ಮೈಸೂರಿನ ರೈತ ಸಣ್ಣಲಿಂಗಪ್ಪ ಹೇಳಿದ “ನಮ್ಮನ್ನು ಗುಂಡಿಟ್ಟು ಕೊಲ್ಲಿ. ಇಲ್ಲದಿದ್ದರೆ ವಿಷ ಕೊಡಿ. ನಮಗೆ ಸಂತೋಷ. ನನ್ನ ಮಕ್ಕಳಿಗೂ ನನ್ನ ಕಣ್ಣಮುಂದೇ ವಿಷ ಕೊಟ್ಟರೆ ನಿಶ್ಚಿಂತಿಯಿಂದ ಸಾಯುತ್ತೇನೆ.’’ ಆತ ತನ್ನ ವಿಶಿಷ್ಟ ಕನ್ನಡದಲ್ಲಿ ಹೇಳಿದ ಮಾತುಗಳನ್ನು ಸ್ಕೂಲ್‌ಮಾಸ್ಟರ್ ಶಂಕರ್ ನನಗೆ ಅನುವಾಸಿ ಹೇಳಿದ. ಭಾಷಾಂತರಿಸಲು ಶಂಕರ್ ತುಂಬಾ ಪ್ರಯಾಸಮಾಡುತ್ತಿದ್ದ. ಆತನ ಭಾಷೆಯಲ್ಲಿ ರೈತರ ದುಃಖ ಭಾವಾತಿರೇಕದ ನಾಟಕದಂತೆ ಅನ್ನಿಸಿದರೂ ವಾಸ್ತವಾಗಿಯೂ ರೈತರ ಸಂಕಷ್ಟಗಳು ಅಷ್ಟೇ ದಾರುಣವಾಗಿದ್ದವು. ಬರಗಾಲಕ್ಕೆ ಸಿಲುಕಿ ಈ ಹಳ್ಳಿ ಪ್ರದೇಶಗಳು ಬಳಲಿ ಬೆಂಡಾಗಿದ್ದವು. ಕಲ್ಲಹಳ್ಳಿ ಎಂಬ ಸಣ್ಣಹಳ್ಳಿಯಲ್ಲಿ ಸಣ್ಣ ಲಿಂಗಪ್ಪನೇ ಶ್ರೀಮಂತ ರೈತ. ತಮ್ಮ ಭೂಮಿ, ಆಸ್ತಿಪಾಸ್ತಿಗಳನ್ನು ಬಿಟ್ಟು ಹೋಗಲಾರದ ಶ್ರೀಮಂತರು ಮತ್ತು ಓಡಾಡುವುದಕ್ಕೂ ತ್ರಾಣವಿಲ್ಲದಷ್ಟು ನಿಶ್ಶಕ್ತರಾಗಿದ್ದ ಬಡವರನ್ನು ಬಿಟ್ಟರೆ ಬಹುತೇಕ ಮಂದಿ ಊರನ್ನು ತೊರೆದು ಹೋಗಿದ್ದರು. ಬರಗಾಲಕ್ಕೆ ಹೆದರಿದ ಜನ ತಮಗೆ ಎಲ್ಲಿ ಕೆಲಸ ಮತ್ತು ಆಹಾರ ಸಿಗುತ್ತದೋ ಅಂತಹ ‘ಸಮೃದ್ಧ ನಾಡನ್ನು’ ಹುಡುಕಿಕೊಂಡು ಹೋಗಿದ್ದರು. ಕಲ್ಲಹಳ್ಳಿ ಯಾವುದೋ ಮೂಲೆಯಲ್ಲಿದ್ದಂತಹ ಹಳ್ಳಿ.

ಈ ಜನ ಹುಡುಕಿಕೊಂಡು ಹೊರಟಿದ್ದ ಸ್ಥಳ ಸಿಗಬೇಕಾದರೆ ಅವರೆಲ್ಲ ಸಾಕಷ್ಟು ದೂರ ನಡೆಯಬೇಕಿತ್ತು. ಮಳೆ ಬರುವುದು ತಡವಾಗಿದ್ದರಿಂದ ಇಡೀ ಪ್ರದೇಶ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಕಲ್ಲಹಳ್ಳಿಯ ಪರಿಸ್ಥಿತಿ ಇನ್ನೂ ತೀವ್ರವಾಗಿತ್ತು. ನೀರಾವರಿ ಸೌಕರ್ಯ ಕಲ್ಪಿಸಿ ರೈತರಿಗೆ ಸಹಾಯ ದೊರಕಿಸುವ ಯಾವ ಪ್ರಯತ್ನವೂ ಇಲ್ಲಿ ನಡೆದಿರಲಿಲ್ಲ. ಶತಮಾನಗಳ ಹಿಂದೆ ಮೊಘಲ್ ಅರಸರು ಅಚ್ಚುಕಟ್ಟಾಗಿ ಆಳವಾದ ಬಾವಿಗಳನ್ನು ನಿರ್ಮಿಸಿದ್ದರು. ವಸಾಹತುಶಾಹಿ ಆಳ್ವಿಕೆಯಲ್ಲಿ ಈ ಬಾವಿಗಳು ದುರಸ್ತಿ ಕಾಣದೆ ಉಪಯೋಗಕ್ಕೆ ಬಾರದಾಗಿದ್ದವು. ಅಲ್ಲದೆ ಈ ಬಾವಿಗಳಿಗೂ, ಹಳ್ಳಿಗಳಿಗೂ ಬಹಳ ದೂರವಿತ್ತು.

ಬರಗಾಲದ ಸಮಯದಲ್ಲಿ ಮೊದಲು ಹಳ್ಳಿ ಬಿಟ್ಟು ಹೊರಡುವ ಜನರೆಂದರೆ ಯುವಕರು. ಅವರೆಲ್ಲ ಒಬ್ಬೊಬ್ಬರಾಗಿ ಊರುಬಿಟ್ಟು ಹೋಗುತ್ತಿದ್ದಂತೆ ಕುಟುಂಬಗಳು ಛಿತ್ರವಾಗಿದ್ದವು. ಕಳೆದ ವರ್ಷದ ಸುಗ್ಗಿಯಲ್ಲಿ ಸಂಗ್ರಹಿಸಿದ ಧಾನ್ಯ ಮುಗಿದ ನಂತರ ಮತ್ತು ಇನ್ನು ಸಾಲ ಸಿಗುವುದು ಸಾಧ್ಯವೇ ಇಲ್ಲ ಎಂಬಷ್ಟು ಸಾಲಸೋಲದ ನಂತರ ಇದ್ದುಬದ್ದುದನ್ನೆಲ್ಲ ಬಂದಷ್ಟಕ್ಕೆ ಮಾರಿದ ಜನರೂ ಕೂಡ ಒಬ್ಬೊಬ್ಬರಾಗಿ ಊರು ಬಿಡತೊಡಗಿದರು. ಹೀಗೆ ಅವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಚಿತ್ರದುರ್ಗದಿಂದ ಕಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ ನಾವು ಇಂತಹ ಅನೇಕ ಗುಂಪುಗಳನ್ನು ನೋಡಿದೆವು. ನಗರದಲ್ಲಿರುವ ಪರಿಹಾರ ಕೇಂದ್ರಗಳಿಗೆ ಹೋಗುವುದು ಅವರ ಗುರಿ. ದಾರಿಯಲ್ಲಿ ಕಂಡವರೆದುರು ಆ ಜನ ಕೈಚಾಚುತ್ತಿದ್ದರು. ಇವರೆಲ್ಲ ರೈತರೇ ಹೊರತು ಭಿಕ್ಷಾಟನೆಯವರಲ್ಲ. ಆದರೆ ಮಾನ್‌ಸೂನ್ ಕಣ್ಣಾಮುಚ್ಚಾಲೆಯಲ್ಲಿ ಅವರ ಬದುಕು ಇಂಥ ದುರವಸ್ಥೆಗಿಳಿದಿತ್ತು.

ಸಣ್ಣಲಿಂಗಪ್ಪನ ಮುಂದಿದ್ದ ಪರಿಸ್ಥಿತಿ ಇನ್ನೂ ಕಠಿಣ. ಆತ ಊರನ್ನು ಬಿಟ್ಟು ಹೋಗುವ ಬಗ್ಗೆ ಇನ್ನೂ ನಿರ್ಧಾರ ಮಾಡಿರಲಿಲ್ಲ. ಆತನಿಗೆ ೩೫ ಎಕರೆಯಷ್ಟು ಕಪ್ಪುಮಣ್ಣಿನ ಭೂಮಿಯಿತ್ತು. ಅದರಲ್ಲಿ ಹತ್ತಿ, ಗೋಧಿ, ರಾಗಿ ಬೆಳೆಯುತ್ತಿದ್ದ. ಬೆಳೆದಿದ್ದನ್ನು ಮಾರಿ ಒಂದಿಷ್ಟು ಲಾಭವನ್ನು ಗಳಿಸುತ್ತಿದ್ದ. ಜನರಿಗೆ ಕೂಲಿಕೊಟ್ಟು ಹೊಲದ ಕೆಲಸ ಮಾಡಿಸುತ್ತಿದ್ದ. ಇಂಥ ಸಣ್ಣಲಿಂಗಪ್ಪ ಈಗ ತನ್ನ ಮನೆಯಲ್ಲಿ ಚಿಂತಾಕ್ರಾಂತನಾಗಿ ನಿಂತಿದ್ದ. ಸೊರಗಿ ಕೃಶವಾಗಿದ್ದ ಅವನ ಮಂದಿಯೆಲ್ಲ ನೆಲದ ಮೇಲೆ ಸುಮ್ಮನೆ ಕೂತಿದ್ದರು. ಶತಮಾನಗಳ ಕಾಲದಿಂದ ಪೂರ್ವಿಕರು ನೆಲೆಸಿದ್ದ ಆ ಮನೆಯಲ್ಲಿ ಬಿಟ್ಟು ಹೋಗುವುದು ಅವರಿಗೆ ಸುಲಭದ ಮಾತಲ್ಲ. ಹಜಾರದ ಮೂರು ಗೋಡೆಗಳ ಬದಿಗೆ ಒಂದರ ಮೇಲೊಂದರಂತೆ ಪೇರಿಸಿಟ್ಟಿದ್ದ ಮಡಕೆಗಳ ಸಾಲು. ನೆಲದಿಂದ ಛಾವಣಿಯವರೆಗೆ ದೊಡ್ಡ ಕಪ್ಪು ಮಣಿಗಳನ್ನು ಪೋಣಿಸಿದಂತಿತ್ತು. ಇನ್ನೊಂದು ಗೋಡೆಗೆ ಸೇರಿದಂತೆಯೇ ಇದ್ದ ದೊಡ್ಡ ದೊಡ್ಡ ಹೂಜಿಯಾಕಾರಾದ ರಚನೆಗಳು. ಒಬ್ಬ ಮನುಷ್ಯ ಅದರಲ್ಲಿ ಸಲೀಸಾಗಿ ನಿಂತುಕೊಳ್ಳಬಹುದಾದಷ್ಟು ಎತ್ತರವಾಗಿದ್ದವು. ನೀವು ಬೇಕಿದ್ದರೆ ಎಲ್ಲ ಹುಡುಕಿ. ಒಂದೇ ಒಂದು ಕಾಳಿಲ್ಲ. ನಾವು ಹಣಕೊಟ್ಟು ಧಾನ್ಯಕೊಳ್ಳಲು ಸಿದ್ಧ. ಆದರೂ ಅದು ಸಿಗುವುದಿಲ್ಲ. ರಾಜರ ಆಳ್ವಿಕೆಯಲ್ಲಿರುವ ಪ್ರದೇಶಗಳಲ್ಲಿ ಕಾಳಸಂತೆ ಹೆಚ್ಚಾಗಿರುವ ಬಗ್ಗೆ ಆತ ಕೋಪದಿಂದ ಹೇಳುತ್ತಿದ್ದ. ರೈತರಿಗೆ ಅವರ ರೇಶನ್‌ಕಾರ್ಡುಗಳ ಪ್ರಕಾರ ಮಾರಾಟಮಾಡಬೇಕು ಎಂದು ಕಳಿಸಲಾಗಿದ್ದ ಪಡಿತರಗಳು ಕಾಳಸಂತೆಕೋರರ ಉಗ್ರಾಣಮಳಿಗೆಗಳನ್ನು ಸೇರಿದ್ದವು. ನಡೆಯುವುದಕ್ಕೂ ಆಗದಷ್ಟು ನಿತ್ರಾಣನಾಗಿದ್ದ ರೈತ ಕಾರ್ಡು ಹಿಡಿದು ಮೈಲುಗಟ್ಟಲೆ ನಡೆದು ಸಮೀಪದ ರೇಶನ್ ಶಾಪಿಗೆ ಹೋಗುತ್ತಿದ್ದ. ಅಲ್ಲಿ ಅವನಿಗೆ ಸಿಗುತ್ತಿದ್ದು ತಿನ್ನಲು ಯೋಗ್ಯವಲ್ಲದ ಹುಳುಬಿದ್ದ ಧಾನ್ಯ. ಸಣ್ಣಲಿಂಗಪ್ಪ ಮತ್ತವನ ಸೋದರರು ಕುಟುಂಬದ ಜನರ ಆಹಾರಕ್ಕಾಗಿ ಎಲ್ಲೆಲ್ಲೂ ಅಲೆದಾಡಿ ಹುಣಸೇ ಬೀಜಗಳನ್ನು ಸಂಗ್ರಹಿಸಿ ತರುತ್ತಿದ್ದರು. ಇದು ದಿನನಿತ್ಯದ ಅವರ ಕೆಲಸವಾಗಿಬಿಟ್ಟುತ್ತು. “ಹುಣಸೆ ಬೀಜ ಒಳ್ಳೆಯದಲ್ಲ. ಅದನ್ನು ತಿನ್ನುವುದು ಕಷ್ಟ’’ ಎಂದು ಹೇಳುವಾಗ ಸಾಮಾನ್ಯವಾಗಿ ಎಲ್ಲ ಭಾತೀಯರಂತೆಯೇ ಸಣ್ಣಲಿಂಗಪ್ಪ ದುಃಖಾವೇಶಕ್ಕೊಳಗಾಗಿದ್ದ. “ನನ್ನ ಮಕ್ಕಳ ಸಂಕಟ ನೋಡಲಾರೆ. ನಮಗೆ ವಿಷ ಕೊಟ್ಟಬಿಡಿ’’ ಎಂದು ಕಣ್ಣೀರು ಹಾಕಿದ. ಸಣ್ಣಲಿಂಗಪ್ಪ ಮಾತಾಡುತ್ತಿರುವುದನ್ನು ಅವನ ಮಕ್ಕಳು ಬತ್ತಿಹೋದ ಮುಖಗಳಲ್ಲಿ ದೊಡ್ಡದಾಗಿ ಕಾಣುತ್ತಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲಿಸಿಕೊಂಡು ನೋಡುತ್ತಿದ್ದವು. ಸಣ್ಣಲಿಂಗಪ್ಪನ ಹೆಂಡತಿ ನೀರಿನಲ್ಲಿ ನೆನೆಸಿ ಮೆತ್ತಗೆ ಮಾಡಿಕೊಟ್ಟಿದ್ದ ಹುಣಿಸೆ ಬೀಜಗಳನ್ನು ಪಟ್ಟು ಹೆಣ್ಣುಮಕ್ಕಳು ಅಗಿಯುತ್ತಿದ್ದವು. ಐದು ತಿಂಗಳ ಮಗು ತಾಯಿಯ ಬೆರಳಿನಿಂದ ಬಿಳಿಯ ಅಂಟಿನಂಥ ಪದಾರ್ಥವನ್ನು ಚೀಪುತ್ತಿತ್ತು. ಹಾಲೂಡದಷ್ಟು ಬಡಕಲಾಗಿದ್ದ ತಾಯಿಯ ಎದೆಹಾಲಿಗೆ ಬದಲಾಗಿ ಇದು ಎಂದು ಅರ್ಥಮಾಡಿಕೊಂಡೆ. ಮಗು ಚೀಪುತ್ತಿದ್ದ ಪದಾರ್ಥ ರಾಗಿಯ ಹಿಟ್ಟನ್ನು ಬೇಯಿಸಿ ಮಾಡಲಾದ ಗಂಜಿ. ವಾಸ್ತವವಾಗಿ ರಾಗಿ ದೊಡ್ಡವರಿಗೂ ಕೂಡ ಅರಗಿಸಿಕೊಳ್ಳಲು ಕಷ್ಟಸಾದ್ಯವಾದ ಧಾನ್ಯ. ಆದರೆ ಈಗ ಇರುವ ಸ್ವಲ್ಪ ರಾಗಿಯನ್ನೇ ನಗುವಿಗಾಗಿ ಕಾಪಾಡಿಕೊಳ್ಳಬೇಕಾಗಿದ್ದ ಸ್ಥಿತಿ ಬಂದಿತ್ತು.

ಸರಿಯಾದ ರೀತಿಯಲ್ಲಿ ಸ್ವಲ್ಪ ವೈಜ್ಞಾನಿಕ ವಿಧಾನ ಅನುಸರಿಸಿದ್ದೇ ಆಗಿದ್ದರೆ ಈ ಹಳ್ಳಿಯ ಜನರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಬಹುದಿತ್ತು. ಅಂತಹ ಸಾಮಾನ್ಯ ಸಂಗತಿಗಳು ಸಣ್ಣಲಿಂಗಪ್ಪನಂಥವರಿಗೂ ಗೊತ್ತಿದ್ದವು. ಭಾರತದಲ್ಲಿ ಪ್ರತಿವರ್ಷ ಬೀಳುವ ಮಳೆಯಲ್ಲಿ ಶೇ. ೩೫ರಷ್ಟು ಮಳೆ ವ್ಯರ್ಥವಾಗಿ ಪುನಃ ಸಮುದ್ರಕ್ಕೇ ಸೇರಿ ಹೋಗುತ್ತದೆ ಎಂಬ ಅಂಕಿಅಂಶ ಸಣ್ಣಲಿಂಗಪ್ಪನಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಕಳೆದ ವರ್ಷ ಬಿದ್ದ ಮಳೆ ನೀರನ್ನು ಹೇಗೋ ಹಿಡಿದಿಷ್ಟುಕೊಂಡಿದ್ದರೆ ಈ ವರ್ಷದ ಕತೆ ಬೇರೆಯಾಗಬಹುದಿತ್ತು ಎಂಬುದು ಅವನಿಗೆ ತಿಳಿದಿತ್ತು. ಕಳೆದ ವರ್ಷ ಮಳೆ ತೀರ ಜಾಸ್ತಿ ಬಿದ್ದಿದ್ದರೂ ಅದು ಸಮಯಕ್ಕೆ ಸರಿಯಾಗಿ ಬೀಳದ ಕಾರಣದಿಂದ ಈ ವರ್ಷದ ಕಷ್ಟನಷ್ಟಗಳು ಇನ್ನಷ್ಟು ಹೆಚ್ಚಾದವು ಎಂಬುದೂ ಆತನಿಗೆ ಗೊತ್ತಿತ್ತು. ಮಧ್ಯಭಾರತ ಹಾಗೂ ದಕ್ಷಿಣ ಭಾರತದ ಎಲ್ಲ ಹಳ್ಳಿಗಳಂತೆ ತಡೆಗೋಡೆ ಕಟ್ಟಿ ನಿರ್ಮಿಸಿರುವ ಜಲಾಶಯ. ಇಂತಹ ಜಲಾಶಯಗಳನ್ನು ಭಾರತೀಯರು ತಲೆತಲಾಂತರದಿಂದಲೂ ನಿರ್ಮಿಸಿಕೊಂಡು ಬರುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಇದ್ದಕ್ಕಿದ್ದಂತೆ ಬಿದ್ದ ಭಬಾರೀ ಮಳೆಯ ಪರಿಣಾಮವಾಗಿ ಕೆರೆಯ ಕಟ್ಟೆ ಒಡೆದು ಎಲ್ಲ ನೀರು ಕೊಚ್ಚಿಹೋಗಿತ್ತು. ಕಲ್ಲಹಳ್ಳಿಯ ಪಾಲಿಗೆ ವರದಾನವಾಗಬಹುದಾಗಿದ್ದ ಸಮೃದ್ಧ ಮಳೆ ದುರಂತ ತಂದಿತ್ತು. ಮಣ್ಣಿನ ತಡೆಗೋಡೆಗೆ ಬದಲು ಕಾಂಕಿಟ್ ತಡೆಗೋಡೆ ಇದ್ದಿದ್ದರೆ, ಅಲ್ಲಲ್ಲಿ ಕೈಯಿಂದಲೇ ಆಗೆದು ನಿರ್ಮಿಸಿದ ಮಧ್ಯಕಾಲೀನ ಇಂತಹ ಕೆರೆಗಳಿಗೆ ಬದಲು ಸಮಗ್ರವಾದ ನೀರಾವರಿ ಯೋಜನೆ ಇದ್ದಿದ್ದರೆ ಭಾರತದ ಚಿತ್ರ ಬೇರೆಯೇ ಆಗಬಹುದಿತ್ತು.

ಮನೆಯ ಮುಂದಿನ ಅಂಗಳದಲ್ಲಿ ಬಿಡಿಸಿದ್ದ ರಂಗೋಲಿ ದಾಟಿಕೊಂಡು ನಾವು ಮುಂದೆ ಹೋದೆವು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೯೦ರಷ್ಟಿರುವ ರೈತಾಪಿ ಜನರಿಗಾಗಿ ಏನೂ ಮಾಡಿಲ್ಲವಲ್ಲ ಎಂದು ವ್ಯಥೆಯಿಂದ ಹೇಳಿದ ಶಂಕರ್. ಈಗ ಸ್ವಾತಂತ್ರ್ಯ ಬಂದಿದೆ (ಸ್ವಾತಂತ್ರ್ಯ ಎಂಬ ಪದ ಉಚ್ಛರಿಸುವಾಗಲೇ ಅದು ಅವನಿಗೆ ಪ್ರಿಯವಾದ ಪದ ಎಂಬ ದನಿಯಿದ್ದುದನ್ನು ಗಮನಿಸಿದೆ). ಇನ್ನು ಮೇಲಾದರೂ ನಾವು ರೈತರ ಬಗ್ಗೆ ಹೆಚ್ಚಿನ ಗಮನಕೊಡುವುದು ಅಗತ್ಯ. ಹೀಗೆ ಮಾತಾಡುತ್ತಾ ನಾವು ದೊಡ್ಡ ದೊಡ್ಡ ಕಲ್ಲುಗಳ ಅಡ್ಡಗೋಡೆಯನ್ನು ಬಳಸಿಕೊಂಡು ಮುಂದೆ ಹೋದಾಗ ಅಲ್ಲಿ ಒಂದಿಷ್ಟು ಗುಡಿಸಲುಗಳು ಕಂಡವು. ಈ ಭೇದಭಾವವನ್ನು ನಾವು ಕೊನೆಗೊಳಿಸಬೇಕು ಎಂದು ಕೆರಳಿದ ದನಿಯಲ್ಲಿ ಹೇಳಿದ ಶಂಕರ್. ಇಲ್ಲಿ ನಮ್ಮ ಮುಂದೆ ಕಾಣುತ್ತಿರುವುದು ಈ ಗ್ರಾಮದ ಅಸ್ಪೃಶ್ಯ ಜನರಿರುವ ಭಾಗ ಎಂದು ಹೇಳಿದ ಶಂಕರ್. ಅಸ್ಪೃಶ್ಯರವು ಹುಲ್ಲಿನ ಚಾಪೆ ಹೊದಿಸಿದ ತಗ್ಗುಮಾಡಿನ ಗುಡಿಸಲುಗಳು. ಅದರೊಳಕ್ಕೆ ಹೋಗುವವರು ಮೊಣಕಾಲು ಬಗ್ಗಿಸಿ ಒಳಗೆ ತೂರಿಕೊಂಡು ಹೋಗಬೇಕಾಗಿತ್ತು. ಈ ಪುಟ್ಟ ಗೂಡುಗಳೊಳಗೆ ಅವರು ಬಗ್ಗಿಕೊಂಡೇ ಓಡಾಡಬೇಕಾಗಿತ್ತು. “ನೋಡಿ, ಅವರು ಎಷ್ಟು ಸುರಕ್ಷಿತವಾಗಿ ಅಸ್ಪೃಶ್ಯರನ್ನು ದೂರ ಇಟ್ಟಿದ್ದಾರೆ’’ ಎಂದ ಶಂಕರ್. ಅಸ್ಪೃಶ್ಯ ಜನರ ಸ್ಥಿತಿ ಇನ್ನೂ ದಾರುಣವಾಗಿತ್ತು. ಒಂದು ಚಿಕ್ಕಮಗು ಖಾಲಿಪಾತ್ರೆ ಹಿಡಿದು ಹಸಿವಿನಿಂದ ಅಳುತ್ತಿದ್ದನ್ನು ಬಿಟ್ಟರೆ ಬಳಿದ ಯಾರಿಗೂ ದನಿ ಎತ್ತುವ ಮನಸ್ಸಾಗಲಿ, ಶಕ್ತಿಯಾಗಲೀ ಇದ್ದಂತಿರಲಿಲ್ಲ. ಅಲ್ಲಿನ ಜನ ಎಲ್ಲವನ್ನೂ ಪರಿತ್ಯಾಗ ಮಾಡಿದವರಂತೆ ನಿತ್ರಾಣವಾಗಿ ಮಾತಿಲ್ಲದೆ ನಿಂತಿದ್ದರು, ಕೂತಿದ್ದರು. ಅವರನ್ನು ನೋಡುವಾಗ ಮೂವತ್ತರ ದಶಕದ ಮಧ್ಯಭಾಗದಲ್ಲಿ ಅಮೆರಿಕಾದ ಮಹಾಕ್ಷಾಮ ಕಾಲದಲ್ಲಿ ಬಡಕಲು ದನಗಳು ತಮ್ಮ ಕೊನೆಗಾಲಕ್ಕಾಗಿ ಕಾಯುತ್ತಾ ಸುಮ್ಮನೆ ನಿಂತಿರುವ ದೃಶ್ಯದ ನೆನಪಾಯಿತು. ಈ ಜನರೂ ಸಹ ಆ ದನಗಳಷ್ಟೇ ಅಸಧಾಯಕರಾಗಿ, ಪ್ರತಿಭಟನಾರಹಿತರಾಗಿ ತಮ್ಮ ಕೊನೆಯನ್ನು ಕಾಯುತ್ತಾ ಕೂತಿದ್ದರು. ಒಬ್ಬ ಮುದುಕ, ಗುಡಿಸಲಿನ ಹೊರಗೆ ಒಂದು ಅಗಲ ಎಲೆಗಳ ಸಸ್ಯವನ್ನು ನಿಶ್ಶಕ್ತವಾದ ಕೈಗಳಿಂದ ನಿಧಾನವಾಗಿ ಕುಟ್ಟುತ್ತ ಕೂತಿದ್ದ. ‘ಅವರು ಆ ಗಿಡವನ್ನು ತಿನ್ನುತ್ತಾರೆ. ಇನ್ನು ಮುಂದೆ ಆದೂ ಸಿಗುವುದಿಲ್ಲ’’ ಎಂದ ಶಂಕರ್.

ಕಲ್ಲಹಳ್ಳಿಯಂತಹ ಸುಮಾರು ಏಳು ಲಕ್ಷ ಹಳ್ಳಿಗಳಲ್ಲಿ ಮುನ್ನೂರು ದಶಲಕ್ಷ ಜನ ಇದ್ದಾರೆ. ಬಹುತೇಕ ಹಳ್ಳಿಗಳೆಲ್ಲ ರಸ್ತೆಗಳಿಂದ ಮೈಲುಗಟ್ಟಲೆ ದೂರದಲ್ಲಿರುತ್ತವೆ. ಭಾರತದಲ್ಲಿ ಮುಖ್ಯರಸ್ತೆಗಳನ್ನು ನಿರ್ಮಿಸುವಾಗ ಮಿಲಟರಿ ಜನರಲ್‌ಗಳೊಂದಿಗೆ ಸಮಾಲೋಚಿಸಲಾಯಿತೇ ಹೊರತು ಕೃಷಿಕರೊಂದಿಗಲ್ಲ. ಈ ರಸ್ತೆಗಳು ಬಂದರು ನಾಡುಗಳಿಗೂ ದೊಡ್ಡ ದೊಡ್ಡ ಪಟ್ಟಣಗಳಿಗೂ ಸಂಪರ್ಕ ಕಲ್ಪಿಸುತ್ತವೆ. ಬಯಲು ನಾಡಿನಲ್ಲಿ ರೈಲು ಜಂಕ್ಶನ್‌ಗಳಿಗೆ ಹಾಗೂ ಪರ್ವತ ಪ್ರದೇಶಗಳಲ್ಲಿ ರಜಾ ದಿನಗಳ ತಂಗುದಾಣಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಆದರೆ ಅವು ಎಷ್ಟರಮಟ್ಟಿಗೆ ರೈತರ ಅಗತ್ಯತೆಗಳನ್ನು ಕಡೆಗಣಿಸಿವೆ ಎಂದರೆ ದೇಶದ ರೈತರು ದೇಶಕ್ಕೆ ಅನ್ನ ಕೊಡುತ್ತಾರೆ ಎಂಬ ಅಂಶವನ್ನು ಅವರು ಒಂದು ಕ್ಷಣವೂ ಯೋಚಿಸಲಿಕ್ಕಿಲ್ಲ.

ಭಾರತದಲ್ಲಿ ರೈತನನ್ನು ಎಲ್ಲ ಕಾಲದಲ್ಲಿಯೂ ಹೀಗೆ ಕಡೆಗಣಿಸಿರಲಿಲ್ಲ. ಮಧ್ಯಯುಗದ ಮೊಘಲ್ ಚಕ್ರವರ್ತಿಗಳ ಕಾಲದಲ್ಲಿ ರೈತ, ಸಮಾಜದ ಅವಿಭಾಜ್ಯ ಅಂಗವಾಗಿದ್ದ. ಫ್ಯೂಡಲ್ ವ್ಯವಸ್ಥೆಯಲ್ಲಿ ಅನೇಕ ರೀತಿಯ ದೌರ್ಜನ್ಯಗಳಿದ್ದರೂ ರೈತನಿಗೆ ತಕ್ಕ ಮನ್ನಣೆಯೂ ಇತ್ತು. ಅವನಿಗೆ ನ್ಯಾಯ ಒದಗಿಸಬೇಕೆಂಬ ಕಾಳಜಿ ಇತ್ತು. ಬೆಳೆಯ ಭಾಗವನ್ನು ವಸೂಲು ಮಾಡಿಕೊಳ್ಳುವಾಗ ಅವರೊಂದಿಗೆ ಹುಷಾರಾಗಿ ವರ್ತಿಸಬೇಕು. ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು ರೆವಿನ್ಯೂ ಅಧಿಕಾರಿಗಳಿಗೆ ಸೂಚನೆ ಇರುತ್ತಿತ್ತು. ರೈತನಿಂದ ನ್ಯಾಯವಾದ್ದಕ್ಕಿಂತ ಹೆಚ್ಚಿನ ವಸೂಲಿ ಮಾಡಿದರೆ ಅದು ರೈತನಿಗೆ ಮಾತ್ರವಲ್ಲ ರಾಜ್ಯಕ್ಕೂ ಅನ್ಯಾಯ ಎಂಬ ಸೂಚನೆಯನ್ನು ವಸೂಲಿಗಾರರಿಗೆ ಕೊಡುತ್ತಿದ್ದರು. ಆದರೆ ಉಮಾರು ೧೫೦ ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ಕಾಲಿಷ್ಟ ನಂತರ ಕಂದಾಯ ವಸೂಲಿಗಾರರು ಅಥವಾ ಜಮೀನುದಾರರಿಗೆ ನಿರಂಕುಶ ಅಧಿಕಾರ ಪ್ರಾಪ್ತವಾಯಿತು. ಭಾರತವನ್ನು ವ್ಯಾಪಿಸಿಕೊಂಡ ಬ್ರಿಟಿಷ್ ವ್ಯಾಪಾರಿಗಳಿಗೆ ಬೆಳೆ ಬೆಳೆಯುವ ರೈತ ಮುಖ್ಯವಾಗಿರಲಿಲ್ಲ. ಈ ಬೆಳೆಯ ಬಹುಪಾಲನ್ನು ತೆರಿಗೆಯಾಗಿ ವಸೂಲಿ ಮಾಡಿಕೊಡುವ ಜಮೀನ್ದಾರ ಮುಖ್ಯವಾಗಿದ್ದ. ಬೆಳೆಗಳು ಸರಿಯಾದ ಆದಾಯ ಮೂಲವಲ್ಲ ಎಂದು ಈಸ್ಟ್ ಇಂಡಿಯಾ ಕಂಪನಿ ಕಂಡುಕೊಂಡಿತು. ಯಾವಾಗಲೂ ಸ್ಥಳದಿಂದ ಸ್ಥಳಕ್ಕೆ ಸಂಚರಿಸುವ ವರ್ತಕರಿಗೆ ಸುಗ್ಗಿಯ ಕಾಲದ ವ್ಯತ್ಯಯಗಳನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿತ್ತು. ಇದರ ವಿಧಿವಿಧಾನಗಳು, ಆಳುವವರಿಗೆ ಅರ್ಥವಾಗುತ್ತಿರಲಿಲ್ಲ. ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗೆ ನಿಶ್ಚಿತ ನಗದುರೂಪದ ವರಮಾನ ಹೆಚ್ಚ ಕಾರ್ಯಯೋಗ್ಯವಾದುದಾಗಿತ್ತು. ಈ ವಿಷಯದಲ್ಲಿ ಅವರು ರೈತರೊಂದಿಗೆ ಸಮಾಲೊಚಿಸುವ ಗೋಜಿಗೆ ಹೋಗಲಿಲ್ಲ. ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ನಗದುರೂಪದಲ್ಲಿ ಕಾಣಿಕೆ ಸಲ್ಲಿಸುವ ಪದ್ಧತಿ ಸ್ಥಿರಗೊಂಡಾಗ ಜಮೀನ್ದಾರರು ಈ ವ್ಯವಸ್ಥೆಯ ಅವಿಭಾಜ್ಯ ಅಂಗ ಎಂಬಂತೆ ಸ್ಥಿರವಾಗಿ ನೆಲೆಗೊಂಡರು. ಕೆಲವು ಜಮೀನುದಾರರು ಮೊದಲೇ ಫ್ಯೂಗಲ್ ದೊರೆಗಳಾಗಿದ್ದವರೇ. ಇನ್ನೂ ಕೆಲವರು ಕೇವಲ ತೆರಿಗೆಯನ್ನು ಮಾತ್ರ ವಸೂಲಿ ಮಾಡುತ್ತಿದ್ದು ಈ ಸೇವಗೆ ಪ್ರತಿಯಾಗಿ ಅವರಿಗೆ ಜಮೀನನ್ನು ಕೊಡಲಾಗುತ್ತಿತ್ತು. ಒಟ್ಟಿನಲ್ಲಿ ಅದರ ಮೂಲವೇನೇ ಇರಲಿ ೧೭೯೩ರ ಖಾಯಂ ಭೂ ಒಪ್ಪಂದದ ಅನ್ವಯ ಜಮೀನುದಾರರು ಮತ್ತು ಅವರ ಸಂತತಿಯವರು ಒಂದು ಖಾಯಂ ಭೂಮಾಲೀಕ ವರ್ಗವಾಗಿ ರೂಪುಗೊಂಡರು. ಕಡಲಾಚೆಯಿಂದ ತಮ್ಮನ್ನು ನಿಯಂತ್ರಿಸುವ ಹೊಸ ಅಧಿಕಾರಕ್ಕೆ ತೆರಿಗೆಯ ಎಷ್ಟು ಪಾಲನ್ನು ಒಪ್ಪಿಸಬೇಕು ಎಂಬುದು ನಿರ್ಧಾರವಾಗುವವರೆಗೆ ತಮ್ಮ ಕಂದಾಯದ ಪಾಲನ್ನು ತಾವೇ ನಿರ್ಧರಿಸಿಕೊಳ್ಳುವ ಅಧಿಕಾರ ಅವರಿಗೆ ಇತ್ತು.

ಫ್ಯೂಡಲ್ ಮಾಲೀಕ ವ್ಯವಸ್ಥೆ ಖಾಯಂ ಆಗಿ ನೆಲೆಗೊಂಡುದಕ್ಕೆ ಸಮಾನಾಂತರವಾಗಿ ಭಾರತೀಯ ಕೈಗಾರಿಕಾ ವ್ಯವಸ್ಥೆ ಬೆಳೆಯಲಿಲ್ಲ. ಅದನ್ನು ಉದ್ದೇಶಪೂರ್ವಕವಾಗೇ ಹತ್ತಿಕ್ಕಲಾಯಿತು. ಇಲ್ಲಿನ ಜವಳಿ ಉತ್ಪಾದನೆ, ಕಬ್ಬಿಣದ ಕೆಲಸ, ಕರಕುಶಲ ಕಲೆ, ಕೈಕಸುಬುಗಳೆಲ್ಲ ಈ ವ್ಯವಸ್ಥೆಯಲ್ಲಿ ನಶಿಸಿಹೋದವು. ಕಸುಬುದಾರಿಕೆಯ ಜನ ಹಳ್ಳಿಗಳಿಗೆ ಹೋದಾಗ ಕೃಷಿ ಭೂಮಿಯ ಮೇಲಿನ ಒತ್ತಡ ಹೆಚ್ಚಿತು. ರೈತ ಜನ ಇನ್ನಷ್ಟು ಬಡವರಾದರು. ಪಾಶ್ಚಾತ್ಯ ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿಯಿಂದ ಪ್ರಗತಿಯಾದಾಗ ಅದರ ಜೊತೆಜೊತೆಗೆ ಕೃಷಿ ಕ್ಷೇತ್ರದಲ್ಲೂ ಸುಧಾರಣೆಗಳಾದವು. ಮಾನವನ ಹಕ್ಕುಗಳು ಹೆಚ್ಚಾದವು. ಆದರೆ ಭಾರತದಲ್ಲಿ ರೈತನನ್ನು ಸಂಪೂರ್ಣ ಕಡೆಗಣಿಸಲಾಯಿತು. ಅವನು ಅರಗಿನಲ್ಲಿ ಸೇರಿಕೊಂಡ ಕೀಟದಂತೆ ಮಧ್ಯಯುಗದ ಅವಸ್ಥೆಯಲ್ಲಿಯೇ ಉಳಿದುಹೋದ. ಅವನ ಸಲಕರಣೆಗಳಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ. ಅವನು ಪ್ರಗತಿ ಹೊಂದುವುದಕ್ಕೆ ಅಗತ್ಯವಾದ ವಿದ್ಯಾಭ್ಯಾಸವೂ ಅವನಿಗೆ ದೊರೆಯಲಿಲ್ಲ.

ಬಹಳ ಕಾಲದ ನಂತರ ಸ್ವಾತಂತ್ರ್ಯ ಬಂದ ಮೇಲೂ ಈ ದೇಶದ ಕೋಟ್ಯಾಂತರ ಜನರ ಪಾಲಿಗೆ ಸ್ವಾತಂತ್ರ್ಯದಿಂದ ಯಾವ ಸಹಾಯವೂ ಆಗಿಲ್ಲ. ಅಷ್ಟೇ ಅಲ್ಲ ಜಮೀನ್ದಾರಿ ವ್ಯವಸ್ಥೆಯ ಅಡಿಯಲ್ಲಿ ಅವರ ಸ್ಥಿತಿ ಇನ್ನಷ್ಟು ಅಧೋಗತಿಗಿಳಿದಿದೆ. ಸ್ವಯಂ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷ ಸುದೀರ್ಘ ಹೋರಾಟ ನಡೆಸಿದ ಕಾಲದ ಉದ್ದಕ್ಕೂ ಇಂಥ ಅವಸ್ಥೆಯನ್ನು ಕೊನೆಗಾಣಿಸುವುದೇ ತನ್ನ ಮುಖ್ಯ ಗುರಿ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುತ್ತಿತ್ತು. ಹೊಸ ಸರ್ಕಾರ ಬಂದ ನಂತರ ಕೃಷಿಗೂ ವಿಜ್ಞಾನಕ್ಕೂ ಸಂಬಂಧ ಕಲ್ಪಿಸುವ ಆಕರ್ಷಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹಳೆಯ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಯೋಜನೆಗಳನ್ನು ಹಾಕಿಕೊಂಡಿದೆ. ಬಿಹಾರ್, ಮುದ್ರಾಸ್ ಮತ್ತು ಸಂಯುಕ್ತ ಪ್ರಾಂತಗಳು ಜಮೀನ್ದಾರಿ ರದ್ಧತಿ ಕಾನೂನನ್ನು ಜಾರಿಗೆ ತರುವಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿವೆ. ಆದರೆ ಈ ವಿಷಯದಲ್ಲಿ ನಿಧಾನವಾಗಿ ಮುನ್ನಡೆಯುವ ನೀತಿಯನ್ನು ಅನುಸರಿಸಬೇಕೆಂದು ಸರ್ಕಾರ ಸೂಚಿಸುತ್ತದೆ. ಜಮೀನುದಾರರಿಗೆ ಅವರ ಭೂಮಿಗೆ ಪ್ರತಿಯಾಗಿ ಪರಿಹಾರ ಕೊಡಬೇಕಿದೆ. ಆದರೆ ಇದಕ್ಕೆ ಅವರು ಹಾಕಿಕೊಂಡಿರುವ ಅಳತೆಗೋಲನ್ನು ಅನುಸರಿಸಿದ್ದೇ ಆದರೆ ವೆಚ್ಚವು ವಿಪರೀತವಾಗಿಬಿಡುತ್ತದೆ. ಸರ್ಕಾರದಲ್ಲಿರುವ ಸಂಪ್ರದಾಯ ಶರಣ ಮನೋಭಾವದವರು ಬೇಕೆಂತಲೇ ಭಾರೀ ದರ ನಿಗದಿಸುತ್ತಿದ್ದಾರೆ. ಅವರು ವಾಸ್ತವವಾಗಿ ಈಗಿರುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಕೆಲವು ಯುವ ನಾಯಕರು ಟೀಕಿಸುತ್ತಿದ್ದಾರೆ. ಜಮೀನುದಾರರಿಗೆ ಅಧಿಕ ಪರಿಹಾರವನ್ನು ಕೊಡುವುದಕ್ಕಿಂತ ರೈತರ ಋಣದಾಯಿಕತ್ವವನ್ನು ನಿವಾರಿಸುವುದು ಅದಕ್ಕೂ ಮೊದಲೇ ಆಗಬೇಕಾದ ಕೆಲಸ. ಇದರಿಂದ ಭಾರತದಲ್ಲಿ ಇನ್ನೂ ಹೆಚ್ಚಿನ ಸಮೃದ್ಧಿಯನ್ನು ಸಾಧಿಸಬಹುದು ಎಂದು ಬಹುತೇಕ ಭಾರತೀಯರ ಅಭಿಪ್ರಾಯ.

ಇದೇ ಸಂದರ್ಭದಲ್ಲಿ ಭಾರತದಲ್ಲಿ ೨/೩ರಷ್ಟು ಜನ ಭೂರಹಿತರಿದ್ದಾರೆ. ಸಂಪೂರ್ಣ ಜೀತದಲ್ಲಿಯೇ ಅವರ ಬದುಕು ಸಾಗುತ್ತದೆ. ಆದರೆ ದೇಶದ ಅನೇಕ ಭಾಗಗಳಲ್ಲಿ ಜಮೀನ್ದಾರರ ಜೀವನಮಟ್ಟ ಮಾತ್ರ ಶತಮಾನಗಳ ಹಿಂದೆ ಹೇಗೆ ಇತ್ತೋ ಹಾಗೇ ಮುಂದುವರೆದಿದೆ. ಜಮೀನುದಾರರು ಕೊಯ್ಲಿನಲ್ಲಿ ಅರ್ಧದಷ್ಟನ್ನು ಪಡೆದುಕೊಳ್ಳುತ್ತಾರೆ. ಕೊಯ್ಲಿನ ಕಾಲದಲ್ಲಿ ಕೆಲವೇ ಹೊಂದಾಣಿಕೆಗಳನ್ನು ಮಾಡಿದರೆ ಅವರ ಪಾಲು ೮೫%ಗೆ ಏರುತ್ತದೆ. ಅವರು ರೈತರಿಗೆ ಕೃಷಿ ಸಾಧನಗಳನ್ನು ಒದಗಿಸುವುದಿಲ್ಲ. ರೈತನ ಗುಡಿಸಲನ್ನು ನಿರ್ಮಿಸಿಕೊಡುವುದಿಲ್ಲ. ಬೀಳುಬಿದ್ದ ಭೂಮಿಯನ್ನು ಕೃಷಿಯೋಗ್ಯವಾಗಿ ಮಾಡಲು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಬಾವಿಯ ನಿರ್ಮಾಣ ಮಾಡುವುದಿಲ್ಲ. ಅಥವಾ ಹಾಳಾದ ಬಾವಿಯನ್ನು ಸರಿಪಡಿಸುವುದೂ ಇಲ್ಲ. ಆದರೆ ಯಾವುದೋ ಒಂದು ಕ್ಷುಲ್ಲಕ ಬಾಕಿ ಸಾಲದ ಲೆಕ್ಕ ತೋರಿಸಿ, ಹೇಗೋ ಎಲ್ಲವನ್ನೂ ಸರಿತೂಗಿಸಿಕೊಂಡು ಸಾಗುವಳಿ ಮಾಡುತ್ತಿದ್ದ ರೈತನನ್ನು ಒಕ್ಕಲೆಬ್ಬಿಸುತ್ತಾರೆ. ಬೆಳೆಗಾಗಲೀ, ಕಂದಾಯಕ್ಕಾಗಲೀ ರಸೀತಿ ನೀಡುವ ಪದ್ಧತಿಯನ್ನು ಜಮೀನುದಾರರು ಇಟ್ಟುಕೊಂಡಿರುವುದಿಲ್ಲ. ಇತ್ತ ರೈತರಿಗೆ ಓದು ಬರಹವೂ ಬರುವುದಿಲ್ಲ. ಹೀಗಾಗಿ ಜಮೀನುದಾರನು ತನಗೆ ಬೇಡವೆನಿಸಿದಾಗ ರೈತನನ್ನು ನಿವಾರಿಸುವುದು ಸುಲಭ. ಹೀಗೆ ಜಮೀನ್ದಾರರ ಆಭಾದಿತ ಹಕ್ಕುಗಳು ಲೆಕ್ಕವಿಲ್ಲದಷ್ಟು ಇವೆ. ಅವನ ಅನ್ವೇಷಣ ಪ್ರವೃತ್ತಿಗೆ ತಕ್ಕಂತೆ ಅವು ಹೆಚ್ಚಾಗುತ್ತವೆ. ರೈತನಿಂದ ಆತ ಹಾಲು ಮೊಸರು ಮಜ್ಜಿಗೆ ತೆಗೆದುಕೊಳ್ಳುತ್ತಾನೆ. ಸ್ವಂತ ಉಳುಮೆಗೆ ಗೇಣಿದಾರನ ಎತ್ತುಗಳನ್ನು ತೆಗೆದುಕೊಳ್ಳಬಹುದು. ಆದರೆ ಅವನು ಮಾತ್ರ ರೈತನಿಗೆ ಏನನ್ನೂ ಬಿಟ್ಟಾಯಾಗಿ ಒದಗಿಸುವುದಿಲ್ಲ. ಖರ್ಚು ಮಾಡಿದ್ದನ್ನು ಗಳಿಸಲು ಅನುಕೂಲವಾಗುವಂತೆ ರೈತನಿಗೆ ಬೀಜಗಳನ್ನ ಒದಗಿಸುವುದಿಲ್ಲ. ಬೀಜಕ್ಕಾಗಿ ರೈತ ಜಮೀನ್ದಾರನಿಗಿಂತ ಕ್ರೂರನಾದ ಲೇವಾದೇವಿಗಾರನ ಕಪಿಮುಷ್ಠಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಅವನು ಹಾಕುವ ಬಡ್ಡಿಯ ದರಗಳಿಗೆ ಮಿತಿಯೇ ಇರುವುದಿಲ್ಲ. ರೈತರನ್ನು ಅನಕ್ಷರಸ್ಥ ಸ್ಥಿತಿಯಲ್ಲೇ ಇರಿಸುವುದಕ್ಕೆ ಜಮೀನ್ದಾರ ಮತ್ತು ಲೇವಾದೇವಿಗಾರ ಇಬ್ಬರೂ ಒಬ್ಬರಿಗಿಂತ ಒಬ್ಬರು ಮಿಗಿಲಾದ ಪೂರಕಪಾತ್ರ ವಹಿಸುತ್ತಾರೆ. ಬಹುದೊಡ್ಡ ಜಮೀನ್ದಾರರು ಹೇಗಿರುತ್ತಾರೆ ಎಂದು ನಾನು ಮೊತ್ತಮೊದಲು ನೋಡಿದ್ದು ಹೈದ್ರಾಬಾದಿನಲ್ಲಿ. ನಾನು ಭೇಟಿ ಮಾಡಿದ ಜಮೀನ್ದಾರನ ಕೊಬ್ಬಿದ ಮುಖದಲ್ಲಿ ಕಣ್ಣುಗಳು ಎಲ್ಲೋ ಆಳದಲ್ಲಿ ಹುದುಗಿದ್ದವು. ವಿಧವಿಧದ ರತ್ನವಜ್ರದ ಉಂಗುರುಗಳು ಅವನ ದಪ್ಪಗಿನ ದುಂಡನೆಯ ಬೆರಳ ಚರ್ಮದ ಪದರಗಳಲ್ಲಿ ಮುಳುಗಿ ಹೋಗಿದ್ದವು. ಆತನ ಕುಟುಂಬ ಹೈದ್ರಾಬಾದಿಗೆ ಬಂದು ನೆಲೆಸಿದ ಬಹಳ ಹಳೆಯ ಕುಟುಂಬವಾಗಿತ್ತು. ದೆಹಲಿಯ ಮುಘಲ್ ಚಕ್ರವರ್ತಿ ೧೬೫೦ರಲ್ಲಿ ಅಸಫ್‌ನಾ ಎಂಬ ಗೌರ್ನರನನ್ನು ಹೈದ್ರಾಬಾದಿಗೆ ಕಳಿಸಿದಾಗ ಆತನ ಜೊತೆಯಲ್ಲಿ ಇವನ ಪೂರ್ವಿಕರು  ಬಂದಿದ್ದರು. ಈ ಪೂರ್ವಿಕರು ಹಿಂದಿನ ನಿಜಾಮನಿಗೆ ಸೇವೆ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಭಾರೀ ಭೂಮಿಯ ಕಾಣಿಕೆಯನ್ನು ಪಡೆದಿದ್ದರು. ಈ ಜಮೀನ್ದಾರನಿಗೆ ‘ಪೈಗಾ’ ಎಂಬ ಬಿರುದಿತ್ತು. ಹೈದ್ರಾಬಾದ್ ಪ್ರಾಂತದ ಸ್ಥಿತಿ ವಿಚಿತ್ರ. ಅಲ್ಲಿನ ಜನಸಂಖ್ಯೆಯಲ್ಲಿ ಐದನೇ ನಾಲ್ಕು ಭಾಗದಷ್ಟು ಜನ ಹಿಂದೂಗಳು. ಆದರೆ ಅವರನ್ನು ಆಳುತ್ತಿದ್ದವನು ಮಾತ್ರ ಮುಸ್ಲಿಂ ನಿಜಾಮ. ಇಲ್ಲಿದ್ದ ಕೆಲವೇ ಹಿಂದೂ ಜಮೀನ್ದಾರರಲ್ಲಿ ನಾನು ಭೇಟಿ ಮಾಡಿದವನೂ ಒಬ್ಬ. ಈತ ಚೆನ್ನಾಗಿ ಮಾತಾಡುತ್ತಿದ್ದ ಆಧುನಿಕ ಪ್ರಪಂಚದಲ್ಲಿ ಜಮೀನುದಾರರಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಹೇಳಿದ. ಅವನ ಮಾತಿನಲ್ಲಿದ್ದ ಪ್ರಾಮಾಣಿಕತೆ ನನಗೆ ಅಚ್ಚರಿ ತಂದಿತು. ಇಲ್ಲಿ ಎಲ್ಲ ಜಮೀನ್ದಾರರೂ ಖಾಸಗಿಯಾಗಿ ಒಂದು ಪೊಲೀಸ್ ಪಡೆ ಇಟ್ಟುಕೊಂಡಿರ್ತಾರೆ. ಈ ಜಮೀನ್ದಾರರೂ ಅಷ್ಟೇ. ಈ ಪೊಲೀಸ್ ಪಡೆಯಲ್ಲಿ ಸೂಪರಿಂಟೆಂಡೆಂಟ್, ಇನ್ಸ್‌ಪೆಕ್ಟರ್ ಹಂತದವರೂ ಇದ್ದರು. ಈತನದೇ ಒಂದು ನ್ಯಾಯಾಂಗ ವ್ಯವಸ್ಥೆ ಇತ್ತು ಮತ್ತು ಖಾಸಗಿ ಜೈಲುಗಳೂ ಇದ್ದವು. ಈ ವ್ಯವಸ್ಥೆ ಬಲವಾಗಿ ಬೇರೂರಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದರ ತಳಪಾಯ ಕಂಪಿಸತೊಡಗಿತ್ತು. ಈಗಾಗಲೇ ಇವನಿಗೆ ಇವನ ಖಾಸಗಿ ಪೋಲೀಸರಿಂದಲೇ ತೊಂದರೆ ಆರಂಭವಾಗಿತ್ತು.

“ನೋಡಿ, ಈವತ್ತೇ ನಮ್ಮ ಖಾಸಗಿ ಪೊಲೀಸರು ಮುಷ್ಕರ ಹೂಡಿದ್ದಾರೆ. ಅವರಿಗೆ ಇನ್ನಷ್ಟು ತುಟ್ಟಿಭತ್ಯೆ ಕೊಡಬೇಕೆಂತೆ. ಬೆಲೆಗಳು ಏರುತ್ತಿರುವ ಆಧಾರದ ಮೇಲೆ ತುಟ್ಟಿಭತ್ಯೆಗೆ ಬೇಡಿಕೆ ವ್ಯಕ್ತಪಡಿಸಿದ್ದಾರೆ’’ ಎಂದ ಆತ. ಪೊಲೀಸರ ತುಟ್ಟಿಭತ್ಯೆ ಹೆಚ್ಚಿಸುವುದು ಜಮೀನ್ದಾರನಿಗೆ ಭಾರೀ ಹೊರೆಯಾಗುತ್ತದೆ. ನಗರದಲ್ಲಿರುವ ಆತನ ಒಂಬತ್ತು ಭವನಗಳ ಕಾವಲಿಗಾಗಿ ೭೦ ಮಂದಿ ಖಾಸಗಿ ಪೊಲೀಸರಿದ್ದರು. ಆತನ ಜಮೀನುಗಳನ್ನು ರಕ್ಷಿಸಲು ಇದ್ದ ಪೊಲೀಸರ ಸಂಖ್ಯೆ ೪೫೦೦. ಇಷ್ಟಾಗಿಯೂ ಅವನು ಅವರ ತುಟ್ಟಿಭತ್ಯೆ ಹೆಚ್ಚಿಸಲು  ನಿರ್ಧರಿಸಿದ. ನಾನು ಅವರನ್ನು ಯಾವಾಗಲೂ ಖುಷಿಯಾಗಿರುವಂತೆ ನೋಡಿಕೊಳ್ಳಬೇಕು ನಮ್ಮ ಸುರಕ್ಷಣೆ ಅವರನ್ನು ಅವಲಂಬಿಸಿದೆ ಎಂದ. ಆತನ ವೈಭವೋಪೇತವಾದ ಮನೆಯಲ್ಲಿ ಚಹಾಕ್ಕೆ ಆಮಂತ್ರಿಸಿದ್ದ ನನಗೆ ದೊಡ್ಡ ದೊಡ್ಡ ತಟ್ಟೆಗಳಲ್ಲಿ ಸಿಹಿ ತಿಂಡಿಗಳನ್ನು ತುಂಬಿ ತಂದಿಟ್ಟರು. ಅವುಗಳನ್ನು ರುಚಿ ನೋಡಿ ನಾವು ಹೊರಟೆವು. ಬಹುಶಃ ಅವರು ತಂದಿಟ್ಟ ತಿನಸು ಇಡೀ ಒಂದು ಹಳ್ಳಿಯ ಜನರ ಸಮೃದ್ಧ ಭೋಜನಕ್ಕೆ ಸಾಕಾಗುವಷ್ಟಿತ್ತು. ಬೆಟ್ಟದ ತಿನಿಸು ಇಡೀ ಒಂದು ಹಳ್ಳಿಯ ಜನರ ಸಮೃದ್ಧ ಭೋಜನಕಗ್ಕೆ ಸಾಕಾಗುವಷ್ಟಿತ್ತು. ಬೆಟ್ಟದ ಮೇಲಿದ್ದ ಆ ಮನೆಯ ಮುಂದೆ ಕುಳಿತು ಮುಸ್ಸಂಜೆಯಲ್ಲಿ ನಗರವನ್ನು ನೋಡುತ್ತಿದ್ದೆ. ವಿದ್ಯುದ್ಧೀಪಗಳು ಹೊತ್ತಿಕೊಂಡಾಗ ಇಡೀ ಹೈದ್ರಾಬಾದ್ ನಗರ ಕಿನ್ನರ ಲೋಕವಾಗಿ ಪರಿವರ್ತನೆಯಾಯಿತು. ದೊಡ್ಡ ದೊಡ್ಡ ರಾಜಸಂಸ್ಥಾನಗಳ ರಾಜಧಾನಿಗಳನ್ನು ತನ್ನ ಮಾಂತ್ರಿಕ ಸ್ಪರ್ಶದಿಂದ ಅದ್ಭುತವಾಗಿ ಕಂಗೊಳಿಸುವಂತೆ ಮಾಡುವ ಈ ವಿದ್ಯುತ್ತು ಹಳ್ಳಿಗಳನ್ನು ಮುಟ್ಟುವಷ್ಟರಲ್ಲಿ ಇದ್ದಕ್ಕಿದ್ದಂತೆ ಎಲ್ಲಿಯೋ ಮಾಯವಾಗಿಬಿಡುತ್ತದೆ. ನಗರದ ಮಧ್ಯೆ ನೂರಾ ಎಂಬತ್ತು ಅಡಿ ಎತ್ತರದ ಚಾರ್‌ಮಿನಾರ್. ಈ ಜಗತ್ತಿನ ವೈಭವ ಐಶ್ವರ್ಯಗಳನ್ನು ನೋಡನೊಡುತ್ತಲೇ ಅದರ ನಶ್ವರತೆಯನ್ನು ಜನ ಕಂಡುಕೊಳ್ಳಬೇಕು ಎಂಬ ದೃಷ್ಟಿಯಿಂದ ೧೬ನೇ ಶತಮಾನದ ಸುಲ್ತಾನನೊಬ್ಬ ಅದನ್ನು ಕಟ್ಟಿಸಿದನಂತೆ.

ಜಮೀನುದಾರ ನನಗೆ ಅತ್ಯಂತ ಅಪರೂಪವಾದ ಉತ್ಕೃಷ್ಟವಾದ ಮದ್ಯವನ್ನು ನೀಡಿದ. ಹೀಗೆ ನೀಡುವಾಗಲೇ ಅವನಲ್ಲಿ ಒಂದು ರೀತಿಯ ಪ್ರತಿಷ್ಠೆ ಇಣುಕುತ್ತಿತ್ತು. ಮೊಗಲಾಯ್ ಎಂಬ ಹೆಸರಿನ ಈ ಮದ್ಯವನ್ನು ಭಟ್ಟಿ ಇಳಿಸುವ ಸೂತ್ರ ಅತ್ಯಂತ ಪ್ರಾಚೀನ ಹಾಗೂ ರಹಸ್ಯವಾದುದು ಎಂದು ಆತ ಹೇಳಿದ. ಈ ರೆಸಿಪಿ ಮೊಘಲ್ ಚಕ್ರವರ್ತಿಯಿಂದಲೇ ನಮಗೆ ನೇರವಾಗಿ ಬಂದಿದ್ದು. ಇದು ಬೇರೆ ಯಾರಿಗೂ ಲಭ್ಯವಿಲ್ಲ. ಇದನ್ನು ಮಲ್ಲಿಗೆ, ಗುಲಾಬಿ, ಬೆಲ್ಲ ಮೊದಲಾದವುಗಳನ್ನು ಭಟ್ಟಿ ಇಳಿಸಿ ತಯಾರಿಸುತ್ತೇವೆ. ಬೇರೆ ಯಾರಾದರೂ ಇದರ ಸೂತ್ರವನ್ನು ಕಂಡುಕೊಂಡರೆ ಕಾನೂನನ್ನು ಪ್ರಯೋಗಿಸಿ ಅದನ್ನು ತಡೆಯುತ್ತೇವೆ ಎಂದು ವಿವರಿಸಿದ. ಈ ಉತ್ಕೃಷ್ಟ ಪಾನೀಯದ ಗುಟುಕನ್ನು ನಾವು ಹೀರಿದೆವು. ಇದು ವೋಡ್ಕಾದಷ್ಟೇ ಪಾರದರ್ಶಕವಾಗಿತ್ತು. ತೀಕ್ಷ್ಣವಾಗಿತ್ತು. ಆದರೆ ಇದಕ್ಕೆ ಅಸಹಜವೆನ್ನಿಸುವಂತಹ ಮಲ್ಲಿಗೆಯ ಪರಿಮಳವಿತ್ತು.

ನಿಮ್ಮ ಜಮೀನು ಎಷ್ಟು ಎಕರೆ ಇದೆ ಎಂದು ನಾನು ಕೇಳಿದ. ನನ್ನ ಪ್ರಶ್ನೆಯಿಂದ ಅವನು ದಂಗಾದ. ಇಲ್ಲಿ ಎಕರೆಗಳ ಪ್ರಶ್ನೆಯಿಲ್ಲ. ಅದು ಎಷ್ಟೋ ಹಳ್ಳಿಗಳಷ್ಟು ಎಂದ. ಎಷ್ಟು ಹಳ್ಳಿ ಎಂದೆ. ಬಹುಶಃ ಈ ಮೊದಲು ಯಾರೂ ಆತನಿಗೆ ಈ ಪ್ರಶ್ನೆ ಕೇಳಿರಲಾರರು. ಅವನಿಗೆ ತಕ್ಷಣ ಅದರ ಸಂಖ್ಯೆಯನ್ನು ಹೇಳಲಾಗಲಿಲ್ಲ. ಮನಸ್ಸಿನಲ್ಲೇ ಸ್ವಲ್ಪ ಹೊತ್ತು ಲೆಕ್ಕಾಚಾರ ಮಾಡಿದ ಮೇಲೆ ಅವನು ತನ್ನ ಜಾಗೀರಿನ ಗಾತ್ರವನ್ನು ಅಂದಾಜು ಮಾಡಿ ಐನೂರು ಹಳ್ಳಿಗಳು ಎಂದ. ಇವೆಲ್ಲ ಒಂದೇ ಕಡೆ ಸೇರಿಕೊಂಡ ಹಾಗೆ ಇಲ್ಲ ಎಂಬುದು ಅವನಿಗೆ ಚಿಂತೆಯಾಗಿತ್ತು. ಈ ಹಳ್ಳಿಗಳು ಬೇರೆಬೇರೆ ಕಡೆ ಹರಡಿಕೊಂಡಿದ್ದರಿಂದ ಅವುಗಳ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿತ್ತು. ಅದರಲ್ಲಿಯೂ ಮುಖ್ಯವಾಗಿ ಖಾಸಗಿ ಪೊಲೀಸ್ ದಳದ ನಿರ್ವಹಣೆಯ ವೆಚ್ಚ ದಿನೇದಿನೇ ಏರುತ್ತಿತ್ತು. ಇಲ್ಲಿ ಕೇವಲ ಅವರ ತುಟ್ಟಿಭತ್ಯೆಯ ವೆಚ್ಚ ಮಾತ್ರ ಏರಿರಲಿಲ್ಲ. ಮೊದಲಿನ ಸರಳ ಸಾಧನಗಳಿಗೆ ಬದಲಾಗಿ ಈಗ ಬಳಸುತ್ತಿದ್ದ ಆಧುನಿಕ ಶಸ್ತ್ರಾಸ್ತ್ರಗಳ ವೆಚ್ಚ ದಿನೇದಿನೇ ಏರುತ್ತಿತ್ತು. ಇಲ್ಲಿ ಕೇವಲ ಅವರ ತುಟ್ಟಿಭತ್ಯೆಯ ವೆಚ್ಚ ಮಾತ್ರ ಏರಿರಲಿಲ್ಲ. ಮೊದಲಿನ ಸರಳ ಸಾಧನಗಳಿಗೆ ಬದಲಾಗಿ ಈಗ ಬಳಸುತ್ತಿದ್ದ ಆಧುನಿಕ ಶಸ್ತ್ರಾಸ್ತ್ರಗಳ ವೆಚ್ಚ ತುಂಬಾ ಹೆಚ್ಚಾಗಿತ್ತು. ಇವೆಲ್ಲವನ್ನೂ ನಾವು ಒತ್ತಟ್ಟಿಗೆ ತಂದು ಆಧುನಿಕಗೊಳಿಸಲೇಬೇಕಾಗಿದೆ ಎಂದ. ನಿಜಾಮ ಈ ಕಾರ್ಯವನ್ನು ಆಗಲೇ ಆರಂಭಿಸಿದ್ದ. ಕೆಲವು ವರ್ಷಗಳ ಹಿಂದೆಯೇ ಆತ, ಆಳುವ ಕುಟುಂಬದ ಎಲ್ಲರೂ ತಮ್ಮ ಪೈಗಾಗಳನ್ನು ಒತ್ತಟ್ಟಿಗೆ ತಂದುಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದ. ನಿಜಾಂ ಮತ್ತು ಆತನ ಬಂಧುಗಳು ಈ ಪುನರ್‌ವ್ಯವಸ್ಥೆಯ ವ್ಯವಹಾರವನ್ನು ಪೂರ್ಣಗೊಳಿಸಿದ ನಂತರ ಮುಂದಿನ ಸರದಿ ಜಾಗೀರುದಾರರು ಹಾಗೂ ಜಮೀನುದಾರರರದು. ಅವರು ತಮ್ಮ ಭೂಮಿಯನ್ನು ವಿನಿಮಯ ಮಾಡಕೊಳ್ಳಬೇಕಾಗಿತ್ತು. ಅಗತ್ಯವಿರುವ ಕಡೆ ಜಮೀನನ್ನು ಕೊಂಡುಕೊಳ್ಳಬೇಕಾಗಿತ್ತು. ಆಗ ಮಾತ್ರ ರೈತವರ್ಗದ ಜನರಲ್ಲಿ ದಿನೇದಿನೇ ಹೆಚ್ಚಿತ್ತಿರುವ ದಂಗೆಕೋರತನವನ್ನು ನಿಭಾಯಿಸಲಾಗುವಂತೆ ಪೊಲೀಸ್ ಬಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿತ್ತು. ನಾನು ಆ ದಿನ ಬೆಳಿಗ್ಗೆಯಷ್ಟೆ ಈ ವ್ಯವಹಾರಕ್ಕೆ ಸಾಕ್ಷಿಯಾದ ಒಂದು ದೃಶ್ಯವನ್ನು ನೋಡಿದ್ದೆ. ನಾನು ಇಲ್ಲಿನ ಪ್ರಧಾನ ಸಚಿವರ ಕಛೇರಿಯಿಂದ ಹೊರಬರುತ್ತಿದ್ದೆ. ಯಾವುದೋ ಮನವಿಯನ್ನು ಸಲ್ಲಿಸಲು ಬಂದಿದ್ದ ಒಂದು ರೈತರ ಗುಂಪು ಅಲ್ಲಿ ಹತಾಶವಾಗಿ ನಿಂತಿತ್ತು. ಈ ಜನ ಮನವಿ ಸಲ್ಲಿಸಬೇಕೆಂದು ಅನೇಕ ವಾರಗಳಿಂದ ಬರುತ್ತಲೇ ಇದ್ದರು. ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಅನೇಕ ಸಲ ಲಂಚ ಕೊಟ್ಟರೂ ಪ್ರಯೋಜನವಾಗಿರಲಿಲ್ಲ.  ತಾವು ಯಾರಿಗೆ ಮನವಿ ಸಲ್ಲಿಸಬೇಕು. ಆ ಕಛೇರಿ ಎಲ್ಲಿದೆ ಎಂಬುದು ಅವರಿಗೆ ತಿಳಿದಿದ್ದೂ ಕೂಡ ಅನೇಕ ಸಲ ಲಂಚ ಕೊಟ್ಟ ನಂತರವೆ.

ಈ ರೈತರುಗಳಿದ್ದ ಜಮೀನನ್ನು ಒಬ್ಬ ಹೊಸ ಜಮೀನುದಾರ ಕೊಂಡುಕೊಂಡಿದ್ದ. ಆಗ ಅವನು ತಲೆತಲಾಂತರದಿಂದ ಅಲ್ಲಿಯೇ ನೆಲೆಸಿದ್ದ ಈ ರೈತರನ್ನೆಲ್ಲ ಇಡಿಯಾಗಿ ಉಚ್ಛಾಟಿಸಿದ್ದ. ಈ ರೈತರು, ಬೆಳೆದ ಬೆಳೆಯ ಇಂತಿಷ್ಟು ಪಾಲನ್ನು ಜಮೀನುದಾರನಿಗೆ ಒಪ್ಪಿಸುವ ಆಧಾರದ ಮೇಲೆ ಅಲ್ಲಿ ಉಳುಮೆ ಮಾಡಿಕೊಂಡಿದ್ದರು. ಇದಲ್ಲದೆ ತಮಗೆ ಬೇಕಾದಷ್ಟು ಆಹಾರವನ್ನು ಬೆಳೆದುಕೊಳ್ಳುವುದಕ್ಕಾಗಿ ಪಡೆದುಕೊಂಡಿದ್ದ ಅಂಗೈ ಅಗಲದಷ್ಟು ಜಮೀನಿಗೆ ಸ್ವಲ್ಪ ಬಾಡಿಗೆಯನ್ನೂ ಸಹ ಕೊಡುತ್ತಿದ್ದರು. ಹೊಸ ಜಮೀನುದಾರ ಮಾಡಿದ ಮೊದಲ ಕೆಲಸವೇನೆಂದರೆ ಈ ಬಾಡಿಗೆಯನ್ನು ಮೂರರಷ್ಟು ಹೆಚ್ಚಿಸಿದ್ದು. ರೈತರಿಗೆ ಅದನ್ನು ಕೊಡುವುದು ಅಸಾಧ್ಯವಾದಾಗ ಇಡೀ ಹಳ್ಳಿಯನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಓಡಿಸಿದ. ಹೀಗೆ ಓಡಿಸಿದ ಸಂದರ್ಭದಲ್ಲಿ, ಈ ರೈತರು ಶ್ರಮಪಟ್ಟು ಬೆಳೆದಿದ್ದ ಬೆಳೆ ಆಗಷ್ಟೆ ಕೊಯ್ಲಿಗೆ ಸಿದ್ಧವಾಗಿತ್ತು. ಇಡೀ ಫಸಲು ತನಗೇ ಸೇರುತ್ತದೆ ಎಂದು ಜಮೀನ್ದಾರ ಹೇಳಿದ. ಫಸಲನ್ನು ಕೇಳಿದ ರೈತರನ್ನು ಒಂದಿಷ್ಟೂ ಕರುಣ ಇಲ್ಲದೆ ಹೊಡೆಸಿದ್ದ ಅವರ ಹೆಂಡಿರು ಮಕ್ಕಳನ್ನು ಬಿಡದೆ ಎಲ್ಲರನ್ನೂ ಹೊಡೆಸಿದ್ದ. ಈ ಜನ ತಮ್ಮ ಎಳೆಯ ಮಕ್ಕಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಪಕ್ಕದ ಹಳ್ಳಿಯಲ್ಲಿ ಬಿಟ್ಟು ಬಂದಿದ್ದರು. ಇವರನ್ನು ಓಡಿಸಲು ಜಮೀನುದಾರ ಇನ್ನೊಂದು ಸುಲಭ ಉಪಾಯ ಮಾಡಿದ. ದನಕರುಗಳಿಗೆ ನೀರು ಉಣಿಸುವುದಕ್ಕೆಂದಿದ್ದ ಬಾವಿಯನ್ನು ಮುಚ್ಚಿಸಿಬಿಟ್ಟ ಹಾಗೇ ಇದ್ದರೆ ತಮ್ಮ ದನಕರುಗಳು ನೀರಿಲ್ಲದೆ ಸಾಯುತ್ತವೆ ಎಂದು ರೈತರು, ಅವುಗಳನ್ನು ಪಕ್ಕದ ಹಳ್ಳಿಗೆ ಹೊಡೆದುಕೊಂಡು ಹೋಗಲೇಬೇಕಾಯಿತು.

ಭಾರತದ ರಾಜ್ಯಗಳಲ್ಲಿ ಅತಿಥಿಗಳನ್ನು ಉತ್ತಮವಾಗಿ ಸತ್ಕರಿಸಿ ತಮ್ಮ ಕೆಲವು ಚಟುವಟಿಕೆಗಳನ್ನು ಮಾತ್ರ ತೋರಿಸಿ ಉಳಿದವನ್ನು ಮರೆಮಾಚಿಬಿಡುತ್ತಾರೆ. ಆದ್ದರಿಂದ ಮೇಲೆ ಹೇಳಿದ ರೀತಿಯ ಕಥೆಗಳು ಗಮನಕ್ಕೆ ಬರುವುದಿಲ್ಲ. ಆದರೆ ನಾನು ಬರೆದ ಈ ವಿವರಗಳನ್ನೆಲ್ಲ ನನಗೆ ಅತಿಥ್ಯ ನೀಡಿದ ಜಮೀನ್ದಾರ ಓದಿ “ನೋಡಿ, ಐನೂರು ಹಳ್ಳಿಗಳಿರುವ ನನ್ನ ವಿಷಯವನ್ನೇ ತೆಗೆದುಕೊಳ್ಳಿ. ಕಾಲ ಬದಲಾಗಿದೆ. ಜನ ಈಗಾಗಲೇ ಜಮೀನು ಕೊಡುವಂತೆ ಕೇಳುತ್ತಿದ್ದಾರೆ. ಭಾರತ ಈಗ ಸ್ವತಂತ್ರವಾಗಿದೆ. ಈ ಜನರಲ್ಲಿ ಕೆಲವರಿಗೆ ನಾನು ಜಮೀನು ಕೊಡಲೇಬೇಕು.’’ ಈ ಮಾತುಗಳನ್ನು ಹೇಳುತ್ತ ಜಮೀನುದಾರ ಚಪ್ಪಲಿ ಬಿಟ್ಟು ನೆಲದ ಮೇಲೆ ತಣ್ಣಗೆ ಕುಳಿತುಕೊಂಡ. “ನಿಮಗೆ ಗೊತ್ತೇ ಇದೆ. ಜನ ವಿದ್ಯಾಭ್ಯಾಸ ಬೇಕು ಅನ್ನುತ್ತಾರೆ. ವಿದ್ಯೆ ಸಿಕ್ಕಮೇಲೆ ಕೆಲವೊಂದು ಸುಧಾರಣೆಗಳನ್ನು ಕೇಳುತ್ತಾರೆ. ಅವರು ಸುಧಾರಣೆ ಕೇಳಿದರೆ ನಮಗೆ ತೊಂದರೆ ಬಂತು ಎಂದರ್ಥ. ಸ್ವಲ್ಪ ಶಿಕ್ಷಣವಿದ್ದ ಜನ ಹಕ್ಕುಗಳಿಗೆ ಒತ್ತಾಯ ಮಾಡುತ್ತಾರೆ. ಅವರಿಗೆ ಹಕ್ಕುಗಳನ್ನು ಕೊಟ್ಟರೆ ಈಗ ನಮಗೆ ಇರುವಂಥ ಅಧಿಕಾರಿಗಳು ಇರುವುದಿಲ್ಲ’’ ಎಂದ.

“ಯಾವ ಹಕ್ಕುಗಳನ್ನು ಕೊಟ್ಟರೆ?’’ ಎಂದು ನಾನು ಕೇಳಿದೆ. “ಅವರೆಲ್ಲ ಜಮೀನುದಾರರನ್ನು ಬಿಟ್ಟು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಸೇರಿಕೊಳ್ಳಬೇಕೆಂದಿದ್ದಾರೆ. ಈಗಾಗಲೇ ಅದಕ್ಕೆ ಒತ್ತಾಯ ಹೆಚ್ಚಾಗುತ್ತಿದೆ. ಅವರಿಗೆಲ್ಲ ಅದೇ ಬೇಕಾಗಿರುವುದು. ಜನರಿಗೆ ಹಕ್ಕುಗಳನ್ನು ಕೊಟ್ಟಾಗ ನಮ್ಮ ಪ್ರಾಮುಖ್ಯತೆ ತಪ್ಪಿಹೋಗುತ್ತದೆ. ಜನಕ್ಕೆ ಶಿಕ್ಷಣ ಸಿಕ್ಕಮೇಲೆ ಯಾವುದೂ ಮೊದಲಿನ ಹಾಗೆ ಇರಲು ಸಾಧ್ಯವಿಲ್ಲ’’ ಎಂದು ನಿರಾಶೆಯಿಂದ ಹೇಳಿದ. ಈ ಪ್ರಗತಿಯ ಬಗ್ಗೆ ಆತ ವ್ಯಥೆಗೊಂಡಿದ್ದ. ಈ ಮಾತುಗಳು ಪ್ರಸ್ತುತ ಬದಲಾಗುತ್ತಿರುವ ಸ್ಥಿತಿಯನ್ನು ಎಷ್ಟು ಸ್ಪಷ್ಟವಾಗಿ ತಿಳಿಸಿದವೆಂದರೆ ಈ ಮಾತು ಜಮೀನ್ದಾರನ ಬಾಯಿಂದ ಬಂದಿಲ್ಲ. ಆವನ ವ್ಯಾಪ್ತಿಯಲ್ಲಿದ್ದ ಹಳ್ಳಿಗಳ ಸಾವಿರಾರು ಜೀತಗಾರ ರೈತರ ಬಾಯಿಂದ ಬಂದಿದೆ ಎನ್ನಿಸಿತು.

* * *