ಉಲೂಪಿ: ನಿಶ್ಚಯವಾಗಿ ನಮ್ಮ ಪ್ರಾಣಕಾಂತನು ಬಂದು ಇದ್ದಾನೇನಮ್ಮಾ ಸಖಿಯೇ.

ಚಿತ್ರಾಂಗದೆ: ಅಮ್ಮಾ, ಮೀನಾಕ್ಷಿ! ನಿಜವಾಗಿಯೂ ಕುದುರೆ ಹಿಂದೆ ಅರ್ಜುನ ಭೂಪಾಲ ಬಂದು ಇದ್ದಾನೇನಮ್ಮಾ ಸಖಿಯೇ.

ಮಾತು: ನಿಜವಾಗಿಯೂ ನಿಮ್ಮ ಪತಿಯು ಬಂದು ಇದ್ದಾರಮ್ಮಾ ತಾಯಿಗಳಿರಾ.

ದ್ವಿಪದೆ

ಉಡುರಾಜಮುಖಿ ನುಡಿ ಕೇಳಿ ಹರುಷದ
ಕಡಲೊಳಗೆ ಬಿದ್ದು ಬಿದ್ದೇಳುತಲಿ
ಹೇ ಸಖಿಯೇ, ಬಡವನು ಎಡವುತ
ಭಾಗ್ಯ ಕಂಡಂತೆ, ರೋಗಿಗೌಷಧಲತೆಯು
ತೊಡರಿದಂತಾಯಿತಲೇ ಪುಣ್ಯವಶದಿಂದ
ಪ್ರಾಣದೊಡೆಯ ತಾ ಬಂದನೇ
ಕಾಣದಲೇ ಸಂತಾಪದಿಂ ಅಡವಿ
ಹೊಕ್ಕನು ದಿನವು ತಪಿಸುತಿರ್ದ್ದೆವು ನಾವು
ಬಂದನೇ ಕಾಂತೆಯು ಕುಳಿತಲ್ಲಿಗೆ॥

ಚಿತ್ರಾಂಗದೆ: ಅಮ್ಮಾ ಸಖಿಯೇ, ನೀನು ನುಡಿದ ನುಡಿಯನ್ನು ಕೇಳಿದಾಕ್ಷಣವೇ, ಯನ್ನ ಮನಸ್ಸು ಸಂತೋಷವೆನ್ನುವಂಥ, ಸಮುದ್ರದಲ್ಲಿ ಈಜಾಡುವಂತಾಯಿತಲ್ಲೇ ತಾಯೇ, ಜನ್ಮ ದಾರಿದ್ರನಾದಂಥವರಿಗೆ ಹೊನ್ನಿನ ಕೊಡ ಎಡವಿದಂತಾಯಿತಲೇ ಸಖಿಯೇ, ರೋಗಿಯಾದಂಥವರಿಗೆ, ಔಷಧ ಬಳ್ಳಿಯು, ಕಾಲಿಗೆ ತೊಡರಿದಂತಾಯಿತಲೇ ಅಮ್ಮಯ್ಯ, ಪ್ರಾಣಪತಿಯಾದ ಪಾರ್ಥನನ್ನು ಕಣ್ಣಿನಲಿ ಕಾಣದಲೇ ಸಂತಾಪವೆನ್ನುವಂಥ! ಅಡವಿ ಹೊಕ್ಕು, ಅನುದಿನದಿ ನಾವಿಬ್ಬರೂ ತಪಸ್ಸು ಮಾಡುತ್ತಿದ್ದೆವಲ್ಲೇ ಮೀನಾಕ್ಷಿ ಯಮ್ಮ ಪ್ರಾಣಪತಿಯಾದ ಪಾರ್ಥನು ಕುಳಿತಲ್ಲಿಗೆ ಬಂದನೇನಮ್ಮಾ ಸಖಿಯೇ.

ಸಖಿ: ನಿಜವಾಗಿಯೂ ಬಂದು ಇದ್ದಾರಮ್ಮಾ ತಾಯಿಗಳಿರಾ.

ದರುವು

ಬಂದನೇನೇ ಪ್ರಾಣಕಾಂತ ಬಂದನೇನೆ ಸಖಿಯೇ
ಕಂದರ್ಪಾಗೆ ಸಮರೂಪ ಬಂದನೇನೆ ಸಖಿಯೇ ॥

ಸರಸಿಜಾಕ್ಷಿ ನಮ್ಮ ತಪವು ಸಫಲವಾಯಿತೇ ಸಖಿಯೇ
ಸರಸಿಜಾಕ್ಷನ ಸಖನು ಈಗ ಬಂದಾನೇನೆ ಸಖಿಯೇ ॥

ಚಂದ್ರಾಕಿರಣ ಹಾರೈಸುವ ಚಕೋರನಂತೆ ಚತುರನಂತೆ ತೋರುವ ಕಾಂತಾ
ಚಂಚಲಾಕ್ಷಿ ಪತಿಯು ಬೇಗ ಬಂದನೇನೆ ಸಖೀ ॥

ಉಲೂಪಿ: ಯೇ ಮೀನಾಕ್ಷಿ ಚಂದ್ರಕಿರಣಕ್ಕೆ ಚಕೋರ ಪಕ್ಷಿಯು ಹೇಗೆ ಹಾರೈಸಿ ಇರುತ್ತದೋ, ಹಾಗೆ ನಾವೀರ‌್ವರೂ ಹಾರೈಸಿಕೊಂಡಿದ್ದೆವಲ್ಲೆ, ಅಮ್ಮಯ್ಯ, ಈವೊತ್ತಿಗೆ ನಮ್ಮ ಮೇಲೆ ಅಂತಃಕರಣವಿಟ್ಟು ಯಮ್ಮ ಕಾಂತನು, ಬಂದು ಇದ್ದಾನೇನಮ್ಮಾ ಸಖಿಯೇ.

ಸಖಿ: ಸಹಜವಾಗಿ ಬಂದು ಇದ್ದಾರಮ್ಮಾ ತಾಯಿಗಳಿರಾ.

ದರುವು

ಯಷ್ಟು ಪುಣ್ಯ ಮಾಡಿದೆವೋ, ಕಾಂತೆ ಕೇಳೆ ಸಖಿಯೇ
ಕೃಷ್ಣಾದ್ರೀಶನು ಕರುಣದಿಂದ, ಕರೆದು ತಂದಾನೆ ಸಖಿಯೇ ॥

ಚಿತ್ರಾಂಗದೆ: ಅಮ್ಮಾ ಸಖಿಯೇ, ನಮ್ಮ ಪ್ರಾಣಪತಿಯಾದ ಅರ್ಜುನ ಭೂಪಾಲಕ, ನಮ್ಮನ್ನು ಬಿಟ್ಟು ಹಸ್ತಿನಾವತಿಗೆ ಹೋದಲಾಗಾಯ್ತು, ಪ್ರಾಣೇಶನನ್ನು ಕುರಿತು ತಪಸ್ಸು ಮಾಡುತ್ತಿದ್ದೆವಲ್ಲೇ ಅಮ್ಮಯ್ಯ. ಇಂದಿಗೆ ನಾವು ಮಾಡಿದಂಥ ತಪಸ್ಸು ಸಿದ್ಧವಾಯಿತು. ಆಪದ್ಭಾಂಧವನೆಂಬ ಬಿರುದುಳ್ಳ ಕೃಷ್ಣಾದ್ರಿವಾಸನು, ಕರುಣಾ ಸಾಗರನು ನಮ್ಮ ಮೇಲೆ ಕಟಾಕ್ಷವಿಟ್ಟು, ಯಮ್ಮ ಕಾಂತನನ್ನು ಕುಳಿತಲ್ಲಿಗೆ ಕರೆದು ತಂದನೇನಮ್ಮಾ ಸಖಿಯೇ.

ಸಖಿ: ನಿಜವಾಗಿಯೂ ಕರೆದು ತಂದಿರುವನಮ್ಮಾ ತಾಯಿಗಳಿರಾ.

ಉಲೂಪಿ: ಅಮ್ಮಾ ಮೀನಾಕ್ಷಿ, ಅವರ ಗರ್ಭದಲ್ಲಿ ಜನಿಸಿ ಅವರ ಕುದುರೆಯನ್ನು ಹಮ್ಮಿನಿಂದ ಕಟ್ಟಿಕೊಂಡು, ಅವರ ಮೇಲೆ ಯುದ್ಧಕ್ಕೆ ಹೋಗಬೇಕೆಂಬುವಂಥ ಸುಪುತ್ರ ರಾಜಾಸ್ಥಾನದಲ್ಲಿ ಇದ್ದಾನೇನಮ್ಮಾ ಸಖಿಯೇ.

ಸಖಿ: ಅಮ್ಮಾ ತಾಯೇ ರಾಜರು ರಾಜಾಸ್ಥಾನದಲ್ಲಿ ಇದ್ದಾರಮ್ಮಾ ತಾಯಿಗಳಿರಾ॥

ಚಿತ್ರಾಂಗದೆ: ಅಮ್ಮಾ ಅಕ್ಕಯ್ಯ, ನಾವು ಈರ್ವರೂ ಹೋಗಿ ಆ ದ್ರೋಹಿಯಾದ ಮಗನಿಗೆ ಚನ್ನಾಗಿ ಬುದ್ಧಿಯನ್ನು ಹೇಳಿ ಬರೋಣ ನಡಿಯಮ್ಮಾ ಅಕ್ಕಯ್ಯ.

ಉಲೂಪಿ: ಅಮ್ಮಾ ತಂಗಿ ಆ ಕುಮಾರನನ್ನು ಇಲ್ಲಿಗೆ ಕರೆಸೋಣ, ಇಲ್ಲವಾಯಿತೆ ನಾವೇ ಹೋಗಿ ಬುದ್ಧಿಯನ್ನು ಹೇಳೋಣ. ಬಾರಮ್ಮಾ ತಂಗೀ॥

ಚಿತ್ರಾಂಗದೆ: ಅಪ್ಪಾ ಸಾರಥಿ, ನಿಮ್ಮ ರಾಜರು ಆಸ್ಥಾನದಲ್ಲಿ ಇದ್ದಾರೇನಪ್ಪಾ ಸಾರಥೀ, ನೀನು ರಾಜರ ಬಳಿಗೆ ಹೋಗಿ, ಅಮ್ಮಾಜಿಯರು ಬಂದು ಇದ್ದಾರೆಂದು ಬಭೃವಾಹನನಿಗೆ ಜಾಗ್ರತೆ ಇಂದ ಹೇಳಿ ಬಾರೋ ಸಾರಥಿ.

ಬಭೃವಾಹನ: ನಮೋ ನಮೋ ತಾಯಿಗಳಿರಾ.

ಚಿತ್ರಾಂಗದೆ: ದೀರ್ಘಾಯುಷ್ಯಮಸ್ತು ಬಾರಪ್ಪಾ ಕಂದ.

ಉಲೂಪಿ: ಚಿರಂಜೀವಿಯಾಗಿ ಬಾರಪ್ಪಾ ಬಭೃವಾಹನ.

ಬಭೃವಾಹನ: ಹೇ ಜನನೀ ಸುಚರಿತ್ರಮಾನಿನೀ, ತಮ್ಮ ಅರಮನೆಯಲ್ಲಿ ಚಂದವಾಗಿ ಇರುವುದಂ ಬಿಟ್ಟು ಬಂದ ಕಾರ‌್ಯಾರ್ಥವೇನು, ಪೇಳಬೇಕಮ್ಮಾ ತಾಯಿಗಳಿರಾ.

ದ್ವಿಪದಿ

ಲೇಸು ಮಾಡದೆ ಮಗನೇ ಕುಂತೀ ನಂದನರ
ಹಯವ ಕಟ್ಟಿದೆಯಾ ಈ ಕ್ಷುದ್ರ ಬುದ್ಧಿಯು
ಯೆಷ್ಟು ದಿನದಿ ಕಲಿತೆಯೋ ಗುರುದ್ರೋಹ
ಕೊಳಗಾದೆ, ಅಕಟಕಟಾ, ಮತ್ಕಾಂತನ
ಯಜ್ಞದ ಕುದುರೆ, ಗರ್ವದಿಂ ಕಟ್ಟಿದೆಯಾ
ಭೂಷಣವೇ ನೀನವರ ಉದರದಲ್ಲಿ ಸಂಭವಿಸಿ
ದ್ವೇಷಮಾಡಿದೆ ಎನಲು ಜನನಿಗೆ ನಮಿಸಿ ನಡುಗುತಿಂತೆಂದನೂ

ಚಿತ್ರಾಂಗದೆ: ಅಪ್ಪಾ, ಮಗನೇ ಬಹಳ ಲೇಸು ಮಾಡಿದೆಯಪ್ಪಾ, ಧಾವ ಧರ್ಮರಾಯರು ಮಾಡುವಂಥ ಪುಣ್ಯ ಸಾಧನವಾದ, ಯಜ್ಞದ ಕುದುರೆಯನ್ನು ಪಂಥದಿಂದ ಕಟ್ಟಿಕೊಂಡೇನಪ್ಪಾ ಬಾಲಾ. ಯೆಷ್ಟು ದಿನದಿಂದ ಕಲಿತೆಯೋ, ಈ ಕ್ಷುದ್ರ ಬುದ್ಧಿಯೆಂಬುವಂಥದ್ದು. ಅಯ್ಯೋ ಮಗನೆ, ನಮ್ಮ ಪ್ರಾಣಕಾಂತನಾದ ಅರ್ಜುನಸ್ವಾಮಿಯವರ ಉದರದಲ್ಲಿ ಸಂಭವಿಸಿ, ಗರ್ವದಿಂದ ಅವರ ಕುದುರೆಯನ್ನು ಕಟ್ಟಿಕೊಂಡು, ಅವರೊಡನೆ ಯುದ್ಧಕ್ಕೆ ಹೋಗಬೇಕೆಂಬುವಂಥದ್ದು ನಿನಗೆ ಭೂಷಣವೇ. ಈ ಸಭೆಯಲ್ಲಿ ಯಾರೂ ಹಿರಿಯರು ಇಲ್ಲದೇ ಹೋದರೆ ಸರ್ವರೂ, ನಿನ್ನ ಆಲೋಚನೆಗೆ ಇಷ್ಟಪಟ್ಟರೆ ಸುಬುದ್ಧಿ ಮೊದಲಾದ ಪ್ರಧಾನರು ನಿನಗೆ ತಿಳಿ ಹೇಳಲಿಲ್ಲವೇನೋ ಬಾಲಾ ಏನು ಪಾತಕಕ್ಕೆ ಒಳಗಾದೋ ಬಭೃವಾಹನ.

ಬಭೃವಾಹನ: ಹೇ ಜನನಿ, ನನ್ನಿಂದ ಲೇಶವೂ ತಪ್ಪಿಲ್ಲ ಮತ್ತೂ ಪೇಳುತ್ತೇನಮ್ಮಾ ತಾಯೇ. ಶಿಶುವು ಮಾಡಿದ ತಪ್ಪನ್ನು ತಾಯಿಯು ಕ್ಷಮಿಸಬೇಕಲ್ಲದೆ ಮತ್ಯಾರು ಕ್ಷಮಿಸುವರಮ್ಮಾ ಜನನೀ, ಮಮಾತೃ ಪರದೇವತಾ ಎಂಬ ನೀತಿಯುಂಟಾಗಿದೆ. ಹೇ ಮಾತೇ ಇಷ್ಟು ಕೋಪಮಾನಸರಾಗಿ ಅರಮನೆಯಂ ಬಿಟ್ಟು ಇಲ್ಲಿನ ತನಕ ಬಂದುದಕ್ಕೆ ಎನ್ನ ದೇಹವು ಬಹಳ ತಲ್ಲಣಗೊಳ್ಳುತ್ತಿದೆ. ಪ್ರತ್ಯುತ್ತರ ಹೇಳುವೆನೆಂದರೆ, ಬಾಯಲ್ಲಿ ದ್ರವವಿಲ್ಲ ಹೇಳಲು ಶಕ್ತನಲ್ಲ ಮತ್ತು ತಮ್ಮ ಮಾತು ಮೀರುವನಲ್ಲ. ಈ ಭೂಮಿಯಲ್ಲಿ ಕ್ಷಾತ್ರ ಧರ್ಮದಂತೆ, ಕುದುರೆಯನ್ನು ಕಟ್ಟಿ ಇದ್ದೇನೆಯೇ ಹೊರತು, ಮದೋನ್ಮತ್ತನಾಗಿ, ಕುದುರೆಯನ್ನು ಕಟ್ಟಲಿಲ್ಲಾ. ಮುಂದೆ ತಾವು ಯೇನು ಅಪ್ಪಣೆಯನ್ನು ಪಾಲಿಸುತ್ತೀರೊ ಅದರಂತೆ ನಡೆಯಲು ಸಿದ್ಧನಾಗಿದ್ದೇನಮ್ಮಾ ತಾಯಿಗಳಿರಾ॥

ದರುವು

ಮಗನೇ ಕೇಳು ನಮ್ಮನಗಲಿ ಪಾರ್ಥ ನಿಜ
ನಗರಿಗೈತಂದಾ ಬಂದಾ॥
ಮೊಗ ನೋಡದೆ ಸಂತಾಪದಿ ತಪಿಸುತಾ
ಮಿಗಿಲು ದುಃಖದಿಂದಾ ಬಂದಾ ॥

ಕಾಲ ಕಳೆಯುತಿರೆ ಕೂಡಿತು ಸುಕೃತವೂ
ಅಗಲಿದಂಥಾ ಕಾಂತ ಬಂದಾ
ಬಾಲಕ ನೋಡೈ ಬಂದಿಹ ತೇಜಿಯ
ಪಾಲಿಪ ನೆವದಿಂದಾ ಕಂದಾ ॥

ಚಿತ್ರಾಂಗದೆ: ಅಪ್ಪಾ, ಮಗನೇ ಬಭೃವಾಹನ ಪ್ರಾಣಕಾಂತನ ನೋಡದೆ, ಬಾಡಿ ಬಸವಳಿದು ನೈದಿಲೆಯಂತೆ ಬಾಡುತ್ತಾ, ನಾವೀರ‌್ವರೂ ಪತಿಯನ್ನು ಆರೈದು ನೋಡುತ್ತಿದ್ದವಲ್ಲಪ್ಪಾ ಕಂದಾ, ನಾವು ಮಾಡಿದ ಸುಕೃತವು ಇಂದಿಗೆ ಕೂಡಿ ಬಂದ ಹಾಗೆ, ತೋರುತ್ತಾ ಇದೆ. ಅಗಲಿದಂಥ ಪ್ರಾಣಪತಿಯು ಯಾಗದ ಕುದುರೆಯ ನೆವದಿಂದ ಕುಳಿತಲ್ಲಿಗೆ ಬಂದು ಇರುತ್ತಾರಪ್ಪಾ ಬಾಲಾ ಸುಜ್ಞಾನ ಶೀಲಾ.

ಆದಿ ಜಂಪೆ

ಮಗುವೇ ನೀ ಮುಖದೋರೀ ನಿಮ್ಮಯ್ಯನಂಘ್ರಿಯಾ
ಸೊಗಸಾಗಿ ಕಾಣಿಸೈಯ್ಯ, ಕಂದಯ್ಯ॥
ಜಗದ ರಾಯರು ಕೂಡಿ ಜೊತೆಯಾಗಿ ಬಂದಿಹ
ನಗರಕ್ಕೆ ಕರೆತಾರಯ್ಯ ಕಂದೈಯ್ಯ

ಉಲೂಪಿ: ಹೇ ಕಂದಾ, ನೀನು ಪೋಗಿ ಮುಖವನ್ನು ತೋರಿಸಿ ನಿನ್ನ ಹಡೆದಂಥವನ ಪಾದಾರವಿಂದವನ್ನೂ ನಮಗೆ ಕಾಣುವಂತೆ ಮಾಡಬೇಕೈಯ್ಯ ಮಗುವೇ. ಯಾವತ್ತೂ ಮೇದಿನಿ ರಾಯರ ಕೂಡೆ ಜೊತೆಯಾಗಿ ಬಂದು ಇದ್ದಾರಂತೆ, ನಮ್ಮ ನಗರಕ್ಕೆ ಕರೆದುಕೊಂಡು ಬರುವಂಥವ ನಾಗಪ್ಪಾ ಕಂದಾ, ಬಭೃವಾಹನ.

ದರುವು

ತಂದೆಯೆಂಬುವ ಮಾತು ತಿಳಿಯದೋಯಿತು ತಾಯೆ.
ಇಂದಿಗೆ ಪೇಳ್ದಿರಿ ನೀವು ಇನ್ನೀವೂ ॥

ಮಂದಿರಕೆ ಒಡಗೊಂಡು ಮುದದಿಂದ ಬರುವೇನು
ಮುಂದೇನು ನೇಮವಮ್ಮಾ ಪೇಳಮ್ಮಾ ॥

ಬಭೃವಾಹನ: ಹೇ ಜನನೀ ತಂದೆ ಎಂಬುವಂಥದ್ದು, ಈವೊತ್ತಿಗೆ ಹೇಳಿದಂತಾಯಿತು. ಇಂದಿನವರೆಗೂ ನಿಮ್ಮ ನಾಥನೆಂಬುವಂಥದ್ದು, ತಾವಾದರೂ ಹೇಳಲಿಲ್ಲ ಸುಬುದ್ಧಿ ಮೊದಲಾದ ಪ್ರಧಾನರೂ ಹೇಳಲಿಲ್ಲಾ. ತಾವು ಯನ್ನ ಮೇಲೆ ಇಷ್ಟು ಕೋಪಮಾನಸರಾದರೆ, ಯನ್ನ ಯತ್ನವೇನು ಇರುತ್ತೆ. ಹೇ ಜನನಿ ನಮ್ಮ ತಂದೆಯಾದ ಅರ್ಜುನ ಭೂಪಾಲನನ್ನು ಜಾಗ್ರತೆ ಇಂದ ಮಂದಿರಕ್ಕೆ ಕರೆದುಕೊಂಡು ಬರುತ್ತಾ ಇದ್ದೇನೆ. ಮುಂದೆ ಯೆನಗೆ ನಿರೂಪವನ್ನು ಪಾಲಿಸಬೇಕಮ್ಮಾ ಜನನೀ.

ದರುವು

ಇಂದೂ, ಸಂಪದ ನಿನ್ನಾ ತಂದೆಗೊಪ್ಪಿಸು ಬೇಗಾ
ಕಂದ ಕೇಳೆನ್ನ ಮಾತ॥
ನಿಂದೆಗೊಳ ಗಾಗದೀರೆಂದಿಗೂ, ಮೆಚ್ಚನೂ
ಕೃಷ್ಣಾದ್ರಿವಾಸ ಕಂದೈಯ್ಯ, ಕಂದೈಯ್ಯ

ಚಿತ್ರಾಂಗದೆ: ಹೇ ಮಗುವೇ, ಈ ಮಣಿಪುರದ ಸಂಪತ್ತನ್ನೆಲ್ಲಾ ನಿಮ್ಮ ತಂದೆಯ ಪಾದಾರವಿಂದಕ್ಕೆ ಒಪ್ಪಿಸಿ ತಂದೆ ಆಜ್ಞೆಯಂತೆ ನಡೆದುಕೊಳ್ಳಬೇಕಪ್ಪಾ ಕಂದಾ. ನಮ್ಮಗಳ ಮಾತು ಅಲಕ್ಷ್ಯ ಮಾಡಬೇಡ ಮುಂದೆ ಕೃಷ್ಣಾದ್ರಿವಾಸ ಮೆಚ್ಚನು, ಯಮ್ಮ ಮಾತು ಚಿತ್ತವಿಟ್ಟು ಕೇಳಪ್ಪಾ ಬಭೃವಾಹನ.

ಬಭೃವಾಹನ: ಹೇ ಜನನೀ, ನಮ್ಮ ಪಟ್ಟಣದ ಸಂಪತ್ತನ್ನೆಲ್ಲಾ ನಮ್ಮ ತಂದೆಯ ಪಾದಾರವಿಂದಕ್ಕೆ ಒಪ್ಪಿಸಿ, ನಮ್ಮ ಜನಕನನ್ನು ನಗರಕ್ಕೆ ಕರೆದುಕೊಂಡು ಬರುತ್ತಾ ಇದ್ದೇನೆ. ಈ ಮಾತು ತಪ್ಪುವುದಿಲ್ಲಾ ನೀವು ಅರಮನೆಗೆ ತೆರಳಬೇಕಮ್ಮಾ ಜನನೀ ಸುಚಿತ್ರ ಮಾನಿನೀ.

ಬಭೃವಾಹನ: ಅಯ್ಯ ಸಚಿವ ಶಿಖಾಮಣಿ, ನಮ್ಮ ಜನನಿಯರಾದ, ಉಲೂಪಿ ಚಿತ್ರಾಂಗದೆ ಅಮ್ಮಾಜಿ ಯವರು ಹೇಳಿದಂಥ ವಚನಗಳನ್ನು ಕೇಳಿದರೇನಯ್ಯ. ನಾವು ಮಾಡಿದ ಆಲೋಚನೆ ಪ್ರಯೋಜವಿಲ್ಲದಂತಾಯಿತು. ನಮ್ಮ ಜನನಿಯರ ನೇಮದಂತೆ, ನಮ್ಮ ಜನಕನನ್ನು ಕಾಣುವುದು ಉಚಿತವೋ ಅನುಚಿತವೋ ಪೇಳಬೇಕಯ್ಯ ಪ್ರಧಾನಿಗಳಿರಾ.

ದರುವು

ಯೆಣಿಕೆ ಬ್ಯಾಡಿದಕಿನ್ನು ಭೂವರ
ಕ್ಷಣ ವಿಚಾರಿಸು ಅರಿಯದೀಗಲೇ
ವಿನುತ ಹಯ ಕಟ್ಟಿದೆವು ಯಮನಂದನಗೆ ನಿಮ್ಮಯ್ಯ॥ ॥

ಅನುಜನಾಗಲಿ ಬೇಕು ಕಲಿತನ
ಘನತೆ ನಮಗೆ ಇಲ್ಲ ಲೋಕದೀ
ಜನರು ಮೆಚ್ಚುವರೇ, ಮುಂದೆ, ಕೃಷ್ಣಾದ್ರೀಶ ಮೆಚ್ಚುವನೆ ॥

ಪ್ರಧಾನಿ: ಹೇ ರಾಜ ನಿಮ್ಮ ಜನನಿಯರು ಹೇಳಿದಂಥ ನಿರೂಪಕ್ಕೆ ಪ್ರತ್ಯುತ್ತರವಿಲ್ಲಾ. ಇದೂ ಅಲ್ಲದೆ ತಾವು ಸಮಸ್ತ ನೀತಿಯನ್ನು ಬಲ್ಲವಂಥವರು. ಕ್ಷಣ ವಿಚಾರಿಸದೆ, ಯಜ್ಞದ ಕುದುರೆಯನ್ನು ಕಟ್ಟಿದ್ದಾಯಿತು. ಯಮನಂದನರಾದಂಥ ಧರ್ಮರಾಯನಿಗೆ ನಿಮ್ಮ ತಂದೆಯು ತಮ್ಮಂದಿರಾಗಬೇಕು. ಅವರೊಡನೆ ಯುದ್ಧವನ್ನು ಮಾಡಬೇಕೆಂಬುವಂಥಾದ್ದು ವಿಹಿತವಲ್ಲವೈಯ್ಯ ರಾಜ ಮಾರ್ತಾಂಡತೇಜ.

ದರುವು

ಪಟ್ಟಣವ, ಶೃಂಗರಿಸು ಬೇಗನೇ
ಕಟ್ಟಿಸೈ, ಗುಡಿ ತೋರಣಗಳ
ಕಟ್ಟಿಸಗಣಿತ ಬಂಡಿಯಲಿ ಧನಕನಕ ವಸ್ತುಗಳಾ॥

ಬಭೃವಾಹನ: ಅಯ್ಯ ಮಂತ್ರಿ, ಸಮಸ್ತರಿಗೂ, ವಿಹಿತವಾಗಿ ತೋರುವಂಥಾದ್ದು ಉಚಿತವೆಂದ ಬಳಿಕ ಜನನಿಯರ, ನೇಮದಂತೆ ನಮ್ಮ ತಂದೆಯನ್ನು ಪಟ್ಟಣಕ್ಕೆ ಕರೆದುಕೊಂಡು ಬರಬೇಕಾಗುತ್ತೆ, ಇನ್ನೂ ತಡವೇತಕೆ. ನಮ್ಮ ನಗರದಲ್ಲಿ ಇರುವಂಥ ದೇವಾಲಯಗಳಿಗೂ, ಊರ ಬಾಗಿಲುಗಳಿಗೂ ತೋರಣಗಳು ಕಟ್ಟಿಸಿ, ಪಟ್ಟಣವಂ, ಶೃಂಗಾರ ಮಾಡುವುದಲ್ಲದೆ ಯಮ್ಮ ಭಂಡಾರದಲ್ಲಿರತಕ್ಕ ಮುತ್ತು, ರತ್ನ, ವಜ್ರ, ವೈಢೂರ‌್ಯ, ಗೋಮೇಧಿಕ, ಅನರ್ಘ್ಯವಾದ ಪೀತಾಂಬರ, ಕಸ್ತೂರಿ ಮೊದಲಾದ ಗಂಧ ದ್ರವ್ಯಗಳನ್ನು, ಬಂಡಿಗಳಲ್ಲಿ ತುಂಬಿಸುವುದಲ್ಲದೇ ಕುದುರೆ ಹಿಂಡು, ಗೋವುಗಳು, ಮಹಿಷಗಳು, ದಾಸೀ ಜನಗಳು ಮುಂತಾದ ಪುರಜನಗಳನ್ನು ಹೊರಡಿಸುವಂಥವನಾಗೈಯ್ಯ ಮಂತ್ರಿ.

ದರುವು

ನೆಟ್ಟನೆನ್ನಯ, ಪಿತನ ಪಾದವ
ಮುಟ್ಟಿ ಅರ್ಪಿಸಬೇಕು ಯೆನುತಲಿ
ಅಟ್ಟಹಾಸದಿ  ಸೇನೆ ಸಹಿತದೀ ಹೊರಡಬೇಕೆಂದಾ ॥ ॥

ಬಭೃವಾಹನ: ಅಯ್ಯ ಮಂತ್ರಿ ಸಮಸ್ತ ವೈಭವದಿಂದ ಹೋಗಿ, ನಮ್ಮ ತಂದೆಯ ಪಾದಾರವಿಂದವನ್ನು ಕಂಡು ಶಿರವನ್ನು ಬಾಗಿಸಿ, ರಾಜ್ಯಭಾರವನ್ನು ನಮ್ಮ ತಂದೆಗೆ ಒಪ್ಪಿಸಬೇಕಾಗುತ್ತೆ, ಆದಕಾರಣ, ಅರುಣೋದಯಕ್ಕೆ, ಎದ್ದು ಮಂಗಳ ಸ್ನಾನವನ್ನು ಮಾಡಿ, ಶುಚಿರ್ಭೂತರಾಗಿ ದರುಶನಕ್ಕೆ ಹೋಗಬೇಕು. ಪಟ್ಟಣದಲ್ಲಿ ಸಮಸ್ತರಿಗೂ ಎಚ್ಚರಪಡಿಸುವುದಲ್ಲದೆ ಅರಮನೆ ಭಂಡಾರವನ್ನೆಲ್ಲಾ ಬಂಡಿಗಳಲ್ಲಿ ತುಂಬಿಸುವಂಥವನಾಗೈಯ್ಯ ಪ್ರಧಾನಿ.

ಮಂತ್ರಿ: ಹೇ ರಾಜ ತಮ್ಮ ಆಜ್ಞೆ ಪ್ರಕಾರ, ಸಮಸ್ತ ವಸ್ತುಗಳನ್ನು ಬಂಡಿಗಳಲ್ಲಿ ತುಂಬಿಸಿ ಇದ್ದೇನೆ. ನಮ್ಮ ಪಟ್ಟಣದ ಜನರಿಗ್ಯಾವತ್ತು ಯಚ್ಚರಪಡಿಸಿ ಇದ್ದೇನೆ. ಆದಕಾರಣ ನಾಳಿನ ಉದಯಕ್ಕೆ ಹೊರಡಬಹುದೈಯ್ಯ ರಾಯ, ವಂದಿತ ಜೀಯಾ.

ಭಾಗವತರ ದರುವು

ಧರಣೀಶ ಕೇಳಿಂದ್ರ ತನಯನು, ಇನಸೂನು
ವರ ಯೌವನಾಶ್ವ, ಹಂಸಕೇತು ನೀಲಕೇತು ॥

ವರಸೇನಾ ಶರಧಿಯೂ  ವಾದ್ಯಘೋಷಗಳಿಂದ ಭಜಿಸುತ್ತಾ
ಶ್ರೀರಮಣನಂಘ್ರಿಯ  ಧ್ಯಾನಿಸುತ್ತಾ  ॥

ಬರುತಾ ಕಂಡನು ದೂರಾ  ದಿಂದಲಾ  ಮಣಿಪುರವ
ಧರಣಿಪ್ರಭೆಯಂತೊಪ್ಪ  ಕೋಟೆ ಆ ಕೋಟೆ.

(ಅರ್ಜುನ ಬರುವಿಕೆ)

ಅರ್ಜುನ: ಯಲಾ ಚಾರ ಹೀಗೆ ಬಾ. ಯಲಾ ಮನುಷ್ಯನೆ ಪೇಳುತ್ತೇನೆ ಕೇಳುವಂಥವನಾಗೋ ಚಾರ.

ಶುಭ್ರಭ್ರದೋಳ್ ವಿಭ್ರಾಜಿಸುವ ಭ್ರಡ್ವಾಧಿಪತಿಯಂತೆ ಹೃದ್ಭಟನೆನಿಸಿ ದೃಷ್ಟಿ ಮೂರುಳ್ಳ ಶ್ರೀ ಸಾಂಬ ಮೂರ್ತಿಯನ್ನು ಮೆಚ್ಚಿಸಿ ಸಂಭ್ರಮದಿಂದ ಪಾಶುಪತಾಸ್ತ್ರವಂ ಪಡೆದು ಇರುವ ಚಂಡ ಪ್ರಚಂಡ, ತ್ರೈಜಗದ್ಗಂಡ, ರಿಪುಮದ ಗರ್ವಖಂಡ, ಭೇರುಂಡ, ಕನಕಮಣಿ, ಕುಂಡಲಾಸ್ಥಿತ. ಶುಂಡಾಲ ನಗರಾಧ್ಯಕ್ಷ, ಪಾಂಡುರಾಯನ ಸುಕುಮಾರ, ಪ್ರಳಯಕಾಲ ಮಾರ್ತಾಂಡನೆಂದೆನಿಸಿ, ಶ್ರೀ ಮದನಗೋಪಾಲ, ಕಟಾಕ್ಷವೀಕ್ಷಣ, ಸಮಾಧೀತ, ದುರ್ಜನ ಧ್ವಂಸಕನಾದ ಅರ್ಜುನ ಭೂಪಾಲನೆಂದು, ಈ ಪೊಡವಿಯೊಳ್, ವಂದೆರಡು ಸಾರಿ ಕಿತಾಬ್ ಮಾಡಿಸುವಂಥವನಾಗೋ ಚಾರ ವರ ಫಣಿಹಾರ.

ಯಲಾ ಸಾರಥಿ, ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ, ನಮ್ಮ ಅಣ್ಣಂದಿರು, ಗುರು ವಧೆ ಅನುಜ ಅಗ್ರಜ ಬಂಧು ವರ್ಗಗಳನ್ನು ಹತಮಾಡಿದೆನೆಂಬ ಚಿಂತೆ ಇಂದ, ಸಿಂಹಾಸನವನ್ನೇರಿ, ಭೂಮಿಯಂ ಪರಿಪಾಲನೆ ಮಾಡದೆ ಇರಲಾಗಿ, ಮುನಿಮೌನಿಯಾದ, ವೇದವ್ಯಾಸರು ಬಂದು, ಧರ್ಮರಾಯರಿಗೆ, ಸಮಾಧಾನವಾಗುವ ಹಾಗೆ ಅನೇಕ ನೀತಿ ಮಾರ್ಗಗಳನ್ನು ಹೇಳುತ್ತಾ ಅಶ್ವಮೇಧಯಾಗದಿಂದ, ದೋಷ ಹೋಗುವುದೆಂದು ಹೇಳಲಾಗಿ, ಯೌವನಾಶ್ವನ ಪಟ್ಟಣಕ್ಕೆ ಕಳುಹಿಸಿ ಯಾಗದ ಕುದುರೆಯನ್ನು ತರಿಸಿ, ಯಾಗದ ಕುಂಡವನ್ನು ರಚಿಸಿ ದ್ರೌಪದೀ-ಸಮೇತರಾಗಿ, ಅಣ್ಣಂದಿರು ಯಾಗವನ್ನು ನಡೆಸುತ್ತಾ, ಕಂಕಣಬದ್ಧರಾಗಿ ಕುಳಿತು ಇದ್ದಾರೆ. ತಮ್ಮ ಪ್ರತಾಪವನ್ನು ಯಾಗದ ಕುದುರೆಯ ಮಸ್ತಕಕ್ಕೆ ಕಟ್ಟಿ ಬೆಂಬಲವನ್ನು ಕೊಟ್ಟು ಅದರ ಹಿಂಬಲವಾಗಿ ಯನ್ನನ್ನು ಕಳುಹಿಸಿ ಇದ್ದಾರೆ.

ಆದಕಾರಣ ಕುದುರೆಯನ್ನು ದೇಶದ ಮೇಲೆ ಬಿಟ್ಟು ಇರುವ ಕಾಲದಲ್ಲಿ, ಯಾರಾದರೂ ಪರಾಕ್ರಮ ಶಾಲಿಗಳು ಕಟ್ಟಿಕೊಂಡರೆ, ಅವರೊಡನೆ ಯುದ್ಧವನ್ನು ಮಾಡಿ, ಜಯಿಸಿ ಅವರಿಂದ ಕಪ್ಪಕಾಣಿಕೆಯನ್ನು ತೆಗೆದುಕೊಂಡು ನಮ್ಮ ಹಸ್ತಿನಾವತಿಗೆ ಕಳುಹಿಸುತ್ತಾ ಇದ್ದೇನಲಾ – ಸಾರಥೀ

ಅಯ್ಯ ಸಾರಥೀ – ನಮ್ಮ ಸೇನಾಧಿಪತಿಗಳಾದ ಹಂಸಧ್ವಜ, ನೀಲಧ್ವಜ, ಅನುಸಾಲ್ವ, ಪ್ರದ್ಯುಮ್ನ, ಯೌವನಾಶ್ವ, ವೃಷಕೇತು ಮೊದಲಾದ ಯಾದವ ಬಲವನ್ನು ಜಾಗ್ರತೆ ಕರೆಸುವಂಥವನಾಗೋ ಸಾರಥೀ.

(ಪ್ರದ್ಯುಮ್ನ ಬರುವಿಕೆ)

ಪ್ರದ್ಯುಮ್ನ: ಯಲಾ ಚಾರ, ಈಗ ತಾರಾ, ಹೀರಾ ಪಟೀರನಾದ ಝೇಂಕರ, ಝಣ ಝಣತ್ಕಾರದಿಂದ, ಮೃದು ಮಧುರೋಕ್ತಿಯಿಂದ, ಯಮ್ಮನ್ನು ಮಾತನಾಡಿಸುವ ಸುಭಟ ನೀ ಧಾರೊ, ಎನ್ನೋಳ್ ಸಾರೋ.

ಯಲಾ, ಸಾರಥೀ ಈಗ ಬಂದವರು ಧಾರೆಂದು ಕೇಳುತ್ತೀಯಾ. ಆದರೆ ಯಮ್ಮ ವೃತ್ತಾಂತವನ್ನು, ಪೇಳುತ್ತೇನೆ ಕೇಳೋ ಸಾರಥಿ.

ಯಲಾ ಸಾರಥೀ, ಅಂಜದೆ, ಮಂಜುಳ ಸಮತ್ಕೀರ್ಣರಸ ಪರಿಮಳ ಕುಸುಮ ಪ್ರಭಾಸಮಾನನಾದ, ದಾನವಾಂತಕನಾದ ದ್ವಾರಕೀ ಅರಸು, ಧಾರೆಂದು ಕೇಳಿಬಲ್ಲೇ.

ಸಾರಥಿ: ಶ್ರೀಕೃಷ್ಣಮೂರ್ತಿಯೆಂದು ಕೇಳಿಬಲ್ಲೆನಯ್ಯ ರಾಜ.

ಪ್ರದ್ಯುಮ್ನ: ಅಂತೊಪ್ಪ ಶ್ರೀಕೃಷ್ಣನ ಕುಮಾರ ಕಂಠೀರವನಾದ ಪ್ರದ್ಯುಮ್ನ ಬಂದು ಇದ್ದಾನೆಂದು, ಕಿತಾಬ್ ಮಾಡಿಸುವಂಥವನಾಗೋ ಸಾರಥೀ.

ಈ ಸಭಾಸ್ಥಾನನಕ್ಕೆ ಬಂದ ಕಾರಣವೇನೆಂದರೆ ನಮ್ಮ ಜನಕನ ಅಪ್ಪಣೆಯನ್ನು ಪಡೆದು ಯಾದವದಂಡು ಸಹಿತ ಅರಿರಾಜರ ಜಯಿಸುವ ನಿಮಿತ್ಯವಾಗಿ ನಮ್ಮ ಮಾವಯ್ಯನವರ ಸಂಗಡ ಬಂದು ಇದ್ದೇನೆ. ಅತಿ ಜಾಗ್ರತೆಯಿಂದ ನಮ್ಮ ಮಾವಯ್ಯನನ್ನು ಭೇಟಿ ಮಾಡಿಸೋ ಸಾರಥೀ ॥

ಪ್ರದ್ಯುಮ್ನ: ನಮೋನ್ನಮೋ ಮಾವನವರೇ

ಅರ್ಜುನ: ದೀರ್ಘಾಯುಷ್ಯಮಸ್ತು ಬಾರಯ್ಯ ಪ್ರದ್ಯುಮ್ನ ರಾಜ

(ಅನುಸಾಲ್ವ ಬರುವಿಕೆ)

ಅನುಸಾಲ್ವ: ಯಲಾ ಮಾನುಷ್ಯನೆ, ಹೀಗೆ ಬಾ, ಯಲಾ ಚಾರ ! ಅಭ್ರ ವಿಭ್ರಾಜಿತ, ನೀಲಭ್ರಾ ಕಾರುಣಿಯಂ ಕಂಡು, ತನ್ನ ಮನದೋಳ್ ಹರುಷವಂಪಟ್ಟು, ತಕತಕನೆ ಕುಣಿದು ಮೆರೆಯುವ, ಮಯೂರದ ಮರಿಯಂತೆ, ಯಮ್ಮನ್ನು ಕಂಡು, ಭಯಪಟ್ಟು, ಗದ್ಗದಸ್ವರದಿಂದ, ಮಾತನಾಡಿಸುವ ಸುಭಟ ನೀ ಧಾರೋ ಎನ್ನೋಳ್ ಸಾರೋ.

ಸಾರಥಿ: ಸಾರಥಿ ಎಂದು ಕರೆಯುವರೈಯ್ಯ ರಾಜ

ಅನುಸಾಲ್ವ: ಎಲಾ ಸಾರಥಿ, ಯಮ್ಮನ್ನು ಧಾರೆಂದು ಕೇಳುತ್ತೀಯಾ ಯಮ್ಮ ವೃತ್ತಾಂತವನ್ನು ಪೇಳುತ್ತೇನೆ ಕೇಳೋ ಸಾರಥೀ.

ಯಲಾ ಸಾರಥೀ, ಘೂರ್ಜರ, ಗೌಳ, ಕೇರಳ, ಸೌಹೀರ, ಸೌರಾಷ್ಟ್ರ, ನೇಪಾಳ, ಬರ್ಬರ, ಕುಂತಳ, ಗಾಂಧಾರ, ಮಗಧ, ಮಲಯಾಳ, ಪಾಂಡ್ಯ, ಪುಳಿಂದ ಪ್ರೌಢಕ ದೇಶಗಳಿಗಿಂತ ಶ್ರೇಷ್ಟಮಾದ, ಧಾವ, ಆವಂತೀ ದೇಶವನ್ನು ಪರಿಪಾಲನೆ ಮಾಡುವಂಥ ಅನುಸಾಲ್ವ ರಾಜೇಂದ್ರನೆಂದು ಈ ಪೊಡವಿಯೋಳ್, ಒಂದೆರಡು ಮೂರು ಸಾರಿ ಕಿತಾಬ್ ಮಾಡಿಸುವಂಥವನಾಗೋ ಚಾರ ಗುಣಮಣಿಹಾರ.

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ, ವೈಕುಂಠವಾಸನಾದಂಥ ಲಕ್ಷ್ಮೀಪತಿಯು, ದುಷ್ಟದಾನವರನ್ನು ಸಂಹಾರ ಮಾಡುವ ನಿಮಿತ್ಯವಾಗಿ, ಹತ್ತು ಅವತಾರಗಳನ್ನು ಯೆತ್ತಿದನು. ಅವು ಯಾವುವೆಂದರೆ – ಮತ್ಸ್ಯಃ, ಕೂರ‌್ಮಃ ವರಾಹಶ್ಚ, ನಾರಸಿಂಹಶ್ಚ ವಾಮನ  ರಾಮೋ ರಾಮಶ್ಚ, ಕೃಷ್ಣ ಬೌದ್ಧಃ ಕಲ್ಕಿಮೇವಚ ॥ ಎಂಬ ಹತ್ತು ಅವತಾರಗಳಲ್ಲಿ ಶ್ರೇಷ್ಟನಾದ ರಾವಣ, ಕುಂಭಕರ್ಣ, ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಶಿಶುಪಾಲ, ಜರಾಸಂಧ, ಕಂಸ ಮೊದಲಾದ ದಾನವರನ್ನೆಲ್ಲಾ, ಸಂಹಾರ ಮಾಡಿದಂಥ ಶ್ರೀ ಹರಿಯು, ಪಾಂಡವರಿಗೆ, ಪಂಚಪ್ರಾಣನೆನಿಸಿಕೊಂಡು ಇದ್ದಾನೆ. ಆದಕಾರಣ ಸ್ವಾಮಿಭಕ್ತರಲ್ಲಿ ದ್ವೇಷಮಾಡಬಾರದೆಂದು ಹೇಳಿ, ಪಾರ್ಥನನ್ನು ಕಾಣುತ್ತಲೇ, ಶರಣಾಗತನಾಗಿ ಧರ್ಮರಾಯರು ನಡೆಸುವಂಥ ಯಜ್ಞಕ್ಕೆ ಸಹಾಯವಾಗಿ, ವಿಜಯನೊಡನೆ ದಳ ಸಹಿತಮಾಗಿ ಬಂದು ಇದ್ದೇನೆ. ಧನಂಜಯ ದಾವಲ್ಲಿ ಇದ್ದಾರೋ ಭೇಟಿ ಮಾಡಿಸೋ ಸಾರಥೀ.

ಅನುಸಾಲ್ವ: ನಮೋ ನ್ನಮೋ ರಾಜ ಅರ್ಜುನ ಭೂಪಾಲ

ಅರ್ಜುನ: ದೀರ್ಘಾಯುಷ್ಯಮಸ್ತು ಬಾರಯ್ಯ ಅನುಸಾಲ್ವ ರಾಜೇಂದ್ರಾ.

(ಹಂಸಧ್ವಜ ಬರುವಿಕೆ)

ಹಂಸಧ್ವಜ: ಯಲಾ ಸಾರಥೀ ಹೀಗೆ ಬಾ ಈಗ ಬಂದವರು ಧಾರೆಂದು ಕೇಳುವೆ ನಮ್ಮ ವೃತ್ತಾಂತವನ್ನು ಪೇಳುತ್ತೇನೆ, ಕೇಳೋ ಸಾರಥೀ.

ಶ್ರೀಮನ್ ಮಹೀಮಂಡಲ, ಮಂಡಲಾಯಮಾನ, ಹಿಮಧರಾನ್ವಿತ, ಮಣಿ ಮುಕುಟ ತಟಘಟಿತ, ಕರ್ಣಕುಂಡಲ ವಿಭ್ರಾಜಿತ, ನಗರಾರ್ಚಿತ, ಚೋಳ, ಬಂಗಾಳ, ದ್ರಾವಿಡ ದೇಶಗಳಿಗಿಂಥ ಶ್ರೇಷ್ಟಮಾದಂಥ ಚಂಪಕಾಪುರಿ ಪಟ್ಟಣವನ್ನು ಪರಿಪಾಲನೆ ಮಾಡುವಂಥ ಹಂಸಧ್ವಜರಾಜನೆಂದು ಕಿತಾಬ್ ಮಾಡಿಸುವಂಥವನಾಗೋ ಸಾರಥೀ.

ಯಲಾ ಸಾರಥೀ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಧರ್ಮರಾಯರು ನಡೆಸುವಂಥ ಯಜ್ಞಕ್ಕೆ ಸಹಾಯವಾಗಿ ವಿಜಯನೊಡನೆ, ದಳ ಸಹಿತಮಾಗಿ ಬಂದು ಇದ್ದೇನೆ. ಅರ್ಜುನ ಭೂಪಾಲರು ಧಾವಲ್ಲಿ ಇದ್ದಾರೋ ಭೇಟಿ ಮಾಡಿಸೋ ಸಾರಥೀ.

ಹಂಸಧ್ವಜ: ನಮೋನ್ನಮೋ ಅರ್ಜುನ ಭೂಪಾಲ

ಅರ್ಜುನ: ದೀರ್ಘಾಯುಷ್ಯಮಸ್ತು ಬಾರೈಯ್ಯ ಹಂಸಧ್ವಜ ರಾಜ

 

(ಯೌವನಾಶ್ವ ಬರುವಿಕೆ)

ಯೌವನಾಶ್ವ: ಯಲಾ, ಚಾರ ಹೀಗೆ ಬಾ, ಯಲಾ ಮನುಜಾ ಅಭ್ರವಿಭ್ರಾಚಿತ, ನೀಲಭ್ರಾಕಾರುಣಿಯಂ ಕಂಡು ತನ್ನ ಮನದೋಳ್ ಹರುಷವಂಪಟ್ಟು, ತಕತಕನೆ ಕುಣಿದು ಮೆರೆಯುವ, ಮಯೂರದ ಮರಿಯಂತೆ, ಮಾತನಾಡಿಸುವ ಸುಭಟ ನೀ ಧಾರೋ ಎನ್ನೋಳ್ ಸಾರೋ.

ಸಾರಥಿ: ಸಾರಥೀ ಎಂದು ಕರೆಯುವರೈಯ್ಯ ಸ್ವಾಮಿ.

ಯೌವ್ವನಾಶ್ವ: ಯಲಾ ಸಾರಥಿ ! ಯಮ್ಮನ್ನು ಧಾರೆಂದು ಕೇಳುತ್ತೀಯಾ ಪೇಳುತ್ತೇನೆ ಕೇಳೋ ಸಾರಥೀ.

ಶ್ರೀಮನ್ ಮಹೀಮಂಡಲ, ಮಂಡಲಾಯಮಾನ, ಹಿಮದ್ ಮಂಡಲೇಶ್ವರ, ಮಣಿಮಕುಟ ತಟ ಘಟಿತ, ಕರ್ಣಕುಂಡಲ, ವಿಭ್ರಾಜಿತ, ಚೋಳ, ಬಂಗಾಳ, ನೇಪಾಳ ಮೊದಲಾದ ಐವ್ವತ್ತಾರು ದೇಶಗಳಿಗಿಂತ ಮಿಗಿಲಾದ ಭದ್ರಾವತಿ ಪಟ್ಟಣವನ್ನು ನಿಷ್ಠೆಯಿಂದ ಪಾಲಿಸುವ ಯೌವನಾಶ್ವ ಭೂಪಾಲನೆಂದು ಕಿತಾಬ್ ಮಾಡಿಸುವಂಥವನಾಗೋ ಸಾರಥೀ,

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಧರ್ಮರಾಯರು ನಡೆಸುವಂಥ ಯಾಗದ ಕುದುರೆಯನ್ನು, ದೇಶದ ಮೇಲೆ ಬಿಟ್ಟು ಇದೆ. ಆದಕಾರಣ, ಅದರ ಸಂರಕ್ಷಣಾರ್ಥವಾಗಿ, ಅರ್ಜುನ ಭೂಪಾಲನ ಸಂಗಡ ಬಾಹೋಣವಾಯ್ತು. ಜಾಗ್ರತೆ ಇಂದ ಭೇಟಿ ಮಾಡಿಸುವಂಥವನಾಗೋ ಸಾರಥೀ.

ಯೌವನಾಶ್ವ: ನಮೋನ್ನಮೋ ಅರ್ಜುನ ಭೂಪಾಲ.

ಅರ್ಜುನ: ದೀರ್ಫಾಯುಷ್ಯಮಸ್ತು ಬಾರೈಯ್ಯ ಯೌವನಾಶ್ವ ರಾಜ.

ಯೌವನಾಶ್ವ: ಅಯ್ಯ ರಾಜ, ಯನ್ನನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನಯ್ಯ ರಾಜ.

ಅರ್ಜುನ: ಅಯ್ಯ ಯೌವನಾಶ್ವ ರಾಜ, ಈ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂಥವನಾಗೈ ರಾಜ.