ಚರ್ಮ ಹದ ಮಾಡುತ್ತಿದ್ದ ಆ ಕತ್ತಲಿನ ಸ್ಥಳಕ್ಕೆ ನನ್ನ ಕಣ್ಣು ಸರಿಯಾಗಿ ಹೊಂದಿಕೊಳ್ಳುವವರೆಗೆ ಅಲ್ಲಿದ್ದ ಮಕ್ಕಳೆಲ್ಲ ಏನೋ ಕುಣಿತ ಮಾಡುತ್ತಿದ್ದಾರೆ ಎಂದೇ ತಿಳಿದಿದ್ದೆ. ಆದರೆ ಮಕ್ಕಳು ಆಸಿಡ್ ತುಂಬಿದ ಗುಣಿಗಳಲ್ಲಿ ಕಾಲಿನ ಕೆಳಗೆ ಪ್ರಾಣಿಯ ಚರ್ಮಗಳನ್ನು ಹಾಕಿಕೊಂಡು ಅವು ಸುಣ್ಣದ ನೀರಿನಲ್ಲಿ ಮುಳುಗುವಂತೆ ಮೇಲಿಂದ ಹಾರಿಹಾರಿ ತುಳಿಯುತ್ತಿದ್ದರು. ಒಂದು ಕಾಲನ್ನೆತ್ತಿ ಇನ್ನೊಂದು ಕಾಲನ್ನು ಕೆಳಗೆ ಹಾಕುವಾಗ ಏರಿಳಿಯುತ್ತಿದ್ದ ಅವರ ಕಂದುಬಣ್ಣದ ದೇಹಗಳ ಮೇಲೆ ಬೆವರಿನ ಹನಿಗಳು ಮಿನುಗುತ್ತಿದ್ದವು.

ಇವರೆಲ್ಲ ಅಸ್ಪೃಶ್ಯರು. ಹಸುವಿನ ಚರ್ಮ ಹದ ಮಾಡುವ ಕೆಲಸವನ್ನು ಇವರನ್ನು ಬಿಟ್ಟು ಬೇರೆ ಯಾರೂ ಮಾಡುವುದಿಲ್ಲ ಎಂದು ಅಯ್ಯಂಗಾರ್ ಹೇಳಿದರು. ಆತ ತಿರುಚನಾಪಳ್ಳಿಯಲ್ಲಿ ಇನ್‌ಶೂರೆನ್ಸ್ ಸೇಲ್ಸ್‌ಮ್ಯಾನ್. ಬಾಲಕಾರ್ಮಿಕರನ್ನು ಕುರಿತು ವಿಷಯಗಳ ಬಗ್ಗೆ ಆತನಿಗೆ ಅಪಾರ ಆಸಕ್ತಿ ಇತ್ತು. ತನ್ನ ಬಿಡುವಿನ ವೇಳೆಯನ್ನು ಆತ ತಿರುಚಿ ಟ್ಯಾನರಿ ವರ್ಕರ್ಸ್ ಯೂನಿಯನ್ನಿಗಾಗಿ ಮೀಸಲಿಟ್ಟಿದ್ದರು.

ಆ ದಿನ ಬೆಳಿಗ್ಗೆಯಷ್ಟೇ ನಾನು ತಿರುಚಿನಾಪಲ್ಲಿಯ ಸುಪ್ರಸಿದ್ಧವಾದ ದೇವಸ್ಥಾನಕ್ಕೆ ಹೋಗಿದ್ದೆ. ಅದರ ಶಿಖರಕ್ಕೇರುವ ಮೆಟ್ಟಿಲುಗಳ ಮೇಲೆ ಬ್ರಾಹ್ಮಣರ ದೊಡ್ಡ ಸಮುದಾಯವೇ ಇತ್ತು. ಅವರ ಹಣೆಯ ಮೇಲೆ ವಿವಿಧ ಪವಿತ್ರ ಚೆಹ್ನೆಗಳು, ತುಟಿಗಳಲ್ಲಿ ಮಂತ್ರ. ನಾನು ಜಾತಿಯಿಲ್ಲದ ವಿದೇಶಿಯಳಾದ್ದರಿಂದ ನನಗೆ ಈ ದೇವಾಲಯದ ಒಳಗೆ ಬರಲು ಅವಕಾಶ ಕೊಟ್ಟರು. ತಿರುಚಿನಾಪಲ್ಲಿಯ ಯಾವುದೇ ಆಸ್ಪೃಶ್ಯನಿಗೂ ಎಂದೂ ಸಿಗದಂಥ ಅವಕಾಶ ನನಗೆ ಸಿಕ್ಕಿತ್ತು. ದೇವರ ವಿಗ್ರಹಗಳ ಅತ್ಯಂತ ಸಮೀಯದವರೆಗೆ ನನ್ನನ್ನು. ಈ ದೇವಸ್ಥಾನದ ಕೆಳಗಿನ ಮೆಟ್ಟಿಲವರೆಗೆ ಬರುವ ಅವಕಾಸ ಕೂಡ ಅಸ್ಪೃಶ್ಯರಿಗಿರಲಿಲ್ಲ. ಅಷ್ಟೇಕೆ ದೇವಸ್ಥಾನಕ್ಕೆ ಬರುವ ಬ್ರಾಹ್ಮಣರ ಮನೆಗಳಿರುವ ದಾರಿಯಲ್ಲಿ ಕಾಲಿಡುವುದಕ್ಕೂ ಅವರಿಗೆ ಅವಕಾಶವಿರಲಿಲ್ಲ.

ಇದೇ ರೀತಿ ಅಸ್ಪೃಶ್ಯರಿಗೇ ಮೀಸಲಾದಂಥ ಸ್ಥಳಗಳಿದ್ದವು. ಅಲ್ಲಿಗೆ ಬ್ರಾಹ್ಮಣರು ಹೋಗುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹೀಗಿದ್ದಾಗ, ಹಸುವಿನ ಚರ್ಮ ಹದಮಾಡುವಂಥ ಸ್ಥಳಗಳಿಗೆ ಅವರು ಬರುವುದು ದೂರದ ಮಾತೇ ಸರಿ. ಆದರೆ ಅಯ್ಯಂಗಾರ್ ಕಮ್ಯುನಿಸ್ಟ್. ಆತ ಜಾತೀಯ ವ್ಯತ್ಯಾಸಗಳನ್ನು ವಿರೋಧಿಸುತ್ತಿದ್ದರು. ಇಂಥ ಬ್ರಾಹ್ಮಣರು ಮಾತ್ರ ಇಲ್ಲಿಗೆ ಬುರುವುದು ಸಾಧ್ಯವಿತ್ತು. ಆತ ಹೇಳಿದ “ಬೇಗ ಫೋಟೋ ತೆಗೆಯಿರಿ, ನಿಮ್ಮ ಹತ್ತಿರ ಕ್ಯಾಮೆರಾ ನೋಡಿದರೆ ಮಾಲೀಕ ಹೊರಗಟ್ಟುತ್ತಾನೆ. ಯಾಕೆಂದರೆ ಇಲ್ಲಿ ಕೆಲಸ ಮಾಡುತ್ತಿರುವೆ ಬಹುತೇಕ ಹುಡುಗರು ೧೨ರ ವಯಸ್ಸಿಗೂ ಕೆಳಗಿನವರು.” ಆದರೆ ಬೇಗ ಫೋಟೋ ತೆಗೆಯುವುದು ಸುಲಭವಾಗಿರಲಿಲ್ಲ. ಅಲ್ಲಿನ ಸೆಖೆಗೆ ಬೆವರು ಕಣ್ಣಿಗೇ ತೊಟ್ಟಿಕ್ಕುತ್ತಿತ್ತು. ಆಸಿಡ್ ಗುಂಡಿಗಳಿಂದ ಏಳುತ್ತಿದ್ದ ಬಿಸಿಯ ಆವಿಗೆ ಕಣ್ಣುರಿಯಿಂದ ನೀರು ಬರುತ್ತಿತ್ತು. ಇಲ್ಲೊ ಛಾವಣಿಯ ಬಿರುಕಿನಿಂದ ತೂರಿ ಬರುತ್ತಿದ್ದ ಒಂದಿಷ್ಟು ಬೆಳಕು, ಕತ್ತಲೆಯ ಗವಿಯಂತಿದ್ದ ಆ ಸ್ಥಳವನ್ನು ಬೆಳಗಿಸುವುದು ಸಾಧ್ಯವಿರಲಿಲ್ಲ. ನೀರು ತೊಟ್ಟಿಕ್ಕುತ್ತಿದ್ದ ಚರ್ಮಗಳ ರಾಶಿಯನ್ನು ಹೊತ್ತಿದ್ದ ಹೆಂಗಸರೂ ಆ ಬೆಳಕಿನ ಮುಂದೆ ಹಾದು ಹೋದಾಗಷ್ಟೆ ಕಾಣಿಸಿ ಅನಂತರ ಉಗ್ರಾಣ ಕೋಣೆಯ ಕತ್ತಲಲ್ಲಿ ಕರಗಿಹೋದರು. ಈ ಹೆಂಗಸರು ಗುಂಡಿಗಳಲ್ಲಿ ಹದಗೊಂಡ ಚರ್ಮಗಳ ರಾಶಿರಾಶಿಯನ್ನು ಮೇಲೆತ್ತಿ ಇರಿಸಿಕೊಳ್ಳುವಾಗ ಅದು ಹುಡುಗರ ಮೈಗೆ ತಾಗಿ ಅವರ ಮೈಮೇಲೆ ಆಸಿಡ್ ನೀರು ಬೀಳುತ್ತಿತ್ತು. ಹಾಗಾದಾಗ ಆ ಹುಡುಗರು ಮನಸ್ಸಿಲ್ಲದ ಮನಸ್ಸಿನಿಂದ ಗುಂಡಿಗಳಿಂದ ಮೇಲೆದ್ದು ಬಂದು ನಲ್ಲಿಯ ನೀರಿನಲ್ಲಿ ತೊಳೆದುಕೊಂಡು ಪುನಃ ಗುಂಡಿಗಳಿಗೆ ಇಳಿಯುತ್ತಿದ್ದರು. ಈ ಗುಣಿಗಳಲ್ಲಿ ೨೦ ನಿಮಿಷಕ್ಕಿಂತ ಹೆಚ್ಚು ಇದ್ದರೆ ರಕ್ತ ಒಸರುತ್ತದೆ. ಕೈಕಾಲಿನ ಚರ್ಮ ಸುಲಿದು ಬರುತ್ತದೆ ಎಂದರು ಅಯ್ಯಂಗಾರ್. ನಾನು ಈ ಮಧ್ಯೆ ಕೆಲವು ಫೋಟೋ ತೆಗೆದೆ. ಕ್ಯಾಮೆರಾ ಫ್ಲ್ಯಾಶ್ ಆದಾಗ ಭಾರತದ ಬೇರೆ ಕಡೆ ಜನ ಮುತ್ತಿಕೊಳ್ಳುತ್ತಿದ್ದಂತೆ ಇಲ್ಲಿನವರು ಮಾಡಲಿಲ್ಲ. ನನ್ನ ಕ್ಯಾಮರಾ ಈ ಜನರ ಕುತೂಹಲ ಕೆರಳಿಸಲಿಲ್ಲ. ಅವರು ಕೆಲಸ ಬಿಟ್ಟು ಕಣ್ಣೆತ್ತಿಯೂ ನೋಡಲಿಲ್ಲ. ಇದಕ್ಕೆ ಕಾರಣವಿತ್ತು – ಅವರು ದಿನಕ್ಕೆ ಇಂತಿಷ್ಟು ಎಂದು ತಮಗೆ ಗೊತ್ತುಪಡಿಸಿದ ಚರ್ಮಗಳನ್ನು ಮುಗಿಸದಿದ್ದರೆ ಅವರಿಗೆ ಯಾವ ಹಣವೂ ಸಿಗುತ್ತಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರ ಗುಂಪನ್ನು ನೋಡಿದೆ. ಅವರ ಮುಖಗಳು ಆಯಾಸದಿಂದ ಬಳಲಿದ್ದವು. ವಾಸ್ತವವಾಗಿ ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಅವರು ಕಾಣುತ್ತಿದ್ದರು. ಆ ಗುಂಪಿನಿಂದ ಒಬ್ಬ ಹೆಂಗಸನ್ನು ಅಯ್ಯಂಗಾರದ ಕರೆದರು. ಮಾಸಲು ನೀಲಿ ಸೀರೆಯ ಹೆಂಗಸು. ಅದರ ಮೇಲೆ ಅಸಿಡ್ ಕಲೆಗಳಿದ್ದವು. ಅವಳು ಗರ್ಭಿಣಿ. ಅವಳ ಕುಟುಂಬವೆಲ್ಲ ಇಲ್ಲೆ ಕೆಲಸ ಮಾಡುತ್ತಿತ್ತು. ಸಾಮಾನ್ಯವಾಗಿ ಅವರೆಲ್ಲ, ಅಂದರೆ ತಂದೆತಾಯಿ ಮಕ್ಕಳು ಇಡೀ ಕುಟುಂಬ ಇಲ್ಲಿ ಕೆಲಸ ಮಾಡುತ್ತದೆ. ಅವರು ಎಡಬಿಡದೆ ದುಡಿದರೆ ಮಾತ್ರ ಓವರ್‌ಟೈಂ ಹಣವನ್ನು ಗಳಿಸಬಹುದು ಎಂದರು ಅಯ್ಯಂಗಾರ್.

ಇಲ್ಲಿನ ಮೂಲ ಅಳತೆ, ನೂರು ಚರ್ಮಗಳನ್ನು ಹದಮಾಡುವುದು. ಅದನ್ನು ಮುಸಿದರೆ ಮಾತ್ರ ಹಣ. ಇನ್ನು ಓವರ್‌ಟೈಂ ಪ್ರಕಾರ ಕೆಲಸ ಮಾಡಿ ನೂರಾ ಎಂಬತ್ತು ಚರ್ಮ ಮುಗಿಸಿದರು ಅನ್ನಿ. ಆಗ ಅವರಿಗೆ ನೂರು ಚರ್ಮಗಳಿಗೆ ಮಾತ್ರ ಹಣ ಸಿಗುತ್ತದೆ. ಒಂದು ವೇಳೆ ಇನ್ನೂರನ್ನೂ ಪೂರ್ಣಗೊಳಿಸಿದರೂ ಎರಡನೇ ನೂರಕ್ಕೆ ೧/೨ರಷ್ಟು ಮಾತ್ರವೇ ಹಣ. ಪೂರ್ಣ ಹಣಕ್ಕಾಗಿ ಅವರು ವ್ಯರ್ಥಮಾಡುವಂತಿಲ್ಲ. ಬೇಗ ಮುಗಿಸಬೇಕು ಎಂಬ ಕಾರಣದಿಂದ ಸುರಕ್ಷಣಾ ಮುಂಜಾಗ್ರತೆಗಳನ್ನು ಅವರು ಕಡೆಗಣಿಸುತ್ತಾರೆ. ವಾಸ್ತವವಾಗಿ ಪ್ರತಿ ೧೫ ನಿಮಿಷಕ್ಕೊಂದು ಸಲ ಅವರು ಗುಂಡಿಯಿಂದ ಈಚೆ ಬಂದು ನ್ಯೂಟ್ರಲೈಜಿಂಗ್ ಬಾರ್ಕ್‌ಸಲ್ಯೂಶನ್ನಿನಲ್ಲಿ ತೊಳೆದುಕೊಳ್ಳಬೇಕು. ಗುಣಿಯಲ್ಲಿ ಹಾಗೇ ಬಹಳ ಹೊತ್ತು ಇದ್ದರೆ ಅಂಗೈ, ಅಂಗಾಲುಗಳ ಚರ್ಮ ಸುಟ್ಟು ಹೋಗುತ್ತದೆ. ಸೊಂಟದವರೆಗೆ ಬೆತ್ತಲೆ ಇರುವ ಮಕ್ಕಳ ಸೂಕ್ಷ್ಮವಾದ ಅಂಗಾಂಗಗಳ ಮೇಲೆ ತೀಕ್ಷ್ಣವಾದ ಸುಣ್ಣದ ನೀರು ತೀವ್ರ ಹಾನಿಮಾಡುತ್ತದೆ.

ತಿರುಚಿ ಟ್ಯಾನರಿ ವರ್ಕರ್ಸ್ ಸಂಘವು ಇವರಿಗೆಲ್ಲ ರಬ್ಬರ್ ಏಪ್ರನ್, ಗ್ಲೋವ್ಸ್ ಹಾಗೂ ಸರಳ ಸುರಕ್ಷಣಾ ಸಾಧನಗಳನ್ನು ಕೊಡಬೇಕೆಂದು ಹೋರಾಟ ಮಾಡುತ್ತಿತ್ತು ಆದರೆ ಈ ದಿಸೆಯಲ್ಲಿ ಒಂದೊಂದು ಹೆಜ್ಜೆ ಮುಂದೆ ಹೋಗುವುದೂ ಬಹಳ ಕಷ್ಟವಿತ್ತು. ಮೊದಲನೆಯದಾಗಿ ಈ ಜನರನ್ನು ಮನುಷ್ಯರಂತೆಯೇ ಭಾವಿಸುವುದಿಲ್ಲ. ನಿಗದಿತ ಸಂಖ್ಯೆಯನ್ನು ಮುಗಿಸದಿದ್ದರೆ ಕಾರ್ಮಿಕರಿಗೆ ಹಣವೇ ಇಲ್ಲ. ಆದರೆ ಕನಿಷ್ಠ ಸಂಖ್ಯೆಯ ಚರ್ಮಗಳನ್ನು ಒದಗಿಸದಿದ್ದರೆ ಕನಿಷ್ಠ ವೇತನವನ್ನು ನೀಡಬೇಕು ಎಂಬ ಬಧ್ಯತೆ ಮಾಲಿಕರಿಗಿರಲಿಲ್ಲ. ಒಂದು ವೇಳೆ ಸಾಕಷ್ಟು ಚರ್ಮ ಸಿಗದಿದ್ದರೆ ಅಥವಾ ಮಾರುಕಟ್ಟೆಯಲ್ಲಿ ಸ್ತಿತ್ಯಂತರಗಳಿಂದಾಗಿ ಅವನು ಚರ್ಮಗಳ ಖರೀದಿ ಮಾಡುತ್ತಿರಲಿಲ್ಲ ಅಥವಾ ಖರೀದಿಸುವುದಕ್ಕೆ ವಿಳಂಬ ಮಾಡುತ್ತಿದ್ದ. ಆಗ ತಾನು ಒದಗಿಸಿದಷ್ಟು ಚರ್ಮಕ್ಕೆ ಮಾತ್ರ ಕೂಲಿ ಕೊಡುತ್ತಿದ್ದ ಅಥವಾ ಕೆಲಸವನ್ನೇ ನಿಲ್ಲಿಸಿಬಿಡುತ್ತಿದ್ದ. ಇಂಥ ಕೊರತೆಯ ಸಮಯದಲ್ಲಿ ಅವನ ಅನುಮತಿ ಇಲ್ಲದೆ ಅವನ ಕಾರ್ಮಿಕರು ಬೇರೆ ಕಾರ್ಖಾನೆಗೆ ಹೋಗುವಂತಿರಲಿಲ್ಲ. ಯಾಕೆಂದರೆ ಅವರು ಮನೆ, ಆಹಾರ ಪದಾರ್ಥಗಳು ಮುಂತಾದುವುಕ್ಕಾಗಿ ಯಾವಾಗಲೂ ಇವನ ಸಾಲದ ಋಣದಲ್ಲೇ ಇರುತ್ತಿದ್ದರು. ಅವರಲ್ಲಿ ಬಹುತೇಕ ಎಲ್ಲರೂ ಅವನಿಗೆ ೫೦-೬೦ ರೂಪಾಯಿಗಳಷ್ಟು ಸಾಲದ ಬಾಕಿ ಉಳಿಸಿಕೊಂಡವರೇ ಆಗಿದ್ದರು. ಇದು ಅವರ ಜೀವನಪರ್ಯಂತ ಮುಂದುವರೆಯುತ್ತದೆ. ಕೆಲವು ಉದಾರ ಮನೋಭಾವದ ಮಾಲೀಕರು ಮಾತ್ರ ತಮ್ಮಲ್ಲಿ ಕೆಲಸವಿಲ್ಲದಾಗ ಕಾರ್ಮಿಕರನ್ನು ಬೇರೆ ಕಾರ್ಖಾನೆಗಳಿಗೆ ಕಳಿಸಿ ನಂತರ ತಮ್ಮಲ್ಲಿ ಕೆಲಸ ಆರಂಭವಾದಾಗ ವಾಪಸ್ಸು ಕರೆಸಿಕೊಳ್ಳುತ್ತಾರೆ ಎಂದು ಅಯ್ಯಂಗಾರ್ ವಿವರಿಸಿದರು.

ನಾನು ಭೇಟಿ ನೀಡಿದ ಟ್ಯಾನರಿಯ ಮಾಲೀಕ ಇಂತಹ ಉದಾರಿಯಲ್ಲ ಎಂದು ಗೊತ್ತಾಯಿತು. ಅಷ್ಟರಲ್ಲಿ ಆತ ಬಂದೇಬಿಟ್ಟ. ದುಂಡುದುಂಡಾಗಿ ಕೊಬ್ಬಿದ್ದ. ಅಚ್ಚ ಬಿಳಿ ಉಡುಗೆಯಲ್ಲಿದ್ದ ಅವನು ಕೆಂಪು ತುರ್ಕಿ ಟೋಪಿ ಹಾಕಿಕೊಂಡಿದ್ದ. ಬರುತ್ತಿರುವಾಗಲೇ ಕೂಗಾಡಿಕೊಂಡೇ ಬಂದ. ಹಿಂದೂಗಳ ಈ ಭಾಗದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಕಂಡು ನನಗೆ ಆಶ್ಚರ್ಯವಾಯಿತು. ಆದರೆ ಭಾರತದ ವಿಭಜನೆಯ ನಂತರವೂ ಮುಸ್ಲಿಮರು ಮಾತ್ರವೇ ತೊಗಲಿನ ವ್ಯವಹಾರದಲ್ಲಿ ಮುಂದುವರೆದಿದ್ದರು. ಹಸುವಿನ ಚರ್ಮಗಳನ್ನು ಹದಗೊಳಿಸುವ ಕೆಲಸವನ್ನು ಹಿಂದೂಗಳು ಮಾಡದಿದ್ದುದು ಇದಕ್ಕೆ ಕಾರಣ. ನಾನು ಸ್ವಲ್ಪ ಹೊತ್ತು ಅಲ್ಲೆ ಇದ್ದು ಈ ಮಾಲೀಕನಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು ಎಂದುಕೊಂಡಿದ್ದೆ. ಆದರೆ ಜಾಸ್ತಿ ಹೊತ್ತಿದ್ದರೆ ಅಯ್ಯಂಗಾರ್‌ಗೆ ಕಷ್ಟವಾಗುತ್ತಿತ್ತು. ಅವನು ಈ ಟ್ಯಾನರಿ ಕಾರ್ಮಿಕ ಸಂಘದ ಚಟುವಟಿಕೆಗಳಿಂದಾಗಿ ಆಗಲೇ ಸಾಕಷ್ಟು ವೈರ ಕಟ್ಟಿಕೊಂಡಿದ್ದ. ಮಾಲೀಕ ಪ್ರತಿತಿಂಗಳು ನನಗೆ ೧೨% ಲಾಭ ಮಾತ್ರ ಇದೆ ಎಂದು ಲೆಕ್ಕ ಕೊಡುತ್ತಾನೆ. ಆದರೆ ತಮ್ಮದೇ ಹೂಡಿಕೆ ಮಾಡಿ ವರ್ಷಕ್ಕೆ ೧೪೪% ಮಾತ್ರ ಲಾಭವಿರುವ ವ್ಯವಹಾರಗಳ ಸಂಖ್ಯೆ ತೀರ ಕಡಿಮೆ. ಅದರಲ್ಲಿಯೂ ಟ್ಯಾನರಿಗಳನ್ನು ಇಷ್ಟು ಕಡಿಮೆ ಲಾಭಕ್ಕೆ ನಡೆಸುತ್ತಾರೆಂದರೆ ನಂಬಲು ಸಾಧ್ಯವಿಲ್ಲ. ಯಾಕೆಂದರೆ ಲೆದರ್‌ನಲ್ಲಿ ಬಹಳ ಲಾಭವಿದೆ. ಯುದ್ಧದ ವರ್ಷಗಳಲ್ಲಿ ಈ ಕೈಗಾರಿಕೆಗಳು ಬಹಳ ಲಾಭ ಮಾಡಿದವು. ಆದಾಯ ತೆರಿಗೆ ಅಂಕಿಅಂಶಗಳ ಪ್ರಕಾರ ನಾವು ಈಗ ನೋಡಿದಂಥ ಸುಮಾರ ೩೦೦ ಕಾರ್ಮಿಕರನ್ನು ಹೊಂದಿರುವ ಟ್ಯಾನರಿ ಕಳೆದ ವರ್ಷ ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ ಆದಾಯ ಗಳಿಸಿತ್ತು. ಆದರೆ ಈ ಜನ ಯಾವ ಲೆಕ್ಕವನ್ನೂ ಬರಹದಲ್ಲಿಡುವುದಿಲ್ಲ. ತೆರಿಗೆ ತಪ್ಪಿಸುವುದು ಅವರ ಉದ್ದೇಶ. ಒಟ್ಟಿನಲ್ಲಿ ಅವರ ನಿಜವಾದ ಲಾಭ ಎಷ್ಟು ಎಂಬುದರ ಲೆಕ್ಕ ಸಿಗುವುದಿಲ್ಲ. ಮಕ್ಕಳನ್ನು ಮಾಲೀಕನೇ ನೇರವಾಗಿ ನೇಮಿಸಿಕೊಂಡಿದ್ದಾನೆ. ಅವರಿಗೆ ತಿಂಗಳಿಗೆ ಆರೋ ಏಳೋ ರೂಪಾಯಿ ಕೂಲಿ ಕೊಡುತ್ತಾನೆ. ಆದರೆ ಓವರ್‌ಟೈಂ ಹಣ ಗಳಿಸುವ ಉದ್ದೇಶದಿಂದ ತಂದೆ ತಾಯಿಗಳು ತಮ್ಮೊಂದಿಗೆ ಮಕ್ಕಳನ್ನು ಕರೆತಂದು ಅವರೊಂದಿಗೆ ಕೆಲಸ ಮಾಡಿದಾಗ ಆ ಮಕ್ಕಳಿಗೆ ಪ್ರತ್ಯೇಕವಾಗಿ ಏನೂ ಸಿಗುವುದಿಲ್ಲ. ಮದ್ರಾಸಿನ ಈ ಭಾಗದಲ್ಲೆಲ್ಲ ಟ್ಯಾನರಿ ಮಾಲೀಕರಿಂದ ಮಕ್ಕಳಿಗಾಗಿ ಬಹಳ ಬೇಡಿಕೆ ಇರುತ್ತಿತ್ತು. ಯಾಕೆಂದರೆ ಚರ್ವವನ್ನು ತುಳಿಯುವುದು ಯಾರು ಬೇಕಾದರೂ ಮಾಡಬಹುದಾದ ಸರಳವಾದ ಕೆಲಸವಾಗಿತ್ತು ಮತ್ತು ಇದಕ್ಕೆ ಕೊಡಬೇಕಾಗಿದ್ದ ಕೂಲಿಯೂ ಕಡಿಮೆ.

ಮಕ್ಕಳನ್ನು ಅಪಾಯಕಾರಿಯಾದ ಕೆಲಸದಲ್ಲಿ ತೊಡಗಿಸುವುದು ಕಾನೂನಿಗೆ ವಿರುದ್ಧ ಎಂದು ಹೊಸ ಕಾನೂನು ತಿಳಿಸುತ್ತದೆ. ಆದರೆ ಇದುವರೆಗೂ ಟ್ಯಾನರಿಗಳನ್ನು ‘ಅಪಾಯಕಾರಿ’ ವೃತ್ತಿಯ ಗುಂಪಿಗೆ ಸೇರಿಸಿಲ್ಲ. ಹಿಂದಿನ ಕಾರ್ಖಾನೆಗಳ ಕಾಯಿದೆಯೂ ಸಹ ೧೨ ವರ್ಷಕ್ಕೆ ಕಡಿಮೆ ಇರುವ ಮಕ್ಕಳನ್ನು ನೇಮಿಸಿಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸುತ್ತದೆ. ೧೨ ರಿಂದ ೧೮ರ ನಡುವಿನ ವಯಸ್ಸಿನವರನ್ನು ಪ್ರಾಯದವರು ಎಂದು ವರ್ಗೀಕರಿಸಲಾಗುತ್ತಿತ್ತು ಮತ್ತು ಅವರಿಗೆ ಪಾರ್ಟ್‌ಟೈಂ ಕೆಲಸ ಮಾತ್ರ ಕೊಡಬೇಕು ಎಂದಿದೆ. ಪಾರ್ಟ್‌ಟೈಂ ಎಂದರೆ ಆಸಿಡ್ ಗುಂಡಿಗಳಲ್ಲಿ ಆರು ಗಂಟೆ ಕಾಲ ಕೆಲಸ. ವಯಸ್ಕರು ಇಂತಹ ಗುಂಡಿಗಳಲ್ಲಿ ೯ ರಿಂದ ೧೨ ಗಂಟೆಗಳವರೆಗೆ ಕೆಲಸ ಮಾಡಬೇಕು. ಕಾರ್ಖಾನೆ ಕಾಯಿದೆ ಪ್ರಕಾರ ಪ್ರತಿ ಎರಡು ವಾರಗಳಿಗೊಮ್ಮೆ ಒಂದು ದಿನ ರಜೆ ಕೊಡಬೇಕು. ಆದರೆ ಈ ಸೌಲಭ್ಯ ಯಾರಿಗೂ ಸಿಕ್ಕಿರಲಿಲ್ಲ.

ಇನ್ಸ್‌ಪೆಕ್ಟರ್ ತಿಂಗಳಿಗೆ ಒಂದು ಸಲ ಬರುತ್ತಾನೆ. ಆತ ಕಾರ್ಮಿಕರ ಕಷ್ಟ ಸುಖ ವಿಚಾರಿಸುವುದಿಲ್ಲ. ಬಾಸ್ ಜೊತೆ ಕುಳಿತು ಟೀ ಕುಡಿಯುತ್ತಾನೆ. ಒಂದು ವೇಳೆ ಆತ ಕಾರ್ಖಾನೆಯ ಒಳಗೆ ಹೋದರೆ ಚಿಕ್ಕಮಕ್ಕಳನ್ನೆಲ್ಲ ಹಿಂದಿನ ಬಾಗಿಲಿನಿಂದ ಹೊರಗೆ ಕಳಿಸಿಬಿಡುತ್ತಾರೆ. ಪ್ರಶ್ನೆ ಕೇಳಿದರೆ ಸ್ವಲ್ಪ ದೊಡ್ಡ ವಯಸ್ಸಿನ ಹುಡುಗರಿಗೆ ಸುಳ್ಳು ಹೆಸರು ನೀಡಿ ಸರಿಪಡಿಸಲಾಗುತ್ತದೆ. ಸರ್ಕಾರದ ಕಾರ್ಮಿಕ ಇಲಾಖೆಯಿಂದ ಇಂಥ ಕಾರ್ಖಾನೆಗಳನ್ನು ನಿಯಂತ್ರಣ ಮಾಡುವ ವಿಚಾರ ತುಂಬ ಚೆನ್ನಾಗಿದೆ. ಆದರೆ ಒಬ್ಬ ಇನ್ಸ್‌ಪೆಕ್ಟರಿಗೆ ಸರ್ಕಾರದಿಂದ ತಿಂಗಳಿಗೆ ೭೫ ರೂ. ಸಂಬಳ ಸಿಕ್ಕರೆ ಟ್ಯಾನರಿಯವರಿಂದ ಅವರಿಗೆ ನೂರು ರೂಪಾಯಿ ಸಿಗುತ್ತದೆ.

ಚರ್ಮ ಹದ ಕೈಗಾರಿಕೆಯ ಸ್ವರೂಪದ ಕಾರಣದಿಂದಲೇ ಅದಕ್ಕೆ ಕೆಲವೊಂದು ವಿನಾಯಿತಿಗಳು ಸುಲಭವಾಗಿ ಸಿಕ್ಕಿಬಿಡುತ್ತವೆ. ಅಮೇರಿಕಾದಲ್ಲಿ ಉಕ್ಕು ಕಾರ್ಖಾನೆಯ ಆರಂಭದ ದಿನಗಳಲ್ಲಿ ಕರಗಿದ ಲೋಹದ ಕೆಲಸ ಮಾಡಬೇಕಾಗಿದ್ದ ಕಾರ್ಮಿಕರಿಗೆ ದಿನಕ್ಕೆ ಎಂಟು ಗಂಟೆಗಳ ಕೆಲಸ ಮಾತ್ರ ಇರಬೇಕು ಎಂದು ಹೇಳಿದಾಗ ಇದೇ ರೀತಿಯ ವಾದ ಮುಂದಿಟ್ಟರು ಎಂಬ ವಿಷಯವನ್ನು ನಾನು ಕೇಳಿದ್ದೆ. ಇಂತಹ ವಿನಾಯಿತಿಗಳಿಂದಾಗಿ ೧೪ ದಿನಗಳಿಗೆ ಒಮ್ಮೆ ರಜೆ ಕೊಡುವ ನಿಯಮವನ್ನು ಜಾರಿಗೆ ತರವುದೂ ಕಷ್ಟವಾಗಿತ್ತು. ಆದರೆ ಕಾರ್ಮಿಕ ಸಂಘಟನೆಯು ಮಕ್ಕಳಿಗೆ ವಾರಕ್ಕೆ ಒಂದು ದಿನ ರಜೆ ಕೊಡಬೇಕು ಎಂಬ ವಿಷಯದ ಬಗ್ಗೆ ಹೋರಾಟ ನಡೆಸಿತ್ತು.

ಬಹುತೇಕ ಎಲ್ಲ ಭಾರತೀಯರೂ ಯಾವಾಗಲೂ ಕೇಳಿಯೇ ಕೇಳುವಂತೆ ಅಯ್ಯಂಗಾರ್ ಕೂಡ ನೀಗ್ರೋಗಳು ಮತ್ತು ಜಿಮ್‌ಕ್ರೋಯಿಸಂ ಬಗ್ಗೆ ಕೇಳಿದರು. ನಾನು ಯಾವಾಗಿನಂತೆಯೇ “ನಮ್ಮ ಪ್ರಜಾಪ್ರಭುತ್ವ ನಿಜಕ್ಕೂ ಈ ಭೇದ ನೀತಿಯನ್ನು ವಿರೋಧಿಸುತ್ತದೆ’’ ಎಂದು ವಿವರಿಸಲು ಯತ್ನಿಸಿದಾಗ ಅಯ್ಯಂಗಾರ್ ತಲೆ ಆಡಿಸಿ “ಇಲ್ಲ. ನೀಗ್ರೋಗಳು ನಿಮ್ಮಲ್ಲಿ ನಮ್ಮ ಅಸ್ಪೃಶ್ಯರಿದ್ದಂತೆ’’ ಎಂದರು.

ಈ ಜಾತಿ ಭೇದ ಸಮಸ್ಯೆಯ ಬಗ್ಗೆ ನಿಮಗೇಕೆ ಇಷ್ಟೊಂದು ಆಸಕ್ತಿ ಎಂದು ಆಯ್ಯಂಗಾರ್‌ಗೆ ಕೇಳಿದೆ. ಯಾಕೆಂದರೆ ಈ ಜಾತಿಯ ಬದಲಿಗೆ ಏನಾದರೊಂದು ರಚನಾತ್ಮಕವಾದುದನ್ನು ನಿರ್ಮಿಸಬೇಕು. ಮುಸ್ಲಿಂಲೀಗ್, ಹಿಂದೂ, ಹರಿಜನ ಇತ್ಯಾದಿ ಕೃತಕ ಭೇದಭಾವಗಳನ್ನು ತೊಡೆದು ಹೊಸದೊಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ತರುವುದು ಮುಖ್ಯ ಎಂದರು. ನೀವು ಕಮ್ಯುನಿಸ್ಟ್ ಆಗಿದ್ದೇಕೆ ಎಂದು ಅವರನ್ನು ಕೇಳಿದಾಗ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ ದಮಕ್ಕೊಳಗಾದವರ ಪರವಾಗಿ ಹೋರಾಡುತ್ತದೆ. ಆದಕ್ಕೇ ಎಂದರು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷವು ಕೆಲವು ತುಂಬ ಬುದ್ಧಿವಂತ, ಸುಸಂಸ್ಕೃತ ನಿಷ್ಠಾವಂತ ಯುವರಕರನ್ನು ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇಲ್ಲಿ ಈ ಪಕ್ಷದ ಗಾತ್ರ ದೊಡ್ಡದಿಲ್ಲ. ಈ ಯುವಕರು ಮಾಸ್ಕೋ ತಾಳಕ್ಕೆ ಕುಣಿಯುವುದಿಲ್ಲ. ಬದಲಾಗಿದೆ, ಈ ದೇಶದಲ್ಲಿನ ದಮನಕ್ಕೊಳಗಾದ ಜನರ ಸ್ಥಿತಿಗತಿಗಳೇ ಅವರನ್ನು ಈ ಪಕ್ಷದ ವತಿಯಿಂದ ಹೋರಾಡುವಂತೆ ಒತ್ತಾಯಿಸಿವೆ ಅನ್ನಿಸಿದಿರದು. ಇತರ ರಾಜಕೀಯ ಪಕ್ಷಗಳನ್ನು ಧೂಳೀಪಟ ಮಾಡಿ, ಮೂಲ ವಿಷಯಗಳನ್ನೇ ಮರೆತು ಬೇರೆ ಕಡೆ ಗಮನ ಕೇಂದ್ರೀಕರಿಸುವಂತೆ ಮಾಡುವವರ ಪ್ರಭಾವಕ್ಕೆ ಇವರು ಒಳಗಾಗಲಿಲ್ಲ.

ಗಾಂಧೀ, ನೆಹರೂ ಒಳ್ಳೆಯವರಿರಬಹುದು. ಆದರೆ ಭಾರತದ ಬಹುತೇಕ ನಾಯಕತ್ವ ಇಂದು ಬಂಡವಾಳಶಾಹಿಗಳ ಹಾಗೂ ಶ್ರೀಮಂತರ ಪರವಾಗಿದೆ ಎಂದು ಅಯ್ಯಂಗಾರ್ ಹೇಳಿದರು.

ಅಯ್ಯಂಗಾರ್ ತಾವು ಕಮ್ಯುನಿಸ್ಟ್ ಆಗಿದ್ದು ಹೇಗೆ ಎಂದು ವಿವರಿಸಿದರು. ಕಾಲೇಜಿನಲ್ಲಿದ್ದಾಗ ಅವರಿಗೆ ಮೊದಲ ಬಾರಿಗೆ ಕಮ್ಯುನಿಸ್ಟ್ ಸಾಹಿತ್ಯದ ಪರಿಚಯವಾಯಿತು. ಹಿಂದೂ ಧರ್ಮದ ಪಂಡಿತರ ಕೇಂದ್ರಸ್ಥಾನ ಎಂದು ಪ್ರಸಿದ್ಧವಾದ ಬನಾರಸ್ ವಿಶ್ವವಿದ್ಯಾಲಯದಲ್ಲಿ ಅವರು ಓದಿದರು. ಆ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷ ಕಾನೂನುಬಾಹಿರ ಪಕ್ಷವಾಗಿತ್ತು. ಅವರ ಕೆಲವು ಸ್ನೇಹಿತರು ತಮ್ಮ ಕೋಣೆಗಳನ್ನು ಶೋಧಿಸುವರೆಂದು ಗೊತ್ತಾದಾಗ ನಿಷೇಧಿಸಲ್ಪಟ್ಟ ಪುಸ್ತಕಗಳನ್ನು ತಂದು ಅಯ್ಯಂಗಾರ್ ಕೋಣೆಯಲ್ಲಿಟ್ಟರು. ಕೋಣೆಯಲ್ಲಿ ಬಚ್ಚಿಟ್ಟ ಈ ಪುಸ್ತಕಗಳ ಬಗ್ಗೆ ಅಯ್ಯಂಗಾರ್‌ಗೆ ಕುತೂಹಲ ಹುಟ್ಟಿತು. ಸೋವಿಯತ್ ಯೂನಿಯನ್ ಬಗ್ಗೆ, ಮಾರ್ಕ್ಸ್ ಬಗ್ಗೆ ಹಲವು ಪುಸ್ತಕ ಓದಿದರು. ಕಾಲೇಜಿನಿಂದ ಹೊರಬರುವ ವೇಳಗೆ, ದುಡಿಯುವ ಜನರಿಗಾಗಿ, ರೈತರಿಗಾಗಿ, ಬಡಜನರ ಪರವಾಗಿ ಹೋರಾಡಬೇಕು ಎಂಬ ಹಂಬಲ ಆತನಲ್ಲಿ ತುಂಬಿಕೊಂಡಿತ್ತು. ಒಂದು ಸಲ ಅವರು ಫೌಂಡ್ರಿ ಕಾರ್ಮಿಕರ ಮುಷ್ಕರದ ನಾಯಕತ್ವ ವಹಿಸಿದಾಗ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಜೈಲಿನಲ್ಲಿ ಅವರಿಗೆ ಇನ್ನೂ ದೊಡ್ಡದೊಡ್ಡ ಕಾಮ್ರೇಡುಗಳ ಪರಿಚಯವಾಯಿತು. ೧೯೪೨ರಲ್ಲಿ ಕಮ್ಯುನಿಸಂ ಅಕ್ರಮವಲ್ಲ ಎಂದು ನಿರ್ಣಯಿಸಿದಾಗ ಇವರೆಲ್ಲರ ಬಿಡುಗಡೆಯಾಯಿತು. ದೇಶವನ್ನು ಸುತ್ತಿ ಪರಿಚಯ ಮಾಡಿಕೊಳ್ಳುವ ಹಂಬಲದಿಂದ ಆತ ಭಾರತದ ವಿವಿಧ ಭಾಗಗಳಲ್ಲಿ ಸುತ್ತಾಡಿದರು. ಈ ದೇಶದ ಮತ್ತು ಇಲ್ಲಿನ ಕಾರ್ಮಿಕರ ಸ್ಥಿತಿಗತಿಗಳನ್ನು ತಿಳಿಯುತ್ತ ಬಂದಂತೆ ಸ್ವಾತಂತ್ರ್ಯವನ್ನು ಕುರಿತ ಅವರ ಕಲ್ಪನೆಯೇ ಬದಲಾಯಿತು. ನಾವು ಎಷ್ಟೊಂದು ಕಾಲದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. ಆದರೆ ಎಲ್ಲಿ ಕಾರ್ಮಿಕರ ಶೋಷಣೆ ಇರುವುದಿಲ್ಲವೋ ಅದು ನಿಜವಾದ ಸ್ವಾತಂತ್ರ್ಯ. ಅದಕ್ಕಾಗಿ ನಾನು ಹೋರಾಡಬೇಕು. ದುಡಿಯಬೇಕು ಎಂದು ನಿರ್ಧರಿಸಿಕೊಂಡರು.

ಅಯ್ಯಂಗಾರ್ ತಮ್ಮ ಬಗ್ಗೆ ಇಷ್ಟು ಹೇಳಿ ಮುಗಿಸುವ ಹೊತ್ತಿಗೆ ಕೆಂಪು ಬ್ಯಾನರ್ ಹಿಡಿದ ಯುವಕರ ಒಂದು ಸಣ್ಣ ಮೆರವಣಿಗೆ ನಮಗೆ ಎದುರಾಯಿತು. ಆ ಬ್ಯಾನರಿನ ಒಂದು ಮೂಲೆಯಲ್ಲಿ ಸುತ್ತಿಗೆ ಮತ್ತು ಕುಡುಗೋಲು ಚಿಹ್ನೆ. ಇನ್ನೊಂದು ಕಡೆ ಬಿಳಿಯ ಬಟ್ಟೆಯಲ್ಲಿ ತಮಿಳು ಅಕ್ಷರಗಳ ಬರಹ. “ಇವರು ತಿರುಚಿ ಟ್ಯಾನರಿ ಕಾರ್ಮಿಕ ಸಂಘದ ಪ್ರತಿನಿಧಿಗಳು’’ ಎಂದು ಅಯ್ಯಂಗಾರ್ ಹೇಳುವಾಗ ಇವರೆಲ್ಲ ತಮ್ಮ ಸ್ವಂತ ಮಕ್ಕಳು ಎಂಬಷ್ಟು ಹೆಮ್ಮೆ ಅವರ ದನಿಯಲ್ಲಿತ್ತು ಮುಂದಿನ ಹಳ್ಳಿಯಲ್ಲಿ ದೊಡ್ಡ ಆಲದ ಮರದ ಕೆಳಗೆ ಇಂದು ರಾತ್ರಿ ಸಂಘದ ಸಭೆ ಇದೆ. ಅದಕ್ಕಾಗಿ ಅವರು ಟ್ಯಾನರಿಗಳಲ್ಲಿ ದುಡಿಯುವ ಮಕ್ಕಳನ್ನು ಕರೆಯುತ್ತಿದ್ದಾರೆ. ಎಂದು ಗೊತ್ತಾಯಿತು.

ಬಹುಮಂದಿ ಮಕ್ಕಳೇ ಇದ್ದ ಆ ವಿಶೇಷ ಯೂನಿಯನ್ ಸಭೆಯ ಫೋಟೋಗಳನ್ನು ಆ ರಾತ್ರಿ ನಾನು ತೆಗೆದೆ. ಹುಡುಗರೆಲ್ಲ ತಮ್ಮ ಕೆಲಸವನ್ನು ಮುಗಿಸಿಕೊಂಡು ಸಂಜೆಗತ್ತಲು ಕವಿಯುತ್ತಿರುವಾಗ ಸಭೆಗೆ ಬರತೊಡಗಿದರು. ಆಲದ ಮರದ ಕೆಳಗೆ ಸದ್ದು ಮಾಡದೆ ಕುಳಿತರು. ಸಾಕಷ್ಟು ಕತ್ತಲಾಗುತ್ತಾ ಬಂದಂತೆ ಲೆದರ್ ಕಾರ್ಮಿಕರ ಪ್ರವಾಹವೇ ಹರಿದು ಬಂದಿತು. ಆಲದ ಮರದ ವ್ಯಾಪ್ತಿಯಿಂದ ಆಚೆಗೂ ಬಹುದೂರದವರೆಗೆ ಅಸಂಖ್ಯಾತ ಜನ. ಅವರೆಲ್ಲ ಅಸ್ಪೃಶ್ಯರು. ಇದರಲ್ಲಿ ಮಕ್ಕಳ ಸಂಖ್ಯೆಯೇ ಅಧಿಕ. ಇಷ್ಟು ಗಂಭೀರ ಮುಖಮುದ್ರೆಯ ಮಕ್ಕಳನ್ನು ನಾನು ಅದುವರೆಗೆ ನೋಡಿರಲಿಲ್ಲ. ಲಾಟೀನು ದೀಪದ ಬೆಳಕು ಮುಂದಿನ ಸಾಲಿನಲ್ಲಿ ಕುಳಿತ ಮಕ್ಕಳ ಮುಖದ ಮೇಲೆ ಬಿದ್ದಿತ್ತು. ಆ ಬೆಳಕಿನಲ್ಲಿ ಅವುಗಳ ನಿರುತ್ಸಾಹ ತುಂಬಿದ ಕಣ್ಣುಗಳು ಕಂಡವು. ವಯಸ್ಸಿಗೆ ಮೀರಿದ ಪ್ರಬುದ್ಧತೆ ಆ ಮಕ್ಕಳಲ್ಲಿತ್ತು. ಯೂನಿಯನ್ ಬೇಡಿಕೆಗಳ ಪಟ್ಟಿಯಿದ್ದ ಕೆಂಪು ಬ್ಯಾನರ್, ದೀಪದ ಬೆಳಕಿನಲ್ಲಿ ಎದ್ದು ಕಾಣುತ್ತಿತ್ತು. ಅಲ್ಲಿ ಮುಖ್ಯವಾಗಿ ನಾಲ್ಕು ಬೇಡಿಕೆಗಳಿದ್ದವು. ೧. ವಾರಕ್ಕೊಂದು ದಿನ ರಜೆ, ೨. ಕನಿಷ್ಟ ಕೂಲಿಯನ್ನು ಹೆಚ್ಚಿಸುವುದು, ೩. ಓವರ್ ಟೈಂ ಕೆಲಸಕ್ಕೆ, ತಕ್ಕ ಹೆಚ್ಚುವರಿ ಹಣ ಸಂದಾಯ, ೪. ಸರ್ಕಾರದ ‘ಜೀವನ ವೆಚ್ಚ ಸೂಚಿ (Cost of living Index)ಗೆ ಅನುಗುಣವಾಗಿ ತುಟ್ಟಿಭತ್ತೆ ಕೊಡುವುದು. ಇವು ತಕ್ಷಣದ ಬೇಡಿಕೆಗಳು. ಪೂರೈಸುವ ಸಾಧ್ಯತೆ ಕಡಿಮೆಯಿದ್ದ ಇನ್ನಿತರ ಬೇಡಿಕೆಗಳೆಂದರೆ ಕಾರ್ಖಾನೆಯಿಂದ ಪರಿಹಾರಧನ, ರಬ್ಬರ್‌ಗ್ಲೋವ್ಸ್, ಏಪ್ರಿನ್ ಇತ್ಯಾದಿ. ಇನ್ನೂ ಕೆಲವು ದೂರದ ಆಶೋತ್ತರಗಳ ಬಗ್ಗೆಯೂ ಚರ್ಚಿಸಲಾಯಿತು. ಖಾಯಿಲೆಗೆ ವಿಮೆ, ಉದ್ಯೋಗ ಭದ್ರತೆ ಇತ್ಯಾದಿ. ಯೂನಿಯನ್ನಿನ ಮುಖಂಡ ದೊರೈರಾಜ್. ಒಂದೊಂದು ಅಂಶವನ್ನು ಒತ್ತಿ ಹೇಳುವಾಗ ಸಿಂಹಕೇಸರದಂತಹ ತನ್ನ ದಟ್ಟ ತಲೆಗೂದಲು ಹಿಂದಕ್ಕೆ ಚಕ್ಕೆಂದು ಚಿಮ್ಮುವಂತೆ ತಲೆ ಆಲುಗಿಸುತ್ತಿದ್ದ. ನಾನು ಫೋಟೋ ತೆಗೆಯುವಾಗ ಮೂವರು ಹುಡುಗರು ತಮ್ಮ ಕೈ ಎಷ್ಟು ಎತ್ತರಕ್ಕೆ ನಿಲುಕುವುದೋ ಅಷ್ಟರವರೆಗೆ ರಿಪ್ಲೆಕ್ಟರುಗಳನ್ನು ಎತ್ತಿಹಿಡಿದು ಸಹಾಯ ಮಾಡಿದರು.

ದೊರೈರಾಜ್ ನನ್ನ ಬಳಿ ಬಂದು, “ಜನರು ಅಮೆರಿಕನ್ ಮಹಿಳೆಯ ಭಾಷಣ ಕೇಳಬೇಕೆಂದು ಬಯಸುತ್ತಿದ್ದಾರೆ, ಮಾತಾಡಿ. ನಾನು ಅನುವಾದ ಮಾಡುತ್ತೇನೆ’’ ಎಂದು ವಿನಂತಿಸಿಕೊಳ್ಳುವ ದನಿಯಲ್ಲಿ ಕೇಳಿದ. ಅಯ್ಯಂಗಾರ್ ಕೂಡ “ಹೌದು, ಮಾತಾಡಿ ಬಿಳಿಯ ಮಹಿಳೆ ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಕೇಳಬೇಕೆಂತೆ’’ ಎಂದರು. ಇಷ್ಟೊಂದು ಭಾರವಾದ ಬದುಕು ನಡೆಸಿರುವ, ಮಾನವ ಜೀವಿಗಳ ಮಟ್ಟ ತಲುಪುವುದಕ್ಕೇ ಬಹುದೊಡ್ಡ ಅಡಚಣೆಯನ್ನು ನಿವಾರಿಸಿಕೊಳ್ಳಬೇಕಾಗಿರುವ ಈ ನತದೃಷ್ಟ ಜನರ ಮುಂದೆ ನಾನು ಏನು ಮಾತಾಡುವುದು? ಈ ಅಸ್ಪೃಶ್ಯರ ಮುಂದೆ ಮಾತಾಡಲು ಲ್ಯಾಂಪ್ ಬೆಳಕಿನಲ್ಲಿ ನಿಂತಾಗ ನನ್ನ ಬದುಕಿನಲ್ಲಿ ಯಾವ ಜನರ ಗುಂಪಿನ ನಡುವೆಯೂ ಇಂತಹ ಅನರ್ಹತೆಯ ಸಂಕೋಚ ನನ್ನನ್ನು ಕಾಡಿರಲಿಲ್ಲ ಅನ್ನಿಸಿತು.

ಮಕ್ಕಳು ಕಣ್ಣು ಅಗಲಿಸಿಕೊಂಡು ನನ್ನನ್ನೇ ನೊಡುತ್ತಿದ್ದರು. ಅವರ ಭಯಂಕರ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಹೇಳುವ ಸರಳ ವಿಧಾನ ಯಾವುದು ಎಂದು ನಾನು ಸ್ವಲ್ಪ ಹೊತ್ತು ತಡಕಾಡಿದೆ. ಅಮೆರಿಕಾ ಮತ್ತು ಇಂಡಿಯಾ ಈ ಎರಡೂ ದೇಶಗಳು ನಡುವೆ ಇರುವ ಬಹುದೊಡ್ಡ ಸಾಮ್ಯತೆಯನ್ನು ವಿವರಿಸುವುದರೊಂದಿಗೆ ನಾನು ಮಾತು ಆರಂಭಿಸಿದೆ. ನಮ್ಮ ಎರಡೂ ದೇಶಗಳು ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದವು. ಅದಕ್ಕಾಗಿ ಹೋರಾಡಿದವು ಮತ್ತು ಅದನ್ನು ಸಾಧಿಸಿದವು. ಇದು ನಮ್ಮ ನಡುವಿನ ಬಹುದೊಡ್ಡ ಸಮಾನತೆ ಎಂದೆ. ಸ್ವಾತಂತ್ರ್ಯ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ಭಾರತೀಯರ ಮೇಲೆ ಏನೋ ಮ್ಯಾಜಿಕ್ಕಿನ ಪರಿಣಾಮವಾಗಿ ಬಿಡುತ್ತದೆ. ದೊರೈರಾಜ್ ನನ್ನ ಮಾತನ್ನು ಅನುವಾದಿಸಿ ಹೇಳುತ್ತಿದ್ದಂತೆ ಜನ ಹರ್ಷದಿಂದ ಕೂಗಿದರು. ತಮಿಳು ನುಡಿಗಟ್ಟಿನಲ್ಲಿ ಆ ಮಾತು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿರಬೇಕು. ಜನ ಸಂತೋಷದಿಂದ ಚಪ್ಪಾಳೆ ತಟ್ಟಿದರು. ಮಾತು ಮುಗಿಸಿದ ನಂತರ ನಾನು ಅಯ್ಯಂಗಾರ್ ಬಳಿ, “ಶಿಕ್ಷಣದ ಅಗತ್ಯತೆ ಬಗ್ಗೆ ನಾನು ಹೇಳಿದ್ದು ತುಂಬ ಅಸಂಬದ್ಧವಾಯಿತೇನೋ ಅನ್ನಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿರುವ ಅವರಿಗೆ ಅದು ಅರ್ಥವಾಗುತ್ತದೆಯೇ’’ ಎಂದೆ. “ಇಲ್ಲ ನೀವು ಸರಿಯಾಗೇ ಹೇಳಿದ್ದೀರಿ. ಮಕ್ಕಳ ತಂದೆ-ತಾಯಿಗಳಿಗೆ ಅದು ಅರ್ಥವಾಗುತ್ತದೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಅವರಿಗೆಲ್ಲ ತುಂಬ ಹಂಬಲವಿದೆ’’ ಎಂದು ಅಯ್ಯಂಗಾರ್ ಹೇಳಿದರು.

ನಾನೂ ಅಯ್ಯಂಗಾರ್ ನಕ್ಷತ್ರಗಳು ಮಿನುಗುತ್ತಿದ್ದ ವಿಶಾಲವಾದ ಆಕಾಶದ ಕೆಳಗೆ ನಡೆಯುತ್ತ ಹೋದೆವು. ಆ ಮಕ್ಕಳೂ ಕತ್ತಲಲ್ಲಿ ನಡೆದುಕೊಂಡು ಹೋದರು. ನಾಯಿಯ ಗೂಡುಗಳಿಗಿಂತಲೂ ಚಿಕ್ಕದಾದ ಗಾಳಿಯಾಡದ ತಮ್ಮ ಮುರುಕು ಜೋಪಡಿಗಳಿಗೆ, ಅದೇ ಅವರ ಮನೆ. ಅಲ್ಲಿ ನೆಲದ ಮೇಲೆ ಕೆಲವೇ ಗಂಟೆಗಳ ನಿದ್ದೆ, ಬೆಳಿಗ್ಗೆ ಪುನಃ ಸುಣ್ಣದ ಗುಣಿಗಳಿಗೆ ಇಳಿಯುವವರೆಗೆ.

* * *