ಪ್ರಪಂಚದಲ್ಲಿ ಇತಿಹಾಸ ಪೂರ್ವಕಾಲದ ಮಾನವನು ನೆಲೆಸಿದ್ದ ಸ್ಥಳಗಳಲ್ಲಿ ತಾವು ರಚಿಸಿದ ಚಿತ್ರಗಳನ್ನು ಪಳೆಯುಳಿಕೆಯಾಗಿ ಬಿಟ್ಟು ಹೋಗಿದ್ದಾನೆ. ಈ ಚಿತ್ರಗಳು ರೇಖೆಗಳಿಂದ ಕೂಡಿದ್ದು ಇವು ಅವನು ಕಂಡ ಯಾವುದೋ ಘಟನೆ ಯನ್ನು ನೆನೆಪಿಸುವ ಸನ್ನಿವೇಶವಾಗಿರುತ್ತದೆ. ಅಂತಹ ಸಂದರ್ಭಗಳನ್ನು ಚಿತ್ರಿಸುವಲ್ಲಿ ಬೇಟೆಯ ಸನ್ನಿವೇಶಗಳೇ ಹೆಚ್ಚು. ಅಂದರೆ ಬೇಟೆಯನ್ನು ಕಸಬಾಗಿಟ್ಟುಕೊಂಡ ಜನ ತಮಗೆ ಬೇಟೆ ದೊರೆತಾಗ ಆ ಸಂತೋಷದಲ್ಲಿಯೋ ಅಥವಾ ಬೇಟೆ ದೊರೆತಾಗ ಬಲಿಯಾದ ತಮ್ಮವರ ನೆನಪಿನಲ್ಲಿಯೋ ಇವನ್ನು ರಚಿಸಿರಬೇಕು. ಈ ಬಗೆಯ ಬೇಟೆಯ ಚಿತ್ರಗಳೇ ಅಲ್ಲದೆ ಕುಣಿಯುವ, ಬರೀ ಪ್ರಾಣಿಗಳ, ಅರ್ಥೈಸಲಾಗದ ಅನೇಕ ರೇಖಾಚಿತ್ರಗಳನ್ನು ಇಂತಹ ಗುಹಾಲಯಗಳಲ್ಲಿ ಕಾಣುತ್ತೇವೆ. ಸಾಮಾನ್ಯವಾಗಿ ಅರಗಿನ ಬಣ್ಣದ ರೇಖಾಚಿತ್ರಗಳ ಜೊತೆಗೆ ಅಲ್ಲಲ್ಲಿ ಬಿಳಿಬಣ್ಣದ ಚಿತ್ರಗಳನ್ನು ಕಾಣುತ್ತೇವೆ.

ಈ ರೇಖೆಗಳು ಆರಂಭಕಾಲದ ಮಾನವರ ಬರವಣಿಗೆಯಾಗಿದ್ದು ಅಲೆಮಾರಿಯಾಗಿದ್ದು ಅವರು ತಾವು ಮತ್ತೆ ಆ ಪರಿಸರಕ್ಕೆ ಬಂದಾಗ ತನ್ನವರಿಗೆ ಆ ಚಿತ್ರದ ವಿವರಗಳನ್ನು ತಿಳಿಸುತ್ತಿದ್ದಿರಬೇಕು. ಈ ಚಿತ್ರ ಹಿಂದೆ ನಡೆದ ಘಟನೆಯ ಭಾಷೆಯನ್ನು ಸ್ಪಲ್ಪಮಟ್ಟಿಗೆ ಹಿಡಿದಿರುವ ಪ್ರಯತ್ನ ಮಾಡಿದವು. ಇಂತಹ ಚಿತ್ರಗಳು ಪ್ರಪಂಚದಾದ್ಯಂತ ಇತಿಹಾಸ ಪೂರ್ವಕಾಲದ ನೆಲೆಗಳಲ್ಲೆಲ್ಲಾ ಕಾಣಬರುತ್ತವೆ. ಕೆಲವೊಮ್ಮೆ ಈ ಚಿತ್ರಗಳನ್ನು ಕಲ್ಲಿನಲ್ಲಿ ಕೊರೆದ ರೇಖೆಗಳ ಮೂಲಕ ತೋರಿಸಿರುವುದುವುಂಟು. ಭಾರತದಲ್ಲಿಯೂ ಇಂತಹ ಎರಡೂ ಬಗೆಯ ಚಿತ್ರಗಳು ಆದಿಮಾನವರ ನೆಲೆಗಳಾದ ಬಿಂಬೇಡ್ಕಾ, ಹಿರೇಬೆಣಕಲ್ ಗುಡ್ಡ, ಕೊಪ್ಪಳ ಮುಂತಾದ ಕಡೆಗಳಲ್ಲಿ ಕಾಣಬರುತ್ತವೆ.

ಮೊದಲೇ ತಿಳಿಸಿರುವಂತೆ ಈ ಚಿತ್ರಗಳನ್ನು ಮಾನವರು ತಾವು ಆ ಸ್ಥಳದಲ್ಲಿ ಕುಳಿತುಕೊಂಡಾಗಲೋ ಅಥವಾ ಯಾವುದಾದರೂ ಸಂದರ್ಭದಲ್ಲಿ ತಾವು ತಮ್ಮ ಈ ಚಿತ್ರಗಳ ಬಗ್ಗೆ ಹಿರಿಯರಿಂದ ಕೇಳಿದ್ದ ಸಂಗತಿಗಳನ್ನು ವಿವರಿಸುತ್ತಿ ದ್ದರು. ಈ ವಿವರಣೆ ತಲೆಮಾರಿನಿಂದ ತಲೆಮಾರಿಗೆ ಭಿನ್ನವಾಗಿದ್ದಿರಬಹು ದಾದರೂ ಮೂಲ ಅಂಶ ಅಂದರೆ ಚಿತ್ರಗಳಲ್ಲಿನ ವ್ಯಕ್ತಿಗಳ ಹೆಸರು ಮುಂತಾದವು ಬದಲಾದರೂ ಚಿತ್ರದ ಘಟನೆ ಬದಲಾಗುತ್ತಿರಲಿಲ್ಲ. ಅಂದರೆ ಬೇಟೆಯ ಚಿತ್ರದಲ್ಲಿ ಯಾವ ಪ್ರಾಣಿಯನ್ನು ಸಾಯಿಸಿದ್ದು ಬರೆದ ಚಿತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥೈಸುವ ಪದ್ಧತಿ ಆಗಿನಿಂದಲೇ ಇದ್ದು ಬರವಣಿಗೆಯಲ್ಲಿ ಭಾಷೆಯನ್ನು ಹಿಡಿದಿಡುವ ಮೊದಲ ಪ್ರಯತ್ನವಿದು.

ಆದಿಕಾಲದ ಮಾನವ ಬೇಟೆಯ ಅಲೆಮಾರಿ ಜೀವನವನ್ನು ಬಿಟ್ಟು ವ್ಯವಸಾಯ ಹಾಗೂ ಪಶುಪಾಲನೆಯಲ್ಲಿ ತೊಡಗಿ ಒಂದೆಡೆ ನೆಲೆನಿಂತ. ಹೀಗೆ ಅವನು ನೆಲೆ ನಿಲ್ಲಲು ಆಯ್ದುಕೊಂಡ ಸ್ಥಳಗಳು ನದೀ ತೀರಗಳಾಗಿದ್ದವು. ಹರಿಯುವ ನದಿ, ಸಹಜವಾಗಿ ಬೆಳೆದಿರುವ ಮರಗಳಲ್ಲಿನ ಹಣ್ಣುಹಂಪಲು, ಪಶುಪಾಲನೆ ಅವರ ಜೀವನಕ್ಕೆ ಗಟ್ಟಿ ನೆಲೆಯನ್ನೊದಗಿಸಿತು. ವರ್ಷದ ಪೂರ್ಣಾವಧಿಯ ಅನಿಶ್ಚಿತ ದುಡಿಮೆ ಕೊನೆಗೊಂಡು ನೆಮ್ಮದಿಯ ಜೀವನ ನಡೆಸತೊಡಗಿದ್ದನು. ಸಣ್ಣಸಣ್ಣ ಗುಂಪುಗಳು ರಚನೆಗೊಂಡವು. ಇವೇ ಮುಂದೆ ರಾಜ್ಯಗಳಾದವು. ಇಂತಹ ವಾತಾವರಣದಲ್ಲಿ ಮಾನವನು ತನ್ನ ಬಿಡುವಿನ ವೇಳೆಯನ್ನು ಹಾಡು ಕಟ್ಟುವುದರಲ್ಲಿ, ಕುಣಿಯುವುದರಲ್ಲಿ ಕಳೆದ. ಹಿಂದಿನ ಗುಹಾಚಿತ್ರಗಳಲ್ಲಿ ರಚನೆ ಇನ್ನೂ ವಿಸ್ತೃತಗೊಂಡು ಹೆಚ್ಚು ಹೆಚ್ಚು ವಿವರ ಗಳೊಂದಿಗೆ ಮೂಡಿದವು. ಘಟನೆಗಳನ್ನು ಬೇರೆಯವರಿಗೆ ತಿಳಿಸಲು ಆ ಮಾನವರಿಗೆ ಚಿತ್ರಗಳನ್ನು ಬಿಟ್ಟರೆ ಬೇರೆ ಮಾಧ್ಯಮವಿರಲಿಲ್ಲ.

ನೆಲೆ ನಿಂತ ಮಾನವನ ನಾಗರೀಕತೆಯ ಕುರುಹುಗಳು ಪ್ರಪಂಚದಲ್ಲಿ ಮುಖ್ಯವಾಗಿ ನಾಲ್ಕು ಸ್ಥಳಗಳಲ್ಲಿ ಕಂಡುಬಂದಿದೆ. 1. ಈಜಿಪ್ತಿನ ನೈಲ್ ನದೀ ತೀರ 2. ಇರಾಕಿನ ಯೂಫ್ರೆಟಿಸ್ ಮತ್ತು ಟೈಗ್ರಿಸ್ ನದೀ ಬಯಲು 3. ಸಿಂಧೂ ನದೀ ಬಯಲು ಮತ್ತು 4. ಚೀನಾ ದೇಶದ ಯಾಂಗ್‌ಟಿ ಸಿಕಿಯಾಂಗ್ ಮತ್ತು ಹೊಯಾಂಗ್ ಹೋ ನದಿ ಬಯಲು.

ಈ ನದೀ ಬಯಲಿನ ನಾಗರಿಕತೆಗಳು ಒಂದು ಮತ್ತೊಂದಕ್ಕೆ ಪರಿಚಿತ ವಲ್ಲದಿದ್ದರೂ ಬರವಣಿಗೆಯನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸಿಕೊಂಡಿವೆ. ಈ ನಾಗರಿಕತೆಗಳಲ್ಲಿ ಕಂಡು ಬರುವ ಮೊದಲ ಬರವಣಿಗೆಯೆಂದರೆ ಚಿತ್ರಲಿಪಿಗಳು. ಮಾನವರಲ್ಲಿ ಆದ ವಿಕಾಸದ ಕುರುಹುಗಳು ಇವು. ಈ ಹೊತ್ತಿಗೆ ಭಾಷೆಯು ಗುಂಪು ಗುಂಪುಗಳ ಮಧ್ಯೆ ಬೆಳೆದಿದ್ದು ಅದನ್ನು ಹಿಡಿದಿಡುವ ಪ್ರಯತ್ನವನ್ನು ಹಿಂದಿನಿಂದಲೂ ಕಲ್ಲಾಸರೆಗಳಲ್ಲಿ ಚಿತ್ರಗಳನ್ನು ಬರೆಯುತ್ತಲೇ ಬಂದಿದ್ದರು. ಈಗ ನೆಲೆನಿಂತ ಮೇಲೆ ಇವನ್ನು ಇನ್ನೂ ಪರಿಷ್ಕರಿಸಿದ. ಇವೇ ಮುಂದೆ ಚಿತ್ರಲಿಪಿಗಳೆನಿಸಿಕೊಂಡವು.

ಈಜಿಪ್ತಿನ ಚಿತ್ರಲಿಪಿ

ಈಜಿಪ್ತಿನ ಚಿತ್ರಲಿಪಿಯು ಚಿತ್ರಗಳ ರೂಪದಲ್ಲಿದ್ದು ಇದನ್ನು ಚಿತ್ರಗಳೆಂದಾ ಗಲೀ, ಚಿತ್ರಗಳ ಪ್ರತೀಕವೆಂದಾಗಲೀ, ಅಥವಾ ಆ ಚಿತ್ರಗಳು ನೀಡುವ ಶಬ್ದಗಳ ಪ್ರತೀಕವೆಂದು ಓದಬಹುದು. ಇದು ಚಿತ್ರಗಳ ರೂಪದಲ್ಲಿದ್ದುದರಿಂದಲೂ, ದೇವಾಲಯಗಳ ಅಥವಾ ಸಾರ್ವಜನಿಕ ಕಟ್ಟಡಗಳಲ್ಲಿ ಬರೆದಿದ್ದುದರಿಂದಲೂ ಗ್ರೀಕರು ತಮ್ಮ ಭಾಷೆಯಲ್ಲಿ ‘ಹಿರಾಗ್ಲಿಫ್’ ಎಂದು ಕರೆದರು. ಹಿರಾಗ್ಲಿಫ್ ಎಂದರೆ ‘ಪವಿತ್ರ ಕೆತ್ತನೆ’ ಎಂದರ್ಥ. ಈಜಿಪ್ತಿನಲ್ಲಿ ಇದೇ ಲಿಪಿಯಲ್ಲದೆ ಬಳಕೆಯಲ್ಲಿದ್ದ ಇನ್ನೆರಡು ಲಿಪಿಗಳು ಕಾಣಬರುತ್ತವೆ. ಅವು ಹಿರಿಟಿಕ್ ಮತ್ತು ಡೊಮೆಟಿಕ್. ಎರಡೂ ಲಿಪಿಗಳು ಚಿತ್ರಲಿಪಿಗಳೇ ಆಗಿದ್ದರೂ ಬೇರೆಬೇರೆ ಉದ್ದೇಶಕ್ಕಾಗಿ ಬೇರೆಬೇರೆ ಯವರು ಬಳಸುವ ಲಿಪಿಗಳಾಗಿದ್ದವು. ಚಿತ್ರಲಿಪಿ ಯಲ್ಲಿ (ಹಿರಾಗ್ಲಿಪಿಕ್) ಚಿತ್ರವನ್ನೇ ಬಿಡಿಸಿದ್ದರೆ ಹಿರಾಟಿಕ್ ಲಿಪಿಯಲ್ಲಿ ಚಿತ್ರಲಿಪಿಯನ್ನೇ ಸ್ವಲ್ಪ ಕೂಡಿಸಿ ಬರೆಯುತ್ತಿದ್ದರು. ಇದಕ್ಕೆ ಕಾರಣ ಚಿತ್ರ ಲಿಪಿಯನ್ನು ದೈನಂದಿನ ಬಳಕೆಯಲ್ಲಿ ಬಳಸುವುದು ಕಷ್ಟವಾಗಿತ್ತು. ಹೀಗಾಗಿ ನಯವಾದ ವಸ್ತುಗಳ ಮೇಲೆ ಕುಂಚದಿಂದ ಚಿತ್ರಗಳನ್ನು ಸಂಕುಚಿತಗೊಳಿಸಿ ಬರೆಯುತ್ತಿದ್ದರು. ಡೊಮೆಟಿಕ್ ಲಿಪಿಯಲ್ಲಿ ಮೂಲ ಚಿತ್ರಲಿಪಿಯ ಯದ್ವತ್ ಚಿತ್ರ ಬಿಡಿಸದೆ ಬಾಗಿದ ರೇಖೆಗಳಲ್ಲಿ ಅದರ ಆಕಾರವನ್ನು ಬಿಡಿಸುತ್ತಿದ್ದರು ಈ ಲಿಪಿಗಳಿಗೆ ಇಂದಿನ ಲಿಪಿಗಳ ಹೋಲಿಕೆ ಕೊಡುವುದಾದರೆ ಹಿರಾಟಿಕ್ ಲಿಪಿ ಚೆನ್ನಾದ ಕೈಬರಹದ ಲಿಪಿಯಂತಿದ್ದರೆ ಡೊಮೆಟಿಕ್ ಮೋಡಿ ಲಿಪಿಯಂತಿರುತ್ತಿತ್ತು. ಈ ಲಿಪಿಗಳ ಆಕಾರವನ್ನು ಕಂಡು ಗ್ರೀಕರು ಬೇರೆ ಬೇರೆ ಲಿಪಿಗಳೆಂದೇ ಭಾವಿಸಿದ್ದರು. ಈ ಲಿಪಿಗಳ ಚಿತ್ರಲಿಪಿಗಳನ್ನು ರಾಜನ ಅಧಿಕಾರಿಗಳ ಸಮಾಧಿ ಅಥವಾ ಅರಮನೆಗಳಲ್ಲೂ ದೇವಾಲಯಗಳಲ್ಲೂ ನುರಿತ ಚಿತ್ರಕಾರ ಬಿಡಿಸಿದ್ದರೆ ಹಿರಾಟಿಕ್ ಲಿಪಿಯನ್ನು ರಾಜನ, ಅಧಿಕಾರಿಗಳ ಅಥವಾ ಪವಿತ್ರಗ್ರಂಥಗಳ ಬರವಣಿಗೆಯಲ್ಲಿ ಬಳಸಿರುತ್ತಾರೆ. ಡೊಮೆಟಿಕ್ ಲಿಪಿಯು ಅದರ ಹೆಸರೇ ಹೇಳುವಂತೆ ಆಡಳಿತದ ಕಾಗದ ಪತ್ರಗಳಲ್ಲಿ ಸಾಮಾನ್ಯ ಜನರು ಬಳಸುವಂತಹ ದಾಗಿತ್ತು. ಆದರೆ ಈ ಮೂರು ಬಗೆಯ ಲಿಪಿಗಳನ್ನು ಅರ್ಥೈಸಲು ಶ್ರಮದಿಂದ ಕಲಿಯಬೇಕಾಗಿತ್ತು. ಈ ಚಿತ್ರಲಿಪಿಯನ್ನು ರಾಜ ಹಾಗೂ ಅವನ ಪರಿವಾರದವರು ವೈದ್ಯರು, ಪುರೋಹಿತರು ಮತ್ತು ಅವರ ಶಿಷ್ಯರು ಓದಬಲ್ಲವರಾಗಿದ್ದರು. ಗ್ರೀಕ್ ಮತ್ತು ರೋಮನರ ಕಾಲದಲ್ಲಿಯೂ ಈ ಲಿಪಿ ದೇವಾಲಯಗಳಿಗೆ ಮಾತ್ರ ಸೀಮಿತವಾಗಿತ್ತು.

ಈಜಿಪ್ತಿನ ಚಿತ್ರಲಿಪಿಯು ಪ್ರಾರಂಭಿಕ ಹಂತದಲ್ಲಿ ಕೇವಲ ಹೆಸರುಗಳನ್ನೊಳ ಗೊಂಡಿತ್ತು ಮುಂದಿನ ಕಾಲದಲ್ಲಿ ಹೆಸರಿನ ಜೊತೆಗೆ ಬಿರುದುಗಳೂ ಮೂರನೆಯ ಹಂತದಲ್ಲಿ ವಾಕ್ಯಗಳೂ ಕಾಣಬರುತ್ತವೆ. ಚಿತ್ರಲಿಪಿ ಕಲಾತ್ಮಕವೂ ಆಗಿದ್ದು ಕಾಲಕಳೆದಂತೆ ಆಂಶಿಕ ಬದಲಾವಣೆಗಳು ಚಿತ್ರಲಿಪಿಯಲ್ಲಿ ಕಾಣ ಬಂದಿವೆ. ನೈಜಚಿತ್ರಕ್ಕಿಂತ ಸಾಂಕೇತಿಕ (ಪ್ರಾಸ್ಪೆಕ್ಟಿವ್) ರೀತಿಯಲ್ಲಿ ಬಿಡಿಸ ಲಾರಂಭಿಸಿದರು. ಉದಾಹರಣೆಗೆ ತೋಳನ್ನು ತೋರಿಸಲು ಹಸ್ತವನ್ನು, ಬಾಯಿಯನ್ನು ತೋರಿಸಲು ಮುಂಭಾಗದ ರಚನೆಯನ್ನು ತೋರಿಸುತ್ತಿದ್ದರು. ಈ ಬಗೆಯ ಬರವಣಿಗೆಯ ನಿಯಮಗಳು ಚಿತ್ರಲಿಪಿಯ ಬರವಣಿಗೆಯ ಅಂತ್ಯಕಾಲದವರೆಗೆ ಇದ್ದವು.

ಕ್ರೈಸ್ತ ಧರ್ಮದ ಉದಯದೊಡನೆ ಗ್ರೀಕರು ಹಾಗೂ ರೋಮನರು ಗ್ರೀಕ್ ಲಿಪಿಯನ್ನು ಬಳಸಲಾರಂಭಿಸಿದರು. ಈಜಿಪ್ತಿನ ಕ್ರಿಶ್ಚಿಯನ್ನರೂ ತಮ್ಮ ಭಾಷೆಗೆ ಗ್ರೀಕ್ ಲಿಪಿಯನ್ನೇ ಬಳಸಲಾರಂಭಿಸಿದರು. ಇಲ್ಲಿಂದ ಮುಂದೆ ಈಜಿಪ್ತಿನ ಚಿತ್ರಲಿಪಿಯ ಬಳಕೆ ಕಣ್ಮರೆಯಾಗತೊಡಗಿತು.

ಈಜಿಪ್ತಿನಲ್ಲಿ ಚಿತ್ರಲಿಪಿಯನ್ನು ಶಿಲೆಗಳ ಮೇಲೆ, ಗೋಡೆಗಳ ಮೇಲೆ, ಮರದ ಮೇಲೆ, ಲೋಹದಲ್ಲಿ ಎರಕದ ಹೊಯ್ದು ಮೇಲೆ ಕೆತ್ತಿರುತ್ತಾರೆ. ಇಲ್ಲವೇ ಬಣ್ಣದಲ್ಲಿ ಬರೆದಿರುತ್ತಾರೆ. ಸಾಮಾನ್ಯವಾಗಿ ಶಿಲೆಯ ಮೇಲೆ ಬರೆದಿರುವ ಅಕ್ಷರಗಳು ಉಬ್ಬುಕೆತ್ತನೆಗಳಾಗಿವೆ. ಇವೇ ಅಲ್ಲದೆ ಶವಪೆಟ್ಟಿಗೆಗಳ ಮೇಲೆ, ಪಾತ್ರೆಗಳ ಮೇಲೆಯೂ ಈ ಬರವಣಿಗೆ ಇದೆ.

ಚಿತ್ರಲಿಪಿಯನ್ನು ಎರಡು ರೀತಿಯಲ್ಲಿ ಬರೆಯಲಾಗಿದೆ.

1. ಚಿತ್ರವನ್ನು ಭಾವಲಿಪಿಯಾಗಿ ತೋರಿಸುವುದು.

2. ಕಾಣುವ ಚಿತ್ರಗಳನ್ನು ಆ ಚಿತ್ರಗಳ ಭಾಷಾಧ್ವನಿಯಾಗಿ ತೋರಿಸುವುದು. ಒಂದೇ ಚಿತ್ರವನ್ನು ಚಿತ್ರಲಿಪಿ ಭಾಷೆಯಾಗಿಯೂ, ಅದೇ ಸಮಯದಲ್ಲಿ ಅದೇ ತರಹದ ಇತರೆ ಶಬ್ದಗಳ ಉಚ್ಚಾರಕ್ಕೂ ಬಳಸಿರುತ್ತಾರೆ. ಉದಾ: ಈ ಚಿತ್ರವು     ‘ಮರ’ ಎಂಬ ಅರ್ಥ ನೀಡಿದರೆ ಇದರ ಉಚ್ಚಾರವು ವ್ಯಂಜನಗಳಲ್ಲಿ ‘ಎಚ್ ಮತ್ತು ‘ಟಿ’ (ht) ಆಗುತ್ತದೆ. ಇದೇ ಚಿತ್ರವನ್ನು ಮತ್ತೆ ಮತ್ತೆ ಬರೆದರೆ ಅವು ಬೇರೆ ಬೇರೆ ಉಚ್ಚಾರಗಳನ್ನು ಬೇರೆ ಬೇರೆ ಅರ್ಥಗಳನ್ನು ನೀಡುತ್ತದೆ. ಉದಾ: h = ನಂತರ hti = ಪುನಃಸಂಸ್ಕರಿಸು hti = ಕೆತ್ತಲು ಹೀಗೆ ಅರ್ಥಗಳಾಗುತ್ತವೆ.

ಅನೇಕ ಚಿಹ್ನೆಗಳನ್ನು ಸೇರಿಸಿ ಬರೆಯುವ ಈಜಿಪ್ತಿನ ಈ ಚಿತ್ರಲಿಪಿ ಬರವಣಿಗೆಯಲ್ಲಿ ಈಜಿಪ್ತಿನವರು ಬಹು ಉದ್ದದ ಪದಗಳನ್ನು ರಚಿಸಿರುತ್ತಾರೆ. ಅನೇಕ ವ್ಯಂಜನಗಳಿಗೆ ಕೆಲವು ಚಿಹ್ನೆಗಳನ್ನು ಬರೆದಾಗ ಅವು ಭಾಷಾಧ್ವನಿಗಳನ್ನು ಸೂಚಿಸುತ್ತಿದ್ದವು.

ಉದಾಹರಣೆಗೆ ಹೇಳುವುದಾದಲ್ಲಿ ಗೂಬೆಯ ಚಿತ್ರ ಬರೆದು ಅದರ ಕೆಳಗೆ ಬಾಯಿ ಅದರ ಪಕ್ಕದಲ್ಲಿ ಉಳಿಯನ್ನು ಬರೆದರೆ ‘ಎಂ ಆರ್ಬ್‌- ಎಂಬ ಧ್ವನಿ ಬರುತ್ತದೆ. ಇದರ ಅರ್ಥ ‘ಕಾಯಿಲೆ ಬಿದ್ದರೆ’ ಎಂದಾಗುತ್ತದೆ. ಇಲ್ಲಿ ಗೂಬೆ ಬಾಯಿ, ಉಳಿ ಚಿತ್ರಗಳ ಅರ್ಥ ಮುಖ್ಯವಲ್ಲ. ಈ ಆಧಾರದ ಮೇಲೆ ಈಜಿಪ್ತಿನ ಚಿತ್ರಲಿಪಿಗಳನ್ನು ಹೀಗೆ ವಿಂಗಡಿಸಬಹುದು.

1. ಭಾವಲಿಪಿ : ಈಜಿಪ್ತಿನ ಚಿತ್ರಲಿಪಿಯನ್ನು ಚಿತ್ರದ ರೂಪಕ್ಕೆ ತಕ್ಕಂತೆ ಅರ್ಥೈಸುವುದು. ಚಿತ್ರ ಒಂದೇ ಬಂದಾಗ ಮರದ ಕೊಂಬೆಯೆಂಬ ಅರ್ಥವೇ ಆಗುತ್ತದೆ. 2. ಭಾಷಾಧ್ವನಿ ಸೂಚಕಗಳು. ಇವು ಚಿಹ್ನೆಗಳು. ಅರ್ಥವನ್ನು ಹೇಳುವುದಿಲ್ಲ. ಅವು ಒಂದು ಅಥವಾ ಹೆಚ್ಚಿನ ವ್ಯಂಜನಗಳಾಗಿ ಬಳಕೆಯಾಗಿ ಬೇರೆ ಅರ್ಥವನ್ನು ನೀಡುತ್ತವೆ. ಉದಾಹರಣೆಗೆ= ಎನ್, ht ಎಚ್ ಟಿ ಎರಡೂ ಸೇರಿದಾಗ ಎನ್‌ಎಚ್‌ಟಿ ಆಗುತ್ತದೆ. ಇದರ ಅರ್ಥ ‘ಗಟ್ಟಿಯಾದ’   ಎಂದಾಗುತ್ತದೆ.

ಮೂರನೆಯ ರೀತಿಯದರಲ್ಲಿ ಚಿಹ್ನೆಗಳಿಗೆ ಭಾಷಾಧ್ವನಿ ಇಲ್ಲ ಆದರೆ ಓದುಗನು ಅರ್ಥಕ್ಕೆ ಸರಿಯಾಗಿ ಓದಲು ಅನುಕೂಲವಾಗುವಂತೆ ಬರೆಯ ಲಾಗಿದೆ. ಉದಾಹರಣೆಗೆ ಮರದ ಚಿತ್ರಕ್ಕೆ ಹಿಂದಕ್ಕೆ ತಿರುಗಿಸಿದ ಕಾಲುಗಳನ್ನು ಸೇರಿಸಿದಾಗ  ಎಚ್‌ಟಿಐ (hti) ಎಂದಾಗುತ್ತದೆ. ಇದರ ಅರ್ಥ ಸಂಸ್ಕರಿಸು ಎಂದು.

ಪ್ರಾಚೀನ ಈಜಿಪ್ತ್ ನಾಗರೀಕತೆಯಲ್ಲಿದ್ದ ಚಿತ್ರಲಿಪಿ ಚಿಹ್ನೆಗಳ ಸಂಖ್ಯೆ 700. ಮುಂದೆ ಕ್ರಿ.ಪೂ. 2000 ವರ್ಷಗಳಿಂದ ಕ್ರಿ.ಪೂ. 600 ರ ಹೊತ್ತಿಗೆ ಈ ಸಂಖ್ಯೆ ಎರಡರಷ್ಟಾದವು. ಹೀಗೆ ಹೊಸ ಹೊಸ ಚಿಹ್ನೆಗಳನ್ನು ಸೇರಿಸುವಾಗ ಹಿಂದೆ ಇದ್ದ ನಿಯಮವನ್ನೇ ಅನುಸರಿಸಲಾಗಿದೆ. ಈಜಿಪ್ತ್‌ನ ಚಿತ್ರ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯುತ್ತಿದ್ದರಾದರೂ ಕೆಲವೊಮ್ಮೆ ಎಡದಿಂದ ಬಲಕ್ಕೆ ಬರೆದಿರುವುದೂ ಉಂಟು. ಉದ್ದದ ಚಿಹ್ನೆಗಳು ಬರೆವಣಿಗೆ ಮಾಧ್ಯಮವನ್ನು ಅನುಸರಿಸಿ ಉದ್ದುದ್ದಕ್ಕೆ ಬರೆದಿರುವುದುವುಂಟು. ಮುಖ್ಯ ವ್ಯಕ್ತಿಗಳ ಹೆಸರು ಬಂದಾಗ ಅದನ್ನು ಸುತ್ತುಗೆರೆಗಳಿಂದ ತೋರಿಸುತ್ತಿದ್ದರು. ಶಿಲೆಯ ಮೇಲೆ ಬರೆಯುವಾಗ ಉಳಿಸುತ್ತಿಗೆಗಳನ್ನು ಬಳಸಿದರೂ ಮರ, ಪಪೈರ ಎಲೆಗಳ ಮೇಲೆ ಬರೆಯುವಾಗ ಮಸಿ ಹಾಗೂ ಕುಂಚಗಳನ್ನು ಬಳಸಿರುತ್ತಾರೆ. ಒಟ್ಟಿನಲ್ಲಿ ಈ ಲಿಪಿಯ ಬರೆವಣಿಗೆಯಲ್ಲಿ ಕಲಾತ್ಮಕತೆ ಎದ್ದು ಕಾಣುವಂತಹುದು.

ಹಿರಾಟಿಕ್ ಲಿಪಿ

ಇದೂ ಬಲದಿಂದ ಎಡಕ್ಕೆ ಬರೆಯುವಂತಹದಾಗಿದ್ದು ಪ್ರಾರಂಭದಲ್ಲಿ ಅಡ್ಡಡ್ಡವಾಗಿತ್ತು. ಕ್ರಿ.ಪೂ. 2000 ದ ಹೊತ್ತಿಗೆ ಉದ್ದಕ್ಕೆ ತಿರುಗಲಾರಂಭಿಸಿ ದವು. ಕಾಲಕಳೆದಂತೆ ಇದರ ಬಳಕೆ ಹೆಚ್ಚಿದಂತೆ ಚಿತ್ರಲಿಪಿಗೂ ಇದಕ್ಕೂ ಎದ್ದು ಕಾಣುವಂಥಹ ಬದಲಾವಣೆಗಳು ಕಾಣಿಸಿಕೊಂಡವು. ಉಚ್ಚಾರದಲ್ಲಿಯೂ ಬದಲಾವಣೆ ಕಾಣಿಸಿಕೊಂಡಿತು. ಬರೆವಣಿಗೆಯಲ್ಲಿ ಕೆಲವು ಚಿಹ್ನೆಗಳು ಒಂದೇ ತೆರನಾಗಿ ಕಾಣಿಸಿಕೊಳ್ಳತೊಡಗಿದಾಗ ಕೆಲವು ವ್ಯತ್ಯಾಸದ ಚಿಹ್ನೆಗಳನ್ನು ಬಳಿಸಿ ಒಂದು ಇನ್ನೊಂದರಿಂದ ಬೇರೆಯೆಂಬಂತೆ ತೋರಿಸ ಹತ್ತಿದರು. ಈ ಲಿಪಿಯೇ ಮುಂದೆ ಕ್ರಿ.ಪೂ. ಏಳನೆಯ ಶತಮಾನದಲ್ಲಿ ಡೊಮೆಟಿಕ್ ಲಿಪಿಯಾಗಿ ಪರಿವರ್ತಿತವಾಯಿತು.

ಡೊಮೆಟಿಕ್ ಲಿಪಿ

ಕ್ರಿ.ಪೂ. 600 ರಲ್ಲಿ ಈಜಿಪ್ತ್‌ನ 26ನೆಯ ರಾಜವಂಶದ ಕಾಲದಲ್ಲಿ ಬಳಕೆಗೆ ಬಂತು. ಬರೆವಣಿಗೆಯ ಚಿಹ್ನೆಗಳು ಹಿರಾಟಿಕ್ ಚಿಹ್ನೆಗಳಿಂದ ಉದಿಸಿದ್ದರೂ ಎರಡಕ್ಕೂ ಸರಿಯಾದ ಹೋಲಿಕೆಯಿರಲಿಲ್ಲ. ಇವು ವೇಗವಾಗಿ ಬರೆಯುವ ಕೈಬರಹದ ಬರಹವಾದ್ದರಿಂದ ಒಂದು ಅಕ್ಷರ ಇನ್ನೊಂದು ಅಕ್ಷರಕ್ಕೆ ಭಿನ್ನವಾಗಿ ಕಾಣದ ರೀತಿಯಲ್ಲಿರುತ್ತಿದ್ದವು. ಹಿರಾಟಿಕ್ ಲಿಪಿಗಿಂತಲೂ ಓದಲು ಕಷ್ಟವಾಗಿದ್ದ ಲಿಪಿ. ಇದನ್ನು ಹಿರಾಟಿಕ್ ಹಾಗೂ ಚಿತ್ರಲಿಪಿಯಂತೆಯೇ ಓದಲಾಗುತ್ತಿತ್ತು.

ಈಜಿಪ್ತಿನ ಚಿತ್ರಲಿಪಿಯನ್ನು ಓದುವಲ್ಲಿ ಅನೇಕ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಲೇ ಇದ್ದವು. ಗ್ರೀಕರಲ್ಲಿ ಪೈಥಾಗೊರೊಸ್‌ನಿಗೆ ಈ ಚಿತ್ರ ಲಿಪಿಯ ಪರಿಚಯವಿತ್ತು. ಗ್ರೀಕರು ಈ ಲಿಪಿಯ ಕಡೆಗೆ ಹೆಚ್ಚಿನ ಒಲವು ತೋರಿಸಲಿಲ್ಲ. ಈ ಲಿಪಿಗಳನ್ನು ಅವು ‘ಸಾಂಕೇತಿಕ’ ಬರೆವಣಿಗೆಯೆಂದೇ ಭಾವಿಸಿದ್ದರು. ಈಜಿಪ್ತಿನವನಾದ ಗ್ರೀಕ್ ಶಾಸ್ತ್ರಜ್ಞ ಹಾರೋಪೆಲ್ಲೊನ್ ಎಂಬುವವನು ಬರವಣಿಗೆಯ ಬಗ್ಗೆ ಸ್ವಲ್ಪ ಕೆಲಸಮಾಡಿ ‘ಹಿರೋಗ್ಲಿಫಿಕ್’ ಎಂಬ ಕೃತಿಯನ್ನು ರಚಿಸಿದ. ಆದರೆ ಈತನಿಗೆ ಆ ಬರವಣಿಗೆಯನ್ನು ಓದಲು ಬರುತ್ತಿರಲಿಲ್ಲ. ಮಧ್ಯಯುಗೀನ ಯುರೋಪಿನಲ್ಲಿ ಈ ಲಿಪಿಯ ಬಗ್ಗೆ ಗಮನಹರಿಸದಿದ್ದರೂ, ಹಾರೋಪೆಲ್ಲೋನ್‌ನ ಕೃತಿಯನ್ನು ಸಂರಕ್ಷಿಸಿದರಲ್ಲದೆ ಚಿತ್ರಲಿಪಿಗಳ ಬರೆವಣಿಗೆಯನ್ನನುಸರಿಸಿ ತಮ್ಮ ಚರ್ಚುಗಳ ಮೇಲೆ ಚಿತ್ರಗಳನ್ನು ಬರೆಸಿದರು. ಕ್ರಿ.ಶ. 17ನೆಯ ಶತಮಾನದಲ್ಲಿ ಜರ್ಮನಿಯ ವಿದ್ವಾಂಸ ಅರ್ಥಾಸಿನ್ ಕಿರ್‌ಚರ್ ಎಂಬುವವನು ಈಜಿಪ್ಪಿನ ಧಾರ್ಮಿಕ ಗ್ರಂಥಗಳ ಬರೆವಣಿಗೆಯನ್ನು ಓದಲು ಪ್ರಯತ್ನಿಸಿದ. ಆತ ಆ ಚಿತ್ರಗಳು ಭಾಷಾ ಧ್ವನಿಯನ್ನು ಹೊಂದಿವೆಯೆಂಬುದನ್ನು ಗುರುತಿಸಿದನಾದರೂ ಪೂರ್ಣ ಗುರುತಿ ಸಲು ಸಾಧ್ಯವಾಗಲಿಲ್ಲ.

ನೆಪೋಲಿಯನ್‌ನು ಈಜಿಪ್ತ್ ಮೇಲೆ ಧಾಳಿ ಮಾಡಿದಾಗ ಮೆಡೆಟರೇನಿಯಾ ಸಮುದ್ರ ತೀರದಲ್ಲಿ ರಾಸೆಟ್ಟ (ರಷೀದ್) ಶಿಲಾಶಾಸನವು ದೊರಕಿದ ಮೇಲೆ ಈಜಿಪ್ತಿನ ಈ ಬರೆವಣಿಗೆಯ ಗ್ರಹಿಕೆ ಬದಲಾಯಿತು. ಈ ಶಿಲೆಯ ಮೇಲ್ಭಾಗದಲ್ಲಿ ಚಿತ್ರಲಿಪಿಯಲ್ಲಿಯೂ ಮಧ್ಯೆ ಅದೇ ಲಿಪಿಯ ಇನ್ನೊಂದು ರೂಪವಾದ ಡೊಮೆಟಿಕ್ ಲಿಪಿಯಲ್ಲಿಯೂ ಕೆಳಭಾಗದಲ್ಲಿ ಗ್ರೀಕ್ ಲಿಪಿ ಯಲ್ಲಿಯೂ ಬರೆಯಲಾಗಿತ್ತು. ಗ್ರೀಕ್ ಲಿಪಿಯ ಶಾಸನ ಭಾಗದ ಆಧಾರದಿಂದ ಥಾಮಸ್ ಯಂಗ್ ಎಂಬುವವನು ಚಿತ್ರಲಿಪಿಯ ಕೆಲವು ಭಾಗಗಳನ್ನು ಓದಿದ. ಮುಂದೆ 1822 ರಲ್ಲಿ ಫ್ರಾನ್ಸಿನ ಜೀನ್ ಫ್ರಾಂಕೊಯಿಸ್ ಚಾಂಪೊಲಿಯನ್ ಎಂಬುವವನು ಈಜಿಪ್ಟಿನ ಮೂರು ಲಿಪಿಗಳನ್ನು ಪೂರ್ಣವಾಗಿ ಓದಿದ್ದಲ್ಲದೆ ಭಾಷಾಧ್ವನಿಗಳನ್ನು ಸ್ಪಷ್ಟವಾಗಿ ಗುರುತಿಸಿದ. ಇದು ಮುಂದೆ ಈಜಿಪ್ಪಿನ ನಾಗರಿಕತೆಯ ಮೇಲೆ ಹೆಚ್ಚಿನ ಬೆಳಕು ಬೀರಿತು.

ಸುಮೇರಿಯಾ ಬರೆವಣಿಗೆ ಅಥವಾ ಕ್ಯೂನಿಫಾರಂ ಬರವಣಿಗೆ

ದಕ್ಷಿಣ ಇರಾಕಿನ ಉರ್ಕ್‌ನ ಪುರಾತತ್ವ ಉತ್ಖನನಗಳಲ್ಲಿ ಅನೇಕ ಮಣ್ಣಿನ ಬರಹದ ಮುದ್ರಿಕೆಗಳು ಸಿಕ್ಕಿವೆ. ಇವುಗಳ ಕಾಲವನ್ನು ಕ್ರಿ.ಪೂ. 8000ಕ್ಕೆ ನಿಗದಿಪಡಿಸಿರುತ್ತಾರೆ. ಹೀಗಾಗಿ ಇವು ಅತ್ಯಂತ ಪ್ರಾಚೀನವಾದ ಬರಹಗಳಾಗಿವೆ. ಪ್ರಾರಂಭದಲ್ಲಿ ಮೊಳೆಯಾಕಾರದಲ್ಲಿ ಅಕ್ಷರಗಳಿಂದ ಚಿತ್ರಗಳ ರೂಪದಲ್ಲಿದ್ದವು. ಸುಮೇರಿಯಾ ದೇಶದಲ್ಲಿ ಸಿಕ್ಕಿರುವ ಇಂತಹ ಚಿಹ್ನೆಗಳ ಮೇಲೆ ಪದ ಚಿಹ್ನೆಯನ್ನು (ಲಾಜಿಗ್ರಾಫಿಕ್) ಸೂಜಿಸುವ ಅನೇಕ ಗುರುತುಗಳು ಸಿಕ್ಕಿವೆ. ಕ್ರಿ.ಪೂ. 3200 ರ ನಂತರ ಸಂಖ್ಯೆಗಳಿಗೂ, ಪ್ರಾಣಿಗಳಿಗೂ ರೇಖಾಗೆರೆಗಳನ್ನು ಬಳಸಿದರು. ಈ ಗೆರೆಗಳು ಅದೇ ಚಿತ್ರವನ್ನು ಹೋಲುತ್ತಿದ್ದವು.

ಮುಂದಿನ ಹಂತದಲ್ಲಿ ಬರಹವು ಸಾಮಾನ್ಯ ಅರ್ಥದಿಂದ ಸಾಮಾನ್ಯಶಬ್ದದ ಬರಹದ ಚಿಹ್ನೆಯಾಗಿ ಪರಿವರ್ತಿತವಾಯಿತು. ಇವರು ಬರಹದ ಚಿಹ್ನೆಗಳನ್ನು ಪದ ಚಿಹ್ನೆಯಂತೆ ಬರೆದರೂ ಅವು ಭಾಷಾ ಶಬ್ದಕ್ಕೆ ಹತ್ತಿರವಾಗಿದ್ದವು.

ಸುಮೇರಿಯನ್ನರ ಈ ಬರಹವನ್ನು ಕ್ರಿ.ಪೂ. 3000 ವರ್ಷಗಳ ಹಿಂದೆ ಅಕಡಿಯನ್ನರು ತೆಗೆದುಕೊಂಡರು. ಇವರು ಭಾಷಾಧ್ವನಿಗೆ ಬರವಣಿಗೆಯು ಹತ್ತಿರವಾಗುವಂತೆ ವಿಸ್ತರಿಸಿದರು. ಅಸ್ಸಿರಿಯರು, ಬಾಬಿಲೋನಿಯರು, ಅಕ್ಕಡಿನ್ ಭಾಷೆಯನ್ನು ಬಳಸುತ್ತಿದ್ದುದರಿಂದ ಇದನ್ನು ‘ಅಕ್ಕಡಿನ್ ಕ್ಯೂನಿ ಫಾರಂ’ ಎಂದು ಗುರುತಿಸುತ್ತಾರೆ. ಸುಮೇರಿಯಾ ಮತ್ತು ಅಕ್ಕಡಿನ್ ಭಾಷೆಗಳಿಗೆ ಇದೊಂದೇ ಲಿಪಿಯನ್ನು ಬಳಸಿರುತ್ತಾರೆ.

ಕ್ಯೂನಿಫಾರಂ ಎಂಬ ಶಬ್ದವು ಲ್ಯಾಟಿನ್ ಭಾಷೆಯ ಶಬ್ದವಾಗಿದ್ದು ಆ ಕ್ಯೂನೆಸ್ ಫಾರ್ಮ= ‘ಮೊನಚಾದ ಆಕಾರದ’ ಎಂಬ ಅರ್ಥವಿದೆ. ಅರಬರು ಇದನ್ನು ಮೊಳೆಯಾಕಾರದ ಲಿಪಿ ಎಂದು ಕರೆದಿದ್ದಾರೆ. ಅಕ್ಷರಗಳು ಮೊಳೆಯಾಕಾರದಲ್ಲಿ ಮೂಲ ಚಿತ್ರಲಿಪಿಯೇ ಆಗಿದೆ. ಈ ಲಿಪಿಯನ್ನು ಕ್ರಿ.ಪೂ. 2900 ರಿಂದ ಕ್ರಿ.ಪೂ. 200 ರವರೆಗೆ ಬಳಸಿರುತ್ತಾರೆ. ಇದುವರೆವಿಗೆ ಸು 375,000 ಮುದ್ರಿಕೆಗಳು ದೊರೆತಿವೆ. ಮೊಳೆಯಾಕಾರದ ಲಿಪಿಗೆ ಚಿತ್ರವು ಬದಲಾಗುವುದಕ್ಕೆ ಮೊದಲು 1. ಚಿತ್ರಗಳನ್ನು ನೇರವಾದ ಗೆರೆಗಳಿಗೆ ತಂದು ಸರಳೀಕರಿಸಿಕೊಂಡರು. 2. ಉದ್ದಕ್ಕಿದ್ದ ಚಿತ್ರಗಳನ್ನು ಅಡ್ಡವಾಗಿಸಿಕೊಂಡರು. 3. ಚಿತ್ರಗಳನ್ನು ಪೂರ್ಣವಾಗಿ ಮೊಳೆಗಳ ಜೋಡಣೆಯಲ್ಲಿ ಕಾಣಲಾಯಿತು. ಮೊದಲು ಚಿಹ್ನೆಗಳನ್ನು ಮೇಲಿಂದ ಕೆಳಕ್ಕೆ ಬರೆಯುತ್ತಿದ್ದರು ಮುಂದೆ ಅವು ಪಕ್ಕಕ್ಕೆ ಬಂದವು. ಮುಂದೆ ಎಡದಿಂದ ಬಲಕ್ಕೆ ಬರೆದರು.

ಈ ಲಿಪಿಯೂ ಸಹ ಈಜಿಪ್ತಿನ ಲಿಪಿಯಂತೆ ಮರೆತು ಹೋಗಿತ್ತು. ಕ್ರಿ.ಶ. 1800 ರಲ್ಲಿ ಇದನ್ನು ಓದುವ ಪ್ರಯತ್ನಗಳು ಆರಂಭವಾದವು. ಈಜಿಪ್ತಿನಲ್ಲಿ ದೊರೆತಂತೆ ಅಖ್ಖಾಡ್ಸಿ – ಎಲಮೈಟ್ – ಪರ್ಷಿಯನ್ ಲಿಪಿಯ ತ್ರಿಭಾಷಾ ಶಾಸನದ ಸಹಾಯದಿಂದ ಜಿ.ಎಫ್. ಗ್ರೋಟೆ ಫೆಂಡ್ ಎಂಬಾತ ಓದಲು ಪ್ರಯತ್ನಿಸಿ ಸ್ವಲ್ಪಮಟ್ಟಿಗೆ ಸಫಲವಾದ. ಮುಂದೆ 1857 ರ ಸುಮಾರಿಗೆ ಇದನ್ನು ಪೂರ್ಣವಾಗಿ ಓದಲಾಯಿತು. ಅನೇಕ ಮೊಳೆಗಳನ್ನು ಜೋಡಿಸಿ ರಚಿಸಿದ ಅಕ್ಷರಗಳು ಒಂದು ಗುಂಪಾಗಿ ಕಾಣಿಸಿಕೊಂಡರೂ ಇವು ಪದವಾಗಿರುವು ದನ್ನು ಗುರುತಿಸಿದರು. ಮೊಳೆಯಾಕಾರದ ಈ ಚಿಹ್ನೆಗಳ ಉಚ್ಚಾರವು ವಿಶಿಷ್ಟವಾಗಿದ್ದು ಕೆಲವು ಚಿಹ್ನೆಗಳು ಒಂದಕ್ಕಿಂತ ಹೆಚ್ಚಿನ ಭಾಷಾ ಧ್ವನಿಗಳನ್ನು ಸೂಚಿಸಿದರೆ ಉಳಿದವು. ಸಮಾನ ಉಚ್ಚಾರಾಂಶವನ್ನು ಹೊಂದಿವೆ.

ಚೀನಾ ಬರವಣಿಗೆ

ಚೀನಿ ಭಾಷೆಯು ಏಕೋಚ್ಚಾರ ಶಬ್ದಗಳಿಂದ ಕೂಡಿದ್ದು ಪ್ರತಿಶಬ್ದವೂ ಅರ್ಥವತ್ತಾದ ಧಾತುರೂಪವಾಗಿದೆ. ಈ ಭಾಷೆಗೆ ಬಳಸುವ ಬರಹದ ಒಂದೊಂದು ರೂಪವೂ ಒಂದೊಂದು ಧಾತುವನ್ನು ಮಾತ್ರ ಸೂಚಿಸುತ್ತವೆ. ಹೀಗಾಗಿ ಧಾತುಗಳ ಸಂಖ್ಯೆಯೂ ಜಾಸ್ತಿ ಇದ್ದು ಬರಹದ ಏಕೋಚ್ಚಾರಗಳೂ ಜಾಸ್ತಿಯಾಗಿವೆ.

ಚೀನಾದ ಲಿಪಿ ಎಂದು ಆರಂಭವಾಯಿತೆಂದು ಹೇಳುವುದು ಕಷ್ಟ. ಅತಿ ಪ್ರಾಚೀನ ಬರವಣಿಗೆಯ ದಾಖಲೆಯೆಂದರೆ ಶಾಂಗ್ ಮನೆತನದ್ದು (ಕ್ರಿ.ಪೂ. 1800 ರಿಂದ ಕ್ರಿ.ಪೂ. 1200). ಆದರೆ ಈ ಕಾಲಕ್ಕೆ ಈ ಲಿಪಿ ಸಾಕಷ್ಟು ಅಭಿವೃದ್ದಿಯನ್ನು ಹೊಂದಿತ್ತು. ಕ್ರಿ.ಪೂ. 1400 ರ ವೇಳೆಗೆ ಈ ಭಾಷೆಯಲ್ಲಿ 2500 ರಿಂದ 3000 ಚಿಹ್ನೆಗಳಿದ್ದವು. ಈಗಿನ ಲಿಪಿಯ ರೂಪವನ್ನು ಕ್ರಿ.ಪೂ. 221-206 ರಲ್ಲಿದ್ದ ಚಿನ್ ಆಳ್ವಿಕೆಯ ಕಾಲದಲ್ಲಿ ಸುಧಾರಿಸಲಾಯಿತು. ಪ್ರಾಚೀನ ರೇಖಾಗೆರೆಗಳು ಒಂದು ವ್ಯವಸ್ಥಿತಿ ರೂಪದ ಜೋಡಣೆಯಾಗಿದ್ದವು. ಗಂಡನ್ನು ತೋರಿಸಲು ನಿಂತ ಮನುಷ್ಯ ರೂಪ ತೋರಿಸಿದರೆ ಹೆಂಗಸನ್ನು ತೋರಿಸಲು ಬಾಹಿರ ಮನುಷ್ಯ ರೂಪದ ಚಿತ್ರ ಬರೆಯುತ್ತಿದ್ದರು. ಏಕೋಚ್ಚಾರ ಶಬ್ದಗಳ ಜೊತೆಗೆ ಬೇರೆ ಬೇರೆ ಶಬ್ದಗಳನ್ನು ಸೇರಿಸಿದಾಗ ಬೇರೆ ಅರ್ಥ ಬರುತ್ತದೆ. ಉದಾ. ಹೆಂಗಸಿನ ಅರ್ಥಕೊಡುವ ಚಿಹ್ನೆಯ ಜೊತೆ ಗಂಡಸಿನ ಅರ್ಥಕೊಡುವ ಚಿಹ್ನೆ ಸೇರಿಸಿದರೆ ಹೆಣ್ಣು ವ್ಯಕ್ತಿ ಎಂಬ ಅರ್ಥ ಬರುತ್ತದೆ. ಹಾಗೆಯೇ ಮಧ್ಯೆ, ಒಳಭಾಗ ಎಂಬ ಶಬ್ದದೊಡನೆ ‘ದೇಶ’ ಎಂಬ ಶಬ್ದ ಸೇರಿಸಿದರೆ ಮಧ್ಯದ ದೇಶ, ಚೀನ ಎಂಬ ಅರ್ಥ ಬರುತ್ತದೆ.

ಚೀನಾ ಲಿಪಿ ಭಾವಲಿಪಿಯಾಗಿದ್ದು ಇಂದಿಗೂ ಪ್ರಪಂಚದ ಬಹಳಷ್ಟು ಜನ ಬಳಸುತ್ತಿರುವ ಲಿಪಿಯಾಗಿದೆ. ಜಪಾನ್, ಕೊರಿಯಾ, ಇಂಡೋಚೀನಾ ದೇಶಗಳ ಲಿಪಿಗಳು ಚೀನಾದ ಭಾವಲಿಪಿಯಿಂದ ಹುಟ್ಟಿಕೊಂಡ ಲಿಪಿಗಳಾಗಿವೆ.

ಸಿಂಧೂಲಿಪಿ : (ಕ್ರಿ.ಪೂ. 3500ಕ್ರಿ.ಪೂ. 2500)

ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಂಟಿಗೋಮರಿ ಜಿಲ್ಲೆಯ ಹರಪ್ಪಾ ಮತ್ತು ಸಿಂಧ್ ಪ್ರಾಂತ್ಯದ ಲರ್ಕನಾ ಜಿಲ್ಲೆಯ ಮೊಹೆಂಜದಾರೋ ಎಂಬ ಸ್ಥಳಗಳಲ್ಲಿ ಈ ನಾಗರಿಕತೆಯ ಕುರುಹುಗಳು ಮೊದಲು ದೊರೆತಿದ್ದುದರಿಂದ ಇದನ್ನು ಸಿಂಧೂಲಿಪಿ ಎಂದು ಕರೆದರಾದರೂ ಇತ್ತೀಚೆಗೆ ಈ ನಾಗರಿಕತೆಯ ಹರವು ಗುಜರಾತ್ ಪ್ರಾಂತ್ಯದಲ್ಲಿಯೂ ಕಂಡುಬಂದಿದೆ. 1922ರಲ್ಲಿ ಸರ್ ಜಾನ್ ಮಾರ್ಷಲ್ ಎಂಬ ಅಧಿಕಾರಿ ಇಲ್ಲಿ ಉತ್ಖನನ ಮಾಡಿ ಕಂಚಿನ ಯುಗಕ್ಕೆ ಸೇರಿದ ನಾಗರಿಕತೆಯನ್ನು ಬೆಳಕಿಗೆ ತಂದ. ಈಗಿನ ಪಾಕಿಸ್ತಾನದ ಹರಪ್ಪಾ, ಮೊಹೆಂಜದಾರೋ, ಚುನ್ಹದಾರೊ ಭಾರತದ ಕಾಂಬಂಗನ್, ಲೋಥಾಲ್, ದಯಾಮಾಬಾದ್, ಬನವಾಲಿ ಮತ್ತು ಥೊಲವೀರ ಎಂಬ ಸ್ಥಳಗಳಲ್ಲಿ ಈ ನಾಗರಿಕತೆಯ ಸುಮಾರು 4000 ಮುದ್ರಿಕೆ ಗಳು ಕಂಡುಬಂದಿವೆ. ಈ ಮುದ್ರಿಕೆಗಳಲ್ಲಿನ ಬರವಣಿಗೆ ಸ್ವಲ್ಪಮಟ್ಟಿಗೆ ಮೊಳೆಗಳಂತೆ ಗೆರೆಗಳುಳ್ಳ ಲಿಪಿಯನ್ನು ಹೋಲುವುದಾದರೂ ಮೊಳೆಯಾಕಾರದ ಲಿಪಿಯಂತೆ ಇಲ್ಲ. ಬಹುಶಃ ಆ ಲಿಪಿಯನ್ನು ಗಮನಿಸಿದ ಇಲ್ಲಿನ ವ್ಯಾಪಾರಿಗಳು ಇಲ್ಲಿನ ಸಿಂಧೂ ಲಿಪಿಯನ್ನು ರೂಪಿಸಿರಬೇಕೆಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ವ್ಯಕ್ತಪಡಿಸಿರುತ್ತಾರೆ.

ಲಿಪಿಯನ್ನು ಮಣ್ಣಿನ ಮುದ್ರಿಕೆಗಳ ಮೇಲೆ, ಮಡಕೆಯ ಮೇಲೆ ಬರೆಯ ಲಾಗಿದೆ. ಈ ಮುದ್ರಿಕೆಗಳು ಚಿಕ್ಕದಾಗಿದ್ದು ಸರಾಸರಿ ಐದು ಚಿಹ್ನೆಗಳನ್ನು ಪಡೆದಿವೆ. ಉದ್ದವಾಗಿರುವ ಮುದ್ರಿಕೆಯಲ್ಲಿ 3 ಸಾಲುಗಳಿದ್ದು 26 ಚಿಹ್ನೆಗಳಿವೆ. 14 ಚಿಹ್ನೆಗಳಿರುವ ಮುದ್ರೆಯೊಂದರ ಬರೆವಣಿಗೆಯ ಸಾಲೇ ದೊಡ್ಡಸಾಲು. ಅಕ್ಷರಗಳು ಮೇಲ್ಮುಖವಾಗಿ ರೇಖೆಗಳಿಂದ ರಚಿತವಾಗಿವೆ. ವಕ್ರರೇಖೆಗಳು ಕಡಿಮೆ. ಸುಮಾರು ಬೇರೆಬೇರೆ ರೀತಿಯ 400 ಚಿಹ್ನೆಗಳನ್ನು ಗುರುತಿಸಲಾಗಿದೆ. ಚಿಹ್ನೆಗಳನ್ನು ಗಮನಿಸಿದಾಗ ಇವು ಉಚ್ಚಾರಾಂಶವನ್ನು ಹೊಂದಿದ ಶಬ್ದಗಳಿಗಿಂತ ಉಚ್ಚಾರಾಂಶವನ್ನು ಹೊಂದಿದ ಚಿಹ್ನೆಯಂತೆ ಕಾಣಬರುತ್ತವೆ. ಬಹುತೇಕ ಮುದ್ರೆಗಳಲ್ಲಿ ಕೆಳಗೆ ಚಿತ್ರವಿದ್ದೂ ಮೇಲ್ಭಾಗದಲ್ಲಿ ಬರವಣಿಗೆ ಇರುತ್ತದೆ.

ಈ ನಾಗರಿಕತೆ ಬೆಳಕಿಗೆ ಬಂದಾಗಿನಿಂದ ಈ ಬರವಣಿಗೆಯನ್ನು ಓದುವ ಪ್ರಯತ್ನಗಳು ನಡೆಯುತ್ತಲೇ ಇದೆ. ಫಾದರ್ ಹೆರಾಸ್, ಅಶೋಕ ಪರ‌್ಪೋಲ, ಮಹದೇವನ್, ಶೆಣೈ, ಎಸ್.ಆರ್. ರಾವ್ ಮೊದಲಾದವರು ಈ ಪ್ರಯತ್ನದಲ್ಲಿ ಮೊದಲಿಗರು.

ಸಿಂಧೂ ಲಿಪಿಯ ಅನೇಕ ಲಿಪಿಗಳೊಂದಿಗೆ ಹೋಲಿಕೆಯಿದ್ದರೂ ಆ ಯಾವ ಲಿಪಿಗಳಿಂದಲೂ ಈ ಲಿಪಿ ನಿಷ್ಪನ್ನವಾಗಿಲ್ಲ. ಸುಮೇರಿಯಾ ಲಿಪಿ ಮತ್ತು ಅಲ್ಲಿನ ಚಿತ್ರಲಿಪಿಯ ತಿಳುವಳಿಕೆ ಈ ನಾಗರಿಕತೆಯ ಜನರಿಗಿದ್ದರೂ ಆ ಲಿಪಿಗಳ ಸಹಾಯದಿಂದ ಈ ಲಿಪಿಗಳನ್ನು ಓದಲು ಸಾಧ್ಯವಾಗಿಲ್ಲ. ಎಲ್.ಎ. ವಾಡೆಲ್ ಅವರು ಸುಮೇರಿಯಾ ಲಿಪಿಯ ಸಹಾಯದಿಂದ ಓದಲು ಪ್ರಯತ್ನಿಸಿರುತ್ತಾರೆ. ಡಾ. ಪ್ರಾಣನಾಥರೂ ಇದೇ ಪ್ರಯತ್ನವನ್ನು ಮಾಡಿರುತ್ತಾರೆ. ಇವರ ಪ್ರಕಾರ ಸಿಂಧೂ ನಾಗರಿಕತೆಯಲ್ಲಿ ಬಳಸಿರುವ ಭಾಷೆ ಪ್ರಾಚೀನ ಸಂಸ್ಕೃತ ಅಥವಾ ಪ್ರಾಕೃತವಾಗಿದ್ದು ಬ್ರಾಹ್ಮೀಲಿಪಿಯನ್ನು ಬಳಸಿರುತ್ತಾರೆ. ಪ್ರೊ. ಹಾರ್ಜೋನಿ ಯೆಂಬುವವರು ಈ ಜನರು ಇಂಡೋ ಯುರೋಪಿನ ಪ್ರಾಚೀನ ಜನರಾದ ಹಿಟೈಟ್‌ನವರೆಂದು ಭಾವಿಸಿ ಹಿಟೈಟ್ ಭಾಷೆಯ ಸಹಾಯದಿಂದ ಓದಲು ಪ್ರಯತ್ನಿಸಿರುತ್ತಾರೆ. ಫಾದರ್ ಹೆರಾಸ್ ಅವರು ಈ ವಾದಗಳನ್ನು ತಳ್ಳಿ ಹಾಕಿ ಈ ಜನರು ದ್ರಾವಿಡರೆಂದು ಹೇಳಿ ಮೂಲ ದ್ರಾವಿಡವನ್ನು ಪುನಾರಚಿಸಲು ಪ್ರಯತ್ನಿಸಿದರು. ಸರ್ ಪ್ಲಿಂಡರ್ ಪಿಟ್ರೀಯೆಂಬುವವರು ಸಿಂಧೂ ನಾಗರಿಕತೆಯ ಲಿಪಿಯನ್ನು ಭಾವಲಿಪಿಯೆಂದು ಕರೆದರು. ಮೆರಿಗ್ಗಿ ಎಂಬುವವರು ಭಾವ ಶಬ್ದೋಚ್ಚಾರ ಬರವಣಿಗೆಯೆಂದು ಕರೆದು ಹಿಟೈಟ್ ಶಬ್ದಗಳ ಮತ್ತು ಚಿತ್ರಲಿಪಿಗಳ ಸಹಾಯದಿಂದ ಅರ್ಥೈಸಲು ಪ್ರಯತ್ನಿಸಿದರು. ಹಂಟರ್ ಎಂಬುವವರು ಅಶೋಕನ ಬ್ರಾಹ್ಮಿ ಮತ್ತು ಸಿಂಧೂ ಲಿಪಿಯ ಮಧ್ಯೆ ಇರುವ ಸಂಬಂಧವನ್ನು ಗುರುತಿಸಲು ಪ್ರಯತ್ನಿಸಿದರು.

ಈ ಲಿಪಿ ಯಾವ ಕಡೆಗೆ ಬರೆದಿರಬಹುದೆಂಬ ಬಗ್ಗೆಯೂ ಚರ್ಚೆ ನಡೆದಿದೆ. ಈಜಿಪ್ತ್ ಚಿತ್ರಲಿಪಿಯಲ್ಲಿ ಪ್ರಾಣಿಯ ಮುಖ ಯಾವ ಕಡೆಗಿರುತ್ತದೆಯೋ ಆ ಕಡೆಗೆ ತಲೆಯಿಂದ ಪ್ರಾರಂಭವಾಗಿ ಬಾಲದ ಕಡೆಗೆ ಬಂದಿರುತ್ತದೆ. ಇದೇ ರೀತಿಯ ಬರವಣಿಗೆ ಸಿಂಧೂ ಲಿಪಿಯಲ್ಲಿಯೂ ಇರಬಹುದು. ಎರಡು ಸಾಲು ಬಂದಾಗ ಮೊದಲ ಸಾಲು ಬಲದಿಂದ ಎಡಕ್ಕೂ, ಎರಡನೆಯ ಸಾಲು ಎಡದಿಂದ ಬಲಕ್ಕೂ ಬರೆದಿರಬೇಕೆಂದು ಊಹಿಸುತ್ತಾರೆ.

ಸಿಂಧೂ ಲಿಪಿಯಲ್ಲಿ ಒಂದು ಚಿಹ್ನೆ ಇನ್ನೊಂದು ಚಿಹ್ನೆಗಿಂತ ವ್ಯತ್ಯಾಸ ವಿದೆಯೆಂಬುದನ್ನು ಸೂಚಿಸಲು ಅಕ್ಕಪಕ್ಕಗಳಲ್ಲಿ ಗೆರೆಗಳನ್ನು ಎಳೆಯುವ ಮೂಲಕ ವ್ಯತ್ಯಾಸ ತೋರಿಸಿರುತ್ತಾರೆ. ರಷ್ಟನ್ ಹಾಗೂ ಫಿನಿಷ್ ವಿದ್ವಾಂಸರು ಇದನ್ನು ಮೂಲ ದ್ರಾವಿಡ ಭಾಷೆಯೆಂದು ಕರೆದರೆ ಡಾ. ಎಸ್.ಆರ್. ರಾವ್ ಅವರು ಕ್ರಿ.ಪೂ. 1500 ರ ವೇಳೆಗೆ ಈ ಬರವಣಿಗೆ ಉಚ್ಚಾರಾಂಶ ಮತ್ತು ವರ್ಣಮಾಲೆಯ ಬರಹವಾಗಿದ್ದು, ಇದು ಸಂಸ್ಕೃತ ಭಾಷೆಯೆಂದೂ ಇದು ಇಂಡೋ-ಆರ್ಯನ್ ಭಾಷೆಗೆ ಹೆಚ್ಚು ಸಾದೃಶ್ಯವಿದ್ದ ಭಾಷೆಯೆಂದಿರುತ್ತಾರೆ. ಸುಬ್ಬರಾಮಪ್ಪನವರು ಈ ಲಿಪಿ ಸಂಖ್ಯೆಗಳನ್ನು ಸೂಚಿಸುತ್ತದೆಯೆಂದೂ ಪ್ರಾಣಿಗಳ ಮುಖ ಕೆಳಗಿರುವ ಚಿತ್ರಗಳು ಬಾರ್ಲಿ ಹಾಗೂ ಹತ್ತಿಯನ್ನು ಸೂಚಿಸುತ್ತವೆಯೆಂದು ಹೇಳಿ ವ್ಯಾಪಾರಿಗಳು ಈ ಮುದ್ರೆಗಳನ್ನು ಬಳಸುತ್ತಿದ್ದ ರೆಂದು ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಈ ಲಿಪಿಯನ್ನು ಓದುವ ಪ್ರಯತ್ನ ನಡೆದಿವೆಯೇ ಹೊರತು ಸರ್ವ ವಿದ್ವಾಂಸರಿಗೆ ಸಮ್ಮತದ ಫಲಿತಾಂಶ ಹೊರಬಂದಿಲ್ಲ. ದ್ವಿಭಾಷಾ ಅಥವಾ ತ್ರಿಭಾಷಾಶಾಸನವುಳ್ಳ ಮುದ್ರಿಕೆ ದೊರೆಯುವವರೆಗೆ ಇದು ಕಗ್ಗಂಟಾಗಿಯೇ ಉಳಿಯುವ ಸಾಧ್ಯತೆಯಿದೆ.

ಸಾಂಕೇತಿಕ ಬರವಣಿಗೆ : ಸಾಂಕೇತಿಕ ಲಿಪಿಗಳು ಪ್ರಪಂಚದಲ್ಲೆಲ್ಲಾ ಬಳಕೆ ಯಲ್ಲಿರುವಂತೆ ಭಾರತದಲ್ಲಿಯೂ ಬಳಕೆಯಲ್ಲಿದ್ದವು. ದೇವೀ ಉಪಾಸಕರು ಒಂದೊಂದು ದೇವಿಗೆ ಒಂದೊಂದು ಸಾಂಕೇತಿಕ ಬೀಜಾಕ್ಷರವನ್ನು ಬಳಸಿರು ತ್ತಾರೆ. ಇವು ವ್ಯಂಜನ, ಸ್ವರಗಳು ಸೇರಿ ಒಂದೇ ಉಚ್ಚಾರವಾಗಿರುತ್ತವೆ. ಓಂ, ಹ್ರೀಂ, ಹ್ರಾಂ, ಹ್ರೂಂ ಇತ್ಯಾದಿಗಳನ್ನು ಉದಾಹರಿಸಬಹುದು. ಇವನ್ನು ತಾಂತ್ರಿಕ ಬೀಜಾಕ್ಷರಗಳೆಂದು ಗುರುತಿಸುತ್ತಾರೆ. ಹಾಗೆಯೇ ಸ್ವಸ್ತಿಕ  ಸಿದ್ಧಮ್ Iಗಳು ಭಾರತದಲ್ಲಿಯೂ ಬಹು ಹಿಂದೆ ಇದ್ದಿರಬಹುದಾದ ಧಾರ್ಮಿಕ ಚಿಹ್ನೆಗಳು. ಅವುಗಳನ್ನು ಭಾರತದ ಶಾಸನಗಳೆಲ್ಲ ಚಿಹ್ನೆಗಳಲ್ಲಿಯೂ ಬರೆದಿರುತ್ತಾರೆ. ಹಾಗೆಯೇ ಅಕ್ಷರಗಳಲ್ಲಿಯೂ ಬರೆದಿರುತ್ತಾರೆ. ಇಂತಹ ಎಷ್ಟೋ ಚಿಹ್ನೆಗಳು ನಮ್ಮಲ್ಲಿ ಮರೆತು ಹೋಗಿ ಚಿಹ್ನೆರೂಪದಲ್ಲಿವೆ. ಉದಾಹರಣೆಗೆ  ಈ ಚಿಹ್ನೆ ಶಾಸನದ ಆರಂಭದಲ್ಲಿ, ಮಧ್ಯೆ, ಅಂತ್ಯ ಹೀಗೆ ಪ್ರಮುಖ ಘಟನಾವಳಿಗಳ ಬಳಿ ಇರುತ್ತದೆ. ಇದಕ್ಕೆ ಈಗ ಅರ್ಥವಿಲ್ಲದಿರ ಬಹುದು. ಹಿಂದೆ ಒಂದು ಅರ್ಥವಿತ್ತು.

ಇಂತಹದೇ ಸಂಕೇತಗಳು ಶಾಸನಗಳಲ್ಲಿಯೂ ಕಾಣಬರುತ್ತವೆ. ಅವು ಚಿತ್ರಗಳ ರೂಪದಲ್ಲಿ ಅಥವಾ ಉಬ್ಬು ಕೆತ್ತನೆಗಳ ರೂಪದಲ್ಲಿರುತ್ತವೆ. ವಾಮನ ಮುದ್ರೆಕಲ್ಲು, ಲಿಂಗಮುದ್ರೆಕಲ್ಲು, ಮುಕ್ಕೊಡೆಕಲ್ಲು, ವೀರಗಲ್ಲು, ಮಾಸ್ತಿಕಲ್ಲು ಮುಂತಾದವು. ಇವುಗಳಲ್ಲಿ ಬರವಣಿಗೆಯಿದ್ದಲ್ಲಿ ಖಚಿತತೆ ತಿಳಿಯುತ್ತದೆ ಯಾದರೂ ಬರವಣಿಗೆಯಿಲ್ಲದಿದ್ದಲ್ಲಿ ಅವುಗಳ ಉದ್ದೇಶವನ್ನು ಸ್ಪಷ್ಟವಾಗಿ ಅರಿಯಬಹುದಾಗಿದೆ. ಈ ಅರ್ಥದಲ್ಲಿ ಇವು ಪ್ರಾಚೀನ ಭಾರತೀಯರು ಬಳಸುತ್ತಿದ್ದ ಸಾಂಕೇತಿಕ ಭಾಷಾ ಧ್ವನಿಗಳೆಂದು ಗುರುತಿಸಬಹುದಾಗಿದೆ.

ಸಾಮಾನ್ಯವಾಗಿ ಬರೆವಣಿಗೆಯೆಂದರೆ ವರ್ಣ (ಸ್ವರ, ವ್ಯಂಜನ)ಗಳಿಂದ ಕೂಡಿರಬೇಕೆಂಬ ಕಲ್ಪನೆ ನಮಗೆಲ್ಲರಿಗಿದೆ. ಆದರೆ ನಾಗರಿಕತೆಗಳು ಬೆಳೆದಂತೆ, ಹೊಸಹೊಸ ವೈಜ್ಞಾನಿಕ ಶೋಧಗಳನ್ನು ಅನೇಕ ಕಡೆ ಬರವಣಿಗೆಯಲ್ಲಿ ತೋರಿಸಲು ಆಗುವುದಿಲ್ಲ ಅಲ್ಲಿ ಸಂಕೇತಗಳನ್ನು ತೋರಿಸಿರುತ್ತಾರೆ. ಈ ಸಂಕೇತಗಳನ್ನು ಲಿಪಿ ಬಾರದವರೂ ಅರ್ಥೈಸಬಹುದಾದರೂ ಇವುಗಳ ಪ್ರಾರಂಭಿಕ ಪರಿಚಯವಿರಲೇಬೇಕು. ಉದಾಹರಣೆಗೆ ರಸ್ತೆಯ ಸಂಕೇತಗಳು. ಇವುಗಳ ಪರಿಚಯ ಹೊಂದಿದ ಅನಕ್ಷರಸ್ತರು ಕೂಡ ಸಲೀಸಾಗಿ ತಾನು ಬಿಡುವ ಗಾಡಿಯನ್ನು ಗುರಿ ತಲುಪಿಸಬಲ್ಲರು. ಇಲ್ಲಿ ಭಾಷೆಯ ಕಾರ್ಯವನ್ನು ಈ ಸಂಕೇತಗಳು ನಿರ್ದೇಶಿಸುತ್ತವೆ.

ಇದೇ ರೀತಿ ಟೆಲಿಗ್ರಾಫ್ ಬಳಕೆಗೆ ಬಂದಾಗ ಅದಕ್ಕೆ ಧ್ವನಿಯುಕ್ತವಾದ ಸಾಂಕೇತಿಕ ಲಿಪಿ ಬಳಸಲಾಯಿತು. ಮಾರ್ಸ್‌ ಕೋಡಿನಲ್ಲಿ ಸೂಚಿಸಿರುವಂತೆ ಯಂತ್ರದಿಂದ ಬರುವ ‘ಟಿಕ್’ ಎಂಬ ಶಬ್ದದ ಸಂಖ್ಯೆಗಳ ಮೇಲೆ ಆ ಶಬ್ದವನ್ನು ಗ್ರಹಿಸುವರು. ಅದನ್ನು ಅಕ್ಷರದ ರೂಪಕ್ಕೆ ಪರಿವರ್ತಿಸಿ ಗ್ರಾಹಕರಿಗೆ ಸುದ್ದಿ ಮುಟ್ಟಿಸುತ್ತಾರೆ. ಇಲ್ಲಿ ಯಂತ್ರವು ಹೊಮ್ಮಿಸುವ ಶಬ್ದಕ್ಕೆ ಲಿಪಿಯ ಅಥವಾ ಶಬ್ದದ ಬೆಲೆಯನ್ನು ನೀಡಲಾಗಿದೆ. ಇದೂ ಸಂಕೇತ ಭಾಷೆ.

ಇದಲ್ಲದೆ ಇನ್ನೊಂದು ಬಗೆಯ ಲಿಪಿಯ ಅನ್ವೇಷಣೆಯನ್ನು ವಿದ್ವಾಂಸರು ಮಾಡಿರುತ್ತಾರೆ. ಅದೆಂದರೆ ಷಾರ್ಟ್ ಹ್ಯಾಂಡ್ ಅಥವಾ ಶೀಘ್ರಲಿಪಿ. ಒಬ್ಬ ವ್ಯಕ್ತಿ ಮಾತನಾಡುವ ಭಾಷೆಯನ್ನು ಈತ ಪದಸಂಕೇತ ಲಿಪಿಗೆ ಇಳಿಸುತ್ತಾನೆ. ಮುಂದೆ ಇದನ್ನು ಲಿಪಿಗೆ ಇಳಿಸಿ ಎಲ್ಲರಿಗೂ ತಿಳಿಸುವಂತೆ ಬರೆಯಲಾಗುತ್ತದೆ. ಇಲ್ಲಿಯೂ ಬಳಸುವ ಗೆರೆಗಳು ಬರವಣಿಗೆಯ ಇನ್ನೊಂದು ರೀತಿಯನ್ನು ಸೂಚಿಸುತ್ತದೆ. ಈ ಬಗೆಯ ಬರವಣಿಗೆಯಲ್ಲಿ ಸರಳ ರೇಖೆಗಳು, ವಕ್ರರೇಖೆ ಗಳು, ಒತ್ತಿ ಬರೆಯುವ ರೇಖೆಗಳು, ತೇಲಿಸಿ ಬರೆಯುವ ರೇಖೆಗಳು, ಚುಕ್ಕೆಗಳು ಪ್ರಧಾನ ಪಾತ್ರವಹಿಸುತ್ತವೆ.

ಗಣಿತದಲ್ಲಿ ಕೂಡುವ, ಕಳೆಯುವ, ಭಾಗಿಸುವ ಮತ್ತು ಗುಣಿಸುವ ಚಿಹ್ನೆ ಗಳನ್ನು ನಾವು ಬಳಸುತ್ತೇವೆ. ಇವು ಎಲ್ಲಾ ಭಾಷೆಗಳಲ್ಲೂ ಸಲ್ಲುವ ಸಂಕೇತ ಗಳಾಗಿವೆ. ಮೊದಲು ನಾವು ಚಿಹ್ನೆಗಳ ಪರಿಚಯ ಮಾಡಿಕೊಳ್ಳಬೇಕು. ಆದರೆ ಒಮ್ಮೆ ಪರಿಚಯ ಮಾಡಿಕೊಂಡ ಮೇಲೆ ಆ ಚಿಹ್ನೆ ಬಳಸಿದ ಎಡೆಯಲ್ಲೆಲ್ಲಾ ನಾವು ಏನು ಮಾಡಬೇಕೆಂಬುದನ್ನು ಸೂಚಿಸುತ್ತದೆ. ಉದಾ: 2+2=4,  2-2=0, 2×2=4, 2÷2=1 ಹೀಗೆ ಈ ಸಂಕೇತಗಳು ಗಣಿತದಲ್ಲಿ ಮಹತ್ತರ ಪಾತ್ರವಹಿಸಿವೆ.

ಕಂಪ್ಯೂಟರ್ ಮುಂದೆ ಕುಳಿತು ನಾವು ಅದರ ಸಂಕೇತ ಭಾಷೆಯ ಅಥವಾ ಲಿಪಿಯನ್ನು ಅದರಲ್ಲಿ ಒತ್ತಿದಾಗ ಮಾತ್ರ ಅದು ತೆರೆದುಕೊಳ್ಳುತ್ತದೆ. ಅನಂತರ ನಮಗೆ ಬೇಕಾದ ಸಂಕೇತ ಲಿಪಿಗಳನ್ನು ಅದರಲ್ಲಿ ಸೇರಿಸಿದಾಗ ನಮಗೆ ಬೇಕಾದ ವಿಷಯಗಳನ್ನು ಪಡೆಯಬಹುದಾಗಿದೆ. ಹೀಗೆ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಂಕೇತವನ್ನು ಬಳಸುತ್ತೇವೆ. ಹಿಂದಿನ ಕಾಗದ ಪತ್ರಗಳಲ್ಲಿ ಅನೇಕರು ತಮ್ಮ ಸಹಿಯ ಬದಲಿಗೆ ನೇಗಿಲು, ಕತ್ತಿ, ಬಾರುಕೋಲು ಮುಂತಾದ ಚಿತ್ರಗಳನ್ನು ಬಿಡಿಸಿರುತ್ತಾರೆ. ಇವು ಇಂತಹವರ ಹಸ್ತಾಕ್ಷರಗಳೆಂದು ಪಕ್ಕದಲ್ಲಿ ಒಕ್ಕಣೆಯಿದ್ದರೂ ಆ ವ್ಯಕ್ತಿ ಹಾಕಿರುವ ತನ್ನ ಸಹಿಯ ಸಂಕೇತಕ್ಕೆ ಅಷ್ಟೇ ಮಹತ್ವವೂ ಇದೆ. ಇತ್ತೀಚೆಗೆ ನಾವು ಹಾಕುವ ಸಹಿಯೂ ತನ್ನ ಮೂಲರೂಪದ ಪದದ ಸಂಕ್ಷಿಪ್ತ ಸಂಕೇತವಾಗಿದೆ. ಇವಕ್ಕೆಲ್ಲ ಒಂದು ಅರ್ಥವಿದೆ. ಆ ಅರ್ಥಕ್ಕೆ ಬೆಲೆ ಇದೆ. ಹೀಗೆ ಸಂಕೇತ ಲಿಪಿ, ಸಹಿಗಳು ತನ್ನದೇ ಆದ ಸ್ಥಾನವನ್ನು ಸಮಾಜದಲ್ಲಿ ಹೊಂದಿವೆ.

ಇವಲ್ಲದೆ ಇನ್ನೊಂದು ಬಗೆಯ ಸಂಕೇತಗಳಿವೆ. ಅವುಗಳಲ್ಲಿ ವಿಜ್ಞಾನದ ಬೆಳವಣಿಗೆಯಾದ ಮೇಲೆ ನಾವು ರೂಢಿಸಿಕೊಂಡವು. ಮೋಟಾರು ದೀಪಗಳು, ಹಗಲು ಹೊತ್ತಿನಲ್ಲಿ ಎದುರು ಬರುವ ಗಾಡಿ ನಮಗೆ ಕಾಣುವುದರಿಂದ ಹಿಂದಿನ ಗಾಡಿಗೆ ನಿಲ್ಲುವಂತೆ ಹಾಗೆಯೇ ಮುಂದಕ್ಕೆ ಹೋಗುವಂತೆ ಕೈ ಮೂಲಕ ಸಂಜ್ಞೆ ಮಾಡುತ್ತೇವೆ. ರಾತ್ರಿ ಹೊತ್ತು ಇದು ಸಾಧ್ಯವಾಗುವುದಿಲ್ಲ.

ಶೀಘ್ರಲಿಪಿ

ಬರೆವಣಿಗಾಗಿ ಲಿಪಿ ಮತ್ತು ಲೇಖನ ವ್ಯವಸ್ಥೆಯನ್ನು ಆಯ್ದುಕೊಂಡರೆ ಎಲ್ಲ ಸಮಸ್ಯೆಗಳೂ ಮುಗಿದಂತಲ್ಲ. ನಮ್ಮ ಹಲವಾರು ಭಾಷಾ ಬಳಕೆಯ ಸಂದರ್ಭಗಳಲ್ಲಿ ಒಬ್ಬರು ಮಾತಾಡುತ್ತಿರುವುದನ್ನು ಕೂಡಲೇ ಬರೆದುಕೊಳ್ಳ ಬೇಕಾಗುತ್ತದೆ. ಕಚೇರಿಗಳಲ್ಲಿ, ಶಾಸನ ಸಭೆಗಳಲ್ಲಿ, ಬಹಿರಂಗ ಸಭೆಗಳಲ್ಲಿ, ವಿಶೇಷ ಅಧಿವೇಶನಗಳಲ್ಲಿ ಮಾತಾಡುತ್ತಿರುವಂತೆಯೇ ಬರೆದು ಕೊಳ್ಳಬೇಕಾದ ಪ್ರಸಂಗಗಳು ಇದ್ದೇ ಇರುತ್ತದೆ. ಆದರೆ ಮಾತಿನ ಸಾಮಾನ್ಯ ವೇಗಕ್ಕೂ ಬರೆವಣಿಗೆಯ ಸಾಮಾನ್ಯ ವೇಗಕ್ಕೂ ಸಾಕಷ್ಟು ಅಂತರವಿರುತ್ತದೆ. ನಮ್ಮ ಎಂದಿನ ಬರೆವಣಿಗೆಯ ಕ್ರಮದಲ್ಲಿ ಆಡಿದ ಮಾತೆಲ್ಲವನ್ನೂ ಕೂಡಲೆ ಬರೆದುಕೊಳ್ಳುವುದು ಅಸಾಧ್ಯ. ಸಮಸ್ಯೆಯನ್ನು ಬಗೆಹರಿಸಲು ಬೇರೊಂದು ಬಗೆಯ ಬರೆವಣಿಗೆಯ ಕ್ರಮವನ್ನು ರೂಪಿಸಬೇಕಾಗುತ್ತದೆ. ಬಳಕೆಯಲ್ಲಿರುವ ಅಂಥದೊಂದು ವ್ಯವಸ್ಥೆಯೇ ಶೀಘ್ರಲಿಪಿ.

ಬಳಕೆಯಲ್ಲಿರುವ ಶೀಘ್ರಲಿಪಿಯನ್ನು ಬಳಸುವವರ ಸಂಖ್ಯೆ ಸೀಮಿತ. ಬಹುಮಟ್ಟಿಗೆ ಶೀಘ್ರಲಿಪಿಯಲ್ಲಿ ಬರೆದುಕೊಳ್ಳುವವರು ಮತ್ತು ಅದನ್ನು ಮತ್ತೆ ಬಳಕೆಯಲ್ಲಿ ಲಿಪಿಗೆ ಪರಿವರ್ತಿಸುವವರು ಒಬ್ಬರೇ ವ್ಯಕ್ತಿಯಾಗಿರು ತ್ತಾರೆ. ತೀರಾ ಅಪರೂಪದ ಪ್ರಸಂಗಗಳನ್ನು ಹೊರತುಪಡಿಸಿದರೆ ಶೀಘ್ರಲಿಪಿಯಲ್ಲಿ ಬರೆದದ್ದನ್ನು ಬೇಗನೇ ಬಳಕೆಯ ಲಿಪಿಗೆ ಇಳಿಸಿಬಿಡು ತ್ತಾರೆ. ಅಂದರೆ ಶೀಘ್ರಲಿಪಿ ಹೆಚ್ಚುಕಾಲ ಉಳಿಯುವುದಿಲ್ಲ; ಹೆಚ್ಚು ಜನ ಅದನ್ನು ಓದುವುದ್ದಿಲ್ಲ.

ಗ್ರೀಕ್‌ನಲ್ಲಿ ಹೀಗೆ ಮಾತಾಡಿದ್ದನ್ನು ಕೂಡಲೇ ಬರೆದುಕೊಳ್ಳಲು ಪ್ರತ್ಯೇಕ ಬರೆವಣಿಗೆ ಕ್ರಮವನ್ನು ರೂಪಿಸಿಕೊಂಡದ್ದಕ್ಕೆ ದಾಖಲೆಗಳಿವೆ. ಆದರೆ ಮಧ್ಯ ಯುಗದಲ್ಲಿ ಇಂಥ ಬರೆವಣಿಗೆಗೂ ಮಾಟಕ್ಕೂ ಸಂಬಂಧವಿದೆಯೆಂದು ತಿಳಿದರು. ಹಾಗಾಗಿ ಶೀಘ್ರಲಿಪಿಗೆ ಆಗ ಮನ್ನಣೆ ಇರಲಿಲ್ಲ. 16ನೇ ಶತಮಾನದಿಂದ ಮತ್ತೆ ಶೀಘ್ರಲಿಪಿಯ ಬಳಕೆ ಮೊದಲಾಯಿತು. ಇಂಗ್ಲಿಶ್ ಭಾಷೆಯ ಮಾತುಗಳನ್ನು ಬರೆಯಲು ಶೀಘ್ರಲಿಪಿ ರೂಪಗಳು ಬಳಕೆಗೆ ಬಂದಿವೆಯಾದರೂ ಜಗತ್ತಿನ ಬಹು ಭಾಷೆಗಳು ತಮತಮಗೆ ಅನುಕೂಲಕರ ವಾದ ಶೀಘ್ರಲಿಪಿ ವ್ಯವಸ್ಥೆಯನ್ನು ಬೆಳಸಿಕೊಂಡಿವೆ. ಕನ್ನಡಕ್ಕೂ ಇಂಥದೊಂದು ವ್ಯವಸ್ಥೆ ರೂಪುಗೊಂಡು ಬಳಕೆಯಲ್ಲಿದೆ.

ಹೀಗಾಗಿ ಸಿಗ್ನಲ್ ಲೈಟುಗಳನ್ನು ಈ ಕಾರ್ಯಕ್ಕೆ ಬಳಸುತ್ತಾರೆ. ಎದುರು ಬರುವ ಗಾಡಿಗೆ ಡಿಪ್-ಡಿಮ್ ಲೈಟು ತೋರಿಸುವ ಮೂಲಕ ಆತನ ದಾರಿ ಸುಗಮಗೊಳಿಸುವುದು; ಹಿಂದೆ ಬರುವ ಗಾಡಿಗೆ ಮುಂದೆ ಹೋಗಲು ಸೂಚನೆ ನೀಡಲು ಹಳದಿ ದೀಪವನ್ನು ಸೂಚಿಸುವುದು; ಈ ಸಾಂಕೇತಿಕ ಭಾಷಾಲಿಪಿ ಯಾಗಿರುತ್ತದೆ. ಈ ಸಂಕೇತಗಳನ್ನು ಕಲಿಯಲು ಯಾರಿಗಾದರೂ ಅಲ್ಪಶ್ರಮ ಸಾಕು. ಕೆಂಪು ಬಟ್ಟೆ ಅಥವಾ ಕೆಂಪು ದೀಪ ಅಪಾಯದ ಸಂಕೇತವೆಂಬುದು ಇಂತಹದೇ ಆಗಿದೆ. ಇತ್ತೀಚೆಗೆ ಸಂಚಾರದ ಒತ್ತಡ ಅಧಿಕವಾದಾಗ ಪಾದಚಾರಿ ಗಳಿಗೂ ವಾಹನಗಳ ಅರ್ಥವಾಗುವಂತಹ ಸಂಕೇತ ಭಾಷಾಲಿಪಿ ಯನ್ನು ಸಂಕೇತಗಳ ಮೂಲಕ ಕೂಡು ರಸ್ತೆಗಳಲ್ಲಿ ತೋರಿಸಿರುತ್ತಾರೆ. ಇಲ್ಲಿ ಪ್ರಧಾನವಾಗಿ ಮೂರು ಬಣ್ಣದ ದೀಪಗಳನ್ನು ಬಳಸಿರುತ್ತಾರೆ. ವಾಹನಗಳಿಗೆ ಕೆಂಪು ನಿಲ್ಲುವ ಸೂಚನೆ, ಹಾಗೆಯೇ ಹಳದಿ ಸಿದ್ಧವಾಗಿದೆಯೆಂದು ಹೇಳುವ ಸೂಚನೆ, ಹಸಿರು ಹೊರಡುವ ಸೂಚನೆಯನ್ನು ನೀಡುತ್ತದೆ. ಜನರಿಗೂ ಇದು ಅನ್ವಯಿಸುತ್ತದೆ. ಇಲ್ಲಿಯೂ ಬಣ್ಣದ ದೀಪಗಳು ಈ ಸಾಂಕೇತಿಕ ಭಾಷಾಲಿಪಿಯನ್ನು ಸೂಚಿಸುತ್ತವೆ. ಬೇರೆ ಗ್ರಹಗಳಿಗೆ ಅಥವಾ ನಕ್ಷತ್ರಗಳಿಗೆ ಉಪಗ್ರಹಗಳನ್ನು ಕಳುಹಿಸುವಾಗ ಸೌರವ್ಯೆಹದ ಚಿತ್ರ ಅದರಲ್ಲಿ ಭೂಮಿಯ ಸ್ಥಾನ ಭೂಮಿಯಲ್ಲಿನ ಪ್ರಮುಖ ಜೀವಿ ಮಾನವ ಗಂಡುಹೆಣ್ಣಿನ ಚಿತ್ರವನ್ನು ರವಾನಿಸಿರುತ್ತಾರೆ. ಹೀಗೆ ವಿಜ್ಞಾನ ಮುಂದುವರಿದಂತೆ ಇಂತಹ ಸಂಕೇತಗಳು ಇನ್ನೂ ಸೃಷ್ಟಿಯಾಗಬಹುದು. ಈ ಸಂಕೇತಗಳ ಭಾವಲಿಪಿಯ ಕಾರ್ಯವನ್ನು ನಿರ್ವಹಿಸುತ್ತವೆ.

ವರ್ಣನಾತ್ಮಕ ಲಿಪಿಗಳ ಆರಂಭ

ಚಿತ್ರಲಿಪಿಗಳು ಭಾವಲಿಪಿಗಳಾಗಿ ಮುಂದೆ ಉಚ್ಚಾರಾಂಶದ ಲಿಪಿಗಳಾಗಿ ಪರಿವರ್ತಿತವಾದವು. ಈ ಹಂತದಲ್ಲಿ ಚಿತ್ರಗಳಿಗೂ ಉಚ್ಚಾರಾಂಶಕ್ಕೂ ಕೊಂಡಿ ತಪ್ಪಿತ್ತು. ಉಚ್ಚಾರಾಂಶವೇ ಮುಂದೆ ವರ್ಣಲಿಪಿಗಳಿಗೆ ಹಾದಿಮಾಡಿ ಕೊಟ್ಟಿತು. ಈಜಿಪ್ತ್, ಯೂಪ್ರೆಟಿಸ್, ಟೈಗ್ರಿಸ್ ನದೀ ಬಯಲಿನ ಜನರು, ಮೆಡಿಟರೇನಿ ಯನ್ ಸಮುದ್ರದ ತೀರದ ಜನರು ವರ್ಣ ಲಿಪಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ವರ್ಣ ಲಿಪಿಗಳು ಚಿತ್ರ ಲಿಪಿಯಿಂದ ಬಂದವೆಂದು ಖಚಿತವಾಗಿ ವಿದ್ವಾಂಸರು ನಿರ್ಧರಿಸಲಾಗಿಲ್ಲ. ಈ ಚಿಹ್ನೆಗಳು ಪದ ಉಚ್ಚಾರದಿಂದ ಎಂದು ವರ್ಣಕ್ಕೆ ತಿರುಗಿದವೆಂಬುದನ್ನು ಹೇಳುವುದೂ ಸುಲಭವಲ್ಲ. ವಿದ್ವಾಂಸರು ವರ್ಣನಾತ್ಮಕ ಲಿಪಿಗಳಿಗೆ ಸಿನಾಯ್ ಪ್ರದೇಶವೇ ಮೂಲವೆಂದರೆ ಕೆಲವರು ಪಾಲಸ್ತೇನ್ ಮತ್ತು ಸಿರಿಯಾ ಎಂದೂ ಭಾವಿಸುತ್ತಾರೆ. ಮೂಲ ಸೆಮೆಟಿಕ್ ಲಿಪಿ ದೊರೆತಿಲ್ಲ. ಪಾಲಸ್ತೇನಿನ ನಗರ ಕ್ವಿರ್ಯಾತ್ ಸೆಫೆರ್‌ಗೆ ಅಕ್ಷರಗಳ ನಗರವೆಂದು ಸಿರಿಯಾದ ನಗರ ಬಿಬ್ಲೋಸ್‌ಗೆ ‘ಪುಸ್ತಕದ ನಗರ’ ಎಂದು ಕರೆಯುವುದನ್ನು ಗಮನಿಸ  ಬಹುದು. ಆದರೂ ಸ್ಪಷ್ಟವಾದ ಆಧಾರಗಳು ಇನ್ನೂ ದೊರೆತಿಲ್ಲ. ಸರಿಸುಮಾರು ಒಂದೇ ಕಾಲದಲ್ಲಿ ಅರೇಬಿಯಾ, ಸಿನಾನೈಟ್, ಕನ್ನಾನೈಟ್, ಪೋನೀಷಿಯಾ, ಮುಂತಾದ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉತ್ತರ ಸೆಮೆಟಿಕ್ ಲಿಪಿಗಳು ಯುರೋಪಿನ ಲಿಪಿಗಳಿಗೆ ಕಾರಣವಾದರೆ ದಕ್ಷಿಣ ಸೆಮೆಟಿಕ್ ಲಿಪಿಯು ಅರೇಬಿಯಾ ಲಿಪಿಗಳಿಗೆ ಮೂಲವಾಗುತ್ತದೆ. ಲಿಪಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹರಡುವುದಕ್ಕೆ ವ್ಯಾಪಾರಿಗಳು ಮೂಲ ಕಾರಣರಾಗಿರುತ್ತಾರೆ.

ಉತ್ತರ ಸೆಮೆಟಿಕ್ ಲಿಪಿಗಳಲ್ಲಿ 22 ಅಕ್ಷರಗಳಿದ್ದು ಅವು ವ್ಯಂಜನ ಗಳಾಗಿದ್ದವು. ಸ್ವರಗಳು ಇರಲಿಲ್ಲ. ಬಲದಿಂದ ಎಡಕ್ಕೆ ಬರೆಯುವ ಲಿಪಿಯಾಗಿತ್ತು. ವ್ಯಂಜನಗಳಲ್ಲಿಯೇ ಕೆಲವನ್ನು ಸ್ವರಗಳಾಗಿ ಬಳಸುತ್ತಿದ್ದರು. ಈ ಪದ್ಧತಿ ಸೆಮೆಟಿಕ್ ಭಾಷೆಗೆ  ಸರಿಹೊಂದುತ್ತಿತ್ತು. ಮುಂದೆ ಗ್ರೀಕರು ಈ ಲಿಪಿಗಳನ್ನು ಪಡೆದುಕೊಂಡರು. ಸೆಮೆಟಿಕ್ ಲಿಪಿಯ ಲಕ್ಷಣವೆಂದರೆ ಪದದ ಹೆಸರಿನ ಮೊದಲ ಅಕ್ಷರವೇ ಮುಖ್ಯವಾಗುತ್ತದೆ. ಉಳಿದವುಗಳಿಗೆ ಬೆಲೆ ಇಲ್ಲ. ಉದಾ: beth=b signal=g etc ಇತ್ಯಾದಿ ವಿದ್ವಾಂಸರು ಈ ಪ್ರಾಚೀನ ಲಿಪಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸುತ್ತಾರೆ.

1. ದಕ್ಷಿಣ ಸೆಮೆಟಿಕ್ ಅಪಾಸ ಬೀಯನ್ ಶಾಖೆ 2. ಕಾನಾನೈಟ್ 3. ಅರಾಮಿಕ್ 4. ಗ್ರೀಕ್ ಲಿಪಿ.

ದಕ್ಷಿಣ ಸೆಮೆಟಿಕ್ ಲಿಪಿಯು ದಕ್ಷಿಣ ಅರೇಬಿಯಾ, ಉತ್ತರ ಅರೇಬಿಯಾ ಇಥೋಪಿಯಾ ಮುಂತಾದ ಶಾಖೆಗಳಿಗೆ ಮೂಲವಾಗಿದೆ. ಕಾನಾನೈಟ್ ಲಿಪಿಯು ಪ್ರಾಚೀನ ಹಿಬ್ರೂ, ಪೊನಿಷಿಯಾ ಈ ಶಾಖೆಗಳಿಗೆ ಜನ್ಮ ನೀಡುತ್ತದೆ. ಪ್ರಾಚೀನ ಹಿಬ್ರೂ ಮತ್ತೆ ಮೂರು ಮುಖ್ಯ ಶಾಖೆಗಳಾಗುತ್ತದೆ. ಅ. ಮೊಯಬೈಟ್ ಇ. ಎಡೊಮೈಟ್ ಉ. ಅಮ್ಮೋನೈಟ್. ಪೊನೀಷಿಯಾ ಲಿಪಿಯು ಪ್ರಾಚೀನ ಪೊನೀಷಿಯಾ ಸ್ಥಳೀಯ ಪೊನೀಷಿಯಾ ಮತ್ತು ಇತರೆಡೆಗೆ ಹರಡಿದ ಪೊನಿಷೀಯಾ ಎಂದು ಮೂರು ಶಾಖೆಗಳಾಗಿವೆ. ಅರಾಮಿಕ್ ಶಾಖೆಯು 1. ಹೀಬ್ರೂ 2. ನಬಟೀಯನ್- ಸಿನಾ ಟಿಕ್-ಅರಬಿಕ್ 3. ಪಲ್ಮಿರೇನ್ 4. ಸಿರಿಯ – ನೆಸ್ಟೋರಿಯನ್ 5. ಮಾಂಡೀಯನ್ 6. ಮನಿಚೀಯನ್ ಎಂಬ ಆರು ಮುಖ್ಯ ಶಾಖೆಗಳಿಗೆ ಜನ್ಮ ನೀಡಿದ್ದು. ಇವೇ ಮುಂದೆ ಸೆಮಿಟೀಕೇತರ (ಮಧ್ಯ ಪ್ರಾಚ್ಯದ) ಭಾಷೆಗಳ ಲಿಪಿಗಳಿಗೆ ಜನ್ಮ ನೀಡಿವೆ. ಈ ಅರಾಮಿಕ್ ಲಿಪಿಯೇ ಭಾರತದಲ್ಲಿ ಬಳಕೆಯಲ್ಲಿದ್ದ ಖರೋಷ್ಠಿಗೆ ಮೂಲ ಲಿಪಿ. ಈ ಖರೋಷ್ಠಿಯು ಬಲಗಡೆಯಿಂದ ಎಡಗಡೆಗೆ ಬರೆಯುವ ಲಿಪಿ. ಅಶೋಕನ ಕಾಲದಿಂದ ಕ್ರಿ.ಶ. 5ನೆಯ ಶತಮಾನದವರೆಗೆ ಭಾರತದಲ್ಲಿ ಬಳಸಿದ್ದಾರೆ.

ಗ್ರೀಕ್ ಲಿಪಿಯೂ ಪೊನೀಷಿಯಾ ಲಿಪಿಯಿಂದ ಬಂದಿದೆ. ಈ ಲಿಪಿಯ ಪ್ರಭಾವದಿಂದ ಸುಮಾರು ಕ್ರಿ.ಪೂ. 10ನೆಯ ಶತಮಾನದಲ್ಲಿ ರೂಪುಗೊಂಡಿರ ಬೇಕು. ಪ್ರಾಚೀನ ಗ್ರೀಕ್ ಲಿಪಿ ಬಲದಿಂದ ಎಡಕ್ಕೆ ಬರೆಯುವ ಲಿಪಿಯಾಗಿತ್ತು. ಮುಂದೆ ಹಾವಿನ ಸುರುಳಿಯಾಕಾರದಲ್ಲಿ ಬರೆಯ ಹತ್ತಿದರು. (ಬಲದಿಂದ ಎಡಕ್ಕೆ, ಮತ್ತೆ ಎಡದಿಂದ ಬಲಕ್ಕೆ) ಕೆಲವೊಮ್ಮೆ ಶಾಸನದ ಕೆಳಭಾಗದಿಂದ ಮೇಲಕ್ಕೆ ಬರೆಯುತ್ತಿದ್ದುದೂ ಉಂಟು. ಸುಮಾರು ಕ್ರಿ.ಪೂ. 500 ರ ವೇಳೆಗೆ ಗ್ರೀಕ್ ಲಿಪಿ ಎಡದಿಂದ ಬಲಕ್ಕೆ ಬರೆಯುವ ಲಿಪಿಯಾಗಿ ಪರಿವರ್ತಿತವಾಯಿತು.

ಗ್ರೀಕರು ತಮ್ಮ ಲಿಪಿಗಳಲ್ಲಿ ಮಾಡಿಕೊಂಡ ಮುಖ್ಯ ಬದಲಾವಣೆಯೆಂದರೆ ಸ್ವರ ಚಿಹ್ನೆಗಳ ಸೇರ್ಪಡೆ. ಈ ಲಿಪಿಯೇ ಮುಂದೆ ಯುರೋಪಿನ ಭಾಷೆಗಳ ಲಿಪಿಗೆ ಮೂಲವಾಗುತ್ತದೆ. ರೋಮನ್ನರು ಗ್ರೀಕ್ ಲಿಪಿಯನ್ನೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಸ್ವೀಕರಿಸಿರುತ್ತಾರೆ.