ಇನ್ನೂ ಕಾಣೆನು ಕೃಷ್ಣನ, ನಾ-
ನಿನ್ನೂ ಕಾಣೆನು ಸಖಿಯೇ,
ಅವನಿಲ್ಲದೆ ಬರಿದಾಗಿದೆ ಮನೆಯೇ !

ನನ್ನ ತಲೆನವಿರು ಅವನಾಗಿದ್ದರೆ, ಸಖಿ
ಬಾಚುತಲಿದ್ದೆನು ಮೃದುವಾಗಿ
ಮೆಲ್ಲನೆ ಬಾಚುತ ಬಕುಲದ ಮಾಲೆಯ
ಮುಡಿಸುತಲಿದ್ದೆನು ಚೆಲುವಾಗಿ,
ಆ ಶ್ರೀಕೃಷ್ಣನು ಕೃಷ್ಣಕೇಶದಲಿ
ಬೆರೆಯುತಲಿದ್ದನು ಒಂದಾಗಿ !

ನನ್ನ ಮೂಗಿನಲಿ ನತ್ತಾಗಿದ್ದರೆ, ಸಖಿ
ನನ್ನಧರದ ಮಧು ಚುಂಬನಕೆ
ನಲಿಯುತಲಿದ್ದನು… ಬರಿ ಕನಸಿದು ಸಖಿ,
ಆ ಶ್ರೀ ಕೃಷ್ಣನು ಈ ನಿರ್ಭಾಗ್ಯಳ
ನತ್ತಾಗಿರುವನೆ ಮೂಗಿನಲಿ?

ನನ್ನೀ ತೋಳಿನ ತೊಡವಾಗಿದ್ದರೆ, ಸಖಿ,
ತೋಳನು ತಿರುವುತ ಹೆಮ್ಮೆಯಲಿ,
ರಾಜವೀಧಿಯೊಳು ನಡೆಯುತಲಿದ್ದೆನು
ಝಣಕು ಝಣಕು ಝಣ ನಾದದಲಿ !