ದರುವು

ಹೊಡೆದಾ, ಪಾರ್ಥನಾ  ಕೆಡಹಿದವನ್ಯಾವನು
ಬಿಡದೇ ಯುದ್ಧದಲ್ಲಿ  ಕೆಡಹೂವೆನೂ ॥

ಭೀಮಸೇನ: ಹೇ ಜನನೀ ಈ ಪೃಥ್ವಿಯಲ್ಲಿ ಪ್ರಖ್ಯಾತಿಯುಳ್ಳ ಭುಜಬಲದೋರ್ದಂಡದಿಂದೊಪ್ಪುವಾ ಗಧಾದಂಡವನ್ನು ಪಿಡಿದು, ಕೃಷ್ಣಾದ್ರಿವಾಸನ ಕರುಣದಿಂದ, ಈ ಭುವನ ಮಂಡಲದಲ್ಲಿ ಈ ಭೀಮಸೇನನ ತಮ್ಮನಾದ ಅರ್ಜುನನನ್ನು ಯುದ್ಧರಂಗದಲ್ಲಿ ಯಾರು ಕೆಡಹಿ ಇದ್ದಾರೋ ಆ ಖುಲ್ಲ ಮನುಜನು ಮೂರು ಲೋಕದಲ್ಲಿ ಯೆಲ್ಲಿ ಇದ್ದಾಗ್ಯೂ ಬಿಡದೇ ಈ ಗಧಾದಂಡಕ್ಕೆ ಆಹುತಿಯನ್ನು ಕೊಡುತ್ತೇನೆ. ಜಾಗ್ರತೆ ಇಂಥ ನೇಮವನ್ನು ಪಾಲಿಸುವಂಥವಳಾಗಮ್ಮಾ ತಾಯೇ.

ಶ್ರೀಕೃಷ್ಣ: ಹೇ ಭೀಮಸೇನಾ, ದೇವಗಂಗೆ ಶಾಪದಿಂದ ಅರ್ಜುನನಿಗೆ ಇಷ್ಟು ಕಷ್ಟ ಸಂಭವಿಸಿತು. ಮಿಂಚಿದ ಕಾರ‌್ಯಕ್ಕೆ ಚಿಂತಿಸಿ ಫಲವೇನೂ, ಸ್ವಲ್ಪ ಸೈರಿಸುವಂಥವನಾಗೈಯ್ಯ ಭೀಮಾ.

ಭಾಗವತರ ದರುವು

ಭೀತಿಯಿಂ ಬಭೃವಾಹನ ಭೀಮಗಭಿನಮಿಸಿ
ತಾತ ಕೊಂದಂಥ  ಪಾತಕನೂ ಪಾತಕನೂ ॥

ಘಾತಕನಾದೆನೂ ತಂದೆ ಭೂತಲದೊಳಗೇ
ಇಂತೊಪ್ಪ ದ್ರೋಹಿಯು ಇರ ಸಲ್ಲದೆಂದೂ ಹೀಗೆಂದೂ ॥

ಬಭೃವಾಹನ: ಹೇ ತಂದೆಯಾದ ಭೀಮಸೇನನೇ ಕೇಳೂ, ಈ ಧಾತ್ರಿಯಲ್ಲಿ ತಂದೆಯನ್ನು ಕೊಂದಂಥ ಪಾತಕನು ಇರಬಾರದು. ತಮ್ಮ ಗಧಾದಂಡಕ್ಕೆ ಯನ್ನ ಶಿರಸ್ಸನ್ನು ಆಹುತಿಯನ್ನಾಗಿ ಕೊಡಬಹುದೈ ತಂದೆ  ಸ್ವಾಮಿ, ಕೃಷ್ಣಮೂರ್ತಿಯೇ ನೀನು ಮೂರು ಲೋಕದಲ್ಲಿರುವ ಮಾರ‌್ಮಲೆತ ರಾಜರನ್ನೆಲ್ಲಾ ಸಂಹಾರ ಮಾಡುವಂಥಾ ಪರಮಾತ್ಮನು. ತಂದೆಯನ್ನು ಕೊಂದಂಥ ಪಾಪಿಷ್ಟಯೆಂದು ತಿಳಿದು ನಿನ್ನ ಚಕ್ರದಿಂದ ಯನ್ನ ಶಿರವನ್ನು ಖಂಡ್ರಿಸಿ ಹಾಕಬಾರದೆ ಸ್ವಾಮೀ.

ಆದಿಶೇಷ:ಯಲಾ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ. ಈಗ ಬಂದವರು ಧಾರೆಂದು ಕೇಳುತ್ತೀಯಾ ಆದಕಾರಣ ಯಮ್ಮ ವೃತ್ತಾಂತವನ್ನು ವಿಸ್ತಾರವಾಗಿ ಪೇಳುತ್ತೇನೆ ಕೇಳೋ ಸಾರಥೀ.

ಈ ವಸುಧೆಯ ಭಾರವನ್ನು ಹೊತ್ತು ಹರಿಹರ ಶಯನ ಕಂಕಣನಾಗಿ ಪಾತಾಳ ಲೋಕವನ್ನು ಪರಿಪಾಲನೆ ಮಾಡುವಂಥ ಆದಿಶೇಷ ನಾನೇ ಅಲ್ಲವೇನೋ ಸಾರಥೀ. ಅಯ್ಯ, ಸಾರಥಿ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಮುರಹರನಾದ ಶ್ರೀಕೃಷ್ಣಮೂರ್ತಿಯನ್ನು ಕಾಣುವ ಉದ್ದಿಶ್ಯ ಬಂದು ಇದ್ದೇನೆ. ಶ್ರೀಕೃಷ್ಣಮೂರ್ತಿ ಧಾವಲ್ಲಿ ಇದ್ದಾರೋ ಭೇಟಿ ಮಾಡಿಸೋ ಸಾರಥಿ.

ಆದಿಶೇಷ: ನಮೋನ್ನಮೋ ಮುರಹರೀ

ಕೃಷ್ಣ: ದೀರ್ಘಾಯುಷ್ಯಮಸ್ತು ಬಾರೈಯ್ಯ ಅನಂತಾ

ಆದಿಶೇಷ: ಸ್ವಾಮಿ ಕೃಷ್ಣಮೂರ್ತಿಯೇ, ಸಂಜೀವ ರತ್ನವೆಂಬ ಮಣಿಯನ್ನು ತಂದು ಇದ್ದೇನೆ. ತಾವು ತೆಗೆದುಕೊಂಡು. ಈ ರಣಭೂಮಿಯಲ್ಲಿ ಬಿದ್ದಿರುವ ಪಾರ್ಥ ವೃಷಕೇತು ಮೊದಲಾದ  ಸಮಸ್ತ ಸೈನ್ಯವನ್ನು ಬದುಕಿಸುವುದಲ್ಲದೆ ಉಲೂಪಿ, ಚಿತ್ರಾಂಗದೆಯರನ್ನು ಕರುಣದಿಂದ ನೋಡಿ ನಿನ್ನ ಅಳಿಯನಾದ ಬಭೃವಾಹನನು ಮಾಡಿದ ತಪ್ಪನ್ನು ಕ್ಷಮಿಸಿ, ಪಾರ್ಥನ ಶಿರಸ್ಸನ್ನು ತರಿಸಿ ಸರ‌್ವರಿಗೂ ಪ್ರಾಣವಂ ಕೊಟ್ಟು ಸರ‌್ವರೂ ಆನಂದಪಡುವಂತೆ ಮಾಡುವುದಲ್ಲದೇ ಯನ್ನನ್ನು ರಕ್ಷಿಸಬೇಕೈಯ್ಯ ನಾರಾಯಣಾ, ಮನದಲ್ಲಿ ಸದಾ ಪಾರಾಯಣ ॥

ಕೃಷ್ಣ: ಅಯ್ಯ ನಾಗೇಂದ್ರ ಅದೇ ಪ್ರಕಾರ ಮಾಡುತ್ತೇನಯ್ಯ ಉರಗಪತಿ ಪಾತಾಳಕ್ಕಧಿಪತಿ.

ದರುವು ತ್ರಿವುಡೆ

ಪನ್ನಗಾಧಿಪಾ ಕೇಳು ಧರೆಯೊಳು
ಮುನ್ನಾ ಘನ ಬ್ರಹ್ಮಚರ‌್ಯೆಯಾ
ಪೋಷಿಸಿ ಇರ್ದೆನಾದೊಡೆ ಅದರ ಫಲದಿಂದಾ ॥

ಬರಲೀ ಪಾರ್ಥನ ಶಿರವೂ ಇಲ್ಲಿಗೆ
ದುರುಳರೆಲ್ಲಾ ಮಡಿಯಲೆನುತಲೀ
ಭರದೀ ಚಕ್ರವಾ ಬಿಡಲು ತಂದುದೂ ಫಲುಗುಣನಾ ತಲೆಯಾ ॥

ನೋಡಿ ಕರುಣದಿ ರುಕ್ಮಿಣೀಪತಿ
ಜೋಡಿಸಿದ ರುಂಡಕ್ಕೆ ಮುಂಡವಾ
ಕೂಡಿ ಶಿವನಾಜ್ಞೆಯಲಿ ಬದುಕಲಿಯೆಂದು ಜೀವಮಣೀ ॥

ಹೃದಯದೊಳು ನಾಂಟಿಸಲು ಬೇಗದಿ
ಬದುಕಿದರು ಭವ ಪ್ರಸಾದದೀ
ಮುದದಿ ಮೇಘವ ಕಳೆದ ರವಿಶಶಿಯಂತೆ ಬೆಳಗುತಾ ॥

ಮುರಹರನ ಧ್ಯಾನಿಸುತಾ  ಫಲುಗುಣಾ
ತರಣಿ ಸಂಭವ ಸೂನು ಸಹಿತಲೀ
ಧರೆಯ ಜನ ಕೊಂಡಾಡುವಂದದೀ ಬದುಕಿದರು ಬೇಗಾ ॥

ಸುರರು ಪೂಮಳೆಗರೆದರಾಕ್ಷಣ  ಹರುಷಪಟ್ಟ
ರು ಸಕಲಸೈನ್ಯವೂ  ಧರೆಯೊಳಗೆ ಕೃಷ್ಣಾದ್ರಿ
ವಾಸನ ಕರುಣದಿಂದಾ ॥

ಅರ್ಜುನ ವೃಷಕೇತು ಸಕಲ ಸೈನವೂ
ನಮೋನ್ನಮೋ ಕೃಷ್ಣಾ – ವಂದಿತ ಕೃಷ್ಣಾ ॥

ಕೃಷ್ಣ: ಅಯ್ಯ ಅರ್ಜುನ ಸುರನದಿಯ ಶಾಪದಿಂದ ನಿನಗೆ ಇಷ್ಟು ಕಷ್ಟ ಸಂಭವಿಸಿತು. ಆ ಶಾಪವು ಎಂದಿಗೂ ತಪ್ಪಲಾರದು. ಅದಕ್ಕೆ ಚಿಂತೆ ಮಾಡದೆ ನಿನ್ನಾತ್ಮಜನಾದ ಬಭೃವಾಹನನು, ಯುದ್ಧರಂಗದಲ್ಲಿ ಚಿಂತೆ ಮಾಡುತ್ತಾ ಇದ್ದಾನೆ. ಉಲೂಪಿ, ಚಿತ್ರಾಂಗದೆಯರೂ ಸಹ ಬಹಳ ಚಿಂತೆ ಮಾಡುತ್ತಾ ಇದ್ದಾರೆ. ನಿನ್ನ ಮಗನನ್ನು ನೋಡಿ ಕರುಣದಿಂದ ಪಾಲಿಸಬೇಕಲ್ಲದೇ ನಿನ್ನ ಸತಿಯರನ್ನೂ ಮನ್ನಿಸಬೇಕೈಯ್ಯಿ ಪಾರ್ಥ-ಧೈರ‌್ಯದಲ್ಲಿ ಸಾಮರ್ಥ್ಯ ॥

ಬಭೃವಾಹನ: ನಮೋನ್ನಮೋ ಹೇ ತಂದೇ ಕರುಣಿಸೆನ್ನ ಮುಂದೇ.

ಅರ್ಜುನ: ದೀರ್ಘಾಯುಷ್ಯ ಮಸ್ತು ಬಾರೈಯ್ಯ ಕಂದಾ.

ಬಭೃವಾಹನ: ಹೇ ತಂದೇ, ಮಗನ ಅಪರಾಧವಂ ಕ್ಷಮಿಸಿ ಸೈನ್ಯ ಸಮೇತವಾಗಿ ಪಟ್ಟಣಕ್ಕೆ ನಡಿಯಬೇಕೈ ತಂದೆ ಸಲಹೆನ್ನಾ ಮುಂದೆ.

ಅರ್ಜುನ: ಯಲಾ ಮಗುವೇ, ತಂದೆಯೆಂದು ನೀನು ನಿಶ್ಚಯವಾಗಿ ನಂಬಿ ಇದ್ದರೆ ಅದೇ ಪ್ರಕಾರ ಪಟ್ಟಣಕ್ಕೆ ಹೋಗೋಣ ನಡಿಯೈಯ್ಯ ಬಾಲಾ ॥

ಭಾಗವತರ ದರುವು

ವಂದೆರಡು, ಮೂರುದಿನ  ಇರ್ದರಾ ಪುರದಲ್ಲೀ
ಇಂದೀವರಾಕ್ಷನಹಿಪತಿಯಾ ಕಳುಹೀ ತಾ ಕಳುಹಿ ॥ ॥

ಮುಂದೆ ನಡೆಸಿದಾ ಕುದುರೆ  ಮೋಹರವಂ ಕೂಡಿಸೆ
ಇಂದುಧರ ಕೃಷ್ಣಾದ್ರಿಪತಿಯ ದಯದಿಂದಾ ದಯದಿಂದಾ ॥             ॥

ಭಾಗವತ: ಕೇಳಿದರೇನಯ್ಯ ಭಾಗವತರೇ, ಅರ್ಜುನನು ಕೃಷ್ಣಮೂರ್ತಿ ಹೇಳಿದ ಮಾತು ಮೀರದೇ ಇರಲು, ತನ್ನ ಸುತನಾದ ಬಭೃವಾಹನನು ಕೃಷ್ಣಾರ್ಜುನರನ್ನು ಮಣಿಪುರಕ್ಕೆ ಕರೆದುಕೊಂಡು ಹೋಗಿ ತನ್ನ ತಂದೆಗೆ ಸಕಲವನ್ನೂ ವಪ್ಪಿಸಿದ ನಂತರ ಶ್ರೀ ಕೃಷ್ಣಮೂರ್ತಿಯು ಆದಿಶೇಷನನ್ನು ಪಾತಾಳಕ್ಕೆ ಕಳುಹಿಸಿ ಕುಂತೀದೇವಿ ಮುಂತಾದವರನ್ನು ಗಜಪುರಕ್ಕೆ ಕಳುಹಿಸಿ, ಯಾಗದ ಕುದುರೆಯ ಹಿಂದೆ ಅರ್ಜುನನಿಗೆ ಸಹಾಯವಾಗಿ ಮುಂದಕ್ಕೆ ಹೊರಟರೈಯ್ಯ ಭಾಗವತರೇ

ಕಥೆ ಸಂಪೂರ್ಣ

ಶ್ಲೋಕ

ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಂ
ಯೇಕೈಕಂದಮಕ್ಷರಂ, ಪ್ರೋಕ್ತಂ ಮಹಾಪಾತಕ ನಾಶನಂ
ರಾಮಾಯ, ರಾಮಭದ್ರಾಯ ರಾಮಚಂದ್ರಾಯ
ವೇದಸೇ  ರಘುನಾಥಾಯ ನಾಥಾಯ ಸೀತಾಪತೆಯೇ ನಮಃ

ಮಂಗಳಾರತಿ ದರುವು

ಜಯ ಮಂಗಳವಾಗಲೀ ಲೋಕಕ್ಕೆಲ್ಲಾ
ಶುಭ ಮಂಗಳವಾಗಲೀ ॥

ಕಾಮಿತಾರ್ಥ ಪ್ರದಾಯಕನು ಸುಕ್ಷೇಮ
ವೀಯಲಿ ಸರ‌್ವ ಜನರಿಗೇ ನ್ಯಾಯ ಮಾರ್ಗದಿ
ಭೂಪತಿಗಳೀ ಭೂಮಿಯನು, ಪರಿಪಾಲಿಸಲಿ ಬಹುಜಯ ॥

ಪರರಿಗುಂ ಭೂಸುರರಿಗೂ  ಈ ಧರೆಯೊಳೆಲ್ಲಾ
ಜನರಿಗುಂ ವರಶುಭಂಗಳು ಸಿದ್ಧಿಸಲಿ
ಪರಿಪೂರ್ಣ ಸುಖ ಸಂತೋಷ ವದಗಲೀ ಜಯ ॥

ಧನ್ಯರಾಗಲಿ ಮಾನ್ಯರಾಗಲಿ  ದೈನ್ಯರುಣ
ರೋಗಗಳು ನೀಗಲಿ ಭಕ್ತಹೀನರು ಭಕ್ತರಾಗಲಿ
ಮುದದಿ ಶತವರುಷಂಗಳು ಬಾಳಲಿ ಜಯ ॥ ॥

ಕಾಲಕಾಲಕ್ಕೆ ವರ್ಷವಾಗಲಿ ಭೂಮಿ ಪೈರುಗಳಿಂದ
ಬೆಳೆಯಲಿ ದೇಶವೆಲ್ಲಾ ಸುಭಿಕ್ಷವಾಗಲಿ
ಸಜ್ಜನರು ನಿರ್ಭಯದಿ ಬಾಳಲೀ ಜಯ ॥ ॥

 

* * *