ಓ ನನ್ನ ಪ್ರಿಯತಮನೆ ಘನಶ್ಯಾಮ ಸುಂದರನೆ
ಏನು ಹೇಳಲಿ ನಿನಗೆ ಮತ್ತೆ ನಾನು?
ನಾನೋರ್ವ ನಿರ್ಭಾಗ್ಯ ಅಬಲೆಯಾದುದರಿಂದ
ಏನು ಹೇಳಲು ನನಗೆ ತೋರದಿಹುದು.

ಅಂಗೈಯ ಕನ್ನಡಿಯ ರೀತಿಯಲಿ ನೀನಿರುವೆ,
ನನ್ನ ಮುಡಿಗಿಡುವಂಥ ಹೂವಿನಂತಿರುವೆ,
ಓವೊ ಸಖ ನಾ ನಿನ್ನ ಒಂದು ಹೂವನು ಮಾಡಿ
ಮುಡಿಯೊಳಿಡುವೆ ;
ನಿನ್ನನಾರೂ ಮತ್ತೆ ಕಾಣದಿಹ ರೀತಿಯಲಿ
ನನ್ನ ಜಡೆಯೊಳು ನಿನ್ನ ಅಡಗಿಸಿಡುವೆ !

ತಾಂಬೂಲದಂತಿರುವೆ, ಓ ಇನಿಯ ನೀನೆನಗೆ,
ಕಣ್ಣಿಗಂಜನದಂತೆ ತೋರುತಿರುವೆ.
ಓವೊ ಸಖ ನಾ ನಿನ್ನ ತುಟಿಗೆ ಲೇಪಿಸಿಕೊಳುವೆ,
ನನ್ನ ಕಣ್ಣಿಗೆ ನಿನ್ನ ಬಳಿದುಕೊಳುವೆ !

ಮಗ ಮಗಿಪ ಶ್ರೀಗಂಧದಂತಿರುವ ಓ ನಲ್ಲ,
ಕೊರಳ ಕಂಠೀಹಾರದಂತೆ ಇರುವೆ !
ನಿನ್ನ ನಾ ಮೈಗೆಲ್ಲ ಬಳಿದು ದೇಹಾತ್ಮಗಳ
ಸಂತವಿಡುವೆ.
ಕೊರಳ ಹಾರವ ಮಾಡಿ ಹಾಕಿಕೊಳುವೆ,
ತುಡಿ ತುಡಿವ ನನ್ನೆದೆಯ ಮೇಲಿರುತ ನಿತ್ಯವೂ
ಅದರ ತುಡಿವ ನೀನು ಕೇಳುತಿರುವೆ !

ನನ್ನೆದೆಯ ನಿಧಿ ನೀನು,
ನನ್ನ ಮನದೈವ ನೀ
ರೆಕ್ಕೆ ಎಂತೋ ಹಕ್ಕಿಗಂತೆ ನನಗೆ,
ಮೀನ್ಗೆ ನೀರೆಂತೊ ನೀನಂತೆ ನನಗೆ !