ಕುಸಿಯುತ್ತಿರುವ ಭೂಆರೋಗ್ಯದ ಲಕ್ಷಣಗಳು

ಕುಸಿಯುತ್ತಿರುವ ಭೂಮಿ ಆರೋಗ್ಯ ವಿವಿಧ ಲಕ್ಷಣಗಳನ್ನು ತಂದೊಡ್ಡುತ್ತಿವೆ. ಯಾವ ರೈತರು ತಮ್ಮ ಜೀವನೋಪಾಯಗಳಿಗಾಗಿ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆಯೋ ಅವರು ಭೂಮಿಯ ಆರೋಗ್ಯದ ಬಗ್ಗೆ ಉಳಿದವರಿಗಿಂತ ಹೆಚ್ಚು ತೋಂದರೆ ಅನುಭವಿಸಬೇಕಾಗಿರುವುದು ಒಂದೆಡೆಯಾದರೆ, ಒಕ್ಕಲುತನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕಬೇಕಾಗಿ ಬರಬಹುದು ಮತ್ತು ಬೆಳೆಯ ಇಳುವರಿ ಹಾಗೂ ಅದರ ಗುಣಮಟ್ಟ ಕಡಿಮೆಯಾಗಿ ರೈತರು ನಷ್ಟವನ್ನು ಎದುರಿಸುವಂತಾಗಬಹುದು. ಈಗಾಗಲೇ ನಮಗೆ ತಿಳಿದಿರುವಂತೆ ಪ್ರತಿ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಕಿದ್ದರೂ ಕೂಡಾ ಇಳುವರಿ ಅದಕ್ಕೆ ಅನುಗುಣವಾಗಿ ಹೆಚ್ಚುತ್ತಿಲ್ಲ ಎಂಬ ಕೊರಗು ಎಲ್ಲಡೆ ಕೇಳಬರುವುದು ಹೊಸದೇನಲ್ಲ. ಹಿಂದಿನ ದಿನಗಳನ್ನು ನೋಡಿದರೆ ಪ್ರಾರಂಭದಲ್ಲಿ ಕೇವಲ ಸಾರಜನಕಯುಕ್ತ ಗೊಬ್ಬರಗಳನ್ನು ಬಳಸುತ್ತಿದ್ದರು. ಆಮೇಲೆ ರಂಜಕ, ಪೋಟ್ಯಾಶ್ ಉಪಯೋಗ ಅದರೊಂದಿಗೆ ಸೇರಿತು. ಬರಬರುತ್ತ ಗಂಧಕದ ಕೊರತೆ, ತದನಂತರ ವಿವಿಧ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡು ಬಂದದ್ದರಿಂದ ಅವುಗಳ ಬಳಕೆ ಇಂದು ಅನಿವಾರ್ಯವಾಗಿದೆ. ಇವೆಲ್ಲವನ್ನು ನೋಡಿದಾಗ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಭೂಮಿ ದಿನದಿಂದ ದಿನಕ್ಕೆ ಬರಡಾಗುತ್ತಲಿದೆ. ಇಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಮಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಲಕ್ಷ್ಯ ವಹಿಸಬೇಕಾದುದು ಅನಿವಾರ್ಯ ಹಾಗೂ ಅತಿ ಅವಶ್ಯಕ ವಿಚಾರ. ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಳಸದೇ ಇರುವುದು ಮಣ್ಣಿನಲ್ಲಿಯ ಜೀವ ರಾಶಿಯ ಕೊರತೆಗೆ ಕಾರಣವಾಗಿದೆ.

ರೈತರನ್ನು ಭೂ – ಆರೋಗ್ಯದ ಬಗ್ಗೆ ವಿಚಾರಿಸಿದರೆ ಅವರು ವಿಧ ವಿಧವಾಗಿ ಉತ್ತರಿಸುವುದೂ ಉಂಟು. ಮಣ್ಣುಗಳ ಉತ್ಪಾದಕ ಶಕ್ತಿ ಕುಗ್ಗಿರುವ ವಿಷಯವನ್ನು ಹಲವಾರು ರೀತಿಯಲ್ಲಿ ರೈತರು ವಿಶ್ಲೇಷಿಸಬಲ್ಲರು. ಹಲವರ ಪ್ರಕಾರ ಜಮೀನೊಂದಕ್ಕೆ ನೀರಾವರಿ ನೀಡಿದಾಗ ಅಥವಾ ಚೆನ್ನಾಗಿ ಮಳೆ ಬಂದು ನಿಂತ ನಂತರ ಜಮೀನಿನ ಮೇಲ್ಪದರಿಗೆ ಸೇರಿದ ನೀರು ಜಮೀನಿನಲ್ಲಿ ಇಂಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದುದು ಅವರ ವೀಕ್ಷಣೆಯಾಗಿದೆ. ಹೀಗಿರುವುದರಿಂದ ನೀರಾವರಿ ಪದ್ಧತಿಯಲ್ಲಿ ವಿವಿಧ ಬದಲಾವಣೆಗಳು ಅವಶ್ಯಕವಾಗಿದೆ. ಇನ್ನು ಖುಷ್ಕಿ ಪ್ರದೇಶಗಳಲ್ಲಿಯ ಜಮೀನುಗಳು ಮಳೆಯ ನಂತರ ಮೇಲ್ಪದರು ಬಿಗಿದು ಗಟ್ಟಿಪದರಿನಂತಾಗುವುದರಿಂದ ಮೊಳಕೆಯೊಡೆದು ಮೇಲೆ ಬರುವ ಸಸಿಗಳಿಗೆ ಅಡೆ ತಡೆಯಾಗಿ ಸಸ್ಯಗಳ ಸಂಖ್ಯೆ ಕಡಿಮೆಯಾಗಬಹುದು. ಇಂತಹ ಪರಿಸ್ಥಿತಿ ವಿಪರೀತವಾಗಿದ್ದರೆ ಅಂತಹ ಜಮೀನಿನಲ್ಲಿ ಮರುಬಿತ್ತನೆ ಮಾಡುವ ಅವಶ್ಯಕತೆ ಬರಬಹುದು. ಈ ಎಲ್ಲ ಪರಿಸ್ಥಿತಿಗಳು ರೈತರಿಗೆ ಹೆಚ್ಚಿನ ವೆಚ್ಚ ತಂದೊಡ್ಡುವುದಲ್ಲದೇ ಆ ಜಮೀನಿನಿಂದ ಬರುವ ಉತ್ಪಾದನೆಯನ್ನು ಕಡಿಮೆಗೊಳಿಸುತ್ತವೆ.

ನಮ್ಮ ಪರಿಸರ ಪದ್ಧತಿಗಳ ಪ್ರಮುಖವಾದ ಅಂಗವಾಗಿರುವ ಮಣ್ಣು, ನಮ್ಮ ಜೀವನಕ್ರಮಗಳಿಗೆ ಪೂರಕವಾದ ಹಲವಾರು ಕಾರ್ಯಗಳನ್ನು ಮಾಡುತ್ತದೆ. ಕೃಷಿಕರಿಗೆ ಕೃಷಿ ಉತ್ಪಾದನೆ ತುಂಬಾ ಪ್ರಮುಖವಾದದ್ದು ಹಾಗೂ ಇದು ಪ್ರಧಾನವಾಗಿ ಜಮೀನಿನ ಉತ್ಪಾದಕ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಆದುದರಿಂದ ಕುಸಿಯುತ್ತಿರುವ ಭೂ ಆರೋಗ್ಯ ಬರೀ ಕೃಷಿಕರಿಗೆ ಸಂಬಂಧಿಸಿದ ವಿಷಯವಲ್ಲ, ಇದು ಇಡೀ ಪರಿಸರದ ಮೇಲೆ ಅವಲಂಬಿತರಾದವರೆಲ್ಲರಿಗೂ ಸಂಬಂಧಿಸಿದ್ದಾಗಿದೆ, ದೇಶದ ಆಹಾರ ಭದ್ರತೆಯೂ ಇದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಸಾವಯವ ಪದಾರ್ಥ

ನಮಗೆ ತಿಳಿದಂತಹ ವಿವಿಧ ಅಂಶಗಳು, ವೈಜ್ಞಾನಿಕ ಅಧ್ಯಯನಗಳು ಹಾಗೂ ಸಂಶೋಧನೆಗಳಿಂದ ತಿಳಿದುಬಂದ ವಿಚಾರವೆಂದರೆ ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಕಡಿಮೆಯಾಗುವುದರಿಂದಾಗಿ ಭೂಮಿಯ ಆರೋಗ್ಯದಲ್ಲಿ ಗಣನೀಯವಾಗಿ ಕುಸಿತ ಕಂಡುಬಂದಿದೆ. ಸಾವಯವ ಪದಾರ್ಥದ ಕುಸಿತ ಕಾಲಾಂತರದಿಂದ ಆದ ಪ್ರಕ್ರಿಯೆಯಾಗಿದ್ದು, ಅದು ನಿರಂತರವಾಗಿ ನಡೆಯುತ್ತಲಿದೆ. ಸಾವಯವ ಪದಾರ್ಥದ ಕುಸಿತವು ಹಲವಾರು ರೀತಿಯಲ್ಲಿ ಮಣ್ಣಿನಲ್ಲಿ ನಡೆಯುವ ವಿವಿಧ ಪ್ರಕ್ರಿಯೆಗಳನ್ನು ಹಾಗೂ ಕಾರ್ಯಗಳನ್ನು ನೇರವಾಗಿ ಪ್ರಭಾವಿಸುವುದಲ್ಲದೇ, ಇದು ಮಣ್ಣನ್ನು ಬೇರೆ ಬೇರೆ ಬಾಹ್ಯ ಅಂಶಗಳಿಗೆ ತುತ್ತಾಗಿ ಬರಡಾಗುವಂತೆ ಮಾಡುವುದು. ಸಾವಯವ ಪದಾರ್ಥವು ಮಣ್ಣಿನಲ್ಲಿರುವುದರಿಂದ ಹಲವಾರು ರೀತಿಯ ಪ್ರಯೋಜನಗಳುಂಟು. ಸಾವಯವ ಪದಾರ್ಥವು ವಿವಿಧ ಪ್ರಕಾರದ ಪೋಷಕಾಂಶಗಳ ಸರಬರಾಜು ಮಾಡುವ ಮೂಲವಾಗಿದ್ದು, ಪೋಷಕಾಂಶಗಳ ಕಣಜದಂತೆ ಕಾರ್ಯನಿರ್ವಹಿಸುತ್ತದೆ. ಬೆಳೆಗಳು ಬೆಳೆಯುವಾಗ ವಿವಿಧ ಹಂತದಲ್ಲಿ ಬೇಕಾಗುವ ವಿವಿಧ ಪ್ರಕಾರದ ಪೋಷಕಾಂಶಗಳನ್ನು ಸೂಕ್ತವಾದ ರೂಪದಲ್ಲಿ ದೊರೆಯುವಂತೆ ಮಾಡುವ ಪ್ರಮುಖ ಕಾರ್ಯ ಸಾವಯವ ಪದಾರ್ಥದ್ದಾಗಿರುತ್ತದೆ.

ಇದೇ ರೀತಿಯಾಗಿ ಮಣ್ಣಿನಲ್ಲಿರುವ ವಿವಿಧ ಪ್ರಕಾರದ ಜೀವಸಂಕುಲಕ್ಕೆ ಆಹಾರ ಒದಗಿಸುವ ಮೂಲಕ ಇವುಗಳ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ ಮತ್ತು ಭೂಮಿಗೆ ಹಾಕಿದ ಸಾವಯವ ಪದಾರ್ಥಗಳು ಕಲೆತು ಪೋಷಕಾಂಶಗಳ ಬಿಡುಗಡೆಗೆ ಸಹಕಾರಿಯಾಗುವುದು. ಭೂಮಿಯಲ್ಲಿ ನಡೆಯುವ ವಿವಿಧ ಕಾರ್ಯಗಳು ಸುಗಮವಾಗಿ ನಡೆಯಲು ಕೂಡಾ ಸಾವಯವ ಪದಾರ್ಥಗಳು ಸಹಕಾರಿಯಾಗುತ್ತವೆ.

ಮಣ್ಣಿನಲ್ಲಿರುವ ಕಣಗಳು ಸೂಕ್ತ ರಚನೆಯಾಗಲು ಹಾಗೂ ವಿವಿಧ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳಿಗೆ ಕಾರಣೀಭೂತವಾಗಿದೆ. ಮಣ್ಣಿನಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವು ಕೂಡ ಸಾವಯವ ಪದಾರ್ಥದ ಮೇಲೆ ಅವಲಂಬಿತವಾಗಿದೆ. ಭೂಮಿಯಲ್ಲಿ ಬೇರುಗಳ ಬೆಳವಣಿಗೆ, ಮಣ್ಣಿನಲ್ಲಿ ಹವೆಯಾಡುವಿಕೆ ಪ್ರಮಾಣವೂ ಸಹಿತ ಸಾವಯವ ಪದಾರ್ಥದ ಮೇಲೆ ಆಧಾರವಾಗಿರುವುದು. ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು, ಭೂಮಿಗೆ ರೈತರು ಹಾಕುವ ರಾಸಾಯನಿಕ ಗೊಬ್ಬರಗಳ ಸಮರ್ಪಕ ಬಳಕೆ ಹಾಗೂ ಅವುಗಳ ಸಾಮರ್ಥ್ಯಪೂರ್ಣ ಬಳಕೆಯೂ ಸಹಿತ ಸಾವಯವ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ರಭಸವಾಗಿ ಬರುವ ಮಳೆಯ ಪ್ರಮಾಣದಿಂದಾಗಿ ಆಗುವ ಸವಕಳಿಯ ಪ್ರಮಾಣವು ಸಹ ಸಾವಯವ ಪದಾರ್ಥದ ಮೇಲೆ ಅವಲಂಬಿತವಾಗಿರುವುದು. ಆದುದರಿಂದ ಮಣ್ಣಿನಲ್ಲರುವ ಸಾವಯವ ಪದಾರ್ಥವು ಭೂಮಿಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಭೂಮಿಯಲ್ಲಿ ಸಾವಯವ ಪದಾರ್ಥ ಕಡಿಮೆಯಾಗಲು ಕಾರಣ

ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲಿದೆ. ಸಾವಯವ ಪದಾರ್ಥದ ಪ್ರಮಾಣ ಕಡಿಮೆಯಾಗಲು ಹಲವಾರು ಕಾರಣಗಳುಂಟು. ಈ ಕಾರಣಗಳನ್ನು ಸಮರ್ಪಕವಾಗಿ ಅರ್ಥೈಸಿಕೊಂಡರೆ ಮಾತ್ರ ಅದರ ನಿರ್ವಹಣೆಗೆ ಅನುಕೂಲವಾಗುವುದು ಮತ್ತು ಸರಿಯಾದ ತಂತ್ರಗಳನ್ನು ರೂಪಿಸಬಹುದು. ಕಳೆದ ಹಲವಾರು ವರ್ಷಗಳಿಂದ ಭೂಮಿಯ ಫಲವತ್ತತೆಯ ನಿರ್ವಹಣೆಗೆ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಾಗಿನಿಂದ ಸಾವಯವ ಗೊಬ್ಬರಗಳ ಪ್ರಮಾಣ ಕಡಿಮೆಯಾಗಿದೆ. ರೈತರು ಪಾಲನೆ ಮಾಡುವ ದನಕರುಗಳ ಸಂಖ್ಯೆಯಂತೂ ಊಹಿಸಲಾರದಷ್ಟು ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಸಿಗಬಹುದಾದ ಸಾವಯವ ಗೊಬ್ಬರ ತುಂಬಾ ಕಡಿಮೆಯಾಗಿದೆ. ಇನ್ನು ಬೆಳೆ ಕಟಾವು ಮಾಡಿದ ನಂತರ ದೊರೆತ ಪಳೆಯುಯಳಿಕೆಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಕಾಂಪೋಸ್ಟ್ ಮಾಡಿ ಭೂಮಿಗೆ ಸೇರಿಸುವ ಪದ್ಧತಿಯೂ ಕಡಿಮೆಯಾಗಿದೆ. ಹಲವಾರು ಸಲ ಕೃಷಿ ಕಾರ್ಮಿಕರು ಕೆಲಸಕ್ಕೆ ದೊರೆಯಲಿಲ್ಲ ಎಂಬ ನೆಪ ಒಡ್ಡಿ, ಬೆಳೆಯ ಸಾವಯವ ಪದಾರ್ಥಗಳನ್ನು ಸುಟ್ಟುಹಾಕುವ ಪದ್ಧತಿ ಸಹಜವಾಗಿದೆ. ಇದರಿಂದಾಗಿ ಭೂಮಿಗೆ ಸೇರಬೇಕಾದ ಸಾವಯವ ಪದಾರ್ಥದ ಪ್ರಮಾಣ ಕಡಿಮೆಯಾಗುತ್ತದೆ. ಇನ್ನು ದೊರೆಯಬಹುದಾದ ಕೊಟ್ಟಿಗೆ ಗೊಬ್ಬರವನ್ನು ಸೂಕ್ತವಾಗಿ ಸಂಗ್ರಹಿಸದೇ ಇರುವುದರ ಪರಿಣಾಮವಾಗಿ ಅದು ಕೂಡಾ ಭೂಮಿಯನ್ನು ಸೇರುತ್ತಿಲ್ಲ. ಹಿಂದೆ ಬೆಳೆಯ ಕಟಾವಿನ ನಂತರ ಬೆಳೆಯ ರಾಶಿಯನ್ನು ರೈತರು ತಮ್ಮ ತಮ್ಮ ಜಮೀನುಗಳಲ್ಲಿಯೇ ಮಾಡಿ, ಬಂದಂತಹ ಸಾವಯವ ಪದಾರ್ಥವನ್ನು ಕೂಡಿಹಾಕಿ, ಜಮೀನಿಗೆ ಪುನಃ ಸೇರಿಸುತ್ತಿದ್ದರು.ಇಂದು ರಾಶಿ ಮಾಡುವ ಯಂತ್ರಗಳು ಬಂದ ನಂತರ ಈ ಪದ್ಧತಿ ಸಂಪೂರ್ಣವಾಗಿ ನಿಂತುಹೋಗಿದೆ. ಊರ ಸಮೀಪವೇ ಕಟಾವು ಮಾಡಿದ ಕೃಷಿ ಉತ್ಪನ್ನವನ್ನು ತಂದು ಯಂತ್ರದ ಸಹಾಯದಿಂದ ರಾಶಿ ಮಾಡಿಕೊಂಡು ಕೇವಲ ಮುಖ್ಯ ಉತ್ಪನ್ನವನ್ನಷ್ಟೇ ರೈತರು ತೆಗೆದುಕೊಂಡು ಹೋಗುತ್ತಾರೆಯೇ ವಿನಃ, ರಾಶಿಯ ನಂತರ ಉಳಿದಂತಹ ಸಾವಯವ ಪದಾರ್ಥದ ಸಂಗ್ರಹ ಅಥವಾ ಅದನ್ನು ಕೊಂಡೊಯ್ಯುವ ಗೋಜಿಗೆ ಹೋಗುವುದೇ ಇಲ್ಲ. ಅದರಿಂದಾಗಿ ಅಗಾಧ ಪ್ರಮಾಣದಲ್ಲಿ ಈ ಸಾವಯವ ಪದಾರ್ಥವು ವ್ಯರ್ಥವಾಗಿ ಹೋಗುವುದು. ಇನ್ನು ಬೆಳೆಯ ಕಟಾವಿನ ನಂತರ ಬಂದ ಬಿರುಸಾದ ಕಟ್ಟಿಗೆಯಂತಹ ಭಾಗವನ್ನು (ಜೋಳದ ದಂಟು, ಹತ್ತಿಯ ಕಟ್ಟಿಗೆ, ತೊಗರಿ ಕಾಂಡಭಾಗ ಇತ್ಯಾದಿ) ಗ್ರಾಮೀಣ ಪ್ರದೇಶದಲ್ಲಿ ಇಂಧನವಾಗಿ ಉಪಯೋಗಿಸುವುದರಿಂದ ಅದು ಕೂಡಾ ಜಮೀನಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವು ಪ್ರಸಂಗಗಳಲ್ಲಿ ಕೃಷಿಯ ತ್ಯಾಜ್ಯ ವಸ್ತುಗಳನ್ನು ಕೈಗಾರಿಕೆಗಳಿಗೆ ಇಂಧನವಾಗಿ ಬಳಸುವವರಿಗೆ ಅಥವಾ ಶಕ್ತಿ ಉತ್ಪಾದನೆಗೆ (ಸಕ್ಕರೆ ಕೈಗಾರಿಕೆಯಲ್ಲಿ) ಬಳಸುವುದು ಸಾಮಾನ್ಯ. ಅದರ ಜೊತೆಗೆ ಪ್ರತಿವರ್ಷ ಬೇಸಿಗೆಯಲ್ಲಿ ಜಮೀನನ್ನು ಆಳವಾಗಿ ಉಳುಮೆ (ನೇಗಿಲು ಹೊಡೆಯುವುದು) ಮಾಡುವುದರ ಪರಿಣಾಮವಾಗಿ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ ಆಕ್ಸಿಡೇಶನ್ ಪ್ರಕ್ರಿಯೆಯಿಂದ ವ್ಯರ್ಥವಾಗಿ ಹೋಗುವುದು. ಈ ರೀತಿಯ ಉಳುಮೆ ಮಾಡಲು ಅಗಾಧ ಪ್ರಮಾಣದಲ್ಲಿ ಶಕ್ತಿಯು ಬೇಕಾಗುವುದು ಮತ್ತು ಇದರಿಂದ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುವುದು. ಹಿಂದೆ ಉಳುಮೆಗಳನ್ನು ಎತ್ತುಗಳ ಸಹಾಯದಿಂದ ಮಾಡಲಾಗುತ್ತಿತ್ತು. ಅದರೆ ಇಂದು ಟ್ರ್ಯಾಕ್ಟರ್‌ಗಳ ಸಹಾಯದಿಂದ ಮಾಡುವುದರ ಪರಿಣಾಮವಾಗಿ, ಸಾವಯವ ಪದಾರ್ಥದ ಪ್ರಮಾಣ ಕುಸಿಯುತ್ತಲೇ ಇದೆ. ಈ ರೀತಿಯಾಗಿ ಆಳವಾದ ಉಳುಮೆ ಬದಲಾಗಿ ದೊರೆಯಬಹುದಾದ ಬೇರೆ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಸಾವಯವ ಇಂಗಾಲದ ಹಾನಿಯನ್ನು ತಡೆಯಬಹುದೆಂದು ಸಂಶೋಧನೆಯಿಂದ ಕಂಡುಕೊಂಡ ವಿಚಾರ.

ಬೆಳೆಯ ಬದಲಾವಣೆ (ಬೆಳೆಯ ಕಾಲುಗೈ) ಮಾಡುವುದು ಒಂದು ಪ್ರಮುಖ ತಂತ್ರಜ್ಞಾನವಾಗಿದ್ದು ಇದನ್ನು ಇಂದು ಅನಿಸರಿಸುವ ರೈತರ ಸಂಖ್ಯೆ ತುಂಬಾ ಕಡಿಮೆ. ಹಸಿರುಕ್ರಾಂತಿಯ ನಂತರ ಬಂದ ಬೆಳೆ ತಳಿಗಳು ಹಾಗೂ ತಂತ್ರಜ್ಞಾನಗಳ ಬಳಕೆ ಪ್ರಾರಂಭವಾದಾಗಿನಿಂದ ಬೆಳೆಯ ಬದಲಾವಣೆ ಪದ್ಧತಿ ಕಡಿಮೆ ಮಾಡಲಾಯಿತು. ಇದರಿಂದಾಗಿ ಏಕಬೆಳೆ ಪದ್ಧತಿ ಜಾರಿಗೆ ಬಂದಿತು. ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುವುದರಿಂದ ಭೂಮಿಯಲ್ಲಿ ಪೋಷಕಾಂಶಗಳ ಕೊರತೆ ಪ್ರಾರಂಭವಾಗಿ ಬರಡುತನ ಉದ್ಭವಿಸಲಾರಂಭಿಸುತ್ತದೆ.

ವಿವಿಧ ಪ್ರಕಾರದ ಅಂತರ ಬೆಳೆಗಳು ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯುವ ಪದ್ಧತಿಯು ಹಲವಾರು ರೀತಿಯ ಉಪಯುಕ್ತತೆಗಳನ್ನು ಹೊಂದಿದ್ದಿತು. ಈ ಪದ್ಧತಿಗಳು ಮಣ್ಣಿನ ಆರೋಗ್ಯ ಹಾಗೂ ಉಪಯುಕ್ತತೆಗಳನ್ನು ಹೊಂದಿದ್ದಿತು. ಈ ಪದ್ಧತಿಗಳು ಮಣ್ಣಿನ ಆರೋಗ್ಯ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತಿದ್ದವು. ಈ ಪದ್ಧತಿಗಳೂ ಸಹ ಇಂದು ಮಾಯವಾಗುತ್ತಲಿವೆ. ಆದುದರಿಂದ ಮೇಲೆ ಚರ್ಚಿಸಿದ ವಿವಿಧ ಪದ್ಧತಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಪುನಃ ಅಳವಡಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ.

ಕಳೆದ ಕೆಲವು ದಶಕಗಳಲ್ಲಿ ವಿವಿಧ ಪ್ರಕಾರದ ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳು ಕೃಷಿ ಭೂಮಿಯ ಆರೋಗ್ಯ ರಕ್ಷಣೆಯ ವಿಚಾರವಾಗಿ ತುಂಬಾ ಪ್ರಚಲಿತವಾಗುತ್ತಲಿವೆ. ಈ ಪದ್ಧತಿಗಳು ಕುಸಿಯುತ್ತಿರುವ ಭೂಮಿಯ ಉತ್ಪಾದಕತೆ, ಹೆಚ್ಚುತ್ತಿರುವ ಭೂಮಿಯ ಬರಡುತನ, ಹಾಗೂ ಒಟ್ಟಾರೆ ಆರೋಗ್ಯದ ಕಡೆಗೆ ಗಮನ ನೀಡಿ ಅವುಗಳನ್ನು ಸುಧಾರಿಸಲು ಸಹಕಾರಿಯಾಗುತ್ತವೆ. ಈ ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳಲ್ಲಿ ಹಲವಾರು ತತ್ವಗಳು ಅಡಕವಾಗಿದ್ದು ಭೂಮಿಯ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಉಪಯುಕ್ತವಾಗಿವೆ. ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳಲ್ಲಿ ಅಡಕವಾಗಿರುವ ತತ್ವಗಳೆಂದರೆ:

೧. ಮಣ್ಣನ್ನು ಕನಿಷ್ಟ ಪ್ರಮಾಣದಲ್ಲಿ ಮಾತ್ರ ಉಳುಮೆ ಮಾಡಬೇಕು (ಕನಿಷ್ಟ ಉಳುಮೆ).

೨. ಬೆಳೆಯ ಕಟಾವಿನ ನಂತರ ಉಳಿದ ಬೆಳೆಯ ತ್ಯಾಜ್ಯವಸ್ತುಗಳನ್ನು ಭೂಮಿಯಲ್ಲಿ ಬೆರೆಯುವಂತೆ ಕ್ರಮ ತೆಗೆದುಕೊಳ್ಳುವುದು.

೩. ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಪದಾರ್ಥಗಳನ್ನು ಭೂಮಿಯ ಮೇಲ್ಪದರಿನಲ್ಲಿರುವಂತೆ ನೋಡಿಕೊಳ್ಳುವುದು.

೪. ವಿವಿಧ ಪ್ರಕಾರದ ಬೆಳೆ ಮಿಶ್ರಣಗಳು, ವೈವಿಧ್ಯಮಯ ಬೆಳೆಗಳ ಮಿಶ್ರಣ ಮಾಡಿ ಅಥವಾ ಅಂತರ ಬೆಳೆ ಮಾಡಿ ಬಿತ್ತನೆ ಮಾಡಬೇಕು.

೫. ಬೆಳೆಯ ಬದಲಾವಣೆಯನ್ನು ಚಾಚೂ ತಪ್ಪದೇ ಪಾಲಿಸುವುದು.

ಈ ಮೇಲೆ ತಿಳಿಸಿದ ವಿವಿಧ ತತ್ವಗಳನ್ನು ಅಳವಡಿಸಿ ಕೃಷಿ ಮಾಡಿದಾಗ ಭೂಮಿಯ ಬರಡುತನ ಪ್ರಕ್ರಿಯೆಯನ್ನು ಸಾವಧಾನಗೊಳಿಸಿ ಮುಂದೊಂದು ದಿನ ಸಂಪೂರ್ಣವಾಗಿ ತಡೆಗಟ್ಟಲು ಸಹಕಾರಿಯಾಗುವುದು. ಈ ಪದ್ಧತಿಗಳ ಅಳವಡಿಕೆಯಿಂದ ಭೂಮಿಯ ಆರೋಗ್ಯ ಸುಧಾರಿಸುವುದಲ್ಲದೇ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳ ಸುಧಾರಣೆಯಾಗುತ್ತದೆ. ಪ್ರತಿ ವರ್ಷ ಆಳವಾದ ಉಳುಮೆ ಮಾಡುವ ಅವಶ್ಯಕತೆಯನ್ನು ಇಂದು ವೈಜ್ಞಾನಿಕವಾಗಿ ಅಲ್ಲಗಳೆಯಬಹುದಾಗಿದೆ. ಉತ್ತರಭಾರತದ ಹಲವಾರು ರಾಜ್ಯಗಳಲ್ಲಿ ಗೋಧಿಯನ್ನು ಹಿಂದಿನ ಬೆಳೆಯ ಪಳಿಯುಳಿಕೆಗಳು ಭೂಮಿಯಲ್ಲಿ ಇರುವಾಗಲೇ ಬಿತ್ತನೆ ಮಾಡುವ ಪದ್ಧತಿ ಇಂದು ತುಂಬಾ ಪ್ರಚಲಿತವಾಗಿದೆ. ಈ ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳು ಹಲವಾರು ರೀತಿಯಲ್ಲಿ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತವೆ.

ಭೂಮಿಯ ಅರೋಗ್ಯವನ್ನು ಅಳತೆ ಮಾಡುವ ರೀತಿ

ಮೇಲೆ ಚರ್ಚಿಸಿದಂತಹ ಸೂಕ್ತವಾದ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಭೂಮಿಯ ಅರೋಗ್ಯ ಸುಧಾರಣೆ ಮಾಡಬಹುದು. ಹೀಗೆ ಮಾಡುವುದರಿಂದ ಭೂಮಿಯ ಅರೋಗ್ಯ ಎಷ್ಟರ ಮಟ್ಟಿಗೆ ಸುಧಾರಣೆಯಾಗಿದೆ ಎಂಬುದನ್ನು ರೈತರು ಸಂಕ್ಷಿಪ್ತವಾಗಿ ಹೀಗೆ ಅಂದಾಜು ಮಾಡಬಹುದೆಂಬುದನ್ನು ಇಲ್ಲಿ ವಿವರಿಸಲಾಗಿದೆ.

ಭೂಮಿಯ ಭೌತಿಕ ಗುಣಧರ್ಮಗಳಲ್ಲಿ ಸುಧಾರಣೆ

ಭೂಮಿಯ ಪ್ರಮುಖ ಭೌತಿಕ ಗುಣಧರ್ಮಗಳಾದ:

೧. ಮಣ್ಣಿನಲ್ಲಿಯ ರಂಧ್ರದ ಪ್ರಮಾಣ

೨. ಮಣ್ಣಿನ ಕಣಗಳ ರಚನೆ

೩. ಮಣ್ಣು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ.

೪. ಭೂಮಿಯ ಕೆಳಭಗದಲ್ಲಿರುವ ಬಿರುಸು ಪದರುಗಳು ಇತ್ಯಾದಿ ಪ್ರಮುಖವಾಗಿದೆ.

ಮಣ್ಣಿನ ರಾಸಾಯನಿಕ ಗುಣಧರ್ಮಗಳಲ್ಲಿ ಸುಧಾರಣೆ

೧. ಮಣ್ಣಿನ ರಸಸಾರ

೨. ಲಭ್ಯವಿರುವ ಪೋಷಕಾಂಶಗಳು

೩. ಮಣ್ಣಿನಲ್ಲಿ ಖನಿಜಗಳ ವಿನಿಮಯ ಪ್ರಕ್ರಿಯೆ.

೪. ಮಣ್ಣಿನಲ್ಲಿಯ ಲವಣಗಳ ಪ್ರಮಾಣ.

ಮಣ್ಣಿನ ಜೈವಿಕ ಗುಣಧರ್ಮಗಳ ಸುಧಾರಣೆ

೧. ಭೂಮಿಯಲ್ಲಿ ಸೂಕ್ಷ್ಮಜೀವಿಗಳ ಕ್ರಿಯೆ

೨. ವಿವಿಧ ಲಾಭದಾಯಕ ಹುಳುಗಳು ಕ್ರಿಯೆ (ಎರೆಹುಳು).

೩. ಜೈವಿಕವಾಗಿ ಸಾರಜನಕ ಸ್ಥಿರೀಕರಣ.

೪. ಸಾವಯವ ಕಿಲೇಟಿಂಗ್ ಮಧ್ಯವರ್ತಿಗಳ ಉತ್ಪಾದನೆ.

೫. ರಂಜಕ ಕರಗಿಸುವಿಕೆ.

೬. ಸಾವಯವ ಇಂಗಾಲ.

ಮೇಲಿನ ಗುಣಧರ್ಮಗಳ ಆಧಾರದ ಮೇಲೆ ಕೆಳಗಿನ ಕೋಷ್ಟಕವನ್ನು ಬಳಸಿ ಮಣ್ಣಿನ ಅರೋಗ್ಯದ ಅಳತೆಗೋಲನ್ನು ರೈತರೇ ಮಾಡಬಹುದಾಗಿದೆ.

ಮಣ್ಣಿನ ಅರೋಗ್ಯ ಪರೀಕ್ಷಿಸಬಹುದಾದ ಗುಣಾತ್ಮಕ ಕೋಷ್ಟಕ

ಅರೋಗ್ಯ ಸೂಚಕ ಕಡಿಮೆ ಆರೋಗ್ಯವಂತ ಮಣ್ಣು ಮಾಧ್ಯಮ ಅರೋಗ್ಯವಂತ ಮಣ್ಣು ಉತ್ತಮ ಅರೋಗ್ಯವಂತ ಮಣ್ಣು
೧. ಎರೆ ಹುಳುಗಳ ಸಂಖ್ಯೆ ೦ – ೧ ಭೂಮಿಯ ಮೇಲ್ಭಾಗದ ೧ ಅಡಿ ಪ್ರದೇಶದಿಂದ ಒಂದು ಸಲಿಕೆಯಲ್ಲಿ ಪಡೆದ ಮಣ್ಣಿನಲ್ಲಿ ಎರೆಹುಳುವಿನ ಕ್ಯಾಸ್ಟಗಳು ಹಾಗೂ ರಂಧ್ರಗಳು ೨ – ೧೦ ಭೂಮಿಯ ಮೇಲ್ಭಾಗದ ೧ ಅಡಿ ಪ್ರದೇಶದಿಂದ ಒಂದು ಸಲಿಕೆಯಲ್ಲಿ ಪಡೆದ ಮಣ್ಣಿನಲ್ಲಿ ಎರೆಹುಳುವಿನ ಕ್ಯಾಸ್ಟಗಳು ಹಾಗೂ ರಂಧ್ರಗಳು ೧೦ಕ್ಕಿಂತ ಹೆಚ್ಚು ಭೂಮಿಯ ಮೇಲ್ಭಾಗದ ೧ ಅಡಿ ಪ್ರದೇಶದಿಂದ ಒಂದು ಸಲಿಕೆಯಲ್ಲಿ ಪಡೆದ ಮಣ್ಣಿನಲ್ಲಿ ಎರೆಹುಳುವಿನ ಕ್ಯಾಸ್ಟಗಳು ಹಾಗೂ ರಂಧ್ರಗಳು
೨. ಸಾವಯವ ಪದಾರ್ಥದ ಬಣ್ಣ ಮಣ್ಣಿನ ಮೇಲ್ಪದರು ಹಾಗೂ ಕೆಳಪದರಿನ ಬಣ್ಣ ಒಂದೇ ತೆರನಾಗಿರುವುದು. ಮಣ್ಣಿನ ಮೇಲ್ಪದರಿನ ಬಣ್ಣವು ಕೆಳಪದರಿನ ಬಣ್ಣಕ್ಕಿಂತ ಸ್ವಲ್ಪ ವಿಭಿನ್ನತೆ ಹೊಂದಿರುವುದು ಅಥವಾ ಸ್ವಲ್ಪ ಸಮನಾಗಿರುವುದು. ಮಣ್ಣಿನ ಮೇಲ್ಪದರು ಸ್ಪಷ್ಟವಾಗಿ ಗಾಢ ಬಣ್ಣ ಹೊಂದಿರುವುದು ಹಾಗೂ ಕೆಳಪದರಿನ ಬಣ್ಣಕ್ಕಿಂತ ವಿಭಿನ್ನವಾಗಿರುವುದು.
೩. ಬೇರುಗಳು ಹಾಗೂ ಅವುಗಳ ತ್ಯಾಜ್ಯಗಳ ಪ್ರಮಾಣ. ಯಾವುದೇ ರೀತಿಯ ಬೇರುಗಳು ಹಾಗೂ ಸಾವಯವ ಪದಾರ್ಥ ಕಾಣಸಿಗದಿರುವುದು. ಸ್ವಲ್ಪ ಪ್ರಮಾಣದಲ್ಲಿ ಸಾವಯವ ತ್ಯಾಜ್ಯಗಳು ಹಾಗೂ ಬೇರುಗಳ ಭಾಗಗಳು ಇರುವುದು. ಅಧಿಕ ಪ್ರಮಾಣದಲ್ಲಿ ಸಾವಯವ ತ್ಯಾಜ್ಯಗಳು ಹಾಗೂ ಬೇರುಗಳು ಭಾಗಗಳು ಇರುವುದು.
೪. ಭೂಮಿಯ ಕೆಳಪದರಿನಲ್ಲಿರುವ ಗಟ್ಟಿತನದ ಪ್ರಮಾಣ ತಂತಿ ಹೊಂದಿದ ಧ್ವಜವೊಂದನ್ನು ಭೂಪದರಿಗೆ ತೂರಿಸಿದರೆ ಅದು ಗಟ್ಟಿತನಕ್ಕೆ ಅನುಗುಣವಾಗುವುದು. ತಂತಿಯ ಧ್ವಜವನ್ನು ಭೂಮಿಗೆ ತೂರಿಸಲು ಒತ್ತಡ ಹಾಕಬೇಕಾಗುವುದು. ಎರಡುಪಟ್ಟು ಆಳಕ್ಕೆ ತೂರುವುದು. ತಂತಿಯ ಧ್ವಜವು ಯಾವುದೇ ತೊಂದರೆಯಿಲ್ಲದ ಉಳುಮೆ ಆಳದವರೆಗೆ ಕೂರುವುದು.
೫. ಸವಕಳಿ ಮಾಡುವುದು ಸುಮಾರು ಎರಡು ಅಂಗುಲಕ್ಕಿಂತ ಆಳವಾದ ಕೊರತೆಗಳು ಒಂದನ್ನೊಂದು ಸೇರಿ ಮೇಲ್ಮಣ್ಣನ್ನು ಸವಕಳಿ ಕೆಲವೇ ಕೆಲವು ಕೊರತೆಗಳನ್ನು ಕಾಣಬಹುದು ಹಾಗೂ ಮೇಲ್ಮಣ್ಣಿನ ಸವಕಳಿಯ ಪ್ರಮಾಣ ಕಡಿಮೆ ಇರುವುದು. ಯಾವುದೇ ರೀತಿಯ ಕೊರೆತ ಕಂಡುಬರದಿರುವುದು ಮತ್ತು ಮಣ್ಣಿನ ಸವಕಳಿ ಕಾಣದಿರುವುದು.
೬. ನೀರು ಹಿಡಿದಿಡುವ ಸಾಮರ್ಥ್ಯ ಜಮೀನಿನಲ್ಲಿ ಬೆಳೆಯುತ್ತಿರುವ ಬೆಳೆಗಳು ಉತ್ತಮ ಮಳೆಯಾದ ಎರಡು ದಿನಗಳಲ್ಲಿ ಬಾಡುವ ಲಕ್ಷಣ ತೋರಿಸುವುದು ಜಮೀನಿನಲ್ಲಿ ಬೆಳೆಯುತ್ತಿರುವ ಬೆಳೆಗಳು ಉತ್ತಮ ಮಳೆಯಾದ ಒಂದು ವಾರದ ನಂತರ ಬಾಡುವ ಲಕ್ಷಣ ತೋರಿಸುವುದು ಜಮೀನಿನಲ್ಲಿ ಬೆಳೆಯುತ್ತಿರುವ ಬೆಳೆಯ ಒಂದು ವಾರಕ್ಕಿಂತ ಹೆಚ್ಚಿನ ದಿನಗಳವರೆಗೆ ಯಾವುದೇ ನೀರಿನ ಕೊರತೆಯ ಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ.
೭. ನೀರಿನ ಇಂಗುವಿಕೆ ಅಥವಾ ಬಸಿಯುವಿಕೆಯ ಪ್ರಮಾಣ ಮಣ್ಣಿನಲ್ಲಿ ನೀರು ಬಹಳ ಕಾಲದವೆರೆಗೆ ನಿಲ್ಲುವುದು, ಬಸಿಯುವಿಕೆಯ ಪ್ರಮಾಣಕ್ಕಿಂತ ನೀರು ಆವಿಯಾಗುವಿಕೆಯ ಮೂಲಕ ಕಡಿಮೆಯಾಗುವುದು, ಯಾವಾಗಲೂ ಹಸಿಯಾಗಿರುವುದು. ನೀರು ಸ್ವಲ್ಪ ಕಾಲದವರೆಗೆ ನಿಲ್ಲುವುದು, ಹಾಗೂ ಕ್ರಮೇಣವಾಗಿ ಬಸಿಯುವುದು. ನೀರು ನಿಲ್ಲದಿರುವುದು, ರಭಸವಾಗಿ ನೀರು ಹರಿದುಹೋಗುವುದಿಲ್ಲ. ನೀರು ಮಣ್ಣಿನಲ್ಲಿ ಸಾವಧಾನವಾಗಿ ಬಸಿಯುವುದು ಹಾಗೂ ಮೇಲ್ಪದರ ಮಣ್ಣು ಅತಿ ತೇವ ಆಥವಾ ಒಣಗುವ ಲಕ್ಷಣ ತೋರದಿರುವುದು.
೮. ಬೆಳೆಯ ಪರಿಸ್ಥಿತಿ ಬೆಳೆ ಬೆಳೆಯುವ ಕಾಲವಿಡೀ ತೊಂದರೆಗಳು. ಅಶಕ್ತವಾದ ಬೆಳೆ, ಬೆಳೆಯು ಹಳದಿ ಬಣ್ಣಕ್ಕೆ ತಿರುಗುವುದು. ಸಾಧಾರಣ ಬೆಳೆ, ಜಮೀನಿನಲ್ಲಿ ಅಲ್ಲಿ – ಇಲ್ಲಿ ಹಸಿಗಾಗಿ ಅರೋಗ್ಯವಂತವಾಗಿ ಬೆಳೆಯುವ ಪಟ್ಟಿಗಳನ್ನು ಕಾಣಬಹುದು.  –
೯. ಮಣ್ಣಿನ ರಸಸಾರ ಭೂಮಿಯಲ್ಲಿ ಬೆಳೆಯಲು ಉದ್ದೇಶಿಸಿದ ಬೆಳೆಗೆ ಅನುಗುಣವಾಗಿ ರಸಸಾರ. ಬೆಳೆಯಲು ಇಚ್ಛಿಸಿದ ಬೆಳೆಗೆ ಅನುಗುಣವಾಗಿ ರಸಸಾರವನ್ನು ಸರಿಪಡಿಸಬಹುದಾಗಿದೆ. ಸೂಕ್ತವಾದ ರಸಸಾರ ಇರುವುದು.
೧೦. ದೊರೆಯಬಹುದಾದ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ರಾಸಾಯನಿಕ ಗೊಬ್ಬರಗಳನ್ನು ಬೆಳೆಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಾಗಲೂ, ಮಣ್ಣು ಪರೀಕ್ಷೆಯಲ್ಲಿ ಪೋಷಕಾಂಶಗಳ ಪ್ರಮಾಣವು ಕಡಿಮೆ ಕಂಡುಬರುವುದು. ಪೋಷಕಾಂಶಗಳ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವುದು. ಪೋಷಕಾಂಶಗಳ ಪ್ರಮಾಣ ಹೆಚ್ಚಾಗುವುದು ಕಂಡುಬರುವುದು.