(ಅನುಸಾಲ್ವಯುದ್ಧಕ್ಕೆ ಬರುವಿಕೆ)

ಅನುಸಾಲ್ವ: ಯಲಾ ಬಭೃವಾಹನ ನಿಲ್ಲು ನಿಲ್ಲು ಮತ್ತು ಪೇಳುತ್ತೇನೆ ಕೇಳುವಂಥವನಾಗೋ ಹುಡುಗಾ.

ದರುವು

ಯಲಾ ಬಭೃವಾಹನ  ಯಾಕೆ ಈ ಪೌರುಷಾ
ಬಲವಂತರೊಳು ಬೇಡ  ಹೋಗೋ, ನೀ ಹೋಗೋ

ಅನುಸಾಲ್ವ: ಯಲಾ, ಬಭೃವಾಹನ  ಪೋರಾ, ಹಡೆದಂಥ ತಂದೆ ಯೆಂಬುವಂಥದ್ದು ಲೇಶವಾದರೂ ಭಯವಿಲ್ಲದೆ ಬಾಲಭಾಷೆಗಳನ್ನಾಡುತ್ತಾ ಇದ್ದೀಯಾ, ಬಲವಂತರೊಡನೆ ನಿನ್ನ ಪೌರುಷವೇನು ಸಾಗುತ್ತೆ: ಈ ರಣರಂಗ ನಿನಗೆ ಬೇಡ, ಸುಮ್ಮನೆ ಸಾಗುವಂಥವನಾಗೋ, ಹೇಡಿ ಮುಂಡೇದೆ ॥

ದರುವು

ಸಾಗುವೆನನುಸಾಲ್ವ  ಬೇಗಾ ಸಂಗ್ರಾಮದೀ
ನೀಗೀ, ನಿಮ್ಮೆಲ್ಲರಾ  ಪ್ರಾಣಾ  ನಿತ್ರಾಣಾ ॥

ಬಭೃವಾಹನ: ಯಲಾ ಮೂರ್ಖ  ಗಜದ ಗರ್ಜನೆಗೆ, ಸಿಂಹ ತಾ ಬೆದರ ಬಲ್ಲದೆ, ನಿಮ್ಮ ರಾಜರ ಡಂಭಕ್ಕೆ ವೀರ ರಣರಂಗಧೀರನಾದ, ಬಭೃವಾಹನ ಬೆದರಬಲ್ಲನೇ, ಈ ಸಂಗ್ರಾಮ ಭೂಮಿಯಲ್ಲಿ ನಿಂತು, ನಿಮ್ಮೆಲ್ಲರ ಪ್ರಾಣವನ್ನು ನೀಗಿದ ಬಳಿಕಾ, ಸಾಗುವೆನಲ್ಲದೇ, ನಿನ್ನ ಅಲ್ಪವಾದ ಬೆದರಿಕೆಗೆ ಸಾಗಿ ಹೋಗುವೆನೇನಲಾ, ರಾಕ್ಷಸಾಧಮಾ ॥

ದರುವು

ಪ್ರಾಣಾ ನೀಗುವುದಕ್ಕೆ  ತ್ರಾಣವುಳ್ಳೊಡೆ ಯನ್ನಾ
ಬಾಣಾ ಸಂತೈಸಿಕೊಳ್ಳೊ  ನೀ ಕೊಳ್ಳೊ ॥

ಅನುಸಾಲ್ವ: ಯಲಾ ಬಭೃವಾಹನ ಅರ್ಜುನನ ಮಗನೆಂದು, ಸುಮ್ಮನೆ ಕೈ ತಡೆದು ಇದ್ದರೆ, ನಮ್ಮೆಲ್ಲರ ಪ್ರಾಣವನ್ನು, ನೀಗುತ್ತೇನೆಂದು ಹೇಳುತ್ತೀಯಾ ಯಲಾ ! ಹುಡುಗ, ಅಂಥ ಪರಾಕ್ರಮಶಾಲಿಯೇ ನೀನಾದರೆ, ರಣಾಗ್ರಕ್ಕೆ ನಿಲ್ಲುವಂಥವನಾಗೋ ಹುಡುಗಾ ॥

ದರುವು

ಸಬ್ಬಳಿಸುವಡೇ, ನಿನ್ನಾ  ಅಂಬು ನೋಡೆಲೋ ತಾಳೋ
ಕೊಬ್ಬಿದ ಶರ ದೈತ್ಯನಂಜಕ್ಕೆ, ಅಂಜಕ್ಕೆ ॥

ಬಭೃವಾಹನ: ಯಲಾ ನಿಶಾಚರ, ಇಕ್ಕೊ ನೋಡು, ಕಾಲಾಗ್ನಿಯಂತೆ ಕಿಡಿಗಳನ್ನು ಉಗುಳುತ್ತಾ ಬರುವಂಥ, ಬಾಣವನ್ನು ಬಿಟ್ಟು ಇದ್ದೇನೆ ಸೈರಿಸುವಂಥವನಾಗೋ ಭಂಡಾ

ಭಾಗವತರದರುವು

ಅಬ್ಬರಿಸುತಾ  ಲಾಗಾ  ದನುಜಾನು
ಉಬ್ಬಿ ಪಡೆದಾನು ವೈರಿ ಪಣಿಗಳಾ ॥

ಒಬ್ಬರೊಬ್ಬರಾ  ಜೈಸುವಾಸೆಯಿಂ
ಇಬ್ಬರಾಗಣಿತಾ  ಯುದ್ಧಗೈದಾರು ॥

ಸತ್ವ ಸಾಲದೇ ಅನುಸಾಲ್ವನಾ ಭಲಾ
ಪೃಥ್ವಿಗೊರೆಗಲೂ  ರುಧಿರ ಹರಿಸುತಾ ॥

ಬಭೃವಾಹನ: ಯಲಾ, ರಾಕ್ಷಸಾಧಮಾ  ಪ್ರಥಮ ಆಡಿದ ಮಾತುಗಳೇನಾದವೆಲಾ  ನಿಶಾಚರ ನಿನ್ನ ಶರೀರವೆಲ್ಲಾ, ಪ್ರವರ್ಧನವಾಗಿ, ರಕ್ತವೂ ಭೂಮಿಗೆ ಸುರಿಯುತ್ತಲಿದೆ. ನಿನ್ನ ಸತ್ವವೆಲ್ಲಾ, ತಗ್ಗಿ ಹೋಯಿತು. ಯಲಾ, ಭಂಡ ಇನ್ನು ನೀನು ಉಳಿಯುವ ಹಾಗೆ ಇಲ್ಲಾ, ಪ್ರಾಣವನ್ನು ಬಿಡುವಂಥವನಾಗೋ, ಮೂರ್ಖ ॥

(ಅನುಸಾಲ್ವನ ಮೂರ್ಛೆ)

(ಪ್ರದ್ಯುಮ್ನ ಯುದ್ಧಕ್ಕೆ ಬರುವಿಕೆ)

ಕಂದ

ನಿಲ್ಲು ನಿಲ್ಲು ಬಭೃವಾಹನ  ರಣರಂಗ
ದುಲ್ಲಾಸಮಿದು, ತಿಳಿಯದೈ, ಮರುಳೇ
ಬಲ್ಲಿದ ಮುರಾಂತಕನ ಸುತನಂ
ನೀನರಿಯೇ  ಕಟ್ಟಿದ ಹಯವನು,
ಮೆಲ್ಲನೆ ಪಾರ್ಥನಿಗೊಪ್ಪಿಸದೇ
ಬಲ್ಲವಿಕೆ ಮೊದಲು, ನಮಗೊಂದಿಸದೆ
ನೀ ಖುಲ್ಲು ಬುದ್ಧಿಗಳಿಂದ ಕೆಡಿಸಿಕೊಂಡೈ
ಇನ್ನು ಕಾಯ ಜೀವಿಸುವದೆಂತೋ ॥

ಪ್ರದ್ಯುಮ್ನ: ಯಲಾ  ಬಭೃವಾಹನ  ನಿಲ್ಲು ನಿಲ್ಲು, ಯಾತಕ್ಕೆ ವಿಮುಖನಾಗುತ್ತಾ, ಇದ್ದಿ, ರಣರಂಗವೇ ಉಲ್ಲಾಸವಾಗಿ ಇದೆ  ಮರುಳೇ, ರಾಕ್ಷಸಾಂತಕನಾದ ಕೃಷ್ಣನ ಕುಮಾರ ಪ್ರದ್ಯುಮ್ನ, ಬಂದು ಇದ್ದಾನೆಂದು ನಿನಗೆ ತಿಳಿಯದೇ ಹೋಯಿತೇ, ಕಟ್ಟಿದಂಥ ಕುದುರೆಯನ್ನು, ಮೆಲ್ಲನೆ ತಂದು, ನಿಮ್ಮ ತಂದೆಯ ಪಾದಕ್ಕೆ, ಒಪ್ಪಿಸದೇ, ಹೇ ಮರುಳೇ, ತೃಣವಾದರೂ ನಿನಗೆ ತಿಳಿಯದೆ ಹೋಯಿತೆ, ಮೊದಲು ಬಂದು ನಮ್ಮ ಪಾದಕ್ಕೆ ನಮಸ್ಕರಿಸದೆ ಮರುಳು ಬುದ್ಧಿಗಳಿಂದ, ಕೆಡಿಸಿಕೊಂಡು, ಇನ್ನೂ ಜೀವಿಸಿಕೊಂಡು, ಹೋಗುವ ಬಗೆಯನ್ನು ನೋಡುತ್ತೇನಲಾ, ಬಭೃವಾಹನ ॥

ದರುವು

ಕೃಷ್ಣನ ಮಗನೆಂಬುವದೂ  ಲೋಕ
ವಷ್ಟು  ಬಲ್ಲದು  ನೀನೆಯಹುದೂ ॥
ಕಷ್ಟ ತೋರುವುದೂ  ಈ ಘೋರಸಂಗ್ರಾಮದೀ
ನೆಟ್ಟನೇತಕೆ ಬಂದೆ  ನೀನೆ ಅನಂಗನೇ ॥

ಬಭೃವಾಹನ: ಯಲಾ ಪ್ರದ್ಯುಮ್ನ ಕೃಷ್ಣನ ಮಗನೆಂಬುವಂಥದ್ದು, ಲೋಕವೆಲ್ಲಾ ಬಲ್ಲದು, ನೀನು ಕೃಷ್ಣನ ಮಗನೇ, ಅಹುದು. ಹಿಂದಕ್ಕೆ ದೇವತೆಯರ ಮಾತನ್ನು ಕೇಳಿ, ಕಬ್ಬಿನಬಿಲ್ಲು ಪಿಡಿದು, ಹೇಮಕೂಟಕ್ಕೆ ಹೋಗಿ ತ್ರಿಯಾಂಬಕನ ಮೇಲೆ ಬಾಣವನ್ನು ತೊಟ್ಟು, ಹರನ ಉರುಗಣ್ಣಿನಿಂದ, ಸುಟ್ಟು ಅನಂಗನಾಗಿ, ಮರಳಿ ಬಂದು, ರುಕ್ಮಿಣಿದೇವಿಯ ಗರ್ಭದಲ್ಲಿ ಜನಿಸಿ, ಶಂಭರಾಸುರನ ಮನೆಯಲ್ಲಿ ಬೆಳೆದು, ದ್ವಾರಕಿಯನ್ನು ಸೇರಿಕೊಂಡಂಥದ್ದು, ಲೋಕವೆಲ್ಲಾ ಬಲ್ಲದು. ಯಲಾ ಪೋರಾ ಈ ಘೋರ ಸಂಗ್ರಾಮವೆಂಬುವಂಥದ್ದು, ಬಹಳ ಕಷ್ಟವಾಗಿ ಇದೆ. ಇದು ತಿಳಿಯದೆ, ಇಲ್ಲಿಗ್ಯಾತಕ್ಕೆ ಬಂದೋ ಪ್ರದ್ಯುಮ್ನ॥

ದರುವು

ಕೇಳೆಲಾ  ಪಾರ್ಥಕುಮಾರ  ನಿನ್ನ
ಜಾಳು ಮಾತುಗಳ ಹಮ್ಮೀರ ॥
ತಾಳಿದೆ ನಿನ್ನಯ  ಬಾಣವಂದನು ತಾಳಿ
ಸೀಳಿ ಹಾಕುವೆನೂ  ಶರಾಳಿಯು ತಾಳಿ ॥

ಪ್ರದ್ಯುಮ್ನ: ಯಲಾ  ಪಾರ್ಥನ ಕುಮಾರನಾದ ಬಭೃವಾಹನನೇ ಕೇಳು, ಈ ಕಠೋರತರವಾದ ನುಡಿಯನ್ನು ನುಡಿಯುತ್ತಿ. ಯಲಾ. ಹುಡುಗಾ, ಹಿಂದೂ ಮುಂದೂ ವಿಚಾರವಿಲ್ಲದೆ, ಬಾಲ ಭಾಷೆಗಳನ್ನಾಡುತ್ತಾ ಇದ್ದೀಯಲಾ, ಪೋರಾ  ನೀನು ನನಗೆ ಭಾವನಾಗಬೇಕೆಂದು ಸೈರಿಸಿಕೊಂಡು ಇದ್ದೆ, ಇನ್ನು ಸೈರಿಸುವವನಲ್ಲಾ, ಈ ರಣಭೂಮಿಗೆ ಆಹುತಿಯನ್ನು ಕೊಡುತ್ತಾ ಇದ್ದೇನೆ. ಯನ್ನ ಶರಸಮುದಾಯಕ್ಕೆ ತಾಳಿಕೊಂಡು ನಿಲ್ಲುವಂಥವನಾಗೋ ಪೋರಾ

ದರುವು

ತಾಳಿಕೊಂಬೆನು, ಭಯವಿಲ್ಲಾ  ಯೇನಾ,
ಪೇಳ್ವೆ  ನಿನ್ನಯ ಬಾಣವೆಲ್ಲಾ ॥
ಬಾಳಲಾರೆವು, ಬಾಲಕಿಯರ  ಹೃದಯಾದೀ
ಸೀಳಿಸಿ ತೋರುವುದು, ಕೃಷ್ಣಾದ್ರೀಶ ಬಲ್ಲಾ ॥

ಬಭೃವಾಹನ: ಯಲಾ, ಪ್ರದ್ಯುಮ್ನಾ, ನೀನು ನನ್ನನ್ನು ಭಾವನೆಂದು ಭಾವಿಸಿಕೊಂಡಿದ್ದೆ. ಬಹಳ ಲೇಸಾಯಿತು. ನಿನ್ನ ಬಾಣಗಳು ವಿರಹತಾಪದಿಂದ ಬಳಲುವಂಥಾ, ಬಾಲಕಿಯರ ಮೇಲೆ ನಡೆಯುವುದಲ್ಲದೆ, ನನ್ನ ಮೇಲೆ ಸಾಗಲಾರದೈಯ್ಯ, ಭಾವೈಯ್ಯ ನಿನ್ನ ವಳ್ಳೆ ಮಾತುಗಳಿಗೆ ಅಂಜುವನಲ್ಲಾ, ತೀವ್ರದಿಂದ ಯುದ್ಧಕ್ಕೆ ನಿಲ್ಲುವಂಥವನಾಗೋ ಪ್ರದ್ಯುಮ್ನ.

ದರುವು

ಸಂಗ್ರಾಮ ಭೂಮಿಯೊಳಗಿಂಥ
ಶೃಂಗಾರ ಸೊಗಸಿನಾ ಮಾತುಗಳ್ಯಾಕೋ
ಭಂಗಪಡಲೀ, ಬೇಡ ಹೋಗೋ, ಬಭೃವಾಹನ ॥

ಪ್ರದ್ಯುಮ್ನ: ಯಲಾ ಬಭೃವಾಹನ, ಧನುರ್ಧಾರಿಯಾಗಿ ಸಂಗ್ರಾಮ ಭೂಮಿಯಲ್ಲಿ ನಿಂತು, ಸೊಗಸುಗಾತಿಯರಂತೆ, ಮಾತುಗಳಾಡುತ್ತಾ ಇದ್ದೀ. ಈ ರಣ ಭೂಮಿಯಲ್ಲಿ ಬಹುಭಂಗ ಪಟ್ಟೀಯಲಾ ಬಭೃವಾಹನ ॥

ದರುವು

ಭಂಗಪಡುವುದೇಕೆ ವಿಷಯ
ಸಂಗತಿಗಳೇನಿಲ್ಲಾವೋ  ರಣ,
ರಂಗಧೀರನೆಂದೂ ತಿಳಿಯೋ ಪ್ರದ್ಯುಮ್ನ

ಬಭೃವಾಹನ: ಯಲಾ ಪ್ರದ್ಯುಮ್ನನೇ ಕೇಳು ಪುರುಷ ವಿಯೋಗದಿಂದ ಬಳಲುವಂಥ ಸ್ತ್ರೀ ಇದ್ದಾಳಲ್ಲಾ ಅಂಥವಳು, ನಿನ್ನ ಬೆದರಿಕೆಗೆ ಬೆದರಿ ಬಹುಭಂಗ ಪಟ್ಟಾಳಲ್ಲದೇ, ರಣರಂಗಧೀರನಾದ ಈ ಬಭೃವಾಹನ ಹೆದರಬಲ್ಲನೇ ರಣಾಗ್ರಕ್ಕೆ ನಿಲ್ಲುವಂಥವನಾಗೋ ಹೇಡಿ.

ದರುವು

ಮಾತಿನಿಂದಲೇನೂ ಫಲಾವೋ  ಘಾತಿಸುವೆನೋ
ಯಲಾ ಕೇಳೋ ಸಂಗ್ರಾಮದಲೀ
ನೂತನಾದ ಬಾಣಗಳೂ ಬಭೃವಾಹನ ॥

ಪ್ರದ್ಯುಮ್ನ: ಯಲಾ ಬಭೃವಾಹನ, ಈ ಸಂಗ್ರಾಮ ಭೂಮಿಯಲ್ಲಿ ಹುಚ್ಚುನಾಯಿಯಂತೆ ಉಚ್ಚರಿಸಬೇಡ, ನಿನ್ನ ತರಳತನದ ಚೇಷ್ಟೆಗಳನ್ನು, ವಿಚಾರಿಸುವರು ಧಾರು ಇಲ್ಲಾ, ಶೀಘ್ರವಾಗಿ ರಣಾಗ್ರಕ್ಕೆ ನಿಲ್ಲುವಂಥವ ನಾಗೋ ಮೂರ್ಖ॥

ದರುವು

ನೂತನಾ ಬಾಣವೂ, ನಿನ್ನಾ
ಭೀತಿಪಡಿಸುವವು, ಸುಭಟಾ
ಯಾತಕೇನೂ, ಲಕ್ಷವಿಹುದೋ  ಯಲವೋ ಪ್ರದ್ಯುಮ್ನ ॥

ಬಭೃವಾಹನ: ಯಲಾ ಪ್ರದ್ಯುಮ್ನ, ನಿನ್ನ ಸಂಹಾರ ಮಾಡಬಾರದೆಂದು, ಇಲ್ಲಿನವರೆವಿಗೂ ಸೈರಿಸಿದೆ, ಇನ್ನು, ಸೈರಿಸುವವನಲ್ಲಾ, ಇನ್ನು ನಿನ್ನ ಸತ್ವವೂ ತಗ್ಗಿ ಹೋಯಿತು. ಈ ಖಡ್ಗದಿಂದ ಕೊಚ್ಚಿ ಕೊಚ್ಚಿ ನುಚ್ಚು ನುಚ್ಚು ಮಾಡಿ, ಈ ರಣಭೂಮಿಯಲ್ಲಿರುವ ಹಿಂಡು ಭೂತಂಗಳು ಉಂಡು ಸಂತೋಷಪಡು ವಂತೆ ಮಾಡದೇ ಹೋದರೇ, ಬಭೃವಾಹನನೆಂಬ ಪೆಸರು ಇನ್ಯಾಕೆ ನಿಲ್ಲುವಂಥವನಾಗೋ ರಣಹೇಡಿ-

ದರುವು

ಕೇಶವಾತ್ಮಜಾ ಚೇತರಿಸುತ್ತಾ
ವಾಸೀ ಪಂಥದೀ ಯುದ್ಧ ಗೈದರೂ ॥

ಪ್ರದ್ಯುಮ್ನ: ಯಲಾ ಪೋರಾ, ಈ ಯುದ್ಧರಂಗ ಭೂಮಿಯಲ್ಲಿ ಧನುರ್ಧಾರಿಯಾಗಿ ನಿಂತೂ ಧೂರ್ಜಟಿ ಮೊದಲಾದವರೂ, ಮೆಚ್ಚುವಂತೆ ಬಿಂಕದ ಮಾತುಗಳಾಡುತ್ತೀಯಾ. ಈ ತುಚ್ಛ ಮಾತುಗಳಿಂದ, ಏನು ಫಲವೋ ಮೂರ್ಖ. ಇಕ್ಕೋ ಚಿಟಿಲಾರ್ಭಟಿಸುವ ನೂತನ ಬಾಣಗಳನ್ನು ಕಾರ್ಮುಕಕ್ಕೆ ಏರಿಸಿ ಬಿಡುತ್ತಾ ಇದ್ದೇನೆ. ಸೈರಿಸಿಕೊಳ್ಳೋ ಬಭೃವಾಹನ.

ದರುವು

ಶರವೂ, ಖಡ್ಗದೀ, ಚಕ್ರಬಾಣಾದೀ
ಸರಿಸಮಾನದೀ, ಕಾದರೀರ್ವರೂ ॥

ಬಭೃವಾಹನ: ಯಲಾ ಪ್ರದ್ಯುಮ್ನ, ಮದವೆಂಬುವಂಥದ್ದು ಎಷ್ಟು ಹೆಚ್ಚಿರುವುದೋ ತಿಳಿಯದು. ನಿನ್ನ ಎದೆಯ ಕೆಚ್ಚನ್ನು ಈಚೆಗೆ ತೆಗೆದು, ಶಾಕಿನಿ, ಢಾಕಿನಿ ಭೂತಗಣಕ್ಕೆ ಆಹುತಿಯನ್ನು ಮಾಡದೆ ಹೋದರೆ, ನಾನು ಕ್ಷತ್ರಿಯನೆನಿಸಬೇಕೆ. ಇಗೋ ನೋಡು, ನನ್ನ ಕರಾಗ್ರದೊಳಿರುವ ಶರವು ಅಗ್ನಿ ಜ್ವಾಲೆಯಂತೆ ಬರುತ್ತಾ ಇರುವುದು. ಬಿಡುತ್ತಾ ಇದ್ದೇನೆ. ತಾಳಿಕೊಂಡು ನಿಲ್ಲುವಂಥವನಾಗೋ ಪೋರಾ॥

ಭಾಗವತರದರುವು

ಹರಿ ಕುಮಾರನ ಸತ್ವ ತಗ್ಗಲು
ಧುರದಿ ಬಿದ್ದು ಮೂರ್ಛೆ ಹೋಗಲು ॥

(ಪ್ರದ್ಯುಮ್ನನ ಮೂರ್ಛೆ)

ಈ ಪ್ರಕಾರವಾಗಿ ಪ್ರದ್ಯುಮ್ನ ಮಡಿದು ಹೋಗಲು ಅರ್ಜುನನು, ಅದಂನೋಡಿ, ಯೌವನಾಶ್ವನೊಡನೆ ಇಂತೆಂದನೂ

(ಯೌವನಾಶ್ವ ಯುದ್ಧಕ್ಕೆ ಬರುವಿಕೆ)

ಅರ್ಜುನ: ಅಯ್ಯ, ಯೌವನಾಶ್ವ ಭೂಪತಿ, ಈ ಹುಡುಗನಾದ ಬಭೃವಾಹನನು, ನಮ್ಮ ದಂಡನ್ನೆಲ್ಲಾ ಹತಮಾಡಿದನು. ನೀನೂ ಹೋಗಿ ಅವನೊಡನೆ ಯುದ್ಧವನ್ನು ಮಾಡಿ ಜಯಿಸಿ ಬರಬೇಕಯ್ಯ ರಾಜ.

ಯೌವನಾಶ್ವ: ಹೇ ರಾಜ, ಈ ಖುಲ್ಲನಾದ ಬಭೃವಾಹನನನ್ನೂ ಕುಟ್ಟಿ, ಕುಟ್ಟಿ, ಕೋಲಾಹಲವಂ ಮಾಡಿ ಬರುತ್ತೇನೆ. ನೇಮವನ್ನು ಪಾಲಿಸೈಯ್ಯ ದೊರೆಯೇ.

ಅರ್ಜುನ: ಅಪ್ಪಣೆ ಕೊಟ್ಟು ಇದ್ದೇನೆ. ಹೋಗಿ ಬರುವುದೈಯ್ಯ ರಾಜ.

ದರುವು

ನಿಲ್ಲೊ, ನಿಲ್ಲೆಲೋ ಪೋರಾ  ನಾ
ಬಲ್ಲೆ ನಿನ್ನಯ ಶೌರ‌್ಯ ॥
ಬಲ್ಲಿದನಾದರೆ, ಬಿಲ್ಲು ಬಾಣವ ಪಿಡಿದಲ್ಲಿ
ಇಲ್ಲಿ ತೋರೋ ನಿನ್ನ ಮಲ್ಲಯುದ್ಧವಾ ॥

ಯೌವನಾಶ್ವ: ಯಲಾ ಹುಡುಗನಾದ ಬಭೃವಾಹನನೇ ಕೇಳು. ನಾನು ನಿನ್ನ ಸಾಹಸವನ್ನು ಬಲ್ಲೆನು. ಅಂಥಾ ಪರಾಕ್ರಮಿ ನೀನಾದರೆ ನಿನ್ನ ಬಿಲ್ಲು ಬಾಣವಂ ಪಿಡಿದು ನಿನ್ನ ಬಲವಂ ತೋರಿಸುವಂಥವನಾಗೋ ಕಳ್ಳಾ.

ದರುವು

ಪೌರುಷವ್ಯಾತಕೆ  ಯಲಾ ಯಲಾ
ಭುಜ ಬಲ ತೋರಿಸೋ ಯಲಾ ಯಲಾ ॥
ಗರುಡನ ಕೆಣಕಿದ ಉರಗನ ಪರಿಯೊಳು
ಶಿರವನು ಹಾರಿಪೆ ಯಲಾ ಯಲಾ ॥

ಬಭೃವಾಹನ: ಯಲಾ ಕಳ್ಳನಾದ ಯೌವನಾಶ್ವನೇ ಕೇಳು, ಗರುಡನ ಕೆಣಕಿದ ಸರ್ಪವೂ ಬದುಕ ಬಲ್ಲುದೇ, ಅಂಥ ಪರಾಕ್ರಮಿಯಾದರೇ ನೀನು ನಿನ್ನ ಬಾಣದ ಶಕ್ತಿಯನ್ನು ಯನ್ನ ಮೇಲೆ, ತೋರುವಂಥವನಾಗು ಇಲ್ಲವಾದರೆ, ನೀನು ಬಂದ ಮಾರ್ಗವನ್ನೂ, ಹಿಡಿಯುವಂಥವನಾಗೋ ಮೂರ್ಖ.

ದರುವು

ಯಾತಕೆನ್ನೊಳೇ ಪಂಥಾ  ಮತ್ತೆ,
ಘಾತಿಸದೇ ಬಿಡೆ ಸಿದ್ಧಾಂತ
ನೀತಿ ತಪ್ಪಿದ ಮಾತು, ಯಾತಕೆ
ಕಾತರಿಸದೇ, ಕಳವಳಪಡುತಿಹೇ ॥

ಯೌವನಾಶ್ವ: ಯಲಾ ಅಧಮಾ, ವೀರಾಧಿವೀರನಾದ ಯನ್ನ ಯೆದುರಿನಲ್ಲಿ ನಿಂತು ಕಾತರಿಸಿ ಕಳವಳಗೊಂಡು ನೀತಿ ಇಲ್ಲದಾ ತಬ್ಬಲಿ ಮಾತುಗಳನ್ನಾಡುತ್ತೀಯ್ಯಾ. ನಿನ್ನನ್ನು ಯನ್ನ ಬಾಣಕ್ಕೆ ಬಲಿ ಇಕ್ಕದೇ ಬಿಡೆನು. ನಿನ್ನ ತರಳತನದ ಪಂಥವನ್ನು ಬಿಟ್ಟು ಯನಗೆ ಶರಣಾಗತನಾಗಿ, ಕುದುರೆಯನ್ನು ತಂದೊಪ್ಪಿಸೋ ಪೋರಾ.

ದರುವು

ಹುಡುಗನು ನಾನತೀ ಬಿಡುವ ಶರಗಳಾ
ಸಡಗರದಲಿ, ನೋಡೆಲಾ  ಯಲಾ ॥
ಒಡಲನು ಶೋಣಿಸಿ, ಕೆಡಹುವೆ ಧರೆಯೊಳು
ಮಿಡುಕದೇ ನೀ ಪೋಗೆಲಾ ಯಲಾ ॥

ಬಭೃವಾಹನ: ಯಲಾ ನೀಚಾ, ಯನ್ನನ್ನು ಹುಡುಗನೆಂದು ತುಚ್ಛವಾದ ಭಂಡ ಮಾತುಗಳನ್ನು ನುಡಿಯುತ್ತೀಯಾ ಯಲಾ ಮರುಳೇ, ಹುಡುಗನಾದ ನಾನು ಬಿಡುವ ಈ ಅಸ್ತ್ರದಿಂದ, ನಿನ್ನ ಶಿರಸ್ಸು ಖಂಡ್ರಿಸಿ, ಧರೆಯೋಳ್ ಕೆಡಹುವೆ ನೋಡೋ ಮೂರ್ಖ ॥

(ಯೌವನಾಶ್ವನ ಮೂರ್ಛೆ)

(ನೀಲಧ್ವಜ ಯುದ್ಧಕ್ಕೆ ಬರುವಿಕೆ)

ದರುವು

ಬರಿದೇ ಸುಮ್ಮನೇ ನೀನೂ  ಬಳಲೂವದೇತಕೆ
ತುರುಗಾವಂ ಬಿಟ್ಟು  ನೀ ನಡಿಯೋ ನೀ ನಡಿಯೋ

ನೀಲಧ್ವಜ: ಯಲಾ ಬಭೃವಾಹನ, ಸುಮ್ಮನೆ ಯಾತಕ್ಕೆ ಆಯಾಸಪಡುವೆ, ಯಲಾ ಕುಲಹೀನ, ನಿಮ್ಮ ತಂದೆಯೆಂಬುವದು ನಿನಗೆ ಲೇಶವಾದರೂ ತಿಳಿಯದೇ ಯಾತಕ್ಕೆ ಪರಾಕ್ರಮವನ್ನು ಮಾಡುವೆ. ನನ್ನಲ್ಲಿ ಯುದ್ಧವನ್ನು ಮಾಡಿ ಜೈಸುವ ಸಾಮರ್ಥ್ಯ ನಿನಗಿಹುದೇ, ಕುದುರೆಯನ್ನು ಬಿಟ್ಟು ಪ್ರಾಣದಿಂದ ಉಳಿದು ನಿನ್ನ ಸೈನ್ಯ ಸಮೇತ ಪಟ್ಟಣಕ್ಕೆ ತೆರಳೋ ಮೂರ್ಖ.

(ನೀಲಧ್ವಜ ಮೂರ್ಛೆ, ಹಂಸಧ್ವಜನೊಡನೆ ಯುದ್ಧ)

ಹಂಸಧ್ವಜನ: ಯಲಾ, ಬಭೃವಾಹನ ನಿಲ್ಲು, ನಿಲ್ಲು ನನ್ನಲ್ಲಿ ಯುದ್ಧವನ್ನು ಮಾಡೋ ನೀಚಾ ॥

(ಹಂಸಧ್ವಜನ ಮೂರ್ಛೆ)

ದರುವು

ನೋಡಿದೈ ವೃಷಕೇತು  ಬಭೃವಾಹನನಾ
ಮಾಡೀದ ವಿಘಾತಿಯಾ ಮಗುವೇ, ನೀ ನೋಡೋ

ನಾಡಾಡಿ ಯೌವನಾಶ್ವ  ಹಂಸಧ್ವಜಾದಿಗಳು
ಝಾಡೀಸಿ ಬಿದ್ದಾರೋ  ನೀ ನೋಡೋ ಮಗುವೇ

ಕೂಡಿವನ ಸಂಗರದೀ  ಈಡಾಗಿ ಯುದ್ಧವನೂ
ಮಾಡೂವರ್ಯಾರಿಲ್ಲೋ  ಮಗುವೇ ನೀ ನೋಡೋ ॥

ಅರ್ಜುನ: ಅಪ್ಪಾ ಮಗುವೇ ವೃಷಕೇತು, ಈ ಬಭೃವಾಹನನು, ನಮ್ಮ ದಂಡನ್ನೆಲ್ಲಾ ಹತ ಮಾಡಿದನು. ಸೈನ್ಯವೆಲ್ಲಾ ಮಡಿದು ಹೋಯಿತು, ಯೌವನಾಶ್ವ, ಹಂಸಧ್ವಜ, ನೀಲಧ್ವಜ ಮೊದಲಾದವರೆಲ್ಲಾ ಮಡಿದು ಹೋದರು, ಅಪ್ಪಾ ವೃಷಕೇತು. ಈ ಸಂಗ್ರಾಮ ಭೂಮಿಯಲ್ಲಿ ನಿಂತು ಅವನೊಡನೆ ಯುದ್ಧವನ್ನು ಮಾಡುವಂಥವರು ಯಾರು? ನಾವು ಇಬ್ಬರಲ್ಲಿ, ನೀನು ಹಸುಗೂಸು ಅಪ್ಪಾ ಕಂದಾ, ನಾನು  ಬಭೃವಾಹನನೊಡನೆ ಯುದ್ಧವನ್ನು ಮಾಡುತ್ತೇನಪ್ಪಾ ಕಂದಾ॥

ದರುವು

ವರ ಯಶೋದಾದೇವಿ,
ದೇವಕಿಯರಿಗೆಲ್ಲಾ
ಧುರದ ವೃತ್ತಾಂತವನೂ, ತಪ್ಪದೇ ಪೇಳೋ
ಅರಸು ಧರ್ಮಜ ಕುಂತೀ ॥

ದೇವೀ ಭೀಮಾದ್ಯರಿಗೆ
ಅರುಹೋ ಈ ವಾರ್ತೆಯ ನೀ ಪೋಗೊ ಕಂದಾ ॥

ಅರ್ಜುನ: ಅಪ್ಪಾ ಮಗುವೇ ವೃಷಕೇತು, ನೀನು ಹಸ್ತಿನಾವತಿಗೆ ಹೋಗಿ, ಯಾಗದೀಕ್ಷಿತರಿಂದ, ಧರ್ಮರಾಯರಿಗೆ ಈ ವಾರ್ತೆಯನ್ನು ಹೇಳಪ್ಪಾ ಮಗುವೆ. ಅಲ್ಲದೇ, ನಮ್ಮನ್ನು ಬಾಲ್ಯದಿಂದ ಸಂರಕ್ಷಣೆ ಮಾಡಿದ ಶ್ರೀ ಕೃಷ್ಣ ಸ್ವಾಮಿಗೆ ನಮಿಸಿ ಅರ್ಜುನನಿಗೆ ಇಂಥಾ ಅಪಜಯವಾಯಿತೆಂದು ಮುಂದಾಗಿ ಹೇಳಪ್ಪಾ ವೃಷಕೇತು

ದರುವು

ಕಂಡೇನೈ ಸುಕುಮಾರ  ಇನವಂಶೋದ್ಧಾರಕನೆ
ಪುಂಡರೀಕಾಕ್ಷನಿಂದ  ನೀ ಕೇಳೋ ಕಂದಾ ॥

ಅರ್ಜುನ: ಅಪ್ಪಾ ಮಗುವೇ, ನಮ್ಮ ವಂಶಕ್ಕೆ ಅಭಿಮನ್ಯು ಒಬ್ಬನಿದ್ದ, ಅವನು ಹೋದ ಬಳಿಕ ಕೃಷ್ಣದೇವರು ನಿನ್ನನ್ನು ಕರೆತಂದು, ನಮ್ಮ ಐವರಿಗೂ ನೀನೆ ಸದ್ಗತಿ ಕೊಡುವಂಥ ಸುಕುಮಾರನೆಂದು ಹೇಳಿದ ಬಳಿಕಾ  ನಿನ್ನನ್ನೇ ನಂಬಿಕೊಂಡಿದ್ದೆವಲ್ಲಪ್ಪಾ  ಕಂದಾ ॥

ದರುವು

ಕುಂಡಾಲಪುರಕೈದೂ, ಸುಖದೀ ನೀ ಬಾಳೈಯ್ಯ
ಮಂಡೇ ಬಾಗೆಲ್ಲಾರಿಗೂ  ಮಗುವೇ ನೀ ಕೇಳೋ ॥

ಕುಂಡಲೀಶನ ಭೂಷಾ  ಕೃಷ್ಣಾದ್ರಿವಾಸನಾ ॥
ಭಜಿಸುತ್ತಾ ನೀ ಪೋಗೋ  ಕಂದಾ ॥ ॥

ಅರ್ಜುನ: ಅಪ್ಪಾ ಮಗುವೇ ವೃಷಕೇತು, ನೀನು ಗಜಪುರಕ್ಕೆ ಹೋಗಿ ಆಶೀರ್ವಾದವಂ ಪಡೆದು, ಕೃಷ್ಣಾದ್ರಿವಾಸನನ್ನು ಭಜಿಸುತ್ತಾ ಸುಖದಿಂದ ಬಾಳಿಕೊಂಡು ಇರುವಂಥವನಾಗಪ್ಪಾ ಬಾಲಾ ॥

ವೃತ್ತ ಗೌಳ

ಯೆಂತು ಬೆಸಸಿದೆಯೋ ತಾತಾ
ಇಂಥಾ ನಿರ್ದಯದ ನುಡೀ
ನಾ ನಿನ್ನ ಬಿಟ್ಟಿಲ್ಲಿ, ಗಜಪುರಿಗೆ ಪೋಗಲೇ
ಯೇನಾಡಿದೈ, ಕರ್ಣಸುತನೆಂದು ಪೆಸರು ಪಡೆದು
ತಾನೋಡಿದಾಗಲೇ ಜೀವಗಳ್ಳನಾದೆ.
ಧರಣಿಯೋಳ್ ಭಾನುಶಶಿಯುಳ್ಳಂತರದೀ
ದುರ್ಗತಿ ತಪ್ಪುವುದೇ  ದಾನವಾಂತಕ,
ಧರ್ಮಸುತರು ಮೆಚ್ಚುವರೇ  ನೀನಾಡುವುದು
ಕ್ಷಾತ್ರಧರ್ಮವೇ  ಕೊಡು ನಿರೂಪವ,
ಬೇಡಿಕೊಳ್ಳುವೆ ನಿಮ್ಮ ಪಾದಕೆರಗಿ ॥

ವೃಷಕೇತು: ಹೇ ಜನಕಾ, ನನಗೆ ಇಂಥ ನಿರ್ದಯವಾದ ಮಾತು ಹೇಳಬಹುದೇ ಬಿಡು ಬಿಡೈ ತಂದೇ. ಈ ರಣ ಭೂಮಿಯಲ್ಲಿ ನಿಮ್ಮೊಬ್ಬರನ್ನೇ ಬಿಟ್ಟು ನಾನು ಹಸ್ತಿನಾವತಿಗೆ ಹೋಗಲೇ, ಸುಖದಿಂದ ಬಾಳಿಕೊಂಡು ಇರಲೇ ಭಲಾ, ಹೀಗೆ ಅಪ್ಪಣೆಯನ್ನು ಕೊಟ್ಟರೆ ಹೇಗೆ, ನಾನು ಕರ್ಣನ ಮಗನಲ್ಲವೇ ರಣ ಹೇಡಿಯೇ, ಧನುರ್ವಿದ್ಯೆಯನ್ನು ಅರಿಯದವನೇ ಈ ರಣಭೂಮಿಯಲ್ಲಿ ಜೀವಗಳ್ಳನಾಗಿ ನಿಮ್ಮನ್ನು ಬಿಟ್ಟು, ಹಸ್ತಿನಾವತಿಗೆ ಹೋದರೆ ಇಹಪರದಲ್ಲಿ ಯಮ್ಮ ಪಿತಾಮಹರು ಮೆಚ್ಚುವರೇ ಮೂರು ಲೋಕದಲ್ಲಿ ದುರ್ಗತಿ ಸಂಭವಿಸುವುದಲ್ಲದೇ, ಧರ್ಮರಾಯರು, ರಾಕ್ಷಸಾಂತಕನಾದ ಶ್ರೀ ಕೃಷ್ಣಮೂರ್ತಿಯು ಮೆಚ್ಚುವರೇ ನೀನು ಆಡುವಂಥದ್ದು, ಕ್ಷಾತ್ರ ಧರ್ಮವೇ ಬಿಡು ಬಿಡೈ ತಂದೇ. ಮತ್ತೂ ಪೇಳುತ್ತೇನೆ.

ದರುವು

ಕೊಡು ಕೊಡು ಅಪ್ಪಣೆಯಾ  ತಾತಾ ಬಿಡದೇ ಈ ರಣದೋಳ್
ಹೊಡೆದು ಜೈಸುವೆ, ಬಭೃವಾಹನನಾ ॥

ಕೊಡು ಕೊಡು ಸೋತಡೆ  ಕರ್ಣನ ಸುತನೆನ್ನಲೇಕೆ
ಖ್ಯಾತಿ ಮಾಳ್ಪೆ ಇನ್ಯಾತಕ್ಕೋ  ಚಿಂತೆ ಬಿಡು ತಾತಾ ॥

ವೃಷಕೇತು: ಹೇ ತಂದೆ, ಇನ್ನೂ ಅಗಣಿತವಾದಷ್ಟು ದಂಡು ತೆಗೆದುಕೊಂಡು ಬಂದಂಥಾ  ಬಭೃವಾಹನನ ಜಯಲಕ್ಷ್ಮಿಯೆಂಬುವಂಥ ಹೆಣ್ಣನ್ನು, ಕೈಕಟ್ಟಿ ಯಳತರುತ್ತಾ ಇದ್ದೇನೆ. ನೇಮವನ್ನು ಪಾಲಿಸಬೇಕಯ್ಯ ತಂದೆ.

ದರುವು

ಇಂದೂಧರನೂ  ಬಂದಾಡೆ ಯುದ್ಧವೀ
ಹಿಂದಕ್ಕೆ ಬಾರೆ ಮುಕುಂದನಾಣೆಯೂ ॥

ನೀ ಕೊಡು ಕೊಡು ಸೋತಾಡೆ, ಕರ್ಣನ ಸುತನೆನ್ನಲ್ಯಾಕೇ
ಮಾಳ್ಪೆ ಯುದ್ಧವಾ, ಚಿಂತೆ ಬಿಡು ತಾತಾ ॥

ವೃಷಕೇತು: ಹೇ ಜನಕಾ, ಈ ದಿನ ಕಾಳಗದಲ್ಲಿ ಹರಿಹರಾದಿಗಳು ಬಂದ ಕಾಲಕ್ಕೂ, ಅವರನ್ನು ಬಿಡದೇ ಜೈಸುವೆನಲ್ಲದೇ, ಹಿಂದುಳಿಯಲಿಕ್ಕಿಲ್ಲಾ, ಹೇ ತಂದೆ ಅಧಮನಾದ ಬಭೃವಾಹನನು ಯನಗೆ ಲಕ್ಷ್ಯವೇ ಯುದ್ಧದಲ್ಲಿ ಅವನನ್ನು ಕೊಂದು ಯಮಪುರಕ್ಕೆ ಕಳುಹಿಸದೇ ಹೋದರೆ, ಕ್ಷಾತ್ರನೆನಿಸಬೇಕೇ ಈ ಅಲ್ಪ ಸಾಮರ್ಥ್ಯವುಳ್ಳ ಬಭೃವಾಹನಗೆ ಸೋತರೆ, ಕರ್ಣನ ಮಗ ವೀರ ವೃಷಕೇತು ಎಂಬ ಹೆಸರು. ಇನ್ಯಾತಕ್ಕೋ ತಂದೆ. ತೀವ್ರದಿಂದ ಅಪ್ಪಣೆಯನ್ನು ದಯಪಾಲಿಸಬೇಕೋ ಜನಕಾ ॥

ಕಂದ

ತೋರಿಸುವೆ, ನಿನ್ನಾ ಕಣ್ಣಿಗೆ ಈ ರಣರಂಗ
ದಬ್ಬವಂ, ತಾರಪ್ಪಣೆಯೆಂದು  ಬಲ್ಮಿನಿಂ, ರಥವೇರಿ
ಝೇಂಕರಿಸಿ  ಪಾರ್ಥನ ಸಮ್ಮುಖಕೆ ನಡೆತಂದು ಮತ್ತಿಂತೆಂದನೂ ॥

ವೃಷಕೇತು: ಹೇ ತಂದೇ ಸಣ್ಣ ಮಗುವೆಂದು ತಿಳಿಯಬೇಡಾ ಕಂಡ್ಯಾ, ನಾನು ಚಿಕ್ಕವನಾದರೆ ಯನ್ನ ಕೈಯಲ್ಲಿ ಇರುವ ಬಿಲ್ಲು ಬಾಣಗಳು ಚಿಕ್ಕವೇ, ಈ ಹೊತ್ತಿನ ದಿವಸದಲ್ಲಿ, ರಣರಂಗದಬ್ಬವನ್ನು ನಿಮ್ಮ ಕಣ್ಣಿಗೆ ತೋರಿಸುತ್ತಾ ಇದ್ದೇನೆ. ಆಡಿದ ಮಾತು ತಪ್ಪುವುದಿಲ್ಲ. ರತ್ನಮಣಿಮಯವಾದಂಥಾ  ರಥವನ್ನು ಏರುತ್ತಾ ಇದ್ದೇನೆ. ಅಪ್ಪಣೆಯನ್ನು ಪಾಲಿಸಬೇಕಯ್ಯ ತಂದೆ.

ಅರ್ಜುನ: ಅದೇ ಪ್ರಕಾರವಾಗಿ ಹೋಗಿ ಬಾರಪ್ಪಾ ಕಂದಾ, ನಿನ್ನ ನುಡಿಯೇ ಆನಂದಾ