ಸುತ್ತ ಮುತ್ತ ನೋಡಿದತ್ತ
ಬರಿಯ ಬಯಲು ಹರಹಿದೆ
ಬಾನ ಕರೆಗೆ ಹರಿದಿದೆ,
ಸಂಜೆಗೆಂಪಿನೆದೆಗೆ ತನ್ನ
ಎದೆಯನೊಡ್ಡಿ ನಿಂದಿದೆ
ರೋಮಾಂಚನಗೊಂಡಿದೆ.

ಕಣ್ಣದಿಟ್ಟಿ ಹರಿಯುವತ್ತ
ಬಟ್ಟಬಯಲೆ ಮಲಗಿದೆ
ಬಾನನಪ್ಪಿ ಹಿಡಿದಿದೆ.
ಕಂಡು ಕಾಣದಂತೆ ಮೇಲೆ
ಚಿಕ್ಕಿ ಮೆಲ್ಲಗಿಣುಕಿವೆ
ಮುಗುಳ್ ನಗೆಯ ಬೀರಿವೆ.

ಎರಡು ಬಯಲ ಬೇಟಕಾಗಿ
ಇರುಳು ತೆರೆಯ ಕಟ್ಟಿದೆ
ಮೌನವೊಂದೆ ಹಾಡಿದೆ.
ಎರಡು ಬಯಲ ಸಂಗಮದಲಿ
ಕವಿಯಜೀವ ಕರಗಿದೆ
ಬಟ್ಟಬಯಲೆ ಆಗಿದೆ !