ಕವಿತೆ

ಕ..ವಿ..ತೆ ಈ ಪದದಲ್ಲಿ ಏನೆಲ್ಲ ಅ..ವಿ..ತಿದೆ ಎಂದು ಒಮ್ಮೆಗೇ, ಒಮ್ಮೆಲೇ ವಿವರಿಸುವುದು ಕಷ್ಟ. ಆದರೆ ಸಾಹಿತ್ಯವನ್ನು ಒಂದು ಶಿಸ್ತಾಗಿ ಪರಿಗಣಿಸಿ ಕಲಿಸುವಾಗ / ಓದುವಾಗ ಪದೇಪದೆ ಮನವರಿಕೆ ಮಾಡಿಕೊಡಲಾಗುವ ಸಂಗತಿ ಎಂದರೆ “ಮಾತೇ ಬೇರೆ; ಕವಿತೆಯೇ ಬೇರೆ”. Poetry is Language heightened ಎಂಬ ಹೇಳಿಕೆ ಈ “ಗುಣಲಕ್ಷಣ’ವನ್ನು ಸೂಕ್ತವಾಗಿ ಘೋಷಿಸುತ್ತದೆ. ಅಂದರೆ, ಪ್ರತಿ ಕವಿತೆಯ ಓದಿನ ತಯಾರಿಯ ಹಿಂದೆಯೂ ಈ ಅರಿವು ವಿದ್ಯಾರ್ಥಿಗೆ / ಓದುಗರಿಗೆ ಇರಬೇಕು. ದಿನನಿತ್ಯದಲ್ಲಿ ನಾವು ಬಳಸುವ ಭಾಷೆ ಬೇರೆಯದೇ ಆದ ಸ್ತರದಲ್ಲಿ ಅಲ್ಲಿ ಬಳಕೆಯಾಗುತ್ತಿದೆ ಎಂಬ “ದತ್ತಾಂಶ”ದೊಂದಿಗೆ ಅದರ ಆಸ್ವಾದನೆಗೆ ಹೊರಡಬೇಕು. ನಮಗೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಕಲಿಸಲಾಗುವ ಚಂದದ ಒಂದು ಪದ್ಯದೊಡನೆ ಅಂತಹದೊಂದು ಪ್ರಯತ್ನ ಮಾಡೋಣ:

ಮೂಡುವನು ರವಿ ಮೂಡುವನು / ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು / ಕುಣಿದಾಡುವನು

ಸೂರ್ಯ ಪ್ರತಿ ಬೆಳಗ್ಗೆ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ ಎಂಬ “ಮಾಮೂಲಿ” ಮಾತು ಅನೇಕ ಪರಿಕರಗಳನ್ನು ಬಳಸಿಕೊಳ್ಳುತ್ತಾ ಒಂದು ಕವಿತೆಯಾಗಿ ಬೆಳೆಯುತ್ತದೆ. (ಈ ಪರಿಕರಗಳು ಯಾವುವು ಎನ್ನುವುದನ್ನೂ ಪ್ರಸ್ತುತ ಕವನದ ವಿಶ್ಲೇಷಣೆ ಮಾಡುತ್ತಲೇ ತಿಳಿಯೋಣ). ರವಿ ಮೂಡುತ್ತಾನೆ, ಕತ್ತಲೊಡನೆ ಜಗಳಾಡುತ್ತಾನೆ, ಮೂಡಣ “ರಂಗಸ್ಥಳ”ದಲ್ಲಿ ನೆತ್ತರು ಮಾಡಿ ಕುಣಿದಾಡುತ್ತಾನೆ ಎಂದೆಲ್ಲ ವಿವರಿಸುವಾಗ ಕವಿ ತನ್ನ ೧. ಪದ ಸಮೃದ್ಧಿ / ಅವುಗಳ ಪರಿಣಾಮಕಾರಿ ಬಳಕೆ, ೨. ಸೂರ್ಯ ಹೇಗೆ ಹುಟ್ಟುತ್ತಾನೆಂಬುದನ್ನು ತನ್ನದೇ ಆದ ರೀತಿಯಲ್ಲಿ ವರ್ಣಿಸುವ ಕಲ್ಪಕತೆ (ಇಮ್ಯಾಜಿನೇಷನ್) ೩. ಕತ್ತಲು, ನೆತ್ತರು, ರಂಗಸ್ಥಳ ಮುಂತಾದ ಪದಗಳನ್ನು ಬಳಸುತ್ತಾ ಓದುಗರ ಕಣ್ಣ ಮುಂದೆ ಒಂದು ದೃಶ್ಯ ನಿರ್ಮಿಸುವ ಚಾತುರ್ಯ, ಹುಟ್ಟಿದ ಸೂರ್ಯ ಕುಣಿದಾಡುತ್ತಾನೆ ಎನ್ನುವಾಗ ತುಸು ನಾಟ್ಯ…ಎಲ್ಲವನ್ನೂ ಬಳಸುತ್ತಿದ್ದಾನೆ ಎಂದು ಈಗ ಗೊತ್ತಾಗುತ್ತಿದೆ. ಸೂರ್ಯನನ್ನು ಮನುಷ್ಯರ ಹಾಗೆ ಪರಿಗಣಿಸಿ, ಜಗಳಾಡುವ, ಕುಣಿದಾಡುವ ಕ್ರಿಯೆಗಳನ್ನು ಆರೋಪಿಸಿರುವುದೂ ನಮ್ಮ ಗಮನ ತಪ್ಪಿಸಿಕೊಳ್ಳುವಂತಿಲ್ಲ. ಆಮೇಲೆ? ಕವಿತೆ ಒಂದು ಕಟ್ಟಡದ ಹಾಗೆ ತನ್ನ ಶಿಲ್ಪವನ್ನು ಹಂತ ಹಂತವಾಗಿ ನಿರ್ಮಿಸಿಕೊಳ್ಳುತ್ತದೆ:

ಬೆಳಕಿನ ಕಣ್ಣುಗಳಿಂದಾ ಸೂರ್ಯನು / ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ / ಗೂಡಿನ ಹೊರ ಹೊರದೂಡುವನು
ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು / ಕಣ್ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ ಉಡಿಸುವನು / ಹನಿ ತೊಡಿಸುವನು

ಕತ್ತಲೊಡನೆ ಸಂಘರ್ಷಕ್ಕಿಳಿದು, ಆ ಕ್ರಿಯೆಯಲ್ಲಿ ರಕ್ತಪಾತವನ್ನೂ ಮಾಡಿ, (ಅಂದರೆ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿ ಅಂತಲೂ ಇಟ್ಟುಕೊಳ್ಳಿ! ಹೀಗೆಲ್ಲಾ ಒಂದು “ನೋಟ” ಒದಗಿಸುತ್ತಿರುವುದರಿಂದ ಅವನ ಉದಯಿಸುತ್ತಿರುವ ಪೂರ್ವದಿಕ್ಕು ಒಂದು “ರಂಗಸ್ಥಳ”ವಾಗಿಯೂ ತೋರುತ್ತಿದೆ) ಮೂಡುತ್ತಿರುವ ರವಿ, ಪ್ರಪಂಚಕ್ಕೆ ಒಳಿತು ಮಾಡಲೆಂದೇ ಬರುತ್ತಿರುವವನು…ಅವನಿದ್ದೆಡೆ ಸೃಷ್ಟಿಯ ಜೀವಿಗಳಿಗೆ ಬೇಕಾದ ಬೆಳಕು, ಶಾಖ, ಹಕ್ಕಿ-ಮಕ್ಕಳ ಚಟುವಟಿಕೆ, ಸುಂದರ ದೃಶ್ಯ ಎಲ್ಲಾ ಇವೆ. ಬೆಳಕಿನ ಕಣ್ಣುಗಳಿಂದ ನೋಡುತ್ತಾ, ಈ ವಿಶ್ವಕ್ಕೆ ಅವನು ಒದಗಿಸುತ್ತಿರುವ ಶಾಖ ಮಗುವಿಗೆ ತಾಯಿ ಹಾಲೂಡಿದಂತೆ, ಸೌಮ್ಯವಾಗಿ, ಕ್ರಮೇಣ, ವಾತ್ಸಲ್ಯಪೂರಿತವಾಗಿ ಇದೆ; ಹಾಗಾಗಿಯೇ “ಬಿಸಿಲೂಡುವ” ಪದಪ್ರಯೋಗ. ಬರೀ ವಾತ್ಸಲ್ಯಮಯಿಯಾಗಿಬಿಟ್ಟರೆ ಸಾಲದು ಎಂದು ಅರಿತವನಂತೆ ಈ “ಟಾಸ್ಕ್ ಮಾಸ್ಟರ್” ಹಕ್ಕಿಗಳನ್ನು ಗೂಡಿನ ಹೊರ ಹೊರದೂಡುವನು

ಈ ಕ್ರಿಯೆಯ ಫೋರ್ಸ್ ಹೇಗೆ ಎರಡು ಸಾರಿ “ಹೊರ” ಪದ ಬಳಸಿರುವುದರಿಂದ ಆಗುತ್ತಿದೆ ಎಂದು ಗಮನಿಸಿ. ದೈನಿಕವು ಚಾಚೂ ತಪ್ಪದೆ ನಡೆಯುವಲ್ಲಿ ಮುಖ್ಯ ಪಾತ್ರ ವಹಿಸುವ ಈ ಮಹಾನುಭಾವ, ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸಿ, ನಿರ್ದಾಕ್ಷಿಣ್ಯವಾಗಿ ಕಣ್ಬಿಡಿಸಿ, “ಹ್ಞೂಂ, ಇನ್ನು ನಿನ್ನ ಚಟುವಟಿಕೆಗಳಿಗೆ ಮುಂದಾಗು” ಎಂದು ನಿರ್ದೇಶಿಸುತ್ತಾನೆ. ಮನೆಯ ಹೊರಗಡೆ ಅವನ ಕೆಲಸವೆಂದರೆ, ಹುಲ್ಲು, ಗಿಡ, ಅದರ ಹೂಗಳು…ಎಲ್ಲವಕ್ಕೆ ಅಸಂಖ್ಯ ಬಣ್ಣಗಳನ್ನು “ಉಡಿಸಿ” ಒಂದು ರಮಣೀಯ ದೃಶ್ಯ ನಿರ್ಮಿಸುವುದು. ಅಲ್ಲಲ್ಲಿ ಉಳಿದ ಮಂಜು ಕರಗಿ ಹನಿಯಾಗುವಂತೆ, ಸುತ್ತಲಿನ ಹಲವು ಬಣ್ಣಗಳಿಗೆ ಒಂದು ಪಾರದರ್ಶಕ / ಬಿಳಿ “ಕಾಂಟ್ರಾಸ್ಟ್” ಆಗುವಂತೆ ಮಾಡಲೂ ಅವನಿಗೆ ಇಂಟರೆಸ್ಟ್- ಅಭಿರುಚಿ ಇದೆ!

ರವಿಯ ಮುಂಜಾವಿನ ಆಕ್ಟಿವಿಟೀಸ್ ಸರಿ ಸುಮಾರು ಮುಗಿದವು… ಮುಂದೇನು? ಕವಿ ಮನ ಕಲ್ಪಿಸಿಕೊಳ್ಳುತ್ತದೆ:

ಬಂಗಾರದ ಚೆಲು ಬಿಸಿಲ ಕಿರೀಟದ / ಶೃಂಗಾರದ ತಲೆ ಎತ್ತುವನು
ತೆಂಗಿನ, ಕಂಗಿನ, ತಾಳೆಯ, ಬಾಳೆಯ ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು / ರವಿ ಹೊಳೆಯುವನು
ಕೂಡಲೆ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು / …ಬೆಳಗುವನು

ಮೇಲೇರುತ್ತಿದ್ದಂತೆ ಸೂರ್ಯನ ಬಿಳಿ ಪ್ರಕಾಶ ಚಿನ್ನದ ಬಣ್ಣ ಪಡೆದುಕೊಳ್ಳುವುದು ಯಾರಾದರೂ ಗಮನಿಸಿರುವ ಒಂದು ಆಬ್ಸರ‍್ವೇಷನ್ ಅಥವಾ ನಿರೀಕ್ಷಣೆ. ಆದರೆ ಒಂದು ಚೆಲುವಾದ ಕಿರೀಟ ತೊಟ್ಟು ಸೂರ್ಯ ತಲೆ ಎತ್ತುತ್ತಿದ್ದಾನೆ ಎಂದು ಹೇಳಲಾಗುವುದು ಕವಿತೆಯಲ್ಲಿ ಮಾತ್ರ. ಬರೆಯುವಾತನ ಕಲ್ಪಕತೆಗೆ ತಕ್ಕಹಾಗೆ ನುಡಿ ಪಡೆದುಕೊಂಡು, ಅದನ್ನು ಓದುವವರಿಗೂ ದಾಟಿಸಿ, ಒಂದು ಹಿತವಾದ ಸಂವೇದನೆ ಉಂಟುಮಾಡುವುದು ಪದ್ಯದಲ್ಲಿ ಸಾಧ್ಯ. ಸೂರ್ಯನ ವಯಸ್ಸೂ ಅವನ ಬಿಸಿಲಿನಂತೆ ಏರುತ್ತಿದೆ ಎಂತಲೂ ಕವಿಯ ಸೂಚನೆ…ಏಕೆಂದರೆ ಅವನು ತೆಂಗು, ಅಡಕೆ, ತಾಳೆ, ಬಾಳೆಯ ಸುಕೋಮಲ, ಆದರೆ ಇಲ್ಲಿತನಕ ಬಣ್ಣರಹಿತವಾಗಿದ್ದ (ಹಾಗಾಗಿ ಏನೂ ಸ್ವಾರಸ್ಯವಿಲ್ಲದ) ಕಾಂಡಗಳಿಗೆ ಬಣ್ಣ ಬಳಿಯುತ್ತಿದ್ದಾನೆ…ಅಲ್ಲಲ್ಲ ಮೆತ್ತುತ್ತಿದ್ದಾನೆ. “ಬಳಿಯು”ವಲ್ಲಿ ಇರುವ ದೂರ, ಅಲಿಪ್ತತೆ “ಮೆತ್ತು”ವಲ್ಲಿ ಇರುವ ಸನಿಹ, ಉದ್ವೇಗ… ಎರಡರ ವ್ಯತ್ಯಾಸ ಗಮನಿಸಿಕೊಳ್ಳಿ. ಈಗ ನೀವು ವಯಸ್ಕರಾಗಿರುವುದರಿಂದ ಪ್ರೈಮರಿ ಶಾಲೆಯ ಈ ಪದ್ಯದಲ್ಲಿಯೂ “ಶೃಂಗಾರ” ಅಂದರೆ ರೊಮಾನ್ಸ್ ಇರುವುದನ್ನು ತಪ್ಪಿಸಿಕೊಳ್ಳಲಾಗದು! ಬಾಳೆ, ತಾಳೆಯ “ಅಂಗಕೆ” ಎಂದು ಕವಿ ಸೂಚಿಸಿದ ಮೇಲೂ! ಕೈತೋಟದಲ್ಲಿರುವ ಮರಗಿಡಗಳನ್ನು ದಾಟಿ ಮಾಡಿನ ಹುಲ್ಲಿನತ್ತ ಅವನ ಸವಾರಿ ಸಾಗುವಾಗ ಅಲ್ಲೊಂದು “ಚಿನ್ನದ ಗೆರೆ” ಮೂಡುತ್ತದೆ. ಕವಿತೆಯ ಇನ್ನಿತರ ನಿರೀಕ್ಷಣೆಗಳಿಗಿಂತ ಒಂದು ಕೈ ಮಿಗಿಲಾದ ಪ್ರಿಸಿಷನ್ ಅಂದರೆ ಕರಾರುವಾಕ್ಕು ಗುಣ ಇಲ್ಲಿದೆ ಎಂದು ನಿಮಗೆ ಅನಿಸಿದರೂ ಅನಿಸಬಹುದು. ಈ ಕ್ರಿಯೆ ತುಂಬ ಕ್ಷಿಪ್ರವಾಗಿ, ಸಂಕ್ಷಿಪ್ತವಾಗಿ ಸಾಗುತ್ತದೆ ಎನ್ನುವುದನ್ನೂ “ಎಳೆಯುವನು” ಕ್ರಿಯಾಪದ ಸೂಚಿಸುತ್ತಿರಬಹುದು…ಎಲ್ಲ ಅವರವರ ಸಂವೇದನೆಗೆ, ಭಾವಿಸಿಕೊಳ್ಳಬಲ್ಲ ಸೂಕ್ಷ್ಮಜ್ಞತೆಗೆ ಬಿಟ್ಟ ವಿಚಾರ. ಆದರೆ ಕವಿತೆ ಅಥವಾ ಕಾವ್ಯವನ್ನು ಓದುತ್ತಾ ಓದುತ್ತಾ ಮನಸ್ಸಿಗೆ ಇಂಥದೊಂದು ಸಂಸ್ಕಾರ ಸಿಗುತ್ತದೆ ಎನ್ನುವುದು ಸಾಧಿಸಿ ತೋರಿಸಬಹುದಾದ ಸತ್ಯ!

ಹಳೆಕಾಲದ ಚಲನಚಿತ್ರಗಳಲ್ಲಿ ಒಂದಲ್ಲ ಒಂದು “ಮೆಸೇಜ್” ಅಂದರೆ ನೀತಿ ಇರುತ್ತಿತ್ತು. ಪ್ರಾಥಮಿಕ ಶಾಲಾ ಪದ್ಯಗಳಲ್ಲೂ ಇದು ಎದ್ದುಕಾಣುವ ಗುಣ. ಅದಕ್ಕೆ ಅನುಗುಣವಾಗಿ ಕವಿ ಹೀಗೆ ವಿರಮಿಸುತ್ತಾನೆ;

ಏರುವನು ರವಿ ಏರುವನು / ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ / ಎಂಬಾ ಮಾತನು ಸಾರುವನು

ನೀತಿಬೋಧನೆ ಕಾವ್ಯದ ಕೆಲಸ ಹೌದೇ ಅಲ್ಲವೇ ಎನ್ನುವ ಕುರಿತು ಅನೇಕ ವಾದಗಳುಂಟು. ಆದರೆ ನೀತಿಬೋಧನೆ (ಜೀವನದಲ್ಲಿ ಮೇಲೇರಿದ ಮೇಲೂ ನಯ, ವಿನಯ ಉಳಿಸಿಕೊಂಡಿರಬೇಕು ಎಂದು ಪ್ರಸ್ತುತ ಪದ್ಯ ಸೂಚಿಸುವಂತೆ) ಅಥವಾ ಜೀವನದ ಕುರಿತು ಒಂದು ಕಾಣ್ಕೆ ಅಥವಾ ದೃಷ್ಟಿಕೋನ ಪ್ರತಿ ಕಲಾಪ್ರಕಾರದಲ್ಲೂ ಯಾವುದೋ ಒಂದು ರೂಪದಲ್ಲಿ ಇರುತ್ತದೆ ಎಂದು ಅವುಗಳನ್ನು ಆಸ್ವಾದಿಸುತ್ತಾಹೋದಂತೆ ಅರಿವಿಗೆ ಬರುತ್ತದೆ. ವಿಲ್ಲನ್ನೇ ಅಥವಾ ಕೆಡುಕೇ ಆಕರ್ಷಕ ಎಂದು ಹೊರಡುವ ಸುಪರ್‌ಹೀರೋ ಚಿತ್ರದಲ್ಲೂ (ಉದಾ: ರಾ.ಒನ್) ಕಡೆಗೆ ಒಳಿತಿಗೇ ಜಯ! ಮಹಾಕಾವ್ಯಗಳು ಏನು ಹೇಳುತ್ತವೆ ಎಂಬ “ಒನ್‌ಲೈನರ್”ಗಳೂ ಈ “ಬೋಧೆ”ಯ ರೂಪದಲ್ಲೇ ಇರುತ್ತವೆ. ಆದರೆ ಎದ್ದುಕಾಣುವಂತೆ, ಅದರ ರಸಾನುಭವಕ್ಕೆ ಭಂಗ ತರುವಂತೆ ಕಾವ್ಯ ಉಪದೇಶಕ್ಕೆ ಹೊರಡಬಾರದು ಎನ್ನುವುದು ಒಳ್ಳೆಯ ಕಾವ್ಯ ಯಾವುದು ಎಂದು ನಿರ್ಣಯಿಸುವ ನಿಯಮಗಳಲ್ಲಿ ಒಂದು.

ಆರಂಭದಲ್ಲಿ ಪ್ರಸ್ತಾಪಿಸಿದಂತೆ, ಯಾವುದು ಪದ್ಯ ಎಂದು ಕಾನ್ಸೆಪ್ಚುಯಲಿ ಅಂದರೆ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದು ಕಠಿಣವೇ ಆದರೂ ಹೊರ ರೂಪದಿಂದ ಪದ್ಯ, ಗದ್ಯಗಳನ್ನು ವಿಭಾಗೀಕರಿಸುವ ಪ್ರಯತ್ನ ಒಂದಿದೆ: ಲಯ, ಪ್ರಾಸ, ಅನುಪ್ರಾಸ ಇವುಗಳನ್ನು ಒಳಗೊಂಡಿದ್ದು ಪದ್ಯ ಅಲ್ಲದ್ದು ಗದ್ಯ. ಉದಾಹರಣೆಗೆ ಮೇಲಿನ ಪದ್ಯದಲ್ಲಿ ಮೂಡುವನು / ಜಗಳಾಡುವನು / ನೆತ್ತರು  ಮಾಡುವನು / ಕುಣಿದಾಡುವನು / ನೋಡುವನು / ಬಿಸಿಲೂಡುವನು / ಹೊರದೂಡುವನು ಎಂದು ಸಾಲುಗಳು ಒಂದೇ ಬಗೆಯ ಸೌಂಡ್‌ನಲ್ಲಿ (ಪ್ರಾಸ) ಕೊನೆಯಾಗುತ್ತವೆ. ಇದರಿಂದಾಗಿ ಒಂದು ಲಯ ಅವುಗಳಿಗೆ ಪ್ರಾಪ್ತವಾಗಿದೆ. ಅದರಿಂದಾಗಿಯೇ ಅವುಗಳನ್ನು ದೀರ್ಘಕಾಲ ನೆನಪಿಟ್ಟುಕೊಳ್ಳುವುದೂ ಸಾಧ್ಯವಾಗಿದೆ. ಹೀಗೆ ಬಾಯಿಪಾಠ ಅಥವಾ ಗಟ್ಟಿಪಾಠಕ್ಕೆ ಸುಲಭವಾಗಲೆಂದೇ ಋಗ್ವೇದವನ್ನು ಪದ್ಯ ರೂಪದಲ್ಲಿ ಇಡಲಾಗಿದೆ ಎಂಬ ಅಂಶವನ್ನು ಎಲ್ಲಿಯಾದರೂ ಓದಿ / ಕೇಳಿರುತ್ತೀರಿ. ಆದರೆ ಕ್ರಮೇಣ ಲಯ, ಪ್ರಾಸಗಳೇ ಇಲ್ಲದ ಕವಿತೆಗಳೂ ಬರೆಯಲ್ಪಟ್ಟಾಗ ಈ ನಿಯಮವನ್ನು ಸ್ವಲ್ಪ ಸಡಿಲಿಸಬೇಕಾಯಿತು. ಉದಾಹರಣೆಗೆ, ಉರಿಯುವ ಕೋಪದಲ್ಲಿ ಮನೆಗೆ ಬಂದೆ / ಕೆಂಡಸಂಪಿಗೆ ಮರ ಹೂಬಿಟ್ಟು ನಿಂತಿತ್ತು ಎನ್ನುವುದು ಎ.ಕೆ.ರಾಮಾನುಜನ್‌ರ ಒಂದು ಕವಿತೆಯ ಸಾಲು. ಆದರೆ ತುಂಡರಿಸಿದ ಗದ್ಯದಂತೆ ಕಾಣುವ ಪದ್ಯಪಂಕ್ತಿಗಳಲ್ಲಿಯೂ ಒಂದು ಆಂತರಿಕ ಲಯ ಇರುತ್ತದೆ ಹಾಗೂ ಅದನ್ನು ಈ ಹಿಂದೆ ವಿವರಿಸಿದಂತೆ ಬೇರೆಯದೇ ಒಂದು ಸ್ತರದಲ್ಲಿ ಓದಿಕೊಳ್ಳಬೇಕು ಎನ್ನುವುದೂ ತರತರದ ಕವಿತೆಗಳ ರಸಾಸ್ವಾದನೆಗೆ ಬೇಕಾದ ಒಂದು ಸಿದ್ಧತೆ. ಹಾಗೆಯೇ ಕವಿ ಮಾತನಾಡುವಾಗ ಏನೆಲ್ಲ ಶಬ್ದಾಲಂಕಾರಗಳನ್ನು (ಅರ್ಥಾಲಂಕಾರ ಅಥವಾ ಫಿಗರ‍್ಸ್ ಆಫ್‌ಸ್ಪೀಚ್) ಬಳಸಿದ್ದಾನೆ ಎನ್ನುವುದರ ಕಡೆ ಚುರುಕುಗಣ್ಣು, ಕಿವಿ ಅಷ್ಟೇ ಏಕೆ ಪಂಚೇಂದ್ರಿಯಗಳನ್ನೂ ತೆರೆದಿಟ್ಟುಕೊಂಡಿರಬೇಕು. ಮೇಲಿನ ಪದ್ಯದಲ್ಲಿ ಬೆಳಕಿನ ಕಣ್ಣುಗಳು, ನಿದ್ದೆಯ ಕಸ ಇತ್ಯಾದಿಗಳೆಲ್ಲ ಕವಿ ಬಳಸಿರುವ ರೂಪಕಗಳು. ಬೆಳಕಿನಂತಹ ಕಣ್ಣು ಎಂದಾಗ ಅದು ಉಪಮೆ. ಬೆಳಕೇ ಕಣ್ಣಾದಾಗ ರೂಪಕ. ಸೂರ್ಯನನ್ನು ಒಬ್ಬ ಮನುಷ್ಯ ಅನ್ನುವ ರೀತಿಯಲ್ಲಿ ಪರಿಭಾವಿಸಿ ಅವನ ಚಟುವಟಿಕೆಗಳನ್ನು ವಿವರಿಸುತ್ತಿರುವ ಅಲಂಕಾರ “ಪರ್ಸಾನಿಫಿಕೇಷನ್”. ಇವಲ್ಲದೇ ವ್ಯಂಗ್ಯ, ವಿರೋಧಾಭಾಸ ಇನ್ನಿತರ ಶಬ್ದಾಲಂಕಾರಗಳನ್ನೂ ಕ್ರಮೇಣ ಪರಿಚಯಿಸಿಕೊಳ್ಳಬಹುದು. ಇಲ್ಲೆಲ್ಲ ಆಯಾ ಪದ / ಪದಪುಂಜಗಳು ಸ್ವಾಭಾವಿಕವಾಗಿ ನೀಡುವ ಅರ್ಥಕ್ಕಿಂತ ಬೇರೆಯದೇ ಆದ ರೀತಿಯಲ್ಲಿ ಅರ್ಥವಾಗುವಂತೆ ಅವುಗಳನ್ನು ದುಡಿಸಿಕೊಳ್ಳಲಾಗಿದೆ ಎನ್ನುವುದನ್ನು ಗಮನಿಸಬೇಕು. ಈ ಕುರಿತು ಚಿಕಿತ್ಸಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಯೋಚಿಸಿದ ಹಾಗೆಲ್ಲ ಪದ್ಯ ಮತ್ತು ಗದ್ಯಗಳ ಅಥವಾ ದಿನನಿತ್ಯದ ಕೇವನ ಸಂವಹನಕ್ಕಾಗಿ ಬಳಸುವ ಭಾಷೆಯ ನಡುವೆ ಇರುವ ವ್ಯತ್ಯಾಸ ಹೆಚ್ಚು ಹೆಚ್ಚು ಮನದಟ್ಟಾಗುತ್ತಾಹೋಗುತ್ತದೆ. ಈ ತಯಾರಿ ಇರುವಾಗ ತುಂಡುತುಂಡು ವಾಕ್ಯಗಳಲ್ಲಿ, ಸಂಜ್ಞಾತ್ಮಕವಾಗಿ (ಭಾಷೆಯ ಹಂಗಿಲ್ಲದೇ ಮೂಡುವ ಇಷಾರೆಗಳು) ಕವಿತೆಯ ಸ್ವರೂಪವಿದ್ದರೂ “ಬಿಟ್ಟ ಸಾಲು”ಗಳನ್ನೆಲ್ಲ ತುಂಬಿಕೊಳ್ಳುತ್ತಾ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಉದಾಹರಣೆಗೆ ಮತ್ತೊಂದು ಕಿರಿಯ ಇಯತ್ತೆಯ ಪದ್ಯ, ಅಂಚೆಯ ಅಣ್ಣ / ಬಂದಿಹೆ ಚಿಣ್ಣ / ಅಂಚೆಯ ಹಂಚಲು ಮನೆಮನೆಗೆಸಾವಿರ ಸುದ್ದಿಯ ಈಗಲೇ ಕೊಡುವೆನು / ತುಂಬಿದ ಚೀಲವು ಬಗಲೊಳಗೆದಿಂದ ನಾನು ಅಂಚೆಯ ಅಣ್ಣ, ಈಗ (ನಿಮ್ಮ ಮನೆಗೆ) ಬಂದಿದ್ದೀನಿ, ಬೇಕಾದಷ್ಟು ಪತ್ರಗಳಿರುವ ನನ್ನ ಹೆಗಲ ಚೀಲದಿಂದ ಮನೆಮನೆಗೆ ತತ್‌ಕ್ಷಣ ಎಲ್ಲಿಯದೋ ಸುದ್ದಿ ತಲುಪಿಸುತ್ತಿದ್ದೇನೆ ಎನ್ನುವ ಅರ್ಥ ಹೊಳೆಯುವ ಹಾಗೆ. ಬೇಂದ್ರೆಯವರ ಪ್ರಸಿದ್ಧ ಪಾತರಗಿತ್ತಿ ಪಕ್ಕಾ / ನೋಡಿದೇನ ಅಕ್ಕಾಏನು ಬಣ್ಣಬಣ್ಣಾ / ನಡುವೆ ನವಿಲಗಣ್ಣಾರೇಷಿಮೆ ಪಕ್ಕ ನಯಾ / ಮುಟ್ಟಲಾರೆ ಭಯಾ ಕೇಳಿಯೇ ಇರುತ್ತೀರಿ. ಈ ತುಂಡು ಸಾಲುಗಳು ಕೆಲವೇ ಗೆರೆಗಳಲ್ಲಿ ಮೂಡುವ ಚಿತ್ರದ  ಹಾಗೆ ಒಂದು ದೃಶ್ಯ ಕಟ್ಟಿಕೊಡುತ್ತಿವೆ; ಅಷ್ಟೇ ಅಲ್ಲ ಚಿಟ್ಟೆಯ ಚಲನೆಯ ಚಂಚಲತೆಯನ್ನೂ ಅವುಗಳಲ್ಲಿ ಮನಗಾಣಬಹುದು ಎನ್ನುವ ಸಂವೇದನೆ ಕವಿತೆಯಲ್ಲಿ ಒಂದು ನಾಟ್ಯಾಭಿವ್ಯಕ್ತಿಯೂ ಅಡಗಿರುವುದನ್ನು ಹೇಳುತ್ತಿದೆ. ಮತ್ತೊಂದು ಪ್ರಸಿದ್ಧ ಪದ್ಯ Tiger tiger burning bright / in the forests of the night / what immortal hand or eye / could frame thy fearful symmetry ಸೃಷ್ಟಿಯ ಒಂದು ರುದ್ರಮನೋಹರ ಘಟಕವಾದ ವನ್ಯಜೀವಿಯ ಕುರಿತಾದ ಬೆರಗು, ಭಯ, ಕೌತುಕಗಳನ್ನು ರುದ್ರಮನೋಹರ ಕಾಡಿನ ಹಿನ್ನೆಲೆಯಲ್ಲಿ ಕೆಲವೇ ಸಾಲುಗಳಲ್ಲಿ ಹರಳುಗಟ್ಟಿಸುತ್ತಿದೆ. ಅರ್ಥಾಲಂಕಾರಗಳೇ ಅಲ್ಲದೆ, ಪ್ರತಿಮೆ(image), ಸಂಕೇತ(symbol), ಸಾದೃಶ್ಯ-ವೈದೃಶ್ಯ(similarity-contrast), ಸಂದಿಗ್ಧ(ambivalent), ದ್ವಂದ್ವ(ambiguity), ತುಮುಲ(conflict), ಮೂಲಪ್ರೇರಣೆ-ಆಶಯ(motive), ಇಂತಹ ಸಲಕರಣೆಗಳನ್ನು ಕವಿ ಹೇಗೆ ಮತ್ತು ಯಾಕಾಗಿ ಬಳಸಿಕೊಳ್ಳುತ್ತಿದ್ದಾನೆ, ಹೇಗೆ ಅವುಗಳ ಮೂಲಕವೇ ಕವಿತೆ “ಆಗುವಂತೆ” ಮಾಡಿದ್ದಾನೆ ಎಂದು ಗಮನವಿಡುವುದು ಅದನ್ನು ಒಂದು ಶಿಸ್ತಿಗೆ ಬದ್ಧವಾಗಿ ಹಾಗೂ ಶಾಸ್ತ್ರೀಯವಾಗಿ ಓದುವ ಕ್ರಮ. ಇದರ ಕುರಿತು ಅರಿವಿಲ್ಲದವರು, ವೃತ್ತಿಪರರಲ್ಲದವರು ಮಾತ್ರ ಕಾವ್ಯವನ್ನು ಒಟ್ಟಾರೆ ಅದರ ಸಾರಾಂಶಕ್ಕಾಗಿ ಓದುತ್ತಾರೆ.

* * *

ಕಗ್ಗತ್ತಲ ಕೂಪವಾದ ಅರಣ್ಯರಾತ್ರಿಯಲ್ಲಿ ಜ್ವಲಿಸುವ ಕಣ್ಣುಗಳ ಹುಲಿಯ ಇರುವಿಕೆ ತಂತಾನೇ ಜಾಜ್ವಲ್ಯಮಾನವಾಗಿದೆ ಎಂದು ಬ್ಲೇಕ್ ಕವಿ ಪರಿಭಾವಿಸಿದರೆ ಅದು ಅವನ ಭಾವಿಸುವಿಕೆಯ ಶಕ್ತಿ. ಆತನಕ ಇನ್ಯಾರಿಗೂ ದಕ್ಕದೇಹೋಗಿದ್ದ ಅಭಿವ್ಯಕ್ತಿ. ಇದೀಗ ಸಹಸ್ರ ಓದುಗರ ಭಾವಕೋಶದಲ್ಲಿ ಸೇರಿಹೋಗಿರುವ ಚಿತ್ರ ಅಥವಾ ಪ್ರತಿಮೆ. ಹೀಗೆ ಭಾವನಾತ್ಮಕ ತೀವ್ರತೆ ಹಾಗೂ ಸಮರ್ಪಕವಾಗಿ ಅದರ ನುಡಿಸಂವಹನ ಕವಿಯ ಮೂಲ ಶಕ್ತಿ. ಅದು ಎಷ್ಟು ಸಾಚಾ / ಖೋಟಾ ಆಗಿದೆ, ಎಷ್ಟು ಸವೆದುಹೋಗಿದೆ / ಹೊಸದಾಗಿದೆ, ಸಹಜ / ಕೃತ್ರಿಮವಾಗಿದೆ ಎನ್ನುವುದಕ್ಕೆ ಓದುಗನೇ ಪ್ರಮಾಣ. ಮರಕ್ಕೆ ಎಲೆಗಳು ಮೂಡುವಷ್ಟು ಸುರಳೀತವಾಗಿ ಕವಿತೆ ಮೈದಳೆಯಬೇಕು ಎಂದು ಅಭಿಪ್ರಾಯಪಟ್ಟ  ಕವಿ ಕೀಟ್ಸ್‌ನನ್ನು ಬೆಂಬಲಿಸುವಂತೆ “ಹಸುರು ನೆಲದಿಂದ ಉಕ್ಕಿ ನೆಗೆಯುವ ಬುಗ್ಗೆಯಂತೆ ನಿರಂತರವಾಗಿ, ನಿರಾಯಾಸವಾಗಿ, ಚಿಮ್ಮಿ ಹೊಮ್ಮುವ ಭಾವನಾತ್ಮಕವಾದ ಲಲಿತ ಪದಗಳ ಮನೋಹರವಾದ, ಇಂಪಾದ ವಸಂತ ನೃತ್ಯವೇ, ಸುಗ್ಗಿಯ ಕುಣಿತವೇ ನಿಜವಾದ ಕವಿತೆ” ಎನ್ನುತ್ತಾರೆ ಕುವೆಂಪು. ಈ ಪ್ರಕ್ರಿಯೆಗೆ ಒಂದಿಷ್ಟು ಹಿನ್ನೋಟ- ಭಾವನೆಗಳ ಮರು ಸೆರೆಹಿಡಿಯುವಿಕೆ- ಮತ್ತವುಗಳ ಪ್ರೆಸೆಂಟೇಷನ್ ವಿನ್ಯಾಸವೂ ಇರುತ್ತದೆಂಬ ಚಿಂತನೆ ಮತ್ತೊಬ್ಬ ಮೇರು ಕವಿ ವಿಲಿಯಮ್ ವಡ್ಸ್‌ವರ್ತ್‌ದು:

ಬೆಟ್ಟಗುಡ್ಡಗಳಲ್ಲಿ ಒಂಟಿ ಮೋಡದಂತೆ ಅಲೆಯುತ್ತಾ ಇದ್ದಕ್ಕಿದ್ದಂತೆ ಕೊನೆಯಿಲ್ಲದೆ ಅರಳಿನಿಂತ ಡ್ಯಾಫೆಡಿಲ್ ಪುಷ್ಟಗಳ ಸಮೂಹ ಕಂಡೆ. ಸರೋವರದ ಪಕ್ಕ, ಮರಗಳ ಕೆಳಗೆ ತಂಗಾಳಿಯಲ್ಲಿ ನರ್ತಿಸುತ್ತಾ ಇದ್ದ ಹೊಂಬಣ್ಣದ ಹೂಗಳನ್ನು ಸ್ತಂಭೀಭೂತನಾಗಿ ನೋಡಿಯೇ ನೋಡಿದೆ. ಆಗ ಈ ನನ್ನ ಸಂವೇದನೆ ಒಂದು ಕವಿತೆಯಾಗಿ ಅರಳುತ್ತದೆಯೇ ಎಂಬ ಕುರಿತು ನನಗ್ಯಾವ ಹೊಳಹುಗಳೂ ಇದ್ದಿಲ್ಲ; ಆದರೆ ನೀರವ ರಾತ್ರಿಯಲ್ಲಿ ಯೋಚನಾಮಗ್ನನಾಗಿ ಹಾಸಿಗೆಯಲ್ಲಿ ಮೈಚೆಲ್ಲಿದ್ದ ವೇಳೆ ನನ್ನ ಮನದ ಕಣ್ಣುಗಳ ಮುಂದೆ ಅವು ಹೊಳೆದು ಅಮಿತಾನಂದ ತಂದವು. ಹೀಗೆ “ಸಂವೇದನೆ” ಒಂದು “ಕವಿತೆ”ಯಾಗಿ ಮಾರ್ಪಟ್ಟಿದ್ದು ಒಂದು ನಿರಾಳ ಮನಸ್ಥಿತಿಯಲ್ಲಿ ಅದನ್ನು ಮರು ಅನುಭವಿಸಿದಾಗ     ಎನ್ನುತ್ತಾ ಅವನು ನೀಡುವ ವ್ಯಾಖ್ಯೆ ಇದು: poetry is spontaneous overflow of powerful feelings recollected in tranquility.

ಆದರೆ ಕವಿತೆ ಯಾವಾಗಲೂ “ಲಲಿತ ಪದಗಳ ಮನೋಹರವಾದ, ಇಂಪಾದ” ರಚನೆಯೇ ಆಗಿರಬೇಕೆಂದಿಲ್ಲ. ರಾಮಾನುಜಮ್ ಬಳಸಿದಂತೆ ತೀರಾ ಸಾಧಾರಣ, ದಿನಬಳಕೆಯ ಪದಗಳನ್ನೂ  ಬಳಸಿಯೂ ಭಾವಾಭಿವ್ಯಕ್ತಿಯನ್ನು ಸಾಧಿಸಬಹುದು. ಅದುವೇ ಕವಿಯ ನಿಜವಾದ ಹೆಗ್ಗಳಿಕೆ ಎಂತಲೂ ಅವರು ನಂಬಿದ್ದರು. ತುಂಬ ಭಾವನಾತ್ಮಕವಾದ ಜೀವನ ಸಂದರ್ಭದಲ್ಲಿ ತಾಯಿಯೊಬ್ಬಳು ಆಡಿದ ಮಾಮೂಲಿ ಮಾತು, ಭಾರತಾಂಬೆ ಅಥವಾ ಮತ್ಯಾರೋ ದೇವತೆಯ “ಉಕ್ತಿ”- ಎರಡೂ ಶಕ್ತಿಯುತ ಸಂದರ್ಭ, ತುಂಬಿಬಂದ ಭಾವನೆಗಳ ಹಿನ್ನೆಲೆಯಿಂದ ಒಂದೇ ರೀತಿಯ ಪರಿಣಾಮ ಬೀರುವಂತೆ. ಅಲ್ಲದೆ, ಮನೋಹರವಾದ ಪದಗಳು, ಸುಕೋಮಲ ಭಾವನೆಗಳ ಸುಂದರ ಅಭಿವ್ಯಕ್ತಿ ಹೆಚ್ಚು ಹೆಚ್ಚು ಕವಿಗಳು ಬಳಸಿದ ಹಾಗೆಲ್ಲ ಸವಕಲಾಗಿ, ನಿರೀಕ್ಷಿತ ಪರಿಣಾಮ ಬೀರುವ ಕಾರಣ ಓದುಗರಿಗೆ ಹೊಸದೆನಿಸದೆ ಹೋಗಬಹುದು. ಈ ಸಂದರ್ಭದಲ್ಲಿ ತಾಜಾ ಪ್ರತಿಮೆ, ಸಂಕೇತ, ಅಭಿವ್ಯಕ್ತಿ ಕ್ರಮ ಬಳಸಿ ತನ್ನ ಸಂವೇದನೆಯನ್ನು ದಾಖಲಿಸುವ ಸವಾಲು ಅದೇ ತಾನೇ ರಂಗಕ್ಕೆ ಬಂದ ಕವಿಗೆ ಎದುರಾಗುತ್ತದೆ. ಉದಾಹರಣೆಗೆ, ಸೂರ್ಯೋದಯವನ್ನು ಮೇಲೆ ಕಾಣಿಸಿದ ಪದ್ಯದಲ್ಲಿ ಒಂದು ಬಗೆಯಲ್ಲಿ ವರ್ಣಿಸಿದ್ದನ್ನು ಓದಿದ್ದೇವೆ. ಅದನ್ನೇ, “ದೇವನು ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದಾಎಂದು ಬೇಂದ್ರೆ ಬರೆದರು. “ಹೊನ್ನಗಿಂಡಿಯ ಹಿಡಿದು ಕೈಯೊಳು ಮೇಘವಾರಿಯ ಚಿಮುಕಿಸಿ / ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ಮೂಡುವೆಣ್ಣು ದಿಗಂತದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂದು ಪುಟ್ಟಪ್ಪ ಕಲ್ಪಿಸಿಕೊಂಡರು. ಇವರಿಬ್ಬರಿಗಿಂತ ಕಿರಿಯರಾದ ಶ್ರೀಕೃಷ್ಣ ಆಲನಹಳ್ಳಿ ಮತ್ತದೇ ಬೆಳಗನ್ನು ಕುರಿತು ಕವಿತೆ ರಚಿಸಬೇಕಾದಾಗ ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ / ಸೂರ್ಯ: ಜಿಬರೆಗಣ್ಣೊರಸುತ್ತಾಕಳಿಸಿ / ಕೊಬ್ಬಿದಾಡು, ಕುರಿ, ಕೋಳಿ ಸಿಗಿದು ಸೀಳಿ / ಕಂದು, ನೀಲಿ, ಬಿಳಿ, ಕೆಂಪು, ಖಂಡಗಳ ತೂಗಿಟ್ಟು / ಬಣ್ಣಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ / ನನ್ನೂರಿನಲ್ಲಿ ಬೆಳಗಾಯಿತು ಎಂದು ಬರೆಯಬೇಕಾಯಿತು! “ಕಿವಿಯಿಂದ ಮನಸ್ಸನ್ನು ಪ್ರವೇಶಿಸುವುದಾದರೆ, ಕೊಂಕಿನಿಂದ ಕೂಡಿದ, ವಕ್ರೋಕ್ತಿಯಿಂದ ಕೂಡಿದ ಹೊಸ ನುಡಿಯೆ ಕಿವಿಯನ್ನು ಪ್ರವೇಶಿಸುತ್ತದೆ; ಉಳಿದುದು ಅವರಚನೆ” ಎಂದಿದ್ದಾನೆ, ಆದಿಕವಿ ಪಂಪ. ಅಂದರೆ ಎದ್ದುಕಾಣುವ ಭಿನ್ನತೆ ಕವಿಯ ಅಭಿವ್ಯಕ್ತಿಯಲ್ಲಿ ಹೀಗೆ ಹೊಸ ಬಗೆಯ ಸಂವೇದನೆ-ಭಾಷೆ” (ಡೀವಿಯೇಟೆಡ್ ಲ್ಯಾಂಗ್ವೇಜ್)ಯಲ್ಲಿ ಮೂಡಿದಾಗ ಓದುಗರಲ್ಲಿ ಸಂಚಲನ ಮೂಡಿಸುತ್ತದೆ.

ಕೇವಲ ಸಂತಸದ, ಸುಂದರ ದೃಶ್ಯಗಳ, ಒಲವು-ಚೆಲುವು-ಗೆಲವುಗಳ ಸವಿನುಡಿಯೆ ಕವಿತೆಯಲ್ಲ ಎಂದೂ ಇದೇ ಸಮಯದಲ್ಲಿ ಸ್ಪಷ್ಟಪಡಿಸಿಕೊಳ್ಳಬಹುದು. ತೀವ್ರ ವ್ಯಗ್ರತೆ, ವಿಷಾದ, ಕರುಳು ಹಿಂಡುವ ದುಃಖ…ಕವಿತೆಯಾಗಿ ಹೊಮ್ಮಿದಾಗ ಅವೂ “ಚಂದದ” ರಚನೆಗಳೇ ಆಗಿರುತ್ತವೆ ಎನ್ನುವುದನ್ನು ಮರೆಯಬಾರದು. ಉದಾಹರಣೆಗೆ ಪ್ರಸ್ತುತ ಸನ್ನಿವೇಶಕ್ಕೆ ಕನ್ನಡಿ ಹಿಡಿದ, ಬೇಂದ್ರೆ “ಅದೆಂದೋ” ಬರೆದ “ಅನ್ನಯಜ್ಞ” ಕವಿತೆಯ ಈ ಸಾಲುಗಳು: ಕೂಸುಗಳಿಗೆ ಹಾಲು ಇಲ್ಲ, ಪಶುಬಲಿಯೇ ನಡೆದಿದೆ / ಕಾಳು ಇದೆ ಕೂಳು ಇಲ್ಲ, ಹಣದ ಹುಚ್ಚು ಹಿಡಿದಿದೆ / ಕತ್ತಲಲ್ಲಿ ಬೆಳಕೇ ಇಲ್ಲ, ಜಗಕೆ ಬೆಂಕಿ ಹತ್ತಿದೆ / ಎಲ್ಲ ಇದೆ ಎಲ್ಲ ಇಲ್ಲ, ಇಲ್ಲೆ ಸುತ್ತುಮುತ್ತಿದೆ. ಗಂಗಾಧರ ಚಿತ್ತಾಲರು ತಮ್ಮ ತಂದೆ ಆತ್ಮಹತ್ಯೆಯ  ಮಾಡಿಕೊಂಡ ಸಂದರ್ಭದಲ್ಲಿ ಬರೆದ “ದುಃಖಗೀತೆ”ಯ ಕೆಲ ಸಾಲುಗಳು: ದಿಕ್ಕು ದಿಕ್ಕುಗಳ ಕದ ಬಡಿದು ಚೀರಿದರೂ / ಬಾನತಳ ಚಿಪ್ಪೊಡೆದು ಬಿರಿವಂತೆ ಒರಲಿದರೂ / ನಿರುತ್ತರ ನಿರುತ್ತರ ಸೃಷ್ಟ್ಟಿ!” ಸುಖ-ದುಃಖ, ನೋವು-ನಲಿವು, ಮೆಚ್ಚುಗೆ-ನಿಂದನೆ…ಹೀಗೆ ಶುದ್ಧ ಭಾವಗಳಲ್ಲೇ ಕವಿತೆ ಮೈದಳೆಯಬೇಕೆಂದೂ ಇಲ್ಲ. ಸಂಕೀರ್ಣವಾದ, ಬಿಡಿಸಿ ನೋಡುವುದು ಕಷ್ಟಕರ ಎಂದನ್ನಿಸುವ, ಮಿಶ್ರಭಾವಗಳ ಒಳತೋಟಿಯನ್ನು ಭಾಷೆಯಲ್ಲಿ ಭಟ್ಟಿ ಇಳಿಸುವುದೂ ಕವಿಯ ಕೆಲಸ. ತಾಯಿಯ ಮಮತೆಯಲ್ಲಿ ಬಾಲ್ಯಾವಸ್ಥೆಯಲ್ಲಿ ಮಿಂದೆದ್ದು, ಇದೀಗ ತಾರುಣ್ಯದಲ್ಲಿ, ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು / ಮಿಡುಕಾಡುತಿರುವೆ ನಾನು ಎಂದು ಚಡಪಡಿಸುತ್ತಾ, ಆಕೆಯ ಗಮನ ಬೇಡುವಿಕೆ, ಮಗನಿಂದ ಅತಿ ನಿರೀಕ್ಷೆ, ಇವುಗಳನ್ನು ತಾನು ಹೇಗೆ ನಿಭಾಯಿಸಬೇಕು ಎಂದು ಕವಿ ಪರೀಕ್ಷಿಸಿಕೊಳ್ಳುವ ಹಾಗೆ. ಬನದ ಕರಡಿಯ ಹಾಗೆ / ಚಿಕ್ಕ ಮಕ್ಕಳ ಹೊತ್ತು / ಗಂಡನ್ನ ಸಾಕಿದಳು, ಕಾಸು ಗಂಟಿಕ್ಕಿದಳು / ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು; / ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ / ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ…”ಎಂದು ಗತಿಸಿದ ತಾಯಿಯ ಒಳ್ಳೆಗುಣ-ಸಣ್ಣತನ ಎಲ್ಲ ಒಳಗೊಂಡ ವ್ಯಕ್ತಿತ್ವವನ್ನು ಮಮತೆಯಿಂದ ಚಿತ್ರಿಸಿದ ಹಾಗೆ.

ಕವಿತೆ ಎಂದರೆ ಏನು ಎನ್ನುವ ಪ್ರಶ್ನೆಗೆ ಒಂದು ಸ್ಥೂಲ-ಸರಿಸುಮಾರಾದ ಉತ್ತರ ಈ ಎಲ್ಲ “ವಿವರಿಸುವಿಕೆ”ಯಿಂದ ನಿಮ್ಮಲ್ಲಿ ಮೂಡಿರಬಹುದು. ಮುಂದಿನ ಭಾಗದಲ್ಲಿ ಕಾವ್ಯದ ಅಸಂಖ್ಯ ಬಗೆಗಳು, ಕವಿತೆ ಹುಟ್ಟುವ ರೀತಿ, ಶ್ರೇಷ್ಠ / ಕನಿಷ್ಠ ರಚನೆಗಳನ್ನು ಹೇಗೆ ಪತ್ತೆ ಹಚ್ಚಬಹುದು…ಇವುಗಳ ಬಗ್ಗೆ ಗಮನ ಹರಿಸೋಣ.