(ನೀಲಧ್ವಜ ಬರುವಿಕೆ)

ನೀಲಧ್ವಜ: ಎಲೈ ಸಾರಥೀ ಹೀಗೆ ಬಾ, ಯಮ್ಮನ್ನು ಧಾರೆಂದು ಕೇಳುತ್ತಾ ಇದ್ದೀ. ಯಮ್ಮ ವೃತ್ತಾಂತವನ್ನು ಪೇಳುತ್ತೇನೆ ಲಾಲಿಸುವಂಥವನಾಗೈಯ್ಯ ಸಾರಥೀ.

ಯಲಾ ಸಾರಥೀ ಈ ಭುವನ ಬ್ರಹ್ಮಾಂಡಲೋಕದೋಳ್, ಮಂಡಿತಮಾದ ಅಖಂಡ ಸಾಮ್ರಾಜ್ಯ ವೈಭವದಿಂದ, ಗರುಡ, ಗಂಧರ್ವ, ಕಿನ್ನರ, ಕಿಂಪುರುಷ, ಯಕ್ಷೇಶ ಮೊದಲಾದ ದಿಕ್ಪಾಲಕರಿಂದ ಪರಿವೃತರಾಗಿ, ರಾಗಸುಧಾಕರನಂತೆ ದೇಶಾಧಿಪತಿ ಅಮರಾವತಿಯಂ ಪಾಲಿಸುವ ಹಾಗೆ, ಈ ನವಖಂಡ ಪೃಥ್ವಿಯಲ್ಲಿ ಕವಿ ಭಟ, ಗಾಯಕ, ವಾರಾಂಗನೆಯರಿಂದ ಅಮೋಘವಾದ, ಹಸ್ತಿ, ಅಶ್ವ ರಥ, ಪದಾತಿ ಸಮೂಹ, ಸಾಮಂತರಿಂದೊಡಗೂಡಿ ಮೆರೆಯುವ ಮಹಿಷಾವತೀ ಪಟ್ಟಣವನ್ನು ನಿಷ್ಠೆಯಿಂದ ಪಾಲಿಸುವ ನೀಲಧ್ವಜರಾಜನೆಂದು ತಿಳಿಯೋ ಸಾರಥೀ.

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಅರ್ಜುನ ಭೂಪಾಲಕರು ಕರೆಸಿದ ಕಾರಣ, ಬಂದು ಇರುತ್ತೇನೆ. ಜಾಗ್ರತೆಯಿಂದ ಭೇಟಿ ಮಾಡಿಸೋ, ಸಾರಥೀ,

ನೀಲಧ್ವಜ: ನಮೋನ್ನಮೋ ರಾಜ, ಅರ್ಜುನ ಭೂಪಾಲ

ಅರ್ಜುನ: ದೀರ್ಘಾಯುಷ್ಯಮಸ್ತು ಬಾರಯ್ಯ ನೀಲಧ್ವಜ ರಾಜ.

ನೀಲಧ್ವಜ: ಹೇ ರಾಜ, ಯನ್ನನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು, ಪೇಳಬೇಕಯ್ಯ ರಾಜ ಮಾರ್ತಾಂಡ ತೇಜ.

ಅರ್ಜುನ: ಅಯ್ಯ ನೀಲಧ್ವಜರಾಜ ಪೇಳುತ್ತೇನೆ ಈ ಸಿಂಹಾಸನದ ಮೇಲೆ, ಕುಳಿತುಕೊಳ್ಳು ವಂಥವನಾಗೈಯ್ಯ ನೀಲಧ್ವಜ ರಾಜ.

 

(ವೃಷಕೇತು ಬರುವಿಕೆ)

ವೃಷಕೇತು: ಯಲಾ, ಮಾನುಷ್ಯನೇ ನಿಟಿಲ ತಟಘಟಿತ ಕರಕುಟುಂಬಿಯೇ ! ಈಗ ಬಂದವರು  ಧಾರೆಂದು ಪರಿಪರಿ ಕೃತಾಂಜಲಿಬದ್ಧನಾಗಿ ಕೇಳುವ ನಿನ್ನ ಅಭಿದಾನವೇನು, ಸ್ವಾಭಿಲಾಷೆಯಿಂದ ಪೇಳೋ ಮಂದಿರಾಚರನೇ.

ಸಾರಥಿ: ಸಾರಥಿ ಎಂದು ಕರೆಯುವರೈಯ್ಯ ಸ್ವಾಮೀ ॥

ವೃಷಕೇತು: ಎಲಾ ಸಾರಥೀ, ಅಂಗ, ವಂಗ, ಕಳಿಂಗ, ಕಾಶ್ಮೀರ, ಕಾಂಭೋಜ ಮೊದಲಾದ ಛಪ್ಪನ್ನ ದೇಶದೊಳಗೆ ಮಧ್ಯಪ್ರದೇಶವಾಗಿರುವ, ಇಂದ್ರಪ್ರಸ್ತ ಪಟ್ಟಣವನ್ನು ಚಂದದಿಂದ ಪಾಲಿಸುವ ಚಂದ್ರವಂಶದಲ್ಲಿ ಮುತ್ತು ಪುಟ್ಟಿ ಶೋಭಿಸುವಂತೆ ಮೆರೆಯುವ ಜಪತಪ, ಯಜ್ಞ ಹೋಮಾದಿಗಳನ್ನಾಚರಿಸುತ್ತಾ, ಲಕ್ಷ್ಮೀಶನಂ ಭಜಿಸಿ, ಇಂದ್ರನು ಅಮರಾವತಿ ಪಟ್ಟಣವನ್ನು ಪಾಲಿಸುವಂತೆ, ಧರ್ಮರಾಯರಿಗೆ ದಾಯಾದ್ಯನೆನಿಪ, ಕೌರವೇಶ್ವರನ ಸೈನ್ಯದಲ್ಲಿ ಕಡುಪರಾಕ್ರಮಿಯಾದ, ಕರ್ಣಭೂಪಾಲನ ಕುಮಾರ ಕಂಠೀರವನಾದ ವೀರ ವೃಷಕೇತು ಎಂದು ಕಿತಾಬ್ ಮಾಡಿಸುವಂಥವನಾಗೋ ಸಾರಥೀ.

ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಹಸ್ತಿನಾವತಿಯಂ ಪಾಲಿಸುವಂಥ ಧರ್ಮರಾಯರ ಯಜ್ಞದ ಕುದುರೆ ಸಂಗಡ ಅರಿರಾಜರನ್ನು ಕುಟ್ಟಿ ಕುಟ್ಟಿ, ಕೋಲಾಹಲವಂ ಮಾಡುವುದಕ್ಕೆ ನಮ್ಮ ಚಿಕ್ಕ ತಂದೆಯವರಾದ, ಧನಂಜಯನೊಡನೆ ಬಾಹೋಣವಾಯ್ತು, ನಮ್ಮ ಚಿಕ್ಕ ತಂದೆಯನ್ನು ಭೇಟಿ ಮಾಡಿಸೋ ಸಾರಥೀ.

ವೃಷಕೇತು: ನಮೋನ್ನಮೋ ಚಿಕ್ಕತಂದೆಯವರೇ

ಅರ್ಜುನ: ದೀರ್ಘಾಯುಷ್ಯಮಸ್ತು ಬಾರಯ್ಯ ಕುಮಾರ

ದರುವು

ನೀಲಧ್ವಜಾದಿಗಳೇ  ಕೇಳ್ದರೀ ಪಟ್ಟಣವ
ಪಾಲಿಸುವಾ ಪ್ರಭೂ  ತಾನ್ಯಾರೋ ತಾನ್ಯಾರೋ ॥
ಆಲಸ್ಯ ಮಾಡದಲೇ  ಕಟ್ಟಿ ಕಾದುವನೇನೋ
ಹೇಳಿರೈ ಯನಗಿಂತೆಂದೂ  ॥

ಅರ್ಜುನ: ಅಯ್ಯ ನೀಲಧ್ವಜ, ಹಂಸಧ್ವಜ, ಯೌವನಾಶ್ವ, ಅನುಸಾಲ್ವ, ಪ್ರದ್ಯುಮ್ನ, ವೃಷಕೇತು, ಸ್ವರ್ಗದುರ್ಗದಂತೆ ಕಾಣುತ್ತಲಿರುವ ಈ ಪಟ್ಟಣವನ್ನು ಆಳುವನು ಧಾರೈಯ್ಯ, ಹಂಸಧ್ವಜ ! ಈ ಪಟ್ಟಣವನ್ನು ಪಾಲಿಸುವಂಥ ಪ್ರಭು, ಧಾರು ಹೊರವಲಯದಲ್ಲಿ  ನಿಂತು ನೋಡಿದರೆ, ಈ ಪಟ್ಟಣವು ಉನ್ನತವಾಗಿ ಕಾಣುತ್ತಾ ಇದೆ  ಈ ಪಟ್ಟಣವನ್ನು ಪಾಲಿಸುವ ರಾಜನ ನಾಮವೇನು, ನಮ್ಮ ಯಜ್ಞದ ಕುದುರೆಯನ್ನು ಕಟ್ಟುವುದಕ್ಕೆ ಸಾಮರ್ಥ್ಯ ಉಳ್ಳವನೋ ಇಲ್ಲವೋ ಹೇಳಿರಯ್ಯ, ಹಂಸಧ್ವಜಾಧಿಗಳೇ.

ದರುವು

ನೀನರಿಯೈ, ಪಾರ್ಥನೆ  ಮಣಿಪುರನಗರಿಯ
ನಾಳ್ವ ಬಭೃವಾಹನನ  ಪ್ರಖ್ಯಾತಿ ಪ್ರಖ್ಯಾತೀ ॥

ಎಲ್ಲಾ ನೃಪರೊಳಗಿವನು  ಬಲ್ಲಿದನೈ ಇವಗೆ
ನಿಲ್ಲಾದೇ ಕಪ್ಪ  ನಡೆಸುವೆವೂ ನಡೆಸುವೆವೂ ॥

ಹಂಸಧ್ವಜ: ಹೇ ರಾಜ ಮಾರ್ತಾಂಡ ತೇಜನಾದ ಅರ್ಜುನ ಭೂಪಾಲನೇ, ಲಾಲಿಸು ಈ ಬಭೃವಾಹನನ ಪ್ರಖ್ಯಾತಿ ನಾನೇನೆಂದು ಹೇಳಲಿ, ಯೆಷ್ಟು ಹೇಳಿದರೂ ಸ್ವಲ್ಪವಾಗಿ ಇದೆ. ಹೇ ದೊರೆಯೇ ಬಭ್ರುವಾಹನನೆಂಬುವಂಥ ರಾಜ ಈತನ ಪ್ರಶಂಸೆ ಹೇಳೆನೆಂದರೆ, ಎಲ್ಲಿಗೂ ತೀರದಯ್ಯ ರಾಜ ಸೂರ‌್ಯ ಸಮತೇಜ.

ದರುವು

ತಪ್ಪಿರ್ದರೆಮ್ಮಗಳ  ತೀವ್ರದಿಂ ದಂಡಿಸುವ
ದರ್ಪಾವು ಬಹಳ ಇಹುದೈಯ್ಯ, ಧಾತ್ರಿಯಲಿ ॥

ಹಂಸಧ್ವಜ: ಹೇ ಸವ್ಯಸಾಚಿ, ಹಮ್ಮಿನಿಂದ ನಾವು ಕಪ್ಪವನ್ನು ತಾರದೆ ಇದ್ದರೆ, ಹಿಡಿತರಿಸಿ, ರಾಜರಿಗೆಲ್ಲಾ ಬಹು ದಂಡನೆಯನ್ನು ಮಾಡುತ್ತಾ ಇದ್ದಾನಯ್ಯಾ, ದೊರೆಯೇ ಧೈರ‌್ಯದಲ್ಲಿ ಕೇಸರಿಯೇ.

ದರುವು

ಅಂಥಾ ಸಾಮರ್ಥ್ಯವುಳ್ಳವನೇ  ಮಹಾ
ಪಂಥವುಳ್ಳವನೇ ಈ ರಾಯ ॥
ಸಂತತಾ ಇವ ಧಾವ ದೈವ ಪೂಜಿಸುವಾನು ॥
ತಾಂ ತಡದಿಹನಶ್ವವಾ  ಬಭೃವಾಹನನೀಗ ॥

ಅರ್ಜುನ: ಅಯ್ಯ ಹಂಸಧ್ವಜ, ಈ ಮಣಿಪುರವನ್ನು ಪಾಲಿಸುವಂಥಾ ರಾಜನು, ಅಂಥಾ ಸಾಮರ್ಥ್ಯವುಳ್ಳವನೇ ಭಲಾ, ಭಲಾ ! ಆದರೂ ಚಿಂತೆ ಇಲ್ಲಾ, ಈ ದೊರೆಯು, ಯಾವಾಗಲೂ, ಯಾವ ದೈವವನ್ನು ಪೂಜೆ ಮಾಡುತ್ತಾ ಇದ್ದಾನೆ. ನಮ್ಮ ಕುದುರೆಯನ್ನು ಕಟ್ಟಿ ಇದ್ದಾನೋ, ಇಲ್ಲವೋ ಹೇಳಿರಯ್ಯ ಹಂಸಧ್ವಜಾದಿಗಳೇ-

ದರುವು

ಕುಂತೀ ಕುಮಾರ ಕೇಳೈಯ್ಯ  ಶ್ರೀ
ಕಾಂತನ ಭಜಿಪ  ಸತ್ವ್ರತಿಯೂ ॥

ಶಾಂತನು, ತವಜ್ಞಾನಿ  ಸಕಲಶಾಸ್ತ್ರವೂ ಬಲ್ಲಾ
ಯೆಂತು ಪೇಳಲಿ, ಭೂಕಾಂತರೋಳ್ ಬಲ್ಲಿದನೂ ॥ ॥

ಹಂಸಧ್ವಜ: ಹೇ ಪಾರ್ಥ, ಶ್ರೀಮಾನ್ ನಾರಾಯಣಮೂರ್ತಿ, ಹರ ಚಕ್ರಧಾರಿ ತನಗೆ ಇಷ್ಟದೈವವೆಂದು ಪೂಜಿಸುತ್ತಾ ಇದ್ದಾನಲ್ಲದೆ ಬೇರೊಂದು ಚಿಂತೆ ಇಲ್ಲವೈಯ್ಯ ರಾಜ – ರವಿ ಸಮ ತೇಜ ॥

ದರುವು

ಕಟ್ಟಾದಿರ್ಪನೇ ಪೇಳೂ  ಕುದುರೇ, ಆವಾ
ಬಿಟ್ಟಾನೇ ಬಲುವೀದೆ, ಬರಿದೇ ॥
ರಣಾಗ್ರ ವೀರನೂ  ಕಲಹಕ್ಕಂಜುವನಲ್ಲಾ
ಕೃಷ್ಣಾದ್ರಿವಾಸನ  ಕರುಣವೆಂತಿಹುದೋ ॥

ಹಂಸಧ್ವಜ: ಹೇ ಕಿರೀಟಿ ಧವಳಾಂಗದ ಆನೆ, ದೇವೇಂದ್ರನಲ್ಲಿ ಒಂದು ಇದೆ ಯೆಂಬುವಂತಾದ್ದು ಲೋಕ ಪ್ರಸಿದ್ಧವಾಗಿದೆ. ಈ ಮಣಿಪುರದಲ್ಲಿ, ಅಂತಹ ಆನೆಗಳು ಒಂದು ಅರ್ಬುದವಿರುತ್ತವೆ. ಹವಳದಂತೊಪ್ಪುವ ದಿವ್ಯ ತೇಜಿಗಳು, ಒಂದು ಅರ್ಬುದವಿರುತ್ತವೆ. ನವರತ್ನ ಖಚಿತಮಾದ, ಬಂಗಾರದ ರಥಗಳು, ಹತ್ತು ಕೋಟಿ ಇದ್ದಾವೆ, ಕಡಿಮೆ ಕಾಲಾಳುಗಳು ಎಣಿಕೆ ಮಾಡಿ ಹೇಳುವುದಕ್ಕೆ ಆದಿಶೇಷನಿಗೂ ಅಸಾಧ್ಯವಾಗಿರುವುದೈಯ್ಯ. ಇಂಥ ಬಲವಂತನು, ನಮ್ಮ ಕುದುರೆಯನ್ನು ಕಟ್ಟದೆ ಬಿಟ್ಟಾನೇನಯ್ಯಾ, ರಾಜ, ಇದೂ ಅಲ್ಲದೇ, ರಣಾಗ್ರದಲ್ಲಿ ಮಹಾಶೂರನು. ಈತನ ಮಹಿಮೆ ಆದಿಶೇಷನಿಗೂ ಸಾಧ್ಯವಿಲ್ಲಾ. ಕೃಷ್ಣಾದ್ರಿವಾಸನ ಕರುಣ ಕಟಾಕ್ಷ ಹೇಗೆ ಇರುವುದೋ ತಿಳಿಯದಯ್ಯ ಪಾರ್ಥ ಧೈರ‌್ಯದಲ್ಲಿ ಸಮರ್ಥ.

ಭಾಗವತರ ಕಂದ ಮಧ್ಯಮಾವತಿ

ಕೇಳು ಜನಮೇಜಯ ಕ್ಷಿತಿಪಾ
ಕೇಳಿತ್ತ ಸಮಯದಲಿ, ಘನರೋಷದಿಂದಿರಲೂ
ನರನ ಮಕುಟಾಗ್ರದೋಳ್  ಜನ ನೋಡುವಂದದಲಿ
ಕುಳಿತು ಹಾರಲು ಹದ್ದೂ  ಆಶ್ಚರ‌್ಯಪಟ್ಟ
ಅನುಸಾಲ್ವ ಮೊದಲಾದ  ವೀರರ್ಗಳೆಲ್ಲಾ
ಮನನೊಂದು  ಚಿಂತಿಸುತಾ  ಮುಂದೆ
ಅಪಜಯದ  ದಿನವಾದುದು  ಶಿವ ಶಿವಾ
ಧರ್ಮಾನುಜಂಗೇ  ಯೆನುತಲೀ
ಮಿಡುಕುತಲಿ  ಪಾಳ್ಯದೊಳಿರಲೂ ॥

ಮಾತು: ಕೇಳಿದರೇನಯ್ಯ ಭಾಗವತರೇ ಅರ್ಜುನನು ಮಣಿಪುರವನ್ನು ನೋಡಿ ವಿಸ್ಮಯವಂ ಪಟ್ಟು ತಮ್ಮ ದಂಡಿನ ಮಧ್ಯದಲ್ಲಿ ಕುಳಿತಿರುವ ಕಾಲದಲ್ಲಿ, ಆಕಾಶದಿಂದ ಹದ್ದುಬಂದು, ಪಾರ್ಥನ ಕಿರೀಟಾಗ್ರದೋಳ್, ಕಾಲೂರಿ ಆಕಾಶಕ್ಕೆ ಹಾರಿ ಹೋಗಲೂ, ಅನುಸಾಲ್ವ ಮೊದಲಾದ ಸೈನ್ಯವೆಲ್ಲಾ ಚಿಂತಿಸುತಿದ್ದರೈಯ್ಯ ಭಾಗವತರೇ.

(ಅರ್ಜುನನ ಬಳಿಗೆ ಬಭ್ರುವಾಹನನು ಬರುವನು)

ದರುವು

ಭೂಪಾ ! ಕೇಳ್  ಬಭ್ರುವಾಹನ ಬಂದಾ
ಸಂಭ್ರಾಮದಿಂದ  ಭೂಪ ಕೇಳ್ ॥

ಘೋಷಿಪ, ವಾದ್ಯ ವಿಶೇಷದಿಂದ  ಸಂ
ತೋಷ ಪಡುತ  ಮನದಾಸೆ ಇಂದಲೀ ॥

ಯೆಲ್ಲೀ ಪಾರ್ಥನಿಹ  ನಲ್ಲಿಗಾಗೀತಾ
ನಿಲ್ಲದೇ ನಡೆದಾ  ಉಲ್ಲಾಸಗಳಿಂದಾ ಭೂಪ ॥

ಬಭೃವಾಹನ: ಹೇ ಮಂತ್ರಿ ಶಿಖಾಮಣಿ, ಕೇಳು, ನಮ್ಮ ತಂದೆ ಎಲ್ಲಿ ಇದ್ದಾರೋ, ಅಲ್ಲಿಗೆ ಸಕಲ ವಾದ್ಯ ಘೋಷಣೆಗಳಿಂದ  ಹೋಗೋಣ ನಡಿಯಯ್ಯ, ಮಂತ್ರೀ ॥

ದರುವು

ಶ್ರೀಪತಿ ಪಾದ ಸರೋಜವ ಧ್ಯಾನಿಸಿ
ಆ ಕೌಂತೇಯನ  ಕಾಣಲು, ಬೇಗದಿ ಭೂಪ ॥

ಬಭೃವಾಹನ: ಅಯ್ಯ ಮಂತ್ರೀ, ನಮ್ಮ ಸುಕೃತವು ಕೂಡಿ ಬಂತು. ಯಾವತ್ತೂ ಧನ ಕನಕ, ವಸ್ತು ವಾಹನ ಮೊದಲಾದ ನಮ್ಮ ರಾಜ್ಯಭಾರವನ್ನು ನಮ್ಮ ತಂದೆ ಪಾದಕ್ಕೆ ವಪ್ಪಿಸಬೇಕಾಗುತ್ತೆ, ಅತಿ ತೀವ್ರದಿಂದ ಹೋಗೋಣ ನಡಿಯೈಯ್ಯ ಮಂತ್ರೀ.

ಬಭೃವಾಹನ: ಯಲಾ ಸಾರಥೀ, ನಮ್ಮ ತಂದೆಯಾದ ಪಾರ್ಥನು, ಧಾವಲ್ಲಿ ಇದ್ದಾರೋ ತೋರಿಸುವಂಥವನಾಗೋ ಸಾರಥೀ.

ಕಂದ

ಕಂಡು ನರನಂಘ್ರಿಗೇ  ರತ್ನಂಗಳ ಸುರಿದೂ
ದಿಂಡುಗೆಡೆದು, ಪಾದದ ಮೇಲೆ ಬೀಳೇ
ಕಂಡು, ಎಲೈ ಭೂಪಾಲಕ, ನೀನ್ಯಾರು
ಯೆಂದು  ಕೇಳಲು, ಕೈಮುಗಿದಿಂತೆಂದನೂ ॥

ಬಭೃವಾಹನ: ನಮೋನ್ನಮೋ ತಂದೆ, ಸಲಹೆನ್ನ ಮುಂದೆ ॥

ಅರ್ಜುನ: ಯಲೈ ನೃಪತಿ, ನೀನು ಧಾರು ? ನಿನ್ನ ನಾಮಾಂಕಿತವೇನು ? ಸಕಲ ಸೈನ್ಯದಿಂದ ಬಂದು ಇದ್ದೀಯಾ  ಯಾತಕ್ಕೆ ? ಬಂದು ಮಾತನಾಡುವಂಥವನಾಗೋ ನೃಪೋತ್ತಮಾ ॥

ಬಭೃವಾಹನ: ಅದೇ ಪ್ರಕಾರ ಹೇಳುತ್ತೇನೆ. ಚಿತ್ತವಿಟ್ಟು ಯನ್ನ ವಿಜ್ಞಾಪನೆಯನ್ನು ಲಾಲಿಸಬೇಕಯ್ಯ ತಂದೇ ॥

ದರುವುಜಂಪೆ

ತಾತ ಚಿತ್ತೈಸು  ನಿಮ್ಮಾತ್ಮ ಸಂಭವ ನಾನು
ಮಾತೆ ಚಿತ್ರಾಂಗದೆಯು, ಉಲೂಪಿ ॥ಉಲೂಪಿ
ಪ್ರೀತಿ ಇಂದೀರ‌್ವರೂ  ಅರಸಿಯರೈತಂದು ॥
ತೀರ್ಥಯಾತ್ರೆಗೆ ಬಂದಿದ್ದಾಗ ॥

ಉದಿಸೀದ ಸುತ ಬಭೃವಾಹನನು, ನಾನು  ಈಗ
ನಿನದೆಂದು ತಿಳಿಯದೇ  ಕುದುರೆ ಕಟ್ಟಿದೆನು, ಕಟ್ಟಿದೆನೂ ॥

ಬಭೃವಾಹನ: ಹೇ ತಂದೆ, ಮಗುವಿನ ಮೇಲೆ ಕೃಪಾಕಟಾಕ್ಷವಿಟ್ಟು ರಕ್ಷಿಸಬೇಕೈಯ್ಯ ತಂದೇ ॥ತಮ್ಮ ಆತ್ಮದಲ್ಲಿ ಸಂಭವಿಸಿದ ಶಿಶುವು ನಾನು. ಯನ್ನ ಹಡೆದಂಥ ತಾಯಿ ಚಿತ್ರಾಂಗದೆ. ಸಲಹಿದಂಥ ತಾಯಿ ಉಲೂಪಿ, ಯನ್ನ ಜನನಿಯರೀರ್ವರೂ ನಿಮ್ಮ ಅರಸಿಯರಲ್ಲವೇ ತಂದೆ. ನೀವು ತೀರ್ಥ ಯಾತ್ರೆಗೆ ಬಂದಕಾಲದಲ್ಲಿ, ತಮ್ಮಿಂದ ಸಂಭವಿಸಿದ ಶಿಶುವು ನಾನು, ನನ್ನ ಹೆಸರು ಬಭೃವಾಹನ, ಯನ್ನಯ ಅಪರಾಧವನ್ನು ಕ್ಷಮಾಪಣೆ ಮಾಡಿ, ಉದ್ದಾರ ಮಾಡಬೇಕೈಯ್ಯ ಜನಕಾ.

ದರುವು

ಅಧಮತನದಿಂದಾ  ನಾನತಿ ದ್ರೋಹಕೊಳಗಾದೆ
ಮುದದಿಂದ ಕ್ಷಮಿಸು  ತಪ್ಪುಗಳಾ  ತಪ್ಪುಗಳಾ ॥

ಬಭೃವಾಹನ: ಹೇ ತಂದೆ, ತಮ್ಮ ಕುದುರೆಯೆಂಬುವಂಥದ್ದು ತಿಳಿಯದೆ, ಅಧಮತನದಿಂದ, ಕಟ್ಟಿಕೊಂಡು ಬಹುದೋಷಕ್ಕೆ ಒಳಗಾದೆ. ಹೇ ತಂದೆ, ಆದಕಾರಣ, ಪ್ರತ್ಯುತ್ತರ ಹೇಳೆನೆಂದರೆ, ಜಿಹ್ವೆಯಲ್ಲಿ  ದ್ರವವಿಲ್ಲಾ, ಹೇಳಲು ಶಕ್ತನಲ್ಲಾ, ಹೇ ತಂದೆ ಮಗುವಿನ ಮೇಲೆ ಕೃಪಾಕಟಾಕ್ಷವಿಟ್ಟು ಯನ್ನ ತಪ್ಪನ್ನು ಕ್ಷಮಿಸಿ ಉದ್ದಾರ ಮಾಡಬೇಕಯ್ಯ ಜನಕಾ ॥

ಅರ್ಜುನ: ಏನೂ-ಏನಲಾ ಭ್ರಷ್ಟನೇ ಮತ್ತೂ ಪೇಳುತ್ತೇನೆ.

ದರುವುಜಂಪೆ

ಅಡಿಗಡಿಗೆ ಭಯದಿಂದಾ
ಬೇಡಿಕೊಳ್ಳುವ, ಸುತನಾ
ನೋಡಿ ಮುಖ ಕೋಪದಿಂ  ನುಡಿದಾ  ತಾ ನುಡಿದಾ॥

ನುಡಿದಾನಲೇ ನೀನ್ಯಾರೋ
ವಡಲಲ್ಲಿ, ಬಂದವನೇ
ಪಿಡಿದಶ್ವ ಬಿಡುವಂಥ  ಅಧಮಾ, ನೀನಧಮಾ ॥

ಅರ್ಜುನ: ಯಲಾ, ಹುಡುಗನಾದ ಬಭೃವಾಹನನೇ ಒಂದು ಮಾತು ಪೇಳುತ್ತೇನೆ. ಕೇಳುವಂಥವನಾಗೋ ಮೂರ್ಖ॥

ದರುವು

ಯಲ ಯನ್ನ ಮಗನೇನೋ, ನೀನೂ  ಧಾವ,
ಕುಲದೊಳಗೆ  ಸಂಭವಿಸಿದವ ನೀನೂ ॥
ತಿಳಿಯದೀ ಬಗೆಯಲ್ಲಾ  ಕ್ಷತ್ರಿಯ ಕುಲದವನೆ
ಸಲೇ ಕಾಣಿಸುತೆ  ಪ್ರಾಣದಾಸೆಯುಳ್ಳವ ನೀನೂ ॥

ಅರ್ಜುನ: ಯಲಾ, ಬಭೃವಾಹನನೇ, ನೀನು ನನ್ನ ಮಗನೇ, ಛೀ, ಭ್ರಷ್ಟನೇ ಧಾವ ಕುಲದೊಳಗೆ ಹುಟ್ಟಿ, ಯಾರ ಹೆಸರು ಹೇಳಿಕೊಂಡು ಜೀವಿಸುತ್ತೀಯ್ಯೆ, ನಿನ್ನ ಬಗೆಯು ತಿಳಿಯದು, ನೀನು ಸರ್ವಥಾ ನನ್ನ ಮಗನಲ್ಲವೊ ಮೂರ್ಖ ॥

ದರುವು

ಯನ್ನ ಮಗನಾದರೇ  ಕುದುರೇ  ಕಟ್ಟಿ,
ಬಿಡುವಾನೈ  ತಾ ಬೇಗ ಬೆದರೀ ॥
ಮುನ್ನ ತಾ ಬಿಡುವಾನೇ ಬೆದರೀ
ಯಮ್ಮ ಸಮ್ಮುಖದಲ್ಲಿ  ನಿಂತು ಯದ್ದವ ಮಾಳ್ಪ
ನಿನ್ನಂಥ ಹೇಡಿ, ಕುಲಹೇಡಿ ಆಗುವನಲ್ಲಾ  ॥

ಅರ್ಜುನ: ಯಲಾ ಬಭೃವಾಹನನೇ ಕೇಳು, ನನ್ನ ಹೊಟ್ಟೆಯಲ್ಲಿ ಹುಟ್ಟಿದಂಥ ಮಗನಾದರೆ, ಕಟ್ಟಿದಂಥ ಕುದುರೆಯನ್ನು ಬೆದರಿ, ಭಯಸ್ತನಾಗಿ ಬಿಟ್ಟಾನೇನಲಾ  ಅಧಮಾ  ಈವೊತ್ತಿಗೆ, ತಂದೆಯಾದರೂ, ತಾತನಾದರೂ, ಬೆದರದೆ ನಮ್ಮ ಸಮ್ಮುಖದಲ್ಲಿ ನಿಂತು, ಯುದ್ಧವನ್ನು ಮಾಡುವನಲ್ಲದೇ, ನಿನ್ನಂಥ ಹೇಡಿ, ಕುಲಗೇಡಿಯಾಗಿ ಬದುಕುವನೇನಲಾ, ದುರ್ಮಾರ್ಗ ಮತ್ತೂ ಪೇಳುತ್ತೇನೆ ಕೇಳುವಂಥವನಾಗೋ ಮೂರ್ಖ.

ದರುವು

ಶತೃಗಳ  ಗಡಣಾದಿಂ ಪೊಕ್ಕು  ವಿ
ಚಿತ್ರಾ ಮಾಡಿದ, ಮೀರಿ ಮಿಕ್ಕೂ
ಧಾತ್ರೀಶರಂ ಗೆದ್ದು  ಅಳಿದಾನು ಅಭಿಮನ್ಯು
ಪುತ್ರನಲ್ಲದೆ ಬೇರೆ  ಮಕ್ಕಳುಂಟೇ ಯನಗೇ ॥

ಅರ್ಜುನ: ಯಲಾ ಹುಡುಗನಾದ ಬಭೃವಾಹನ, ಹಿಂದೆ ದುರ‌್ಯೋಧನ, ದ್ರೋಣಾಚಾರಿ, ಕೃಪಾಚಾರಿ, ಅಶ್ವಥಾಮ, ಶಲ್ಯ, ಶಕುನಿ, ಭಗದತ್ತ, ಷಡ್ರಧಿಕರು ಕರ್ಣ ಸೈಂಧವ, ಯಿಂತೊಪ್ಪ, ಧುರ ಹೇಡಿ, ರಣಹೇಡಿ, ಮುಂಡೇ ಗಂಡರು ರಚಿಸಿದ ಚಕ್ರವ್ಯೆಹದಲ್ಲಿ ಒಬ್ಬನೇ ಘೋರ ಯುದ್ಧವನ್ನು ಮಾಡಿ ಮೃತಿಯನ್ನು ಹೊಂದಿದ, ಸುಭದ್ರೆ ಮಗನಾದ ಅಭಿಮನ್ಯು ಒಬ್ಬನೇ ಮಗನಲ್ಲದೇ ಮಿಕ್ಕಾದ ಮಕ್ಕಳು, ಯನಗುಂಟೇನಲಾ ಮೂರ್ಖ ನೀನು ನನ್ನ ಮಗನಲ್ಲವೋ ಪಾಪಿಷ್ಯಾ.

ದರುವು

ಅಂದು ಚಿತ್ರಾಂಗದೆಯು, ನಿನ್ನಾ  ವೈಶ್ಯ
ನಿಂದ, ಹಡೆದಿಹಳು ಕೇಳ್, ಮುನ್ನಾ ॥
ಕಂದನಾದರೆ ಬಿಡದೆ  ಕಾದುವೆ, ಯಿದಿರಾಂತು
ಇಂದೂ, ಕೃಷ್ಣಾದ್ರೀಶ  ಮೆಚ್ಚುವಾನೇ ನಿನ್ನಾ ॥ ॥

ಅರ್ಜುನ: ಯಲಾ  ಬಭ್ರುವಾಹನ, ನಿನ್ನ ತಾಯಿ, ಚಿತ್ರಾಂಗದೆಯು, ವೈಶ್ಯನನ್ನು ಕೂಡಿಕೊಂಡು ನಿನ್ನನ್ನು ಹಡೆದು ಇದ್ದಾಳೆ. ನೀನು ಮೂರನೇ ವರ್ಗದ ಕೋಮಟಿಯವನಿಗೆ ಹುಟ್ಟಿದವನಲ್ಲದೇ, ನನಗೆ ಹುಟ್ಟಿದವನಾದರೆ, ಯಾದವ ಕೃಷ್ಣಾದ್ರಿವಾಸನು ಮೆಚ್ಚುವಂತೆ, ಯನ್ನ ಯೆದಿರುನಲ್ಲಿ ನಿಂತು ಯುದ್ಧವನ್ನು ಮಾಡುವೆಯಲ್ಲದೇ ರಣಹೇಡಿಯಾಗಿ ಬಂದಂಥವನು ನನ್ನ ಮಗನೇ ಛೀ, ಆಚೆಗೆ ತೊಲಗೋ ಗುಲಾವಮ.

ಕಂದ

ಧರೆಯಲ್ಲಿ ಕೌತುಕವೆಲಾ  ಸಿಂಹನು
ದರದಲಿ  ನರಿಯು ಪುಟ್ಟುವುದೇ
ಕುಲಹೀನ ಕೇಳು, ಈ ಛತ್ರಿ ಚಾಮರ
ಡಂಭವೇಕೆ  ರಣಹೇಡಿ, ಜೀವಗಳ್ಳ
ಪರಿಪರಿಯ ವಸ್ತುಗಳಿವ್ಯಾತಕೆಂದು
ಕೋಪದಿಂ  ಬಿರುನುಡಿಗಳಿಂದಾತ್ಮಜನ
ಜರಿದು, ಒದೆಯಲ್ಕೆ  ಎದ್ದಾಗ
ಬಭ್ರುವಾಹನನು, ಧನಂಜಯನಿಗಿಂತೆಂದನೂ ॥

ಅರ್ಜುನ: ಯಲಾ ! ಬಭ್ರುವಾಹನ  ಈ ಧಾತ್ರಿಯಲ್ಲಿ, ಸಿಂಹದ ಹೊಟ್ಟೆಯಲ್ಲಿ ಸಿಂಹ ಹುಟ್ಟೀತಲ್ಲದೆ, ಜಂಬೂಕ ಮರಿಯು, ಹುಟ್ಟೀತೆನಲಾ, ಕುಲಹೇಡಿ, ಈ ಛತ್ರಿ ಚಾಮರವೇತಕೆ  ವಾದ್ಯ ಘೋಷಣೆಗಳೇತಕ್ಕೆ ಈ ದಾಸೀಜನಗಳು ಏತಕ್ಕೆ, ಕಡಲೇಹಿಟ್ಟು, ತೊಗರಿಬೇಳೆ ಇದ್ದರೆ ಸಾಲದೆ, ಇಂಥ ಡಂಭವನ್ನು ಮಾಡಿಕೊಂಡು, ವೇಷಧಾರಿಯಾಗಿ, ಜೀವವುಳಿಸಿಕೊಂಡು, ಹೋಗಬೇಕೆಂಬುವಂಥವನು, ನನ್ನ ಮಗನೇನು, ನೀಚ, ಯಲಾ, ಗುಲಾಮ, ಯಾತಕ್ಕೆ ಪಾದದ ಮೇಲೆ ಬಿದ್ದು ಇದ್ದಿ  ಆಚೆಗೆ ತೊಲಗೋ ಭ್ರಷ್ಟಾ, ಪರಮ ಪಾಪಿಷ್ಟಾ ॥

ಬಭೃವಾಹನ: ಯಲಾ ಅರ್ಜುನ, ಯಲಾ ಶಿಖಂಡಿ, ಯಲಾ ದ್ರೋಹಿ, ಯಲಾ ಪಾಪಾತ್ಮ, ಏನು ಮಾತಾಡುವೆಯಲಾ, ನೀಚಾತ್ಮ ಮತ್ತು ಪೇಳುತ್ತೇನೆ ಕೇಳುವಂಥವನಾಗೋ ದ್ರೋಹಿ ॥

ದರುವು

ಯಲಾ ಧನಂಜಯ ಭಲಾ, ಭಲಾ ॥
ಭುಜಬಲ ತೋರಿಸೋ ಯಲಾಯಲಾ ॥

ಛಲಾವು, ಮಾಡಿದೇನು ಫಲಾ  ಯನ್ನನು
ಕುಲ ಹೀನನಂದೇ, ಯಲಾ ಯಲಾ ॥
ಕೆಡು ನುಡಿಯಾಡಿದೆ, ಹಡೆದ ತಾಯಿ, ನಿನ್ನಾ  ॥

ಮಡದಿಯಲ್ಲವೇನೋ ಯಲಾ ಯಲಾ ॥

ಬಿಡು ಬಿಡು ಭೂವರ  ಗಡಣ ಮಧ್ಯದಲಿ
ನುಡಿಯಲುಬಹುದೇನೊ ಯಲಾ ಯಲಾ ॥

ಬಭೃವಾಹನ: ಯಲಾ ಶಿಖಂಡಿಯಾದ ಪಾರ್ಥನೆ ಕೇಳು, ಭಲಾ-ಭಲಾ, ಈ ಸರಿರಾಯರ ಮಧ್ಯದಲ್ಲಿ,  ಕುಲಹೀನ, ಜೀವಗಳ್ಳನೆಂದು ನಿನ್ನ ಬಾಯಿಗೆ, ಎದಿರು ಇಲ್ಲದಂತೆ ಆಡಿದೆ, ನೀನು ಎಷ್ಟು ಸಾಹಸವಂಥನಾದರೂ  ಏನು ಫಲವೋ  ಅರ್ಜುನ ಅತಿ ದುರ್ಜನ॥

ದರುವು

ಕಡಿದು ನಿನ್ನಾ ತಲೆ  ಕೆಡಹದಿರ್ದಡೆ
ಕಡೆಗೆ ಕ್ಷಾತ್ರನಲ್ಲ  ಯಲಾ ಯಲಾ ॥
ಹಡೆದ ಮಾತೆಯನು ಬಂಜೆಯೆನ್ನುತ
ನುಡಿಯಲು ಬಹುದೇನೆಲಾ ಯಲಾ ॥

ಬಭೃವಾಹನ: ಯಲಾ ಅರ್ಜುನ ಯನ್ನ ಹಡೆದಂಥ ತಾಯಿ ಚಿತ್ರಾಂಗದೆ, ನಿನ್ನ ಮಡದಿಯಲ್ಲವೆಂದು ಹೇಳಿದೆ. ಸಹಜಾ, ನನ್ನ ಹೆತ್ತಂತ ತಾಯಿ ಚಿತ್ರಾಂಗದೆ ಬಂಜೆ ಯಂದರು ಯನ್ನಲಿ, ನಿನ್ನನ್ನು, ನಿನ್ನ ಸೈನ್ಯವನ್ನು, ನಿಮಿಷಮಾತ್ರದಿ ಚೂರ್ಣೀಕೃತವಾಗಿ ಮಾಡುತ್ತಾ ಇದ್ದೇನೆ. ನೀನು ಆಡಿದ ಮಾತುಗಳೆಲ್ಲಾ ನಿನ್ನ ಸೆರಗಿನಲ್ಲಿ ಚೆನ್ನಾಗಿ ಗಂಟು ಹಾಕುವನಾಗೆಲಾ ಶಿಖಂಡಿ ॥

ದರುವು

ಕಡೆಗೆ, ಧರ್ಮಜನು, ನಡೆಸುವ ಯಜ್ಞಕೆ
ತೊಡಕು ಕಂಟಕ ನೀನಾದೆಲಾ ಯಲಾ ॥
ವಡೆಯ ಕೃಷ್ಣಗಿರಿ  ವಾಸ ಮೆಚ್ಚುವೋಲ್
ತೊಡಗುವ ಕಾಳಗಕೆಲಾ ಯಲಾ ॥

ಬಭೃವಾಹನ: ಯಲಾ ಪಾರ್ಥ ಧರ್ಮರಾಯರು ಮಾಡುವಂಥ ಯಜ್ಞಕ್ಕೆ, ನೀನೇ ಕಂಟಕನಾದಲ್ಲದೇ, ಇತಃ ಪರ, ಕಂಟಕರು ಯಾರು ಆಗಲಿಲ್ಲಾ, ಕಂಡ್ಯಾ, ಯಲಾ ಅರ್ಜುನ ನಿನಗೆ ಮೃತ್ಯುಕಾಲ ಸಂಭವಿಸಿತು. ನೀನೇನು ಮಾಡುವೆ, ನಿನ್ನ ನುಡಿಗಳೇ ನಿನಗೆ ಶತ್ರುವಾಗಿ ನಿಂತು ಇವೆ. ಇನ್ನು ನಾನು ಸೈರಿಸುವನಲ್ಲಾ, ಧಾವ ಮೂಜಗದ ಕರ್ತನಾದ ಕೃಷ್ಣಾದ್ರಿವಾಸನು, ಮೆಚ್ಚುವಂತೆ ನಿನ್ನೊಡನೆ ನಿಂತು ಯುದ್ಧವನ್ನು ಮಾಡುತ್ತಾ ಇದ್ದೇನೆ. ವೈಶ್ಯಸಂಭವನ ಭುಜಬಲ ಆಟೋಪವನ್ನು, ನೋಡುವಂಥವನಾಗೋ ಅರ್ಜುನ-ಅತಿ ದುರ್ಜನ ॥

ಬಭೃವಾಹನ: ಅಯ್ಯ ಮಂತ್ರೀ  ನೀನು ಯಾತಕ್ಕೆ ನಿಂತು ಇದ್ದೀ. ಬಂಡಿಗಳಲ್ಲಿ, ತಂದು
ಇರುವಂಥ ವಸ್ತುಗಳನ್ನು, ಅರಮನೆಗೆ ತುಂಬಿಸು, ಇಲ್ಲಿಗೆ, ಬಾಣ, ತೂಣೀರ, ಕಾರ್ಮುಕಗಳು ತರಿಸುವಂಥವನಾಗು. ನಮ್ಮ ಸೈನ್ಯ ಯಾವತ್ತು ಯುದ್ಧಕ್ಕೆ ನಿಲ್ಲಿಸುವಂಥವನಾಗೈಯ್ಯ, ಪ್ರಧಾನಿ ಈ ಅರ್ಜುನನು ಆಡಿದಂತೆ, ನಾನು, ಮಾಡದೆ ಹೋದರೇ, ಈ ಧಾತ್ರಿಯಲ್ಲಿ, ಬಭೃವಾಹನ ಮಹಾವೀರನೆನಿಸಬೇಕೆ. ಈ ಕ್ಷಣದಲ್ಲಿ ಅರ್ಜುನನನ್ನು ಅವನ ಸೈನ್ಯವನ್ನು, ಕೆಡಹಿ ಭಂಗವನ್ನು ಮಾಡುತ್ತೇನೆ, ಚೆನ್ನಾಗಿ ನೋಡೈಯ್ಯ ಮಂತ್ರೀ

ಭಾಗವತರ ದರುವು

ಅರಸಾ ಕೇಳೈಯ್ಯ  ತಂದೆ ಮಕ್ಕಾಳು
ವಿರಸಾ, ಪುಟ್ಟಿತೂ  ಹೇಳಲಿನ್ನೇನೂ ॥

ಬಾಣಾ ಮುದ್ಗರಾ  ಗದೆಯು ಖಡ್ಗದೀ
ಕ್ಷೋಣಿಯೋಳ್ ಮಹಾ  ಯುದ್ಧ ನಡೆದೀತು ॥

ನೋಡಿದಾಕ್ಷಣಾ  ನಿಂತಾನಾಗಲೇ
ಕೂಡಿ ಬಂದಾನೂ  ಅನುಸಾಲ್ವ ಬೇಗಾ ॥