ಬಯಕಾರ ರಾಮಪ್ಪನ ಸಾಧನೆಗಳು

ಸಾಮ್ರಾಜ್ಯಗಳು ಅಳಿಯುತ್ತವೆ: ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಅರಸರಿರಲಿ, ಅಧಿಕಾರಿಗಳಿರಲಿ – ಅವರೂ ಅಳಿಯುತ್ತಾರೆ. ಇದು ಅನಿವಾರ್ಯ, ಅಗತ್ಯಕೂಡ. ಅದರೆ ಅವರ ಸತ್ಕಾರ್ಯಗಳು ಉಳಿಯುತ್ತವೆ. ಅವರನ್ನು ಅಮರರನ್ನಾಗಿ ಮಾಡುತ್ತವೆ. ವಿಜಯನಗರ ಸಾಮ್ರಾಜ್ಯದ ಸಾವಿರಾರು ಉನ್ನತಾಧಿಕಾರಿಗಳ ನಡುವೆ ಬಯಕಾರ ರಾಮಪ್ಪನ ಹೆಸರು ಚಿರಂತನವಾಗಿದೆ. ಸಾಹಿತ್ಯ, ಸಂಗೀತ. ಶಿಲ್ಪ ಮತ್ತು ವಾಸ್ತು ಕ್ಷೇತ್ರಗಳಿಗೆ ಅವನು ನೀಡಿರುವ ಕೂಡುಗೆ ದೊಡ್ಡದು.

ಅಗ್ರಹಾರಗಳನ್ನು ಸ್ಥಾಪಿಸುವ ಮೂಲಕ ಬಯಕಾರ ರಾಮಪ್ಪನು ಸಾಹಿತ್ಯ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಸ್ವತಃ ಇವನೇ ಬೋಧಕನಾಗಿದ್ದ. ಇದನ್ನು ಹಿಂದಿನ ಅಧ್ಯಾಯದಲ್ಲೇ ಗಮನಿಸಿದ್ದೇವೆ. ಇವನ ಕಾಲ ಕರ್ನಾಟಕ ಸಂಗೀತದ ಉತ್ಕರ್ಷಣೆಯ ಯುಗ. ಈ ಕಾಲದಲ್ಲಿ ಕರ್ನಾಟಕದ ಸಂಗೀತ ಪ್ರಗತಿಯ ಚಳುವಳಿ ವ್ಯಾಪಕವಾಗಿ ಮತ್ತು ದಟ್ಟವಾಗಿ ಬೆಳೆಯಿತು. ದಾಸವರೇಣ್ಯರಾದ ಪುರಂದರದಾಸರು ಮತ್ತು ಕನಕದಾಸರು ಬದುಕಿದ್ದರು. ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರೆನಿಸಿಕೊಂಡು, ಸಂಗೀತದ ಬೆಳವಣಿಗೆಗೆ ಚಾಲನೆಯನ್ನು ನೀಡಿದರು. ಈ ಕ್ಷೇತ್ರದಲ್ಲಿ ಉಳಿದ ದಾಸರ ಪಾತ್ರ ಅಷ್ಟೇ ದೊಡ್ಡದು. ತೆಲುಗು ಪ್ರದೇಶದಲ್ಲಿ ತಾಳ್ಳಪಾಕಂ ಅಣ್ಣಮಾಚಾರ್ಯರು (೧೪೨೪ – ೧೫೦೩) ಸಂಗೀತ ಕ್ಷೇತ್ರವನ್ನು ಮಹತ್ತರವಾಗಿ ಶ್ರೀಮಂತಗೊಳಿಸಿದರು. ಇವರೆಲ್ಲರ ಪ್ರಭಾವ ಬಯಕಾರ ರಾಮಪ್ಪನ ಮೇಲೆ ಆಗಿರಬೇಕು. ಸಮಕಾಲೀನ ಸಂಗೀತ ತಜ್ಞರಾದ ಸೋಮನಾಥ, ಪುಂಡರೀಕ – ವಿಠ್ಠಲನಂತೆ ಇವನು ಕೂಡ ದೀರ್ಘಕಾಲದಿಂದಲೂ ಬೆಳೆದು ಬಂದಿದ್ದ ಸಂಗೀತ ಪರಂಪರೆಯನ್ನು ಮುಂದುವರೆಸಿದ. ಇವನ ಪಿತಾಮಹ ಕಲ್ಲಿನಾಥನು ಮಹಾನ್ ಸಂಗೀತ ವಿದ್ವಾಂಸನಾಗಿರುವುದನ್ನು ಹಿಂದೆಯೇ ಅರಿತಿದ್ದೇವೆ. ಅದ್ದರಿಂದ ಸಂಗೀತ ವಿದ್ವತ್ತು ಇವನಿಗೆ ಅನುವಂಶಿಕವಾಗಿ ಬಂದಿತ್ತು. ಸಂಗೀತ ಚಳುವಳಿ ಬೆಳೆದಂತೆ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ಸಂಗೀತದ ಸಿದ್ಧಾಂತಗಳು ಮತ್ತು ರೂಢಿಯಲ್ಲಿದ್ದ ಹಾಡುಗಾರಿಕೆಯ ನಡುವೆ ಲಕ್ಷ್ಯ ಮತ್ತು ಲಕ್ಷಣಗಳ ನಡುವೆ ಹೊಂದಾಣಿಕೆಯನ್ನು ರೂಪಿಸಲು, ಸಂಗೀತ ವಿದ್ವಾಂಸನಾದ ಇವನನ್ನು ಅಳಿಯ ರಾಮರಾಯನು ನೇಮಿಸಿದ್ದರಲ್ಲಿ ಅಚ್ಚರಿಯೇನಿಲ್ಲ.

ಸ್ವರಮೇಳಕಲಾನಿಧಿ

ಬಯಕಾರ ರಾಮಪ್ಪನು ಸುಪ್ರಸಿದ್ಧ ವಾಗ್ಗೇಯಕಾರ. ಸಂಗೀತದ ರಹಸ್ಯಗಳನ್ನು ಕರತಲಾಮಲಕ ಮಾಡಿಕೊಂಡಿದ್ದ. ಲಕ್ಷ್ಯ ಮತ್ತು ಲಕ್ಷಣಗಳು ನಡುವೆ ವೈರುಧ್ಯ ಅಗಾಧವಾಗಿ ಬೆಳೆದಿತ್ತು. ವಿರೋಧಾಭಾಸವನ್ನು ತನ್ನ ರಾಗ ವಿಬೋಧ ಕೃತಿಯಲ್ಲೂ ತಿಳಿಸಿದ್ದಾನೆ. ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ರಾಮಪ್ಪನು ಸ್ವರಮೇಳಕಲಾನಿಧಿ ಗ್ರಂಥವನ್ನು ರಚಿಸಿದ್ದಾನೆ. ಇವನು ಏಲಾರಾಗಕದಂಬ, ದ್ವಿಪದ, ಸ್ವರಾಂಕ, ಶ್ರೀವಿಲಾಸ, ಧ್ರುವ, ಪಂಚರತ್ನ ಮುಂತಾದ ಸಂಗೀತ ಗ್ರಂಥಗಳನ್ನು ರಚಿಸಿರುವನೆಂದು ಅವಾವೂ ದೊರೆತಿಲ್ಲ.

ಸ್ವರಮೇಳಕಲಾನಿಧಿಯು ಸಂಸ್ಕೃತದಲ್ಲಿ ರಚನೆಯಾದ ಮಹತ್ವದ ಸಂಗೀತ ಗ್ರಂಥ. ಇದು ಗಾತ್ರದಲ್ಲಿ ಕಿರಿದಾದರೂ ಸಂಗೀತದ ರಹಸ್ಯಗಳನ್ನು ಒಳಗೊಂಡಿರುವ ವಿಶಿಷ್ಟ ಗ್ರಂಥ. ಇದು ಐದು ಅಧ್ಯಾಯನಗಳನ್ನು ಹೊಂದಿದ್ದು, ೩೨೮ ಶ್ಲೋಕಗಳನ್ನು ಒಳಗೊಂಡಿದೆ. ಇದು ಎರಡು ಸಾವಿರ ವರ್ಷಗಳ ಭಾರತೀಯ ಸಂಗೀತ ವಿಕಾಸವನ್ನು ವಿಶ್ಲೇಷಿಸುತ್ತದೆ; ಆಧುನಿಕ ಕರ್ನಾಟಕ ಸಂಗೀತಕ್ಕೆ ಪ್ರವೇಶಿಕೆಯಾಗಿಯೂ ಮಾಹಿತಿಯನ್ನು ನೀಡುತ್ತದೆ. ಮೊದಲನೆಯ ಅಧ್ಯಾಯವು ಪೀಠಿಕಾ ರೂಪದಲ್ಲಿದ್ದು ಐತಿಹಾಸಿಕ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ರಾಮಪ್ಪನು ತನ್ನ ಮತ್ತು ಪೂರ್ವಿಕರ ವಿಷಯವನ್ನು ಬಹು ಸಂಕ್ಷಿಪ್ತವಾಗಿ ತಿಳಿಸುತ್ತಾನೆ. ತನ್ನ ಒಡೆಯನಾದ ಅಳಿಯರಾಮರಾಯನ ವಂಶಾವಳಿಯನ್ನು ಪೌರಾಣಿಕ ಮೆರುಗಿನೊಂದಿಗೆ ವಿವರಿಸುತ್ತಾನೆ. ರಾಮರಾಯನ ತಮ್ಮ ವೆಂಕಟಾದ್ರಿಯು ಇವನ ಮಿತ್ರ. ಅವನ ನೆರವಿನೊಂದಿಗೆ ರಾಮರಾಯನ ಆಸ್ಥಾನಕ್ಕೆ ಇವನ ಪ್ರವೇಶವಾಗುತ್ತದೆ. ರಾಮರಾಯನು ಇವನನ್ನು ಆ ಕಾಲದ ಪ್ರಸಿದ್ಧ ಹಾಗೂ ಸಮರ್ಥ ಸಂಗೀತಗಾರನೆಂದು ಮನ್ನಣೆ ನೀಡುವುದು. ಸ್ವರಮೇಳ ಕಲಾನಿಧಿಯನ್ನು ರಚಿಸಲು ಆದೇಶ ನೀಡುವುದು ಇವೇ ಮೊದಲಾದ ಅಂಶಗಳನ್ನು ಬಯಕಾರ ರಾಮಪ್ಪನು ವಿವರಿಸುತ್ತಾನೆ. ಉಳಿದ ನಾಲ್ಕು ಅಧ್ಯಾಯಗಳು ಕ್ರಮವಾಗಿ ಸ್ವರ, ವೀಣೆ, ಮೇಳ ಮತ್ತು ರಾಗದ ಬಗ್ಗೆ ತಿಳಿಸುತ್ತವೆ. ಈ ಅಧ್ಯಾಯಗಳಲ್ಲಿ ಇವನು ಅಂದು ಸಮಸ್ಯೆಯಾಗಿ ಬೆಳೆದಿದ್ದ ಲಕ್ಷ್ಯ ಮತ್ತು ಲಕ್ಷಣಗಳ ವಿರೋಧಾಭಾಸವನ್ನು ಸಮನ್ವಯಗೊಳಿಸಿ, ಸುಲಭವಾಗಿ ಅರ್ಥ್ಯಸಲು ಪ್ರಯತ್ನಿಸಿದ್ದಾನೆ. ಇದನ್ನು ಅವನೇ ಪೀಠಿಕಾ ಅಧ್ಯಾಯದಲ್ಲಿ ತಿಳಿಸುತ್ತಾನೆ.

ಎರಡನೇ ಸ್ವರ ಅಧ್ಯಾಯದಲ್ಲಿ ಸಂಗೀತದ ಮೌಲ್ಯ ಹಾಗೂ ಗಾಂಧರ್ವ ಮತ್ತು ಗಾನದ ಪ್ರಭೇದವನ್ನು ತಿಳಿಸುತ್ತಾನೆ. ಅನಂತರ ನಾದ, ನಾದೋತ್ಪತ್ತಿಯ ಮೂಲ, ಮಂದ್ರ, ಮಧ್ಯಮ, ತಾರ, ಮತ್ತು ನಾದವು ವ್ಯಕ್ತವಾಗುವ ೨೨ ಶ್ರುತಿಗಳನ್ನು ವಿವರಿಸಿದ್ದಾನೆ. ಈ ಶ್ರುತಿಗಳಿಂದ ೭ ಸ್ವರಗಳು ಉಂಟಾಗುವುದನ್ನೂ ಮತ್ತು ವೀಣೆಯಲ್ಲಿ ಅವುಗಳ ಸ್ಥಾನಗಳನ್ನೂ ತಿಳಿಸಲಾಗಿದೆ. ಈ ಸ್ವರಗಳಲ್ಲಿ ಶುದ್ಧ ಸ್ವರ ಮತ್ತು ವಿಕೃತಿಸ್ವರಗಳೆಂಬ ಭೇದಗಳಿವೆ. ಷಡ್ಜವನ್ನೇ ಆಧಾರ ಸ್ವರವಾಗಿ ಅಂಗೀಕರಿಸಿ ಶ್ರುತಿ ಸ್ವರ, ಪ್ರಮೇಯಗಳನ್ನೂ, ರಾಗವರ್ಗೀಕರಣ, ರಾಗವಿಶ್ಲೇಷಣೆ ಮುಂತಾದವಗಳನ್ನೂ ಷಡ್ಜಕ್ಕೆ ಏಕಸೂತ್ರದಲ್ಲಿ ಸಂಬಂಧಿಸಿರುವಂತೆ ನಿರೂಪಿಸಿದ್ದಾನೆ. (‘ಷಡ್ಜ’ವೆಂದರೆ ಸಪ್ತಸ್ವರಗಳಲ್ಲಿ ಪ್ರಥಮ ಸ್ವರ. ಇದರ ಸಂಕೇತಾಕ್ಷರ ‘ಸ’). ಆಧುನಿಕ ಜನಕ ರಾಗಗಳ ಪ್ರಮೇಯಗಳೂ ಇವೆ. ತಂಬೂರಿಯ ಅಥವಾ ವೀಣೆಯ ತಂತಿಯನ್ನು ಮಿಡಿದಾಗ ಅದರಲ್ಲಿ ಶುದ್ಧ, ಮಧ್ಯಮ, ಪಂಚಮ ಭಾವಗಳೂ ಅಂತರ ಗಾಂಧಾರವೂ ಮೇಲು ಷಡ್ಜವೂ ತಮಗೆ ತಾವೇ ಉಗಮವಾಗಿ ಕೇಳಿಸುತ್ತವೆ. ಇದನ್ನು ಮೊದಲು ಗಮನಿಸಿದವನು ಇವನೇ. ಇವನ್ನು ಸ್ವಯಂ ಭೂಸ್ವರಗಳೆಂದು ಹೇಳಲಾಗಿದೆ.

ಮೂರನೇ ಅಧ್ಯಾಯದಲ್ಲಿ ವೀಣೆಯ ಬಗ್ಗೆ ಸ್ಪಷ್ಟವೂ ಖಚಿತವೂ ಆದ ಮೌಲ್ಯಯುತ ವಿವರಣೆಯನ್ನು ರಾಮಾಮಾತ್ಯನು ನೀಡುತ್ತಾನೆ. ವೀಣೆಯ ಹಿರಿಮೆ, ಸ್ವರಕ್ಕೆ ಅದನ್ನು ಹೊಂದಿಸುವಿಕೆ ಮುಂತಾದ ವಿಷಯಗಳನ್ನು ನಿರೂಪಿಸಲಾಗಿದೆ. ವೀಣೆಯ ದಂಡದಲ್ಲಿ ಸ್ವರಗಳನ್ನು ಶಾಸ್ತ್ರಕ್ಕೂ ಪ್ರಯೋಗಕ್ಕೂ ವಿರೋಧವಿಲ್ಲದಂತೆ ತೋರಿಸಿ ನಿರ್ಣಯಿಸಿದ್ದಾನೆ. ಶುದ್ಧ ಮತ್ತು ವಿಕೃತ ಸ್ವರಗಳ ವಿಶ್ಲೇಷಣೆ ಮತ್ತು ಮೂರುಬಗೆಯ ವೀಣೆಗಳನ್ನು ತಿಳಿಸಿದ್ದಾನೆ. ಅವುಗಳೇ ಶುದ್ಧಮೇಲವೀಣೆ, ಮಧ್ಯಮೇಲವೀಣೆ, ಮತ್ತು ಅಚ್ಯತರಾಯ ಮೇಲವೀಣೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಏಕರಾಗ ಮೇಲವೀಣೆ ಮತ್ತು ಸರ್ವರಾಗ ಮೇಲವೀಣೆಗಳೆಂಬ ಎರಡು ವಿಧಗಳಿವೆ. ಮಧ್ಯಮೇಲ ವೀಣೆಯಲ್ಲಿ ಏಕತಂತ್ರೀವೀಣೆ ಎಂಬ ಮೂರನೆಯ ವಿಧವೂ ಇದೆ. ಇವುಗಳಿಂದ ಒಟ್ಟು ಏಳು ವೀಣೆಗಳನ್ನು ಸಂಕ್ಷಿಪ್ತವಾಗಿ ರಾಮಾಮಾತ್ಯನು ವಿವರಿಸಿದ್ದಾನೆ.

ನಾಲ್ಕನೇ ಅಧ್ಯಾಯವು ಮೇಲದ ಬಗ್ಗೆ ವಿವರಣೆ ನೀಡುತ್ತದೆ. ಮೇಲವೆಂದರೆ ಗ್ರಾಮ, ಮೂರ್ಛನ, ಜಾತಿ, ತಾನ ಮುಂತಾದವುಗಳಿಗಾಗಿ ಸ್ವರಗಳನ್ನು ಗುಚ್ಛವನ್ನು ಮಾಡುವುದು ಎಂದು ಅರ್ಥೈಸಲಾಗಿತ್ತು. ಬಯಕಾರ ರಾಮಪ್ಪನು ಮೊದಲ ಬಾರಿಗೆ ಮೇಲ ಎಂಬ ಪದವನ್ನು ಉಪಯೋಗಿಸಿದ್ದಾನೆ. ಅವನು ೨೦ ಮೇಲಗಳು, ಅವುಗಳ ಸ್ವರಗಳು ಮತ್ತು ೬೦ ಜನ್ಯರಾಗಗಳನ್ನು ಕುರಿತು ವಿವೇಚಿಸಿದ್ದಾನೆ. ಇಪ್ಪತ್ತು ಮೇಲಗಳಲ್ಲಿ ಹದಿನೈದಕ್ಕೆ ಮಾನ್ಯತೆ ಇತ್ತು.

ಐದನೇ ಅಧ್ಯಾಯವು ಈ ಗ್ರಂಥದಲ್ಲೇ ಪ್ರಮುಖ ಭಾಗ. ಇದು ರಾಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ೬೦ ಜನ್ಯ ರಾಗಗಳನ್ನು ಕುರಿತು ಹೇಳಿದ್ದಾನೆ. ಈ ರಾಗಗಳನ್ನು ಉತ್ತಮ, ಮಧ್ಯಮ, ಮತ್ತು ಅಧಮಗಳೆಂದು ವರ್ಗೀಕರಿಸಲಾಗಿದೆ. ಉತ್ತಮ ರಾಗಗಳ ವರ್ಗಕ್ಕೆ ಸೇರಿದ ೨೦ ರಾಗಗಳನ್ನು ಗೀತ, ಪ್ರಬಂಧ, ಠಾಯಿ ಮತ್ತು ಆಲಾಪನೆಗಳಿಗೆ ಉಪಯೋಗಿಸುತ್ತಿದ್ದರು.

ಸ್ವರಮೇಳಕಲಾನಿಧಿಯು ವಿಜಯನಗರ ಕಾಲದ ಮಹತ್ವದ ಮೌಲಿಕ ಗ್ರಂಥ. ಈ ಕಾಲದಲ್ಲಿ ಸಂಗೀತದ ಪ್ರಗತಿ ಉನ್ನತವಾಗಿ ಮುನ್ನಡೆದಂತೆ, ಅನೇಕ ಸಮಸ್ಯೆಗಳು ಹುಟ್ಟಿಕೊಂಡವು. ಸಂಗೀತದ ಸ್ವರ, ರಾಗ ಮೇಳಗಲ್ಲಿ, ವೈರುಧ್ಯ ಉಂಟಾಯಿತು. ಅವುಗಳನ್ನು ಅಂದಿನ ಸಂಗೀತ ವಿದ್ವಾಂಸರು ವ್ಯಕ್ತಪಡಿಸಿ, ಅವುಗಳಿಗೆ ಪರಿಹಾರವನ್ನು ನೀಡಿದವನು ಬಯಕಾರ ರಾಮಪ್ಪನೆಂಬುದು ಗಮನಾರ್ಹವಾದ ಸಂಗತಿ. ಸಂಗಿತ ಸಾಹಿತ್ಯದ ಇತಿಹಾಸದಲ್ಲಿ ವಿಜಯನಗರದ ಕಾಲ ಸ್ಮರಣಾರ್ಹವಾದುದು. ಇದಕ್ಕೆ ಬಯಕಾರ ರಾಮಪ್ಪನಂತಹ ವ್ಯಕ್ತಿಗಳೇ ಕಾರಣರು.

ರಾಮಾಮಾತ್ಯ ನಿರ್ಮಿತ ದೇಗುಲಗಳು

ರಾಮಾಮಾತ್ಯನು ಅನೇಕ ಅಗ್ರಹಾರಗಳನ್ನು ಸ್ಥಾಪಿಸಿರುವುದನ್ನು ಹಿಂದೆಯೇ ಗಮನಿಸಿದ್ದೇವೆ. ಅವುಗಳಲ್ಲಿ ಏಳೆಂಟು ದೇಗುಲಗಳನ್ನು ನಿರ್ಮಿಸಿದ್ದಾನೆ. ಅವುಗಳಲ್ಲಿ ಕೆಲ ದೇಗುಲಗಳು ನಾಶವಾಗಿವೆ. ಉಳಿದಿರುವ ದೇಗುಲಗಳು ಅವನ ಹೆಸರನ್ನು ಚಿರಸ್ಥಾಯಿಗೊಳಿಸಿವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬದುಕಿದ್ದ ಪಾಶ್ಚಾತ್ಯ ಕಲಾ ವಿಮರ್ಶಕ ಜಾನ್ ರಸ್ಕಿನ್ನ (೧೮೧೯ – ೧೯೦೦)ನ ಮಾತು ಇಲ್ಲಿ ಉಲ್ಲೇಖಾರ್ಹ: ‘ದೊಡ್ಡ ದೇಶಗಳು ತಮ್ಮ ಚರಿತ್ರೆಗಳನ್ನು ಮೂರು ಬಗೆಯಲ್ಲಿ ಬರೆದುಕೊಳ್ಳುತ್ತವೆ. ಅವುಗಳೇ ತಮ್ಮ ಸತ್ಕಾರ್ಯಗಳ ಗ್ರಂಥ, ತಮ್ಮ ಸಾಹಿತ್ಯ ಗ್ರಂಥಗಳು ಮತ್ತು ತಮ್ಮ ಕಲಾಗ್ರಂಥಗಳು. ಯಾವುದೇ ಒಂದು ಬಗೆಯು ಗ್ರಂಥವನ್ನು ಉಳಿದರೆಡು ಬಗೆಯ ಗ್ರಂಥಗಳ ನೆರವಿಲ್ಲದೇ ಅರ್ಥಮಾಡಿಕೊಳ್ಳಲಾಗದು. ಆದರೆ ಅವುಗಳಲ್ಲಿ ಅತ್ಯಂತ ವಿಶ್ವಸನೀಯವಾದುದು ಕೊನೆಯ ಬಗೆಯ ಗ್ರಂಥ’; ಸಾಹಿತ್ಯ ಗ್ರಂಥಗಳಲ್ಲಿ ವಿಷಯಾಂತರವಾಗುವ ಅಪಾಯವಿದ್ದರೆ, ಕಲಾ ಸಂಪತ್ತಿನಲ್ಲಿ ಆ ಭಯವಿರುವುದಿಲ್ಲ. ಕಲೆ ನಿರಂತರವಾಗಿ ಉಳಿದಿರುತ್ತದೆ; ನಿರ್ಮಿಸಿದ ವ್ಯಕ್ತಿಯ ನೆನೆಪನ್ನು ಉಳಿಸುತ್ತದೆ. ಈ ಹೇಳಿಕೆಯು ನಾಡಿಗಲ್ಲ, ಬಯಕಾರ ರಾಮಪ್ಪನ ಸಾಧನೆಗಳಿಗೂ ಅನ್ವಯವಾಗುತ್ತದೆ. ಇವನನ್ನು ಅರ್ಥಮಾಡಿಕೊಳ್ಳಲು ಇವನು ನಿರ್ಮಿಸಿದ ದೇಗುಲಗಳು ಮತ್ತು ಕಾಮಗಾರಿಕೆ (ಕೆರೆಗಳ ಮತ್ತು ತಟಾಕ)ಗಳು ನೆರವಾಗುತ್ತವೆ.

ಬಯಕಾರ ರಾಮಪ್ಪನು ನಿರ್ಮಿಸಿದ ದೇಗುಲಗಳ ಬಗ್ಗೆ ಹಿಂದೆಯೇ ತಿಳಿಸಲಾಗಿದೆ. ಆ ದೇಗುಲಗಳ ಬಗ್ಗೆ ತಿಳಿಯಲು, ಅವುಗಳನ್ನು ಮತ್ತೊಮ್ಮೆ ಹೆಸರಿಸಲಾಗಿದೆ. ಇವನು ಸಂಡೂರು ತಾಲೋಕಿನ ಹುಲಿಕುಂಟದಲ್ಲಿ ಬಾಲಕೃಷ್ಣ ದೇಗುಲವನ್ನು ಕಟ್ಟಿಸಿದ. ಆದರೆ ಅದು ಇಂದು ಉಳಿದಿಲ್ಲ. ತಿಮ್ಮಾಪುರದಲ್ಲಿ – ಅಂದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೋಕಿನ ತಿಮ್ಮಲಾಪುರದಲ್ಲಿ ಇವನು ಗೋಪಿನಾಥ. ಬಾಚೇಶ್ವರ – ಅಮ್ಮೇಶ್ವರ – ಕೃಷ್ಣೇಶ್ವರ ಗುಡಿ, ಮಲ್ಲಿಕಾರ್ಜುನ, ಕಾಶೀವಿಶ್ವನಾಥ, ವೀರಭದ್ರ, ದೇವೇಶರ ದೇಗುಲಗಳನ್ನು ಕಟ್ಟಿಸಿದ. ಕಾಶಿ ವಿಶ್ವನಾಥ, ವೀರಭದ್ರ ಮತ್ತು ದೇವೇಶರ ದೇಗುಲಗಳು ಇಂದು ಉಳಿದಿಲ್ಲ. ದೇಗುಲಗಳು ನಿಜಕ್ಕೂ ಭವ್ಯ ಹಾಗೂ ವಿಶಿಷ್ಟ ವಾಸ್ತು ವೈಶಿಷ್ಟ್ಯತೆ ಮತ್ತು ಶಿಲ್ಪದ ಚೆಲುವಿನಲ್ಲಿ ಹಂಪಿಯ ಅರಸು ನಿರ್ಮಿತ ಯಾವುದೇ ಮಹತ್ವದ ದೇಗುಲಗಳಿಗೂ ಇವು ಕಡಿಮೆಯಿಲ್ಲ. ಕೆಲ ಅಂಶಗಳಲ್ಲಿ ಬಯಕಾರ ನಿರ್ಮಿತ ದೇಗುಲಗಳು ಉನ್ನತವಾಗಿವೆಯೆಂದರ ಅತಿಶಯೋಕ್ತಿಯಲ್ಲದ ಮಾತಾಗುತ್ತದೆ. ಇದನ್ನು ಮುಂದೆ ವಿವೇಚಿಸಲಾಗುವುದು.

ಶಿವದೇಗುಲ

ಬಯಕಾರ ರಾಮಪ್ಪನು ತಿಮ್ಮಲಾಪುರದಲ್ಲಿ ಬಾಚೇಶ್ವರ – ಅಮ್ಮೇಶ್ವರ – ಕೃಷ್ಣೇಶ್ವರ ಗುಡಿಯನ್ನು ತನ್ನ ಚಿಕ್ಕಪ್ಪರಾಮಯ್ಯ ಭಾಸ್ಕರ, ಆತನ ಪತ್ನಿ ಅಮ್ಮಾಜಮ್ಮ ಮತ್ತು ಆತನ ಮಗ ಕೃಷ್ಣಪ್ಪನಿಗೆ ಪುಣ್ಯಪ್ರಾಪ್ತವಾಗಲೆಂದು ಕಟ್ಟಿಸಿದ್ದನ್ನು ಹಿಂದೆಯೇ ಗಮನಿಸಿದ್ದೇವೆ. ಈ ದೇಗುಲವನ್ನು ಸ್ಥಳೀಯವಾಗಿ ಶಿವದೇಗುಲವೆಂದು ಕರೆಯಲಾಗಿದೆ; ಇದು ತ್ರಿಕೂಟಚಲ (ಇದು ಮೂರು ಗರ್ಭಗುಡಿಗಳನ್ನು ಹೊಂದಿದೆ.) ಈ ಗ್ರಂಥಕರ್ತೃವು ಸಮೀಕ್ಷಿಸಿರುವಂತೆ ವಿಜಯನಗರ ಶೈಲಿಯಲ್ಲಿ ನಿರ್ಮಾಣವಾದ ಸಾವಿರಾರು ದೇಗುಲಗಳಲ್ಲಿ ಏಕೈಕ ತ್ರಿಕೂಟಾಚಲವೆಂದರೆ ಇದು. ಹಂಪಿಯಲ್ಲಿ ಮಹಾನವಮಿ ದಿಬ್ಬಕ್ಕೆ ದಕ್ಷಿಣದಲ್ಲಿ ತುಸು ದೂರದಲ್ಲಿ ಚಂದ್ರಶೇಖರ ಗುಡಿ ಇದೆ. ಇದು ದ್ವಿಕೂಟಾಚಲ. ಇವೆರಡನ್ನು ಬಿಟ್ಟರೆ, ಹೆಚ್ಚಿನ ಗರ್ಭಗುಡಿಗಳನ್ನು ಹೊಂದಿರುವ ದೇಗುಲಗಳು ವಿಜಯನಗರ ಸಾಮ್ರಾಜ್ಯದಲ್ಲಿ ಇಲ್ಲ. ಈ ದೇಗುಲಗಳು ಹೊಯ್ಸಳರ ಕಾಲದ ದ್ವಿಕೂಟಾಚಲ ಮತ್ತು ತ್ರಿಕೂಟಾಚಲ ದೇಗುಲಗಳನ್ನು ನೆನಪಿಸುತ್ತವೆ. ಈ ಕಾಲದಲ್ಲಿ ದೇವಾಲಯ ಸಂಕಿರ್ಣಗಳ ನಿರ್ಮಾಣ ಜನಪ್ರಿಯವಾದವು. ಅವುಗಳಲ್ಲಿ ಪ್ರಧಾನ ದೇಗುಲದ ಸುತ್ತಲೂ ಅಮ್ಮನವರ ಗುಡಿ, ಕಲ್ಯಾಣಮಂಟಪ, ಪರಿವಾರ ದೇವತೆಗಳ ಗುಡಿಗಳು ನಿರ್ಮಾಣವಾದವು. ಇವುಗಳನ್ನು ಸುತ್ತುವರೆದ ಉನ್ನತವಾದ ಪ್ರಾಕಾರವು ಸುಂದರವಾದ ಗೋಪುರಗಳೊಂದಿಗೆ ರಚನೆಯಾದವು. ಇದರಿಂದ ಒಂದೇ ದೇಗುಲದಲ್ಲಿ ವಿವಿಧ ದೇವರುಗಳಿಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಒಂದಕ್ಕಿಂತ ಹೆಚ್ಚು ಗರ್ಭಾಂಕಣಗಳನ್ನು ನಿರ್ಮಿಸುವ ಪರಿಪಾಠವನ್ನು ಈ ಕಾಲದಲ್ಲಿ ಕೈಬಿಡಲಾಯಿತು.

ಈ ಶಿವ ದೇಗುಲದ ಮೂರು ಗರ್ಭಗುಡಿಯಲ್ಲಿ ಶಿವಲಿಂಗಗಳಿದ್ದವು. ಈಗ ಎರಡರಲ್ಲಿ ಮಾತ್ರ ಇವೆ. ಮೂರು ಗರ್ಭಗುಡಿಗಳನ್ನು ಅವುಗಳದ್ದೇ ಆದ ಅಂತರಾಳದ ಮೂಲಕ ಒಂದೇ ರಂಗಮಂಟಪಕ್ಕೆ ಜೋಡಿಸಿದಂತೆ ಕಟ್ಟಲಾಗಿದೆ. ರಂಗಮಂಟಪದಲ್ಲಿ ಸುಂದರವಾದ ನಾಲ್ಕು ಕಂಬಗಳಿವೆ. ರಂಗಮಂಟಪವು ಉತ್ತರಾಭಿಮುಖವಾಗಿದ್ದು ಮಹಾರಂಗಮಂಟಪಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಇದು ತೆರದ ಸ್ತಂಭರಾಜಿಯ (೨೦) ಮಂಟಪ. ಇದರ ಮುಂಭಾಗದಲ್ಲಿ ಮೆಟ್ಟಿಲುಗಳಿಂದ ದೇಗುಲವನ್ನು ಪ್ರವೇಶಿಸಬಹುದು. ಸಮಗ್ರ ದೇಗುಲವನ್ನು ಎತ್ತರವಾದ ಅಧಿಷ್ಠಾನ ಮತ್ತು ಉಪಪೀಠದ ಮೇಲೆ ಕಟ್ಟಲಾಗಿದೆ. ಇವೆರಡು ಸರಳವಾಗಿದ್ದರೂ ಸುಂದರವಾಗಿವೆ. ದೇಗುಲದ ಹೊರಮೈ ಗೋಡೆಯನ್ನು ಭಿತ್ತಿಕೋಷ್ಠ, ಕುಂಭಪಂಜರ ಮತ್ತು ಅರೆಗಂಬಗಳಿಂದ ಅಲಂಕೃತಗೊಳಿಸಲಾಗಿದೆ. ದೇಗುಲದ ಮೂರು ಗರ್ಭಗುಡಿಗಳ ಮೇಲೆ ಮೂರು ಗಾರೆ ಮತ್ತು ಇಟ್ಟಿಗೆಗಳಿಂದ ಮಾಡಿದ ಶಿಖರಗಳಿವೆ. ಮೂರು ಶಿಖರಗಳು ಮೂರು ಬಗೆಗಳಲ್ಲಿ ವಿಶಿಷ್ಟವಾಗಿ ರಚನೆಯಾಗಿವೆ. ದೇಗುಲದ ಮುಂದೆ ಬಲಿಪೀಠವಿದೆ. ಸಮಗ್ರ ದೇಗುಲದ ಅವರಣವನ್ನು ಎತ್ತರವಾದ ಕೋಟೆಯಂತಹ ಪ್ರಾಕಾರವು ಸುತ್ತುವರಿದಿದೆ. ಪ್ರಾಕಾರದ ಪಶ್ಚಿಮ ಭಾಗದಲ್ಲಿ ದ್ವಾರ ಮಂಟಪ ಮತ್ತು ಅದರ ಮೇಲೆ ಚೆಲುವಾದ ಗೋಪುರವಿದೆ. ಒಳಭಾಗದಲ್ಲಿ ಪ್ರಾಕಾರದ ಗೋಡೆಗೆ ಹೊಂದಿಕೊಂಡಂತೆ ಸ್ತಂಭಪಂಕ್ತಿಯ ಮಂಟಪ ಸುತ್ತುವರೆದಿದೆ.

ದೇಗುಲದ ರಂಗಮಂಟಪ ಮತ್ತು ಮಹಾರಂಗಮಂಟಪಗಳಲ್ಲಿ ಅಕರ್ಷವಾದ ಕಂಬಗಳಿವೆ. ಇವುಗಳನ್ನು ಚೌಕಾಕಾರದ ಪೀಠಗಳ ಮೇಲೆ ಇಡಲಾಗಿದೆ. ಇವು ಮೂರು ಘನಾಕೃತಿಗಳನ್ನು ಹೊಂದಿದ್ದು, ಕುಡಿಯಲ್ಲಿ ಕದಳಿ ಹೊವಿನ ಬೋದಿಗೆಗಳನ್ನು ನಾಲ್ಕು ಮುಖಗಳಲ್ಲಿಟ್ಟಿದೆ. ಇವು ದೇವಾಲಯದ ಮಾಡನ್ನು ಹೊತ್ತಿರುವುದಲ್ಲದೆ, ಕಂಬಗಳ ಸುಂದರ ಅಂಗಗಳೂ ಅಗಿವೆ. ಇವು ವಿಜಯನಗರದ ಕಾಲದ ದೇಗುಲಗಳ ವಿಶಿಷ್ಟ ಅಂಶಗಳು. ಕಂಬಗಳ ಮೂರು ಘನಾಕೃತಿಯ ಹೊರಮೈ ಮೇಲೆ ವಿವಿಧ ಬಗೆಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ರಂಗಮಂಟಪದ ಕಂಬದ ಮೇಲೆ ಅಪರೂಪದ ಶಿಲ್ಪಗಳನ್ನು ಕೆತ್ತಲಾಗಿದೆ. ವೀರಭದ್ರ, ಭದ್ರಕಾಳಿ, ಭೈರವ, ನಟರಾಜ, ಬಿಕ್ಷಾಟನಾಮೂರ್ತಿ, ಗಜಾಸುರ ಮೂರ್ತಿ, ಬೇಡರಕಣ್ಣಪ್ಪ ಮುಂತಾದ ಶಿಲ್ಪಗಳನ್ನು ಅಲ್ಲಿ ಕೆತ್ತಲಾಗಿದೆ. ಹಂಪಿಯ ದೇಗುಲಗಳಲ್ಲೆಲ್ಲೂ ಕಾಣಲಾಗದ ಸ್ವಾಭಿಷೇಕ ಮೂರ್ತಿ, ನಾಯನಾರರಾದ ಮಾಣಕ್ಯವಾಚಗರ್ ಸುಂದರಮೂರ್ತಿ ಮತ್ತು ಅಪ್ಪಾರರನ್ನು ರೂಪಿಸಲಾಗಿದೆ. ರಂಗಮಂಟಪದ ಶಿಲ್ಪಕೆತ್ತನೆಗಳು ನೈಜತೆಯನ್ನು ಮೈದುಂಬಿಕೊಂಡು, ಅಪೂರ್ವ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಮಹಾರಂಗಮಂಟಪ ಕಂಬಗಳನ್ನು ಶೈವಪುರಾಣಕ್ಕೆ ಸಂಬಂದಿಸಿದ ಅಪರೂಪದ ಶಿಲ್ಪಗಳನ್ನು ಸೊಗಸಾಗಿ ಕೆತ್ತಲಾಗಿದೆ. ಈ ಶಿವ ದೇಗುಲವು ವಿಜಯನಗರದ ಸಾಮ್ರಾಜ್ಯದ ಅಪೂರ್ವ ದೇಗುಲಗಳಲ್ಲೊಂದು.

ಗೋಪಿನಾಥ ದೇವಾಲಯ

ಶಿವದೇಗುಲ ಪಶ್ಚಿಮಕ್ಕೆ, ತುಸುದೂರದಲ್ಲಿ ಅದಕ್ಕೆ ಅಭಿಮುಖವಾಗಿ ಗೋಪಿನಾಥ ದೇವಾಲಯವಿದೆ. ರಾಮಪ್ಪಯ್ಯನು ಇದನ್ನು ತನ್ನ ತಂದೆ ಹಿರಿಯ ತಿಮ್ಮರಸಯ್ಯ ಮತ್ತು ತಾಯಿ ಹಿರಿಯ ಲಕ್ಕಲೀಶಮ್ಮನಿಗೆ ಪುಣ್ಯವಾಗಬೇಕೆಂದು ಈ ದೇಗುಲವನ್ನು ಕಟ್ಟಿಸಿದನೆಂದು ಹಿಂದೆಯೇ ಹೇಳಲಾಗಿದೆ. ಶಿವ ಮತ್ತು ಗೋಪಿನಾಥ ದೇಗುಲಗಳೆರಡನ್ನೂ ಏಕಕಾಲದಲ್ಲಿ, ಕ್ರಿ.ಶ. ೧೫೩೯ರಲ್ಲಿ ಕಟ್ಟಲಾಯಿತು. ಇದು ಶಿವದೇಗುಲಕ್ಕಿಂತಲೂ ಸುಂದರವಾದ ದೇಗುಲ. ಗರ್ಭಗುಡಿ, ಅಂತರಾಳ, ಮುಖಮಂಟಪ, ರಂಗಮಂಟಪ ಮತ್ತು ಮಹಾರಂಗಮಂಟಪಗಳನ್ನು ಓಣರವಾಗಿಜೋಡಿಸಿದಂತೆ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಅತ್ಯಪೂರ್ವ ಚೆಲುವಿನ ಗೋಪಿನಾಥ ಪ್ರತಿಮೆಯನ್ನು ನೋಡಬಹುದು. ಇದರ ಪಕ್ಕದಲ್ಲೇ ಇರುವ ರಾಮಾನುಜರ ಮೂರ್ತಿಯನ್ನು ಹೊರಗಡೆಯಿಂದ ತಂದು ಇರಿಸಲಾಗಿದೆ. ಗರ್ಭಗುಡಿಯ ಮಾಡನ್ನು ಮರದ ತೊಲೆಗಳಿಂದ ಮುಚ್ಚಲಾಗಿದೆ. ಇವು ಅಂದಿನ ಕಾಲದ ಮರಗಳು. ಅಂತರಾಳದಲ್ಲಿರುವ ಎರಡು ಗಣೇಶನ ವಿಗ್ರಹಗಳನ್ನೂ ಸಹ ಹೊರಗಡೆಯಿಂದ ತಂದಿಡಲಾಗಿದೆ. ಅವುಗಳಲೊಂದು ಪಕ್ಕದಮಲ್ಲಿಕಾರ್ಜುನ ದೇಗುಲದಿಂದ ತರಲಾಗಿದೆ. ರಂಗಮಂಟಪದ ಉತ್ತರ – ದಕ್ಷಿಣದಲ್ಲಿ ಎರಡು ದ್ವಾರಗಳಿವೆ; ಅದರ ಮುಂದೆ ಮೆಟ್ಟಿಲುಗಳಿವೆ. ಈ ಮಂಟಪದ ಪೂರ್ವದಲ್ಲಿ ಪ್ರಮುಖ ದ್ವಾರವಿದ್ದು, ಮಹಾರಂಗಮಂಟಪದಂತೆ, ತೆರದ ೨೦ ಸ್ತಂಭಗಳ ಮಂಟಪ. ಈ ದೇಗುಲದ ಸ್ತಂಭಗಳನ್ನು, ಶಿವದೇಗುಲದ ಸ್ತಂಭಗಳಂತೆ ರೂಪಿಸಲಾಗಿದೆ. ಇಲ್ಲಿನ ರಂಗಮಂಟಪದ ಸ್ತಂಭಗಳ ಘನಾಕೃತಿಗಳ ಮೇಲೆ ರಾಮಾಯಣ ಭಾಗವತಕ್ಕೆ ಸಂಬಂಧಿಸಿದ ಶಿಲ್ಪಗಳನ್ನು ಕೆತ್ತಲಾಗಿದೆ. ಇಲ್ಲಿನ ಒಂದು ಕಂಬದ ಮೇಲೆ ದೇಗುಲದ ಪೂಜಾಮೂರ್ತಿ (ಗೋಪಿನಾಥ) ಯ ಪ್ರತಿಕೃತಿ ಇದೆ. ಆಳ್ವಾರರು, ಕಿನ್ನರ – ಕಿನ್ನರಿಯರು, ಗಂಧರ್ವರು ಮುಂತಾದ ಶಿಲ್ಪಗಳನ್ನು ಈ ಕಂಬದ ಮೇಲೆ ಕಾಣಬಹುದು. ಮಹಾರಂಗ ಮಂಟಪದ ಸ್ತಂಭಗಳ ಮೇಲೂ ದಶಾವತಾರ, ರಾಮಾಯಣ, ಮಹಾಭಾರತ ಹಾಗೂ ಸಾಮಾಜಿಕ ಚಿತ್ರಗಳನ್ನು ರೂಪಿಸಲಾಗಿದೆ ವಿವಿಧ ಬಗೆಯ ಪ್ರಾಣಿಗಳ ಚಿತ್ರಗಳೂ ಅಲ್ಲುಂಟು. ದೇವಾಲಯ ದ್ವಾರಬಂಧಗಳನ್ನು ಸೊಗಸಾಗಿ ಚಿತ್ರಿಸಲಾಗಿದೆ. ಹೊರಭಾಗದ ಗೋಡೆಗಳನ್ನು ಹಂಪೆಯ ದೇಗುಲಗಳಲ್ಲಿ ಕಾಣುವಂತೆ, ಕೋಷ್ಠ, ಕುಂಭಪಂಜರ ಮತ್ತು ಅರೆಗಂಭಗಳಿಂದ ಅಲಂಕಾರಗೊಳಿಸಲಾಗಿದೆ. ದೇಗುಲದ ಶಿಖರ ಜೀರ್ಣಾವಸ್ಥೆಯಲ್ಲಿದೆ. ಅಲ್ಲಿನ ಶಿಲ್ಪಗಳನ್ನು ಗುರುತಿಸುವುದು ಕಷ್ಟವೇ.

ದೇವಾಲಯದ ಮುಂದೆ, ಅಕ್ಷರೇಖೆಯಲ್ಲಿ ಬಲಿಪೀಠ ಮತ್ತು ದ್ವಾರಗೋಪುರವಿದೆ. ದೇವಾಲಯದ ಆವರಣವನ್ನು ಸುತ್ತುವರೆದ ಎತ್ತರವಾದ ಕೋಟೆಯಂತಹ ಪ್ರಾಕಾರವು ದೇಗುಲದ ಮುಂದಿರುವ ಗೋಪುರವನ್ನು ಸೇರಿಕೊಳ್ಳುತ್ತದೆ. ಪ್ರಾಕಾರದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಗೋಡೆಗಳ ಮಧ್ಯದದಲ್ಲಿ ಗೋಪುರದ ಕಿರು ಆಕೃತಿಯನ್ನು ರಚಿಸಲಾಗಿದೆ. ಪ್ರಾಕಾದ ಒಳಭಾಗದಲ್ಲಿ, ಅದಕ್ಕೆ ತಾಗಿದಂತೆ ಕಂಬಸಾಲಿನ ಮಂತಪವಿದೆ. ಇದು ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ನಾಶವಾಗಿದೆ. ದೇಗುಲದ ಅವರಣಕ್ಕೆ ಪ್ರವೇಶಿಸಿದರೆ, ಅಲೌಕಿಕ ಜಗತ್ತಿನ ಬಂದ ಅನುಭವವಾಗುತ್ತದೆ. ದೇಗುಲದ ಪ್ರಶಾಂತತೆ ಮತ್ತು ವಾಸ್ತು ಸೌಂದರ್ಯವೇ ಇದಕ್ಕೆ ಕಾರಣ.

ಗೋಪಿನಾಥ ದೇಗುಲಯದ ದ್ವಾರಗೋಪುರವು, ಶಿವದೇಗುಲದ ಗೋಪುರಕ್ಕೆ ಉತ್ತಮವಾಗಿದೆ. ದೇವಾಲಯದ ದ್ವಾರಮಂಟಪವು ಅಧಿಷ್ಠಾನ ಮತ್ತು ಉಪಪೀಠದ ಮೇಲೆ ರಚನೆಯಾಗಿದೆ. ಇದು ಕೋಷ್ಠ, ಕುಂಭಪಂಜರ ಮತ್ತು ಅರೆಗಂಬಗಳಿಂದ ಕೂಡಿ ಭವ್ಯವಾಗಿ ಕಾಣುತ್ತದೆ. ಇದರ ಮೇಲೆ ಗಾರೆ ಮತ್ತು ಇಟ್ಟಿಗೆಗಳಿಂದ ರಚನೆಯಾದ ಗೋಪುರವು ಐದು ಅಂತಸ್ತಿನದು. ಕೊನೆಯ ಅಂತಸ್ತು ಅರೆಪಿಕಾಯಿ ಆಕಾರದಲ್ಲಿದ್ದು, ಅಗ್ನಿಮುದ್ರೆಗಳಿಂದ ಕೂಡಿದ ಕೀರ್ತಿಮುಖಗಳಿಂದ ಅಲಂಕೃತವಾಗಿದೆ. ಇದರ ಮೇಲೆ ವ್ಯೆಷ್ಣವ, ಗಂಧರ್ವರ ಗಾರೆ ಶಿಲ್ಪಗಳನ್ನು ರೂಪಿಸಲಾಗಿದೆ.

ಈ ದೇಗುಲದ ಅತ್ಯಪೂರ್ವವಾದ ಕೃತಿಯೆಂದರೆ, ಗರ್ಭಗುಡಿಯ ಪೂಜಾಮೂರ್ತಿ. ಇಲ್ಲಿನ ಗೋಪಿನಾಥ ವಿಗ್ರಹವಂತೂ, ಆಕಾಲದ ಕಲಾಕಾರರ, ರೂವಾರಿಗಳ ಅಮೋಘ ತಪಸ್ಸಿನ ಸಿದ್ಧಿ. ಇದರಷ್ಟು ಅಪಾರ ಜೀವಂತಿಕೆ ಮತ್ತು ಚಲುವನ್ನು ಮೈತಳೆದ ಮತ್ತೊಂದು ವಿಗ್ರಹವನ್ನು ಇಂದು ಆಕಾಲದ ಯಾವುದೇ ದೇವಾಲಯದಲ್ಲಿ ಕಾಣಲು ಸಾಧ್ಯವೇ ಇಲ್ಲ. ಇದರ ಮೇಲೆ ಹೊಯ್ಸಳ ಶಿಲ್ಪಗಳ ಪ್ರಭಾವವಿರುವುದಾದರೂ, ಅವುಗಳಿಗಿಂತ ಭಿನ್ನವಾದುದು. ಹೊಯ್ಸಳ ಶಿಲ್ಪಗಳಲ್ಲಿ ಜೀವಂತಿಕೆ ಕೊರತೆ ಕಂಡರೆ, ಇದರಲ್ಲಿ ಜ್ಯೆವಿಕತೆಯನ್ನು ಅಪಾರವಾಗಿ ಕಾಣುತ್ತೇವೆ. ಇದರಲ್ಲಿ ಅಲಂಕರಣೆ ಸಾಕಷ್ಟಿದೆ. ಇದು ಹೊಯ್ಸಳ ಶಿಲ್ಪಗಳಲ್ಲಿ ಹೊರೆಯಾದರೆ, ಇದರಲ್ಲಿ ಶಿಲ್ಪ ಸೌಂದರ್ಯಕ್ಕೆ ಪೂರಕವಾಗಿದೆ. ೧.೪೮ ಮೀಟರ್ ಎತ್ತರವಿವುರುವ ಗೊಪಿನಾಥನು ಕೊಳಲನೂದುತ್ತಿದ್ದಾನೆ. ಸುತ್ತಲಿರುವ ಹಸುಗಳು, ಆನೆ, ಹಂಸ ಮತ್ತು ಕಾಡಿನ ಇತರ ಪ್ರಾಣಿಗಳು ಗೋಪಿನಾಥನ ದಿವ್ಯಗಾನವನ್ನು ತನ್ಮಯವಾಗಿ ಆಲಿಸುತ್ತವೆ. ಸರ್ವಾಭರಣ ಭೂಷಿತನಾದ ಇವನು ಮುಂದಿನ ಹಸ್ತಗಳನ್ನು ಕೊಳಲನ್ನೂ ಹಿಂದಿನ ಕೈಗಳಲ್ಲಿ ಚಕ್ರ ಮತ್ತು ಶಂಖವನ್ನು ಹಿಡಿದಿದ್ದಾನೆ. ಇವನ ತಲೆಯ ಮೇಲೆ ಹೆಡೆ ಬಿಚ್ಚಿರುವ ಏಳು ಹೆಡೆ ನಾಗನು ಆಲದ ಮರದ ಕಾಂಡವನ್ನು ಸುತ್ತಿ ತಬ್ಬಿದ್ದಾನೆ. ವಿಗ್ರಹದಮೇಲೆ ಮರದ ಎಲೆಗಳನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಮರದ ಮೇಲೆ ಕಿನ್ನರ-ಕಿನ್ನರಿಯನ್ನು ಚಿತ್ರಿಸಲಾಗಿದೆ. ಇದೊಂದು ಭವ್ಯ, ಅಪೂರ್ವ ಶಿಲ್ಪ, ಇದನ್ನು ಕೆತ್ತಿಸಿದ ಶಿಲ್ಪಿಯ ಹೆಸರು ತಿಳಿಯದಿದ್ದರೂ, ಅವನ ಮಹತ್ತರವಾದ ಕನಸು ಮತ್ತು ಆಶಯಗಳು ಈ ಶಿಲ್ಪದಲ್ಲಿ ಸಾಕಾರಗೊಂಡಿದೆ.

ಮಲ್ಲಿಕಾರ್ಜುನ ದೇಗುಲ

ಗೋಪಿನಾಥ ದೇವಾಲಯದಿಂದ ಎತ್ತರಕ್ಕೆ ಸ್ವಲ್ಪ ದೂರದಲ್ಲೇ ಮಲ್ಲಿಕಾರ್ಜನ ದೇಗುಲವಿದೆ. ಇದನ್ನು ಬಯಕಾರ ರಾಮಪ್ಪನ ಅಧಿಕಾರಿ ನಮಶ್ಶಿವಾಯನು ಅವನ ಪ್ರೋತ್ಸಾಹದ ಮೇರೆಗೆ ಕಟ್ಟಿಸಿದ. ಇದು ಸರಳ ದೇಗುಲವಾದರೂ ತನ್ನದೇ ವಿಶಿಷ್ಟ ಅಂಶಗಳಿಂದ ಕೂಡಿದ. ಈ ದೇಗುಲವು ಗರ್ಭಗೃಹ, ಅಂತರಾಳಾದ ಇಕ್ಕಡೆಗಳಲ್ಲಿ ಅನಂತರದ ಕಾಲದಲ್ಲಿ ಎರಡು ಗರ್ಭಗೃಹಗಳನ್ನು ನಿರ್ಮಿಸಲಾಯಿತು. ಇವೆರಡಕ್ಕೂ ಪ್ರವೇಶವನ್ನು ರಂಗಮಂಟಪದಿಂದ ಒದಗಿಸಲಾಗಿದೆ. ಮೂರು ಗರ್ಭಗೃಹಗಳಲ್ಲೂ ಪೂಜಾಮೂರ್ತಿಗಳಿಲ್ಲ. ಅಂತರಾಳದ ದಕ್ಷಿಣಕ್ಕಿರುವ ಗರ್ಭಗೃಹದಲ್ಲಿ ಗಣೇಶಮೂರ್ತಿಯನ್ನಿಡಲಾಗಿತ್ತು. ಇದನ್ನು ಈಗ ಗೋಪಿನಾಥ ದೇಗುಲದ ಅಂತರಾಳದಲ್ಲಿಡಲಾಗಿದೆ. ಈ ಗರ್ಭಗೃಹದ ದ್ವಾರಬಂಧದ ಮೇಲೆ ಕಹಳೆ ಮತ್ತು ಕೊಂಬುಗಳನ್ನು ಊದುತ್ತಿರುವ ಗಣಗಳನ್ನು ಚಿತ್ರಿಸಲಾಗಿದೆ. ಇಂತಹ ದ್ವಾರಪಾಲಕರ ಚಿತ್ರಣ ಅಪರೂಪವೇ. ಉತ್ತರ ದಿಕ್ಕಿನಲ್ಲಿರುವ ಗರ್ಭಗೃಹದಲ್ಲಿ ಪಾರ್ವತಿಯನ್ನು ಪ್ರತಿಷ್ಠಾಪಿಸಿರಬೇಕು. ಇದರ ದ್ವಾರಬಂಧದಲ್ಲಿ ದ್ವಾರಪಾಲಿಕೆಯರನ್ನು ಚಿತ್ರಿಸಲಾಗಿದೆ. ಇವರ ಹೆಗಲ ಮೇಲಿರುವಂತೆ ಚಾಮರಗಳನ್ನು ಹಿಡಿದ್ದಾರೆ. ಈ ದೇಗುಲದ ರಂಗಮಂಟಪದ ನಾಲ್ಕು ಸ್ತಂಭಗಳು ಸುಂದರವಾಗಿದ್ದು, ಕಲ್ಯಾಣದ ಚಾಲುಕ್ಯರ ಸ್ತಂಭಗಳನ್ನು ಹೋಲುತ್ತವೆ.

ಮಲ್ಲಿಕಾರ್ಜುನ ದೇಗುಲದ ರಂಗಮಂಟಪದಲ್ಲಿ ಉತ್ತರ ಗೋಡೆಯ ಪಕ್ಕದಲ್ಲಿ ದಕ್ಷಿಣಾಭಿಮುಖವಾಗಿ ದೇವಕೋಷ್ಠ ಒಂದಿದೆ. ಇದು ದೇಗುಲದ ಅತ್ಯಂತ ಆಕರ್ಷಕ ಭಾಗ. ಈ ತೆರನಾದ ದೇವಕೋಷ್ಠವನ್ನು ಕರ್ನಾಟಕ ಮತ್ತು ಅಂಧ್ರದ ವಿಜಯನಗರ ಶೈಲಿಯ ಯಾವುದೇ ದೇವಾಲಯದಲ್ಲೂ ಕಾಣಲು ಸಾಧ್ಯವಿಲ್ಲ. ಇದು ಇತರ ದೇವಾಲಯದ ದೇವಕೋಷ್ಠದಂತಿರದೆ, ಸ್ವತಂತ್ರ ಕಿರಿಯ ಗಾತ್ರದ ದೇಗುಲದಂತಿದೆ. ಇದರ ಗೋಡೆಗಳು, ಅಧಿಷ್ಠಾನ, ಅರೆಗಂಬ, ಕೋಷ್ಠಗಳಿಂದ ಅಲಂಕೃತವಾಗಿದೆ. ಇದರ ದ್ವಾರಬಂಧದಲ್ಲಿ ದ್ವಾರಪಾಲಕರ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದರ ಮೇಲೆ, ಇದರ ಆಕಾರಕ್ಕೆ ತಕ್ಕುದಾದ ಕಿರಿಯ ಶಿಖರವೊಂದಿತ್ತು. ಇದನ್ನು ಗಾರೆ ಮತ್ತು ಇಟ್ಟಿಗೆಗಳಿಂದಮಾಡಲಾಗಿತ್ತು. ಇದೂ ಕೂಡ ಸುಂದರವಾದ ರಚನೆಯಾಗಿತ್ತು. ೧೯೯೬ರಲ್ಲಿ ಯಾರೋ ದುಷ್ಕರ್ಮಿಗಳು ಈ ಶಿಖರವನ್ನು ನಾಶಮಾಡಿದರು. ಈ ಸುಂದರ ಕಲಾಕೃತಿ ಶಾಶ್ವತವಾಗಿ ನಾಶವಾಗಿ ಹೋಯಿತು.

ದೇಗುಲದ ಹೊರಭಾಗ ಸರಳವಾಗಿದೆ. ಮೂರು ಗರ್ಭಗೃಹಗಳ ಮೇಲೆ ಮೂರು ಶಿಖರಗಳಿವೆ. ಇವು ಮೂರು ಮೂರು ತೆರನಾಗಿದೆ. ಇವುಗಳ ದೇವಕೊಷ್ಠದಲ್ಲಿ ಶ್ಯೆವದೇವತೆಗಳನ್ನು ಚಿತ್ರಿಸಲಾಗಿದೆ. ದೇಗುಲದ ಮುಂದೆ ದ್ವಾರಗೋಪುರವಿದೆ. ಗೋಪುರವು ಜೀರ್ಣಾವಸ್ಥೆಯಲ್ಲಿದ್ದರೂ, ಅದರ ಚೆಲುವು ಇನ್ನೂ ಮಾಸಿಲ್ಲ. ದೇವಾಲಯದ ಪ್ರಾಕಾರ ನಾಶವಾಗಿದೆ. ಅಲ್ಲೆ ಒಂದು ಕಲ್ಯಾಣಿ ಇದೆ. ಇದಕ್ಕೆ ಹಿಂದೆ ಆಕರ್ಷಿಕವಾದ ದ್ವಾರಬಂಧವಿತ್ತು. ಇದರ ಕಂಬಿಗಳು ಅಲ್ಲೆಲ್ಲ ಬಿದ್ದಿವೆ.

ಜೀರ್ಣಾವಸ್ಥೆಯಲ್ಲಿರುವ ದೇಗುಲಗಳು

ಮಲ್ಲಿಕಾರ್ಜುನ ದೇಗುಲದ ದಕ್ಷಿಣಕ್ಕೆ ಜೀರ್ಣಾವಸ್ಥೆಯಲ್ಲಿರುವ ಶಿವಾಲಯವಿದೆ. ಇದೇ ದೇವೇಶ ದೇಗುಲವಿರಬೇಕು. ಇದರಲ್ಲೂ ಪೂಜಾ ಮೂರ್ತಿಗಳಿಲ್ಲ. ಶಿವದೇಗುಲ ಮತ್ತು ಗೋಪಿನಾಥ ದೇಗುಲಗಳ ನಡುವೆ ವಿಶಾಲವಾದ ರಥವೀಧಿ ಇದೆ. ಈ ರಥವೀಧಿಯ ದಕ್ಷಿಣಕ್ಕೆ ಇರುವ ವೀರಭದ್ರ ಆಲಯ ನಾಶವಾಗಿದೆ. ಇದರ ಗರ್ಭಗುಡಿ ಮತ್ತು ಭಿನ್ನವಾದ ವೀರಭದ್ರ ವಿಗ್ರಹವಿದೆ. ಇದು ಉತ್ತಮ ಶಿಲ್ಪಕೃತಿಯಾಗಿದೆ. ಶಿವದೇಗುಲದ ಪೂರ್ವಕ್ಕೆ ಕಾಶಿ ವಿಶ್ವನಾಥ ಗುಡಿಯಿತ್ತು. ಅದರ ಅವಶೇಷಗಳಿಲ್ಲದಂತೆ ಇತ್ತೀಚೆಗೆ ನಾಶಮಾಡಲಾಗಿದೆ. ಈ ದೇಗುಲದ ಚಪ್ಪಡಿಗಳನ್ನು ಸ್ಥಳೀಯ ಜನೆರೇ ಸಾಗಿಸಿದ್ದಾರೆ.

ಈ ದೇಗುಲಗಳನ್ನು ನಿರ್ಮಿಸಿದ ಬಯಕಾರ ರಾಮಪ್ಪನ ಸಾಧನೆ ಬಹುದೊಡ್ಡದು. ಪ್ರತಿಯೊಂದು ದೇಗುಲವು ತನ್ನದೇ ಆದ ವಿಶಿಷ್ಟ ಅಂಶಗಳಿಂದ ಕೂಡಿದೆ. ಈ ವಿಶಿಷ್ಟ ಆಂಶಗಳನ್ನು ಮೇಲೆ ತಿಳಿಸಲಾಗಿದೆ. ಇವುಗಳನ್ನು ಹಂಪಿಯ ಯಾವುದೇ ಹಿರಿಯ ದೇಗುಲಗಳಲ್ಲಿ ಕಾಣಲಾಗದು. ಹಂಪಿಯನ್ನು ಹೊರತುಪಡಿಸಿದರೆ ದಕ್ಷಿಣಭಾರತದಲ್ಲೇ ವಿಜಯನಗರ ಕಾಲದ ಅಧಿಕ ಸಂಖ್ಯೆಯ ದೇಗುಲುಗಳನ್ನು ಒಳಗೊಂಡಿರುವ ಸ್ಥಳವೆಂದರೆ ತಿಮ್ಮಲಾಪುರ. ಒಂದೇ ಶಿವದೇಗುಲವು ವಿಶಿಷ್ಟ ಶೈವ ಶಿಲ್ಪಗಳನ್ನು ಹೊಂದಿದ್ದರೆ ಗೋಪಿನಾಥ ದೇಗುಲವು ಕಲ್ಪನೆಗೂ ಮೀರಿದ ಚೆಲುವಾದ ಪೂಜಾಮೂರ್ತಿಯನ್ನು ಹೊಂದಿದೆ. ಈ ಎರಡು ದೇಗುಲಗಳ ತಲವಿನ್ಯಾಸ ಮತ್ತು ರಚನೆಗಳು ಸುಂದರ ಅವರಣವನ್ನು ರೂಪಿಸಿದೆ. ಮಲ್ಲಿಕಾರ್ಜುನ ದೇವಾಲಯದ ರಂಗಮಂಟಪದ ದೇವಕೋಷ್ಠ ಅನನ್ಯ ಕೃತಿ ಉಳಿದ ದೇಗುಲಗಳಲ್ಲೂ ವಿಶಿಷ್ಟ ಅಂಶಗಳಿರಬೇಕು. ಆದರೆ ಅವೆಲ್ಲವೂ ನಾಶವಾಗಿರುವುದು ವಿಜಯನಗರದ ಕಲಾಪ್ರಪಂಚಕ್ಕೆ ಶಾಶ್ವತ ನಷ್ಟ. ಇವೆಲ್ಲವು ಬಯಕಾರ ರಾಮಪ್ಪನ ಹೆಸರನ್ನು ಎಂದೆಂದಿಗೂ ಹಸಿರಾಗಿಸಿವೆ.

ದೇವಾಲಯಗಳ ನಿರ್ಮಾಣದಷ್ಟೇ, ಇವನು ಮತ್ತೊಂದು ಮಹತ್ತರವಾದ ಸಾಧನೆಯನ್ನು ಮಾಡಿದ್ದಾನೆ. ಇವನು ಕಟ್ಟಿಸಿದ ಅಸಂಖ್ಯಾತ ಕೆರೆಗಳು ತಟಾಕಗಳು ಇಂದಿಗೂ ಸಾವಿರಾರು ಎಕರೆ ಪ್ರದೇಶಗಳಿಗೆ ನೀರುಣಿಸುತ್ತಿವೆ; ಅಲ್ಲಿನ ಜನರಿಗೆ ಜೀವನಾಧಾರವಾಗಿದೆ. ಸಂಗೀತ ಗ್ರಂಥಗಳನ್ನು ರಚಿಸುವ ಮೂಲಕ ತನ್ನ ವಿದ್ವತ್ಪ್ರಭೆಯನ್ನು ಪ್ರಕಾಶಗೊಳಿಸಿ ತನ್ನ ಬಹುಮುಖ ವ್ಯಕ್ತಿತ್ವವನ್ನು ಪರಿಚಯಮಾಡಿಸಿದ್ದಾನೆ. ಮದ್ಯಯುಗದ ಮಹಾನ್ ವ್ಯಕ್ತಿಗಳ ಪಂಕ್ತಿಯಲ್ಲಿ ಇವನೂ ವಿರಾಜಮಾನವಾಗಿದ್ದಾನೆ.

ಕನಾಟಕದ ದೀರ್ಘ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಮಹತ್ವಪೂರ್ಣವಾದ ವರ್ಣರಂಜಿತ ಅಧ್ಯಾಯ ಬದುಕಿನ ಯಾವುದೇ ಕ್ಷೇತ್ರವಿರಲಿ ಈ ಕಾಲದಲ್ಲಿ ವ್ಯೆವಿಧ್ಯಮಯವಾದ ಪ್ರಗತಿಯನ್ನು ಕಾಣುತ್ತೇವೆ. ಆಡಳಿತ, ಧರ್ಮ, ಸಾಹಿತ್ಯ ಜನಹಿತ ಕಾರ್ಯಗಳೂ ಕಲೆ ಮತ್ತು ವಾಸ್ತು ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಅದ್ಬುತವಾದ ಮುನ್ನಡೆಯನ್ನು ನೋಡಬಹುದು. ಇದಕ್ಕೆಲ್ಲಾ ವಿಜಯನಗರದ ಅರಸರೇ ಕಾರಣನಲ್ಲ. ಇದಕ್ಕೆ ಸಾಮೂಹಿಕವಾಗಿ ದುಡಿದವರು ಅಲ್ಲಿನ ಉನ್ನತಾಧಿಕಾರಿಗಳು ಮತ್ತು ಜನತೆ. ಅರಸರ ಪ್ರಜ್ವಲವಾದ ಆಳ್ವಿಕೆಯ ಮುಂದೆ ಅಧಿಕಾರಿಗಳ ಮತ್ತು ಜನತೆಯ ಸಮಷ್ಟಿ ಸಾಧನೆ ನಿಜಕ್ಕೂ ಗೌಣವಾಯಿತು. ವಿಜಯನಗರದ ಬೆಳವಣಿಗೆಗೆ ಅರಸರು ಕಾರಣರಾದಂತೆ ಅದರ ವಿನಾಶಕ್ಕೂ ನಿಮಿತ್ತವಾದರು. ಸಮ್ರಾಜ್ಯದ ವಿನಾಶಕ್ಕೆ ಅಧಿಕಾರಿಗಳು ಮತ್ತು ಜನತೆ ಕಾರಣರಾಗಿಲ್ಲದಿರುವುದು ಅನ್ಯಸಂಗತಿ. ಅರಸರ ಬಗ್ಗೆ ಅಧ್ಯಯನ ನಡೆದಿದೆ. ವಿಜಯನಗರದ ಸಾಮ್ರಾಜ್ಯದ ಪ್ರಗತಿ ವಿವಿಧ ಮುಖಗಳನ್ನು ಅರಿತ್ತಿದ್ದೇವೆ. ಇದರ ಬಗ್ಗೆ ಅಸಂಖ್ಯಾತ ಗ್ರಂಥಗಳು ಹೊರಬಂದಿವೆ ಹಾಗೂ ಬರುತ್ತಿವೆ. ಸಾಮ್ರಾಜ್ಯದ ಸಾಂಸ್ಕೃತಿಕ ಪ್ರಗತಿಗಾಗಿ ಅರಸರ ಜೊತೆಯಲ್ಲಿ ಬಯಕಾರ ರಾಮಪ್ಪನಂತಹ ಸಾವಿರಾರು ಅಧಿಕಾರಿಗಳು ಮತ್ತು ಜನತೆ ಹೊಯ್‌ಕೈಯಾಗಿ ದುಡಿದಿದ್ದಾರೆ. ಆದರೆ ಅವರ ಬಗ್ಗೆ ಅಧ್ಯಯನ ನಡೆದಿರುವುದು ಬಹು ಕಡಿಮೆ, ನಡೆದಿಲ್ಲವೆಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಬಯಕಾರ ರಾಮಪ್ಪನ ಬಗ್ಗೆ ಮಾಡಿರುವ ಈ ಅಧ್ಯಯನ ಒಂದು ಪ್ರಯತ್ನ.