ದೀಪಾವಳಿ ಕಳೆಯುತ್ತಿದ್ದಂತೆ ಹಣ್ಣಿನಂಗಡಿಯ ಮುಂಭಾಗದಲ್ಲೆಲ್ಲಾ ಅರಿಸಿನದ ಸಣ್ಣ ಹಣ್ಣುಗಳು ಕುಳಿತಿರುತ್ತವೆ.  ದಾರಿಹೋಕರನ್ನೆಲ್ಲಾ ಬಾರೆ ಬಾರೆ ಎಂದು ಕರೆಯುತ್ತಿರುತ್ತವೆ.

ಅರಿಸಿನ, ಹಸುರು, ಕಂದುಬಣ್ಣಗಳಲ್ಲಿ ಕೆಂಪು ನೈಲಾನ್‌ ಜಾಳಿಗೆಯಲ್ಲಿ ತುಂಬಿದ ಈ ಹಣ್ಣು ಅಪ್ಪಟ ಮುರಕಲ್ಲು, ಗೊರಚು, ಬರಡುನೆಲದ ಬೆಳೆ.  ಏನೂ ಸತ್ವವೇ ಇರದ ಮಣ್ಣಿನಿಂದಲೂ ಸಿಹಿ ಎತ್ತುವ ಛಾತಿ.  ಸುಡುವ ಬಿಸಿಲು, ಹೆಪ್ಪುಗಟ್ಟುವ ಚಳಿ, ಸುಳಿದುಹೋಗುವ ಮಳೆಪ್ರದೇಶದಲ್ಲಿ ಅರಳುವ ಮುಗುಳು.

ಮೊಟ್ಟೆ ಆಕಾರ, ಗುಂಡಗೆ ಹಾಗೂ ಚಪ್ಪಟೆ ಮೂರು ರೀತಿಗಳಿವೆ.  ಅನೇಕ ಜಾತಿಗಳಿವೆ. ನಾಟಿ ತಳಿಗಳೂ ಇವೆ.  ಹೈಬ್ರಿಡ್‌ಗಳೂ ಇವೆ.

ನೀರು ಬಸಿದುಹೋಗುವ ಉಸುಕು ಮಿಶ್ರಿತ ಭೂಮಿ ಆದೀತು.  ಮಡ್ಡಿ, ಕಲ್ಲುಬೆಟ್ಟು, ಯಾವುದೇ ಭೂಮಿ ಆದೀತು.  ೧೮ ಅಡಿಗಳ ಅಂತರ ಮೂರು ಚದುರ ಅಡಿ ಆಳದಲ್ಲಿ ಗುಂಡಿ.

ಎರೆಮಣ್ಣು, ಗೊಬ್ಬರ, ಉಸುಕು ಸಮಪ್ರಮಾಣದಲ್ಲಿ ಗುಂಡಿಗೆ ತುಂಬಿ ಅಣಿ ಮಾಡಬೇಕು.  ಹದಿನೈದು ದಿನ ಹಾಗೇ ಬಿಡಬೇಕು.

ಬೀಜದಿಂದಲೇ ಸಸಿ ಮಾಡಬಹುದು.  ಕಸಿ ಸಹ ಮಾಡಬಹುದು.  ಕಣ್ಣುಕಸಿ, ಗೊಟಿ ಎರಡೂ ಒಳ್ಳೆಯದು.  ಕಣ್ಣುಕಸಿ ಮಾಡಲು ನಾಟಿ ತಳಿಯ ಬೀಜದಿಂದ ಗಿಡ ಎಬ್ಬಿಸಿಕೊಳ್ಳುವುದು ಅವಶ್ಯಕ.

ಕಸಿ ಮಾಡಿ ವರ್ಷ ಕಳೆದ ಗಿಡವನ್ನು ಗುಂಡಿಯಲ್ಲಿ ನೆಟ್ಟರೆ ಅದೇ ವರ್ಷ ಕಾಯಿ ಬಿಡುತ್ತದೆ.  ಶೀಘ್ರ ಬೆಳವಣಿಗೆ.  ಎರಡು ವರ್ಷಗಳವರೆಗೆ ನೀರು ಸಾಧ್ಯವಿದ್ದರೆ ಕೊಡುವುದು ಒಳ್ಳೆಯದು.  ನಾಲ್ಕನೆಯ ವರ್ಷದಿಂದ ವಿಪರೀತ ಫಸಲು.  ಒಂದು ಕ್ವಿಂಟಾಲ್‌ ಕೇವಲ ಗಿಡವೊಂದಕ್ಕೆ ಸಿಗುತ್ತದೆ.  ಒಂದು ಕಿಲೋಗ್ರಾಂಗೆ ಹತ್ತು ರೂಪಾಯಿಗಳು.

ಏಪ್ರಿಲ್‌ ವೇಳೆಗೆ ಗಿಡವನ್ನು ಛಾಟಣಿ ಮಾಡುವುದು ಅಗತ್ಯ.  ಅನಗತ್ಯ ಕೊಂಬೆಗಳನ್ನು, ಎಲೆಗಳನ್ನು ಕತ್ತರಿಸಿ ತೆಗೆಯಬೇಕು.  ಆಮೇಲೆ ಉಂಗುರಕಣಿ ಮಾಡಿ ಮಳೆ ಬರುವ ಮೊದಲು ಗೊಬ್ಬರ ನೀಡಬೇಕು.  ಗಿಡವೊಂದಕ್ಕೆ ನಾಲ್ಕು ಬುಟ್ಟಿ ಗೊಬ್ಬರ ಕೊಡಬೇಕು.

ಇಂಡಿ ತಾಲ್ಲೂಕಿನ ಬಬಲಾದದ ಕಲ್ಲಣ್ಣ, ರಾಯಪ್ಪ, ಗೋವಿಂದಪ್ಪ, ಈಶ್ವರಪ್ಪ ಮೊದಲಾದವರು ತಮ್ಮ ಜಾಗದಲ್ಲಿ ಬೆಳೆಯುತ್ತಿದ್ದಾರೆ.

ಕೃಷಿ ಇಲಾಖೆಗೆ ಇದರ ಕುರಿತು ಹೆಚ್ಚು ತಿಳಿದಿಲ್ಲ.  ಆದರೆ ಅರಣ್ಯ ಇಲಾಖೆಗೆ ಗೊತ್ತು!

ಹೂವು ಬಂದ ವೇಳೆಯಲ್ಲಿ ಮರಕ್ಕೆ “ಗರ್ಡಿಂಗ್‌” ಮಾಡುವುದು ಒಳ್ಳೆಯದು ಎನ್ನುತ್ತಾರೆ ಕಲ್ಲಣ್ಣ.

ಸಸ್ಯಗಳಿಗೆ ತಮಗೆ ಆಹಾರ ಹೆಚ್ಚಾಯಿತು ಎನ್ನಿಸಿದರೆ ಅದನ್ನು ತೊಗಟೆಯ ಮೂಲಕ ಬೇರಿಗೆ ಕಳಿಸಿಬಿಡುತ್ತದೆ.  ಇದನ್ನು ತಪ್ಪಿಸುವುದೇ ಗರ್‍ಡಿಂಗ್‌ ಕೆಲಸ.  ಗಿಡದ ಬೊಡ್ಡೆಗೆ ಉಂಗುರಾಕಾರದಲ್ಲಿ ಒಂದು ತೆಂಗಿನಕಡ್ಡಿ ಆಳ, ಗಾತ್ರದಲ್ಲಿ ಗೀರು ಹಾಕುವುದು.  ಇದರಿಂದ ಗಿಡದ ಫಸಲು ಎರಡು-ಮೂರು ಪಟ್ಟು ಹೆಚ್ಚುತ್ತದೆ.

ಬಬಲಾದದ ಬಾರೆ ರೈತರು ತಲಾ ಎರಡು ಎಕರೆಯಲ್ಲಿ ಮುನ್ನೂರು ಗಿಡ ಬೆಳೆದಿದ್ದಾರೆ.  ವಾರ್ಷಿಕ ಒಂದೂವರೆ ಲಕ್ಷ ರೂಪಾಯಿಗಳ ಲಾಭ.  “ಪಡಿ ಜಾಗದಲ್ಲಿ ಝಡಿ ರೊಕ್ಕ” ಎಂದು ನಗುತ್ತಾರೆ ಕಲ್ಲಣ್ಣ ಖ್ಯಾದಿ.