ನಮ್ಮ ಮಣ್ಣು

ಮಣ್ಣು ಅತ್ಯಂತ ಅಮೂಲ್ಯವಾದ ನಮ್ಮ ನೈಸರ್ಗಿಕ ಸಂಪನ್ಮೂಲ. ನೀರು, ಗಾಳಿ ಹಾಗೂ ಜೀವಜಂತುಗಳೊಡನೆ ಕೂಡಿ ಮಣ್ಣು ನಮ್ಮ ಜೀವನದ ಆಧಾರ ಪದ್ಧತಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಪ್ರಕಾರದ ಮಣ್ಣುಗಳು ನಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಕೂಡಿ ಒಟ್ಟಾರೆ ಜೀವಜಗತ್ತಿನಲ್ಲಿ ಅಮೂಲ್ಯವಾದ ಪಾತ್ರ ವಹಿಸುತ್ತಿವೆ. ನಮ್ಮ ಮಣ್ಣುಗಳು ತುಂಬಾ ವೈವಿಧ್ಯತೆಯನ್ನು ಹೊಂದಿವೆ. ನಮಗೆ ತಿಳಿದ ಹಾಗೆ ಪ್ರತಿ ಹೊಲದಿಂದ ಹೊಲಕ್ಕೆ, ಊರಿನಿಂದ ಊರಿಗೆ, ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದ್ದು ನಮ್ಮ ಊಹೆಗೂ ಮೀರಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಮಣ್ಣುಗಳು ನಮ್ಮ ಪರಿಸರ ಪದ್ಧತಿಗಳು ಸದೃಢವಾಗಿರಲು ಬೇಕಾದ ವಿವಿಧ ರೀತಿಯ ಪಾತ್ರಗಳನ್ನು ವಹಿಸುವುದಲ್ಲದೇ ಮಾನವ ಜನಾಂಗದ ಉಳಿವಿನ ಮೂಲವೇ ಇವುಗಳಲ್ಲಿದೆ ಎಂದು ಹೇಳಬಹುದಾಗಿದೆ. ಈ ರೀತಿಯಾಗಿ ನಮ್ಮ ಭೂ – ಸಂಪತ್ತು ಹಲವಾರು ರೀತಿಯ ಪಾತ್ರಗಳನ್ನು ವಹಿಸುವುದರಿಂದ ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು, ವೈಜ್ಞಾನಿಕವಾಗಿ ನಿರ್ವಹಿಸುವುದು ಅವಶ್ಯಕವಾಗಿದೆ. ಮಣ್ಣು ಜೀವಂತ ಸಂಪನ್ಮೂಲವಿದ್ದು ಅದರ ಸಂರಕ್ಷಣೆ, ಅಭಿವೃದ್ಧಿ, ನಿರ್ವಹಣೆ ಹಾಗೂ ಸಮರ್ಪಕ ಬಳಕೆಯ ವಿಷಯವಾಗಿ ಪ್ರತಿಯೊಬ್ಬ ಪ್ರಜೆಯೂ ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಮಣ್ಣು ಸಂಪನ್ಮೂಲಗಳು ಬರೀ ರೈತರಿಗೆ ಸಂಬಂಧಿಸಿದ ವಿಚಾರಗಳೆಂದು ಭಾವಿಸದೇ ಅವುಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದೆ ಬರುವ ಜವಾಬ್ದಾರಿ ನಾಗರಿಕರಲ್ಲಿ ಮೂಡಬೇಕಾಗಿದೆ.

ಮಣ್ಣು ಎಂಬ ಶಬ್ದ ಲ್ಯಾಟಿನ್ ಪದವಾದ ‘ಸೋಲಂ’ ಎಂಬ ಪದದಿಂದ ಬಂದಿದ್ದು, ಇದರ ಅರ್ಥದ ಪ್ರಕಾರ ಮಣ್ಣು ಭೂಮಿಯ ಮೇಲ್ಪದರದ ಮೇಲಿರುವ ಭಾಗವಾಗಿದೆ. ಇದರಲ್ಲಿ ಸಾವಯವ ಹಾಗೂ ನಿರವಯವ ಖನಿಜ ಪದಾರ್ಥಗಳು, ಲವಣಾಂಶಗಳನ್ನು ಹೊಂದಿದ್ದು ಅದರಲ್ಲಿಯೇ ಬೆಳೆಗಳು ಬೆಳೆಯುವುದಲ್ಲದೇ ವಿವಿಧ ಪ್ರಕಾರದ ಸೂಕ್ಷ್ಮ ಜೀವಿಗಳಿಗೂ ಸಹ ವಾಸಸ್ಥಾನವಾಗಿದೆ. ಮಣ್ಣಿನ ಮೇಲ್ಪದರ ಆಳವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದಲ್ಲದೇ ಮಣ್ಣಿನ ಜನನ ಪ್ರಕ್ರಿಯೆಗೆ ಕಾರಣವಾಗಿರುವ ವಿವಿಧ ಅಂಶಗಳ ಮೇಲೆ ಅವುಗಳ ಗುಣಧರ್ಮಗಳೂ ಅವಲಂಬಿತವಾಗಿರುತ್ತವೆ.

ಮಣ್ಣು ರೂಪುಗೊಳ್ಳುವ ರೀತಿ

ಇಂದು ನಮಗೆ ಕಾಣುವ ಮಣ್ಣು ಸಾವಿರಾರು ವರ್ಷಗಳ ಸತತವಾದ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಪ್ರಕ್ರಿಯೆಗಳ ಫಲವಾಗಿ ದೊರೆತ ಸಂಪನ್ಮೂಲವಾಗಿದೆ. ಈ ಮೂರು ಪ್ರಕ್ರಿಯೆಗಳು ಭೂಮಿಯ ಕೆಳಭಾಗದಲ್ಲಿರುವ ಕಲ್ಲಿನ ಪದರುಗಳ ಮೇಲೆ ಸತತವಾಗಿ ನಡೆಯುವುದರಿಂದ ಮಣ್ಣುಗಳು ಉತ್ಪತ್ತಿಯಾಗುತ್ತದೆ. ಭೂಮಿಯ ಮೇಲ್ಪದರಿನ ಮಣ್ಣು ತಯಾರಾಗಲು ಈ ಕೆಳಗೆ ನೀಡಿದ ಅಂಶಗಳು ಪ್ರಮುಖ ಕಾರಣವಾಗಿರುತ್ತವೆ.

. ವಾತಾವರಣ

ಮಣ್ಣು ರೂಪುಗೊಳ್ಳಲು ಅಲ್ಲಿ ಪ್ರಚಲಿತದಲ್ಲಿರುವ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿಯೂ ಮುಖ್ಯವಾಗಿ ಅಲ್ಲಿ ಉಷ್ಣತೆ, ಉಷ್ಣತೆಯಲ್ಲಿಯ ಏರಿಳಿತಗಳು, ಮಳೆಯ ಪ್ರಮಾಣ, ಮಳೆಯ ಹಂಚಿಕೆ, ಪರಿಸರದಲ್ಲಿರುವ ವಿವಿಧ ಶಕ್ತಿಗಳೂ ಸಹಿತ ಭೂಮಿಯ ಕಲ್ಲು ಪದರಿನ ಮೇಲೆ ಅಗಾಧವಾದ ಪರಿಣಾಮ ಬೀರುವುದರಿಂದ ಆ ಕಲ್ಲುಗಳು ಪುಡಿಯಾಗಿ ಮುಂದೆ ಮಣ್ಣಿನ ರೂಪ ತಾಳುವಲ್ಲಿ ಕಾರಣೀಭೂತವಾಗುತ್ತವೆ. ವಾತಾವರಣ ಈ ವಿವಿಧ ಶಕ್ತಿಗಳು ಹಾಗೂ ಒತ್ತಡಗಳು ಮಣ್ಣು ರೂಪುಗೊಳ್ಳಲು ವೇಗವನ್ನು ನಿರ್ಧರಿಸುತ್ತದೆ.

. ಭೂಮಿಯಲ್ಲಿಯ ಜೈವಿಕ ಪ್ರಕ್ರಿಯೆಗಳು

ಭೂಮಿ ವಿವಿಧ ಪ್ರಕಾರದ ಜೀವಜಂತುಗಳ ತವರಾಗಿದ್ದು, ಇದರಲ್ಲಿಯ ಹಲವಾರು ಜೀವಿಗಳು ಮಣ್ಣಿನ ಜನನಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಈ ಜೀವಜಂತುಗಳು ಹಾಗೂ ವಿವಿಧ ಪ್ರಕಾರದ ಪ್ರಾಣಿ ಪ್ರಕ್ರಿಯೆಗಳು ಒಟ್ಟಾಗಿ ಭೂಮಿಯಲ್ಲಿ ನಡೆಯುವ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಪ್ರಕಾರದ ಮೂಲ ಶಿಲೆಗಳು ಮಣ್ಣಿನ ರೂಪ ಪಡೆಯುವಲ್ಲಿ ಸಹಕಾರಿಯಾಗುತ್ತವೆ ಹಾಗೂ ಹಲವಾರು ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಭೂಮಿಯಲ್ಲಿ ಬಿಡುಗಡೆ ಮಾಡುತ್ತವೆ. ಭೂಮಿಯಲ್ಲಿರುವ ಸೂಕ್ಷ್ಮ ಜೀವಿಗಳು ನಿರ್ಜೀವ ಸಸ್ಯ ಪದಾರ್ಥಗಳು ಹಾಗೂ ಜೈವಿಕ ಪದಾರ್ಥಗಳನ್ನು ಸಾವಯವ ಪದಾರ್ಥಗಳನ್ನಾಗಿ ಮಾರ್ಪಡಿಸಿ ಮಣ್ಣಿನ ಒಂದು ಭಾಗವಾಗಿ ಪರಿವರ್ತನೆ ಹೊಂದಲು ಸಹಕಾರಿಯಾಗುತ್ತವೆ. ಇದರ ಜೊತೆಗೆ ಭೂಮಿಯಲ್ಲಿ ತುಂಬಾ ಕ್ರಿಯಾಶೀಲವಾಗಿರುವ ಹುಳುಗಳು (ಉದಾ:ಎರೆಹುಳು), ಕೀಟಗಳು ಹಾಗೂ ಮಣ್ಣಿನಲ್ಲಿ ವಾಸ ಮಾಡುವ ಹಾಗೂ ಮಣ್ಣನ್ನು ಅಗೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಜೀವಿಗಳು ತಮ್ಮ ವಿವಿಧ ಜೈವಿಕ ಕ್ರಿಯೆಗಳಿಂದ ಮಣ್ಣು ಫಲವತ್ತಾಗಿ ರೂಪುಗೊಳ್ಳುವಲ್ಲಿ ಸಹಕಾರ ನೀಡುತ್ತವೆ.

. ಭೂಮಿಯ ಮೇಲ್ಪದರಿನ ಇಳಿಜಾರು

ಭೂಮಿಯ ಮೇಲ್ಪದರಿನ ಇಳಿಜಾರು ಮಣ್ಣಿನ ಜನನ ಪ್ರಕ್ರಿಯೆಯಲ್ಲಿ ತುಂಬಾ ಪ್ರಭಾವ ಬೀರುವ ಅಂಶವಾಗಿದ್ದು ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುವುದೂ ಉಂಟು. ಗುಡ್ಡಗಾಡು ಪ್ರದೇಶದ ಕಣಿವೆ ಭಾಗದಲ್ಲಿ ಹೆಚ್ಚಿನ ತೇವಾಂಶವಿರುವುದರಿಂದ ಅಲ್ಲಿರುವ ತೇವಾಂಶದ ಪ್ರಮಾಣ ಮಣ್ಣು ರೂಪುಗೊಳ್ಳುವ ಕ್ರಿಯೆಯ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಇನ್ನು ಗುಡ್ಡಗಾಡಿನ ಮೇಲ್ಭಾಗದಲ್ಲಿ ಈ ಕ್ರಿಯೆಗಳು ಬೇರೆಯಾಗಿರುತ್ತವೆ.

. ಸಮಯ

ಮಣ್ಣು ರೂಪುಗೊಳ್ಳುವ ಪ್ರಕ್ರಿಯೆ ತುಂಬಾ ಸಾವಧಾನವಾಗಿ ನಡೆಯುವ ಕ್ರಿಯೆಯಾಗಿದ್ದು ಒಂದು ಅಂಗುಲದಷ್ಟು ಮಣ್ಣು ರೂಪುಗೊಳ್ಳಲು ಸಾವಿರಾರು ವರ್ಷಗಳೇ ಬೇಕಾಗುವುದು. ನಮ್ಮ ಇಂದಿನ ಭೂ – ಸಂಪನ್ಮೂಲಗಳು ಹಲವು ಸಾವಿರ ವರ್ಷಗಳಿಂದ ನಡೆದ ವಿವಿಧ ರೂಪದ ಪ್ರಕ್ರಿಯೆಗಳ ಫಲವಾಗಿ ದೊರೆತ ಸಂಪನ್ಮೂಲಗಳಾಗಿವೆ.

ಮಣ್ಣಿನ ರಚನೆ ಹಾಗೂ ವಿವಿಧ ಭಾಗಗಳು

ಮಣ್ಣಿನಲ್ಲಿರುವ ವಿವಿಧ ವಸ್ತುಗಳು ಅದರ ರಚನೆ, ಗುಣಧರ್ಮ ಹಾಗೂ ಅದರ ಸಾಮರ್ಥ್ಯವನ್ನು ನಿರ್ಧರಿಸುತ್ತವೆ. ಮಣ್ಣಿನ ಈ ಅಂಶಗಳು ಪ್ರತಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿ ಇರುವುದರಿಂದ ಅವುಗಳ ಪ್ರಕಾರಗಳು ಬೇರೆ ಬೇರೆಯಾಗಿರುತ್ತವೆ. ಮಣ್ಣು ಈ ಕೆಳಗೆ ಪಟ್ಟಿ ಮಾಡಿದ ವಿವಿಧ ಮಿಶ್ರಣಗಳನ್ನು ಹೊಂದಿರುತ್ತವೆ.

೧) ಮೂಲ ಶಿಲೆಗಳಿಂದ ರಾಸಾಯನಿಕ ಕ್ರಿಯೆಗಳ ಫಲವಾಗಿ ದೊರಕಿದ ವಿವಿಧ ನಿರವಯವ ಪದಾರ್ಥಗಳು.

೨) ನಿರ್ಜೀವಗೊಂಡ ಹಾಗೂ ಕಳೆಯುವ / ವಿಭಜಿಸುವ ಪ್ರಕ್ರಿಯೆಗಳಿಂದ ರೂಪುಗೊಂಡ ಸಾವಯವ ಪದಾರ್ಥಗಳು.

೩) ಭೂಮಿಯಲ್ಲಿ ಜೀವಂತವಾಗಿ ಕ್ರಿಯೆ ಮಾಡುವ ವಿವಿಧ ಪ್ರಕಾರ ಜೀವಜಂತುಗಳು (ಬ್ಯಾಕ್ಟೀರಿಯಾ, ಅಲ್ಗಿ, ಪ್ರೊಟೋಜೋವಾ, ಎರೆಹುಳು, ಗೆದ್ದಲುಗಳು ಇತ್ಯಾದಿ).

೪) ಮಣ್ಣಿನ ವಿವಿಧ ಪ್ರಕಾರದ ಕಣಗಳ ಮಧ್ಯದಲ್ಲಿ ರಂಧ್ರಗಳಲ್ಲಿರುವ ಹವೆ.

ಮಣ್ಣಿನಲ್ಲಿರುವ ನಿರವಯವ ವಸ್ತುಗಳಲ್ಲಿ ಪ್ರಮುಖವಾಗಿರುವವುಗಳೆಂದರೆ ವಿವಿಧ ಪ್ರಕಾರದ ಸಣ್ಣ – ಸಣ್ಣ ಕಲ್ಲುಗಳು, ವಿವಿಧ ಗಾತ್ರದ ಮರಳಿನ ಕಣಗಳು, ಸೂಸು ಕಣ ಅಥವಾ ರೇವು ಕಣಗಳು ಹಾಗೂ ಜೇಡು ಕಣಗಳು ಪ್ರಮುಖವಾಗಿವೆ. ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಮುಖ್ಯವಾಗಿ ಅಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಉಳಿಕೆಗಳ ವಿಭಜನೆಯಿಂದ ಬಂದ ಭಾಗಗಳಾಗಿರುತ್ತವೆ. ಭೂಮಿಯಲ್ಲಿರುವ ನೀರು ಹಾಗೂ ಹವೆಯ ಪ್ರಮಾಣವು ಅಲ್ಲಿ ಪ್ರಸ್ತುತದಲ್ಲಿರುವ ವಾತಾವರಣದಲ್ಲಿರುವ ಏರು – ಪೇರುಗಳ ಮೇಲೆ ಅವಲಂಬಿಸಿರುತ್ತವೆ. ಮಣ್ಣಿನಲ್ಲಿರುವ ಪ್ರತಿಯೊಂದು ಭಾಗವೂ ತನ್ನದೇ ಆದ ಪ್ರಭಾವವನ್ನು ಬೀರುತ್ತವೆ. ಅಲ್ಲದೇ ಆ ಮಣ್ಣಿನ ಗುಣಧರ್ಮಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಣ್ಣಿನಲ್ಲಿರುವ ಮರಳು, ರೇವೆ ಹಾಗೂ ಜೇಡಿನ ಕಣಗಳ ಪ್ರಮಾಣವು ಆ ಮಣ್ಣು ಬೆಳೆಗಳ ಉತ್ಪಾದನೆಗೆ ಅವಶ್ಯಕವಿರುವ ಪೋಷಕಾಂಶ ಹಾಗೂ ನೀರು ಪೂರೈಕೆಯ ಮೇಲೆ ಹಿಡಿತ ಹೊಂದಿರುತ್ತವೆ ಹಾಗೂ ಭೂಮಿಯಲ್ಲಿ ಹವೆಯಾಡುವಿಕೆಯನ್ನು ನಿಯಂತ್ರಿಸುತ್ತವೆ. ಮಣ್ಣಿನಲ್ಲಿ ಸಾವಯವ ಪದಾರ್ಥವು ಕಡಿಮೆ ಪ್ರಮಾಣದಲ್ಲಿ ಇದ್ದರೂ ಅದು ಮಣ್ಣಿನ ಗುಣಧರ್ಮಗಳ ಮೇಲೆ ಅಗಾಧವಾದ ಪ್ರಭಾವವನ್ನು ಹೊಂದಿದ್ದು ಭೂಮಿಯಲ್ಲಿ ನಡೆಯುವ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳನ್ನು ಅದು ತೀವ್ರಗೊಳಿಸುವುದಲ್ಲದೇ ಮಣ್ಣಿನಲ್ಲಿರುವ ಸಣ್ಣ ಕಣಗಳನ್ನು ಒಂದಕ್ಕೊಂದು ಬಂಧಿಸುವ ಪ್ರಮುಖ ಪಾತ್ರ ವಹಿಸಿ ಮಣ್ಣಿನ ಒಟ್ಟಾರೆ ರಚನೆಯನ್ನು ನಿರ್ಧರಿಸುತ್ತದೆ. ಮಣ್ಣು ಉತ್ತಮವಾದ ಕಣಗಳ ರಚನೆ ಹೊಂದಿದಾಗ ಮಾತ್ರ ಬೆಳೆಯ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುವುದು. ಖನಿಜರೂಪ ಹೊಂದಿರುವ ಮರಳು, ರೇವೆ ಹಾಗೂ ಜೇಡಿ ಪದಾರ್ಥಗಳ ರೂಪವನ್ನು ಬದಲಾಯಿಸುವುದು ಕಷ್ಟಸಾಧ್ಯವಾದದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳನ್ನು ಜಮೀನಿಗೆ ಹಾಕುವುದರ ಮೂಲಕ ಸಾವಯವ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಮಣ್ಣಿನಲ್ಲಿರುವ ಮೂಲ ಕಣಗಳಾದ ಮರಳು, ರೇವೆ ಹಾಗೂ ಜೇಡುಗಳ ಪ್ರಮಾಣವು ಆ ಮಣ್ಣಿನ ಒಟ್ಟಾರೆ ಗುಣಧರ್ಮಗಳನ್ನು ನಿರ್ಧರಿಸುತ್ತವೆ.

ಮಣ್ಣಿನ ವಿಧಗಳು

ಮಣ್ಣುಗಳು ಅವುಗಳ ಉಗಮಕ್ಕೆ ಆಧಾರವಾಗಿ ವಿವಿಧ ಪ್ರಕಾರದ ಗುಣಧರ್ಮಗಳನ್ನು ಹೊಂದಿರುತ್ತವೆ ಹಾಗೂ ಈ ಗುಣಧರ್ಮಗಳ ಆಧಾರದ ಮೇಲೆ ಅವು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ. ನಮಗೆ ತಿಳಿದಿರುವಂತೆ ಪ್ರಾಣಿ ಹಾಗೂ ಸಸ್ಯಗಳನ್ನು ಹೇಗೆ ವೈಜ್ಞಾನಿಕವಾಗಿ ಅವುಗಳ ಗುಣಧರ್ಮಗಳ ಆಧಾರದ ಮೇಲೆ ವಿಂಗಡಿಸಲಾಗಿದೆಯೋ ಇದೇ ರೀತಿಯಲ್ಲಿ ಮಣ್ಣುಗಳನ್ನು ಸಹ ವಿವಿಧ ಪ್ರಕಾರಗಳಲ್ಲಿ ಅಂತರ್ ರಾಷ್ಟ್ರೀಯ ನೀತಿ – ನಿಯಮಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಮಣ್ಣುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವಲ್ಲಿ ಈ ರೀತಿಯ ವರ್ಗೀಕರಣ ಸಹಾಯಕವಾಗಿದೆಯಲ್ಲದೇ ಮಣ್ಣಿನ ವಿವಿಧ ಗುಣಧರ್ಮಗಳ ಆಧಾರದ ಮೇಲೆ ಅವುಗಳನ್ನು ಸುಸ್ಥಿರವಾಗಿ ನಿರ್ವಹಿಸುವ ವಿಧಿ – ವಿಧಾನಗಳನ್ನು ರೂಪಿಸುವ ಮೂಲಕ ರೈತರಿಗೆ ತಂತ್ರಜ್ಞಾನ ತಲುಪಿಸುವಲ್ಲಿ ಸಹಕಾರಿಯಾಗುತ್ತದೆ.

ಭಾರತದಲ್ಲಿಯ ಪ್ರಮುಖ ಮಣ್ಣಿನ ಪ್ರಕಾರಗಳು

ನಮ್ಮ ದೇಶದ ಮಣ್ಣುಗಳನ್ನು ಪ್ರಮುಖವಾಗಿ ಐದು ವಿಧಗಳಾಗಿ ವಿಂಗಡಿಸಬಹುದು.

. ರೇವೆ ಮಣ್ಣು (ಅಲ್ಯುವಿಯಲ್ ಸಾಯಿಲ್ಸ್)

ನದಿಯ ಪ್ರವಾಹ, ಪ್ರವಾಹದ ಪ್ರಭಾವ ಹೊಂದಿದ ಈ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ರೇವೆ ಕಣಗಳನ್ನು ಹೊಂದಿದ್ದು ದೇಶದ ಸುಮಾರು ೪೦% ಪ್ರದೇಶವನ್ನು ಆವರಿಸಿದೆ. ಈ ಮಣ್ಣು ದೇಶದ ಪ್ರಮುಖ ನದಿಗಳಾದ ಗಂಗಾ, ಸತ್ಲೇಜ್, ಯಮುನಾ, ಬ್ರಹ್ಮಪುತ್ರಾ ನದಿಗಳು ಹಿಮಾಲಯದಿಂದ ತಂದ ಮೂಲ ಶಿಲೆಯಿಂದ ಉದ್ಭವಿಸಿದ ಮಣ್ಣುಗಳಾಗಿವೆ. ಉತ್ತರ ಭಾರತದ ರಾಜ್ಯಗಳಾದ ಪಂಜಾಬ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಆಸ್ಸಾಂ ರಾಜ್ಯಗಳಲ್ಲಿ ಕಂಡುಬರುತ್ತವೆ. ಇದರಂತೆ ದಕ್ಷಿಣದ ಭಾಗದಲ್ಲಿ ಕಂಡುಬರುವ ಮಹಾನದಿ, ಕೃಷ್ಣಾ, ಗೋದಾವರಿ ಹಾಗೂ ಕಾವೇರಿ ನದಿಗಳ ಮುಖಜ ಪ್ರದೇಶಗಳಲ್ಲಿ ಈ ಪ್ರಕಾರದ ಮಣ್ಣು ನಮಗೆ ಸಿಗುತ್ತದೆ. ಕೃಷಿಯ ಪ್ರಾಮುಖ್ಯತೆಯಿಂದ ಈ ರೇವೆ ಮಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ವಿಶಿಷ್ಟವಾದ ಸ್ಥಾನ ಪಡೆದಿದೆ.

. ಕೆಂಪು ಹಾಗೂ ಲ್ಯಾಟರೈಟ್ ಮಣ್ಣು

ದೇಶದ ಸುಮಾರು ೩೦% ಪ್ರದೇಶವನ್ನು ಆವರಿಸಿರುವ ಈ ಮಣ್ಣು ಪ್ರಮುಖವಾಗಿ ಪೂರ್ವ ಮಧ್ಯಪ್ರದೇಶ, ಬಿಹಾರದ ಪ್ರಸ್ಥಭೂಮಿ, ಓರಿಸ್ಸಾ, ಪಶ್ಚಿಮ ಬಂಗಾಳದ ಕೆಲ ಭಾಗಗಳು, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಮಣ್ಣು ವಿವಿಧ ಆಳವನ್ನು ಹೊಂದಿದ್ದು ಕಡಿಮೆ ನೀರು ಹಿಡಿದಿಟ್ಟುಕೊಳ್ಳುವ ಗುಣಧರ್ಮವನ್ನು ಹೊಂದಿದೆ.

. ಕಪ್ಪು ಮಣ್ಣು

ದೇಶದ ಸುಮಾರು ೨೪% ಪ್ರದೇಶವನ್ನು ಆಕ್ರಮಿಸಿರುವ ಈ ಮಣ್ಣು ಮಹಾರಾಷ್ಟ್ರ, ಸೌರಾಷ್ಟ್ರ, ಮಾಳ್ವಾ ಹಾಗೂ ದಕ್ಷಿಣ ಮಧ್ಯ ಪ್ರದೇಶದಲ್ಲಿ ಹರಡಿದೆ. ದಕ್ಷಿಣದಲ್ಲಿ ಗೋದಾವರಿ ಹಾಗೂ ಕೃಷ್ಣಾ ನದಿಗಳ ಪ್ರಸ್ಥಭೂಮಿಯಲ್ಲಿ ಇವು ಪ್ರಮುಖವಾಗಿ ಕಂಡುಬರುತ್ತವೆ. ಕೃಷಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುವ ಈ ಮಣ್ಣು ಸೂಕ್ತವಾದ ವೈಜ್ಞಾನಿಕ ನಿರ್ವಹಣಾ ಕ್ರಮಗಳಿಂದ ನಿರ್ವಹಿಸಲ್ಪಟ್ಟರೆ ಉತ್ತಮ ಫಸಲು ನೀಡುವಲ್ಲಿ ಸಹಕಾರಿಯಾಗುತ್ತವೆ.

. ಮರುಭೂಮಿ ಮಣ್ಣು

ದೇಶದ ಒಟ್ಟಾರೆ ಮಣ್ಣಿನ ಪ್ರಕಾರಗಳಲ್ಲಿ ಮರುಭೂಮಿಯ ಮಣ್ಣು ಸುಮಾರು ೬ ರಿಂದ ೭ ಪ್ರತಿಶತ ಪ್ರದೇಶವನ್ನು ಹೊಂದಿದ್ದು ಪ್ರಮುಖವಾಗಿ ಪಶ್ಚಿಮ ಹಾಗೂ ವಾಯುವ್ಯ ಭಾರತದಲ್ಲಿ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಿರುವುದರಿಂದ ಇವುಗಳ ಕೃಷಿ ಪ್ರಾಮುಖ್ಯತೆಯು ಅಲ್ಲಿ ಲಭ್ಯವಿರುವ ನೀರಾವರಿ ಸೌಲಭ್ಯಗಳ ಮೇಲೆ ಅವಲಂಬಿಸಿರುತ್ತದೆ.

. ಗುಡ್ಡಗಾಡು ಪ್ರದೇಶದ ಮಣ್ಣು

ದೇಶದ ವಿವಿಧ ಗುಡ್ಡಗಾಡು ಪ್ರದೇಶಗಳು ಹಾಗೂ ಅವುಗಳ ಕೆಳಭಾಗದ ಪ್ರದೇಶವನ್ನು ಆಕ್ರಮಿಸಿರುವ ಈ ಮಣ್ಣು ಕೃಷಿಗೆ ಸೂಕ್ತವಾಗಿದ್ದು ಅದರಲ್ಲಿಯೂ ಪ್ರಮುಖವಾಗಿ ತೋಟಗಾರಿಕೆಗೆ ತುಂಬಾ ಯೋಗ್ಯವಾದ ಮಣ್ಣುಗಳಾಗಿವೆ.

ಕರ್ನಾಟಕದ ಮಣ್ಣುಗಳು

ಕರ್ನಾಟಕ ರಾಜ್ಯದಲ್ಲಿನ ಮಣ್ಣುಗಳನ್ನು ಐದು ವಿಧಗಳಾಗಿ ವರ್ಗೀಕರಿಸಬಹುದು.

೧. ಕೆಂಪು ಮಣ್ಣು

೨. ಕೆಂಪು ಮರಳು ಮಣ್ಣು

೩. ಕಪ್ಪು ಮಣ್ಣು

೪. ಜಂಬಿಟ್ಟಿಗೆ (ಲ್ಯಾಟರೈಟ) ಮಣ್ಣು

೫. ಕಡಲ ತೀರ ಪ್ರದೇಶದ ಕೆಂಪು ಮರಳು ಮೆಕ್ಕಲು ಮಣ್ಣು

. ಕೆಂಪು ಮಣ್ಣು : ಈ ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್ ಇದರ ಕೆಂಪು ಬಣ್ಣಕ್ಕೆ ಕಾರಣ. ಕೆಂಪು ಮಣ್ಣು ಬೆಂಗಳೂರು, ಕೋಲಾರ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಾಗೂ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಿಸ್ತಾರವಾಗಿಯೂ ಮತ್ತು ಕಪ್ಪು ಮಣ್ಣಿರುವ ಧಾರವಾಡ, ಹಾವೇರಿ, ಬೆಳಗಾವಿ, ರಾಯಚೂರು, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವರ್ಷಕ್ಕೆ ೬೨ ರಿಂದ ೧೦೦ ಸೆಂ.ಮೀ. ಮಳೆ ಬೀಳುತ್ತದೆ. ಮಣ್ಣಿನ ಆಳವು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾದರೂ ಸಾಮಾನ್ಯವಾಗಿ ಆಳ (>೯೦ ಸೆಂ.ಮೀ)ವಾಗಿರುತ್ತದೆ. ಇದು ಗ್ರ್ಯಾನೈಟ್, ನೈಸಿಕ್ ಮತ್ತು ತಟಸ್ಥ ಆಮ್ಲತೆಯಿಂದ ಕೂಡಿರುವ ಬಂಡೆಗಳಿಂದ ಉದ್ಭವಿಸಿದೆ.

ಇದರಲ್ಲಿ ಶೇಕಡಾ ೧೦ – ೨೫ ಭಾಗ ಜೇಡಿ ಇರುತ್ತದೆ. ತೇವಾಂಶವನ್ನು ತಡೆ ಹಿಡಿಯುವ ಗುಣದಲ್ಲಿ ಕೆಂಪು ಮರಳು ಮಣ್ಣಿಗಿಂತ ಉತ್ತಮ. ಇದರ ಸಾವಯವ ಹಾಗೂ ಸಸ್ಯ ಪೋಷಕಾಂಶ ಕಡಿಮೆ. ಈ ಮಣ್ಣಿನಲ್ಲಿರುವ ಜೇಡಿ, “ಕೆಯೋಲಿನೈಟ್” ಎಂಬ ಖನಿಜದಿಂದ ಕೂಡಿದೆ. ಆದ್ದರಿಂದ ಕೆಂಪು ಮಣ್ಣಿನಲ್ಲಿ ಬೆಳೆಯುವ ಬೆಳೆಗಳಿಗೆ ಕಪ್ಪು ಮಣ್ಣಿಗಿಂತ ಹೆಚ್ಚಿನ ನೀರು ಮತ್ತು ಗೊಬ್ಬರ ಬೇಕಾಗುತ್ತದೆ. ಇದರ ರಸಸಾರ ಸಮಧಾತುವಾಗಿರುತ್ತದೆ. ನೀರಾವರಿ ಅನುಕೂಲ ಇದ್ದಾಗ ಎಲ್ಲ ಬೆಳೆಗಳನ್ನೂ ಬೆಳೆಯಬಹುದು.

. ಕೆಂಪು ಮರಳು ಮಣ್ಣು: ಕೆಂಪು ಮರಳು ಮಣ್ಣಿಗೂ ಕೆಂಪು ಮಣ್ಣಿಗೂ ಇರುವ ವ್ಯತ್ಯಾಸವೆಂದರೆ ಅದರ ಲಘು ರಚನೆ ಮತ್ತು ಕಡಿಮೆ ಆಳ. ಆದ್ದರಿಂದ ಸಾಧಾರಣವಾಗಿ ಇದರ ತೇವಾಂಶವನ್ನು ತಡೆದು ಹಿಡಿಯುವ ಶಕ್ತಿ ಹಾಗೂ ಸಸ್ಯ ಪೋಷಕಗಳ ಅಂಶ ಕಡಿಮೆ. ಕೆಂಪು ಮರಳು ಮಣ್ಣು ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ನಾಲೆ ಪ್ರದೇಶದ ತಾಲ್ಲೂಕುಗಳಲ್ಲಿ, ಬೆಂಗಳೂರು ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಹಾಗೂ ಕೋಲಾರ ಜಿಲ್ಲೆಯ ಉತ್ತರ ಭಾಗ ಮತ್ತು ತುಮಕೂರು ಜಿಲ್ಲೆಯಲ್ಲಿ ಇದೆ. ಈ ಪ್ರದೇಶಗಳಲ್ಲಿ ಸಾಧಾರಣವಾಗಿ ಒಣ ಹವಾಗುಣವಿದ್ದು ವರ್ಷಕ್ಕೆ ಸರಾಸರಿ ೩೭.೫ – ೫೫.೦ ಸೆಂ.ಮೀ. ಮಳೆ ಬೀಳುತ್ತದೆ. ನೀರಾವರಿ ಇದ್ದಾಗ ವಿಶೇಷವಾಗಿ ಆಲೂಗಡ್ಡೆ, ಈರುಳ್ಳಿ, ಸೌತೆ, ಬದನೆ, ಎಲೆಕೋಸು, ಮೆಣಸಿನಕಾಯಿ ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ.

. ಕಪ್ಪು ಮಣ್ಣು: ಕರ್ನಾಟಕ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಕೆಂಪು ಮಣ್ಣು ಪ್ರಧಾನವಾಗಿರುವಂತೆ ಉತ್ತರ ಭಾಗದ ಜಿಲ್ಲೆಗಳಲ್ಲಿ ಕಪ್ಪು ಅಥವಾ ಎರೆ ಮಣ್ಣು ಪ್ರಧಾನವಾಗಿದೆ. ಇದು ವಿಸ್ತಾರವಾಗಿ ಬಳ್ಳಾರಿ, ಧಾರವಾಡ, ಬೆಳಗಾವಿ, ಬಿಜಾಪುರ, ರಾಯಚೂರು, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಮೈಸೂರು ಜಿಲ್ಲೆಯ ಚಾಮರಾಜನಗರ, ಯಳಂದೂರು ತಾಲ್ಲೂಕುಗಳ ಕೆಲವೆಡೆ ಸಹ ಕಪ್ಪು ಮಣ್ಣು ಇದೆ. ಕೃಷ್ಣಾ ನದಿಯ ಉತ್ತರ ಭಾಗದಲ್ಲಿರುವ ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ಬೀದರ್ ಜಿಲ್ಲೆಗಳಲ್ಲಿನ ಕಪ್ಪು ಮಣ್ಣು “ಡೆಕ್ಕನ್ ಟ್ರ‍್ಯಾಪ್” ಬಂಡೆಯಿಂದ ಉದ್ಭವಿಸಿದೆ. ಇತರ ಪ್ರದೇಶಗಳಲ್ಲಿನ ಕಪ್ಪು ಮಣ್ಣು ಶಿಸ್ಟ್ ಮತ್ತು ನೈಸಿಕ್ ಸಮ್ಮಿಶ್ರ ಮೂಲಗಳಿಂದ ಉಂಟಾಗಿದೆ. ಧಾರವಾಡ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಪ್ಪು ಮಣ್ಣಿನ ಪಕ್ಕದಲ್ಲಿ ಕೆಂಪು ಮಣ್ಣಿರುವುದೂ ಕಂಡು ಬಂದಿದೆ. ಕಪ್ಪು ಮಣ್ಣಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಸರಾಸರಿ ೪೦ ರಿಂದ ೭೦ ಸೆ.ಮೀ. ಮಳೆಯಾಗುತ್ತದೆ. ಈ ಮಣ್ಣು ಉತ್ಕೃಷ್ಟವಾದುದೆಂದು ಪ್ರಪಂಚದಲ್ಲೆಲ್ಲ ಪ್ರಸಿದ್ಧಿಯಾಗಿವೆ. ಮುಖ್ಯವಾಗಿ ಜೋಳ, ಹತ್ತಿ, ತೊಗರೆ, ಕಡಲೆ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯುತ್ತಾರೆ.

ಕಪ್ಪು ಮಣ್ಣು ಕಡಿಮೆ ಆಳ (೩೦ ಸೆಂ.ಮೀ.), ಮಧ್ಯಮ ( ೩೦ – ೯೦ ಸೆಂ.ಮೀ) ಹಾಗೂ ಆಳ (> ೯೦ ಸೆಂ.ಮೀ) ಎಂದು ವಿಂಗಡಿಸುವುದು ಸಾಮಾನ್ಯ. ಸುಣ್ಣದ ಹರಳುಗಳು ಮತ್ತು ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟನ್ನು ಕಾಣುತ್ತೇವೆ. ಕಪ್ಪು ಮಣ್ಣಿನ ಬಣ್ಣಕ್ಕೆ, ಭಾಗಶಃ ಹ್ಯೂಮಸ್ ಅಥವಾ ಮಣ್ಣಿಗೆ ಸೇರಿದ ಸಸ್ಯ ಭಾಗಗಳು ವಿಘಟನೆಯಾಗಿ ಮೇಲೆ ಉಳಿಯುವ ಕಪ್ಪು ಅಥವಾ ಕಂದು ಬಣ್ಣದ ವಸ್ತು ಕಾರಣ. ಕಪ್ಪು ಮಣ್ಣಿನ ಜೇಡಿ ಮಾಂಟ್‌ಮರಿಲೊನೈಟ್ ಖನಿಜವನ್ನುಳ್ಳದ್ದಾಗಿರುತ್ತದೆ. ಈ ಜೇಡಿಯು ಹೆಚ್ಚಿನ ಜಿಗುಟು ಗುಣವುಳ್ಳದ್ದು. ಈ ಮಣ್ನಿನ ರಸಸಾರ ಸಾಮಾನ್ಯವಾಗಿ ೭ – ೮.೫ ರ ವರೆಗೆ ಇರುತ್ತದೆ. ಕ್ಷಾರ ಪರಿಸ್ಥಿತಿಯಲ್ಲಿ ಇದು ೧೦ರ ವರೆಗೂ ಮುಟ್ಟುತ್ತದೆ. ಈ ಮಣ್ಣಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ತೃಪ್ತಿಕರವಾದ ಪ್ರಮಾಣದಲ್ಲಿರುತ್ತದೆ. ಕಪ್ಪು ಮಣ್ಣು ನೀರುಂಡಾಗ ಅರಳಿ ಹಿಗ್ಗುತ್ತದೆ ಮತ್ತು ಒಣಗಿದಾಗ ಕುಗ್ಗುತ್ತದೆ; ತೇವಾಂಶ ಇಲ್ಲದಿರುವಾಗ ಕುಗ್ಗುವಿಕೆ ವೈಪರೀತ್ಯವನ್ನು ಮುಟ್ಟುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಈ ಮಣ್ಣಿನಲ್ಲಿ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಬಿರುಕುಗಳ ಮೇಲ್ಭಾಗದ ಮಣ್ಣು ಇಳಿಯುತ್ತದೆ. ಈ ರೀತಿ ಮಣ್ಣು ಕೆಳಗೆ ಮೇಲೆ ಆಗುವುದರಿಂದ ಇದರ ಫಲವತ್ತು ನಶಿಸುವುದಿಲ್ಲ.

. ಜಂಬಿಟ್ಟಿಗೆ ಮಣ್ಣು: ಈ ಮಣ್ಣು ಪಶ್ಚಿಮ ಘಟ್ಟಗಳ, ಹೆಚ್ಚು ಮಳೆ ಬೀಳುವ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಧಾರವಾಡ ಜಿಲ್ಲೆಯ ಪಶ್ಚಿಮ ಭಾಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇದೆ. ಈ ಪ್ರದೇಶದಲ್ಲಿ ವರ್ಷಕ್ಕೆ ಸರಾಸರಿ ೨೦೦ – ೨೭೫ ಸೆಂ.ಮೀ. ಮಳೆ ಬೀಳುತ್ತದೆ. ಕಡಿಮೆ ಮಳೆ ಬೀಳುವ ಬೆಂಗಳೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಹ ಕೆಲವೆಡೆ ಜಂಬಿಟ್ಟಿಗೆ ಮಣ್ಣಿದೆ. ಉಷ್ಣವಲಯ ತೇವಾಂಶವಿರುವ ಹವಾಗುಣದಲ್ಲಿ ಸಿಲಿಕಾ ಕರಗಿ ಬಸಿದು ಕೆಳಭಾಗಕ್ಕೆ ಇಳಿದು ಮೇಲುಭಾಗದಲ್ಲಿ ಕಬ್ಬಿಣ ಹೆಚ್ಚಾಗುತ್ತಾ ಹೋಗುತ್ತದೆ. ಕಬ್ಬಿಣ ಮತ್ತು ಅಲ್ಯುಮಿನಿಯಮ್ ಶೇಖರಣೆಯಾಗಿ ಜಂಬಿಟ್ಟಿಗೆ ಅಸ್ತಿತ್ವಕ್ಕೆ ಬರುತ್ತದೆ. ಹೆಚ್ಚು ಮಳೆ ಬಿದ್ದು ತೀವ್ರವಾಗಿ ಬಸಿಯುವ ಕಾರಣದಿಂದ ಜಂಬಿಟ್ಟಿಗೆ ಮಣ್ಣುಗಳಲ್ಲಿ ಸ್ವಾಭಾವಿಕವಾಗಿ ಸುಣ್ಣದ ಕೊರತೆಯಿಂದ ಆಮ್ಲತೆ ಹೆಚ್ಚಾಗಿ ಕೆಲವು ವೇಳೆ ರಸಸಾರ ೪ಕ್ಕೂ ಕಡಿಮೆಯಾಗುತ್ತದೆ. ಇದು ತೇವ ಉಳಿಸಿಕೊಳ್ಳುವ ಶಕ್ತಿ ಕಡಿಮೆಯಾದ್ದರಿಂದ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಹೆಚ್ಚು. ಈ ಪ್ರದೇಶಗಳಲ್ಲಿ ವ್ಯವಸಾಯಕ್ಕೆ ಮುಖ್ಯ ಆಧಾರ ಮಳೆ. ಹಾಗೆಯೇ ಜಂಬಿಟ್ಟಿಗೆ ಮಣ್ಣಿನಲ್ಲಿ ಸಾವಯವ ವಸ್ತು ಹೆಚ್ಚು. ಸಾರಜನಕದಿಂದ ಕೂಡಿದ್ದು ರಂಜಕ ಮತ್ತು ಸುಣ್ಣದ ಕೊರತೆ ಅತಿ ಹೆಚ್ಚಿರುತ್ತದೆ.

. ಕಡಲು ತೀರ ಪ್ರದೇಶದ ಮೆಕ್ಕಲು ಮಣ್ಣು: ಪಶ್ಚಿಮ ಸಮುದ್ರ ತೀರದಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿರಿದಾದ ಸೀಳು ನೆಲದಲ್ಲಿ ಈ ಮಣ್ಣು ಇದೆ. ಪಶ್ಚಿಮ ಘಟ್ಟಗಳಿಂದ ತೊಳೆದು ಬಂದ ಈ ಮಣ್ಣು ಸಮುದ್ರ ತೀರದಲ್ಲಿ ಶೇಖರಿಸಲ್ಪಟ್ಟಿದೆ. ಈ ಮೆಕ್ಕಲು ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ಆಮ್ಲತೆಯನ್ನು ಬಿಟ್ಟರೆ ಮಿಕ್ಕ ಗುಣಗಳಲ್ಲಿ ಕೆಂಪು ಮರಳು ಮಣ್ಣನ್ನು ಹೋಲುತ್ತದೆ. ಈ ಮಣ್ಣಿಗೆ ಸುಣ್ಣ ಬೆರೆಸಿ ಸರಿಪಡಿಸಬಹುದು.

ಮೇಲೆ ತಿಳಿಸಿದ ಪ್ರಮುಖ ಮಣ್ಣುಗಳಲ್ಲದೇ ಅಲ್ಲಲ್ಲಿ ಹುಳಿ, ಚೌಳು ಮತ್ತು ಕ್ಷಾರ ಮಣ್ಣುಗಳನ್ನು ಕಾಣಬಹುದು. ಹೆಚ್ಚಿನ ಮಳೆಯಿಂದ ಇವು ಸ್ಥಳೀಯ ಕಾರಣಗಳಿಂದ ಉಂಟಾಗುವುವು. ಮಣ್ಣಿನಲ್ಲಿ ಸುಣ್ಣ ಮೊದಲಾದ ಪ್ರತ್ಯಾಮ್ಲಗಳ ಮೊತ್ತ ಕ್ರಮೇಣ ಕಡಿಮೆಯಾಗಿ ಮಣ್ಣು ಹುಳಿಮುಖವಾಗುತ್ತದೆ. ತೋಟದಲ್ಲಿ ಹೆಚ್ಚಾಗಿ ಗಿಡ ಸೊಪ್ಪು ಕೊಳೆಯುವುದರಿಂದ ಆಮ್ಲತೆ ಅಧಿಕವಾಗಿ, ಜೀವಾಣುಕ್ರಿಯೆ ಕುಂದಿ, ಆವಶ್ಯಕ ಸಸ್ಯ ಪೋಷಕಗಳು ಒದಗುವುದು ಸಾಧ್ಯವಾಗದೆ, ಸಸ್ಯ ಬೆಳವಣಿಗೆ ಕುಂಠಿತವಾಗುವ ಪರಿಸ್ಥಿತಿ ಉಂಟಾಗುತ್ತದೆ. ತಕ್ಕ ಪ್ರಮಾಣದಲ್ಲಿ ಸುಣ್ಣವನ್ನು ಸೇರಿಸಿ ಹುಳಿಯನ್ನು ನಿವಾರಿಸಿ ಮಣ್ಣನ್ನು ತಟಸ್ಥವಾಗುವಂತೆ ಮಾಡಬೇಕು. ಈ ಹುಳಿ ಮಣ್ಣಿನ ಸಮಸ್ಯೆ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮಣ್ಣು ಚೌಳಾಗುವುದಕ್ಕೆ ಬಂಡೆ ಖನಿಜಗಳು ಶಿಥಿಲವಾದಾಗ ಉಪ್ಪುಗಳು ಕರಗಿ ಬಸಿಯದೆ ಉಳಿಯುವುದೇ ಮೊದಲನೆಯ ಕಾರಣ. ಇಂಥಾ ಮಣ್ಣುಗಳು ಮಳೆ ಕಡಿಮೆಯಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ತಗ್ಗು ಪ್ರದೇಶಗಳಲ್ಲಿ ನೀರು ಬಸಿಯುವುದು ಸಾಧ್ಯವಾಗದಿರುವುದರಿಂದ ಉಪ್ಪುಗಳ ಮೊತ್ತ ಹೆಚ್ಚಾಗುತ್ತದೆ. ಭೂಮಿಯನ್ನು ನೀರಾರಿಗೆ ತಂದಾಗ ೯೦ – ೧೨೦ ಸೆ.ಮೀ. ಕೆಳಗಡೆ ಉಪ್ಪುಗಳಿದ್ದರೆ ಅವು ಮೇಲಕ್ಕೆ ಬಂದು ಶೇಖರಣೆಯಾಗಿ ಚೌಳಿನ ಸಮಸ್ಯೆ ಉದ್ಭವಿಸುವುದು ಸಾಮಾನ್ಯ. ಹತೋಟಿಯಿಂದ ಸರಿಯಾದ ನೀರಿನ ನಿರ್ವಹಣೆಯಿಂದ ಈ ರೀತಿ ಉಪ್ಪಾಗದಂತೆ ನೋಡಿಕೊಳ್ಳಬಹುದು.

ಕರ್ಲು ಮಣ್ಣು: ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿನ ಒಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಕರಲು ಮಣ್ಣು ಇದೆ. ಈ ಮಣ್ಣಿನಲ್ಲಿ ಕ್ಷಾರತೆ ಇದ್ದು ಅದನ್ನು ಸರಿಪಡಿಸಲು ವಿಶೇಷ ಕ್ರಮಗಳನ್ನು ಅನುಸರಿಸಬೇಕು.

ಭೂಅವನತಿಯನ್ನು ರೈತರು ಹೇಗೆ ಅರ್ಥೈಸುತ್ತಾರೆ?

ಭೂಮಿಯನ್ನು ನಮ್ಮ ಹಿಂದಿನ ಹಿರಿಯರು ದೇವರಂತೆ ಪೂಜಿಸುತ್ತಿದ್ದುದು ಮತ್ತು ಅದರ ಸೂಕ್ತವಾದ ರಕ್ಷಣೆ ಹಾಗೂ ನಿರ್ವಹಣೆ ಮಾಡುತ್ತ ಬಂದಿದ್ದರಿಂದ ಅವುಗಳು ಇಂದಿಗೂ ಫಲವತ್ತಾಗಿ ಉಳಿಯಲು ಕಾರಣವಾಗಿವೆ.ಅಂದಿನ ರೈತರು ತಮ್ಮ ಜೀವನವನ್ನು ಮಣ್ಣು ಹಾಗೂ ನಿಸರ್ಗದೊಂದಿಗೆ ನಿಕಟವಾಗಿ ಬೆಸೆದುಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಅತೀವವಾದ ಗೌರವದಿಂದ ಕಾಣುತ್ತಿದ್ದರು ಹಾಗೂ ಅವರು ಈ ಸಂಪನ್ಮೂಲಗಳ ಪ್ರಾಮುಖ್ಯತೆಯನ್ನು ವೈಜ್ಞಾನಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ಅರ್ಥೈಸಿಕೊಂಡಿದ್ದರು. ಮನುಕುಲದ ಅಳಿವು ಹಾಗೂ ಉಳಿವುಗಳು ಈ ಸಂಪನ್ಮೂಲಗಳ ಹೊರತಾಗಿ ಇಲ್ಲ ಎಂಬುದು ಅವರ ಆಳವಾದ ವಿಚಾರ ಹಾಗೂ ಅನುಭವವಾಗಿತ್ತು. ವಿವಿಧ ಪ್ರಕಾರದ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣು ಹಾಗೂ ನೀರು ಪ್ರಮುಖವಾದವುಗಳಾಗಿದ್ದು ಮನುಕುಲದ ಜೀವನ ಕ್ರಮಗಳ ಮೇಲೆ ತಮ್ಮದೇ ಆದ ಪ್ರಭಾವವನ್ನು ಹೊಂದಿವೆ. ಈ ಎರಡು ಮೂಲ ಸಂಪನ್ಮೂಲಗಳಿಲ್ಲದೇ ಜೀವನವು ಕಷ್ಟಸಾಧ್ಯ ಎಂಬುದು ಎಲ್ಲರೂ ತಿಳಿದ ವಿಷಯ. ಈ ರೀತಿಯಾಗಿ ನೆಲ ಹಾಗೂ ಜಲ ಸಂಪನ್ಮೂಲಗಳೊಂದಿಗೆ ಆಳವಾದ ಸಂಬಂಧವನ್ನು ರೈತ ಸಮುದಾಯ ಹೊಂದಿದ್ದರಿಂದಲೇ ಅವುಗಳ ಸಂರಕ್ಷಣಾ ಅಭೀವೃದ್ಧಿ ಹಾಗೂ ನಿರ್ವಹಣೆಯ ವಿಚಾರವಾಗಿ ಸಾಕಷ್ಟು ಮಾಹಿತಿಯನ್ನು ಹೊಂದಿದ್ದರು. ಸಮುದಾಯ ಹಾಗೂ ಅನುಭವಗಳ ಆಧಾರದ ಮೇಲೆ ಸಂಶೋಧನಾತ್ಮಕ ರೀತಿಯಲ್ಲಿ ಈ ಸಂಪನ್ಮೂಲಗಳನ್ನು ನಿರ್ವಹಿಸುವ ಮೂಲಕ, ಅಲ್ಲಿ ಬರಬಹುದಾದ ಅಪಾಯಗಳನ್ನು ನಿಭಾಯಿಸುವ ಕಾರ್ಯಕ್ಷಮತೆ ಹಾಗೂ ಕೌಶಲ್ಯತೆಗಳನ್ನು ಕಡಿಮೆ ಖರ್ಚಿನಲ್ಲಿ ಸಾಧಿಸುವ ಅನುಭವಗಳನ್ನು ಹೊಂದಿದ್ದರು. ಈ ಅನುಭವಗಳು ಇಂದಿಗೂ ಅತ್ಯಮೂಲ್ಯವಾದವುಗಳು.

ರೈತರು ಐತಿಹಾಸಿಕ ಅನುಭವಗಳ ಪ್ರಾಮುಖ್ಯತೆ ಹೀಗೆ ಇರುವುದರಿಂದ, ಇಂದು ಈ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ನಡೆಯುತ್ತಿರುವ ವೈಜ್ಞಾನಿಕ ಪ್ರಯತ್ನಗಳು ಅಪಾರ ಅನುಭವ ಹೊಂದಿದ ರೈತರು ಐತಿಹಾಸಿಕವಾದ ನಿರ್ವಹಣೆಯಲ್ಲಿ ಈ ಸಾಂಪ್ರದಾಯಿಕ ಜ್ಞಾನವನ್ನು ಬಳಸಬೇಕಾಗಿದೆ. ಹೀಗಾದಾಗ ಮಾತ್ರ ನಮ್ಮ ಭೂ – ಸಂಪನ್ಮೂಲಗಳನ್ನು ಸುಸ್ಥಿರವಾದ ಕೃಷಿ ಉತ್ಪಾದನೆಯತ್ತ ಒಯ್ಯಲು ಸಾಧ್ಯ. ಇಂದಿನ ರೈತರಿಗೆ ಸಾಮಾನ್ಯವಾಗಿ ಭೂ – ಸಂಪನ್ಮೂಲಗಳ ಅವನತಿಗೆ ಕಾರಣವಾದ ಅಂಶಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಇದೆ. ಭೂ – ಸಂಪನ್ಮೂಲಗಳ ಅಸಮರ್ಪಕ ಬಳಕೆ, ಅವುಗಳಿಗೆ ನೀಡುವ ಉಪಚಾರ ಹಾಗೂ ಅವುಗಳನ್ನು ನಿರ್ವಹಿಸುವ ಪದ್ಧತಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೋಂದುವುದರ ಮೂಲಕ ಭೂ – ಸಂಪನ್ಮೂಲಗಳ ಸಮರ್ಪಕವಾಗಿ ಅರ್ಥೈಸಿಕೊಂಡು ಅದನ್ನು ತಡೆಗಟ್ಟುವತ್ತ ಗಮನಹರಿಸಬಹುದಾಗಿದೆ. ಪ್ರದೇಶದಿಂದ ಪ್ರದೇಶಕ್ಕೆ ಭೂ – ಸಂಪನ್ಮೂಲಗಳ ಅವನತಿ ಹಾಗೂ ಅವುಗಳ ಸಮರ್ಪಕ ನಿರ್ವಹಣೆ ಮತ್ತು ಸೂಕ್ತವಾದ ಬಳಕೆಯ ಅನುಭವಗಳು ಬೇರೆಯಾದರೂ ಅವುಗಳ ಉದ್ದೇಶ ಮಾತ್ರ ಅವುಗಳ ಸೂಕ್ತ ನಿರ್ವಹಣೆಯತ್ತಲೇ ಎಂಬುದು ಪ್ರಮುಖ. ರೈತರ ಈ ಅನುಭವಗಳು ಆ ಪ್ರದೇಶದಲ್ಲಿರುವ ಮಣ್ಣಿನ ಪ್ರಕಾರ, ಅವುಗಳ ಗುಣಧರ್ಮಗಳು, ಅವುಗಳ ಬಳಕೆಯ ವಿಧಾನ ಹಾಗೂ ಪ್ರಾದೇಶಿಕವಾಗಿ ಪ್ರಸ್ತುತದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ – ಗತಿಗಳನ್ನು ಅವಲಂಬಿಸಿರುತ್ತವೆ.

ಭೂಮಿಯ ಆಂತರಿಕ ಗುಣಗಳು

ಪ್ರತಿ ಪ್ರದೇಶದಲ್ಲಿ ಕಂಡುಬರುವ ಮಣ್ಣುಗಳು ಅವುಗಳ ಸಹಜವಾದ ಅಥವಾ ನೈಸರ್ಗಿಕ ಗುಣಧರ್ಮಗಳೊಂದಿಗೆ ಗುರುತಿಸಿಕೊಳ್ಳುತ್ತವೆ. ಈ ಆಂತರಿಕವಾದ ಸಹಜ ಗುಣಧರ್ಮಗಳನ್ನು ಮೂಲತಃವಾಗಿ ಬದಲಾಯಿಸುವುದು ಅಥವಾ ಪರಿವರ್ತಿಸುವುದು ಸಾಧ್ಯತೆಗೆ ಮೀರಿದ ವಿಚಾರ. ಉದಾಹರಣೆಗೆ ಹೇಳುವುದಾದರೆ, ಮಣ್ಣಿನಲ್ಲಿರುವ ವಿವಿಧ ಕಣಗಳ ಪ್ರಮಾಣವು ಅಲ್ಲಿರುವ ಮರಳು, ರೇವೆ ಹಾಗೂ ಜೇಡಿ ಕಣಗಳ ಪ್ರಮಾಣವನ್ನು ಬದಲಾಯಿಸುವುದು ಕಷ್ಟದಾಯಕ ಪ್ರಕ್ರಿಯೆ. ಹಲವಾರು ಪ್ರಯತ್ನಗಳ ನಂತರವೂ ಅವು ಮೂಲಭೂತವಾಗಿ ತಮ್ಮದೇ ಆದ ಗುಣಧರ್ಮಗಳನ್ನು ಮುಂದುವರಿಸಿಕೊಂಡು ಹೋಗುತ್ತವೆ. ಹಿಂದೆ ಜಮೀನಿನಲ್ಲಿ ಮರಳಿನ ಪ್ರಮಾಣ ಹೆಚ್ಚಾದಾಗ ಕೆರೆ – ಕಟ್ಟೆಗಳಿಂದ ಹೂಳನ್ನು ತಂದು ಬೇಸಿಗೆ ಸಮಯದಲ್ಲಿ ಪ್ರತಿವರ್ಷ ಹಾಕುವುದರ ಮುಖಾಂತರ ಸ್ವಲ್ಪ ಪ್ರಮಾಣದಲ್ಲಿ ಅಲ್ಲಿ ರೇವೆ ಹಾಗೂ ಜೇಡಿ ಕಣಗಳ ಪ್ರಮಾಣವನ್ನು ಹೆಚ್ಚಿಸಿ ವಿವಿಧ ಪ್ರಕಾರದ ಬೆಳೆಗಳನ್ನು ಬೆಳೆಯುವಲ್ಲಿ ಸಾಧ್ಯವಾಗುತ್ತಿತ್ತು. ಆದರೆ ಈ ಕೆಲಸ ತುಂಬಾ ಕಷ್ಟದಾಯಕ ಹಾಗೂ ವೆಚ್ಚದಾಯಕ. ಕೆಲವು ಶ್ರೀಮಂತ ರೈತರು ಕೆರೆಯ ಹೂಳು ಹಾಕುವ ಪದ್ಧತಿಯನ್ನು ಅನುಸರಿಸಿದರೆ ಸಂಪನ್ಮೂಲ ಬಡ ರೈತರಿಗೆ ಇದು ಅಸಾಧ್ಯವಾದದ್ದು.

ಹೀಗೆ ಐತಿಹಾಸಿಕ ಅನುಭವ ಹಾಗೂ ಕೂಲಂಕುಷವಾದ ವೀಕ್ಷಣೆಯ ಮುಖಾಂತರ ರೈತರು ತಮ್ಮ ಜಮೀನುಗಳಿಗೆ ಸೂಕ್ತವಾದ ಬೆಳೆಗಳು, ಬೆಳೆ ಪದ್ಧತಿಗಳನ್ನು ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಇದಲ್ಲದೇ ಆ ಜಮೀನುಗಳನ್ನು ಯಾವ ರೀತಿಯಾಗಿ ನಿರ್ವಹಿಸಬೇಕೆಂಬ ಸಂಪೂರ್ಣವಾದ ಜ್ಞಾನವು ಅವರಲ್ಲಿರುತ್ತದೆ. ರೈತರು ತಮ್ಮ ವಿವಿಧ ಪ್ರಕಾರದ ಜಮೀನುಗಳಿಂದ ಬರಬಹುದಾದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ವಿವಿಧ ಪ್ರಕಾರದ ತಂತ್ರಜ್ಞಾನದ ಅಳವಡಿಕೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ. ತಂತ್ರಜ್ಞಾನಗಳ ವಿಷಯವಾಗಿ ಹೇಳುವುದಾದರೆ, ರೈತರು ತಮ್ಮ ಜಮೀನಿಗೆ ಯಾವ ಪದ್ಧತಿ ಯೋಗ್ಯ, ಯಾವ ತಂತ್ರಜ್ಙಾನ ಬಳಸುವುದರಿಂದ ಯಾವ ರೀತಿಯಾಗಿ ವಿವಿಧ ಅಪಾಯಗಳನ್ನು ಕಡಿಮೆಗೊಳಿಸಬಹುದು ಅಥವಾ ನಿಯಂತ್ರಿಸಬಹುದೆಂದು ಸಮರ್ಪಕವಾಗಿ ಪ್ರಯೋಗ ಮಾಡಿ ಅನುಭವಗಳ ಆಧಾರದ ಮೇಲೆ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗುತ್ತಾರೆ. ಈ ರೀತಿಯ ಆಯ್ಕೆಗಳನ್ನು ಮಾಡುವಾಗ ತಂತ್ರಜ್ಞಾನಗಳು ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದ ಜ್ಞಾನಗಳಿಗೆ ಹೊಂದಿಕೊಂಡು ಹೋಗಲು ಸಾಧ್ಯವಿದೆ ಎಂದು ಮನಗಂಡ ನಂತರವಷ್ಟೇ ಅವುಗಳನ್ನು ಅಳವಡಿಸುವ ವಿಚಾರ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಸುತ್ತ ಮುತ್ತಲಿನ ರೈತರು ಇಂತಹ ತಂತ್ರಜ್ಞಾನಗಳನ್ನು ಪ್ರಯೋಗಿಸಿ ನೋಡಿದ ನಂತರ ಅಳವಡಿಸಿಕೊಳ್ಳುತ್ತಾರೆ.

ಇಂದು ಬದಲಾಗುತ್ತಿರುವ ವಾತಾವರಣ, ಈ ಬದಲಾವಣೆಗಳಿಂದ ಬರಬಹುದಾದ ಹೆಚ್ಚಿನ ಮಳೆಯ ಪ್ರಮಾಣ ಅಥವಾ ಅತಿಯಾದ ಉಷ್ಣತೆಯಂತಹ ಅಂಶಗಳು, ರಭಸವಾಗಿ ಬರುವ ಮಳೆಯಿಂದಾಗುವ ಮಹಾಪೂರಗಳು ವಿವಿಧ ನೈಸರ್ಗಿಕ ಸಂಪನ್ಮೂಲಗಳನ್ನು ಅದರಲ್ಲಿಯೂ ಮುಖ್ಯವಾಗಿ ಭೂ – ಸಂಪನ್ಮೂಲವನ್ನು ಅವನತಿಯತ್ತ ಎಳೆದೊಯ್ಯುತ್ತಲಿವೆ. ಕಷ್ಟದಿಂದ ಕೃಷಿ ಮಾಡುತ್ತಿರುವ ರೈತರ ಬದುಕಿಗೆ ಇವು ಇನ್ನಷ್ಟು ಹೊಸ ಆಹ್ವಾನಗಳನ್ನು ತಂದೊಡ್ಡಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿದುಬರುವ ವಿಚಾರವೆಂದರೆ ರೈತರು ಈ ಭೂ – ಸಂಪನ್ಮೂಲ ಅವನತಿಯ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ಅರಿತುಕೊಂಡು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯನ್ನು ಮನಗಾಣಬೇಕಾಗಿದೆ. ಈ ತಿಳುವಳಿಕೆಯ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪವಾದರೆ ಅದನ್ನು ಸಮರ್ಪಕವಾಗಿ ಅರ್ಥೈಸುವಲ್ಲಿ ರೈತರು ವಿಫಲರಾದರೆ ಭವಿಷ್ಯತ್ತಿನಲ್ಲಿ ತೊಂದರೆಗಳು ಸಮುದ್ರೋಪಾದಿಯಲ್ಲಿ ಬಂದೆರಗುವುದರಲ್ಲಿ ಸಂದೇಹವಿಲ್ಲ.