ಕವಿ: ಎಚ್.ಎಸ್. ಸುಬ್ಬರಾಯಪ್ಪ

ಕಾಲ: 25.05.1959

 

ವಿಘ್ನೇಶ್ವರ ಪ್ರಾರ್ಥನೆ

ಕಂದನಾಟಿ

ವಿಘ್ನೇಶ್ವರ ವಿನುತಾಮಠ  ವಿಘ್ನೇಶ್ವರ ಭಕ್ತವರದ
ವಿಘ್ನಸ್ತುತ್ಯ  ವಿಘ್ನೇಶ್ವರ  ಮಾಂ ಪಾಲಯ
ವಿಘ್ನೇಶ್ವರ  ದೇವ ದೇವಾ  ವಿಘ್ನವಿದೂರ ॥

ಗುರು ಸ್ತುತಿ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ
ಗುರುಸ್ಸಾಕ್ಷಾತ್ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ॥

ತಾಳ ಸ್ತುತಿ

ಶಶಿಭಾನು ಸಮಂ ತಾಳಂ  ಶೇಷವಾಸುಕಿ ಸ್ತೋತ್ರಕಂ
ಕಶ್ಯಪಾದಿ ಪ್ರಯುಕ್ತಂತಿ  ಶಿವ ಶಕ್ತಿ ಸ್ವರೂಪಕಂ ॥

ಮೃದಂಗ ಸ್ತುತಿ

ಮೃದಂಗೇ ಮೂಲತೋ ಬ್ರಹ್ಮಃ ಮಧ್ಯತೊ
ವಿಷ್ಣು ರೂಪಿಣಿ  ಅತ್ಯಂತ ರುದ್ರ ರೂಪಾಯ ॥
ಮೃದಂಗೇನ್ನಮೋ ನ್ನಮಃ

ಕಿಂಕಿಣಿ ಸ್ತುತಿ

ಕಿಂಕಿಣಿ ವದನೆಯೋ ವಾಣಿ  ತನ್ಮಧ್ಯೆ ಕಮಲಾ
ಲಯೇ  ತದಂತಃ ಗಿರಿಜಃ ಪ್ರೋಕ್ತೇ  ಕಿಂಕಿಣಿ
ನಮಸ್ತೇ ನಮಃ

ಗಣಸ್ತುತಿ

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕ ದಂತಾ ಭಕ್ತಾ ನಾಂ ಯೇಕ ದಂತ ಮುಪಾಸ್ಮಹೇ॥

ದರುವುಜಂಪೆ

ಬೇಡುವೇ ನಿಮ್ಮನೂ ಜೋಡಿಸಿ ಕರಗಳಾ
ಮಾಡು ನಿರ‌್ವಿಘ್ನವಾ ಗಣಪಾ, ಹೇ ಗಣಪಾ ॥

ಸಕಲ ಜನರು ನಿಮ್ಮ ಭಕ್ತಿಯಿಂದಲಿ ಪೂಜೆ
ಪ್ರಕಟೀಸಿ ಮಾಳ್ಪಾರೂ ಜಗದೀ ಈ ಜಗದೀ ॥

ಅರಿಯಾದ ತರಳಾ ನಿಮ್ಮ ಚರಣಾವ ಸ್ತುತಿ ಮಾಳ್ಪ
ಪ್ರಕಟೀಸಿ ಮಾಳ್ಪರೂ ಜಗದೀ ಈ ಜಗದೀ ॥

ಭಾಗವತರ ಮಾತು: ಸ್ವಾಮಿ, ಗಣಾಧಿಪಾ  ತಾವು ಈ ಸಭೆಗೆ ಆಗಮಿಸಿದ ಕಾರಣದಿಂದ ನೋಡತಕ್ಕಂತಾ ಜನಗಳಿಗೆಲ್ಲಾ ನೇತ್ರಾನಂದವಾಯಿತು. ಕೇಳತಕ್ಕಂತಾ ಜನಗಳಿಗೆಲ್ಲಾ ಕರ್ಣಾನಂದವಾಯಿತು. ಈಗ ನಾವು ಆಡತಕ್ಕಂತಾ ಈ ಬಭೃವಾಹನ ನಾಟಕಕ್ಕೆ, ಯಾವ ವಿಘ್ನವೂ ಬಾರದಂತೆ, ನಿರ‌್ವಿಘ್ನವನ್ನು ದಯಪಾಲಿಸಿ ತಾವು ಕೈಲಾಸಪಟ್ಟಣಕ್ಕೆ ತೆರಳಬಹುದು ಸ್ವಾಮಿ ಗಣಾಧಿಪಾ.

ಶಾರದೇ ದೇವಿ ದರುವು

ಪೊರೆವುದೆನ್ನಾ ಕರುಣದಿಂದಾ  ಪರಮ ಚರಿತಳೇ
ನಿರುತದಿಂದ ಸ್ಮರಿಪೆ ನಿನ್ನಾ  ಸರಸಿಜಾನನೇ ॥

ವಂದಿಪೆ ಪದದ್ವಂದ್ವಗಳಿಗೆ  ಚಂದಿರಾಸ್ಯಳೇ
ಚಂದದಿಂದಾ ಕಂದನಾ ಪೊರೆ ಕುಂದರವದನೆಯೇ ॥

ವಾಣಿ ಪನ್ನಗಾ ವೇಣಿ ಅಜನಾ ರಾಣಿ ಪಾಲಿಸೇ
ಪಾಣಿ ಪುಸ್ತಕಾ ನೀಲಾ ವೇಣಿ, ಮಾಣದೆರಗುವೇ ॥

ಪೀಠಿಕೆ: ಅಯ್ಯ ಸೂತ್ರಧಾರಿ : ಈಗ ಬಂದವರು ಧಾರೆಂದು ಕರಸಂಜಾತವಂ ಮುಗಿದು, ಪರಿಪರಿ ಕೃತಾಂಜಲೀ ಬದ್ಧನಾಗಿ, ಭೀತಿಯಂ ಪಟ್ಟು ನೀತಿಯಂ ಬಿಡದೇ ಮಾತನಾಡಿಸುವ ನೀ ಧಾರೋ ಯನ್ನೊಳು ಸಾರೋ.

ಅಯ್ಯ ಸಾರಥೀ ಈರೇಳು ಲೋಕದೊಳಗಿರುವ ಸಚರಾಚರ ಪ್ರಾಣಿಗಳನ್ನು ಉತ್ಪತ್ತಿ ಮಾಡುವುದಕ್ಕೆ ಕರ್ತನಾದ ಸತ್ಯಲೋಕಾಧೀಶನಾಗಿ, ತಾಮರಸಶೀಲನಾಗಿ ಬ್ರಹ್ಮಾತ್ಮ ಭೂಸುರ ಜ್ಯೇಷ್ಠಃ ಪರಮೇಷ್ಠಿ ಪಿತಾಮಹಃ ಇಂತಪ್ಪ ನಾಮಂಗಳಿಂದ ವಪ್ಪುವ ಚತುರಾನನಗೇ ಅರ್ಧಾಂಗಿಯೆನಿಸಿ, ಸಾರ ಸಂಗೀತ ವರ ಭರತ ಶಾಸ್ತ್ರಗಳ ಕೋವಿದೆಯಾದ, ಬ್ರಾಹ್ಮೀತು ಭಾರತೀ ಭಾಷಾ ಗೀರ‌್ವಾಗ್ವಾಣಿ ಸರಸ್ವತಿಯೆಂದು ತಿಳಿಯಪ್ಪಾ ಸಾರಥಿ.

ಈ ಸಭಾಸ್ಥಾನಕ್ಕೆ ಆಗಮಿಸಿದ ಪರಿಯಾಯವೇನೆಂದರೆ ನಿನ್ನ ಉನ್ನತವಾದ ಸ್ತೋತ್ರವು ಯನ್ನನ್ನು ಆನಂದಪಡಿಸಿದ್ದರಿಂದ, ನಾನು ಬಂದು ಇರುವೆನು. ನಿನ್ನ ಮನಸ್ಸಿನಲ್ಲಿರುವ ಇಷ್ಟಾರ್ಥವೇನೋ ಬೇಡಿಕೊಳ್ಳಬಹುದೈಯ್ಯ ಸಾರಥೀ.

ಸಾರಥಿ: ಅಮ್ಮಾ ಭಾರತೀ ತಾವು ಈ ಸಭಾಸ್ಥಾನಕ್ಕೆ ಬಂದ ಕಾರಣದಿಂ ಸರ‌್ವರಿಗೂ ಆನಂದವಾಯಿತು. ಅಲ್ಲದೇ ಈಗ ನಾವು ನಡೆಸುವಂಥ ಬಭೃವಾಹನ ನಾಟಕಕ್ಕೆ ಯಾವ ಕುಂದಕವು ಬಾರದಂತೆ ನಿರ‌್ವಿಘ್ನವಾಗಿ ನಡೆಸುವಂತೆ, ಅನುಗ್ರಹಿಸಬೇಕಮ್ಮಾ ತಾಯೇ.

ಶಾರದೆ: ಅಯ್ಯ ಸಾರಥೀ. ನೀನು ಮಾಡಿದ ಸ್ತೋತ್ರಕ್ಕೆ ಯನ್ನ ಮನವು ಪರಮಾನಂದವಾಯಿತು. ನಿನ್ನ ಇಷ್ಟದಂತೆ, ನಾಟಕವನ್ನು ನಡೆಸಬಹುದೈಯ್ಯ ಸೂತ್ರಧಾರಿ. ನಾವು ಬಂದು ಬಹಳ ಹೊತ್ತಾಯಿತು. ಬ್ರಹ್ಮಲೋಕಕ್ಕೆ ಹೋಗುತ್ತೇವಯ್ಯ ಸಾರಥೀ.

ಕಥಾ ಪ್ರಾರಂಭ ವೃತ್ತ

ಶ್ರೀರಮಣಾ, ವದನಾಂಬುಜರುಹ  ದಿವಾಕರ
ನೆನಿಪ  ನಾರಾಯಣ ಸ್ವಾಮಿ  ಕೃಷ್ಣಾವತಾರದಲಿ
ಭೂರಿ ಕಲಹವನು  ಕುರು ಪಾಂಡು ಸುತರೊಳ್
ವೆರಸಿ  ಧಾರುಣಿಯ ಪಟ್ಟವನು  ಧರ್ಮನಂದನ
ಗಿತ್ತು  ಚಾರುತರ, ಹಯಮೇಧ ಯಜ್ಞವನು
ಪೂರೈಸಿ  ಕಾರುಣ್ಯದಿಂ ಪಾಂಡವರ  ಪೊರೆದ
ಶ್ರೀ ಕೃಷ್ಣಾದ್ರಿ ನಿಲಯಗೆ  ಸಂಪ್ರೀತಿಯಾಗಿ ॥

ಭಾಗವತ: ಕೇಳಿದರೇನಯ್ಯ ಭಾಗವತರೇ ಶ್ರೀಮನ್ ನಾರಾಯಣ ಮೂರ್ತಿ ಹತ್ತು ಅವತಾರವಂ ಮಾಡಿ, ಅದರೊಳಗೆ ಕೃಷ್ಣಾವತಾರದಲಿ ಭೂ ಭಾರವಂ ನಿಳುಹುವ ನಿಮಿತ್ಯವಾಗಿ, ಕುರು ಪಾಂಡವರೊಳಗೆ ಕಲಹವಂ ಪುಟ್ಟಿಸಿದನಂತರ ಪಾಂಡವರು ಪಾರಿಪಾಲಿಸಿದಂಥ ಸತ್ಕಥಾಮೃತವನ್ನು ಯಾವ ಜನಮೇಜಯರಾಯನಿಗೇ ವೈಶಂಪಾಯನ ಮುನಿಗಳು ಪೇಳಿದರೈಯ್ಯ, ಸಭಾಜನರೇ.

ದರುವುತ್ರಿವುಡೆ

ಶ್ರೀಮಹಾಭಾರತದ ಕಥೆಯೊಳು  ಸೋಮ
ಕುಲದ ನೃಪಾಲ ಧರ್ಮಜಾ  ನೇಮಿಸಿದ ಹಯ
ಮೇಧಯಜ್ಞದ  ಮೂಲವಂ ನರಗೇ ॥

ನರನ ಪುತ್ರನೂ  ಬಭೃವಾಹನ  ವರಪರಾ
ಕ್ರಮದೀರ‌್ವರಿಗೆ ತಾ  ವಿರಸ ಪುಟ್ಟಿದ ಕಲಹ
ಕಥನವಾ  ನೊಲಿದು ಜೈಮಿನಿಯೂ ॥

ಪೇಳ್ದ ಜನಮೇಜಯ ಮಹೀಶಗೇ  ಕೇಳುವು
ದು ಸುಜನಾಳಿ ಸತ್ಕಥೆ  ಬಹಳ ಪುಣ್ಯವೂ  ಕೃಷ್ಣ
ಗಿರಿವರ  ಪಾಲಿಸುವ ದಯದೀ ॥

ಭಾಗವತ: ಅಯ್ಯ, ಭಾಗವತರೇ ಪರಾಶರ ತನಯನಾದಂಥಾ ವ್ಯಾಸಮುನಿಗಳು ಅಷ್ಟಾದಶಪುರಾಣ ವನ್ನು, ಹೇಳಿದ್ದರೊಳಗೆ, ಆ ಭಾರತದ, ಪಂಚಮ ವೇದವೆಂದು ಯೆನ್ನಿಸಿಕೊಂಡಂಥಾ ಆ ಮಹಾಭಾರತ ದೊಳಗೆ ಸೋಮಕುಲದಲ್ಲಿ ಉತ್ಪನ್ನರಾದಂಥಾ, ರಾಜರೊಳಗೆ ದ್ವಾಪರಾಂತ್ಯದಲ್ಲಿ, ಪಾಂಡುರಾಯನ ಮಕ್ಕಳು, ಐದು ಮಂದಿ ಮಕ್ಕಳೊಳಗೆ, ಧರ್ಮರಾಯನು, ಅಧರ್ಮ ವಧಾ ದೋಷವನ್ನು, ಕಳೆದುಕೊಳ್ಳುವಾ ನಿಮಿತ್ಯವಾಗಿ, ಅಶ್ವಮೇಧಯಾಗವನ್ನು ಪ್ರಾರಂಭಿಸಿಕೊಂಡು ತಮ್ಮ ಕುದರೆಯನ್ನು ದೇಶಮಧ್ಯದಲ್ಲಿ ಬಿಟ್ಟರಂತೆ. ಆ ಕುದುರೆಯ ಸಂರಕ್ಷಣಾರ್ಥವಾಗಿ ಸುರಪನಂದನನಾದಂಥ ಅರ್ಜುನನು ಕುದುರೆ ಹಿಂದೆ ಇರಲಾಗಿ, ಆ ಕುದುರೆಯು ಭುವನವೆಲ್ಲಾ ಸಂಚರಿಸುತ್ತಾ, ಮಣಿಪುರವಂ ಹೊಗಲಾಗಿ, ಆ ಪಟ್ಟಣವಂ ಪಾಲಿಸುವಂಥಾ ಬಬ್ರುವಾಹನ ರಾಜನು ಯಾಗದ ಕುದುರೆಯನ್ನು ಕಟ್ಟಲಾಗಿ, ಅರ್ಜುನನಿಗೂ ಬಭೃವಾಹನನಿಗೂ ಕಲಹವಂ ಪುಟ್ಟಿದ ಸಂಗತಿಯನ್ನು ಜನಮೇಜಯರಾಯರಿಗೆ, ವೈಶಂಪಾಯನ ಮುನಿಗಳು ಪೇಳಿದರೈಯ್ಯ ಭಾಗವತರೇ.

ದರುವು ಜಂಪೆ

ಭೂಪಾಕುಲಾ ತಿಲಕಾ ನೊಲಿದಾಲಿಸು
ಈ ಕಥೆಯಾ ॥ನಾ ಪೇಳ್ವೆನಿದನು  ಮುದದಿಂದಾ
ಮುದದಿಂದಾ॥ ॥

ಪಾಪಾ ಪರಿಹರಮಾಗಿ  ಪರಕೆ ಸಾಧನೆಯ
ಹುದು ॥ಶ್ರೀಪತಿಯು ಸುಖದೀ  ಒಲಿದಿರುವಾ
ಒಲಿದಿರುವಾ॥ ॥

ವಸೂಮತೀ ಶಿರದಂತೆ  ವಪ್ಪುತಿಹುದೈ
ರತ್ನಾ ॥ಮಿಸುನಿ ಕಾಂತಿಯಲಿ ಮಣಿಪುರವೂ
ಮಣಿಪುರವೂ॥ ॥

ಎಸೆವಾ ಶೃಂಗಾರವನು  ಎಂತೂ ವರ್ಣಿಸ
ಲರಸೇ ॥ನಿಶಿಯು ಪಗಲೆಂಬುದು  ನಾನರಿಯೇ
ನಾನರಿಯೇ ॥

ಅಗಳೂ ಆಳುವೇರಿಗಳು ಸೊಗಸಾದ
ಕೋಟೆಯು  ಗಗನಕ್ಕೇರಿದ ರತ್ನ ತೆನೆಯೂ
ರತ್ನ ತೆನೆಯೂ॥ ॥

ಝಗಿ ಝಗಿಸುವ ರತ್ನ ದೀಪ್ತಾ ಸೌಧಾಗ್ರ
ವೂ ॥ಮಿಗಿಲಾಗಿ ತಾನೊಪ್ಪುತಿಹುದೂ  ವಪ್ಪು
ತಿಹುದೂ॥ ॥

ಆ ನಗರಿಯನ್ನಾಳ್ವ  ಮಾನವಾಧಿಪಾ
ಬಭೃವಾಹನನು  ಚಿತ್ರಾಂಗದೆ ತನುಜಾ ಕೇಳ್
ತನುಜಾ॥ ॥

ಸಕಲ ಶಾಸ್ತ್ರವೂ ಮಂತ್ರ ತಂತ್ರಾಸಾಮ
ರ್ಥ್ಯವೂ ॥ಸಕಲವಿದ್ಯೆಯಲಿ  ಕೋವಿದನೂ
ಕೋವಿದನೂ॥ ॥

ಭಕ್ತಿಯಲಿ ಕೃಷ್ಣಾದ್ರೀ ಭವಸಖನೊಲಿ
ದಿರುವಾ ॥ಸುಖದಿಂದ ಪೃಥ್ವಿ ಪಾಲಿಸುವಾ ಪಾಲಿ
ಸುವಾ॥ ॥

ಭಾಗವತರು: ಇಂತ್ತೊಪ್ಪುತಿಹ ಬಭೃವಾಹನನು ಮತ್ತೊಂದು ಚಿಂತೆಯಿಲ್ಲದೇ ಸಭಾಸ್ಥಾನದೋಳ್ ಕುಳಿತು ಮಂತ್ರಿಯೊಡನೆ ಇಂತೆಂದನು.

ಪೀಠಿಕೆ: ಅಹೋ ಪಣಿಹಾರ ಸರಸ ಗುಣ ವಿಚಾರ ಯನ್ನ ವೃತ್ತಾಂತವನ್ನು ಬಿತ್ತರಿಸುತ್ತೇನೆ
ಸ್ವಸ್ಥಿರದಿಂದ ಕೇಳುವಂಥವನಾಗೋ ಸಾರಥೀ. ಚಮತ್ಕಾರ ಪಾರಾ ವಾರುತೀ.

ಶೃಣ ಹೇ ಮಾನುಷ್ಯನೇ ಅನೂನ ಭುಜಬಲ ಗರಿಷ್ಟ ನಿಷ್ಟ ಶ್ರೇಷ್ಟನಾಗಿ ಸೃಷ್ಟಿಪಾಲಕರಿಷ್ಟ ಸಭೆಗಳಲ್ಲಿ ಅಷ್ಟಮೂರ್ತಿಗೆ ಸಮ ಪಟ್ಟಭದ್ರ ಬ್ರುದಿಟ್ಟ ಭೃಗಟ್ಟಿಯೆಂದು ಕೊಂಡಾಡಿಸಿಕೊಂಡು ಆಗಮನವಂ ಮುದದಿಂದ ನೋಡಿ ಕಟ್ಟಾರಣ್ಯ ಮಧ್ಯದೋಳ್ ಇಷ್ಟ ಬಂದಂತೆ ಚರಿಸುವ ದಿಟ್ಟ ಮೃಗೇಂದ್ರನ ಸಮ್ಮುಖದಿಂ ಕಾಣದೇ ನಿಂತಾ ಜಾಣ ಹರಿಣಮರಿಯಂತೆ ಭಯಾರ್ತ ಚಿತ್ತನಾಗಿ ಗದ್ಗದ ಸ್ವರದಿಂದ ಕೇಳುವ ನರ ಮಾನುಷ್ಯ ನೀ ಧಾರು? ನಿನ್ನಭಿಧಾನವೇನೂ? ಸ್ವಾಭಿಲಾಷೆಯಿಂದ ಪೇಳೋ ಗುಣಮಣಿಹಾರ.

ಸಾರಥಿ: ಸಾರಥೀ ಯೆಂದು ಕರೆವರೈಯ್ಯ ರಾಜಾ ಮಾರ್ತಾಂಡತೇಜಾ.

ಬಭೃವಾಹನ: ಅಹೋ ಸಾರಥೀ ಶ್ರೀಮನ್ ಮಹಾತೂರ್ನ ಕೃದೇಟ್ ಪ್ರಭಾಬ ಗರ್ಭದ್ರ ಮಾಮ್ಡದ್ಭ್ರಮಾ ಕಭ್ರಾಡ್ಜ ಸೌದಾಮಿನೀ ದಾರು, ಪ್ರಭಾಡ್ವಿಡ್ರಾ ಚೊಟ್ಣಕಾ, ಸಶ್ಚಸ್ವಲೂಯ್ಯ, ಡಿಂಢೀರ ಪಾಂಡು, ಹೃತ್ಪುಂಡರೀಕ, ಶುಭ್ರ ಭೂಭುಜ ಲಲಾಮ, ಚಂಡನಾಯಕರ, ಭಂಡತನದೀ, ಖಂಡ್ರಿಸುವ, ಪ್ರಚಂಡ, ಮೃಗೇಂದ್ರ, ಕಾಶ್ಮೀರನಾಮ, ಅಹಹ, ಅವನಿಗಂಭೀರ, ಎಲೈ ಸಾರಥೀ, ಅಂಗ, ವಂಗ, ಕಳಿಗ ಕಾಂಭೋಜ, ಸೌಂಹೀರ, ಸೌರಾಷ್ಟ್ರ, ಕೊಂಕಣ ಟಿಂಕಣ, ಮಗಧ, ಮಾಳವಾ, ನೇಪಾಳ, ಚೋಳ ವರಾಳ, ಬಾಹ್ಲೀಕ, ತ್ರಿಗರ್ತ, ಕೋಸಲ, ಮೊದಲಾದ ಛಪ್ಪನ್ನದೇಶದೋಳ್, ಶ್ರೇಷ್ಟತರಮಾದ ಮಣಿಪುರಕ್ಕೆ ಅರಸು ಧಾರೆಂದು ಕೇಳಿಬಲ್ಲೆ.

ಸಾರಥಿ: ಮಲಯಧ್ವಜನೆಂದು ಕೇಳಿ ಬಲ್ಲೆ.

ಬಭೃವಾಹನ: ಅಂತ್ತಾ ಮಲಯಧ್ವಜ ಭೂಪಾಲನ ಪುತ್ರಿ, ಶಿರೋರತ್ನವೆನಿಸಿಕೊಂಡಿರುವಂಥಾ ಚಿತ್ರಾಂಗದೆಯ ಗರ್ಭಾಂಬುದಿಯಲ್ಲಿ, ಜನಿಸಿದ ವೀರನ್ಯಾರೆಂದು ಕೇಳಿ ಬಲ್ಲೆ.

ಸಾರಥಿ: ಬಭೃವಾಹನ ರಾಜರೆಂದು ಕೇಳಬಲ್ಲೆ.

ಬಭೃವಾಹನ: ಅಂಥ ಬಭೃವಾಹನರಾಜನೆಂದು, ವಂದೆರಡು ಸಾರಿ, ಕಿತಾಪ್ ಮಾಡಿಸುವಂಥವ ನಾಗೋ ಚಾರ ಕೊಡುವೆ ನಿನಗೆ ಕೈಯೊಳಗಿನ ಹಾರಾ.

ಸಾರಥಿ: ಭರದಿಂದ ಈ ವರಸಭೆಗೆ ಆಗಮಿಸಿದ ಕಾರಣವೇನಯ್ಯ ರಾಜ ರವಿಸಮತೇಜ.

ಬಭೃವಾಹನ: ಯಲಾ ಸಾರಥೀ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ, ಯಮ್ಮ ಅಷ್ಟ ಪ್ರಧಾನರೋಳ್ ಶ್ರೇಷ್ಟನಾದ ಸುಬುದ್ಧಿಯನ್ನು ಕಾಣುವ ನಿಮಿತ್ಯವಾಗಿ ಬಂದು ಇದ್ದೇನೆ. ಅತಿ ಜಾಗ್ರತೆ ಇಂದ ಕರೆಸುವಂಥವನಾಗೋ ಸಾರಥೀ.

ಸುಬುದ್ಧಿ: ಯಲಾ ಚಾರ ಹೀಗೆ ಬರುವಂಥವನಾಗು. ಯಲೈ ಭಟನೇ ಚಟುಲತರ ಧೈರ‌್ಯ ಮಾನಸನಾದ ಪಟುಭಟ ನೀ ಧಾರೋ ಯನ್ನೊಳು  ಸಾರೋ.

ಸಾರಥಿ: ಸಾರಥಿ ಎಂದು ಕರೆಯವರೈಯ್ಯ ಸ್ವಾಮಿ.

ಸುಬುದ್ಧಿ: ಯಲಾ, ಭಟ ಕುಟುಂಬಿ, ನಿಟಿಲ ತಟಘಟಿತ ಕರಪುಟಾಂಜಲೀಬದ್ಧನಾಗಿ, ಯಮ್ಮನ್ನು ಕೇಳುವೇ ಯಮ್ಮಯ ವೃತ್ತಾಂತವನ್ನು ವಿಸ್ತಾರಮಾಗಿ ಪೇಳುತ್ತೇನೆ ಸ್ವಸ್ಥಿರದಿಂದ ಕೇಳೋ ಸಾರಥೀ.

ಶ್ರೀಮನ್ ಮಹೀಮಂಡಲ, ಮಂಡಲಾಯಮಾನ, ಹಿಮದ ಮಂಡಲೇಶ್ವರ, ಕೃಪಾಶೀಕ್ಷಕಾ, ದಿಘ್ಮಂಡಲೇಶ್ವರನಾದ, ಹರಿಚರಣವನ್ನು, ಸದಾ ಪೂಜಿಸುತ್ತಾ, ಧರಾ ಮಂಡಲದೋಳ್, ಶ್ರೇಷ್ಟಮಾದ, ಮಣಿಪುರಕ್ಕೆ ಅರಸನಾದ, ಬಭೃವಾಹನ ರಾಜರ, ಸಮ್ಮುಖದೋಳ್, ಅಷ್ಟಪ್ರಧಾನರೋಳ್ ಶ್ರೇಷ್ಟಮಾದ ಸುಬುದ್ಧಿಯೆಂಬ ನಾಮಾಂಕಿತವಲ್ಲವೇನೋ ಸಾರಥೀ.

ಸಾರಥಿ: ಭರದಿಂದೀ ವರಸಭೆಗೆ ಆಗಮಿಸಿದ ಕಾರಣವೇನಯ್ಯ ಸ್ವಾಮೀ.

ಸುಬುದ್ಧಿ: ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನಮ್ಮ ದೊರೆಯಾದ ಬಭೃವಾಹನ ರಾಜರು ಕರೆಸಿದ ಕಾರಣ ಬಂದು ಇದ್ದೇನೆ. ಜಾಗ್ರತೆಯಿಂದ ಭೇಟಿ ಮಾಡಿಸೋ ಸಾರಥೀ.

ನಮೋನ್ನಮೋ ರಾಜ – ಮಾರ್ತಾಂಡ ತೇಜ.

ಬಭೃವಾಹನ: ಧೀರ್ಘಾಯುಷ್ಯಮಸ್ತು ಬಾರೈಯ್ಯ ಸುಬುದ್ಧಿ.

ಪ್ರಧಾನಿ: ಯನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕಯ್ಯ ರಾಜ-ಸೂರ‌್ಯ ಸಮತೇಜ –

ಬಭೃವಾಹನ: ಹೇಳುತ್ತೇನೆ ಕೇಳುವಂಥವನಾಗಯ್ಯ ಮಂತ್ರೀ

ದರುವು

ತರಸೀದಾ ಕಪ್ಪಾ  ತರಸೀದಾ ॥

ಧರೆಯ ಮೇಲಿನ ದೊಡ್ಡ ದೊರೆಗಾಳ ಕೈಯಿಂದ್
ತರಸೀದಾ  ॥

ಮಾಳ ಬಂಗಾಳ ನೇಪಾಳ, ದ್ರಾವಿಡ ಚೋಳಾ ॥
ಮಾಳಪ್ರದೇಶಾದ ಮಹೀಪಾಲರಿಂದಲಿ ತರಸೀದಾ ॥

ಬಭೃವಾಹನ: ಅಯ್ಯ ಮಂತ್ರೀ ! ನಾವು ಪರಿಪಾಲನೆಯನ್ನು ಮಾಡುವಂಥ, ಕಾಶ್ಮೀರ, ಕಾಂಭೋಜ, ನೇಪಾಳ,  ದ್ರಾವಿಡ, ಚೋಳ, ಮಗಧ, ಮಾಳವ, ಬರ್ಬರ, ಕೊಂಕಣ, ಕೋಸಲಾ, ಆವಂತಿ, ಮೊದಲಾದ ಭೂಪಾಲರೆಲ್ಲಾ, ಕಾಲಕಾಲಕ್ಕೆ ಸರಿಯಾಗಿ, ಕಪ್ಪವಂ ತಪ್ಪದೆ. ತಂದೊಪ್ಪಿಸುವರೇನಯ್ಯಿ ಮಂತ್ರೀ.

ದರುವು

ತಾರದಿದ್ದವರ‌್ಯಾರೊ, ತಿರುಗಿ ಬಿದ್ದವರ‌್ಯಾರೋ ॥
ಸಾರೈಯ್ಯ ಸಚಿವಾ ಶಿಖಾಮಣೀ ತರಸೀದಾ ॥

ಬಭೃವಾಹನ: ಅಯ್ಯ, ಸಚಿವಾ ! ನಾವು ವಿಚಾರ ಮಾಡಿ ಪೇಳುವಂಥಾ ರಾಜರೊಳಗೆ, ಭಯಗೊಂಡು, ಕಪ್ಪವಂ ತಂದೊಪ್ಪಿಸುವ  ರಾಜರೆಷ್ಟು ಮಂದಿ ಇದ್ದಾರೆ. ತಾರದೇ ತಿರುಗಿ ಮಾರ‌್ಮಲೆತು ನಡೆಯುವಂಥಾ ರಾಜರೆಷ್ಟು ಮಂದಿ ಇದ್ದಾರೆ ! ಮಾಜದೆ ಯನ್ನೊಳು ಪೇಳೈಯ್ಯ ಪ್ರಧಾನಿ ॥ಮತ್ತೂ ಪೇಳುತ್ತೇನೆ ಕೇಳೈಯ್ಯ ಮಂತ್ರೀ ॥

ದರುವು

ಧರೆಯೊಳಧಿಕವಾದ, ಕೃಷ್ಣಾಗಿರೀಶನಾ  ದ
ಯದಿಂದ ಪ್ರಜೆಗಳು, ಸುಖದಿಂದ ಇಹರೇನೈ
ತರಸೀದಾ ॥

ಬಭೃವಾಹನ: ಅಯ್ಯ, ಮಂತ್ರೀ ! ಧರೆಯೊಳದಿಕ ಕೃಷ್ಣಾದ್ರಿವಾಸನ ದಯದಿಂದ, ನಮ್ಮ ದೇಶದ ಪ್ರಜೆಗಳೆಲ್ಲಾ, ಸುಖವಾಗಿ ಇದ್ದಾರೇನಯ್ಯಾ ಪ್ರಧಾನಿ ॥

ಪ್ರಧಾನಿ: ಪೇಳುತ್ತೇನೈಯ್ಯ ರಾಜ – ಸೂರ‌್ಯ ಸಮತೇಜ

ವೃತ್ತ

ರಾಜೇಂದ್ರ ನಿಮಗೆ, ಮಾರ‌್ಮಲೆತು  ಜೀವಿಸುವ
ನೃಪರು  ಈ ಜಗದೊಳಿನ್ನುಂಟೆ  ಭುಜಬಲ
ಸು ವಿಖ್ಯಾತಿ  ಮೂಜಗ ತುಂಬಿ ಇದೆೆ  ಸುರಪ
ದಿಕ್ಪಾಲಕರಿಗಿಮ್ಮಡಿಯೂ  ನಿಮ್ಮ ಭೋಗಾ ॥

ಸುಬುದ್ಧಿ: ಹೇ ರಾಜೇಂದ್ರಾ ! ನಿಮಗೆ ಮಾರ‌್ಮಲೆತು ಜೀವಿಸಿಕೊಂಡು ಇದ್ದೇನೆ ಎಂಬುವಂಥ ರಾಜರು ಈ ಪೃಥ್ವಿಯಲ್ಲಿ ಯಾರನ್ನೂ ಕಾಣಲಿಲ್ಲವೈಯ್ಯ ರಾಜ, ಅಲ್ಲದೇ ತಮ್ಮ ಪಟುತರವಾದ, ಭುಜ ಬಲದೋರ್ದಂಡ, ಪ್ರಚಂಡ ಕೀರ್ತಿಯು, ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿಯು ತುಂಬಿ ಇದೆ. ಅಲ್ಲದೇ ಇಂದ್ರ, ಅಗ್ನಿ, ಯಮ, ನೈರುತ್ಯ ಮೊದಲಾದ ಅಷ್ಟದಿಕ್ಕಿನ ಪ್ರಭುಗಳಿಗಿಂತ, ನಿಮ್ಮ ಭೋಗವು ಅಧಿಕವಾಗಿ ಇರುವುದೈಯ್ಯ ಸ್ವಾಮೀ ಸುಜನ ಪ್ರೇಮೀ ॥ಮತ್ತೂ ಪೇಳುತ್ತೇನೆ ॥

ದರುವು ಜಂಪೆ

ಶ್ರೀ ಮಹಾರಾಜನೇ ಮಣಿಪುರಾಧೀಶ್ವರಾ
ಸೋಮ ವಂಶಾನ್ವಿತಧಾತಾ  ಹೇ ಧಾತಾ ॥

ಕಾಮ ಸನ್ನಿಭರೂಪ  ಕೇಳೈಯ್ಯ ಮಹಾಸ್ವಾಮಿ
ಭೂಮಿರಾಯರೊಳು  ಸಮನಾವನಿಹನೂ
ಯಾರಿಹನೂ ॥

ಸುಬುದ್ಧಿ: ಹೇ ರಾಜೇಂದ್ರನಾದ ಮಣಿಪುರಾಧೀಶ್ವರನೇ ಕೇಳೂ  ಈ ಭೂಮಿಯ ರಾಯರೊಳಗೆ ತಮ್ಮ ಸತ್ಯ, ಸಾಹಸ, ಪರಾಕ್ರಮ, ವೀರಲಕ್ಷಣ, ರೂಪುಗುಣ, ಗಾಂಭೀರ‌್ಯ, ಐಶ್ವರ‌್ಯಕ್ಕೆ ಧಾರಾದರು ಸಮನೆನಿಸಿ ಇದ್ದಾರೆ. ಸ್ವಾಮಿ, ಅಲ್ಲದೇ ಈ ಭುವನದಲ್ಲಿ ಭುಜಬಲ ಪರಾಕ್ರಮರೆನಿಸುವಂಥಾ ದೇಶಾಧಿಪತಿಗಳು ತಮ್ಮ ಹೆಸರುಗೊಂಡಲ್ಲಿಗೆ  ತಲ್ಲಣಗೊಳ್ಳುತ್ತಿದ್ದಾರೈಯ್ಯಾ  ರಾಜ-ಮಾರ್ತಾಂಡತೇಜಾ॥

ದರುವು

ನಿಲ್ಲಾದೆ ಕಪ್ಪವನೂ  ನಿಖಿಲರಾಜರು ತಂದೂ
ಸಲ್ಲಿಸುತ್ತಿಹರೈಯ್ಯಿ  ದೇವಾ – ಹೇ ದೇವಾ ॥

ಸುಬುದ್ಧಿ: ಹೇ ರಾಜ ! ಸಮಸ್ತ ದೇಶಾಧೀಶ್ವರರು ತಮ್ಮ ಕಟ್ಟಳೆ ಪ್ರಕಾರ ಕಪ್ಪವನ್ನು ತಂದು ವಪ್ಪಿಸುತ್ತಾ, ಜೀವಿಸುತ್ತಾರಲ್ಲದೇ ಮೀರಿದಂಥವರನ್ನು ಕಾಣಲಿಲ್ಲವೈಯ್ಯ ರಾಜ ॥ಸಹಸ್ರಾರ್ಕ ತೇಜಾ ॥

ದರುವು

ಅರಿರಾಜ ಗಜಸಿಂಹಾ  ಅವನೀ ಮಂಡಲ ಪಾಲ
ತಿರುಗಿ ಬೀಳುವರುಂಟೇ ಜಗದೀ  ಈ ಜಗದೀ ॥

ಧರಣಿಯೋಳ್, ಕೃಷ್ಣಾದ್ರಿವಾಸನಾ ದಯದಿಂದ
ಕರವ ಕೊಡುತಿಹರೈಯ್ಯ ರಾಜಾ, ಹೇ ದೇವಾ ॥

ಸುಬುದ್ಧಿ: ಹೇ ರಾಜೇಂದ್ರಾ ! ಈ ಭೂಮಿಯೊಳಗೆ ತಮ್ಮ ಸತ್ಯ ಸಾಹಸ, ಪರಾಕ್ರಮ ರೂಪು ಲಕ್ಷಣ, ಗಾಂಭೀರ‌್ಯದೈಶ್ವರ‌್ಯಕ್ಕೆ ಯಾರಾದರು ಸಮನೆನಿಸುವರೇ ಸ್ವಾಮಿ. ಅಲ್ಲದೆ, ಭುಜಬಲ ಪರಾಕ್ರಮಿ
ಯೆನ್ನುವಂಥ ದೇಶಾಧಿಪತಿಗಳೆಲ್ಲಾ, ತಮ್ಮ ಹೆಸರು ಕೇಳಿದ ಮಾತ್ರಕ್ಕೆ, ತಲ್ಲಣಿಸುವರಲ್ಲದೇ, ಸಮಸ್ತ ರಾಜರು, ಕಟ್ಟಳೆ ಪ್ರಕಾರ ಕಪ್ಪ ಕಾಣಿಕೆಯನ್ನು, ತಂದು ವಪ್ಪಿಸುವರಲ್ಲದೇ ಮೀರಿದಂಥ ರಾಜರನ್ನು ಕಾಣಲಿಲ್ಲವೈಯ್ಯ ರಾಜ, “”ಅರಿ ರಾಜ, ಗಜ ಮಸ್ತಕಾಂಕುಶ’’ವೆಂಬ ಬಿರುದು ನಿಮಗೆ ಇದೆ. ಸಮಸ್ತರೂ ಭಯಗೊಂಡು ತಲೆಯನ್ನು ಬಾಗಿ ನಡೆಯುವ ಹಾಗೆ, ಕೃಷ್ಣಾದ್ರೀಶನ ಕೃಪೆ ತಮಗಿರುವುದೈಯ್ಯ ರಾಜ – ರವಿ ಸಮತೇಜಾ.

ವೃತ್ತಾ

ನಿಮ್ಮ ಜನನಿಯರು ಉಲೂಪಿ ಚಿತ್ರಾಂಗದೆಯವರೂ
ಎಸಗಿದ ತಪೋ ಫಲದಿಂದ, ನಿಮಗಿದೆ
ಸಕಲ ಸಂಪದ ಭೋಗ ಭಾಗ್ಯಮಂ  ನರನಾಥ ಸುವಿಖ್ಯಾತ
ನಿಮ್ಮ ಭುಜಬಲಕೆ  ಇದಿರಾಂತು
ಕಾದುವ ಸುಭಟರಿಮ್ಮಿಗಿಲಾದವರೂ  ಧರಾಮಂಡಲ
ದೊಳಿಲ್ಲಾ, ನಿಮ್ಮ ಸಾಮರ್ಥ್ಯದಿಂ
ನಿರ‌್ವಿಘ್ನಮಾಗಿದೆ ಊರ‌್ವಿಯಲ್ಲೀ ॥

ಮಂತ್ರಿ: ಹೇ ರಾಜ ! ನಿಮ್ಮ ಜನನಿಯರಾದ  ಊಲೂಪಿ, ಚಿತ್ರಾಂಗದೆ ಅಮ್ಮಾಜಿಯವರು ಎಸಗಿದ ತಪೋಫಲದಿಂದ, ವಂದಕ್ಕೂ ಕೊರತೆ ಇಲ್ಲದೇ, ಮುಕುಂದನು ನಡೆಸುತ್ತಾ ಇದ್ದಾನೈಯ್ಯಾ, ರಾಜ.

ಬಭೃವಾಹನ: ಅಯ್ಯ ಸಚಿವ ಶಿಖಾಮಣಿ, ನಾವು ಪರಿಪಾಲನೆ ಮಾಡುವಂಥ ಧಾತ್ರಿಯಲ್ಲಿ, ಯಾವತ್ತು ಪ್ರಜೆಪರಿವಾರಗಳಿಗೆ ಒಂದಾದರೂ ಕೊರತೆಯೆನಿಸದೆ ಮುಕುಂದನು ನಡೆಸಿಕೊಂಡು, ಹೋಗುತ್ತಾನಲ್ಲಾ ನಾವು ಪರಿಪಾಲನೆ ಮಾಡುವಂಥಾ ಊರ‌್ವಿ ನಿರ‌್ವಿಘ್ನಮಾಗಿ ಯಿರುತ್ತದೆಯೇ ಚತುರಂಗ ಬಲ ಯಾವತ್ತು ಮುಂದಿನಂತೆ ಇದೆಯೇ, ಅಯ್ಯ  ಪ್ರಧಾನಿ ! ನಾವು ಒಂದೊಂದು ವೇಳೆ ಅಂತಃಪುರದಲ್ಲಿ ಇದ್ದ ಕಾಲಕ್ಕೂ, ಮೈಮರೆತು ಇರಲಾಗದು. ರಾಜ್ಯಭಾರವನ್ನು ನೆರವೇರಿಸಿ ಕೊಂಡು ಹೋಗಬೇಕಯ್ಯ ಮಂತ್ರಿ – ಕಾರ‌್ಯೇಷು ತಂತ್ರಿ.

ಮಂತ್ರಿ: ಹಾಗೇ ಆಗಲೈಯ್ಯ ರಾಜ – ಸೂರ‌್ಯಸಮತೇಜಾ ॥