ಭಾಗವತರದರುವು ತ್ರಿವುಡೆ

ಅರಸ ಕೇಳೈ, ಬಭೃವಾಹನ  ವರ ಸುಬುದ್ಧಿ
ಪ್ರಧಾನರಿಂದಲಿ ॥ಧರೆಯ ಮೇಲಣ ರಾಜಕಾರ‌್ಯ
ಸ್ಥಿತಿಗಳಾಲಿಸುತಾ॥ ॥

ಇರುತ್ತಿರಲು, ಕೇಳಿತ್ತಾ ಹಸ್ತಿನಾ  ಪುರವ
ಪಾಲಿಪ ಧರ್ಮರಾಯರ ॥ಮೆರೆವ ಯಜ್ಞದ
ಕುದುರೆ ನಡೆದುದು  ಮೇದಿನಿಯ ಮೇಲೆ॥ ॥

ಅರಿ ನೃಪಾಲರು ಕಟ್ಟಾಲಾ ಹಯ, ಭರದೀ
ಬಿಡಿಸಿಕೊಳ್ಳಲೋಸುಗ ॥ಸುರಪನಂದನ ಸೇನೆ
ಸಹಿತಲೀ  ಕೂಡಿ ನಡೆಯುತಿರೇ॥ ॥

ತುರಗ ಕಟ್ಟಿದ ಭೂಮಿಪಾಲರ  ಧುರದಿ ಗೆ
ಲ್ಲುತ್ತಾಲಾಗ ಅರ್ಜುನ ॥ತಿರುಗುತಲಿ ಬಹು
ದೇಶ ನೋಡುತಾ  ಬರಲು ಸ್ತ್ರೀ ರಾಜ್ಯಾ॥ ॥

ಪೊಕ್ಕುದಾ ಹಯ  ಸಂಗರದಿ ನಸುನಕ್ಕು
ವನಿತಾಮಣಿಯ ವಿನುತದಿ ॥ದಕ್ಕದಂದದೀ ನೋ
ಡೇ ಭೀಷಣಾನೆನಿಪ ದಾನವನಾ ॥

ಸೊಕ್ಕೆ ಮುರಿದು ಸಮಸ್ತ  ವಾಹಿನಿ ಉಕ್ಕಿ
ವೀರಾವೇಶದಿಂದಲೀ ॥ಸೊಕ್ಕುತಲಿ ಕೃಷ್ಣಾದ್ರಿ
ವಾಸನ, ಸ್ಮರಿಸುತಾತ್ಮದಲೀ॥ ॥

ಭಾಗವತ: ಕೇಳಿದರೇನಯ್ಯ ಭಾಗವತರೇ ! ಮಣಿಪುರಾಧೀಶ್ವರನಾದ ಬಭೃವಾಹನನು, ಪ್ರಧಾನರೊಡನೆ ಸುಖಸಲ್ಲಾಪದಿಂದ ಇರಲಾಗಿ, ಇತ್ತ ಹಸ್ತಿನಾವತಿಯಲ್ಲಿ ಧರ್ಮರಾಯರು ವಧಾದೋಷವನ್ನು ಪರಿಹಾರ ಮಾಡಿಕೊಂಬೋ ನಿಮಿತ್ಯವಾಗಿ ಅಶ್ವಮೇಧ ಯಜ್ಞವನ್ನು, ನೇಮಿಸಿಕೊಂಡು ಕಂಕಣಬದ್ಧರಾಗಿ, ದ್ರೌಪದಿ ಸಮೇತವಾಗಿ ಕುಳಿತುಕೊಂಡು, ಯಜ್ಞದ ಕುದುರೆಯನ್ನು, ದೇಶ ಮಧ್ಯದಲ್ಲಿ ಬಿಟ್ಟರಂತೆ, ಆ ಕುದುರೆ ಸಂರಕ್ಷಣಾರ್ಥವಾಗಿ ಮಹಾವೀರನೆನಿಸಿಕೊಳ್ಳುವ ಅರ್ಜುನನು ಇನ್ನೂ ಕೆಲವು ಸೈನ್ಯವನ್ನು ತೆಗೆದುಕೊಂಡು, ಕುದುರೆ ಹಿಂದೆ ಇರಲಾಗಿ, ಕುದುರೆಯು ಭುವನವೆಲ್ಲಾ ವಿಹರಿಸುತ್ತಾ ಮಣಿಪುರವನ್ನು ಹೊಕ್ಕಿತಂತೈಯ್ಯಿ ಭಾಗವತರೇ.

ಕಂದ

ಮೆಲ್ಲಮೆಲ್ಲನೆ ಹಯವಂ ಪೋಗಿ  ಮಣಿ
ಪುರದ ಹೊರೆಯಲ್ಲಿ  ವಿಹರಿಸುತ್ತಿರಲು  ಬಭೃ
ವಾಹನನ  ಧರಾವಲ್ಲಭನ ಚರರು ಕಂಡು
ಕೌತುಕವಡೆದು, ತಮ್ಮೊಳ್ ತಾವಾಲೋಚಿಸಿದರೂ ॥

ಚರರು: ಯಲಾ ಸಾರಥೀ ! ಇದು ಏನು ಆಶ್ಚರ‌್ಯ ಕೌತುಕದ ಕುದುರೆ ಯಾವತ್ತು ಜನಗಳು ನೋಡುವ ಹಾಗೆ, ನಮ್ಮ ಮಣಿಪುರದ ಮಧ್ಯದಲ್ಲಿ ವಿಹರಿಸುತ್ತಾ ಇದೆಯಲೈ ಸಾರಥೀ ! ನೀನು ಆನೆ ಮುಖದ ಬಾಗಿಲಲ್ಲಿ ಪ್ರಥಮ ಕಾವಲುಗಾರನಾಗಿದ್ದು ಇದು ನಿನಗೆ ತಿಳಿಯಲಿಲ್ಲವೇ ಭಲಾ ! ನಮ್ಮ ರಾಜರು, ನಿನಗೆ ಏನು ಸಂಬಳ ಕೊಟ್ಟು ಯೇನು ಕೆಲಸದ ಮೇಲೆ, ಇಟ್ಟು ಇದ್ದಾರೆ ಹೇಳುವಂಥವನಾಗು, ಭಲಾ ! ಈಗ ರಾಜರ ಆಜ್ಞೆಯನ್ನು ಮೀರಿದಂತಾಯಿತಲ್ಲಾ. ರಾಜರಿಂದ ನಿನಗೆ ಬಹಳ ಶಿಕ್ಷೆಯಾದೀತು ದ್ವಾರದಲ್ಲಿ ಕಾವಲು ನಿಂತ ಬಳಿಕ, ಹೋದದ್ದೂ ಬಂದದ್ದೂ ನೋಡಿ ನಮಗೆ ವರದಿಯನ್ನು ಹೇಳಬೇಕೋ ಚಾರ.

ದರುವು

ಯತ್ತಣ ಕುದುರೆ ಇದೂ  ಎಲ್ಲಿಂದಲಿ ಬಂತೂ ॥
ಪೃಥ್ವಿಯೊಳಗೆ ಧಾವಾ  ಪುಣ್ಯಾಪುರುಷರದೊ     ॥

ಯಜ್ಞದ ಕುದುರೆ ಇದೂ, ನೆತ್ತಿಲಿ ಹೊಳೆಯತಲಿದೆ ಬಿರುದು
ಆಜ್ಞೆಯು ಮಾಡಿಹುದೂ  ಇದು ಪಿಡಿಯುತಲೇನಹುದೂ ॥

ಚರರು: ಎಲೈ ಸಾರಥೀ ! ಈಚೆಗೆ ಬಾ  ಚೆನ್ನಾಗಿ ನೋಡು. ಯಲಾ ಸಾರಥೀ. ಇಂಥಾ ಕುದುರೆ ನಮ್ಮ ಪಟ್ಟಣದಲ್ಲಿತ್ತೆ. ಇದು ಎಲ್ಲಿಂದ ಬಂತು. ಕುದುರೆ ವಿನಹ ಮತ್ತು ಧಾರಾದರೂ ಬರುತ್ತಾರೋ ನೋಡು ಈ ರಾಜರ ಭಯವು ನಿನಗೆ ಸ್ವಲ್ಪವಾದರೂ ಇಲ್ಲಾ. ನಮ್ಮ ರಾಜರ ಬಳಿಗೆ ಬಾರೋ ಹೋಗೋಣ, ಇಲ್ಲವಾಯಿತೆ, ಈ ಧಾತ್ರಿಯಲ್ಲಿ ಧಾವ ರಾಜರದೊ ಹೇಳುವಂಥವನಾಗೋ ಚಾರ.

ದರುವು

ಬೆಂಗಾವಲು ಇಲ್ಲಾ  ಬಿಡಬಾರದು ಇದನೂ
ಹ್ಯಾಂಗಾದರೂ ಹಿಡಿದೂ, ಬೇಗಾ ವಡೆಯನಿಗೇಳುವುದೂ ॥ ॥

ಚರರು: ಯಲಾ ಸಾರಥೀ ! ಈ ಕುದುರೆ ಸಾಮಾನ್ಯವಾಗಿ ಕಾಣುವುದಿಲ್ಲಾ, ಧಾರೊ ದೊಡ್ಡ ರಾಜರ ಯಜ್ಞದ ಕುದುರೆಯಾಗಿ ಕಾಣುತ್ತಾ ಇದೆ. ಇದೂ ಅಲ್ಲದೇ ಇದರ ಪಣೆಯಲ್ಲಿ ಬಂಗಾರದ ಪತ್ರದಲ್ಲಿ, ತಮ್ಮ ಪ್ರತಾಪವನ್ನು ಬರೆದು ಕಟ್ಟಿದ ಹಾಗೆ ಕಾಣುತ್ತಾ ಇದೆ. ತೀವ್ರದಿಂದ ಹಿಡಿಯಬೇಕೋ ಚಾರ ಸರಸಗುಣ ವಿಚಾರ.

ದರುವು

ತೋರಲಿ ಬೇಕೆಂದೂ  ತುರುಗಾವಂ ಪಿಡಿದೂ
ಸಾರಿದರೈ ಚರರೂ  ಶೀಘ್ರದಿ ನೃಪನೆಡೆಗೆ ॥

ಚರರು: ಯಲಾ ಸಾರಥೀ ! ಕುದುರೆ ಒಂದೇ ಬಂದು ಪಟ್ಟಣಕ್ಕೆ ಹೊಕ್ಕು ಇದೆ. ಹಿಂದೆ ಧಾರಾದರೂ ಬರುತ್ತಾ ಇದ್ದಾರೋ  ಹ್ಯಾಗೋ ತಿಳಿಯದು. ನಾವು ಕಂಡ ಬಳಿಕ ಬಿಡಬಾರದು. ಆದಕಾರಣ ನಮ್ಮ ದೊರೆಯಾದ  ಬಭೃವಾಹನ ಭೂಪಾಲರ ಸಮ್ಮುಖಕ್ಕೆ ತೆಗೆದುಕೊಂಡು ಹೋಗಬೇಕು. ಬಿಡಬಾರದು, ಬಿಟ್ಟರೆ ನಮಗೆ ಬಹಳ ಶಿಕ್ಷೆಯಾದೀತು ಬಹಳ ಹುಷಾರ್. ಕೋಟೆ ಗೋಡೆ ಹಾರಿ ಹೋದೀತು. ಭದ್ರವಾಗಿ ಕಟ್ಟುವಂಥವನಾಗು. ಜಾಗ್ರತೆಯಿಂದ ಹಿಡಿ, ರಾಜರ ಬಳಿಗೆ ನಡೀ.

ಕಂದ

ಶ್ರೀಮನ್ ಮಹಾರಾಜ  ರಾಜಕುಲ ಮಾ
ರ್ತಾಂಡ  ಪ್ರಚಂಡ  ಭೂಮಿರಾಯರ
ಗಂಡ  ಚಂಡ ಪ್ರಚಂಡ  ಸ್ವಾಮಿ ಮಣಿ
ಪುರದರಸೇ  ಭೃತ್ಯನ ಬಿನ್ನಪವ
ಚಿತ್ತೈಸು ಜೀಯಾ ॥

ಚರರು: ಶ್ರೀಮನ್ ಮಹಾರಾಜಾಧಿರಾಜ, ಮಾರ್ತಾಂಡ ತೇಜೋನಿಧಿಯಾದ, ಬಭೃವಾಹನ ಭೂಪತಿಯೇ, ಭೃತ್ಯನ ಬಿನ್ನಪವನ್ನು ಲಾಲಿಸಬೇಕೈಯ್ಯ ಸ್ವಾಮೀ-ಭಕ್ತಜನ ಪ್ರೇಮೀ ॥

ಬಭೃವಾಹನ: ಅಯ್ಯ ಸಚಿವ ಶಿಖಾಮಣಿ, ಬಾಗಿಲಲ್ಲಿ ಚರರ ಗದ್ದಲ ಬಹಳವಾಗಿದೆ  ಅದು ಏನೋ ಚೆನ್ನಾಗಿ ವಿಚಾರಿಸುವಂಥವನಾಗೈಯ್ಯ ಮಂತ್ರೀ ॥

ಮಂತ್ರಿ: ಯಲಾ ಸಾರಥಿ ! ಇದು ಏನು ಬಹಳ ಗದ್ದಲ ಮಾಡುವಂಥಾದ್ದು, ಯಾತಕ್ಕೆ ಸ್ವಲ್ಪವಾದರೂ ನಿನಗೆ ರಾಜರ ಭಯವಿಲ್ಲದೇ ಹೋಯಿತೇ, ಮೊದಲ ದ್ವಾರದಲ್ಲಿ, ನಿನ್ನ ಕಾವಲು ಇಟ್ಟು ಇದ್ದೆನಲ್ಲಾ, ಇಲ್ಲಿನ ತನಕಾ ಯಾರ ಅಪ್ಪಣೆ ಮೇರೆಗೆ ಬಂದೆ, ಹೇಳುವಂಥವನಾಗೋ ಸಾರಥೀ.

ದರುವು

ನೋಡೈ ರಾಜಾ  ಬೇಗನೇ ನೀ ನೋಡೈ ರಾಜ    ॥
ಯತ್ತಣ ಕುದುರೆ ಇದು ಬಹು ಚಿತ್ತರ

ಮಾಗಿಹುದೂ  ಮುತ್ತು ರತ್ನಗಳು, ಮೊತ್ತದಿ
ಹೊಳೆಯುತಲಿಹುದೂ  ನೆತ್ತಿಲಿ ಚಿನ್ನದ
ಪತ್ರಿಕೆ ಇರುವುದೂ ॥ನೋಡೈ ರಾಜಾ ॥

ಚರರು: ಹೇ ಸ್ವಾಮೀ ! ಮಣಿಪುರಾಧೀಶ್ವರಾ, ಮಹಾ ಪ್ರಭೂ, ಸೇವಕನ ಮೇಲೆ ಕೃಪೆ ಇಟ್ಟು ಭೃತ್ಯನ ಬಿನ್ನಹವನ್ನು ಲಾಲಿಸಬೇಕಯ್ಯ, ಜೀಯಾ ತಮ್ಮ ಪಟ್ಟಣದಲ್ಲಿ ವಿಚಿತ್ರತರಮಾದಂಥ ಕುದುರೆಯು ಬಂದು ವಿಹರಿಸುತ್ತಾ ಇದೆ. ಯತ್ತಣದೆಂಬುವಂಥದ್ದು ನಮಗೆ ತಿಳಿಯದು, ಯಾವತ್ತು ಮುತ್ತು ರತ್ನಗಳು ವಜ್ರ, ವೈಡೂರ‌್ಯಮಾಲೆಗಳಿಂದ ದೇದೀಪ್ಯವಾಗಿ ಹೊಳೆಯುತ್ತಾ ಇದೆಯಯ್ಯ-ರಾಜ. ಈ ಕುದುರೆ ಪಣೆಯಲ್ಲಿ, ಬಂಗಾರ ಪತ್ರವನ್ನು ಕಟ್ಟಿ ಇದೆ. ಆ ಪತ್ರದಲ್ಲಿ, ಏನೋ ಲಿಖಿತವನ್ನು ಬರೆದ ಹಾಗೆ, ಕಾಣುತ್ತಾ ಇದೆಯೈಯ್ಯ ರಾಜ – ಮಾರ್ತಾಂಡತೇಜ ॥

ದರುವು

ಗಂಧಾಕ್ಷತೆ ಇಂದಾ, ಪೂಜ್ಯತೆ ಹೊಂದಿ
ದೆ ಬಹು  ಚೆಂದಾ ॥ ಇಲ್ಲಿಗೆ ಯಜ್ಞದ, ಸುಂದರ
ವಾಜಿಯು  ಬಂದಿದೆ, ಭೂವರ ವೃಂದ ಶಿಖಾ
ಮಣಿ ನೋಡೈ ರಾಜಾ ॥

ಮಾತು: ಹೇ ಮಣಿಪುರಾಧೀಶ್ವರನಾದ ಬಭೃವಾಹನ ರಾಜರೇ ಕೇಳಿ, ಗಂಧಾಕ್ಷತೆಗಳಿಂದ, ಬಹುಪೂಜೆಗಳಿಂದ ವಪ್ಪಿದ ಹಾಗೆ ಕಾಣುತ್ತಾ ಇದೆ. ಹೇ ರಾಜ ! ಇದು ಸಾಮಾನ್ಯವಾದ ಕುದುರೆಯಾಗಿ ಕಾಣುವುದಿಲ್ಲಾ, ಏನೋ ವಂದು ಪರಿಯಾಯವಾಗಿ ತೋರುವುದಲ್ಲದೇ ಮತ್ತೇನು ತೋರುವುದಿಲ್ಲ ವೈಯ್ಯ ರಾಜ-ರವಿ ಸಮ ತೇಜ ॥

ದರುವು

ಧರೆಯೊಳಗಿದು ಧಾವಾ  ದೇಶದಾ ದೊರೆಗಳ
ದೆಂಬುವುದಾ ॥ಅರಿಯೆವು, ಮಣಿಪುರದರಸೆ
ವಿಚಾರಿಸು  ಭರದಿ ಕೃಷ್ಣಗಿರಿ ವರದನೇ
ಬಲ್ಲನೋ ನೋಡೈ ರಾಜ॥ ॥

ಚರರು: ಸ್ವಾಮಿ, ಬಭೃವಾಹನ ಭೂಪ, ಈ ಧಾತ್ರಿಯಲ್ಲಿ ಧಾವ ರಾಜರದೆಂಬುವಂಥದ್ದು ನಮಗೆ ತೋಚದು, ಸ್ವಾಮಿ ! ಇದರ ವಿವರವನ್ನು, ಶ್ರೀ ಕೃಷ್ಣಾದ್ರಿವಾಸನು ಬಲ್ಲನೇ ಹೊರ್ತು, ನಮಗೆ ತಿಳಿಯದೈಯ್ಯ, ರಾಜ ! ನೀವು ಚೆನ್ನಾಗಿ ನೋಡಿ ಪರೀಕ್ಷೆಯನ್ನು ಮಾಡಬಹುದೈಯ್ಯ ರಾಜ.

ದರುವು

ನೋಡೈಯ್ಯ ಸಚಿವ ಶಿಖಾಮಣಿ, ಆವ
ನಾಡಿನ ಕುದುರೆ ಸದ್ಗುಣಮಣೀ॥ ॥

ಗಾಡಾ ಕಟ್ಟಿಸು ವಾಜಿ  ನೋಡಿ ಪತ್ರವನೋದೂ
ಕೂಡಿದಾ  ಸಭೆಯೆಲ್ಲಾ  ಕೇಳಲಿ ನೀನೀಗಾ

ಬಭೃವಾಹನ: ಹೇ ಮಂತ್ರಿ ಶಿಖಾಮಣಿ, ಈ ಕುದುರೆಯನ್ನು ನೋಡಿದಿರಾ, ಬಹಳ ವಿಚಿತ್ರವಾಗಿ ಕಾಣುತ್ತಾ ಇದೆ. ಈ ಕುದುರೆ ಯಾವ ನಾಡಿನ, ರಾಜರದೆಂಬುವಂಥದ್ದು ತಿಳಿಯದು. ಮೇಲಾಗಿ ಅಶ್ವದ ಪಣಿಯಲ್ಲಿ  ಕನಕದ ಪತ್ರವನ್ನು ಬಂಧಿಸಿ ಇದ್ದ ಹಾಗೆ ಕಾಣುತ್ತಾ ಇದೆ. ಅದನ್ನು ಬಿಚ್ಚಿ ಹೇಳಬೇಕಲ್ಲದೆ ಈ ಸಮಸ್ತ ಪ್ರಜೆಗಳು ವಪ್ಪುವಂತೆ ಶೃತಪಡಿಸಬೇಕಲ್ಲದೆ ಈ ಕುದುರೆಯನ್ನು ದಿವ್ಯ ಸ್ಥಳದಲ್ಲಿ ಚೆನ್ನಾಗಿ ಪರಾಂಬರಿಕೆ ಇರಬೇಕಲ್ಲದೆ ! ತಾತ್ಸಾರ ಮಾಡದ ಹಾಗೆ ಚರರಿಗೆ ಹೇಳಿ, ಬಂದೋಬಸ್ತಾಗಿ ಕಟ್ಟಿಸುವುದಲ್ಲದೇ ಅತಿ ಜಾಗ್ರತೆಯಿಂದ ಪತ್ರವನ್ನು ಓದಿಸಿ ಶೃತಪಡಿಸಬೇಕೈಯ್ಯ ಪ್ರಧಾನಿ ನೀತಿಜ್ಞಾನಿ.

ದರುವು

ಲಾಲಿಸು ರಾಜೇಂದ್ರಾ ನೀನೂ, ಬಿಚ್ಚಿ
ಹೇಳುವುದಕ್ಕಭಯವನ್ನು
ಪಾಲಿಪುದೆನಗೆ ಈ ಪತ್ರಾ ಓದುವೆ ಈಗಾ
ಆಲಸ್ಯವ್ಯಾತಕ್ಕೆ ಅಭಯವಿತ್ತರೆ ಬೇಗಾ ॥

ಮಂತ್ರಿ: ಹೇ ರಾಜ, ಅಸಾಧ್ಯವಾದ ಪತ್ರವನ್ನು ಬಿಚ್ಚಿ ಓದುತ್ತಾ ಇದ್ದೇನೆ, ಅದರಲ್ಲಿ ಯೇನು ಇದೆಯೆಂಬುವಂಥದ್ದು, ಮನಕ್ಕೆ ಗೋಚರಿಸದೆ ಸೇವಕಗೆ ಅಭಯವನ್ನು ಪಾಲಿಸಿದ್ದೇ ಆದರೆ ಓದುತ್ತಾ ಇದ್ದೇನೆ. ಅಭಯವನ್ನು ಪಾಲಿಸಬೇಕಯ್ಯ  ರಾಜ ॥

ದರುವು

ಬಿಚ್ಚಿದ ಧರ್ಮನಂದನನಾ ಕೀರ್ತಿ
ಹೆಚ್ಚಿದಾ ಪಾರ್ಥ ಪ್ರಧಾನೀ ॥
ಆಶ್ಚರ‌್ಯ ತಮ್ಮೋಳ್ ತಾಳಿ ನೋಡುತಲಿರ್ದಾ
ಅಚ್ಯುತಾ ಬಲ್ಲನೆಂದಭಯವಿತ್ತರೆ ಬೇಗಾ ॥
ಲಾಲಿಸು ರಾಜೇಂದ್ರಾ ॥

ಮಂತ್ರಿ: ಹೇ ರಾಜ ಬಲವಂತರಾಜರೆಂಬುವುದು ತೋಚದು, ಬಲಹೀನರೆಂಬುವಂಥದ್ದು ತೋಚದು. ಆದಕಾರಣ, ಸೇವಕಗೆ ಅಭಯವನ್ನು ಪಾಲಿಸಬೇಕಯ್ಯ ರಾಜ ॥

ಬಭೃವಾಹನ: ಅಯ್ಯ ಮಂತ್ರಿ ನೀನು ಯಾತಕ್ಕೆ ಅನುಮಾನಿಸುತ್ತಾ ಇದ್ದಿ  ಆದರೆ ಈ ಪತ್ರವನ್ನು ಓದುವುದಕ್ಕೆ ಅಭಯವನ್ನು ಕೇಳುವುದೇತಕ್ಕೆ ಆ ವಿಚಾರವೇನೋ ಶೀಘ್ರವಾಗಿ ಓದುವವನಾಗೈಯ್ಯ ಪ್ರಧಾನೀ ॥

ಮಂತ್ರಿ: ಹೇ ಮಣಿಪುರಾಧೀಶ್ವರನೇ ಕೇಳು – “ಅರಿರಾಜ ಗಜ ಮಸ್ತಕಾಂಕುಶಂ ಶುಭಂ’ ಅಂದ ಹಾಗೆ, ಹೇ ಸ್ವಾಮೀ ತಮ್ಮಿಂದ ಅಭಯವನ್ನು ಕೈಗೊಳ್ಳದೇ ಓದಿದರೆ, ಗಜಗಳ ಮುಂದೆ ಅಜಗಳನ್ನು ಶ್ಲಾಘನೆ ಮಾಡಿದ ಹಾಗೇ ಆದೀತು ಎಂದು. ಭಯಗ್ರಸ್ತನಾಗಿ ಅಪ್ಪಣೆಯನ್ನು ಕೇಳುತ್ತಾ ಇದ್ದೇನೆ. ಅಭಯವನ್ನು ಪಾಲಿಸಬೇಕಯ್ಯ ಸ್ವಾಮೀ.

ಬಭೃವಾಹನ: ಅಯ್ಯ ಪ್ರಧಾನಿ ! ನೀನು ಯಾತಕ್ಕೆ ಅನುಮಾನಿಸುತ್ತಾ ಇದ್ದಿ. ಜಾಗ್ರತೆ ಇಂದ ಪತ್ರವನ್ನು ಓದಿ ಶೃತಪಡಿಸಬೇಕೈಯ್ಯ ಪ್ರಧಾನಿ.

ಮಂತ್ರಿ: ಅದೇ ಪ್ರಕಾರ ಹೇಳುತ್ತಾ ಇದ್ದೇನಯ್ಯ ರಾಜ.

ಕಂದಮಧ್ಯಮಾವತಿ

ಶ್ರೀಮದಮರಾವತಿಗೆ ಸಮನೆನಿಪ ಗಜ
ಪುರದ ಸೀಮೆಯಂ, ಪಾಲಿಸುವಾ ಧರ್ಮರಾಯರ
ಯಜ್ಞದ ಕುದುರೆ ಇದು. ಕಟ್ಟಿಕೊಳ್ಳ
ಭೂ ಭುಜರು ಬಿಡಿಸಿಕೊಳ್ಳಲು ಬಹುದು.
ನಾವು ನೇಮದಿಂ. ಕಟ್ಟಿಹೆವು ದಳ ಸಹಿತ,
ಅರ್ಜುನನು. ಈ ಮಹೀ ಮಂಡಲದೊಳೆನುತಲೀ
ಲಿಖಿತ ಪತ್ರವಂ ತಾ ಮೋದದಿಂ
ಕೇಳಿ ಬಿಗಿಸಿ ವಾಜಿಯ ನುಡಿದನು ಪ್ರಧಾನಿಗಳಿಗೆ ॥

ಮಂತ್ರಿ: ಹೇ ರಾಜಾಧಿರಾಜನೇ ! ಒಂದು ವಿಜ್ಞಾಪನೆಯುಂಟು, ವಿಸ್ತರಿಸುತ್ತೇನೆ ಚಿತ್ತವಿಟ್ಟು ಕೇಳಬೇಕೈಯ್ಯ ಭೂಪ-ಧಾವ ಅಮರೇಂದ್ರನಿರುವಂಥ ಸ್ವರ್ಗಕ್ಕೆ ಸಮಾನವಾದಂಥ ಹಸ್ತಿನಾವತಿಯಂತೆ, ಆ ಸೀಮೆಯನ್ನು ಪಾಲನೆ ಮಾಡುವ ಪ್ರಭು ಧರ್ಮರಾಯರಂತೆ. ಆತನ ಯಜ್ಞದ ಕುದುರೆಯನ್ನು ಭುಜಬಲ ಪರಾಕ್ರಮವುಳ್ಳಂಥ ರಾಜರು ಈ ಭೂಮಿಯಲ್ಲಿ ಧಾರಾದರು ಇದ್ದರೆ ಕಟ್ಟಿಕೊಳ್ಳಬೇಕಂತೆ ಆ ಕುದುರೆಯನ್ನು ಕಟ್ಟಿದ ರಾಜರನ್ನು ಯುದ್ಧವೂಡಿ ಜಯಿಸಿ, ಬಿಡಿಸಿಕೊಂಡು ಹೋಗುವುದಕ್ಕೆ ಅರ್ಜುನನೆಂಬುವಂಥ ಮಹಾವೀರನನ್ನು, ಇನ್ನು ಕೆಲವು ಸೈನ್ಯವನ್ನು ಕಳುಹಿಸಿ ಇದ್ದಾರಂತೆ. ಇದ್ದ ಸಂಗತಿಯನ್ನು ಶ್ರುತಪಡಿಸಿ ಇದ್ದೇನೆ. ತಮ್ಮ ಆಜ್ಞೆ, ಯಾವ ಪ್ರಕಾರವಾಗುತ್ತೋ ಅದೇ ಪ್ರಕಾರವಾಗಿ ನಡೆಯಲು ಸಿದ್ಧವಾಗಿ ಇದ್ದೇನಯ್ಯ ರಾಜ ರವಿಸಮ ತೇಜ.

ಬಭೃವಾಹನ: ಮತ್ತೂ ಪೇಳುತ್ತೇನೆ ಕೇಳಯ್ಯ ಮಂತ್ರೀ.

ದರುವು

ಕುದುರೇ ಕಟ್ಟಿದೆವೂ  ನಾವು ಇಂದೂ
ಪರಮಂಡಲದವರ  ಕುದುರೇ ಕಟ್ಟಿದೆವೂ ನಾವು  ಇಂದೂ ॥

ಕುದುರೆ ಕಟ್ಟಿದೆವು  ಕದನಕೆ ನಾಳಿನ
ಉದಯಕೆ ವೀರರೂ  ಹೊರಡಬೇಕೆನುತಾ ॥

ಬಭೃವಾಹನ: ಅಯ್ಯ ಪ್ರಧಾನಿ ! ಇದು ಹಸ್ತಿನಾವತಿಯನ್ನು ಆಳುವಂಥ, ಧರ್ಮರಾಯನ ಯಜ್ಞದ ಕುದುರೆಯೇ ಭಲಾ ಭಲಾ ! ಈ ಕುದುರೆಯನ್ನು ಕಟ್ಟಿದರೆ ಯುದ್ಧವನ್ನು ಮಾಡಿ ಕುದುರೆಯನ್ನು ಬಿಡಿಸಿಕೊಂಡು ಹೋಗುವುದಕ್ಕೆ ಅರ್ಜುನನೆಂಬುವಂಥಾ ಪರಾಕ್ರಮಶಾಲಿ, ದಳ ಸಹಿತವಾಗಿ ಬಂದು ಇದ್ದಾನೆಂಬುದಾಗಿ, ಬರೆದು ಇದೆಯೇ ಈ ವಿವರವನ್ನು ನೋಡಿದರೇನಯ್ಯ, ಪ್ರಧಾನಿಗಳಿರಾ.

ದರುವು

ಗಜವಾಜಿಯು ರಥ  ಕೂಡಿಸು ಬೇಗನೇ
ಭುಜಬಲದಿಂದಲೀ  ವಿಜಯನ ಯಾಗದ ಕುದುರೇ ಕಟ್ಟಿ ॥

ಬಭೃವಾಹನ: ಹೇ ಪ್ರಧಾನಿ ! ನೀನು ತೀವ್ರದಿಂದ ನವರತ್ನ ಖಚಿತವಾದ ರಥಕ್ಕೆ ದಿವ್ಯವಾದಂಥ ಅಶ್ವಗಳನ್ನು, ಕಟ್ಟಿಸಿ ರಥ ಶೃಂಗಾರವನ್ನು, ಮಾಡಬೇಕೆಂದು ಚರರಿಗೆ ಹೇಳಬೇಕೈಯ್ಯ ಮಂತ್ರೀ ॥

ದರುವು

ವಿಸ್ತಾರದೀ ನೀ  ತುಂಬಿಸು ಭಂಡಿಲಿ
ಶಸ್ತ್ರಾಸ್ತ್ರಂಗಳ  ಸಚಿವ ಶಿಖಾಮಣೀ
ಕುದುರೇ ಕಟ್ಟಿ ॥

ಬಭೃವಾಹನ: ಹೇ ಮಂತ್ರೀ ! ಕ್ಷತ್ರಿಯ ವಂಶದಲ್ಲಿ ವೀರರಾದಂಥವರಿಗೆ ರಾಜ್ಯಭಾರ ಏನು ಇದ್ದಾಗ್ಯೂ, ಉತ್ಸಾಹವಾಗಿ ತೋರುವುದಿಲ್ಲ. ರಣೋತ್ಸಾಹವೇ ಉತ್ಸಾಹವಲ್ಲದೇ ಇತರ ಬಯಕೆಯನ್ನು ಬಯಸದಂತೆ, ಇರುವವನೇ ಕ್ಷತ್ರಿಯನು ಇದು ತಿಳಿದು ಇರುತ್ತದಲ್ಲಾ, ಇಂಥಾ ನುಡಿಗಳು ನಮ್ಮ ಕರ್ಣಕ್ಕೆ ಬಿದ್ದ ಬಳಿಕ ಸುಮ್ಮನೆ ಇರಲಾಗದು. ರಣರಂಗದಲ್ಲಿ, ಅರ್ಜುನನ ಸತ್ವವೆಂಬುವಂಥಾದ್ದು ಕಾಣಬೇಕಲ್ಲದೇ ಸುಮ್ಮನೆ ಇರಲಾಗದು, ಅಯ್ಯ ಪ್ರಧಾನಿ, ನಮ್ಮ ಮನಸ್ಸಿಗೆ ಬಹಳ ಉತ್ಸಾಹವಾಗಿ ತೋರುತ್ತಾ ಇದೆ. ನಮ್ಮ ಧನು ಶರಂಗಳಿಗೆ ತೃಪ್ತಿಯಾಗುವಂತೆ, ನಾಳಿನ ದಿನ ಉಣಪಡಿಸಬೇಕೈಯ್ಯ ಮಂತ್ರೀ.

ಇದೂ ಅಲ್ಲದೆ ಪರರಾಯರ ಕುದುರೆ ಕಟ್ಟಿಕೊಂಡ ಬಳಿಕ ನಾಳಿನ ಉದಯಕ್ಕೆ ಹೊರಡಬೇಕಲ್ಲದೇ, ತಾತ್ಸಾರ ಮಾಡಕೂಡದು. ರಥ, ಪದಾತಿ, ಚತುರಂಗಬಲ ಯಾವತ್ತು ಒಡಗೂಡಿಸುವ ಹಾಗೆ, ಮಸ್ತರಿಗೂ ಎಚ್ಚರಪಡಿಸಬೇಕಲ್ಲದೇ ಅನೇಕ ಬಂಡಿಗಳಲ್ಲಿ, ಶಸ್ತ್ರಾಸ್ತ್ರ, ಕಾರ್ಮುಕಂಗಳನ್ನು ಹೇರಿಸುವಂಥವನಾಗೈಯ್ಯ ಮಂತ್ರೀ.

ದರುವು

ನಾಳೆ ಪಾರ್ಥನೊಳು  ಕಾಳಗವೆನುತಲೀ
ಹೇಳು ಭಟಾಳಿಗೇ  ಎಚ್ಚರವಿರಲೀ ಕುದುರೆ ಕಟ್ಟಿ ॥

ಬಭೃವಾಹನ: ಅಯ್ಯ ಮಂತ್ರೀ ನಾಳಿನ ಉದಯಕ್ಕೆ ಅರ್ಜುನನೊಡನೆ ಯುದ್ಧಕ್ಕೆ ಹೋಗಬೇಕು. ಆದ ಕಾರಣ ಸಮಸ್ತ ಜನಗಳಿಗೂ ತಿಳಿಯಪಡಿಸಬೇಕೈಯ್ಯ ಪ್ರಧಾನೀ ॥

ದರುವು

ಸಂಗ್ರಾಮಕೆ ಭಯಗೊಂಡಡಲುವ  ಬಲಕೆ ;
ಭಂಗವಿಲ್ಲದೇ ನೀ  ಡಂಗುರ ಹೊಡಿಸೈ ॥ಕುದುರೆ ಕಟ್ಟಿ ॥

ಬಭೃವಾಹನ: ಹೇ ಮಂತ್ರೀ, ನಮ್ಮ ಪಟ್ಟಣದಲ್ಲಿ, ಪಟುಭಟಾಳಿಗಳು, ಸಂಗ್ರಾಮದಲ್ಲಿ ಭಯಗೊಂಡು ಓಡಿ ಹೋದಾರು. ನಮಗೆ ಬಹಳ ಅಪಮಾನ ಬಂದೀತು. ಈ ಮಾತು ಸರ‌್ವರಿಗೂ ಕೇಳುವ ಹಾಗೆ, ನಮ್ಮ ನಗರದಲ್ಲಿ ಡಂಗೂರವನ್ನು ಹೊಡಿಸುವಂಥವನಾಗೈಯ್ಯ ಪ್ರಧಾನಿ

ಮಂತ್ರಿ: ಅದೇ ಪ್ರಕಾರ ಮಾಡುತ್ತೇನೆ.

ದರುವು

ಕೃಷ್ಣಾ ಗಿರೀಶನಾ ಕೃಪೆ ಇಂದ ರಿಪುಗಳು
ನಷ್ಟವೂ, ಮಾಡದೇ, ನಿಲ್ವುದು ಕೀರ್ತಿ ॥ಕುದುರೇ ಕಟ್ಟಿ ॥

ಬಭೃವಾಹನ: ಹೇ ಪ್ರಧಾನಿ, ಗಿರೀಶನಾದಂಥ ಗಿರಿಜಾ ವಲ್ಲಭನ ಕೃಪೆ ಇಂದ, ವೈರಿಗಳನ್ನು ಕುಟ್ಟಿ ಕೋಲಾಹಲ ಮಾಡಿದರೆ ಈ ಧಾತ್ರಿಯಲ್ಲಿ ಕೀರ್ತಿಯನ್ನು ಹೊಂದುವಂಥದ್ದಾಗುತ್ತೆ. ಇಲ್ಲವಾದರೆ, ಅಪಕೀರ್ತಿಗೆ ಕಾರಣವಾದೀತು.  ಸಮಸ್ತ ದೇಶಾಧೀಶ್ವರರನ್ನು ಜಯಿಸಬೇಕಾದರೆ, ಅರ್ಜುನನೆಂಬು ವಂಥವನು ಸ್ವಲ್ಪ ಬಲವಂತನಾಗಿಯೇ ಇರಬಹುದು. ಅಬಲನಾದರೆ, ಕೀರ್ತಿ ಪತ್ರಿಕೆಯನ್ನು ಕುದುರೆ ಫಣೆಗೆ ಕಟ್ಟಿಸಿ. ಪೃಥ್ವಿಯ ಮೇಲೆ ಬಿಡಲಾರನೈಯ್ಯ. ಇದೂ ಅಲ್ಲದೇ, ನಮ್ಮ ಸೇನೆ ಯಾವತ್ತೂ ಸಿದ್ಧವಾಗಿಟ್ಟುಕೊಂಡಿರಬೇಕಯ್ಯ ಮಂತ್ರೀ.

ದರುವು

ಯುದ್ಧಕರ್ಜುನನೊಡನೆ, ಪೋಗಾಲೀಕನುವಾದ

ಸುದ್ಧಿ ಪುರವೆಲ್ಲಾ, ಪಸರಿಸಲು, ಪಸರಿಸಲೂ ॥

ಅರ್ಭುತವಿದು ರಾಜಾ  ಕಾರ‌್ಯಾ ಯಮ್ಮೊಡತಿಗೆ
ನಿರ್ಧರಿಸಿ ಪೇಳಬೇಕೆಂದೂ, ಪೇಳಬೇಕೆಂದೂ ॥

ಕುಪಿತದಿಂದಲಿ ಓರ್ವ, ಚಪಲಾಕ್ಷಿ ನಡೆತಂದು
ಕಪಟವಿಲ್ಲದೆ, ಚಿತ್ರಾಂಗದೆಗೆ, ಚಿತ್ರಾಂಗದೆಗೆ ॥

ಅಪರಿಮಿತ ಮಹಾರಾಜ ಕಾರ‌್ಯ ಸಂಗತಿಗಳು
ವಿಪರೀತವಾಗಿ ಪೇಳಿದಳು, ಹೇಳಿದಳು ॥

ಮೀನಾಕ್ಷಿ: ಅಪ್ಪಾ ಸಾರಥೀ ಹೀಗೆ ಬಾ. ಈಗ ಬಂದವರು ಧಾರೆಂದು ಕೇಳುತ್ತಾ ಇದ್ದೀಯೇ ಆದರೆ, ಯಮ್ಮ ವೃತ್ತಾಂತವನ್ನು, ಚನ್ನಾಗಿ ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳಪ್ಪಾ ಸಾರಥೀ.

ಅಪ್ಪಾ ಸಾರಥಿ, ಅಂಗ, ವಂಗ, ಕಳಿಂಗ, ಕಾಶ್ಮೀರ, ಕಾಂಭೋಜ, ದ್ರಾವಿಡ ಮೊದಲಾದ ಐವತ್ತಾರು ದೇಶಗಳಿಗೆ ಅಧಿಕವಾಗಿ ಮೆರೆಯುವ ಮಣಿಪುರಕ್ಕೆ ಅರಸು ಬಭೃವಾಹನನ ಮಾತೆಯರಾದ ಉಲೂಪಿ, ಚಿತ್ರಾಂಗದೆಯರ ಸೇವೆಯಲ್ಲಿ ನಿರತಳಾಗಿ ದಾಸಿಯರೋಳ್ ಶ್ರೇಷ್ಠಳಾದ ಮೀನಾಕ್ಷಿಯೆಂಬ ನಾಮಾಂಕಿತವನ್ನು ಕೇಳಲರಿಯೆಯೇನಪ್ಪಾ ಸಾರಥೀ.

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಅಯ್ಯ ಸಾರಥಿ, ನಮ್ಮ ನಗರದಲ್ಲಿ ಈ ದಿನ ಬಹಳ ಗದ್ದಲವಾಗಿದೆ. ಯೆಲ್ಲಿ ನೋಡಿದರೂ, ನಮ್ಮ ನಗರದಲ್ಲಿ, ಹರಿಹರ ದೇವಾಲಯಗಳಲ್ಲಿ, ರಾಜ ಬೀದಿ, ಬಜಾರುಗಳಲ್ಲಿ, ಘಂಟೆ, ಶಂಖು, ಮೃದಂಗ, ಸಂಗೀತ ನಾಟ್ಯವೇ ಕರ್ಣಾನಂದವಾಗಿ ಇದೆ. ಈ ಹೊಸಪರಿ ಧ್ವನಿಗಳು, ಏನಪ್ಪಾ ಸಾರಥೀ, ಧಾವ – ಬೀದಿಗಳಲ್ಲಿ ನೋಡಿದರೂ, ಲೆಕ್ಕವಿಲ್ಲದಂತೆ ಶಸ್ತ್ರಾಸ್ತ್ರಗಳನ್ನು ಹೇರುತ್ತಿದ್ದಾರೆ. ಅನೇಕ ಘಂಟಾಘೋಷ ಶಬ್ದವೂ ಆಗುತ್ತಾ ಇದೆ. ರಣಭೇರಿಯನ್ನು ಹೊಡೆಯುತ್ತಾ ಇದ್ದಾರೆ ನನಗೆ ಹೇಳಬಾರದೇನಪ್ಪಾ ಸಾರಥೀ.

ಸಾರಥಿ: ಅಮ್ಮಾ ಮೀನಾಕ್ಷಿ, ಧಾವ ಹಸ್ತಿನಾವತಿಯನ್ನಾಳುವಂಥ ಧರ್ಮರಾಯರ ಯಜ್ಞದ ಕುದುರೆಯಂಬುವಂಥದ್ದು ಈ ದಿನ ನಮ್ಮ ಉದ್ಯಾನವನಕ್ಕೆ ಬಂದು ಇರಲಾಗಿ ಆ ಕುದುರೆಯನ್ನು ನಮ್ಮ ದೊರೆಯಾದ ಬಭೃವಾಹನ ಭೂಪತಿ ಕಟ್ಟಿಕೊಂಡು ನಾಳೆ ಉದಯಕ್ಕೆ ಅರ್ಜುನನೊಡನೆ ಯುದ್ಧಕ್ಕೆ ಹೋಗಬೇಕೆಂದು ಸಕಲ ಸನ್ನಾಹಗೊಂಡು ರಣಭೇರಿಯನ್ನು ಹೊಡೆಸುತ್ತಾ ಇದ್ದಾರಮ್ಮಾ ತಾಯೇ.

ಮೀನಾಕ್ಷಿ: ಅಯ್ಯೋ ಹರಹರಾ ಹಿಂಸಾಕಾರ‌್ಯಗಳನ್ನು ಕೈಗೊಂಡರೇನಪ್ಪಾ ಸಾರಥೀ, ನಮ್ಮ ರಾಜರು ಸದ್ಧರ್ಮದಿಂದ ಪರಿಪಾಲನೆ ಮಾಡುವ ನಮ್ಮ ಧಾತ್ರಿಯಲ್ಲಿ ಇದು ಏನು ಉತ್ಪಾತ ಸಂಭವಿಸಿತಪ್ಪಾ ಸಾರಥೀ.

ಪಾಂಡವರ ಕುದುರೆಯನ್ನು ಕಟ್ಟಬಾರದೆಂದು ಸುಬುದ್ಧಿ ಮೊದಲಾದ ಪ್ರಧಾನರು, ನಿಮ್ಮ ರಾಜರಿಗೆ ಹೇಳದೇ ಹೋದರೇನಪ್ಪಾ ಸಾರಥೀ, ನೀನು ಬಹುಕಾಲದಿಂದ ಇದ್ದ ಯಜಮಾನ, ನೀನಾದರೂ ಹೇಳದೇ ಹೋದೇನಪ್ಪಾ ಸಾರಥೀ, ಅಯ್ಯೋ ಈ ನಗರದಲ್ಲಿ ಈ ಬಗೆ ನಡೆಯುವಂಥದ್ದು, ಕಿವಿಯಿಂದ, ಕೇಳಿದ ಬಳಿಕ ಸುಮ್ಮನೆ ಇರಲಾಗದು. ನಮ್ಮ ಅಮ್ಮಾಜಿಯವರಾದ ಉಲೂಪಿ, ಚಿತ್ರಾಂಗದೆ ದೇವಿಯವರ ಕೂಡೆ ಈ ಕಾರ‌್ಯ ಸ್ಥಿತಿಗಳನ್ನು ಪೇಳುತ್ತಾ ಇದ್ದೇನಪ್ಪಾ ಸಾರಥೀ.

ದ್ವಿಪದಿ

ಶ್ರೀಕರದಿ ಉಲೂಪಿ ಚಿತ್ರಾಂಗದೆಯರು
ಪ್ರಾಕಟಮಾದಂತ  ಪನ್ನೀರುಗಳಲಿ ಸ್ನಾನವಂ ಮಾಡಿ
ಯಾ ಸಖಿಯರು ಬೇಗಾ ಪೀತಾಂಬರಗಳುಟ್ಟು
ಚಂದದಿಂದೆಸೆವ  ಚಂದ್ರಗಾವಿ ಕುಪ್ಪಸಗಳ, ತೊಟ್ಟು
ಮಂಗಳಾಂಗಿಯರಾಗ  ವರ ಭೂಷಣಗಳು
ವೈಭವದಿಂದಿಟ್ಟು  ವರಮೃಗಮಾದ ॥
ವನಜಾಕ್ಷಿಯರು  ಅರಿಸಿನವ ಪೂಸಿ

ದಿವ್ಯ ಕರ್ಪೂರ, ತಾಂಬೂಲವನ್ನು, ಕೈಲಿ ತವಕದಿಂ ಪಿಡಿದು
ಜಂಭಾಂತಕನ ಪುತ್ರ, ಸತ್ಯ ಚಾರಿತ್ರನಾದ ಪಾರ್ಥನಂ
ನೆನೆದೂ ಶ್ರೀಧರಾ ಸರ‌್ವೇಶಾ, ಶ್ರೀಕೃಷ್ಣಾ ನೀನು
ಕಾಂತನಲ್ಲಿಗೆ ಬೇಗಾ  ಕಳುಹ ಬೇಕೆನುತಾ
ಸಂತಾಪಿಸುತಲಾಗ ಸಖಿಯು ಮೀನಾಕ್ಷಿಯನು
ಕಾಣಬೇಕೆನುತಾ ಕಳವಳಪಡುತ್ತಾ
ಪೂರ್ಣಚಂದ್ರ ಸ್ವರೂಪ  ಮೋಹದೊಳಗಾಗ
ಯೆಂದಿಗೆ ಕಾಂಬೆವೊ, ಹೇ ಕಾಂತ ಯೆನುತ
ಇಂದೀವರಾಕ್ಷಿಯರು  ಧರಣಿಯೋಳ್
ಕೃಷ್ಣಾದ್ರಿವಾಸನಂ  ನೆನೆನೆನೆದು ಇಂತೆಂದರಾಗಾ ॥

ದರುವು

ವಿರಹಾವು ತಡೆಯಲಾರೇ ಪುರುಷಾನ ತೋರಿಸಮ್ಮಾ ॥
ಪಾರ್ಥನ  ತೋರಿಸಮ್ಮಾ  ಪಂಕಜಾ ನೇತ್ರೆ ಬೇಗಾ ॥

ಉಲೂಪಿ: ಅಪ್ಪಾ, ಸಾರಥೀ ಹೀಗೆ ಬಾ. ಯನ್ನನ್ನು ಧಾರೆಂದು ಕೇಳುತ್ತೀಯ್ಯ. ಯಮ್ಮ ವೃತ್ತಾಂತವನ್ನು ಚನ್ನಾಗಿ ಪೇಳುತ್ತೇನೆ. ಸ್ವಸ್ಥಿರದಿಂದ ಕೇಳಪ್ಪಾ ಸಾರಥೀ.

ಸರ‌್ವಲೋಕಾಧೀಶ ಸರ್ವೇಶ ಸರ್ವಜ್ಞ ಸಾರ್ವಭೌಮನೆಂದೆನಿಸಿ ಇರುವಂಥ, ಲಕ್ಷ್ಮೀಕಾಂತ, ಆದಿ ನಾರಾಯಣನ ಪೂರ್ಣ ಕಟಾಕ್ಷದಿಂದ ಇರುವ, ಮೂರು ಲೋಕಕ್ಕೆ ಅಧಿಕವಾಗಿರುವ ಮಣಿಪುರಕ್ಕೆ ಅಧ್ಯಕ್ಷನಾದ, ಮಲಯಧ್ವಜ ಭೂಪಾಲಗೆ, ಮುದ್ದು ಪುತ್ರಿಯಾದ, ಚಿತ್ರಾಂಗದೆ ಗರ್ಭದಿಂದುದಿಸಿರುವ, ಶೂರನಾದ ಬಭೃವಾಹನಗೆ ಮಾತೆಯರಾದ, ಉಲೂಪಿಯೆಂಬ ನಾಮಾಂಕಿತವಲ್ಲವೇನಪ್ಪಾ          ಸಾರಥೀ.

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನಮ್ಮ ಸಖಿಯಾದ ಮೀನಾಕ್ಷಿಯನ್ನು ಕಾಣುವ ಉದ್ದಿಶ್ಯ ಬಾಹೋಣವಾಯಿತು. ಶೀಘ್ರದಿಂದ ಭೇಟಿ ಮಾಡಿಸುವಂಥವನಾಗೈಯ್ಯ ಸಾರಥೀ.

ಚಿತ್ರಾಂಗದೆ: ಅಪ್ಪಾ ಸಾರಥೀ, ಹೀಗೆ ಬಾ, ಯನ್ನನ್ನೂ ಧಾರೆಂದು ಕೇಳುತ್ತೀಯಾ. ಯನ್ನ ವೃತ್ತಾಂತವನ್ನು ಪೇಳುತ್ತೇನೆ ಚಂದದಿಂದ ಕೇಳಪ್ಪಾ ಸಾರಥೀ.

ಈ ಚಪ್ಪನ್ನೈವ್ವತ್ತಾರು ದೇಶದೋಳ್ ಶ್ರೇಷ್ಟವಾದ ಅಂಗ, ವಂಗ, ಕಳಿಂಗ, ಕಾಶ್ಮೀರ, ಕಾಂಭೋಜ, ದ್ರಾವಿಡ ದೇಶಗಳಿಗಿಂತ ಅಧಿಕಮಾಗಿ ಮೆರೆಯುವ ಮಣಿಪುರಕ್ಕೆ ಅರಸು ಧಾರೆಂದು ಕೇಳಿಬಲ್ಲೆ.

ಸಾರಥಿ: ಮಲಯಧ್ವಜ ಭೂಪತಿಯೆಂದು ಕೇಳಿಬಲ್ಲೆ

ಚಿತ್ರಾಂಗದೆ: ಅಂಥಾ ಮಲಯಧ್ವಜ ಭೂಪಾಲನ ಮುದ್ದು ಪುತ್ರಿಯಾದ ಚಿತ್ರಾಂಗದೇ ಯೆಂಬ ನಾಮಾಂಕಿತವಲ್ಲವೇನಪ್ಪಾ ಸಾರಥೀ.

ಆದರೆ ಯನ್ನ ಮುದ್ದು ಸಖಿಯಾದ, ಮೀನಾಕ್ಷಿಯನ್ನು ಕಾಣಬೇಕಾಗಿ ಇದೆ. ಜಾಗ್ರತೆ ಕರೆಸುವಂಥ ವನಾಗೋ ಸಾರಥೀ.

ಉಲೂಪಿ: ಧೀರ್ಘಾಯುಷ್ಯಮಸ್ತು ಬಾರಮ್ಮಾ, ಸಖಿಯೇ.

ಚಿತ್ರಾಂಗದೆ: ಸೌಮಂಗಲ್ಯಾಭಿವೃದ್ಧಿರಸ್ತು ಬಾರಮ್ಮ ಮೀನಾಕ್ಷಿ.

ಸಖ: ಅಮ್ಮಾ ತಾಯಿಗಳಿರಾ. ನಮ್ಮ ಪಟ್ಟಣದಲ್ಲಿ ನಡೆದ ವೃತ್ತಾಂತವನ್ನು ಪೇಳುತ್ತೇನೆ. ಚಿತ್ತವಿಟ್ಟು ಲಾಲಿಸಬೇಕಮ್ಮಾ ತಾಯಿಗಳಿರಾ.

ದರುವು

ಅಮ್ಮಾ ನಿಮ್ಮಾತ್ಮಜ, ಧರ‌್ಮರಾಯರ ಕುದುರೆ
ಹಮ್ಮಿನಿಂದಲಿ ಕಟ್ಟಿಕೊಂಡೂ, ಕಟ್ಟಿಕೊಂಡೂ ॥

ಸುಮ್ಮನೆ ಪಾರ್ಥನೊಳು ನಾಳೇ ಸಂಗ್ರಾಮಕ್ಕೆ
ಉಮ್ಮಳಿಸೀ ಹೋಗಬೇಕೆನುತಾ, ತಾನೆನುತಾ

ಧರಣಿಯೋಳ್, ಕೃಷ್ಣಾದ್ರಿವಾಸ ದಯದಿಂದ
ಪಾರ್ಥ ಬಂದಿಹನು, ಕೇಳಮ್ಮಾ ॥

ಸಖಿ: ಅಮ್ಮಾ ಇನ್ನೇನು ಹೇಳಲಿ. ಹಸ್ತಿನಾವತಿಗೆ ದೊರೆಗಳಾದ ಕುಂತೀದೇವಿಯ ಮಕ್ಕಳಂತೆ. ಧರ್ಮ, ಭೀಮ, ಅರ್ಜುನ, ನಕುಲ, ಸಹದೇವರೆಂಬುವಂಥ ಪ್ರಖ್ಯಾತಿಯುಳ್ಳ ರಾಜರಂತೆ. ಯಜ್ಞಕ್ಕೆ ಪ್ರಾರಂಭವನ್ನು ಮಾಡಿಕೊಂಡು ಯಜ್ಞದ ಕುದುರೆಯನ್ನು ದೇಶ ಮಧ್ಯದಲ್ಲಿ ಬಿಟ್ಟು ಇದ್ದಾರಂತೆ, ಹೇ ತಾಯಿಗಳಿರಾ, ಆ ಕುದುರೆಯನ್ನು ಯಾರಾದರೂ ಕಟ್ಟಿಕೊಂಡರೆ ಅವರೊಡನೆ ಯುದ್ಧವನ್ನು ಮಾಡಿ ಜಯಿಸಿಕೊಂಡು ಹೋಗುತ್ತಾರಂತೆ.

ಅಂತಪ್ಪ ಕುದುರೆಯನ್ನು ನಿಮ್ಮ ಮಗನಾದ ಬಭೃವಾಹನ ಭೂಪತಿಯು ಕಟ್ಟಿಕೊಂಡು ನಾಳೆ ಉದಯಕ್ಕೆ ಅರ್ಜುನನೊಡನೆ ಯುದ್ಧಕ್ಕೆ ಹೋಗಬೇಕೆಂದು ಅನೇಕ ಆಯುಧಂಗಳು ಸನ್ನಾಹ ಮಾಡಿಕೊಂಡು ಇದ್ದಾರೆ. ರಣಭೇರಿಯನ್ನು ಹೊಡಿಸುತ್ತಾ ಇದ್ದಾರೆ. ಅಮ್ಮಾ ತಾಯಿಗಳಿರಾ, ನಮ್ಮ ನಗರದಲ್ಲಿ ಎಂದಿಗೂ ಇಂಥ ಕಾರ‌್ಯಗಳೂ ಕೇಳಿ ನೋಡಿರಲಿಲ್ಲಾ. ಈವತ್ತಿಗೆ ನೋಡುವಂಥಾದ್ದು ಆಯಿತಮ್ಮಾ ತಾಯಿಗಳಿರಾ.