ಭಾರತದ ಉತ್ತರದ ಗಡಿಯಲ್ಲಿ ಸದಾಕಾಲ ಹಿಮದಿಂದ  ಆವೃತವಾದ ಹಿಮಾಲಯದ ತಪ್ಪಲಲ್ಲಿ ಇರುವ ರಾಜ್ಯ ಕಾಶ್ಮೀರ. ಪ್ರಜಾರಾಜ್ಯ ಸ್ಥಾಪನೆಗಾಗಿ ಇಲ್ಲಿ ನಡೆದ ಹೋರಾಟಗಳು  ಇಡೀ ಭಾರತಕ್ಕೆ ಬೆಳಕು ತೋರಿದವು. ಈ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳಿಂದಾಗಿಯೇ ಇಲ್ಲಿನ ಜನ ಸಾಹಸ ಪ್ರವೃತ್ತಿಯನ್ನು, ಕಷ್ಟ ಸಹಿಷ್ಣುತೆಯನ್ನೂ ಬೆಳೆಸಿಕೊಂಡಿದ್ದಾರೆ. ಜನರ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿಯೂ ಅವರ ಈ ಗುಣಗಳು ವ್ಯಕ್ತವಾದವು. ಇವರ ಹೋರಾಟದ ಕೊನೆಯ ಹಂತದಲ್ಲಿ ಅಲ್ಲಿನ ಮಹಾರಾಜ ದೇಶ ಬಿಟ್ಟು ಓಡಿಹೋಗಿದ್ದರಿಂದ ಇವರಿಗೆ ಗುರಿ ತಲುಪುವುದು ಸುಲಭವಾಯಿತು.

೧೯೪೭ರ ಅಕ್ಟೋಬರ್ ಆರಂಭದಲ್ಲಿ ಮತಾಂಧ ಮುಸ್ಲಿಂ ಬುಡಕಟ್ಟು ಜನರು ಗುಂಪು ಗುಂಪಾಗಿ ಪಾಕಿಸ್ತಾನದಿಂದ ಬಂದು ಕಾಶ್ಮೀರದ ಜನರ ಕೊಲೆ ಲೂಟಿ ನಡೆಸಿದರು. ಹಳ್ಳಿಗಳನ್ನು ಸುಟ್ಟು ಹಾಕಿದರು. ಇದ್ದಕ್ಕಿದ್ದಂತೆ ನಡೆದ ಈ ಧಾಳಿಯಿಂದ ಕಾಶ್ಮೀರಕ್ಕೆ ದಿಕ್ಕು ತೋಚಲಿಲ್ಲ. ಆದರೂ ಜನರು ಧಾಳಿಕೋರರನ್ನು ಶ್ರೀನಗರದ ಹೊರಭಾಗದವರೆಗೂ ಅಟ್ಟಿಕೊಂಡು ಹೋದರು. ತನ್ನ ರಾಜಧಾನಿಯನ್ನು, ಪ್ರಜೆಗಳನ್ನು ರಕ್ಷಿಸಬೇಕೆಂಬ ಕಿಂಚಿತ್ ಕರ್ತವ್ಯ ಪ್ರಜ್ಞೆಯೂ ಇಲ್ಲದ ಮಹಾರಾಜ ತನ್ನ ಬಂಧುಗಳು ಹಾಗೂ ಒಡವೆ ವಸ್ತುಗಳೊಂದಿಗೆ ಬೆಳಗಿನ ಜಾವ ನಾಲ್ಕು ಗಂಟೆಗೇ ಅರಮನೆಯನ್ನು ಬಿಟ್ಟು ಪಲಾಯನ ಮಾಡಿದ. ೪೮ ಮಿಲಿಟರಿ ಲಾರಿಗಳು ಅವನನ್ನು ಹಿಂಬಾಲಿಸಿದವು. ಅರಮನೆಯ ರತ್ನಗಂಬಳಿಗಳು, ಅಗ್ಗಿಷ್ಟಿಕೆಯಿಂದ ಕಿತ್ತ ಜೇಡ್ ಮತ್ತು ಅಮೃತಶಿಲೆಯ ಚಪ್ಪಡಿಗಳು, ರಾಜ್ಯದ ದೇವಾಲಯಗಳ ದೇವತೆಗಳ ಕೊರಳುಗಳಲ್ಲಿದ್ದ ಆಮೂಲ್ಯ ರತ್ನಾಭರಣಗಳು ಈ ಲಾರಿಗಳಲ್ಲಿ ತುಂಬಿದ್ದವು. ಇವೆಲ್ಲವುಗಳೊಂದಿಗೆ ಮಹಾರಾಜ ಜಮ್ಮುವಿನಲ್ಲಿದ್ದ ಬೇಸಿಗೆ ಅರಮನೆ ಸೇರಿಕೊಂಡ. ಜನರ ಮೇಲೆ ಇದಕ್ಕಿಂತ ತೀವ್ರ ಪರಿಣಾಮ ಬೀರಿದ್ದೇನೆಂದರೆ ಆತ ಇಡೀ ರಾಜ್ಯದ ಪೆಟ್ರೋಲ್ ಸರಬರಾಜನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಎಲ್ಲ ಮಿಲಿಟರಿ ಸಾರಿಗೆ ಮತ್ತು ಪೆಟ್ರೋಲ್ ಸರಬರಾಜು ತಪ್ಪಿಹೋಗಿದ್ದರಿಂದ ಜನ ಕೆರಳಿದರು. ಆದರೂ ಅವರು ತಾವು ಯಾರ ವಿರುದ್ಧ ಅಷ್ಟು ದೀರ್ಘಕಾಲದ ಹೋರಾಟ ನಡೆಸಿದ್ದರೋ ಯಾರ ಕೈಕೆಳಗೆ ಅಪಾರ ಕಷ್ಟನಷ್ಟ ಅನುಭವಿಸಿದ್ದರೋ ಅಂತಹ ಮಹಾರಾಜ ತಾನಾಗಿಯೇ ಜಾಗ ಖಾಲಿ ಮಾಡಿದ್ದು ಅವರಿಗೆ ತುಂಬ ಸಂತಸ ಉಂಟುಮಾಡಿತು. ಇದಾದ ಕೇವಲ ೪೮ ಗಂಟೆಗಳಲ್ಲಿ National Conference ಎಂದು ಹೆಸರಾಗಿದ್ದ ಜನತೆಯ ಪಕ್ಷ ಹೊಸ ಸರ್ಕಾರವನ್ನು ಸ್ಥಾಪಿಸಿತು. ಆಹಾರ ಸಂಗ್ರಹಣೆಯ ಉಸ್ತುವಾರಿಯನ್ನು ಅದು ವಹಿಸಿಕೊಂಡಿತ್ತು. ಧಾಳಿಕೋರರ ವಿರುದ್ಧ ಹೋರಾಡುವುದಕ್ಕಾಗಿ ಜನರ ಹೋರಾಟ ಪಡೆಗಳನ್ನು ವ್ಯವಸ್ಥೆ ಮಾಡಿತು ಮತ್ತು ಹೊಸ ಸಂವಿಧಾನವನ್ನು ರಚಿಸುವ ಕೆಲಸವನ್ನು ಆರಂಭಿಸಿತು. ಭಾರತ ಸ್ವಾತಂತ್ರ್ಯ ಗಳಿಸಿ ಇನ್ನೂ ಹತ್ತು ವಾರಗಳು ಮಾತ್ರ ಮುಗಿದ ಹಂತದಲ್ಲಿ ಈ ತ್ವರಿತ ಘಟನಾವಳಿಗಳು ಸಂಭವಿಸಿದ್ದವು. ಯುದ್ಧದಿಂದ ಜರ್ಝರಿತವಾದ ಮತ್ತು ಮತಾಂಧ ಆಕ್ರಮಣಕಾರರ ಭಯೋತ್ಪಾದನೆಗೆ ತುತ್ತಾಗಿದ್ದ ಕಾಶ್ಮೀರ, ಸ್ವಾತಂತ್ರ್ಯ ಗಳಿಸಿದ ಭಾರತದ ಉಪಖಂಡದಲ್ಲಿ ತನ್ನದೇ ಆದ ಸಂವಿಧಾನ ಯೋಜನೆಯನ್ನು ಲಿಖಿತ ರೂಪಕ್ಕೆ ತಂದ ಮೊದಲ ಸ್ಥಳವಾಗಿತ್ತು. ಪೀಪಲ್ಸ್ ಪಾರ್ಟಿಯ ಸದಸ್ಯರು ಜಗತ್ತಿನಾದ್ಯಂತದ ಸಂವಿಧಾನಗಳನ್ನು ಗಾಢವಾಗಿ ಅಭ್ಯಾಸ ಮಾಡಿದ್ದರು. ಅವರ ಯೋಜನೆಯ ಪ್ರಕಾರ, ಗಂಡುಹೆಣ್ಣು ಎಂಬ ಭೇದವಿಲ್ಲದೆ ಎಲ್ಲ ವಯಸ್ಕ ಪ್ರಜೆಗಳಿಗೂ ಮತದಾನದ ಹಕ್ಕು ಕೊಡಲಾಯಿತು. ಅಲ್ಪಸಂಖ್ಯಾತರಿಗೆ ಸಮಾನತೆ ಹಾಗೂ ಜನರು ತಮಗಿಷ್ಟವಾದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ಅದು ಕೊಟ್ಟಿತು. ಅನೇಕ ರೀತಿಯ ಶಿಕ್ಷೆಗಳನ್ನು ಜೈಲುವಾಸಗಳನ್ನು ಅನುಭವಿಸಿ, ಬಹುತೇಕ ಸಂದರ್ಭಗಳಲ್ಲಿ ಭೂಗತವಾಗಿಯೇ ಕೆಲಸ ಮಾಡುತ್ತ ಬಂದ ಜನರನ್ನು ಒತ್ತಟ್ಟಿಗೆ ತರುವಲ್ಲಿ ಪೀಪಲ್ಸ್ ಪಾರ್ಟಿ ಬಹು ಸಮರ್ಥವಾಗಿ ಕೆಲಸ ಮಾಡಿತು. ಈ ಜನರೆಲ್ಲ ದಮನಕಾರಿ ಆಡಳಿತವನ್ನು ಎದುರಿಸುವುದಕ್ಕಾಗಿ ಒಟ್ಟುಗೂಡಿದವರಾದ್ದರಿಂದ ಅವರ ಹೋರಾಟ ಪ್ರಜಾತಾಂತ್ರಿಕ ಸ್ವರೂಪವನ್ನು ಪಡೆದುಕೊಳ್ಳಲು ಕಾರಣವಾಯಿತು. ಈ ರೀತಿಯ ಹೋರಾಟಕ್ಕೆ ಅವರ ನಾಯಕ ಶೇಖ್ ಅಬ್ದುಲ್ಲಾ ಕೂಡ ಅಷ್ಟೇ ಕಾರಣವಾಗಿದ್ದರು. ಶೇಖ್ ನಿಜಕ್ಕೂ ಒಬ್ಬ ಇತಿಹಾಸ ಪುರುಷ. ಆತ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಉಗಮಿಸಿದ ಮೊದಲ ಜನಪ್ರಿಯ ಮುಖ್ಯಮಂತ್ರಿ.

ನಾನು ಕಾಶ್ಮೀರಕ್ಕೆ ಬಂದಾಗ ಶೇಖ್ ಅಬ್ದುಲ್ಲಾ ರಾಜಧಾನಿಯಲ್ಲಿರಲಿಲ್ಲ. ಅನಂತರ ನಾನು ಅವರನ್ನು ಭೇಟಿ ಮಾಡಿದಾಗ ಇಷ್ಟು ನೇರ ಸ್ವಭಾವದ, ಅನುಭವದಿಂದ ಪರಿಪಕ್ವನಾದ, ತುಂಬ ವಾಸ್ತವ ದೃಷ್ಟಿಕೋನದ ಮತ್ತು ತೀರ ಸರಳ ನಡೆನುಡಿಯ ಈ ಯುವಕನ ಬಗ್ಗೆ ಯಾಕೆ ಪವಾಡ ಕಥೆಗಳು ಹುಟ್ಟಿಕೊಂಡವು ಎಂದು ಆಶ್ಚರ್ಯವಾಯಿತು.

ನಾನು ೧೯೪೭ರ ಕ್ರಿಸ್‌ಮಸ್ ಆರಂಭಕ್ಕೆ ಸ್ವಲ್ಪ ಮೊದಲು ಕಾಶ್ಮೀರಕ್ಕೆ ಬಂದೆ. ಇಲ್ಲಿ ಬಿರುಸಿನ ಗೆರಿಲ್ಲಾ ಯುದ್ಧ ಹೊರನೋಟಕ್ಕೆ ಗೋಚರವಾಗುತ್ತಿರಲಿಲ್ಲ. ಕಾಶ್ಮೀರವನ್ನು ನೋಡಿದವರಿಗೆ ಅದರ ಸೌಂದರ್ಯದ ಮೋಡಿ ಬಗ್ಗೆ ಗೊತ್ತೇ ಇರುತ್ತಿದೆ. ಇದು ಬೇರೆಯೇ ಪ್ರಪಂಚ. ಇಲ್ಲಿ ನೀರು ನೆಲಕ್ಕೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಕಾಶ್ಮೀರದ ಸರೋವರಗಳ ದಂಡೆಯಿಂದ ಪರ್ವತಶ್ರೇಣಿಗಳು ಮೇಲೇಳುತ್ತವೆ. ಅವುಗಳ ಸ್ಫಟಿಕ ಸದೃಶಪರ್ವತಗಳು ಸರೋವರ ನೀರಿನಲ್ಲಿ ಬಹು ಆಳದವರೆಗೆ ಪ್ರತಿಫಲಿಸುತ್ತಿರುತ್ತವೆ. ಹಿಮಾಚ್ಛಾದಿತವಾದ ಅವುಗಳ ಶಿಖರಗಳು ಭೂಮಿಯೊಡನೆ ಸಂಬಂಧವೇ ಇಲ್ಲದಂತೆ ಅತ್ಯುನ್ನತವಾಗಿ ತಲೆ ಎತ್ತಿರುತ್ತವೆ. ಪರ್ವತ ಶಿಖರಗಳು, ನೀರು, ಆಕಾಶ ಯಾವುದು ಎಲ್ಲಿ ಎಂಬುದೇ ಗೊತ್ತಾಗದ ಒಂದು ಅದ್ಭುತ ಗೊಂದಲ ಹೃದಯ ಮನಸ್ಸು ಕಣ್ಣುಗಳನ್ನು ತುಂಬುತ್ತದೆ.

ಅನೇಕ ರೀತಿಯ ನಿಗೂಢತೆಗಳು, ದಂತಕಥೆಗಳು, ಸಮೃದ್ಧ ಜಾನಪದ, ಅಸಾಧಾರಣ ಸೌಂದರ್ಯವೆಲ್ಲ ಮೇಳವಿಸಿರುವ ಕಾಶ್ಮೀರವು ಮಹಾರಾಜ ಹರಿಸಿಂಗರ ಅಸ್ತಿಯಾಗಿತ್ತು. ಈ ಹಕ್ಕು ಅವರಿಗೆ ದೈವದತ್ತವಾಗಿ ಸಿಕ್ಕಿತ್ತು ಎನ್ನುವುದಕ್ಕಿಂತ ಅದನ್ನು ಅವರು ಖರೀದಿಸಿದ್ದರು. ಎಂದರೆ ಸರಿ. ಒಂದು ಶತಮಾನದ ಹಿಂದೆ ಅವರ ಮುತ್ತಜ್ಜ ಜಮ್ಮುವಿನ ಪಕ್ಕದ ರಾಜ್ಯದ ರಾಜನಾಗಿದ್ದವನು ಬ್ರಿಟಿಷರಿಗೆ ಕಾಲುಮಿಲಿಯನ್ ಡಾಲರ್‌ಗಳನ್ನು ಹಾಗೂ ಮಾಮೂಲಿನಂತೆ ಮಿಲಟರಿ ಬಲವನ್ನು ಒಪ್ಪಿಸಿ ಕಾಶ್ಮೀರವನ್ನು ಕೊಂಡುಕೊಂಡಿದ್ದ ಇದರಿಂದಾಗಿ ಈಗಿನ ಮಹಾರಾಜನಿಗೆ ಗಿಲ್ಗಿಟ್, ಪೂಂಚ್ ಹಾಗೂ ಇನ್ನಿತರ ಕೆಲವು ಊಳಿಗಮಾನ್ಯ ಪ್ರದೇಶಗಳೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರಗಳೆರಡರ ನಾಲ್ಕು ದಶಲಕ್ಷ ಜನರ ಮೇಲೆ ಒಡೆತನ ಲಭಿಸಿತ್ತು. ಸ್ವತಃ ಹಿಂದೂ ಆಗಿದ್ದ ಹರಿಸಿಂಗ್ ಐದನೇ ನಾಲ್ಕು ಭಾಗದಷ್ಟು ಮುಸ್ಲಿಮರಿರುವ ಹಾಗೂ ಐದನೇ ಒಂದು ಭಾಗದಷ್ಟು ಹಿಂದೂಗಳಿರುವ ರಾಜ್ಯಕ್ಕೆ ರಾಜನಾಗಿದ್ದ.

ಕಾಶ್ಮೀರಿ ಹಿಂದೂಗಳು ವಿಶಿಷ್ಟ ರೀತಿಯವರು. ಬ್ರಾಹ್ಮಣರಲ್ಲಿ ಇವರು ವಿಶಿಷ್ಟ ಬ್ರಾಹ್ಮಣರು. ಕಾಶ್ಮೀರಿ ಪಂಡಿತರನ್ನು ಬ್ರಾಹ್ಮಣರಲ್ಲಿ ಅತಿಶ್ರೇಷ್ಠ ಪಂಗಡದವರೆಂದು ಪರಿಗಣಿಸಲಾಗುತ್ತದೆ. ಕಾಶ್ಮೀರಿ ಪಂಡಿತರಲ್ಲಿ ಅತ್ಯಂತ ಪ್ರಸಿದ್ಧರಾದವರು ಪಂಡಿತ್ ನೆಹರೂ. ನೆಹರೂ ಕುಟುಂಬ ಹಲವು ತಲೆಮಾರುಗಳ ಹಿಂದೆಯೇ ಕಾಶ್ಮೀರವನ್ನು ಬಿಟ್ಟು ಬಂದಿತ್ತಾದರೂ ಫ್ಯೂಡಲಿಂಸನ ಅಡಿಯಲ್ಲಿ ಕಾಶ್ಮೀರಿ ಜನರು ಪಡುತ್ತಿರುವ ಬವಣೆಗಳ ಬಗ್ಗೆ ನೆಹರೂ ಅವರಿಗೆ ತುಂಬ ಕಾಳಜಿ ಇತ್ತು.

ಶೇಖ್ ಅಬ್ದುಲ್ಲಾ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ರಾಜ್ಯಕ್ಕೆ ಹಿಂದಿರುಗಿದ ತಕ್ಷಣವೇ ಹೋರಾಟ ಕಾರ್ಯವನ್ನು ಆರಂಭಿಸಿದ್ದರು. ಅವರು ಓದಿದ್ದು ಅಲಿಘಡ್‌ನಲ್ಲಿ. ಅಲಿಘಡ್‌ನ ವಿದ್ಯಾರ್ಥಿಗಳು ರಾಷ್ಟ್ರೀಯ ಹೋರಾಟದ ಜಾಗೃತಿಯನ್ನು ಬೆಳೆಸಿಕೊಂಡಂಥವರು. ಶೇಖ್ ಅಬ್ದುಲ್ಲಾ ಅವರೇ ಹೇಳುವಂತೆ ‘ತಮ್ಮ ಹೊಸ ಜೀವನ ರೂಪುಗೊಂಡಿದ್ದ’ ಅಲಿಘಡ್‌ನಲ್ಲಿ ವಿಶ್ವವಿದ್ಯಾಲಯದ ಮುಕ್ತ ಉದಾರ ವಾತಾವರಣಕ್ಕೂ ತಮ್ಮ ರಾಜ್ಯದಲ್ಲಿರುವ ಭಯಭೀತಿ ತುಂಬಿದ ವಾತಾವರಣಕ್ಕೂ ಇರುವ ವ್ಯತ್ಯಾಸವನ್ನು ಶೇಖ್ ತಕ್ಷಣ ಕಂಡುಕೊಂಡರು. ಜನರ ಮೇಲೆ ನಡೆಯುತ್ತಿದ್ದ ಅನ್ಯಾಯಗಳ ವಿರುದ್ಧ ಅವರು ಬಹಿರಂಗವಾಗಿ ಮಾತಾಡತೊಡಗಿದರು. ಆಗ ಅತ್ಯಂತ ಕರಾಳ ರಾಜಕೀಯ ವ್ಯಕ್ತಿ ಮತ್ತು ಅಪಾಯಕಾರಿ ವ್ಯಕ್ತಿ ಎಂದು ಆರೋಪಿಸಿ ೧೯೩೧ರಲ್ಲಿ ಹರಿಪರ್ಬತ್ ಎಂಬಲ್ಲಿನ ದುರ್ಗಮವಾದ ಕೋಟೆಯಲ್ಲಿ ಶೇಖ್ ಅಬ್ದುಲ್ಲಾರನ್ನು ಬಂಧನದಲ್ಲಿಡಲಾಯಿತು. ಮುಂದೆ ಹೀಗೆ ಇನ್ನೂ ಎಂಟು ಸಲ ಅವರು ಜೈಲುಶಿಕ್ಷೆ ಅನುಭವಿಸಿದರು. ಆದರೂ ಮೊದಲ ಬಂಧನದ ವಿಷಯಕ್ಕೆ ಒಂದು ಪವಾಡದ ಕಥೆ ಅಂಟಿಕೊಂಡು ಅದು ಬೇರೆಲ್ಲ ಬಂಧನಗಳಿಗಿಂತ ಪ್ರಸಿದ್ಧವಾಯಿತು. ಆತನನ್ನು ಗುಂಡಿಕ್ಕಿ ಕೊಲ್ಲುವುದು ಖಂಡಿತ ಎಂದು ಜನರಿಗೆ ತಿಳಿದಿತ್ತು. ಆದ್ದರಿಂದ ಅವರು ನಗರದಾದ್ಯಂತ ಮುಷ್ಕರ ಹೂಡಿದರು. ಎಲ್ಲ ಅಂಗಡಿಗಳೂ ಮುಚ್ಚಿದವು. ೧೮ ದಿನಗಳ ಕಾಲ ಯಾವ ವ್ಯಾಪಾರ ವಹಿವಾಟು ಇಲ್ಲದೆ ನಗರದ ಚಟುವಟಿಕೆಗಳು ಸ್ಥಗಿತಗೊಂಡವು. ಅನಂತರ ಅಬ್ದುಲ್ಲಾರನ್ನು ಜೈಲಿನಿಂದ ಹೊರಗೆ ಬಿಡಲಾಯಿತು. ಒಟ್ಟಿನಲ್ಲಿ ಜನರ ಒತ್ತಡದಿಂದಲೇ ಅವರ ಬಿಡುಗಡೆ ಸಾಧ್ಯವಾಯಿತು. ಆದರೆ ಜನರು ಮಾತ್ರ ದೇವರ ಮಹಿಮೆಯಿಂದ ಅವರ ಬಿಡುಗಡೆಯಾಯಿತು ಎಂದರು. ಜನ ಹೇಳುವ ಕಡೆಯ ಪ್ರಕಾರ ಬಂಧನದ ೧೮ನೇ ದಿನ ಸ್ವತಃ ಮಹಾರಾಜರು ಕೋಟೆಯ ಬಳಿ ಹೋದರು. ದೊಡ್ಡ ಬೆಂಕಿ ಹಾಕಿ ಅದರಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ ಎಂದು ಅಪ್ಪಣೆ ಮಾಡಿದರು. ಎಣ್ಣೆ ಕುದಿಯುತ್ತಿದ್ದಾಗ ಶೇಖ್ ಅಬ್ದುಲ್ಲಾನನ್ನು ಎತ್ತಿ ಆ ಕುದಿಯುವ ಎಣ್ಣೆಯೊಳಗೆ ಹಾಕಬೇಕೆಂದು ಹೇಳಿದರು. ಆದರೆ ಶೇಖ್‌ರು ಯಾರೂ ನನ್ನನ್ನು ಬಲವಂತದಿಂದ ನೂಕುವುದು ಬೇಡ ಎನ್ನುತ್ತಾ ತಣ್ಣಗಿನ ಮೊಸರನ್ನೋ ಬೆಣ್ಣೆಯನ್ನೋ ಕೈಯಲ್ಲಿ ಹಿಡಿಯುವಂತೆ ಕುದಿಯುವ ಎಣ್ಣೆ ಹಿಡಿದು ಸುತ್ತ ಚೆಲ್ಲಿದಾಗ ಕಾವಲುಗಾರರೆಲ್ಲ ಹಿಂದೆ ಸರಿದರು. ಈ ದೈವಿಕ ಘಟನೆಯನ್ನು ನೋಡಿ ಮಹಾರಾಜರು ಅವರನ್ನು ಬಿಡುಗಡೆ ಮಾಡಿದರು. ಬೇರೆ ಯಾರೂ ಮಹಾರಾಜರ ವಿರುದ್ಧ ಸೆಟೆದು ನಿಲ್ಲದಿರುವಾಗ ಈ ವ್ಯಕ್ತಿ ಹಾಗೆ ದಿಟ್ಟತನದಿಂದ ನಿಂತದ್ದು ನೋಡಿ ಜನ ಈತನನ್ನು ದೇವತಾ ಪುರುಷ ಎಂದು ಭಾವಿಸಿದರು. ಆದಾದ ಮೇಲೆ ಅವರು ಯಾವ ಹಳ್ಳಿಗೇ ಹೋಗಲಿ ಅಲ್ಲಿನ ಗಂಡಸರು, ಹೆಂಗಸರು, ಮಕ್ಕಳು ಅವರ ಸುತ್ತ ಗುಂಪು ಸೇರುತ್ತಿದ್ದರು. ಪವಿತ್ರ ವಸ್ತುವಿನಿಂತೆ ಪೂಜಿಸುವುದಕ್ಕಾಗಿ ಅವರ ತಲೆಯ ಕೂದಲನ್ನು ಕಿತ್ತಿಟ್ಟುಕೊಳ್ಳುತ್ತಿದ್ದರು. ಅವರಿಗೆ ಕಾಶ್ಮೀರದ ಸಿಂಹ (ಶೇರ್-ಇ-ಕಾಶ್ಮೀರಿ) ಎಂಬ ಹೊಸ ಹೆಸರು ಕೊಟ್ಟರು. ಇನ್ನು ಕೆಲವು ಜನರಂತೂ ಮರಗಳ ಎಲೆಗಳ ಮೇಲೆಲ್ಲಾ ಶೇರ್-ಇ-ಕಾಶ್ಮೀರಿ ಎಂಬ ಹೆಸರು ಬರೆದಿದೆ ಎಂದು ಹೇಳತೊಡಗಿದರು. ನಾನು ಈ ಘಟನೆಯಾದ ೧೭ ವರ್ಷಗಳ ನಂತರ ಕಾಶ್ಮೀರಕ್ಕೆ ಭೇಟಿಕೊಟ್ಟಿದ್ದೆ. ತಾನು ಚಿಕ್ಕವನಿದ್ದಾಗ ಈ ಎಲೆಗಳನ್ನು ನೋಡಿದ್ದೆ ಎಂದು ತಿಳಿಸಿದ ವ್ಯಕ್ತಿಯೊಬ್ಬ, ಎಲೆ ತಿನ್ನುವ ಹುಳುಗಳು ಆ ರೀತಿಯ ಗುರುತು ಮಾಡಿದ್ದವು ಎಂದು ಹೇಳಿದ.

ಕಾಶ್ಮೀರದ ವಿವಾದವನ್ನು ಕುರಿತು ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಪ್ರತಿಪಾದಿಸುವುದಕ್ಕಾಗಿ ಶೇರ್-ಇ-ಕಾಶ್ಮೀರಿಯನ್ನೇ ಅಮೆರಿಕಕ್ಕೆ ಕಳುಹಿಸಲು ನೇಮಿಸಲಾಯಿತು. ಅವರು ಸಂಯುಕ್ತ ಸಂಸ್ಥಾನಕ್ಕೆ ಹೋಗಲು ವಿಮಾನ ಹತ್ತುವ ಸ್ವಲ್ಪ ಮುಂದೆ ನಾನು ಅವರನ್ನು ಭೇಟಿ ಮಾಡಿದೆ. ಅವರನ್ನು ಮುಖಾಮುಖಿಯಾಗಿ ಭೇಟಿ ಮಾಡಿದಾಗ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಅಂಶವೆಂದರೆ ಅವರ ಲವಲವಿಕೆಯ ವ್ಯಕ್ತಿತ್ವ. ಯಾವುದೇ ಆಡಂಬರಗಳಿಲ್ಲದ ಸರಳ ನಡವಳಿಕೆ, ಇಷ್ಟವಾಗುವಂತಹ ಒರಟುತನ. ಹುಬ್ಬುಗಳು ದಟ್ಟ, ದೊಡ್ಡ ಕಣ್ಣು, ಒಬ್ಬ ಹೋರಾಟಗಾರನಲ್ಲಿರುವಂಥ ಬಿಗಿದ ಉಬ್ಬಿದ ದವಡೆಗಳು. ಸರಾಸರಿ ಭಾರತೀಯರಿಗಿಂತ ಬಹಳ ಎತ್ತರ, ಬೊಳಕಾಲಿನಿಂದ ಕೆಳಗಿನವರೆಗೂ ಇಳಿಬಿದ್ದ ಕಸೂತಿ ಮಾಡಿದ ಬಿಳಿಕೋಟು. ವೇಗವಾದ ದೃಢ ಹೆಜ್ಜೆಗಳ ನಡಿಗೆ.

ಶೇಖ್ ಅಬ್ದುಲ್ಲಾರ ತಂದೆ ಶಾಲುಗಳನ್ನು ತಯಾರಿಸುತ್ತಿದ್ದರು. ಸಾಧಾರಣ ಸ್ಥಿತಿಯ ಕುಟುಂಬ. ನ್ಯಾಯಬದ್ಧವಾದ ಕೂಲಿಗಿಂತ ಕಡಿಮೆ ಕೂಲಿಗೆ  ಸೂಜಿ ಹಿಡಿದು ಸೂಕ್ಷ್ಮವಾಗಿ ಕಸೂತಿ ಹಾಕುತ್ತಾ ಶ್ರಮಿಸುವ ಜನ. ಸದಾ ಖಾಯಿಲೆಯಿಂದ ನರಳುವ ಅಲ್ಲಿನ ಜನರ ಆಯುಷ್ಯವೇ ಕಮ್ಮಿ. ಇವರ ಹಸ್ತಕುಶಲತೆಯಿಂದ ತಯಾರಾದ ಕಾಶ್ಮೀರಿ ಶಾಲುಗಳು ಅತ್ಯಂತ ಪ್ರಸಿದ್ಧ. ಯಾವುದೇ ಕ್ಷಣದಲ್ಲಿ ಇವರ ಕೆಲಸಕ್ಕೆ ಧಕ್ಕೆ ತರಬಹುದಾದ ‘ದೈವಿಕ ಹಕ್ಕನ್ನು’ ಅಲ್ಲಿನ ಮಹಾರಾಜ ಹೊಂದಿದ್ದ. ನಮ್ಮ ಬಡತನಕ್ಕೆಲ್ಲ ಹಿಂದೂಗಳೇ ಕಾರಣ. ಹಿಂದೂ ವರ್ಗದವರೇ ನಮ್ಮನ್ನು ತುಳಿಯುತ್ತಿರುವುದು ಎಂದು ಮುಸ್ಲಿಮರು ದೂರುತ್ತಿದ್ದರು. ಯಾಕೆಂದರೆ ಮಹಾರಾಜ ಈ ಹಿಂದೂ ಸಮುದಾಯಕ್ಕೆ ಸೇರಿದವರು. ಹಿಂದೂಗಳಿಂದ ನಮಗೆ ಇಂಥ ದರಿದ್ರಾವಸ್ಥೆ ಎಂದು ಹೇಳುವುದು ಸರಿಯಲ್ಲ ಎಂಬ ಅಂಶ ಒಂದು ಘಟನೆಯಿಂದ ನನಗೆ ಮನವರಿಕೆಯಾಯಿತು ಎಂದು ಶೇಖ್ ಅಬ್ದುಲ್ಲಾ ಈ ಘಟನೆಯನ್ನು ವಿವರಿಸಿದರು. ಅವರು ಒಂದು ಸಲ ಸೇಬು ಹಣ್ಣಿನ ತೋಟದ ಸಮೀಪ ಹಾದುಹೋಗುತ್ತಿದ್ದರಂತೆ. ಅದರ ಮಾಲೀಕ ಮುಸ್ಲಿಂ. ಆತ ಹಣ್ಣುಗಳನ್ನು ಆಯಲು ಕೆಲವರು ಹಿಂದೂಗಳನ್ನು ನೇಮಿಸಿಕೊಂಡಿದ್ದ. ಮರವನ್ನು ಹತ್ತಿ ಅದರ ತುದಿಯಲ್ಲಿದ್ದ ಹಣ್ಣುಗಳನ್ನು ಕೀಳುವಂತೆ ಒಬ್ಬನಿಗೆ ಹೇಳಿದ. ಆ ಮರ ದುರ್ಬಲವಾಗಿತ್ತು. ಮರ ಹತ್ತಿದವನು ಹಣ್ಣು ತುಂಬಿದ ರೆಂಬೆ ಮುರಿದು ಅದರ ಸಮೇತ ಕೆಳಗುರುಳಿದ. ಅವನ ಒಂದು ಪಕ್ಕೆಲುಬು ಮುರಿಯಿತು. ಮರದ ರೆಂಬೆ ಮುರಿದಿದ್ದಕ್ಕಾಗಿ ಮಾಲೀಕ ಅವನಿಗೆ ಬಾಯಿಗೆ ಬಂದಂತೆ ಬೈದುದಲ್ಲದೆ, ವಾಕಿಂಗ್ ಸ್ಟಿಕ್‌ನಿಂದ ಚೆನ್ನಾಗಿ ಬಾರಿಸಿದ. ಅಬ್ದುಲ್ಲ, ಗಾಯಗೊಂಡ ವ್ಯಕ್ತಿಯನ್ನು ಕರೆದುಕೊಂಡು ಅವನ ಮನೆಗೆ ಬಂದ. ಆ ಮನೆಯ ಒಂದು ಮೂಲೆಯಲ್ಲಿ ಹಿಂದೂ ದೇವತೆಗಳ ಕೆಲವು ವಿಗ್ರಹಗಳು, ಕಲ್ಲುಗಳು, ಹೂವುಗಳು ಇದ್ದುದನ್ನು ಬಿಟ್ಟರೆ ಈ ಮನೆಗೂ ಕಸೂತಿ ಕೆಲಸ ಮಾಡುವ ಮುಸ್ಲಿಮರ ಮನೆಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಈ ಘಟನೆಯ ನಂತರ ಅಬ್ದುಲ್ಲ ಅವರು ಕಲ್ಲುಗಣಿ ಕಾರ್ಮಿಕರ ಗುಡಿಸಲುಗಳಿಗೂ ಹೋಗತೊಡಗಿದರು. ಸಾಮಾನ್ಯವಾಗಿ ಕಲ್ಲು ಒಡೆಯುವ ಕೆಲಸ ಮಾಡುವರೆಲ್ಲ ಕೆಳ ಜಾತಿಯ ಹಿಂದೂಗಳು. ಇಲ್ಲೂ ಕೂಡ ಅವರ ಬದುಕಿನ ಸ್ಥಿತಿಗತಿಗೂ ಇತರ ಹಿಂದೂ-ಮುಸ್ಲಿಂ ಕಾರ್ಮಿಕರ ಸ್ಥಿತಿಗತಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಆದ್ದರಿಂದ ಈ ವ್ಯವಸ್ಥೆಯಲ್ಲಿಯೇ ಏನೋ ದೋಷವಿದೆ. ಅದೃಷ್ಟವಂತರಾದ ಹಿಡಿಯಷ್ಟು ಮಂದಿ ಈ ಸಹಸ್ರಾರು ಜನರನ್ನು ತಮ್ಮ ಚರಾಸ್ತಿಯಂತೆ ನಿಯಂತ್ರಿಸುತ್ತಿದ್ದಾರೆ ಎಂಬುದನ್ನು ಅಬ್ದುಲ್ಲಾ ಗಮನಿಸಿದರು. ಅವರ ವಿಚಾರಗಳು ಬೆಳೆದಂತೆ, ಸ್ವಯಮಾಡಳಿತ ಪಡೆದುಕೊಂಡಾಗ ಮಾತ್ರ ನನಗೆ ನ್ಯಾಯ ಸಿಗಲು ಸಾಧ್ಯ. ಅದಕ್ಕಾಗಿ ಜನ ತಮ್ಮ ಧಾರ್ಮಿಕ ಭೇದಗಳನ್ನು ಮರೆತು ಒಟ್ಟಾಗಿ ಹೋರಾಡಬೇಕು ಎಂದು ಅರ್ಥಮಾಡಿಕೊಂಡರು.

ಅಬ್ದುಲ್ಲಾ ಅವರ ವ್ಯಕ್ತಿತ್ವ ಕುರಿತು ಇಂತಹ ಇನ್ನೆಷೊ ಘಟನೆಗಳನ್ನು ನನಗೆ ಮೌಲಾನಾ ಮೊಹಮದ್ ಸಹೀದ್ ಹೇಳಿದರು. ಆತ ನ್ಯಾಶನಲ್ ಕಾನ್‌ಫರೆನ್ಸ್‌ನ ಜನರಲ್ ಸೆಕ್ರೆಟರಿ. ಶೇಖ್ ಅಬ್ದುಲ್ಲಾ ವಿಜ್ಞಾನ ಪದವೀಧರರು ಎಂಬುದು ಆತನಿಗೆ ಬಹುಮುಖ್ಯವಾಗಿತ್ತು. ಒಬ್ಬ ಮೌಲಾನಾ ಇಂತಹ ಅಃಳಕ್ಕೆ ಒತ್ತು ನೀಡಿದ್ದು ವಿಶೇಷವಾಗಿ ನನ್ನ ಗಮನಕೆ ಸೆಳೆಯಿತು. ಶೇಖ್ ಸಾಹೇಬರು ಕುರಾನಿನಿಂದಲೂ ವಿಷಯ ಉಲ್ಲೇಖಿಸುತ್ತಾರೆ ಮತ್ತು ಜನರಿಗೆ ಅರ್ಥವಾಗುವಂತೆ ಅದನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ ಎಂದು ಅವರು ಮೆಚ್ಚುಗೆಯಿಂದ ಹೇಳಿದರು.

ಗೃಹರಕ್ಷಕದಳದ ಕೆಲವು ಕಾರ್ಯಕರ್ತರ ಒಂದು ಗುಂಪು ಮೌಲಾನಾ ಅವರ ಚಿಕ್ಕ ಆಫೀಸು ಕೋಣೆಯೊಳಕ್ಕೆ ಬಂದಿತು. ಅಲ್ಲಿ ಚಳಿ ಕಾಯಿಸಿಕೊಳ್ಳುತ್ತಾ ಅಬ್ದುಲ್ಲಾರ ಬಗ್ಗೆ ಅವರು ಇನ್ನಷ್ಟು ವಿಷಯಗಳನ್ನು ಹೇಳಿದರು. ಅವರೆಲ್ಲರ ಮೇಲೂ ಬಹಳ ಪ್ರಭಾವ ಬೀರಿದ ಶೇಖ್ ಅವರ ಒಂದು ಸಾಹಸಕೃತ್ಯದ ಬಗ್ಗೆ ಹೇಳಿದರು. ಶೇಖ್ ಆಗಷ್ಟೇ ಕಾಲೇಜು ಶಿಕ್ಷಣ ಮುಗಿಸಿಕೊಂಡು ಬಂದಿದ್ದರಂತೆ. ಶ್ರೀನರದ ಬೀದಿಗಳಲ್ಲಿ ಒಂದು ಮತೀಯ ಗಲಭೆ ನಡೆದಿತ್ತು. ಅದು ಅಷ್ಟೇನೂ ದೊಡ್ಡ ಪ್ರಮಾಣದ್ದಲ್ಲ. ಜನ ಕಲ್ಲೆಸೆತದಲ್ಲಿ ತೊಡಗಿದ್ದರು. ತಮ್ಮ ಜಿಲ್ಲೆಯ ಗಡಿಯೊಳಗೆ ಯಾವ ಹಿಂದುವೂ ಬರಕೂಡದು. ಬಂದರೆ ಬಡಿದು ಹಾಕುವುದಾಗಿ ಮುಸ್ಲಿಮರು ಬೆದರಿಕೆ ಒಡ್ಡಿದರು. ಹಿಂದೂಗಳ ಸ್ಥಿತಿ ಶೋಚನೀಯವಾಗಿತ್ತು. ಏಕೆಂದರೆ ಶ್ರೀನಗರದಲ್ಲಿ ಒಬ್ಬ ಹಿಂದೂವಿಗೆ ಪ್ರತಿಯಾಗಿ ಒಂಬತ್ತು ಮಂದಿ ಮುಸ್ಲಿಮರಿದ್ದರು. ಏಳು ಸೇತುವೆಗಳ ನಗರ ಎಂದು ಕರೆಸಿಕೊಳ್ಳುವ ಶ್ರೀನಗರದ ಜಲಮಾರ್ಗಗಳಲ್ಲಿ ಎಡಬಿಡದ ದೋಣಿ ಸಂಚಾರವಿರುತ್ತದೆ. ಎರಡನೇ ಸೇತುವೆ ಬಳಿ ಇರುವ ಮನೆಯೊಂದರಲ್ಲಿ ಒಬ್ಬ ಹಿಂದೂ ಹುಡುಗಿ ಸತ್ತು ಬಿದ್ದಿದ್ದಳು. ಸತ್ತ ೨೪ ಗಂಟೆಯೊಳಗಾಗಿ ದೇಹವನ್ನು ಬೆಂಕಿಯಲ್ಲಿ ಸುಡುವುದು ಹಿಂದೂಗಳ ಸಂಪ್ರದಾಯ. ಆದರೆ ಎರಡು ದಿನಗಳಿಂದ ಅವಳ ದೇಹ ಅಲ್ಲಿಯೇ ಬಿದ್ದಿತ್ತು. ಮುಸ್ಲಿಮರ ಹೆದರಿಕೆಯಿಂದಾಗಿ ಹಿಂದೂಗಳು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ವಿಷಯ ತಿಳಿದ ಕೂಡಲೇ ಶೇಖ್ ಅಬ್ದುಲ್ಲಾ ಆ ಮನೆಯಲ್ಲಿ ಪ್ರವೇಶಿಸಿ ಅವಳ ದೇಹವನ್ನು ದೋಣಿಯಲ್ಲಿ ತಂದರು. ಪೊಲೀಸರಿಗಾಗಲೀ ಸರ್ಕಾರದ ಅಧಿಕಾರಿಗಳಿಗಾಲೀ ಇಲ್ಲದಂಥ ಧೈರ್ಯ ಅವರಲ್ಲಿತ್ತು. ಕಾಲೇಉ ವಿದ್ಯಾರ್ಥಿಗಳಂತೆ ಕಪ್ಪು ಜಾಕೇಟ್, ಕೆಂಪು ಟೋಪಿ ಹಾಕಿಕೊಂಡಿದ್ದ ಶೇಖ್ ನದಿಯಲ್ಲಿ ದೋಣೆ ನಡೆಸಿಕೊಂಡು ಹೋದರು. ಮರದ ಹಲಗೆಯ ಮೇಲೆ ಬಿಳಿಯ ಬಟ್ಟೆಯಲ್ಲಿ ಸುತ್ತಿದ ಆ ಹುಡುಗಿಯ ದೇಹವಿತ್ತು. ಈ ದೋಣಿ ಹೋದ ದಿಕ್ಕಿನಲೇ ಜನರೂ ದಂಡೆಯ ಮೇಲಿನಿಂದ ಅವರನ್ನೇ ಹಿಂಬಾಲಿಸುತ್ತಾ ಶೇಖ್ ಅವರನ್ನು ‘ಕವೋಗ್’ ಎಂಧು ಬೈಯುತ್ತಿದ್ದರು. ಕಾಶ್ಮೀರದಲ್ಲಿ ಹೆಣಗಳನ್ನು ಸುಡುಗವ ಕೆಳಜಾತಿಯ ವ್ಯಕ್ತಿಗೆ ಬಳಸುವ ಕಾಶ್ಮೀರಿ ಪದ ಅದು.

ಮಾನವ ಸಂಬಂಧಗಳು ಮತಭೇದಗಳನ್ನು ಮೀರಿರಬೇಕು ಎಂಬ ತಮ್ಮ ನಂಬಿಕೆಯನ್ನು ಶೇಖ್ ಅಬ್ದುಲ್ಲಾ ಅವರು ಈ ಕ್ರಿಯೆಯ ಮೂಲಕ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದರು. ಇದಾದ ನಂತರ ಅವರು ಜನರ ಹಕ್ಕುಗಳನ್ನು ಕುರಿತು ಹಾಗೂ ಭಾರೀ ತೆರಿಗೆಗಳ ವಿರುದ್ಧ ಪ್ರಚಾರ ಆರಂಭಿಸಿದರು. ಚುನಾಯಿತ  ಪ್ರತಿನಿಧಿಗಳಿಗಾಗಿ ಅವರು ಹೊಸದೊಂದು ಕಾರ್ಯಕ್ರಮವನ್ನು ಘೋಷಿಸಿದರು. ವಾಕ್‌ಸ್ವಾತಂತ್ರ್ಯ ಪ್ರಜಾಸತ್ತಾತ್ಮಕ ಹಕ್ಕುಗಳು ಮೊದಲಾದವುಗಳನ್ನು ಲಿಖಿತ ರೂಪದ ಸಂವಿಧಾನದಲ್ಲಿ ತರುವುದು ಅಗತ್ಯ ಆಗ ಯಾರೂ ಅವುಗಳನ್ನು ಸಲೀಸಾಗಿ ನಿರಾಕರಿಸಲು ಬರುವುದಿಲ್ಲ ಎಂದು ಹೇಳಿದರು. ಅವರ ನೇತೃತ್ವದಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು ಒಟ್ಟಾಗಿ ಕೆಲಸ ಮಾಡದಿರು. ಇದು ಜನರ ಪಾಲಿಗೆ ಆಶಾಕಿರಣವಾಗಿತ್ತು.

ಶೇಖ್ ಅವರು ಪೀಪಲ್ಸ್‌ಪಾರ್ಟಿಯಂತಹ ಒಂದು ಪಕ್ಷವನ್ನು ಸಮರ್ಥವಾಗಿ ಕಟ್ಟುವಲ್ಲಿ ಅವರೊಂದಿಗೆ ಕಲಸ ಮಾಡಿದ ಮೌಲಾನಾ ಅವರಂಥವರ ಪಾತ್ರವೂ ಬಹಳ ಮಹತ್ವದ್ದಾಗಿತ್ತು. ಜನರ ಕೈಗೆ ಅಧಿಕಾರ ಬರುವ ಹೊತ್ತಿಗೆ ಇವರುಗಳೆಲ್ಲ ಸಂಘಟನಾ ಚಾತುರ್ಯವನ್ನು ಸಾಕಷ್ಟು ಮೈಗೂಡಿಸಿಕೊಂಡಿದ್ದರು. ಯುದ್ಧದ ವರ್ಷಗಳಲ್ಲಿ ಬ್ರಿಟಿಷರ ಮಿಲಟರಿ ಅಗತ್ಯತೆಗಳಿಗೇ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಆಹಾರ ಪದಾರ್ಥಗಳ ಸರಬರಾಜು ವಿತರಣೆ ಸಾಕಷ್ಟು ಅಸ್ತವ್ಯಸ್ತಗೊಂಡಿತ್ತು. ಬಂಗಾಳವು ತೀವ್ರ ಕ್ಷಾಮವನ್ನು ಎದುರಿಸಬೇಕಾಗಿ ಬಂದದ್ದು ಇಂಥದೇ ಕಾರಣಕ್ಕಾಗಿ. ಕಾಶ್ಮೀರದಲ್ಲಿ ಆಹಾರ ವಿತರಣೆಯ ವಿಷಯವನ್ನು ಜನರ ಆಹಾರ ಸಮಿತಿಗಳು ನಿರ್ವಹಿಸಿದವು. ಆದರೆ ಜನತೆಯ ಆಡಳಿತವು ತನ್ನ ನಿಜವಾದ ಸಂಘಟನಾ ಕೌಶಲ್ಯವನ್ನು ಪಡೆದುಕೊಂಡಿದ್ದು ಭೂಗತ ಕಾರ್ಯಾಚರಣೆಯ ಅವಧಿಯಲ್ಲಿ.

ಬಹು ದೀರ್ಘಕಾಲ ಭೂಗತ ಹೋರಾಟವನ್ನು ನಡೆಸಿಕೊಂಡು ಬಂದ ಕೆಲವ್ಯಕ್ತಿಗಳು ಬಂಧನವನ್ನು ತಪ್ಪಿಸಿಕೊಳ್ಳುವ ಹಾಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾರುವೇಷದಲ್ಲಿ ಸ್ಥಳಾಂತರಿಸುವ ತಂತ್ರಗಳಲ್ಲಿ ಪಳಗಿದ್ದರು. ಇಂಥವರ ಬಗ್ಗೆ ಅನೇಕ ಕಥೆಗಳು ಪ್ರಚಲಿತವಾಗಿವೆ. ಅದರಲ್ಲಿಯೂ ಬುಲ್ ಬುಲಿ-ಕಾಶ್ಮೀರಿ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿದ್ದ ಗುಲಾಮ್ ಮೊಹಿಯುದ್ಧೀನ್ ಅವರ ಬಗೆಗೆ ಹೆಚ್ಚು ಕಥೆಗಳು ಪ್ರಚಲಿತವಾಗಿದ್ದವು.

ಶೇಖ್ ಅಬ್ದುಲ್ಲಾ ಅವರ ಕೊನೆಯ ಹಾಗೂ ಎಂಟನೆಯ ಬಂಧನದ ಹೊತ್ತಿಗೆ ಸ್ವಾತಂತ್ರ್ಯವು ಭಾರತದ ಹೊಸ್ತಿಲಿನ ಬಳಿಗೆ ಬಂದಿತ್ತು. ಮಹಾರಾಜರ ಸರ್ಕಾರವು ಪ್ರಜಾತಂತ್ರದ ನಾಯಕರುಗಳನ್ನೆಲ್ಲ ಬಂಧನದಲ್ಲಿಟ್ಟಿತ್ತು. ಶೇಖ್ ಅಬ್ದುಲ್ಲಾರನ್ನು ಬಂಧಿಸಿದಾಗ All India State People’sನ ಅಧ್ಯಕ್ಷರಾಗಿಯೇ ಉಳಿದಿದ್ದ ನೆಹರು ಅಬ್ದುಲ್ಲಾಗೆ ಸ್ವತಃ ತಾವೇ ಜಾಮೀನು ಕೊಡಲು ಬಂದರು. ಮಹಾರಾಜರ ಪೊಲೀಸರು ನೆಹರು ತಮ್ಮ ಸ್ನೇಹಿತನ ರಕ್ಷಣೆಗೆ ಬರದಂತೆ ಅವರು ಕಾಶ್ಮೀರವನ್ನು ಪ್ರವೇಶಿಸುವುದರ ಮೇಲೆಯೇ ನಿಷೇಧ ಹೇರಿದರು.

ಶೇಖ್ ಅಬ್ದುಲ್ಲಾ ಅವರು ಜೈಲಿನಲ್ಲಿದ್ದಾಗಲೂ ಭಾರತ ಮತ್ತು ಕಾಶ್ಮೀರಕ್ಕೆ ಸ್ವಾತಂತ್ರ್ಯ ಬರುವವರೆಗೂ ಜೈಲುಗೋಡೆಗಳ ಹೊರಗೇ ಇದ್ದುಕೊಂಡು ಪ್ರಜಾಸತ್ತಾತ್ಮಕ ಹೋರಟವನ್ನು ಜೀವಂತವಾಗಿಡುವಂತಹ ಸಂಘಟನೆ ಇರಬೇಕೆಂದು ಸದಾ ಯೋಚಿಸುತ್ತಿದ್ದರು. ಬುಲ್‌ಬುಲಿ ಕಾಶ್ಮೀರಿ ಗುಲಾಂ ಮೊಹಿಉದ್ದೀನ್ (ಕಾಶ್ಮೀರದ ನೈಟಿಂಗೇಲ್)ಯವರು ಶೇಖ್ ಅಬುದ್ದಲ್ಲಾ ನೀಡುತ್ತಿದ್ದ ಸೂಚನೆಗಳನ್ನು ರಹಸ್ಯವಾಗಿ ರವಾನಿಸುವ ಅದ್ಭುತ ಪ್ರತಿಭೆ ಹೊಂದಿದ್ದರು. ಸರ್ಕಾರವು ಸಭೆಗಳನ್ನು ನಿಷೇಧಿಸಿದಾಗ. ಜನರ ಮೇಲೆ ಗುಪ್ತದಳದ ನಿಗಾ ತೀವ್ರಗೊಂಡಾಗ ಜನರು ಪರಸ್ಪರ ಮಾತಾಡುವಂತೆಯೇ ಇರಲಿಲ್ಲ. ಆಗ, ಬುಲ್‌ಬುಲಿ ಕಾಶ್ಮೀರಿ, ಹಣ್ಣು ಮಾರಾಟ ಮಾಡುವವರಂತೆ ದೊಡ್ಡದೊಡ್ಡ ಹಣ್ಣಿನ ಬುಟ್ಟಿಗಳನ್ನು ತಂದು ಸಾರ್ವಜನಿಕ ಚೌಕದಲ್ಲಿ ಇಟ್ಟುಕೊಂಡು ಕೂರುತ್ತಿದ್ದರು. ಹಣ್ಣು ಮಾರುವ ನೆವದಲ್ಲಿ ಗುಪ್ತ ಸಂದೇಶಗಳನ್ನು ರವಾನಿಸುತ್ತಿದ್ದರು. ಒಂದು ಸಲ, ಅವರು ಪ್ರವೇಶ ಮಾಡಿದ್ದ ಮನೆಯನ್ನು ಪೊಲೀಸರು ಸುತ್ತುವರೆದಾಗ ಅವರು ಎರಡನೇ ಮಹಡಿಯ ಕಿಟಕಿಯಿಂದ ಕೆಳಗಿದ್ದ ಧಾನ್ಯದ ಕಣಜಕ್ಕೆ ಧುಮುಕಿ ಅಲ್ಲಿಯೇ ೫ ಗಂಟೆಗಳ ಕಾಲ ಅವಿತುಕೊಂಡಿದ್ದರು. ಇತ್ತ ನೂರಾರು ಜನ ರಸೆತಗಳಲ್ಲಿ ನಿಂತು ಅವರು ಸುರಕ್ತಿವಾಗಿ ಪಾರಾಗಲಿ ಎಂದು ಪ್ರಾರ್ಥಿಸುತ್ತಿದ್ದರು.

ಸ್ವಾತಂತ್ರ್ಯ ದಿನ ಬಂತು. ಅದರ ಜತೆ ವಿಭಜನೆ ಕೂಡ. ಕಾಶ್ಮೀರ ಭಾರತಕ್ಕೆ ಸೇರಬೇಕೋ ಎಂಬ ಪ್ರಶ್ನೆಯೂ ಆಗಲೇ ನಿರ್ಧಾರವಾಗಬೇಕಿತ್ತು. ಆಗ ಶೇಖ ಅಬ್ದುಲ್ಲಾ ಅವರು ಜೈಲಿನಿಂದಲೇ ಘೋಷಿಸಿದರು. “ಮೊದಲು ಜವಾಬ್ದಾರಿ ಸರ್ಕಾರ. ಅನಂತರವೇ ಸೇರ್ಪಡೆಯ ಪ್ರಶ್ನೆ.’’

ಕಾಶ್ಮೀರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ ಎಂಬುದೇ ಅದು ಪಾಕಿಸ್ತಾನಕ್ಕೆ ಸೇರುವುದಕ್ಕೆ ಆಧಾರವಾಗಬಾರದು. ತಾವು ಯಾವ ಕಡೆ ಸೇರಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಜನರಿಗೇ ಅವಕಾಶ ಕೊಡಬೇಕು. ಆರ್ಥಿಕವಾಗಿ ಕಾಶ್ಮೀರವು ಪಾಕಿಸ್ಥಾನಕ್ಕೆ ಹೆಚ್ಚು ನಿಕಟವಾಗಿ ಹೆಣೆದುಕೊಂಡಿದೆ ಮತ್ತು ಮುಖ್ಯ ಹೆದ್ದಾರಿಗಳೆಲ್ಲ ಅದನ್ನು ಪಾಕಿಸ್ತಾನಕ್ಕೆ ಸಂಪರ್ಕಿಸುತ್ತವೆ. ಆದರೆ ಕಾಶ್ಮೀರ ಮತ್ತು ಜಮ್ಮು, ಭಾರತದ ಗಡಿಯಂಚಿಗೇ ಇವೆ. ಇದರಿಂದ ಭಾರತದೊಂದಿಗೂ ಅವುಗಳಿಗೆ ನಿಕಟ ಸಂಬಂಧವಿದೆ. ಇದಲ್ಲದೆ ಕಾಶ್ಮೀರವು ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಟ ನಡೆಸಿದಾಗ ನೆಹರೂ ಮತ್ತು ಇತರ ನಾಯಕರು ಕಾಶ್ಮೀರದ ಬಗ್ಗೆ ಸಹಾನುಭೂತಿ ನೀಡಿದ್ದರು. ಸಂದರ್ಭ ಯಾವುದೇ ಇರಲಿ, ಧರ್ಮವನ್ನು ನಿರ್ಧಾರಕ ಅಂಶವಾಗಿ ಪರಿಗಣಿಸಬಾರದು. ಭಾರತ ಮತ್ತು ಪಾಕಿಸ್ತಾನ ಧಾರ್ಮಿಕ ಘರ್ಷಣೆಯಿಂದ ಹರಿದು ಛಿದ್ರವಾದವು. ಎಲ್ಲ ಧರ್ಮಗಳ ಒಗ್ಗೂಡಿಕೆಯ ಆಧಾರದ ಮೇಲೆ ಸ್ವಯಂಆಡಳಿತ ಸಾಧಿಸಬೇಕು ಎಂದು ತಮ್ಮ ಯೋಜನೆ ರೂಪಿಸಿರುವ ಕಾಶ್ಮೀರಿಗಳನ್ನು, ಈ ಯಾವುದಾದೊಂದು ದೇಶಕ್ಕೆ ಸೇರಿಸಬೇಕು ಎಂದಾಗ ಅದು ಜನತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸ್ವಾತಂತ್ರ್ಯ ಬಂದು ಒಂದು ತಿಂಗಳಾಗಿತ್ತು. ಬಗೆಹರಿಯದ ಪ್ರಶ್ನೆಗಳು ಇನ್ನೂ ತೀವ್ರವಾಗುತ್ತ ಹೋದವು. ಶೇಖ್ ಅಬ್ದುಲ್ಲಾ ಇನ್ನೂ ಜೈಲಿನಲ್ಲೇ ಇದ್ದರು.

ಆಗ ಶ್ರೀನಗರದ ಹೆಂಗಸರು ಕಾರ್ಯಪ್ರವೃತ್ತರಾದರು. ಅವರು ಜೈಲಿಗೆ ಮೆರವಣಿಗೆ ಹೋದರು. ಕಾಶ್ಮೀರದ ಸಿಂಹವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲಿನ ಕಾವಲುಗಾರರು ಅವರನ್ನು ಬೆದರಿಸಿದಾಗ ಅವರು ಅಲ್ಲೆ ರಸ್ತೆಯ ಮೇಲೆ ಅಡ್ಡಡ್ಡ ಮಲಗಿದರು. ಗೇಟಿಗೆ ಅಡ್ಡವಾಗಿ ಮಲಗಿದ್ದ ಅವರು ಮೂರು ದಿನವಾದರೂ ಅಲ್ಲಿಂದ ಕದಲಲಿಲ್ಲ. ಕೊನೆಯಲ್ಲಿ ವಿಜಯ ಅವರದಾಯಿತು. ಕಾಶ್ಮೀರದ ಸಿಂಹವನ್ನು ಹೊರಗೆ ಬಿಟ್ಟರು. ಶೇಖ್ ಮಾಡಿದ ಮೊದಲ ಕೆಲಸವೆಂದರೆ ಒಂದು ಸಾರ್ವಜನಿಕ  ಸಭೆಯನ್ನು ಕರೆದಿದ್ದು. ಈ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಒಂದು ಲಕ್ಷ ಕಾಶ್ಮೀರಿಗಳು ಶ್ರೀನಗರಕ್ಕೆ ಬಂದರು. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಾಶ್ಮೀರವು ಬೆಳಕು ತೋರಿಸಬೇಕು. ನಮ್ಮ ಸುತ್ತಮುತ್ತ ಎಲ್ಲೆಲ್ಲೂ ಸೋದರರು ಸೋದರರನ್ನು ಕೊಲ್ಲುವ ದುರಂತವನ್ನು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕಾಶ್ಮೀರ ಮುಂದೆ ಬಂದು ಹಿಂದೂ ಮುಸ್ಲಿಂ ಐಕ್ಯತೆಯನ್ನು ಎತ್ತಿ ಹಿಡಿಯಬೇಕು. ಕಾಶ್ಮೀರದಲ್ಲಿ ನಮಗೆ ಜನತೆಯ ಸರ್ಕಾರ ಬೇಕು. ಜನ ಯಾವ ಧರ್ಮ, ಮತಕ್ಕೆ ಸೇರಿದವರು ಎಂಬುದನ್ನು ಗಮನಿಸದೆ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಸಮಾನ ಅವಕಾಶಗಳನ್ನು ಕೊಡುವಂಥ ಸರ್ಕಾರ ನಮಗೆ ಬೇಕು. ಕಾಶ್ಮೀರದ ಸರ್ಕಾರ ಯಾವುದೇ ಒಂದು ಕೋಮಿನ ಸರ್ಕಾರವಾಗಿರುವುದಿಲ್ಲ. ಅದು ಹಿಂದೂ, ಸಿಖ್, ಮುಸ್ಲಿಮರು ಎಲ್ಲ ಸೇರಿದ ಒಂದು ಅವಿಭಕ್ತ ಸರ್ಕಾರವಾಗಿರುತ್ತದೆ ಎಂದು ಶೇಖ್ ಹೇಳಿದರು. ಇದಾದನಂತರ ಶೇಖ್, All Jammu and Kashmiri National State People’sನ, ಪ್ರತಿನಿಧಿಗಳನ್ನು ಈ ಸೇರ್ಪಡೆಯ ಬಗ್ಗೆ ಚರ್ಚಿಸುವುದಕ್ಕಾಗಿ ಪಾಕಿಸ್ತಾನಕ್ಕೆ ಕಳಿಸಿದರು. ಆದರೆ ಜಿನ್ನಾ ಈ ಪ್ರತಿನಿಧಿಗಳಿಗೆ ಭೇಟಿ ಕೊಡಲಿಲ್ಲ. ಇದು ಅವರು ಮಾಡಿದ ಬಹುದೊಡ್ಡ ಪ್ರಮಾದ ಎಂದು ಅನೇಕರು ಹೇಳಿದ್ದಾರೆ. ಅವರು ಒಂದು ವೇಳೆ ಇಲ್ಲಿನ ಜನತೆಯ ಸರ್ಕಾರಕ್ಕೆ ಮಾನ್ಯತೆ ನೀಡಲು ಒಪ್ಪಿಕೊಂಡಿದ್ದರೆ ಮೂರು ದಶಲಕ್ಷ ಮುಸ್ಲಿಮರಿರುವ ಕಾಶ್ಮೀರವನ್ನು ಅವರು ಪಡೆದುಕೊಳ್ಳಬಹುದಿತ್ತು. ಆದರೆ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರಿರುವ ಈ ಅವಿಭಕ್ತ ಸರ್ಕಾರದ ಕಲ್ಪನೆಯೇ ಜಿನ್ನಾ ಅವರಿಗೆ ಹಿಡಿಸದಿದ್ದರೆ ಆಶ್ಚರ್ಯವೇನಿಲ್ಲ. Peoples party ಬಗ್ಗೆ ಮಹಾರಾಜ ಹರಿಸಿಂಗ್ ಅವರಿಗೆ ಇದ್ದ ದೃಷ್ಟಿಕೋನ ಜಿನ್ನಾ ದೃಷ್ಟಿಕೋನ ಎರಡೂ ಒಂದೇ. ಇಷ್ಟಾದರೂ ಆರ್ಥಿಕ ಕಾರಣಗಳಿಗಾಗಿ ಅದಕ್ಕಿಂತ ಮುಖ್ಯವಾಗಿ ಪ್ರತಿಷ್ಠೆಯ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಕಾಶ್ಮೀರ ತುಂಡಾಗಿ ಬೇಕಾಗಿತ್ತು. ಮುಸ್ಲಿಮರಿಗೆ ಆಶ್ರಯ ನೀಡುವ ದೃಷ್ಟಿಯಿಂದಲೇ ಪಾಕಿಸ್ತಾನ ಸೃಷ್ಟಿಯಾಗಿದ್ದಾಗ ಬಹುಸಂಖ್ಯಾತ ಮುಸ್ಲಿಮರಿರುವ ರಾಜ್ಯವನ್ನು ಬಿಟ್ಟುಕೊಡುವುದು ಭಾರೀ ಹೊಡೆತವೇ ಸರಿ. ಭಾರತ ಏನೋ ಆಡಳವಾದ ಒಳಸಂಚು ನಡೆಸುತ್ತಿದೆ ಎಂದು ಪಾಕಿಸ್ತಾನ ನಂಬಿಬಿಟ್ಟಿತ್ತು. ಬಹು ಉದ್ದದ ಗಡಿರೇಖೆ ಇರುವ ಕಾಶ್ಮೀರ ಭಾರತಕ್ಕೆ ಸೇರಿಹೋದರೆ ಪಾಕಿಸ್ತಾನದ ಬಹು ಹೆಚ್ಚಿನ ಗಡಿಯನ್ನು ಭಾರತವೇ ಸುತ್ತುವರೆದು ಬಿಡುವ ಅಪಾಯವಿದೆ ಎಂದು ಅದು ಭಾವಿಸಿತ್ತು.

ಖೈಬರ್‌ಪಾಸ್ ಆಫ್ಘಾನಿಸ್ತಾನದೊಳಕ್ಕೆ ತೂರಿಕೊಳ್ಳುವಂತೆ ಇರುವ ವಾಯುವ್ಯ ಗಡಿಪ್ರಾಂತದ ಮೇಲ್ಭಾಗದಲ್ಲಿ ಮುಸ್ಲಿಮರ ಒಲವನ್ನು ಗಳಿಸುವುದು ಪಾಕಿಸ್ತಾನಕ್ಕೆ ಕಷ್ಟವಾಗಲಿಲ್ಲ. ವಾಯುವ್ಯ ಗಡಿಪ್ರಾಂತವು ಗುಡ್ಡಗಾಡಿನ ಪಠಾಣ್ ಬುಡಕಟ್ಟು ಜನರ ತವರು ನೆಲೆಯಾಗಿತ್ತು. ಈ ಬುಡಕಟ್ಟು ಜನ ಹೆಂಡತಿಗಿಂತ ಹೆಚ್ಚಾಗಿ ಬಂದೂಕನ್ನು ಪ್ರೀತಿಸುವಂಥವರು. ಚಾಕುವಿನಂದಲೇ ಕೆಲಸವಾಗುವಂತಿದ್ದಾಗ ಬುಲೆಟ್ಟನ್ನು ವ್ಯರ್ಥ ಮಾಡುವ ಗೋಜಿಗೆ ಹೋಗದವರು. ಬೇರೆಯವರ ಮೇಲೆ ಧಾಳಿ ಮಾಡಿ ಹೆಂಗಸರನ್ನು ಅಪಹರಿಸಿಕೊಂಡು ಬರುವುದು ಮೊದಲಾದ ಕೆಲವು ಅಭ್ಯಾಸಗಳು ಅವರಲ್ಲಿ ಭದ್ರವಾಗಿ ತಳಊರಿದ್ದವು. ಆದರೆ ಬ್ರಿಟಿಷರು ಹಣಕೊಟ್ಟು ಅವರನ್ನು ‘ಒಳ್ಳೆಯವರಾಗಿ’ರುವಂತೆ ನೋಡಿಕೊಂಡಿದ್ದರು. ಈ ಬುಡಕಟ್ಟು ಜನರ ನಿಷ್ಠೆ ವಿಧಿವತ್ತಾಗಿ ಪಾಕಿಸ್ತಾನದ ಕಡೆ ವರ್ಗಾವಣೆಯಾಗುತ್ತಿದ್ದ ಕಾಲದಲ್ಲಿ ನಾನು ವಾಯುವ್ಯ ಪ್ರಾಂತದಲ್ಲಿ ಸಂಚರಿಸುತ್ತಿದ್ದೆ. ಪೆನ್ನು ಹಿಡಿಯಲೂ ಗೊತ್ತಿರದಿದ್ದ ಭಯಂಕರ ವ್ಯಕ್ತಿತ್ವದ ಪಠಾಣ ಮುಖ್ಯಸ್ಥರು ವಿಲೀನದ ದಸ್ತಾವೇಜು ಪತ್ರಗಳಿಗೆ ತಮ್ಮ ಮುದ್ರೆ ಉಂಗುರದ ಮೊಹರು ಹಾಕಿಕೊಡುತ್ತಿದ್ದರು. ಇದು ಒಂದು ವರ್ಣರಂಜಿತ ಸಮಾರಂಭವಾಗಿ ಎಲ್ಲೆಲ್ಲೂ ನಡೆಯುತ್ತಿತ್ತು. ಅಂಥ ಅನೇಕ ಫೋಟೊಗಳನ್ನು ನಾನು ತೆಗೆದೆ.

ಒಂದು ಕಡೆ ಗುಡ್ಡಗಾಡಿನ ಜನರು ಇಂಕ್‌ಪ್ಯಾಡಿಗೆ ತಮ್ಮ ಉಂಗುರಗಳನ್ನು ಒತ್ತಿ ತಮ್ಮನ್ನು ಪಾಕಿಸ್ತಾನಕ್ಕೆ ಒತ್ತೆ ಇಟ್ಟುಕೊಳ್ಳುವ ಮುದ್ರೆಗಳನ್ನು ಮೂಡಿಸುತ್ತಿದ್ದಾಗ, ಇತ್ತ ಕಾಶ್ಮೀರದ ಜನತಾ ಸರ್ಕಾರವು ಈ ಸೇರ್ಪಡೆಯ ಕರಾರುಗಳ ಬಗ್ಗೆ ಪಾಕಿಸ್ತಾನದೊಂದಿಗೆ ಚರ್ಚೆ ನಡೆಸಲು ಇನ್ನೊಂದು ಪ್ರಯತ್ನ ನಡೆಸಿತ್ತು. ಮುಸ್ಲಿಂಲೀಗ್ ಹೈಕಮಾಂಡ್ ಜೊತೆ ಮಾತುಕಥೆ ನಡೆಸುವುದಕ್ಕಾಗಿ ಶೇಖ್ ಅಬ್ದುಲ್ಲಾ ಎರಡನೇ ನಿಯೋಗವನ್ನು ಕಳಿಸಿದ್ದರು. ಇನ್ನೂ ಈ ಮಾತುಕಥೆಗಳು ಆರಂಭವಾಗಿರಲಿಲ್ಲ. ಅಷ್ಟರಲ್ಲಿಯೇ ಬುಡಕಟ್ಟು ಜನರು ಇಸ್ಲಾಂ ಹೆಸರಿನಲ್ಲಿ ಕಾಶ್ಮೀರದ ಮೇಲೆ ಧಾಳಿ ನಡೆಸಿ ಹೆಂಗಸರೂ ಸೇರಿದಂತೆ ಏನೇನು ಸಾಧ್ಯವೋ ಎಲ್ಲವನ್ನೂ ಲೂಟಿ ಮಾಡಿಕೊಂಡು ಬಂದಿದ್ದರು. ಅವರು ಹಚ್ಚಿದ ಬೆಂಕಿಯಲ್ಲಿ ಹಳ್ಳಿಗಳು ಉಳಿಯುತ್ತಿದ್ದವು. ಅವರು ಹೆಚ್ಚಿನ ಪ್ರಯಾಸವಿಲ್ಲದೆ ಶ್ರೀನಗರದ ಬಾಗಿಲವರೆಗೆ ಬಂದುಬಿಟ್ಟಿದ್ದರು. ಮಹಾರಾಜ ಪಲಾಯನ ಮಾಡಿದಾಗ ಶೇಖ್ ಅಬ್ದುಲ್ಲಾ ತುರ್ತು ಸರ್ಕಾರದ ಮುಖ್ಯಸ್ತಿಕೆ ವಹಿಸಿಕೊಂಡರು. ಮಿಲಿಟರಿ ನೆರವಿಗಾಗಿ ಭಾರತಕ್ಕೆ ಒಂದು ತುರ್ತುಕೋರಿಕೆ ಕಳಿಸಲಾಯಿತು. ಭಾರತದೊಂದಿಗೆ ಸೇರ್ಪಡೆಯ ದಸ್ತಾವೇಜಿಗೆ ಮಹಾರಾಜ ಸಹಿ ಹಾಕಿದ. ಅದನ್ನು ಶೇಖ್ ಅಬ್ದುಲ್ಲಾ ಅನುಮೋದಿಸಿದರು. ಕಾಶ್ಮೀರದಲ್ಲಿ ಭೀಕರಯುದ್ಧ ಆರಂಭವಾಯಿತು.

ಭಾರತದಿಂದ ಸೈನಿಕರನ್ನು, ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡ ವಿಮಾನಗಳು ಕಾಶ್ಮೀರದ ರಕ್ಷಣೆಗೆ ಬರುವವರೆಗೆ ಜನತೆಯ ಸ್ವಯಂ ಸೇವಕ ಸೈನ್ಯ ಬರೀ ಕಟ್ಟಿಗೆ ಕೋಲು ದೊಣ್ಣೆ ಹಿಡಿದು, ಎಷ್ಟೊ ಸಲ ಬರೀ ಕೈಗಳಿಂದ ಹೋರಾಡುತ್ತ ತಮ್ಮ ರಾಜಧಾನಿಯನ್ನು ರಕ್ಷಿಸಿಕೊಂಡರು. ತಮ್ಮ ಗುಲಾಮತನದ ದಿನಗಳಲ್ಲಿ ಎಂದೂ ಶಸ್ತ್ರಾಸ್ತ್ರಗಳನ್ನು ಬಳಸಿರದ ಕಾಶ್ಮೀರಿಗಳು ತರಬೇತಿ ದಳಗಳನ್ನು ಸಂಘಟಿಸಿದರು. ಹೆಂಗಸರೂ ಕೂಡ ಅವುಗಳಲ್ಲಿ ಸೇರಿಕೊಂಡರು. ತುರ್ತು ಪರಿಸ್ಥಿತಿಯಲ್ಲಿ ಹೊಸ ಜೀವನಕ್ರಮ ಉದಯಿಸಿತು. ಬುಡಕಟ್ಟು ಧಾಳಿಕೋರರನ್ನು ರಾಜಧಾನಿಯಿಂದ ಸಾಕಷ್ಟು ದೂರ ಅಟ್ಟಿದ ನಂತರ ಸಾಕ್ಷಾರತಾ ತರಗತಿಗಳನ್ನು ಆರಂಭಿಸಲಾಯಿತು. ರೈಫಲ್ ಹಿಡಿಯುವ ಅಭ್ಯಾಸದ ಜೊತೆಗೆ ಗಣಿತ, ಅಕ್ಷರಾಭ್ಯಾಸಗಳನ್ನು ಮಾಡಿಸಲಾಯಿತು. ಕಾಶ್ಮೀರದ ಹೆಂಗಸರು ರೈಫಲ್ ಹಿಡಿಯುವಂತಾದಾಗ ಅವರ ಬುರ್ಖಾ ಪದ್ಧತಿ ಅಳಿದು ಹೋಯಿತು. ಈಗ ರೈತರು ಶ್ರೀಮಂತ ಭೂಮಾಲೀಕರ ಜೀತದಾಳುಗಳಾಗಿರಲಿಲ್ಲ. ಹಳ್ಳಿಗರು ತಮ್ಮದೇ ಸ್ಥಳೀಯ ಅಧಿಕಾರಿಗಳನ್ನು ಚುನಾಯಿಸಿಕೊಂಡರು. ಭೂಸುಧಾರಣೆಯ ಯೋಜನೆ ಆರಂಭವಾಯಿತು. ಎಲ್ಲೋ ಇರುತ್ತಿದ್ದ ಭೂಮಾಲೀಕರು ಬೀಳುಬಿಟ್ಟಿದ್ದ ಬಂಜರು ಭೂಮಿಯನ್ನು ಈಗ ಭೂರಹಿತರಿಗೆ ಮತ್ತು ತೀರ ಕಡಿಮೆ ಭೂಮಿಯನ್ನು ಹೊಂದಿದ್ದ ರೈತರಿಗೆ ವಿತರಿಸಲಾಯಿತು. ಹೆಚ್ಚು ಆಹಾರ ಬೆಳೆಯುವಂತೆ ಉತ್ತೇಜಿಸಲು ಪ್ರಚಾರ ಮಾಡುವುದಕ್ಕಾಗಿ ಶೇಖ್ ಅಬ್ದುಲ್ಲಾ ರಾಜ್ಯಾದಾದ್ಯಂತ ಪ್ರವಾಸ ಮಾಡಿ ರೈತರನ್ನುದ್ದೇಶಿಸಿ ಭಾಷಣ ಮಾಡಿದರು. ಕೆಲವೊಂದು ಸಂದರ್ಭಗಳಲ್ಲಿ ಸ್ವತಃ ಉಳುಮೆ ಮಾಡಿ ಅವರಿಗೆಲ್ಲ ಆದರ್ಶವಾದರು. ಶೇಖ್ ಮತ್ತು ಅವರ ಸಂಪುಟ ತಮ್ಮ ಸಂಬಳವನ್ನು ತಿಂಗಳಿಗೆ ೭೫ ಪೌಂಡುಗಳಿಗೆ ಸೀಮಿತಗೊಳಿಸಿಕೊಂಡಿತು. ಮಹಾರಾಜರನ್ನು ಸಿಂಹಾಸನದಿಂದ ಕೆಳಗಿಳಿಸಲಿಲ್ಲ. ಆದರೆ ಈ ಮೊದಲು ಅವರು ಹೊಂದಿದ್ದ ಅನೇಕ ಅಧಿಕಾರಗಳನ್ನು ಕಸಿದುಕೊಳ್ಳಲಾಯಿತು. ಅವರಿಗೆ ದೊರೆಯುತ್ತಿದ್ದ ೩೦೦೦ ಪೌಂಡುಗಳ (ತಿಂಗಳಿಗೆ) ರಾಜಧನವನ್ನು ಅದರ ಹತ್ತನೇ ಒಂದು ಭಾಗಕ್ಕೆ ಇಳಿಸಲಾಯಿತು.

ಆದರೂ ಜನರೆಲ್ಲರ ತಿರಸ್ಕಾರಕ್ಕೆ ಪಾತ್ರರಾಗಿದ್ದ ಮಹಾರಾಜರು ಹಾಗೇ ಉಳಿದದ್ದು ಶೇಖ್ ಅಬ್ದುಲ್ಲಾ ಅವರಿಗೆ ಸಾಕಷ್ಟು ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿತು. ಪಾಕಿಸ್ತಾನದ ಪರವಾದ ಮುಸ್ಲಿಂ ವೋಟುಗಳನ್ನು ಭಾರತದ ಕಡೆಗೆ ಸೆಳೆಯಲು ಅವರು ಮಾಡುತ್ತಿದ್ದ ಪ್ರಯತ್ನಗಳಿಗೆ ಮಹಾರಾಜರ ಅಸ್ತಿತ್ವ ಒಂದು ದೊಡ್ಡ ಅಡ್ಡಿಯಾಯಿತು. ಮಹಾರಾಜರು ತಮ್ಮ ಅಧಿಕಾರವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟು ಹೋಗುವಂತೆ ಮಾಡುವುದೇನೂ ಕಷ್ಟವಿರಲಿಲ್ಲ. ಜನಪ್ರಿಯತೆ ಕಳೆದುಕೊಂಡ ಮಹಾರಾಜರುಗಳ ವಿಷಯದಲ್ಲಿ ಸಾಮಾನ್ಯವಾಗಿ ಇಂಥದೇ ವಿಧಾನ ಅನುಸರಿಸಲಾಗುತ್ತಿತ್ತು. ಆದರೆ ಮಹಾರಾಜರ ಅಧಿಕಾರ ಸ್ಥಾನ ಹಾಗೇ ಮುಂದುವರೆದರೆ ಜನತೆಯ ಸರ್ಕಾರದ ಪ್ರತಿಷ್ಠಿಗೆ ಕುಂದು. ಪ್ರಜಾತಾಂತ್ರಿಕ ಸರ್ಕಾರಕ್ಕೆ ಅಷ್ಟೆಲ್ಲ ಉತ್ಸಾಹದಿಂದ ಹೋರಾಡಿದ ಜನರ ಕನಸಿಗೆ ಧಕ್ಕೆಯಾಗುತ್ತಿತ್ತು.

“ಫ್ಯೂಡಲ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಘೋಷಣೆಯನ್ನು ಹೊರಡಿಸುವಾಗ ಸಂವಿಧಾನದ ನಿರ್ಮಾಪಕರು’’ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಶೋಷಣೆ, ಬಡತನ, ಅಪಮಾನ ಮತ್ತು ಅಂಧಶ್ರದ್ಧೆಗಳಿಂದ, ಮಧ್ಯಕಾಲೀನ ಅಂಧಕಾರ ಹಾಗೂ ಅಜ್ಞಾನಗಳ ಪಾತಾಳಕೂಪದಿಂದ ಮೇಲೆತ್ತಿ ಸ್ವಾತಂತ್ರ್ಯ, ವಿಜ್ಞಾನ ಹಾಗೂ ಪ್ರಾಮಾಣಿಕ ದುಡಿಮೆಯ ಆಳ್ವಿಕೆ ಇರುವಂಥ, ಸೂರ್ಯನ ಬೆಳಕು ತುಂಬಿದ ಸಮೃದ್ಧ ನಾಡಿನ ಕಡೆಗೆ ಒಯ್ಯುವುದು. ನಮ್ಮ ದೇಶವನ್ನು ಏಷಿಯಾದ ಹಿಮಾವೃತ ಎದೆಯ ಮೇಲೆ ಹೊಳೆಯುವ ರತ್ನದಂತೆ ಮಾಡುವುದು’’ ಇದು ನಮ್ಮ ಗುರಿ ಎಂದು ವಿವರಿಸಿದರು.

* * *