ಭೂಸಂಪನ್ಮೂಲಗಳ ಅವನತಿ (ಬರಡಾಗುವುದು)

ಭೂ – ಸಂಪನ್ಮೂಲಗಳ ಅವನತಿ ತುಂಬಾ ತೀವ್ರವಾದ ವಿಚಾರವಾಗಿದೆ. ಭೂಮಿಯ ಅವನತಿಯನ್ನು ವ್ಯಾಖ್ಯಾನಿಸುವುದು ಕಷ್ಟದ ಸಂಗತಿಯಾದರೂ ಅದನ್ನು ಈ ರೀತಿಯಾಗಿ ಅರ್ಥೈಸಬಹುದು. ಭೂಮಿಯು ಅದರ ನಿರ್ವಹಣೆ ಹಾಗೂ ಬಳಕೆಗೆ ಅಳವಡಿಸಿಕೊಂಡ ಪದ್ಧತಿಗಳ ಫಲವಾಗಿ ತನ್ನ ಉತ್ಪಾದಕತೆಯ ಸಾಮರ್ಥ್ಯವನ್ನು ಕಡಿಮೆ ಮಾಡಿದ್ದರೆ ಅಂತಹ ಜಮೀನುಗಳು ಅವನತಿಯ ಮಾರ್ಗದಲ್ಲಿವೆ ಎಂದು ಹೇಳಬಹುದು. ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ಪ್ರತಿ ವರ್ಷವೂ ಆ ಜಮೀನಿನಿಂದ ಬರುತ್ತಿರುವ ಇಳುವರಿ ಹಾಗೂ ಉತ್ಪನ್ನದ ಪ್ರಮಾಣ ಕ್ಷೀಣಿಸುತ್ತ ಹೋಗುತ್ತಿದ್ದರೆ ಅಂತಹ ಜಮೀನುಗಳು ಅವನತಿಯ ಹಂತ ತಲುಪುತ್ತಿವೆ ಎಂದರ್ಥ. ಭೂಮಿಯ ಅವನತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ, ಆ ಭೂಮಿಯಿಂದ ರೈತರು ವಿವಿಧ ರೂಪದಲ್ಲಿ ಪಡೆಯಬಹುದಾದ ಉತ್ಪನ್ನಗಳು ಹಾಗೂ ಸೇವೆಗಳು ಸಮಯಾಂತರದಲ್ಲಿ ಕ್ಷೀಣಿಸುತ್ತಾ ಹೋಗುತ್ತಿದ್ದರೆ ಅಂತಹ ಜಮೀನುಗಳು ಅವನತಿಯ ಹಂತ ತಲುಪುತ್ತಿವೆ ಎಂದರ್ಥ. ಇಲ್ಲಿ ಉತ್ಪನ್ನಗಳೆಂದರೆ ಕೃಷಿ ಉತ್ಪಾದನೆಗಳು (ಬೆಳೆಯ ಇಳುವರಿ, ಆಹಾರ ಪದಾರ್ಥಗಳ ಉತ್ಪಾದನೆ, ದನ – ಕರುಗಳಿಗೆ ಮೇವು ಉತ್ಪಾದನೆ, ಉರುವಲಿಗೆ ಇಂಧನಗಳ ಉತ್ಪಾದನೆ, ಕಟ್ಟಿಗೆ ಇತ್ಯಾದಿಗಳ ಉತ್ಪಾದನೆ ಎಂದರ್ಥ). ಇನ್ನು ‘ಸೇವೆ’ಗಳೆಂದರೆ ಭೂಮಿಯಲ್ಲಿ ಜರುಗುವ ವಿವಿಧ ಪ್ರಕ್ರಿಯೆಗಳು ಭೂಮಿಯ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಜರುಗುವ ಜಲಚಕ್ರದ ನಿರ್ವಹಣೆ, ಜೀವರಾಶಿಯ ಉಳಿಕೆ, ಇಂಗಾಲ ಚಕ್ರ, ಭೂಮಿಯಲ್ಲಿ ಸಾವಯವ ಕ್ರಿಯೆಗಳು ನಿರಂತರವಾಗಿ ಜರುಗುವಂತೆ ಮಾಡುವುದು ಇತ್ಯಾದಿ ಎಂದರ್ಥ. ಹಲವಾರು ರೀತಿಯಲ್ಲಿ ಹಾನಿ ಅನುಭವಿಸುವಂತೆ ಮಾಡುವುದು ರೈತರಿಗೆ ಕೃಷಿಯಿಂದ ಬರುವ ಉತ್ಪನ್ನ ಕಡಿಮೆಯಾಗುತ್ತ ಕಡೆಗೊಂದು ದಿನ ಎನೂ ದೊರೆಯದೇ ಹೋಗಬಹುದು. ಹೀಗಾಗಿ ಭೂಮಿ ಸಂಪೂರ್ಣವಾಗಿ ಬರಡಾಗಿ ಅಲ್ಲಿಯ ಪರಿಸರ ಪದ್ಧತಿಗಳು, ಜೀವರಾಶಿ ಸಂಪೂರ್ಣವಾಗಿ ನಶಿಸಿ ಹೋಗಬಹುದು.

ಭೂಮಿ ಬರಡಾಗುವ ಪ್ರಕ್ರಿಯೆಯು ತುಂಬಾ ಗುಪ್ತವಾಗಿ ನಡೆಯುವ ಸಹಜವಾದ ಕ್ರಿಯೆಯಾಗಿದ್ದು ರೈತರು ಈ ಕ್ರಿಯೆಯ ವಿಷಯವಾಗಿ ತುಂಬಾ ಕೂಲಂಕುಷವಾಗಿ ವೀಕ್ಷಣೆ ಮಾಡುತ್ತಿರಬೇಕಿರುತ್ತದೆ. ಭೂಮಿಯೊಂದಿಗೆ ಹಲವಾರು ವರ್ಷಗಳಿಂದ ಜತೆಗೂಡಿ ಕೆಲಸ ಮಾಡುತ್ತಿರುವ ರೈತರು ಮಾತ್ರ ಬರಡಾಗುವ ಕ್ರಿಯೆಯನ್ನು ಸಮರ್ಥವಾಗಿ ಅರಿಯಬಲ್ಲರು. ಅವರಿಗೆ ಮಣ್ಣಿನ ಉತ್ಪಾದಕತೆಯು ಕಡಿಮೆಯಾಗುವ ಸೂಚನೆ ಪ್ರತಿ ಹಂತದಲ್ಲಿ ದೊರೆಯುತ್ತಲೇ ಇರತ್ತದೆಯಾದರೂ ಭೂಮಿಯ ಬರಡುತನ ನಿರ್ವಹಿಸುವಲ್ಲಿ ಅವರು ಮಾಡಬಹುದಾದ ನಿರ್ಧಾರಗಳು ತುಂಬಾ ಕ್ಲೀಷ್ಟವಾಗಿವೆ. ಭೂಮಿಯ ಬರಡುತನಕ್ಕೆ ಸಂಬಂಧಿಸಿದಂತೆ ಪ್ರಮುಖ ಕಾರಣಗಳಾದ ಮಳೆಯ ಪ್ರಮಾಣ, ಮಳೆಯ ಹಂಚಿಕೆ, ವಾತಾವರಣದ ವಿವಿಧ ಅಂಶಗಳು, ಉಷ್ಣತೆಯ ಪ್ರಮಾಣ ಇತ್ಯಾದಿಗಳು ಮಣ್ಣು ಹಾಗೂ ಅವುಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ವಿವಿಧ ರೀತಿಯಲ್ಲಿ ಪ್ರಭಾವ ಬೀರುತ್ತವೆ ಮತ್ತು ಅಲ್ಲಿ ಬೆಳೆಯುವ ಬೆಳೆಗಳ ಇಳುವರಿ ಹೇಗೆ ಕಡಿಮೆಯಾಗಲು ಸಾಧ್ಯ ಎಂಬ ಅಂಶಗಳಿಗೆ ಸಂಬಂಧಿಸಿದ ವಿಷಯಗಳು ರೈತರು ತಮ್ಮ ಜಮೀನುಗಳು ಯಾವ ರೀತಿಯಲ್ಲಿ ಹಾಗೂ ಎಷ್ಟರ ಮಟ್ಟಿಗೆ ಬರಡಾಗುತ್ತಿವೆ ಎಂಬುದರ ಸೂಚನೆ ನೀಡುತ್ತವೆ. ನಮ್ಮ ಅನುಭವಗಳ ಆಧಾರದ ಮೇಲೆ ಹಾಗೂ ವಿವಿಧ ರೈತ ಸಮುದಾಯದೊಂದಿಗೆ ನಿರಂತರವಾಗಿ ಕಾರ್ಯ ನಿರ್ವಹಿಸುವುದರಿಂದ ರೈತರ ಮಾತಿನಲ್ಲೇ ಹೇಳುವುದಾದರೆ ವರ್ಷದಿಂದ ವರ್ಷಕ್ಕೆ ಜಮೀನಿನ ಶಕ್ತಿ ಕುಂದುತ್ತಲಿದೆ. ಜಮೀನಿಗೆ ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕಿದಾಗಲೂ ಹಿಂದೆ ಬಂದಂತೆ ಇಳುವರಿ ಬರುತ್ತಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಹಿಂದೆ ಹಿರಿಯರು ಕೇವಲ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದರು. ನಂತರದ ದಿನಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಬಳಕೆ ಪ್ರಾರಂಭವಾಯಿತು, ಅದರಲ್ಲಿ ಮುಖ್ಯವಾಗಿ ಸಾರಜನಕ, ರಂಜಕ ಹಾಗೂ ಪೋಟ್ಯಾಶ್‌ಗಳ ಬಳಕೆ ಹಲವಾರು ವರ್ಷ ಪ್ರಚಲಿತವಾಗಿದ್ದವು. ಈಗ ಈ ಪೋಷಕಾಂಶಗಳ ಜೊತೆಗೆ ಸೂಕ್ಷ್ಮ ಪೋಷಕಾಂಶಗಳ ಬಳಕೆ ಪ್ರಾರಂಭವಾಗಿದೆ. ಇದೆಲ್ಲ ಭೂಮಿಯಲ್ಲಿ ಕುಸಿಯುತ್ತಿರುವ ಫಲವತ್ತತೆಯ ಪರಿಣಾಮ ಎಂದೇ ರೈತರು ವಿಶ್ಲೇಷಿಸುತ್ತಾರೆ. ಹೀಗೆ ಹೊಸ ಹೊಸ ಪೋಷಕಾಂಶಗಳ ಬಳಕೆ ರೈತರಿಗೆ ಹೆಚ್ಚಿನ ವೆಚ್ಚ ತರುವುದಲ್ಲದೇ ಹೆಚ್ಚಿನ ಕೃಷಿ ಸಾಲಕ್ಕೆ ರೈತರನ್ನು ನೂಕುತ್ತಲಿವೆ. ಭೂಮಿಯ ಫಲವತ್ತೆಯನ್ನು ಸಮರ್ಪಕವಾಗಿ ಕಾಯ್ದುಕೊಂಡು ಬರಲು ಸಾವಯವ ವಸ್ತುಗಳು, ಕೊಟ್ಟಿಗೆ ಗೊಬ್ಬರಗಳ ಅವಶ್ಯಕತೆಯು ರೈತರಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಅವುಗಳ ಲಭ್ಯತೆ ಇಂದು ಕಡಿಮೆಯಾಗುತ್ತಲಿರುವುದರಿಂದ ಅವುಗಳ ಬಳಕೆಯನ್ನು ಸೀಮಿತಗೊಳಿಸಿವೆ. ಈ ಎಲ್ಲ ಕಾರಣಗಳಿಂದಾಗಿ ಭೂಮಿಯ ಬರಡಾಗುವಿಕೆ ನಿರಂತರವಾಗಿ ಮುಂದುವರೆಯುತ್ತಲಿದೆ. ಇನ್ನು ಇಳಿಜಾರು ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಒಕ್ಕಲುತನ ಮಾಡುವ ರೈತರು ಆ ಜಮೀನುಗಳಲ್ಲಿರುವ ಇಳಿಜಾರು ಹಾಗೂ ಅದರಿಂದಾಗುವ ಮಣ್ಣು, ನೀರು, ಪೋಷಕಾಂಶಗಳ ಪೋಲಾಗುವಿಕೆಯ ಬಗ್ಗೆ ತಿಳಿವಳಿಕೆ ಇದ್ದರೂ, ಇದನ್ನು ಅವರು ಸಮರ್ಥವಾಗಿ ನಿರ್ವಹಿಸುವ ಯೋಜನೆ ಮಾಡಬೇಕಾಗಿದೆ.

ಇದೇ ರೀತಿಯಾಗಿ ಉಷ್ಣ ಹಾಗೂ ಅರೆಉಷ್ಣ ಪ್ರದೇಶಗಳಲ್ಲಿ ಉಷ್ಣತೆ ಹಾಗೂ ಅತಿಯಾಗಿ ಬೀಸುವ ಗಾಳಿಯಿಂದಾಗಿ ಆಗುವ ಮೇಲ್ಪದರ ಸವಕಳಿಯು ತೀವ್ರವಾಗಿದ್ದು ಅದನ್ನು ತಡೆಯಲು ಹಲವಾರು ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ಹೀಗೆ ಹಲವಾರು ರೀತಿಯಲ್ಲಿ ಭೂಮಿಯ ಅವನತಿಯ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಅವುಗಳ ಸಮರ್ಪಕ ನಿರ್ವಹಣೆಯ ವಿಚಾರ ಇಂದು ಅನಿವಾರ್ಯ. ಈ ದೆಸೆಯಲ್ಲಿ ರೈತರು ಹಾಗೂ ವಿಜ್ಞಾನಿಗಳ ನಡುವೆ ನಡೆಯುವ ವಿಚಾರವಿನಿಮಯಗಳು ತುಂಬಾ ಮಹತ್ವದ್ದಾಗಿದ್ದು ರೈತರು ನೂರಾರು ವರ್ಷಗಳಿಂದ ನಿರಂತರವಾಗಿ ನಡೆದುಬಂದ ವಿವಿಧ ಸ್ಥಾನಿಕ ಪದ್ಧತಿಗಳನ್ನು ಹಾಗೂ ತಂತ್ರಜ್ಞಾನಗಳನ್ನು ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಪರಿಣಾಮಕಾರಿ ತಂತ್ರಗಳನ್ನು ರೂಪಿಸುವಲ್ಲಿ ಸಹಕಾರಿಯಾಗುವರು.

ಉದಾಹರಣೆಗೆಂದು ನಿರೂಪಿಸುವುದಾದರೆ, ರೈತರ ಅನುಭವಗಳ ಪ್ರಕಾರ ನೀರಾವರಿಯಿರುವ ಕೃಷಿ ಜಮೀನುಗಳಲ್ಲಿ ಪ್ರತಿವರ್ಷ ಆಳವಾದ ನೇಗಿಲು ಹೊಡೆಯುವುದು ಹಾಗೂ ನಂತರ ನೀರು ಹಾಯಿಸುವುದರ ಪರಿಣಾಮವಾಗಿ ಸುಮಾರು ಒಂದು ಅಡಿಯ ಕೆಳಗೆ ಗಟ್ಟಿ ಪದರು ಆಗುತ್ತಿರುವುದರಿಂದ ನೀರು ಹಾಗೂ ಪೋಷಕಾಂಶಗಳ ಸರಬರಾಜಿನಲ್ಲಿ ತೊಂದರೆ ಕಂಡುಬರುವುದಲ್ಲದೇ ಬೆಳೆಯ ಬೇರುಗಳು ಆಳಕ್ಕೆ ತೂರುವಲ್ಲಿ ತೊಂದರೆಯಾಗುವುದು. ಹೀಗಾಗುವುದರಿಂದ ರೈತರು ಮೇಲಿಂದ ಮೇಲೆ ನೀರು ಹಾಯಿಸಬೇಕಾಗುವುದು. ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಪ್ರತಿ ವರ್ಷ ಜಮೀನಿಗೆ ಹಾಕುವ ಸಾವಯವ ಗೊಬ್ಬರಗಳ ಪ್ರಮಾಣವನ್ನು ಅವಲಂಬಿಸಿದೆ. ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳು ಲಭ್ಯವಿರುತ್ತಿರುವುದರಿಂದ ಈ ಸಮಸ್ಯೆಗಳು ಇರಲಿಲ್ಲ ಎಂಬುದು ರೈತರ ಅನುಭವದ ವಾದ. ಹಿಂದಿನ ದಿನಗಳಲ್ಲಿ ಸಾವಯವ ಗೊಬ್ಬರ ಹಾಕುವುದು, ಕುರಿ ನಿಲ್ಲಿಸುವುದು, ಬೆಳೆಯ ಪಳಯುಳಿಕೆಗಳನ್ನು ಸೇರಿಸುವುದು ಸಾಮಾನ್ಯವಾಗಿತ್ತು. ಇನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ನಂತರ ಮಳೆಯೇನಾದರೂ ಬಂದರೆ ಮುಂದೆ ಮೊಳಕೆ ಬರುವ ಪ್ರಕ್ರಿಯೆಗೆ ಅದು ಹೇಗೆ ಅಡೆತಡೆ ಮಾಡುವುದು ಮತ್ತು ಈ ಮಳೆಯು ಭೂಮಿಯ ಮೇಲ್ಪದರ ಮೇಲೆ ಯಾವ ರೀತಿಯಾದ ಗಟ್ಟಿ ಪದರನ್ನು ನಿರ್ಮಿಸುವರು ಎಂಬುದು ತಿಳಿದ ವಿಚಾರ.

ನೀರಾವರಿಯಿಂದ ಪ್ರೇರಿತವಾದ ಬರಡುತನ

ಫಲಪ್ರದವಾಗಿ ಕೃಷಿ ಮಾಡಲು ನೀರಾವರಿ ಅತೀ ಮುಖ್ಯ ಎಂಬ ವಿಷಯವು ಪ್ರತಿಯೊಬ್ಬ ರೈತನಿಗೂ ತಿಳಿದ ವಿಷಯ. ಅಸಮರ್ಪಕ ನೀರು ನಿರ್ವಹಣೆಯ ಪದ್ಧತಿಗಳಿಂದ ಜಮೀನಿನಲ್ಲಿ ಸವಳು ಹಾಗೂ ಜವಳಿನ ಸಮಸ್ಯೆಗಳು ಉದ್ಭವವಾಗುತ್ತಲಿವೆ. ನೀರಾವರಿ ಪ್ರದೇಶಗಳಲ್ಲಿ ಕೃಷಿ ಮಾಡುವ ರೈತ ಸಮುದಾಯಕ್ಕೆ ನೀರಾವರಿಯಿಂದ ಆಗುವ ವಿವಿಧ ಸಮಸ್ಯೆಗಳ ಅರಿವು ಇಲ್ಲ ಎಂದೇನಿಲ್ಲ. ನೀರಾವರಿಯಲ್ಲಿ ಬಳಸುವ ನೀರಿನ ಪ್ರಮಾಣ, ನೀರಿನ ಗುಣಮಟ್ಟ, ಜಮೀನಿನ ವಿಧ – ಬೆಳೆಯುವ ಬೆಳೆ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುವ ಸಮಸ್ಯೆಗಳು ನಿಧಾನವಾಗಿ ಬೆಳೆದು ಮುಂದೆ ಒಂದು ದಿನ ಜಮೀನನ್ನು ಕೃಷಿಗೆ ನಿರುಪಯುಕ್ತವಾಗುವಂತೆ ಮಾಡಬಹುದು. ಅತಿ ಹೆಚ್ಚು ನೀರಿನ ಬಳಕೆಯಿಂದ ಭೂಮಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಕಳೆದುಕೊಂಡು ಅಸಮರ್ಥವಾಗಬಹುದು. ಇನ್ನು ಉಷ್ಣ ಹಾಗೂ ಅರೆ ಉಷ್ಣ ಪ್ರದೇಶಗಳಲ್ಲಿ ಕೊಳವೆ ಬಾವಿಗಳಿಂದ ಭೂಜಲವನ್ನು ಮೇಲೆತ್ತಿ ನೀರಾವರಿಗೆ ಬಳಸುವುದು ಸರ್ವಸಾಮಾನ್ಯ. ಇಂತಹ ಪ್ರದೇಶಗಳಲ್ಲಿ ಭೂಮಿಯು ಬೇಗನೆ ಸವಳಾಗುವುದರಲ್ಲಿ ಈ ಭೂಜಲದ ಬಳಕೆ ಹಾಗೂ ಉಷ್ಣತೆಯ ಪ್ರಮಾಣವು ಕಾರಣವಾಗಿದೆ. ಭೂಮಿಯಲ್ಲಿ ಅಭಿವೃಧ್ಧಿಗೊಳ್ಳುವ ಈ ಸವಳು ಭೂಮಿಯ ಉತ್ಪಾದನಾ ಸಾಮರ್ಥ್ಯವನ್ನು ತುಂಬಾ ಕಡಿಮೆಗೊಳಿಸಿ ಮುಂದೊಂದು ದಿನ ನಿರುಪಯುಕ್ತವಾಗಿಸಬಹುದು.

ಇನ್ನು ಅಣೆಕಟ್ಟೆಗಳ ಕಾಲುವೆಗಳ ಮುಖಾಂತರ ನೀರು ಪಡೆಯುತ್ತಿರುವ ನೀರಾವರಿ ಪ್ರದೇಶಗಳಲ್ಲಿ ರೈತರು ನೀರಾವರಿಯನ್ನು ಯಾವುದೇ ವೈಜ್ಙಾನಿಕ ತಳಹದಿಯ ಮೇಲೆ ಮಾಡದೇ ಹೋದರೆ ಸವಳು ಹಾಗೂ ಜವಳು ಜಮೀನಿನ ತೊಂದರೆ ತಪ್ಪಿದ್ದಲ್ಲ. ಹೆಚ್ಚು ನೀರು ಕೊಡುವುದರಿಂದ ಹೆಚ್ಚಿನ ಇಳುವರಿ ಎನ್ನುವ ನಂಬಿಕೆ ತಪ್ಪು ಎನ್ನುವುದನ್ನು ರೈತರು ಮನಗಾಣಬೇಕಾಗಿದೆ. ಕಾಲುವೆಗಳ ಮೇಲ್ಭಾಗದಲ್ಲಿರುವ ರೈತರು ಸದಾ ನೀರು ಹಾಯಿಸುವುದರ ಮೂಲಕ ಕಾಲುವೆಯ ಕೆಳಭಾಗದಲ್ಲಿರುವ ರೈತರ ಜಮೀನಿಗೆ ನೀರು ಸಿಗದೇ ಇರುವುದು ಒಂದು ಸಮಸ್ಯೆಯಾದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಯಿಸಿ ಜಮೀನಿನ ಆರೋಗ್ಯ ಹದಗೆಡಿಸುವುದು ಇನ್ನೊಂದು ಸಮಸ್ಯೆ. ಕರ್ನಾಟಕದ ಎಲ್ಲ ಅಣೆಕಟ್ಟುಗಳನ್ನು ಆ ಭಾಗದಲ್ಲಿ ಸೂಕ್ತವಾದ ಬೆಳೆ ಬೆಳೆಯಲು ಬೇಕಾದ ರಕ್ಷಣಾ ನೀರಾವರಿ ಕೊಡಲು ನಿರ್ಮಿಸಿದ್ದಾದರೂ ನೀರಾವರಿ ಬಂದ ನಂತರ ಅದನ್ನು ಪಾಲಿಸಲು ಸೂಕ್ತವಾದ ಪದ್ಧತಿ ಜಾರಿಗೆ ಬರದಿರುವುದು ವಿಪರ್ಯಾಸ. ಇದಕ್ಕೆ ಬದಲಾಗಿ ನೀರಾವರಿ ಬಂದ ತಕ್ಷಣ ಪ್ರತಿಯೊಬ್ಬ ರೈತರು ಭತ್ತದ ಬೆಳೆಗೆ ಶರಣು ಹೋಗುವುದು ನಮ್ಮ ವಿವಿಧ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಂಡುಬರುವ ವಿಷಯ. ಜಮೀನು ಯಾವ ಬೆಳೆ ಬೆಳೆಯಲು ಸೂಕ್ತ ಎಂಬುದನ್ನು ಅರಿಯದೇ ನೀರಾವರಿ ಬಂದ ತಕ್ಷಣ ಭತ್ತ ಬೆಳೆಯುವುದು ಸಾಮಾನ್ಯವಾಗಿದೆ. ಈಗಾಗಲೇ ನಮ್ಮ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಸವಳು ಹಾಗೂ ಜವುಳಿನ ಸಮಸ್ಯೆಗಳು ಉಲ್ಬಣಗೊಳ್ಳುತ್ತಲಿವೆ. ಜಮೀನು ಜವಳು ಆಗಲು ಇನ್ನೊಂದು ಪ್ರಮುಖ ಕಾರಣವೆಂದರೆ, ನೀರಾವರಿ ಬಂದ ನಂತರ ಜಮೀನಿನ ಕನಿಷ್ಟ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಮಾಡದೇ ನೀರು ಹಾಯಿಸುವುದರಿಂದ, ಅಲ್ಲಿರುವ ಅಸಮಪಾತಳಿ, ಹಾಗೂ ವಿವಿಧ ದಿಕ್ಕಿನಲ್ಲಿರುವ ಜಮೀನಿನ ಇಳಿಜಾರು ನೀರಿನ ಅಸಮರ್ಪಕ ವಿತರಣೆಗೆ ಕಾರಣವಾಗಿ ಮುಂದೆ ಕ್ರಮೇಣವಾಗಿ ಜಮೀನು ಜವಳಾಗಿ – ಸವಳಾಗುವ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮುಂದೆ ಇದೇ ಸಮಸ್ಯೆ ಜ್ವಲಂತವಾಗಿ ಬೆಳೆದು ಜಮೀನು ಕೃಷಿಗೆ ಅನುಪಯುಕ್ತವಾಗುವುದು. ಯಾವ ಜಮೀನಿನಲ್ಲಿ ನೀರು ಹಾಯಿಸಿದ ನಂತರದ ಬಿಳಿ ಪಟ್ಟಿಯು ಕಾಣಲು ಪ್ರಾರಂಭಿಸುವುದು ಆ ಜಮೀನು ಸವಳಾಗಲು ಪ್ರಾರಂಭಿಸಿದ ಲಕ್ಷಣವಾಗಿರುತ್ತದೆ. ಇಂತಹ ಲಕ್ಷಣ ಬೆಳೆಸಿಕೊಂಡ ಜಮೀನುಗಳು ಮುಂದೆ ಕ್ರಮೇಣ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಗೊಳಿಸಿಕೊಂಡು ಕೊನೆಯ ಹಂತದಲ್ಲಿ ನಿರುಪಯುಕ್ತವಾಗುವುದು.

ಈ ರೀತಿಯಾಗಿ ಪ್ರಾರಂಭವಾಗುವ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಕ್ರಮಗಳನ್ನು ರೈತರು ಅನುಸರಿಸಲು ಪ್ರಾರಂಭಿಸುತ್ತಾರೆ. ಇಂತಹ ಕ್ರಮಗಳಲ್ಲಿ ಬಸಿಗಾಲುವೆ ಮಾಡುವುದು ಒಂದು ಪದ್ಧತಿ. ಇದರಿಂದಾಗಿ ಕೃಷಿಯ ಒಟ್ಟಾರೆ ಖರ್ಚು ಹೆಚ್ಚಾಗುವುದು. ಕಡಿಮೆ ಗುಣಮಟ್ಟದ ನೀರಿನ ನೀರಾವರಿಯಿಂದಾಗುವ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ನಿರ್ವಹಿಸಬಹುದೆಂಬುದು ರೈತರ ತಿಳುವಳಿಕೆ. ಆದರೆ ಕಡಿಮೆ ಗುಣಮಟ್ಟದ ನೀರು ಇರುವ ಪ್ರದೇಶಗಳಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಬೆಳೆಗಳು ಮತ್ತು ಅಂತಹ ಜಮೀನಿಗೆ ಸೂಕ್ತವಿರುವ ಬೆಳೆ ಪದ್ಧತಿಗಳನ್ನು ಅನುಸರಿಸುವುದನ್ನು ನಮ್ಮ ರೈತರು ತಿಳಿಯಬೇಕಾಗಿದೆ. ಕಡಿಮೆ ಗುಣಮಟ್ಟದ ಭೂಜಲವಿರುವ ಪ್ರದೇಶದಲ್ಲಿ ಕೇವಲ ರಕ್ಷಣಾ ನೀರಾವರಿ ನೀಡುವ ಪ್ರಯತ್ನ ಮಾತ್ರ ಮಾಡಬೇಕೇ ವಿನಃ ನಿರಂತರ ನೀರು ಹಾಯಿಸುವುದು ಸೂಕ್ತವಾದ ಪದ್ಧತಿಯಲ್ಲ.

ಇನ್ನು ಕೃಷಿ ಮಣ್ಣುಗಳಲ್ಲಿ ವಿವಿಧ ಮೂಲಗಳಿಂದ (ಭೂಜಲ, ಕೈಗಾರಿಕೆಗಳು ಬಳಸಿದ ಜಲ, ಶಹರಗಳಿಂದ ಹರಿಯುವ ಮೋರಿಗಳು ನೀರು ಇತ್ಯಾದಿ) ಭೂಮಿಗೆ ವಿವಿಧ ಪ್ರಕಾರದ ವಿಷಪೂರಿತ ಕಣಗಳು ನಿರಂತರವಾಗಿ ಸೇರಲ್ಪಡುತ್ತವೆ. ಈ ವಿಷಪೂರಿತ ವಸ್ತುಗಳು ಕೃಷಿ ಹಾಗೂ ಪರಿಸರಗಳ ಮೇಲೆ ಅಗಾಧವಾದ ಪರಿಣಾಮ ಹೊಂದಿವೆ.

ಮಣ್ಣಿನಲ್ಲಿಯ ಜೀವ

ಹಿಂದಿನ ಹಾಗೂ ಇಂದಿನ ಕೃಷಿ ಪದ್ಧತಿಗಳನ್ನು ಹೋಲಿಸಿ ನೋಡಿದರೆ ಹಲವಾರು ಬದಲಾವಣೆಗಳು ಕಾಣಸಿಗುವುದು ಸಾಮಾನ್ಯ. ಇದರಲ್ಲಿ ಮುಖ್ಯವೆಂದರೆ, ನಾವು ಬಳಸುತ್ತಿರುವ ಕೃಷಿ ಸಾಮಗ್ರಿಗಳು. ಹಿಂದಿನ ದಿನಗಳಲ್ಲಿ ಕೃಷಿಯ ಹಲವಾರು ಸಾಮಗ್ರಿಗಳು ಸ್ಥಾನಿಕವಾಗಿ ದೊರೆಯುವಂತಾಗಿದ್ದರೆ ಇಂದು ನಾವು ವಿವಿಧ ಬಾಹ್ಯ ಮೂಲಗಳಿಂದ ದೊರೆಯುವ ಕೃಷಿ ಸಾಮಗ್ರಿಗಳ ಮೇಲೆ ಅವಲಂಬಿತರಾಗಿದ್ದೇವೆ, ಇದಕ್ಕೆ ಒಂದು ಸೂಕ್ತವಾದ ಉದಾಹರಣೆ ಎಂದರೆ, ನಾವು ಇಂದು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು ಹಿಂದಿನ ಕಾಲದಲ್ಲಿ ಲಭ್ಯವಿರದ ಈ ರಾಸಾಯನಿಕ ಗೊಬ್ಬರಗಳ ಬದಲಾಗಿ ನಮ್ಮ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಮೂಲದ ಗೊಬ್ಬರಗಳನ್ನು ಬಳಸುತ್ತಿದ್ದರು. ಈ ಪದ್ಧತಿಗಳು ಇಂದು ಕ್ರಮೇಣವಾಗಿ ಕ್ಷೀಣಿಸಿ ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತವಾಗಿರುವುದು ನಮಗೆಲ್ಲ ತಿಳಿದ ವಿಷಯ. ಇಂತಹ ಬದಲಾವಣೆಗಳಿಗೆ ಕಾರಣಗಳ ಪಟ್ಟಿ ಮಾಡಿದರೆ ಅವುಗಳಿಗೆ ಅಂತ್ಯವೇ ಇರದಿರಬಹುದು. ಹೀಗೆ ಸಾವಯವ ಗೊಬ್ಬರಗಳ ಅತಿ ಕಡಿಮೆ ಬಳಕೆ, ರಾಸಾಯನಿಕ ಗೊಬ್ಬರಗಳ ಅತಿ ಹೆಚ್ಚು ಬಳಕೆಯಿಂದಾಗಿ ಜಮೀನು ತನ್ನ ಮೂಲ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಹಂತ ತಲುಪಿದೆ. ಭೂಮಿಯ ಆರೋಗ್ಯ ವಿಚಾರವಾಗಿ ನಮ್ಮ ಹಿರಿಯ ರೈತರೊಂದಿಗೆ ವಿವರವಾಗಿ ಚರ್ಚಿಸಿದರೆ ಹೊರಬರುವ ಆರೋಗ್ಯವಂತ ಜಮೀನುಗಳ ವಿವರಣೆ ತುಂಬಾ ವಿಶಿಷ್ಟ. ಅಂದಿನ ಆರೋಗ್ಯವಂತ ಜಮೀನುಗಳಲ್ಲಿ ವಿವಿಧ ಪ್ರಕಾರ ಜೀವಕೋಟಿ ಕ್ರಿಯಾಶೀಲವಾಗಿತ್ತು. ಎಲ್ಲಿ ನೋಡಿದರಲ್ಲಿ ಎರೆ ಹುಳುಗಳು ಜಮೀನಿನಲ್ಲಿ ಕಾಣ ಸಿಗುತ್ತಿದ್ದವು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಜಮೀನಿನಲ್ಲಿ ಉಪಯುಕ್ತವಾದ ಯಾವ ಜೀವಸಂಕುಲ ಇಂದು ಕಾಣಸಿಗುವುದಿಲ್ಲ. ಇದಕ್ಕೆಲ್ಲಾ ನಾವು ಬಳಸುತ್ತಿರುವ ರಾಸಾಯನಿಕ ಗೊಬ್ಬರಗಳು, ಕೀಟ ನಿಯಂತ್ರಣಕ್ಕೆ ಬಳಸುವ ರಾಸಾಯನಿಕ ಕೀಟನಾಶಕಗಳು ಮತ್ತು ಅವುಗಳ ಅಸಮರ್ಪಕ ಬಳಕೆಯೇ ಕಾರಣ. ಹಲವು ವರ್ಷಗಳಿಂದ ಈ ರಾಸಾಯನಿಕಗಳ ಬಳಕೆ ನಿರಂತರವಾಗಿ ನಡೆಯುತ್ತಿರುವುದರಿಂದ ಜಮೀನು ಬರಡಾಗುತ್ತಲಿದೆ ಎಂಬ ಸತ್ಯ ಇಂದು ರೈತರಿಗೆ ತಿಳಿಯಲಾರದ ವಿಷಯವೇನಲ್ಲ. ಹೀಗೆ ಬರಡಾಗುತ್ತಿರುವ ಕೃಷಿ ಜಮೀನು ರೈತರು ಪಡೆಯುವ ಉತ್ಪನ್ನವನ್ನು ಕಡಿಮೆಗೊಳಿಸಿ ಅವರ ಜೀವನ ಕ್ರಮಗಳನ್ನು ತೊಂದರೆಗೀಡುಮಾಡಿದೆ. ಈ ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದಾಗಿ ಪರಿಸರದ ಮಾಲಿನ್ಯ, ಪರಿಸರದ ಗುಣಮಟ್ಟದಲ್ಲಿ ಕುಸಿತ, ನಿರಂತರವಾಗಿ ನಡೆಯುತ್ತಲೇ ಇದೆ. ಇವೆಲ್ಲಕ್ಕೂ ನಾವು ಮಂಗಳ ಹಾಡದಿದ್ದಲ್ಲಿ ಮುಂದೊಂದು ದಿನ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಬಹುದು. ಆಗ ಗುಣಮಟ್ಟ ಕಳೆದುಕೊಂಡ ಈ ಜಮೀನನ್ನು ಪುನಃಶ್ಚೇತನಗೊಳಿಸುವುದು ಸರಳವಾದ ವಿಚಾರವೇನಲ್ಲ. ರೈತರು – ಕೃಷಿ ವಿಜ್ಞಾನಿಗಳು ಈ ದೆಸೆಯಲ್ಲಿ ಇಂದು ಚಿಂತನೆ ಮಾಡಿ, ಕಾರ್ಯತಂತ್ರವನ್ನು ರೂಪಿಸಿ ಅದನ್ನು ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.

ಜಮೀನು ಬರಡಾಗಲು ಕಾರಣವಾಗುವ ಒಕ್ಕಲುತನ ಪದ್ಧತಿಗಳು

ನಾವು ಉಳುವ ಕೃಷಿ ಜಮೀನುಗಳು ನಿರಂತರವಾಗಿ ಉತ್ತಮ ಫಸಲು ನೀಡಬೇಕಾದರೆ ಅವುಗಳನ್ನು ಆರೋಗ್ಯವಂತ ವಾಗಿಡುವುದು ಪ್ರಮುಖ ವಿಚಾರ. ನಾವು ನಮ್ಮ ಜಮೀನನ್ನು ಬಳಸುವ ಹಾಗೂ ನಿರ್ವಹಿಸುವ ಪದ್ಧತಿಗಳು ಆ ಜಮೀನುಗಳ ಉತ್ಪಾದಕ ಶಕ್ತಿಯನ್ನು ನಿರ್ಧರಿಸುತ್ತವೆಯಲ್ಲದೇ, ಜಮೀನುಗಳು ಪರಿಸರಾತ್ಮಕ ಕಾರ್ಯ ನಿರ್ವಹಿಸುವಲ್ಲಿ ಸಹಕಾರಿಯಾಗುತ್ತವೆ. ನಮ್ಮಲ್ಲಿ ಲಭ್ಯವಿರುವ ಉಳಲು ಯೋಗ್ಯವಿರುವ ಜಮೀನುಗಳಲ್ಲಿ ಅನುಸರಿಸುತ್ತಿರುವ ವಿವಿಧ ಬೇಸಾಯ ಪದ್ಧತಿಗಳು ಭೂಮಿ ಹಾಗೂ ಪರಿಸರದ ಉತ್ತಮ ಆರೋಗ್ಯ ಕಾಯ್ದುಕೊಂಡು ಬರುವಲ್ಲಿ ಸಹಕಾರಿಯಾಗುತ್ತವೆ. ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಕೃಷಿಯಲ್ಲಿ ತೊಡಗಿರುವುದರಿಂದ ಈ ಎಲ್ಲಾ ರೈತರು ಯಾವ ರೀತಿಯ ಕೃಷಿ ಪದ್ಧತಿಗಳನ್ನು ಅಳವಡಿಸುತ್ತಾರೆ ಎಂಬುದು ಒಟ್ಟಾರೆ ಜಮೀನಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಹೀಗಿರುವುದರಿಂದ ಬಹುಸಂಖ್ಯೆಯಲ್ಲಿರುವ ಸಣ್ಣ ರೈತರು ಭೂಮಿ ಹಾಗೂ ಪರಿಸರದ ಸಮರ್ಪಕ ನಿರ್ವಹಣೆಯ ಹಲವಾರು ನಿರ್ಧಾರಗಳಲ್ಲಿ ತಮ್ಮದೇ ಆದ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಈ ರೈತರು ತಾವು ಅನುಸರಿಸುತ್ತಿರುವ ವಿವಿಧ ಪದ್ಧತಿಗಳ ವೈಜ್ಞಾನಿಕ ವಿಚಾರವನ್ನು ಸಮರ್ಪಕವಾಗಿ ತಿಳಿದಿರುವುದು ಅಗತ್ಯ. ಇದಲ್ಲದೇ ಅವರು ಒಂದು ವೇಳೆ ಪರಿಸರಾತ್ಮಕವಲ್ಲದ ಬೇಸಾಯ ತಂತ್ರಜ್ಞಾನಗಳನ್ನು ಅನುಸರಿಸುತ್ತಿದ್ದರೆ, ಆ ಪದ್ಧತಿಗಳು ಹೇಗೆ ವಿವಿಧ ಸಂಪನ್ಮೂಲಗಳ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು ಎಂಬುದು ಮುಖ್ಯ.

ಆದ್ದರಿಂದ ಸಣ್ಣ ರೈತರು ತಮ್ಮ ಅವಶ್ಯಕತೆಗಳನ್ನು ಕೃಷಿಯಿಂದ ನೀಗಿಸಿಕೊಳ್ಳುವ ಮಾರ್ಗದಲ್ಲಿ ಮಣ್ಣು ಅರೋಗ್ಯವಾದ ಸಂಪೂರ್ಣ ಕಾಳಜಿ ವಹಿಸುವುದು ಅವಶ್ಯಕವಾಗಿದೆ. ಅಂದಿನಿಂದ ಇಂದಿನವರೆಗೆ ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಕೃಷಿ ಪದ್ಧತಿಗಳನ್ನು ನಮ್ಮ ರೈತರು ಪಾಲಿಸಿಕೊಂಡು ಬಂದ್ದಿದ್ದರೂ ಅದರಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಹಿಂದೆ ಹಾಗೂ ಇಂದು ಬಳಸುತ್ತಿರುವ ಬೆಳೆ ತಳಿಗಳಿಲ್ಲಿ ತೀವ್ರವಾದ ಬದಲಾವಣೆಗಳಾಗಿವೆ. ಇದರೊಂದಿಗೆ ಬೇಸಾಯ ಪದ್ಧತಿಗಳು, ಬೆಳೆಯುವ ಪದ್ಧತಿಗಳು ಬದಲಾಗಿವೆ. ಈ ಬದಲಾವಣೆಗಳು ಆ ಪ್ರದೇಶದಲ್ಲಿ ಬರುವ ಮಳೆಯ ಪ್ರಮಾಣ, ಮಣ್ಣಿನ ಪ್ರಕಾರಗಳ ಸ್ಥಾನಿಕ ಅವಶ್ಯಕತೆಗಳ ಆಧಾರದ ಮೇಲೆ ಬದಲಾಗುತ್ತ ಬಂದಿವೆ. ಜನರ ಜೀವನ ಕ್ರಮಗಳನ್ನು ಸುಧಾರಿಸಲು ಹಲವಾರು ರೀತಿಯ ಕೃಷಿ ಯೋಜನೆಗಳು ಸರಕಾರದಿಂದ ಅನುಷ್ಠಾನಗೊಳ್ಳುತ್ತಿವೆ. ಈ ಎಲ್ಲಾ ಕ್ರಮಗಳಿಂದ ಕೃಷಿಯಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಈ ಪದ್ಧತಿಗಳು ಆ ಪ್ರದೇಶದ ಮಣ್ಣಿನ ಆರೋಗ್ಯ ಹಾಗೂ ಪರಿಸರದ ಗುಣಮಟ್ಟದ ಕುಸಿತ ಹೇಗೆ ಆಗುತ್ತಲಿದೆ ಎಂಬುದರ ಅರಿವು ರೈತರಿಗೆ ಇಲ್ಲವೆಂದಲ್ಲ. ಕುಸಿಯುತ್ತಿರುವ ಜಮೀನಿನ ಆರೋಗ್ಯವನ್ನು ಸುಧಾರಿಸಬಹುದಾದ ಕೃಷಿ ಪದ್ಧತಿಗಳನ್ನು ರೈತರು ಅನುಸರಿಸಬಹುದಾಗಿದೆ. ಇದರೊಂದಿಗೆ ಕೃಷಿ ಜಮೀನ್ನು ಬರಡುಗೊಳಿಸುವ ಪದ್ಧತಿಗಳನ್ನು ಕಡಿಮೆಗೊಳಿಸಿ ಮುಂದೊಂದು ದಿನ ಕೈಬಿಡಬೇಕಾಗಿದೆ. ಇದು ಕೃಷಿ ಪದ್ಧತಿಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ವೈಜ್ಞಾನಿಕವಾಗಿ ಬಳಸುವ ಪರಿಸ್ಥಿತಿಯನ್ನು ನಿರ್ಮಿಸುವಲ್ಲಿ ಸಹಕಾರಿಯಾಗುವುದು. ಕೃಷಿ ಭೂಮಿಯ ಬರಡುತನವನ್ನು ಹೆಚ್ಚಿಸಬಹುದಾದ ಪದ್ಧತಿಗಳನ್ನು ಇಲ್ಲಿ ವಿವರಿಸಲಾಗಿದೆ.

ಉಳುಮೆ ಪದ್ಧತಿಗಳು

ನಮಗೆ ತಿಳಿದಂತೆ ಉಳುಮೆ ಎಂಬುದು ಜಮೀನ್ನು ಬಿತ್ತನೆಗಾಗಿ ತಯಾರಿ ಮಾಡಿ ಅಲ್ಲಿ ಬಿತ್ತನೆ ಮಾಡಿದ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆದು ಉತ್ತಮವಾದ ಬೆಳೆ ಬರುವಲ್ಲಿ ಸಹಾಯ ಮಾಡುವ ಪ್ರಮುಖ ಬೇಸಾಯ ಪದ್ಧತಿಯಾಗಿದೆ. ರೈತರು ಅರ್ಥೈಸುವಂತೆ ಉತ್ತಮವಾದ ಉಳುಮೆ ಪದ್ಧತಿಗಳು ಕೃಷಿ ಉತ್ಪಾದನೆಯಲ್ಲಿ ತುಂಬಾ ಪ್ರಮುಖವಾದ ಪಾತ್ರ ವಹಿಸುತ್ತವೆ. ಈ ಉಳುಮೆ ಪದ್ಧತಿಗಳು ಬಿತ್ತನೆ ಮಾಡುವಾಗ ಬೀಜವನ್ನು ಸೂಕ್ತವಾದ ರೀತಿಯಲ್ಲಿ ಇರಿಸಲು ಸಹಾಯ ಮಾಡುವುದರ ಜೊತೆಗೆ ಅದರ ಮೊಳಕೆಗೆ ಸೂಕ್ತವಾದಂತಹ ವಾತಾವರಣ ಜಮೀನಿನಲ್ಲಿ ಸಿಗುವ ಹಾಗೆ ವ್ಯವಸ್ಥೆ ಮಾಡುತ್ತವೆ. ಇನ್ನು ವಿವಿಧ ಉಳುಮೆ ಪದ್ಧತಿಗಳು ಜಮೀನಿನಲ್ಲಿ ಬರಬಹುದಾದ ವಿವಿಧ ಪ್ರಕಾರದ ಕಳೆಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿಡಲು ಸಹಾಯ ಮಾಡುತ್ತವೆ. ಈ ಕಳೆಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಅವು ಬೆಳೆಯನ್ನು ಸಂಪೂರ್ಣವಾಗಿ ನಾಶವಾಗುವಂತೆ ಮಾಡಲೂಬಹುದು. ಕಳೆಗಳು ಭೂಮಿಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಮುಂದೆ ಆ ಪೋಷಕಾಂಶಗಳು ಬೆಳೆಗಳಿಗೆ ಸಿಗದ ಹಾಗೆ ಮಾಡುತ್ತವೆ. ವಿವಿಧ ಪ್ರಕಾರದ ಕೀಟ ಹಾಗೂ ರೋಗಜಂತುಗಳಿಗೆ ಈ ಕಳೆಗಳು ಬೆಳೆಯಲು ಸಹಾಯ ಮಾಡುವ ಮೂಲಕ ವಿವಿಧ ರೋಗ – ರುಜಿನಗಳು ಮುಂದೆ ಬೆಳೆಗಳಿಗೆ ಬರುವಂತೆ ಮಾಡುತ್ತವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಉಳುಮೆ ಪದ್ಧತಿಗಳು ಸಮರ್ಪಕವಾಗಿ ನಿರ್ವಹಿಸಬಲ್ಲವು. ಉಳುಮೆ ಪದ್ಧತಿಗಳು ಜಮೀನಿನಿಂದ ಜಮೀನಿಗೆ, ಬೆಳೆಯಿಂದ ಬೆಳೆಗೆ ಬೇರೆ ಬೇರೆಯಾಗಿದ್ದು, ವಿವಿಧ ಪ್ರಕಾರದ ಕೃಷಿ ಸಲಕರಣೆಯನ್ನು ಬಳಸಿ ಮಾಡಬೇಕಾಗುವುದು. ಇನ್ನು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಳುಮೆ ಮಾಡುವುದೂ ಭೂಮಿಯ ಬರಡುತನಕ್ಕೆ ಕಾರಣವಾಗಬಹುದು. ವಿವಿಧ ಪ್ರಕಾರದ ಯಂತ್ರಗಳನ್ನು ಉಳುಮೆ ಮಾಡಲು ಬಳಸುವುದರಿಂದ, ಮೇಲಿಂದ ಮೇಲೆ ಆಳವಾದ ಉಳುಮೆ ಮಾಡುವುದರಿಂದ ಈ ಪದ್ಧತಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು ಬಳಸುವುದಲ್ಲದೇ ಜಮೀನಿನಲ್ಲಿರುವ ಸಾರಜನಕ, ಇಂಗಾಲದ ಮೇಲೆ ಪ್ರಭಾವ ಬೀರುವುದು. ಮಣ್ಣಿನಲ್ಲಿರುವ ಸಾವಯವ ಪದಾರ್ಥವು ಭೂಮಿಯ ಆರೋಗ್ಯ ರಕ್ಷಣೆಯ ಮೇಲೆ ತುಂಬಾ ಪ್ರಭಾವ ಬೀರುವುದು. ಸಾವಯವ ಪದಾರ್ಥದ ಕ್ಷೀಣಿಸುವಿಕೆಯು ಭೂಮಿಯ ಆರೋಗ್ಯದ ಮೇಲೆ ಹಾಗೂ ಭೂಮಿಯು ಕಾರ್ಯ ನಿರ್ವಹಿಸುವ ಪದ್ಧತಿಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಹೊಂದಿರುತ್ತದೆ. ಮಣ್ಣಿನಲ್ಲಿ ಈ ಸಾವಯವ ಪದಾರ್ಥ ಕಡಿಮೆಯಾಗುತ್ತ ಹೋದಂತೆ ಬೆಳೆ ಬೆಳೆಯಲು ಬೇಕಾದ ಪೋಷಕಾಂಶಗಳನ್ನು ಸರಬರಾಜು ಮಾಡುವ ಸಾಮರ್ಥ್ಯ ಕಡಿಮೆಯಾಗಿ ಕೃಷಿ ಉತ್ಪಾದನೆ ಕಡಿಮೆಯಾಗುವುದು ಒಂದು ಕಡೆಯಾದರೆ, ಸಾವಯವ ಪದಾರ್ಥಗಳು ಕಡಿಮೆಯಾಗುವುದರಿಂದ ನಿಸರ್ಗದ ಪ್ರಕ್ರಿಯೆಗಳಾದ ರಭಸವಾದ ಮಳೆ, ವೇಗವಾಗಿ ಬೀಸುವ ಗಾಳಿಯಿಂದಾಗಿ ಮಣ್ಣಿನ ಭೌತಿಕ ಗುಣಧರ್ಮಗಳು ಕುಸಿಯುತ್ತವೆ. ತೀವ್ರತರವಾಗಿ ಉಳುಮೆ ಮಾಡುವುದರಿಂದಲೂ ಭೂಮಿಯ ಬರಡುತನಕ್ಕೆ ಕಾರಣವಾಗುವುದು. ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ತೇವಾಂಶವನ್ನು ಹೊಂದಿದಾಗ ಉಳುಮೆ ಮಾಡಿದರೆ (ಉದಾ: ಭತ್ತದ ಬೇಸಾಯಕ್ಕೆ ಜಮೀನು ತಯಾರಿ ಮಾಡುವುದು) ಆ ಪ್ರಕಾರದ ಉಳುಮೆ ಪದ್ಧತಿಗಳು ಮಣ್ಣಿನ ರಚನೆಯನ್ನು ನಾಶಮಾಡುತ್ತವೆ. ಹೀಗಾಗುವುದರಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಹಾಗೂ ನೀರು ಸರಬರಾಜು ಮಾಡುವ ಗುಣಧರ್ಮವನ್ನು ಕ್ಷೀಣಿಸುವಂತೆ ಮಾಡುತ್ತವೆ.

ಇನ್ನು ಉಷ್ಣ ಹಾಗೂ ಅರೆಉಷ್ಣ ಪ್ರದೇಶದ ಮಣ್ಣುಗಳನ್ನು ಬೆಳೆಯ ಕೊಯ್ಲಿನ ನಂತರ ಆಳವಾಗಿ ನೇಗಿಲು ಹೊಡೆದು ಬೇಸಿಗೆಯ ಬಿಸಿಲಿಗೆ ಹಾಗೇ ಬಿಡುವುದು ಸಾಮಾನ್ಯ ಪದ್ಧತಿ. ಹೀಗೆ ಮಾಡುವುದರಿಂದ ಈ ಮಣ್ಣುಗಳಿಂದ ಸೂಕ್ಷಕಣಗಳು ಅಲ್ಲಿ ಬೀಸುವ ಬಿರುಸಾದ ಗಾಳಿಗೆ ತೂರಿ ಹೋಗುವ ಮುಖಾಂತರ ಅಗಾಧವಾದ ಪ್ರಮಾಣದಲ್ಲಿ ಭೂ – ಸವಕಳಿಗೆ ಕಾರಣವಾಗುವುದು. ಈಗ ಸಂಪೂರ್ಣವಾಗಿ ಒಪ್ಪಬಹುದಾದ ವಿಷಯವೆಂದರೆ, ಉಳುಮೆ ಪದ್ಧತಿಗಳು ಮಣ್ಣು ಹಾಗೂ ಪರಿಸರದ ಅವನತಿಗೆ ಕಾರಣವಾಗಲೂಬಹುದು. ಹೀಗಿರುವುದರಿಂದ ಮಣ್ಣು ಹಾಗೂ ಪರಿಸರದ ಸಮರ್ಪಕ ಬಳಕೆಯ ಅವಶ್ಯಕತೆಯಿದೆ.

ಪೋಷಕಾಂಶ ನಿರ್ವಹಣಾ ಪದ್ಧತಿಗಳು

ಕಳೆದ ಐದಾರು ದಶಕಗಳಿಂದ ನಮ್ಮ ದೇಶದ ರೈತರು ಅದರಲ್ಲೂ ಪ್ರಮುಖವಾಗಿ ನೀರಾವರಿ ಇರುವ ಪ್ರದೇಶಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತ ಬಂದಿದ್ದು, ಅವುಗಳ ಮೇಲಿನ ಅವಲಂಬನ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ನೀರಾವರಿ ಜಮೀನುಗಳಲ್ಲಿ ಪೋಷಕಾಂಶಗಳ ಕೊರತೆ ನಿವಾರಿಸಲು ರಾಸಾಯನಿಕ ಗೊಬ್ಬರಗಳನ್ನು ಹಾಕುವುದು ಸರಳವಾದ ಪದ್ಧತಿಯಾಗಿದ್ದು, ಐತಿಹಾಸಿಕವಾಗಿ ಬಂದಿದ್ದ ಸಾವಯವ ಗೊಬ್ಬರಗಳ ಬಳಕೆಯ ಪ್ರಮಾಣವು ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ, ರಾಸಾಯನಿಕ ಗೊಬ್ಬರಗಳ ಉಪಯೋಗವು ನಮ್ಮ ಉತ್ಪಾದನಾ ಪದ್ಧತಿಗಳನ್ನು ಸಂಪೂರ್ಣವಾಗಿ ಬೆಂಬಲಿಸಿವೆಯಾದರೂ ಅವು ಮಣ್ಣಿನ ಅರೋಗ್ಯವನ್ನು ಹೆಚ್ಚಿಸುವತ್ತ ಪ್ರಯೋಜನಕಾರಿಯಾಗಿಲ್ಲ. ಈ ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯಿಂದಾಗಿ ಪರಿಸರ ಮಾಲಿನ್ಯ, ಭೂಜಲ ಮಾಲಿನ್ಯ, ಮನುಷ್ಯ ಹಾಗೂ ಜೀವಸಂಪತ್ತಿನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ.

ಭೂ ಸಂಪತ್ತು ಬರಡಾಗಲು ಕಾರಣವಿರುವ ವಿವಿಧ ಪ್ರಕಾರದ ಕೃಷಿ ಪದ್ಧತಿಗಳು

. ಸಾವಯವ ಪದಾರ್ಥಗಳ ಪುನರ್ ಬಳಕೆ

ಹಿಂದಿನಿಂದಲೂ ತುಂಬಾ ಪ್ರಚಲಿತವಾಗಿದ್ದ ಕೊಟ್ಟಿಗೆ ಗೊಬ್ಬರದ ಬಳಕೆ, ಕಾಂಪೋಸ್ಟ್ ತಯಾರಿಕೆ ಹಾಗೂ ಉಪಯೋಗ ಇಂದು ಕಡಿಮೆಯಾಗುತ್ತ ಬಂದಿದುರ ಪರಿಣಾಮವಾಗಿ ಭೂಮಿಯಲ್ಲಿ ಸಾವಯವ ಗೊಬ್ಬರಗಳ ಬಳಕೆಯ ವಿಷಯವಾಗಿ ವಿಚಾರ ಮಾಡಬೇಕಾಗಿದೆ. ರಾಸಾಯನಿಕ ಗೊಬ್ಬರಗಳ ಪ್ರಮಾಣ ಕಡಿಮೆ ಮಾಡುವುದರ ಮೂಲಕ ಮಣ್ಣಿನ ಭೈತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಕಡಿಮೆಗೊಳಿಸಬಹುದಾಗಿದೆ.

. ಬೆಳೆಯ ಪಳೆಯುಳಿಕೆಗಳನ್ನು ಸುಡುವ ಪದ್ಧತಿ

ಜಮೀನುಗಳನ್ನು ಬೆಳೆಯ ಕಟಾವಿನ ನಂತರ ಸ್ವಚ್ಛಗೊಳಿಸಲು ಹಿಂದಿನ ಬೆಳೆಯ ಪಳೆಯುಳಿಕೆಗಳನ್ನು ಸುಡುವುದು ರೂಢಿಯಾಗಿದೆ. ಇದಕ್ಕೆ ರೈತರು ಹಲವಾರು ರೀತಿಯ ಕಾರಣಗಳನ್ನು ನೀಡುವುದಾದರೂ ಇದು ಯೋಗ್ಯವಾದ ಪದ್ಧತಿಯಲ್ಲ. ಬೆಳೆಯ ಪಳಿಯುಳಿಕೆಗಳನ್ನು ಸುಡುವುದರಿಂದ:

  • ಭೂಮಿಗೆ ಹಾಕಬಹುದಾದ ಸಾವಯವ ಪದಾರ್ಥ ಸಿಗದೇ ಹೋಗುವುದು.
  • ಕಾಂಪೋಸ್ಟ್ ತಯಾರಿಸಲು ಬೇಕಾದ ಸಾವಯವ ಪದಾರ್ಥ ದೊರೆಯದೇ ಇರುವುದು.
  • ಸಾವಯವ ಪದಾರ್ಥಗಳನ್ನು ಸುಡುವುದರಿಂದ ಅವುಗಳಿಂದ ದೊರೆಯಬಹುದಾದ ಪೋಷಕಾಂಶಗಳು ನಾಶವಾಗಿ ಹೋಗುವುದು.
  • ಪರಿಸರ ಮಾಲಿನ್ಯ

ಅಸಮರ್ಪಕ ರೀತಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದು

ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಭೂಮಿಯ ಬರಡುತನಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದಕ್ಕೆ ಹಲವಾರು ಕಾರಣಗಳು ಉಂಟು.

೧. ಸೂಕ್ತ ಸಮಯದಲ್ಲಿ ರಾಸಾಯನಿಕ ಗೊಬ್ಬರ ಸಿಗದೇ ಇರುವುದು.

೨. ರಾಸಾಯನಿಕ ಗೊಬ್ಬರಗಳನ್ನು ಹಾಕುವ ವೈಜ್ಞಾನಿಕ ಪದ್ಧತಿ ತಿಳಿಯದೇ ಇರುವುದು.

೩. ರಾಸಾಯನಿಕ ರಸಗೊಬ್ಬರಗಳನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಹಾಕದೇ ಇರುವುದು.

೪. ಸ್ಥಾನಿಕವಾಗಿ ಮಣ್ಣು ಪರೀಕ್ಷೆ ಸೌಲಭ್ಯ ಇರದೇ ಇರುವುದು.

೫. ಸೂಕ್ತವಾದ ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಸಿಗದಿರುವುದು.

೫. ರಸಗೊಬ್ಬರಗಳ ಬಳಕೆಗೆ ಸಂಬಂಧಿಸಿದಂತೆ ರೈತರಿಗೆ ತಾಂತ್ರಿಕ ಮಾಹಿತಿ ದೊರೆಯದೇ ಇರುವುದು ಇತ್ಯಾದಿ.

ಇನ್ನು ಬಳಸಲಾಗುತ್ತಿರುವ ರಸಗೊಬ್ಬರಗಳ ಸಾಮರ್ಥ್ಯ ಕಡಿಮೆ ಇದ್ದರೆ ಅದೂ ಕೂಡಾ ಬರಡುತನಕ್ಕೆ ಕಾರಣವಾಗುತ್ತದೆ. ಹೀಗೆ ಅಸಮರ್ಪಕವಾಗಿ ರಸಗೊಬ್ಬರಗಳನ್ನು ಬಳಸುವುದರಿಂದ ರೈತರು ಹೆಚ್ಚು ವೆಚ್ಚ ಮಾಡಬೇಕಾಗುವುದು, ಇದರಿಂದ ಬರುವ ಇಳುವರಿಯ ಗುಣಮಟ್ಟ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಬರದಿರುವುದು, ಹಣ ಖರ್ಚು ಮಾಡಿ ಹಾಕಿದ ಗೊಬ್ಬರ ನೀರುಪಾಲಾಗಿ ಹೋಗುವುದು ಮತ್ತು ವಿವಿಧ ರೀತಿಯಲ್ಲಿ ಜಲ ಹಾಗೂ ಪರಿಸರ ಮಾಲಿನ್ಯ ಮಾಡುವುದು.

ನೀರು ನಿರ್ವಹಣಾ ಪದ್ಧತಿಗಳು

ಫಲಪ್ರದವಾದ ಕೃಷಿ ಮಾಡಲು ನೀರು ತುಂಬಾ ಅವಶ್ಯಕವಾದುದು. ಆದರೆ ಈ ನೀರನ್ನು ಸಮರ್ಪಕವಾಗಿ ನಿರ್ವಹಿಸದೇ ಹೋದರೆ ಅಥವಾ ಅದರ ದುರ್ಬಳಕೆಯಾದರೆ, ಅದೇ ನೀರು ಭೂಮಿಯನ್ನು ಸಂಪೂರ್ಣವಾಗಿ ಬರಡು ಮಾಡುವ ಸಾಧ್ಯತೆಗಳುಂಟು. ನೀರಿನ ಸಮರ್ಪಕವಾದ ಉಪಯೋಗ ಮಾಡದೇ ಹೋದರೆ ಭೂಮಿಯ ಉತ್ಪಾದಕತೆ ಕುಸಿದು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನೀರಾವರಿ ಮಾಡುವ ಪದ್ಧತಿಗಳನ್ನು ನೋಡಿದಾಗ ಬಹುತೇಕ ಪ್ರದೇಶಗಳಲ್ಲಿ ನೀರಾವರಿಯನ್ನು ಭೂಮಿಯ ಮೇಲ್ಭಾಗದಲ್ಲಿಯೇ ನೀಡಲಾಗುತ್ತದೆ. ನೀರನ್ನು ಮಣ್ಣಿನ ಮೇಲ್ಭಾಗದಲ್ಲಿ ನೀಡಬೇಕಾದರೆ ನೀರು ನೀಡುವ ಜಮೀನು ಸಮತಟ್ಟಾಗಿರುವುದು ಅವಶ್ಯ. ನೀರಾವರಿಗೆ ಎಂದು ಆಯ್ಕೆ ಮಾಡಿದ ಜಮೀನು ಸಮತಟ್ಟಾಗಿರದೇ ಅಲ್ಲಿ ನೀರನ್ನು ಸಮಪ್ರಮಾಣದಲ್ಲಿ ನೀಡಲಾಗದೇ, ನೀರಿನ ಪ್ರಮಾಣದಲ್ಲಿ ಏರಿಳಿತಗಳು ಆಗುವುದು ಸಾಧ್ಯ. ನೀರಾವರಿಗೆಂದು ಭೂಮಿಯನ್ನು ಸಮತಟ್ಟು ಮಾಡುವಾಗ ಏನಾದರೂ ಏರು – ಪೇರುಗಳಾದರೂ ನೀರು ಸಮರ್ಪಕವಾಗಿ ಹಂಚಿಕೆಯಾಗುವುದು ಸಾಧ್ಯವಿಲ್ಲ. ಇದರಿಂದಾಗಿ ನೀರಿನ ಪೋಲು ಆಗುವುದಲ್ಲದೇ ಮಣ್ಣಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು ಮತ್ತು ಬೆಳೆಗಳು ಸಮರ್ಪಕವಾಗಿ ಇಳುವರಿ ನೀಡುವಲ್ಲಿ ಅಡೆ ತಡೆಯಾಗುವುದು. ಹೀಗೆ ಭೂಮಿಯ ಮೇಲೆ ಕಾಲುವೆ ಅಥವಾ ಹರಿವು ನೀರಾವರಿ ಬದಲಾಗಿ ಸಿಂಚನ ನೀರಾವರಿ ಅಥವಾ ಹನಿ ನೀರಾವರಿ ಯಂತಹ ಪದ್ಧತಿಗಳನ್ನು ಉಪಯೋಗಿಸುವುದರ ಮುಖಾಂತರ ಸಮರ್ಪಕ ನೀರಾವರಿಯನ್ನು ಮಾಡಬಹುದಾಗಿದೆ. ಈ ಪದ್ಧತಿಗಳನ್ನು ಅಳವಡಿಸಿದರೆ ಭೂಮಿಯ ಸಮ ಪಾತಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿದೂಗಿಸಬಹುದಾಗಿದೆ. ಇನ್ನು ನೀರಾವರಿಯ ನೀರಿನ ಪ್ರಮಾಣ, ನೀರಾವರಿ ನೀಡುವ ಸಮಯ ಹಾಗೂ ಎರಡು ನೀರಾವರಿಗಳ ಮಧ್ಯದ ಅವಧಿಗಳೂ ಕೂಡಾ ನೀರಿನ ಸಮರ್ಪಕ ಉಪಯೋಗ ಹಾಗೂ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನೀರಾವರಿಗಾಗಿ ವಿದ್ಯುಚ್ಛಕ್ತಿಯ ಮೇಲೆ ಅವಲಂಬಿತವಾಗಿರುವ ರೈತರು, ವಿದ್ಯುಚ್ಛಕ್ತಿ ಅಭಾವ ಮತ್ತು ಸಮಯಕ್ಕೆ ಸರಿಯಾಗಿ ವಿದ್ಯುತ್ ದೊರೆಯದೇ ಇರುವ ಪ್ರಸಂಗಗಳಿಂದ ಪ್ರೇರಿತರಾಗಿ, ವಿದ್ಯುತ್ ದೊರೆಯಲಾಗದೇ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಯಿಸುವುದು ಸಾಮಾನ್ಯ. ಇದೇ ರೀತಿ ಕಾಲುವೆಗಳಿಂದ ನೀರು ಹಾಯಿಸುವ ಕಾಲುವೆಯ ಮೇಲ್ಭಾಗದ ರೈತರು ಸದಾ ನೀರು ಉಣಿಸಿದರೆ, ಕೆಳಭಾಗದ ರೈತರು ನೀರು ಸಿಕ್ಕಾಗಲೇ ಹೆಚ್ಚಿನ ಪ್ರಮಾಣದಲ್ಲಿ ನೀರುಣಿಸುವ ಪದ್ಧತಿಗಳು ಸರ್ವಸಾಮಾನ್ಯ. ಈ ಎಲ್ಲಾ ಪ್ರಸಂಗಗಳಲ್ಲಿಯೂ ಭೂಮಿಗೆ ಹಾಗೂ ಬೆಳೆಗಳಿಗೆ ಅವಶ್ಯಕತೆಗಿಂತ ಹೆಚ್ಚಿನ ನೀರು ಹಾಯಿಸುವ ಮೂಲಕ ಭೂಮಿಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉದ್ಭವವಾಗಲು ನೀರಾವರಿ ಕಾರಣೀಭೂತವಾಗುತ್ತದೆ.

ಇದಲ್ಲದೇ ಕಾಲುವೆ ನೀರಾವರಿ ಪದ್ಧತಿ ಇರುವ ಪ್ರದೇಶದಲ್ಲಿ ಕಾಲುವೆಗಳನ್ನು ಸೂಕ್ತವಾಗಿ ನಿರ್ಮಿಸಿ, ನಿರ್ವಹಿಸದೇ ಇರುವುದರಿಂದ, ಕಾಲುವೆಗಳಿಂದ ಅಗಾಧ ಪ್ರಮಾಣದಲ್ಲಿ ನೀರು ಪೋಲಾಗಿ ಸುತ್ತಲಿನ ಜಮೀನಿಗೆ ಸೇರುವುದರಿಂದ ಆ ಜಮೀನುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮುಂದೆ ಜವುಳು ಹಾಗೂ ಸವಳು ಸಮಸ್ಯೆಗಳು ಉಂಟಾಗಬಹುದು. ಇನ್ನು, ಉಷ್ಣ ಹಾಗೂ ಅರೆಉಷ್ಣ ಪ್ರದೇಶಗಳಲ್ಲಿ ರೈತರು ಪ್ರಮುಖವಾಗಿ ಭೂಗರ್ಭಜಲ ಮೂಲಗಳ ಮೇಲೆ ಅವಲಂಬಿತರಾಗಿರುತ್ತಾರೆ. ಹಲವಾರು ಪ್ರಸಂಗಗಳಲ್ಲಿ ಭೂಗರ್ಭ ಜಲವು ವಿವಿಧ ಪ್ರಕಾರದ ಕರಗಿದ ಲವಣಗಳನ್ನು ಹೊಂದಿರುವುದರಿಂದ ಮತ್ತು ಇಂತಹ ನೀರನ್ನು ನೀರಾವರಿಗೆ ಬಳಸುವುದರಿಂದ ಮಣ್ಣಿನ ಮೇಲ್ಭಾಗದಲ್ಲಿ ಲವಣಗಳ ಪ್ರಮಾಣ ಹೆಚ್ಚಿಸಬಹುದು. ಹೀಗೆ ಜಮೀನಿನಲ್ಲಿ ಸಂಗ್ರಹಗೊಂಡ ಲವಣಾಂಶಗಳು ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಕುಂಠಿತಗೊಳಿಸುತ್ತವೆ. ಈ ಲವಣಗಳ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತವೆ. ಈ ಸಮಸ್ಯೆ ಒಂದೆಡೆಯಾದರೆ, ಹೆಚ್ಚಿನ ಪ್ರಮಾಣದಲ್ಲಿ ಭೂಗರ್ಭ ಜಲವನ್ನು ಬಳಸುವುದರಿಂದ, ಭೂಗರ್ಭ ಜಲದ ಪ್ರಮಾಣವೂ ಕಡಿಮೆಯಾಗುತ್ತಲಿದ್ದು ಕುಡಿಯುವ ನೀರಿಗೆ ಸಹಿತ ಹಲವು ಪ್ರದೇಶಗಳಲ್ಲಿ ಸಂಚಕಾರ ಬಂದಿದೆ. ಈ ನೀರು ವಿವಿಧ ರೂಪದಲ್ಲಿ ಲವಣಗಳನ್ನು ಹೊಂದಿರುವುದರಿಂದ ಭೂಮಿಯ ಗುಣಮಟ್ಟ ಕಡಿಮೆಯಾಗಿ ಮಣ್ಣಿನ ಆರೋಗ್ಯ ಕುಸಿಯುತ್ತಲಿದೆ.

ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳು

ವಾತಾವರಣದಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ವಿವಿಧ ಪ್ರಕಾರದ ಬದಲಾವಣೆಗಳು ಸುಸ್ಥಿತ ಕೃಷಿಗೆ ಹಾಗೂ ಮಣ್ಣಿನ ಅರೋಗ್ಯ ರಕ್ಷಣೆಗೆ ಹಲವಾರು ಆಹ್ವಾನಗಳನ್ನು ತಂದೊಡ್ಡಿವೆ. ವಾತಾವರಣ ಬದಲಾವಣೆಯ ಹಲವಾರು ಅಂಶಗಳು ಭೂಮಿಯ ಬರಡುತನಕ್ಕೂ ಕಾರಣವಾಗುತ್ತಲಿವೆ. ಇತ್ತೀಚಿನ ವರ್ಷಗಳಲ್ಲಿ ಕಂಡಂತೆ ಮಳೆಯ ಪ್ರಮಾಣ, ಮಳೆಯ ಹಂಚುವಿಕೆ, ಮಳೆಯ ರಭಸ, ಒಟ್ಟು ಮಳೆ ಬೀಳುವ ದಿನಗಳಲ್ಲಿ ಹಲವಾರು ಬದಲಾವಣೆಗಳು ಆಗುತ್ತಲಿದ್ದು ಇವೆಲ್ಲ ವಾತಾವರಣದ ಬದಲಾವಣೆಯ ಪರಿಣಾಮಗಳೆಂದೇ ವ್ಯಾಖ್ಯಾನಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಮಳೆ ತುಂಬಾ ಬೇಗನೆ ಆರಂಭವಾಗಿ ನಂತರದ ದಿನಗಳಲ್ಲಿ ಬರದೇ ಇರುವುದು, ಇನ್ನು ಕೆಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉಷ್ಣತೆಯಂತಹ ಅಂಶಗಳು ಭೂಮಿಯನ್ನು ಅಶಕ್ತಗೊಳಿಸುತ್ತಲಿವೆ ಹಾಗೂ ಭೂಮಿಯು ವಿವಿಧ ರೀತಿಯ ಬರಡುತನ ಪ್ರಕ್ರಿಯೆಗಳಿಗೆ ಒಳಗಾಗುತ್ತಲಿದೆ.

ಹೀಗಿರುವುದರಿಂದ ಮೇಲೆ ಚರ್ಚಿಸಿದ ವಿವಿಧ ಅಂಶಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಸೂಕ್ತವಾದ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಭೂಮಿಯ ಬರಡುತನವನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುವುದು.

ಭೂಮಿಯ ಆರೋಗ್ಯವನ್ನು ಸುಧಾರಿಸುವುದು ಹಾಗೂ ಕಾಪಾಡಿಕೊಂಡು ಬರುವುದು

ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು ಹಾಗೂ ಅದನ್ನು ನಿರಂತರವಾಗಿ ಕಾಪಾಡಿಕೊಂಡು ಬರುವುದು ಭೂ – ಬರಡಾಗದಂತೆ ತಡೆಗಟ್ಟುವ ಕ್ರಮಗಳಲ್ಲಿ ಪ್ರಮುಖವಾದದ್ದು. ಮಣ್ಣಿನ ಆರೋಗ್ಯದ ಕಡೆಗೆ ಸೂಕ್ತವಾದ ರೀತಿಯಲ್ಲಿ ಗಮನ ಹರಿಸುವುದು ಈ ಕೆಳಗಿನ ಅಂಶಗಳಿಂದ ಪ್ರಮುಖವಾದದ್ದು.

೧. ಭೂಮಿಯ ಆರೋಗ್ಯವನ್ನು ಸೂಕ್ತವಾಗಿ ಕಾಪಾಡಿಕೊಂಡು ಬರದೇ ಹೋದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಅಹಾರ ಭದ್ರತೆ ನೀಡಲು ಸಾಧ್ಯವಾಗದೇ ಹೋಗಬಹುದು.

೨. ಕೃಷಿಯಿಂದಲೇ ತಮ್ಮ ಜೀವನೋಪಾಯವನ್ನು ಕಂಡುಕೊಂಡಿರುವ ಕೋಟ್ಯಂತರ ಕೃಷಿಕರು ತೊಂದರೆಪಡಬಹುದು.

೩. ನಮ್ಮ ಪರಿಸರ ಹಾಗೂ ಜೀವರಾಶಿಯು ಉಳಿಯಬೇಕೆಂದರೆ ಮಣ್ಣಿನ ಆರೋಗ್ಯವನ್ನು ನಿರ್ವಹಿಸಲೇಬೇಕು.

ನಮಗೆ ವೈಜ್ಞಾನಿಕವಾಗಿ ದೊರೆಯುವ ಹಲವಾರು ಸಾಕ್ಷಿಗಳ ಆಧಾರದ ಮೇಲೆ ಕಂಡುಬರುವ ವಿಚಾರವೆನೆಂದರೆ ಭೂಮಿಯ ಆರೋಗ್ಯ ಹದಗೆಡುತ್ತಲಿದೆ, ದಿನದಿಂದ ದಿನಕ್ಕೆ ಭೂಮಿಯು ಬರಡಾಗುತ್ತಲಿದೆ. ಈ ಎಲ್ಲ ಪರಿಸ್ಥಿತಿಗಳನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಯುದ್ಧೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಮುಂದೊಂದು ದಿನ ಕೃಷಿ ಸಮಸ್ಯೆಗಳ ಆಗರವಾಗಿ ಪರಿಣಮಿಸಬಹುದು. ಆದುದರಿಂದ ಕೃಷಿಯ ಸುಸ್ಥಿರತೆಗೆ ಮೂಲವಾದ ಮಣ್ಣನ್ನು ಹಾಗೂ ಅದರ ಆರೋಗ್ಯವನ್ನು ಕಾಪಾಡಿಕೊಂಡು ಬರುವುದು ಅತಿ ಅವಶ್ಯ.