(ವೃಷಕೇತು ಯುದ್ಧಕ್ಕೆ ಬರುವಿಕೆ)

ವೃಷಕೇತು: ಯಲಾ ಸಾರಥೀ ಈ ರಣಭೂಮಿಯಲ್ಲಿ ಬಭೃವಾಹನನು ಇದ್ದಾನೊ ಇಲ್ಲವೋ ಯುದ್ಧಕ್ಕೆ ಬರುತ್ತಾನೊ ಇಲ್ಲವೋ ತಿಳಿದು ಬರುವಂಥವನಾಗೋ ಸಾರಥಿ.

ಬಭೃವಾಹನ: ಯಲಾ ಸಾರಥೀ ಅತಿರಥರು ಮಹಾರಥರು ಹಾರಿ ಹೋಗುವ ಕಾಲದಲ್ಲಿ ಈ ಅಣುಗ ಯೆದಿರಾಗಿ ಬಂದು ಇದ್ದಾನೆ. ಇವನು ಧಾರು, ಇವನ ಹೆಸರೇನು, ಇವನು ಧಾರ  ಮಗನು? ಜಾಗ್ರತೆ ಇಂದ ತಿಳಿದು ಬರುವಂಥವನಾಗೋ ಸಾರಥಿ.

ವೃಷಕೇತು: ಯಲಾ ಸಾರಥಿ, ಕರ್ಣನ ಮಗ ವೃಷಕೇತು ರಣರಂಗಕ್ಕೆ ಬಂದು ಇದ್ದಾನೆಂದು ಹೇಳೋ ಸಾರಥಿ.

ದರುವು

ಬಿಂಕವ್ಯಾತಕ್ಕೆ ನಿಲ್ಲೋ ಬಭೃವಾಹನಾ
ಅಂಕಿತಾವನಿಟ್ಟು ಹೊಡೆವೆ, ರಣದಿ  ಈ ದಿನ ॥
ಕರ್ಣಸುತ ನಾನು  ನರನ ಪುತ್ರನಾದರೇ
ಪೂರ್ಣ ಧೈರ‌್ಯವಂತನಾಗಿ, ತಿರುಗೋ ಈ ಕಡೇ ॥

ವೃಷಕೇತು: ಯಲಾ ಬಭೃವಾಹನ, ಈ ದಿನ ಹೇಳಿ, ಗುರಿ ಇಟ್ಟು ನಿನ್ನನ್ನು ಹೊಡೆದು, ಕೆಡಹುವುದಕ್ಕೆ ಬಂದು ಇದ್ದೇನೆ. ತಡವ್ಯಾತಕೆ ಮಾಡುತ್ತೀಯಾ  ಮದಗಜವೆನಿಸುವಂಥ  ಕರ್ಣನ ಮಗ ನಾನು, ಅರ್ಜುನನ ಮಗ ನೀನೂ, ನಿಶ್ಚಯವಾದರೇ ಪೂರ್ಣ ಧೈರ‌್ಯವಂತನಾಗಿ, ಯುದ್ಧಕ್ಕೆ ನಿಲ್ಲುವಂಥವನಾಗೋ ಮೂರ್ಖ.

ದರುವು

ಯಾಕೆ ಬಂದೇ, ಹೋಗೋ ಜೀವಾ  ಉಳಿಸಿಕೊಳ್ಳೆಲೋ
ಲೋಕದಲ್ಲಿ ಪಾಂಡವರು  ನಿರ್ದಯರಾಲಾ ॥

ಹಿಂದೇ ಸಮರದಲೀ  ನಿಮ್ಮ ತಂದೆ ಕರ್ಣನ
ಕೊಂದು ಹಾಕಿ ಬಿಟ್ಟ ಪಾರ್ಥ  ನಿನ್ನಾ ಈ ದಿನಾ ॥

ಯನ್ನ ಕೈಯಿಂದಾ, ನಿನ್ನಾ  ಕೊಲ್ಲಿಸಲೋಸುಗಾ
ನಿನ್ನ ಕರೆದು ತಂದಿಹಾನು, ಬಲ್ಲದೀ ಜಾಗಾ ॥

ಬಭೃವಾಹನ: ಯಲಾ ವೃಷಕೇತು, ಅರ್ಜುನನು ಹಿಂದಣ ವೈರತ್ವವನ್ನು ಹಿಡಿದು ಕರ್ಣನನ್ನು ಕೊಂದನು ಮತ್ತು ಕರ್ಣನ ಮಗನನ್ನು ತಾನು ಕೊಲ್ಲಬಾರದೆಂದೂ  ಯೋಚಿಸಿ ನನ್ನ ಕೈಯಿಂದ, ಕೊಲ್ಲಿಸಲಿಕ್ಕೆ ಹಿತದಿಂದ ಕಳುಹಿ ಇದ್ದಾನೆ. ಹೇ ಮರುಳೆ ಇದೂ ಅಲ್ಲದೆ ಗುರು ಪಿತಾಮಹರನ್ನು ಕೊಂದಂಥ ಪಾಂಡವರು, ನಿನ್ನನ್ನು ಕೊಲ್ಲಿಸದೆ ಬಿಟ್ಟಾರೇನಲಾ ಮರುಳೇ. ನೋಡುವುದಕ್ಕೆ ನಿರ್ದಯವಂತರಾಗಿ ಇದ್ದಾರೆ ಕಾರುಣ್ಯ ಜೀವಿಗಳಲ್ಲಾ. ಯಲಾ ವೃಷಕೇತು ಯನ್ನ ಕೈಯಿಂದ ವೃಥಾ ಸಾಯಬೇಡ ಹಿಂದಕ್ಕೆ ಹೋಗುವಂಥವನಾಗೋ ವೃಷಕೇತೂ.

ದರುವು

ಯೇನಾಡಿದೇ ಯಲೇ ಪಾರ್ಥಿ, ಮೀನಾಕ್ಷಿಯರಂತೆ
ಹಿಂದಣದ ಹಳೆಯ ಸುದ್ದಿಗಳು ಸುದ್ದಿಗಳು ॥

ವೃಷಕೇತು: ಯಲಾ  ಬಭೃವಾಹನ ಯೇನು ಮಾತನಾಡಿದೋ ಮೂರ್ಖ, ಈ ರಣಭೂಮಿಯಲ್ಲಿ ನಿಂತು ಶರ ಕೋದಂಡವನ್ನು ಪಿಡಿದೂ, ಕರ್ಣನ ಮಗ ವೃಷಕೇತು ಬಂದು ಇದ್ದಾನೆಂದು ನಿನ್ನ ಗುಂಡಿಗೆಯು ಒಡೆದ ಹಾಗೆ ಆಯಿತೇನಲಾ ಮರುಳೇ ಮುಂಗೈಗೆ ಬಳೆ ತೊಟ್ಟಂಥ ಮಾನಿನಿಯರು ಕಲಹ ಮಾಡಿದ ಹಾಗೆ ಬಗುಳುತ್ತೀಯೇನಲಾ  ಮೂರ್ಖ ಅತಿ ಜಾಗ್ರತೆಯಿಂದ ಯುದ್ಧಕ್ಕೆ ನಿಲ್ಲುವಂಥವನಾಗೋ ರಣಹೇಡಿ ॥

ದರುವು

ಹಳೆಯ ಮಾತಲ್ಲಾ  ಪ್ರಾಣ ಉಳಿಸಿಕೊಳ್ಳೆಂದೂ
ತಿಳಿಯ ಹೇಳುವೆ ಭರದಿ  ಕರ್ಣಸುತನಿಗೇ

ಬಭೃವಾಹನ: ಯಲಾ ವೃಷಕೇತು  ಮೂರ್ಖ ನಾನೋ, ನೀನೋ ಚನ್ನಾಗಿ ನೋಡಿಕೊಳ್ಳುವಂಥವ ನಾಗು, ಮುಂಗೈಗೆ ಕಂಕಣವನ್ನು ಕಟ್ಟಿಕೊಂಡು, ಕನ್ನಡಿಯಲ್ಲಿ ನೋಡಿದಂತಾಯಿತು, ಯಲಾ ವೃಷಕೇತು, ಅನುಸಾಲ್ವ, ನೀಲಧ್ವಜ, ಯೌವನಾಶ್ವ, ಹಂಸದ್ವಜ ಮೊದಲಾದ ಯಾದವರ ದಂಡೆಲ್ಲಾ ಏನು ಗತಿಯಾಯಿತು. ನೀನೂ ವೃಥಾ ಸಾಯಬೇಡ ಸುಮ್ಮನೇ ಹೋಗುವಂಥವನಾಗೋ ರಣಹೇಡಿ-

ದರುವು

ಜಾತಗ್ರಾಜಾತಾನೂ  ತಮ್ಮನೂ ಮುಂತಾಗಿ
ಘಾತವಾದರೆಂದೂ, ಕ್ಷತ್ರಿಯನಾದವನು
ರಣದಲ್ಲಿ ಭೀತಿಗೊಂಬುವನೇನೋ ಧೀರನೋ
ವೃಥಾ ಮನ್ನಣೆಯ ಮಾತೇನೂ, ನೀ ನಿಲ್ಲೊ ॥

ವೃಷಕೇತು: ಯಲಾ ಬಭೃವಾಹನ, ತಾತ ತಂದೆ ಅನುಜ ಅಗ್ರಜಾ, ಮಕ್ಕಳು ಮುಂತಾಗಿ ಮಡಿದು ಹೋದರೆಂದು, ಕ್ಷತ್ರಿಯನಾದವನು, ರಣಾಗ್ರಕ್ಕೆ ಭಯಪಟ್ಟಾನೇನಲಾ ಮರುಳೇ ರಣಾಗ್ರಕ್ಕೆ ನಿಲ್ಲುವಂಥವನಾಗೋ ದುರಾತ್ಮ ॥ಮತ್ತೂ ಪೇಳುತ್ತೇನೆ ಕೇಳುವಂಥವನಾಗೋ ಮೂರ್ಖ-

ದರುವು

ಸರ‌್ವವೀರರಾ  ಸದೆದೆನೆಂಬುವಾ
ಗರ‌್ವ ಬಿಡೆಲಾ  ಬಭೃವಾಹನಾ ॥

ವೃಷಕೇತು: ಯಲಾ ಬಭೃವಾಹನ  ನಮ್ಮ ದಂಡನ್ನೆಲ್ಲಾ ಸಂಹಾರ ಮಾಡಿದೆನೆಂಬ ಗರ‌್ವ ನಿನ್ನಲ್ಲಿರಬಹುದು, ನನ್ನಲ್ಲಿ ಸಾಗದು. ಈ ದಿನ ಯುದ್ಧದಲ್ಲಿ ಹರಿಹರಾದಿಗಳು, ಬ್ರಹ್ಮಾದಿ ದೇವತೆಗಳು ಬಂದು ಯೆದಿರು ನಿಂತಾಗ್ಯೂ, ಸೂರ‌್ಯ ಚಂದ್ರಾದಿಗಳು, ತಾವು ತಪ್ಪಿದರೂ ನಿನ್ನನ್ನು ಕೊಲ್ಲದೇ ಬಿಟ್ಟರೇ, ಕರ್ಣನ ಮಗನೆನ್ನುವ ಹೆಸರು ನನಗ್ಯಾಕೋ ಮೂರ್ಖ, ಯುದ್ಧಕ್ಕೆ ನಿಲ್ಲುವಂಥವನಾಗೋ ಅಧಮಾ ॥

ದರುವು

ಸರ‌್ವರಂದಾದೀ  ಕೆಡಹಿ ತ್ವರಿತಾದಿ
ಬಿಡುವೆನೋ  ಕರ್ಣ ಸಂಭವಾ ॥

ಬಭೃವಾಹನ: ಯಲಾ ವೃಷಕೇತು, ಗರ‌್ವವನ್ನು ಬಿಡು ಎಂಬುದಾಗಿ ಹೇಳಿದೆ ಭಲಾ, ಸಮಸ್ತ ವೀರರಂತೆ ನಿನ್ನ ಕೆಡಹಿದ ಬಳಿಕ ನನ್ನ ಗರ್ವವನ್ನು ಬಿಡುತ್ತೇನಲ್ಲದೆ ಸುಮ್ಮನೇ ಬಿಟ್ಟೇನಲಾ, ದುರಾತ್ಮ ನಿನ್ನ ಪೊಳ್ಳು ಮಾತುಗಳಿಗೆ  ರಣರಂಗಧೀರನಾದ ಬಭೃವಾಹನನು ಬೆದರಬಲ್ಲನೇನಲಾ ಮೂರ್ಖ

ದರುವು

ಬಿಡುವುದಾಗಲೀ, ನೀ ತೊಡು ಶರಳ್ಗಳ
ತೊಡುವೆ ತಾಳಿಕೋ ಯೆನುತಾ ಹೊಡೆದಾನು ॥

ವೃಷಕೇತು: ಯಲಾ ಬಭೃವಾಹನ ಸಮಸ್ತ ವೀರರಂತೆ ನನ್ನ ಕೆಡಹಿದ ಬಳಿಕ ನಿನ್ನ ಗರ್ವವಂ ಬಿಡುವೆಯಾ, ಭಲಾ, ಲೇಸಾಯಿತು. ಯಿಕೋ ನೋಡು ಈ ಖಡ್ಗದಿಂದ ನಿನ್ನ ಗರ‌್ವವನ್ನು ಖಂಡ್ರಿಸಿ ನಿನ್ನ ರಕ್ತವನ್ನು, ಈ ರಣರಂಗದ ಮಾರಿಗೆ ಆಹುತಿಯ ಮಾಡಿ ನಿನ್ನಯ ಖಂಡಗಳನ್ನು ಈ ರಣಭೂಮಿಯಲ್ಲಿರುವ ಶಾಕಿನಿ, ಡಾಕಿನಿ ಮೊದಲಾದ ಭೂತಗಳು ಉಂಡು ಸಂತೋಷಪಡುವಂತೆ ಮಾಡದೇ ಹೋದರೆ ಕಡು ಪರಾಕ್ರಮಿಯಾದ ಕರ್ಣನ ಸುತ ಯೆನಿಸಬೇಕೆ ಯನ್ನ ಶರಜಾಲವನ್ನೂ ನೋಡುವಂಥವನಾಗೋ ರಣಹೇಡಿ.

ದರುವು

ಹೊಡೆದ ಬಾಣವಾ  ಕಡಿದು ಪಾರ್ಥಿವೀ
ಹಿಡಿದು ಕರ್ಕಶ ಕೋಲನೆಸೆಯಲೂ ॥

ಭರದಿ ಕರ್ಣನಾ  ಸುತನ ಖಂಡ್ರಿಸೇ
ಶಿರವು ಬಿದ್ದಿತೂ  ಪಾರ್ಥನಂಘ್ರಿಯಲಿ ॥

ರಾಗ, ವಚನಭಾಗವತ

ಅರ್ಜುನ: ಈ ಪ್ರಕಾರವಾಗಿ ಬಭೃವಾಹನನ ಬಾಣದಿಂದ ವೃಷಕೇತುವಿನ, ಶಿರಸ್ಸು ಹರಿದು ಪಾರ್ಥನ ಚರಣದ ಮೇಲೆ ಬೀಳೇ ಕಂಡು ಅರ್ಜುನನು ಯೇನೆಂದು ಪ್ರಳಾಪಿಸುತಿರ್ದನೂ.

(ಅರ್ಜುನನ ಪ್ರಲಾಪ)

ದ್ವಿಪದೆರಾಗ

ಹಾ ಮಗನೇ ವೃಷಕೇತು, ಮೃತಿ ಹೊಂದಿದೆಯಾ
ಆ ಮಹಾ ಕೃಷ್ಣದೇವರಿಗೆ, ಅತಿ ಪ್ರೀತಿಯಾಯ್ತೆ ॥
ಹೇ, ಮಗನೇ ಮಾತಾಡು  ಕಣ್ಗಳಿಂದಲಿ ನೋಡು
ಮುನಿಸು ಯನ್ನೊಳು ಬೇಡ  ಪ್ರೇಮದಿಂ,
ಪಾಲಿಸಿದ ಕುಂತಿದೇವಿ, ಭೀಮಾ ಮುಂತಾದವರಿಗೆ,
ಏನೆಂದು ಹೇಳೆಲೋ ಕಂದ, ನಾನು
ನೀ ಮುದದೊಳೈವರಿಗೆ ಗತಿಕೊಡುವ
ಸುತನೆಂದು ಮರೆತಿದ್ದೆನಭಿಮನ್ಯುವಿನಾ ॥

ಅರ್ಜುನ: ಅಪ್ಪಾ ಮಗನೇ ವೃಷಕೇತು, ಅಯ್ಯೋ ಕುಮಾರ ಮೃತಿ ಹೊಂದಿದೆಯೇನಪ್ಪಾ  ಕಂದಾ ಶ್ರೀ ಕೃಷ್ಣ ದೇವರಿಗೆ ಅತಿ ಪ್ರೀತಿ ಆಯಿತೇನಪ್ಪಾ, ಬಾಲಾ ಹೇ ಮಗುವೇ, ಬಾಯಿ ತೆರೆದು ವಂದು ಮಾತನಾಡಪ್ಪಾ ಬಾಲಾ, ನಾನು ಅರ್ಜುನನು ಯನ್ನೊಳು ಯೇನು ಕಾರಣ ಮುನಿಸು ಮಾಡಿ ಮಲಗಿದ್ದೀಯಪ್ಪಾ, ಹಸ್ತಿನಾವತಿಯಲ್ಲಿ ಧರ್ಮ ಭೀಮಾದ್ಯರಿಗೆ ಯೇನೆಂದು ಉತ್ತರವಂ ಕೊಡಲೋ ಬಾಲ. ನಮ್ಮ ಐವರಿಗೆ, ಸದ್ಗತಿ ಕೊಡುವಂಥ ಮಗ ನೀನೆಂದು ಬಹಳವಾಗಿ ನಂಬಿ ಇದ್ದೆವಲ್ಲಪ್ಪಾ ಪುತ್ರಾ, ಯುದ್ಧಕ್ಕೆ ಹೋಗಬೇಡವೆಂದು ಬಹಳವಾಗಿ ಹೇಳಿದೆನಲ್ಲಪ್ಪಾ, ಕಂದಾ, ಇನ್ನು ಹ್ಯಾಗೆ ಮಾಡಲೋ ಪುತ್ರ ಅಯ್ಯೋ ಶ್ರೀ ಹರಿ, ನಿನಗೆ ಸಂಪ್ರೀತಿಯಾಗಲೋ ನರಹರಿ.

ದರುವು

ಭೂಮಿಗೋಸುಗಾ  ಕೊಂದೇ, ಕರ್ಣನು ಹಗೆಯೆಂದು
ಸೋಮವಂಶಕೆ ನೀನೆ, ಸುಕುಮಾರನೆಂದು ॥

ಅರ್ಜುನ: ಅಪ್ಪಾ ಮಗುವೇ, ಕೌರವರ ದಂಡಿನಲ್ಲಿ ಮಹಾ ಬಲವಂತನಾದ ಕರ್ಣನನ್ನು ನೋಡಿ ಈ ಭೂಮಿ ನನಗೇ, ಆಗಬೇಕೆಂದು ಕೊಂದೆನಲ್ಲಪ್ಪಾ ಕಂದಾ  ಇದೂ ಅಲ್ಲದೆ ಚಕ್ರವ್ಯೆಹದ ದ್ವಾರದಲ್ಲಿ, ಅಭಿಮನ್ಯು ಒಬ್ಬನೇ ಯುದ್ಧ ಮಾಡಿ ಬಿದ್ದು ಹೋದನಂತರ, ನಮ್ಮ ಚಂದ್ರ ವಂಶಕ್ಕೆ ನೀನೇ ಮಗನೆಂದು ಬಹಳವಾಗಿ ನಂಬಿ ಇದ್ದೆವಲ್ಲೋ ಕಂದಾ, ನಮ್ಮ ವಂಶವೂ ಊರ್ಜಿತವಾಗಬೇಕೆಂದು, ಯಜ್ಞವನ್ನೂ ಪ್ರಾರಂಭಿಸಿಕೊಂಡು, ಯೌವನಾಶ್ವನ ಪಟ್ಟಣಕ್ಕೆ ಹೋಗಿ, ಸಮಸ್ತರನ್ನೂ ಜೈಸಿ ಯಾಗದ ಕುದುರೆಯನ್ನು ತಂದು, ದೇಶ ಮಧ್ಯದಲ್ಲಿ ಬಿಟ್ಟೆವಲ್ಲಪ್ಪಾ ಮಗುವೇ, ಕರ್ಣನಿಗಿಂತಲೂ ಮಿಗಿಲಾದ ಕೂಸು ಎಂಬುದಾಗಿ ಕೃಷ್ಣ ದೇವರ ಮುಂದೆ ಧರ್ಮರಾಯರು ಹೇಳುತ್ತಿದ್ದರಲ್ಲೋ ಕಂದಾ.

ದರುವು

ಪಾಲಿಸೋ ಕುದುರೆಯಾ  ಪೇಳು ಮುಂದಿನ ಕಾರ‌್ಯಾ
ಬಾಲಕಾ ಯನ್ನನೂ  ಬಿಟ್ಟು ನೀ ಹೋದಾ ॥

ಅರ್ಜುನ: ಅಪ್ಪಾ ವೃಷಕೇತು ನೀನು ತೀವ್ರದಿಂದೆದ್ದು ನಿನಗೆ ಗಾಸಿಯನ್ನು ಮಾಡಿದಂಥಾ, ಕ್ರೂರನನ್ನೂ ಸಂಹರಿಸಿ, ಕುದುರೆಯನ್ನು ಸಂರಕ್ಷಣೆ ಮಾಡಿ ಮುಂದೆ ಯಾವ ದೇಶಕ್ಕೆ ಹೋಗಬೇಕೋ ಎದ್ದು ಬಿಡುವಂಥವನಾಗೈಯ್ಯ ಕುಮಾರ-

ದರುವು

ಮೃಡ ಕೃಷ್ಣಾ ಗಿರೀಶನಾ  ಕರುಣ ತಪ್ಪಿತು ಈಗ ॥
ಕಡೆ ಹಾಯಿಸೈ ತಂದೇ  ಗತಿಯೇನೋ ಮುಂದೇ ॥

ಅರ್ಜುನ: ಅಯ್ಯೋ ಕುಮಾರ ಈ ರಣರಂಗದೋಳ್ ನೀನು ಮಲಗಿರುವ ಪರಿಯನ್ನೂ ನೋಡಿದರೆ ಪರಮಾಶ್ಚರ‌್ಯವಾಗಿರುವುದಲ್ಲೋ, ಪುತ್ರಾ ನಿಟಿಲಾಂಬಕನಂತೆ ಮೆರೆದಂಥ ನಿನ್ನ ಪಟುತರ ಶಕ್ತಿಯೇನಾಯಿತೋ, ಬಾಲಾ  ಕುದುರೆಯನ್ನು ಬಿಡಿಸಿಕೊಂಡು, ದೇಶ ಮಧ್ಯದಲ್ಲಿ ಬಿಟ್ಟು, ಸಮಸ್ತರನ್ನು ಜೈಸಿ, ಯಜ್ಞವೂ ವಿಘ್ನವಾಗದಂತೆ, ಸಂಪೂರ್ತಿ ಮಾಡಿಸುವಂಥ ಧೀಮಂತರ‌್ಯಾರೋ, ಕಂತು ಸಮರೂಪ  ನನ್ನನ್ನು ಓರ‌್ವನನ್ನೆ ಮಾಡೀ, ಬಿಟ್ಟು ಹೋಗುವಂತಾದ್ದು ನ್ಯಾಯವೇನೋ ಬಾಲಾ  ಈ ಪೊಡವಿಗಧಿಕವಾದ ಕೃಷ್ಣ ಶೈಲವಾಸಿಯಾದಂಥ ಗಿರಿಜಾ ವಲ್ಲಭನ ಕರುಣವನ್ನು ಪಡೆದು ಯೆದ್ದು, ಯನ್ನ ಕೂಡೆ, ವಂದು ಮಾತನಾಡಬಾರದೇನಪ್ಪಾ ಮಗುವೇ ಅಯ್ಯೋ ಶ್ರೀ ಹರಿ ನಿನ್ನ ಕರುಣಕಟಾಕ್ಷ ಈ ಕಾಲದಲ್ಲಿ, ನನ್ನ ಮೇಲೆ ತಪ್ಪಿತೆ, ನಿನಗೆ ಸಂಪ್ರೀತಿಯಾಗಲಿ ಶ್ರೀ ಕೃಷ್ಣಾ.

(ಬಭೃವಾಹನ ಬರುವಿಕೆ)

ಬಭೃವಾಹನ: ಯಲಾ ಸಾರಥೀ… ಇಲ್ಲಿನ ಪರಿಯಂತರ ಅರ್ಜುನನ ದಂಡಿನಲ್ಲಿ ಇದ್ದಂಥ ವೀರಾಧಿವೀರರಿಗೂ, ನನಗೂ ಬಹಳ ಯುದ್ಧವಾಯಿತು. ನೀನು ನೋಡಲಿಲ್ಲವೇ, ಬಾಣದ ಆರ್ಭಟವನ್ನು ನೀನು ಕೇಳಲಿಲ್ಲವೇ. ಭಲೇ ಲೇಸಾಯ್ತು, ಆಚೆ ದಂಡಿನಲ್ಲಿ ಅರ್ಜುನನು ಏನು ಮಾಡುತ್ತಾ ಇದ್ದಾನೋ ರಣಾಗ್ರಕ್ಕೆ ಬರುತ್ತಾನೋ ಇಲ್ಲವೋ ತಿಳಿದು ಹೇಳುವಂಥವನಾಗೋ ಸಾರಥಿ.

ಸಾರಥಿ: ಅಯ್ಯ ಬಭೃವಾಹನ ಭೂಪತಿಯೇ ಆಚೆದಂಡಿನಲ್ಲಿ ಅರ್ಜುನನು ಸತ್ತ ವೃಷಕೇತುವಿನ ಶಿರಸ್ಸನ್ನು ಹಿಡಿದುಕೊಂಡು, ಬಹಳವಾಗಿ ಚಿಂತೆ ಮಾಡುತ್ತಾ ಇದ್ದಾನಯ್ಯಾ ರಾಜ.

ದರುವು

ಸಾಕು ಬಿಡು ಬಿಡು, ಪಾರ್ಥ ಶೋಕವನೂ
ನೀನಂದದ್ದೇನೂ ॥

ಸಾಕು ಬಿಡು ಬಿಡು ಪಾರ್ಥ ಶೋಕವಾ
ಈ ಕುಮಾರನ ರುಂಡ ಹಸ್ತದೀ ॥
ಜೋಕೆಯಿಂದಲಿ ಪಿಡಿದು ದುಃಖಿಪೆ
ಯಾಕೆ ನೀ, ನುಡಿದಂತೆ ಆಯಿತು ॥ಸಾಕು ॥ ॥

ಸಾರಥಿ: ಎಲೈ ಕಿರೀಟಿ, ವೈಶ್ಯ ಸಂಭವನಾದಂಥವನು ಬಂದು ಇದ್ದೇನೆ ಕಣ್ಣೆತ್ತಿ ನೋಡುವಂಥವನಾಗೋ ಅರ್ಜುನ  ಮೋರೆಯನ್ನು ನೆಲಕ್ಕೆ ತಗ್ಗಿಸಿಕೊಂಡು ಇದ್ದೀಯಾ  ಎಲೈ ಅರ್ಜುನ ಮೂರು ಲೋಕಕ್ಕೆ ಗಂಡನೆನಿಸಿಕೊಂಡು ಈ ಸಂಗ್ರಾಮ ಭೂಮಿಯಲ್ಲಿ, ಗಂಡ ಸತ್ತ ರಂಡೆಯಂತೆ, ದುಃಖವನ್ನು ಮಾಡಬಹುದೇನೋ ಪಾರ್ಥ.

ದರುವು

ನೋಡು ನಾವು ವೈಶ್ಯ ಸಂಭವರು, ಯನ್ಮಾತೆ,
ವೈಶ್ಯನ ಕೂಡಿ ಹಡೆದಳು, ಮುನ್ನ ಯನ್ನವಳು ॥
ಮಾಡುವೆನು ವ್ಯಾಪಾರ ಬಾಣವ,
ಬೀಡ ಸರುಕನೇ, ತುಂಬಿ ನಿನ್ನಯ
ಕೂಡಿ ಸಂಗ್ರಾಮ ಭೂಮಿಲೀ
ಸಾವಿನಂಗಡಿ, ಇಟ್ಟು, ಇರುವೆನೂ ಸಾಕು ಬಿಡು ಬಿಡು ॥ ॥

ಬಭೃವಾಹನ: ಎಲೈ ಪಾರ್ಥ, ನಾನು ವೈಶ್ಯಸಂಭವನಿಗೆ ಹುಟ್ಟಿದವನು, ನಿನ್ನ ಸೈನ್ಯವನ್ನು
ಗೆದ್ದು, ಪಟುಭಟರ ಶಿರಸ್ಸುಗಳನ್ನ್ನು ಕತ್ತರಿಸಿದೆನು ಮತ್ತು ವಿಶೇಷ ಲಾಭಗಳನ್ನು ಹೊಂದಿದೆನು. ಪರಾಕ್ರಮಿಗಳ ಜೀವಕ್ಕೆ ಸಂಚಕಾರವನ್ನು ಕೊಡು ಎಂದು ಬೇಡಿದರೆ, ಅನೇಕ ಶಸ್ತ್ರಾಸ್ತ್ರಂಗಳನ್ನು ಕೊಟ್ಟು ಇದ್ದೇನೆ. ನಿನ್ನ ಶಿರಸ್ಸಿಗೆ ಬೇಕಾದರೆ, ನನ್ನ ಸಾಹಸವೂ ಬೆಲೆಯಾಗಿ ಕೊಡುತ್ತೇನೆ. ಬೇಡುವಂಥವನಾಗೋ ಮೂರ್ಖ ॥

ದರುವು

ಹಾರಿಸ್ಹಾರಿಸೆ, ಪಟುಭಟರ ತಲೆಯು  ಬೇಕಾಗಿ ಕೊಂಡು,
ಹೇರಿ, ಹೇರಿಸಿ ಕಳುಹುವೆನು ಭರ್ತಿಯಾ ॥
ವೀರರುಗಳೇ ಬಂದು ಬೇಡಲು
ಭೂರಿ ಜೀವನಕ್ಕೆ ಸಂಚ
ಕಾರವ, ಕೊಟ್ಟಂದದೀ  ನೀ,
ಮೋರೆ ಬಾಗಿಸಿಕೊಂಡೆ ಯಾತಕ್ಕೆ ಸಾಕು ಬಿಡು ಬಿಡು ॥

ಮಾತು: ಎಲೈ, ಕಿರೀಟಿ ನಿನ್ನ ದಂಡಿನಲ್ಲಿರತಕ್ಕಂಥ ವೀರಾಧಿವೀರರ ತಲೆಗಳನ್ನು ವಿಕ್ರಯ ಮಾಡಲಿಕ್ಕೆ ಕೊಂಡುಕೊಂಡು, ಯಮಪುರಕ್ಕೆ ಕಳುಹಿಸಿ ಇದ್ದೇನೆ ಮತ್ತು ಧಾರಾದರೂ, ವೀರರು ಬಂದು ಬೇಡಿದರೆ, ಅವರ ತಲೆಗಳಿಗೆ ಸಂಚಕಾರ ಕೊಡುತ್ತಾ ಇದ್ದೇನೆ. ನೋಡೋ ಪಾರ್ಥ ॥ಮತ್ತೂ ಪೇಳುತ್ತೇನೆ.

ದರುವು

ಇಚ್ಛೆಯುಳ್ಳೊಡೆ ಮಾರೂ ನಿನ್ನ ತಲೆಯಾ
ನೀ ಬೇಡಿದಷ್ಟು ಪಚ್ಛೆ ಪವಳವ ಕೊಡುವೆನೈ ಬೆಲೆಯ ॥

ನಿಶ್ಚ ನಿಶ್ಚಯವಾಗಿ ಪೇಳುವೆ
ಮುಚ್ಚಿ ಮಾರುವನಲ್ಲಾ ವ್ಯವಹಾರ ॥
ತುಚ್ಛ ಮಾತುಗಳಾಡಿ  ಕೆಟ್ಟೇ
ಮೆಚ್ಚುವನೇ ಕೃಷ್ಣಾದ್ರಿವಾಸ ಸಾಕು ಬಿಡು ಬಿಡು ॥

ಬಭೃವಾಹನ: ಯಲೈ ಧನಂಜಯ  ನಿನ್ನ ತಲೆಯನ್ನು ಮಾರುವ ಇಚ್ಛೆಯುಳ್ಳೊಡೆ ಮಾರು ಅನುಮಾನ ಮಾಡಬೇಡ ಕಂಡ್ಯಾ, ಏನು ಬೇಡುತ್ತೀಯೋ ಬೇಡು, ಅನೇಕ ದ್ರವ್ಯವನ್ನಾದರೂ ಕೊಡುತ್ತೇನೆ. ಇದೂ ಅಲ್ಲದೇ, ನಿನ್ನ ದಂಡಿಗೆ ಆಹಾರಕ್ಕೆ ಅನುಕೂಲವಾದ ಪದಾರ್ಥಗಳನ್ನಾದರೂ ಕೊಡುತ್ತೇನೆ. ಅವು ಯಾವುವೆಂದರೆ ಅಕ್ಕಿ, ಬೇಳೆ, ತುಪ್ಪ, ಕಾಣಿಕೆ ಇನ್ನೂ ಮುಂತಾದ ಪದಾರ್ಥಗಳನ್ನು ಸಹ ಕೊಡುತ್ತೇನೆ. ನೀನು ಮುಖವನ್ನು ಬಾಡಿಸಿಕೊಂಡು, ಗಂಡ ಸತ್ತ ರಂಡೆಯಂತೆ ತಲೆಯನ್ನು ನೆಲಕ್ಕೆ ತಗ್ಗಿಸಿ ಮಾತನಾಡದೇ, ಮೌನದಿಂದ ಕುಳಿತಿರಬಹುದೇನೋ ಪಾರ್ಥ. ಇನ್ನೂ ದೇಹವನ್ನೂ ಹಿಡಿದು ಈ ಧರೆಯ ಮೇಲಿರುವವರಿಗೆಲ್ಲಾ ಹ್ಯಾಗೆ ತೋರಿಸುತ್ತೀಯಾ ॥ನಾನೇ ಮೂರು ಲೋಕದ ಗಂಡನೆಂದು ಹೊಗಳಿಸಿಕೊಂಡೆ, ಇಂಥ ನಿನ್ನ ಹುಚ್ಚು ನಡತೆಯನ್ನು ಅರಿಯದೆ ಕೃಷ್ಣಾದ್ರಿವಾಸನು ಮೆಚ್ಚಿ, ಪಾಶುಪತಾಸ್ತ್ರವನ್ನು ಹೇಗೆ ಕೊಟ್ಟನೋ ಮರುಳೇ ಛೀ ರಣಹೇಡಿ, ಈ ಸಮಯದಲ್ಲಿ, ಚಕ್ರಪಾಣಿಯಾದ ಶ್ರೀ ಕೃಷ್ಣಮೂರ್ತಿಯನ್ನು ಧ್ಯಾನಿಸು. ಆತನು ಬಂದು ನಿನಗೆ ಸಾರಥಿಯಾದರೆ ಜಯಪ್ರದವಾಗುತ್ತೊ ಅರ್ಜುನ ಅತಿ ದುರ್ಜನ. ಮತ್ತೂ ಪೇಳುತ್ತೇನೆ.

ಕಂದ

ಮಂದಮತಿ ಪಾರ್ಥಕೇಳು  ವೀರನು, ಕರ್ಣ
ನಂದನನಿವನು  ಇವನ ತಲೆ ಶಿವನಿಗರ್ಪಿಸು
ಪೂಜ್ಯತೆ ಹೊಂದುವುದೂ, ರುಂಡಮಾಲೆಯಲಿ
ವೃಥಾ ದುಃಖವೇಕೇ ಮರುಳೇ  ಮಹಾದೇವನಂದಿಗೆ
ಪಾಶುಪತ ಬಾಣವನಿತ್ತ, ಭವಹರನ ಮರೆತೆಯಾ,
ಸಾಕು ಸಾಕು ಕುದುರೆಯಂ ಬಿಟ್ಟು ಪೋಗೈ ಕಿರೀಟಿ ॥

ಬಭೃವಾಹನ: ಯಲಾ ಅರ್ಜುನ ನೀನು ಮಹಾವೀರನೆನಿಸಿಕೊಂಡು, ಈ ಸಂಗ್ರಾಮಭೂಮಿಯಲ್ಲಿ ಶವದ ತಲೆಯನ್ನು ಹಿಡಿದು ದುಃಖಿಸಬಹುದೇ, ಶೂರನಾದರೆ ವೃಷಕೇತುವಿನ ಮುಂಡದಿಂದ ಯೇನು ಪ್ರಯೋಜನ. ಈ ವೃಷಕೇತು ಇಲ್ಲಿ ಇರುವಂಥವನಲ್ಲಾ ಪರಾಕ್ರಮಶಾಲಿ, ಇವನ ತಲೆಯನ್ನು ಕೈಲಾಸಕ್ಕೆ ಕಳುಹಿಸು, ಮಹಾದೇವನಿಗೆ ಸಮರ್ಪಿತವಾಗಲಿ ಬಿಟ್ಟು ಬಿಡು. ಆತನ ರುಂಡ ಮಾಲೆಯಲ್ಲಿ ಪೂಜೆಗೊಂಡರೆ, ಈಶ್ವರನು ಪ್ರೀತನಾಗುತ್ತಾನೆ. ವೃಥಾ ಮಣ್ಣಿನಲ್ಲಿ ಹಾಕಬೇಡ, ದುಃಖವನ್ನು ಬಿಡು, ಹಿಂದಕ್ಕೆ ಇಂದ್ರಕೀಲ ಪರ್ವತದಲ್ಲಿ, ಸಾಕ್ಷಾತ್ ಮಹಾದೇವನನ್ನು ಕುರಿತು, ತಪಸ್ಸು ಮಾಡಲಿಲ್ಲವೇ, ಅಂಥಾ ಮಹಾದೇವನನ್ನು, ಯಾತಕ್ಕೆ ಮರೆತೆ ಸಾಕು, ಸಾಕು ಈ ವೇಳೆಯಲ್ಲಿ ವೀರನಾಗಿ, ಯನ್ನೊಡನೆ ನಿಂತು ಯುದ್ಧವನ್ನು ಮಾಡಿ, ನಿನ್ನ ಯಾಗದ ಕುದುರೆಯನ್ನು ಬಿಡಿಸಿಕೊಂಡು ಹೋಗುತ್ತೀಯೋ, ಇಲ್ಲವೋ ಪರಿಷ್ಕಾರವಾಗಿ ಹೇಳೋ ಪಾರ್ಥ ನಿನ್ನ ಜನ್ಮವೇ ವ್ಯರ್ಥ.

(ತಂದೆ ಮಕ್ಕಳ ಯುದ್ಧಅರ್ಜುನನ ಮೂರ್ಛೆ)

ದರುವು

ಹೆಚ್ಚಿದೆಲವೋ ದುರುಳ ಬಭೃವಾಹನನೇ
ತುಚ್ಛ ಮಾತುಗಳ್ಯಾಕೆ ತಾಳೋ
ಕೆಚ್ಚು ಮುರಿವೆನೂ ॥

ಭೂತಗಣಕ್ಕೆ ನಿನ್ನ ಕೊಚ್ಚಿ ಹಾಕುವೆನೊ
ಯಾತಕಿಂಥ ಪೌರುಷದ  ಮಾತು ಬಿಡೆಲೋ ॥

ಅರ್ಜುನ: ಯಲವೋ ಪೋರ, ಮದವೆಂಬುವಂಥದ್ದು, ಎಷ್ಟು ಹೆಚ್ಚಿರುವುದೋ ತಿಳಿಯದು, ನಿನಗಾರು ಯೆದಿರು ಇಲ್ಲವೆಂದು ತುಚ್ಛ ಮಾತುಗಳನ್ನು ಉಚ್ಚರಿಸುತ್ತಾ ಇದ್ದಿ. ಹೆಚ್ಚಿದಂಥನಿನ್ನ ಎದೆಯ ಕಿಚ್ಚನ್ನು ಕಿತ್ತೂ, ನಿನ್ನ ಕಂಠವನ್ನು ಕೊರೆದು ಶಾಕಿನಿ, ಡಾಕಿನಿ ಮೊದಲಾದ ಭೂತಗಣಕ್ಕೆ ಆಹುತಿಯನ್ನು ಕೊಡುತ್ತಾ ಇದ್ದೇನೆ. ಅಲ್ಲದೆ ನಾನು ಗಾಂಢೀವವನ್ನು ಹಿಡಿಯಬೇಕೆ, ಪರಮೇಶ್ವರನು ಕೊಟ್ಟಂಥ ಪಾಶುಪತ ಬಾಣವ್ಯಾತಕ್ಕೆ ನನ್ನ ಬಾಣಕ್ಕೆ ತಡೆದುಕೊಂಡು ನಿಲ್ಲುವಂಥವನಾಗೋ ರಣಹೇಡಿ.

ದರುವು

ಇದರಿಂದಲೇನಹುದೂ  ಇಂದ್ರಕೀಲದೊಳೂ
ಮದನಾರಿಯೆಂಬೋ ಬಾಣ  ಮತ್ತೆ ತೊಡು ಪಾರ್ಥ ॥

ಇದು ನೋಡು, ನೋಡೆಂದೂ  ಹೆಚ್ಚಿ ರೋಷಗಳಿಂದ
ವದಗಿ ಬೊಬ್ಬಿರಿದೂ, ಕಾಳಗದೀ ಕಾಳಗದೀ ॥

ಬಭೃವಾಹನ: ಯಲಾ ಪಾರ್ಥ ಕೌರವರ ಬಲದಲ್ಲಿ ಅಷ್ಟು ವೀರರ ಮೇಲೆ ಬಿಟ್ಟಂಥ ಬಾಣಗಳು ನನ್ನ ಮೇಲೆ ಸಾಗಲರಿಯವು  ಧಾವ ಇಂದ್ರಕೀಲದಲ್ಲಿ, ನಿನ್ನ ಸ್ವಾಮಿಯನ್ನು ಕುರಿತು ಹನ್ನೆರಡು ವರುಷ ತಪಸ್ಸು ಮಾಡಿ, ಪಡೆದಂಥ ಪಾಶುಪತ ಬಾಣವನ್ನು ತೊಡುವಂಥವನಾಗೋ ಪಾರ್ಥ. ಈ ಅಲ್ಪಬಾಣಗಳಿಂದೇನಾದೀತು. ಅದೇ ಬಾಣವನ್ನು ತೊಡುವಂಥವನಾಗೋ ಅರ್ಜುನ ॥

ದರುವು

ಬೆದರಬ್ಯಾಡ ನಿಲ್ಲೊ  ಪಾಶುಪತವಾ ಬಿಡುವೇನೂ
ಅದಕ್ಕಿಂತ ಹೆಚ್ಚೂ ಶರವಾ  ಬಿಡುವೆ ತಾಳಿಕೋ ॥

ಅರ್ಜುನ: ಯಲಾ ಬಭೃವಾಹನ ಧಾವ ಪರಮೇಶ್ವರನಿಂದ ಪಡೆದಂಥ ಪಾಶುಪತಾಸ್ತ್ರವಂ ತೊಡಬೇಕೆ ಆದರೂ ಚಿಂತೆ ಇಲ್ಲಾ ಅದೇ ಬಾಣವನ್ನು ತೊಡುತ್ತಾ ಇದ್ದೇನೆ. ಸೈರಿಸಿಕೊಂಡಿಯೇನಲಾ ಪೋರಾ. ತ್ರಿಯಾಂಬಕನ, ಉರಿಗಣ್ಣಿನಲ್ಲಿ ಹೊರಡುವಂಥ ಅಗ್ನಿಜ್ವಾಲೆಯ ಕಿಡಿಗಳನ್ನು ಉಗುಳುತ್ತಾ ಬರುವ ಬಾಣವೂ ನಿನ್ನ ಶರೀರವನ್ನೂ ಮನ್ಮಥನಂತೆ ದಹಿಸಿ ಬಾಧೆಯನ್ನು ಮಾಡದೆ ಬಿಡದು. ಆದರೂ ಚಿಂತೆ ಇಲ್ಲಾ, ಅನೇಕ ಬಾಣಗಳನ್ನು ಬಿಡುತ್ತಾ ಇದ್ದೇನೆ ನಿಲ್ಲುವಂಥವನಾಗೋ ಕುಲಹೇಡಿ.

ಭಾಗವತರಕಂದ

ಅರಸ ಕೇಳ್ ಜಾನ್ಹವಿಯಾ ಶಾಪದಿಂ ಬಳಿಕ
ಪಾರ್ಥನ ಸತ್ವವೂ, ಕುಗ್ಗಿ ಬರುತ್ತಿರಲೂ
ಅದು ಕಂಡು ಧನಂಜಯ ಯನ್ನ ಜನನೀ
ಚಿತ್ರಾಂಗದೆ ಪತಿವ್ರತೆ ಕಂಡ್ಯಾ
ಅನಿಮಿತ್ಯ ಮಾತೆಯ ದೂರಿದ ಪಾತಕದಿಂದ
ನಿನಗೆ ಕೈಗುಂದುತಿದೆ ಮರುಳೇ  ಕೃಷ್ಣನಂ ನೆನೆ ಮನವೇ ॥

ದರುವು

ಜನನೀ ಚಿತ್ರಾಂಗದೆ  ಪತಿವ್ರತೆಯೆಂಬುವುದು
ಇನಿತು ನೀ ತಿಳಿಯಲಿಲ್ಲೇ  ಕೇಳ್ ಪಾರ್ಥ ॥

ಅನಿಮಿತ್ಯಾ, ಮಾತೆಯಾ  ಜರಿದಾ ಕಾರಣದಿಂದಾ
ನಿನಗೆ ಕೈಗುಂದುತಿದೆ ಪಾರ್ಥ ॥

ಬಭೃವಾಹನ: ಯಲೈ ಪಾರ್ಥ, ಇನ್ನೂ ತಿಳಿಯದೋಯಿತೆನಲಾ ಮರುಳೇ, ನಮ್ಮ ತಾಯಿಯಾದ ಚಿತ್ರಾಂಗದ ಪತಿವ್ರತೆ ಯೆಂಬುವಂಥದ್ದು ತಿಳಿಯದೇ ಜರಿದ ಪ್ರಯುಕ್ತ ನಿನಗೆ ಇಂಥ ಪಾತಕವೂ ಸಂಭವಿಸಿತು. ನಿನ್ನ ಕೈಗುಂದುತ್ತಾ ಇದೆ. ಯಲಾ ಪಾರ್ಥ ಮತ್ತೂ ಪೇಳುತ್ತೇನೆ ಕೇಳುವಂಥವನಾಗೋ ಅರ್ಜು.

ದರುವು

ನೆನೆಸಿಕೊಳ್ಳೆಲೋ ಪಾರ್ಥ  ಸ್ವಾಮಿ ಶ್ರೀ ಕೃಷ್ಣನ
ಮನದಲ್ಲಿ ಮರೆಯಬೇಡಾ  ಪಾರ್ಥ ॥

ಅನಿತರಾ ನೀ ಗೆದ್ದೂ  ಹರಿಯಾ ಸಾನಿಧ್ಯದೀ
ನಿನಗೆ ಯೆಲ್ಲಿಹುದೋ ಸತ್ವಾ ॥

ಬಭೃವಾಹನ: ಯಲಾ ಧನಂಜಯ, ಯಲಾ ಪಾರ್ಥ, ಹಿಂದಕ್ಕೆ ಕೌರವರನ್ನೆಲ್ಲಾ ಗೆದ್ದೆನೆಂಬುವಂಥ ಗರ್ವವು ಬಹಳಯಿದ್ದೀತು. ಯಾರ ಬಲದಿಂದ ಗೆದ್ದೆ  ನಿನಗೆ ತಿಳಿಯಲಿಲ್ಲವೇ, ಶ್ರೀ ಕೃಷ್ಣಮೂರ್ತಿಯ ಸಾರಥ್ಯದಿಂದ ಗೆದ್ದೆ. ಏನಲಾ ಮರುಳೇ ನಿನ್ನ ಸ್ವಾಮಿಯಾದ ಶ್ರೀ ಕೃಷ್ಣಮೂರ್ತಿಯನ್ನು ಮನದಲ್ಲಿ ಧ್ಯಾನಿಸಿಕೊಂಡು ಯನ್ನ ಮೇಲೆ ಯುದ್ಧಕ್ಕೆ ನಿಲ್ಲುವಂಥವನಾಗೋ ಪಾರ್ಥ.

ದರುವು

ದ್ರೋಣಾ, ಭೀಷ್ಮಾದಿ ದೇವತರಿಂದ ಒಲಿದಿರ್ದ
ಬಾಣವೂ ಬರಿದಾಯ್ತೆ ಪಾರ್ಥ ॥
ಜಾಣತನಗಳು ಮಾಡು  ಕೃಷ್ಣಾದ್ರಿವಾಸನಾ
ಆಣೆ ನೀ ವುಳಿಯೋದಿಲ್ಲಾ ಪಾರ್ಥ ॥

ಬಭೃವಾಹನ: ಯಲಾ ಅರ್ಜುನ ಹಿಂದಕ್ಕೆ ದ್ರೋಣ ಭೀಷ್ಮ, ಕರ್ಣ, ಕೌರವರು, ಸೈಂಧವನನ್ನು ಗೆದ್ದೆಯಲ್ಲವೇ ಅದರಲ್ಲಿ ನಿನ್ನ ಪರಾಕ್ರಮ ಏನು ಇಲ್ಲವೂ, ನಿನ್ನಂಥಾ ಅಧಮರು ಈ ಲೋಕದಲ್ಲಿ ಯಾರೂ ಇಲ್ಲ. ನೀನು ಬಹು ಪರಾಕ್ರಮಶಾಲಿಯೆಂತಲೂ, ಮೂರು ಲೋಕಕ್ಕೆ ಗಂಡನೆಂದೂ, ಈ ಭೂಮಿಯಲ್ಲಿ, ಯೇನೂ ತಿಳಿಯದ ಮೂರ್ಖ ಜನರು, ಆಡುವದಲ್ಲದೇ ಕೃಷ್ಣನ ಸಹಾಯವಿಲ್ಲದೆ ಧಾವ ಜಯಪ್ರದ ಹೊಂದಿದೆ. ಹೇಳುವಂಥವನಾಗೋ ಮೂರ್ಖ