ನನಗೆ ಕೊಟ್ಟ ವಿವರಣೆಯ ಪ್ರಕಾರ ಬಹುತೇಕ ಮುಸ್ಲಿಂ ಹುಡುಗಿಯರೆಲ್ಲ ಮದುವೆಗೆ ಮುಂಚೆಯೇ ತಾವು ಮದುವೆಯಾಗಲಿರುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಪಡೆದಿರುತ್ತಾರೆ. ತಮ್ಮ ಮಕ್ಕಳು ಸಂಪೂರ್ಣ ಅಪರಿಚಿತನೊಂದಿಗೆ ಮದುವೆಯಾಗುವ ಸಮಸ್ಯೆ ಬೇಡವೆಂದು ಮದುವೆಗೆ ಒಂದು ತಿಂಗಳು ಮುಂಚೆ ಅನೇಕ ಮುಸ್ಲಿಂ ಕುಟುಂಬಗಳು ಒಂದು ಭೇಟಿ ಏರ್ಪಡಿಸುತ್ತಾರೆ. ಹಿರಿಯ ಹೆಂಗಸರ ಸಮ್ಮುಖದಲ್ಲಿ ಹುಡುಗ ಹುಡುಗಿ ಪರಸ್ಪರ ನೋಡುತ್ತಾರೆ. ಹುಡುಗಿ ಆಗ ಮುಖ ಪರದೆ ಹಾಕಿಕೊಂಡಿರುವುದಿಲ್ಲ. ಹುಡುಗನಿಗೆ ಅವಳು ತೀರಾ ಕಳಪೆ ಅನಿಸಿದರೆ ನಿರಾಕರಿಸಬಹುದು. ಆಕೆಯ ಸಮ್ಮತಿಯಿಲ್ಲದೆ ಮದುವೆ ಮಾಡಕೂಡದು ಎಂದು ಕುರಾನ್‌ನಲ್ಲಿ ಹೇಳಲಾಗಿದೆ. ಇಸ್ಲಾಮಿನ ತತ್ವಗಳಲ್ಲಿರುವ ಯಾವ ಅಂಶವೂ ಕೂಡ ವಧು-ವರರ ಈ ಕ್ಷಿಪ್ರ ಭೇಟಿಯನ್ನು ನಿಷೇಧಿಸುವಂತಿಲ್ಲ. ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಹೈದ್ರಾಬಾದಿನ ಶ್ರೀಮಂತ ಮುಸ್ಲಿಂ ಕುಟುಂಬಗಳಲ್ಲಿರುವಂತೆ ಧರ್ಮಕ್ಕಿಂತ ಸಂಪ್ರದಾಯವೇ ಪ್ರಬಲವಾಗಿದ್ದು ಇಲ್ಲಿ ಈ ರೀತಿಯ ಪರೀಕ್ಷೆಗೆ ಅವಕಾಶವಿರುವುದಿಲ್ಲ. ಒಂದು ವೇಳೆ ನಿಶ್ಚಿತರಾದ ಹುಡುಗ ಹುಡುಗಿ ಸಂಬಂಧಿಕರಾಗಿದ್ದು ಹುಡುಗಿಯನ್ನು ಪರದೆಯೊಳಗಿಡುವವರೆಗೆ ಒಟ್ಟಿಗೇ ಆಡಿಕೊಂಡಿರುವಂಥವರಾಗಿದ್ದರೆ ನವ ವಧೂವರರು ತಮ್ಮ ಮುಖಗಳನ್ನು ಮೊದಲ ಬಾರಿಗೆ ನೋಡುವುದು ವಿವಾಹದ ದಿನದಂದೇ ಹೈದ್ರಾಬಾದಿನಲ್ಲಿ ಇಂತಹ ಒಂದು ನಾಟಕೀಯ ಕ್ಷಣ ಜಲ್ವಾ (ಹೆಣ್ಣು ನೋಡುವುದು) ವನ್ನು ನೋಡುವ ಅವಕಾಶ ಸಿಕ್ಕಿತು. ಜಲ್ವಾದಲ್ಲಿ ಮೊದಲ ಬಾರಿಗೆ ವಧೂವರರು ಪರಸ್ಪರರನ್ನು ನೋಡುತ್ತಾರೆ. ನಾನು ವಧುವಿನ ಶಾಲಾ ಗೆಳತಿಯರ ಜೊತೆಗಿದ್ದ ನಾವೆಲ್ಲರೂ ಪರದೆ ಹಾಕಿದ್ದ ಲಿಮೋಸಿನ್ ಕಾರಿನಲ್ಲಿ ಮದುವೆ ಮನೆಗೆ ಹೋದೆವು. ಹಳದಿಯ ಸಿಲ್ಕ್ ಕರ್ಟನ್‌ಗಳ ಹಿಂದೆ ಇನ್ನೊಬ್ಬರಿಗೆ ಕಾಣದಂತೆ ಕುಳಿತು ನಾವು ಒಬ್ಬೊಬ್ಬರಾಗಿ ಬರುತ್ತಿದ್ದ ಪುರುಷ ಅತಿಥಿಗಳನ್ನು ನೋಡಬಹುದಾಗಿತ್ತು. ಅದು ಸಂಪ್ರದಾಯಬದ್ಧವಾದ ಮದುವೆ. ಗಂಡಸರನ್ನು ತುಂಬಿಕೊಂಡು ಬಂದ ಕಾರುಗಳು ಸೀದಾ ಮುಂಬಾಗಿಲಿಗೇ ಬಂದು ನಿಂತು ಒಳಗಿದ್ದವರನ್ನು ಇಳಿಸುತ್ತಿದ್ದವು. ಆದರೆ ಪರದೆ ಇರುವ ಕಾರುಗಳು ತೋಟದ ಹಿಂಭಾಗಕ್ಕೆ ಹೋಗಿ ಪರದೆ ಇರುವ ಗೇಟಿನ ಬಳಿ ಮಹಿಳೆಯರನ್ನು ಇಳಿಸುತ್ತಿದ್ದವು.

ಒಳಗೆ ಅತ್ಯಂತ ಸುಂದರವಾಗಿ ಅಲಂಕರಿಸಿಕೊಂಡ ಮಹಿಳೆಯರು ನೆಲದ ಮೇಲೆ ಕುಳಿತಿದ್ದರು. ಎಲ್ಲರೂ ಅತ್ಯುತ್ಸಾಹದಿಂದ ಪರಸ್ಪರ ಮಾತಾಡುತ್ತಿದ್ದರು. ಸ್ನೇಹಿತರು ಒಬ್ಬರ ಮೇಲೊಬ್ಬರು ಬಿದ್ದು ಮಾತಾಡುತ್ತಿದ್ದರು. ಉದ್ದುದ್ದ ಇಳಿದುಬಿದ್ದ ಅವರ ದಾವಣಿಗಳು, ದುಪ್ಪಟಗಳು, ತೆಳುವಾದ ಪೊರೆಯಂಥ ಸೆರಗುಗಳು ಇತ್ಯಾದಿ ನೋಡುವಾಗ ನನಗೆ ದೊಡ್ಡ ದೊಡ್ಡ  sea anemone ಗಳಿಂದ ಕೋಣೆಯನ್ನು ಪ್ರವೇಶಿಸಿದಂತೆ ಅನ್ನಿಸಿತು. ಅವರು ಧರಿಸಿದ್ದ ಆಭರಣಗಳು ನಾನು ಊಹಿಸುವುದಕ್ಕೂ ಆಗದಷ್ಟು ಅದ್ಭುತವಾಗಿದ್ದವು. ಹಲವಾರು ಎಳೆಗಳ ಮುತ್ತಿನ ಸರಗಳು ಸೀರೆಯ ಇಡೀ ಮುಂಭಾಗವನ್ನು ಮುಚ್ಚುವಂತಿದ್ದವು. ಮಣಿಕಟ್ಟಿನಿಂದ ಮುಂಗೈ ತುಂಬ ಬಳೆಗಳು, ಕಿವಿಯಿಂದ ತೂಗುತಿದ್ದ ಐದಾರು ಇಂಚು ಉದ್ದದ ಲೋಲಾಕುಗಳು. ಹಣೆಯ ಮೇಲೆ ತಲೆಬೊಟ್ಟು, ವಧುವಿನ ತಾಯಿ ಇಳಿದು ಬಂದು ನನ್ನನ್ನು ಕೋಣೆಗೆ ಕರೆದುಕೊಂಡು ಹೋದಳು. ಹೊಲೆಯುವ ಕೆಂಪು ಹೊದಿಕೆಯ ಹಾಸಿಗೆ, ಕೆಂಪು ಚಿನ್ನದ ಪಟ್ಟೆಗಳ ಸೀರೆಗಳು, ಅವುಗಳ ಮಧ್ಯೆ ಕುಳಿತಿದ್ದ ವಧುವಿನ ಮುಖದ ಪರದೆಯನ್ನು ಎತ್ತಿ ಆಕೆ ತೋರಿಸಿದಳು. ಆ ಪರದೆಯ ಕೆಳಗಿದ್ದುದು ಪುಟ್ಟ ಹುಡುಗಿಯ ಸುಂದರವಾದ ಮುಖ. ಅವಳ ವಯಸ್ಸು ೧೪ ದಾಟಿರಲಾರದು. ಅವಳ ಮೈ ತುಂಬ ಮುತ್ತಿನ ಆಭರಣಗಳು. ಹುಡುಗಿ ಕಣ್ಣು ಮುಚ್ಚಿಕೊಂಡೇ ಇದ್ದಳು. ‘ಏನು ತೊಂದರೆ ಹುಷಾರಿಲ್ಲವೇನು’ ಎಂದು ನಾನು ಕೇಳಿದೆ. ‘ಇಲ್ಲ’ ಇದೆಲ್ಲ ನಡೆಯುವಾಗ ಅವಳು ಕಣ್ಣು ಮುಚ್ಚಿಕೊಂಡೇ ಇರಬೇಕು’ ಎಂದಳು ವಧುವಿನ ತಾಯಿ. ನನಗೆ ಆಶ್ಚರ್ಯವಾಯಿತು. ಆಕೆ ಹೇಳಿದಳು ಇವೆಲ್ಲ ಕೆಲವು ದಿನ ಮಾತ್ರ. ನಮ್ಮ ಕಾಲದಲ್ಲಿ ಮದುವೆಗೆ ವಾರಗಟ್ಟಲೆ ಮುಂಚಿನಿಂದಲೇ ಹೀಗಿರಬೇಕಿತ್ತು. ಈಗ ಹಾಗಿಲ್ಲ. ನಾವು ಸ್ವಲ್ಪ ಆಧುನಿಕ ಜನ. ನಮ್ಮ ಮಗಳು ಸ್ಕೂಲಿಗೆ ಹೋಗುತ್ತಿದ್ದಳು. ಇದೆಲ್ಲ ಪ್ರಾರಂಭವಾಗುವುದಕ್ಕೆ ಮೊದಲು ಅವಳು ಪರೀಕ್ಷೆಗಳು ಮುಗಿಯಲಿ ಎಂದು ನಾವು ಸುಮ್ಮನಿದ್ದೆವು ಎನ್ನುತ್ತಾ ಆಕೆ ಹುಡುಗಿಯ ಮುಖದ ಮೇಲೆ ಪುನಃ ಪರದೆ ಹಾಕಿದಳು.

ನಾವು ಕೆಳಗಿಳಿದು ಬಂದೆವು. ಅಲ್ಲಿ ಹೆಂಗಸರೆಲ್ಲ ತುಂಬ ಕಾತರದಿಂದ ಕಾಯುತ್ತಿದ್ದರು. ಕಾಯಲಾರದೆ ಚಡಪಡಿಸುತ್ತಿದ್ದರು. ವರ ಬರುತ್ತಿದ್ದ ಅವನು ಬಂದಾಗ ಯಾವ ಹೆಂಗಸರ ಮೇಲೂ ಮುಖ ಪರದೆ ಇರಲಿಲ್ಲ. ಬಹುಶಃ ವರನಿಗೆ ತನ್ನ ಬದುಕಿನಲ್ಲಿ ನೂರಾರು ಹೆಂಗಸರ ಮುಖಗಳನ್ನು ಒಟ್ಟಿಗೇ ನೋಡುವ ಏಕೈಕ ಅವಕಾಶ ಇದು. ಅವನು ಈ ದಿನ ಏನು ಬೇಕಾದರೂ ಮಾಡಬಹುದು ಎಂದು ನನ್ನ ಪಕ್ಕದಲ್ಲಿದ್ದ ಹುಡುಗಿ ಹೇಳಿದಳು. ಹೈದ್ರಾಬಾದ್ ಕಡೆ ಒಂದು ಮಾತಿದೆ. ಅವನು ಮದುವೆಯ ರಾತ್ರಿ ಏಳು ಕೊಲೆಗಳನ್ನು ಬೇಕಿದ್ದರೂ ಮಾಡಬಹುದು. ಮರುಕ್ಷಣದಲ್ಲಿ ವರ ಒಳಗೆ ಬಂದಿದ್ದ. ಸುಂದರವಾದ ಮುಖ, ಸುಂದರವಾದ ಮೀಸೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವನ ವಿಶಿಷ್ಟ ಉಡುಪು ನನ್ನ ಗಮನ ಸೆಳೆಯಿತು. ತಲೆಯಿಂದ ಪಾದದವರೆಗೆ ಬಿಗಿಯಾಗಿ ಹೆಣೆದಂತಿದ್ದ ಯುದ್ಧ ಕವಚದ ರೀತಿಯ ಉಡುಪು. ತನ್ನನ್ನು ಹೀಗೆಲ್ಲ ಪೆದ್ದುಪೆದ್ದಾಗಿ ಅಲಂಕರಿಸಿದ್ದಾರೆ ಅಂತ ಅಂದುಕೊಳ್ಳುತ್ತಿರಬಹುದು ಎಂದು ನನ್ನ ಪಕ್ಕದಲ್ಲಿ ಹುಡುಗಿ ಕಿವಿಯಲ್ಲಿ ಹೇಳಿದಳು. ನನ್ನನ್ನು ಹೀಗೆ ಪೆದ್ದುಪೆದ್ದಾಗಿ ಅಲಂಕರಿಸುವುದಕ್ಕೆ ನಾನು ಬಿಡುವುದಿಲ್ಲ ಎಂದು ನನ್ನ ಅಣ್ಣಂದಿರಿಗೆ ಹೇಳಿಬಿಟ್ಟಿದ್ದೇನೆ ಎಂದಳು ಅವಳು. ತನ್ನನ್ನು ನೋಡುತ್ತಿದ್ದ ಹೆಂಗಸರ ಕಡೆಗೆ ಅವನು ಪೆಚ್ಚಾಗಿ ನಗುತ್ತ ಕೋಣೆಯ ಮಧ್ಯದಲ್ಲಿದ್ದ ಮಂಚದ ಹಾಸಿಗೆಯ ಮೇಲೆ ಕುಳಿತ. ಇದೂ ಕೂಡ ಹೊಳೆಯುವ ಕೆಂಪು ಹಾಸಿಗೆ. ಭಾರೀ ಜರತಾರಿಯಲ್ಲಿ ಕೋಳಿಯಂತೆ ಕುಪ್ಪಳಿಸುತ್ತಾ ಬಂದ ವರನ ಚಿಕ್ಕಮ್ಮ. ವರನ ಪಕ್ಕದಲ್ಲಿ ಧೊಪ್ಪೆಂದು ಕುಳಿತಳು. ವಜ್ರ ಖಚಿತವಾದ ಬೀಸಣಿಗೆಯಿಂದ ವರನ ಮುಖಕ್ಕೆ ಗಾಳಿ ಬೀಸುತ್ತಾ ‘ಬೇಗ ಹುಡುಗಿಯನ್ನು ಕರೆದುಕೊಂಡು ಬನ್ನಿ’ ಎಂದು ಕೂಗಿದಳು. ಆದರೂ ವಧು ಬರುವ ಹೊತ್ತಿಗೆ ಸಾಕಷ್ಟು ಕಾಯಬೇಕಾಯಿತು. ಹುಡುಗಿಯನ್ನು ಕರೆತರುತ್ತಿದ್ದವರು ತಮ್ಮ ಒಡವೆ ವಸ್ತ್ರಗಳ ಭಾರದಲ್ಲಿ ತತ್ತರಿಸುತ್ತಿದ್ದರು. ಈಗ ಇನ್ನಷ್ಟು ಚಿನ್ನ, ಕೆಂಪು ಪರದೆಗಳು, ಹೂವಿನ ಹಾರಗಳಲ್ಲಿ ಹುಡುಗಿ ಮುಳುಗಿ ಹೋಗಿದ್ದಳು. ಅವಳನ್ನು ಒಂದು ವಸ್ತುವೇನೋ ಎಂಬಂತೆ ತಂದು ವರನ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು. ವಧೂವರರಿಂದ ಸಕ್ಕರೆಯ ಆಟ ಆಡಿಸಲಾಯಿತು. ಒಂದು ತಟ್ಟೆಯಲ್ಲಿ ಸಕ್ಕರೆಯ ಅಚ್ಚುಗಳಿದ್ದವು. ವಧು ಅದರತ್ತ ನೋಡದೆಯೇ ಒಂದು ಅಚ್ಚನ್ನು ತೆಗೆದುಕೊಂಡಳು ಹುಡುಗ ಅವಳ ಬೆರಳುಗಳ ನಡುವಿನಿಂದ ಅದನ್ನು ಕಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅವನು ಪ್ರತಿಸಲ ಪ್ರಯತ್ನಿಸುವಾಗಲೂ ಅವಳ ಬಂಧುಗಳು ಅವಳ ಕೈಯನ್ನು ಹಿಂದಕ್ಕೆಳೆದುಕೊಳ್ಳುತ್ತಿದ್ದರು. ಹಾಗಾದಾಗ ಹುಡುಗಿಯರು ಸಂತೋಷದಿಂದ ಕೂಗುತ್ತಿದ್ದರು. ಈ ಆಟದಲ್ಲಿ ಸಾಕಷ್ಟು ಸಕ್ಕರೆ ನೆಲದ ಮೇಲೆ ಚೆಲ್ಲಾಡಿತು. ಕೋಣೆಯಲ್ಲಿದ್ದ ಹೆಂಗಸರೆಲ್ಲ ನಕ್ಕೂನಕ್ಕೂ ಸುಸ್ತಾಗಿದ್ದರು. ಕೊನೆಗೊಮ್ಮೆ ವಧುವಿನ ಬೆರಳ ಸಂಧಿಯಿಂದ ಸಕ್ಕರೆ ಅಚ್ಚನ್ನು ತಿನ್ನುವಲ್ಲಿ ವರ ಯಶಸ್ವಿಯಾದ. ಆಗ ಇಡೀ ಕೋಣೆಯಲ್ಲಿ ಸಮಾಧಾನದ ನಿಟ್ಟುಸಿರು ತುಂಬಿತು. ಇದು ಶುಭಸೂಚನೆಯಾಗಿತ್ತು. ಹುಡುಗನಿಗೆ ಸಿಹಿ ಸಿಕ್ಕಿತು.

ಈಗ ಜಲ್ವಾ ಕಾರ್ಯಕ್ರಮ. ಸುಂದರವಾದ ಕೆತ್ತನೆಯ ಕನ್ನಡಿಯನ್ನು ತರಲಾಯಿತು. ಸಾಕಷ್ಟು ಸವೆದುಹೋಗಿದ್ದ ಆ ಕನ್ನಡಿಯನ್ನು ಬಹುಶಃ ತಲೆತಲಾಂತರಗಳಿಂದಲೂ ಈ ಶುಭ ಸಮಾರಂಭಕ್ಕೆ ಬಳಸುತ್ತಿರಬಹುದು. ಅದನ್ನು ವಧೂವರರ ನಡುವೆ ಇಟ್ಟರು. ಎರಡೂ ಕಡೆಯ ಕುಟುಂಬಗಳವರು ಕೈಯಲ್ಲಿ ಹಾರಗಳನ್ನು ಹಿಡಿದು ಆಚೀಚೆ ನಿಂತರು. ಹುಡುಗಿಯ ಮುಖ ಪರದೆಯನ್ನು ತೆಗೆಯಲಿಲ್ಲ. ಆದರೂ ಕೆಂಪುಬಣ್ಣದ ಜರತಾರಿ, ಬಂಗಾರದಲ್ಲಿ ಮುಳುಗಿದ್ದ ಹುಡುಗಿಯ ಮುಖವನ್ನು ಅವನು ಕನ್ನಡಿಯಲ್ಲಿ ನೋಡಲು ಸಾಧ್ಯವಾಗಿರಬಹುದು. ನಾನು ನನ್ನ ಪಕ್ಕದಲ್ಲಿದ್ದ ಭಾರತೀಯ ಸ್ನೇಹಿತೆಯನ್ನು ಕೇಳಿದೆ. ‘ಇವರು ಒಟ್ಟಿಗೆ ಮಲಗುವುದು ಯಾವಾಗ? ಅದಕ್ಕೆ ಅವಳು ‘ಇನ್ನೂ ಮೂರು ದಿನ ಶಾಸ್ತ್ರ ಸಂಪ್ರದಾಯಗಳೆಲ್ಲ ಮುಗಿದ ಮೇಲೆ’ ಎಂದಳು. ಅಲ್ಲಿಯವರೆಗೆ ನಾನು ಕಾಯುವಂತಿರಲಿಲ್ಲ. ಮಾರನೇ ದಿನ ಬೆಳಿಗ್ಗೆಯೇ ನಾನು ವಿಮಾನ ಹತ್ತಬೇಕಿತ್ತು. ಆದರೆ ಅಲ್ಲಿನವರಿಂದ ತಿಳಿದುಬಂದಂತೆ ‘ ಆ ದಿನ’ ವರನೊಂದಿಗೆ ವಧುವಿನ ಮಹಿಳಾ ಸಂಬಂಧಿಕರು ತಾವೂ ಕೂಡ ಬೆಡ್‌ರೂಮಿಗೆ ಹೋಗಿ ಎರಡು ಗಂಟೆ ಕಾಲ ಅವನೊಂದಿಗಿದ್ದು ನಗೆಚಾಟಿಕೆಗಳನ್ನು ಮಾಡುತ್ತಾರೆ. ತಾವು ಮದುವೆಯಾದ ಅಪರಿಚಿತ ಹೆಣ್ಣಿನ ವಿಷಯದಲ್ಲಿ ಅವನಿಗಿರುವ ಬಿಗುವನ್ನು ಕಳೆಯುತ್ತಾರೆ’.

ಹಿಂದೂಗಳೇ ಇರಲಿ ಮುಸ್ಲಿಮರೇ ಇರಲಿ, ಇವರಲ್ಲಿ ವಿವಾಹಗಳನ್ನು ಏರ್ಪಡಿಸುವುದು ತುಂಬ ಕಷ್ಟದ ಹಾಗೂ ಜಟಿಲವಾದ ಕೆಲಸ. ಹಿಂದೂಗಳಿಗೆ ಜ್ಯೋತಿಷ್ಯದ ಕಟ್ಟುಪಾಡಿನ ಜೊತೆಗೆ ಜಾತಿಯ ಕಟ್ಟುಪಾಡೂ ಇರುತ್ತದೆ. ಇದು ಹಿಂದೂಗಳದೇ ಆದ ಸಮಸ್ಯೆ. ಇಸ್ಲಾಮಿನಲ್ಲಿ ಜಾತಿಭೇದಗಳ ಪ್ರಶ್ನೆ ಬರುವುದಿಲ್ಲ. ಭಾರತದಲ್ಲಿ ಹೊಸ ಸಂವಿಧಾನ ರೂಪುಗೊಳ್ಳುವವರೆಗೂ ಬೇರೆ ಬೇರೆ ಜಾತಿಗಳ ನಡುವೆ ವಿವಾಹವು ಕಾನೂನುಬಾಹಿರವಾಗಿತ್ತು. ಆದರೆ ಸ್ವತಂತ್ರ್ಯ ಭಾರತದಲ್ಲಿ ರೂಪುಗೊಂಡಿರುವ ಹೊಸ ಕಾನೂನುಗಳ ಅಡಿಯಲ್ಲಿ ಇಷ್ಟವಿಲ್ಲದಂತಹ ವರನನ್ನು ತಂದೆಯಾದವನು ಒಂದೇ ಜಾತಿಗೆ ಸೇರಿದವನು ಎಂಬ ಆಯ್ಕೆ ಮಾಡಿದ್ದು, ಆ ವರ ಅವಳಿಗೆ ಇಷ್ಟವಿಲ್ಲದಿದ್ದರೆ ಅದನ್ನು ನಿರಾಕರಿಸುವ ಹಾಗೂ ತನಗೆ ಬೇಕಾದಂತಹ ವರನನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಅವಳಿಗಿರುವುದನ್ನು ನ್ಯಾಯಾಲಯಗಳು ಎತ್ತಿ ಹಿಡಿಯುತ್ತವೆ. ಸಂಪ್ರದಾಯಗಳು ಎಷ್ಟೇ ಆಗಲಿ ಕಾನೂನಿಗಿಂತ ಹಿಂದಿಳಿದಿರುತ್ತವೆ. ಈಗ ತನಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಕಾನೂನು ಕೊಟ್ಟಿರುವುದರಿಂದ ಮಹಿಳೆಯ ಸ್ಥಾನಮಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಹೆಂಡತಿಯಾದವಳು ಗಂಡನಿಂದ ಐದು ಮಾರುಗಳಷ್ಟು ದೂರದಲ್ಲಿ ನಡೆದು ಬರುವ ದೃಶ್ಯ ಈಗ ಅಷ್ಟಾಗಿ ಕಾಣುತ್ತಿಲ್ಲ. ಗಂಡನಿಗೆ ಸಂಪೂರ್ಣ ಅಧೀನವಾಗಿರುವ ಹೆಂಡತಿಯರು ಈಗ ಅಪರೂಪವಾಗುತ್ತಿದ್ದಾರೆ. ಹೆಂಡತಿಯನ್ನು ಗಂಡನ ಆಸ್ತಿ ಎಂದು ಭಾವಿಸುವ ಕಾಲ ದೂರವಾಗಿದೆ. ಪ್ರಾಚೀನ ಹಿಂದೂ ಪದ್ಧತಿಯ ಪ್ರಕಾರ ಗಂಡನ ಅನುಮತಿ ಇಲ್ಲದೆ ಹೆಂಡತಿ ಹೊರಗೆ ಕಾಲಿಡುವಂತಿರಲಿಲ್ಲ. ನಗುವುದಿದ್ದರೆ ಸೆರಗನ್ನು ಬಾಯಿಗೆ ಮುಚ್ಚಿಕೊಂಡು ನಗಬೇಕು. ಅವರು ಪರಪುರುಷರೊಂದಿಗೆ ಮಾತಾಡಕೂಡದು. ಆದರೆ ಸಂತ, ಋಷಿ ಅಥವಾ ವೃದ್ಧರೊಂದಿಗೆ ಮಾತಾಡಬಹುದು. ತುಂಬ ಅಪೂರ್ವವಾದದ್ದನ್ನು ಅವಳು ಇಟ್ಟುಕೊಳ್ಳುವಂತಿಲ್ಲ. ಕಣ್ಣಿಗೆ ಕಪ್ಪು ಹಚ್ಚುವಂತಿಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಂತಿಲ್ಲ. ಈ ಪ್ರಾಚೀನ ಮನೋಭಾವದ ತುಣುಕುಗಳು ಈಗಲೂ ಹಿಂದೂ ಹೆಂಗಸರಲ್ಲಿ ಉಳಿದಿವೆ. ಈಗಲೂ ಆಕೆ ಅತ್ಯಂತ ಸಂಕೋಚ, ನಾಚಿಕೆ ಹಾಗೂ ಮೆದು ಪ್ರವೃತ್ತಿಯವಳು. ಆದರೆ ಅವಳ ಮರುಮದುವೆಯ ವಿಷಯ ಮಾತ್ರ ಈಗಲೂ ಸಹ ಸಾಧ್ಯವಾಗಿಲ್ಲ. ಸಂಪ್ರದಾಯನಿಷ್ಠ ಹಿಂದೂ ಧರ್ಮದಲ್ಲಿ ವಿಧವೆಯರನ್ನು ನೋಡುವುದಕ್ಕೂ ಗಂಡನಿರುವ ಹೆಣ್ಣನ್ನು ನೋಡುವುದಕ್ಕೂ ಯಾಕಷ್ಟು ವ್ಯತ್ಯಾಸದ ಮನೋಭಾವವಿದೆ ಎಂದು ನನಗೆ ಅರ್ಥವೇ ಆಗಲಿಲ್ಲ. ಈ ಬಗ್ಗೆ ಒಬ್ಬ ಸ್ವಾಮಿಯವರನ್ನು ಪ್ರಶ್ನಿಸಿದೆ. ಅವರು ಹೇಳಿದರು ‘ವಿವಾಹವೆಂದರೆ ಎರಡು ಆತ್ಮಗಳ ಮಿಲನ. ಉತ್ತಮ ಸಂತಾನವನ್ನು ಪಡೆಯುವುದೇ ಸ್ತ್ರೀಯ ಪರಮೋಚ್ಚ ಸಾಧನೆ’. ನನಗೆ ಈ ವಿಷಯ ತಿಳಿಸಿದ ಗೋಸ್ವಾಮಿ ಗಣೇಶ್‌ದತ್ ಅವರು ದೇಶದ ಭವಿಷ್ಯದ ಏಳಿಗೆಯ ಪರಿಶುದ್ಧತೆಯ ಬಗ್ಗೆ ಬಹಳ ಆಸಕ್ತಿ ವಹಿಸಿದಂತಿತ್ತು. ಆತ ತುಂಬ ಓದಿಕೊಂಡಿದ್ದ ಲಕ್ಷಣವಾಗಿದ್ದ ವ್ಯಕ್ತಿ. ಬಿರ್ಲಾ ದೇವಸ್ಥಾನದಲ್ಲಿ ಮುಖ್ಯ ಪೂಜಾರಿಯಾಗಿದ್ದರು. ಈ ಆಧುನಿಕ ಜಗತ್ತಿನಲ್ಲಿ ಹೆಂಗಸರು ಸಂಪಾದನೆಗಾಗಿ ಹೊರಗೆ ಎಲ್ಲೆಲ್ಲೊ ಹೋಗಿ ದುಡಿಯವುದು ಸ್ವಲ್ಪವೂ ಸರಿಯಲ್ಲ ಎಂಬುದು ಅವರ ಭಾವನೆಯಾಗಿತ್ತು. ‘ಹೆಂಗಸರು ಮನೆಯಲ್ಲಿ ಇದ್ದು ಮಜ್ಜಿಗೆ ಕಡೆಯುವ ಕೆಲಸ ಮಾಡಿಕೊಂಡಿದ್ದಾಗ ಆರೋಗ್ಯ, ನೆಮ್ಮದಿ, ಸಮೃದ್ಧಿಗಳು ಇದ್ದವು. ವಿಧವೆಯನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ. ಆಕೆಯ ಪತಿನಿಷ್ಠೆ ಎಂಥದ್ದೆಂದರೆ ಆಕೆ ಮರುಮದುವೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡುವುದಿಲ್ಲ. ಅವಳನ್ನು ನಾವು ಜಗನ್ಮಾತೆ ಎಂದು ಕರೆಯುತ್ತೇವೆ’ ಎಂದು ಅವರು ಹೇಳಿದರು.

ಮರುಮದುವೆ ಬಯಸುವಂಥವರೂ ಇರುತ್ತಾರೆ ಎಂಬ ಮಾತನ್ನು ಸಂಪೂರ್ಣವಾಗಿ ಅಲ್ಲಗಳೆದರು. ಆದರೆ ಸ್ವತಃ ಬಿರ್ಲಾ ಅವರ ವೃತ್ತಪತ್ರಿಕೆಗಳಲ್ಲೆ ವಿಧವಾವಿವಾಹಕ್ಕಾಗಿ ವಿಧವೆಯರೇ ನೀಡಿದ ವೈವಾಹಿಕ ಜಾಹಿರಾತುಗಳೂ ಪ್ರಕಟವಾಗುತ್ತಿದ್ದವು. ‘ಸುಂದರವಾದ, ಸುಶಿಕ್ಷಿತಳಾದ, ಸಂತಾನವಿಲ್ಲದ ವಿಧವೆಗೆ ಸೂಕ್ತವಾದ ವರ ಬೇಕಾಗಿದ್ದಾನೆ’. ಎಲೆಕ್ಟ್ರಿಕಲ್ ಇಂಜಿನಿಯರ್‌ಗೆ ಒಳ್ಳೆಯ ಸ್ವಭಾವದ, ಮಕ್ಕಳಿಲ್ಲದ ಹಾಗೂ ಭೂಮಿ, ಆಸ್ತಿ ಇರುವ ವಿಧವೆ ಬೇಕಾಗಿದ್ದಾಳೆ. ಜಾತಿ ಯಾವುದಿದ್ದರೂ ಪರವಾಗಿಲ್ಲ. ಜಾತಕ ನೋಡುವ ಅಗತ್ಯವಿಲ್ಲ’. ‘ಮಕ್ಕಳಿಲ್ಲದ ವಿಧುರನಿಗೆ ಕನ್ಯಾವಿಧವೆ ಬೇಕಾಗಿದ್ದಾಳೆ. ಮದುವೆ ಶೀಘ್ರವಾಗಿ ಆಗಬೇಕಾಗಿದೆ. ಫೋಟೋ ಕಳಿಸಬಹುದು’. ಭಾರತದಲ್ಲಿ ಕನ್ಯಾ ವಿಧವೆಯರೆಂದರೆ ನಿಶ್ಚಿತಾರ್ಥವಾದ ನಂತರ ಗಂಡನು ತೀರಿಕೊಂಡಿರುವಂಥ ಬಾಲವಧುಗಳು. ಇಲ್ಲಿ ಪರಸ್ಪರ ಒಪ್ಪಂದದ ಮಾತು ಪೂರ್ವಭಾವೀ ಸಮಾರಂಭ ಇತ್ಯಾದಿಗಳೆಲ್ಲ ನಡೆದಿರುತ್ತವೆ. ಹೆಣ್ಣು ಸೂಕ್ತ ವಯಸ್ಸಿಗೆ ಬರಲಿ ಎಂದು ಕಾಯುತ್ತಿರುತ್ತಾರಷ್ಟೆ.

ಮಹಿಳೆಯರ ವಿಮೋಚನೆಗಾಗಿ ಹೋರಾಡಿದ ಗಾಂಧಿಯವರು ಈ ರೀತಿಯ ವೈರುಧ್ಯ ಜೋಡಿಯ ಮದುವೆಗಳ ಅನಿಷ್ಠ ಪದ್ಧತಿಯ ವಿರುದ್ಧ ಪ್ರಚಾರ ಮಾಡಿದರು. ಇಂತಹ ಅನಿಷ್ಠ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ತಾವು ಸೂಕ್ತವಾದ ವಯಸ್ಸಿಗೆ ಬರುವ ತನಕ ಮದುವೆಯಾಗುವುದಿಲ್ಲ ಎಂದು ಹೇಳುವ ಮತ್ತು ತಮಗೆ ಇಷ್ಟವಾಗದ ವರನನ್ನು ತಿರಸ್ಕರಿಸುವ ಧೈರ್ಯವನ್ನು ಹುಡುಗಿಯರು ಬೆಳೆಸಿಕೊಳ್ಳಬೇಕು ಎಂದು ಗಾಂಧಿ ಹೇಳಿದರು.

ಬಾಲ್ಯವಿವಾಹದ ವಿರುದ್ಧ ಹೋರಾಡುವ ಕೆಲಸವನ್ನು ಶ್ರೀಮತಿ ನಾಯ್ಡು ವಹಿಸಿಕೊಂಡರು. ‘ವಿಧವೆಯರ ಬಾಳಿನಲ್ಲಿ ಸಂತೋಷ ತನ್ನಿ’ ಎಂದು ಅವರು ಪ್ರಚಾರ ಮಾಡಿದರು. ಹೊಸ ಸಂವಿಧಾನದ ಪ್ರಕಾರ ಮದುವೆಗೆ ಮೊದಲು ಹುಡುಗಿಗೆ ೧೪ ವರ್ಷ ಹುಡುಗನಿಗೆ ೧೮ ವರ್ಷ ಆಗಿರಬೇಕು ಎಂದಿತ್ತು. ಅಖಿಲ ಭಾರತ ಮಹಿಳಾ ಸಮಾವೇಶವು ವಿವಾಹವಾಗುವ ಹುಡುಗ-ಹುಡುಗಿಯರ ವಯಸ್ಸನ್ನು ಕ್ರಮವಾಗಿ ೧೬ ಮತ್ತು ೨೧ ವರ್ಷಕ್ಕೆ ಏರಿಸಬೇಕು ಎಂದು ಪ್ರಚಾರ ಮಾಡಿತು. ಅರವತ್ತು ವರ್ಷದ ಮುದುಕನು ಹದಿಹರೆಯದ ಹುಡುಗಿಯರೊಂದಿಗೆ ಮದುವೆಯಾಗುವ ಏರ್ಪಾಡನ್ನು ಮಾಡಿದಾಗ ಆತನ ಮನೆಯ ಮುಂದೆ ಮಹಿಳಾ ಸಂಘದವರು ಬ್ಯಾನರ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದರು. ಭಾರತದಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ ಹೀಗಾಗಿ ತಮ್ಮದೇ ಉಪಜಾತಿಯಲ್ಲಿ ಅವರಿಗೆ ಹೆಣ್ಣು ಸಿಗುವುದು ಕಷ್ಟವಾಗಬಹುದಿತ್ತು. ಇಂತಹ ಮದುವೆಗಳಿಗೆ ಇದು ಕಾರಣವಾಗಿರಬಹುದು. ಈಗ ಈ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದೆ.

ಹೊಸ ಮತ್ತು ಉದಾರವಾದ ಕಾನೂನುಗಳ ಪ್ರಕಾರ ಹಿಂದೂ ಧರ್ಮದಲ್ಲಿ ನಿಷಿದ್ಧವಾಗಿದ್ದ ವಿವಾಹ ವಿಚ್ಛೇದನಕ್ಕೆ ಈಗ ಅನುಮತಿ ಇದೆ. ಕ್ರೌರ್ಯ, ಬುದ್ಧಿವಿಕಲ್ಪತೆ ಬಿಟ್ಟುಹೋಗುವುದು, ಇನ್ನೊಂದು ಧರ್ಮಕ್ಕೆ ಮತಾಂತರ, ಉಪಪತ್ರಿಕೆಯನ್ನು ಹೊಂದಿರುವುದು ಮುಂತಾದ ಕಾರಣಗಳ ಆಧಾರದ ಮೇಲೆ ವಿಚ್ಛೇದನ ಪಡೆಯಬಹುದು. ಎಲ್ಲೊ ಕೆಲವು ಕಡೆಗಳಲ್ಲಿ ಮಾತ್ರ ಏಕಪತ್ನಿತ್ವದ ಶಾಸನ ಜಾರಿಯಲ್ಲಿತ್ತು. ಅದು ಈಗ ರಾಷ್ಟ್ರೀಯ ಕಾನೂನು ಆಗಿದೆ. ಬಹುಪತ್ನಿತ್ವಕ್ಕೆ ಹಿಂದೂ ಕಾನೂನಿನಲ್ಲಿ ಅವಕಾಶವಿದ್ದರೂ ಅದು ಸಾರ್ವತ್ರಿಕವೇನೂ ಆಗಿಲ್ಲ. ಏಕಪತ್ನಿತ್ವವನ್ನು ಕಾನೂನಿನ ವಿಷಯವಾಗಿ ರೂಪಿಸುವಲ್ಲಿ ಬರೋಡ, ಬಾಂಬೆಗಳು ದಾರಿ ತೋರಿಸಿದವು. ಹಿಂದೆ ಮಹಿಳೆಯ ಆಸ್ತಿ, ಹಕ್ಕಿಗೂ ಮದುವೆಗೂ ನಿಕಟವಾದ ಸಂಬಂಧವಿತ್ತು. ಹಿಂದೂ ಕಾನೂನಿನ ಪ್ರಕಾರ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕಿಲ್ಲ. ಅವಳ ಸೋದರರಿಗೆ ಅದು ಸಿಗುತ್ತಿತ್ತು. ಅವಳ ಪಾಲಿನದನ್ನು ಅವಳಿಗೆ ವರದಕ್ಷಿಣೆಯ ರೂಪದಲ್ಲಿ ಕೊಡುತ್ತಿದ್ದರು. ಆಗ ಅದು ಅವಳ ಗಂಡನಿಲ್ಲವೇ ಅವನ ಬಂಧುಗಳ ಪಾಲಾಗುತ್ತಿತ್ತು. ಹೊಸ ಕಾನೂನಿನ ಪ್ರಕಾರ ಮಗಳಿಗೆ ಟ್ರಸ್ಟ್ ರೂಪದಲ್ಲಿ ಆಸ್ತಿ ಸಿಗುತ್ತದೆ. ಅವರು ಮದುವೆಯಾಗಲಿ ಬಿಡಲಿ ೧೮ನೇ ವಯಸ್ಸಿಗೆ ಬಂದಾಗ ಅದು ಅವರ ಪಾಲಿಗೆ ಸಿಗುತ್ತದೆ.

ಜನನ ನಿಯಂತ್ರಣದ ವಿಷಯಕ್ಕೆ ಭಾರತದಲ್ಲಿ ಅನೇಕ ಅಡೆಚಣೆಗಳಿವೆ. ಆದರೂ ಅಮೆರಿಕಾಗೆ ಹೋಲಿಸಿದರೆ ಇಲ್ಲಿ ಅಂತಹ ಪ್ರತಿರೋಧವಿಲ್ಲ ಎನ್ನಬಹುದು. ಜನನ ನಿಯಂತ್ರಣ ಮಾಹಿತಿಯನ್ನು ಪ್ರಚಾರ ಮಾಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿನ ವೈದ್ಯರು ಯಾವುದೇ ರೀತಿಯ ಕಾನೂನು ನಿರ್ಬಂಧಗಳನ್ನು ಹೊಂದಿಲ್ಲ. ಬಡತನ ಮತ್ತು ಅಜ್ಞಾನ, ಸರಿಯಾದ ಶಿಕ್ಷಣ ಸಾಧನಗಳ ಅಲಭ್ಯತೆ – ಇವು ಜನನ ನಿಯಂತ್ರಣ ಕಾರ್ಯಕ್ರಮಕ್ಕೆ ಗಂಭೀರ ಅಡಚಣೆಗಳನ್ನು ಉಂಟು ಮಾಡಿವೆ. ಜನನ ನಿಯಂತ್ರಣವೇ ಭಾರತದ ಸಕಲ ತೊಂದರೆಗಳಿಗೂ ಮದ್ದು ಎಂದು ಪಾಶ್ಚಾತ್ಯ ಓದುಗರು ಭಾವಿಸಿರಬಹುದು. ಆದರೆ ಭಾರತದ ಸಮಸ್ಯೆಗೆ ಅತಿಯಾದ ಜನಸಂಖ್ಯೆಯೇ ಮೂಲ ಎಂದು ಹೇಳಲು ಬರುವುದಿಲ್ಲ. ವಾಸ್ತವವಾಗಿ ಕಳೆದ ವರ್ಷ ವರ್ಷಗಳಲ್ಲಿ ಜನಸಂಖ್ಯೆ ದ್ವಿಗುಣಗೊಂಡಿರುವ ಇಂಗ್ಲೆಂಡ್ ಮತ್ತು ಹಾಲೆಂಡ್‌ಗಳಿಗೆ ಹೋಲಿಸಿದರೆ ಭಾರತದ ಜನಸಂಖ್ಯಾ ಏರಿಕೆ ಮಂದಗತಿಯಲ್ಲಿದೆ. ನೆದರ್‌ಲ್ಯಾಂಡ್ಸ್‌ನಲ್ಲಿ ಪ್ರತಿ ಚದರ ಮೈಲಿಯಲ್ಲಿರುವ ಜನಸಂಖ್ಯಾ ಸಾಂದ್ರತೆ ಭಾರತಕ್ಕಿಂತ ಮೂರುಪಟ್ಟು ಹೆಚ್ಚಿನದು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅದು ಎರಡು ಪಟ್ಟು ಹೆಚ್ಚಾಗಿದೆ. ಈ ಎರಡು ಯೂರೋಪಿಯನ್ ದೇಶಗಳು ಅವುಗಳ ವಿಸ್ತೃತ ಸಾಮ್ರಾಜ್ಯಗಳಿಂದಾಗಿ ಈ ಜನಸಂಖ್ಯಾ ಸಮಸ್ಯೆಯ ಮೇಲೆ ನೇರವಾದ ಹಾಗೂ ವಿನಾಶಕಾರಿಯಾದ ಪರಿಣಾಮ ಬೀರಿವೆ. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ಕೈಗಾರಿಕಾ ಬೆಳವಣಿಗೆ ಅಸಹಜ ತಡೆಯನ್ನು ಎದುರಿಸಬೇಕಾಯಿತು. ಕೈಕಸುಬುದಾರರು ಪುನಃ ಹಳ್ಳಿಗಳಿಗೆ ಹಿಂದಿರುಗಿದರು. ಅವರಿಗೆ ಲಭ್ಯವಿಲ್ಲದ ಏಕೈಕ ಉದ್ಯೋಗವೆಂದರೆ ಕೃಷಿ. ಸ್ವಾತಂತ್ರ್ಯ ಬಂದ ನಂತರ ಭಾರತವು ಕೈಗಾರಿಕಾ ಕ್ಷೇತ್ರದಲ್ಲಿ ತ್ವರಿತ ಬೆಳವಣಿಗೆ ಸಾಧಿಸುವ ಉದ್ದೇಶ ಹೊಂದಿದೆ. ಹಳ್ಳಿಗಳಲ್ಲಿ ವಾಸವಾಗಿರುವ ಜನರನ್ನು ಕೈಗಾರಿಕೆಗಳ ಕಡೆ ಆಕರ್ಷಿಸಿದಾಗ ಕೃಷಿ ಭೂಮಿಯ ಮೇಲೆ ಉಂಟಾಗಿರುವ ಅತಿಯಾದ ಒತ್ತಡವನ್ನು ತಪ್ಪಿಸಬಹುದು ಮತ್ತು ನೀರಾವರಿ ಯೋಜನೆಗಳು ಹಾಗೂ ವೈಜ್ಞಾನಿಕ ಕೃಷಿಯಿಂದ ಭೂಮಿಯ ಇಳುವರಿಯನ್ನು ಹೆಚ್ಚಿಸಲು ಸಾಧ್ಯ.

ಇಷ್ಟಿದ್ದೂ ಜನಸಂಖ್ಯಾ ಏರಿಕೆಯಿಂದಾಗುತ್ತಿರುವ ತೊಂದರೆಗಳನ್ನು ಕಡೆಗಣಿಸುವಂತಿಲ್ಲ. ಭಾರತದಲ್ಲಿ ಪ್ರಜ್ಞಾವಂತರಿಗೆ ಈ ಸಮಸ್ಯೆಯ ಅರಿವಿದೆ. ಅಖಿಲ ಭಾರತ ಮಹಿಳಾ ಸಮಾವೇಶವು ‘ತನ್ನ ಕುಟುಂಬದ ಗಾತ್ರವನ್ನು ನಿರ್ಧರಿಸುವುದು ಮಹಿಳೆಯ ಹಕ್ಕಾಗಬೇಕು. ವಿವಾಹಿತ ಹೆಂಗಸರಿಗೆ ಈ ದಿಸೆಯಲ್ಲಿ ಸರಿಯಾದ ತಿಳುವಳಿಕೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯ’ ಎಂಬ ದಿಟ್ಟ ಹೇಳಿಕೆಯನ್ನು ನೀಡಿತು. ಬಾಂಬೆ ಮುನಿಸಿಪಾಲಿಟಿಯಲ್ಲಿ ಕುಟುಂಬ ಯೋಜನಾ ಕ್ಲಿನಿಕ್ಕುಗಳನ್ನು ಸ್ಥಾಪಿಸಲಾಗುತ್ತಿದೆ. ಮಾರ್ಗರೇಟ್ ಸ್ಯಾಂಗರ್ ಅವರು ೧೯೩೨ರಲ್ಲಿ ಭಾರತಕ್ಕೆ ಬಂದಾಗ ಮುಖ್ಯ ನಗರಗಳಿಗೆಲ್ಲ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು. ಆ ಭಾಷಣಗಳಿಗೆ ಸಹಸ್ರಾರು ಮಂದಿ ಸೇರುತ್ತಿದ್ದರು. ದೇಶದ ಅನೇಕ ಭಾಗಗಳಲ್ಲಿ ಖಾಸಗಿ ಕ್ಲಿನಿಕ್ಕುಗಳು ಆರಂಭವಾದವು. ಹಿಂದೂ ಧರ್ಮದಲ್ಲಿ ಗರ್ಭನಿರೋಧಕ ಬಳಕೆಯ ಬಗ್ಗೆ ಸ್ಪಷ್ಟ ನಿಷೇಧವಿಲ್ಲವಾದರೂ ಆತ್ಮಸಂಯಮದ ಮೂಲಕ ಜನನ ನಿಯಂತ್ರಣ ಸಾಧಿಸಬೇಕು ಎಂಬುದು ಬಹುತೇಕ ಧಾರ್ಮಿಕ ಮುಖಂಡರ ಅಭಿಪ್ರಾಯ. ಗಾಂಧಿಯವರ ಅಭಿಪ್ರಾಯವೂ ಇದೇ ಆಗಿತ್ತು. ಗಾಂಧಿಯವರು ಜನರ ಮೇಲೆ ಅಪಾರ ಪ್ರಭಾವ ಬೀರುವ ಸಾಮರ್ಥ್ಯ ಉಳ್ಳವರು ಎಂಬುದನ್ನು ಶ್ರೀಮತಿ ಸ್ಯಾಂಗರ್ ಅರಿತಿದ್ದರು. ಜನರಿಗೆ ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತಹ ತಿಳುವಳಿಕೆಯನ್ನು ಬೋಧಿಸಿ ಪದೇ ಪದೇ ಮಕ್ಕಳನ್ನು ಹೆರುವ ಸಮಸ್ಯೆಯ ನಿವಾರಣೆಗೆ ಸಹಾಯವಾಗುವಂತೆ ಏನಾದರೂ ಹೇಳಿ ಎಂದು ಗಾಂಧಿಯವರಿಗೆ ಅವರು ಮನವಿ ಮಾಡಿಕೊಂಡರು. ಪುರುಷನು ಸಂತತಿಗಾಗಿ ಮಾತ್ರವೇ ಹೆಂಡತಿಯನ್ನು ಸೇರಬೇಕು. ಆ ಕಾರಣವನ್ನು ಬಿಟ್ಟು ಆತ ಹೆಂಡತಿಯನ್ನು ಬಯಸಿದರೆ ಅದು ಕಾಮವೇ ಹೊರತು ಪ್ರೀತಿಯಿಲ್ಲ. ಪ್ರತಿಯೊಬ್ಬ ಗಂಡ ಹೆಂಡತಿಯೂ ಯಾವ ಉದ್ದೇಶಕ್ಕಾಗಿ ತಾವು ಒಟ್ಟಿಗೆ ಇರಬೇಕೋ ಅದೊಂದು ಕಾರಣಕ್ಕಾಗಿ ಮಾತ್ರವೇ ತಾವು ಒಂದೇ ಹಾಸಿಗೆಯಲ್ಲಿ ಮಲಗಬೇಕು ಎಂಬುದನ್ನು ಸ್ವತಃ ತಾವೇ ನಿರ್ಧರಿಸಿಕೊಳ್ಳಬೇಕು ಎಂದು ಗಾಂಧಿಯವರು ಶ್ರೀಮತಿ ಸ್ಯಾಂಗರ್‌ಗೆ ಹೇಳಿದರು.

‘ಹಾಗಾದರೆ ಲೈಂಗಿಕ ಸಂಭೋಗ ಗಂಡ ಹೆಂಡಿರ ಜೀವಮಾನದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ನಡೆಯಬೇಕೆಂದು ನಿಮ್ಮ ಅಭಿಪಾಯವೇ?’ ಎಂದು ಸ್ಯಾಂಗರ್ ಅವರು ಗಾಂಧಿಯನ್ನು ಕೇಳಿದರು. ಗಾಂಧಿ ವಿಚತಲಿರಾಗಲಿಲ್ಲ. ‘ತನಗೆ ಎಷ್ಟು ಮಕ್ಕಳು ಬೇಕು ಎಂಬುದನ್ನು ನಿರ್ಧರಿಸುವ ಸವಲತ್ತು ಹೆಣ್ಣಿಗೆ ಇರಬೇಕು. ಆದರೆ ಗರ್ಭ ನಿರೋಧಕಗಳ ಬಳಕೆ ಹೆಣ್ತನಕ್ಕೆ ಅವಮಾನ’ ಎಂದರು ಗಾಂಧಿ. ಕಾಮವನ್ನು ಜಯಿಸುವುದು ಸುಲಭವಲ್ಲ. ಅದು ಕತ್ತಿಯ ಅಲುಗಿನ ಮೇಲೆ ನಡೆದಂತೆ. ಸ್ವತಃ ತಾವು ಮಾಡಿದ ಪ್ರಯೋಗಗಳನ್ನು ಗಾಂಧಿ ವಿವರಿಸಿದರು. ‘ಹಣ್ಣು ಮತ್ತು ಕಾಳುಗಳನ್ನೊಳಗೊಡ ಆಹಾರ ಕ್ರಮ ಹೃದಯದ ಕಾಮನೆಗಳನ್ನು ಹತ್ತಿಕ್ಕುವುದಕ್ಕೆ ತುಂಬ ಸಹಾಯಕ. ಹಾಲು ಕಾಮಭಾವನೆಗಳನ್ನು ಉತ್ತೇಜಿಸುತ್ತದೆ. ವೈದ್ಯರ ಸಲಹೆಯ ಮೇರೆಗೆ ನಾನು ಹಾಲು ಕುಡಿಯುತ್ತಿದ್ದಾಗ ಕಾಮೋದ್ರೇಕಗಳನ್ನು ಹತ್ತಿಕ್ಕುವುದಕ್ಕೆ ತುಂಬ ಪ್ರಯಾಸ ಪಡಬೇಕಾಯಿತು. ನಾಲಗೆ ರುಚಿಯ ಹತೋಟಿಗೂ ಸಂಯಮದ ನಡವಳಿಕೆಗೂ ನೇರ ಸಂಬಂಧವಿದೆ’ ಎಂದು ಗಾಂಧಿ ಹೇಳಿದರು. ಗಾಂಧಿಯವರು ಈ ಕಟ್ಟುಪಾಡುಗಳನ್ನು ತಮ್ಮ ಮೇಲೆ ವಿಧಿಸಿಕೊಂಡಿದ್ದರ ಜೊತೆಗೆ ಆಶ್ರಮದ ಎಲ್ಲ ಸದಸ್ಯರು ಮೇಲೂ ವಿಧಿಸಿದ್ದರು. ಜನನ ನಿಯಂತ್ರಣಕ್ಕೆ ಜನರಿಂದ ಒಂದು ರೀತಿಯ ವಿರೋಧವಿದ್ದರೂ ಭಾರತದ ಅನೇಕ ಸ್ಥಳಗಳಲ್ಲಿ ಇದನ್ನು ಸದ್ದಿಲ್ಲದೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿತ್ತು. ಟಾಟಾ ಸ್ಟೀಲ್ ವರ್ಕ್ಸ್‌ನ ಔಷಧಾಲಯಗಳಲ್ಲಿ ತಾಯಂದಿರಿಗೆ ಈ ಬಗ್ಗೆ ಅಗತ್ಯವಾದ ತಿಳುವಳಿಕೆಯನ್ನು ಸಾಧನಗಳನ್ನು ನೀಡಬೇಕೆಂದು ದಾದಿಯರಿಗೆ ಹಾಗೂ ವೈದ್ಯರಿಗೆ ನಿರ್ದೇಶನ ನೀಡಲಾಗಿತ್ತು. ಟಾಟಾ ಸ್ಥಾವರಗಳವರು ಪ್ರಸೂತಿ ವಾರ್ಡುಗಳ ವ್ಯವಸ್ಥೆ ಮಾಡಿದ್ದರು. ಶಿಶುಪಾಲನೆಯ ಬಗ್ಗೆ ದಾದಿಯರು ಮನೆಮನೆಗೆ ಹೋಗಿ ತಾಯಂದಿರಿಗೆ ತಿಳುವಳಿಕೆ, ಸಹಾಯ ನೀಡುವ ವ್ಯವಸ್ಥೆ ಇತ್ತು. ಗರ್ಭವತಿಯಾಗಿ ವಾರಕ್ಕೊಂದು ತರಗತಿಯೂ ನಡೆಯುತ್ತಿತ್ತು.

ಭಾರತದಲ್ಲಿ ನರ್ಸುಗಳ ಕೊರತೆ ಎದ್ದು ಕಾಣುತ್ತದೆ. ಇದುವರೆಗೆ ಜನರು ನರ್ಸಿಂಗ್ ವೃತ್ತಿಯನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಈಗ ಸಾರ್ವಜನಿಕ ಅಭಿಪ್ರಾಯ ಬದಲಾಗಿದೆ. ನರ್ಸುಗಳು ಮತ್ತು ವೈದ್ಯರ ಅವಶ್ಯಕತೆ ಪೂರೈಸಲು ಸರ್ಕಾರ ಹತ್ತು ವರ್ಷಗಳ ಯೋಜನೆ ರೂಪಿಸಿದೆ. ಕ್ಷಯ, ಕಾಲರಾ, ಮಲೇರಿಯಾ ನಿಯಂತ್ರಣಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸುಮಾರು ಇನ್ನೂರು ವರ್ಷಗಳ ವಿದೇಶೀ ಆಡಳಿತದಲ್ಲಿ ಸಂಪೂರ್ಣ ಕಡೆಗಣಿಸಲಾಗಿದ್ದ ರೈತ ವರ್ಗದವರಿಗೂ ಈಗ ಆರೋಗ್ಯ ಸೇವೆಗಳು ತಲುಪುತ್ತಿವೆ. ಇದಕ್ಕೆ ಪೂರ್ವಭಾವಿ ಕ್ರಮವಾಗಿ ವೈದ್ಯರು, ನರ್ಸುಗಳು ಹಾಗೂ ಸ್ಟೆರಿಲೈಜೇಶನ್ ಸೌಲಭ್ಯಗಳನ್ನು ವೈದ್ಯಕೀಯ ವ್ಯಾನುಗಳು ಹಳ್ಳಿಹಳ್ಳಿಗೂ ಹೋಗಿ ಗ್ರಾಮೀಣ ಜನರಿಗೆ ಸೇವೆ ಒದಗಿಸುತ್ತಿವೆ. ಮೆಡಿಕಲ್ ವ್ಯಾನ್ ಬಂದಿರುವ ವಿಷಯವನ್ನು ತಮಟೆ ಬಾರಿಸಿ ಸಾರುತ್ತಾರೆ. ವಿವಿಧ ಗ್ರಾಮ, ಊರುಗಳಲ್ಲಿ ಪ್ರಸೂತಿ ಗೃಹಗಳು ತಲೆ ಎತ್ತುತ್ತಿವೆ.

ಮೈಸೂರು ರಾಜ್ಯದ ಒಂದು ಚಿಕ್ಕ ಊರಾದ ಚಿತ್ರದುರ್ಗ ಎಂಬಲ್ಲಿಗೆ ನಾನು ಹೋದೆ. ಅಲ್ಲಿ ರಾಜ್ಯದ ಪ್ರಜಾಪಕ್ಷದಿಂದ ಸ್ಥಾಪಿತವಾದ ಪ್ರಸೂತಿ ಗೃಹಕ್ಕೆ ಭೇಟಿ ನೀಡಿದೆ. ಅದನ್ನು ಬಳ್ಳಾರಿ ಸಿದ್ದಮ್ಮ ಎಂಬ ಹೆಸರಿನ ಹಿರಿಯ ಮಹಿಳೆ ನೋಡಿಕೊಳ್ಳುತ್ತಿದ್ದರು.

ಬಳ್ಳಾರಿ ಸಿದ್ದಮ್ಮನವರ ಪುಟ್ಟ ಆಸ್ಪತ್ರೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇದ್ದು ಜನರಿಗೆ ಅಮೂಲ್ಯ ಸೇವೆ ಒದಗಿಸುತ್ತಿತ್ತು. ಯಾಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಮಗುವನ್ನು ಹೆರುವ ಹೆಂಗಸಿನ ಕಷ್ಟಗಳೇ ಒಂದು ವಿಧ. ಆಕೆ ಯಾರೂ ಉಪಯೋಗಿಸಿದಂತಹ ಒಂದು ಪ್ರತ್ಯೇಕ ಕೋಣೆಯಲ್ಲಿ ವಾಸಿಸಬೇಕಾಗುತ್ತದೆ. ಮಗುವನ್ನು ಹೆತ್ತಾಗ ಮತ್ತು ಮಾಸಿಕ ಚಕ್ರದ ಸಮಯದಲ್ಲಿ ಹೆಣ್ಣನ್ನು ಇಲ್ಲಿ ಅಶುದ್ಧ ಎಂದು ಭಾವಿಸುತ್ತಾರೆ. ಆಕೆ ಇತರ ಕೋಣೆಗಳಿಗೆ ಹೋಗುವಂತಿಲ್ಲ. ಮಗುವಿನ ಜನನಕ್ಕೆ ಸಂಬಂಧಿಸಿದ ಅನೇಕ ಪುರಾತನ ಪದ್ಧತಿಗಳನ್ನು ನಿವಾರಿಸುವುದಕ್ಕೆ ಬಳ್ಳಾರಿ ಸಿದ್ದಮ್ಮನವರ ಶುಶ್ರೂಶಾಲಯ ನೆರವಾಗಿದೆ. ಈ ಶುಶ್ರೂಶಾಲಯಕ್ಕೆ ಭೇಟಿ ನೀಡಿದ ನಂತರ ನನ್ನ ಸ್ನಾನ ಮತ್ತು ಊಟಕ್ಕಾಗಿ ಬಳ್ಳಾರಿ ಸಿದ್ದಮ್ಮನವರ ಮನೆಗೆ ಕರೆದುಕೊಂಡು ಹೋದರು. ಇಲ್ಲಿ ಇನ್ನೊಂದು ರೀತಿಯ ಪುರಾತನ ಭಾರತೀಯ ಪದ್ಧತಿಗಳ ಗೊಂದಲದಲ್ಲಿ ನಾನು ಸಿಕ್ಕಿಕೊಂಡೆ.

ಬಳ್ಳಾರಿ ಸಿದ್ದಮ್ಮನವರ ಮನೆಯ ಬಾತ್‌ರೂಮೂ ಸಹ ಇಲ್ಲಿನ ಯಾವುದೇ ಮಧ್ಯಮ ವರ್ಗದವರ ಅಥವಾ ನಗರವಾಸಿಗಳ ಮನೆಗಳಲ್ಲಿರುವಂಥದ್ದೇ ಆಗಿತ್ತು ಅನ್ನಿಸುತ್ತದೆ. ಈ ಬಾತ್‌ರೂಮಿನೊಳಗೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಟ್ಟರು. ಅಲ್ಲಿ ಯಾವುದು ಏನು ಎಂದು ತಿಳಿಯದೆ ನಾನು ತಬ್ಬಿಬ್ಬಾದೆ. ಗೋಡೆಯ ಬದಿಯಲ್ಲಿ ಒಂದು ದೊಡ್ಡ ಕಾಂಕ್ರೀಟು ತೊಟ್ಟಿ ಇತ್ತು. ತುಂಬಾ ನೀರು ತುಂಬಿದ್ದ ಅದು ನಮ್ಮ ಬಾತ್ ಟಬ್ಬನ್ನು ಹೆಚ್ಚೂ ಕಡಿಮೆ ಹೋಲುತ್ತಿತ್ತು. ಆದರೆ ಅದರ ತಳಕಾಣುತ್ತಿರಲಿಲ್ಲವಾದ್ದರಿಂದ ಅದರಲ್ಲಿ ಇಳಿಯುವುದಕ್ಕೆ ಬಳಸುತ್ತಾರೆ ಎಂದು ಆಮೇಲೆ ಗೊತ್ತಾಯಿತು. ನೆಲದ ಮೇಲೆ ಚೆನ್ನಾಗಿ ಹೊಳೆಯುತ್ತಿದ್ದ ಹಿತ್ತಾಳೆಯ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿತ್ತು. ಕೆಲವು ಪಾತ್ರೆಗಳು ಅತ್ತಿತ್ತ ಜರುಗಿಸಲೂ ಭಾರವಾಗಿದ್ದವು. ಇಡೀ ನೆಲದ ಒಂದು ಕಡೆ ಇಳಿ ಜಾರಾಗುತ್ತಾ ಅದರ ತುದಿಯಲ್ಲಿ ನೀರು ನಿಲ್ಲುವಂಥ ಒಂದು ಗುಂಡಿ ಮತ್ತು ಮಧ್ಯಭಾಗದಲ್ಲಿ ಎರಡು ಮೆಟ್ಟಿಲುಗಳಿದ್ದು ಅವು ಯಾತಕ್ಕೆ ಅಂತ ಗೊತ್ತಾಗಲಿಲ್ಲ. ಇಂತಹ ಪರಿಸರದಲ್ಲಿ ನಾನು ಮೊದಲ ಸಲ ಸ್ನಾನ ಮಾಡುವ ಸಂದರ್ಭ ಬಂದಾಗ ನನಗೆ ಇನ್ನೇನು ಮಾಡಲೂ ತೋಚಲಿಲ್ಲ. ಒಂದು ದೊಡ್ಡ ಹಿತ್ತಾಳೆ ಪಾತ್ರೆಯಲ್ಲಿ ನನ್ನ ಹ್ಯಾಂಡ್ ಕರ್ಚೀಫ್ ಅದ್ದಿ ತಲೆಯಿಂದ ಕಾಲಿನವರೆಗೂ ಉಜ್ಜಿಕೊಂಡೆ. ಆದರೆ ಅದು ನನಗೆ ಸಮಾಧಾನವಾಗಲಿಲ್ಲ. ಅಂತೂ ಕ್ರಮೇಣ ಸ್ನಾನ ಮಾಡುವ ಭಾರತೀಯ ವಿಧಾನದಲ್ಲಿ ನಾನು ಪರಿಣತಿ ಗಳಿಸಿದೆ. ಅಲ್ಲಿದ್ದ ಪಾತ್ರೆಗಳಲ್ಲಿ ಅತ್ಯಂತ ಚಿಕ್ಕದಾದ ಪಾತ್ರೆ ಯಾವುದೋ ಅದನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿಕೊಂಡು ವಿಗ್ರಹದಂತೆ ನಿಂತು ತಲೆಯ ಮೇಲಿಂದ ಫೌಂಟನ್ನಿನಂತೆ ನನ್ನ ಮೇಲೆ ಸುರಿದುಕೊಳ್ಳಬೇಕು ಎಂಬುದನ್ನು ಕಲಿತೆ. ಬಾತ್‌ಟಬ್ಬಿನಲ್ಲಿ ಕುಳಿತು ಸ್ನಾನ ಮಾಡುವುದನ್ನು ಭಾರತೀಯರು ಕೊಳಕು, ಅನಾಗರಿಕತನ ಎಂದು ಭಾವಿಸುತ್ತಾರೆ. ಅವರ ಪ್ರಕಾರ ಬಾತ್‌ಟಬ್ಬಿನ ನೀರಿನಲ್ಲಿ ಕುಳಿತುಕೊಂಡು ನೀರನ್ನು ಹಾಕಿಕೊಂಡಾಗ ಆ ನೀರಿನ ಕೊಳೆ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

ಬಳ್ಳಾರಿ ಸಿದ್ದಮ್ಮನವರ ಮನೆಯಲ್ಲಿ ರಾತ್ರಿ ಊಟ ಮಾಡಿದೆ. ಅದು ಅಪ್ಪಟ ದಕ್ಷಿಣ ಭಾರತೀಯ ಊಟ. ಒಂದಕ್ಕಿಂತ ಒಂದು ಖಾರವಾದ ಸಾರುಗಳು, ಪಲ್ಯಗಳು. ತಟ್ಟೆಯ ಮಧ್ಯೆ ಒಂದು ಸಣ್ಣಗುಡ್ಡದಂತೆ ಹಾಕಿದ ಅನ್ನ ಸುತ್ತ ಖಾರದ ಆವರಣ. ನಾನು ಅನ್ನದ ರಾಶಿಯನ್ನು ಮಾತ್ರ ತಿನ್ನುತ್ತಿದ್ದಂತೆ ನನ್ನ ಅತಿಥೇಯಳು ಮತ್ತಷ್ಟು ಮತ್ತಷ್ಟು ಹಾಕಿ ಅದನ್ನು ಪೇರಿಸುತ್ತಿದ್ದಳು. ಅದಾಗುವಷ್ಟರಲ್ಲೇ ಹೆಣ್ಣಾಳುಗಳು ಬಂದು ಬೇಳೆಯ ಸಾರೂ, ಪಲ್ಯದ, ಚಟ್ನಿಗಳನ್ನು ಬಡಿಸುತ್ತಿದ್ದರು. ಇದೆಲ್ಲ ಒಂದು ರಿಲೇ ಓಟದಂತೆ ನಡೆದಿತ್ತು. ಕೆಲವು ಸ್ಥಳಗಳಲ್ಲಿ ಅನ್ನಕ್ಕೆ ಬದಲು ಯಾವುದೋ ಧಾನ್ಯದ ಪ್ರದೇಶಕ್ಕೆ ಭಿನ್ನ. ಆದರೆ ಅದರ ಪರಿಣಾಮ ಮಾತ್ರ ಎಲ್ಲ ಕಡೆಯೂ ಒಂದೇ. ಹೊಟ್ಟೆಯಲ್ಲಿ ಉರಿಯ ಜ್ವಾಲೆಗಳು ಎದ್ದು ಸುಡುತ್ತ ಇನ್ನೇನು ಇನ್ನೊಂದು ತುತ್ತು ಆಹಾರವನ್ನೂ ಬಾಯಿರುಚಿ ನೋಡುವುದಾಗಲೀ, ನುಂಗುವುದಾಗಲೀ ಸಾಧ್ಯವಿಲ್ಲ ಎಂದಾಗುವ ಹೊತ್ತಿಗೆ ನಿಮ್ಮ ತಟ್ಟೆಯಲ್ಲಿ ಉಳಿದಿರುವ ಅನ್ನದ ರಾಶಿಯ ಮೇಲೆ ಒಂದು ಬಟ್ಟಲು ಮಜ್ಜಿಗೆ ಅಥವಾ ಮೊಸರನ್ನು ಸುರಿಯುತ್ತಾರೆ. ಅದನ್ನು ನೀವು ಕಬಳಿಸುವ ಹೊತ್ತಿಗೆ ಮ್ಯಾಜಿಕ್ಕಿನಂತೆ ನಿಮ್ಮ ಹೊಟ್ಟೆ ತಣ್ಣಗಾಗಿರುತ್ತದೆ.

ಒಂದಾದ ಮೇಲೆ ಒಂದರಂತೆ ಬಡಿಸಲಾಗುವ ಈ ವಿವಿಧ ಪರಿಮಳಗಳ ಆಹಾರ ಕ್ರಮ ನನಗೆ ಅಭ್ಯಾಸವಾಯಿತು. ಆದರೂ ಬೆಳಗಿನ ತಿಂಡಿಗೆ ಕೊಡುತ್ತಿದ್ದ ಕೆಲವೊಂದು ‘ಸುಡುವ ಮಿಶ್ರಣ’ ಗಳು ನನಗೆ ಅಭ್ಯಾಸವಾಗದೇ ಇಲ್ಲ. ನಾನು ಎಷ್ಟು ಮೊಂಡು ಹಿಡಿದು ಪ್ರಯತ್ನಿಸಿದರೂ ಕರಗತವಾಗದ ಒಂದು ಅಂಶವೆಂದರೆ ನೆಲದ ಮೇಲೆ ಕುಳಿತು ಬೆರಳುಗಳಿಂದ ಊಟ ಮಾಡುವುದು. ತಟ್ಟೆಯಲ್ಲಿ ನೀರು ನೀರಾಗಿದ್ದ ಸಾರಿನಲ್ಲಿ ತೇಲುತ್ತಿದ್ದ ಅನ್ನದ ಕಾಳುಗಳನ್ನು ಕೈ ಬೆರಳುಗಳಿಂದ ಚಮತ್ಕಾರಿಕವಾಗಿ ತೆಗೆದುಕೊಳ್ಳವುದು. ಮಗುವಾಗಿದ್ದಾಗಿನಿಂದಲೇ ಕಲಿತುಕೊಳ್ಳಬೇಕಾದ ಕಲೆ ಎಂದು ನಾನು ನಿರ್ಧರಿಸಿದೆ. ಕೊನೆಗೂ ನಾನು ಇಲ್ಲಿನವರಂತೆ ಬೆರಳುಗಳಿಂದ ಊಟ ಮಾಡುವುದನ್ನು ಬಿಟ್ಟುಕೊಟ್ಟೆ. ಎಲ್ಲಿಗೆ ಹೋದರೂ ನನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ಒಂದು ಸ್ಪೂನ್ ಮತ್ತು ಫೋರ್ಕ್ ಇಟ್ಟುಕೊಂಡೆ ಹೋಗುವುದನ್ನು ಆಭ್ಯಾಸ ಮಾಡಿಕೊಂಡೆ. ಊಟದ ಸಮಯಕ್ಕೆ ಅವುಗಳನ್ನು ಬ್ಯಾಗಿನಿಂದ ಈಚೆ ತೆಗೆಯುತ್ತಿದ್ದೆ. ನಾನು ಸ್ಪೂನು ಫೋರ್ಕುಗಳಿಂದ ತಿನ್ನುವುದನ್ನು ಅತಿಥೇಯ ಜನರು ತುಂಬ ಆಶ್ಚರ್ಯದಿಂದ ನೋಡುತ್ತ ಕೂರುತ್ತಿದ್ದರು.

ಚಕ್ಕಮಕ್ಕಳೆ ಹಾಕಿಕೊಂಡು ಕೂರುವುದು ನೋಡುವುದಕ್ಕೆ ತುಂಬ ಸಲೀಸು. ಸುಲಭ ಅನ್ನಿಸುತ್ತದೆ. ಆದರೆ ಈಗ ಕೂತುಕೊಂಡ ಸ್ವಲ್ಪ ಹೊತ್ತಿಗೆಲ್ಲ ಕಾಲುನೋವು ತೊಡಗುತ್ತದೆ. ಈ ಕಲೆಯಲ್ಲಿಯೂ ಸಹ ಪಶ್ಚಿಮವನ್ನು ಪೂರ್ವ ಮೀರಿಸಿದೆ ಎಂದು ನಿಮಗೆ ಗೊತ್ತಾಗುತ್ತದೆ. ಭಾರತದ ಬಹುತೇಕ ಮನೆಗಳಲ್ಲಿ ಮತ್ತು ಸಾಕಷ್ಟು ಅನುಕೂಲವಂತರಾದ ಮನೆಗಳಲ್ಲಿಯೂ ಪೀಠೋಪಕರಣಗಳ ಸಂಖ್ಯೆ ತುಂಬ ಕಡಿಮೆ. ನೆಲದ ಮೇಲೆ ದಪ್ಪನೆಯ ಒಂದು ಹಾಸಿನಂಥದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಅದರ ಸೌಜನ್ಯಪೂರಿತ ವ್ಯಕ್ತಿತ್ವದ ನನ್ನ ಅತಿಥೇಯ ಊಟ ಮಾಡುವಾಗ ನನಗೆ ಅನುಕೂಲವಾಗುವಂತೆ ಏನೋ ಒಂದು ಎತ್ತರದ ವ್ಯವಸ್ಥೆ ಮಾಡುತ್ತಿದ್ದರು. ಶಾಲೆಯಲ್ಲಿ ಚಿಕ್ಕಮಕ್ಕಳ ಮಧ್ಯೆ ಎತ್ತರದಲ್ಲಿ ಕುಳಿತ ಟೀಚರ್‌ನಂತೆ ನಾನು ಅವರ ಮಧ್ಯೆ ಕುಳಿತಿರುತ್ತಿದ್ದೆ. ಈ ಜನ ಮಾತ್ರ ಆರಾಮವಾಗಿ ಚಕ್ಕಮಕ್ಕಳ ಹಾಕಿಕೊಂಡು ನೆಲದ ಮೇಲೆ ಕೂರುತ್ತಿದ್ದರು. ಅವರ ಸಣಕಲು ಕೈಗಳು ಚಪ್ಪಟೆಯಾದ ತಟ್ಟೆಗಳ ಮೇಲೆ ಹರಿದಾಡುವುದು ಚಿಕ್ಕಮಕ್ಕಳು ಬೆರಳಿನಿಂದ ಚಿತ್ರಕಲೆ ಮಾಡುವಂತೆ ತೋರುತ್ತಿತ್ತು.

ಒಂದು ಸಲ ಬಾಂಬೆಯ ಮಲಬಾರ್ ಹಿಲ್‌ನ ಅಪಾರ್ಟ್‌ಮೆಂಟಿನಲ್ಲಿ ನಾನು ಭಾರತೀಯ ವ್ಯಾಪರೋದ್ಯಮಿಯವರೊಂದಿಗೆ ಕುಳಿತು ಊಟ ಮಾಡುತ್ತಿದ್ದೆ. ಆತ ನಾನು ಭೇಟಿ ನೀಡಿದ ಬೆವೆರೆಲೆ ಹಿಲ್ಸ್ ಹಾಗೂ ನ್ಯೂಯಾರ್ಕಿನಲ್ಲಿ ನೋಡಿದ ಮನೆಗಳ ರೀತಿಯಲ್ಲಿ ತನ್ನ ಮನೆಯಲ್ಲಿ ಸಜ್ಜುಗೊಳಿಸಿದ್ದ. ಅವರ ಮನೆಯಲ್ಲಿ ಪೀಠೋಪಕರಣಗಳನ್ನು ಇಟ್ಟಿದ್ದ ರೀತಿಯಂತೂ ಹಾಲಿವುಡ್ ಸೆಟ್‌ನಂತೆ ಇತ್ತು. ನಾವು ಟೇಬಲಿನ ಸುತ್ತ ಕುಳಿತು ಸಮುದ್ರ ತೀರವನ್ನು ನೋಡುತ್ತಾ ಊಟ ಮಾಡುತ್ತಿದ್ದೆವು. ಆಹಾರದ ಸ್ವಲ್ಪ ಭಾಗ ಭಾರತೀಯ. ಸ್ವಲ್ಪ ಭಾಗ ಯೂರೋಪಿಯನ್. ಅತ್ಯಂತ ಸುಂದರವಾಗಿದ್ದ ಹಾಗೂ ಫ್ಯಾಶನಬಲ್ ಆಗಿದ್ದ ಆತನ ಹೆಂಡತಿ ಊಟದ ಮಧ್ಯದಲ್ಲಿ ಫೋರ್ಕನ್ನು ತೆಗೆದಿಟ್ಟು ನನಗೆ ‘ಕೈಯಲ್ಲಿ ಊಟ ಮಾಡಿದರೆ ನೀವೇನು ಅಂದುಕೊಳ್ಳುವುದಿಲ್ಲ ತಾನೆ ನನಗೆ ಹಾಗೆ ಊಟ ಮಾಡಿದರೇ ರುಚಿ’ ಎಂದು ನನ್ನತ್ತ ತಿರುಗಿ ಹೇಳಿದಳು.

ಭಾರತದಲ್ಲಿ ಚಟ್ನಿಯಿಂದ ಮಜ್ಜಿಗೆಯವರೆಗೆ ಎಲ್ಲ ರೀತಿಯ ಪದಾರ್ಥಗಳನ್ನೂ ದುಂಡನೆಯ ಹಿತ್ತಾಳೆ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಅಥವಾ ಎಲೆಗಳ ಮೇಲೆ ಬಡಿಸಿಕೊಂಡು ಊಟ ಮಾಡುತ್ತಾರೆ. ಶ್ರೀಮಂತರು ಹಾಗೂ ಬಡವರೂ ಕೂಡ ಬಳಸುವ ಊಟದ ಎಲೆಗಳು ನಿಜಕ್ಕೂ ಕಲಾತ್ಮಕ ಮತ್ತು ತೊಳೆಯುವ ತಾಪತ್ರಯವಿಲ್ಲ. ಬಿಡುವಿನ ವೇಳೆಯಲ್ಲಿ ದಪ್ಪವಾದ ಎಲೆಗಳನ್ನು ದುಂಡಗೆ ಜೋಡಿಗೆ ಕಡ್ಡಿಗಳನ್ನು ಸಿಕ್ಕಿಸಿ ಇಡೀ ಒಂದು ವರ್ಷಕ್ಕಾಗುವಷ್ಟು ಎಲೆ ಸಿದ್ಧಪಡಿಸಿಕೊಳ್ಳುತ್ತಾರೆ. ಊಟದ ನಂತರ ಎಲೆಗಳನ್ನು ಹೊರಗೆ ಎಸೆದುಬಿಡುತ್ತಾರೆ. ಯಾರಿಗೂ ತಟ್ಟೆಗಳನ್ನು ತೊಳೆಯುವ ಕೆಲಸವೇ ಇರುವುದಿಲ್ಲ. ಅದು ತುಂಬ ಚೆಂದ ಅನ್ನಿಸಿತು ನನಗೆ, ನಾನು ಭಾರತದಲ್ಲಿ ಎಲ್ಲಿ ಹೋದರೂ ಜನ ತಮ್ಮೊಂದಿಗೆ ಊಟ ತಿಂಡಿಗೆ ಕರೆಯುತ್ತಿದ್ದರು. ಇಲ್ಲಿ ಜಾತಿಯ ಅಡೆತಡೆಗಳು ನಿವಾರಣೆಯಾಗುತ್ತಿದ್ದುದಕ್ಕೆ ಇದೇ ಸಾಕ್ಷಿ. ಜಾತಿಯ ನಿಷಿದ್ಧಗಳಲ್ಲಿ ಅತ್ಯಂತ ಬಲವಾದ ನಿಷಿದ್ಧವೆಂದರೆ ಇತರ ಜಾತಿಯವರೊಂದಿಗೆ ಊಟ ಮಾಡುವುದು. ಅಸ್ಪೃಶ್ಯರು ಮೇಲುಜಾತಿಯವರ ಆಹಾರವನ್ನು ಮುಟ್ಟುವುದಾಗಲೀ, ಪಾತ್ರೆಗಳನ್ನು ಸ್ಪರ್ಶಿಸುವುದಾಗಲೀ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗದಂಥ ವಿಷಯ. ನನ್ನನ್ನು ಯಾವುದೇ ಜಾತಿಯ ನಿರ್ಬಂಧಗಳಿಗೆ ಒಳಪಡದೆ ಜಾತಿರಹಿತ ವ್ಯಕ್ತಿಯೆಂದು ಭಾವಿಸಿದ್ದರು. ಆದರೂ ತೀರಾ ಮಡಿವಂತರಾದವರು ನನ್ನನ್ನು ಸೇರಿಸುತ್ತಿರಲಿಲ್ಲ.

ಒಂದೇ ಕುಟುಂಬದಲ್ಲಿ ಎರಡು ಸಾವಿರ ವರ್ಷಗಳ ಹಿಂದಿನ ಸಂಪ್ರದಾಯ ಹಾಗೂ ಇಪ್ಪತ್ತನೇ ಶತಮಾನದ ಆಧುನಿಕತೆಗಳೆರಡೂ ಕಾಣುತ್ತಿದ್ದವು. ನಾನು ಚಿಕ್ಕವಯಸ್ಸಿನ ಕೆಲವು ಭಾರತೀಯ ಸ್ನೇಹಿತರೊಂದಿಗೆ ಬ್ರಾಹ್ಮಣರ ಮನೆಗಳಲ್ಲಿ ಊಟ ಮಾಡಿದ್ದೇನೆ. ನನ್ನ ಸ್ನೇಹಿತರ ಅಜ್ಜ ಅದೇ ಸ್ಥಳದ ಒಂದು ಕಡೆ ನೆಲದ ಮೇಲೆ ಒಬ್ಬರೇ ಕುಳಿತು ಪ್ರತ್ಯೇಕವಾಗಿ ಊಟ ಮಾಡುತ್ತಿದ್ದರು. ಅವರ ಪಕ್ಕದಲ್ಲಿ ಅವರಿಗೆ ಅಡುಗೆ ಮಾಡುವುದಕ್ಕೆಂದೇ ಪ್ರತ್ಯೇಕವಾದ ಎಲೆ ಇರುತ್ತಿತ್ತು. ಅವರಿಗೇ ಪ್ರತ್ಯೇಕವಾಗಿ ಅವರಿಗೆ ಮೀಸಲಾದ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿದ್ದರು. ನನ್ನ ಸ್ನೇಹಿತರ ತಾತನಂತೆ ಇಷ್ಟೊಂದು ನಿಷ್ಠೆಯಿಂದ ಸಂಪ್ರದಾಯವನ್ನು ಆಚರಿಸುವ ಬ್ರಾಹ್ಮಣರು ಇನ್ನು ಮುಂದೆ ತೀರ ವಿರಳವಾಗಬಹುದು. ಆದರೆ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಜಾತಿಯ ಕಟ್ಟುಪಾಡುಗಳು ಇನ್ನೂ ಬಲವಾಗಿವೆ. ಅಲ್ಲಿ ಮಡಿವಂತ ಬ್ರಾಹ್ಮಣರ ಪರಿಪೂರ್ಣ ಮಾದರಿಗಳನ್ನು ಈಗಲೂ ಕಾಣಬಹುದು. ಅದರ ಆಹಾರ ಸೇವನೆಯ ವಿಷಯದಲ್ಲಿ ಎಷ್ಟೊಂದು ನಿರ್ಬಂಧಗಳಿವೆ ಎಂದರೆ ಬೇರೆ ಇನ್ನೇನ್ನನಾದರೂ ಅವರಿಗೆ ಸಮಯವೇ ಇರುವುದಿಲ್ಲವೇನೊ? ಅವರು ಸ್ನಾನ ಮಾಡಿ, ಒಗೆದ ಬಟ್ಟೆಯನ್ನು ಹಾಕಿಕೊಂಡ ನಂತರವೇ ಊಟ ಮಾಡುತ್ತಾರೆ. ಒಗೆದ ಬಟ್ಟೆಯನ್ನು ಒಣಗಿಸುವ ಸ್ಥಳದಲ್ಲಿ ಯಾವುದೇ ರೀತಿಯ ಸಂಪ್ರದಾಯ ಮಲಿನತೆ ಆಗಿರಬಾರದು. ಅಂದರೆ ಕತ್ತೆ, ನಾಯಿ, ಹಂದಿ ಅಥವಾ ಮಾಸಿಕ ಚಕ್ರದಲ್ಲಿರುವ ಮಹಿಳೆ ಅವುಗಳನ್ನು ಮುಟ್ಟಬಾರದು. ಆತ ತನ್ನ ಉಪಜಾತಿಯವರೊಂದಿಗಲ್ಲದೆ ಬೇರೆ ಯಾರೊಂದಿಗೂ ಊಟ ಮಾಡುವಂತಿಲ್ಲ. ಊಟ ಮಾಡುವಾಗ ಪುಸ್ತಕ ಓದಬಾರದು. ಯಾಕೆಂದರೆ ಮುದ್ರಣಕ್ಕೆ ಬಳಸುವ ಮಸಿ ಮಡಿಗೆ ದೂರ. ಆತ ಅಕಸ್ಮಾತ್ತಾಗಿ ಮಣ್ಣಿನ ಮಡಕೆಯನ್ನೋ ಚರ್ಮದ ವಸ್ತುವನ್ನೊ ಊಟಕ್ಕೆ ಮೊದಲು ಮುಟ್ಟಿದರೆ ಅಥವಾ ಘನ ಆಹಾರವನ್ನು ತಿನ್ನುವ ವಯಸ್ಸಿಗೆ ಬಂದಿರುವ ಮಗುವನ್ನೊ, ನಾಯಿಯನ್ನೋ ಆತ ತಾಗಿಸಿಕೊಂಡರೆ ಅಥವಾ ಊಟ ಮಾಡಿದ ಬ್ರಾಹ್ಮಣ ತಗುಲಿಸಿದರೂ ಊಟವನ್ನು ಬಿಟ್ಟುಬಿಡಬೇಕು. ನೀರಿನ ಶುದ್ಧತೆ ಕಾಪಾಡಿಕೊಳ್ಳುವ ವಿಧಾನವಂತೂ ಇದಕ್ಕಿಂತ ಪ್ರಯಾಸಕರ ಹಾಗೂ ಅನ್ಯಾಯದ್ದು. ಭಾರತದಲ್ಲಿ ಅಸ್ಪೃಶ್ಯರಿಗೇ ಪ್ರತ್ಯೇಕವಾದ ಬಾವಿಗಳಿರುತ್ತವೆ. ಈ ಬಾವಿಗಳು ಸುಸ್ಥಿತಿಯಲ್ಲಿರುವುದಿಲ್ಲ. ಬೇಸಿಗೆಯಲ್ಲಿ ಒಣಗಿರುತ್ತವೆ. ಇಂತಹ ಅಸಮಾನತೆಗಳೆಲ್ಲ ಬೇಗ ಬದಲಾಗಬೇಕಿದೆ. ಹೊಸ ಸಂವಿಧಾನದ ಪ್ರಕಾರ ಸರ್ಕಾರದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಾವಿ ಮತ್ತು ಕೆರೆಗಳಿಗೆ ಅಸ್ಪೃಶ್ಯರು ಹೋಗದಂತೆ ತಡೆಯುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಆದರೆ ಈ ಕಾನೂನುಗಳು ದೈನಂದಿನ ಬದುಕಿನಲ್ಲಿ ಜಾರಿಗೆ ಬರುವಂತಾಗಲೂ ಹಿಂದುಳಿದ ಪ್ರದೇಶಗಳ ಜನರಿಗೆ ಹೆಚ್ಚಿನ ತಿಳುವಳಿಕೆ ಮೂಡಿಸುವಂತಹ ಪ್ರಯತ್ನಗಳು ನಡೆಯಬೇಕಾದ್ದು ಬಹಳ ಅಗತ್ಯ ಯಾಕೆಂದರೆ ಜಾತಿಯ ಪಾರಮ್ಯವನ್ನು ಕುರಿತ ಬ್ರಾಹ್ಮಣರ ತತ್ವ ಸಿದ್ಧಾಂತಗಳು ಇಲ್ಲಿ ಶತಶತಮಾನಗಳಿಂದ ಬೇರೂರಿ ಬಿಟ್ಟಿವೆ.

ಪ್ರಾಚೀನ ಹಿಂದೂ ಧರ್ಮವು ಬ್ರಾಹ್ಮಣ ಪಾರಮ್ಯತೆಯನ್ನು ವಿಶೇಷವಾಗಿ ಬೆಳೆಸಿಕೊಂಡು ಬಂದಿದೆ ಮತ್ತು ಈ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ರಕ್ಷಣೆಗಳನ್ನು ನಿರ್ಮಿಸಲಾಗಿದೆ. ಪೂಜಾರಿಗಳೂ ಮತ್ತು ಶಿಕ್ಷಕರೂ ಆಗಿದ್ದ ಬ್ರಾಹ್ಮಣರು ಅಕ್ಷರ ವಿದ್ಯೆಯ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಿಕೊಂಡರು. ಹುಟ್ಟು, ವಿವಾಹ, ಸಾವು ಮೊದಲಾದ ಮೂಲಭೂತ ಆಚರಣೆಗಳಿಗೆ ಅವರ ಧಾರ್ಮಿಕ ಮಧ್ಯಸ್ಥಿಕೆಯೇ ಬೇಕಾಗಿತ್ತು. ಬಹುಶಃ ಕ್ರಿಶ್ಚಿಯನ್ ಯುಗದ ಆರಂಭದಲ್ಲಿ ರಚಿತವಾಗಿದ್ದರೂ ಅದಕ್ಕೆ ಹಿಂದಿನ ವಿಷಯಗಳನ್ನು ಒಳಗೊಳ್ಳುವ ಮನುಸಂಹಿತೆಯ ಪ್ರಕಾರ ಬ್ರಾಹ್ಮಣನು ಎಂಥ ಅಪರಾಧ ಮಾಡಿದರೂ ಅವನಿಗೆ ಸಾವಿನ ಶಿಕ್ಷೆ ಕೊಡಬಾರದು ಮತ್ತು ದಾಸ ಅಥವಾ ಗುಲಾಮನಾಗಿ ಮಾಡಕೂಡದು. ಒಂದು ವೇಳೆ ಸಾಲ ಮಾಡಿದರೆ ಅವನು ಅದನ್ನು ತನ್ನ ಯೋಗ್ಯತಾನುಸಾರ ಸ್ವಲ್ಪಸ್ವಲ್ಪವಾಗಿ ತೀರಿಸುವ ಅವಕಾಶವಿತ್ತು. ಆದರೆ ಕೆಳಜಾತಿಯ ಮನುಷ್ಯನಿಗೆ ಈ ಸೌಲಭ್ಯವಿರಲಿಲ್ಲ. ಅವನು ಶ್ರಮದ ದುಡಿಮೆ ಮಾಡಿಯಾದರೂ ಸಾಲ ತೀರಿಸಬೇಕಿತ್ತು. ಹಸಿದಿರುವ ಬ್ರಾಹ್ಮಣ ಯಾರೋ ಅಪರಿಚಿತರ ಭೂಮಿಯಿಂದ ತನಗೆ ಬೇಕಾದ ಆಹಾರವನ್ನು ಪಡೆದುಕೊಳ್ಳಬಹುದು. ಆದರೂ ಅವನನ್ನು ಕಳ್ಳ ಎನ್ನುತ್ತಿರಲಿಲ್ಲ. ಆದರೆ ಕೆಳಜಾತಿಯವನೊಬ್ಬ ಬ್ರಾಹ್ಮಣನಿಗೆ ಸೇರಿದ ಹೂವು, ಹಣ್ಣು, ಕಟ್ಟಿಗೆ ಅಥವಾ ಹುಲ್ಲನ್ನು ಕದ್ದರೆ ನ್ಯಾಯಾಧಿಕಾರಿಯ ಅವನ ಕೈಯನ್ನು ಕತ್ತರಿಸುವ ಶಿಕ್ಷೆ ವಿಧಿಸುತ್ತಿದ್ದ. ಕೆಳಜಾತಿಯವನೊಬ್ಬ ಬ್ರಾಹ್ಮಣನು ಮಾತಾಡುವಾಗ ಮಧ್ಯೆ ಮಾತಾಡಿದರೆ, ರಸ್ತೆಯಲ್ಲಿ ಅವನಿಗೆ ಸಮಾನವಾಗಿ ಓಡಾಡಿದರೆ ಅವನಲ್ಲಿದ್ದ ಎಲ್ಲವನ್ನೂ ಕಿತ್ತುಕೊಳ್ಳುವಷ್ಟು ದಂಡ ವಿಧಿಸಬಹುದಿತ್ತು. ಅವನು ಬ್ರಾಹ್ಮಣನನ್ನು ಕಾಲಿಂದ ಒದ್ದರೆ ಕಾಲನ್ನು ಕತ್ತರಿಸುತ್ತಿದ್ದರು. ವ್ಯಭಿಚಾರ ಮಾಡಿದ ಇತರ ಜಾತಿಯವರಿಗೆ ಮರಣ ದಂಡನೆಯಾಗುತ್ತಿತ್ತು. ಬ್ರಾಹ್ಮಣನಿಗೆ ಆತನ ತಲೆಯ ಕೂದಲನ್ನು ಮಾತ್ರ ಸಾಂಕೇತಿಕವಾಗಿ ತೆಗೆಯುತ್ತಿದ್ದರು.

ಕಾನೂನಿನ ದೃಷ್ಟಿಯಿಂದ ಈ ಇಂಥ ಕಣ್ಣು ಕುಕ್ಕುವಂತಹ ಅಸಮಾನತೆಗಳು ಇಲ್ಲ. ಆದರೂ ಬ್ರಾಹ್ಮಣರಿಗೇ ವಿಶಿಷ್ಟವಾದ ಕೆಲವೊಂದು ಸೌಲಭ್ಯಗಳು ಈಗಲೂ ಇವೆ. ಹಿಂದೂ ಮಹಾಸಭಾ ಮತ್ತು. ಆರ್.ಎಸ್.ಎಸ್.ಗಳು ಜಾತಿಯ ಪರಿಶುದ್ಧತೆಯ ವಾದವನ್ನು ಯಾಕೆ ವೈಭವೀಕರಿಸುತ್ತಿವೆ ಮತ್ತು ಎರಡು ಸಾವಿರ ವರ್ಷಗಳ ಹಿಂದಿನ ಶುದ್ಧ ಹಿಂದೂ ಧರ್ಮದ ಪುನರ್ ಸ್ಥಾಪನೆಯಾಗಬೇಕು ಎಂದು ಯಾಕೆ ವಾದಿಸುತ್ತಿವೆ ಎಂಬುದು ಇಂತಹ ಪುರಾತನ ನಿಯಮ ನಿರ್ಬಂಧಗಳಿಂದ ಸ್ಪಷ್ಟವಾಗುತ್ತದೆ. ಆಗ ಶ್ರೇಷ್ಟವಾದುದೆಲ್ಲವೂ ಮೇಲುಜಾತಿಯವರಿಗೆ ಸಿಗುತ್ತಿತ್ತು.

ವೇದಗಳ ಪ್ರಕಾರ ಬ್ರಾಹ್ಮಣರ ಪಾರಮ್ಯತೆ ಸೃಷ್ಟಿಯ ಆದಿಯಿಂದಲೇ ಇದೆ. ಜ್ಞಾನಿಗಳಾದ ಬ್ರಾಹ್ಮಣರು ಬ್ರಹ್ಮನ ಬಾಯಿಂದ; ಆಳುವವರೂ ವೀರರೂ, ಆದ ಕ್ಷತ್ರಿಯರು ಬ್ರಹ್ಮನ ತೋಳುಗಳಿಂದ; ವ್ಯಾಪಾರಿಗಳೂ ವರ್ತಕರೂ ಆದ ವೈಶ್ಯರು ಬ್ರಹ್ಮನ ತೊಡೆಯಿಂದ, ಶ್ರಮಜೀವಿಗಳೂ ಕುಶಲಕರ್ಮಿಗಳೂ ಆದ ಮತ್ತು ಉಚ್ಚವರ್ಗದವರ ಸೇವೆಗೆಂದೇ ಮೀಸಲಾದ ಶೂದ್ರರು ಬ್ರಹ್ಮನಕ ಪಾದದಿಂದ ಉಗಮಿಸಿದರು ಎಂದು ಕತೆಯಿದೆ. ಅತ್ಯಂತ ಕೆಳಗಿನ ಸ್ಥಾನ ಅಸ್ಪೃಶ್ಯರಿಗೆ. ಅವರಿಗೆ ಯಾವುದೇ ಜಾತಿಯ ಸ್ಥಾನಮಾನ ಇಲ್ಲ. ಅವರು ಜಾತಿಯಲ್ಲಿ ಹುಟ್ಟಬೇಕಾದರೆ ಇನ್ನೊಂದು ಜನ್ಮವೆತ್ತಿ ಬರಬೇಕು. ಕರ್ಮ ಸಿದ್ಧಾಂತದಂತೆ ಅವರು ಈ ಜನ್ಮದಲ್ಲಿ ಉತ್ತಮ ಆದರ್ಶ ಜೀವನ ನಡೆಸಿದರೆ ಮುಂದಿನ ಜನ್ಮದಲ್ಲಿ ಉತ್ತಮ ಜಾತಿಯಲ್ಲಿ ಮರುಹುಟ್ಟು ಪಡೆಯಬಹುದು. ಯಾಕೆ ಕೆಲವು ಜನರಿಗೆ ಎಲ್ಲ ಸಂಪತ್ತು ಭೋಗಭಾಗ್ಯಗಳೂ ದೊರೆಯುತ್ತವೆ. ಕೆಲವರು ಮಾತ್ರವೇ ಯಾಕೆ ಬೆವರು ಸುರಿಸಿ ಕಠಿಣ ದುಡಿಮೆಯಲ್ಲಿ, ದರಿದ್ರಾವಸ್ಥೆಯಲ್ಲಿ ಬದುಕಬೇಕಾಗುತ್ತದೆ ಎಂಬುದನ್ನು ಹಿಂದೂ ಧರ್ಮದ ಕರ್ಮ ಸಿದ್ಧಾಂತ ಈ ರೀತಿಯಾಗಿ ವಿವರಿಸುತ್ತದೆ.

ಜಾತಿ ಪದ್ಧತಿಯ ಹುಟ್ಟಿಗೆ ಸಂಬಂಧಿಸಿದಂತೆ ಇಷ್ಟೊಂದು ಊಹಾತ್ಮಕವಲ್ಲದ ಇನ್ನೊಂದು ವಿವರಣೆಯಿದೆ. ಇದು ಸುಮಾರು ಕ್ರಿ.ಪೂ. ಎರಡು ಸಾವಿರದಲ್ಲಿ ಭಾರತವನ್ನು ಪ್ರವೇಶಿಸಿದ ಅತಿಕ್ರಮಣಕಾರರಿಗೆ ಸಂಬಂಧಿಸಿದ್ದು. ಭಾರತಕ್ಕೆ ಧಾಳಿಯಿಟ್ಟ ಆರ್ಯರು ಸ್ಥಳೀಯ ದ್ರಾವಿಡರನ್ನು ತಮ್ಮ ಅಧೀನಕ್ಕೆ ಒಳಪಡಿಸಿಕೊಂಡರು. ಮೂಲ ನಿವಾಸಿಗಳ ಬಣ್ಣ ಕಪ್ಪು – ಈಗಿನ ಅಸ್ಪೃಶ್ಯರಂತೆ. ಆರ್ಯರು ಬೆಳ್ಳಗಿದ್ದರು – ಈಗಿನ ಬ್ರಾಹ್ಮಣರು ಉತ್ತಮ ಕುಲದವರಂತೆ. ಆಕ್ರಮಣಕಾರರಿಂದ ಮೂರು ಉಚ್ಚಕುಲಗಳು ಹುಟ್ಟಿಕೊಂಡವು. ಸೋತ ಜನರನ್ನು ಕೆಳಜಾತಿಗೆ ಸೇರಿಸಲಾಯಿತು. ಅಥವಾ ಅವರ್ಣೀಯರು ಎಂದು ಕರೆಯಲಾಯಿತು. ಗೆದ್ದವರು ಮತ್ತು ಸೋತವರ ನಡುವೆ ವಿವಾಹ ಸಂಬಂಧವನ್ನು ತಪ್ಪಿಸುವುದಕ್ಕೆ ಅಸ್ಪೃಶ್ಯತೆಯ ವಿಧಾನವನ್ನು ಜಾರಿಗೆ ತರಲಾಯಿತು. ಇದು ಊಹೆಗೂ ನಿಲುಕದ ಅತಿರೇಕ. ಎಲ್ಲ ಕೀಳು ಕೆಲಸಗಳನ್ನೂ ಅಸ್ಪೃಶ್ಯರು ಮಾಡಬೇಕಾಯಿತು. ಅವರನ್ನು ಅಶುಚಿ, ಅಶುದ್ಧ ಎಂದು ಪರಿಗಣಿಸಲಾಯಿತು.

ಕಾಲಕ್ರಮೇಣ ಅನಿವಾರ್ಯವಾಗಿಯೇ ಪರಸ್ಪರ ಮಿಶ್ರಣ ನಡೆದುಹೋಯಿತು. ಇದರಿಂದ ಹೊಸ ಉಪವಿಭಾಗಗಳು ಹುಟ್ಟಿಕೊಂಡವು. ಆದರೆ ಈ ವಿಭಾಗೀಕರಣ ಮುಖ್ಯವಾಗಿ ಪರಂಪರಾಗತ ವೃತ್ತಿಯನ್ನು ಆಧರಿಸಿ ರೂಪುಗೊಂಡಿತು. ಪ್ರತಿಯೊಂದು ಉಪಜಾತಿ ಕೈಗೊಳ್ಳುವ ವೃತ್ತಿಯೂ ತಂದೆಯಿಂದ ಮಗನಿಗೆ ಪರಂಪರಾಗತವಾಗಿ ಬರುತ್ತಿತ್ತು. ಇಂದಿಗೂ ಕೂಡ ವ್ಯಕ್ತಿ ಸ್ವರೂಪವನ್ನು ಆಧರಿಸಿಯೇ ಜಾತಿಯನ್ನು ಹೇಳಲಾಗುತ್ತದೆ. ಹೊಸ ಸಂವಿಧಾನದ ಸಮಾನತೆಯ ಹಕ್ಕು ಎಂಬುದರ ಪ್ರಕಾರ ಜಾತಿಯನ್ನು ಆಧರಿಸಿ ಮಾಡುವ ಈ ಭೇದಭಾವ ಕೊನೆಯಾಗುತ್ತ ಬಂದಿದೆ. ಭಾರತದ ನಲವತ್ತು ದಶಲಕ್ಷ ಅಸ್ಪೃಶ್ಯರಿಗೆ ಸಮಾನ ಪೌರತ್ವ ಸಿಕ್ಕಿದೆ. ಅಸ್ಪೃಶ್ಯತೆಯನ್ನು ರದ್ದುಪಡಿಸಲಾಗಿದ್ದು ಯಾವುದೇ ರೀತಿಯಲ್ಲಿ ಅದನ್ನು ಆಚರಿಸುವುದು ನಿಷಿದ್ಧವಾಗಿದೆ. ಸ್ವತಂತ್ರ ಭಾರತಕ್ಕೆ ಕೈಗಾರಿಕೆಗಳು ಪ್ರವೇಶಿಸಿದ ಮೇಲೆ ಅವು ಕಾನೂನಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದವು. ಯಾಕೆಂದರೆ ಯಂತ್ರ ನಿಮ್ಮ ಹುಟ್ಟಿನ ಮೂಲವನ್ನು ಕೇಳುವುದಿಲ್ಲ. ಅಸ್ಪೃಶ್ಯ ಮುಟ್ಟಿದರೆ ಅದಕ್ಕೆ ಮೈಲಿಗೆಯಾಗುವುದಿಲ್ಲ. ಯಂತ್ರಕ್ಕೆ ಯಾವುದೇ ಪೂರ್ವಾಗ್ರಹಗಳಿಲ್ಲ!

* * *