ಭಾರತ ದೇಶದಲ್ಲಿ ಪಾಂಡವರ ಕಥೆ ಎಲ್ಲರಿಗೂ ಗೊತ್ತು. ಅವರಲ್ಲಿಯೂ ಮಹಾ ವೀರ ಎಂದು ಹೆಸರು ಪಡೆದ ಅರ್ಜುನನ ಬಗ್ಗೆ ಎಲ್ಲರೂ ಬಲ್ಲರು. ಅರ್ಜುನನ ಮಗ ಯಾರು ಎಂದು ಕೇಳಿದರೆ ಯಾರಾದರೂ ವೀರ ಅಭಿಮನ್ಯು ಎಂದು ಸಹಜವಾಗಿ ಹೇಳಿಬಿಡುತ್ತಾರೆ. ಆದರೆ ಅರ್ಜುನನಿಗೆ ಅವನಂತೆಯೇ ಶೂರನಾದ ಮಗನು ಇದ್ದ. ಅವನ ಬಗ್ಗೆ ಜನರಿಗೆ ಹೆಚ್ಚು ಗೊತ್ತಿಲ್ಲ. ಕಾರಣ ಮಹಾಭಾರತದ ಯುದ್ಧದಲ್ಲಿ ಅವನು ಭಾಗವಹಿಸಲಿಲ್ಲ. ಅವನೇ ಬಭ್ರುವಾಹನ.

ಅರ್ಜುನನ ತೀರ್ಥಯಾತ್ರೆ

ಪಾಂಡವರು ರಾಜ್ಯವಾಳುತ್ತಿದ್ದ ಕಾಲ, ಧರ್ಮರಾಜನು ಸಿಂಹಾಸನದಲ್ಲಿ ಕುಳಿತು, ಧರ್ಮದಂತೆ ನ್ಯಾಯವಾಗಿ ರಾಜ್ಯವಾಳುತ್ತಿದ್ದನು. ಭೀಮ, ಅರ್ಜುನರು ದೇಶದ ಸಂರಕ್ಷಣೆಯನ್ನು ಸಮರ್ಥ ರೀತಿಯಿಂದ ನಡೆಸುತ್ತಿದ್ದರು. ದೇಶವು ಸುಭಿಕ್ಷವಾಗಿ, ಜನರು ನಿರ್ಭಯರಾಗಿ ಶಾಂತ, ಸಮೃದ್ಧ ಜೀವನವನ್ನು ನಡೆಸುತ್ತಿದ್ದರು.

ಒಂದು ದಿನ ಮಧ್ಯರಾತ್ರಿ. ಒಬ್ಬ ಬ್ರಾಹ್ಮಣ ಆರ್ತನಾದ ಮಾಡುತ್ತ ಅರ್ಜುನನ ಹೆಸರನ್ನು ಕೂಗುತ್ತ ಅರಮನೆಗೆ ಬಂದ.

ಅರ್ಜುನ ವಿಷಯವೇನು ಎಂದು ವಿಚಾರಿಸಿದ.

“ನನ್ನ ಆಕಳ ಹಿಂಡನ್ನು ಯಾರೋ ಕೆಲವರು ಪುಂಡರು ಬಲವಂತವಾಗಿ ಹೊಡೆದುಕೊಂಡು ಹೋಗುತ್ತಿದ್ದಾರೆ. ಅರ್ಜುನ, ನೀನು ಬಿಡಿಸಿಕೊಟ್ಟು ಸಂರಕ್ಷಿಸಬೇಕು. ಆಕಳುಗಳು ತಿರುಗಿ ಬಾರದೆ ನಾಳೆ ನಾನು ಊಟವನ್ನೇ ಮಾಡುವುದಿಲ್ಲ” ಎಂದ ಆ ಬ್ರಾಹ್ಮಣ.

ಅರ್ಜುನ, “ನಿನ್ನ ಆಕಳುಗಳನ್ನು ಈಗಲೇ ಬಿಡಿಸಿ ಕೊಡುವೆ. ನಿಶ್ಚಿಂತೆಯಿಂದ ನಿನ್ನ ಮನೆಗೆ ಹೋಗು” ಎಂದು ಹೇಳಿದ. ಪುಂಡರನ್ನು ಬೆನ್ನಟ್ಟಿಕೊಂಡು ಹೋಗಲು ಸಿದ್ಧನಾದ. ಆದರೆ ಅವನ ಗಾಂಡೀವ ಧನುಸ್ಸು ಮತ್ತು ಅಕ್ಷಯ ಬತ್ತಳಿಕೆಗಳು ಧರ್ಮರಾಜ ಮತ್ತು ದ್ರೌಪದಿಯು ಮಲಗಿದ್ದ ರಾಜಭವನದಲ್ಲಿದ್ದವು. ಅಲ್ಲಿಗೆ ಹೋದರೆ ಅವರಿಗೆ ಎಚ್ಚರಿಕೆಯಾಗುತ್ತದೆ, ನಿದ್ರೆ ಕೆಡುತ್ತದೆ. ಆದರೆ ಕಷ್ಟದಲ್ಲಿದ್ದ ಬ್ರಾಹ್ಮಣನ ಆಕಳನ್ನು ಬಿಡಿಸಿಕೊಡುವ ವಚನವನ್ನು ಕೊಟ್ಟಾಗಿದೆ. ಏನು ಮಾಡಬೇಕು?

ಕೊನೆಗೆ ಅರ್ಜುನ ಧರ್ಮರಾಜ-ದ್ರೌಪದಿಯರ ನಿದ್ರಾಭಂಗ ಮಾಡಿ ಒಳಗೆ ಹೋಗಿ ತನ್ನ ಬಿಲ್ಲು ಮತ್ತು ಬತ್ತಳಿಕೆಯನ್ನು ತೆಗೆದುಕೊಂಡು ಬಂದ; ಪುಂಡರನ್ನು ದಂಡಿಸಿ ಬ್ರಾಹ್ಮಣನ  ಗೋವುಗಳನ್ನು ಅವನಿಗೆ ಕೊಡಿಸಿದ.

ಈ ರೀತಿ ನಿದ್ರಾಭಂಗ ಮಾಡಿದುದು ಒಂದು ತಪ್ಪೆಂದು ಆ ಕಾಲದಲ್ಲಿ ತಿಳಿಯುತ್ತಿದ್ದರು. ಆದಕಾರಣ ಅರ್ಜುನ ವಿಷಯವನ್ನೆಲ್ಲ ರಾಜಗುರುಗಳಿಗೆ ಹೇಳಿದ, ಮತ್ತು ಈ ತಪ್ಪಿಗೆ ಪರಿಹಾರವೇನು ಎಂದು ವಿಚಾರಿಸಿದ. ಅದಕ್ಕೆ ರಾಜಗುರುಗಳು, “ನೀನು ಒಂದು ವರ್ಷದವರೆಗೆ ರಾಜಧಾನಿಯನ್ನು ಬಿಟ್ಟು ತೀರ್ಥಯಾತ್ರೆ ಮಾಡಬೇಕು. ಇದೇ ಪ್ರಾಯಶ್ಚಿತ್ತ” ಎಂದರು. ಅರ್ಜುನ ಒಪ್ಪಿದ.

ಚಿತ್ರಾಂಗದೆಯ ಕೈಹಿಡಿದ

ಅರ್ಜುನ ತೀರ್ಥಯಾತ್ರೆಯನ್ನು ಪ್ರಾರಂಭಿಸಿದ. ಹಾಗೆಯೇ ದೇಶಗಳನ್ನು ತಿರುಗುತ್ತ ಬಂಗಾಳ, ಅಸ್ಸಾಂಗಳ ಪೂರ್ವಭಾಗದಲ್ಲಿರುವ ಮಣಿಪುರ ರಾಜ್ಯಕ್ಕೆ ಬಂದ.

ಮಣಿಪುರ ದೇಶವನ್ನು ಚಿತ್ರವಾಹನನೆಂಬ ರಾಜನು ಆಳುತ್ತಿದ್ದನು. ಅವನಿಗೆ ಅರ್ಜುನನು ಯಾತ್ರಾರ್ಥಿಯಾಗಿ ಬಂದುದು ತಿಳಿಯಿತು. ಅರ್ಜುನನ ಶೌರ್ಯ, ಸಾಹಸಗಳ ಕಥೆಗಳನ್ನು ಎಲ್ಲ ರಾಜರಂತೆ ಅವನೂ ಕೇಳಿದ್ದನು. ಅವನಿಗೆ ಯೋಗ್ಯ ಮರ್ಯಾದೆ ಮಾಡುವುದು ತನ್ನ ಕರ್ತವ್ಯವೆಂದು ತಿಳಿದು ಅವನು ಇದ್ದ ಸ್ಥಳಕ್ಕೆ ಹೋಗಿ ಸಕಲ ರಾಜಮರ್ಯಾದೆಯಿಂದ ಅರ್ಜುನನ್ನು ತನ್ನ ಅರಮನೆಗೆ ಕರೆದುಕೊಂಡು ಬಂದನು. ಕೆಲವು ದಿನ ರಾಜಾತಿಥ್ಯವನ್ನು ಸ್ವೀಕರಿಸಲು ಬೇಡಿಕೊಂಡನು.

ಚಿತ್ರವಾಹನನಿಗೆ ಚಿತ್ರಾಂಗದೆಯೆಂಬ ಒಬ್ಬಳೇ ಮಗಳು.ಗಂಡು ಮಕ್ಕಳು ಇರಲಿಲ್ಲ. ಚಿತ್ರಾಂಗದೆಯು ಬಹಳ ಸುಂದರಿ, ಸುಲಕ್ಷಣೆ, ಸುಕುಮಾರಿ, ಅಲ್ಲದೆ ಕ್ಷತ್ರಿಯ ರಾಜಕುಮಾರಿಯಲ್ಲಿರಬೇಕಾದ ಶೂರ, ಧೀರ, ಸ್ವಾಭಿಮಾನಿ ಸ್ವಭಾವವೂ ಅವಳಲ್ಲಿತ್ತು. ಪ್ರಜಾಜನರಲ್ಲಿ ಬಹಳ ಉದಾರಳೂ ಅಂತಃಕರಣಿಯೂ ಆಗಿದ್ದ ಕಾರಣ ಎಲ್ಲರಿಗೂ ಚಿತ್ರಾಂಗದೆಯೆಂದರೆ ಪ್ರೀತಿ.

ಚಿತ್ರವಾಹನನು ತನ್ನ ಮಗಳ ಮತ್ತು ಅರ್ಜುನನ ವಯಸ್ಸು, ರೂಪ ಎಲ್ಲವನ್ನು ನೋಡಿ ಅರ್ಜುನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡರೆ ಹೇಗೆ ಎಂದು ಯೋಚಿಸಿದಹನು. ಈ ವಿಚಾರವನ್ನು ಅರ್ಜುನನ ಮುಂದೆ ಹೇಳಿದನು; ಮಗಳನ್ನೂ ಕೇಳಿದನು. ಇಬ್ಬರೂ ಸಂತೋಷದಿಂದ ಒಪ್ಪಿದರು. ಮದುವೆಯು ವಿಜೃಂಭಣೆಯಿಂದ ನಡೆಯಿತು.

ಚಿತ್ರಾಂಗದೆ ಹಿಂದುಳಿದಳು

ಕೆಲವು ತಿಂಗಳುಗಳು ಕಳೆದವು. ಅರ್ಜುನ-ಚಿತ್ರಾಂಗದೆಯರು ಸಂತೋಷವಾಗಿದ್ದರು. ಚಿತ್ರಾಂಗದೆಯು ಗರ್ಭಿಣಿಯಾದಳು. ಆಗ ಚಿತ್ರವಾಹನನು ಅರ್ಜುನನಿಗೆ “ನನಗೂ ವಯಸ್ಸಾಗಿದೆ, ಗಂಡು ಮಕ್ಕಳಿಲ್ಲ. ನೀವು ಇಲ್ಲಿಯೇ ಉಳಿದು ನನ್ನ ರಾಜ್ಯವನ್ನಾಳಿದರೆ ಒಳಿತು” ಎಂದು ಹೇಳಿದನು. ಇದುವರೆಗೆ ಅರ್ಜುನ ರಾಜ ಭೋಗದಿಂದ ಇದ್ದುಬಿಟ್ಟಿದ್ದ. ಈಗ ಒಮ್ಮೆಲೆ ಎಚ್ಚರಿಸಿದಂತಾಯಿತು. ತಾನು ಬಂದ ಉದ್ದೇಶವೇನು? ಈಗ ಮಾಡುತ್ತಿರುವುದೇನು ? ತೀರ್ಥಯಾತ್ರೆಗೆಂದು ಬಂದು ಇಲ್ಲಿಯೇ ನಿಂತುಬಿಟ್ಟರೆ ತನ್ನ ರಾಜ್ಯದ ಗತಿಯೇನು? ಅಣ್ಣಂದಿರು ಏನೆಂದುಕೊಂಡಾಋಉ? ಎಂದು ಅರ್ಜುನ ಎಚ್ಚೆತ್ತವನಂತಾಗಿ “ಭರತಖಂಡದ ಅತಿ ದೊಡ್ಡ ರಾಜ್ಯವಾದ ಕುರುರಾಜ್ಯವನ್ನು ಸಂರಕ್ಷಿಸುವ ಭಾರ ನನ್ನ ಮೇಲಿದೆ. ಅದನ್ನು ಬಿಟ್ಟು ನಾನು ಇಲ್ಲಿಯೇ ನೆಲೆಸುವುದು ಸರಿಯಾಗಲಾರದು. ನೀವೇ ರಾಜ್ಯಭಾರ ನಡೆಸಿರಿ ಅಂತಹ ಅವಶ್ಯವೆನಿಸಿದರೆ ನನಗೆ ತಿಳಿಸಿರಿ. ನಿಮ್ಮ ಸಹಾಯಕ್ಕೆ ಬರಲು ನಾನು ಯಾವಾಗಲೂ ಸಿದ್ಧ”  ಎಂದು ಹೇಳಿ, “ನನಗೆ ನನ್ನ ತೀರ್ಥಯಾತ್ರೆಯನ್ನು ಮುಂದುವರೆಸಲು ಅಪ್ಪಣೆ ಕೊಡಿರಿ” ಎಂದು ಅಪ್ಪಣೆ ಪಡೆದು ಚಿತ್ರಾಂಗದೆಯನ್ನು ಸಮಾಧಾನಪಡಿಸಿ ಹೊರಟ.

ಆಮೇಲೆ ನಾಗರಾಜ್ಯಕ್ಕೆ ಹೋಗಿ, ಅಲ್ಲಿಯ ರಾಜಕುಮಾರಿ ಉಲೂಪಿಯನ್ನು ಲಗ್ನವಾಗಿ, ಕೆಲವು ದಿನ ಅಲ್ಲಿದ್ದು ಹಸ್ತಿನಾವತಿಗೆ ತಿರುಗಿ ಬಂದ.

ಕುದುರೆಯ ರಕ್ಷಣೆಗೆ ಅರ್ಜುನ

ಇದಾದ ಸ್ವಲ್ಪ ಕಾಲದಲ್ಲೇ ಹಸ್ತಿನಾವತಿಯಲ್ಲಿ ಅನೇಕ ಮಹತ್ವದ ಘಟನೆಗಳಾದವು. ಧರ್ಮರಾಜನು ಜೂಜಾಡಿ ರಾಜ್ಯವನ್ನು ಕೌರವರಿಗೆ ಸೋತನು. ಅದರ ಜೊತೆಗೇ ಎಲ್ಲವನ್ನೂ ಸೋತನು. ದ್ರೌಪದಿಯ ಅಪಮಾನ, ಪಾಂಡವರ ವನವಾಸ ಇತ್ಯಾದಿ ಘಟನೆಗಳಲ್ಲಿ ಅರ್ಜುನ ಚಿತ್ರಾಂಗದೆಯ ವಿಷಯವನ್ನೇ ಮರೆತುಬಿಟ್ಟ.

ವನವಾಸ ಮುಗಿದನಂತರ ತಮ್ಮ ರಾಜ್ಯವನ್ನು ಮರಳಿ ಪಡೆಯುವುದಕ್ಕೆ ಕೌರವರ ಜೊತೆಗೆ ಯುದ್ಧವು ಅನಿವಾರ್ಯವಾಯಿತು. ಘನಘೋರ ಮಹಾಯುದ್ಧವೂ ಆಗಿ ಪಾಂಡವರ ಹೊರತಾಗಿ ಎಲ್ಲರೂ ನಾಶವಾಗಿ ಹೋದರು. ಈ ಭೀಕರ ಹತ್ಯಾಕಾಂಡವು ಧರ್ಮರಾಜನ ಮನಸ್ಸಿನ ಮೇಲೆ ಬಹಳ ಪರಿಣಾಮವನ್ನುಂಟುಮಾಡಿತು. ಇಷ್ಟು ಜನರ ಸಾವಿಗೆ ಕಾರಣನಾದ ನಾನು ಮಹಾ ಪಾಪಿ ಎಂದು ಅವನ ಮನಸ್ಸಿನಲ್ಲಿ ಕಟೆಯುತ್ತಿತ್ತು. ಒಮ್ಮೆ ಧರ್ಮರಾಜನು ಶ್ರೀ ವೇದವ್ಯಾಸರ ಮುಂದೆ ಈ ವಿಷಯದ ಪ್ರಸ್ತಾಪ ಮಾಡಿದನು. ಶ್ರೀ ವೇದವ್ಯಾಸರು ಹೀಗೆ ಹೇಳಿದರು : “ಮಹಾಭಾರತ ಯುದ್ಧದಿಂದ ನೀನೇನೂ ತಪ್ಪು ಮಾಡಿಲ್ಲ. ಒಂದು ವೇಳೆ ನೀನು ಹಾಗೆ ತಿಳಿದುಕೊಂಡರೂ ಅದಕ್ಕೆ ಪರಿಹಾರವಿದೆ.  ಅಶ್ವಮೇಧ ಯಾಗ ಮಾಡು. ಅದನ್ನು ಮಾಡುವುದರಿಂದ ಪಾಪ ಪರಿಹಾರವಾಗುವುದಲ್ಲದೇ ರಾಜ್ಯ ವಿಸ್ತರಣೆಯೂ ಆಗುವುದು. ದೇಶದ ಸಂಪತ್ತೂ ಹೆಚ್ಚುವುದು. ಮನಸ್ಸಿಗೆ ಶಾಂತಿ ದೊರಕುವುದು. ದೇಶ ವಿದೇಶಗಳಿಂದ ವಿದ್ವಾಂಸರು ಬರುವರು. ಎಷ್ಟೋ ಋಷಿಮುನಿಗಳು ಬರುವರು. ಅನೇಕ ರಾಜ ಮಹಾರಾಜರು ಬರುವರು. ರಾಜರ ರಾಜರ ಆದರಾತಿಥ್ಯ, ವಿದ್ವಾಂಸರ ಸುರಸ ಸುರಮ್ಯ ಸಂವಾದಗಳು, ಋಷಿಮುನಿಗಳ ಧರ್ಮಚರ್ಚೆ ಇವುಗಳಲ್ಲಿ ನಿನ್ನ ಮನಸ್ಸು ಆನಂದಗೊಳ್ಳುವುದು.”

ಆಗ ಧರ್ಮರಾಜನು ಶ್ರೀಕೃಷ್ಣನ ಸಲಹೆಯನ್ನು ಕೇಳಿದನು. “ಶ್ರೀಕೃಷ್ಣ, ನಾನು ಅಶ್ವಮೇಧಯಾಗವನ್ನು ಮಾಡುವುದು ಹೇಗೆ?” ಆಗ, “ಕಪ್ಪು ನೀಲವರ್ಣದ ಕಿವಿಯುಳ್ಳ ಶುಭ್ರ ವರ್ಣದ ಒಳ್ಳೆಯಸುಳಿಗಳುಳ್ಳ ಕುದುರೆಯ ನ್ನು ತೆಗೆದುಕೊಂಡು ಯಜ್ಞಮಂಟಪದಲ್ಲಿ ಪೂಜೆ ಮಾಡಿ ಸ್ವೇಚ್ಛೆಯಾಗಿ ಅದು ತಿರುಗಾಡಲು ಬಿಡಬೇಕು. ಆದರೆ ಹಿಂದೆ ಅರ್ಜುನನು ಸೈನ್ಯ ಸಮೇತ ಹೋಗಲಿ. ಕುದುರೆಯು ಹೋದ ರಾಜ್ಯದವರೆಲ್ಲ ಕಪ್ಪಕಾಣಿಕೆ ಕೊಟ್ಟು ಮಾಂಡಲೀಕರಾಗಬೇಕು; ಇಲ್ಲವೇ ಕುದುರೆಯನ್ನು ಕಟ್ಟಿ ನಿಮ್ಮ ಜೊತೆಗೆ ಯುದ್ಧ ಮಾಡಬೇಕು. ಹೀಗೆ ಒಂದು ವರ್ಷದವರೆಗೆ ಯಶಸ್ವಿಯಾಗಿ ಕುದುರೆಯು ತಿರುಗಿ ಬಂದರೆ ನಿಮ್ಮ ಅಶ್ವಮೇಧಯಾಗವು ನಿರ್ವಿಘ್ನವಾದಂತೆ” ಎಂದು ಶ್ರೀಕೃಷ್ಣ ಹೇಳಿದನು.

ಧರ್ಮರಾಜನು, “ಕೃಷ್ಣಾ, ನೀನಿಲ್ಲದೆ ಅರ್ಜುನನೊಬ್ಬನೇ ಹೇಗೆ ಹೋದಾನು? ನೀನೂ ಅವನ ಜೊತೆಗೆ ಹೋಗುವುದಾದರೆ ಮಾತ್ರ ನಾನು ಅಶ್ವಮೇಧಯಾಗವನ್ನು ಮಾಡುವೆ” ಎಂದನು.

ಶ್ರೀಕೃಷ್ಣನು, “ಅವಶ್ಯಕತೆ ಬಿದ್ದಾಗ ನಾನೂ ಅವನ ಜೊತೆಗೆ ಇರುವೆ. ಏನೂ ಚಿಂತೆ ಮಾಡಬೇಡ. ಯಾಗ ಪ್ರಾರಂಭಿಸು” ಎಂದು ಹೇಳಿದನು.

ಬಭ್ರುವಾಹನ ರಾಜ

ಧರ್ಮರಾಜನ ಅಶ್ವಮೇಧ ಯಾಗವು ಪ್ರಾರಂಭವಾಯಿತು. ಶೃಂಗರಿಸಿದ ಕುದುರೆಯನ್ನು ಶಾಸ್ತ್ರೋಕ್ತ ಪೂಜೆ ಮಾಡಿ ಚೈತ್ರ ಹುಣ್ಣಿಮೆಯ ದಿನ ಬಿಡಲಾಯಿತು. ಅದರ ಹಿಂದೆ, ಅರ್ಜುನ, ವೃಷಕೇತು, ಪ್ರದ್ಯುಮ್ನ, ಸಾತ್ಯಕಿ, ಯೌವನಾಶ್ವ ಮತ್ತು ಅನುಸಾಲ್ವರು ತಮ್ಮ ಸೈನ್ಯಗಳೊಂದಿಗೆ ಹೊರಟರು.

ಯಜ್ಞದ ಕುದುರೆಯು ಮಾಹಿಷ್ಮತೀನಗರದ ನೀಲಧ್ವಜನ ರಾಜ್ಯ, ಚಂಪಕಾವತಿಯ ಹಂಸಧ್ವಜನ ರಾಜ್ಯ, ಪ್ರಮೀಳೆಯ ಸ್ತ್ರೀರಾಜ್ಯ, ಭೀಷಣನ ರಾಕ್ಷಸರಾಜ್ಯ ಇವುಗಳಲ್ಲಿ ಹಾಯ್ದು ಮಣಿಪುರಕ್ಕೆ ಬಂದಿತು. ಅದು ಬಹಳ ಸುಂದರ ಹಾಗೂ ಸಂಪದ್ಭರಿತ ದೇಶವಾಗಿತ್ತು. ಅದನ್ನು ಆಳುವ ರಾಜನು ಯಾರೆಂದು ವಿಚಾರಿಸಲಾಗಿ ಬಭ್ರುವಾಹನನೆಂದು ತಿಳಿಯಿತು.

ಅರ್ಜುನ ಮಣಿಪುರವನ್ನು ಬಿಟ್ಟು ಹೊರಟಾಗ ಚಿತ್ರಾಂಗದೆ ಗರ್ಭಿಣಿ. ಹಾಗೆ ಅರ್ಜುನ ಹೋದ ನಂತರ, ದಿನ ತುಂಬಿದನಂತರ, ಚಿತ್ರಾಂಗದೆಯು ಗಂಡು ಮಗುವಿಗೆ ಜನ್ಮವಿತ್ತಳು. ಮಗುವು ಸುಂದರವಾಗಿಯೂ ಪುಷ್ಪವಾಗಿಯೂ ಇತ್ತು. ಅದಕ್ಕೆ ಬಭ್ರುವಾಹನ ಎಂದು ಹೆಸರಿಟ್ಟರು.

‘ಈಗ ನೀನು ಹೇಗೆ ಹೇಳುವೆಯೋ ಹಾಗೆ ಮಾಡುವೆನು.’

ಚಿತ್ರವಾಹನ ರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ, ಮೊಮ್ಮಗನು ಹುಟ್ಟಿದುದು ಕಂಡು ಅತೀವ ಆನಂದವಾಯಿತು. ಮಣಿಪುರ ರಾಜ್ಯಕ್ಕೆ ಉತ್ತರಾಧಿಕಾರಿಕ ದೊರೆತನೆಂದು ಎಲ್ಲ ಪ್ರಜೆಗಳಿಗೂ ಬಹಳ ಸಂತೋಷವಾಯಿತು.

ಬಭ್ರುವಾಹನ ಬೆಳೆದಂತೆಲ್ಲ ಒಳ್ಳೆಯ ಆಜಾನುಬಾಹು ವ್ಯಕ್ತಿಯಾದನು. ಶೌರ್ಯ, ಧೈರ್ಯ, ಸಾಹಸಗಳಲ್ಲಿ ಇವನನ್ನು ಮೀರಿಸಿದವರು ಯಾರೂ ಇರಲಿಲ್ಲ. ಧನುರ್ವಿದ್ಯೆಯಲ್ಲಂತೂ ಎತ್ತಿದ ಕೈ. ಅವನ ಮುಂದೆ ನಿಂತು ಯುದ್ಧ ಮಾಡುವವರು ಆ ಭಾಗದಲ್ಲಿ ಯಾರು? ರಾಜ್ಯದ ಆಡಳಿತದಲ್ಲಿಯೂ ಅತಿ ಸಮರ್ಥನಾಗಿದ್ದನು. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಜೆಗಳೆಲ್ಲರ ಕಣ್ಮಣಿಯಾದನು. ಇದನ್ನು ನೋಡಿದ ಚಿತ್ರವಾಹನ ರಾಜನಿಗೆ ಬಹಳ ಸಂತೋಷವಾಯಿತು. ರಾಜ್ಯವನ್ನು  ತನ್ನ ಅನಂತರ ಯಾರು ಆಳಬೇಕೆನ್ನುವ ಚಿಂತೆ ಬಿಟ್ಟಿತು. ಬಭ್ರುವಾಹನನಿಗೆ ಪಟ್ಟಕಟ್ಟಿ  ಚಿತ್ರವಾಹನನು ತಪಸ್ಸಿಗಾಗಿ ಕಾಡಿಗೆ ಹೋದನು. ಬಭ್ರುವಾಹನನು ಸಮರ್ಥರೀತಿಯಿಂದ ರಾಜ್ಯವಾಳಿ ತನ್ನ ರಾಜ್ಯವನ್ನು ಇನ್ನೂ ಹೆಚ್ಚು ಸಮೃದ್ಧಗೊಳಿಸಿದನು.

ಅರ್ಜುನ ಮತ್ತೆ ಮಣಿಪುರದಲ್ಲಿ

ಈ ರೀತಿ ಬಭ್ರುವಾಹನನು ರಾಜ್ಯವನ್ನಾಳುತ್ತಿದ್ದಾಗ ಅರ್ಜುನನ ಅಶ್ವಮೇಧ ಯಾಗದ ಕುದುರೆಯು ಮಣಿಪುರಕ್ಕೆ ಬಂದಿತು.

ಅರ್ಜುನ ಕುದುರೆಯ ಹಿಂದೆ ಬರುತ್ತಾ ಮಣಿಪುರವನ್ನು ಸೇರಿದ . ಅದರ ವೈಭವವನ್ನು ಕಂಡು ಮೆಚ್ಚಿಕೆಯಾಯಿತು. “ಇದನ್ನು ಆಳುವ ರಾಜನು ಕುದುರೆಯನ್ನು ಕಟ್ಟುವನೆ?” ಎಂದು ಜೊತೆಗೆ ಬರುತ್ತಿದ್ದ ಹಂಸಧ್ವಜವನ್ನು ಕೇಳಿದ.

ಹಂಸಧ್ವಜ ಹೇಳಿದ: “ನಿಮಗೆ ಗೊತ್ತಿಲ್ಲವೆ? ಇಲ್ಲಿ ಬಭ್ರುವಾಹನನೆಂಬ ಪ್ರಖ್ಯಾತ ರಾಜನು ಆಳುತ್ತಾನೆ. ಅವನಿಗೆ ನಾವೆಲ್ಲರೂ ಪ್ರತಿ ವರ್ಷ ಸಾವಿರ ಬಂಡಿ ಬಂಗಾರವನ್ನು ಕಪ್ಪಕಾಣಿಕೆಯೆಂದು ಸಲ್ಲಿಸುವೆವು. ಇವನಲ್ಲಿ ಸುಬುದ್ಧಿಯೆಂಬ ಸಚಿವನಿದ್ದಾನೆ. ಅವನು ದೋಷವಿಲ್ಲದೆ ನ್ಯಾಯವಾಗಿ ರಾಜ್ಯಭಾರ ಮಾಡುವನು. ಮಣಿಪುರದ ರಾಜನಲ್ಲಿ ಉತ್ತಮ ಕುದುರೆಗಳು. ಶುಭ್ರ ಆನೆಗಳು, ಅಸಂಖ್ಯ ರಥಗಳು ಹಾಗೂ ನಂಬಿಕೆಯ ಶೂರ ಸೈನಿಕರು ಇದ್ದಾರೆ. ಅತಿಶಯ ವೀರನಾದ ಇವನು ಕುದುರೆಯನ್ನು ಕಟ್ಟದೆ ಇರುವನೆ?”

ಅರ್ಜುನ: “ಹಾಗಾದರೆ ಮಣಿಪುರದ ಜನರು ಹೇಗಿದ್ದಾರೆ?” “ಅವರು ವಿಷ್ಣುಭಕ್ತರು, ವೇದಾರ್ಥ ಬಲ್ಲವರು, ಸತ್ಯವ್ರತಾಚಾರಸಂಪನ್ನರು, ದಾನಿಗಳು, ಶುಚಿಗಳು, ವೀರರು” ಹೀಗೆ ಹಂಸಧ್ವಜನು ಹೊಗಳಿದ.

ಇದನ್ನು ಕೇಳುವಾಗ ಅರ್ಜುನನ ಹುಬ್ಬು ಗಂಟಿಕ್ಕಿತು. ಅವನ ಕಿರೀಟದ ಮೇಲೆ ಒಂದು ಹದ್ದು ಬಂದು ಕುಳಿತು ಹಾರಿತು. ನೀಲಧ್ವಜ, ಹಂಸಧ್ವಜ ಮೊದಲಾದವರು ಈ ಅಪಶಕುನದಿಂದ ಅಳುಕಿದರು. ಅರ್ಜುನನಿಗೂ ಮನಸ್ಸು ಸ್ವಲ್ಪ ಅಳುಕಿತು.

ಯುದ್ಧಕ್ಕೆ ಸಿದ್ಧರಾಗಿ

ಕುದುರೆಯೂ ಕುದುರೆಯ ಹಿಂದೆ ಸ್ವಲ್ಪ ಅಂತರದಲ್ಲಿ ಪಾಂಡವ ಸೈನ್ಯವೂ ಮಣಿಪುರದ ಶಾಂತ ವಾತಾವರಣವನ್ನು ಕದಡಿದವು. ಊರಲ್ಲಿ ಗಡಿಬಿಡಿ ಎದ್ದಿತು. ಕುದುರೆಯು ಸುಂದರವಾದ ರಾಜೋದ್ಯಾನಕ್ಕೆ ಬಂದು ಸುಂದರ ಹಾಗೂ ಸುಗಂಧಮಯವಾದ ಗಿಡಬಳ್ಳಿಗಳನ್ನು ತುಳಿದು ಹಾಳುಮಾಡುತ್ತ ಓಡಾಡಲು ಪ್ರಾರಂಭಿಸಿತು. ತೋಟದಲ್ಲಿಯ ರಾಜದೂತರು ಕುದುರೆಯನ್ನು ಬಂಧಿಸಿ ಅಂಕಿತದಲ್ಲಿಡಲು ಹೋದರು. ಅದರ ಹಿಂದೆ ಬರುತ್ತಿದ್ದ ಸೈನಿಕರು, “ಎಚ್ಚರಿಕೆ, ಆ ಕುದುರೆಯನ್ನು ಮುಟ್ಟಕೂಡದು. ಅದು ಪಾಂಡವಶ್ರೇಷ್ಠ ಧರ್ಮರಾಜನ ಅಶ್ವಮೇಧ ಯಾಗದ ಕುದುರೆ. ಅದರ ರಕ್ಷಣೆಗಾಗಿ ಅರ್ಜುನ ಮಹಾರಾಜರು ಹಿಂದೆ ಬರುತ್ತಿದ್ದಾರೆ. ನಿಮ್ಮ ರಾಜರಿಗೆ ತಿಳಿಸಿ; ಅದಕ್ಕೆ ಆರತಿಯನ್ನು ಮಾಡಿ. ಪಾಂಡವರ ಆಧಿಪತ್ಯವನ್ನು ಒಪ್ಪಿ ಅವರ ಸಾಮಂತರಾಗಿ ಕಪ್ಪಕಾಣಿಕೆ ಕೊಟ್ಟು ಕುದುರೆಯ ರಕ್ಷಣೆಗಾಗಿ ನಿಮ್ಮ ರಾಜರೂ ಸೈನ್ಯಸಮೇತ ನಮ್ಮ ಜೊತೆಗೆ ಬರಬೇಕು. ಇಲ್ಲದಿದ್ದರೆ ಮಹಾಭಾರತದ ಪ್ರಚಂಡ ವೀರ ಅರ್ಜುನ ಮಹಾರಾಜರ ಬಾಣಕ್ಕೆ ಬಲಿಯಾಗಬೇಕಾದೀತು. ಕೂಡಲೇ ನಿಮ್ಮ ರಾಜರಿಗೆ ತಿಳಿಸಿರಿ” ಎಂದು ಹೇಳಿದರು.

ಮಣಿಪುರದವರು ಇಂತಹ ಉದ್ಧಟ ಮಾತುಗಳನ್ನು ಎಂದೂ ಕೇಳಿರಲಿಲ್ಲ. ಆದರೆ ಪಾಂಡವ ಸೈನ್ಯದ ಎದುರು ರಾಜದೂತರು ಏನು ಮಾಡಲು ಸಾಧ್ಯ? ಬಭ್ರುವಾಹನ ಮಹಾರಾಜರಿಗೆ ತಿಳಿಸುವುದಾಗಿ ಇಬ್ಬರು ರಾಜದೂತರು ಅರಮನೆಗೆ ಓಡಿದರು. ಇವರು ಅರಮನೆಯನ್ನು ತಲುಪುವಷ್ಟರಲ್ಲಿ ಎಷ್ಟೋ ಜನರು ಅಲ್ಲಿಗೆ ತಲುಪಿದ್ದರು. ಪಾಂಡವ ಸೈನ್ಯ ಬಂದ ವಿಷಯವನ್ನು ತಮತಮಗೆ ತಿಳಿದಂಥೆ ಹೇಳುತ್ತಿದ್ದರು. ಈ ರಾಜದೂತರೂ ಹೋಗಿ ಅಶ್ವಮೇಧಯಾಗದ ಕುದುರೆ ಬಂದದ್ದು ಮತ್ತು ತಾವು ಅವರ ಸೈನಿಕರಿಂದ ಕೇಳಿದ ಎಲ್ಲ ವಿಷಯವನ್ನು ತಿಳಿಸಿದರು.

ಅವರ ಮಾತುಗಳನ್ನು ಕೇಳುತ್ತಿದ್ದಂತೆ ಪಾಂಡವ ಸೈನಿಕರ ಸೊಕ್ಕಿನ ಮಾತುಗಳನ್ನು ಕೇಳಿ ಬಭ್ರುವಾಹನನ ಕಣ್ಣುಗಳು ಕೆಂಪಾದವು. ಆ ಕುದುರೆಯನ್ನು ಹಿಡಿದು ತರಲು ಆಜ್ಞೆ ಮಾಡಿದನು. ಮುತ್ತು, ರತ್ನ, ಗಂಧ, ಮಾಲ್ಯಾದಿಗಳಿಂದ ಅಲಂಕೃತವಾದ ಆ ಯಜ್ಞಾಶ್ವವನ್ನು ಲಾಯದಲ್ಲಿ ಕಟ್ಟಲು ಹೇಳಿದನು.

ಆಗ ಸೂರ್ಯಾಸ್ತವಾಯಿತು. ಅಂದು ರಾತ್ರಿಯೇ ಮಂತ್ರಾಲೋಚನೆಗಾಗಿ ಸಭೆಯನ್ನು ಕರೆಯಲು ಪ್ರಧಾನ ಅಮಾತ್ಯರಿಗೆ ಆಜ್ಞೆ ಹೋಯಿತು.

ವಿಶಾಲವಾದ ಮಹಾ ಆಸ್ಥಾನ ಮಂಟಪದಲ್ಲಿ ಓಲಗವು ನೆರೆಯಿತು. ಸುಬುದ್ಧಿಯೂ ಉಳಿದ ಸಚಿವರೂ ಸೇನಾಪತಿಯೂ ದಂಡನಾಯಕರೂ ಊರಿನ ಪ್ರಜಾಪ್ರಮುಖರೂ ಓಲಗಕ್ಕೆ ಬಂದಿದ್ದರು.

ಸುಬುದ್ಧಿಯು ಯಜ್ಞಾಶ್ವದ ಪೂರ್ವ ಪೀಠಿಕೆಯನ್ನು ಹೇಳಿ ಮುಂದಿನ ವಿಷಯವನ್ನು ತಿಳಿಸಲು ಮಹಾರಾಜರಿಗೇ ಬಿಟ್ಟುಕೊಟ್ಟನು.

ಬಭ್ರುವಾಹನನು, “ಬೇರೆ ದೇಶದ ರಾಜರಿಂದ ಬಂದ ಅಶ್ವಮೇದ ಯಾಗದ ಕುದುರೆಯನ್ನು ನಾವು ಕಟ್ಟಿರುವೆವು. ಇದು ಕ್ಷೇತ್ರಧರ್ಮದ ಕರ್ತವ್ಯ. ಯುದ್ಧಕ್ಕಾಗಿ ಎಲ್ಲರೂ ಸೂರ್ಯೋದಯಕ್ಕೆ ಸರಿಯಾಗಿ ಸಿದ್ಧರಿರಬೇಕು” ಎಂದು ಘೋಷಿಸಿದ. ಬಭ್ರುವಾಹನನ ನಿರ್ಧಾರದ ಮಾತುಗಳನ್ನು ಕೇಳಿ ಎಲ್ಲರೂ ಜಯಜಯಕಾರ ಮಾಡುತ್ತ ಒಪ್ಪಿಕೊಂಡರು.

ತಂದೆಯ ಬಳಿಗೆ

ಈ ಸಮಯಕ್ಕೆ ಸರಿಯಾಗಿ ರಾಜಮತಗೆ ಚಿತ್ರಾಂಗದೆಯು ಆಸ್ಥಾನಕ್ಕೆ ಬಂದಳು. ಅವಳಿಗೆ ಬಭ್ರುವಾಹನನು ನಡೆದ ವಿಷಯವನ್ನೆಲ್ಲ ತಿಳಿಸಿದನು. ಆನಂದಪಡುವ ಬದಲು ಅವಳು ಖಿನ್ನಗೊಂಡಳು. ಬಭ್ರುವಾಹನನಿಗೆ ಅಂದಳು: “ಕುದುರೆಯನ್ನು ಕಟ್ಟಿ ಬಹಳ ಒಳ್ಳೆಯ ಕೆಲಸ ಮಾಡಿದೆ! ಈ ಕ್ಷುದ್ರಬುದ್ಧಿಯನ್ನೆಲ್ಲಿ ಕಲಿತೆ? ಅರ್ಜುನನು ನಿನ್ನ ತಂದೆ. ನಿನ್ನ ತಂದೆಗೆ ಈ ದ್ರೋಹವೆ? ಉದ್ರೇಕದಿಂದ ಕಟ್ಟಿರುವೆ. ನಿನ್ನಿಂದ ನಮ್ಮ ವಂಶಕ್ಕೇ ದುಃಖ ಬಂದಿತು/”

ಬಭ್ರುವಾಹನನಿಗೆ ತಾಯಿಯ ಮಾತಿನಿಂದ ಆಘಾತವಾದಂತಾಯಿತು. ಅವನು ಹೇಳಿದ: “ಅಮ್ಮ, ರಾಜನಾಗಿ ನನ್ನ ಕರ್ತವ್ಯ ಮಾಡಿದೆ. ಈಗ ನೀನು ಹೇಗೆ ಹೇಳುವೆಯೋ ಹಾಗೆ ಮಾಡುವೆನು.”

“ಮಗು, ಕೇಳು, ಅಂದು ಅರ್ಜುನನು ನನ್ನನ್ನು ಬಿಟ್ಟು ತನ್ನ ಊರಿಗೆ ಹೋದಂದಿನಿಂದ ಪರಿತಪಿಸುತ್ತಿದ್ದೇನೆ. ಪುಣ್ಯವಶದಿಂದ ಇಂದು ಬಂದಿದ್ದಾನೆ. ನಿನ್ನ ಸರ್ವಸ್ವವನ್ನೆಲ್ಲ ನಿನ್ನ ತಂದೆಯ ಪಾದಕ್ಕೆ ಅರ್ಪಿಸಿದರೆ ನಾನು ಇಂದಿನವರೆಗೆ ಮಾಡಿದ ತಪಸ್ಸಿಗೆ ಫಲವು ಸಿಕ್ಕಂತಾಗುವುದು. ನಿನ್ನ ಸರ್ವಸ್ವವನ್ನೂ ನಿನ್ನ ತಂದೆಗೆ ಒಪ್ಪಿಸಿ, ಧರ್ಮರಾಜನ ವೈರಿಗಳ ಮುಂದೆ ನಿನ್ನ ಶೌರ್ಯವನ್ನು ತೋರಿಸು. ದುಷ್ಟ ಮಗ ಎನ್ನಿಸಿಕೊಳ್ಳಬೇಡ” ಎಂದಳು ಚಿತ್ರಾಂಗದೆ.

“ಹಾಗೆಯೇ ಆಗಲಿ” ಎಂದು ಬಭ್ರುವಾಹನನು ತಾಯಿಯನ್ನು ಒಪ್ಪಿಸಿ ಕಳಿಸಿದನು. ಸುಬುದ್ಧಿಯನ್ನು ಕೇಳಿದ: “ತಾಯಿ ಹೇಳಿದ ಮಾತನ್ನು ಕೇಳಿದಿರಿ. ನಿಮ್ಮ ಅಭಿಪ್ರಾಯ ಹೇಳಿ.” ಸುಬುದ್ಧಿಯು, “ಅರ್ಜುನನು ಧರ್ಮರಾಯನ ತಮ್ಮ, ನಿನ್ನ ತಂದೆ. ಆದ್ದರಿಂದ ಕುದುರೆಯನ್ನು ಕಟ್ಟುವುದು ನೀತಿಯುಕ್ತವಲ್ಲ. ರಾಜಮರ್ಯಾದೆಯಿಂದ ಹೋಗಿ ನಿನ್ನ ತಂದೆಗೆ ರಾಜಪದವಿಯನ್ನೊಪ್ಪಿಸು” ಎಂದನು.

ಬಭ್ರುವಾಹನನು ಪಟ್ಟಣದಲ್ಲಿ ಡಂಗುರ ಹೊಡೆಸಿದನು. ಅರ್ಜುನನ ಸ್ವಾಗತಕ್ಕಾಗಿ ಬರಲು ನಾಗರಿಕರಿಗೆ ತಿಳಿಸಲಾಯಿತು. ಭಂಡಾರದಲ್ಲಿಯ ಒಳ್ಳೆಯ ವಸ್ತುಗಳನ್ನು ತರಿಸಿದನು, ಬಂಗಾರದಿಂದ ತುಂಬಿದ ಅನೇಕ ರಥಗಳು ಸಿದ್ಧವಾದವು. ಆಕಳುಗಳು, ಆನೆಗಳು, ಕುದುರೆಗಳು, ಬೆಳ್ಳಿ ಬಂಗಾರದ ನಾಣ್ಯಗಳ ಅನೇಕ ಕೊಪ್ಪರಿಗೆಗಳು ಸಿದ್ಧವಾಗಿ ನಿಂತವು. ಹೊಸಹೊಸ ವಿಚಿತ್ರವಾದ ಬಟ್ಟೆಗಳು, ದಿವ್ಯ ಆಭರಣಗಳು, ರತ್ನ, ವಜ್ರ, ವೈಡೂರ್ಯಗಳು , ಹಂಸತೂಲದ ಮೆತ್ತನ್ನ ತಲ್ಪಗಳು ಇತ್ಯಾದಿ ಅರ್ಜುನನಿಗೆ ಕಾಣಿಕೆಯಾಗಿ ಕೊಡಲು ಸಿದ್ಧವಾದವು.

ಬಭ್ರುವಾಹನ ಬಾಣ ಅರ್ಜುನನ ತಲೆಯನ್ನು ಕತ್ತರಿಸಿತು.

ಬೆಳಗಾಯಿತು.

ಬಭ್ರುವಾಹನನು ಅರ್ಜುನನಿಗೆ ಕಾಣಿಕೆಗಳನ್ನೂ ಯಜ್ಞದ ಕುದುರೆಯನ್ನೂ ಅರ್ಪಿಸಲು ಹೊರಟನು. ಅವನ ಜೊತೆಗೆ ಸುಬುದ್ಧಿ ಮೊದಲಾದ ಮಂತ್ರಿಗಳು, ಪುರಜನರು, ಅಸಂಖ್ಯ ಅಮೌಲ್ಯ ಕಾಣಿಕೆಗಳೊಂದಿಗೆ ಪಾಂಡವ ಬಿಡಾರದ ಕಡೆಗೆ ಹೊರಟರು.

ತಂದೆ, ನಾನು ತಪ್ಪು ಮಾಡಿದೆ

ಅತ್ತ ಅರ್ಜುನ ಶ್ರೀಕೃಷ್ಣನ ಪಾದಗಳನ್ನು ಸ್ಮರಿಸಿ, ಕುದುರೆಯನ್ನು ಬಿಡಿಸಲು ಯುದ್ಧಕ್ಕೆ ಸಿದ್ಧರಾಗುವುದಕ್ಕಾಗಿ ವೃಷಕೇತು ಮೊದಲಾದ ವೀರರನ್ನು ಕರೆಸಿದ. ವೀರಾಧಿವೀರರನ್ನು ಕೂಡಿಕೊಂಡು ಘನ ರಣವಾದ್ಯಗಳ ರಭಸದಿಂದ ಅರ್ಜುನ ರಣರಂಗಕ್ಕೆ ಬಂದ.

ಆ ಹೊತ್ತಿಗೆ ಬಭ್ರುವಾಹನನು ಸಕಲ ವೈಭವದಿಂದ ಬಂದು, ತಂದೆಯನ್ನು ಕಂಡು ರತ್ನಗಳನ್ನು ಅವನ ಪಾದಗಳಿಗೆ ಸುರಿದು, ಭಯ-ಭಕ್ತಿಯಿಂದ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದನು. ಮಂತ್ರಿಗಳು ಹಾಗೂ ಜನರು ಅರ್ಜುನನ ತಲೆಯ ಮೇಲೆ ಮುತ್ತುಗಳನ್ನು ಸುರಿದರು.

ಅರ್ಜುನನಿಗೆ ಆಶ್ಚರ್ಯವಾಯಿತು. “ನೀನು ಯಾರು?” ಎಂದು ಪ್ರಶ್ನಿಸಿದ.

ಬಭ್ರುವಾಹನ ಉತ್ತರ ಹೇಳಿದ: “ನಾನು ನಿನ್ನ ಮಗ. ನನ್ನ ತಾಯಿ ಚಿತ್ರಾಂಗದೆ, ನನ್ನನ್ನು ಸಾಕಿದವಳು ಉಲೂಪಿ. ನೀನು ತೀರ್ಥಯಾತ್ರೆಗೆ ಬಂದಾಗ ಇವರು ನಿನಗೆ ಅರಸಿಯರಾದರು. ನನ್ನ ಹೆಸರು ಬಭ್ರುವಾಹನ. ನಾನು ಈ ಕುದುರೆಯನ್ನು ಹಿಡಿದು ಕಟ್ಟಿ ತಪ್ಪು ಮಾಡಿದೆ. ಕ್ಷಮಿಸಬೇಕು”  – ಹೀಗೆಂದು ಮತ್ತೆ ಅರ್ಜುನನ ಪಾದಗಳಿಗೆ ನಮಸ್ಕರಿಸಿದನು.

ಛಿ, ನೀನು ನನ್ನ ಮಗನೆ?’

ತನ್ನ ಮಗನನ್ನು ಪ್ರೀತಿಯಿಂದ ಮಾತನಾಡಿಸುತ್ತಾನೆ ಎಂದು ಅರ್ಜುನನನ್ನು ನೋಡಿ ಹಂಸಧ್ವಜ, ನೀಲಧ್ವಜ ಮೊದಲಾದವರು ನಿರೀಕ್ಷಿಸಿದ್ದರು. ಆದರೆ ಅವನು ಬಭ್ರುವಾಹನನ ಮುಖವನ್ನೇ ನೋಡಲಿಲ್ಲ. ತನ್ನ ಮುಖವನ್ನು ಬೇರೆಡೆ ತಿರುಗಿಸಿದ. ಎಲ್ಲರಿಗೂ ಆಶ್ಚರ್ಯ, ಆತಂಕ.

ಅರ್ಜುನನ್ನು ಕುರಿತು ಪ್ರದ್ಯುಮ್ನ ಮತ್ತು ಹಂಸಧ್ವಜ ಮೊದಲಾದವರು, “ಹೀಗೇಕೆ? ನಿನ್ನ ಮಗನು ಮಹಾಪರಾಕ್ರಮಿಯು, ಮಹಾ ಶ್ಲಾಘ್ಯನು, ಅಭಿಮಾನಿಯು, ನಿನ್ನಂತೆಯೇ ರೂಪವಂತನು. ಪಾದದ ಬಳಿ ಕುಳಿತಿರುವವನನ್ನು ಎತ್ತಿಕೊಂಡು ಏಕೆ ಮಾತನಾಡಿಸುವುದಿಲ್ಲ?” ಎಂದು ಕೇಳಿದರು.

ಅರ್ಜುನ ಬಭ್ರುವಾಹನನನ್ನು ಒದೆದು ಹೇಳಿದ: “ಛಿ, ನೀನು ನನ್ನ ಮಗನೆ? ನನ್ನ ಮಗನಾದವನು ಯುದ್ಧಕ್ಕೆ ಹೆದರುವನೆ? ಮೊದಲು ಕುದುರೆಯನ್ನು ಕಟ್ಟಿ, ಆಮೇಲೆ ಯುದ್ಧ ಮಾಡದೆ ಅದನ್ನು ಬಿಡುವನೆ? ಸುಭದ್ರೆಯಲ್ಲಿ ಹುಟ್ಟಿದ ಅಭಿಮನ್ಯು ತಾನೊಬ್ಬನೇ ಶತ್ರುಗಳ ಚಕ್ರವ್ಯೂಹವನ್ನು ಭೇದಿಸಿ ವೈರಿಭಟರನ್ನು ಗೆದ್ದನು. ಅವನನ್ನು ಬಿಟ್ಟರೆ ನನಗೆ ಬೇರೆ ಮಕ್ಕಳಿರುವರೇ? ಸಿಂಹದ ಹೊಟ್ಟೆಯಲ್ಲಿ ನರಿಯು ಹುಟ್ಟುವುದೇ? ನೀನು ಹೇಡಿ, ನನ್ನ ಮಗನಾದರೆ ಯುದ್ಧ ಮಾಡದೆ ಕುದುರೆಯನ್ನು ಏಕೆ ತಂದೆ? ನಿನಗೆ ಚತುರಂಗ ಬಲವೇಕೆ? ರಾಜರ ಛತ್ರ ಚಾಮರಗಳೇಕೆ? ಜೀವದಾಸೆಯನ್ನು ಬಿಟ್ಟು ಹೋಗು. ಓಹೋ, ನರ್ತಕಿಯರು. ನಿನಗೆ ರಾಜನ ವೇಷದ ನಾಟಕವೇಕೆ? ಕುದುರೆಯನ್ನು ತಡೆದು ಬಹು ದೊಡ್ಡ ವೇಷದ ನಾಟಕವೇಕೆ? ಕುದುರೆಯನ್ನು ತಡೆದು ಬಹು ದೊಡ್ಡ ಪೌರುಷ ಮಾಡಿದೆ. ರಾಜನಾಗುವ ಯೋಗ್ಯತೆ ನಿನಗಿಲ್ಲ. ರಾಜನ ಆಳಾಗು” ಎಂದು ಮೂದಲಿಸಿದನು.

ನಿನ್ನ ತಲೆಯನ್ನು ಕೆಡುವುತ್ತೇನೆ

ತನ್ನ ಕಡೆಗೆ ನೋಡದೆ, ಈ ರೀತಿ ಅವಹೇಳನ ಮಾಡಿದ ಅರ್ಜುನನ ಮಾತುಗಳನ್ನು ಕೇಳಿ ಬಭ್ರುವಾಹನನಿಗೆ ಕೋಪ ಬಂದಿತು. ಕೆಣಕಿದ ಸಿಂಹದಂತಾದನು ಅವನು. ಎದ್ದು ಸೆಟೆದು ನಿಂತು ಹೇಳಿದನು: “ಅರ್ಜುನಾ, ಹಾಗಾದರೆ ಕೇಳು. ನಿನ್ನ ತಲೆಯನ್ನು ಕೆಡವದಿದ್ದರೆ, ನೀನು ಅಂದುದೆಲ್ಲ ನಿಜವೆಂದು ತಿಳಿ. ಮರೆಯಬೇಡ. ಇನ್ನು ಸಾಕು.” ಹೀಗೆ ಹೇಳಿ ಕುದುರೆಯ ಸಹಿತ ಹಿಂತಿರುಗಿದನು.

ಬಭ್ರುವಾಹನನು ತಂದ ಎಲ್ಲ ಅಮೂಲ್ಯ ವಸ್ತುಗಳನ್ನು ಧನ, ಕನಕ, ವಜ್ರ, ವೈಡೂರ್ಯಗಳನ್ನು ಭಂಡಾರಕ್ಕೆ ಸೇರಿಸಲು ಹೇಳಿದನು. ಯಜ್ಞದ ಕುದುರೆಯನ್ನು ಲಾಯದಲ್ಲಿ ಕಟ್ಟಿಸಿದನು. ರಣಘೋಷದಿಂದ ಪಾಂಡವಸೇನೆಯನ್ನು ಎದುರಿಸಲು ಸಿದ್ಧನಾಗಿ ಕಾಲಭೈರವನಂತೆ ಸೈನ್ಯದೊಡನೆ ಬಂದನು. ಎರಡು ಸೈನ್ಯಗಳೂ ಎದುರು ಬದುರು ನಿಂತವು. ಬಭ್ರುವಾಹನನು ಸಿಂಹನಾದ ಮಾಡುತ್ತ ತನ್ನ ಸೇನೆಯ ಮುಂಭಾಗದಲ್ಲಿದ್ದನು.

ಭೀಕರ ಕದನ

ಮೊದಲು ಅನುಸಾಲ್ವನು ಪಾಂಡವ ಸೇನೆಯನ್ನು ತೆಗೆದುಕೊಂಡು ಬಂದು ಎದುರಾದನು. ಎದುರಾಳಿಯ ಬಾಣಗಳನ್ನು ಮಧ್ಯದಲ್ಲಿಯೇ ಕತ್ತರಿಸಿ ಮತ್ತೆ ತಮ್ಮ ಬಾಣಗಳನ್ನು ಬಿಡುತ್ತಿದ್ದರು. ಇಬ್ಬರೂ ಬಾಣಗಳಲ್ಲಿ, ಬಿಲ್ಲಾಳುತನದಲ್ಲಿ, ತಾಳಿಕೆಯಲ್ಲಿ, ತ್ರಾಣದಲ್ಲಿ, ಚಮತ್ಕಾರವಾಗಿ ಯುದ್ಧ ಮಾಡುವುದರಲ್ಲಿ, ಶೌರ್ಯದಲ್ಲಿ, ಕೈಚಳಕದಲ್ಲಿ ಪರಾಕ್ರಮದಲ್ಲಿ, ಕಲಿತನದಲ್ಲಿ ಸಮನಾಗಿದ್ದರು. ಕೊನೆಗೆ ಸಿಟ್ಟಿಗೆದ್ದ ಅನುಸಾಲ್ವನು ಬಭ್ರುವಾಹನನ ಬತ್ತಳಿಕೆಯನ್ನು ಕತ್ತರಿಸಿ, ಅವನ ಕವಚವನ್ನು ಸೀಳಿದನು. ಸಾರಥಿ, ಕುದುರೆ, ರಥಗಳನ್ನು ನಾಶ ಮಾಡಿದನು. ಕೂಡಲೇ ಬಭ್ರುವಾಹನನು ಇನ್ನೊಂದು ರಥವನ್ನೇರಿ ಅನುಸಾಲ್ವನಿಗೂ ಅದೇ ಅವಸ್ಥೆಯನ್ನುಂಟುಮಾಡಿದನು. ಅಗ ಬಭ್ರುವಾಹನನ ಇನ್ನೊಂದು ತೀಕ್ಷ್ಣ ಬಾಣದಿಂದ ಅನುಸಾಲ್ವನು ಮೂರ್ಛೆಹೋಗಿ ಬಿದ್ದನು.

ಇದನ್ನು ನೋಡಿ ಪ್ರದ್ಯುಮ್ನನು ಬಭ್ರುವಾಹನನಿಗೆ ಎದುರಾದನು. ಬಭ್ರುವಾಹನನು ಪ್ರದ್ಯಮ್ನನ ಬಿಲ್ಲಿನ ಹಗ್ಗವನ್ನು ಕತ್ತರಿಸಿದನು. ಅವನು ಗದೆಯನ್ನು ತೆಗೆದುಕೊಂಡು ಬಭ್ರುವಾಹನನ ಮೇಲೆ ಏರಿಬಂದನು. ಬಭ್ರುವಾಹನನು ಆ ಗದೆಯನ್ನು ಅವನ ಕೈಯಲ್ಲಿರುವಾಗಲೇ ಕತ್ತರಿಸಿಹಾಕಿದನು. ಆಗ ಪ್ರದ್ಯುಮ್ನನು ಬರೆ ಬಿಲ್ಲು ತೆಗೆದುಕೊಂಡು ಎದುರಾದನು. ಬಭ್ರುವಾಹನನು ಮತ್ತೊಂದು ಅತಿ ತೀಕ್ಷ್ಣವಾದ ಬಾಣವನ್ನು ಬಿಟ್ಟು ಪ್ರದ್ಯುಮ್ನನನ್ನು ಮೂರ್ಛಿತನನ್ನಾಗಿ ಮಾಡಿದನು.

ಆಗ ಹಂಸಧ್ವಜನು ಬಭ್ರುವಾಹನನನ್ನು ಎದುರಿಸಿದನು. ಬಭ್ರುವಾಹನನ ಉಗ್ರರೂಪದಿಂದ ಬರುವ ಅತಿ ತೀಕ್ಷ್ಣ ಬಾಣಗಳನ್ನು ಎದುರಿಸಲಾಗದೆ ಬಭ್ರುವಾಹನನ ಎದುರಿಗೆ ನಿಲ್ಲದೆ ಮಗ್ಗುಲಿಗೆ ಸರಿದುಹೋದನು. ಆಗ ಯೌವನಾಶ್ವನು ಬಭ್ರುವಾಹನನಿಗೆ ಎದುರಾಗಿ ತಡೆದನು. ಆದರೆ ಅವನೂ ತಡೆಯಲಾರದೆ ಏಟು ತಿಂದು ಮೂರ್ಛಿತನಾಗಿ ಬಿದ್ದನು. ಆಗ ಸಿತಕೇತು, ಕೃತವರ್ಮ, ಸಾತ್ಯಕಿ ಒಮ್ಮೆಲೇ ಬಭ್ರುವಾಹನನ ಮೇಲೆ ಏರಿಬಂದರು. ಮೂವರನ್ನೂ ಏಕಕಾಲಕ್ಕೆ ಎದುರಿಸುವ ಬಭ್ರುವಾಹನನ ಯುದ್ಧ ಚಮತ್ಕರವನ್ನು ವೀರರೆಲ್ಲ ನಿಂತು ನೋಡುತ್ತಿದ್ದರು. ಅವನು ಎಷ್ಟು ತೀವ್ರವಾಗಿ ಬಾಣಗಳನ್ನು ಬಿಡುತ್ತಿದ್ದನೆಂದರೆ ಅವನು ಬಾಣ ಬಿಡುತ್ತಿದ್ದ ಕೈಯೇ ಕಾಣುತ್ತಿರಲಿಲ್ಲ! ಒಬ್ಬನ ಬಿಲ್ಲನ್ನು ಕತ್ತರಿಸಿದರೆ, ಇನ್ನೊಬ್ಬನ ಬಿಲ್ಲಿನ ಹಗ್ಗವನ್ನು ಕತ್ತರಿಸುತ್ತಿದ್ದನು; ಒಬ್ಬನ ರಥವನ್ನು ಪುಡಿಪುಡಿ ಮಾಡಿದರೆ, ಇನ್ನೊಬ್ಬನ ರಥದ ಕುದುರೆಗಳನ್ನು ಕೊಂದುಹಾಕುತ್ತಿದ್ದನು; ಒಬ್ಬನ ಸಾರತಿಯನ್ನು ಕೊಂದರೆ, ಇನ್ನೊಬ್ಬನ ಧ್ವಜಸ್ತಂಭವನ್ನು ಕತ್ತರಿಸಿಹಾಕುತ್ತಿದ್ದನು; ಒಬ್ಬನ ರಥವನ್ನು ಯೋಜನ ಹಿಂದೆ ಸರಿಸಿದರೆ, ಇನ್ನೊಬ್ಬನ ರಥವನ್ನು ಆಕಾಶಕ್ಕೆ ಹಾರಿಸುತ್ತಿದ್ದನು. ಈ ಯುದ್ಧವು ವೀರರ ಕಣ್ಣಿಗೆ ಹಬ್ಬವಾಗಿತ್ತು. ಪಾಂಡವ ವೀರರೂ ಕೂಡ ಬೆರಗಾಗಿ ಬಭ್ರುವಾಹನನ ಕೈಚಳಕವನ್ನು ನೋಡುತ್ತಿದ್ದರು. ಸ್ವತಃ ಅರ್ಜುನ ಬಾರದೆ ತಾವು ಬದುಕುವುದು ಸಾಧ್ಯವಿಲ್ಲವೆಂದು ತಿಳಿದರು.

ಪಾಂಡವ ಸೈನ್ಯದ ಮೂವರೂ ಏಟು ತಿಂದು ಮೂರ್ಛೆಹೋಗಿ ಬಿದ್ದರು. ಈಗ ಬಭ್ರುವಾಹನನನ್ನು ಎದುರಿಸುವವರು ಯಾರೂ ಇಲ್ಲದಂತಾಯಿತು. ಪಾಂಡವ ಸೇನೆಯಲ್ಲಿ ಅತಿರಥ ಮಹಾರಥ ರಕ್ಷಕರಿಲ್ಲದೇ ಸೈನಿಕರು ಹಿಂದಕ್ಕೆ ಓಡಹತ್ತಿದರು. ಇದನ್ನೆಲ್ಲ ನೋಡಿ ಅರ್ಜುನ ಸಿಟ್ಟಿಗೆದ್ದ. ಕಣ್ಣು ಕೆಂಪಗೆ ಮಾಡಿಕೊಂಡು ಗಾಂಡೀವವನ್ನು ಠೇಂಕಾರ ಮಾಡುತ್ತ ಬಾಣಗಳ ಜಾಲವನ್ನೇ ನಿರ್ಮಿಸುತ್ತ ಬಂದ. ಆಕಾಶದಲ್ಲಿ ನೋಡಿದಲ್ಲೆಲ್ಲ ಬಾಣಗಳೇ ಕಾಣುವಂತೆ ಬಾಣಗಳನ್ನು ಬಿಡುತ್ತ ಬಂದ. ಬಭ್ರುವಾಹನನು ಅವುಗಳನ್ನು ಕತ್ತರಿಸುತ್ತ ನಗುತ್ತ ಎದುರಾದನು.

ಅಂದು ಯುದ್ಧವು ಅಷ್ಟಕ್ಕೇ ಮುಕ್ತಾಯವಾಯಿತು.

‘ನನಗೆ ಅಪಜಯ ಕಟ್ಟಿಟ್ಟಂತೆ’

ಮಾರನೆಯ ದಿನ ಬಭ್ರುವಾಹನನು ಮತ್ತೆ ಎಲ್ಲ ವೀರರನ್ನು ಸೋಲಿಸಿ ಹಂಸಧ್ವಜನ ಸಂಗಡ ಹೋರಾಡಿ ಪಾಂಡವರ ಐದು ಅಕ್ಷೋಹಿಣಿ ಸೈನ್ಯವನ್ನು ನಾಶ ಮಾಡಿದನು. ಶ್ರೀಕೃಷ್ಣನ ಇಬ್ಬರು ಮಕ್ಕಳು ಗಾಬರಿಗೊಂಡು ಉರುಳಿದರು. ಇದರಿಂದ ಅರ್ಜುನನಿಗೆ ಬಹಳ ಅಸಮಧಾನವಾಯಿತು. ಆದರೆ ಏಕೋ ಏನೋ ಅರ್ಜುನನ ಮನಸ್ಸಿನಲ್ಲಿ ಒಂದು ತರಹದ ಅಧೈರ್ಯ ಅಳುಕು ಬಂದಿತ್ತು. ಅನೇಕ ಅಪಶಕುಕನಗಳು ಅವನ ಮನಸ್ಸನ್ನು ಚುಚ್ಚುತ್ತಿದ್ದವು. ಅರ್ಜುನನಿಗೆ ತನ್ನ ಜೀವಮಾನದಲ್ಲಿ ಹಿಂದೆ ಎಂದೂ ಈ ಅನುಭವವಾಗಿರಲಿಲ್ಲ. ತಾನು ಕೂಡ ಬಭ್ರುವಾಹನನನ್ನು ಎದುರಿಸಿ ಗೆಲ್ಲುವುದು ಸಾಧ್ಯವೋ ಇಲ್ಲವೋ ಎಂಬ ಶಂಕೆ ಬಂದುಬಿಟ್ಟಿತ್ತು. ಆಗ ಕರ್ಣನ ಮಗನಾದ ವೃಷಕೇತುವನ್ನು ಕರೆದು ಅವನಿಗೆ ಹೀಗೆ ಹೇಳಿದ:

“ನೀನು ಹಸ್ತಿನಾಪುರಕ್ಕೆ ಹೋಗಿ ಪ್ರದ್ಯುಮ್ನ, ಅನಿರುದ್ಧ ಇವರು ಯುದ್ಧದಲ್ಲಿ ಬಿದ್ದುದನ್ನು ಯುಧಿಷ್ಠಿರನಿಗೆ ತಿಳಿಸು. ಇಲ್ಲಿ ಕಾಣುವ ಉತ್ಪಾತಗಳನ್ನು, ಅಪಶಕುನಗಳನ್ನು ತಿಳಿಸು. ನನ್ನ ಕಿರೀಟದ ಮೇಲೆ ಹದ್ದು ಕುಳಿತು ಹಾರಿಹೋದುದನ್ನು ತಿಳಿಸು. ರಥಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿದುದನ್ನು ತಿಳಿಸು. ಕನ್ನಡಿಯಲ್ಲಿ ನಾನು ನೋಡಿಕೊಂಡರೆ ರುಂಡವಿಲ್ಲದ ಮುಂಡ ಮಾತ್ರ ಕಾಣಿಸುವುದೆಂದೂ ತಿಳಿಸು. ನನಗಿನ್ನು ಅಪಜಯವು ಕಟ್ಟಿಟ್ಟಂತೆ. ಧರ್ಮಜನು ಅಶ್ವಮೇಧ ಯಾಗವನ್ನು ಹೇಗೆ ಮಾಡಿ ಮುಗಿಸುವನೋ? ವಿಜಯಿಯಾಗಿ ಯಜ್ಞದ ಕುದುರೆಯನ್ನು ತೆಗೆದುಕೊಂಡು ಭೀಮಸೇನ ಮೊದಲಾದವರ ಎದುರಿಗೆ ನಾನು ಹೋಗುವುದು ಅಸಾಧ್ಯವಾಗಿ ಕಾಣುತ್ತದೆ. ನೀನು ಹೋಗಿ ಹಸ್ತಿನಾವತಿಯಲ್ಲಿ ಎಲ್ಲವನ್ನೂ ತಿಳಿಸು.”

ವೃಷಕೇತುವಿನ ಸಾವು

ಅದಕ್ಕೆ ವೃಷಕೇತವು ಸಿಟ್ಟಿನಿಂದ, “ತಂದೆಯೇ , ಒಳ್ಳೆಯ ಮಾತಿದು. ನಾನು ನಿನ್ನನ್ನು ಯುದ್ಧದ ಮಧ್ಯದಲ್ಲಿ ಬಿಟ್ಟು, ಜೀವಗಳ್ಳನಾಗಿ ಹಸ್ತಿನಾಪುರಕ್ಕೆ ಹೋಗಲೇ? ಇದನ್ನು ನೋಡಿದರೆ ನನ್ನ ತಂದೆ, ಅಜ್ಜಂದಿರು ಸ್ವರ್ಗದಿಮದ ಬೀಳುವುದಿಲ್ಲವೆ? ಈ ಬಭ್ರುವಾಹನನಿಗಾಗಿ ಇಷ್ಟು ಚಿಂತೆಯೇ? ಇವನ ಬಿಂಕವನ್ನು ಈಗಲೇ ಮುರಿಯುವೆನು. ನನ್ನನ್ನು ಯುದ್ಧಕ್ಕೆ ಕಳಿಸಿ ನೋಡಿರಿ. ಕರ್ಣನ ಮಗನಾಗಿ ನಾನು ಈ ಸ್ಥಿತಿಯನ್ನು ಹೇಗೆ ಸಹಿಸಲಿ? ಯುದ್ಧಕ್ಕೆ ಅಪ್ಪಣೆ ಕೊಡಿರಿ” ಎಂದನು.

ವೃಷಕೇತವು ಅರ್ಜುನನ ಅಪ್ಪಣೆ ಪಡೆದು ಬಿಲ್ಲು ಬಾಣಗಳನ್ನು ತೆಗೆದುಕೊಂಡು ಬಿರುಗಾಳಿಯಂತೆ ಬಭ್ರುವಾಹನನ ಮೇಲೆ ಏರಿಬಂದನು. ಬಂದವನೇ ಬಭ್ರುವಾಹನನನ್ನು ಗಾಸಿ ಮಾಡಿದನು. ಈಗ ಬಂದವನು ಸಾಮಾನ್ಯನಲ್ಲವೆಂದು ಬಭ್ರುವಾಹನನಿಗೂ ಅನಿಸಿತು. ಇಬ್ಬರ ಶರಸಂಧಾನ, ಸಾಹಸ, ಲಕ್ಷ್ಯಭೇದಿಸುವುದು, ಹಸ್ತಲಾಘವಗಳಿಂದ ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು. ಕೊನೆಗೆ ಬಭ್ರುವಾಹನನು ಒಂದು ತೀಕ್ಷ್ಣ ಬಾಣವನ್ನು ಬಿಟ್ಟು ವೃಷುಕೇತುವನ್ನು ಆಕಾಶದಲ್ಲಿ ಹಾರಿಸಿ ಮೂರು ಮುಹೂರ್ತಗಳ ವರೆಗೆ ಆಕಾಶದಲ್ಲಿಯೇ ಗಿರಿಗಿರನೆ ತಿರುಗುವಂತೆ ಮಾಡಿ ನೆಲಕ್ಕೆ ಬೀಳಿಸಿದನು. ವೃಷಕೇತುವೇನು ಕಡಿಮೆ ಇರಲಿಲ್ಲ. ಅವನೂ ಬಭ್ರುವಾಹನನನ್ನು ಆಕಾಶಕ್ಕೆ ಹಾರಿಸಿ, ತಿರುಗಿಸಿ ಕೆಡವಿದ.

ಈ ರೀತಿ ಇಬ್ಬರೂ ಭಯಂಕರವಾಗಿ ಅಲೌಕಿಕವಾಗಿ ಐದು ದಿನ ಯುದ್ಧ ಮಾಡಿದರು. ಕೊನೆಗೆ ಬಭ್ರುವಾಹನನು ವೃಷಕೇತುವನ್ನು ಅವನ ಶೌರ್ಯಕ್ಕಾಗಿ ಬೊಗಳುತ್ತ, “ಇನ್ನು ಶ್ರೀಪತಿಯನ್ನು ನೆನೆಸು” ಎಂದು ಅತಿ ತೀಕ್ಷ್ಣವಾದ ಬಾಣವನ್ನು ಬಿಟ್ಟನು. ಅದು ವೃಷಕೇತುವಿನ ತಲೆಯನ್ನು ಕತ್ತರಿಸಿ ಆಕಾಶಕ್ಕೆ ಹಾರಿಸಿತು. ಆ ತಲೆಯು, “’ನಾರಾಯಣ, ಮುಕುಂದ, ಮಾಧವ’ ಎನ್ನುತ್ತ ಅರ್ಜುನನ ಹತ್ತಿರ ಬಂದು ಬಿದ್ದಿತು. ವೃಷಕೇತುವಿನ ರುಂಡವಿಲ್ಲದ ಮುಂಡವು ಅತಿ ವೇಗದಿಂದ ನಡೆದು ಬಭ್ರುವಾಹನನನ್ನು ಹೊಡೆದು ಭೂಮಿಗೆ ಕೆಡವಿ ಅನೇಕ ಸೈನಿಕರನ್ನು ಕೊಂದು, ಉರುಳಿತು.

‘ಪಾರ್ಥ, ನಿನ್ನ ಶಕ್ತಿಯನ್ನು ತೋರಿಸು’

ವೃಷಕೇತುವಿನ ಶಿರವನ್ನು ನೋಡಿ ಅರ್ಜುನನಿಗೆ ಬಹಳ ಸಂಕಟವಾಯಿತು. “ಕರ್ಣನನ್ನು ಕೊಂಡು, ನಿನ್ನನ್ನು ರಕ್ಷಿಸಲಾರದೆ ಇಲ್ಲಿ ಬಲಿಕೊಟ್ಟೆನೆಂದು ಜನರು ಅನ್ನುವುದಿಲ್ಲವೇ? ನೀನೊಬ್ಬನೇ ನಮ್ಮ ಮನೆತನದ ಕುಡಿಯು, ನೀನೂ ಆರಿಹೋದೆಯಾ? ಕೃಷ್ಣನಿಗೆ, ಧರ್ಮರಾಜನಿಗೆ, ಕುಂತಿಗೆ ಏನು ಹೇಳಲಿ? ಅವರಿಗೆ ಹೇಗೆ ಮುಖ ತೋರಿಸಲಿ?” ಎಂದು ಪಾರ್ಥ ದುಃಖಿಸುತ್ತಿದ್ದ.

ಆ ಸಮಯಕ್ಕೆ ಬಭ್ರುವಾಹನನು ಅಲ್ಲಿಗೆ ಬಂದನು ಹೀಗೆಂದನು:

“ಎಲೆ ಪಾರ್ಥ, ನಾನು ಕ್ಷತ್ರಿಯನೇ ಅಲ್ಲ, ಅಲ್ಲವೆ? ನಿನ್ನ ಶಕ್ತಿಯನ್ನು ತೋರಿಸು. ನಿನ್ನ ವೀರರನ್ನೆಲ್ಲ ಸಹಜವಾಗತಿ ಗೆದ್ದೆವು. ಶೂರರ ಜೀವಕ್ಕೆ ಮುಕ್ತಾಯ ಮಾಡಲು ಅವಕಾಶ ಕೊಟ್ಟಾಗ ಅದನ್ನೂ ಪೂರೈಸಿದೆವು. ನಿನ್ನ ತಲೆಗೆ ಬೆಲೆಯಾಗಿರುವ ಸಾಹಸವೂ ನನ್ನಲ್ಲಿದೆ. ಈ ಸತ್ತವರ ಚಿಂತೆಯೇಕೆ? ಕರ್ಣಸುತನು ನಿಜವಾಗಿಯೂ ವೀರನು. ಅವನ ತಲೆಯನ್ನು ಮಹಾದೇವನಿಗೆ ಅರ್ಪಿಸು, ಅವನು ತನ್ನ ರುಂಡಮಾಲೆಯಲ್ಲಿ ಸೇರಿಸಲಿ. ನಿನಗೆ ಈಶ್ವರನಲ್ಲಿ ಭಕ್ತಿ ಇಲ್ಲವೇ? ಶಿವನು ನಿನಗೆ ಪಾಶುಪತಾಸ್ತ್ರ ಕೊಡಲಿಲ್ಲವೆ? ಅಂತಹ ನಿಜಸ್ವಾಮಿಯನ್ನು ಮರೆಯುವರೆ? ಹೋಗಲಿ. ಅದೆಲ್ಲ ನಮಗೇಕೆ? ನಮ್ಮ ಜೊತೆಗೆ ಕಾದುವೆಯೋ? ಕುದುರೆಯನ್ನು ಬಿಟ್ಟು ಹೋಗುವೆಯೋ?”

ಅರ್ಜುನನ ಸಾವು

ಅರ್ಜುನ ಮಾತನಾಡದೆ ಕಣ್ಣು ಕೆಂಪಗೆ ಮಾಡಿ ಬಭ್ರುವಾಹನನ ಸರ್ವಾಂಗಗಳಲ್ಲಿ ಬಾಣಗಳನ್ನು ಬಿಟ್ಟ. ಅವುಗಳನ್ನು ಕತ್ತರಿಸುತ್ತ ಬಭ್ರುವಾಹನನು ಅರ್ಜುನನಿಗೆ,  “ವೃಷಕೇತುವು ನಿನ್ನ ವೈರಿಯ ಮಗ. ಏಕೆ ದುಃಖಿಸುವ ನಾಟಕ ಮಾಡುವೆ” ಎಂದು ಮೂದಲಿಸಿದನು. ಮತ್ತೆ, “ಕರ್ಣ, ಭೀಷ್ಮ,, ದ್ರೋಣರನ್ನು ನೀನು ಮೋಸ ಮಾಡಿ ಗೆದ್ದೆ. ಅದನ್ನು ತಿಳಿಯದವರು ನಿನ್ನ ವಿಜಯ ಬಹುದೊಡ್ಡ ವಿಷಯವೆಂದು ಹೇಳುತ್ತಾರೆ” ಎಂದನು.

ಅರ್ಜುನನ ಶೌರ್ಯವು ಬಭ್ರುವಾಹನನ ಮುಂದೆ ಕುಂಠಿತವಾಯಿತು. ಅರ್ಜುನನ ರಥವು ಮೇಲೆ ಹಾರಿತು. ಕುದುರೆಗಳು ರಕ್ತ ಕಾರಿದವು. ಸಾರಥಿಯು ಸತ್ತುಬಿದ್ದನು. ಧ್ವಜದ ಮೇಲಿನ ಹನುಮಂತನು ಚೀರಿದನು. ಬಭ್ರುವಾಹನನು ಪಾರ್ಥನ ಕವಚವನ್ನು ಸೀಳಿದನು. ಇವನ ಬಾಣಗಳಿಂದ ಪಾರ್ಥ ಕಂಪಿಸಿದ.

ಕೊನೆಗೆ, “ಶ್ರೀಕೃಷ್ಣನ ಸಹಾಯವಿಲ್ಲದೆ ನೀನು ಯಾರನ್ನಾದರೂ ಗೆದ್ದಿರುವೆಯಾ?” ಎಂದು ಪ್ರಶ್ನಿಸುತ್ತ ಬಭ್ರುವಾಹನನು ಒಂದು ಅತಿ ತೀಕ್ಷ್ಣವಾದ ಚಂದ್ರಾಕೃತಿಯ ಬಾಣವನ್ನು ಬಿಟ್ಟನು. ಅದು ಭಯಂಕರ ತೇಜಸ್ಸಿನಿಂದ ಹೋಗಿ ಅರ್ಜುನನ ಶಿರವನ್ನು ಕತ್ತರಿಸಿ ಆಕಾಶಕ್ಕೆ ಹಾರಿತು. ಆ ಶಿರವು “ಕೇಶವ, ಕೃಷ್ಣ” ಎನ್ನುತ್ತ ವೃಷಕೇತುವಿನ ಶಿರದ ಹತ್ತಿರ ಹೋಗಿ ಬಿದ್ದಿತು. ಅರ್ಜುನನ ಮುಂಡವು ವೃಷಕೇತುವಿನ ಶರೀರದ ಹತ್ತಿರ ಹೋಗಿ ಅದನ್ನು ಅಪ್ಪಿಕೊಂಡಿತು 

ಅರ್ಜುನ ಬಭ್ರುವಾಹನನನ್ನು ಅಪ್ಪಿಕೊಂಡ.

 ‘ನಮ್ಮ ತಲೆಗಳನ್ನು ಕತ್ತರಿಸು’

 

ಬಭ್ರುವಾಹನನು ವಿಜಯದ ಉಬ್ಬಿನಿಂದ ಬೊಬ್ಬಿರಿದನು. ಪಾಂಡವ ಸೇನೆಯಲ್ಲಿ ಹಾಹಾಕಾರವು ಎದ್ದಿತು. ಯಾರೂ ಕಲ್ಪನೆ ಕೂಡ ಮಾಡದ ಘಟನೆಯು ಆಗಿಹೋಗಿತ್ತು.

ವಿಜಯೀ ಬಭ್ರುವಾಹನನು ಮಣಿಪುರಕ್ಕೆ ಸಕಲ ಸಂಭ್ರಮದಿಂದ ಹಿಂತಿರುಗಿದನು. ಪುರಜನರು ತಮ್ಮ ಮನೆಗಳನ್ನು ತೆಳಿರು ತೋರಣಗಳಿಂದ ಅಲಂಕರಿಸಿದ್ದರು. ಪುರದ್ವಾರದಲ್ಲಿ ಸುವಾಸಿನಿಯರು ಆರತಿಗಳನ್ನೆತ್ತಿದರು. ಗುರುಹಿರಿಯರು ಆಶೀರ್ವದಿಸಿದರು. ಮಂಗಳ ವಾದ್ಯಗಳೊಡನೆ ಬಭ್ರುವಾಹನನು ಅರಮನೆಗೆ ಬಂದು ಅಲ್ಲಿಯ ಆಸ್ಥಾನದಲ್ಲಿ ಕುಳಿತನು.

ಆಗ ಚಿತ್ರಾಂಗದೆಯೂ ಉಲೂಪಿಯೂ ಆಸ್ಥಾನಕ್ಕೆ ಬಂದರು. ಚಿತ್ರಾಂಗದೆ ಮಗನಿಗೆ ಬಹು ಕೋಪದ ಮಾತುಗಳನ್ನಾಡಿದಳು. “ತಂದೆಯನ್ನು ಕೊಂದು ನನಗೆ ಮುಖವನ್ನು ಹೇಗೆ ತೋರಿಸುವೆ?” ಎಂದು ಕೇಳಿದಳು.

ಬಭ್ರುವಾಹನನು, “ಯುದ್ಧದಲ್ಲಿ ನನಗೆ ಅಪಜಯವಾಗಿಲ್ಲ. ಈ ರೀತಿ ನನ್ನ ಮೇಲೆ ಏಕೆ ಇಷ್ಟು ಕೋಪ?” ನನ್ನನ್ನೂ ನಿನ್ನನ್ನೂ ಅರ್ಜುನನು ಅತಿ ಹೀನವಾಗಿ ಜರಿದ ಕಾರಣ ಯುದ್ಧ ಮಾಡಬೇಕಾಯಿತು.

“ನಾನು ವಿನಯದಿಂದ ಅವನ ಬಳಿ ಹೋದಾಗ ಹೇಗೆ ನಡೆದುಕೊಂಡ, ಮಾತನಾಡಿದ, ನಿನಗೆ ತಿಳಿಯದೆ?” ಎಂದು ಕೇಳಿದ.

“ತಂದೆಯನ್ನು ಕೊಂದವನೇ, ನನ್ನ ಮತ್ತು ಉಲೂಪಿಯ ತಲೆಗಳನ್ನು ಕತ್ತರಿಸಿಹಾಕು. ಇಬ್ಬರು ತಾಯಿಯರನ್ನು ಕೊಲ್ಲುವುದು ನಿನಗೆ ಭೂಷಣ” ಎಂದಳು ಚಿತ್ರಾಂಗದೆ.

ಬಭ್ರುವಾಹನನಿಗೆ ಬಹು ಸಂಕಟವಾಯಿತು. ‘ನೀನು ನನ್ನ ಮಗನಲ್ಲ ಎಂದು ಅರ್ಜುನನು ಹೀಯಾಳಿಸಿ ಮಾತನಾಡಿದುದಕ್ಕಾಗಿ ಪ್ರತಿಜ್ಞೆ ಮಾಡಬೇಕಾಯಿತು, ಅರ್ಜುನನನ್ನು ಕೊಲ್ಲಬೇಕಾಯಿತು. ಈಗ ತಾಯಿಯೂ ಹೀಗೆ ದೂಷಿಸಿದ ಮೇಲೆ ನಾನು ಇದ್ದು ಏನು ಫಲ? ಪಿತೃವಧೆಗಾಗಿ ಅಗ್ನಿಪ್ರವೇಶ ಮಾಡಿ ಈ ದೇಹವನ್ನು ಬಿಡುವೆನು. ತಂದೆಯನ್ನು ಕೊಂದು ಬದುಕಿರುವನೆಂದು ಜನರು ಆಡಿಕೊಳ್ಳಲು ಬಿಡುವುದಿಲ್ಲ’ ಎಂದು ಯೋಚಿಸಿ ಅಗ್ನಿಪ್ರವೇಶಕ್ಕಾಗಿ ಶ್ರೀಗಂಧದ ಕಟ್ಟಿಗೆಗಳನ್ನು ತರಿಸಿ ಚಿತೆಯೊ ವ್ಯವಸ್ಥೆ ಮಾಡಿದನು.

ಸಂಜೀವಕ ಮಣಿ

ಇದನ್ನು ನೋಡಿ ಉಲೂಪಿ, ಚಿತ್ರಾಂಗದೆಯರಿಗೆ ಕಳವಳವಾಯಿತು. ಅವರು ಮಗನನ್ನು ತಡೆದು, “ಅಗ್ನಿ ಪ್ರವೇಶದ ವಿಚಾರ ಬಿಡು. ಶ್ರೀಕೃಷ್ಣನು ಅರ್ಜುನನ ಆಪ್ತ ಸಖ. ಅವನು ಮಹಾ ಕೃಪಾಳು. ಅವನು ಅರ್ಜುನನ ಜೀವಕ್ಕೆ ಹೊಣೆ. ಅವನು ಬಂದರೆ ಏನಾದರೂ ಒಂದು ಉಪಾಯದಿಂದ ಅರ್ಜುನನನ್ನು ಬದುಕಿಸಬಹುದು. ಸುಮ್ಮನೆ ಅಗ್ನಿಪ್ರವೇಶ ಮಾಡಿದರೆ ಅರ್ಜುನನು ಬದುಕುವನೆ?” ಎಂದರು.

ಆಗ ನಾಗರಾಜಕುಮಾರಿಯಾದ ಉಲೂಪಿಗೆ ಒಂದು ವಿಚಾರವು ಹೊಳೆಯಿತು. ಬಭ್ರುವಾಹನನಿಗೆ ಅವಳು, “ಸತ್ತ ಅರ್ಜುನನನ್ನು ಮತ್ತೆ ಬದುಕಿಸುವ ಗುಟ್ಟು ನನಗೆ ಗೊತ್ತು, ಅದನ್ನು ಹೇಳುವೆನು. ಪಾತಾಳದಲ್ಲಿ ನಾಗರಾಜನಲ್ಲಿ ಮಹಾದೇವನು ಕೊಟ್ಟ ಸಂಜೀವಕ ಮಣಿ ಇದೆ. ಅದನ್ನು ತಂದರೆ ಅರ್ಜುನನನ್ನು ಬದುಕಿಸಬಹುದು. ಆದರೆ, ತರುವ ಬಲಶಾಲಿಯು ಮೂರು ಲೋಕದಲ್ಲಿ ಯಾರಾದರೂ ಇರುವುದು ನಾನು ಕಾಣೆ” ಎಂದಳು.

ಬಭ್ರುವಾಹನನಿಗೆ ಕಗ್ಗತ್ತಲೆಯಲ್ಲಿ ಆಶಾಕಿರಣವು ಕಂಡಿತು. ಚಿಕ್ಕಮ್ಮನ ಕಡೆಗೆ ತಿರುಗಿ, “ಸಂಜೀವಕ ಮಣಿಯನ್ನು ನಾನು ತರದಿದ್ದರೆ, ನನ್ನ ತಾಯಿಯು ನನ್ನನ್ನು ಹೆತ್ತು ಏನು ಫಲ? ಸತ್ತ ಅರ್ಜುನನನ್ನು ಬದುಕಿಸುವೆ. ಇಲ್ಲದಿದ್ದರೆ ನಾಗಲೋಕವನ್ನೇ ಸುಡುವೆ. ಈ ಸಾಹಸಕ್ಕಾಗಿ ನನ್ನ ಜನ್ಮವು ಸಾರ್ಥಕವಾದೀತು” ಎಂದನು.

ಉಲೂಪಿ, “ಮಗೂ, ಅದು ಅಷ್ಟು ಸರಳವಲ್ಲ. ವಿಷಜ್ವಾಲೆಯಿಂದ ಸುಟ್ಟುಹೋಗುವೆ. ಅದು ನಾಗರಾಜನ ಭಂಡಾರದ ಒಳಗಡೆ ಇದೆ. ಅದನ್ನು ಕಾಯಲು ಗುಳಿಕ, ವಾಸುಕಿ, ತಕ್ಷಕ, ಶಂಖ, ಪದ್ಮ, ಕರ್ಕೋಟಕ ಮೊದಲಾದ ಭಯಂಕರ ವಿಷಸರ್ಪಗಳಿವೆ. ಅವು ವಿಷಜ್ವಾಲೆಯನ್ನು ಬಿಡುತ್ತವೆ” ಎಂದಳು.

ಕಡೆಗೆ ಸಂಜೀವಕ ಮಣಿಯನ್ನು ತರಲು ಪುಂಡರೀಕನೆಂಬ ಮಂತ್ರಿಯನ್ನು ಕಳುಹಿಸಿದರು. ಆದರೆ ಮಣಿಯನ್ನು ಕೊಡಲು ನಗರು ಒಪ್ಪಲಿಲ್ಲ. ಬಭ್ರುವಾಹನನೇ ಹೋಗಿ ಯುದ್ಧ ಮಾಡಿ ಅವರನ್ನು ಸೋಲಿಸಬೇಕಾಯಿತು ಆಗ ಅವರು ಒಪ್ಪಿದರು.

ಶ್ರೀಕೃಷ್ಣ ಬಂದ

ಇತ್ತ ಕುಂತಿಗೆ ವಿಪರೀತ ಕೆಟ್ಟ ಕನಸುಗಳು ಬಿದ್ದವು. ಅರ್ಜುನನಿಗೆ ಕೆಡುಕಾಗಿದೆ ಎಂದು ಅವಳಿಗೆ ಆತಂಕವಾಯಿತು. ಅರ್ಜುನನನ್ನು ಹುಡುಕಿಕೊಂಡು ಶ್ರೀಕೃಷ್ಣ, ಭೀಮಸೇನ, ದೇವಕಿ, ಯಶೋದೆ, ಕುಂತಿ ಇವರು ಮಣಿಪುರಕ್ಕೆ ಬಂದರು. “ಮಹಾ ಪಾಪಿಯಾದ ನನ್ನನ್ನು ಸಂಹರಿಸಿರಿ” ಎಂದು ಬಭ್ರುವಾಹನನು ಅವರ ಪಾದಗಳ ಮೇಲೆ ಬಿದ್ದನು. ಉಲೂಪಿ, ಚಿತ್ರಾಂಗದೆಯರೂ ತಾವು ಅರ್ಜುನನ ಹೆಂಡತಿಯರೆಂದು ಹೇಳಿ ಅಳುತ್ತ ನಮಸ್ಕರಿಸಿದರು.

ಆಗ ನಾಗರಾಜನು ಸಂಜೀವಕ ಮಣಿಯನ್ನು ತಂದು ಕೃಷ್ಣನ ಕೈಯಲ್ಲಿ ಕೊಟ್ಟನು. ಆದರೆ ಅಲ್ಲಿ ಅರ್ಜುನನ ರುಂಡವೇ ಇರಲಿಲ್ಲ. ಧೃತರಾಷ್ಟ್ರನೆಂಬ ನಾಗನು ಕದ್ದಿದ್ದನು. ಶ್ರೀಕೃಷ್ಣನು ತನ್ನ ಸಂದರ್ಶನ ಚಕ್ರವನ್ನು ಕಳಿಸಿ ಆ ನಾಗನನ್ನು ಸಂಹರಿಸಿ ಅರ್ಜುನನ ಶಿರವನ್ನು ತರಿಸಿದನು.

ಆಮೇಲೆ ಕೃಷ್ಣನು ಅರ್ಜುನನ ಶಿರವನ್ನೂ ಮುಂಡವನ್ನೂ ಸರಿಯಾಗಿ ಜೋಡಿಸಿ ಸಂಜೀವಕ ಮಣಿಯನ್ನು ಎದೆಯ ಮೇಲಿಟ್ಟನು. ಮತ್ತೆ ಮಣಿಯನ್ನು ತಲೆಯಿಂದ ಪಾದದವರೆಗೆ ಸ್ಪರ್ಶ ಮಾಡಿದನು. ಅರ್ಜುನ ನಿದ್ರೆಯಿಂದ ಎದ್ದಂತೆ ಎದ್ದ. ಅದರಂತೆ ವೃಷಕೇತುವೂ ಎದ್ದನು. ಎಲ್ಲರೂ ಸಂತೋಷಭರಿತರಾದರು.

ಆದರೆ ಅರ್ಜುನನ ಮುಖದಲ್ಲಿ ವಿಷಾದವೇ ತುಂಬಿತ್ತು. ತನ್ನ ಸೋಲಿನ ಅಪಮಾನ ಅವನ ಮನಸ್ಸನ್ನು ಸುಡುತ್ತಿತ್ತು. ಆಗ ಕೃಷ್ಣನು ಅರ್ಜುನನಿಗೆ, “ಪಾರ್ಥ, ನಿನಗೆ ಗಂಗೆಯ ಶಾಪವಿತ್ತು. ಆದಕಾರಣ ನೀನು ಸೋಲಬೇಕಾಯಿತು. ಚಿಂತಿಸಬೇಡ, ಶಾಪ ಪರಿಹಾರವಾಯಿತು. ಏಳು” ಎಂದನು.

ಗಂಗೆಯ ಶಾಪ
ಕುಂತಿಯು, ‘ಅದೇನು ಕೃಷ್ಣಾ, ಗಂಗೆಯ ಶಾಪವೇನು?” ಎಂದು ಕೇಳಿದಳು.

ಕೃಷ್ಣ ವಿವರಿಸಿದ: “ನಮ್ಮ ಜೊತೆಗೆ ಬಂದಿರುವನಲ್ಲ, ನೀಲಧ್ವಜ? ಅವನ ರಾಜಧಾನಿ ಮಾಹಿಷ್ಮತೀ ನಗರ. ನಮ್ಮ ಯಜ್ಞದ ಕುದುರೆಯು ಮೊದಲು ಅವನ ರಾಜ್ಯದಲ್ಲಿ ಹೋಯಿತು. ಅವನ ಮಗ ಪ್ರವೀರನು ಕುದುರೆಯನ್ನು ಕಟ್ಟಿದ್ದನು. ನೀಲಧ್ವಜನಿಗೆ ಅಗ್ನಿಯು ಅಳಿಯನಾದುದರಿಂದ ಯುದ್ಧವು ಭಯಂಕರವೆನಿಸಿತು. ಅರ್ಜುನನು ಅಗ್ನಿಯನ್ನು ಪ್ರಾರ್ಥಿಸಿ ಅವನ ಆಶೀರ್ವಾದವನ್ನು ಪಡೆದನು. ಅಗ್ನಿಯ ಸಲಹೆಯಂತೆ ನೀಲಧ್ವಜನು ಯುದ್ಧವನ್ನು ನಿಲ್ಲಿಸಿ ಯಜ್ಞಾಶ್ವವನ್ನು ಬಿಟ್ಟುಬಿಟ್ಟನು. ಆದರೆ ಅವನ ಹೆಂಡತಿಯಾದ ಜ್ವಾಲೆಯು ಮತ್ತೆ ಗಂಡನನ್ನ ಹುರಿದುಂಬಿಸಿ ಯುದ್ಧಕ್ಕೆ ಕಳಿಸಿದಳು. ಯುದ್ಧದಲ್ಲಿ ಅರ್ಜುನನು ಅವಳ ಮಗನನ್ನು ಕೊಂದನು. ಆಗ ನೀಲಧ್ವಜನು ಜ್ವಾಲೆಯನ್ನು ಆಕ್ಷೇಪಿಸಿ, ಅರ್ಜುನನ ಕೂಡ ಸಂಧಿ ಮಾಡಿಕೊಂಡು ಕುದುರೆಯ ಜೊತೆಗೆ ಬಂದನು.”

“ಆದರೆ ಹಟಮಾರಿಯಾದ ಜ್ವಾಲೆಯು ತನ್ನ ತಮ್ಮನ ಮಗನಾದ ಉನ್ಮುಖನ ಮನೆಗೆ ಸಹಾಯ ಬೇಡಿ ಹೋದಳು. ಅವನು ಒಪ್ಪದೆ ಅವಳನ್ನು ತಿರುಗಿ ಕಳಿಸಿದನು. ಆಗ ಜ್ವಾಲೆಯು ಗಂಗಾತೀರಕ್ಕೆ ಬಂದು ಗಂಗೆಯನ್ನು ಪ್ರತ್ಯಕ್ಷ ಮಾಡಿಕೊಂಡು, ಗಂಗಾಪುತ್ರನಾದ ಭೀಷ್ಮನನ್ನು ಅರ್ಜುನನು ಮೋಸದಿಂದ ಶಿಖಂಡಿಯನ್ನು ಮುಂದೆ ನಿಲ್ಲಿಸಿ,ತಾನು ಬಾಣ ಬಿಟ್ಟು ಕೊಂದೆನೆಂದು ಹೇಳಿದಳು. ಆಗ ಗಂಗೆಯು ಸಿಟ್ಟಿನಿಂದ ‘ಅರ್ಜುನನು ತನ್ನ ಮಗನ ಕೈಯಿಂದಲೇ ಮರಣ ಹೊಂದಲಿ’ ಎಂದು ಶಾಪ ಕೊಟ್ಟಳು. ಇಷ್ಟಾದರೂ ಜ್ವಾಲೆಯ ಸೇಡು ತೀರಲಿಲ್ಲ. ಕಡೆಗೆ ಅವಳು ಅಗ್ನಿಪ್ರವೇಶ ಮಾಡಿ ಬಭ್ರುವಾಹನನ ಬತ್ತಳಿಕೆಯಲ್ಲಿ ಬಾಣವಾಗಿ ಸೇರಿಕೊಂಡಳು.”

“ಆ ಶಾಪದ ಕಾರಣ ಅರ್ಜುನನ ಬುದ್ಧಿಶಕ್ತಿಗೆ, ವಿಚಾರಶಕ್ತಿಗೆ, ಕರ್ತೃತ್ವಶಕ್ತಿಗೆ ಮಂತು ಬಡಿದಿತ್ತು. ಇಲ್ಲದಿದ್ದರೆ ಸಕಲೈಶ್ವರ್ಯವನ್ನು ತೆಗೆದುಕೊಂಡು ರಾಜ್ಯವನ್ನು ತಂದೆಗೆ ಅರ್ಪಿಸಲು ಬಂದ ಬಭ್ರುವಾಹನನಿಗೆ ಹೀನಾಯವಾಗಿ ಬೈಯುತ್ತಿದ್ದನೆ? ಇದೆಲ್ಲ ಆ ಶಾಪದ ಫಲ. ಈಗ ಶಾಪ ಬೈಯುತ್ತಿದ್ದನೆ? ಇದೆಲ್ಲ ಆ ಶಾಪದ ಫಲ. ಈಗ ಶಾಪ ವಿಮೋಚನೆಯಾಗಿದೆ. ಎಲ್ಲರೂ ಸಂತೋಷಪಡಿ’ ಎಂದನು. ಶ್ರೀಕೃಷ್ಣನ ಮುಖದಿಂದ ಶಾಪದ ವಿವರ ಕೇಳಿ ಎಲ್ಲರೂ ತೃಪ್ತಿಹೊಂದಿದರು.

ಅರ್ಜುನ ಎದ್ದುಬಂದು ಬಭ್ರುವಾಹನನನ್ನು ಅಪ್ಪಿಕೊಂಡ.ಕುಂತಿಯು ಉಲೂಪಿ, ಚಿತ್ರಾಂಗದೆಯರನ್ನು ಪ್ರೀತಿಯಿಮದ ಆದರಿಸಿದಳು.

ಸಕಲ ವೈಭವದಿಂದ ಎಲ್ಲರೂ ಮಣಿಪುರಕ್ಕೆ ಹೋದರು.

ಐದು ದಿನಗಳ ನಂತರ ಭೀಮಸೇನನ ಜೊತೆಗೆ ಕುಂತಿ, ಚಿತ್ರಾಂಗದೆ, ಉಲೂಪಿ, ದೇವಕಿ ಯಶೋದೆಯರನ್ನು ಹಸ್ತಿನಾವತಿಗೆ ಕಳಿಸಿದರು. ಬಭ್ರುವಾಹನನು ಯಜ್ಞಾಶ್ವದ ರಕ್ಷಣೆಗೆ ಅದರ ಜೊತೆಗೆ ಹೊರಟನು.