ಕಾಶ್ಮೀರದ ರಾಜಧಾನಿಯಲ್ಲಿದ್ದ ಪೀಪಲ್ಸ್ ಪಾರ್ಟಿ ಸರ್ಕಾರವು “ಎಲ್ಲ ಪ್ರಜೆಗಳಿಗೂ ಆತ್ಮಸಾಕ್ಷಿಗೆ ಆನುಗುಣವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯವನ್ನೂ, ಆರಾಧನೆಯ ಸ್ವಾತಂತ್ರ್ಯವನ್ನೂ ಸಂವಿಧಾನ ಖಾತರಿಪಡಿಸುತ್ತದೆ’’ ಮೊದಲಾದ ವಾಕ್ಯಗಳನ್ನು ಸೇರಿ ಸಂವಿಧಾನವನ್ನು ಪೂರ್ಣಗೊಳಿಸುವ ಕೆಲಸದಲ್ಲಿ ತೊಡಗಿದ್ದಾಗ ಇತ್ತ ಪಾಕಿಸ್ತಾನದಲ್ಲಿ “ಇಸ್ಲಾಂ ಅಪಾಯದಲ್ಲಿದೆ’’ ಎಂಬ ಒಂದು ಸಾವಿರ ವರ್ಷದ ಹಿಂದಿನ ಕೂಗು ಮತ್ತೆ ಮೊಳಗಿತ್ತು. ವಾಸ್ತವವಾಗಿ ಮುಸ್ಲಿಂ ಬುಡಕಟ್ಟು ಧಾಳಿಕೋರರು ಕಾಶ್ಮೀರಕ್ಕೆ ಪ್ರವಾಹದಂತೆ ಹರಿದು ಬರತೊಡಗಿದ್ದಾಗ ಅಪಾಯದಲ್ಲಿರುವುದು ಇಸ್ಲಾಂ ಅಲ್ಲ ಕ್ರಿಶ್ಚಿಯನ್ ಧರ್ಮ ಎಂಬ ಭಾವನೆ ಮೂಡಿಸುವಂತಹ ಘಟನೆಗಳು ನಡೆಯತೊಡಗಿದ್ದವು. ಬಾರಾಮುಲ್ಲಾ ತಲುಪಿದ ಧಾಳಿಕೋರರು ಸೇಂಟ್‌ಜೋಸೆಫ್ಸ್ ಕಾನ್ವೆಂಟಿಗೆ ಮುತ್ತಿಗೆ ಹಾಕಿದರು. ಅಲ್ಲಿನ ಸನ್ಯಾಸಿನಿಯರ ಮೇಲೆ ಬರ್ಬರ್ ರೀತಿಯಲ್ಲಿ ಅತ್ಯಾಚಾರ ನಡೆಸಿದರು. ಈ ಧಾಳಿ ನಡೆದಾಗ ನಾನು ಪಾಕಿಸ್ತಾನದಲ್ಲಿದ್ದೆ. ಗಲಭೆಯ ಸ್ಥಳಕ್ಕೆ ಬರುವುದು ಸುಲಭವಾಗಿರಲಿಲ್ಲ. ಪಾಕಿಸ್ತಾನದ ಅಧಿಕಾರಿಗಳು ನನ್ನನ್ನು ಕಾಶ್ಮೀರಕ್ಕೆ ಕಳಿಸಲು ಸಿದ್ಧವಿರಲಿಲ್ಲ. ಇದಕ್ಕೆ ಅವರು ಕೊಡುತ್ತಿದ್ದ ಕಾರಣಗಳು ಸಮರ್ಪಕವಾಗಿರಲಿಲ್ಲ. ಅಲ್ಲಿ ನೀವು ಫೋಟೋ ತೆಗೆಯುವಂಥದ್ದೇನೂ ಇಲ್ಲ ಎಂದು ಒಮ್ಮೆ ಹೇಳಿದರೆ, ಹೆಂಗಸರು ಅಲ್ಲಿಗೆ ಹೋಗುವುದು ಅಪಾಯ, ಬುಡಕಟ್ಟು ಜನರು ಹೆಂಗಸರನ್ನು ಅಪಹರಿಸುತ್ತಾರೆ ಎಂದು ಇನ್ನೊಮ್ಮೆ ಹೇಳುತ್ತಿದ್ದರು. ಪಾಕಿಸ್ತಾನದ ದಿಕ್ಕಿನಲ್ಲಿದ್ದ ಕೊನೆಯ ನಿಲ್ದಾಣವಾದ ಅಬೋತಾಬಾದ್‌ವರೆಗೆ ನಾನು ಹೋದೆ. ಅಲ್ಲಿ ಧಾಳಿಕೋರರದಿಂದ ತಪ್ಪಿಸಿಕೊಂಡು ಬಂದ ಕ್ರೈಸ್ತ ಸನ್ಯಾಸಿನಿಯರು ನನಗೆ ಸಿಕ್ಕಿದರು. ಅತ್ಯಾಚಾರ, ದೌರ್ಜನ್ಯ, ಹಿಂಸಾಕೃತ್ಯಗಳ ಕಥೆಗಳನ್ನು ನಿರೂಪಿಸಿದರು. ಈ ದಾಳಿಕೋರರು ಒಂಬತ್ತು ದಿನಗಳವರೆಗೆ ಕಾನ್ವೆಂಟಿನಲ್ಲಿ ಹಿಂಸಾತಾಂಡವ ನಡೆಸಿದ್ದರು. ಒಂದು ದಿನ ಭಾರತೀಯ ಸೇನೆಯಿಂದ ವಿಮಾನಧಾಳಿ ನಡೆದಾಗ ಭಯಭೀತರಾದ ಧಾಳಿಕೋರರು ಇನ್ನಷ್ಟು ಉದ್ರಿಕ್ತಗೊಂಡು ಅಲ್ಲಿ ಉಳಿದಿದ್ದ ಆರು ಜನ ನರ್ಸ್‌ಗಳನ್ನು ಗುಂಡಿಟ್ಟುಕೊಲ್ಲಲು ಸಾಲಾಗಿ ನಿಲ್ಲಿಸಿದರಂತೆ. ಆದರೆ ಅವರಲ್ಲಿ ಒಬ್ಬ ನರ್ಸ್‌ಗಳ ಬಾಯಲ್ಲಿದ್ದ ಚಿನ್ನದ ಹಲ್ಲಿನ ದೆಸೆಯಿಂದ ಎಲ್ಲರ ಪ್ರಾಣವೂ ಉಳಿದಿತ್ತು. ಅವರ ಚಿನ್ನದ ಹಲ್ಲನ್ನು ತಾನು ಪಡೆದುಕೊಳ್ಳಬೇಕು ಎಂದು ಒಬ್ಬ ಸಂಚು ನಡೆಸಿದಾಗ ಅವರವರಲ್ಲೇ ಜಗಳ ಶುರುವಾಯಿತು. ಅಷ್ಟರಲ್ಲಿ ಅಲ್ಲಿಗೆ ಮಂದ ಅವರ ಮುಖ್ಯಸ್ಥ ಸನ್ಯಾಸಿನಿಯರನ್ನು ಗುಂಡಿಟ್ಟು ಕೊಲ್ಲುವುದು ನ್ಯಾಯವಲ್ಲ ಎಂದು ತಿಳಿಸಿದ. ಈ ನರ್ಸ್‌ಗಳ ಜೀವ ಉಳಿಯಿತು.

ನಾನು ಲೈಫ್ ಪತ್ರಿಕೆಗಾಗಿ ಪಾಕಿಸ್ತಾನದ ಫೊಟೋಗ್ರಾಫಿಕ್ ಸರ್ವೆ ನಡೆಸಿದಾಗ ವಿಚಿತ್ರವಾದ ಅನುಭವವಾಯಿತು. ನಾನು ಅಧಿಕಾರಗಳ ಬೆಂಗಾವಲಿನಲ್ಲಿ ಹೋಗುತ್ತಿದ್ದಾಗ ಅವರು ತೋರಿಸುತ್ತಿದ್ದ ಸ್ಥಳಗಳಲ್ಲಿ ನಗೆ ಬೇಕಾದ್ದೇನೂ ಕಾಣುತ್ತಿರಲಿಲ್ಲ. ಕಾಶ್ಮೀರದ ಗಡಿಗೆ ಹೋಗುವ ಸುಂದರವಾದ ಆದರೆ ನಿರ್ಜನವಾದ ರಸ್ತೆಗಳಲ್ಲಿ ನನ್ನನ್ನು ಅವರು ಕರೆದುಕೊಂಡು ಹೋಗುತ್ತಿದ್ದರು. ಇಲ್ಲವೇ ಸುಂದರ ಪರ್ವತ ದೃಶ್ಯಾವಳಿಗಳನ್ನು ತೋರಿಸುತ್ತಿದ್ದರು. ಅಂಥವಕ್ಕೆ Picture postcard ಮೌಲ್ಯವಿತ್ತೇ ಹೊರತು ಸುದ್ದಿಯ ಮೌಲ್ಯ ಇರುತ್ತಿರಲಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲ ನಾನು ಅಧಿಕಾರಿಗಳ ಬೆಂಗಾವಲ್ಲಿಲ್ಲದ ಇನ್ನೊಂದು ರಸ್ತೆಯಲ್ಲಿ ಹೋಗಿ ಬಿಡುತ್ತಿದ್ದೆ. ಅಲ್ಲಿ ನನಗೆ ಬೇಕಾದ ವಸ್ತು ಸಾಕಷ್ಟು ಸಿಗುತ್ತಿತ್ತು. ಪಿಂಡಿಯಿಂದ ಕಾಶ್ಮೀರಕ್ಕೆ ಹೋಗುವ ಹೆದ್ದಾರಿಯಲ್ಲಿ ಜೋರಾಗಿ ಘೋಷಣೆಗಳನ್ನು ಕೂಗುತ್ತ ಹೋಗುತ್ತಿದ್ದ ಸಾವಿರಾರು ಪಠಾಣರ ಗುಂಪನ್ನು ನೋಡಿದೆ. ಅವರು ರಸ್ತೆಯಲ್ಲಿ ಒಂದು ಕಡೆ ರಟ್ಟಿನಿಂದ ಒಂದು ದೊಡ್ಡ ವಿಜಯದ ಹೆಬ್ಬಾಗಿಲನ್ನು ನಿರ್ಮಿಸಿದ್ದರು. ಅದಕ್ಕೆ ತೋರಣ, ಹೂವಿನ ಹಾರಗಳ ಅಲಂಕಾರ ಮಾಡಿದ್ದರು. ಮುಸ್ಲಿಂಲೀಗಿನ ಹಸಿರು ಬಣ್ಣದ ಬಾವುಟಗಳನ್ನು ಉತ್ಸಾಹದಿಂದ ಬೀಸುತ್ತಿದ್ದರು. ಅವರು ತಮ್ಮ ನಾಯಕನಾದ ಮಹಮಂದ್ ಬುಡಕಟ್ಟಿನ ಬಾದ್ ಶಾ ಗುಲ್‌ಗಾಗಿ ಕಾಯುತ್ತಾ ಇದ್ದರು. ಆತ ತನ್ನೊಂದಿಗೆ ಒಂದು ಸಾವಿರ ಹೋರಾಟಗಾರರನ್ನು ಟ್ರಕ್‌ಗಳು ಹಾಗೂ ಶಸ್ತ್ರಾಸ್ತ್ರಗಳನ್ನು ತರುವವನಿದ್ದ. ಪಾಕಿಸ್ತಾನದ ಅಧಿಕಾರಿಗಳು ವಿಷಯವನ್ನು ಮುಚ್ಚಿಟ್ಟಂತೆ ಇವರು ವಿಷಯವನ್ನು ಮುಚ್ಚಿಡಲಿಲ್ಲ. ನೀವು ಕಾಶ್ಮೀರಕ್ಕೆ ಹೋಗುತ್ತೀರೇನು ಎಂದು ಕೇಳಿದರೆ “ಖಂಡಿತ ಹೋಗುತ್ತೇವೆ. ನಾವೆಲ್ಲ ಮುಸ್ಲಿಮರು, ಕಾಶ್ಮೀರದಲ್ಲಿರುವ ನಮ್ಮ ಮುಸ್ಲಿಂ ಸೋದರರಿಗೆ ಸಸಾಯ ಮಾಡುವುದು ನಮ್ಮ ಕರ್ತವ್ಯ’’ ಎನ್ನುತ್ತಿದ್ದರು.

ಇವರು ತಮ್ಮ ಮುಸ್ಲಿಂ ಸೋದರರಿಗೆ ನೀಡುತ್ತಿದ್ದ ಸಹಾಯ ಯಾವ ರೀತಿ ಇರುತ್ತಿತ್ತೆಂದರೆ ಅಲ್ಲಿಗೆ ಹೋದ ಟ್ರಕ್‌ಗಳು ಮತ್ತು ಬಸ್ಸುಗಳು ಎರಡು ದಿನಗಳೊಳಗಾಗಿ ಲೂಟಿ ಮಾಡಿದ ವಸ್ತುಗಳನ್ನೆಲ್ಲ ಹೇರಿಕೊಂಡು ಹಿಂದಿರುಗುತ್ತಿದ್ದವು. ಮತ್ತೆ ಇನ್ನಷ್ಟು ಜನರನ್ನು ತುಂಬಿಕೊಂಡು ಇಂಥ ಸೇವೆಗಾಗಿ ಮತ್ತೆ ಕಾಶ್ಮೀರಕ್ಕೆ ಹೋಗುತ್ತಿದ್ದರು. ಹಿಂದೂ ಸಿಖ್ ಮುಸ್ಲಿಂ ಎಂಬ ಭೇದವಿಲ್ಲದೆ ಕಾಶ್ಮೀರದಲ್ಲಿದ್ದವರಿಗೆ ಇವರಿಂದ ದೊರೆಯುತ್ತಿದ್ದ ಸೇವೆಯ ವೈಖರಿ ಇದು.

ಈ ಬಸ್ಸು ಲಾರಿಗಳು ಎಲ್ಲಿಂದ ಬರುತ್ತವೆ ಎಂಬುದು ನಿಗೂಢವಾಗಿತ್ತು. ಪಿಂಡಿಯಲ್ಲಿ ಈ ಬಗ್ಗೆ ಸ್ವಲ್ಪ ಸಂಶೋಧನೆ ನಡೆಸಿದ ಮೇಲೆ ಇದರ ರಹಸ್ಯ ಗೊತ್ತಾಯಿತು. ಪ್ರತಿಯೊಂದು ಟ್ರಕ್ ಕಂಪನಿಗಳವರು ಹತ್ತೋ ಇಪ್ಪತ್ತೋ ಲಾರಿಗಳನ್ನು ಒದಗಿಸುತ್ತಿದ್ದರು. ಬಹುಶಃ ಕಾಶ್ಮೀರದಲ್ಲಿರುವ ಎಷ್ಟು ಮುಸ್ಲಿಮರನ್ನು ರಕ್ಷಿಸಬಹುದು ಎಂಬುದರ ಅಂದಾಜಿನ ಮೇಲೆ ಈ ಕಂಪನಿಗಳವರು ಒದಗಿಸುವ ಲಾರಿಗಳ ಸಂಖ್ಯೆ ನಿರ್ಧಾರವಾಗುತ್ತಿತ್ತು. ಅವರಿಗೆ ಶಸ್ತ್ರಾಸ್ತ್ರಗಳು ಒದಗುವ ಮೂಲ ಇದಕ್ಕಿಂತ ನಿಗೂಢವಾಗಿತ್ತು. ಬುಡಕಟ್ಟು ಜನರು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು. ಬೆಟ್ಟಗುಡ್ಡ ಪ್ರದೇಶದಲ್ಲಿ ಅಲ್ಲಲ್ಲಿ ಅವರ ಚಿಕ್ಕ ಚಿಕ್ಕ ಕಾರ್ಖಾನೆಗಳಿದ್ದವು. ಅಲ್ಲಿ ಇಂಗ್ಲಿಷರ ರೈಫಲ್ ಅಥವಾ ಪಿಸ್ತೂಲಿನ ಪ್ರತಿರೂಪಗಳು ತಯಾರಾಗುತ್ತಿದ್ದವು. ಆಫ್ರಿದಿ ಬುಡಕಟ್ಟಿಗೆ ಸೇರಿದ ಇಂಥ ಒಂದು ದೊಡ್ಡ ಅಸ್ತ್ರ ಕಾರ್ಖಾನೆಯ ಫೋಟೋ ತೆಗೆದೆ. ಅದು ಕಲ್ಲಿನಿಂದ ಆವೃತವಾದ ಕೊಟ್ಟಿಗೆಯಂಥ ಕಟ್ಟಡ. ಅಲ್ಲಿ ಕೆಲಸ ಮಾಡುತ್ತಿದ್ದವರು ಐದು ಜನ. ಒಂದು ರೈಫಲ್ ತಯಾರಿಸಲು ಒಬ್ಬ ವ್ಯಕ್ತಿಗೆ ಒಂದು ತಿಂಗಳು ಬೇಕಾಗುತ್ತಿತ್ತು. ಹೀಗಾಗಿ ವಾಯುವ್ಯ ಗಡಿ ಉದ್ದಕ್ಕೂ ಇರುವ ಎಲ್ಲ ಇಂಥ ಕಾರ್ಯಾಗಾರಗಳಿಂದ ತಯಾರಾದ ಅಸ್ತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಕಾಶ್ಮೀರದ ಮೇಲೆ ಧಾಳಿ ಮಾಡುತ್ತಿದ್ದ ಬುಡಕುಟ್ಟು ಜನರು ತರುತ್ತಿದ್ದ ಸಲಕರಣೆಗಳ ಒಂದಂಶದಷ್ಟೂ ಆಗುತ್ತಿರಲಿಲ್ಲ. ದಾಳಿಕೋರರ ಬಳಿ ಇದ್ದ ಸಣ್ಣ ಫಿರಂಗಿಗಳು, ಇತರ ಭಾರೀ ಆಧುನಿಕ ಅಸ್ತ್ರಗಳು ಹಾಗೂ ಎರಡು ವಿಮಾನಗಳು ಖಂಡಿತ ಇವರ ಪುಟ್ಟ ಕಾರ್ಯಾಗಾರಗಳಲ್ಲಿ ತಯಾರಾಗಿರಲಿಲ್ಲ. ಇದರ ಒಂದು ಮೂಲವನ್ನು ಕಂಡು ಹಿಡಿಯುವುದು ಸುಲಭವಾಗಿತ್ತು. ಅದಕ್ಕೆ ಬೆಳಿಗ್ಗೆ ಸ್ವಲ್ಪ ಮೇಗ ಎದ್ದು ಹೊರಟರೆ ಸಾಕಿತ್ತು. ಗಡಿ ಪ್ರದೇಶಕ್ಕೆ ಸಮೀಪವಿದ್ದ ಪಾಕಿಸ್ತಾನದ ಊರುಗಳಲ್ಲಿ ಬೆಳಕು ಮೂಡುವುದಕ್ಕೆ ಮೊದಲೇ ಮುಸ್ಲಿಂಲೀಗ್‌ನ ಪ್ರಧಾನ ಕಛೇರಿಗಳ ಮುಂಬಾಗಿಲಿನಲ್ಲೆ ಬುಡಕಟ್ಟು ಜನಕ್ಕೆ ಶಸ್ತ್ರಾಸ್ತ್ರಗಳನ್ನು ಕೊಡಲಾಗುತ್ತಿತ್ತು. ಹೀಗಾಗಿ ಪಾಕಿಸ್ತಾನ ಸರ್ಕಾರ ನೇರವಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ ಎಂಬ ಅಪಾಯದಿಂದ ಪಾರಾಗಬಹುದಿತ್ತು. ಆದರೇನು ಪಾಕಿಸ್ತಾನವು ಏಕೈಕ ರಾಜಕೀಯ ಪಕ್ಷವಿದ್ದ ದೇಶವಾಗಿದ್ದು ಮುಸ್ಲಿಂ ಲೀಗೇ ಆ ಏಕೈಕ ಪಕ್ಷ ಎಂಬುದನ್ನು ಮರೆಯುವಂತಿರಲಿಲ್ಲ.

ಇದೇ ಹೋರಾಟ ಸಂದರ್ಭದಲ್ಲಿ ‘ಅಜಾದ್ ಕಾಶ್ಮೀರ್’ ಎಂಬ ಹೋರಾಟಪಡೆಯೂ ಹುಟ್ಟಿಕೊಂಡಿತ್ತು. ಅದರ ನೇತೃತ್ವ ವಹಿಸಿದವನು ಒಬ್ಬ ತರುಣ ವಕೀಲ. ಆತನ ಹೆಸರು ಸರ್ದಾರ್ ಇಬ್ರಾಹಿಂ. ಆತನ ಪಡೆಯ ಆಕ್ರಮಣಕಾರರ ಪಡೆಗಳೊಂದಿಗೇ ಮುನ್ನುಗ್ಗುತ್ತಿತ್ತು. ನಮಗೆ ಅಚಲವಿಶ್ವಾಸವಿದೆ. ಈ ವಿಶ್ವಾಸವೇ ನಮಗೆ ಜಯ ತಂದುಕೊಡುತ್ತದೆ ಎನ್ನುತ್ತಿದ್ದ ಆತ.

ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಲು ಬೆಂಬಲಿಸುವುದು ಈ ಚಳುವಳಿಯ ಗುರಿಯಾಗಿತ್ತು. ಇದಕ್ಕೆ ಮುಂಚಿನ ದಿನಗಳಲ್ಲಿ ಅಜಾದ್ ಕಾಶ್ಮೀರ್ ಚಳುವಳಿಯ ಅನುಯಾಯಿಗಳು ಅಥವಾ ಅದರಲ್ಲಿದ್ದ ತರುಣರು ಮತ್ತು ವಿದ್ಯಾವಂತರೂ ಆಗಿದ್ದವರು ಪೀಪಲ್ಸ್ ಪಾರ್ಟಿ ಹಾಗೂ ಶೇಖ್ ಅಬ್ದುಲ್ಲಾ ಅವರೊಂದಿಗೆ ಕೆಲಸ ಮಾಡಿದ್ದಿರಬಹುದು. ಅಜಾದ್ ಕಾಶ್ಮೀರ ಚಳುವಳಿ ಹುಟ್ಟಿಕೊಂಡ ಪೂಂಚ್ ಎಂಬ ಹಳ್ಳಿಯಲ್ಲಿ ಪ್ರಜಾಸತ್ತಾತ್ಮಕ ಅಂಶಗಳಿದ್ದವು.  ಶ್ರೀನಗರದಲ್ಲಿ ಸ್ಟೇಟ್ ಪೀಪಲ್ಸ್ ಪಾರ್ಟಿಯನ್ನು ರೂಪಿಸಿದ ಪ್ರಜೆಗಳ ಹಾಗೇ ಇಲ್ಲಿನ ಜನರೂ ಸಹ ಮಹಾರಾಜ ಹರಿಸಿಂಗ್‌ನ ಕೈಕಳಗೆ ನರಳಿದವರೇ ಗಿದ್ದರು. ಅಬ್ದುಲ್ಲಾರ ಅನುಯಾಯಿಗಳ ಹಾಗೇ ಇವರೂ ಕೂಡ ರಾಜರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಆದರೆ ಅವರ ಇಸ್ಲಾಮೀ ಪೂರ್ವಾಗ್ರಹ ಇದೆಲ್ಲವನ್ನೂ ಧೂಳಿಪಟ ಮಾಡಿತು. ಹಿಂದೂಗಳೊಂದಿಗೆ ಸಹಕರಿಸುತ್ತಿರುವ ಶೇಖ್ ಅಬ್ದುಲ್ಲಾ ಈ ಜನರಳ ಪಾಲಿಗೆ ‘ದ್ರೋಹಿ’ಯಾದರು. ಹಿಂದೂ ಮುಸ್ಲಿಮರ ಪರಸ್ಪರ ಸಹಿಷ್ಣುತೆಗಾಗಿ ಶೇಖ್ ಅವರು ಕರೆಕೊಟ್ಟರೆ ಅದನ್ನು ಇವರು ‘ಮೊಸಳೆ ಕಣ್ಣೀರು’ ಎಂದು ವರ್ಣಿಸುತ್ತಿದ್ದರು. ಆಜಾದ್ ಕಾಶ್ಮೀರ ಸರ್ಕಾರದ ರಚನೆಯನ್ನು ಪಾಕಿಸ್ತಾನದಲ್ಲಿ ಎಷ್ಟೊಂದು ಆದರದಿಂದ ಸ್ವಾಗತಿಸಲಾಯಿತೆಂದರೆ ಅದನ್ನು ಒಂದು ಕೈಗೊಂಬೆ ಸರ್ಕಾರವಾಗಿ ರೂಪಿಸಿರಬಹುದು ಎಂಬ ಅನುಮಾನ ಬರದಿರಲು ಸಾಧ್ಯವೇ ಇರಲಿಲ್ಲ. ಪಾಕಿಸ್ತಾನದ ರಾಜಧಾನಿಯಿಂದ ಪ್ರತಿ ಬುಧವಾರ ಬೆಳಿಗ್ಗೆ ಔಷಧಿಗಳು ಹಾಗೂ ಸ್ವಯಂ ಸೇವಾ ಕಾರ್ಯಕರ್ತರುಗಳನ್ನು ತುಂಬಿಕೊಂಡು ಒಂದು ರೈಲುಗಾಡಿ ಕಾಶ್ಮೀರದ ಗಡಿಗೆ ಬರುತ್ತಿತ್ತು. ಹೋರಾಟದ ಸಮಯದಲ್ಲಿ ಭಾರತೀಯ ಸೇನೆಯು ಕೆಲವು ಆಜಾದ್ ಕಾಶ್ಮೀರ ಸೈನಿಕರನ್ನು ಯುದ್ಧ ಖೈದಿಗಾಳಾಗಿ ಸೆರೆ ಹಿಡಿದುಕೊಂಡು ಬಂದಾಗ ಅವರ ಪಾಕೆಟ್ಟುಗಳಲ್ಲಿ ಪಾಕಿಸ್ತಾನ ಸೇನೆಯ ವೇತನ ಪಾವತಿ ಚೀಟಿಗಳಿದ್ದುದು ಕಂಡುಬಂದಾಗ ಎಲ್ಲ ಬಹಿರಂಗವಾಗಿತ್ತು.

ಪಂಡಿತ್ ನೆಹರೂ ಅವರು ಭಾರತದ ಪರವಾಗಿ ಪದೇಪದೇ ಪ್ರತಿಭಟನೆ ವ್ಯಕ್ತಪಡಿಸಿದರು. ಪಾಕಿಸ್ತಾನವು ಆಕ್ರಮಣಕ್ಕೆ ಸಹಾಯ ಒತ್ತಾಸೆ ನೀಡುವುದು ಸರಿಯಲ್ಲ. ಸಮವಸ್ತ್ರವಿಲ್ಲದಿದ್ದರೂ ಪಾಕಿಸ್ತಾನ ಸೈನಿಕರನ್ನು ಅಧಿಕಾರಿಗಳನ್ನು ಬಳಸುವುದು ಆಕ್ರಮಣ ಮಾಡಿದಂತೆ ಆಗುತ್ತದೆ ಎಂದು ಪ್ರತಿಭಟಿಸಿದರು. ಗಾಂಧಿಯವರೂ ಸಹ ನೆಹರೂ ಮಾತಿಗೆ ದನಿಗೂಡಿಸಿ ಧಾಳಿಕೋರರ ವಿರುದ್ಧ ಕಾಶ್ಮೀರದ ಅಸಹಾಯಕ ಜನತೆಯ ರಕ್ಷಣೆಗಾಗಿ ಕಾಶ್ಮೀರದಲ್ಲಿ ಭಾರತೀಯ ಪಡೆಗಳನ್ನು ಬಳಸಬಹುದು ಎಂದು ಒಪ್ಪಿಗೆ ನೀಡಿದಾಗ ಪಾಕಿಸ್ತಾನದ ಪತ್ರಿಕಾ ಪ್ರಪಂಚವು ಮಹಾತ್ಮರು ತಮ್ಮ ಅಹಿಂಸೆಯ ಸೋಗನ್ನು ತೆಗೆದುಬಿಟ್ಟಿದ್ದಾರೆ. ಗಾಂಧಿ ತಮಗೆ ಬೇಕೆನಿಸಿದಾಗ ಹಿಂಸೆಯನ್ನು ಉತ್ತೇಜಿಸುತ್ತಾರೆ, ಅವರು ಎಂದಿಗೂ ಮುಸ್ಲಿಮರ ಸ್ನೇಹಿತರಲ್ಲ ಎಂದು ಕೂಗಾಟ ಎಬ್ಬಿಸಿತು.

ನಾನು ಕಾಶ್ಮೀರದ ಕಣಿವೆಯಲ್ಲಿ ಯುದ್ಧದಿಂದ ಜರ್ಝರಿತವಾದ ಪ್ರದೇಶಗಳಿಗೆ ಅನಂತರ ಭೇಟಿ ನೀಡಿದಾಗ ಗೊತ್ತಾದ ಅಂಶವೇನೆಂದರೆ ಪಾಕಿಸ್ತಾನದವರು ತಮ್ಮನ್ನು ವಿಮೋಚಿಸುವುದು ಕಾಶ್ಮೀರದ ಮುಸ್ಲಿಮರಿಗೆ ಬೇಕಿರಲಿಲ್ಲ. ಜನರು ಬಾರಾಮುಲ್ಲಾ ಪ್ರದೇಶವನ್ನು ಬುಡಕಟ್ಟು ಜನರ ಕೈಯಿಂದ ಪುನಃ ವಶಪಡಿಸಿಕೊಂಡ ನಂತರ ನಾನು ಅಲ್ಲಿಗೆ ಹೋದೆ. ಜೀಲಂ ನದಿ ಹರಿಯುತ್ತಿದ್ದ ಆ ಸುಂದರವಾದ ಊರು ಯುದ್ಧದಿಂದ ಹಾಳಾಗಿತ್ತು. ಎಲ್ಲಿ ನೋಡಿದರೂ ಬೆಂಕಿಯಲ್ಲಿ ಸುಟ್ಟು ಕಪ್ಪಾದ ಅವಶೇಷಗಳ ರಾಶಿ.

ಬಾಲಾಮುಲ್ಲಾದ ತರುಣ ವಯಸ್ಸಿನ ಒಬ್ಬ ಮುಸ್ಲಿಂ ವ್ಯಾಪಾರಿ ಕಾನ್ವೆಂಟಿನಲ್ಲಿ ನಡೆದ ಗಲಭೆಯಲ್ಲಿ ಅಲ್ಲಿನವರನ್ನು ರಕ್ಷಿಸಲು ಹೋಗಿ ತನ್ನ ಪ್ರಾಣವನ್ನೇ ಬಲಿಗೊಟ್ಟಿದ್ದ ಕಾಶ್ಮೀರಿಗಳು ಆತನನ್ನು ಈಗ ಮಹಾಸಂತನೆಂದು ಭಾವಿಸಿ ಆರಾಧಿಸತೊಡಗಿದ್ದರು.

ಹೀಗೆ ಹಿಂದೂ ಮುಸ್ಲಿಂ ಏಕತೆಯನ್ನು ಪ್ರತಿಪಾದಿಸುತ್ತಾ ಹೋರಾಡಿ ಪ್ರಾಣತೆತ್ತ ಮತ್ತೊಬ್ಬ ನಾಯಕ ಮೀರ್‌ಮಖಬೂಲ್ ಶರ್ವಾನಿ. ಈತ ಶೇಖ್ ಅಬ್ದುಲ್ಲಾರ ಜೊತೆಯ ಕಾರ್ಯಕತ. ಜನರ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಾಗ ಧಾರ್ಮಿಕ ಏಕತೆಯನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಅಗತ್ಯವೆಂದು ಅವು ಪ್ರತಿಪಾದಿಸುತ್ತಿದ್ದರು. ಊರಿನ ಜನ ಶೆರ್ವಾನಿಯವರ ಬಗ್ಗೆ ಹೇಳುವ ಕಥೆಗಳನ್ನು ಕೇಳಿದಾಗ ಆತ ರಾಬಿನ್‌ಹುಡ್ ರೀತಿಯ ವ್ಯಕ್ತಿಯಾಗಿದ್ದರಬೇಕು ಅನ್ನಿಸಿತು. ಅತ್ಯಧಿಕ ತೆರಿಗೆಯನ್ನು ತೆರಲಾರದ ರೈತರ ಪರವಾಗಿ ಅವರು ಹೋರಾಡಿದ್ದರು. ಪೊಲೀಸರು ಯಾರೋ ಒಬ್ಬ ಅಮಾಯಕನನ್ನು ಚಚ್ಚುತ್ತಿದ್ದಾಗ ಇವರು ಪೊಲೀಸರ ಮೇಲೆ ಕೈ ಮಾಡಿದ್ದರು. ದಬ್ಬಾಳಿಕೆಗಳ ವಿರುದ್ಧ ಪ್ರತಿಭಟಿಸಬೇಕು ಎಂದು ಜನರಿಗೆ ತಿಳುವಳಿಕೆ ಹೇಳುತ್ತಿದ್ದರು. ಬುಡಕಟ್ಟು ಅಕ್ರಮಣಕಾರರು ಕಾಶ್ಮೀರದ ಮೇಲೆ ಧಾಳಿ ನಡೆಸಿ ಅಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾಗ ಆ ಕಣಿವೆಯ ಪ್ರತಿಯೊಂದು ಅಂಗುಲವೂ ಚಿರಪರಿಚಿತವಾಗಿದ್ದ ತೆರ‍್ವಾನಿಯವರು ಹಿನ್ನೆಲೆಯಲ್ಲಿ ಇದ್ದುಕೊಂಡು ಕೆಲಸ ಮಾಡಿದರು. ಆಕ್ರಮಣಕ್ಕೊಳಗಾದ ಗ್ರಾಮೀಣ ಜನರಿಗೆ ಧೈರ್ಯ ತುಂಮಿದರು. ನಾವು ಯಾವ ಮತಕ್ಕೇ ಸೇರಿರಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಮೇಕು. ಭಾರತದ ಸೇನೆ ನೆರವಿಗೆ ಬರುತ್ತೆ ಎಂದು ಭರವಸೆ ನೀಡುತ್ತಿದ್ದರು. ಬುಡಕಟ್ಟು ಧಾಳಿಕೋರರಿಗೆ ತಪ್ಪು ಮಾಹಿತಿ ಸಿಗುವಂತೆ ಮಡಿ ಮೂರು ಸಲ ಅವರು ಭಾರತೀಯ ಸೇನೆಯ ಕೈಗೆ ಸಿಕ್ಕಿ ಬೀಳುವಂತೆ ಮಾಡಿದರು. ಆದರೆ ನಾಲ್ಕನೇ ಸಲ ಅವರ ಯೋಜನೆ ವಿಫಲವಾಗಿ ಅವರೇ ಆಕ್ರಮಣಕಾರರಿಗೆ ಸೆರೆಯಾದರು. ಆಕ್ರಮಣಕಾರರು ಶೇರ್ವಾನಿಯವರನ್ನು ಬಾರಾಮುಲ್ಲಾದ ಚೌಕದ ಮಳಿ ಇದ್ದ ಒಂದು ಚಿಕ್ಕ ಸೆಣಬಿನ ಅಂಗಡಿಯ ಜಗುಲಿಯ ಮೇಲೆ ನಿಲ್ಲಿಸಿದರು. ಭಯದಿಂದ ನಡುಗುತ್ತಿದ್ದ ಊರಿನ ಜನರನ್ನು ರೈಫಲ್ಲುಗಳ ತುದಿಗಳಿಂದ ತಿವಿಯುತ್ತ ಅಲ್ಲಿಗೆ ಕರೆತಂದು ಶೇರ್ವಾನಿಯವರ ಎದುರು ನಿಲ್ಲಿಸಿದರು. ಜನತೆಯ ಮೇಲೆ ಶೇರ್ವಾನಿಯ ಬಹಳ ಪ್ರಭಾವ ಬೀರಿದ್ದ ವ್ಯಕ್ತಿ ಎಂದು ಗೊತ್ತಿದ್ದರಿಂದ ಪಾಕಿಸ್ತಾನದೊಂದಿಗೆ ಸೇರಿಕೊಳ್ಳುವುದೇ ಮುಸ್ಲಿಮರಿಗೆ ಒಳ್ಳೆಯ ಪರಿಹಾರ ಎಂದು ಸಾರ್ವಜನಿಕವಾಗಿ ಘೋಷಿಸಬೇಕೆಂದು ಶೆರ್ವಾನಿಯವರಿಗೆ ಹೇಳಿದರು. ಅದಕ್ಕೆ ಶೆರ್ವಾನಿ ನಿರಾಕರಿಸಿದಾಗ ಅವರನ್ನು ಅಂಗಡಿಯ ಕಂಬಕ್ಕೆ ಹಗ್ಗದಿಂದ ಬಿಗಿದು ಕಟ್ಟಿ ಅವರ ಕೈಗಳನ್ನು ಶಿಲುಬೆಯ ಮೇಲಿರುವ ಕ್ರಿಸ್ತನ ಕೈಗಳಂತೆ ಚಾಚಿಸಿದರು. ‘ಪಾಕಿಸ್ತಾನ್ ಜಿಂದಾಬಾದ್’, ‘ಶೇರ್-ಇ-ಕಾಶಿರ್ ಮುರ್ದಾಬಾದ್’ ಎಂದು ಕೂಗಬೇಕೆಂದು ತಿಳಿಸಿದರು. ಆದಾದ ನಂತರ ಈ ಕಾಡು ಜನ ಮಾಡಿದ್ದು ನಿಜಕ್ಕೂ ವಿಚಿತ್ರವಾಗಿದೆ. ಅಲ್ಲಿನ ಬೆಟ್ಟದ ಮೇಲಿದ್ದ ಸೆಂಟ್ ಜೋಸೆಫ್ಸ್ ಚಾಪೆಲ್‌ನಿಂದ ಅವರಿಗೆ ಇಂಥ ವಿಚಿತ್ರ ಸ್ಫೂರ್ತಿ ಸಿಕ್ಕಿತೇನೋ. ಅವರು ಶೆರ್ವಾನಿಯ ಅಂಗೈಗಳ ಮೇಲೆ ಮೊಳೆಗಳನ್ನು ಬಡಿದರು. ಅವರ ಹಣೆಯ ಮೇಲೆ ಒಂದು ತಗಡಿನ ತುಂಡನ್ನು ಅಂಟಿಸಿ ಅದರ ಮೇಲೆ “ದ್ರೋಹಿಯಾದವನಿಗೆ ಮರಣವೇ ಶಿಕ್ಷೆ’’ ಎಂದು ಬರೆದರು. ಆಗ ಶೆರ್ವಾನಿಯವರು “ಹಿಂದೂ ಮುಸ್ಲಿಮರ ಏಕತೆಗೆ ಜಯವಾಗಲಿ’’ ಎಂದು ಜೋರಾಗಿ ಕೂಗಿದರು. ೧೪ ಜನ ಆಕ್ರಮಣಕಾರರು ಅವರ ದೇಹದ ಮೇಲೆ ಗುಂಡಿನ ಮಳೆ ಕರೆದರು. ಮಾರನೇ ದಿನ ಬಾರಾಮುಲ್ಲಾವನ್ನು ಜನ ಪುನಃ ವಶಪಡಿಸಿಕೊಂಡರು. ಶೆರ್ವಾನಿಯವರ ದೇಹವನ್ನು ಗೌರವದಿಂದ ಕೆಳಗಿಳಿಸಿದರು. ಮಸೀದಿಯ ಕಾಂಪೊಂಡಿನಲ್ಲಿ ಅವರ ಶವವನ್ನು ಹೂಳಿದರು. ನಾನು ಬಾರಾಮುಲ್ಲಾಗೆ ಹೋದಾಗ ನನ್ನನ್ನು ಆ ಮಸೀದಿಗೆ ಕರೆದುಕೊಂಡು ಹೋದರು. ಶೆರ್ವಾನಿಯವರ ತಂದೆ ಮತ್ತು ತಮ್ಮಂದಿರು ಮಿರ್ ಮಕ್ಬೂಲ್ ಶೆರ್ವಾನಿಯವರ ಫೋಟೋವನ್ನು ನನಗೆ ತೋರಿಸಿದರು. ಕಾಶ್ಮೀರದ ಜನ ತಮ್ಮ ನೆಚ್ಚಿನ ನಾಯಕನನ್ನು ಮೀರ್ ಮುಜಾಹಿದ್ ಶೆರ್ವಾನಿ ಎಂದು ಕರೆಯತೊಡಗಿದ್ದರು. ಮುಜಾಹಿದ್ ಎಂಬ ಪದಕ್ಕೆ ಹುತಾತ್ಮ ಎಂಬುದಕ್ಕಿಂತ ಸೆಚ್ಚಿಜನ ಅರ್ಥವಿದೆ. ನ್ಯಾಯಪರತೆಗಾಗಿ ಹೋರಾಡಿದವನು ಎಂಬ ಅರ್ಥವನ್ನು ಅದು ದ್ವನಿಸುತ್ತದೆ.

ನಾನು ಅನಂತರ ಕಾನ್ವೆಂಟಿಗೆ ಹೋದೆ. ಅದು ನಿರ್ಜನವಾಗಿತ್ತು. ಆಕ್ರಮಣಕಾರರ ಧಾಳಿಗೆ ಸಿಕ್ಕಿ ಸಾಕಷ್ಟು ವಿರೂಪಗೊಂಡಿತ್ತು. ಎಲ್ಲೆಲ್ಲಿಯೂ ಕಲ್ಲು ಇಟ್ಟಿಗೆಯ ಚೂರುಗಳು. ಮಾರನೇ ದಿನ ಶ್ರೀನಗರದಿಂದ ವಿದ್ಯಾರ್ಥಿಗಳ ಒಂದುಗಂಪು ಅಲ್ಲಿಗೆ ಅದನ್ನು ಸ್ವಚ್ಛಗೊಳಿಸುವುದಕ್ಕಾಗಿಯೇ ಬರುವ ಯೋಜನೆ ಇತ್ತು. ಆ ಗುಂಪಿನಲ್ಲಿ ಹಿಂದೂ ಮುಸ್ಲಿಂ ಸಿಖ್ ವಿದ್ಯಾರ್ಥಿಗಳು ಇರುವಂತೆ ರೂಪಿಸಲಾಗಿತ್ತು ಮತ್ತು ಅವರಿಗೆ ಬೆಂಗಾವಲಾಗಿ ಬರುತ್ತಿದ್ದ ಹೋಂಗಾರ್ಡ್ಸ್ ಪಡೆಯಲ್ಲಿಯೂ ಎಲ್ಲ ಧರ್ಮಗಳಿಗೆ ಸೇರಿದ ಹಾಗೂ ಮಹಿಳೆರಯನ್ನೂ ಒಳಗೊ,ಡ ಕಾರ್ಯಕರ್ತರಿದ್ದರು. ಕ್ರಿಸ್‌ಮಸ್ ಹತ್ತಿರವಾಗುತ್ತಿದ್ದರಿಂದ ಅಷ್ಟರೊಳಗಾಗಿ ಚರ್ಚನ್ನು ಒಂದು ವ್ಯವಸ್ಥೆಗೆ ತರಬೇಕೆಂದು ಉದ್ದೇಶಿಸಲಾಗಿತ್ತು.

ಚಾಪೆಲ್‌ನ ಒಳಗೆ ನಾವು ಹೋದೆವು. ನೆಲದ ಮೇಲೆಲ್ಲಾ ಸ್ತ್ರೋತ್ರ ಪುಸ್ತಕಗಳು ಹರಿದುಬಿದ್ದಿದ್ದವು. ಪವಿತ್ರ ವಿಗ್ರಹಗಳ ಒಡೆದ ಚೂರುಗಳು ಚೆಲ್ಲಾಡಿದ್ದವು. ಅಲ್ಟರ್‌ನಲ್ಲಿಯೂ ಕೂಡ ಕಲ್ಲು ಮಣ್ಣಿನ ಚೂರುಗಳು. ನನ್ನ ಜೊತೆಗಿದ್ದ ಬೇಡಿ ಕೆಳಕ್ಕೆ ಬಾಗಿ ವಿಗ್ರಹದ ಒಂದು ಚೂರನ್ನು ಎತ್ತಿಕೊಂಡರು. ಅದು ಜೀಸಸ್‌ನ ಮುರಿದ ತಲೆಯ ಭಾಗ. ಅದರ ಒಂದು ಕಣ್ಣು ಮಾತ್ರ ಉಳಿದಿತ್ತು. “ನೋಡಿ, ಇದು ಎಷ್ಟು ಸುಂದರವಾಗಿದೆ. ಕ್ರಿಸ್ತನ ಕಣ್ಣು ಈ ಜಗತ್ತನ್ನು ಶಾಂತವಾಗಿ ನೋಡುತ್ತಿದೆ. ಎಲ್ಲ ಧರ್ಮಗಳ ಭಾರತೀಯರ ಏಕತೆಯನ್ನು ಸಾಧಿಸುವುದಕ್ಕೆ ಪ್ರಯತ್ನಿಸುತ್ತಿರುವುದರ ಸಂಕೇತವಾಗಿ ಇದನ್ನು ಕಾಶ್ಮೀರದಲ್ಲಿ ಸದಾಕಾಲ ಇರುವಂತೆ ಸಂರಕ್ಷಿಸೋಣ’’ ಎಂದು ಬೇಡಿ ಹೇಳಿದರು.

* * *