ಹಾಲಿವುಡ್‌ನ ಅನೇಕ ಸಾಹಸ ಚಿತ್ರಗಳಲ್ಲಾಗಲೀ ಅಥವಾ ವೈಜ್ಞಾನಿಕ ಕಥೆಗಳ ಚಿತ್ರಗಳಲ್ಲಾಗಲೀ ಹಾರುವ ಕಾರನ್ನು ನೀವು ಕಂಡಿರಬಹುದು. ಅದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಾಗ ಇದೇನು ವಿಸ್ಮಯವೋ ಅಥವಾ ನಿಜವೋ ಎಂದು ಅನಿಸಬಹುದು. ಈಗಂತೂ 3ಡಿ ಚಿತ್ರಗಳು ಅನಾವರಣಗೊಂಡ ಅನಂತರ, ಇದು ನಮ್ಮ ಮೇಲೇ ಹಾರಾಡಿದ ಅನುಭವವೂ ಆಗುತ್ತದೆ. ಇಂತಹ ಒಂದು ವೈಜ್ಞಾನಿಕ ಕನಸು ನನಸಾಗುವ ಕಾಲ ಬಂದಿದೆ ಎಂದರೆ ನಮ್ಮ ಚರ್ಮ ಚಿವುಟಿ, ನಮ್ಮ ಇರವನ್ನು ತಿಳಿದುಕೊಳ್ಳಬೇಕು! ಇಂತಹ ಹಾರುವ ಕಾರೊಂದು ಸುಮಾರು ಆರೆಂಟು ತಿಂಗಳುಗಳ ಹಿಂದೆ ಲಂಡನ್ನಿನ ಒಂದು ಪ್ರದೇಶದಿಂದ ಬಹು ದೂರ ಅಂದರೆ ಸಾವಿರಾರು ಮೈಲು ದೂರದ ಆಫ್ರಿಕ ಖಂಡದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತಂತೆ!

ಗ್ಲೆನ್ ಕರ್ಟಿಸ್

ಅಂಥದೊಂದು ಕಾರನ್ನು ಕಂಡಾಗ ಅದು ಆಕಾಶದಲ್ಲಿ ಹಾರುವ ವಿಮಾನವೇ ಅಥವಾ ರಸ್ತೆಯಲ್ಲಿ ಓಡುವ ಕಾರೇ ಎಂಬ ಪ್ರಶ್ನೆ ಏಳುವುದು ಸಹಜ. ಇದರ ಹೆಸರೇ ಹೇಳುವಂತೆ ಇದು ‘ಸ್ಕೈ ಕಾರ್’. ಅಂದರೆ, ಇದು ರಸ್ತೆಯಲ್ಲಿ ಸಾಮಾನ್ಯ ಕಾರಿನಂತೆ ಚಲಿಸುತ್ತದೆ ಮತ್ತು ಪುಟ್ಟ ವಿಮಾನವಾಗಿ ಆಗಸದಲ್ಲೂ ಹಾರಾಡುತ್ತದೆ. ರಸ್ತೆಯಲ್ಲಿ ಸುಮಾರು 45 ಕಿ.ಮೀ.ವೇಗ ಪಡೆಯುತ್ತಿದ್ದಂತೆ ಇದು ತನ್ನ ರೆಕ್ಕೆಗಳನ್ನು ಬಿಚ್ಚಿಕೊಂಡು ಮೇಲೇರುತ್ತದೆ. ಅಂದರೆ ರಸ್ತೆಯಲ್ಲಿ ಇತರ ಕಾರುಗಳಂತೆಯೇ ಚಲಿಸುತ್ತಿದ್ದಂತೆಯೇ ಅದರ ಪಾರ್ಶ್ವದಲ್ಲಿರುವ ಮಡಿಚಿದ ರೆಕ್ಕೆಗಳನ್ನು ಬಿಚ್ಚಿಕೊಂಡು, ಕಾರು ನೆಲದಿಂದ ಆಕಾಶಕ್ಕೆ ಏರುವ ಸಾಧನವಾಗಿ ಮಾರ್ಪಾಡಾಗುತ್ತದೆ. ಕೇಬಲ್‌ಗಳಿಂದ ರೆಕ್ಕೆ ಮತ್ತು ಪೆಡಲುಗಳನ್ನು ಜೋಡಿಸಿದ್ದು, ಹಿಂಭಾಗದಲ್ಲಿ ಅಳವಡಿಸಿರುವ ಫ್ಯಾನಿನ ಗಾಳಿಯ ಒತ್ತಡದಿಂದ ಅದು ಮೇಲೇರಲು ಸಾಧ್ಯವಾಗುತ್ತದೆ ಮತ್ತು ಜೊತೆಗೇ ರೆಕ್ಕೆಗಳು ಹಾರಲು ಸರಿಯಾದ ಆಕಾರ ಪಡೆಯಲು ಸಾಧ್ಯವಾಗುತ್ತದೆ.

ಈ ಬಗ್ಗೆ ಸಂಶೋಧನೆಯನ್ನು ಅವಲೋಕಿಸಿದಾಗ ಇದು ಹೊಸದೇನಲ್ಲ ಎಂದೂ ತಿಳಿಯುತ್ತದೆ. 1937ರಲ್ಲೇ ಹಾರುವ ಕಾರಿನ ತಯಾರಿಕೆಯ ಪ್ರಯತ್ನ ನಡೆದಿತ್ತು. ಗ್ಲೆನ್ ಕರ್ಟಿಸ್ ಎಂಬುವನು ಇದರ ಕುರಿತು ಸಂಶೋಧನೆ ನಡೆಸಿದವರಲ್ಲಿ ಮೊದಲಿಗ ಎನ್ನಬಹುದು. ಆದರೆ,ಇದರ ಸುಧಾರಿತ ಪ್ರಯೋಗಕ್ಕೆ ವಾಟರ್‌ಮನ್ ಎಂಬುವನ ಕೊಡುಗೆಯಿದೆ. ಇವನು ತಯಾರಿಸಿದ ಹಾರುವ ಕಾರಿನ ವಿನ್ಯಾಸದಲ್ಲಿ ರೆಕ್ಕೆಗಳು 11 ಮೀಟರ್ ಅಗಲ ಮತ್ತು 6.25 ಮೀ. ಉದ್ದವಿತ್ತು. ಇದಕ್ಕೆ ಬಳಕೆ ಮಾಡಿದ್ದು ಸ್ಟುಡಿಬೇಕರ್ ಎಂಜಿನ್ನುಗಳನ್ನು. ರಸ್ತೆಯಲ್ಲಿ ಇದರ ವೇಗ ಪ್ರತಿ ಗಂಟೆಗೆ 90 ಕಿ.ಮೀ.; ಆಕಾಶದಲ್ಲಿನ ವೇಗ 80 ಕಿ.ಮೀ. ಇತ್ತು. ಸರಿ ಸುಮಾರು 1950 ರಲ್ಲಿ 21ನೇ ಶತಮಾನದ ಈ ಕನಸಿನ ಕೂಸಿನ ರೂಪುರೇಷೆಗಳು ಇನ್ನಷ್ಟು ದೃಢವಾದವು. ಪ್ರಯೋಗಾರ್ಥವಾಗಿ ಇದರ ಹಾರಾಟ ನಡೆಸಿದಾಗ ಸಾರ್ವಜನಿಕರು ಆತಂಕದಿಂದಲೇ ಇದ್ದರು. ಅದು ಮೇಲೇರಿದಾಗ ತಾಂತ್ರಿಕ ತೊಂದರೆಯಾದರೆ, ಅಥವಾ ನಡೆಸುವವನ ಅಜಗರೂಕತೆಯಿಂದ ಕೆಳಗೆ ಬಿದ್ದರೆ, ಅದೂ ಜನವಸತಿ ಪ್ರದೇಶದಲ್ಲಿ ಬಿದ್ದು ಅಪಾರ ಹಾನಿಯಾದರೆ ಎಂಬ ಊಹೆಗಳೇ ಜನರನ್ನು ಚಿಂತೆಗೀಡು ಮಾಡಿತ್ತು.

ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಇದನ್ನು ನಿಜವಾಗಿಯೂ ಪ್ರಯಾಣಕ್ಕೆ ಸಿದ್ಧಗೊಳಿಸುವ ಪ್ರಯತ್ನದಲ್ಲಿ ಎರಡು ವಿಧಾನಗಳನ್ನು ಬಳಸಿದ್ದಾರೆ. ಮೊದಲನೆಯದು ಇಂಟೆಗ್ರೇಟೆಡ್ ಅಂದರೆ ಎಲ್ಲ ಭಾಗಗಳನ್ನೂ ಒಂದಾಗಿ ನಿರ್ಮಿಸುವುದು; ಮತ್ತೊಂದು, ಹಾರಾಟಕ್ಕೆ ಬೇಕಾದ ಭಾಗಗಳನ್ನು ಒಂದೆಡೆ ಇರಿಸಿ, ಬೇಕಾದಾಗ ಜೋಡಿಸಿಕೊಳ್ಳುವುದು. ಕೆಲ ಮಾದರಿಗಳಲ್ಲಿ ವಾಹನದ ಮುಂಭಾಗದಲ್ಲಿ ಅಳವಡಿಸಿರುವ ಫ್ಯಾನುಗಳು ಪಾರ್ಶ್ವದಲ್ಲಿ ಗಾಲಿಯನ್ನು ಹೊರಹಾಕಿ, ರೆಕ್ಕೆಗಳನ್ನು ತಂತಾನೇ ಬಿಚ್ಚಿಕೊಳ್ಳುವಂತೆ ಮಾಡುತ್ತದೆ. ಹೀಗೆ ವಿವಿಧ ವಿಧಾನಗಳ ಪ್ರಯೋಗಗಳು ನಡೆಯುತ್ತಿವೆ. ಹೊಸ ತಂತ್ರಜ್ಞಾನ ಬಳಕೆಯಿಂದ ಜಿ.ಪಿ.ಎಸ್. (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್; ಚಾಲಕನಿಗೆ ತಾನು ಸಾಗುತ್ತಿರುವ ನೆಲೆಯ ಬಗೆಗೆ ಸತತವಾಗಿ ಸ್ಯಾಟಲೈಟಿನಿಂದ ಒದಗುವ ಬರುವ ಸ್ಥಳವಿವರ) ಅಳವಡಿಸಿ, ಸ್ಯಾಟೆಲೈಟ್ ಮುಖಾಂತರ ನಿಯಂತ್ರಿಸಬಹುದು. ಈ ಹಾರುವ ಕಾರುಗಳಿಗೆ ಎಂಟು ರೋಟರಿ ಎಂಜಿನ್ನುಗಳನ್ನು ನಾಲ್ಕು ಲೋಹದ ಪೆಟ್ಟಿಗೆಗಳಲ್ಲಿ ಇರಿಸಿರುತ್ತಾರೆ. ಪ್ರತಿ ಪೆಟ್ಟಿಗೆಯಲ್ಲಿ ಎರಡು ಎಂಜಿನ್ನುಗಳಿದ್ದು ಅದರಲ್ಲಿ ಒಂದು ಕೆಲಸ ಮಾಡದಿದ್ದರೆ ಇನ್ನೊಂದು ಚಾಲನೆಗೆ ಬರುವಂತೆ ಮಾಡಿರುತ್ತಾರೆ. ಇವುಗಳಿಂದ ಕಾರು ಮೇಲೇರಲು ಮತ್ತು ಹಾರಾಡಲು ಸಹಾಯಕವಾಗುವ 720 ಅಶ್ವಶಕ್ತಿ ಒದಗುತ್ತದೆ. ಒಂದು ವೇಳೆ ಹಾರಾಟದಲ್ಲಿ ತೊಂದರೆಯಾದರೆ ಅದು ಹೆಚ್ಚಿನ ತೊಂದರೆಯಿಲ್ಲದೇ ಕೆಳಗಿಳಿದು ಕಾರಿನಂತೆ ಚಲಿಸಲು ಅನುಕೂಲವಾಗುವಂತೆ ಪ್ಯಾರಾಚೂಟ್‌ಗಳನ್ನು ಅಳವಡಿಸಿರುತ್ತಾರೆ.

ಸದ್ಯಕ್ಕೆ ಇನ್ನೂ ಪೂರ್ತಿ ಪ್ರಮಾಣದಲ್ಲಿ ‘ಹಾರುವ ಕಾರು’ ಸಾರ್ವಜನಿಕರ ಬಳಕೆಗೆ ಬಂದಿಲ್ಲ. ಮುಂದೊಮ್ಮೆ ಇದೇ ಅತ್ಯಂತ ಜನಪರ ವಾಹನವಾಗಬಹುದು. ಇತ್ತೀಚಿನ ದಿನಗಳಲ್ಲಿ ವಿಶ್ವದ ಯಾವುದೇ ಮಹಾನಗರವನ್ನು ತೆಗೆದುಕೊಂಡರೂ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಸಾಮಾನ್ಯ ದೃಶ್ಯ. ಈ ಹಾರುವ ಕಾರುಗಳು ಅದನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂಬುದು ಇದರ ತಯಾರಕರ ಆಶಯ. ಇದು ಆಕಾಶದಲ್ಲಿ ಯಾವ ರೀತಿಯ ದಟ್ಟಣೆ ಉಂಟುಮಾಡಬಹುದು ಎಂಬುದು ಹಾಲಿವುಡ್ ಚಿತ್ರಗಳಷ್ಟೇ ಕುತೂಹಲಕಾರಿ. ಇನ್ನು ನಮ್ಮ ದೇಶದಲ್ಲಿ ಆಕಾಶಕಾಯವಾಗಿ ಬಂದು ಇದು ರಸ್ತೆಗಿಳಿದರೆ ಅದರ ಪೈಪೋಟಿ ಯಾವ ರೀತಿ ಇರಬಹುದು ಎಂಬುದು ಗಾಬರಿ ಮೂಡಿಸುತ್ತದೆ. ನಮ್ಮಲ್ಲಿ ರಸ್ತೆಯಲ್ಲಿ ವಾಹನ ಚಲಾಯಿಸುವವರು ಯಾವ ಶಿಸ್ತು, ನಿಯಮ ಪಾಲನೆಯನ್ನೂ ಸರಿಯಾಗಿ ಪಾಲಿಸುತ್ತಿಲ್ಲ. ಈಗ ಸ್ವಂತ ಹೆಲಿಕಾಪ್ಟರ್ ಬಳಸುವ ಅತಿರಥರೂ ಹೆಚ್ಚಾಗುತ್ತಿದ್ದಾರೆ. ಇಂತಹ ‘ಗಣ್ಯಾತಿಗಣ್ಯ’ರಿಗೆ ಇದು ಬೇಕೇ ಬೇಕಾಗುತ್ತದೆ. ಸುಮಾರು ವರ್ಷದ ಹಿಂದೆ ಪ್ರತಿಕೂಲ ಹವಾಮಾನದಲ್ಲೂ ಹೆಲಿಕಾಪ್ಟರಿನಲ್ಲಿ ಸಂಚರಿಸಿ ದುರ್ಮರಣಹೊಂದಿದ ಒಬ್ಬ ಪ್ರಮುಖ ವ್ಯಕ್ತಿ, ಮತ್ತವರ ದುಸ್ಸಾಹಸ ಇನ್ನೂ ಹಸಿರಾಗಿಯೇ ಇರುವಾಗ ಈ ಹಾರುವ ಕಾರುಗಳನ್ನು ಹೇಗೆ ನಿಯಂತ್ರಿಸುತ್ತಾರೆ ಎನಿಸುತ್ತದೆ. ವಿಜ್ಞಾನದ ಯಾವುದೇ ಸಂಶೋಧನೆಯಾಗಲೀ ಅದರ ಸದ್ಬಳಕೆಯಿಂದ ಮಾತ್ರ ನಾವು ಪ್ರಗತಿ ಹೊಂದುತ್ತಿರುವುದರ ಸಂಕೇತ ಎಂಬುದನ್ನು ತಿಳಿಯಬೇಕಿದೆ. ಈ ವಿಶಿಷ್ಟ ವಾಹನದ ತಾಂತ್ರಿಕ ವಿವರಗಳು ಹೀಗಿವೆ.

ಎಂಜಿನ್ನು: 1000 ಸಿ.ಸಿ. (4 ಸಿಲಿಂಡರುಗಳು) 140 ಬಿ.ಎಚ್.ಪಿ. ಶಕ್ತಿಯುಳ್ಳದ್ದು

ಮೇಲೇರಬಹುದಾದ ಎತ್ತರ : 610 ಮೀ ದಿಂದ 915 ಮೀ ಗರಿಷ್ಠ ಎತ್ತರ4575 ಮೀ

ರೇಂಜ್: ಹಾರಾಟದಲ್ಲಿ 280 ಕಿಮೀಗಳು, ರಸ್ತೆಯಲ್ಲಿ 400 ಕಿಮೀಗಳು

ಗರಿಷ್ಠ ವೇಗ: 130 ಕಿಮೀ ಹಾರುವಾಗ / 175 ಕಿ.ಮೀ. ರಸ್ತೆಯಲ್ಲಿ (ಪ್ರತಿ ಗಂಟೆಗೆ).