ದೈತ್ಯ ವರ್ಣತಂತುಗಳು (Giant chromosomes), ವಿಶೇಷ ರೀತಿಯ ದೊಡ್ಡ ವರ್ಣತಂತುಗಳಾಗಿವೆ. ಈ ದೈತ್ಯ ವರ್ಣತಂತುಗಳನ್ನು ಕತ್ತರಿಸಿ ಗಾಜಿನ ಸ್ಲೈಡ್ ಮೇಲಿಟ್ಟು ವೀಕ್ಷಣೆ ಮಾಡಬಹುದು! ಇವುಗಳಲ್ಲಿ ಎರಡು ರೀತಿಯ  ವರ್ಣತಂತುಗಳಿವೆ : (1)    ಪಾಲಿಟೀನ್ ವರ್ಣತಂತುಗಳು (Polytene Chromosomes), (2) ಲ್ಯಾಂಪ್‌ಬ್ರಷ್ ವರ್ಣತಂತುಗಳು(Lampbrush Chromosomes). ಈ ದೈತ್ಯ ವರ್ಣತಂತುಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ.

ಪಾಲಿಟೀನ್ ವರ್ಣತಂತುಗಳು: ಈ ವರ್ಣತಂತುಗಳನ್ನು ಲಾಲಾರಸಗ್ರಂಥಿ ವರ್ಣತಂತುಗಳು ಎಂದೂ ಕರೆಯುತ್ತಾರೆ. ಈ ದೈತ್ಯ ವರ್ಣತಂತುಗಳು ಬಹಳಷ್ಟು ಕೀಟಗಳ ಲಾಲಾರಸ ಗ್ರಂಥಿಯ ಜೀವಕೋಶಗಳಲ್ಲಿ ಕಂಡು ಬರುತ್ತವೆ. ಕರುಳು, ಶ್ವಾಸನಾಳ ಮತ್ತು ಮಾಲ್ಫಿಜಿಯನ್ (Malphigian) ನಾಳಗಳಲ್ಲೂ ಇವು ಕಂಡು ಬರುತ್ತವೆ. 1881ರಲ್ಲಿ E.G. ಬಲ್ಬಿನಿ ಎಂಬಾತ ಮೊದಲ ಬಾರಿಗೆ ಈ ವರ್ಣತಂತುಗಳನ್ನು ವರದಿ ಮಾಡಿದ. ಈ ವರ್ಣತಂತುಗಳನ್ನು ಕೊಲ್ಲರ್ (Koller) ಎಂಬಾತ ಪಾಲಿಟೀನ್ ವರ್ಣತಂತುಗಳು ಎಂದು ಹೆಸರಿಸಿದ. ಈ ವರ್ಣತಂತುಗಳಲ್ಲಿ, ಎಲ್ಲ ವರ್ಣತಂತುಗಳ ಕೋಶಕೇಂದ್ರಗಳು ಸೆಂಟ್ರೊಮಿಯರ್‌ನಲ್ಲಿ ಒಂದು ಗೂಡಿ ನಕ್ಷತ್ರಾಕಾರವನ್ನು ಹೊಂದುತ್ತವೆ. ಇದನ್ನೆ ಕ್ರೋಮೋಸೆಂಟರ್ ಎಂದು ಕರೆಯುತ್ತಾರೆ. ಈ ವರ್ಣತಂತುವಿನಲ್ಲಿರುವ ಕ್ರೋಮೊನಿಮ್ಯಾಟಗಳ ಸಂಖ್ಯೆ 512 ರಿಂದ ಕೆಲವು ಸಾವಿರದವರೆಗೆ ಇರುತ್ತದೆ. ಆದ್ದರಿಂದ ಇವುಗಳನ್ನು ಪಾಲಿಟೀನ್ (Poly=ಬಹಳಷ್ಟು, tene=ಎಳೆ, ದಾರದಂತಹ) ಎನ್ನುತ್ತಾರೆ.

ಈ ವರ್ಣತಂತುಗಳಿಗೆ ಬಣ್ಣ ಹಾಕಿ ಅವಲೋಕಿಸಿದರೆ, ಬಹಳಷ್ಟು ಅಡ್ಡವಾದ ದಟ್ಟ ಮತ್ತು ತೆಳುವಾದ ಪಟ್ಟಿಗಳು ಒಂದಾದ ಮೇಲೆ ಒಂದರಂತೆ ಕಂಡು ಬರುತ್ತವೆ.  ದಟ್ಟವಾದ ಈ ಪಟ್ಟಿಗಳನ್ನು ಹೆಟಿರೋಕ್ರೋಮ್ಯಾಟನ್ (Heterochromatin) ಎನ್ನುತ್ತಾರೆ. ತೆಳುವಾದ ಪಟ್ಟಿಗಳನ್ನು ಯೂಕ್ರೊಮ್ಯಾಟಿನ್ (Euchromatin) ಎಂದು ಕರೆಯುತ್ತಾರೆ. ಡ್ರಾಸೋಫಿಲಾದ ಅತಿ ದೊಡ್ಡ ವರ್ಣತಂತು ಸುಮಾರು 2 ಮಿ.ಮೀ. ನಷ್ಟಿರುತ್ತದೆ. ಇದು 5149 ದಟ್ಟವಾದ ಪಟ್ಟಿಗಳನ್ನು ಒಳಗೊಂಡಿರುತ್ತದೆ. ಈ ದಟ್ಟವಾದ ಪಟ್ಟಿಗಳು (Dark bands) ಹೆಚ್ಚು DNA ಅಂಶವನ್ನು ಹೊಂದಿರುವ ಭಾಗವಾಗಿರುತ್ತವೆ. ವಂಶವಾಹಿಗಳಿಗೂ ಮತ್ತು ದಟ್ಟವಾದ ಪಟ್ಟಿಗಳನ್ನೊಳಗೊಂಡ ಭಾಗಕ್ಕೂ ಸಂಬಂಧವಿದೆ ಎಂದು ತಿಳಿಯಲಾಗಿದೆ. ಆದರೆ ಲಾರ್ವಾದ ಬೆಳವಣಿಗೆಯ ಕೆಲವು ಹಂತಗಳಲ್ಲಿ ಈ ಪಟ್ಟಿಗಳು ಉಬ್ಬಿ ದಪ್ಪವಾಗುತ್ತವೆ. ಇವುಗಳನ್ನು ಕ್ರೋಮೋಸೋಮಲ್ ಪಫ್ಸ್ (Chromosomal puffs) ಅಥವಾ (Balbini ring) ಬಲ್ಬಿನಿ ರಿಂಗ್‌ಗಳೆಂದು ಕರೆಯುತ್ತಾರೆ. ಈ ಭಾಗಗಳಲ್ಲಿ ಕ್ರೋಮೋನಿಮ್ಯಾಟವು ಅನೇಕ ಪಾರ್ಶ್ವದ ಕವಲುಗಳನ್ನು ಉಂಟು ಮಾಡುತ್ತದೆ. ಇವು RNA ಸಂಶ್ಲೇಷಣೆಗೆ ಕಾರಣವಾಗಿವೆ.

ಪಾಲಿಟೀನ್ ವರ್ಣತಂತುವಿನ ಉದ್ದಕ್ಕೂ ಒಂದರ ನಂತರ ಒಂದರಂತೆ ಗಾಢವಾದ ಅಥವಾ ದಟ್ಟವಾದ ಪಟ್ಟಿಗಳಿರುತ್ತವೆ. ಇವುಗಳ ಗುಣದ ಆಧಾರದ ಮೇಲೆ ಜೀವಕೋಶ ತಳಿವಿಜ್ಞಾನಿಗಳು ಈ ಪಟ್ಟಿಗಳ ಮಹತ್ವವನ್ನು ತಿಳಿಸಿದ್ದಾರೆ.

ದಟ್ಟವಾದ ಪಟ್ಟಿಗಳು ಪ್ರತ್ಯಾಮ್ಲೀಯ ವರ್ಣತಂತುಗಳ ಬಣ್ಣಗಳನ್ನು ಗಾಢವಾಗಿ ಹೀರಿಕೊಳ್ಳುತ್ತವೆ. ಇವು ತಟ್ಟೆ ಆಕಾರವನ್ನು ಹೊಂದಿರುತ್ತವೆ ಮತ್ತು ವರ್ಣತಂತುವಿನ ಪೂರ್ತಿ ವ್ಯಾಸವನ್ನು ಮುಖ್ಯವಾಗಿ ಯೂಕ್ರೋಮ್ಯಾಟಿನ್ ರಾಸಾಯನಿಕವಾಗಿ ಹೆಚ್ಚು ಪ್ರಮಾಣದಲ್ಲಿ DNA ಮತ್ತು ಕಡಿಮೆ ಪ್ರಮಾಣದಲ್ಲಿ RNA, ಅಲ್ಲದೆ ಕೆಲವು ಪ್ರತ್ಯಾಮ್ಲೀಯ ಪ್ರೋಒಳಗೊಂಡಿರುವ ಭಾಗವನ್ನು ಆಕ್ರಮಿಸುತ್ತದೆ. ತೆಳುವಾದ  ಒಳಪಟ್ಟಿಗಳು (Inner bands) ವರ್ಣತಂತುಗಳ ಬಣ್ಣವನ್ನು ಕಡಿಮೆ ಹೀರಿಕೊಳ್ಳುತ್ತವೆ.  ಇವು ಎಳೆಯಾಕಾರದಲ್ಲಿರುತ್ತವೆ. ಮತ್ತು ಹೆಟಿರೊಕ್ರೊಮ್ಯಾಟಿನ್‌ನಿಂದ ಮಾಡಲ್ಪಟ್ಟಿರುತ್ತವೆ. ಇದು ಕಡಿಮೆ ಪ್ರಮಾಣದಲ್ಲಿ  DNA, ಹೆಚ್ಚಿನ ಪ್ರಮಾಣದಲ್ಲಿ RNA ಮತ್ತು ಆಮ್ಲೀಯ ಪ್ರೋಟೀನುಗಳನ್ನು ಒಳಗೊಂಡಿರುತ್ತದೆ.