. ಇದೇ ಸ್ಥಳದಲ್ಲಿ, ಸಕಲ ಸೈನ್ಯದೊಡನೇ, ನಿಮ್ಮ ಕಾಂತನಾದ ಅರ್ಜುನ ಭೂಪಾಲನು ಇದ್ದಾನೆ. ನೋಡಿರಮ್ಮಾ ತಾಯಿಗಳಿರಾ……

ದ್ವಿಪದಿ

ಹಾ ನಾಥ, ಹಾ ನಾಥ, ಹಾ ಪ್ರಾಣನಾಥ ಹಾ ರಮಣಾ
ಅಯ್ಯಯ್ಯ ಮಲಗಿದ್ಯಾತಕೆ, ಇಲ್ಲಿ  ಘೋರ
ತರ ಸಂಗ್ರಾಮ, ಧಾರುಣಿಯು ಲೇಸಾಯಿತು
ಅಕಟಕಟಾ, ಬಾ ರಮಣ, ಮಂದಿರಕೆ
ಬೇಗದಿಂದಲಿ ಎದ್ದು, ನೋಡು ಕಣ್ದೆರೆದು
ಸವಿದೋರುವಂದದಲಿ ಮಾತಾಡು ಹರುಷದಲಿ ॥
ದೂರೆನ್ನ ಮಾಡಬೇಡಾ, ಮಾರವೈರಿಯ ಕೂಡೆ
ಮರೆತು ಯುದ್ಧವ ಮಾಡಿ, ಮೂರುಲೋಕದ ಗಂಡನೆನಿಸಿ
ದ್ರುಪದಾತ್ಮಜೆಯ  ಬೇರೊಂದು ರೂಪದಲಿ ಗೆಲ್ದು
ಕುರುವಂಶ ಸಂಹಾರ ಮಾಡಿದೆಯೋ  ಈ ಲೋಕದಲಿ
ವಾರಿಜಾಂಬಕನೆ ಸಾರಥಿಯೆಂದೆನಿಸಿದೆ ನಿನಗೆ
ಆರು ಸಮನಿಲ್ಲಾ ಭುಜಬಲಕೆ, ಯೆನುತಿರ್ದೆ  ಮೀರಿ
ಈ ಪುತ್ರ ಮಾರಿಯಾದನು ನಿಮ್ಮ ಜೀವಕ್ಕೆ ಪ್ರಾಣೇಶ್ವರಾ

ದರುವು

ಕಾಮ ಸನ್ನಿಭ ರೂಪನೆಲ್ಲಿಹಾ ತೋರೋ
ಯಮ್ಮ ಒಡಲಿಗೆ ಬೆಂಕಿ ಹಚ್ಚಬೇಡೆಲೋ ॥

ಪತಿಯೆ ನಿನ್ನನಗಲೀ ನಾವೆಂತು ಜೀವಿಸುವೆವೂ
ಪತಿಹೀನರಾಗೀ  ಕ್ಷಿತಿಯಲ್ಲಿ ನಾವೂ ॥

ಪತಿವ್ರತೆಯಾದ ದ್ರೌಪದಿಯ ಮಾಂಗಲ್ಯವೂ
ಸತತಾ ಸ್ಥಿರವೆಂದೂ  ನಂಬಿ ಇದ್ದೇವೋ ॥

ಚಿತ್ರಾಂಗದೆ: ಅಯ್ಯೋ ಪ್ರಾಣನಾಥ, ಈ ಕ್ಷಿತಿಯೊಳ್ ನೀನಿಲ್ಲದ ಬಳಿಕ ನಾವು ಜೀವಿಸಲಾರೆವು. ಇದೂ ಅಲ್ಲದೇ ನಿಮ್ಮ ಪಟ್ಟದರಸಿಯಾದ, ದ್ರೌಪದಾ ದೇವಿಯ ಮಾಂಗಲ್ಯವೂ ಸತತ ಸ್ಥಿರವೆಂದೂ ನಂಬಿ ಇದ್ದೆವಲ್ಲೊ ರಮಣಾ, ಇಂದಿನ ದಿನಕ್ಕೆ ವ್ರತ ಭಂಗವಾಯಿತು. ಇಂಥಪ್ಪ ಕಷ್ಟವನ್ನು ಯೀ ದುರ್ಮಾರ್ಗನಾದ ಕುವರನಿದ ಪ್ರಾಪ್ತಿಯಾಯಿತೇನೋ ಕಾಂತ  ಅಯ್ಯೋ ಪ್ರಾಣೇಶ್ವರಾ ಹೇ ಜೀವದೊಲ್ಲಭ ಎದ್ದು ಒಂದು ಮಾತನಾಡಬಾರದೇನೋ ರಮಣಾ ಸದ್ಗುಣಾಭರಣಾ

ಕಂದ

ಕೊಲೆಗೊಳಿಸಿದೈ ದ್ರೋಹಿ, ಜನಕನ ಕಡೆಗೆ
ನಾವಿನ್ನು ಉಳಿಯಬಾರದು, ರಂಡೆತನದ
ಬಾಳುವೆ ಹಿಡಿದು, ಇಳೆಯೊಳಿಬ್ಬರೂ
ಪತಿಹೀನರಾಗಿ ಕಳೆಯಲೊಲ್ಲೆವು ಕಾಲವನು ಪ್ರಾಣೇಶ್ವರಾ ॥

ಚಿತ್ರಾಂಗದೆ: ಅಯ್ಯೋ ಮಗನೇ ನಮ್ಮ ಪ್ರಾಣೇಶನನ್ನೂ ನೀನು ಕೊಂದಬಳಿಕ ನಾವು ಈರ‌್ವರೂ, ರಂಡೆತನದಿಂದ ಇರಲಾರೆವು ನಮ್ಮನ್ನು ಕತ್ತರಿಸಿ ಹಾಕೋ ಪಾಪಾತ್ಮ ॥

ದರುವು

ಹಿಡಿಯೋ ಖಡ್ಗವಾ, ನಿಂತು  ಯಲವೋ ಪಾಪಾತ್ಮ
ಕಡಿದು ಹಾಕೋ, ನಮ್ಮ ತಲೆಯ  ಕಾಂತನೆಡೆಯಾಲಿ ॥ ॥

ತಂದೆ ತಾಯಿಗಳ ವಧೆ  ವೆಗ್ಗಳವಾಯಿತು
ಮುಂದೆ ನಿನಗೆ ಮಹಾ ಪುಣ್ಯ  ಬಂದು ವದಗೀತೊ ॥ ॥

ಹಿಂದೆ ಪರಶುರಾಮನು ತಾಯನು  ಕೊಲ್ಲಲಿಲ್ಲವೇ
ತಂದೆ ಮಾತು ಮೀರಿದಾನೇ  ತಿಳಿಯೋ ಸತ್ಪುತ್ರಾ ॥ ॥

ಸಂದೇಹವೂ ಬೇಡಾ ಕೃಷ್ಣಾದ್ರೀಶ ಮೆಚ್ಚುವಾ
ಕೊಯ್ಯೋ ಕೊರಳಾ  ಕಾಂತನೆಡೆಯಾಲೀ   ॥

ಚಿತ್ರಾಂಗದೆ: ಯಲಾ ಪಾಪಾತ್ಮನಾದ ಬಭೃವಾಹನನೇ ಕೇಳು ನಿನ್ನ ಹಸ್ತದಲ್ಲಿ ಖಡ್ಗವಂ ಪಿಡಿದು, ಕಾಂತನ ಪಾದದ ಮೇಲೆ ನಮ್ಮ ಶಿರಗಳನ್ನು ಕತ್ತರಿಸಿ ಹಾಕಬಾರದೇನೋ ಕ್ರೂರಿ. ನಿಮ್ಮ ತಂದೆ ಒಬ್ಬರನ್ನು ಕೊಂದರೆ ಸಾರ್ಥಕವಾಗದು. ಆದಕಾರಣ ತಾಯಿಗಳ ಸಮೇತವಾಗಿ ಕೊಂದರೆ ನಿನಗೆ ಮಹಾಪುಣ್ಯ ಬರುತ್ತೆ. ಅತಿಜಾಗ್ರತೆಯಿಂದ ನಮ್ಮ ಶಿರಗಳನ್ನು ಖಂಡ್ರಿಸುವಂಥವನಾಗು. ಹಿಂದೆ ಪರಶುರಾಮನು ತಾಯಿಯನ್ನು ಕೊಲ್ಲಲಿಲ್ಲವೇನೋ ಮೂರ್ಖ ॥

ದ್ವಿಪದೆ

ಹರಹರಾ ನಾನೆಂತು ಪರಮ ಪಾತಕನಾದೇ
ಗುರುಪಿತಾ, ಗುರುಮಾತೃ, ಗುರುದೈವವೆಂಬ
ಗುರುತನರಿಯದೇ, ಗುಣಹೀನನಾದೇ
ಧರೆಯ ರಾಯರಿಗೆಲ್ಲಾ, ದೊಡ್ಡತನ ವಹಿಸಿರ್ದೆ
ಇದು ನನಗೆ ಯೆಲ್ಲಿಂದ, ಈ ಬುದ್ಧಿ ಸಂಭವಿಸಿತೋ
ವರಪಿತನ ಕೊಂದೂ  ನಾನುಳಿದೊಡೆ, ಲೋಕದೊಳು
ಜರಿದು ನಿಂದಿಸುತಿಹರೂ  ಜನರು ಯನ್ನಾ
ತರಹರಿಸದೀ ಪಾಪಾ  ತೆರನ ಕಾಣೆನು ಮುಂದೇ
ತಿರುಗಿದೊಡೆ, ಸುಕ್ಷೇತ್ರ, ತೀರ್ಥಯಾತ್ರೆಗಳೂ
ತೋರದಂತೈಯ್ಯಯ್ಯೋ  ಸುರಪ ದಿಕ್ಪಾಲಕರು
ಪುಣ್ಯಪದವಿ ಯನಗಿಲ್ಲದಂತಾಯಿತೇ
ಹಿಡಿದು ದಂಡನೆ ಮಾಳ್ಪರು  ಯಮನ ಪಟ್ಟಣದೀ
ಇರದೇ ನರಕವೇ ಪ್ರಾಪ್ತಿ, ಮನೆಯಾಯಿತೆನಗೇ
ಪರಮೇಷ್ಠಿ, ಈ ರೀತಿ ಬರೆದನೇ, ಪಣೆಯಲ್ಲೀ
ಮುರಹರಾ  ಹೇ ಕೃಷ್ಣಾ, ಗಿರಿಹರಾ ಯೆಂದೂ
ಸ್ಮರಿಸುತಾ, ಶಿರನೀಡಿ  ಮಾತೆಯ ಚರಣಕೆರಗೀ
ಚಿಂತಿಸುತಲಿಂತೆಂದನೂ ॥

ದರುವುತ್ರಿವುಡೆ

ತಾಯೇ, ಚಿತ್ತೈಸಮ್ಮಾ ಪೋಗಿ ನಾ
ಹಯವ ಸಹಿತೊಪ್ಪಿಸಿದೆ ತಂದೆಗೇ
ನೋಯ ನುಡಿದನೂ  ಸಂಗರವ ಮಾಡೆಂದು ಭಂಜಿಸಿದಾ
ನ್ಯಾಯವಿದು, ಕ್ಷತ್ರಿಯರಿಗೆನುತಲೀ ॥ ॥

ನೋಯಿಸಿದೆ, ಕಾಳಗದೀ, ಸರ‌್ವರಾ
ದಾಯ ತಪ್ಪಿದ ಬಳಿಕ, ಪೇಳ್ದೊಡೇನಹುದೂ, ತಾಯೇ ॥

ಬಭೃವಾಹನ: ಹೇ ತಾಯೇ, ಚಿತ್ತಯಿಸಿ ಕೇಳುವಂಥವಳಾಗು, ನಾನು ತಮ್ಮ ಆಜ್ಞೆ ಪ್ರಕಾರ, ಯಜ್ಞದ ಕುದುರೆ ಮುಂತಾದ ಸಮಸ್ತ ವಸ್ತುಗಳನ್ನು ತೆಗೆದುಕೊಂಡು ಹೋಗಿ ನಮ್ಮ ತಂದೆಯ ಪಾದಾರವಿಂದಕ್ಕೆ, ಸಮರ್ಪಿಸಲು, ನ್ಯಾಯದಿಂದ ಯನ್ನೊಡನೆ ಯುದ್ಧವನ್ನು ಮಾಡೆಂದು ಭಂಜಿಸಿದನಾದ ಕಾರಣ, ಇದು ಕ್ಷತ್ರಿಯರಿಗೆ ಪರಮ ಧರ್ಮವೆಂದು ಯುದ್ಧ ಮಾಡಿದೆ. ಮಿಂಚಿದ ಕಾರ‌್ಯಕ್ಕೆ ಚಿಂತಿಸಿದರೇನೂ ಫಲವಮ್ಮಾ ಜನನೀ.

ದರುವು

ಪಿತೃವಧೆ ಸಂಧಿಸಿತು ಜನ್ಮಕೇ
ಮಾತೃವಧೆ ಮಾಡೆಂದ ಬಳಿಕಾ
ಧಾತ್ರಿ ದೇವತೆ ಹೊರುವಳೇ ಕೇಳ್ ಇರುವುದಿನ್ಯಾಕೇ ॥

ಬಭೃವಾಹನ: ಹೇ ಜನನೀ ಈ ಕಾಲಕ್ಕೆ ಪಿತೃವಧೆಯೆಂಬುವಂಥದ್ದು ಯನ್ನ ಜನ್ಮಕ್ಕೆ ಸಂಭವಿಸಿ ಇದೆ. ಮಾತೃವಧೆಯನ್ನು ಮಾಡು ಎಂಬುದಾಗಿ ತಾವು ಅಪ್ಪಣೆಯನ್ನು ಮಾಡುತ್ತೀರಿ. ಹಾಗೆ ನಾನು ಮಾಡಿದ್ದೇ ಸಹಜವಾದರೆ ಈ ಭೂಮಿದೇವಿ ಹ್ಯಾಗೆ ಹೊರುವಳಮ್ಮಾ ಜನನೀ. ಈ ಧಾತ್ರಿಯಲ್ಲಿ ನಾನು ಇರಬೇಕೆ ಈ ಪಾತಕ ದೇಹವನ್ನೂ ಕಳೆದುಕೊಳ್ಳುತ್ತೇನಮ್ಮಾ ಜನನೀ ॥

(ಬಭೃವಾಹನಅಗ್ನಿ ಪ್ರವೇಶ)

ದರುವು

ಅನಲಾ ಪ್ರವೇಶಾ ಮಾಡುವೆನು, ಈ ದಿನ ಜನನೀ
ಬಿಡುವೆನೂ ಪ್ರಾಣಾವ ನೋಡು  ನೀ ನೋಡು ॥ ॥

ಅನುಪಮಾ ವೈಷ್ಣವನಮ್ಮಾ, ಪಾರ್ಥನ ಕೊಂದೊಡೆ
ಹರಿಗೆಂತು ಮುಖ ತೋರಿಸಲೀ, ತೋರಿಸಲೀ ॥

ಯೆಂತೂ ತೋರಲಿ ತಾಯಿಗಳಿರಾ, ಪಾತಕನಾದೆ
ನಿಂತರೇ, ನಿಮ್ಮಾಣೇ ಕೇಳಿ – ನೀವ್ ಕೇಳಿ ॥

ಬಭೃವಾಹನ: ಅಯ್ಯ ಯಜ್ಞೇಶ್ವರಾ, ಈ ಧಾತ್ರಿಯೊಳಗೆ ಪಿತನ ಕೊಂದಂಥ ಪಾತಕ ದೇಹವನ್ನು ನಿನಗೆ ಆಹುತಿಯನ್ನು ಕೊಡುತ್ತೇನೆ. ಅಲ್ಲದೆ ಅನುಪಮ ವೈಷ್ಣವಾಂಘ್ರೀ, ಪಾದಸೇವಕನಾದ, ಪಾರ್ಥನ ಕೊಂದಬಳಿಕ ಶ್ರೀ ಕೃಷ್ಣಮೂರ್ತಿಗೆ, ಮುಖವನ್ನು ಹ್ಯಾಗೆ ತೋರಿಸಬೇಕು. ಈ ತಕ್ಷಣದಲ್ಲಿ ಅಗ್ನಿ ಪ್ರವೇಶವನ್ನು ಮಾಡಿ, ಈ ದೇಹವನ್ನು ಸುಡುತ್ತಾ ಇದ್ದೇನಮ್ಮಾ ಮಾತೆ ಲೋಕ ಪ್ರಖ್ಯಾತೆ.

ಬಭೃವಾಹನ: ಎಲೈ ಚಾರಕ, ಅತಿಜಾಗ್ರತೆ ಇಂದ ಅಗ್ನಿಕೊಂಡವನ್ನು ರಚಿಸುವಂಥವನಾಗೋ ಚಾರ ವರ ಪಣಿಹಾರ. ಮತ್ತೂ ಪೇಳುತ್ತೇನಮ್ಮಾ ತಾಯಿಗಳಿರಾ.

ದರುವು

ಅಗ್ನಿಕೊಂಡಾವ  ಚಂದಾದಿಂ  ರಚಿಸಿದಾ
ತಂದು ಕಾಷ್ಟವ ಹಾಕಿ ಹುರಿಮಾಡಿ, ಹುರಿಮಾಡಿ ॥

ಬಭೃವಾಹನ: ಹೇ ಪರಮ ಪಾವನನಾದ ಯಜ್ಞೇಶ್ವರನೇ ದನುಜ ಧ್ವಂಸಕನೆಂದೆನಿಸಿಕೊಂಡು, ಶ್ರೀಕೃಷ್ಣ ಪಾದ ಸೇವಕನಾದ, ನಮ್ಮ ತಂದೆಯನ್ನು ಕೊಂದಂಥ ಈ ಪಾತಕ ದೇಹವನ್ನು ಅರ್ಪಿಸುತ್ತೇನೆ. ಅತಿ ತೀವ್ರದಿಂದ ಕೈಕೊಳ್ಳುವನಾಗೈಯ್ಯ ಯಜ್ಞೇಶ್ವರಾ ॥ಕೇಳಲಾರೆನಾ ಜನರಾನಿಂದೆ.

ದರುವು

ನಿಲ್ಲು, ನಿಲ್ಲೂ, ಕಂದಾ ನೀನೂ  ಅಗ್ನಿಕೊಂಡಕ್ಕೆ ಪೋಗಬೇಡೈಯ್ಯ
ನಲ್ಲಾನ ಪ್ರಾಣಾ ಪಡೆಯುವುದಕೇ  ನಿನಗೊಂದುಪಾಯ ಹೇಳುವೆನಿಂದೂ ॥

ಉಲೂಪಿ: ಹೇ ಕಂದಾ  ನಿಲ್ಲು ನಿಲ್ಲು ಅಗ್ನಿಪ್ರವೇಶವನ್ನು ಮಾಡುವುದೂ ಯೋಗ್ಯ ಯುಕ್ತವಾಗಿ ತೋರುವುದಿಲ್ಲ. ಈಗಿನ ವ್ಯಾಳೆಯಲ್ಲಿ, ತ್ವರಪಡದೆ ಚಿತ್ತವಿಟ್ಟು ಕೇಳಪ್ಪಾ ಬಾಲಾ  ನಮ್ಮ ಪ್ರಾಣಪತಿಯಾದ ಅರ್ಜುನ ಭೂಪಾಲಕನ ಪ್ರಾಣವನ್ನು ಪಡೆಯುವುದಕ್ಕೆ ಒಂದು ಉಪಾಯವುಂಟು. ಪೇಳುತ್ತೇನೆ ಕೇಳಪ್ಪಾ ಕೂಸೆ, ಲಾಲಿಸೆನ್ನ ಭಾಷೆ ॥

ದ್ವಿಪದೆ

ಎಲೆ ಮಗನೇ, ನಾ ಪೇಳ್ವೆ ಮಡಿದ ಪತಿಯೇಳ್ವುದಕೇ
ಸಲೆ ಉಪಾಯ ವಂದುಂಟು, ಪಾತಾಳ ಲೋಕದಲೀ ॥
ಇರುವ ಜೀವದಾಮಣೀ  ಫಣಿರಾಯನಲ್ಲಿಹುದೂ
ತರಬಲ್ಲರಂ ಕಾಣೆನುರಗ ಲೋಕವ ಪೊಕ್ಕೂ ॥
ವರ ಜೀವರತ್ನವಂ, ತ್ವರಿತದಿಂದಲೀ ತಂದು
ಫಲುಗುಣನ ಪ್ರಾಣವಂ, ಪಡೆವ ಪುರುಷನೆಲ್ಲಿಹನೂ
ಯೆಂದು ಪೇಳ್ದೊಡೆ ಕೇಳ್ದು, ಮಾತೆಯರಿಗಿಂತೆಂದನೂ ॥

ಉಲೂಪಿ: ಅಪ್ಪಾ ಬಾಲಾ, ಈ ಯುದ್ಧರಂಗದ ಮಧ್ಯದಲ್ಲಿ ಬಿದ್ದಿರುವ, ಯಮ್ಮ ಪ್ರಾಣಪತಿಯು ಮತ್ತು ಸಮಸ್ತ ವೀರರೂ ಬದುಕುವುದಕ್ಕೆ ಒಂದು ಉಪಾಯ ಉಂಟು. ಅದು ಹ್ಯಾಗಂದರೆ, ಪಾತಾಳ ಲೋಕದಲ್ಲಿ, ಆದಿಶೇಷನಲ್ಲಿ ಕೋಟಿ ಸೂರ‌್ಯ ಪ್ರಕಾಶಮಾನವಾದಂಥ ಸಂಜೀವಮಣೀ ಯೆಂಬ ರತ್ನವಿದೆ. ಆ ರತ್ನವನ್ನು ತೆಗೆದುಕೊಂಡು ಬರುವಂಥ ಪುರುಷರು ಧಾರು ಇದ್ದಾರಪ್ಪಾ ಬಾಲಾ  ಹಾಗೆ ಮಣಿಯನ್ನು ತೆಗೆದುಕೊಂಡು ಬಂದರೆ ಯುದ್ಧಭೂಮಿಯಲ್ಲಿ ಬಿದ್ದಿರುವ, ಸಮಸ್ತ ವೀರರೂ ಬದುಕುವರು ಅಂಥ ಪರಾಕ್ರಮಶಾಲಿಗಳು ಧಾರು ಇದ್ದಾರಪ್ಪಾ ಬಾಲಾ ॥

ದರುವು

ತರುವೇನೇ ತಾಯೇ ತರುವೇನೆ ॥

ತರುವೇನಪ್ಪಣೆಯನ್ನು  ತ್ವರಿತದಿಂದಲಿ ತಾಯೇ
ಉರಗ ರಾಜನ ಬಳಿಯೊಳಿರುವ  ಜೀವದಾಮಣಿ  ತರುವೇ ॥

ಪೊಕ್ಕು ಪಾತಾಳದೀ ಲೆಕ್ಕಿಸಿ  ದಹಿಗಳಾ
ದಿಕ್ಕೂ ಕೆಡಿಸೀ, ಮುರಿದಿಕ್ಕಿ ಜೀವದ ಮಣೀ ॥ತರುವೇನೆ ತಾಯೇ ॥

ಹರಿಹರಾ ಪರಮೇಷ್ಠಿ ಸುರರು ದಿಕ್ಪಾಲಕರು
ಬರಲಡ್ಡಾ, ತೊರೆದು ನಾ ತರುವೇ ಜೀವದಮಣೀ ತರುವೇನೆ ತಾಯೆ ॥

ಮಡಿದಾ ಪಾರ್ಥನಾ ಪ್ರಾಣಾ, ಪಡೆವೆನಲ್ಲದೇ  ನಾನು
ಬಿಡೆನಮ್ಮಾ, ಕೃಷ್ಣಾದ್ರೀ ವಡೆಯನಂಘ್ರಿಗಳಾಣೆ  ತರುವೇನೆ ತಾಯೇ ॥

ಬಭೃವಾಹನ: ಹೇ ಮಾತೇ, ಅತಿ ಜಾಗ್ರತೆಯಿಂದ ನಾನು ಪಾತಾಳ ಲೋಕಕ್ಕೆ ಪೊಕ್ಕು, ಅಹಿಗಳನ್ನು ದಿಕ್ಕುಗೆಡಿಸಿ ಸದೆ ಬಡಿದು, ಮೂರು ಲೋಕದಲ್ಲಿಯೂ ಪ್ರಖ್ಯಾತಿಪಡಿಸಿ, ಸಂಜೀವ ರತ್ನವನ್ನು, ತೆಗೆದುಕೊಂಡು ಬರುತ್ತೇನೆ. ಅತಿ ಶೀಘ್ರದಿಂದ ಅಪ್ಪಣೆಯನ್ನು ದಯಪಾಲಿಸಬೇಕಮ್ಮಾ ತಾಯೇ ॥

ಚಿತ್ರಾಂಗದೆ: ಅದೇ ಪ್ರಕಾರ ತೆಗೆದುಕೊಂಡು ಬಾರಪ್ಪಾ ಬಾಲಾ – ಸುಗುಣ ವಿಶಾಲ॥

(ಬಭೃವಾಹನ ಪಾತಾಳ ಲೋಕಕ್ಕೆ ಹೋಗುವಿಕೆ)

ದರುವು

ಪ್ರಥಮಕ್ಕೆ ಪಾತಾಳ  ಲೋಕಕ್ಕೆ ಸೈನ್ಯದಿ
ಅತಿ ತವಕದಿಂ ಬಭೃವಾಹನನು ಆಗ ತಾನಾಗ ॥

ಆಹವಡೀ ಸರ್ಪಗಳಾ ಸಂಹರಿಸುತ್ತಾ ಇರಲಾಗಿ
ಅಹಿಪತಿಯು ಕಂಡೂ, ಬೆರಗಾದ, ತಾನಾದ ॥

ಮನ್ನಿಸಿದಾ ಮನ್ನಿಸಿದಾ ಮಗುವೇ ಜೀವದಾಮಣೀ
ಸನ್ಹಿತವಾಗಿ ನಾ ಬರುವೇ, ನಾ ಬರುವೇ ॥

ತೆರಳೀದಾ, ಮಣಿಪುರದ, ಸಂಗ್ರಾಮ ಭೂಮಿಗೆ
ಆದಿಶೇಷನು ಮುದದಿಂದಾ, ಮುದದಿಂದಾ ॥

ಧೃತರಾಷ್ಟ್ರ ತಾನಾಗ  ತರಳಾ, ದುರ್ಬುದ್ಧಿಗೆ
ದುಸ್ವಭಾವರೇ  ನರನ ಶಿರವರಿದೂ ॥

ಘೋರ ಕಾನನದೊಳಗೆ  ಬಿಸುಟಲ್ಕೆ ಫಲುಗುಣನಾ
ನಾರಿಯರು ನೋಡಿ, ಮುಖ ಕಾಣದಂತೇ ಕಾಣದಲೇ ॥

ಭಾಗವತ: ಕೇಳಿದರೇನಯ್ಯ ಭಾಗವತರೇ ಯುದ್ಧರಂಗದಲ್ಲಿ, ಅರ್ಜುನನು, ಮೃತಿ ಹೊಂದಿದ ರಾತ್ರಿ ಹಸ್ತಿನಾವತಿಯೋಳ್, ಕುಂತೀದೇವಿಗೆ, ದುಸ್ವಪ್ನ ಬೀಳಲು, ಭಯಭ್ರಾಂತಳಾಗಿ, ಕೃಷ್ಣ ದೇವರಿಗೂ ಧರ್ಮಜನಿಗೂ, ಈ ಸಂಗತಿಯನ್ನು ಹೇಳಲೂ ಅರ್ಜುನನಿಗೆ ಯೇನು ಕುಂದು ಸಂಭವಿಸಿ ಇದೆಯೆಂದು ಚಿಂತಿಸುತ್ತಾ, ಕೃಷ್ಣದೇವರು ವಾಯುಸುತನು, ಕುಂತೀದೇವಿಯು ಸಹಿತ ಯುದ್ಧ ರಂಗಕ್ಕೆ ಬಂದರೈಯ್ಯ ಭಾಗವತರೇ.

(ಶ್ರೀ ಕೃಷ್ಣದೇವರು ಬರುವಿಕೆ)

ಶ್ರೀಕೃಷ್ಣ: ಯಲಾ ಸಾರಥೀ ಹೀಗೆ ಬಾ ಈಗ ಬಂದವರು ಧಾರೆಂದು ಕೇಳುತ್ತೀಯಾ. ಯಮ್ಮಯ ವೃತ್ತಾಂತವನ್ನು, ಪೇಳುತ್ತೇನೆ ಕೇಳೋ ಸಾರಥಿ. ಯಲಾ ಸಾರಥಿ ಶ್ರೀ ಮನ್ಮಹೀಮಂಡಲಕ್ಕೆ ಅಧೀಶನಾಗಿ, ವೈಕುಂಠವಾಸನೆಂದೆನಿಸಿ, ದುಷ್ಟ ನಿಗ್ರಹ, ಶಿಷ್ಟ ಪರಿಪಾಲಕನಾದ, ಶಂಖು ಚಕ್ರ ಗಧಾಧಾರಿಯಾದ ಶ್ರೀಕೃಷ್ಣಮೂರ್ತಿಯೆಂದು ತಿಳಿಯುವಂಥವನಾಗೋ ಸಾರಥಿ. ಯಲಾ ಸಾರಥೀ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ, ಯನ್ನ ಭಾವ ಮೈದುನನಾದ ಅರ್ಜುನನು ಈ ಮಣಿಪುರದ ರಣಭೂಮಿಯಲ್ಲಿ ಮೂರ್ಛೆ ಬಿದ್ದಿಹನೆಂಬ ವಾರ್ತೆಯಂ ಕೇಳಿ ಬಂದು ಇದ್ದೇನೆ. ಅರ್ಜುನನು ಧಾವಲ್ಲಿ ಬಿದ್ದಿಹನೋ ತೋರಿಸೋ ಸಾರಥಿ.

ಭೀಮಸೇನ: ಯಲಾ ಮನುಷ್ಯನೇ, ಹೀಗೆ ಬಾ ಈಗ ಬಂದವರು ಧಾರೆಂದು ಭಯಭ್ರಾಂತನಾಗಿ ಕೇಳುತ್ತೀಯಾ ಯಮ್ಮಯ ವೃತ್ತಾಂತವನ್ನು ಪೇಳುತ್ತೇನೆ ಕೇಳೋ ಸಾರಥೀ.ಯಲಾ ಸಾರಥಿ, ಹಿಮಾಂಶುವಂಶೋತ್ಪನ್ನನಾಗಿ, ಜಪತಪ ಯಜ್ಞಹೋಮಾದಿಗಳನ್ನು ಆಚರಿಸುತ್ತಾ, ಹಸ್ತಿನಾವತಿ ಪ್ರಭುವಾದ ಧರ್ಮರಾಯರ ತಮ್ಮನಾದ ಭೀಮಾ ರಿಪುಕುಲ ನಿರ್ಧೂಮನೆಂದು ವಂದೆರಡು ಮೂರು ಸಾರಿ ಕಿತಾಬ್ ಮಾಡಿಸುವಂಥವನಾಗೋ ಚಾರ ವರ ಪಣಿಹಾರ. ಯಲಾ ಸಾರಥೀ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನನ್ನ ತಮ್ಮನಾದ, ಅರ್ಜುನನು ಈ ಮಣಿಪುರದ, ರಣಭೂಮಿಯಲ್ಲಿ ಮೂರ್ಛೆ ಬಿದ್ದಿಹನೆಂಬ ವರ್ತಮಾನವನ್ನು ಕೇಳಿ ಬಂದು ಇದ್ದೇನೆ. ನನ್ನ ತಮ್ಮ ಧಾವಲ್ಲಿ ಬಿದ್ದು ಇದ್ದಾನೋ ತೋರಿಸೋ ಸಾರಥೀ ॥

ಕುಂತಿದೇವಿ: ಅಪ್ಪಾ ಸಾರಥೀ, ಹೀಗೆ ಬಾ ಮತ್ತೂ ಹೀಗೆ ಬಾ. ಈಗ ಬಂದವರು ಧಾರೆಂದು ಕೇಳುತ್ತೀಯಲ್ಲಾ, ಆದರೆ ಯಮ್ಮ ವೃತ್ತಂತವನ್ನು ಸವಿಸ್ತಾರವಾಗಿ ಪೇಳುತ್ತೇನೆ ಕೇಳಪ್ಪಾ ಸಾರಥೀ. ಅಯ್ಯ ಸಾರಥೀ ಗಜಪುರವನ್ನು ಪರಿಪಾಲನೆ ಮಾಡುವಂಥ ಧರ್ಮರಾಯ, ಭೀಮಾದ್ಯರಿಗೆ ತಾಯಿಯೆಂದೆನಿಸಿ, ಪಾಂಡು ಮಹಾರಾಜರ ಅರ್ಧಾಂಗಿಯಾದಂಥ ನಾರಿಯರೋಳ್ ಶಿರೋರತ್ನವೆನಿಸಿಕೊಂಡಿರ್ಪ ಕುಂತೀದೇವಿ ನಾನೇ ಅಲ್ಲವೇನಪ್ಪಾ ಸಾರಥೀ. ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯನ್ನ ಮಗನಾದ ಅರ್ಜುನನು, ಈ ಮಣಿಪುರದ ರಣಭೂಮಿಯಲ್ಲಿ ಮೂರ್ಛೆ ಬಿದ್ದಿಹನೆಂಬ ವಾರ್ತೆಯನ್ನು ಕೇಳಿ ಬಂದು ಇದ್ದೇನೆ. ಯನ್ನ ಅಣುಗನಾದ ಪಾರ್ಥನು ಧಾವಲ್ಲಿ ಬಿದ್ದು ಇದ್ದಾನೋ ತೋರಿಸೋ ಸಾರಥೀ.

ಕಂದ

ಕಂದ ಫಲುಗುಣ, ಮಲಗಿದ್ಯಾತಕೇ ಇಲ್ಲೀ
ಬಂದಿಹೆನೇಳೈ, ಕೃಷ್ಣನು ನಾನು  ಮುದದಿಂದ
ಎದ್ದು, ಮಾತಾಡು, ಕಣ್ಣಿನಿಂದಲಿ ನೋಡು
ಕುಂತೀ ದೇವಿಯ ಪಾದಕ್ಕೆ ವೊಂದಿಸೈ ನೀನೂ
ಜನನಿಯಲ್ಲವೇ ನಿನಗೆ  ಭೀಮ ತಾ ನಿಂತಿಹನೂ
ದೇವಕಿ ಯಶೋದ ದೇವಿಯರಿಗಳಿಯೂ
ನಿನ್ನ ನಂಬಿದನೈ ಪಾರ್ಥ ಕಿರೀಟಿ ಧನಂಜಯಾ ॥

ದರುವು

ಧರ್ಮರಾಯರ ಯಜ್ಞ  ಯಾರೂ ನಡೆಸಬೇಕೂ
ಧರ್ಮವಲ್ಲವು ನೀತೀ  ತಪ್ಪಬೇಡೈಯ್ಯ ॥

ಯಾರೈಯ್ಯ ಯಾಗವಾ  ನಿನ್ನ ನಂಬಿದರಾಯ
ಕೆಡಸಿದೈ ತಂದೇ  ಗತಿಯೇನೋ ಮುಂದೇ ॥

ಏರಯ್ಯ, ರಥವಾನು  ಹಿಡಿಯೋ ನೀ ಛಾಪವಾ ॥
ಮೀರಿದ ರಾಯರಾ  ಮರ್ದಿಸು ನೀನೂ  ॥

ಕಪ್ಪ ಕಾಣಿಕೆ ತಂದು  ವಪ್ಪಿಸೂ ಪ್ರಭುವೀಗೆ
ತಪ್ಪಬೇಡವೋ ನೀತೀ  ನೀನೂ ಕೇಳೂ ॥

ಕೃಷ್ಣ: ಅಯ್ಯ ಭಾವ ಕೇಳು, ಕಂಕಣಬದ್ಧರಾಗಿ ಯಾಗಕ್ಕೆ ಕುಳಿತಿರುವ ಧರ್ಮರಾಯರಿಗೆ ಚಿಂತೆ ಪ್ರಾಪ್ತವಾಗಿದೆ. ಅಯ್ಯ ಧನಂಜಯಾ. ಈಗಿನ ವೇಳೆಯಲ್ಲಿ ಎದ್ದು ಕೈಯ್ಯಲ್ಲಿ ಗಾಂಢೀವವನ್ನು ಹಿಡಿದೂ, ಸಮಸ್ತ ದೇಶಗಳಲ್ಲಿರುವ, ಭೂಪಾಲಕರನ್ನು ಜೈಸಿ ಕಪ್ಪಕಾಣಿಕೆಯನ್ನು, ತಂದೊಪ್ಪಿಸಿ ಯಜ್ಞವನ್ನು ನಿರ‌್ವಿಘ್ನವಾಗಿ, ನಡೆಸುವಂಥವನಾಗೈ ಪಾರ್ಥ ಧೈರ‌್ಯದಲ್ಲಿ ಸಮರ್ಥ.

ದರುವು

ಅಯ್ಯೋ ಯನ್ನಾ  ಕಂದಾ ನಿನ್ನಾ
ಮೈಯಿನೋಯಿಸಿದವರಾರೋ ನಿನ್ನಾ ॥

ಪ್ರಿಯಾದಿಂದ  ಮಾತಾನಾಡೋ
ರೈಯ್ಯಳಗಲೀ  ಕಡೆಗೆ ನೀನಾದಾ ॥

ಧರೆಯ ಮಣ್ಣಿನಿಂ  ದಾ ಗಾಂಧಾರೀ
ಕರಿಯಾ  ನೋಂಪಿಯನ್ನು  ಮಾಡಿದಳೂ ॥

ಮುದದೀ ಸುರಪನೈರಾವತವಾ ತರಿಸೀ
ಮೆರೆ ಮಾಡಿದೆ ಧರೆಯಲ್ಲಿ ಕೀರ್ತಿ ॥

ಕುಂತಿದೇವಿ: ಅಪ್ಪಾ ಪುತ್ರಾ, ನೀನು ಸಮಸ್ತ ಲೋಕದಲ್ಲಿ ಭುಜಬಲ ಪರಾಕ್ರಮಿಯೆನಿಸಿಕೊಂಡಂಥವನು ಈ ಯುದ್ಧ ರಂಗದಲ್ಲಿ ಮಲಗಬಹುದೇ. ನಿನ್ನನ್ನು ಕೆಡಹಿದವರ‌್ಯಾರಪ್ಪಾ ಮಗುವೇ ಇದೂ ಅಲ್ಲದೇ, ಪರಮ ಪತಿವ್ರತೆಯಾದ ಗಾಂಧಾರಿ ಜೇಡಿಮಣ್ಣಿನಿಂದ ಐರಾವತವನ್ನು ಮಾಡಿ ಗೌರಿ ಪೂಜೆಯನ್ನು ಮಾಡಿದಳು. ಆಗ ನೀನು ಇಂದ್ರನ ಐರಾವತವನ್ನು ತರಿಸಿ, ನನ್ನ ಕೂಡೆ ಗೌರೀ ಪೂಜೆಯನ್ನು ಮಾಡಿಸಿ ಲೋಕದಲ್ಲಿ ಪ್ರಖ್ಯಾತಿಯನ್ನು ಪಡೆಯಲಿಲ್ಲವೇ ಈಗ ನಿನ್ನ ಬಿಟ್ಟು ಹ್ಯಾಗಿರಲಪ್ಪಾ ಅರ್ಜುನಾ ಹೇ ಕೃಷ್ಣಾ ಹೇ ದಾನವಾರಿ, ನಾನು ಹ್ಯಾಗೆ ಸೈರಿಸಲಪ್ಪಾ ಭೀಮಸೇನಾ

ದರುವು

ಹಡೆದ ತಾಯಿ ನುಡಿ ಕೇಳಿ  ಭೀಮ ಬಲ್
ಗುಡುಗುಡಿಸುತ್ತಾ – ಭೀಮಾ ॥

ಹಿಡಿದು ಗದೆಯನು ಎತ್ತಿ ಉಗ್ರದೀ
ಕಿಡಿ ಕಿಡಿಯಾರಿಸುತ್ತಾ – ಭೀಮಾ ॥

ಭೀಮಸೇನ: ಹೇ ತಾಯೇ ಈ ಚತುರ್ದಶ ಭುವನ ಮಧ್ಯದಲ್ಲಿ ಇರುವಂಥ ರಾಜಾಧಿರಾಜರಿಗೆಲ್ಲಾ ಬಲಶಾಲಿಯಾದ, ಭೀಮಸೇನ. ಇದ್ದಾನೆಂಬ ಭೀತಿ, ಲೇಶವಾದರೂ ಇಲ್ಲದೇ ಹೋಯಿತೆ. ನನ್ನ ತಮ್ಮನಾದ ಅರ್ಜುನನನ್ನು ಕೊಂದ ಆ ಖುಲ್ಲನನ್ನು ಈ ಕ್ಷಣದೋಳ್ ನನ್ನ ಗದೆಗೆ ಆಹುತಿಯನ್ನು ಕೊಡುತ್ತೇನಲ್ಲದೆ ಎಷ್ಟು ಮಾತ್ರಕ್ಕೂ ಬಿಡುವುದಿಲ್ಲವಮ್ಮಾ ತಾಯೇ ॥