ದರುವು

ನಿಲ್ಲು ನಿಲ್ಲೆಲೋ  ಬಭೃವಾಹನಾ
ಹಲ್ಲು ಮುರಿವೆನೋ  ಖುಲ್ಲು ಮನುಜಾನೇ ॥

ಅರ್ಜುನ: ಯಲಾ ಬಭೃವಾಹನ ಈ ಪರಿ ಬಾಲಭಾಷೆಗಳಿಂದ ಯೇನು ಪ್ರಯೋಜನ. ನಮ್ಮ ವೃಷಕೇತುವಿನಂತೆ. ಈ ರಣಭೂಮಿಯಲ್ಲಿ ನಿನ್ನ ಶಿರಸ್ಸನ್ನು ಛೇದಿಸಿ, ನಿನ್ನ ಕೆಡಹಬೇಕೆಂಬ ಚಿಂತೆಯು ಎನಗೆ ಇದ್ದೀತೆ ಹೊರತು ಇತರ ಚಿಂತೆ ಯನಗಿಲ್ಲಾ ಕಂಡ್ಯಾ. ಯಲಾ ಪೋರಾ ನಿನ್ನ ತಾಯಿ ಚಿತ್ರಾಂಗದೆ ಮೋರೆಯನ್ನು ನೋಡುವೆಯೊ ನೋಡಲರಿಯೆಯೋ ನಿನ್ನ ಫಣೆಯಲ್ಲಿ ಹರಿಗರ್ಭಸಂಜಾತನಾದ ಬ್ರಹ್ಮನು ಶತಾಯುವನ್ನೂ ಲಿಖಿಸಿದ್ದರೂ ನಿನ್ನ ದುರ್ಗಮವಾದ ಜೀವವನ್ನೂ ಮೃತ್ಯುವಿಗೆರಗಿಸುವೆ, ಇಕ್ಕೋ ನೋಡು ಯೀ ಖಡ್ಗದಿಂದ ನಿನ್ನಂ ಕಡಿದು, ಈ ರಣಭೂಮಿಯಲ್ಲಿರುವ ಶಾಕಿನಿ, ಡಾಕಿನಿ ಭೂತಂಗಳು ತಂಡೋಪತಂಡದಿಂದ ಉಂಡು ಸಂತೋಷಪಡುವಂತೆ ಮಾಡದೇ ಹೋದರೆ ಮೂರು ಲೋಕಕ್ಕೆ ಗಂಡನೆನಿಸಬೇಕೆನಲಾ, ಭ್ರಷ್ಟಾ ಅತಿ ಪಾಪಿಷ್ಟಾ.

ದರುವು

ವಸುಮತೀಶ್ವರಾ  ವಲಿದು ಕೇಳೈಯ್ಯ
ಬೆಸಸಲೇನಾದೂ  ತಂದೆ ಮಕ್ಕಳೂ ॥

ವಿಷವ ಮನದಲೀ, ನಿಂತು ಯುದ್ಧಾದೀ
ಕೊಸರಿಯಾಡಿದಾ  ನರನೂ ತನಯಾಗೆ ॥

ಕರ್ಣ ನಲಿದಾಡೇ  ಕರ್ಣನ ಪುತ್ರ ನಲಿದಾಡೇ
ವರ್ಣಿಸು ರಣಕೇ  ಕ್ಷತ್ರಿಯಾಧಮಾ ॥

ಬಭೃವಾಹನ: ಯಲಾ ಅರ್ಜುನ, ಹಿಂದಕ್ಕೆ ದ್ರೋಣ, ಭೀಷ್ಮಾದಿ ದೇವತೆಗಳು, ನಿನ್ನ ಸತ್ವಕ್ಕೆ ಮೆಚ್ಚಿ ಕೊಟ್ಟಂಥ ಬಾಣಗಳು ಬಂಜೆಯಾಗಿ ಹೋದವು. ನಿನ್ನ ಲಲಾಟ ಲಿಪಿಯು ತೊಳೆದು ಬಂದು ಇದೆ. ನನ್ನ ಜನನಿಯರಾದ ಉಲೂಪಿ, ಚಿತ್ರಾಂಗದೆಯರ ಮುಖವನ್ನು ನೋಡದ ಹಾಗೆ ಮಾಡುತ್ತೇನೆಂದು ನಿನ್ನ ಬಾಯಿಂದ ಆಡಿದೆ. ನಿನ್ನ ಮಾತುಗಳೇ ನಿನಗೆ ಸಾಕ್ಷಿಯಾಯಿತು. ಇಗೋ ನೋಡು ಅನುಪಮವಾದಂಥ ಸರ್ಪಾಸ್ತ್ರ ಬಾಣವನ್ನು ಬಿಟ್ಟು ಇದ್ದೇನೆ. ನಿನ್ನ ಪ್ರಾಣ ಹೋಗುವುದಕ್ಕೆ ಸಿದ್ಧವಾಗಿದೆ. ನಿನ್ನ ಸ್ವಾಮಿಯಾದ ಕೃಷ್ಣಮೂರ್ತಿಯನ್ನು, ನೆನೆಸಿಕೊಂಡು ನಿಲ್ಲುವಂಥವನಾಗೋ ಅರ್ಜುನ.

ಭಾಗವತರ ದರುವು

ತೊಡಲು ಸರ್ಪಾಸ್ತ್ರವೂ ಸುಡುತಾ ದೇಶಾ
ದೇಶಾದೋಳ್ ಕಳುಹವೈದಿತೂ  ನರನ ಕಂಠಕ್ಕೆ ॥

ಕೊರೆದು ವಿಜಯನ ಶಿರ  ಕೆಡಹೀತೊ
ಶಿರ ಬಿದ್ದುದೂ ಹರಿಯನ್ನೂ ಸ್ಮರಿಸುತ್ತಾ ॥

ಕಂದ

ಇರದೇ ಗಗನಕೆ ಹಾರಿ ವೃಷಕೇತುವಿನ
ಚಾರು ಶಿರದೆಡೆಗೆ ಹೋಗಿ ಭರದಿ ಬೀಳಲೂ
ಸುರರೆಲ್ಲಾ ಮರುಗುತ್ತಿರೆ, ಬಭೃವಾಹನ
ಬಲವಂ ನೋಡಿ ಬೊಬ್ಬಿರಿದು ವಾದ್ಯಗಳೂ
ಪರಿಪರಿಯಾ ನಿಸ್ಸಾಳ ವಾದ್ಯಾ  ಮೆರೆಯ
ದೈದಿತೊ ಕೂಡೀ ಯೇನೆಂಬೆನೆಲೆ
ಪುರವರನ ವಿಜಯೋತ್ಸವವಾ

ಪ್ರಧಾನಿ: ಹೇ ಸ್ವಾಮಿ ಮಣಿಪುರಾಧೀಶ್ವರನಾದ ಬಭೃವಾಹನ ಭೂಪತಿಯೇ, ಧಾವ ಅರ್ಜುನ ದಂಡಿನಲ್ಲಿ ಸಮಸ್ತ ವೀರರೂ ಬಿದ್ದು ಹೋದರು. ಇನ್ನು ಯುದ್ಧಕ್ಕೆ ಬರುವಂಥವರು ಇಲ್ಲಾ, ಬೆಟ್ಟ ಬೆಟ್ಟಗಳಂತೆ ಆನೆ, ಕುದುರೆ, ಮಂದಿ, ರಥಗಳು, ಪುಡಿ ಪುಡಿಯಾಗಿ ದೇಹಂಗಳೆಲ್ಲಾ ಕಡಿದು ಖಂಡವಾಗಿ, ರಕ್ತವು ಭೂಮಿಯ ಮೇಲೆ ಹರಿದುಹೋಗುತ್ತಾ ಇದೆ. ಹೇ ಸ್ವಾಮಿ, ನಮ್ಮ ಗ್ರಾಮ ದೇವತೆಗೆ ಬಹಳ ತೃಪ್ತಿಯಾಯಿತು. ಇನ್ನೂ ರಣ ಭೂಮಿಯಲ್ಲಿ ಯಾತಕ್ಕೆ ಇರೋಣ. ಅಪ್ಪಣೆಯಾದರೆ, ಜಯ ಉತ್ಸಾಹದಿಂದ ಹೋಗೋಣ ನಡಿಯೈಯ್ಯ ರಾಜಾ ॥

ಬಭೃವಾಹನ: ಅದೇ ಪ್ರಕಾರ ಹೋಗೋಣ ನಡಿಯೈಯ್ಯ ಪ್ರಧಾನಿ ॥

ಭಾಗವತರ ದರುವು

ಅರಿನೃಪಾಲರ ಗೆದ್ದೆನೆನುತಲೀ
ಹರುಷದಿಂದಲೀ, ಬಭೃವಾಹನಾ ॥
ತಿರುಗಿಸಿದನೈ, ಸೇನೆಸಹಿತಲೀ ಕೂಡಿ ನಡೆಯುತ್ತಿರೇ ॥

ಪುರಜನರು ಪರಿಜನರೂ ನೋಡುತಾ
ಪರಮ ಸಂಭ್ರಮದಿಂದಲಾರತೀ
ತರುತಾ ಬೆಳಗುತಾ ಯೆದಿರುಗೊಳ್ಳಲೂ ಇರಲು, ಓರ್ವ ಸಖೀ         ॥

ಅರಮನೆಗೆ ನಡೆತಂದು, ಬೇಗನೇ
ನರನ ಅರಸಿ ಚಿತ್ರಾಂಗದೆಗೆ  ವಿ
ಸ್ತರಿಸಿ ಪೇಳ್ದಳು, ಧುರದ ವೃತ್ತಾಂತವನು ತಪ್ಪದಲೇ ॥

ಮೀನಾಕ್ಷಿ: ಅಪ್ಪಾ ಸಾರಥಿ, ನಮ್ಮ ರಾಜರಿಗೆ ಸಂಭ್ರಮದಿಂದ ಅನೇಕ ಪರಿಜನರು ಪುರಜನರು, ಶೃಂಗಾರದಿಂದ, ಆರತಿಗಳನ್ನು ತೆಗೆದುಕೊಂಡು ಹೋಗಿ ಬೆಳಗುತ್ತಿದ್ದಾರೆ. ಯಾಕಪ್ಪಾ ಸಾರಥಿ ಶ್ರೀಕೃಷ್ಣಮೂರ್ತಿಯೆಂದು ಕೇಳಿಬಲ್ಲೆನಯ್ಯ ರಾಜ.ನನಗೆ ಸ್ವಲ್ಪ ಹೇಳಬಾರದೇನಪ್ಪಾ ಸಾರಥಿ.

ಸಾರಥಿ: ಅಮ್ಮಾ, ಮೀನಾಕ್ಷಿ ಧಾವ ಹಸ್ತಿನಾಪುರವನ್ನು ಪರಿಪಾಲನೆ ಮಾಡುವ, ಧರ್ಮರಾಯರ ಯಜ್ಞದ ಕುದುರೆಯನ್ನು, ನಮ್ಮ ಬಭೃವಾಹನ ಭೂಪತಿಯು ಕಟ್ಟಿಕೊಂಡು, ಆ ಕುದುರೆಯ ಬೆಂಗಾವಲಿಗೆ ಬಂದು ಇದ್ದಂಥ ಸಮಸ್ತ ರಾಜರನ್ನೂ ಮತ್ತು ಅರ್ಜುನ ಭೂಪಾಲನನ್ನು ಸಹ, ಯುದ್ಧದಲ್ಲಿ ಸಂಹಾರ ಮಾಡಿ, ವಿಜಯೋತ್ಸಾಹದಿಂದ ನಗರಕ್ಕೆ ಆಗಮಿಸುವಂಥ ಕಾಲದಲ್ಲಿ, ನಮ್ಮ ರಾಜರಿಗೆ, ಪರಿಜನರು, ಪುರಜನರು ಅನೇಕ ಸಂಭ್ರಮದಿಂದ ಆರತಿಗಳನ್ನು ತೆಗೆದುಕೊಂಡು ಹೋಗಿ ಬೆಳಗುತ್ತಿದ್ದಾರಮ್ಮಾ, ತಾಯೇ.

ಮೀನಾಕ್ಷಿ: ಅಯ್ಯೋ ಹರಹರಾ ಹಡೆದಂಥ ತಂದೆಯೆಂಬುವಂಥದ್ದು ಭಾವವಿಲ್ಲದೆ, ಪಿತೃವಧೆಯನ್ನು ಮಾಡಿ ಬಂದರೇನಪ್ಪಾ ಸಾರಥೀ, ನಮ್ಮ ರಾಜರು ಸದ್ಧರ್ಮದಿಂದ ಪರಿಪಾಲನೆಯನ್ನು ಮಾಡುವಂಥ ಧಾತ್ರಿಯಲ್ಲಿ ಏನು ಉತ್ಪಾತಕ ಬಂತು. ಅಯ್ಯ ಶ್ರೀಹರಿ ಈ ಮಾತುಗಳು ಕಿವಿಯಿಂದ ಕೇಳಿದ ಬಳಿಕ ಸುಮ್ಮನೆ ಇರಲಾಗದು. ನಮ್ಮ ಅಮ್ಮಾಜಿಯವರಾದ, ಉಲೂಪಿ ಚಿತ್ರಾಂಗದೆಯರ ಕೂಡ, ಈ ಸಂಗತಿಯನ್ನು ಹೇಳುತ್ತೇನಪ್ಪಾ ಸಾರಥಿ.

ದರುವು

ಕೇಳೆ ದೇವೀ, ಕೇಳೆ ಕೇಳಮ್ಮ ನೀನೆಂತಾ
ಕುವರಾನ ಪಡೆದೆಯೋ  ಕಾಳಗವನು ಜಯಿಸಿ
ಕುಶಲದಿಂ ಬರುವನೂ ॥

ಕಲಿಪಾರ್ಥನನು ಕೊಂದು  ಕರ್ಣಸುತನ ಕೊಂದು
ಗೆಲುವಿನಿಂದೈದಪ್ಪಿ ಬರುವೋ ವಾದ್ಯಗಳನೂ ॥

ಮೀನಾಕ್ಷಿ: ಅವ್ವಾ, ತಾಯಿಗಳಿರಾ, ಈ ಭೂಮಿಯಲ್ಲಿ ಯಂಥಾ ಮಗನನ್ನು ಪಡೆದಿರವ್ವಾ, ಸತ್ಪುತ್ರ ಕುಲದೀಪಕಾ ಯೆಂಬುವಂತಹ ನ್ಯಾಯ ಹೋಗಿ ದುಷ್ಪ್ಪುತ್ರ, ಕುಲಕಂಟಕ ಎಂಬುವಂಥದ್ದು ಪ್ರಸಿದ್ಧಿಯಾಯಿತಲ್ಲೇ ತಾಯಿಗಳಿರಾ, ಅಯ್ಯೋ ಅಮ್ಮಯ್ಯ, ಅವರ ಕುದುರೆಯನ್ನು ಕಟ್ಟಿಕೊಂಡು ಅವರೊಡನೆ ಯುದ್ಧವನ್ನು ಮಾಡಿ, ಕಾಳಗದಲ್ಲಿ ಕರ್ಣನ ಮಗನನ್ನು, ಅರ್ಜುನನನ್ನು ಇನ್ನೂ ಇರತಕ್ಕಂಥ ರಾಜರನ್ನೆಲ್ಲಾ ಕೊಂದು, ಕಾಳಗವನ್ನೂ ಜಯಿಸಿ, ಜಯಭೇರಿಯನ್ನು ಹೊಡೆಸಿಕೊಂಡು ಪಟ್ಟಣಕ್ಕೆ ಬರುತ್ತಾ ಇದ್ದಾನಲ್ಲಮ್ಮಾ ತಾಯಿಗಳಿರಾ.

ದರುವು

ಪುರದ ನಾರಿಯರೆಲ್ಲಾ  ವೆರಸಿ ಶೃಂಗಾರದೀ
ತರುವಾರತಿಗಳೂ  ತೆರಳಬಹುದು ನೀವೂ ಕೇಳೆ ದೇವಿ ॥

ಮೀನಾಕ್ಷಿ: ಅವ್ವಾ ತಾಯಿಗಳಿರಾ, ತಮ್ಮ ಪಟ್ಟಣದ ಜನರೆಲ್ಲಾ ಎದಿರ್ಗೊಂಡು ಕರೆದುಕೊಂಡು ಬರುತ್ತಾ ಇದ್ದಾರೆ. ನೀವು ಯಾತಕ್ಕೆ ಸುಮ್ಮನೆ ಕುಳಿತು ಇದ್ದೀರಿ. ನಾವೂ ಹೋಗೋಣ ನಡಿಯರಮ್ಮಾ ತಾಯೆಗಳಿರಾ

(ಉಲೂಪಿ ಚಿತ್ರಾಂಗದೆಯರ ಪ್ರಲಾಪ)

ದ್ವಿಪದಿ

ಆ ನುಡಿಯ ಕೇಳ್ದು, ಅಮ್ಮಯ್ಯ ಯೆನುತಾ
ಅವನಿಗೆ ಬಿದ್ದು, ಹಾ ನಾಥಾ, ಹಾ ಪ್ರಾಣೇಶಾ ಕೆಟ್ಟೆವೇ
ಅಕಟಕಟಾ, ಕಡೆಗೆ ಏನು ತಂದನೇ ವಿಧಿಯು
ಅಯ್ಯಯ್ಯೋ, ಅಮ್ಮಯ್ಯ, ನೀರಜಾಂಬಕಿ
ಯಂಥಾ ಕೂಸು, ಒಡಲೊಳು ಪುಟ್ಟಿ ಶತೃವಾದನೇ
ಪತಿಗೆ  ಕಾನನದಿ, ಕಂಗೆಟ್ಟು ಬಿಟ್ಟು ಹೋದಂತಾಯ್ತು
ಯೆನುತ  ಬಾಲೆ ಬಿದ್ದಳು ಮೂರ್ಛೆಗೈದೂ ॥

ಚಿತ್ರಾಂಗದೆ: ಅಯ್ಯೋ ಪ್ರಾಣನಾಥ ಅಯ್ಯೋ ಜೀವದೊಲವೆ ಕೆಟ್ಟೆವೆ ಅಕಟಕಟಾ ಕಡೆಗೆ ಏನು ತಂದನೆ ವಿಧಿಯು, ಅಯ್ಯೋ ಪ್ರಾಣಕಾಂತ ನಿನ್ನ ಆಶೆಯನ್ನು ಪಿಡಿದು ಇಲ್ಲಿನ ತನಕ ಜೀವಿಸಿಕೊಂಡು. ಇದ್ದೆವಲ್ಲೋ ರಮಣಾ  ಅಮ್ಮ ಮೀನಾಕ್ಷಿ ನಮ್ಮ ನಗರಕ್ಕೆ ತಾನೇ ಬಂದನೆಂಬ ಸಂತೋಷದಿಂದ ಮಗನನ್ನು ಕರೆಯಲ್ಕೆ ಕಳುಹಿಸಿ ಕೊಟ್ಟೆವಲ್ಲೇ ತಾಯಿ, ನಮ್ಮ ಸಂತೋಷದ ಬಾಳು ಸುಟ್ಟಿಹೋಯಿತಲ್ಲೇ ಅಕ್ಕಯ್ಯ ಅಯ್ಯೋ ಶ್ರೀ ಹರಿ ನಾವು ಪೃಥ್ವಿಯ ಮೇಲೆ ಹೇಗೆ ಜೀವಿಸಬೇಕೋ ನರಹರಿ ಮುಂದೇನು ದಾರಿ.

ದರುವು

ವಾಸವಾತ್ಮ ಸಂಭವಾನೂ  ಮೋಸವಾದನೇ
ಧಾತ್ರಿನಾಥ ಧರ್ಮಾನುಜನೂ  ಮೃತ್ಯುವಾದನೇ ॥

ಕೂಸಿನಿಂದ ಕುಂತೀಪುತ್ರಾ  ಘಾತಿಯಾದನೇ
ಗಾಸಿಬಂದು ವದಗಿತು ಯನಗೇ  ಯೇನು ಮಾಡಲೇ  ಸಖಿಯೇ        ॥

ಚಿತ್ರಾಂಗದೆ: ಅಮ್ಮಾ ಮೀನಾಕ್ಷಿ  ಈ ರಣಭೂಮಿಯಲ್ಲಿ ಧಾವ ದೇವೇಂದ್ರನಾತ್ಮಜ ಬಿದ್ದು ಮರಣವಾದನೇ  ಧರ್ಮ ಭೀಮಾದ್ಯರಿಗೆ ಬಲವು ತಗ್ಗಿತಲ್ಲೇ ಮೀನಾಕ್ಷಿ, ತಮ್ಮ ದಾಯಾದ್ಯರೆನಿಸಿಕೊಂಡ, ಕೌರವರ ಸೈನ್ಯದಲ್ಲಿ, ಇಂಥಾ ದ್ರೋಣ ಭೀಷ್ಮಾದಿ ಕರ್ಣಾದ್ಯರ, ಕೊಂದಂಥ ವೀರ ಪಾರ್ಥನ ಬಲವು, ತಗ್ಗಿಸಿದನೇನೆ ತಾಯೇ, ಇಂಥಾ ಕುಲಕಂಟಕ ಮಗನು ಹೊಟ್ಟೆಯಲ್ಲಿ ಹುಟ್ಟಬಹುದೇನೆ ಅಯ್ಯೋ, ಪ್ರಾಣದೊಲ್ಲಭ  ಅಯ್ಯೋ ಕಾಂತ ನಮ್ಮೀರ‌್ವರ ಗತಿ ಏನು ಮಾಡಿದೋ ರಮಣಾ, ಅಮ್ಮಾ ಮೀನಾಕ್ಷಿ. ಈ ಪೃಥ್ವಿಯ ಮೇಲೆ ನಾನು ಹ್ಯಾಗೆ ಜೀವಿಸಲೇ ಅಯ್ಯೋ  ಪ್ರಾಣೇಶ್ವರಾ, ಜೀವದೊಲ್ಲಭ, ನಿನ್ನ ಮುಖವನ್ನು ಯೆಂದಿಗೆ ನೋಡುವೆನು, ಅಯ್ಯೋ ಅಕ್ಕಯ್ಯ, ನಾನು ಹೇಗೆ ತಾಳಲೇ ತಾಯಿ ॥

ಉಲೂಪಿ: ಅಮ್ಮಾ ತಂಗಿ  ಯಾತಕ್ಕೆ ಸುಮ್ಮನೇ ಅಳುತ್ತಾ ಇದ್ದೀ, ದುಃಖವನ್ನು ಸೈರಿಸುವಂಥವ ಳಾಗಮ್ಮಾ ತಂಗೀ ಮಂಗಳಾಂಗೀ ॥

ಚಿತ್ರಾಂಗದೇ: ಅಯ್ಯೋ ಅಕ್ಕ  ನಮ್ಮ ಬಾಳು ಸುಟ್ಟು ಹೋಯಿತಲ್ಲೇ ಅಕ್ಕಯ್ಯ  ನಮ್ಮ ಪ್ರಾಣಪತಿ ಹೋದ ಬಳಿಕ ಹ್ಯಾಗೆ ಜೀವಿಸಿಕೊಂಡಿರಬೇಕೆ ಅಕ್ಕಯ್ಯ

ಉಲೂಪಿ: ಮತ್ತೂ ಪೇಳುತ್ತೇನಮ್ಮಾ ತಂಗೀ

ದರುವು

ತಂಗೀ ದುಃಖ ಬೇಡಾವಮ್ಮಾ  ತಾಳು ತಾಳು ನೋಡುವೆನಮ್ಮಾ
ಹ್ಯಾಂಗೆಯೆಂದು ಪತಿಗೆ ಮರಣಾ  ಈಗ ತಿಳಿದು ಪೇಳುವೆನಮ್ಮಾ ॥

ಉಲೂಪಿ: ಅಮ್ಮಾ ತಂಗಿ ಸುಮ್ಮನೆ ಯಾತಕ್ಕೆ ದುಃಖವನ್ನು ಮಾಡುತ್ತೀಯಾ ಸೈರಿಸುವಳಾಗಮ್ಮಾ ತಂಗೀ. ಪತಿಯು ಮರಣವಾದನೆನ್ನುವ ಮಾತು ಯನ್ನ ಮನಕ್ಕೆ ಅನುಮಾನವಾಗಿ ತೋರುತ್ತಾ ಇದೆ. ನಾನು ತಿಳಿದು ಹೇಳುತ್ತೇನೆ ಒಂದು ಕ್ಷಣ ಸೈರಿಸುವಂಥವಳಾಗಮ್ಮಾ ತಂಗಿ ॥

ಚಿತ್ರಾಂಗದೆ: ಅಯ್ಯೋ ಅಕ್ಕಯ್ಯ ಪ್ರತ್ಯಕ್ಷವಾಗಿ ಮೀನಾಕ್ಷಿಯು ಹೇಳುತ್ತಾ ಇರಲಾಗಿ ದುಃಖ ಸೈರಿಸುವುದೆಂತು ಪೇಳಮ್ಮಾ ಅಕ್ಕಯ್ಯ, ಮತ್ತೂ ಪೇಳುತ್ತೇನೆ

ದರುವು

ಕಾಂತ, ಮರಣವಾದನೆಂದೂ ಕಾಂತೆಯರು
ಪೇಳುವರಮ್ಮಾ ॥
ಯೆಂತೂ ಮರೆಯಲಮ್ಮಾ ದುಃಖಾ
ಕಾಂತ ನಿನಗೇನೇಳಿದರಕ್ಕಾ ॥

ಚಿತ್ರಾಂಗದೆ: ಅಯ್ಯೋ ಅಕ್ಕಯ್ಯ ನಮ್ಮ ಪ್ರಾಣಕಾಂತನಾದ ಅರ್ಜುನ ಭೂಪಾಲರು, ಹಸ್ತಿನಾವತಿಗೆ ಹೋಗುವಾಗ್ಗೆ ಏನು ಹೇಳಿದ್ದಾರೋ, ಮಾಜದೆ ಪೇಳಮ್ಮಾ ಅಕ್ಕಯ್ಯ.

ಉಲೂಪಿ: ಮತ್ತೂ ಪೇಳುತ್ತೇನಮ್ಮ ತಂಗೀ

ದರುವು

ಹಿಂದೇ ಕ್ರೀಡಾವನದೀ ಕಾಂತಾ
ಒಂದು ಕುರುಹು ಹೇಳಿ ಇದ್ದಾರಮ್ಮಾ
ಕಂದೇ ದಾಡಿಂಬ ವೃಕ್ಷಾ
ಅಂದು ಮರಣಾ ಎಂದೇಳಿದ್ದರಮ್ಮಾ ॥

ಉಲೂಪಿ: ಅಮ್ಮಾ ತಂಗಿ, ಕಾಂತನೊಡನೆ ಕ್ರೀಡಾವನದಲ್ಲಿ ವಿಹರಿಸುತ್ತಾ ಇರುವಾಗ್ಗೆ ನಮ್ಮ ಪತಿಯು ಹಸ್ತಿನಾವತಿಗೆ ಹೋಗುವಾಗ್ಯೆ  ನೀವು ಶತ್ರು ಸಂಹಾರಿಗಳು, ಜಯವಂತರಾಗಿದ್ದೀರೋ, ಇಲ್ಲವೋ ಎಂಬುವಂಥ ಬಗೆ ಹೇಗೆ ತಿಳಿಯಬೇಕೆಂದು ಕೇಳುವಾಗ್ಯೆ, ಅದೇ ವನದಲ್ಲಿ ಒಂದು ದಾಡಿಂಬದ ವೃಕ್ಷಾ, ತೋರಿಹೋದರಲ್ಲೇ ತಂಗೀ, ನಾನು ಹೋಗಿ ನೋಡಿಕೊಂಡು ಬರುತ್ತೇನೆ. ನೀನು ಅರಮನೆಯಲ್ಲಿ ದುಃಖವನ್ನು ಮಾಡದೆ ಇರುವಂಥವಳಾಗಮ್ಮಾ ತಂಗೀ ಮಂಗಳಾಂಗಿ ಮತ್ತೂ ಪೇಳುತ್ತೇನಮ್ಮ ತಂಗೀ ॥

ದ್ವಿಪದಿ

ಹರಿಣಲೋಚನೆ ಬೇಡಾ ದುಃಖ ಸೈರಿಸು ನೀನೂ
ನಾನು ಹೋಗಿ ನೆರೆನೋಡಿ ಬಹೆನೆಂದು  ಹೇಳೀ
ವನದೊಳು ಹೊಕ್ಕು ಕುರುಹಿಟ್ಟ ವೃಕ್ಷ ಬಾಡಿ ಇದೆ
ಮರುಗುತ ಬೇಗನೆ ಬಂದು ನರನ ಮೃತಿ ದಿಟವೂ
ಬಾಡಿ ಇದೆ ದಾಡಿಮವೂ ಇರುವುದೂ ಇನ್ಯಾಕೆ
ನಮಗೆಲ್ಲಾ ಪ್ರಾಣಕಾಂತ  ಮರಣವಾದನಲೇ
ಅಲ್ಲಿಗೈವುದುಚಿತವೆಂದು – ಗೋಳಿಡುತಿರ್ದರೂ ॥

ಉಲೂಪಿ: ಅಯ್ಯೋ ತಂಗಿ ನಮ್ಮ ಕಾಂತನಾದ, ಅರ್ಜುನ ಭೂಪಾಲನು ನಿಶ್ಚಯವಾಗಿ ಮೃತಿ ಹೊಂದಿ ಇದ್ದಾರೆ. ನಮ್ಮ ವನದಲ್ಲಿ ತೋರಿದ ದಾಡಿಮದ ವೃಕ್ಷವೂ ಬಾಡಿ ಇದೆಯಲ್ಲೇ ತಂಗೀ, ಇನ್ನೂ ನಾವು ಇಲ್ಲಿ ಯಾತಕ್ಕೆ ಇರೋಣ. ಅರ್ಜುನ ಭೂಪಾಲರು ಧಾವಲ್ಲಿ ಬಿದ್ದು ಇದ್ದಾರೋ ಅಲ್ಲಿಗೆ ನಾವೀರ‌್ವರೂ ಹೋಗೋಣ ನಡಿಯಮ್ಮ ತಂಗೀ ॥

ದರುವು

ಅರಸಾ ಕೇಳೈ ಬಭೃವಾಹನನಾಗಲೂ
ಅರಮನೆಗೆ ಬರುತ್ತಾ ಕೇಳ್ದನೂ, ಕೇಳ್ದನೂ ॥
ಬಹಳ ದುಃಖದ ಧ್ವನಿ ಪರಿಯಿದೇನೆಂದೂ
ಧರೆಗೆ ಬಿದ್ದ ಜನನಿಯರ ಕಂಡೂ ಪಾದಕೆರ
ಗಿದನಾಗಾ ಅತಿಬೇಗಾ ॥

ಬಭೃವಾಹನ: ಅಯ್ಯ ಸುಬುದ್ಧಿ ಇದು ಏನು ಆಶ್ಚರ‌್ಯ. ಸಂಗ್ರಾಮ ವಿಜಯೋತ್ಸವದಿಂದ ಅರಮನೆಗೆ ಹೋಗುವಂಥ ಕಾಲದಲ್ಲಿ  ಅಪರಿಮಿತ ಪ್ರಳಾಪವು ಆಗುತ್ತಾ ಇದೆ. ಜನನಿಯರ ಪ್ರಳಾಪವೂ ಬಹಳವಾಗಿ ಇದೆ. ಜಾಗ್ರತೆ ವಿಚಾರಿಸಬೇಕಯ್ಯ ಮಂತ್ರೀ ॥

ಬಭೃವಾಹನ: ಹೇ ಜನನೀ, ಹೇ ಮಾತೆ ನಿಮ್ಮೀರ‌್ವರೂ ಆಶೀರ್ವಾದ ಕಟಾಕ್ಷದಿಂದ ಈ ದಿನ ರಣಾಗ್ರವನ್ನು ಜೈಸಿ ಬಂದು ಇರುತ್ತೇನೆ. ಇದಕ್ಕೆ ಚಿಂತೆ ಯಾಕಮ್ಮಾ ತಾಯಿಗಳಿರಾ ॥

ದರುವು

ಅಪಜಯವು ಯನಗಾಗುವುದಿಲ್ಲವಮ್ಮಾ  ಯುದ್ಧದಲೀ
ವಿಪರೀತ ದುಃಖವು ನಿಮಗ್ಯಾಕೆ  ತಾಯೇ
ಅಪಹಾಸ್ಯ ಮಾಡೀದಾ  ಅರ್ಜುನನೇ ಮುಂತಾಗಿ
ಅಪರಿಮಿತ ಸೈನ್ಯವಂ  ಜೈಸಿ ನಾ ಬಂದೇ ॥

ಬಭೃವಾಹನ: ಅಮ್ಮಾ ತಾಯಿಗಳಿರಾ, ಘೋರತರಮಾದ ದುಃಖವನ್ನು ಮಾಡಲು ಕಾರಣವೇನು ಹೇ ಜನನೀ ನನಗೆ ಸಂಗ್ರಾಮ ಭೂಮಿಯಲ್ಲಿ ಅಪಜಯವಾಯಿತೆಂಬ ವರ್ತಮಾನವನ್ನು ಕೇಳಿ, ದುಃಖವನ್ನೂ ಮಾಡುತ್ತೀರೋ, ಹೇ ತಾಯಿಗಳಿರಾ ನಿಮ್ಮ ಕರುಣದಿಂದ, ಸರಿ ದೊರೆಗಳ ಮುಂದೆ ಯನ್ನನ್ನು ಅಪಹಾಸ್ಯ ಮಾಡಿ ಜಾಳು ನುಡಿಗಳು ನುಡಿದಂಥ ಅರ್ಜುನನನ್ನೂ, ಕರ್ಣನ ಮಗ ವೃಷಕೇತು ಮೊದಲಾಗಿ ಸಮಸ್ತ ಸೈನ್ಯವನ್ನೂ ಸಂಹಾರ ಮಾಡಿ ಜಯವಂತನಾಗಿ ಇದ್ದೇನೆ. ನೀವು ಯಾತಕ್ಕೆ ದುಃಖವನ್ನು ಮಾಡುತ್ತಾ ಇದ್ದೀರಿ. ಸೈರಿಸುವಂಥವರಾಗಬೇಕಮ್ಮಾ ತಾಯಿಗಳಿರಾ ॥

ಚಿತ್ರಾಂಗದೆ: ಯಲಾ ಕುಲಕಂಟಕಾ, ಯಲಾ ದುರ್ಮಾರ್ಗ ಏನು ಮಾಡಿ ಬಂದೋ, ಯನ್ನ ಸ್ವಾಮಿಗೆ ದ್ರೋಹ ಮಾಡಿದೇನೋ ಮೂರ್ಖ ॥

ದರುವು

ಯೇನೂ ಮಾಡಿದೆ ಪಾಪೀ  ಯಮ್ಮ ಒಡಲೊಳು ಬಂದೂ
ಆ ನರನಿಗೆ ನೀನೇ ಹಗೆಯಾದ ॥

ಮಾನವಾಧೀಶನೇ ಮಾಡಿದೆ ಪಿತೃವಧೇ
ನೀನೆ ಸತ್ಪುತ್ರನಹುದೋ ನೀ ॥

ಚಿತ್ರಾಂಗದೆ: ಯಲಾ ಪಾಪಾತ್ಮ ಯಲಾ ದ್ರೋಹಿ, ನಾವು ಏನು ಆಜ್ಞೆ ಮಾಡಿ ಕಳುಹಿದೆವೂ, ನೀನು ಏನು ಮಾಡಿ ಬಂದೋ ದುರ್ಮಾರ್ಗ, ನಿನ್ನ ತಂದೆಯನ್ನು ವಧೆ ಮಾಡುವುದಕ್ಕೆ ನಿನ್ನ ಕೈ ಹ್ಯಾಗೆ ಬಂತೋ ದ್ರೋಹಿ ಪಿತೃವಧೆಯನ್ನು ಮಾಡಿ ಈ ಲೋಕದಲ್ಲಿ ಬದುಕು ಹೋಗೋ ಪಾಪಾತ್ಮ.

ದರುವು

ಯಾಕೇ ಈ ಕರ್ಣಾ ತಾಟಕ ಮಂಗಳಾ ಸೂತ್ರಾ
ಶ್ರೀಕರವೂ ಮಾತೇಗ್ಯಾಕೆಂದೂ, ಯಾಕೆಂದೂ ॥
ಬೇಕಾಗಿ ಬಿಡಿಸಿದೆಯೋ – ಭೂಷಣಗಳನೆಲ್ಲಾ
ಹೇ ಕಾಲಾಂತಕನೇ ದ್ರೋಹಿ ನೀನೂ ॥

ಚಿತ್ರಾಂಗದೆ: ಯಲಾ ದುರ್ಮಾರ್ಗ ಹಡೆದ ತಾಯಿಗಳಿಗೆ ಕರ್ಣತಾಟಂಕ, ಕೊರಳಲ್ಲಿ ಇದ್ದಂಥ ಮಂಗಳ ಸೂತ್ರವೂ ಇದ್ದರೆ ಶೃಂಗಾರವಲ್ಲವೆಂದು ತೆಗೆದು ಹಾಕುವಂಥವನಾದೆ  ಇದೂ ಅಲ್ಲದೆ ಅರಿಸಿನ ಕುಂಕುಮ, ತಾಂಬೂಲ, ಮೂಗಿನಲ್ಲಿದ್ದ ಮೂಗುತಿ ಸಹ ನೀನೆ ತೆಗೆಸುವಂಥವನಾದೆಲ್ಲೊ ದುರ್ಮಾರ್ಗ

ಉಲೂಪಿ: ಮತ್ತೂ ಪೇಳುತ್ತೇನಪ್ಪ ಬಾಲಾ  ದುರ್ಮಾರ್ಗ ಶೀಲಾ ॥

ದರುವು

ಯೆಲ್ಲೀ ಪ್ರಾಣಾಕಾಂತನೆಲ್ಲಿ ಬಿದ್ದಿಹನೋ ಬೇಗಾ
ಅಲ್ಲಿ ಯುದ್ಧಭೂಮಿಗೈದು  ತೋರೋ ಕಂದಯ್ಯ

ಚಿತ್ರಾಂಗದೆ: ಅಪ್ಪಾ ಮಗನೇ, ನಮ್ಮ ಪ್ರಾಣಪತಿಯಾದಂಥ ಪಾರ್ಥನನ್ನು ಯಾವ ಸ್ಥಳದಲ್ಲಿ ಕೊಂದು ಇದ್ದೀಯಾ ಧಾವಲ್ಲಿ ಬಿದ್ದು ಇದ್ದಾರೆ. ನಿನಗೂ ನಿನ್ನ ತಂದೆಗೂ ಧಾವಲ್ಲಿ ಯುದ್ಧವಾಯಿತೋ ಆ ರಣಭೂಮಿಯನ್ನು ತೋರು ನಡಿಯಪ್ಪಾ ಬಭೃವಾಹನ ॥

ದರುವು

ರುಂಡ ಮುಂಡದಿಂದ ಕಡಿದು  ಕಂಡ ರಕ್ತಮಯ  ಭೂ
ಮಂಡಲವು, ಕಂಡು ಭಯಗೊಂಡಿರಮ್ಮಾ ॥

ಬಭೃವಾಹನ: ಅಮ್ಮಾ ತಾಯೇ ನಾನು ಏನೆಂದೂ ನಿಮ್ಮೀರ‌್ವರನ್ನೂ ಕರೆದುಕೊಂಡು ಹೋಗಲಿ, ರಣಭೂಮಿಯನ್ನೂ ತೋರಲಿ, ಯಾವ ಕಾಲಕ್ಕು ಅರಮನೆಯಂ ಬಿಟ್ಟು ಹೊರಟಂಥವರಲ್ಲಾ  ತುಂಡು ತುಂಡಾಗಿ ರುಂಡ ಮುಂಡಗಳು, ಹೊರಳಾಡುತ್ತಾ ಹೆಣಮಯವಾಗಿ ಇರುವಂಥ ಭೂಮಿಗೆ ನಾನು ಹೇಗೆ ಕರೆದುಕೊಂಡು ಹೋಗಿ ತೋರಲಿ, ಯುದ್ಧ ಭೂಮಿಯನ್ನು ತಾವು ಕಂಡಾಕ್ಷಣವೇ ಕಣ್ಣಿಗೆ ಕತ್ತಲೆ ಕವಿದು, ದೇಹ ಕಂಪನಗೊಳ್ಳುವುದು ನೀವು ಯೆಷ್ಟು ಮಾತ್ರಕ್ಕೂ ರಣಭೂಮಿಗೆ ಹೋಗಲಾಗದಮ್ಮಾ, ತಾಯಿಗಳಿರಾ ॥