ಹಿಮಕವಿದ ಇಳಿಜಾರುಗಳ ಕಾಶ್ಮೀರದಿಂದ ನಾನು ಪುನಃ ರಾಜಧಾನಿ ದೆಹಲಿಗೆ ಹಿಂದಿರುಗಿದೆ. ಸ್ವಾತಂತ್ರ್ಯವು ಭಾರತದ ಬದುಕಿನಲ್ಲಿ ಯಾವ ರೀತಿಯ ಹೊಸತನ ತರಬಹುದು ಎಂಬುದರ ಸ್ಪಷ್ಟ ಕಲ್ಪನೆ ನನ್ನಲ್ಲಿ ಮೂಡಿತ್ತು. ವಿದೇಶೀ ಆಳ್ವಿಕೆಯಿಂದ ದೊರೆಯುವ ವಿಮೋಚನೆಗಿಂತ ಹೆಚ್ಚಿನ ಪರಿಣಾಮವನ್ನು ನಾನು ಹಿಮಾಲಯ ಪ್ರದೇಶದಲ್ಲಿ ಕಂಡಿದ್ದೆ. ಫ್ಯೂಡಲಿಸಂನ ಕಪಿಮುಷ್ಠಯಿಂದ ಬಿಡುಗಡೆ ಹೊಂದಿದ ಜನರ ಬದುಕು ಹೇಗೆ ಅರಳುತ್ತದೆ ಎಂಬುದು ಅಲ್ಲಿ ಗೋಚರಿಸಿತ್ತು.

ಭಾರತದ ಜನ ತೀರಾ ಹಿಂದುಳಿದವರು, ಧಾರ್ಮಿಕ ಮೂಢನಂಬಿಕೆಗಳ ಸಂಕೋಲೆಗಳಲ್ಲಿ ಬಂಧಿಯಾದವರು. ತಮ್ಮನ್ನು ತಾವೇ ಆಳಿಕೊಳ್ಳುವಂಥ ಪ್ರಜಾತಂತ್ರ ವ್ಯವಸ್ಥೆಗೆ ಇವರು ಅರ್ಹರಲ್ಲ ಎಂಬ ನಂಬಿಕೆಯನ್ನು ಪ್ರಜಾಸರ್ಕಾರದ ಸ್ಥಾಪನೆ ಬುಡಮೇಲು ಮಾಡಿತ್ತು. ಅಕ್ಷರಕಲಿಕೆ ತರಗತಿಗಳಿಗೆ ಬರಿಗಾಲಿನಲ್ಲಿ ಹಿಮದ ಮೇಲೆ ನಡೆದು ಹೋಗುತ್ತಿದ್ದ ಚಿ,ದಿ ಉಡುಗೆಯ ಪುರುಷರು, ಗ್ರಾಮ ಹಾಗೂ ಜಿಲ್ಲಾ ಸಮಿತಿಗಳಿಗಾಗಿ ಸ್ವತಃ ರೈತರೇ ನಡೆಸಿದ ಚುನಾವಣೆಗಳು, ಎಲ್ಲರೂ ಸಮಾನರು ಎಂಬ ದಿಸೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು… ಇವೆಲ್ಲವೂ ಭಾರತ ಸಂಪೂರ್ಣವಾಗಿ ಸ್ವತಂತ್ರಗೊಂಡ ನಂತರ ಅಲ್ಲಿ ಮೂಡಬಹುದಾದ ಉತ್ತಮ ಬದುಕಿಗೆ ಸೂಚಕವಾಗಿದ್ದವು.

ಆದರೂ ಕಾಶ್ಮೀರವು ಇನ್ನೂ ಅನೇಕ ಹಿನ್ನಡೆಗಳನ್ನು ಕಾಣಬೇಕಾಯಿತು. ಪಾಕಿಸ್ತಾನ ಮತ್ತು ಇಂಡಿಯಾದ ವಿಭಜನೆಯೆಂದರೆ ಅಂತಿಮವಾಗಿ ಕಾಶ್ಮೀರದ ವಿಭಜನೆಯೂ ಹೌದು. ನಾನು ಈಗಷ್ಟೇ ಭೇಟಿಯಾಗಿ ಬಂದ ಭಾಗ ಭಾರತದಲ್ಲಿ ಉಳಿದರೆ ಇತರ ಭಾಗಗಳು ಪಾಕಿಸ್ತಾನಕ್ಕೆ ಸೇರಿಹೋಗುತ್ತಿದ್ದವು.

ಇದೇನೇ ಇರಲಿ ಜನತೆಯ ಸರ್ಕಾರವು ಪ್ರಜಾಪ್ರಭುತ್ವದತ್ತ ದಾಪುಗಾಲು ಇಟ್ಟಿತ್ತು. ಭಾರತದ ಅತ್ಯಂತ ದುರ್ದಮ ಸಮಸ್ಯೆಯಾಗಿದ್ದ ಭೂಸ್ವಾಮ್ಯದ ದಮನಕಾರಿ ವ್ಯವಸ್ಥೆಯನ್ನು ತಕ್ಷಣವೇ ಪರಿಹರಿಸತೊಡಗಿದ್ದು ಬಹುಮುಖ್ಯ ಸಾಧನೆ ಎನ್ನಬಹುದು. ರೈತನಿಗೆ ತಾನು ಉಳುವ ಭೂಮಿಯನ್ನು ತಾನೇ ಹೊಂದುವ ಅವಕಾಶವನ್ನು ಕಲ್ಪಿಸುವ ಹಾಗೂ ಗೈರು ಹಾಜರಿ (Absentee Ownership) ಮಾಲೀಕತ್ವವನ್ನು ನಿರ್ಮೂಲನ ಮಾಡುವ ಚಳುವಲಿಯನ್ನು ಅವರು ಅವರು ಆರಂಭಿಸಿದ್ದರು…. ಭಾರತದ ಬಹುತೇಕ ಭಾಗಗಳಲ್ಲಿ ಈ ಆಶ್ವಾಸನೆ ಇತ್ತಾದರೂ ಅದನ್ನು ಮುಂದೂಡುತ್ತಾ ಬಂದ ನಿದರ್ಶನಗಳೇ ಹೆಚ್ಚಾಗಿದ್ದವು.

ಭೂಸುಧಾರಣೆಯನ್ನು ಕುರಿತಂತೆ ಹೀಗೆ ಎಲ್ಲಡೆಯೂ ಕಂಡು ಬರುತ್ತಿದ್ದ ಹಿಂಜರಿಕೆ ಯಾಕೆಂಬುದೇ ಅರ್ಥವಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷವು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಒತ್ತಾಯ ಮಾಡುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಪಕ್ಷವು ಭೂಮಾಲೀಕರ ಹಾಗೂ ರಾಜರ ಬಗೆಗಿನ ವಿರೋಧವನ್ನು ನೇರವಾಗೇ ವ್ಯಕ್ತಪಡಿಸಿತ್ತು. ಜಮೀನ್ದಾರಿ ವ್ಯವಸ್ಥೆಯ ನಿರ್ಮೂಲನವು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಬಹು ಮುಖ್ಯ ಅಂಶವಾಗಿತ್ತು. ೧೯೪೬ರಲ್ಲಿ ನಾನು ಭಾರತಕ್ಕೆ ಭೇಟಿ ನೀಡಿದ ಮೊದಲವಾರದಲ್ಲಿಯೇ ಒಂದು ಪತ್ರಿಕಾ ಗೋಷ್ಠಿಯಲ್ಲಿ ಭಾಗವಸಿಸಿದ್ದೆ. ಅಲ್ಲಿ ಪಂಡಿತ್ ನೆಹರೂ “ಸ್ವತಂತ್ರ ಭಾರತದಲ್ಲಿ ಜಮೀನ್ದಾರಿ ವ್ಯವಸ್ಥೆಗೆ ಅವಕಾಶವೇ ಇರುವುದಿಲ್ಲ’’ ಎಂದು ಘೋಷಣೆ ಮಾಡಿದ್ದರು. ರಾಜರುಗಳನ್ನು ಕುರಿತಂತೆ ತಮ್ಮ ನಿಲುವೇನು ಎಂಬುದನ್ನು ನೆಹರೂ ಅಖಿಲ ಭಾರತ ಪ್ರಜಾಪಕ್ಷದ ಅಧ್ಯಕ್ಷರಾಗಿದ್ದಾಗಲೇ ವ್ಯಕ್ತಪಡಿಸಿದ್ದರು. ಆ ದಿನಗಳಲ್ಲಿ ನಿರಂಕುಶಾಧಿಕಾರಿಗಳು ಎಂದು ಕರೆಯಲಾಗುತ್ತಿದ್ದ ರಾಜರನ್ನು ತೆಗೆದು ಸಾಕಿ ಅವರ ಸ್ಥಾನದಲ್ಲಿ ಜನತಂತ್ರದ ಪ್ರಜಾಸರ್ಕಾರಗಳನ್ನು ತರಬೇಕೆಂಬುದೇ ಆ ತಕ್ಷಯದ ಉದ್ದೇಶವಾಗಿತ್ತು.

ಆದರೆ ಈಗ ರಾಜರನ್ನು ವ್ಯಾಖ್ಯಾನಿಸಲು ಹೊಸ ಪದಸಮುಚ್ಛಯಗಳು ಬಳಕೆಯಾಗತೊಡಗಿದ್ದವು. ಅವರ “ಸ್ವಾರ್ಥತ್ಯಾಗ’’ “ಅಪ್ರತಿಮ ದೇಶಭಕ್ತಿ’’ಗಳನ್ನು ಪತ್ರಿಕೆಗಳು ಕೊಂಡಾಡುತ್ತಿದ್ದವು. “ಹೊಸಯುಗದ ಉದಯ’’, “ಆಳ್ವಿಕೆದಾರರ ತ್ಯಾಗ’’ ಮೊದಲಾದ ಶೀರ್ಷಿಕೆಗಳ ಮೂಲಕ “ಜನತೆಗೆ ಇಚ್ಛಾ ಪ್ರೇರಿತ ಅಧಿಕಾರ ಹಸ್ತಾಂತರ’’ ಮಾಡಿದುದಕ್ಕಾಗಿ ಅವರಿಗೆ ಗೌರವ ವ್ಯಕ್ತಪಡಿಸಲಾಗುತ್ತಿತ್ತು.

ಹೀಗೆ ‘ಸ್ವಪ್ರೇರಿತ ಅಧಿಕಾರ ಹಸ್ತಾಂತರ’ದ ನಂತರ ಪ್ರಾಂತಗಳ ರಾಜರ ಅಥವಾ ವಿಲೀನಗೊಂಡ ರಾಜ್ಯಗಳ ಸಮೂಹದ ಆಡಳಿತ ನಿರ್ವಹಣೆಯ ರಾಜಪ್ರಮುಖರು ಕೆಲವು ಅತಿಮುಖ್ಯವಾದ ವಿಷಯಗಳಲ್ಲಿ ಹೊಂದಿದ್ದ ಹಿಡಿದ ಅಚ್ಚರಿಗೊಳಿಸುವಂಥದ್ದು. ವೃತ್ತ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಓದಿದಾಗ ಮಾತ್ರ ಇದು ತಿಳಿಯುತ್ತಿತ್ತು. ಉದಾಹರಣೆಗೆ ರಾಜರು ಈ ಹಿಂದೆ ಮಾಡಿದ ಅಥವಾ ಮಾಡದೆ ಹೋದ ಯಾವುದೇ ವಿಷಯದ ಬಗ್ಗೆ ಅವರ ಮೇಲೆ ಕಾನೂನು ಕ್ರಮವನ್ನಾಗಲೀ ವಿಚಾರಣೆಯನ್ನಾಗಲೀ ನಡೆಸಬಾರದು ಎಂಬ ಪರಂಪರಾಗತ ಹಕ್ಕು ಹಾಗೇ ಉಳಿದಿತ್ತು. ವಿವಿಧ ರಾಜ ಸಂಸ್ಥಾನಗಳ ವಿಲಿನೀಕರಣದಿಂದ ಒಟ್ಟುಗೂಡಿದ ಸಶಸ್ತ್ರ ಪಡೆಗಳು ರಾಜಪ್ರಮುಖರ ನಿಯಂತ್ರಣದಲ್ಲಿಯೇ ಉಳಿದಿದ್ದವು. ಪ್ರಜಾ ಸರ್ಕಾರಕ್ಕಾಗಿ ದಿನೇದಿನೇ ಬಲವಾಗುತ್ತಾ ನಡೆದಿದ್ದ ಚಳುವಳಿಗಳಿಂದ ತತ್ತರಿಸುತ್ತಿದ್ದ ಚಿಕ್ಕಪುಟ್ಟ ಸಂಸ್ಥಾನಗಳ ರಾಜರು ಸಣ್ಣ ರಾಜ್ಯಗಳ ವಿಲಿನೀಕರಣದಲ್ಲಿ ಸೇರಿಕೊಳ್ಳುವ ‘ಸ್ವಪ್ರೇರಿತ ತ್ಯಾಗ’ದ ಅಡಿಯಲ್ಲಿ ಬಚಾವಾಗಿದ್ದರು.

ಹೀಗೆ ರಾಜರಿಗೆ ದೊರೆತ ಈ ಹೊಸ ಸೌಲಭ್ಯಗಳಿಗೂ ಮತ್ತು ರಾಜ್ಯಗಳ ಸಚಿವರಾಗಿದ್ದ ಸರ್ದಾರ್ ಪಟೇಲರೇ ಸಾರ್ವಜನಿಕ ವಾರ್ತಾ ಸಚಿವರೂ ಆಗಿರುವುದಕ್ಕೂ ಏನಾದರೂ ಸಂಬಂಧವಿರಬಹುದೇ ಎಂಬುದನ್ನು ಪತ್ರಿಕೆಗಳು ಹೆಚ್ಚಿನ ಚರ್ಚೆಗೆ ಒಳಪಡಿಸಿರಲಿಲ್ಲ. ಆದರೆ ಪಟೇಲರು ಗೃಹಾಡಳಿತ ಸಚಿವರೂ ಮತ್ತು ಉಪ ಪ್ರಧಾನಮಂತ್ರಿಯೂ ಆಗಿರುವ ಬಗ್ಗೆ ಮಾತ್ರ ಸೆಚ್ಚಿನ ಚರ್ಚೆ ನಡೆದಿತ್ತು. ಪ್ರಧಾನಮಂತ್ರಿ ನೆಹರೂ ಅವರಿಗಿಂತ ಉಪಪ್ರಧಾನಿಯ ಕೈಯೇ ಬಲವಾಗುತ್ತಿದೆ ಮತ್ತು ಅನೇಕ ಸುಧಾರಣೆಗಳು ಜಾರಿಯಾಗದಿರುವುದಕ್ಕೆ ಪಟೇಲರ ಸ್ವಭಾವವೇ ಕಾರಣ ಎಂದು ಬಹಳ ಮಂದಿ ಆಡಿಕೊಳ್ಳುತ್ತಿದ್ದರು.

ಸ್ವಾತಂತ್ರ್ಯಕ್ಕಾಗಿ ನಡೆದ ಸುಮಾರು ೩೦ ವರ್ಷಗಳ ಸುದೀರ್ಘ ಹೋರಾಟದುದ್ದಕ್ಕೂ ಇವರಿಬ್ಬರೂ ಜೊತೆ  ಜೊತೆಯಾಗಿಯೇ ದುಡಿದಿದ್ದರು. ನೆಹರೂ ಉದಾರವಾದಿ ಹಾಗೂ ಬಹುತೇಕವಾಗಿ ಸಮಾಜವಾದೀ ಆದರ್ಶಗಳನ್ನು ಪ್ರತಿಪಾದಿಸುತ್ತಿದ್ದರೆ ಪಟೇಲರು ದೊಡ್ಡ ವ್ಯಾಪಾರದಾರರ ಹಾಗೂ ಭಾರೀ ಮಹಾರಾಜರ ಸ್ನೇಹಿತರಾಗಿದ್ದರು. ಗಾಂಧಿಯವರ ಬಗೆಗಿನ ನಿಷ್ಠೆ ಇವರಿಬ್ಬರನ್ನು ಒತ್ತಟ್ಟಿಗೆ ತಂದಿತ್ತು. ಕ್ವಿಟ್ ಇಂಡಿಯಾ ಚಲುವಳಿಯ ಸಂದರ್ಭದಲ್ಲಿ ಇವರು ಅನೇಕಸಲ ಜೊತೆ ಜೊತೆಯಾಗಿಯೇ ಸೆರೆಮನೆ ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಬಂದನಂತರ ಅಂತರಾಷ್ಟ್ರೀಯ ವಲಯದಲ್ಲಿ ನೆಹರೂ ಅವರೇ ನಿಸ್ಸಂದೇಹವಾಗಿ ಈ ದೇಶದ ನೇತಾರರೆಂದು ಪರಿಗಣಿಸಲ್ಪಡುತ್ತಿದ್ದರೂ ಆಂತರಿಕ ವ್ಯವಹಾರಗಳಲ್ಲಿ ಮಾತ್ರ ಪಟೇಲರ ಯೋಜನೆಗಳೇ ಮೇಲುಗೈ ಪಡೆದಂತೆ ಕಾಣುತ್ತಿತ್ತು.

ಪಟೇಲ್ ನೆಹರೂ ಸಂಬಂಧ ಕುರಿತಂತೆ ಎರಡು ಸಿದ್ಧಾಂತಗಳು ಪ್ರಚಲಿತವಾಗಿದ್ದವು. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮೇಲೆ ಕಾಣುವಷ್ಟು ತೀವ್ರವಲ್ಲ. ಒಂದು ವೇಳೆ ಹಾಗಿದ್ದರೆ ಅವರು ಇಷ್ಟು ದೀರ್ಘಕಾಲ ಒಟ್ಟಿಗೆ  ಉಳಿಯುತ್ತಿರಲಿಲ್ಲ ಎಂಬುದು ಒಂದು ಸಿದ್ಧಾಂತವಾದರೆ, ತಮ್ಮ ನಾಯಕತ್ವದಲ್ಲಿರುವ ಕೊರತೆಗಳನ್ನು ಪರಸ್ಪರ ಒಬ್ಬರು ಇನ್ನೊಬ್ಬರ ಗುಣಗಳ ಮೂಲಕ ಪೂರೈಸಿಕೊಳ್ಳುವಂತಹ ಜೊತೆಗಾರಿಕೆಯಿಂದಾಗಿ ಇಬ್ಬರೂ ಒಟ್ಟಿಗೇ ಬೆಳೆದಿದ್ದಾರೆ ಎಂಬುದು ಇನ್ನೊಂದು ಸಿದ್ಧಾಂತ.

ಪಟೇಲರೊಂದಿಗೆ ಮಾತಾಡಲು ತವಕಿಸುತ್ತದ್ದ ನಾನು ಒಂದು ಭೇಟಿಯನ್ನು ಗೊತ್ತುಪಡಿಸಿಕೊಂಡೆ. ಬೆಳಿಗ್ಗೆ ೫ ಗಂಟೆಗೆ ಅವರ ಮನೆಗೆ ಬರುವಂತೆ ನನಗೆ ತಿಳಿಸಲಾಯಿತು. ಭಾರತದ ನಾಯಕರೊಂದಿಗೆ ಹೇಗೆ ಭೇಟಿಯನ್ನು ಗೊತ್ತು ಮಾಡಿಕೊಳ್ಳಬೇಕೆಂಬುದು ಗಾಂಧಿಯವರ ಆಶ್ರಮಕ್ಕೆ ಭೇಟಿ ಗೊತ್ತು ಪಡಿಸಿಕೊಂಡಿದ್ದ ನನಗೆ ಅಭ್ಯಾಸವಾಗಿತ್ತು. ಹೀಗಾಗಿ ಈ ಭೇಟಿಯ ಸಮಯದ ಬಗ್ಗೆ ಅಚ್ಚರಿ ಎನಿಸಲಿಲ್ಲ. ನಾನು ಸರ್ದಾರರ ಮನೆಯ ಒಳಹೋದಾಗ ಮನೆಯ ಒಂದು ಚಿಕ್ಕ ಕೋಣೆಯಿಂದ ಹೊರ ಸೂಸುತ್ತಿದ್ದ ಬೆಳಕನ್ನು ಬಿಟ್ಟು ಉಳಿದೆಲ್ಲವೂ ಕತ್ತಲಲ್ಲಿ ಮುಳುಗಿತ್ತು. ದುಂಡಗಿನ ಕಂಬಗಳ ಕೈಸಾಲೆಯ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಜನ ತುಂಬಿದ್ದನ್ನು ಕಂಡೆ. ದಟ್ಟವಾದ ಬೆಳದಿಂಗಳು ಹರಡಿದ್ದ ಹುಲ್ಲು ಹಾಸನ್ನು ನೋಡುತ್ತ ಅವರು ಸದ್ದಿಲ್ಲದೆ ಕುಳಿತಿದ್ದರು.

ಇದ್ದಕ್ಕಿದ್ದಂತೆ, ತಲೆಯ ಮೇಲೆ ಕುಂಚಿಗೆ ಹಾಕಿದ್ದ ಬರಿಗಾಲಿನ ಆಕೃತಿಯೊಂದು ಮನೆಯಿಂದ ಹೊರಗೆ ಸರಸರನೆ ನಡೆದುಹೋಯಿತು. ಅದರ ಹಿಂದೆಯೇ ಇನ್ನೊಂದು ಚಿಕ್ಕ ಆಕೃತಿ ಕಾಣಿಸಿಕೊಂಡು ಮೊದಲಿನವರ ಹಿಂದೆ ನಡೆಯಿತು. ಆನಂತರ ಇಬ್ಬರೂ ಗೇಟಿನಿಂದ ಹೊರಗೆ ಹೋದರು. ಪಟೇಲರು ಹಾಗೂ ಸದಾ ಅವರೊಂದಿಗೇ ಇರುತ್ತಿದ್ದ ಮಗಳು ಮಣಿಬೆನ್ ಬೆಳಗಿನ ಕಾಲ್ನಡಿಗೆ ಆರಂಭಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಕೈಸಾಲೆಯಲ್ಲಿದ್ದ ಜನರೆಲ್ಲ ಬುಡಕ್ಕನೆ ಎದ್ದು ಅವರನ್ನು ಹಿಂಬಾಲಿಸಿದರು. ನಾನೂ ಅವರನ್ನೇ ಹಿಂಬಾಲಿಸಿದ್ದರಿಂದ, ಸಂದರ್ಶನಕ್ಕೆ ಬಂದವರು ಒಬ್ಬರಾದ ನಂತರ ಒಬ್ಬರಂತೆ ಕ್ಷಣಕಾಲ ಪಟೇಲರೊಂದಿಗೆ ಮಾತಾಡಿ ಅನಂತರ ಮಣಿಬೆನ್ ಪಕ್ಕಕ್ಕೆ ಸೇರಿಕೊಳ್ಳುತ್ತಿದ್ದ ದೃಶ್ಯವನ್ನು ನೋಡುವ ಅವಕಾಶ ಸಿಕ್ಕಿತು.

ಈ ಮೆರವಣಿಗೆ ಲೋದಿಪಾರ್ಕ್ ಕಡೆಗೆ ತಿರುಗುತ್ತಿದ್ದಂತೆ ಮಣಿಬೆನ್ ನನ್ನನ್ನು ಮುಂದೆ ಕರೆದು ಜೊತೆಗೆ ನಡೆಯತೊಡಗಿದರು. ಆಕೆ ನಿಗೂಢ ಹೆಂಗಸು. ಹೆಚ್ಚು ಮಾತಾಡದ ಗಂಭೀರ, ಸರಳ ವ್ಯಕ್ತಿತ್ವದ ಮಣಿಬೆನ್ ಸಾಮಾನ್ಯವಾಗಿ ಸದಾ ತಂದೆಯ ಜೊತೆಯೇ ಕಾಣಿಸಿಕೊಳ್ಳುತ್ತಿದ್ದರೂ ಏನೂ ಮಾತಾಡುತ್ತಿರಲಿಲ್ಲ. ನನಗೆ ಆಕೆಯೊಂದಿಗೆ ಮಾತಾಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಯಿತು. ಹೀಗೆ ಇತರ ಜನರನ್ನು ದೂರಸರಿಸುವ ಇಂತಹ ಏನೇನೋ ಕೆಲಸಗಳನ್ನು ತನ್ನ ತಂದೆಗಾಗಿ ಮಾಡಬೇಕಾಗುತ್ತದೆ ಎಂದು ಆಕೆ ಹೇಳತೊಡಗಿದರು. ಬೆಳಗಿನ ಜಾವದ ಈ ಕಾಲ್ನಡಿಗೆಯ ಸಯಮದಲ್ಲಿ ಇಪ್ಪತ್ತರಿಂದ ನಾನ್ನೂರು ಜನರವರೆಗೆ ಬರಬಹುದು. ಅವರನ್ನು ಒಮ್ಬರಾದನಂತರ ಒಬ್ಬರಂತೆ ಮಾತಿಗೆ ಬಿಡಬೇಕು. ಪಟೇಲರನ್ನು ಭೇಟಿ ಮಾಡಿದರೆ ಜನರಿಗೆ ಏನೋ ಸಮಾಧಾನ ಎಂದು ತಿಳಿಸಿದರು.

ದಟ್ಟವಾದ ಮರಗಳ ಗುಂಪಿನ ಕಪ್ಪು ನೆರಳಿನ ಮೂಲಕ ನಾವು ತಿರುವು ತಿರುವಾದ ಹಾದಿಯಲ್ಲಿ ನಡೆಯುತ್ತಿದ್ದಂತೆ ಆಕೆ ತನ್ನ ತಂದೆಯ ಬಗ್ಗೆ ಹೇಳತೊಡಗಿದರು. ‘೧೯೩೧ರ ನಂತರದಿಂದ ನಾನು ಅವರನ್ನು ಒಂದು ದಿನವೂ ಬಿಟ್ಟುಹೋಗಿಲ್ಲ. ದಿನದ ೨೪ ಗಂಟೆಯೂ ಅವರ ಜೊತೆಯೇ ಇರುತ್ತೇನೆ’ ಎಂದರು. ಆಕೆ, ತನ್ನ ತಂದೆ ಏಳುವುದಕ್ಕಿಂತ ಸ್ವಲ್ಪ ಮುಂಚೆಯೇ ಏಳುತ್ತಿದ್ದರು. ಬೆಳಗಿನ ನಡಿಗೆ ಆರಂಭಿಸುವುಕ್ಕೆ ಮೊದಲು ಸ್ವಲ್ಪ ಹೊತ್ತಿನ ತನಕ ನೂಲುತ್ತಿದ್ದರು. “ತಂದೆಯವರು ಉಡುವ ಧೋತಿ ನನ್ನ ಸೀರೆ ಎಲ್ಲವನ್ನೂ ನಾನೇ ನೇಯುತೆನೆ. ಅವರು ಅಂಗಡಿಯಿಂದ ಬಟ್ಟೆಕೊಂಡು ಎಷೊ ವರ್ಷಗಳಾದವು. ಅವರ ಎಲ್ಲ ವಸ್ತ್ರಗಳೂ ನನ್ನ ಸ್ವಂತ ಕೈಗಳಿಂದ ನೇಯ್ದಂಥವು ಎಂದು ವಾತ್ಸಲ್ಯಪೂರ್ಣ ಹೆಮ್ಮೆಯಿಂದ ಹೇಳಿದರು.

ಆಕೆ ಇನ್ನೂ ಸಂಕೋಚದ ಚಿಕ್ಕ ಹುಡುಗಿಯಾಗಿದ್ದಾಗ ಗಾಂಧೀಜಿಯವರನ್ನು ಭೇಟಿ ಮಾಡಿದ ದಿನದಿಂದಲೇ ರಾಟಿ ಹಿಡಿದು ನೂಲುವ ನೇಯುವ ಕೆಲಸ ಆರಂಭವಾಗಿತ್ತು. ಗಾಂಧೀಜಿಯವರು ಸರ್ದಾರರನ್ನು ಭೇಟಿ ಮಾಡಲು ಮನೆಗೆ ಬಂದ ದಿವಸ ಈಕೆಯ ಚಿಕ್ಕಮ್ಮ  ಗಾಂಧೀಜಿಯವರು ಕುಳಿತಿದ್ದ ಕೋಣೆಗೆ ಮಣಿಬೆನ್‌ಳನ್ನು ಎಳೆದುಕೊಂಡು ಬಂದು ಗಾಂದಿ ಮುಂದೆ ನಿಲ್ಲಿಸಿದ್ದಳು. ಇನ್ನು ಮೇಲೆ ವಿದೇಶಿ ವಸ್ತ್ರಗಳನ್ನು ತೊಡಬಾರದು. ಕೈಯಿಂದ ನೇಯ್ದ ಖಾದಿಯನ್ನೇ ತೊಡಬೇಕು ಎಂದು ಗಾಂಧಿ ತನ್ನಿಂದ ಭಾಷೆ ತೆಗೆದುಕೊಂಡ ಸಂದರ್ಭವನ್ನು ಮಣಿಬೆನ್ ನೆನೆಪಿಸಿಕೊಂಡರು. ‘ನೀವು ಹಾಗೇ ಮಾತು ಕೊಟ್ಟಿರಾ?’ ಎಂದು ಕೇಳಿದೆ. “ನನ್ನ ತಂದೆ ಏನೇ ಹೇಳಿದರೂ ಅದನ್ನು ಮಾಡುತ್ತೇನೆ’’ ಎಂದು ನಾನು ಹೇಳಿದೆ ಎಂದರು.

ಇತರ ಅನೇಕ ಚಿಕ್ಕ ಹುಡುಗಿಯರ ಮೇಲೆ ಪ್ರಭಾವ ಬೀರಿದಂತೆ ಗಾಂಧಿಯವರು ಮಣಿಬೆನ್ ಮೇಲೂ ಆಳವಾದ ಪ್ರಭಾವ ಬೀರಿದ್ದರು. ಗಾಂಧೀ ತಿಳಿಸಿದ ಸೇವಾ ಜೀವನದತ್ತ ತಾನು ಸೆಳೆಯಲ್ಪಟ್ಟುದಕ್ಕೂ, ತಾನು ಮದುವೆಯಾಗದೆ ಉಳಿದುದಕ್ಕೂ ಸಂಬಂಧವಿದೆ ಎಂದು ಹೇಳಿದ ಮರು ಕ್ಷಣದಲ್ಲಿಯೇ ಇದರಿಂದ ನನಗೆ ಎಂದೂ ದುಃಖವಾಗಿಲ್ಲ. ನಾನಿರುವ ಸ್ಥಿತಿ ತುಂಬ ತೃಪ್ತಿ ನೀಡಿದೆ ಎಂದೂ ಹೇಳಿದರು.

ನಾವು ನಡೆಯುತ್ತಿದ್ದ ಹಾದಿಯಿಂದ, ಬೆಳದಿಂಗಳು ಹರಡಿದ್ದ ಪ್ರದೇಶಕ್ಕೆ ಬಂದಿದ್ದೆವು. ತಲೆಯ ಮೇಲೆ ಸೆರಗು ಹೊದ್ದಿದ್ದ ಆಕೆಯ ಮುಖ ಸದಾ ಏನೋ ಯೋಚನಾ ಮಗ್ನವಾದಂತೆ ಇತ್ತು. ಹುಬ್ಬುಗಳು ಹೆಣೆದುಕೊಂಡಿದ್ದವು. “ನನ್ನ ತಂದೆ ನನಗೆ ವಿಪರೀತ ಸ್ವಾತಂತ್ರ್ಯ ನೀಡಿದರು ಎಂದು ನನಗನ್ನಿಸುತ್ತದೆ ಎಂದು ಮೆಲ್ಲಗಿನ ದನಿಯಲ್ಲಿ ನುಡಿದರು.

“ನಾನು ಯಾವ ಉಡುಪು ಹಾಕಬೇಕು, ಏನು ಓದಬೇಕು ಅಥವಾ ಎಂಥವರ ಸ್ನೇಹ ಮಾಡಬೇಕು ಯಾವುದನ್ನೂ ಅವರು ಹೇಳಲಿಲ್ಲ. ಅಸಹಕಾರ ಚಳುವಳಿ ಕುರಿತಂತೆಯೂ ನನಗೆ ಎಂದೂ ಹೇಳಲಿಲ್ಲ. ನಾನೇ ಅದನ್ನು ಅನುಸರಿಸಿದೆ. ಸೆರೆಮನೆಗೆ ಹೋಗು ಎಂದಾಗಲೀ, ತಮ್ಮ ಜೊತೆ ಇರು ಎಂದಾಗಲೀ ಹೇಳಿರಲಿಲ್ಲ’’ ಇದು ಭಾರತೀಯ ಹುಡುಗಿಯು ಮಾತ್ರವೇ ಹೇಳಬಹುದಾದ ಮಾತಾಗಿತ್ತು.

ಸ್ವಲ್ಪ ಹೊತ್ತಾದ ನಂತರ ಮಣಿಬೆನ್, ಎಷ್ಟೋಕಾಲದಿಂದ ತನ್ನ ಮನಸ್ಸಿನಲ್ಲಿದ್ದ ಯೋಚನೆಗಳನ್ನು ಹೇಳಿಕೊಳ್ಳುತ್ತಿರುವ ದನಿಯಲ್ಲಿ ಭಾರತದ ಮಹಾರಾಜರ ಬಗ್ಗೆ ಹೇಳತೊಡಗಿದರು. ಆಕೆಯ ಸರಳ, ಋಜುವಾದ ನುಡಿಗಳು ಆಕೆಯ ತಂದೆಯ ಪತ್ರಿಕಾ ಹೇಳಿಕೆಗಳ ವಿಕಟಚಿತ್ರಗಳಂತೆ ಇದ್ದವು. “ಈಗ ರಾಜರಿಗೆ ಸ್ವಾತಂತ್ರ್ಯ ದೊರೆತಿದೆ. ಮೊದಲು ಅರಮನೆಯಲ್ಲಿ ಅವರ ಬದುಕು ಒಂದು ರೀತಿಯಲ್ಲಿ ಬಂಧನದ ಹಾಗೇ ಇತ್ತು. ಹೆಚ್ಚೆಂದರೆ ಅವರು ಕೇಸುಗಳಿಗೆ ಅಥವಾ ಸಿನಿಮಾಗಳಿಗೆ ಮಾತ್ರ ಹೋಗಬಹುದಿತ್ತು. ಅವರು ನಮ್ಮನ್ನು ಕಾಣಲು ತುಂಬಾ ಗುಟ್ಟಾಗಿ ಬರಬೇಕಿತ್ತು. ಗುಪ್ತ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿರಬಹುದು ಎಂಬ ಭಯದಿಂದ ಸದಾ ಬೆನ್ನಹಿಂದೆಯೇ ಒಂದು ಕಣ್ಣಿಟ್ಟಿರುತ್ತಿದ್ದರು’’. ಮಹಾರಾಜರ ಆಡಳಿತಕ್ಕೆ ಬದಲಾಗಿ ಪ್ರಜೆಗಳ ಆಡಳಿತ ಬರಬೇಕು ಎಂದು ನೆಹರೂ ಅವರು ಎಡಬಿಡದೆ ಒತ್ತಾಯಿಸುತ್ತಿದ್ದ ಕ್ವಿಟ್ ಇಂಡಿಯಾ ಚಳುವಳಿಯ ದಿನಗಳಿಂದಲೂ ಸರ್ದಾರರು ಮತ್ತು ಮಹಾಜನರುಗಳ ನಡುವೆ ಈ ಸೌಹಾರ್ದತೆ ಇದ್ದುದು ಕುತೂಹಲಕರ ಸಂಗತಿಯಾಗಿದೆ.

ಇಷ್ಟು ಹೊತ್ತಿಗೆ ನಾವು ಇಡೀ ಪಾರ್ಕನ್ನು ಒಂದು ಸುತ್ತ ಹಾಕಿ ರಸ್ತೆಗೆ ಬಂದಿದ್ದೆವು. ನಮ್ಮ ನಡಿಗೆ ಆರಂಭವಾದಾಗ ನಿರ್ಜನವಾಗಿದ್ದ ರಸ್ತೆ ಬದಿಯ ತುಂಬಾ ಈಗ ಕಾರುಗಳು ನಿಂತಿದ್ದವು. ಸರ್ದಾರರನ್ನು ಕಂಡೊಡನೆ ಅವರೊಂದಿಗೆ ಮಾತಾಡಲು ಜನರು ಕಾರಿಂದ ಜಿಗಿದು ಧಾವಿಸಿ ಬಂದರು. ಒಬ್ಬೊಬ್ಬರನ್ನೇ ಸರ್ದಾರ್ ಬಳಿಗೆ ಕಳಿಸುವ ಮಣಿಬೆನ್ ಕೆಲಸ ಮತ್ತೆ ಆರಂಭವಾಯಿತು. ನನಗೆ ಯಾವಾಗ ಈ ಅವಕಾಶ ಸಿಗುತ್ತೋ ಎಂದು ಅಂದುಕೊಳ್ಳುತ್ತಿರುವಷ್ಟಲ್ಲಿ ತಂದೆ-ಮಗಳಿಬ್ಬರೂ ನನ್ನ ಹತ್ತಿರ ಬಂದು ಬೆಳಗಿನ ಉಪಹಾರಕ್ಕೆ ಅವರ ಮನೆಗೆ ಕರೆದೊಯ್ದರು.

ನಾನು ಸಾಕಷ್ಟು ಖರ್ಜೂರಗಳನ್ನು ತಿಂದಾದ ಮೇಲೆ ಮಾರ್ಮಲೆಡ್ ಹಚ್ಚಿದ ಟೋಸ್ಟ್‌ಗಳು, ಸೇಬು, ಕಿತ್ತಳೆಗಳು, ಸಣ್ಣಗೆ ಕೊಚ್ಚಿದ ಪಿಸ್ತಾ ಬೀಜಗಳನ್ನು ಹಾಕಿ ಮಾಡಿದ ಅದ್ಭುತವಾದ ಪುಟ್ಟ ಪುಟ್ಟ ಕೇಕುಗಳೂ ನನ್ನ ಮುಂದೆ ಬಂದವು. ಮೊಟ್ಟೆಯ ಸ್ಪರ್ಶವೂ ಇಲ್ಲದ ಸಂಪೂರ್ಣ ಸಸ್ಯಾಹಾರಿ ಉಪಾಹಾರ ನನ್ನ ಮುಂದಿತ್ತು. ಪಟೇಲರ ಹಿಂದೂಯಿಸಂ ಬಗ್ಗೆ ನನಗೆ ಯಾವಾಗಲೂ ಮರತೇ ಹೋಗುತ್ತಿತ್ತು. ಭಾರತದ ಜಿಮ್‌ಫಾರ್ಲೆ ಎಂದು ಕರೆಯಲ್ಪಡುತ್ತಿದ್ದ ಅವರು ಯಾವಾಗಲೂ ಒಮ್ಬ ರಾಜಕಾರಣಿಯಾಗಿಯೇ ನೆನಪಾಗುತ್ತಿದ್ದರು. ಪಟೇಲರು ಆಹಾರ ಮತ್ತು ಉಡುಗೆಯ ವಿಷಯದಲ್ಲಿ ನೆಹರೂಗಿಂತ ಹೆಚ್ಚಿನ ಹಿಂದೂ ಆಗಿದ್ದದರು. ಆದರೂ ಅವರು ವ್ಯಾವಹಾರಿಕ ರಾಜಕಾರಣಿ ಹಾಗೂ ಅತ್ಯುತ್ತಮ ಸಂಘಟನಾಕಾರರಾಗಿದ್ದರು. ನೆಹರೂ ತಮ್ಮ ಭಾವಾವೇಶದ ಮಾತುಗಾರಿಕೆ ಹಾಗೂ ಉದಾರ ವಿಚಾರಗಳಿಂದ ಜನರ ಮನಸ್ಸನ್ನು ಸೆರೆಹಿಡಿದರೆ ಪಟೇಲರು ಸಂಪುಟದಲ್ಲಿ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ತಮ್ಮಂತಹುದೇ ವಿಚಾರಗಳನ್ನು ಹೊಂದಿದ ಜನರನ್ನು ಸೇರಿಸಿಕೊಂಡು ಖಾಸಗಿ ಎಂದೇ ಹೇಳಬಹುದಾದ ರಾಜಕೀಯ ಪಕ್ಷವನ್ನು ತುಂಬ ವ್ಯವಸ್ಥಿತವಾಗಿ ಕಟ್ಟಿಕೊಂಡಿದ್ದರು. ಈಗ ಈ ಪ್ರಕ್ರಿಯೆಯನ್ನು ರಾಜ ಸಂಸ್ಥಾನಗಳಿಗೂ ವಿಸ್ತರಿಸತೊಡಗಿದ್ದರು. ಹೀಗಾಗಿಯೇ ಜನತೆಯ ಅಭಿಪ್ರಾಯ ವಿರುದ್ಧ ದಿಕ್ಕಿನಲ್ಲಿ ರೂಪುಗೊಳ್ಳುತ್ತಿದ್ದರೂ ಅವರು ಜನತೆಯ ಹೆಸರಿನ ಸೋಗಿನಲ್ಲಿ ಹಳೆಯ ಫ್ಯೂಡಲ್ ವ್ಯವಸ್ಥೆಯ ಚೌಕಟ್ಟನ್ನು ಬಹುತೇಕ ಹಾಗೇ ಉಳಿಯುವಂತೆ ಮಾಡಲು ಸಾಧ್ಯವಾಗಿರಬೇಕು.

ನಾನು ಅವರ ಜೊತೆಗಿನ ನನ್ನ ಸಂದರ್ಶನವನ್ನು ‘ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವಿನ ಸಂಬಂಧ ಈಗ ಹೇಗಿದೆ’ ಎಂಬ ಪ್ರಶ್ನೆಯಿಂದ ಆರಂಭಿಸಿದೆ. ‘ನಾನು ಬ್ರಿಟಿಷರಿಂದ ಸ್ವಲ್ಪವೂ ಬೇರೆಯಾಗುವುದಕ್ಕೆ ಇಷ್ಟಪಡುವುದಿಲ್ಲ’ ಎಂದು ಸರ್ದಾರ್ ಹೇಳಿದರು. ‘ಸ್ವಾತಂತ್ರ್ಯಕ್ಕೆ ಮೊದಲು ಯಾವುದಾದರೂ ನಾಯಕ ಈ ರೀತಿಯ Dominion ಸ್ಥಾನದಲ್ಲಿ ಉಳಿಯುವ ಮಾತಾಡಿದ್ದರೆ ರಾಜಕೀಯವಾಗಿ ಆತನ ಇತಿಶ್ರೀ ಆಗಿಬಿಡುತ್ತಿತ್ತು ಎಂದು ನಾನು ನೆನಪಿಸಿಕೊಂಡೆ) ನಾವು ಎಷ್ಟೆಲ್ಲ ಹೋರಾಟ ಮಾಡಿದರೂ ಇಂದು ಬ್ರಿಟಿನ್ ಜೊತೆ ನಮ್ಮ ಸಂಬಂಧ ಸೌಹಾರ್ಧಯುತವಾಗೇ ಇದೆ. ಈ ಹೋರಾಟ ಅಹಿಂಸೆಯನ್ನು ಆಧರಿಸಿತ್ತಾದ ಕಾರಣ ಯಾವ ಕಹಿ ಭಾವನೆಯೂ ಉಳಿದಿಲ್ಲ. ನೆಹರೂ ೧೨ ವರ್ಷ ಸೆರೆಮನೆಯಲ್ಲಿದ್ದರು. ಇದು ಹೆಚ್ಚೂ ಕಡಿಮೆ ನಾನು ಸೆರೆಮನೆಯಲ್ಲಿದ್ದಷ್ಟು ಅವಧಿಗೆ ಸಮ. ಆದರೂ ನಾನು ಮತ್ತು ನೆಹರೂ ಇಬ್ಬರೂ ಬ್ರಿಟನ್ ಜೊತೆ ‘ಸ್ನೇಹಪರವಾಗೇ ಇದ್ದೇವೆ’ ಎಂದರು.

ಅಮೆರಿಕಾದ ಜೊತೆ ಹೇಗೆ? ಭಾರತವು ಅಮೆರಿಕಾದಿಂದ ಏನು ಬಯಸುತ್ತದೆ ಎಂದು ನಾನು ಕೇಳಿದೆ.

ಅಮೆರಿಕಾ ಇಂಜಿನಿಯರಿಂಗ್ ತಜ್ಞರನ್ನು ಹಾಗೂ ಬಂಡವಾಳ ಸಾಲಗಳನ್ನು ಒದಗಿಸುವ ಮೂಲಕ ಸಹಾಯ ಮಾಡಬಹುದು. ನಾವು ಬಹಳಷ್ಟು ಹಣವನ್ನು ಒಟ್ಟುಗೂಡಿಸಬೇಕಾಗಿದೆ. ಇದಕ್ಕಾಗಿ ಅಮೆರಿಕಾದ ನೆರವನ್ನು ಕೇಳದ ನಮಗೆ ಬೇರೆ ದಾರಿಯೇ ಇಲ್ಲ ಎಂದರು. ಅವರು ‘ಬೇರೆ ದಾರಿಯೇ ಇಲ್ಲ’ ಎಂಬ ಪದ ಬಳಸಿದ್ದು ನನಗೆ ಅಚ್ಚರಿ ತರಲಿಲ್ಲ. ವಸಾಹತುಶಾಹಿಯ ದೀರ್ಘ ಅನುಭವವನ್ನು ಹೊಂದಿದ ಭಾರತ. ರಾಜಕೀಯವಾಗಿ ಯಾವುದೇ ದೇಶ ಮೇಲುಗೈ ಪಡೆಯುವುದರ ಬಗ್ಗೆ ಎಷ್ಟು  ಹೆದರುತ್ತದೆ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು. ಕೈಗಾರಿಕೀಕರಣಕ್ಕಾಗಿ ಭಾರತಕ್ಕೆ ವಿದೇಶಿ ಬಂಡವಾಳ ಬಹಳ ಅಗತ್ಯವಾಗಿತ್ತು. ಆದರೆ ಈ ಬಂಡವಾಳವನ್ನು ಹಿಂಬಾಲಿಸಿ  ಬರುವ ವಿದೇಶಿ ಮೇಲುಗೈಯಾಗುವಿಕೆ ಬಗ್ಗೆ ಅಷ್ಟೇ ಹುಷಾರಾಗಿರಬೇಕಿತ್ತು. ಪಟೇಲರು ಇದರ ಸಾರಾಂಶವನ್ನು, ‘ನಿಯಂತ್ರಣವು ಬಹುತೇಕವಾಗಿ ಭಾರತದ ಕೈಯಲ್ಲಿಯೇ ಇರುವುದಾದರೆ ಹೊರಗಿನ ನೆರವಿಗೆ ಸಾಕಷ್ಟು ಅವಕಾಶವಿದೆ’ ಎಂಬ ಮಾತುಗಳಲ್ಲಿ ವ್ಯಕ್ತಪಡಿಸಿದರು.

ಹೊಸದಾಗಿ ಸ್ವಾತಂತ್ರ್ಯ ಪಡೆದ ಭಾರತವು ಸಮಾಜವಾದೀ ತತ್ವದ ಕಡೆ ತಿರಬಹುದು ಎಂದು ಕೆಲವು ಭಾರತೀಯ ಬಂಡವಾಳದಾರರಿಗೆ ಚಿಂತೆಯಾಗಿದೆ ಎಂಬುದನ್ನು ನಾನು ಕೇಳಿದ್ದೆ. ಕೈಗಾರಿಕೆಗಳನ್ನು ಯೋಚಿಸುವ ಹಾಗೂ ಲಾಭಗಳನ್ನು ಮಿತಗೊಳಿಸಬೇಕಾದ ಪ್ರಾಮುಖ್ಯತೆಯ ಬಗ್ಗೆ ನೆಹರೂ ಆಗಾಗ ಹೇಳುತ್ತಲೇ ಇದ್ದರು. ಆದರೆ ನಾನು ಗಮನಿಸದಂತೆ ಈ ಬಗ್ಗೆ ಸರ್ಕಾರ ತೀವ್ರ ಕ್ರಮಗಳನ್ನೇನೂ ಕೈಗೊಳ್ಳುವುದಿಲ್ಲ ಎಂದು ಕೆಲವು ವ್ಯಾಪಾರದಾರರಿಗೆ ವಿಶ್ವಾಸವಿದ್ದಂತಿತ್ತು. ರಾಷ್ಟ್ರೀಕರಣವು ಕೇವಲ ಒಂದು ಘೋಷಣೆ ಎಂದು ಬಿರ್ಲಾ ಹೇಳಿದ ಮಾತು ನನಗೆ ನೆನಪಾಯಿತು ಮತ್ತು ಪಟೇಲರೂ ಸಹ ರಾಷ್ಟ್ರೀಕರಣವು ಅನೇಕ ವರ್ಷಗಳಿಂದಲೂ ಕಾಂಗ್ರೆಸ್ಸಿನ ನಿರ್ಣಯವಾಗಿದೆ ಎಂದು ಹೇಳುತ್ತಿದ್ದರೂ ತಕ್ಷಣದಲ್ಲಿ ಮಾತ್ರ ಭಾರತವು ಮಿಶ್ರ ಆರ್ಥಿಕ ನೀತಿಯನ್ನೇ ಅನುಸರಿಸಿಕೊಂಡು ಬರುತ್ತದೆ ಎಂದು ಸೂಚಿಸಿದ್ದರು.

“ಈಗಿರುವ ಬಹುತೇಕ ಕೈಗಾರಿಕೆಗಳನ್ನು (ಅದರಲ್ಲಿ ಜವಳಿ ಕೈಗಾರಿಕೆಯೂ ಒಂದು) ಖಾಸಗಿ ಉದ್ಯಮವಾಗಿಯೇ ಉಳಿಸಿಕೊಂಡು ಬರಲಾಗುವುದು. ಆದರೆ ಬ್ಯಾಂಕುಗಳು, ವಿಮೆ, ಹಡಗು ಕೈಗಾರಿಕೆ ಹಾಗೂ ಕಲ್ಲಿದ್ದಲ ಗಣಿಗಳು ರಾಷ್ಟ್ರೀಕರಣವಾಗುವ ಸಾಧ್ಯತೆ ಇದೆ’’ ಎಂದರು. ಶಕ್ತಿಯ ಯೋಜಿತ ಆಧಾರದ ಮೇಲೆ ನಿರ್ಮಾಣವಾಗಬೇಕು ಎಂದು ಪಟೇಲ್ ನಂಬಿದ್ದರು. ಅತಿ ಮುಖ್ಯವಾಗಿ ಬೇಕಾಗಿರುವುದು ಉಕ್ಕು. ಟಾಟಾ ವರ್ಕ್ಸ್ ಸಾಕಷ್ಟು ಬೃಹತ್ ಉದ್ಯಮವಾಗಿದ್ದರೂ ಭಾರತದ ಕೇವಲ ೧/೪ನೇ ಭಾಗದಷ್ಟು ಅಗತ್ಯತೆಯನ್ನು ಮಾತ್ರ ಅವರು ಪೂರೈಸಬಲ್ಲರು. ಆದ್ದರಿಂದ ಸರ್ಕಾರವು ಅನೇಕ ಪ್ರಾಂತಗಳಲ್ಲಿ ಭಾರತೀ ಉಕ್ಕು ಸ್ಥಾವರಗಳನ್ನು ಸ್ಥಾಪಿಸಬೇಕಾಗಿದೆ ಎಂದು ಅವರು ವಿವರಿಸಿದರು. ಭಾರತ ತ್ವರಿತವಾಗಿ ಕೈಗಾರಿಕೀಕರಣಗೊಳ್ಳುವುದು ಅವಶ್ಯ ಎಂದು ಅವರು ಒತ್ತಿ ಹೇಳಿದರು. ಕೈಗಾರಿಕೀಕರಣ ದೇಶದ ಅತಿಮುಖ್ಯ ಅಗತ್ಯತೆ ಎಂಬುದು ಪಟೇಲರಿಗೆ ಮನವರಿಕೆಯಾಗಿದ್ದರ ಬಗ್ಗೆ ಯಾವುದೇ ಸಂದೇಹವಿಲ್ಲ. ಬಿಡಿ ಕೆಲಸಗಾರನ ಸ್ಥಿತಿಗತಿಗಿಂತ ಕೈಗಾರಿಕೆಯ ಚಕ್ರಗಳು ತಿರುಗುತ್ತಿರುವಂತೆ ನೋಡಿಕೊಳ್ಳುವ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂಬ ಇಂಗಿತ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

‘ಕೈಗಾರಿಕಾ ಅಶಾಂತಿಯತ್ತ ಕರೆದೊಯ್ಯುವ ನಾಯಕರ ಮಾತುಗಳನ್ನು ಕೇಳುವುದಕ್ಕಿಂತ ಶಿಸ್ತಾಗಿ ನಡೆದುಕೊಂಡರೆ ಅವರು ಒಳ್ಳೆಯ ಫಲ ಪಡೆಯಬಹುದು’ ಎಂದು ಸರ್ದಾರ್ ಹೇಳಿದರು. ಈ ಮಾತಿಗೆ ಏನೇನು ಅರ್ಥಛಾಯೆಗಳಿವೆ ಎಂಬುದು ಭಾರತವನ್ನು ಬಿಟ್ಟುಹೋದ ಬಳಿಕೆ ನನಗೆ ಮನವರಿಕೆಯಾಯಿತು. ೧೯೪೯ರ ಫೆಬ್ರವರಿಯಲ್ಲಿ ಪಟೇಲರು ಮಸೂದೆಯೊಂದನ್ನು ಜಾರಿ ಮಾಡಿದರು. ಅದರ ಪ್ರಕಾರ, ವ್ಯಾಪಾಕವಾದ ಅಗತ್ಯ ಸೇವಾಕ್ಷೇತ್ರಗಳಲ್ಲಿ ಯಾವುದೇ ಮುಷ್ಕರ ನಡೆಸುವುದು ಕಾನೂನು ಬಾಹಿರವಾಗುತ್ತಿತ್ತು. ಮುಷ್ಕರದಲ್ಲಿ ಭಾಗವಹಿಸಿದವರಿಗೆ ದಂಡವಿಧಿಸುವ, ಬಂಧನಕ್ಕೊಳಪಡಿಸುವ ಅವಕಾಶವೂ ಈ ಮಸೂದೆಯಲ್ಲಿತ್ತು. ಈ ಕ್ರಮದ ಬಗ್ಗೆ ಚಿಕ್ಕದಾಗಿದ್ದರೂ ಶಕ್ತಿಯುತವಾಗಿದ್ದ ಕಮ್ಯುನಿಸ್ಟ್ ಯೂನಿಯನ್‌ಗಳು; ಇದಕ್ಕಿಂತ ದೊಡ್ಡದಾಗಿದ್ದರೂ ಅಷ್ಟೇನೂ ನಿರ್ಣಾಯಕವಲ್ಲದ ಸೋಶಿಯಲಿಸ್ಟರು ಹಾಗೂ ಸರ್ಕಾದಿಂದಲೇ ಪ್ರಾಯೋಜಿತವಾದ INTUCಗಳೂ ಸೇರಿದಂತೆ ವಿವಿಧ ರೂಪದ ಎಲ್ಲ ಸಂಘಟಿತ ಕಾರ್ಮಿಕ ವಲಯಗಳಿಂದ ವಿರೋಧ ವ್ಯಕ್ತವಾಯಿತು. ಅನಂತರ ಪಟೇಲರು ಹಾಗೂ ಗೃಹಸಚಿವಾಲಯವು ಸಿದ್ಧಪಡಿಸಿದ ಭಾಷಣವನ್ನು ನೆಹರೂ ಮಾಡುವ ಮೂಲಕ ಈ ಮಸೂದೆಯನ್ನು ಹಿಂತೆಗೆದುಕೊಳ್ಳಲಾಯಿತು. ಆದರೂ ಭಾರತದ ಕಾರ್ಮಿಕ ವರ್ಗದಲ್ಲಿ ಇತರ ಭೀತಿ ಸ್ಪಷ್ಟವಾಗಿ ಉಳಿದಿರುವಂತೆ ಮಾಡಲಾಗಿತ್ತು. ‘ಮುಷ್ಕರ ಮಾಡುವುದರಿಂದ ಯಾರಿಗೂ ಲಾಭವಿಲ್ಲ ಇದರಿಂದ ಉತ್ಪಾದನೆ ಕುಂಠಿತವಾಗುತ್ತದೆ ಅಷ್ಟೇ’ ಎಂಬ ದೂರು ಪಟೇಲರ ಅನೇಕ ಭಾಷಣಗಳಲ್ಲಿ ವ್ಯಕ್ತವಾಗುತ್ತಿತ್ತು. ಕಾರ್ಮಿಕರು ತಾಳ್ಮೆಯಿಂದಿದ್ದು ಸರ್ಕಾರದ ಮೇಲೆ ವಿಶ್ವಾಸವಿರಿಸಬೇಕು. ಕ್ರಮೇಣ ಅವರ ಬೇಡಿಕೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ತಮ್ಮ ಭಾಷಣಗಳಲ್ಲಿ ದ್ವನಿಸುತ್ತಿದ್ದರು.

ರಾಜ ಸಂಸ್ಥಾನಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಹಿನ್ನೆಲೆಯಲ್ಲಿ ಇದೇ ತರ್ಕವೇ ಇತ್ತು ಎಂದು ನನಗೆ ತೋರುತ್ತದೆ, ರಾಷ್ಟ್ರವನ್ನು ಬಲಪಡಿಸಬೇಕು ಎಂಬುದು ಸರ್ದಾರರ ಮೊದಲ ನಿಲುವು. ಪ್ರಜಾಪ್ರಭುತ್ವಕ್ಕಾಗಿ ಹಾತೊರೆಯುತ್ತಿದ್ದ ಸಂಸ್ಥಾನದ ಜನಗಳ ಅಭೀಪ್ಸೆಗಿಂತ ಹೆಚ್ಚಾಗಿ ಸಂಸ್ತಾನಗಳ ರಾಜರನ್ನು ಬಹುತ್ವರಿತವಾಗಿ ಹಾಗೂ ಶಾಂತಿಯುತವಾಗಿ ಭಾರತದೊಂದಿಗೆ ಸೇರಿಸಿಕೊಳ್ಳುವಂತೆ ಮಾಡಲು ಪಟೇಲರು ಆದ್ಯತೆ ನೀಡಿದರು. ಏಷಿಯಾದಲ್ಲಿ ಕಮ್ಯುನಿಸಂ ಹರಡಿ ಬಿಡಬಹುದು ಎಂಬುದೇ ಪಾಶ್ಚಿಮಾತ್ಯ ನಾಯಕರುಗಳ ಬಹುದೊಡ್ಡ ಚಿಂತೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಸಮಾಜವಾದಿಗಳನ್ನಾಗಲೀ, ಕಮ್ಯುನಿಸ್ಟ್‌ರನ್ನಾಗಲೀ ಬಲಪಡಿಸದೆ ಫ್ಯೂಡಲ್ ದೊರೆಗಳೊಂದಿಗೆ ಭೂಮಿಯ ವಿಷಯವನ್ನು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಾಮೂಹಿಕ ಚೌಕವಿಯ ವಿಷಯವನ್ನು ಸರ್ಕಾರ ಪರಿಹರಿಸಿಕೊಳ್ಳಲು ಹೇಗೆ ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತವಾಗಲಾರದು. ಸಮಾಜವಾದಿ ಹಾಗೂ ಕಮ್ಯುನಿಸ್ಟ್ ಗುಂಪುಗಳು ಇನ್ನೂ ತೀರಾ ವೈಶವಾಸ್ಥೆಯಲ್ಲಿದ್ದಾರೆ ಮತ್ತು ಅಷ್ಟು ಪ್ರಬಲವಾಗಿಲ್ಲ ಎಂಬುದು ನಿಜವಾದರೂ ಬೆಳೆಯುತ್ತಿರುವ ಕಾರ್ಮಿಕ ಸಂಘಟನೆಗಳಲ್ಲಿ ಹಾಗೂ ರಾಜಸಂಸ್ಥಾನಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳಲ್ಲಿ ಅವರ ಕೈ ಬಲವಾಗಿಯೇ ಇತ್ತು. ತೆಲಂಗಾಣ ಜಾಗೃತಿಯ ಹಿನ್ನೆಲೆಯಲ್ಲಿ ನಡೆದ ಕ್ಷೋಭೆಗಳು ಹಾಗೂ ಹೈದ್ರಾಬಾದ್‌ನಲ್ಲಿ ಉಳುಮೆ ಭೂಮಿಯನ್ನು ರೈತರು ವಶಪಡಿಸಿಕೊಂಡಂಥ ಘಟನೆಗಳು ಕಮ್ಯುನಿಸ್ಟ್ ದನಿಯು ಯಾವಾಗ ಬೇಕಾದರೂ ದಂಗೆ ಏಳುವ ಮನಸ್ಥಿತಿಯಲ್ಲಿರುವ ರೈತಾಪಿ ಜನರನ್ನು ತಲುಪುತ್ತಿದೆ ಹಾಗೂ ಗ್ರಾಮೀಣ ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಭೀತಿಯೊಡ್ಡುತ್ತಿದೆ ಎಂಬುದರ ಸ್ಪಷ್ಟ ಸೂಚನೆಗಳಾಗಿದ್ದವು.

ಭಾರತದ ಇತರ ಅನೇಕ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿಯಂತೆ ಬಂಗಾಳ ಹಾಗೂ ಹೈದ್ರಾಬಾದ್‌ನಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಾನೂನು ಬಾಹಿರ ಎಂದು ಘೋಷಿಸಲಾಗಿತ್ತು. ಆದರೆ ಭಾರತದ ಬಹುತೇಕ ಭಾಗಗಳಲ್ಲಿ ಕಮ್ಯೂನಿಸ್ಟ್ ಪಕ್ಷದ ಅನೇಕ ಸದಸ್ಯರನ್ನು ಬಂಧಿಸಿದ್ದರು ಮತ್ತು ಇನ್ನೂ ಅನೇಕರು ಭೂಗತರಾಗಿದ್ದರೂ ಅದು ತಾಂತ್ರಿಕವಾಗಿ ಇನ್ನೂ ಕಾನೂನುಬದ್ಧವಾಗಿಯೇ ಇತ್ತು. ಆಗಾಗ ಪೊಲೀಸರು ಕಮ್ಯುನಿಸ್ಟ್ ವೃತ್ತ ಪತ್ರಿಕೆಗಳ ಪತ್ರಿಕಾಲಯಗಳನ್ನೇ ಧ್ವಂಸಗೊಳಿಸುತ್ತಿದ್ದರು ಮತ್ತು ವರದಿಗಾರರು ಹಾಗೂ ಸಂಪಾದಕರನ್ನು ನಿರ್ದಿಷ್ಟ ಆರೋಪವಿಲ್ಲದೆಯೇ “ಸಾರ್ವಜನಿಕರ ಹಿತರಕ್ಷಣೆಯ ದೃಷ್ಟಿಯಿಂದ’’ ಎಂಬ ನೆಪದಲ್ಲಿ ಬಂಧಿಸಿ ಸೆರೆಮನೆಯಲ್ಲಿಡುವ ಘಟನೆಗಳು ನಡೆಯುತ್ತಿದ್ದವು. ಆದರೂ ಬಾಂಬೆ ಹಾಗೂ ಇನ್ನೂ ಕೆಲವು ನಗರಗಳಲ್ಲಿ ಕಮ್ಯುನಿಸ್ಟ್ ವೃತ್ತ ಪತ್ರಿಕೆಗಳು ಪ್ರಕಟವಾಗುತ್ತಲೇ ಇವೆ.

ಬ್ರಿಟಿಷರಿಂದ ಪದೇಪದೇ ಬಂಧನಕ್ಕೊಳಗಾಗಿ ಸೆರೆಮನೆಗೆ ತಳ್ಳಲ್ಪಡುತ್ತಿದ್ದ ಕಾಂಗ್ರೆಸಿಗರ ಕೈಗೆ ಬ್ರಿಟಿಷರು ಅಧಿಕಾರ ಸೂತ್ರಗಳನ್ನು ಕೊಟ್ಟುಹೋದರು ಎಂಬುದನ್ನು ಸ್ವತಃ ಕಮ್ಯುನಿಸ್ಟ್ ವಿರೋಧಿಗಳಾಗಿದ್ದ ಕೆಲವು ಭಾರತಿಯರು ನೆನಪಿಸಿಕೊಳ್ಳತ್ತ ಈಗ ಅದೇ ಕ್ರಮ ಪುನರಾವರ್ತನೆಯಾಗುತ್ತಿದೆಯೇ ಎಂಬ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಈ ರಾಜಕೀಯ ಬಂಧನಗಳು ಕಮ್ಯುನಿಸ್ಟ್ ಪಕ್ಷಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಷ್ಟು ಹೆಚ್ಚಿನ ಸಂಖ್ಯೆಯಲ್ಲದಿದ್ದರೂ ಸೋಶಿಯಲಿಸ್ಟರನ್ನೂ ಸಹ ಇದೇ ರೀತಿ ಸೆರೆಮನೆಗೆ ತಳ್ಳುತ್ತಿದ್ದರು. ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರದ ಟೀಕೆ ಮಾಡಿದವರನ್ನು ಬಂದಿಸಿದರೆ ಪರಿಹಾರವಾಗುವುದಿಲ್ಲ ಎಂಬ ಅಭಿಪ್ರಾಯ ಸಾಮಾನ್ಯ ಜನರಿಂದ ಕೇಳಿಬರುತ್ತಿತ್ತು. ಸರ್ಕಾರದ ನಾಯಕರಲ್ಲಿ ಮುಕ್ತ ಚರ್ಚೆ ಹಾಗೂ ಭಿನ್ನಾಭಿಪ್ರಾಯಗಳನ್ನು ತಾಳಿಕೊಳ್ಳದ ಅಸಹನೆ ಬೆಳೆಯುತ್ತಿರುವುದು ಜನರಲ್ಲಿ ಕಳವಳವನ್ನು ಉಂಟುಮಾಡಿತ್ತು.

ಕಮ್ಯುನಿಸ್ಟರು ತಕ್ಷಣವೇ ಅಧಿಕಾರಕ್ಕೆ ಬರುವಂಥ ಯಾವ ಸಾಧ್ಯತೆಯೂ ಕಂಡುಬರುತ್ತಿಲ್ಲ. ಅವರದು ತೀರಾ ಚಿಕ್ಕ ಗುಂಪು. ಆದರೂ ಅದೊಂದು ಸುವ್ಯವಸ್ಥಿತವಾದ ಹಾಗೂ ಶಿಸ್ತನ ಪಕ್ಷ. ಇದರ ಸದಸ್ಯತ್ವ ಸಂಖ್ಯೆ ಸುಮಾರು ೮೦,೦೦೦. ಭಾರತದ ನಾಲ್ಕು ನೂರು ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಾಗ ಇದು ಸಾಗರದಲ್ಲಿ ಒಂದು ಹನಿ ಇದ್ದಂತೆ. ಇದರ ಸದಸ್ಯರೆಲ್ಲರೂ ೨೦ರಿಂದ ೪೦ ವರ್ಷ ವಯಸ್ಸಿನೊಳಗಿನ ತರುಣರು. ಇವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ವಿದ್ಯಾವಂತರು. ಬಹಳಷ್ಟು ಮಂದಿ ಬ್ರಾಹ್ಮಣರು, ಅಂದರೆ ಭಾರತದ ಉಚ್ಚ ಪುರೋಹಿತ ವರ್ಗಕ್ಕೆ ಸೇರಿದವರು. ಇವರು ಎಲ್ಲ ಭದ್ರತೆಯನ್ನೂ ತೊರೆದು ರೈತರನ್ನೂ ಕಾರ್ಮಿಕರನ್ನೂ ಸಂಘಟಿಸುವುದಕ್ಕಗಿ ಕಣಕ್ಕೆ ಇಳಿದವರು, ಬೇರೆ ಯಾವುದೇ ರಾಜಕೀಯ ಪಕ್ಷಗಳವರಿಗಿಂತ ಧಾರ್ಮಿಕ ಹಾಗೂ ಜಾತಿಯ ಗಡಿಗಳನ್ನು ದಾಟಿ ಬಂದವರು. ಮುಸ್ಲಿಂ, ಸಿಂದೂ, ಸಿಖ್ ಎಂಬ ಭೇದ ಎಣಿಸದೆ ಎಲ್ಲರನ್ನೂ ಒಂದೇ ಸಮನಾಗಿ ಪರಿಗಣಿಸಿದವರು. ಸ್ವತಃ ಜನರೊಂದಿಗೆ ಬೆರೆತು ಓಡಾಡಿ ಗಳಿಸಿದ ಅನುಭವವೇ ಇವರ ಶಕ್ತಿ ಸಾಮರ್ಥ್ಯಗಳ ಗುಟ್ಟು. ಆದರೆ ಕಮ್ಯುನಿಸ್ಟರನ್ನು ಇಂದಿನ ಭಾರತದ ಪ್ರಮುಖ ಶಕ್ತಿಯಾಗಿ ಗುರುತಿಸಲು ಸಾಧ್ಯವಿಲ್ಲ.

ಹೀಗೆ ಅಲ್ಪ ಸಂಖ್ಯೆಯಲ್ಲಿರುವ ಮತ್ತು ನಾನಾ ವಿಧದ ಕಿರುಕುಳಗಳನ್ನು ಅನುಭವಿಸುತ್ತಿರುವ ಕಮ್ಯುನಿಸ್ಟ್ ಪಕ್ಷ ಗಮನಾರ್ಹ ಸಾಧನೆಗಳನ್ನು ಮಾಡಲು ಸಾಧ್ಯವೇ ಎಂಬುದು ಅದರ ಸದಸ್ಯರನ್ನು ಮಾತ್ರ ಅವಲಂಳಿಸಿರದೆ ಎರಡು ಪ್ರಮುಖ ಪಕ್ಷಗಳನ್ನು ಮುಖ್ಯವಾಗಿ ಕಾಂಗ್ರೆಸ್ಸನ್ನು ಹಾಗೂ ಇದೇ ರೀತಿ ಪ್ರಬಲವಾಗುತ್ತಿರುವ ಸಮಾಜವಾದಿ ಪಕ್ಷದ ನಿರ್ವಹಣೆಯನ್ನೂ ಆಧರಿಸಿದೆ. ಚೀನಾದಲ್ಲಿ ಸುಧಾರಣೆಗಳನ್ನು ತರುವುದಾಗಿ ಆಶ್ವಾಸನೆ ನೀಡಿ ಕೋಮಿಂಗ್‌ಟಾಂಗ್ ಪಕ್ಷ ಅಧಿಕಾರಕ್ಕೆ ಬಂತು, ಅನಂತರ ರೈತರನ್ನು ದೂರ ಮಾಡಿತು. ಆಗ ಕಮ್ಯೂನಿಸ್ಟ್‌ರು ಅವರನ್ನು ಗೆದ್ದುಕೊಂಡರು. ಭೂಮಿಯನ್ನು ವಶಪಡಿಸಿಕೊಂಡರು ರೈತರಿಗೆ ಅದರ ಮರುಹಂಚಿಕೆ ಮಾಡಿದರು. ಅದೇ ರೀತಿ ರೈತಾಪಿ ಜನರ ಸುಧಾರಣೆಗಳೇ ಭಾರತದ ರಾಜಕೀಯ ಭವಿಷ್ಯದ ಕೀಲಿಕೈ. ರೈತರಿಗೆ ಇರುವುದು ಒಂದೇ ಒಂದು ಸಮಸ್ಯೆ. ಯಾವ ನಾಯಕರು ಅವರ ಭೂ ಸಮಸ್ಯೆಗೆ ಪರಿಹಾರ ಕೊಡುತ್ತಾರೋ ಅಂಥವರನ್ನೆ ರೈತರು ಹಿಂಬಾಲಿಸುತ್ತಾರೆ.

ಸೋಶಿಯಲಿಸ್ಟರು ಅನೇಕ ವಿಷಯಗಳಲ್ಲಿ ಕಮ್ಯುನಿಷ್ಟರನ್ನು ವಿರೋಧಿಸುತ್ತಾರಾದರೂ ಅವರೂ ಸಹ ತೀವ್ರಗತಿಯಲ್ಲಿ ಭೂಸುಧಾರಣೆಯಾಗಬೇಕು ಎಂದೇ ಪ್ರತಿಪಾದಿಸುತ್ತಾರೆ. ಅವರ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ನಾರಾಯಣ್ ನನ್ನೊಂದಿಗೆ ಮಾತನಾಡುತ್ತಾ ಹೀಗೆ ತಿಳಿಸಿದರು “ವಯಸ್ಕ ಮತದಾನ ಹಾಗೂ ಶಾಸನದ ಮೂಲಕ ರೈತರ ಸುಧಾರಣೆಗಳನ್ನು ತರಬೇಕು ಎಂಬುದು ನಮ್ಮ ನಂಬಿಕೆಯಾಗಿದೆಯೇ ಹೊರತು ರಷಿಯಾದಲ್ಲಿ ಆದಂತೆ ಬಲತ್ಕಾರದಿಂದಾಗಲೀ ಅಥವಾ ಭಾರತದಲ್ಲಿ ಕಮ್ಯುನಿಸ್ಟ್‌ರು ಮುಂದೆ ಮಾಡಬಹುದಾದ ರೀತಿಯಲ್ಲಾಗಲೀ ಅಲ್ಲ’’. ಯಾರ ಬಳಿಯೂ ಇಪ್ಪತ್ತು ಎಕರೆಗಿಂತ ಹೆಚ್ಚಿನ ಭೂಮಿ ಇರತಕ್ಕದ್ದಲ್ಲ. ಯಾವುದೇ ವ್ಯಕ್ತಿ ನಿಜವಾಗಿ ಸುಖದಿಂದ ಬದುಕಲು ಇಷ್ಟು ಭೂಮಿ ಸಾಕು ಎಂದರು. ಇತರರಿಗೆ ಇಪ್ಪತ್ತು ಎಕರೆ ಒದಗಿಸುವುದಕ್ಕಾಗಿ ತನ್ನ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಬಿಟ್ಟುಕೊಡುವಂಥ ಸಣ್ಣ ಜಮೀನ್ದಾರರಿಗೆ ಪರಿಹಾರ ನೀಡಬೇಕು. ಆದರೆ ದೊಡ್ಡ ಜಮೀನ್ದಾರರಿಗೆ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ನಲವತ್ತೈದರ ವಯಸ್ಸಿನ ಜಯಪ್ರಕಾಶ ನಾರಾಯಣ್ ಕ್ರಿಯಾಶೀಲ ವ್ಯಕ್ತಿ. ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತದೆ. ಮುಂದೆ ಈತ ಭಾರತದ ಜನನಾಯಕನಾಗಿ ರೂಪುಗೊಳ್ಳುತ್ತಾರೆ ಎಂಬ ವಿಶ್ವಾಸ ಅನೇಕರಲ್ಲಿದೆ. ನಾಲ್ಕು ಅಮೆರಿಕನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಏಳು ವರ್ಷ ಅಮೆರಿಕಾದಲ್ಲಿ ನೆಲೆಸಿದ್ದರು. ಚಿಕಾಗೋದ ಕಬ್ಬಿಣದ ಫೌಂಡ್ರಿಗಳಲ್ಲಿ ಟೆರ್ರಾಕೊಟ್ಟಾ ಕಾರ್ಖಾನೆಯಲ್ಲಿ, ಶಸ್ತ್ರಾಸ್ತ್ರಗಳ ಪ್ಯಾಕಿಂಗ್ ಕಂಪನಿಯಲ್ಲಿ ಅವರು ದುಡಿದಿದ್ದರು.

ಅನೇಕ ವರ್ಷಗಳವರೆಗೆ ಸಮಾಜವಾದೀ ಪಕ್ಷವು ಕಾಂಗ್ರೆಸ್ಸಿನ ಭಾಗವಾಗಿಯೇ ಇತ್ತು. ತೀರಾ ಇತ್ತೀಚೆಗಷ್ಟೇ ಅದು ಕಾಂಗ್ರೆಸ್ಸಿನಿಂದ ಬೇರ್ಪಟ್ಟು ಹೊರಗೆ ಬಂತು. ಹೆಚ್ಚಿನ ಸಂಖ್ಯೆಯ ಎಡಪಂಥೀಯ ಸದಸ್ಯರೆಲ್ಲರೂ ಈ ಪಕ್ಷದೊಂದಿಗೆ ಸೇರಿದರು. ಕಾಂಗ್ರೆಸ್ ಪಕ್ಷ, ಪಟೇಲ್ ಹಾಗೂ ನೆಹರೂ ಅವರು ಕೆಲವು ವಿಧದ ರಾಷ್ಟ್ರೀಕರಣವನ್ನು ಪ್ರತಿಪಾದಿಸುತ್ತಿರುವಾಗ ಸೋಶಿಯಲಿಸ್ಟರು ಹೀಗೆ ಬೇರ್ಪಡಲು ಕಾರಣವೇನು ಎಂದು ಜಯಪ್ರಕಾಶ ನಾರಾಯಣರನ್ನು ಕೇಳಿದೆ.

ಇದಕ್ಕೆ ಅವರು ಹೇಳಿದ್ದು ಹೀಗೆ, “ನಮ್ಮ ಅರ್ಥ ವ್ಯವಸ್ಥೆಯ ಹಳೆಯ ಅಂಗಿಗೆ ತೇಪೆ ಹಾಕಿದರೆ ಸರಿಹೋಗುತ್ತದೆ ಎಂದು ಪಟೇಲರ ನಂಬಿಕೆ. ಪೂರ್ತಿ ಹೊಸ ಅಂಗಿಯನ್ನೇ ಸಿದ್ಧಪಡಿಸಬೇಕು ಎಂಬುದು ನಮ್ಮ ನಂಬಿಕೆ. ನೆಹರೂ ದೊಡ್ಡ ವ್ಯಕ್ತಿಯೇನೋ ಹೌದು. ಆದರೆ ಅವರು ಹಿಂಜರಿಯುತ್ತಾರೆ. ಅವರು ಕಾಂಗ್ರೆಸ್ ಮನಸ್ಸು ಮಾಡಲಿ ಎಂದು ಕಾಯುತ್ತಿದ್ದಾರೆ. ಸರ್ಕಾರದ ಅರ್ಥ ನೀತಿಯನ್ನು ರೂಪಿಸುತ್ತಿರುವುದು ನೆಹರೂ ಅಲ್ಲ. ಅದನ್ನು ನಿಜವಾಗಿ ರೂಪಿಸುತ್ತಿರುವುದು ಪಟೇಲರು.’’

ಸಾಂಪ್ರದಾಯಿಕ ವ್ಯವಸ್ಥೆಯನ್ನು ಉಳಿಸಿಕೊಂಡು ಬರುವುದರ ಪರವಾಗಿ ನೆಹರೂ ತಾಳಿದ ನಿಲುವು ಮತ್ತು ಸ್ವತಃ ತಾವೇ ಅಷ್ಟೂ ವರ್ಷಗಳಿಂದ ಪ್ರತಿಪಾದಿಸಿಕೊಂಡು ಬಂದ ಕೈಗಾರಿಕೆ ಹಾಗೂ ಕೃಷಿಯ ಸಾಮಾಜೀಕರಣದ ಯೋಜನೆಗಳನ್ನು ಕೈಬಿಡಲು ಒಪ್ಪಿಕೊಂಡದ್ದು ಸಮಾಜವಾದಿಗಳನ್ನು ಹತಾಶಗೊಳಿಸಿತ್ತು. ರಾಷ್ಟ್ರೀಕರಣವಾದ ಕೈಗಾರಿಕೆಗಳನ್ನು ನಿರ್ವಹಿಸಲು ಅಗತ್ಯವಾದ ತರಬೇತಿ ಪಡೆದ ಸಿಬ್ಬಂದಿಯ ಕೊರತೆ, ತಲತಲಾಂತರದಿಂದ ಎಲ್ಲೆಲ್ಲಿಯೂ ತಾಂಡವಾಡುತ್ತಿರುವ ಅನಕ್ಷರತೆ ಹಾಗೂ ಇನ್ನೂ ಉಳಿದು ರಾಷ್ಟ್ರದ ಪ್ರಗತಿಗೆ ಕಡಿವಾಣ ಹಾಕುತ್ತಿರುವ ಹಳೆಯ ಫ್ಯೂಡಲಿಸಂನ ಅವಶೇಷಗಳು… ಇವೇ ಮೊದಲಾದ ಆಗಾಧ ಸಮಸ್ಯೆಗಳು ದೇಶದ ಮುಂದಿರುವುದನ್ನು ಗಮನದಲ್ಲಿಟ್ಟುಕೊಂಡು ಜನರು ಈ ಅಸ್ತಿರತೆಗಳನ್ನು ಕ್ಷಮಿಸಲು ಸಿದ್ಧರಿದ್ದರು. ನೆಹರೂ ಅವರ ಪ್ರಾಮಾಣಿಕ ಕಾಳಜಿ ಎಲ್ಲರ ಮನಸ್ಸಿಗೂ ತಟ್ಟುವಂಥದ್ದು. “ಜವಹರಲಾಲ್ ಸ್ಫಟಿಕದಂತೆ ಶುದ್ಧ ಅವರ ಕೈಗಳಲ್ಲಿ ಈ ದೇಶ ಸುರಕ್ಷಿತ’’ ಎಂದು ನೆಹರೂ ಬಗ್ಗೆ ಗಾಂಧಿ ಹೇಳಿದ ಮಾತುಗಳಲ್ಲಿ ಈ  ದೇಶದ ಮಿಲಿಯಾಂತರ ಜನರಗಳ ಅಭಿಪ್ರಾಯವೇ ಧ್ವನಿಸಿತ್ತು.

ಭಾರತವು ವಿಶ್ವವೇದಿಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ “ನೆಹರೂ ಏಷಿಯಾದ ಅತಿದೊಡ್ಡ ವ್ಯಕ್ತಿ’’ ಎಂದು ಭಾರತೀಯರು ಹೇಳುತ್ತಿದ್ದರು. “ಏಷಿಯಾವನ್ನು ಬಡನೆಂಟನಂತೆ ಕಾಯುವ ಪ್ರವೃತ್ತಿಯನ್ನು ಪಾಶ್ಚಿಮಾತ್ಯ ಜಗತ್ತು ನಿಲ್ಲಿಸಬೇಕು’’ ಎಂಬ ನೆಹರೂ ಅವರ ನಿಲುವು ಜನತೆಯ ಹೃದಯವನ್ನು ಗೆದ್ದಿತ್ತು. ತಮ್ಮ ಪ್ರಧಾನಮಂತ್ರಿ ಪೌರ್ವಾತ್ಯ ಹಾಗೂ ಪಾಶ್ಚಾತ್ಯ ಜಗತ್ತುಗಳೆರಡರ ಮನ್ನಣೆಗೆ ಪಾತ್ರವಾಗಿರುವುದು ಇಲ್ಲಿಯ ಜನತೆಗೆ ಅತಿ ಹೆಮ್ಮೆಯ ಸಂಗತಿಯಾಗಿತ್ತು. ನೆಹರೂ ಅವರ ಐರೋಪ್ಯ ಶಿಕ್ಷಣ, ಅನೇಕ ವರ್ಷ ವಿದೇಶದಲ್ಲಿ ನೆಲೆಸಿದ ಅನುಭವ, ಇವೆರೆಡರ ಜೊತೆ ತನ್ನ ದೇಶವನ್ನು ಕುರಿತ ಆಳವಾದ ಅರಿವುಗಳಿಂದಾಗಿ ಇವರಿಗೆ ಒಂದು ವಿಶಿಷ್ಟವಾದ ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಪ್ರಾಪ್ತವಾಗಿತ್ತು. ನೆಹರೂ ಅವರೇ ಹೇಳಿಕೊಳ್ಳುವಂತೆ ತಮ್ಮ “ಪೂರ್ವ ಹಾಗೂ ಪಶ್ಚಿಮದ ವಿಚಿತ್ರ ಮಿಶ್ರಣ’’ ಕುರಿತು ಅವರ ನಿಕಟ ಮಿತ್ರರು ಪ್ರಿಯವಾಗಿ ಹಾಸ್ಯ ಮಾಡುತ್ತಿದ್ದರು. ಉರ್ದು ಭಾಷೆಯ ಬಹುದೊಡ್ಡ ವಿದ್ವಾಂಸರಾಗಿದ್ದ ಮಾಲಾನಾ ಅಜಾದರು ‘ನೆಹರೂ ನಿದ್ದೆಯಲ್ಲೇನಾದರೂ ಮಾತಾಡಿದರೆ ಇಂಗ್ಲಿಷನಲ್ಲೇ ಮಾತಾಡುತ್ತಾರೆ’ ಎಂದು ಒಮ್ಮೆ ಹೇಳಿದ್ದರು.

ನವದೆಹಲಿಯಲ್ಲಿ ನೆಹರೂ ಅಪೂರ್ವ ಸಮಾವೇಶವೊಂದನ್ನು ಏರ್ಪಡಿಸಿದ್ದರು. ಇದರಲ್ಲಿ ಏಷಿಯಾ ಹಾಗೂ ಪೆಸಿಫಿಕ್ ಪ್ರದೇಶದ ಪೌರ್ವಾತ್ಯ ಶಕ್ತಿಗಳು ಯುರೋಪಿಯನ್ ಪ್ರಾಬಲ್ಯವನ್ನು ಖಂಡಿಸುವುದಕ್ಕಾಗಿ ಮೊತ್ತ ಮೊದಲ ಬಾರಿಗೆ ತಮ್ಮ ಜನಾಂಗೀಯ ಹಾಗೂ ವರ್ಣಭೇದದ ಭಿನ್ನತೆಗಳನ್ನು ಬದಿಗೊತ್ತಿ ಒಂದುಗೂಡಿದ್ದವು. ಯೂರೋಪಿಯನ್ನರ ಪ್ರಾಚೀನ ಪರಂಪರೆ ಹಾಗೂ ಪರಿಕಲ್ಪನೆಯ ಭಾಷೆಯನ್ನೇ ಬಳಸಿ ಅವರಿಗೆ ಅರ್ಥ ಮಾಡಿಸುವ ಸಾಮರ್ಥ್ಯ ನೆಹರೂ ಅವರಿಗಿದ್ದುದು ಈ ಸಮಾವೇಶದಿಂದ ಸಾಬೀತಾಯಿತು. ಇಂಡೋನೇಶಿಯನ್ನರಷ್ಟೇ ತೀವ್ರವಾಗಿ ಡಚ್ಚರ ವಿರುದ್ಧ ಹೋರಾಡಿದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳು ತಮ್ಮ ಹಿತಾಸಕ್ತಿಗಳೇನಿದ್ದರೂ ಸ್ವತಂತ್ರಗೊಂಡ ಏಷಿಯಾದ ಭವಿಷ್ಯವನ್ನೇ ಅವಲಂಬಿಸಿದೆ ಎಂಬುದನ್ನು ಅರ್ಥ ಮಾಡಿಕೊಂಡವು. ಭಾರತದ ವಿಮೋಚನೆಯು ವಸಾಹತುಶಾಹಿಯನ್ನು ಆಫ್ರಿಕಾ ಮತ್ತು ಏಷಿಯಾಗಳೆರಡರಲ್ಲೂ ಅದರ ಕೊನೆಯ ದಿನಗಳಿಗೆ ಮುಟ್ಟಿಸಿತು ಎಂಬ ಸಂಗತಿ ಬೇರೆಲ್ಲರಿಗಿಂತ ಪಂಡಿತ್‌ಜೀಯವರಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು.

ಆ ಸಂದರ್ಭದಲ್ಲಿ ರಾಜಕೀಯ ಹುಚ್ಚಾಟಗಳನ್ನೂ ಮೀರಿ ಇತಿಹಾಸದಲ್ಲಿ ನೆಹರೂ ನಿಸ್ಸಂದೇಹವಾಗಿ ಬಹುದೊಡ್ಡ ವ್ಯಕ್ತಿಯಾಗಿ ಉಳಿಯುತ್ತಾರೆ ಎಂಬುದನ್ನು ನವದೆಹಲಿಯ ಸಮ್ಮೇಳನ ಸ್ಪಷ್ಟಪಡಿಸಿತು. ಅವರು, ವಿಮೋಚಿತ ಏಷಿಯಾದ ವಕ್ತಾರರಾಗಿ ರೂಪುಗೊಂಡಿದ್ದರು. ಗಾಂಧಿಯವರದೂ ಸಹ ವ್ಯಾಪಕವಾಗಿ ಪ್ರಭಾವ ಬೀರಿದ ವ್ಯಕ್ತಿತ್ವ ಆದರೆ ಅದು ಮೂಲತಃ ಅಸ್ತಿಕತೆಯ, ನೈತಿಕವಾದ ಪ್ರಭಾವ. ಆದರೆ ನೆಹರೂ, ಏಷಿಯಾದ ಮೇಲೆ ಯೂರೋಪಿಯನ್ ಪ್ರಾಬಲ್ಯವನ್ನು ಉಚ್ಚಾಟಿಸಿದ ಶಕ್ತಿಗೆ ಪ್ರತೀಕರವಾಗಿದ್ದರು. ಫ್ಯೂಡಲಿಸಂನ ಹಿಡಿತದಿಂದ ಹೊರಬಂದು ಆಧುನಿಕ ಕೈಗಾರಿಕಾ ನಾಗರೀಕತೆಯನ್ನು ಪ್ರವೇಶಿಸುತ್ತಿರುವ ಮತ್ತು ಯುರೋಪಿಯನ್ ಪ್ರಭುಗಳನ್ನೂ ಹಾಗೂ ಬೋಧಕರನ್ನು ಅವಲಂಬಿಸಿರುವುದನ್ನು ಕಲಿಯುತ್ತಿರುವ ಒಂದು ಪ್ರಬುದ್ಧ ಏಷಿಯಾವನ್ನು ನೆಹರೂ ಪ್ರತಿನಿಧಿಸುತ್ತಿದ್ದರು.

ಒಂದು ಸಂಜೆ ನೆಹರೂ ಅವರನ್ನು ಭೇಟಿ ಮಾಡಿದಾಗ, “ಭಾರತವು ಪೂರ್ವ ಹಾಗೂ ಪಶ್ಚಿಮಗಳ ಸೇತೆವೆಯಿದ್ದಂತೆ’’ ಎಂಬ ಅವರ ಕಲ್ಪನೆಯನ್ನು ವಿವರಿಸುವಂತೆ ಕೇಳಿದೆ. ನಾನು ಬಳಸಿದ ನುಡಿಗಟ್ಟನ್ನು ತಿದ್ದುತ್ತ ಅವರು ಹೇಳಿದರು. “ಭಾರತವು ತನ್ನ ಪ್ರಾಚೀನ ಪರಂಪರೆ ಹಾಗೂ ಆಧುನಿಕ ಜಗತ್ತಿನ ಸೇತುವೆಯಾಗಬಲ್ಲದು. ಹೀಗೆಂದರೆ ಆಧುನಿಕ ಜಗತ್ತಿನ ಒಳ್ಳೆಯದರೆಲ್ಲರದ ಜೊತೆಗೆ ಸೇತುವೆ. ಅದರೆ ಪಶ್ಚಿಮದ ಪ್ರಭಾವದಲ್ಲಿ ನಮ್ಮ ನೆಲೆ ಕಳೆದುಕೊಳ್ಳುವಂತಾಗವುದನ್ನು ನಾವು ಬಯಸುವುದಿಲ್ಲ’’ ಎಂದರು.

ಪಾಶ್ಚಾತ್ಯ ಜಗತ್ತಿನ ಯಾವ ಅಂಶ ನಿಮ್ಮ ಮೇಲೆ ಹೆಚ್ಚು ಪ್ರಭಾವ ಮೀರಿದೆ? ಎಂದು ಕೇಳಿದೆ?

ಒಂದು, ವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತಂತೆ ಅಲ್ಲಿರುವ ಪರಿಕಲ್ಪನೆ, ಆಧುನಿಕತೆಯ ಸಮಸ್ಯೆ ಏನೆಂದರೆ, ವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸುವುದರ ಜೊತೆಗೇ ಒಂದು ಕೇಂದ್ರಿಕೃತ ನಿರ್ದೇಶನವನ್ನು (Central Direction) ಕಾಪಾಡಿಕೊಂಡು ಬರುವುದು ಹೇಗೆ ಎಂಬುದು. ಇದು ಆಧುನಿಕ ಸಮಾಜಕ್ಕೆ ಬಹಳ ಅಗತ್ಯವಾಗಿರುವಂಥದ್ದು. ಈ ಕೇಂದ್ರೀಕೃತ ನಿರ್ದೇಶನವು ಮಾನವ ಸ್ವಾತಂತ್ರ್ಯಕ್ಕೆ ಸ್ವಲ್ಪ ಮಿತಿ ಇರಬೇಕೆಂದು ಬಯಸುತ್ತದೆ. ವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ಗುರುತಿಸುವುದೇ ನಮ್ಮ ಪ್ರಾಚೀನ ಭಾರತೀಯ ಚಿಂತನೆಯ ಹಿನ್ನೆಲೆಯಲ್ಲಿರುವ ಅಂಶ.

ಭಾರತದ ಬೇರುಗಳು ಬಹಳ ಆಳವಾಗಿವೆ. ಭಾರತದ ಬಗ್ಗೆ ಏನೊಂದು ಹೇಳುವುದೂ ಬಹಳ ಕಷ್ಟ. ನನ್ನ ಕೃತಿಯೊಂದರಲ್ಲಿ, ಭಾರತವೆಂದರೆ ಒಂದು palimpsestನಂತೆ ಎಂದು ಹೇಳಿದ್ದೇನೆ (ಅಂದರೆ ಒಮ್ಮೆ ಬರೆದದ್ದನ್ನು ಅಲಿಸಿ ಪುನಃ ಅದರ ಮೇಲೆಯೇ ಬರೆಯುವ ಧರ್ಮ ಕಾಗದದಂತೆ) ನಾನಾ ರೀತಿಯ ವಿಚಾರಗಳು, ಸದ್ಗುಣಗಳು ಬಹುಶಃ ಪ್ರಾಚೀನವಾದ ದೇಶಗಳಲ್ಲೆಲ್ಲ ಸಾಮಾನ್ಯವಾಗಿ ಹೀಗೇ ಇರುತ್ತವೆ. ಆದರೆ ಬೇರೆ ದೇಶಗಳಿಗಿಲ್ಲದ ಭಾರತೀಯ ವೈಶಿಷ್ಟ್ಯ ಏನೆಂದರೆ ಅದರ ಚೈತನ್ಯಶೀಲತೆ. ಈ ಚೈತನ್ಯಶೀಲತೆಯಿಂದ ಯಾವಾಗಲೂ ಒಳ್ಳೆಯದೇ ಆಗುತ್ತದೆ’’.  ಒಂದು ಕ್ಷಣ ತಡೆದು ನೆಹರೂ ಮತ್ತೆ ಹೇಳಿದರು: ‘ಕೆಲವು ಸಂದರ್ಭಗಳಲ್ಲಿ ಅದರಿಂದ ಕೆಟ್ಟದ್ದೂ ಆಗುವುದುಂಟು. ಉದಾಹರಣೆಗೆ ಜರ್ಮನಿಯಲ್ಲಿ ಆದಂತೆ’.

ನೆಹರೂ ಅವರ ಫ್ಯಾಸಿಸ್ಟ್ ವಿರೋಧಿ ನೀತಿ ಎಲ್ಲರಿಗೂ ತಿಳಿದದ್ದೇ. ಸ್ಪ್ಯಾನಿಶ್ ಅಂತರ್ಯುದ್ಧದ ಸಂದರ್ಭದಲ್ಲಿ ಅವರು ಬಾರ್ಸಿಲೋನಾದಲ್ಲಿರುವ ರಿಪಬ್ಲಿಕನ್ ಮುಖ್ಯ ಕಛೇರಿಗೆ ಭೇಟಿ ನೀಡಿದ್ದರು. ಆಗ ನಗರದಲ್ಲಿ ಎಲ್ಲೆಲ್ಲಿಯೂ ಬಾಂಬುಗಳ ಧಾಳಿ ನಡೆಯುತ್ತಿತ್ತು. ಅವರು ಒಮ್ಮೆ ರೋಮ್ ಮೂಲಕ ಹೋಗುವಾಗ ಮುಸೋಲಿಯನಿಯನ್ನು ಭೇಟಿಯಾಗುವ ಆಹ್ವಾನವನ್ನು ತಿರಸ್ಕರಿಸಿದ್ದರು. ಈ ಆಹ್ವಾನವನ್ನು ತಂದವರ ಬಳಿ ಅವರು ‘ನನ್ನ ಹಾಗೂ ನಿಮ್ಮ ಸವಾರ್ಧಿಕಾರಿಯ ನಡುವೆ ಸಮಾನವಾದ ಅಂಶಗಳೇನೂ ಇಲ್ಲ’ ಎಂದು ಹೇಳಿದ್ದರು.

ಸಂಯುಕ್ತ ಸಂಸ್ಥಾನ ಹಾಗೂ ಸೋವಿಯತ್ ರಿಪಬ್ಲಿಕ್‌ಗಳ ನಡುವಿನ ಘರ್ಷಣೆಯ ಮಗ್ಗೆ ನೀವೇನು ಹೇಳುತ್ತೀರಿ. ಇಲ್ಲಿ ಭಾರತ ಯಾವ ನಿಲುವು ತಾಳುತ್ತದೆ ಎಂದು ನಾನು ಕೇಳಿದೆ.

ಇದು ಬಹಳ ಸೂಕ್ಷ್ಮವಾದ ಪ್ರಶ್ನೆ, ಪ್ರತಿಯೊಂದು ದೇಶವೂ ತನ್ನ ಧೋರಣೆಯ ನೆಲೆಯಲ್ಲಿಯೇ ಯೋಚಿಸುತ್ತದೆ. ಅದು ತನ್ನದೇ ಆದ ನಿಲುವನ್ನು ಹೊಂದಲಾರದಷ್ಟು ದುರ್ಬಲವಾಗಿದ್ದರೆ ಮಾತ್ರ ಯಾವುದಾದರೊಂದು ದೇಶದ ಕಡೆ ವಾಲುತ್ತದೆ. ನಾವು ಇನ್ನೊಂದು ದೇಶದ ಬಲಾತ್ಕಾರಕ್ಕೊಳಗಾಗಿ ಅದರ ಜೊತೆ ಸೇರುವಂಥ ಉದ್ದೇಶವನ್ನೇನೂ ಹೊಂದಿಲ್ಲ. ಒಂದು ವಿಷಯ ಮಾತ್ರ ಸ್ಪಷ್ಟ. ಭಾರತದ ವಿರುದ್ಧ ಯಾವುದೇ ದೇಶ ಆಕ್ರಮಣ ಮಾಡಲು ಯತ್ನಿಸಿದರೆ ಭಾರತ ಅದನ್ನು ಪ್ರತಿಭಟಿಸುತ್ತದೆ. ಆದರೆ ನಾವು ಯು.ಎಸ್. ಮತ್ತು ಯು.ಎಸ್.ಎಸ್.ಆರ್. ಘರ್ಷಣೆಗೆ ನೇರವಾಗಿ ಸಂಬಂಧಿಸಿಲ್ಲ ಎಂದರು.

ಮೂಲ ಕೈಗಾರಿಕೆಗಳ ಮೇಲೆ ಸರ್ಕಾರದ ನಿಯಂತ್ರಣ ಕುರಿತ ಪ್ರಶ್ನೆಗೆ ನೆಹರೂ ಹೇಳಿದರು. “ಕೈಗಾರಿಕೆಯ ಮೇಲಿನ ರಚನೆಗಿಂತ ಅದರ ತಳಹದಿ ರಚನೆಯನ್ನು ರಾಷ್ಟ್ರದ ಆಸರೆಯಲ್ಲಿ ಸಮರ್ಥವಾಗಿ ಕಟ್ಟಬಹುದು. ಖಾಸಗಿ ಬಂಡವಾಳವನ್ನು ಹಾಕುವ ವ್ಯಕ್ತಿ ಯಾವುದೇ ಹೊಸಕ್ಷೇತ್ರಕ್ಕೆ ಕೈ ಹಾಕುವ ಅಪಾಯಕ್ಕೆ ಸಿದ್ಧನಿರುವುದಿಲ್ಲ. ಸರ್ಕಾರವು ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುತ್ತದೆ ಹಾಗೂ ದೇಶದ ಇಡೀ ಮೂಲ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ. ಮುಂದಿನ ಏಳೆಂಟು ವರ್ಷಗಳಲ್ಲಿ ಸಂಪನ್ಮೂಲಗಳ ಉತ್ಪಾದನೆ ಎಷ್ಟು ಹೆಚ್ಚಾಗಿರುತ್ತದೆಂದರೆ ಭಾರತದ ಪ್ರತಿಯೊಂದು ಹಳ್ಳಿಯೂ ವಿದ್ಯುಚ್ಛಕ್ತಿ ಪಡೆಯುತ್ತದೆ.’’

ಭೂಸುಧಾರಣೆಯ ವಿಷಯವನ್ನು ನಾನು ಪ್ರಸ್ತಾಪಿಸಿದೆ. ಮೊದಲು, ಭೂಮಾಲೀಕ ಶಾಹಿಯನ್ನು ನಿರ್ಮೂಲನಗೊಳಿಸಬೇಕು. ಆಗ ಎಲ್ಲ ಪ್ರಗತಿಯೂ ತಾನಾಗಿಯೇ ಆಗುತ್ತದೆ. ಭಾರತದ ರೈತ ಸಂಪ್ರದಾಯವಾದಿ, ಸಹಕಾರ ಕ್ಷೇತ್ರದಂಥವನ್ನು ಅವನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ನಮ್ಮ ಪ್ರಜಾತಂತ್ರ ಸರ್ಕಾರದಲ್ಲಿ ಯಾರನ್ನೂ ಹಾಗೆ ಒತ್ತಾಯಿಸಲು ಬರುವುದಿಲ್ಲ. ಆದ್ದರಿಂದ ಬೇರೆಯವರು ಅನುಸರಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಸರ್ಕಾರವು ಬೃಹತ್ ಸಹಕಾರೀ ಪರಿಯೋಜನೆಗಳನ್ನು ಆರಂಭಿಸಬೇಕು. ಹೀಗೆ ನಾವು ಹೊಸ ಭೂಮಿಯನ್ನು ಉಳುಮೆಗೆ ಬಳಸುವುದರಿಂದ ಸಹಕಾರೀ ಯೋಜನೆಗಳನ್ನು ಆರಂಭಿಸುವುದು ಸರ್ಕಾರಕ್ಕೆ ಬಹಳ ಸುಲಭವಾಗುತ್ತದೆ. ಆಗಲೇ ಹೊತ್ತಾಗುತ್ತಿತ್ತು. ಆದರೆ ಅಲ್ಲಿಂದ ಹೊರಡುವ ಮೊದಲು ಪಟೇಲರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ನೇರವಾಗಿ ಕೇಳಬೇಕು ಎಂದು ನಿಧರ್ರ‍ಿಸಿದೆ.

ಅದಕ್ಕೆ ನೆಹರೂ ‘ಸಹಮತಕ್ಕಿಂತ ಭಿನ್ನಾಭಿಪ್ರಾಯಗಳ ತೂಕ ಹೆಚ್ಚೆ? ಎಂಬುದು ಇಲ್ಲಿ ಗಮನಿಸಬೇಕಾದ ಅಂಶ’ ಎಂದರು. ಈ ಉತ್ತರ ಒಗಟಿನಂತಿತ್ತು. ಆದರೆ ನಾನು ಪಟ್ಟು ಬಿಡದೆ ಇಬ್ಬರಲ್ಲಿನ ಒಡಕು ತೀವ್ರವಾದರೆ ನೆಹರೂ ರಾಜೀನಾಮೆ ಕೊಡುತ್ತಾರೆಯೇ ಅಥವಾ ಪಟೇಲರ ರಾಜೀನಾಮೆಯನ್ನು ನಿರೀಕ್ಷಿಸುತ್ತಾರೆಯೇ’ ಎಂದು ಕೇಳಿದೆ.

ಬಹಳ ಹೊತ್ತಿನವರೆಗೆ ನೆಹರೂ ಮಾತಾಡಲಿಲ್ಲ. ಅಂತಿಮವಾಗಿ ಅವರು ಉತ್ತರಿಸಿದರು. ಇದು ಹಾರಿಕೆಯದಾಗಿರಬಹುದು. ಸರಿ ಉತ್ತರವೇ ಇರಬಹುದು ಅಥವಾ ಭವಿಷ್ಯವು ತಮ್ಮನ್ನು ಅಥವಾ ಪಟೇಲರನ್ನು ಮೀರಿದ ಬೇರೆ ಯಾವುದೋ ಶಕ್ತಿಯ ಪ್ರಭಾವದಿಂದ ನಿರ್ಧಾರಿತವಾಗುತ್ತದೆ ಎಂಬ ಸೂಚನೆಯೂ ಇರಬಹುದು. ‘ಭಾರತವು ತುಂಬ ಚಲನಶೀಲ ಸ್ಥಿತಿಯಲ್ಲಿದೆ. ಇದೊಂದು ಸ್ಥಿತ್ಯಂತರದ ಘಟ್ಟ. ಈ ಚೈತನ್ಯಶೀಲತೆ ಕೆಲವೊಮ್ಮೆ ತಪ್ಪಾಗಿರಬಹುದು. ಆದ್ದರಿಂದಲೇ ಭವಿಷ್ಯವನ್ನು ಅಂದಾಜು ಮಾಡುವುದು ಕಷ್ಟ ಎಂದರು.

ನಾನು ಇನ್ನು ಕೆಲವೇ ದಿನಗಳಲ್ಲಿ ಭಾರತವನ್ನು ಬಿಡುವ ಯೋಚನೆಯಲ್ಲಿದ್ದುದರಿಂದ ಅವರಿಗೆ ಅಂತಿಮ ಗುಡ್‌ಬೈ ಹೇಳಿದೆ. ಪಂಡಿತ್‌ಜೀ ನನಗೊಂದು ಪುಸ್ತಕೊಟ್ಟರು. ಅವರು ಪುಸ್ತಕದಲ್ಲಿ ಹೆಸರು ಬರೆಯುತ್ತಿರುವಾಗ “ನಾನು ಅಮೆರಿಕಗೆ ಹೋದ ಮೇಲೆ ಉಪನ್ಯಾಸಗಳನ್ನು ನೀಡುತ್ತೇನೆ. ಶ್ರೋತೃಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇತ್ತೀಚಿನ ದಿನಗಳಲ್ಲಿ ತುಂಬ ಕಷ್ಟವಾಗುತ್ತಿದೆ. ದಿನೇ ದಿನೇ ಜಗತ್ತು ಬದಲಾಗುತ್ತಿರುವಾಗ, ಸಾಮಾನ್ಯವಾಗಿ ಎಲ್ಲರೂ ಕೇಳುವ ‘ನಾವು ಏನು ಮಾಡಬೇಕು’ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಎಷ್ಟು ಕಷ್ಟ’’ ಎಂದು ಹೇಳಿದೆ.

ನೆಹರೂ ಪುಸ್ತಕದಿಂದ ತಲೆ ಎತ್ತಿ “ನೋಡಿ ಇದೇ ವ್ಯತ್ಯಾಸ. ನಮ್ಮ ಹಾಗೂ ಪಾಶ್ಚಾತ್ಯ ಚಿಂತನೆಯಲ್ಲಿರುವ ವ್ಯತ್ಯಾಸವೇನೆಂದರೆ ಭಾರತೀಯನು ತಾನು ಏನು ಮಾಡಬೇಕು ಎಂದು ಕೇಳುವುದಿಲ್ಲ. ಬದಲಾಗಿ ತಾನು ಏನಾಗಬೇಕು ಎಂದು ಕೇಳುತ್ತಾನೆ’’ ಎಂದರು.

ಪುನಃ ಅವರು ಪುಸ್ತಕದತ್ತ ಬಾಗಿದರು. ತಮ್ಮ ಹೆಸರಿನ ಸಹಿ ಹಾಕಿ ದಿನಾಂಕ ಬರೆದು ನನ್ನ ಕೈಗೆ ಕೊಟ್ಟರು. ‘ನಾವು ಏನಾಗಬೇಕು ಎಂಬ ಪ್ರಶ್ನೆಯನ್ನು ಶತಶತಮಾನಗಳಿಂದಲೂ ಕೇಳಿಕೊಳ್ಳುತ್ತಲೇ ಇದ್ದೇವೆ. ನನಗನ್ನಿಸುತ್ತದೆ. ಸ್ವತಂತ್ರವಾಗಿರುವ ನವಭಾರತದಲ್ಲಿ ‘ನಾವು ಏನು ಮಾಡಬೇಕು’ ಎಂಬ ಹೊಸ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಕಾಲ ಈಗ ಬಂದಿದೆ’ ಎಂದು ಮಾತು ಮುಗಿಸಿದರು.

* * *