ಇಪ್ಪತ್ತನೇ ಶತಮಾನದ ಅಗ್ರಗಣ್ಯ ಫೋಟೋ ಜರ್ನಲಿಸ್ಟ್ ಎಂದು ಪರಿಗಣಿಸಲ್ಪಟ್ಟ ಅಮೆರಿಕನ್ ಮಹಿಳೆ. ೧೯೨೦-೩೦ರ ದಶಕಗಳ ಅನೇಕ ಛಾಯಾಚಿತ್ರ ಪತ್ರಕರ್ತರಂತೆ ಆಕೆಗೂ ಯಂತ್ರ ಪ್ರಪಂಚ ಹಾಗೂ ತಂತ್ರಜ್ಞಾನದ ಜಗತ್ತುಗಳು ಮೆಚ್ಚುಗೆಯ ವಿಷಯಗಳಾಗಿದ್ದವು. ೧೯೨೭ರಲ್ಲಿ ಆಕೆ ಕ್ಲೀವ್‌ಲ್ಯಾಂಗ್‌ಗೆ ಹೋಗಿ ವಾಸ್ತುಶಿಲ್ಪ ಹಾಗೂ ಕೈಗಾರಿಕಾ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಳು. ಯಂತ್ರಗಳದು ಕೃತ್ರಿಮತೆಯಿಲ್ಲದ ನಿರಾಭರಣ ಸೌಂದರ್ಯ ಎಂದು ಬರ್ಕ್‌ವೈಟ್ ಬಣ್ಣಿಸುತ್ತಾಳೆ. ಟೈಮ್ಸ್ ಮತ್ತು ಲೈಫ್ ಮ್ಯಾಗಜೈನ್‌ಗಳನ್ನು ಒಳಗೊಂಡ ಫಾರ್ಚೂನ್ ಎಂಬ ಹೊಸ ಪತ್ರಿಕಾ ಬಳಗದಲ್ಲಿ ಕೆಲಸಕ್ಕೆ ಸೇರಿದ ಬರ್ಕ್‌ವೈಟ್ ಕೊನೆಯವರೆಗೂ ಈ ಪತ್ರಿಕಾ ಬಳಗದೊಂದಿಗೆ ನಂಟು ಉಳಿಸಿಕೊಂಡಳು. ಮಧ್ಯಪ್ರಾಚ್ಯದ ಕ್ಷಾಮಪೀಡಿತ ಜನರಗಳ ಬವಣೆ ಕುರಿತಂತೆ ಫಾರ್ಚೂನ್ ಪತ್ರಿಕೆಗಾಗಿ ಒಂದು ಸಾಮಾಜಿಕ ಸಾಕ್ಷ್ಯಚಿತ್ರ The Drought…ನ್ನು ತೆಗೆದ ನಂತರ ಆಕೆಯ ವೃತ್ತಿಜೀವನದ ದಿಕ್ಕೆ ಬದಲಾಯಿತು. ಈ ಕ್ಷಾಮಪೀಡಿತರ ಬವಣೆಗಳು ಆಕೆಯನ್ನು ಎಷ್ಟು ಆಳವಾಗಿ ತಟ್ಟಿದವೆಂದರೆ ಅನಂತರದಲ್ಲಿ ಇಂತಹ ಚಿತ್ರಗಳನ್ನು ತೆಗೆಯುವುದಕೇ ಅವಳ ರೂಢಿಯಾಯಿತು.

ಫೋಟೋ ಜರ್ನಲಿಸಂಗೆಂದೇ ಲೈಫ್ ಮ್ಯಾಗಜೈನ್ ಆರಂಭಿಸಿದ ವಿಶೇಷ ವಿಭಾಗಕ್ಕಾಗಿ ಮೊಂಟಾನ ಆಣೆಕಟ್ಟು ಪ್ರಾಜೆಕ್ಟಿನ ಚಿತ್ರಗಳನ್ನು ತೆಗೆಯಲು ಹೋಗಿದ್ದ ಬರ್ಕ್‌ವೈಟ್, ಅಲ್ಲಿ ತನ್ನ ಸ್ವಂತ ಆಸಕ್ತಿಯಿಂದ ಸಮೀಪದ ಗಡಿನಾಡಿನ ಊರುಗಳ ಬದುಕಿನ ಚಿತ್ರಗಳನ್ನು ತೆಗೆದಳು. ಲೇಖಕ ಎರ್ಸ್‌ಕಿನ್ ಕಾಲ್ಡ್‌ವೆಲ್ ಅವರ ಜೊತೆಗೂಡಿ ದಕ್ಷಿಣದ ಶೇರ್‌ಕ್ರಾಪರ್‌ಗಳನ್ನು ಕುರಿತು ಈಕೆ ನಿರ್ಮಿಸಿದ ‘You have seen their face’ ಎಂಬ ಹೆಸರಿನ ಚಿತ್ರ, ಸಾಕ್ಷ್ಯಾಚಿತ್ರಗಳ ಪರಂಪರೆಯಲ್ಲಿ ಮೈಲಿಗಲ್ಲು ಸ್ಥಾಪಿಸಿತು. ನಂತರ ಕಾಲ್ಡ್‌ವೆಲ್ ಅವರನ್ನೇ ವಿವಾಹವಾದ ಬರ್ಕ್‌ವೈಟ್ ಪತಿಯ ಜೊತೆ ಸೇರಿ ಯುದ್ಧಪೂರ್ವ ಜಕೋಸ್ಲಾವಾಕಿಯ ಬಗ್ಗೆ ‘The North of Denube’ ಎಂಬ ಕೃತಿಯನ್ನು ಅನಂತರ ‘Say, is this USA’ ಎಂಬ ಕೃತಿಯನ್ನು ರಚಿಸಿದಳು. ದ್ವೀತಿಯ ಮಹಾಯುದ್ಧದ ಸಂದರ್ಭದಲ್ಲಿ, ಸಂಯುಕ್ತ ಸಂಸ್ಥಾನದ ವಾಯುಸೇನಾಬಲದ ಸಮರ ಬಾತ್ಮೀದಾರಳಾಗಿ ಬರ್ಕ್‌ವೈಟ್ ಕೆಲಸ ಮಾಡಿದಳು. ಎಷೊ ವೇಳೆ ಯುದ್ಧದ ಮಂಚೂಣಿಯಲ್ಲಿ ಜನರ್ ಜಾರ್ಜ್ ಪ್ರಾಟಿನ್ ಹಾಗೂ ತೃತೀಯ ಸೇನೆಯ ಜೊತೆ ನಿಂತು ಜರ್ಮನಿಯ ಕೊನೆಯ ದಿನಗಳಲ್ಲಿ ಚಿತ್ರಿಸಿದಳು. ಮರಣ ಶಿಬಿರಗಳ ಒಳಹೊಕ್ಕು ‘The Living Dead of Buchenwald’ ಎಂಬ ಕೃತಿ ರಚಿಸಿದಳು. ಇದಂತೂ ಛಾಯಾಗ್ರಹಣ ಇತಿಹಾಸದ ಅಮರ ಕೃತಿ ಎನಿಸಿದೆ. ಮಹಾಯುದ್ಧಾನಂತರದ ದಿನಗಳಲ್ಲಿ ಕೊರಿಯನ್ ಯುದ್ಧದ ಛಾಯಾಗ್ರಹಣ ಯೋಜನೆಯನ್ನು ನಿರ್ವಹಿಸುವಾಗ ಗೆರಿಲ್ಲಾ ಹೋರಾಟಕ್ಕಿಂತ ಮಾನವೀಯ ಆಸಕ್ತಿಯ ವಿಷಯಗಳ ಬಗೆಗೆ ಬರ್ಕ್‌ವೈಟ್ ಗಮನ ಕೇಂದ್ರೀಕರಿಸಿದಳು.

೧೯೫೦ರ ದಶಕದ ಮದ್ಯಭಾಗದ ಹೊತ್ತಿಗೆ ಬರ್ಕ್‌ವೈಟ್ ವೃತ್ತಜೀವನದ ಉತ್ತುಂಗ ಶಿಖರ ಮುಟ್ಟಿದಳು. ಅನಂತರ ಪಾರ್ಕಿನ್‌ಸನ್ ಖಾಯಿಲೆಗೆ ತುತ್ತಾದ ಬರ್ಕ್‌ವೈಟ್ ಇತರರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ತನ್ನ ಪುನಃಚೇತರಿಕೆಯ ಅನುಭವಗಳನ್ನು ಬರೆದಳು. ಆಕೆಯ ಆತ್ಮಕಥನ ‘Portrait of myself’ ೧೯೬೩ರಲ್ಲಿ ಪ್ರಕಟವಾಯಿತು.

* * *