ಹಿನ್ನೆಲೆ

ಕರ್ನಾಟಕದ ದೀರ್ಘ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲವು ಉಜ್ವಲವಾದ ಯುಗ. ಹದಿನಾಲ್ಕನೇ ಶತಮಾನದ ಎರಡನೇ ಪಾದದಲ್ಲಿ ಸ್ಥಾಪನೆಯಾದ ಈ ಸಾಮ್ರಾಜ್ಯವು ಹೊಸ ಮನ್ವಂತರಕ್ಕೆ ನಾಂದಿಯನ್ನು ಹಾಡಿತು. ಅತ್ಯಂತ ಪ್ರಕ್ಷುಬ್ಧ ಹಾಗೂ ಸಂಕೀರ್ಣ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬಂದ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಜನರ ಬದುಕಿನಲ್ಲಿ ಹೊಸಚೇತನವನ್ನು ಮೂಡಿಸಿತು. ಎಲ್ಲೆಲ್ಲೂ ಅತಂತ್ರ ಪರಿಸ್ಥಿತಿಯನ್ನು ನಿರ್ಮಿಸುತ್ತಿದ್ದ ಮುಸ್ಲಿಮರ ದಾಳಿಗಳನ್ನು ವಿಜಯನಗರದ ಅರಸರು ಯಶಸ್ವಿಯಾಗಿ ತಡೆದರು; ಆಂತರಿಕ ಗಲಭೆಗಳನ್ನು ಹತ್ತಿಕ್ಕಿ. ಶಾಂತಿ ಮತ್ತು ವ್ಯವಸ್ಥೆಯನ್ನು ಸ್ಥಾಪಿಸಿದರು. ರಣೋತ್ಸಾಹಿಗಳಾದ ಇವರು ಅತ್ಯಂತ ಅಲ್ಪ ಕಾಲಾವಧಿಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಒರಿಸ್ಸಾದವರೆಗೂ ವ್ಯಾಪಕವಾಗಿ ಹರಡಿದ್ದ ಸಾಮ್ರಾಜ್ಯವನ್ನು ನಿರ್ಮಿಸಿದರು; ರಾಜಕೀಯ ಏಕತೆಯನ್ನು ರೂಪಿಸಿದರು. ಬಾದಾಮಿ ಚಾಲುಕ್ಯರ ಕಾಲದಿಂದಲೂ ದಕ್ಷಿಣಭಾರತದ ರಾಜ್ಯಗಳ ನಡುವೆ ರಾಜಕೀಯ ಏಕತೆ ಮತ್ತು ಸೌಹಾರ್ದತೆಯ ಮರೀಚಿಕೆಯಾಗಿತ್ತು. ಈ ಹಗೆತನದ ಪರಿಸ್ಠಿತಿಯು ಕೊನೆಗೊಂಡು, ವಿಶ್ವಾಸಪೂರ್ಣವಾದ ಪರಿಸರವು ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ನಡುವೆ ಏರ್ಪಟ್ಟಿದ್ದು ಈ ಕಾಲದ ಗಮನಾರ್ಹವಾದ ಸಾಧನೆ. ವಿಜಯನಗರ ಅಥವಾ ಇಂದಿನ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಯಿತು. ವಿಜಯನಗರ ಸಾಮ್ರಾಜ್ಯದ ಜೊತೆಯಲ್ಲೇ ಸ್ಠಾಪನೆಯಾದ ಬಹುಮನೀ ರಾಜ್ಯದ ಉದ್ದಂಡವನ್ನು ವಿಜಯನಗರವು ಹತ್ತಿಕ್ಕಿತು.

ಸಾಂಸ್ಕೃತಿಕ ರಂಗದಲ್ಲಿ ವಿಜಯನಗರದ ಸಾಧನೆ ಅಪೂರ್ವವಾದುದು: ಕರ್ನಾಟಕದ ಸಂಸ್ಕೃತಿಗೆ ಇದು ಅಮರವಾದ ಕೊಡುಗೆಗಳನ್ನು ನೀಡಿತು. ಹಿಂದಿನ ರಾಜವಂಶಿಗಳ ಕಾಲದ ಸಾಂಸ್ಕೃತಿಕ ಪರಂಪರೆಯನ್ನು ವಿಜಯನಗರದ ಅರಸರು ಶ್ರೀಮಂತಗೊಳಿಸಿದ್ದರು. ಭವ್ಯವಾದ ಹಾಗೂ ಸುಂದರವಾದ ನಗರಗಳನ್ನು ನಿರ್ಮಿಸಿದರು. ಕಲೆ ಮತ್ತು ಸಾಹಿತ್ಯವನ್ನು ಬೆಳೆಸಿದರು; ವಿದ್ಯಾಪ್ರಗತಿಗೆ ಚಾಲನೆಯನ್ನು ನೀಡಿದರು; ವಾಣಿಜ್ಯ ಮತ್ತು ಕೈಗಾರಿಕೆಗಳು ವ್ಯಾಪಕ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಕಾರಣರಾದರು; ಕೃಷಿ ಮತ್ತು ನೀರಾವರಿಯನ್ನು ಉನ್ನತವಾಗಿ ಪ್ರೋತ್ಸಾಹಿಸಿದರು. ಎಲ್ಲಕ್ಕಿಂತ ಉನ್ನತವಾಗಿ ಪರಕೀಯರ ಧಾಳಿಗಳಿಂದ ಹಿಂದುಧರ್ಮವನ್ನೂ ಕರ್ನಾಟಕದ ಸಂಸ್ಕೃತಿಯನ್ನೂ ರಕ್ಷಿಸಿದರು; ಸರ್ವಧರ್ಮಗಳನ್ನು ಸಮಾನವಾಗಿ ಕಂಡರು.

ಕಲೆ, ವಾಸ್ತು ಮತ್ತು ಸಾಹಿತ್ಯಗಳು ಕಲ್ಪನೆಗೂ ಮೀರಿದ ಪ್ರಮಾಣದಲ್ಲಿ ಈ ಕಾಲದಲ್ಲಿ ಬೆಳೆಯಿತು. ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ರಾಜಧಾನಿ ವಿಜಯನಗರವೊಂದರಲ್ಲೇ ಸುಮಾರು ೧೨೦೦ಕ್ಕೂ ಹೆಚ್ಚು ದೇವಾಲಯಗಳಿವೆ. ವಿಜಯನಗರ ಪಟ್ಟಣದ ಹೊರತಾಗಿ ಕರ್ನಾಟಕದಲ್ಲಿ ಈ ಕಾಲದ ಸುಮಾರು ೫೦೦ ದೇಗುಲಗಳು ನೋಡಲು ಸಿಗುತ್ತವೆ. ಇವೆಲ್ಲವೂ ಅರಸರಿಂದಲೇ ನಿರ್ಮಾಣವಾಗಲಿಲ್ಲ. ಅರಸರು, ಅರಸು ಮನೆತನದವರು, ಮಂತ್ರಿಗಳು, ಡಣ್ಣಾಯಕರು, ಸಾಮಂತರು, ಸೇನಾನಾಯಕರು ಉನ್ನತ ಅಧಿಕಾರಿಗಳು, ವರ್ತಕರು, ಸ್ಥಳಿಯ ಅಧಿಕಾರಿಗಳು, ಮಹಾಜನರು, ಸಮಾಜದ ಗಣ್ಯ ವ್ಯಕ್ತಿಗಳು, ಕುಶಲಕರ್ಮಿಗಳು, ಕೊನೆಗೆ ಪುರೋಹಿತವರ್ಗದವರು ದೇಗುಲಗಳ ನಿರ್ಮಾಣ ಕಾರ್ಯದಲ್ಲಿ ದುಡಿದರು. ಇದು ಸಮಷ್ಟಿಕಲೆ, ಜನಸಮೂಹದ ಕಲೆ. ದೇವಾಲಯಗಳ ನಿರ್ಮಾಣದ ಮೂಲಕ ಕಲಾಪ್ರಗತಿಯನ್ನು ರಾಷ್ಟ್ರವ್ಯಾಪಿ ಚಳುವಳಿಯನ್ನಾಗಿ ವಿಜಯನಗರದ ಅರಸರು ಹುಟ್ಟು ಹಾಕಿದರು. ಇದರ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳು ಕ್ರಿಯಾಶೀಲವಾಗಿ ಪ್ರಭಾವ ಬೀರಿದ್ದುಂಟು.

ವಿಜಯನಗರದ ಕಾಲ ಧೀರೋದ್ಧಂತ ಯುಗ. ಹೊರಗಣ ಧಾಳಿಗಳನ್ನು ಹಾಗೂ ಆಂತರಿಕ ಅಸಮಾಧಾನವನ್ನು ವಿಜಯನಗರದ ಅರಸರು ಪರಿಣಾಮಕಾರಿಯಾಗಿ ಹತ್ತಿಕ್ಕಿದರು. ಇದು ಕಲೆಯಲ್ಲಿ ವ್ಯಕ್ತವಾಗುತ್ತದೆ. ಇದು ಗುಣಾತ್ಮಕವಾಗಿ ಹಾಗೂ ಪರಿಮಾಣದಲ್ಲೂ ದೊಡ್ಡದಾಗಿ ಬೆಳೆಯಿತು. ಬೃಹತ್ ದೇಗುಲಗಳು ಅಸಂಖ್ಯಾತವಾಗಿ ನಿರ್ಮಾಣವಾದವು. ಇದು ಉನ್ನತ ವಾಸ್ತು ಮತ್ತು ಕಲಾಯುಗ. ಇವುಗಳಲ್ಲಿ ವಾಸ್ತು, ಶಿಲ್ಪ ಮತ್ತು ಚಿತ್ರಕಲೆ ಮಹತ್ತರವಾಗಿ ಅರಳಿತು. ಗುಣಾತ್ಮಕವಾಗಿ ಇಷ್ಟು ಅತ್ಯಧಿಕ ಸಂಖ್ಯೆಯ ದೇಗುಲಗಳ ನಿರ್ಮಾಣವನ್ನು ಕರ್ನಾಟಕ ಮಾತ್ರವೇ ಅಲ್ಲ, ಭಾರತದ ಯಾವ ಸಾಮ್ರಾಜ್ಯದ ಅರಸರ ಕಾಲದಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿ ದೇವಾಲಯಗಳ ರಚನೆಯನ್ನಷ್ಟೇ ಗಮನಿಸಬೇಕಾಗಿಲ್ಲ, ಇದರ ಹಿನ್ನೆಲೆಯಲ್ಲಿರುವ ಸಾಮಾಜಿಕ ಧಾರ್ಮಿಕ, ಆರ್ಥಿಕ, ಹಾಗೂ ಕಲಾತ್ಮಕ ಪ್ರಗತಿಯ ಭಾವನೆಗಳನ್ನು ಪರಿಗಣಿಸಬೇಕು. ನಾಡಿನ ಪ್ರಗತಿಗಾಗಿ ವಿಜಯನಗರ ಸಾಮ್ರಾಜ್ಯದ ಇನ್ನೂರಿಪ್ಪತ್ತೈದು ವರುಷಗಳ ದೀರ್ಘ ಅಸ್ತಿತ್ವದಲ್ಲಿ ನೂರಾರಲ್ಲ, ಸಾವಿರಾರು ಅಧಿಕಾರಿಗಳು ಅರ್ಪಣ ಭಾವದಿಂದ ದುಡಿದರು. ಅಂತಹ ಅಧಿಕಾರಿಗಳಲ್ಲಿ ರಾಮಾಮಾತ್ಯನೆಂದು ಪ್ರಖ್ಯಾತನಾಗಿರುವ ಬಯಕಾರ ರಾಮಪ್ಪನೂ ಒಬ್ಬ. ಇವನು ಹದಿನಾರನೇ ಶತಮಾನದ ಉದ್ದಕ್ಕೂ ಬದುಕಿದ್ದವನು. ಸಾಮ್ರಾಜ್ಯವು ಅಮಾನುಷವಾಗಿ ನಾಶವಾಗುವ ಮೊದಲು ಇವನು ಕಾಲವಾಗಿರಬೇಕು.

ವಿಜಯನಗರ ಸಾಮ್ರಾಜ್ಯವು ಕ್ರಿ.ಶ. ೧೩೩೬ರಲ್ಲಿ ಸ್ಥಾಪನೆಯಾಯಿತು. ಪ್ರಧಾನವಾಗಿ ಸಂಗಮ, ಸಾಳುವ ಮತ್ತು ತುಳುವ ವಂಶಗಳು ಆಳಿದವು. ಸಂಗಮ ವಂಶದ ಹರಿಹರ, ಕಂಪಣ, ಹುಕ್ಕ, ಮಾರಪ್ಪ ಮತ್ತು ಮುದ್ದಪ್ಪರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಹರಿಹರ ಮತ್ತು ಬುಕ್ಕರು ಈ ವಂಶದ ಮೊದಲ ಇಬ್ಬರು ಚಕ್ರವರ್ತಿಗಳು. ಇಮ್ಮಡಿ ದೇವರಾಯ(೧೪೨೩ – ೧೪೪೬) ಈ ವಂಶದ ಪ್ರಸಿದ್ದನಾದ ಅರಸ. ಇವನ ಕಾಲದಲ್ಲಿ ಸಾಮ್ರಾಜ್ಯದ ಎಲ್ಲ ಮಾನವಿಕ ರಂಗಗಳಲ್ಲೂ ಅಪೂರ್ವವಾದ ಪ್ರಗತಿ ಉಂಟಾಯಿತು. ಇವನು ಸಾಮ್ರಾಜ್ಯವನ್ನು ಬಹುಮುಖವಾಗಿ ವಿಸ್ತರಿಸಿದ. ಹಂಪಿಯ ವಿರೂಪಾಕ್ಷ ದೇಗುಲದ ಮುಂದಿನ ಉನ್ನತ ಗೋಪುರವನ್ನು ನಿರ್ಮಿಸಿದವನು ಇವನೇ. ಕರ್ನಾಟಕದಲ್ಲಷ್ಟೇ ಅಲ್ಲ, ಭಾರತದಲ್ಲೇ ಇವನು ಸುವಿಖ್ಯಾತನಾದ ಚಕ್ರವರ್ತಿ. ಕ್ರಿ.ಶ. ೧೪೮೫ ರ ವೇಳೆಗೆ ಸಂಗಮ ವಂಶದ ದುರ್ಬಲ ಅರಸರು ಅಧಿಕಾರಕ್ಕೆ ಬಂದರು. ಇವರಿಂದ ಸಾಮ್ರಾಜ್ಯ ಪತನದ ಹಾದಿಯನ್ನು ಹಿಡಿಯಿತು. ಅದೇ ಸಮಯದಲ್ಲಿ ಸಾಳುವ ವಂಶದ, ಚಂದ್ರಗಿರಿಯ ಮಂಡಲಾಧಿಪತಿಯಾದ ಒಂದನೇ ನರಸಿಂಹನು ಸಾಮ್ರಾಜ್ಯದ ಅಧಿಕಾರವನ್ನು ವಹಿಸಿಕೊಂಡ ಸಂಗಮ ಅರಸರನ್ನು ಪದಚ್ಯುತರನ್ನಾಗಿ ಮಾಡಿದ. ಇದಕ್ಕೆ ಜನತೆಯಿಂದ ಅಸಮಾಧಾನವೇನು ಪ್ರಕಟವಾಲಿಲ್ಲ. ಒಂದು ರೀತಿಯಲ್ಲಿ ಪರೋಕ್ಷವಾಗಿ ಅವರು ಬೆಂಬಲವನ್ನೇ ನೀಡಿದರು. ಸಾಳುವ ವಂಶವೂ ದೀರ್ಘವಾಗಿ ಅಧಿಕಾರದಲ್ಲಿ ಮುನ್ನಡೆಯಲಿಲ್ಲ. ಅವನ ಸೇನಾ ನಾಯಕನಾದ ತುಳುವ ವಂಶದ ನರಸನಾಯಕನು ವಿಜಯನಗರ ಸಾಮ್ರಾಜ್ಯದ ಅಧಿಕಾರಿಯನ್ನಾಗಿ ತನ್ನ ವಂಶದ ಆಳ್ವಿಕೆಯನ್ನು ಆರಂಭಿಸಿದ. ಈ ವಂಶದ ಪ್ರಖ್ಯಾತನಾದ ಚಕ್ರವರ್ತಿ ಕೃಷ್ಣದೇವರಾಯ (ಕ್ರಿ.ಶ. ೧೫೦೯ – ೧೫೩೦). ಇವನ ಕಾಲದಲ್ಲೇ ಬಯಕಾರ ರಾಮಪ್ಪನ ಪೂರ್ವಿಕರು ಉನ್ನತ ಹುದ್ದೆಗಳಲ್ಲಿದ್ದರು. ಇವನ ಚಿಕ್ಕಪ್ಪ ರಾಮಯ್ಯಭಾಸ್ಕರನನ್ನು ಕೃಷ್ಣದೇವರಾಯನು ಕೊಂಡುವೀಡು ದುರ್ಗದ ಅಧಿಪತಿಯಾಗಿ ನೇಮಿಸಿದ್ದನು. ಇದೇ ಕಾಲದಲ್ಲಿ ರಾಮಪ್ಪನು ಕಿರಿಯ ಹುದ್ದೆಗಳಲ್ಲಿ ಸಾಮ್ರಾಜ್ಯಕ್ಕೆ ಸೇವೆ ಸಲ್ಲಿಸಿದ್ದ. ಕೃಷ್ಣದೇವರಾಯನ ನಂತರ ಇವನ ಮಲಸೋದರ ಅಚ್ಯುತರಾಯನು ವಿಜಯನಗರದ ಸಾಮ್ರಾಟನಾದನು. ಅಚ್ಯುತನ ಕಾಲದಲ್ಲಿ ರಾಮಪ್ಪನು ಅತ್ಯುನ್ನತ ಹುದ್ದೆಗೇರಿದನು. ಮುಂದೆ ಸಾಮ್ರಾಟನಾದ ಸದಾಶಿವರಾಯನು ಅಳಿಯ ರಾಮರಾಯನ ಕೈಗೊಂಬೆಯಾದನು. ಕೃಷ್ಣದೇವರಾಯನ ಅಳಿಯನಾದ ರಾಮರಾಯನು ಸ್ಥಾನ ಬಲದಿಂದ ಸಾಮ್ರಾಜ್ಯದ ಸರ್ವಾಧಿಕಾರಿಯಾದನು. ಬಯಕಾರ ರಾಮಪ್ಪನು ರಾಮರಾಯನ ಸಹೋದರ ವೆಂಕಟನ ನೆರವಿನಿಂದ ಅವನ ವಿಶ್ವಾಸವನ್ನು ಗೆದ್ದ. ಮುಂದೆ ಕೆಲವೇ ವರ್ಷಗಳಲ್ಲಿ ರಾಮರಾಯನ ಉದ್ದಂಡವೋ, ಅತಿಯಾದ ಆತ್ಮವಿಶ್ವಾಸವೂ ವಿಜಯನಗರ ಸಾಮ್ರಾಜ್ಯವು ತಾಳಿಕೋಟೆ ಅಥವಾ ಬನ್ನಿಹಟ್ಟಿ ಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಾಶವಾಗಿ ಹೋಯಿತು. ಪ್ರಾಯಶಃ ಜಗತ್ತಿನ ಇತಿಹಾಸದಲ್ಲೇ ಮಾನವನ ವಿದ್ವಂಸಕ್ಕೆ ಗುರಿಯಾಗಿ, ಮತ್ತೆಂದೂ ಪುನಶ್ಚೇತನಗೊಳ್ಳದ ನಗರ ಇದೊಂದೇ. ಅದು ಬೇರೆಯೇ ಆದ ವ್ಯಥೆಯ ಕಥೆ. ಸಾಮ್ರಾಜ್ಯ ಅಳಿದರೂ, ಬಯಕಾರ ರಾಮಪ್ಪನಂತಹ ಸಾವಿರಾರು ಅಧಿಕಾರಿಗಳು ಸಲ್ಲಿಸಿದ ಕೊಡುಗೆಗಳು ಅಮರವಾಗಿ ಉಳಿದಿವೆ. ಇಂದಿಗೂ ಅವುಗಳಿಂದು ಜನರು ಪ್ರಯೋಜನ ಪಡೆಯುತ್ತಿರುವುದು ಗಮನಾರ್ಹವಾದ ಸಂಗತಿ

ಬಯಕಾರ ರಾಮಪ್ಪ : ವ್ಯಕ್ತಿ ಚಿತ್ರಣ

ಬಯಕಾರ ರಾಮಪ್ಪನ ವ್ಯಕ್ತಿತ್ವದ ಸೂಕ್ಷ್ಮ ಪರಿಚಯ ಹಿಂದಿನ ಅಧ್ಯಾಯದಲ್ಲೇ ಕೊಟ್ಟಿದೆ. ಹದಿನಾರನೇ ಶತಮಾನದ ಪೂರ್ವಾರ್ಧದಲ್ಲಿ ಬದುಕಿದ್ದ. ಇವನು ಹಲವಾರು ಅಗ್ರಹಾರಗಳು, ಅನೇಕ ದೇಗುಲಗಳು, ಅಧಿಕ ಸಂಖ್ಯೆಯ ಬಾವಿ ಮತ್ತು ದೊಡ್ಡದಾದ ಕೆರೆಗಳನ್ನು ಕಟ್ಟಿಸಿದ್ದಾನೆ. ಇವನು ನಿರ್ಮಿಸಿದ ಕೆರೆಗಳು ಇಂದಿಗೂ ಸಾವಿರಾರು ಜನರಿಗೆ ಜಲಾಶ್ರಯವನ್ನು ನೀಡಿವೆ. ಇವನು ರಾಮಾಮಾತ್ಯನೆಂದೂ ಪ್ರಖ್ಯಾತನಾಗಿದ್ದಾನೆ. ಇವನು ಸಂಗೀತಗಾರ, ವಾಗ್ಗೇಯಕಾರ, ವಾಸ್ತುಕಾರ, ದಕ್ಷ ಆಡಳಿತಗಾರ ಹಾಗೂ ಸರ್ವತೋಮುಖ ಪ್ರತಿಭಾವಂತ. ಬಯಕಾರ ರಾಮಪ್ಪನು ವಿಜಯನಗರದ ಸಾಮ್ರಾಜ್ಯದ ಕಿರಿಯ ಹುದ್ದೆಗಳಲ್ಲಿ ದಕ್ಷತೆಯಿಂದ ಆಡಳಿತವನ್ನು ನಡೆಸಿ ಅಂತಿಮವಾಗಿ ಸೂಕ್ಷ್ಮ ಹಾಗೂ ಪ್ರಕ್ಷುಬ್ಧ ದುರ್ಗವಾದ ಕೊಂಡುವೀಡುವಿನ ದುರ್ಗಾಧಿಪತಿಯಾಗಿ ನೇಮಕವಾದನು. ಇದು ಇವನ ಅಸಾಧಾರಣ ದಕ್ಷತೆಯ ಪ್ರತೀಕವಾಗಿದೆ. ಇವನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಅರಿಯೋಣ:

ಬಯಕಾರ ರಾಮಪ್ಪನು ಪಾದರಕುಪ್ಪಂ ಗ್ರಾಮದ ಅಧಿಕಾರಸ್ಥ ಹಾಗೂ ವಿದ್ವಾಂಸರ ಸುಪ್ರಸಿದ್ಧ ಮನೆತನದಲ್ಲಿ ಜನಿಸಿದವನು. ಇದು ಇಂದು ಚೆಂಗಲ್ ಪಟ್ಟು ಜಿಲ್ಲೆಯ ಪೊನ್ನೇರಿ ತಾಲ್ಲೂಕಿನಲ್ಲಿದೆ. ಪರಾಶರಗೋತ್ರದ, ಆಪಸ್ತಂಭ ಸೂತ್ರದ ಮತ್ತು ಯಜುಸ್ ಶಾಖೆಯ ಹಿರಿಯ ತಿಮ್ಮರಸಯ್ಯ ಮತ್ತು ಹಿರಿಯ ಲಕುಲೀಶಮ್ಮರು ಇವನು ತಂದೆ ತಾಯಿಯರು. ಶಾಸನಗಳಲ್ಲಿ ತಿಳಿಸಿರುವಂತೆ ಸಿಂಗಯ್ಯ ಎಂಬುವವನು ಇವನ ವಂಶದ ಮೂಲ ಪುರುಷ. ಇವನ ಮಗ ಭಾವಯ್ಯ. ಭಾವಯ್ಯನಿಗೆ ರಾಮಮಂತ್ರಿ ಎಂಬ ಮಗನಿದ್ದನು. ರಾಮಮಂತ್ರಿಗೆ ತೆಲುಗಮ್ಮಳೆಂಬ ಧರ್ಮಪತ್ನಿಯಲ್ಲಿ ಪೆದತಿಮ್ಮಯ್ಯ ತಿಮ್ಮಮಂತ್ರಿ, ಶೂರ, ಭಾಸ್ಕರ ಅಥವಾ ರಾಮಯ್ಯ ಭಾಸ್ಕರ ಮತ್ತು ಭಾವಯ್ಯ ಎಂಬ ಐವರು ಗಂಡು ಮಕ್ಕಳು ಹಾಗೂ ಚಿನ್ನಮಾಂಬ ಎಂಬ ಮಾತ್ರ ಮಗಳಿದ್ದಳು. ಈಕೆಯನ್ನು ಕೊಂಡು ವೀಡು ಸೀಮೆಯ ಸಂತಲೂರು ಗ್ರಾಮದ ಪ್ರತಾಪಯಲ್ಲನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ಸ್ಥಳವು ಇಂದು ಅಂಧ್ರದ ಗುಂಟೂರು ಜಿಲ್ಲೆಯ ನರಸರಾವಪೇಟೆ ತಾಲೋಕಿನಲ್ಲಿದೆ. ರಾಮಮಂತ್ರಿಯ ಮಕ್ಕಳಲ್ಲಿ ಹಿರಿಯಾನಾದ ಪೆದತಿಮ್ಮಯ್ಯನೇ ಬಯಕಾರ ರಾಮಪ್ಪನ ತಂದೆ. ಪೆದತಿಮ್ಮಯ್ಯನನ್ನು ತಿಮ್ಮಾಮಾತ್ಯನೆಂದೂ ಕರೆಯಲಾಗಿದೆ. ಇವನನ್ನು ಗೌರವಾರ್ಥವಾಗಿ ಅಮಾತ್ಯನೆಂದು ಕರೆಯಲಾಗಿದೆಯೋ ವಿನಾ, ಇವನೇನು ಮಂತ್ರಿಯಾಗಿರಲ್ಲಿಲ್ಲ. ಇವನು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ರಾಯಸನೆಂಬ ಅಧಿಕಾರಿಯಾಗಿದ್ದ. ಬಯಕಾರ ರಾಮಪ್ಪ ತನ್ನ ಸಂಗೀತ ಕೃತಿಯಲ್ಲಿ ತೋಡರುಮಲ್ಲ ಕುಟುಂಬಕ್ಕೆ ಸೇರಿದವನೆಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಶಾರ್ಜ್ಗ್ ದೇವನು ಬರೆದ ಸಂಗೀತ ರತ್ನಾಕರ ಗ್ರಂಥಕ್ಕೆ ಭಾಷ್ಯವನ್ನು ರಚಿಸಿದ ಕಲ್ಲಪ್ಪದೇಶಿಕ ಅಥವಾ ಕಲ್ಲಿನಾಥನು ಇವನ ತಾಯಿಯ ತಂದೆ. ಇವನ ಚಿಕ್ಕಪ್ಪಂದಿರಾದ ರಾಮಯ್ಯ ಭಾಸ್ಕರ ಮತ್ತು ಭಾವಯ್ಯರು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿದ್ದರು. ರಾಮಯ್ಯ ಭಾಸ್ಕರನು ಬಾಚರಸನೆಂದು ಹೆಸರಾಗಿದ್ದಾನೆ. ಇವನನ್ನು ಕೊಂಡುವೀಡುದುರ್ಗದ ದಣ್ಣಾಯಕನಾಗಿ ನೇಮಿಸಲಾಗಿತ್ತು. ಈ ನೇಮಕಕ್ಕೆ ಕೃಷ್ಣದೇವರಾಯನೇ ಕಾರಣವಿರಬೇಕು. ಕೊಡುವೀಡು ದುರ್ಗವು ಅಯಕಟ್ಟಿನ ಸ್ಥಳದಲ್ಲಿದ್ದರಿಂದ ಇದನ್ನು ಆಕ್ರಮಿಸಲು ಕಳಿಂಗದ ಗಜಪತಿಗಳಿ, ದಖನೆ ಸುಲ್ತಾನರು ಮತ್ತು ವಿಜಯನಗರದ ಅರಸರಲ್ಲಿ ತೀವ್ರ ಸ್ಪರ್ಧೆಯಿತ್ತು. ಗೆದ್ದ ಈ ದುರ್ಗವನ್ನು ಉಳಿಸಿಕೊಳ್ಳಲು, ಗೆದ್ದಷ್ಟೇ ಪ್ರಯಾಸ ಪಡಬೇಕಿತ್ತು. ಈ ದುರ್ಗದ ನಿರ್ವಹಣೆಗೆ ದಕ್ಷನೂ, ಸಚ್ಚಾರಿತ್ರನೂ ಆದ ವ್ಯಕ್ತಿಯ ಅವಶ್ಯವಿತ್ತು. ಆಯಕಟ್ಟಿನ ಹಾಗೂ ಸೂಕ್ಷ್ಮಪರಿಸ್ಥಿತಿಯ ದುರ್ಗಗಳ ಸಂರಕ್ಷಣೆಗೆ ಅಸೂಯೆ, ದುರಾಸೆ ಮತ್ತು ವಂಚನೆಗಳಿಂದ ಮುಕ್ತರಾದ ಸನ್ನಡೆತೆಯ ಬ್ರಾಹ್ಮಣ ನಾಯಕರನ್ನು ಕೃಷ್ಣದೇವರಯನು ನೇಮಿಸಿದನೆಂದು ರಾಯವಾಚಕಮು ಗ್ರಂಥವು ತಿಳಿಸುತ್ತದೆ. ಅವರಲ್ಲಿ ಭಾಸ್ಕರನೂ ಒಬ್ಬ. ಭಾಸ್ಕರನ ನೇಮಕದ ಹಿಂದೆ ಕೃಷ್ಣ ದೇವರಾಯನು ಕಂಡ ದೂರದರ್ಶಿತ್ವ ಮುದೊಂದು ದಿವಸ ಸಾಕಾರವಾದುದುಂಟು. ರಾಯನ ಕಡು ವಿರೋಧಿಗಳಾಗಿದ್ದ ಸುಮಾರು ಎಪ್ಪತ್ತೆರೆಡು ಮಂದಿ ರೆಡ್ಡಿನಾಯಕರನ್ನು ಭಾಸ್ಕರನು ಕೊಂಡುವೀಡುವಿನಲ್ಲಿ ನೂತನವಾಗಿ ನಿರ್ಮಿಸಿದ ಗೋಪಿನಾಥ ದೇಗುಲಕ್ಕೆ ಆಹ್ವಾನಿಸಿ ಕೊಂದನಂತೆ. ಇದರಲ್ಲಿ ಉತ್ಪ್ರೇಕ್ಷೆ ಇರುವುದಾದರೂ, ಮಧ್ಯಯುಗದಲ್ಲಿ ಇಂತಹ ಘಟನೆಗಳು ಸಾಮಾನ್ಯವೇ. ಅಷ್ಟು ಸಂಖ್ಯೆಯ ರೆಡ್ಡಿ ನಾಯಕರಿಲ್ಲದಿದ್ದರು ಅನೇಕರು ಮೃತರಾಗಿರುವುದು ಒಪ್ಪಬೇಕಾದದ್ದೆ. ಅದೇನೆ ಇರಲಿ ರಾಯನ ಶತ್ರುಗಳು ನಾಶವಾಗಿ, ಅವನ ಅಧಿಕಾರ ಕೊಂಡುವೀಡಿನಲ್ಲಿ ಪ್ರಬಲವಾಗಲು ಸಾಧ್ಯವಾಯಿತು. ರಾಮಯ್ಯ ಭಾಸ್ಕರನೊಂದಿಗೆ ಬಯಕಾರ ರಾಮಪ್ಪನ ಸಂಬಂಧದ ಎಳೆಗಳು ಪ್ರಬಲವಾಗಿದ್ದವು. ಇವನು ತನ್ನನ್ನು ಬಾಚರಸನ ಮಗನೆಂದು ಒಂದು ಶಾಸನದಲ್ಲಿ ಹೇಳಿಕೊಡಿರುವುದು ಈ ವಾತ್ಸಲ್ಯ ಸಂಬಂಧದ ದ್ಯೋತಕವಾಗಿದೆ. ಚಿಕ್ಕಪ್ಪ ಅಥವಾ ದೊಡ್ಡಪ್ಪನನ್ನು ತಂದೆಯೆಂದು ಹೇಳಿಕೊಳ್ಳುವುದು ಭಾರತೀಯ ಸಂಪ್ರದಾಯದಲ್ಲಿ ಸಾಮಾನ್ಯ ಸಂಗತಿಯೇ. ಇವನು ತನ್ನ ಚಿಕ್ಕಪ್ಪ ಬಾಚರಸ, ಚಿಕ್ಕಮ್ಮ ಅಮ್ಮಾಜಮ್ಮ ಮತ್ತು ಅವರ ಮಗ ಕೃಷ್ಣಪ್ಪ ಈ ಮೂವರ ಹೆಸರಿನಲ್ಲಿ ಶಿವಾಲಯವನ್ನು ಕಟ್ಟಿಸಿದ. ಬಯಕಾರ ತನ್ನ ಚಿಕ್ಕಪ್ಪನೊಂದಿಗೆ ಇದ್ದ ಅಮರ ವಾತ್ಸಲ್ಯದ ನೆನಪಾಗಿ ಈ ದೇಗುಲ ಉಳಿದಿದೆ. ಬಯಕಾರ ರಾಮಪ್ಪನ ಪತ್ನಿ ವೀರಮ್ಮ ಇವನಿಗೆ ಲಿಂಗಾಲಯ್ಯ ಮತ್ತು ಆಕಪ್ಪ ಎಂಬ ಇಬ್ಬರು ಗಂಡುಮಕ್ಕಳು ಅಚ್ಯುತಮ್ಮ ಮತ್ತು ಕಾಮಾಂಬಿಕಾ ಎಂಬಿಬ್ಬರು ಹೆಣ್ಣು ಮಕ್ಕಳು ಇದ್ದರು. ಇವನ ವಂಶಾವಳಿಯನ್ನು ಈ ಕೆಳಕಂಡಂತೆ ರಚಿಸಬಹುದು;

01_107_BR_KUH

ದಕ್ಷ ಆಡಳಿತಗಾರ

ಬಯಕಾರ ರಾಮಪ್ಪ ಆಸಾಮಾನ್ಯ ಹಾಗೂ ದಕ್ಷ ಆಡಳಿತಗಾರ. ವಂಶದ ಘನತೆಯಿಂದಲೂ ಮನೆತನದ ಹಿರಿಯರ ಸ್ಥಾನಮಾನದಿಂದಲೂ ಇವನು ಉನ್ನತ ಹುದ್ದೆಯನ್ನು ಗಳಿಸಲಿಲ್ಲ. ವೈಯಕ್ತಿಕ ಸಾಧನೆಗಳ ಮೂಲಕ ಮುಂದೆ ಬಂದ ಸ್ವಯಂನಿರ್ಮಿತ ವ್ಯಕ್ತಿತ್ವ ಇವನದು. ಮೊದಲಿಗೆ ಮಾಗಣಿಕಾರ, ಪಾರುಪತ್ಯಗಾರ ಮುಂತದ ಕಿರಿಯ ಹುದ್ದೆಗಳಲ್ಲಿ ದುಡಿದು ಅಪಾರವಾದ ಅನುಭವವನ್ನು ಗಳಿಸಿದ. ಈ ಹಂತಗಳಲ್ಲಿ ರಾಮಪ್ಪನು ಅಪ್ರತಿಮ ದಕ್ಷತೆಯನ್ನು ಪ್ರದರ್ಶಿಸಿ ವಿಜಯನಗರದ ಚಕ್ರವರ್ತಿಗಳ ಮೆಚ್ಚುಗೆಯನ್ನು ಸಂಪಾದಿಸಿದ. ಇವನಿಗೆ ಸಾಮ್ರಾಜ್ಯದುರಂಧರ ಎಂಬ ಬಿರುದು ದೊರೆಯಿತು. ಇಂದಿನ ಮೈಸೂರು ನಗರದ ಸುತ್ತಲಿನ ಹದಿನಾಡು ಪ್ರದೇಶದ ನಾಯಕನಾಗಿ ಸೇವೆ ಸಲ್ಲಿಸಿದ್ದನು. ಅನಂತರ ತುಮಕೂರು ಜಿಲ್ಲೆಯ ಬೂದಿಹಳು ಮತ್ತು ಹೊನ್ನವಳ್ಳಿ ಸೀಮೆಗಳ ಮಾಗಣಿಕಾರನಾಗಿ ಸಾಮ್ರಾಜ್ಯದ ಆಡಳಿತ ನಡೆಸಿದ. ಇಲ್ಲಿ ಸಮರ್ಥ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸಮಯದಲ್ಲೇ ವಿಜಯನಗರದ ಚಕ್ರವರ್ತಿಗಳ ಗಮನವನ್ನು ಸೆಳೆದಿರಬೇಕು. ರಾಮಾಮಾತ್ಯನು ತನ್ನ ಸ್ವಂತ ಸಾಮರ್ಥ್ಯ ಮತ್ತು ಪ್ರತಿಬೆಯಿಂದ ಪ್ರಾಂತಧಿಕಾರಿಯ ಉನ್ನತ ಹುದ್ದೆಯನ್ನು ಗಳಿಸಿದ. ಇವನು ಚಿಕ್ಕಪ್ಪ ರಾಮಯ್ಯಭಾಸ್ಕರನ ನಿವೃತ್ತಿ ಅಥವಾ ಸಾವಿನ ನಂತರ ಅರಸ ಅಚ್ಯುತರಾಯನು ಬಯಕಾರ ರಾಮಪ್ಪನನ್ನು ಕೊಂಡುವೀಡು ದುರ್ಗದ ಅಧಿಪತಿಯನ್ನಾಗಿ ಕ್ರಿ.ಶ. ೧೫೩೯ ರಲ್ಲಿ ನೇಮಿಸಿದ. ಇದಕ್ಕೆ ರಾಮಯ್ಯಭಾಸ್ಕರನ ನೆರವು ದೊರೆತಿರಬಹುದು. ರಾಮಪ್ಪನು ತನ್ನ ಚಿಕ್ಕಪ್ಪನನ್ನು ತಂದೆಯಂದು ಕರೆದುಕೊಂಡಿರುವುದು ಹಾಗೂ ಅವನು, ಅವನ ಪತ್ನಿ ಮತ್ತು ಅವನ ಮಗನ ಹೆಸರಿನಲ್ಲಿ ಗುಡಿಗಳನ್ನು ಕಟ್ಟಿಸಿರುವುದರಿಂದ ಈ ಊಹೆ ಸಕಾಲಿಕ ಎನಿಸುತ್ತದೆ. ರಾಮಾಮಾತ್ಯನು ತನ್ನನ್ನು ಜೇಲೂರಿ ಸಿಂಹಾಸನಾಧಿಪತಿ (ಇಂದಿನ ಕೊಂಡುವೀಡು ದುರ್ಗ) ಎಂದು ಕರೆದುಕೊಂಡು ಅರಸನೊಂದಿಗೆ ಸಮಾನ ಸ್ಥಾನವನ್ನು ಘೋಷಿಸಿಕೊಂಡದ್ದುಂಟು. ಇವನಿಗೆ ಸಂಬಂಧಿಸಿದ ಶಾಸನಗಳ ಅಧ್ಯಯನದಿಂದ ಕೊಂಡುವೀಡು ದುರ್ಗಾಧಿಪತ್ಯವು ಇವನ ವಂಶದ ಎರಡು ತಲೆಮಾರಿನವರೆಗೆ ಅಧೀನದಲ್ಲಿರುವುದು ಕಂಡುಬರುತ್ತದೆ. ಮೊದಲೇ ಗಮನಿಸಿದಂತೆ ಕೊಂಡುವೀಡು ದುರ್ಗವು ರಾಜಕೀಯವಾಗಿ ಜಟಿಲಕಾರಸ್ಥಾನವಾಗಿದ್ದರಿಂದ ದಖನ್ ಸುಲ್ತಾನರೂ ಒಳಗೊಂಡಂತೆ ಆನೇಕ ಅರಸರನ್ನು ಆಕರ್ಷಿಸಿತ್ತು ಹಾಗೂ ಅದು ಸಮಸ್ಯೆಗಳ ತಾಣವಾಗಿತ್ತು. ಸಂಗಮ ಅರಸರ ಕಾಲದಿಂದ ಸಾಮ್ರಾಜ್ಯದ ಕಾಲದ ಉದ್ದಕ್ಕೂ ಕೊಂಡುವೀಡು ದುರ್ಗವು ರಾಜಕೀಯ ಮತ್ತು ಲಷ್ಕರಿ ಪ್ರಾಮುಖ್ಯವನ್ನು ಗಳಿಸಿತ್ತೆನ್ನುವುದನ್ನು ಗಮನಿಸಬಹುದು. ಈ ದುರ್ಗದ ಆಡಳಿತವನ್ನು ನಿರ್ವಹಿಸಲು ದಕ್ಷನೂ, ದೃಡಚಿತ್ತದವನೂ, ಚತುರನೂ ಹಾಗೂ ವಿಶ್ವಾಸಪಾತ್ರನೂ ಆದ ವ್ಯಕ್ತಿಯ ಅಗತ್ಯವಿತ್ತು. ಈ ಅಗತ್ಯಗಳನ್ನು ಬಯಕಾರ ರಾಮಪ್ಪನು ಪೂರೈಸಿದ. ಅಚ್ಯುತರಾಯನ ಸಾವಿನ ನಂತರವೂ ವಿಜಯನಗರದ ಸರ್ವಾಧಿಕಾರಿ ಅಳಿಯ ರಾಮರಾಯನ ಕಾಲದಲ್ಲಿ ಇವನು ಅಧಿಕಾರದಲ್ಲಿ ಮುಂದುವರೆದ. ಅಳಿಯ ರಾಮರಾಯನ ಸೋದರ ವೆಂಕಟಾದ್ರಿಯು ಇವನ ಪ್ರೀತಿಯ ಮಿತ್ರನಾಗಿರುವುದು ಇವನು ರಚಿಸಿದ ಸಂಗೀತ ಗ್ರಂಥದಿಂದ ತಿಳಿಯುತ್ತದೆ. ಇವನು ವೆಂಕಟಾದ್ರಿಯ ಮೂಲಕ ರಾಮರಾಯನ ವಿಶ್ವಾಸವನ್ನು ಗಳಿಸಿದ ಹಾಗೂ ತನ್ನ ಸಂಗೀತ ಗ್ರಂಥವನ್ನು ಅವನಿಗೆ ಅರ್ಪಿಸಿದ. ಬ್ರಾಹ್ಮಣ ವಿದ್ವಾಂಸರು ಅಡಳಿತ ರಂಗದಲ್ಲಿ ಮತ್ತು ಅರಸರ ಅಸ್ಥಾನದಲ್ಲಿ ಉನ್ನತಾಧಿಕಾರಿಗಳಿಂದ ಅಧಿಕಾರ ನಿರ್ವಹಿಸುತ್ತಿರುವುದು ಸಾಮಾನ್ಯ ಸಂಗತಿ. ಇದಕ್ಕೆ ವಿಜಯನಗರ ಸಾಮ್ರಾಜ್ಯ ಹೊರತಾದುದಲ್ಲ. ಸಂಗಮ ಅರಸರ ಕಾಲದಿಂದಲೂ ಈ ವ್ಯವಸ್ಥೆಯನ್ನು ಕಾಣುತ್ತೇವೆ. ವಿಜಯನಗರದ ಆಡಳಿತದಲ್ಲಿ ಮಾಧವಮಂತ್ರಿ, ಲಕ್ಷ್ಮೀಧರ ಮುಂತಾದ ನೂರಾರು ಬ್ರಾಹ್ಮಣ ಮಂತ್ರಿಗಳನ್ನು ಹೆಸರಿಸಬಹುದು. ಬ್ರಾಹ್ಮಣ ಅಧಿಕಾರಿಗಳನ್ನು ಅಳಿಯ ರಾಮರಯನು ಆಡಳಿತದಿಂದ ದೂರವಿಟ್ಟಿದ್ದು ಈ ಕಾಲದ ವಿಶಿಷ್ಟ ಅಂಶ. ಈ ಸಮಯದಲ್ಲೂ ಅಧಿಕಾರದಲ್ಲಿ ಮುಂದುವರೆದ ಇಬ್ಬರು ಬ್ರಾಹ್ಮಣ ಉನ್ನತಾಧಿಕಾರಿಗಳಲ್ಲಿ ಇವನೂ ಒಬ್ಬ ಎಂಬುದು ಗಮನಾರ್ಹವಾದ ಸಂಗತಿ ಕೊಂಡುವೀಡುವಿನಂತಹ ಮಹತ್ವದ ದುರ್ಗದ ದಣ್ಣಾಯಕನಾಗಿ ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಇವನ ವ್ಯಕ್ತಿತ್ವದ ಹಿರಿಮೆಗರಿಮೆಗಳ ಅರಿವು ಆಗುತ್ತದೆ. ಮತ್ತೊಬ್ಬ ಬ್ರಾಹ್ಮಣ ಅಧಿಕಾರಿಯೇ ರಾಮಭಟ್ಟಯ್ಯ. ಅಳಿಯ ರಾಮರಾಯನು ಇವರ ಬದಲು ಕ್ಷತ್ರಿಯರು ಮತ್ತು ತೆಲುಗು ಚೋಳರನ್ನು ಅಧಿಕಾರದಲ್ಲಿ ತುಂಬಿದ್ದು ಅನ್ಯ ಸಂಗತಿ.

ವಿದ್ವಾಂಸನಾಗಿ ಸೇವೆ

ಬಯಕಾರ ರಾಮಪ್ಪನು ಆಗಮ ಮತ್ತು ಸಂಗೀತಗಳೆರಡರಲ್ಲೂ ಘನಪಂಡಿತನಾಗಿದ್ದ. ಪ್ರಾರಂಭದಿಂದಲೂ ಇವನ ಶಾಸನಗಳು ಇವನನ್ನು ವಾಗ್ಗೇಯಕಾರನೆಂದು ಕರೆದಿವೆ. ಇವನ ನಾಮವಿಶೇಷಣವೇ ಆ ಅರ್ಥವನ್ನು ಕೊಡುತ್ತದೆ. ಬಯಕಾರ ಎಂಬುದು ಉಭಯಕಾರದ ಸಂಕ್ಷಿಪ್ತ ಅಥವಾ ರೂಢಿಪದ. ಉಭಯಕಾರ ಎಂಬುದು ವಾಗ್ಗೇಯಕಾರ ಮತ್ತು ಸಂಗೀತಗಾರ ಎಂಬ ಪ್ರಕಾರಗಳನ್ನು ಸೂಚಿಸುತ್ತದೆ. ಇವನು ಉದ್ದಾಮ ಸಂಗೀತ ಕೃತಿಗಳ ರಚನಕಾರನಾಗಿದ್ದರಿಂದ ವಿಜಯನಗರದ ಅರಸರು ಇವನಿಗೆ ಅಭಿನವ ಭರತಾಚಾರ್ಯ ಎಂಬ ಬಿರುದನ್ನು ನೀಡಿದ್ದರು. ಕರ್ನಾಟಕ ಸಂಗೀತವನ್ನು ಕುರಿತು ಇಂದಿಗೂ ಅವಶ್ಯವಾಗಿ ಅಧ್ಯಯನ ಮಾಡಲೇಬೇಕಾದ “ಸ್ವರ ಮೇಳ ಕಲಾನಿಧಿ” ಸಂಗಿತ ಗ್ರಂಥವನ್ನು ಬಯಕಾರ ರಾಮಪ್ಪನು ಸಂಸ್ಕೃತದಲ್ಲಿ ರಚಿಸಿದ. ಇವನು ಸಂಗೀತದ ರಹಸ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಹಾಗೂ ಸಂಗೀತ ಸಿದ್ದಾಂತ ಮತ್ತು ಹಾಡುಗಾರಿಕೆ ಕಲೆಗಳೆರಡನ್ನು ಕರಗತ ಮಾಡಿಕೊಂಡಿದ್ದ. ಇವನ ತಾತ ಕಲ್ಲಿನಾಥ ಸಂಗೀತದ ಪ್ರಕಾಂಡ ಪಂಡಿತನಾಗಿದ್ದ. ಕಲ್ಲಿನಾಥನು ಶಾಙ್ಗದೇವನ “ಸಂಗೀತ ರತ್ನಾಕರ” ಗ್ರಂಥಕ್ಕೆ ಭಾಷ್ಯವನ್ನು ಬರೆದಿದ್ದಾನೆ. ಶಾಙ್ಗದೇವನು ದೇವಗಿರಿಯ ಸೇವುಣ ಅರಸ ಸಿಂಘಣನ ಆಸ್ಥಾನದಲ್ಲಿದ್ದ ಮಹಾನ್ ಸಂಗೀತ ವಿದ್ವಾಂಸ. ತನ್ನ ತಾತ ಕಲ್ಲಿನಾಥನಿಂದ ಪಡೆದಿದ್ದ ಸಂಗೀತ ಪರಂಪರೆಯ ವಿದ್ವತ್ತು ಬಯಕಾರ ರಾಮಪ್ಪನ ಧಮನಿಗಳಲ್ಲಿ ಹರಿಯುತ್ತಿತ್ತು. ಅಳಿಯ ರಾಮರಾಯನ ಅಪೇಕ್ಷೆಯ ಮೇರೆಗೆ ರಾಮಾಮಾತ್ಯನು “ಸ್ವರ ಮೇಳಕಲಾನಿಧಿ” ಸಂಗೀತ ಗ್ರಂಥವನ್ನು ರಚಿಸಿದ. ಇವನು ಈ ಗ್ರಂಥದಲ್ಲಿ ಅಂದಿನ ಸಂಗೀತದ ಸಿದ್ದಾಂತಗಳು ಮತ್ತು ರೂಢಿಯಲ್ಲಿದ್ದ ಹಾಡುಗಾರಿಕೆಯ ನಡುವೆ ಹೊಂದಾಣಿಕೆಯನ್ನು ರೂಪಿಸಿದನು. ಈ ಗ್ರಂಥವನ್ನು ಕ್ರಿ.ಶ. ೧೫೫೦ರ ಅಗಸ್ಟ್ ೨೧ರಂದು ಪೂರ್ಣಗೊಳಿಸಿದನೆಂದು ಇವನು ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಈ ಗ್ರಂಥದ ಬಗ್ಗೆ ಮುಂದಿನ ಅಧ್ಯಾಯದಲ್ಲಿ ವಿವರವಾಗಿ ತಿಳಿಸಲಾಗಿದೆ.

ಬಯಕಾರ ರಾಮಪ್ಪನು ತನ್ನ ಬಿಡುವಿಲ್ಲದ ದೈನಂದಿನ ಆಡಳಿತದ ನಡುವೆಯೂ ಅಧ್ಯಯನ ಮತ್ತು ಅಧ್ಯಾಪನವನ್ನು ಕೈಗೊಂಡಿದ್ದ. ಸಂಗೀತದಂತೆ ವೇದಾಗಮಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ. ಇವನು ತನ್ನ ಹತ್ತಿರದ ಬಂಧುವಾದ ಊಂಟ ಲಕ್ಷ್ಮಣಭಟರ ಧರ್ಮಪತ್ನಿ ಗೋಪಮ್ಮನಿಗೆ ಸಂಗೀತ ಮತ್ತು ಆಗಮಗಳನ್ನು ಬೋಧಿಸಿದ್ದ.

ಲೋಕೋಪಕಾರಿಯಾಗಿ ರಾಮಪ್ಪನ ಸಾಧನೆಗಳು

ಬಯಕಾರ ರಾಮಪ್ಪನ ಈ ಕಾಲದ ಖ್ಯಾತಿವೆತ್ತ ಲೋಕೋಪಕಾರಿ. ಇವನು ಮಾಡಿದ ಜನೋಪಯೋಗಿ ಕಾಮಗಾರಿಗಳು ನಾಲ್ಕೂವರಿ ಶತಮಾನಗಳ ನಂತರವೂ ಜನತೆಗೆ ನೆರವಾಗುತ್ತವೆ. ಇವನ ಕುಟುಂದ ಹಿರಿಯ ಸದಸ್ಯರು ಉದಾರವಾಗಿ ಧರ್ಮ ಕಾರ್ಯವನ್ನು ಕೈಗೊಂಡಿದ್ದವರು ಹಾಗೂ ಜನಹಿತಕ್ಕಾಗಿ ದುಡಿದವರು. ಬಯಕಾರ ರಾಮಪ್ಪನು ತನ್ನ ಚಿಕ್ಕಪ್ಪ ಬಾಚರಸಯ್ಯನ ಜೊತೆಗೂಡಿ ಚಕ್ರವರ್ತಿ ಅಚ್ಚುತನ ಮಗ ಚಿಕ್ಕವೆಂಕಟಾದ್ರಿಗೆ ಶುಭವಾಗಲೆಂದು ತಿರುಮಲ ದೇವಸ್ಥಾನಕ್ಕೆ ದತ್ತಿಯನ್ನು ಬಿಟ್ಟಿದ್ದನು. ಈ ದತ್ತಿಯೊಂದಿಗೆ ಇವನ ಜನಹಿತ ಕಾರ್ಯಗಳು ವ್ಯಾಪಕವಾಗಿ ಪ್ರಾರಂಭವಾದವು. ಇವನು ಅಚ್ಚುತರಾಯನ ಪಾರುಪತ್ಯೆಗಾರನಾಗಿದ್ದಾಗ ಹಾಗು ಬೂದಿಹಾಳು ಸೀಮೆಯ ಮಾಗಣೀಕಾರನಾಗಿದ್ದಾಗ, ಜನತೆಯಿಂದ ಬಬಯಕಾರ ರಾಮಪ್ಪನು ಈ ಕಾಲದ ಖ್ಯಾತಿವೆತ್ತ ಲೋಕೋಪಕಾರಿ. ಇವನು ಮಾಡಿದ ಜನೋಪಯೋಗಿ ಕಾಮಗಾರಿಗಳು ನಾಲ್ಕುವರೆ ಶತಮಾನಗಳ ನಂತರವು ಜನತೆಗೆ ನೆರವಾಗುತ್ತವೆ. ಇವನ ಕುಟುಂಬದ ಹಿರಿಯ ಸದಸ್ಯರು ಉದಾರವಾಗಿ ಧರ್ಮ ಕಾರ್ಯವನ್ನು ಕೈಗೊಂಡಿದ್ದವರು ಹಾಗು ರಬೇಕಾದ ಮದುವೆ ಸುಂಕ ಮತ್ತು ಇತರೆ ಸುಂಕಗಳನ್ನು ಶಿವರಾತ್ರಿಯ ಶುಭಮಹೋತ್ಸವದಂದು (ಕ್ರಿ.ಶ. ೧೫೩೫ರಲ್ಲಿ) ಮನ್ನ ಮಾಡಿದ. ಇದು ತನ್ನೊಡೆಯ ಅಚ್ಚುತರಾಯನಿಗೆ ಶುಭವಾಗಲೆಂದು ಕೈಗೊಂಡ ಕೈಂಕರ್ಯ. ಇವನು ಇಂದಿನ ತುಮಕೂರ ಜಿಲ್ಲೆಯ ತಿಪಟೂರು ತಾಲೋಕಿನ ಹೊನ್ನಹಳ್ಳಿ ಸೀಮೆಯ ಆಡಳಿತಗಾರನಾಗಿದ್ದಾಗ, ಕ್ರಿ.ಶ. ೧೫೩೫ರಲ್ಲಿ ಚಿಕ್ಕಗಂಡಸಿಯಲ್ಲಿ ಅಗ್ರಹಾರವನ್ನು ಸ್ಥಾಪಿಸಿದ. ಅಲ್ಲಿ ಹಲವಾರು ಬ್ರಾಹ್ಮಣರಿಗೆ ಅನೇಕ ಹಳ್ಳಿಗಳನ್ನು ಹಂಪಿಯ ವಿರೂಪಾಕ್ಷ ಮತ್ತು ವಿಠ್ಠಲ ದೇವರ ಸನ್ನಿದಿಯಲ್ಲಿ ದಾನವಾಗಿ ನೀಡಿದ.

ಕೊಂಡುವೀಡು ಪ್ರಾಂತಾಧಿಕಾರಿಯಾಗಿ ಬಯಕಾರಿ ರಾಮಪ್ಪನು ನೇಮಕವಾದ ಮೇಲೆ ರಾಮಪ್ಪನು ಮಹತ್ತರವಾದ ಧರ್ಮಕಾರ್ಯಗಳನ್ನು ಅಧಿಕ ಪ್ರಮಾಣದಲ್ಲಿ ಕೈಗೊಂಡ. ಉನ್ನತಾಧಿಕಾರವನ್ನು ಪಡೆದ ಸಂತೋಷವೋ ಅಥವಾ ದೈವಕಾರುಣ್ಯವನ್ನು ಸಂಪಾದಿಸಿದನೆಂಬ ಭಾವನೆಯೋ, ಬಯಕಾರ ರಾಮಪ್ಪನು ಹಲವಾರು ಅಗ್ರಹಾರಗಳನ್ನು ಕಟ್ಟಿಸಿದ; ದೇವಾಲಯಗಳನ್ನು ನಿರ್ಮಿಸಿದ; ಕೆರೆ ಮತ್ತು ಬಾವಿಗಳನ್ನು ತೋಡಿಸಿದ. ಇದು ಕನ್ನಡ ನಾಡಿನ ಅರಸರು ಮತ್ತು ಜನತೆಯ ಪರಂಪರೆ ಇವನ ಕಾಲಕ್ಕೂ ಹಿಂದಿನ ಶಾಸನಗಳನ್ನು ಅಧ್ಯಯನ ಮಾಡಿದರೆ, ಅವು ಅಗ್ರಹಾರಗಳ ನಿರ್ಮಾಣದ ಬಗ್ಗೆ ಮಾಹಿತಿಯನ್ನು ಕೊಡುತ್ತವೆ. ಅವುಗಳು ತಿಳಿಸುವಂತೆ ಅಗ್ರಹಾರವು ವೃಕ್ಷರಾಜಗಳಿಂದ ಕೂಡಿರಬೇಕು. ಅವುಗಳಿಗೆ ನೀರುಣಿಸುವ ಕಾಲುವೆಗಳಿರಬೇಕು. ಅವುಗಳ ಸುತ್ತಲೂ ಸಮುದ್ರಗಳಂತಿರುವ ಕೆರೆಗಳಿರಬೇಕು, ಹಸಿರು ನಳನಳಿಸುವ ಬೆಳೆಗಳಿರಬೇಕು ಹಾಗೂ ಜನಸಮೂಹ ಮತ್ತು ದೇಗುಲಗಳಿರಬೇಕು. ಈ ಪ್ರಾಚೀನ ಪರಂಪರೆಗೆ ಅನುಗುಣವಾಗಿ ಬಯಕಾರ ರಾಮಪ್ಪನು ಕರ್ನಾಟಕ ಮತ್ತು ಆಂಧ್ರದ ವಿವಿಧ ಸ್ಥಳಗಳಲ್ಲಿ ಅಗ್ರಹಾರಗಳನ್ನು ಕಟ್ಟಿಸಿದ. ಕ್ಷಲ್ಲಕರಡ್ದುಹಳ್ಳಿ ಮತ್ತು ಚಿಗೋಡು ಗ್ರಾಮಗಳನ್ನು ಒಂದುಗೂಡಿಸಿ, ಶ್ರೀ ತಿಮ್ಮಾಪುರ ಅಗ್ರಹಾರವೆಂದು ಕರೆದ. ಇದನ್ನು ಚಿನತಿಮ್ಮಾಪುರವೆಂದೂ ಕರೆಯಲಾಗಿದೆ. ತನ್ನ ತಂದೆಗೆ ಪುಣ್ಯಪ್ರಾಪ್ತವಾಗಲೆಂದು ಈ ಸೇವೆಯನ್ನು ಕೈಗೊಂಡ. ಈ ಪ್ರದೇಶದಲ್ಲೇ ಇರುವ ಮಂಗಿಮಾವಿನ ಹಳ್ಳಿಯನ್ನು ಪೆದತಿಮ್ಮಾಪುರವೆಂಬ ಹೆಸರಿನಲ್ಲಿ ಮತ್ತೊಂದು ಅಗ್ರಹಾರವನ್ನಾಗಿ ಪರಿವರ್ತಿಸಿದ. ಅಲ್ಲಿ ತನ್ನ ತಂದೆ ಪೆದತಿಮ್ಮಯ್ಯ ಮತ್ತು ತಾಯಿ ಹಿರಿಯ ಲಕ್ಕುಲೀಶಮ್ಮನಿಗೆ ಪುಣ್ಯವಾಗಲೆಂದು ಕ್ರಿ.ಶ. ೧೫೩೯ ರಲ್ಲಿ ಇವನು ಸುಂದರವಾದ ಗೋಪಿನಾಥ ದೇವಾಲಯವನ್ನು ಕಟಿಸಿದ. ಅದೇವರ್ಷಬಯಕಾರ ರಾಮಪ್ಪನು ತನ್ನ ಚಿಕ್ಕಪ್ಪ ಬಾಚರಸಯ್ಯ, ಚಿಕ್ಕಮ್ಮ ಅಮ್ಮಾಜಮ್ಮ ಮತ್ತು ಅವರ ಮಗ ಕೃಷ್ಣಪ್ಪನಿಗೆ ಪುಣ್ಯವಾಗಲೆಂದು ತಿಮ್ಮಾಪುರದಲ್ಲಿ ತ್ರಿಕೂಟಾಚಲ ವಿನ್ಯಾಸದ ಶಿವಾಲಯವನ್ನು ನಿರ್ಮಿಸಿದ. ಈ ಮೂವರ ಹೆಸರಿನಲ್ಲಿ ಮೂರು ಶಿವಲಿಂಗಗಳನ್ನು ಈ ದೇಗುಲದಲ್ಲಿ ಪ್ರತಿಷ್ಠಾಪಿಸಿದ. ಇದು ಹೊಯ್ಸಳರ ತ್ರಿಕೂಟಾಚಲವನ್ನು ನೆನಪಿಸುತ್ತದೆ. ಇವನು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ದತ್ತಿಗಳನ್ನು ನೀಡಿರುವುದರಿಂದ ಹೊಯ್ಸಳ ದೇಗುಲಗಳ ಪರಿಚಯವಿರುವುದು ಸ್ಪಷ್ಟವಾಗುತ್ತದೆ. ಆ ದೇಗುಲಗಳ ವಾಸ್ತು ವಿನ್ಯಾಸಗಳ ಬಗ್ಗೆ ಇವನಿಗೆ ಆಕರ್ಷಣೆಯೇ ತಿಮ್ಮಾಪುರದ ಶಿವಾಲಯದ ನಿರ್ಮಾಣಕ್ಕೆ ಪ್ರೇರಣೆ, ಪ್ರಚೋದನೆ ನೀಡಬೇಕು. ವಿಜಯನಗರ ಸಾಮ್ರಾಜ್ಯದ ಉದ್ದಗಲಕ್ಕೂ ಚದುರಿದಂತೆ ನಿರ್ಮಾಣವಾಗಿರುವ ಈ ಕಾಲದ ಸಾವಿರಾರು ದೇಗುಲಗಳ ನಡುವೆ ಕಾಣಸಿಗುವ ಏಕೈಕ ತ್ರಿಕೂಟಾಚಲ ದೇಗುಲವೆಂದರೆ ಇದೊಂದೇ. ಈ ದೇಗುಲಗಳ ಬಗ್ಗೆ ಮುಂದಿನ ಅಧ್ಯಾಯದಲ್ಲಿ ವಿವರವಾಗಿ ತಿಳಿಯಬಹುದು.

ಮೇಲೆ ತಿಳಿಸಿದ ದೇಗುಲಗಳಷ್ಟೇ ಅಲ್ಲದೆ, ಬಯಕಾರ ರಾಮಪ್ಪನು ಮಲ್ಲಿಕಾರ್ಜುನ, ವೀರಭದ್ರ, ದೇವೇಶ ಮತ್ತು ಕಾಶೀವಿಶ್ವನಾಥ ದೇವಲಯಗಳನ್ನು ತಿಮ್ಮಾಪುರದಲ್ಲೇ ಕಟ್ಟಿಸಿದನೆಂದು ಹೇಳಿಕೊಂಡಿದ್ದಾನೆ. ಆದರೆ ಮಲ್ಲಿಕಾರ್ಜುನ ದೇವಾಲಯವನ್ನು ಇವನ ಅಧಿಕಾರಿ ನಮಶ್ಯಿವಾಯನು ತನಗೆ ಪುಣ್ಯ ಪ್ರಾಪ್ತವಾಗಲೆಂದು ಕಟ್ಟಿಸಿದನೆಂದು ಅದೇ ದೇವಾಲಯದ ಶಾಸನವು ತಿಳಿಸುತ್ತದೆ. ಬಯಕಾರ ರಾಮಪ್ಪನು ಈ ದೇಗುಲವನ್ನು ಕಟ್ಟಿಸಲು ತನ್ನ ಅಧಿಕಾರಿಗೆ ಪ್ರೇರಣೆ ನೀಡಿದ್ದರಿಂದ ಈ ನಿರ್ಮಾಣದ ಯಶಸ್ಸನ್ನು ತನ್ನದೆಂದು ಶ್ರುತಪಡಿಸುತ್ತಾನೆ. ಇದು ಇವನ ದೃಷ್ಟಿಯಿಂದ ಸಹಜವೂ ಹೌದು. ಇಲ್ಲಿನ ಜೀರ್ಣಾವಸ್ಥೆಯಲ್ಲಿರುವ ವೀರಭಧ್ರ ದೇವಾಲಯದ ಮುಂದೆ ಸುಂದರವಾದ ಬಾವಿಯೊಂದಿದೆ. ಇದಕ್ಕೆ ೯೦ ಡಿಗ್ರಿ ಆಕಾರದಲ್ಲಿ ಪಾವಟಿಗೆಗಳನ್ನು ನಿರ್ಮಿಸಲಾಗಿದೆ. ಇದನ್ನು ಬಯಕಾರರಾಮಪ್ಪನು ತನ್ನ ಮಗ ಲಿಂಗಾಲಯ್ಯನಿಗೆ ಪುಣ್ಯ ಪ್ರಾಪ್ತವಾಗಲೆಂದು ಕಟ್ಟಿಸಿ ಅದನ್ನು ಲಿಂಗಾಲಯಬಾವಿ ಎಂದು ಕರೆದಿದ್ದಾನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೋಕಿನ ಹುಲಿಕುಂಟದಲ್ಲಿ ಮತ್ತೊಂದು ಅಗ್ರಹರವನ್ನು ನಿರ್ಮಿಸಿದ. ತನ್ನ ಮಗಳಾದ ಅಚ್ಯುತಮ್ಮಳಿಗೆ ಪುಣ್ಯ ಪ್ರಪ್ತಾವಾಗಲೆಂದು ಈ ಸೇವೆಯನ್ನು ಕೈಗೊಂಡು ಈ ಅಗ್ರಹಾರವನ್ನು ಅಚ್ಯುತಮ್ಮಪುರವೆಂದು ಕರೆದ. ಇಲ್ಲಿ ಬಾಲಕೃಷ್ಣ ದೇಗುಲವನ್ನು ಕಟ್ಟಿಸಿದ. ಈತನ ಶಿಷ್ಯೆ ಗೋಪಮ್ಮಳು ತಿಮ್ಮಪುರದಲ್ಲಿ ಕಾಶೀನಾಥ ದೇವರ ಗುಡಿಯನ್ನು ಕಟ್ಟಿಸಲು ಇವನು ಕಾರಣನಾದ. ಪ್ರಾಯಶಃ ಸಂಗೀತ ಮತ್ತು ಆಗಮ ಶಾಸ್ತ್ರಗಳನ್ನು ಬೋಧಿಸಿದಕ್ಕೆ ಪ್ರತಿಯಾಗಿ ಗುರುಕಾಣಿಕೆಯಾಗಿ ಆಕೆ ಈ ದೇಗುಲವನ್ನು ಕಟ್ಟಿಸಿರಬೇಕು. ಬಯಕಾರ ರಾಮಪ್ಪನ ಸಾಧನೆಗಳಿಂದ ಪ್ರಾಭಾವಿತರಾದ ಇವನ ಸಂಬಂಧಿಗಳು ಇವನಂತೆಯೇ ಉತ್ತಮ ವಾಸ್ತು ಕೃತಿಗಳನ್ನು ನಿರ್ಮಿಸಿದರು, ಜನಹಿತ ಕಾರ್ಯಗಳನ್ನು ಕೈಗೊಂಡರು. ಇವನ ಸೋದರತ್ತೆ ಚಿನ್ನಮಾಂಬ ಮತ್ತು ಆಕೆಯ ಪತಿ ಪ್ರತಾಪಯಲ್ಲನು ಕೊಂಡುವೀಡು ಪ್ರದೇಶದಲ್ಲಿ ಅಗ್ರಹಾರವನ್ನು ಸ್ಥಾಪಿಸಿ, ಶಿವನ ಹೆಸರಿನಲ್ಲಿ ಪರ್ವತನಾಥ ಎಂಬ ದೇಗುಲವನ್ನು ಕಟ್ಟಿಸಿದರು. ಅವರು ಅಲ್ಲೇ ಗೋಪಿನಾಥ ಸಮುದ್ರವೆಂಬ ದೊಡ್ಡ ತಟಾಕವನ್ನು ನಿರ್ಮಿಸಿದರು. ಇದನ್ನು ಇಂದು ಆಂಧ್ರದ ಗುಂಟೂರು ಜಿಲ್ಲೆಯ ನರಸರಾವಪೇಟೆ ತಾಲೋಕಿನ ವೆಂಕಯಲಪಾಡು ಅಥವಾ ಸಂತಲೂರು ಎಂಬಲ್ಲಿ ಕಾಣಬಹುದು.

ಇದಕ್ಕಿಂತ ಭಿನ್ನವಾದ ಸತ್ಕಾರ್ಯಗಳಲ್ಲಿ ಬಯಕಾರ ರಾಮಪ್ಪನು ತನ್ನನ್ನು ತೊಡಗಿಸಿಕೊಂಡು ಜನಸಮೂಹದ ಸೌಖ್ಯಕ್ಕಾಗಿ ದುಡಿದ. ಮೇಲಿನವು ಪಾರಮಾರ್ಥಿಕ ಸಾಧನೆಯಾದರೆ ಮುಂದಿನವು ಲೌಕಿಕ ಕರ್ತವ್ಯಗಳಾಗಿವೆ. ನಾಡಿನ ಜನತೆಯ ಹಿತಕ್ಕೋಸ್ಕರ ಇವನು ಸುಮಾರು ಹದಿನಾರಕ್ಕೂ ಹೆಚ್ಚು ಕೆರೆಗಳು ಮತ್ತು ಹಲವಾರು ಬಾವಿಗಳನ್ನು ತೋಡಿಸುವುದರ ಮೂಲಕ ಪ್ರಾಚಿನ ಪರಂಪರೆಯನ್ನು ಮುಂದುವರೆಸಿದ. ಅಷ್ಟೊಂದು ಕೆರೆಗಳನ್ನು ಏಕ ವ್ಯಕ್ತಿಯಾಗಿ ನಿರ್ಮಿಸುವುದು ಮಹತ್ತರವಾದ ಸಾಧನೆಯೇ. ಅರಸ ಅಥವಾ ಅಧಿಕಾರಿ ಯಾರೇ ಆಗಿರಲಿ ಅಷ್ಟು ಅಧಿಕ ಸಂಖ್ಯೆಯಲ್ಲಿ ಒಬ್ಬನೇ ಕೆರೆಗಳನ್ನು ಕಟ್ಟಿಸಿರುವ ಉದಾಹರಣೆ ನಾಡಿನ ಇತಿಹಾಸದಲ್ಲಿ ಅಪರೂಪವೇ. ಇವನು ನಿರ್ಮಿಸಿರುವ ಕೆರೆಗಳೆಲ್ಲವೂ ದೊಡ್ಡವು. ಅವುಗಳನ್ನು ಜನರು ಇಂದಿಗೂ ಉಪಯೋಗಿಸುತಿದ್ದಾರೆ. ಅವು ಹೀಗಿವೆ. ೧. ಅಚ್ಯುತಮ್ಮ – ಸಮುದ್ರ, ೨. ಬಾಚ – ಸಮ್ಮುದ್ರ, ೩. ರಾಮ – ಸಮುದ್ರ, ೪. ಅಕ್ಕ – ಸಮುದ್ರ ೫. ರಾಮ – ಸಮುದ್ರ ೬. ಅಮ್ಮ – ಸಮುದ್ರ, ೭. ವೀರ – ಸಮುದ್ರ ೮. ಅಚ್ಯತೇಂದ್ರ – ಸಮುದ್ರ ೯. ವೆಂಕಟೇಂದ್ರ – ಸಮುದ್ರ, ೧೦. ಪಿನಲಕ್ಕ – ಸಮುದ್ರ, ೧೧. ಚಿನತಿಪ್ಪ – ಸಮುದ್ರ, ೧೨. ಪೆದಲಕ್ಕ – ಸಮುದ್ರ, ೧೩. ಲಿಂಗಾಲಯ – ತಟಾಕ, ೧೪. ವೆಂಕಟಯ್ಯ – ತಟಾಕ, ೧೫. ಪದತಿಮ್ಮ – ಸಮುದ್ರ, ೧೬. ಚಿನಬಾಚ – ಸಮುದ್ರ. ಈ ಎಲ್ಲಾ ಕೆರೆಗಳನ್ನು ಅವನ ಹತ್ತಿರದ ಸಂಬಂಧಿಕರ ಮತ್ತು ಅರಸರ ಹೆಸರಿನಲ್ಲಿ ಕಟ್ಟಿಸಲಾಗಿದೆ. ಈಗಿನ ಸಂಶೋಧನೆಯ ಬೆಳಕಿನ ಹಿನ್ನೆಲೆಯಲ್ಲಿ ಕೆಲ ಕೆರೆ – ತಟಾಕಗಳನ್ನು ಗುರುತಿಸಿಬಹುದು. ಸಂಡೂರು ತಾಲೋಕಿನ ಚಿಕ್ಕಕೆರಿಯಾಗಿನ ಹಳ್ಳಿಯಲ್ಲಿ ಕೆರೆಯೊಂದಿದ್ದು, ಅದರ ಪಕ್ಕದಲ್ಲಿರುವ ಶಾಸನವು ಬಯಕಾರ ರಾಮಪ್ಪನು ಕಟ್ಟಿಸಿದ ಹಿರಿಯಲಕ್ಕ – ಸಮುದ್ರ ಅಥವಾ ಪೆದಲಕ್ಕ – ಸಮುದ್ರವೆಂದು ತಿಳಿಸುತ್ತದೆ. ಇದನ್ನು ಇವನು ತನ್ನ ತಾಯಿಯ ಹೆಸೆರಿನಲ್ಲಿ ಕಟ್ಟಿಸಿದ. ಮೇಲೆ ತಿಳಿಸಿರುವ ಲಿಂಗಾಲಯ – ತಟಾಕವನ್ನು ಅದೇ ತಾಲೊಕಿನ ಶಿರಟ್ಟಿ ಹಳ್ಳಿಯಲ್ಲಿ ನಿರ್ಮಿಸಲಾಗಿದೆ. ಈ ತಟಾಕವನ್ನು ತನ್ನ ಮಗ ಲಿಂಗಾಲಯನಿಗೆ ಪುಣ್ಯವಾಗಲೆಂದು ಕಟ್ಟಿಸಿದ. ಹಗರಿಬೊಮ್ಮನಹಳ್ಳಿ ತಾಲೊಕಿನ ಮಂಗಿಮಾವಿನ ಹಳ್ಳಿಯಲ್ಲಿ ತನ್ನ ಮಗಳಾದ ಕಾಮಮ್ಮನ ಹೆಸರಿನಲ್ಲಿ ಕಾಮ ಸಮುದ್ರವನ್ನು ತೊಡಿಸಿದ. ಅಚ್ಚುತಮ್ಮನ ಹೆಸರಿನಲ್ಲಿರುವ ಅಚ್ಚುತಮ್ಮ ಸಮುದ್ರವನ್ನು ಸಂಡೂರು ತಾಲೋಕಿನ ಹುಲಿಕುಂಟದಲ್ಲಿ ಕಾಣಬಹುದು. ಆಕಸಮುದ್ರವನ್ನು ತನ್ನ ಮಗ ಆಕಪ್ಪನ ಹೆಸರಿನಲ್ಲಿ ಪೋತಲಕಟ್ಟಿ ಗ್ರಾಮದಲ್ಲಿ ಕಟ್ಟಿಸಿದ್ದಾನೆ. ಬಾಚಸಮುದ್ರವನ್ನು ತನ್ನ ಚಿಕ್ಕಪ್ಪ ಬಾಚರಸನ ಹೆಸರಿನಲ್ಲಿ ತಿಮ್ಮಾಲಾಪುರದಲ್ಲೂ, ವೀರಸಮುದ್ರವನ್ನು ತನ್ನಪತ್ನಿ ವೀರಮ್ಮನ ಹೆಸರಿನಲ್ಲಿ ವಂಟಿಗೋಡು ಗ್ರಾಮದಲ್ಲೂ, ತಿಮ್ಮಸಮುದ್ರವನ್ನು ತನ್ನ ತಂದೆಯ ಹೆಸರಿನಲ್ಲಿ ನಂದಿ ಹಳ್ಳಿಯಲ್ಲಿ ಬಯಕಾರ ರಾಮಪ್ಪನು ಕಟ್ಟಿಸಿದ್ದಾನೆ. ಇನ್ನೂ ವ್ಯಾಪಕವಾಗಿ ಕ್ಷೇತ್ರಕಾರ್ಯವನ್ನು ಮಾಡಿದರೆ ಎಲ್ಲಾ ಕೆರೆ ಮತ್ತು ತಟಾಕಗಳನ್ನು ಪತ್ತೆಹಚ್ಚಬಹುದು. ಇವಲ್ಲದೇ ತಾನು ಸ್ಥಾಪಿಸಿದ ಅಗ್ರಹಾರಗಳಲ್ಲಿ ಸುಂದರವಾದ ಕಲ್ಯಾಣಿ ರೂಪದ ಬಾವಿಗಳನ್ನು ತೋಡಿಸಿದ್ದಾನೆ. ಇವನು ತನ್ನ ಮಗ ಲಿಂಗಾಲಯ್ಯನ ಹೆಸರಿನಲ್ಲಿ ಬಾವಿ ತೋಡಿಸಿರುವುದನ್ನು ಹಿಂದೆಯೇ ಗಮನಿಸಿದ್ದೇವೆ. ತಿಮ್ಮಾಪುರದ ಮಲ್ಲಿಕಾರ್ಜುನ ದೇಗುಲದ ಪಕ್ಕದಲ್ಲೇ ಬಾವಿಯೊಂದಿದೆ. ಈ ಬಾವಿಗೆ ಇಳಿಯಲು ರಚಿಸಿರುವ ಪಾವಟಿಗೆಗಳ ಚೆಲುವಿನ ದ್ವಾರವೊಂದಿತ್ತು. ಅದರ ವಿವಿದ ಭಾಗಗಳನ್ನು ಇಂದೂ ಕಾಣಬಹುದು.

ಬಯಕಾರ ರಾಮಪ್ಪನು, ತನ್ನ ಕುಟುಂಬದ ಇತರ ಸದಸ್ಯರಂತೆ ತಿರುಮಲ – ತಿರುಪತಿ ದೆಗುಲದ ಅನನ್ಯ ಭಕ್ತ. ಇವನ ತಂದೆ ತಿಮ್ಮರಸಯ್ಯನು ಕೊಂಡುವೀಡು ಸೀಮೆಗೆ ಸೇರಿದ ಮೂರು ಗ್ರಾಮಗಳನ್ನು ತಿರುಪತಿ ಗೋಂವಿದರಾಜಸ್ವಾಮಿ ಅಭಿಷೇಕಕ್ಕಾಗಿ ದಾನವಾಗಿ ನೀಡಿದ್ದ. ರಾಮಪ್ಪಯ್ಯನು ತನ್ನ ತಂದೆಯ ದಾನವನ್ನು ನವೀಕರಿಸಿದ್ದಲ್ಲದೆ, ಇನ್ನೂ ಹಲವಾರು ಗ್ರಾಮಗಳನ್ನು ಗೋವಿಂದರಾಜಸ್ವಾಮಿಗೂ, ಆ ದೇಗುಲದ ಆವರಣದಲ್ಲಿರುವ ಪರಿವಾರ ದೇವತೆಗಳ ಪೂಜೆಗಾಗಿ ಕ್ರಿ.ಶ. ೧೫೪೪ರಲ್ಲಿ ನೀಡಿದ. ಇವುಗಳನ್ನು ಬಾಚರಸಯ್ಯನ ಮಗ ಕೃಷ್ಣಪ್ಪನಿಗೆ ಪುಣ್ಯಪ್ರಾಪ್ತವಾಗಬೇಕೆಂದು ದಾನವಾಗಿ ನೀಡಿದ್ದುಂಟು. ಇದರ ಪೂಜೆಯಿಂದ ಬರುವ ಪ್ರಸಾದದ ಒಂದು ಭಾಗವನ್ನು ಅದೇ ದೇಗುಲದ ಸ್ಥಾನಿಕರಾದ ಶ್ರೀನಿವಾಸ ಭಟ್ಟರಿಗೆ ನೀಡಿದ. ಶ್ರೀನಿವಾಸಭಟ್ಟರು ಕಾಲಿದಾಸನ ಶಾಕುನ್ತಲ ನಾಟಕಕ್ಕೆ ಭಾಷ್ಯವನ್ನು ಬರೆದು ಖ್ಯಾತರಾದ ವಿದ್ವಾಂಸ ಉದಯಗಿರಿ ಶ್ರೀನಿವಾಸ ಭಟ್ಟರಮಗ.

ಬಯಕಾರ ರಾಮಪ್ಪನು ತನ್ನ ಅಧೀನ ಅಧಿಕಾರಿಗಳು ಮತ್ತು ಅನುಚರರು ಸಹ ತನ್ನಂತೆ ಸತ್ಕಾರ್ಯಗಳನ್ನು ಕೈಗೆತ್ತಿಗೊಳ್ಳಲು ಪ್ರೇರಣೆ ಮತ್ತು ಪ್ರಚೋದನೆ ನೀಡಿದ; ದಾನಧರ್ಮಗಳನ್ನು ಮಾಡುವ ವ್ಯಕ್ತಿಗಳಿಗೆ ಮಾರ್ಗದರ್ಶಿಯಾದ. ಇವನು ನಿರ್ಮಿಸಿದ ದೇವಾಲಯಗಳಿಗೆ ದಾನದತ್ತಿಗಳನ್ನು ನೀಡಲು ವಿಜಯನಗರದ ಅರಸರೂ ಸಹ ಮುಂದಾದರು. ರಾಮಪ್ಪನು ಬೂದಿಹಾಳು ಸೀಮೆಯ ಮಾಗಣೀಕಾರನಾಗಿದ್ದಾಗ ಕ್ರಿ.ಶ. ೧೫೩೫ರಲ್ಲಿ ಇವನ ಅಧಿಕಾರಿಯೊಬ್ಬ ಕಲ್ಲುಕೆರೆ ಗ್ರಾಮವನ್ನು ದಾನವಾಗಿ ಇವನ ಅಣತಿಯ ಮೇರೆಗೆ ನೀಡಿದ್ದುಂಟು. ಇವನ ಅಧಿಕಾರಿ ಮಾದಯ್ಯಪ್ಪ ಎಂಬುವನು ಜನರಿಂದ ಅರಮನೆಗೆ ಸಂದಾಯವಾಗಬೇಕಿದ್ದ ಸುಂಕಗಳನ್ನು ಹದಿನಾಡು ಸೀಮೆಯ ಹಳೆಯ ಮೋದಹಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವರಿಗೆ ದಾನವಾಗಿ ನೀಡಿದ.

ಬಯಕಾರ ರಾಮಪ್ಪನು ಪ್ರತಿಭಾವಂತನಾದ ಪ್ರಸಿದ್ಧ ವಾಸ್ತುಕಾರನೂ ಹೌದು. ಇವನ ಬಹುಮುಖ ಪ್ರತಿಭೆಯನ್ನು ಅರಿತಿದ್ದ ವಿಜಯನಗರದ ಸರ್ವಾಧಿಕಾರಿ ಅಳಿಯ ರಾಮರಾಯನು ತಾನು ವಿಜಯನಗರದಲ್ಲಿ ನೂತನ ರತ್ನಕೂಟ ಅರಮನೆಯನ್ನು ಕಟ್ಟಿಸಲು ಇವನನ್ನು ಆಹ್ವಾನಿಸಿದ. ಈ ನೂತನ ಅರಮನೆಯ ನಿರ್ಮಾಣ ಪೂರ್ಣವಾದಾಗ ನಯನಮನೋಹರವಾಗಿದ್ದು ಇಂದ್ರನ ಅರಮನೆಯನ್ನು ಚೆಲುವಿನಲ್ಲಿ ಮೀರಿಸುವಂತಿತ್ತು. ರಾಮರಾಯನಂತೂ ತನ್ನ ಅರಮನೆಯನ್ನು ನೋಡುತ್ತಾ ಆನಂದ ತುಂದಿಲವಾದನಂತೆ. ಇತ್ತೀಚೆಗೆ ವಿದ್ವಾಂಸರೊಬ್ಬರು, ರಾಮರಾಯನು ಬಯಕಾರ ರಾಮಪ್ಪನ ನೇತೃತ್ವದಲ್ಲಿ ಕಟ್ಟಿಸಿದ ರತ್ನಕೂಟ ಅರಮನೆಯನ್ನು ಹಂಪಿಯ ಕಮಲಮಹಲೆಂದು ಪತ್ತೆ ಹಚ್ಚಿಲು ಪ್ರಯತ್ನಿಸಿದ್ದಾರೆ. ಆದರೆ ರತ್ನಕೂಟವು ಕೇವಲ ಕಮಲಮಹಲ್ ಮಾತ್ರವೇ ಆಗಿರದೆ, ಈಗ ಜನಾನ ಅಥವಾ ರಾಣಿಯರ ವಾಸಸ್ಥಳವೆಂದು ಕರೆಯಲಾಗಿರುವ ಕಟ್ಟಡಗಳ ಸಮುಚ್ಚಯವೇ ಆಗಿದೆ – ಎಂಬುದು ಗಮನಾರ್ಹವಾದ ಅಂಶ. ರಾಮಪ್ಪನು ತನ್ನ “ಸ್ವರಮೇಳಕಲಾನಿಧಿ” ಗ್ರಂಥದಲ್ಲಿ ರತ್ನಕೂಟವು ಇಂದ್ರಸಭಾ, ಕ್ರೀಡಾಭವನದಂತೆ ಉಪ ಅರಮನೆಗಳನ್ನು ಒಳಗೊಂಡಿತ್ತೆಂದು ತಿಳಿಸುತ್ತಾನೆ. ಅವುಗಳಲ್ಲೊಂದು ಭವನವು ಜಲಾವೃತವಾಗಿ ಹಂಸಗಳಿಂದ ಅಲಂಕೃತವಾಗಿತ್ತೆಂದು ಅವನು ಮತ್ತೂ ಮುಂದುವರಿದು ವಿವರಿಸುತ್ತಾನೆ. ಕಮಲಮಹಲಿನ ಮುಂದೆ ಅರಮನೆಯ ಪಾಯವೊಂದಿದೆ. ಇದರ ಸುತ್ತಲೂ ನೀರು ತುಂಬಿದ್ದ ಕುರುಹುಗಳನ್ನೂ ಇಂದಿಗೂ ಕಾಣಬಹುದು. ಈ ಭವನದ ಸುತ್ತ ನೆಲದ ಮೇಲೆ ನೀರನ್ನು ಶೇಖರಿಸಿಡಲು ಗಾರೆಯನ್ನು ಲೇಪಿಸಿರುವುದು ಕಾಣುತ್ತದೆ. ಈ ಭವನಕ್ಕೆ ಹೋಗಲು ಕಿರಿಯ ಸೇತುವೆಯೂ, ನಾಲ್ಕು ಮೂಲೆಗಳಲ್ಲಿ ತೆರದ ಕಂಬಗಳ ಕಿರಿಯ ಮಂಟಪಗಳು ಹಿಂದೆ ಇದ್ದುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿಯಬಹುದು. ಬಯಕಾರ ರಾಮಪ್ಪ ತಿಳಿಸಿರುವ ಹಂಸಗಳಿಂದ ಕೂಡಿದ ಜಲಾವೃತವಾದ ಭವನ ಇದೆಂದು ಸ್ಪಷ್ಟವಾಗಿ ಹೇಳಬಹುದು. ಇದರ ಪಶ್ಚಿಮಕ್ಕೆ ಮುಂದೆಯೇ ಎತ್ತರವಾದ ಅರಮನೆಯ ಪಾಯವೊಂದಿದೆ. ಇದು ಮೂರು ಹಂತಗಳುಳ್ಳ ಭವ್ಯವಾದ ಅರಮನೆಯ ಅವಶೇಷ. ಇದರಷ್ಟು ಎತ್ತರದ ಹಾಗೂ ವಿಶಾಲವಾದ ಪಾಯ ಹಂಪಿಯಲ್ಲಿ ಮತೊಂದಿಲ್ಲ. ಇವನು ತಿಳಿಸುವ ಇಂದ್ರಸಭಾ ಭವನವೂ ಸಹ ಇದೇ ಆಗಿದೆ.

ಅಗ್ರಹಾರಗಳ ಸ್ಥಾಪನೆ, ದೇವಾಲಯಗಳ ನಿರ್ಮಾಣ, ವಿದ್ವತ್ಕೃತಿಗಳ ರಚನೆ, ದಾನ ಧರ್ಮ ಕಾರ್ಯಗಳು ಮುಂತಾದ ನಿರಂತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿದ್ದ ಬಯಕಾರ ರಾಮಪ್ಪನ ಜ್ಞಾನ ಮತ್ತು ಅಭಿರುಚಿಗಳು ನಿಜಕ್ಕೂ ವಿಶ್ವಕೋಶ ಸದೃಶವಾದದ್ದು. ಇವನ ಆಧ್ಯಾತ್ಮಿಕ ಚಾಲನೆಗಳು, ಬೌದ್ಧಿಕ ಸಮೃದ್ಧತೆ, ಕಲಾತ್ಮಕ ಅಭಿವ್ಯಕ್ತಿ, ರಾಜಕೀಯ ಏಳಿಗೆ ಮತ್ತು ತಂತ್ರಗಾರಿಕೆಗಳು, ಆಡಳಿತ ನಿರ್ವಹಣಾ ಚಾತುರ್ಯ, ಜನಹಿತ ಸೇವೆಗಳು ಇವನ ಬಹುಮುಖ ವ್ಯಕ್ತಿತ್ವ ಮತ್ತು ಪ್ರತಿಭೆಗಳಿಗೆ ಜ್ವಲಂತ ನಿದರ್ಶನಗಳಾಗಿವೆ.