೧೯೫೩ರ ಜೂನ್ ೨೨ರಂದು ಚಿತ್ರದುರ್ಗದಲ್ಲಿ ಜನಿಸಿದ ಸಂಧ್ಯಾರೆಡ್ಡಿ ಅವರು ಆಯ್ದುಕೊಂಡದ್ದು ವಿಜ್ಞಾನ ವಿಷಯವನ್ನು ೧೯೭೧ರಲ್ಲಿ ಬಿ.ಎಸ್‌ಸಿ. ಪದವಿ ಪೂರೈಸಿದರೂ ತಮ್ಮಲ್ಲಿನ ಸಾಹಿತ್ಯದ ಆಸಕ್ತಿ ಅಭಿರುಚಿಯಿಂದಾಗಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದು ‘ಕನ್ನಡ ಜನಪದ ಕಥೆಗಳು’ ಎಂಬ ಪ್ರೌಢ ಪ್ರಬಂಧಕ್ಕಾಗಿ ಪಿ.ಎಚ್.ಡಿ ಪದವಿ ಪಡೆದರು. ಇವರ ಲೇಖನಿಯಿಂದ ೫೦ಕ್ಕಿಂತ ಹೆಚ್ಚು ಕೃತಿಗಳು ಮೂಡಿ ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿವೆ.

ಜಾನಪದ, ಕಥೆ, ಕವಿತೆ, ಭಾಷಾಂತರ, ಜೀವನ ಚರಿತ್ರೆ, ಸಂಪಾದನೆ ಕ್ಷೇತ್ರದಲ್ಲಿ ಸಂಧ್ಯಾರೆಡ್ಡಿಯವರದು ಸಕ್ರಿಯ ಪಾತ್ರ. ಕರ್ನಾಟಕ ರಾಜ್ಯ ಸರ್ಕಾರಿ ಉದ್ಯಮ ಎನ್.ಜಿ.ಇ.ಎಫ್. ಸಂಸ್ಥೆಯಲ್ಲಿ ಭಾಷಾಂತರ ಅಧಿಕಾರಿಯಾಗಿ ಆಡಳಿತ, ತಾಂತ್ರಿಕ, ವಾಣಿಜ್ಯ ಮತ್ತು ಹಣಕಾಸು ವಿಷಯಗಳಲ್ಲಿ ಕನ್ನಡ ಅನುಷ್ಠಾನ ಹಾಗೂ ಭಾಷಾಂತರಗಳಲ್ಲಿ ೨೦ ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ; ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ, ವಿವಿಧ ರೀತಿಯ ಗೌರವ ಹುದ್ದೆಗಳಲ್ಲಿದ್ದು ಸಾಹಿತ್ಯ, ಸಾಮಾಜಿಕ ಕ್ಷೇತ್ರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ೨೦೦೫ರಿಂದ ೨೦೧೧ರವರೆಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಜಾನಪದ ಮತ್ತು ಭಾಷಾಂತರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಂಧ್ಯಾರೆಡ್ಡಿಯವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನಗಳು, ಮಿಥಿಕ್ ಸೊಸೈಟಿಯಿಂದ ಅತ್ಯುತ್ತಮ ಸಂಶೋಧಕಿ ಪ್ರಶಸ್ತಿ, ಗಾಯನ ಸಮಾಜದ ಬಿ.ಎಸ್. ಚಂದ್ರಕಲಾ ಪ್ರತಿಷ್ಠಾನದಿಂದ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿ. ಜಾನಪದ ಲೋಕದ ಜಾನಪದ ತಜ್ಞೆ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಜೀ.ಶಂ. ಪರಮಶಿವಯ್ಯ ಜಾನಪದ ತಜ್ಞೆ ಪ್ರಶಸ್ತಿ… ಮೊದಲಾದ ಗೌರವಗಳು ಲಭಿಸಿವೆ.