‘ಮನುಷ್ಯ ಪರಿಸರದ ಶಿಶು’ ಎಂಬ ಮಾತನ್ನು ನಾವೆಲ್ಲ ಒಪ್ಪುತ್ತೇವೆ.

ಪ್ರಕೃತಿಯಲ್ಲಿ ನಡೆಯುವ ಘಟನೆಗಳು, ಪ್ರಕ್ರಿಯೆಗಳನ್ನು ಮನುಷ್ಯ ಗಮನಿಸುತ್ತಲೇ ಬಂದಿದ್ದಾನೆ. ಅಷ್ಟೇ ಅಲ್ಲ, ಅಂಥ ಘಟನೆಗಳಿಗೆ ಕಾರಣಗಳೇನು ಎಂದು ವಿಶ್ಲೇಷಣೆ ಮಾಡಿ, ಅವುಗಳನ್ನು ತನ್ನ ಅನುಕೂಲಕ್ಕೋಸ್ಕರ ಬಳಸಿಕೊಳ್ಳುವ, ಪರಿವರ್ತಿಸಿಕೊಳ್ಳುವ ಜಾಣತನವನ್ನು ತೋರುತ್ತಲೇ ಬಂದಿದ್ದಾನೆ. ಅದಕ್ಕೇ ನಾವು ಸಾಮಾನ್ಯವಾಗಿ ಆತನ ಜಾಣತನದ ಬಗ್ಗೆ ಹೇಳುತ್ತೇವೆ – “ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಲು ಕಲಿತ; ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ.”

ಮನುಷ್ಯನ ಈ ಮಟ್ಟಿನ ವೈಜ್ಞಾನಿಕ, ತಾಂತ್ರಿಕ ಉನ್ನತಿಗೆ ನಿಸರ್ಗವೇ ಸ್ಫೂರ್ತಿ ಎಂದೆನಿಸುವುದಿಲ್ಲವೇ? … ಹೌದು. ಈ ಮಾತು ನೂರಕ್ಕೆ ನೂರರಷ್ಟು ನಿಜ. ಇಲ್ಲಿಯವರೆಗೆ ಮನುಷ್ಯ ಸಂಶೋಧಿಸಿ, ಬಳಕೆಗೆ ತಂದಿರುವ ಅನೇಕ ತಂತ್ರಜ್ಞಾನಗಳಿಗೆ ‘ನಿಸರ್ಗದ ತತ್ವ’ಗಳೇ ಪ್ರೇರಣೆ, ಆಧಾರ. ಇತ್ತೀಚಿನ ವರ್ಷಗಳಲ್ಲಿ ಇಂಥ ನಿಸರ್ಗ ಪ್ರೇರಿತ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಂದು ವಿಶಿಷ್ಟ ಶಾಖೆಯಾಗಿ ಗುರುತಿಸಿಕೊಳ್ಳುತ್ತೇವೆ. ಈ ಶಾಖೆಯನ್ನು ‘ಬಯೋನಿಕ್ಸ್’ ಎಂದು ಕರೆಯುತ್ತಾರೆ.

‘ಬಯೋನಿಕ್ಸ್ (Bionics)’ ಎಂದರೆ ನಿಸರ್ಗದಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅರ್ಥೈಸಿಕೊಂಡು, ವಿಶ್ಲೇಷಣೆ ಮಾಡುವುದರೊಂದಿಗೆ, ಅವುಗಳ ತತ್ವಗಳನ್ನು ಆಧರಿಸಿ, ತಾಂತ್ರಿಕ ಸಾಧನಗಳನ್ನು ಅಭಿವೃದ್ದಿಪಡಿಸುವುದು ಎಂದರ್ಥ.

‘ಬಯಾಲಜಿ’ (Biology)  ಹಾಗೂ ‘ಇಲೆಕ್ಟ್ರಾನಿಕ್ಸ್’ (Electronics) ಎಂಬ ಎರಡು ಪದಗಳನ್ನು ಜೋಡಿಸಿ ಸಂಕ್ಷಿಪ್ತವಾಗಿ ‘ಬಯೋನಿಕ್ಸ್’ ಎಂಬ ಪದವನ್ನು ರೂಪಿಸಲಾಗಿದೆ. ಈ ಪದವನ್ನು ಮೊಟ್ಟಮೊದಲಿಗೆ (1960 ರಲ್ಲಿ) ಟಂಕಿಸಿದವರೆಂದರೆ ಅಮೆರಿಕ ವಾಯುದಳದ ಮೇಜರ ಜಾಕ್ ಇ. ಸ್ಟೀಲ್ ಅವರು.

ಮನುಷ್ಯನ ಬಹುತೇಕ ಸಂಶೋಧನೆಗಳಿಗೆ ನಿಸರ್ಗವೇ ದಾರಿ ತೋರಿಸಿದೆ. ಇಟಲಿಯ ಕಲಾವಿದ ಹಾಗೂ ಎಂಜಿನಿಯರ್ ಲಿಯೋ ನಾರ್ಡೊ ಡ ವಿಂಚಿ (1452-1519) ಯನ್ನು ‘ಬಯೋನಿಕ್ಸ್’ನ ಮೊದಲ ವಿದ್ಯಾರ್ಥಿ ಎಂದು ಪರಿಗಣಿಸಲಾಗುತ್ತದೆ. ನಿಮಗೆ ಗೊತ್ತಿರಬಹುದು. ಈ ಮೇಧಾವಿಯು ಪ್ರಕೃತಿಯ ಅನೇಕ ಘಟನೆಗಳನ್ನು ಅತ್ಯಂತ ಕುತೂಹಲದಿಂದ ಗಮನಿಸಿ, ವಿಶ್ಲೇಷಣೆ ಮಾಡಿದ.  ವಿಶೇಷವಾಗಿ, 16ನೆಯ ಶತಮಾನದ ಆರಂಭದಲ್ಲಿ ‘ಹಕ್ಕಿಗಳ ಹಾರುವಿಕೆ’ಯನ್ನು ಅಧ್ಯಯನ ಮಾಡಿ, ‘ಹಾರುವ ಯಂತ್ರ’ಗಳ ವಿನ್ಯಾಸಗಳನ್ನು ಸಿದ್ಧಪಡಿಸಿದ…! ಅಂಥ ವಿನ್ಯಾಸಗಳಲ್ಲಿ ‘ಹೆಲಿಕಾಪ್ಟರ್’  ಪ್ರಥಮರೂಪ ಕೂಡ ಸೇರಿತ್ತು ಎಂಬುದನ್ನು ಮರೆಯಬಾರದು…!  ಸುಮಾರು 500ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಲಿಯೋನಾರ್ಡೋ ಡ ವಿಂಚಿ, ಜಗತ್ತಿನ ಮೊಟ್ಟಮೊದಲ ‘ಪ್ಯಾರಾಶ್ಯೂಟ್’ ಹೇಗಿರಬಹುದು, ಎಂಬ ಚಿತ್ರ ಬರೆದಿದ್ದ… ಇದಕ್ಕೆ ಆತನಿಗೆ ಸ್ಫೂರ್ತಿ ಏನು ಗೊತ್ತೆ? ‘ಡ್ಯಾಂಡೆಲಿಯನ್ ಬೀಜಗಳು…!’  ಡ್ಯಾಂಡೆಲಿಯನ್ ಬೀಜಗಳು (ಒಂದು ಬಗೆಯ ಹಳದಿ ಹೂವಿನ ಗಿಡ) ಎಂದರೆ ನಿಮಗೆ ಅರ್ಥವಾಗಲಿಕ್ಕಿಲ್ಲ… ನೀವು ಆಟವಾಡುವಾಗ ಯಾವಾಗಲೋ ಒಮ್ಮೆ ಬೆಳ್ಳನೆಯ, ರೇಶಿಮೆಯಂಥ, ಹೊಳಪಾದ ಕೂದಲಿನಂಥ ಎಳೆಗಳನ್ನು ಹೊತ್ತುಕೊಂಡ ಒಂದು ಪುಟ್ಟ ಬೀಜವು ಗಾಳಿಯಲ್ಲಿ, ತೇಲುತ್ತ, ಹಾರಾಡುತ್ತ ಬಂದು ನಿಮ್ಮ ಕೈಗೆ ಸಿಕ್ಕಾಗ, ಅದನ್ನು ಸಂತೋಷದಿಂದ ಹಿಡಿದು ‘ಅಜ್ಜಿ ಕೂದಲು…. ಅಜ್ಜಿ ಕೂದಲು…’ ಎಂಬ ಉದ್ಗಾರ ನಿಮ್ಮ ಬಾಯಿಂದ ಹೊರ ಬಿದ್ದಿರಬಹುದು. ಈ ಘಟನೆಯನ್ನು ನೆನಪಿಸಿಕೊಂಡರೆ, ‘ಡ್ಯಾಂಡೆಲಿಯನ್ ಬೀಜ’ (Dandelion Seeds)ಗಳೆಂದರೇನೆಂದು ನಿಮಗೆ ಅರ್ಥವಾದೀತು.ಇದಕ್ಕೆ ಕಾಡುಸೇವಂತಿಗೆ ಎಂಬ ಹೆಸರಿದೆ. ಇದು ತಾನೇ ತಾನಾಗಿ ಎಲ್ಲೆಲ್ಲಿಯೂ ಬೆಳೆಯುತ್ತದೆ. ತಿಳಿ ಹಳದಿ ಬಣ್ಣದ, ಸ್ವಲ್ಪ ಸೇವಂತಿಗೆಯನ್ನು ಹೋಲುವ, ಅತಿ ಉದ್ದ ತೊಟ್ಟಿರುವ ಈ ಹೂವನ್ನು ಮಕ್ಕಳು, ಅದರ ತಲೆಭಾಗ (ಹೂ) ವನ್ನು ಚಿವುಟಿ, ಚಿಮ್ಮುವಂತೆ ಮಾಡಿ, ಆಡುತ್ತಾರೆ. ಇದರ  ಬೀಜಗಳು ಅತ್ಯಂತ ನಿಶ್ಚಲ ಗಾಳಿಯಲ್ಲೂ ಕೂಡ ಅತ್ಯಂತ ನಿಧಾನವಾಗಿ ಭೂಮಿಗೆ ಇಳಿಯುವುದನ್ನು ನೋಡಿ ‘ವಿಂಚಿ’ಗೆ ಪ್ಯಾರಶ್ಯೂಟಿನ ಕಲ್ಪನೆ ಬಂದಿರಬಹುದು. ಈ ವಿನ್ಯಾಸದ ಆಧಾರದ ಮೇಲಿಂದಲೇ ಕ್ರೊಯೇಷಿಯಾದ ಫಾಸ್ಟ್ ರ್ಯಾಸ್ಸಿಕ್ ಎಂಬಾತ 1617ರಲ್ಲಿ ಪ್ಯಾರಾಶ್ಯೂಟ್ ಅನ್ನು ಸಿದ್ಧಪಡಿಸಿ, ಬ್ರಾಟಿಸ್ಲಾವಿಯಾದ ಸಂತ ಮಾರ್ಟಿನ್ನನ ಚರ್ಚ್‌ನ ಗಂಟೆಯ ಗೋಪುರದ ಮೇಲಿಂದ ಜಿಗಿದು ಸುರಕ್ಷಿತವಾಗಿ ನೆಲವನ್ನು ತಲುಪಿದ.

ವಿಮಾನಯಾನದ ಕ್ಷೇತ್ರದಲ್ಲಿ ಜರ್ಮನಿಯ ಲಿಲಿಯೆಂಟಾಲ್ (1848-1896) ಎಂಬಾತನ ಕೊಡುಗೆ ಬಹಳ ವಿಶಿಷ್ಟವಾದದ್ದಾಗಿವೆ. ಆತ ಸ್ಟಾರ್ಕ್ (Stork) ಪಕ್ಷಿಗಳ ಹಾರುವ ಬಗೆಯನ್ನು ಅಭ್ಯಸಿಸಿ, ನಾವೀಗ ನೋಡುತ್ತಿರುವ ‘ಗ್ಲೈಡರ್’ (Glider) ಗಳನ್ನು ವಿನ್ಯಾಸಗೊಳಿಸಿದ. ಈ ‘ಗ್ಲೈಡರ್’ಗಳು ಹಾರಲು ಇಂಧನವೇ ಬೇಕಾಗಿಲ್ಲ… ಮನುಷ್ಯನನ್ನು ಹೊತ್ತುಕೊಂಡು ಹಾರಬಲ್ಲವು! ಲಿಲಿಯೆಂಟಾಲ್ 1890ರಲ್ಲಿ ಅಭಿವೃದ್ದಿಪಡಿಸಿ, ಹಾರಿಸಿದ ಮೊದಲ ಗ್ಲೈಡರ್ 230 ಮೀಟರ್‌ಗಳಷ್ಟು ದೂರಕ್ಕೆ ಹಾರಿತ್ತು. ದುರಂತವೆಂದರೆ 1896ರಲ್ಲಿ ‘ಗ್ಲೈಡರ್’ ಅನ್ನು ಹಾರಿಸುವಾಗಲೇ ಅದು ಅಪಘಾತಕ್ಕೀಡಾಗಿ, ಲಿಲಿಯೆಂಟಾಲ್ ಅಸು ನೀಗಿದ…!

ದೋಣಿಗಳಿಗೆ ಪೆಂಗ್ವಿನ್ ಬಲ

ಹಕ್ಕಿಗಳ ಹಾರಾಟ ‘ವಿಮಾನಯಾನ’ಕ್ಕೆ ಸ್ಫೂರ್ತಿಯಾದರೆ, ‘ಪೆಂಗ್ವಿನ್’ಗಳು ‘ಈಜುವ ಪರಿ’ ಇನ್ನು ಮುಂದೆ ದೋಣಿಗಳ ಚಲನೆಯ ವಿಧಾನವನ್ನು ಬದಲಿಸಲಿದೆ. ಮೋಟರು ಚಾಲಿತ ದೋಣಿಗಳಲ್ಲಿ ಮೋಟರು ತಿರುಗಿದಾಗ ಚಕ್ರಾಕಾರವಾಗಿ ಸುತ್ತುವ ಬಲ, ಚಲನ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.  ಆದರೆ ಪೆಂಗ್ವಿನ್‌ಗಳು ಈಜುವ ರೀತಿ ಸಂಪೂರ್ಣ ಭಿನ್ನವಾಗಿದೆ. ಅವು ರೆಕ್ಕೆಗಳನ್ನು ಮೇಲೆ ಕೆಳಗೆ ಬಡಿದು ಚಲಿಸುತ್ತವೆ. ಈ ಬಗೆಯ ಚಲನೆ ನೀಡುವ ಬಲವನ್ನು ಪರೀಕ್ಷಿಸುತ್ತಿರುವ ವಿಜ್ಞಾನಿಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದಾರೆ. ಆದರೆ ಈ ವಿಧಾನ ನಿಜಕ್ಕೂ ಸಮರ್ಥವಾದುದಾಗಿದೆ ಎಂಬ ಆಶಾಭಾವನೆಯಂತೂ ಇದೆ.

ಕರುಳು ಶೋಧಕ ಸಾಧನ,  ಎರೆ ಹುಳು ಕಾರಣ

ಎರೆಹುಳು ತೆವಳುವ ಪರಿಯನ್ನು ಜರ್ಮನಿಯ ಸಂಶೋಧಕರು ವಿಶೇಷವಾಗಿ ಅಧ್ಯಯನ ಮಾಡುತ್ತಿದ್ದಾರೆ. ಅದರ ಚಲನೆಯ ಗುಣವನ್ನು ಮಿನಿ ರೋಬೋನಲ್ಲಿ ಅಳವಡಿಸಿ, ಆ ರೋಬೋವನ್ನು ಮನುಷ್ಯನ ಕರುಳಿನಲ್ಲಿ ಸರಾಗವಾಗಿ ಓಡಾಡುವಂತೆ ಮಾಡಿ, ಕರುಳಿನಲ್ಲಿ ಇರಬಹುದಾದ ಸಮಸ್ಯೆಗಳನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯ ಎಂಬುದು ಅವರ ಕನಸು.

ಮುಳ್ಳಿನಂತಹ ಬ್ಯಾಗು ಮುಚ್ಚುವ ಸಾಧನ

ನೀವು ಸ್ಟೇಷನರಿ ಅಂಗಡಿಗೆ ಹೋಗಿ ಅಲ್ಲಿ ಒಂದು ಫೈಲ್ ಕವರನ್ನು ಖರೀದಿಸುತ್ತೀರಿ. ಆ ಫೈಲ್ ಕವರ್ ಅನ್ನು ಮುಚ್ಚಲು ಕಪ್ಪು ಅಥವಾ ಬಿಳಿ ಬಣ್ಣದ ಪುಟ್ಟ ಚೌಕಾಕಾರದ ಒಂದೋ, ಎರಡೋ ಪಟ್ಟಿಗಳಿರುತ್ತವೆ. ಈ ಪಟ್ಟಿಗಳ ಮೇಲೆ ಸಣ್ಣ ಹುಕ್‌ಗಳಂತಹ ರಚನೆಗಳಿರುತ್ತವೆ.  ಇವುಗಳಿಂದ ‘ಚರ್ರಕ್’ ಎಂಬ ಶಬ್ದ ಬಂದು, ಫೈಲು ಕವರ್ ಸುರಕ್ಷಿತವಾಗಿ ಮುಚ್ಚಿಕೊಳ್ಳುತ್ತದೆ. ನಾವು ಮತ್ತೆ ಬಲ ಹಾಕಿ ಎಳೆಯದಿದ್ದರೆ ಅದು ಬರುವುದಿಲ್ಲ. ಇಂತಹ ಪಟ್ಟಿಗಳಿಗೆ ‘ವೆಲ್ಕ್ರೋ’ (Velcro) ಎನ್ನುತ್ತಾರೆ.

ಈ ಬಗೆಯ ವೆಲ್ಕ್ರೋ ಪಟ್ಟಿಗಳು ಈಗ ಅತ್ಯಂತ ಸಾಮಾನ್ಯವಾಗಿ ಹೋಗಿವೆ. ಬ್ಯಾಗುಗಳು, ಚೀಲಗಳು, ವ್ಯಾಲೆಟ್‌ಗಳು, ಪ್ಯಾಕೆಟ್‌ಗಳು, ಶೂಗಳು ಹೀಗೆ ಎಲ್ಲೆಂದರಲ್ಲಿ ಅವುಗಳ ಬಳಕೆಯಿಂದಾಗಿ, ದಾರದಿಂದ (ಅಥವಾ ಲೇಸ್‌ನಿಂದ) ಗಂಟು ಕಟ್ಟುವ, ಅದನ್ನು ಬಿಚ್ಚುವ ಕಷ್ಟಗಳು ತಪ್ಪಿಹೋಗಿವೆ. ಈ ಶೋಧನೆಗೆ ಕಾರಣ ಒಂದು ಬಗೆಯ ನೈಸರ್ಗಿಕ ‘ಮುಳ್ಳು…!’ 20ನೆಯ ಶತಮಾನದ ಮಧ್ಯದಲ್ಲಿ ಸ್ವಿಸ್ ವಿಜ್ಞಾನಿ ಜಾರ್ಜಸ್ ಡಿ ಮೆಸ್ಟ್ರಲ್ ಗುಡ್ಡಗಾಡು ಪ್ರದೇಶದಲ್ಲಿ ನಡೆದು ಹೋಗುತ್ತಿದ್ದಾಗ ಒಂದು ಬಗೆಯ ಮುಳ್ಳುಗಳು ಅವನ ಬಟ್ಟೆಗೆ ಬಹಳ ದೃಢವಾಗಿ ಅಂಟಿಕೊಂಡವು. ಆತ ಅವುಗಳ ವಿನ್ಯಾಸವನ್ನು ಅಧ್ಯಯನ ಮಾಡಿ ‘ವೆಲ್ಕ್ರೋ’ ವನ್ನು ರೂಪಿಸಿದ.

ನೀರಿಗೆ ಬಿದ್ದರೂ ಒದ್ದೆಯಾಗದ ಜೇಡ

ಮೀನು ಹಿಡಿಯುವ ‘ಫಿಶಿಂಗ್ ಸ್ಪೈಡರ್’ (Fishing spider), ನೀರಿನಲ್ಲಿ ಮುಳುಗೆದ್ದು ಬಂದರೂ ಅದರ ಮೈ ಮಾತ್ರ ಒದ್ದೆಯಾಗುವುದಿಲ್ಲ ಎಂಬ ಅಂಶವನ್ನು ಬಯೋನಿಕ್ಸ್ ಎಂಜಿನಿಯರ್‌ಗಳು ಗಮನಿಸಿ, ನೀರಿನಲ್ಲಿ ಡೈವ್ ಮಾಡುವುದಕ್ಕಾಗಿ ಒದ್ದೆಯಾಗದ ಡೈವಿಂಗ್ ಸೂಟ್‌ಗಳನ್ನು ಅಭಿವೃದ್ದಿ ಪಡಿಸುವತ್ತ ಚಿಂತನೆ ನಡೆಸುತ್ತಿದ್ದಾರೆ. ಈ ಜೇಡದ ಮೈಮೇಲೆ ಸೂಕ್ಷ್ಮವಾದ ರೋಮಗಳಿದ್ದು, ಇವು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಹಾಗಾಗಿ ಇದು ನೀರಿನಲ್ಲಿ ಮುಳುಗಿದಾಗ ಇದರ ಶರೀರದ ಸುತ್ತಲೂ ಗಾಳಿಯ ಪದರ ಆವರಿಸಿದಂತಾಗಿ, ನೀರಿನಿಂದ ಸಂರಕ್ಷಣೆ ಸಿಗುತ್ತದಷ್ಟೇ ಅಲ್ಲ, ಅದರ ಮೈ ಒದ್ದೆಯಾಗುವುದಿಲ್ಲವಂತೆ. ಬೋಟುಗಳ ಹೊರ ಮೈಯನ್ನು ಕೂಡ ಇದೇ ರೀತಿಯಾಗಿ ನೀರಿನ ಸಂಪರ್ಕಕ್ಕೆ ಬರದಂತೆ ನಿರ್ಬಂಧಿಸಬಹುದೇ ಎಂಬ ಬಗ್ಗೆ ಕೂಡ ಚಿಂತನೆ ನಡೆದಿದೆ.

ಕಟ್ಟಡದ ದೃಢತೆಗೆ ಜೇಡನ ಬಲೆಯ ಕಾಣಿಕೆ

ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿರುವ ಎಂಜಿನಿಯರ್‌ಗಳಿಗೆ ಇಂದು ಅನೇಕ ಸವಾಲುಗಳಿವೆ. ಕಟ್ಟಡ ಬಲಿಷ್ಠವಾಗಿರಬೇಕು, ಆದರೆ ಅದಕ್ಕೆ ಬಳಸುವ ಸಾಮಗ್ರಿಗಳು ಹಗುರವಾಗಿರಬೇಕು,  ನಾಜೂಕಾಗಿರಬೇಕು ಎಂಬುವು ಮುಖ್ಯವಾದ ಸವಾಲುಗಳು ಇದಕ್ಕಾಗಿ ವಿಜ್ಞಾನಿಗಳು ಹೊರಳಿರುವುದು ‘ಜೇಡರ ಬಲೆ’ಯ ಕಡೆಗೆ. ಜೇಡನ ರೇಷ್ಮೆ ಎಳೆಗಳು ಬಹಳ ಬಲಿಷ್ಠ ಆಗಿರುವುದಲ್ಲದೆ, ಹಗುರ ಕೂಡ ಆಗಿರುತ್ತವೆ. ಈಗಾಗಲೇ ಈ ನಿಟ್ಟಿನಲ್ಲಿ ಸಂಶೋಧನೆಗಳು ಸಾಗಿದ್ದು, ‘ಗೊಸ್ಸಾಮರ್ (Gossamer)’ ಎಳೆಗಳನ್ನು ಬಳಸಿ ಜರ್ಮನಿಯ ಮ್ಯುನಿಕ್‌ನ ಒಲಿಂಪಿಕ್ ಗ್ರಾಮದ ಸ್ಟೇಡಿಯಮ್‌ನ ಛತ್ತನ್ನು ನಿರ್ಮಿಸಲಾಗಿದೆ. ಅಲ್ಲದೆ ಜೇಡನ ರೇಷ್ಮೆಯನ್ನು ಕೃತಕವಾಗಿ ಪ್ರಯೋಗ ಶಾಲೆಯಲ್ಲಿ ತಯಾರಿಸುವ ಪ್ರಯತ್ನಗಳಲ್ಲಿ ಕೂಡ ವಿಜ್ಞಾನಿಗಳು ನಿರತರಾಗಿದ್ದಾರೆ.

ಕೀಟಗಳ ಕಾಲುಗಳಿರುವ ರೋಬೋ (Robot)

ಮಂಗಳನ ಅಂಗಳವನ್ನು ಶೋಧಿಸಲು ಅಮೆರಿಕಾದ ನಾಸಾ ಸಂಸ್ಥೆ ‘ಪಾಥ್ ಫೈಂಡರ್’ ಎಂಬ ರೋಬೋವನ್ನು ಕಳುಹಿಸಿದ್ದು ಬಹುಶಃ ನಿಮಗೆಲ್ಲ ನೆನಪಿರ ಬಹುದು. ಮಂಗಳನ ಮೇಲ್ಮೈ ಮೇಲೆ ಓಡಾಡಲು ಆ ರೋಬೋಗೆ ಆರು ಗಾಲಿಗಳನ್ನು ಜೋಡಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಮಂಗಳನ ನೆಲ ಉಬ್ಬು ತಗ್ಗುಗಳಿಂದ, ಕಲ್ಲು ಬಂಡೆಗಳಿಂದ ಕೂಡಿದ್ದರಿಂದ ಅದಕ್ಕೆ ಅಲ್ಲಿ ಸರಾಗವಾಗಿ ಚಲಿಸಲು ಬಹಳ ತೊಂದರೆಯಾಯಿತು. ಅದಕ್ಕಾಗಿ ವಿಜ್ಞಾನಿಗಳು ಈ ತೊಂದರೆಯನ್ನು ಸರಿಪಡಿಸಲು ಯೋಚಿಸತೊಡಗಿದರು. ಆಗ ಅವರಿಗೆ ಹೊಳೆದ ಪರಿಹಾರವೆಂದರೆ ‘ಕೀಟಗಳ ಕಾಲು’ಗಳು. ಅದರಲ್ಲೂ ವಿಶೇಷವಾಗಿ ಜಿರಲೆಯ ಕಾಲುಗಳು…!

ಕೀಟಗಳ ಕಾಲುಗಳು ಕೀಲುಗಳಿಂದಾಗಿದ್ದು, ಅವುಗಳನ್ನು ಬಳಸಿ ನಿಧಾನವಾಗಿ ಎಂತಹ ಉಬ್ಬುತಗ್ಗಿನ ನೆಲದ ಮೇಲೂ ಯಾವ ತೊಂದರೆಯೂ ಇಲ್ಲದೆ ಸಾಗಬಹುದು. ‘ಜಿರಲೆ’ಯ ಪ್ರತಿ ಕಾಲೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ, ಅದೇ ತತ್ವವನ್ನೇ ಮುಂಬರುವ ರೋಬೋಗಳ ತಯಾರಿಕೆಯಲ್ಲಿ ಬಳಸುವ ಉದ್ದೇಶ ವಿಜ್ಞಾನಿಗಳಿಗಿದೆ.

ಮಸೂರಗಳಿಗೆ ನೊಣಗಳ ಕಣ್ಣೇ ಆಧಾರ

ನೊಣಗಳ ಕಣ್ಣುಗಳೆಂದರೆ ಅವು ಸಂಯುಕ್ತ ಕಣ್ಣುಗಳೆಂದು ನಿಮಗೆ ಗೊತ್ತು. ಅವು ದೃಶ್ಯವನ್ನು ವೀಕ್ಷಿಸುವಲ್ಲಿ ಬಹಳ ಸಮರ್ಥವಾಗಿವೆ. ಅದಕ್ಕೆಂದೇ ಜಪಾನಿನ ವಿಜ್ಞಾನಿಗಳು ನೊಣಗಳ ಸಂಯುಕ್ತ ಕಣ್ಣಿನಲ್ಲಿರುವ ಸೂಕ್ಷ್ಮ ಕಣ್ಣುಗಳನ್ನು ಹೋಲುವ ಮಸೂರಗಳನ್ನು ತಯಾರಿಸಿ, ಅವುಗಳನ್ನು ಒಂದು ದೊಡ್ಡ ಅರೆಗೋಲ (Hemisphere)ದ ಮೇಲೆ ಜೋಡಿಸಿದ್ದಾರೆ. ಈ ಜೋಡಣೆಯಿಂದಾಗಿ ಸಂಪೂರ್ಣವಾಗಿ 360oಗಳಷ್ಟು ವ್ಯಾಪ್ತಿಯಲ್ಲಿನ ದೃಶ್ಯ ಅಥವಾ ಚಟುವಟಿಕೆಗಳನ್ನು ಗಮನಿಸಬಹುದಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಿಸಲಾಗಿರುವ ಕ್ಷ-ಕಿರಣ ಸಂವೇದಕಕ್ಕೆ (X‑Ray sensor) ಈ ಅರೆಗೋಲದಿಂದ ಅತ್ಯಂತ ವಿಸ್ತಾರವಾದ ದೃಶ್ಯಗಳು ಲಭ್ಯವಾಗುತ್ತವೆ.

ಕೃತಕ ದ್ಯುತಿ ಸಂಶ್ಲೇಷಣಾ ಕ್ರಿಯೆ

ಸೂರ್ಯನ ಶಕ್ತಿಯನ್ನು ಸಸ್ಯಗಳು ಬಳಸಿಕೊಂಡು ನೈಸರ್ಗಿಕವಾದ, ಶುದ್ಧವಾದ ಆಹಾರವನ್ನು ತಯಾರಿಸಿ ಕೊಡುತ್ತವೆ. ಅವು ಅಡುಗೆ ಮಾಡುವ ವಿಧಾನವನ್ನು ನಾವು ಏಕೆ ಅನುಸರಿಸಬಾರದು ಎಂದು ವಿಜ್ಞಾನಿಗಳು ಬಹಳವೇ ಗಂಭೀರವಾಗಿ ತರ್ಕಿಸುತ್ತಿದ್ದಾರೆ.

ಈ ಸಂಶೋಧನೆಯಲ್ಲಿ ತಲ್ಲೀನರಾಗಿರುವ ಜರ್ಮನ್-ಸ್ವಿಸ್ ವಿಜ್ಞಾನಿಗಳ ತಂಡಕ್ಕೆ ಆರಂಭದ ಯಶಸ್ಸು ಸಿಕ್ಕಿದೆಯೆಂದು ಹೇಳುತ್ತಾರೆ…….! ಆದರೆ ಈ ನಿಟ್ಟಿನಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ.

ಹಲ್ಲಿಯ ಪಾದದಿಂದ ಆಂಟೆನ ಐಡಿಯಾ

ಗೋಡೆಗಳ ಮೇಲೆಲ್ಲ ಹಲ್ಲಿಗಳು ಅತಿ ಸರಾಗವಾಗಿ  ಓಡಾಡಿಕೊಂಡಿರುವುದು ನಮ್ಮೆಲ್ಲರ ಮನೆಗಳಲ್ಲಿ ಕಂಡು ಬರುವ ಸಾಮಾನ್ಯವಾದ ದೃಶ್ಯ. ಹಲ್ಲಿಯ ಪಾದಗಳ ಮೇಲೆ ಸೂಕ್ಷ್ಮವಾದ ರೋಮಗಳಿರುವುದರಿಂದ ಅದು ಅತ್ಯಂತ ನಯವಾದ ಮೇಲ್ಮೈಗಳನ್ನು ಕೂಡ ಸುಲಭವಾಗಿ ‘ಹಿಡಿದು’ಕೊಂಡು ಚಲಿಸಬಲ್ಲದು…! ಹಲ್ಲಿಯ ಪಾದಗಳನ್ನು ನೋಡಿಯೇ ವಿಜ್ಞಾನಿಗಳಿಗೆ ಪ್ರಬಲವಾದ ಅಂಟನ್ನು (Adhesive) ತಯಾರಿಸಬಹುದಲ್ಲ ಎಂಬ ಆಲೋಚನೆ ಬಂದದ್ದು. ಅಮೆರಿಕದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕಾರ್ಬನ್ ನ್ಯಾನೊಟ್ಯೂಬ್‌ಗಳನ್ನು ಬಳಸಿ, ವಿಶ್ವದ ಅತ್ಯಂತ ಪ್ರಬಲವಾದ ಅಂಟನ್ನು ಸಿದ್ಧಪಡಿಸಿದ್ದಾರೆ. ಆದರೆ ಅದು ಎಲ್ಲೆಡೆಗೆ ಬಳಕೆಗೆ ಬರುವುದಕ್ಕೂ ಮೊದಲು ಹಲ್ಲಿಯ ‘ಭದ್ರಪಾದ’ದ ಒಳಗುಟ್ಟನ್ನು ಇನ್ನೂ ಸರಿಯಾಗಿ ತಿಳಿಯಬೇಕಾಗಿದೆ. ಅಂದರೆ ಹಲ್ಲಿ ನುಣುಪು ಮೇಲ್ಮೈಗಳನ್ನೂ ಭದ್ರವಾಗಿ ಹಿಡಿಯುವಂತೆಯೇ, ಅದು ಚಲಿಸಬೇಕಾದರೆ ಮತ್ತೆ ಸರಳವಾಗಿ ಕಾಲನ್ನು ಎತ್ತಿ ಮುಂದಕ್ಕೆ ಇಡಬೇಕಲ್ಲವೆ? ಅದನ್ನು ಹಲ್ಲಿ ‘ಹೇಗೆ’ ಸಾಧಿಸುತ್ತದೆ ಎಂಬುದು ಗೊತ್ತಾಗಿಲ್ಲ…! ಅದು ಗೊತ್ತಾದ ತಕ್ಷಣವೇ ವಿಶ್ವದ ಅತ್ಯಂತ ‘ಪ್ರಬಲವಾದ ಅಂಟು’ ಎಲ್ಲೆಡೆಯೂ ಲಭ್ಯವಾಗಲಿದೆ.

ಶಾರ್ಕ್‌ಗಳಿಂದ ಶಕ್ತಿಯ ಉಳಿತಾಯ

ಅತ್ಯಂತ ಕಡಿಮೆ ಶಕ್ತಿ ಇಂಧನವನ್ನು ವ್ಯಯಿಸಿ, ಷಾರ್ಕ್‌ಗಳು ಬಹಳ ದೂರದವರೆಗೆ ಈಜಬಲ್ಲವು. ಇಂಥ ಇಂಧನ

ಉಳಿತಾಯಕ್ಕೆ ಅವುಗಳ ವಿಶಿಷ್ಟವಾದ ‘ಚರ್ಮವೇ’ ಕಾರಣ ಎಂದು ವಿಜ್ಞಾನಿಗಳು

ಹೇಳುತ್ತಾರೆ. ಅವುಗಳ ‘ಚರ್ಮ’ದ ಮೇಲಿರುವ ಸೂಕ್ಷ್ಮವಾದ ರಚನೆಗಳು ನೀರಿಗೆ ‘ಅತ್ಯಂತ ಕಡಿಮೆ’ ಪ್ರತಿರೋಧವನ್ನು ಒಡ್ಡುವುದರಿಂದ ಅವುಗಳಿಗೆ ನೀರಿನಲ್ಲಿ ಈಜಲು ಸರಳವಾಗುತ್ತದೆ. ಇಂತಹ ‘ಸೂಕ್ಷ್ಮ ರಚನೆ’ (Micro structures) ಗಳನ್ನು ಹೊಂದಿರುವ ‘ಈಜುಡುಗೆ’ ಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ದೋಣಿ, ಹಡಗುಗಳಿಗೆ ಇಂಥ ಸೂಕ್ಷ್ಮ ರಚನೆಗಳನ್ನು ಅಳವಡಿಸಬಹುದಾದ ಪ್ರಯೋಗಗಳೂ ಭರದಿಂದ ಸಾಗಿವೆ.

ಮನುಷ್ಯನ ‘ಮೆದುಳು’ ಒಂದು ಭಾರಿ ‘ಸೂಪರ್ ಕಂಪ್ಯೂಟರ್’. ಜಗತ್ತಿನ ಯಾವುದೇ ಕಂಪ್ಯೂಟರ್ ಕೂಡ ಮನುಷ್ಯನ ಮೆದುಳಿನ ಸಾಮರ್ಥ್ಯಕ್ಕೆ ಸರಿಸಾಟಿಯಲ್ಲ….! ಆದರೂ ವಿಜ್ಞಾನಿಗಳು ಮನುಷ್ಯನ ಮೆದುಳನ್ನು ಅನುಸರಿಸುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ.  ಮೆದುಳಿನಲ್ಲಿ ಒತ್ತೊತ್ತಾಗಿರುವ ನರತಂತುಗಳ ಜಾಲವನ್ನು ಅನುಕರಿಸಿ, ಅದರಂತೆಯೇ ಇಲೆಕ್ಟ್ರಾನಿಕ್ ಜಾಲವನ್ನು ವಿನ್ಯಾಸಗೊಳಿಸಿ, ಮನುಷ್ಯನಂತೆಯೇ ‘ಯೋಚನೆ’ ಮಾಡಬಲ್ಲ ಕಂಪ್ಯೂಟರ್‌ಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾರೆ…!

ಆದರೆ ಒಂದು ಎಚ್ಚರ – ಮನುಷ್ಯ, ನಿಸರ್ಗಕ್ಕೆ ವಿರುದ್ಧವಾಗಿ ಬದುಕಬಾರದು. ಅದರ ತತ್ವಗಳಿಗೆ ಅನುಗುಣವಾಗಿ ಬಾಳಿದರೆ ತೊಂದರೆ ಇಲ್ಲ.  ಪ್ರತಿಯಾಗಿ ನಡೆದುಕೊಂಡರೆ ಪರಿಣಾಮಗಳನ್ನು ನೀವೇ ಊಹಿಸಿಕೊಳ್ಳಿ.