ಆಟೋಗ್ರಾಫ್ ಸಂಗ್ರಹಿಸುವ ಗೀಳು ನನಗಿರಲಿಲ್ಲ. ಆದರೂ ಮಹಾತ್ಮಾಗಾಂಧಿಯವರ ವಿಷಯಕ್ಕೆ ಬಂದಾಗ ಅದೇ ಬೇರೆ. ನನಗೆ ಗಾಂಧಿಯವರ ಹಸ್ತಾಕ್ಷರ ಬೇಕಿತ್ತು. ಅದೂ ನಾನು ಅಷ್ಟೆಲ್ಲ ಕಷ್ಟಪಟ್ಟು ತೆಗೆದಿದ್ದ ಅವರ ಫೋಟೋಗ್ರಾಫ್‌ಗಳ ಮೇಲೆಯೇ ಗಾಂಧಿಯವರ ಆಟೋಗ್ರಾಪ್ ಕೇಳುವ ಹೊತ್ತಿಗೆ ನಾನು ಭಾರತದಿಂದ ವಾಪಸ್ಸು ಹೋಗಲು ಇನ್ನು ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದಿತ್ತು. ಗಾಂಧಿಯವರ ಮುಂದೆ ಅವರ ಫೊಟೋಗ್ರಾಫ್‌ಗಳನ್ನಿಟ್ಟು ಹಸ್ತಾಕ್ಷರ ಕೇಳಿದೆ. ಪ್ರತಿಯೊಂದಕ್ಕೂ ಐದೈದು ರೂಪಾಯಿ ಕೊಡಬೇಕಾಗುತ್ತೆ ಎಂದರು ಗಾಂಧಿ. ನಾನು ಮರುಮಾತಾಡದೆ ಪರ್ಸ್‌ನಿಂದ ಹತ್ತು ರೂಪಾಯಿಯ ನೋಟು ತೆಗೆದು ಅವರ ಚರಕಾ ಬಳಿ ಇಟ್ಟೆ. ಗಾಂಧಿವರು ತಮ್ಮ ಕಡ್ಡಿಯಂತಹ ಬೆರಳುಗಳಿಂದ ಹಿಂದಿ ಮತ್ತು ಇಂಗ್ಲಿಷ್‌ಗಳೆರಡರಲ್ಲೂ ಎಂ.ಕೆ. ಗಾಂಧಿ ಎಂದು ಸಹಿ ಮಾಡಿದರು ಮತ್ತು ಜನವರಿ ೨೯, ೧೯೪೮ ಎಂದು ದಿನಾಂಕವನ್ನು ಬರೆದರು. ಆಮೇಲೆ ಮುಖವೆತ್ತಿ ನನ್ನ ಕಡೆ ನೋಡುತ್ತಾ “do you know what is for the ten rupees” ಎಂದರು. ಗಾಂಧಿಯವರ ಇಂಗ್ಲಿಷ್ ಅತ್ಯಂತ ಸುಂದರ. ಅವರ ಪದಸಂಪತ್ತು ವೈವಿಧ್ಯಮಯ. ಅದರಲ್ಲಿ ತಮಗೇ ವಿಶಿಷ್ಟವಾದ ಕೆಲವೊಂದು ವ್ಯತ್ಯಾಸಗಳನ್ನು ಮಾಡುತ್ತಿದ್ದರು. ಗಾಂಧಿಯವರ ಪ್ರಶ್ನೆಗೆ ನಾನು ಉತ್ತರವನ್ನು ಊಹಿಸಿ ಹೇಳಿದೆ.

“ಅದು ಹರಿಜನ ನಿಧಿಗೆ’’

“ಹರಿಜನ್ ಎಂದರೆ ಏನು ಗೊತ್ತಾ’’ ಅಂದರು. ನನಗೆ ಗೊತ್ತು ಎಂದೆ. ಆದರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರೆ? “ಇದರ ಅರ್ಥ ತಿಳಿಯಲು ಕಿಂಗ್‌ಸ್‌ವೇಯಂಥ ಆಧುನಿಕ ರಸ್ತೆಗೆ ಹೋದರೆ ಗೊತ್ತಾಗುವುದಿಲ್ಲ. ಕೊಳಕಿನಲ್ಲಿ ಬದುಕುವ ಹರಿಜನರ ಬಸ್ತಿಗಳಿಗೆ ಹೋಗಬೇಕು’’ ಅಂದರು. ದಕ್ಷಿಣ ಭಾರತದ ಸುಣ್ಣದ ಗುಂಡಿಗಳಲ್ಲಿ ನಾನು ನೋಡಿದ್ದ ಹರಿಜನರ ವಿಷಯವನ್ನು ಹೇಳಿದೆ. “ಒಂದು ಕಡೆ ಟ್ಯಾನರಿಗಳ ಮಾಲೀಕರು ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ಇದ್ದಾರೆ. ಆದರೆ ಅವರಿಗಾಗಿ ಕೆಲಸ ಮಾಡುವ ಅಸ್ಪೃಶ್ಯರು ಅನಾರೋಗ್ಯಕರವಾದ ದರಿದ್ರಾವಸ್ಥೆಯಲ್ಲಿ ಬದುಕುತ್ತಿದ್ದಾರೆ. ಈ ಸ್ಥಿತಿ ಸರಿಯಾಗಬೇಕಾದರೆ ಏನು ಮಾಡಬೇಕು’’ ಎಂದು ಕೇಳಿದೆ.

“ಹೀಗೆ ತಮ್ಮನ್ನು ಅಧೋಗತಿಗೆ ಇಳಿಸಿಕೊಂಡಿರುವ ಟ್ಯಾನರಿ ಮಾಲೀಕರು ತಮ್ಮಂತೆಯೇ ಇತರರು ಎಂದು ಭಾವಿಸುವುದನ್ನು ಕಲಿತುಕೊಳ್ಳಬೇಕು. ಮಾಲೀಕರು ತಮ್ಮನ್ನು ನೋಡಿಕೊಳ್ಳುವಂತೆಯೇ ಹರಿಜನ ಕಾರ್ಮಿಕರನ್ನೂ ನೋಡಿಕೊಂಡಾಗ….’’ ಎಂದು ಗಾಂಧಿ ಹೇಳಿದ ಮಾತಿನಲ್ಲಿ ಅವರು ಯಾವಾಗಲೂ ಹೇಳುವ Trsuteeshipನ ಅರ್ಥ ಧ್ವನಿಸಿತ್ತು. ಕೂಡಲೇ ನನ್ನನ್ನು ಹಲವಾರು ತಿಂಗಳುಗಳಿಂದ ಕಾಡಿಸುತ್ತಿದ್ದ ಪ್ರಶ್ನೆಗಳೆಲ್ಲ ಒಟ್ಟಿಗೇ ನುಗ್ಗಿದವು. ನಾನು ಅಮೆರಿಕಕ್ಕೆ ಹೋಗುವ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಪಡೆಯಲೇಬೇಕೆಂದು ನಿರ್ಧರಿಸಿದೆ. ನಾಳೆ ಭಾರತದಲ್ಲಿ ನನ್ನ ಕೊನೆಯ ದಿನ ಎಂದು ಗಾಂಧಿಗೆ ತಿಳಿಸಿದೆ. ನಾನು ಭಾರತದ ಬಗ್ಗೆ ಒಂದು ಪುಸ್ತಕ ಬರೆಯುತ್ತಿರುವುದಾಗಿಯೂ ಅದಕ್ಕಾಗಿ ನಾನು ನನ್ನ ದೇಶಕ್ಕೆ ಹೋಗುವ ಮೊದಲು ಅವರೊಂದಿಗೆ ಕೆಲವು ಮಾತುಗಳನ್ನು ಆಡಬೇಕಿದೆ ಎಂದು ತಿಳಿಸಿದೆ. “ನೀನು ಎಷ್ಟು ದಿನದಿಂದ ಈ ಪುಸ್ತಕ ಬರೆಯುತ್ತಿದ್ದಿ’’ ಎಂದು ಗಾಂಧಿ ಕೇಳಿದರು. ಈಗಾಗಲೇ ಎರಡು ವರ್ಷಗಳಿಂದ ಎಂದಾಗ “ಅಮೆರಿಕನ್ ಪ್ರಜೆ, ಎರಡು ವರ್ಷದಿಂದ ಒಂದೇ ಪುಸ್ತಕ? ಬಹಳ ದೀರ್ಘವಾಯಿತು’’ ಎಂದು ಜೋರಾಗಿ ನಕ್ಕರು. ಅನಂತರ ಗಂಭೀರವಾಗಿ ಕೇಳಿದರು – “ಇದಕ್ಕೆ ಮೊದಲು ಒಬ್ಬ ಅಮೆರಿಕನ್ ಮಹಿಳೆ ಪುಸ್ತಕ ಬರೆಯುವುದಕ್ಕಾಗಿ ನನ್ನ ಸಂದರ್ಶನ ಮಾಡಿದ್ದಳು. ಮಿಸ್ ಮೇಯೋ. ಆಕೆ ನಿನಗೆ ಗೊತ್ತಾ’’ ಎಂದರು. ನನಗೆ ಗೊತ್ತಿತ್ತು. ಅಷ್ಟೆ ಅಲ್ಲ ನಾನು ಹೋದ ಕಡೆಯಲ್ಲೆಲ್ಲ ಆಕೆಯ ಭೂತ ನನ್ನನ್ನು ಕಾಡಿತ್ತು. ಆಕೆ ಬರೆದ Mother Indiaದಲ್ಲಿ ಅರ್ಧ ಸತ್ಯಗಳು ಹಾಗೂ ತಪ್ಪುಮಾಹಿತಿಗಳು ತುಂಬಿದ್ದವು. ಇದರ ಬಗ್ಗೆ ಭಾರತದಲ್ಲಿ ಎಷ್ಟು ವಿರೋಧ ವ್ಯಕ್ತವಾಗಿತ್ತೆಂದರೆ ಏನೂ ಓದೂ ಬರಹ ಗೊತ್ತಿಲ್ಲದ ಹಳ್ಳಿಗೆ ಹೋದಾಗಲೂ ಅದರ ಅಪಕೀರ್ತಿ ನನ್ನ ಬೆನ್ನಟ್ಟಿ ಬಂದಿತ್ತು. ಸಹಜವಾಗಿಯೇ ಅಮೆರಿಕನ್ ಮಹಿಳೆ ಎಂಬ ಕಾರಣಕ್ಕಾಗಿ ನನಗೂ ಆಕೆಗೂ ಸಂಬಂಧ ಕಲ್ಪಿಸುತ್ತಿದ್ದರು. ನಾನು ಅಮೆರಿಕನ್ ಹೆಣ್ಣಾದ್ದಕ್ಕಾಗಿ ಭಾರತದಲ್ಲಿ ಅನುಭವಿಸಿದ ಏಕೈಕ ಅನಾನುಕೂಲತೆ ಇದೊಂದೆ. ಒಂದು ಸಲ ಗುಡ್ಡಗಾಡು ಜನರಿರುವ ಪ್ರದೇಶವೊಂದಕ್ಕೆ ಹೋದಾಗ ಅಲ್ಲಿನ ಮೂಲನಿವಾಸಿಗಳೆಲ್ಲ ನನ್ನನ್ನು ಸುತ್ತವರೆದರು. ಮೇಯೋ ಬರೆದಂಥ ಪುಸ್ತಕವನ್ನು ನೀವು ಬರೆಯಲಿಕ್ಕಿಲ್ಲ ಎಂದುಕೊಂಡಿದ್ದೇವೆ ಎಂದು ಅಂದರು.

“ಆಕೆಗೆ ನನ್ನನ್ನು ಉಲ್ಲೇಖಿಸುವ ಹಕ್ಕಿದೆ. ಆದರೆ ತಪ್ಪಾಗಿ ಉಲ್ಲೇಖಿಸುವುದಕ್ಕಲ್ಲ’’ ಎಂದು ಗಾಂಧಿ ಹೇಳಿದರು. “ನನ್ನ ಮಾತುಗಳನ್ನು ನೀನು ಸರಿಯಾಗಿ ವರದಿ ಮಾಡುತ್ತೀಯಾ ಎಂದು ನಂಬಬಹುದೆ ಎಂದು ನಮ್ರವಾಗಿ ಕೇಳಿದರು. ಖಂಡಿತವಾಗಿ ನಂಬಬಹುದು’’ ಎಂದು ಹೇಳಿದೆ. ನಾನು ನನ್ನದೇ ಆದ ಅಬ್ರಿವಿಯೇಶನ್‌ಗಳನ್ನು ಬಳಸಿ ಬೇಗಬೇಗ ಬರೆದುಕೊಂಡಿದ್ದ ನೋಟ್‌ಬುಕ್ಕನ್ನು ಅವರಿಗೆ ತೋರಿಸಿದೆ. “ಒಬ್ಬ ವ್ಯಕ್ತಿ ಹೇಳಿದ್ದನ್ನು ನಾನು ಫೋಟೋಗ್ರಾಫ್‌ನಷ್ಟೇ ಯಥಾವತ್ತಾಗಿ ದಾಖಲು ಮಾಡುತ್ತೇನೆ. ಅವರು ಹೇಳಿದ ಪದಗಳನ್ನು ಹಾಗೆ ಹಾಗೇ ದಾಖಲಿಸುತ್ತೇನೆ’’ ಎಂದೆ.

“ಪ್ರಾಮಿಸ್’’ ಎಂದರು ಗಾಂಧಿ “ಪ್ರಾಮಿಸ್’’ ಎಂದು ನಾನು ಭರವಸೆ ನೀಡಿದೆ.

ಮಾರನೇ ದಿನ ಬಿರ್ಲಾ ಭವನದ ಕಡೆ ಹೊರಟೆ. ಭಾರತದಲ್ಲಿ ನನ್ನ ವಾಸ್ತವ್ಯದ ಕೊನೇ ದಿನ ನಾನು ಗಾಂಧಿಯವರ ಸಂದರ್ಶನ ಮಾಡುತ್ತಿದ್ದೆ. ಈ ಅಂತಿಮ ದಿನ ಇದಕ್ಕಿಂತ ಹೆಚ್ಚು ರೋಚಕವಾಗಿರಲು ಸಾಧ್ಯವಿರಲಿಲ್ಲ. ಗಾಂಧೀಜಿ ತಮ್ಮ ಇತ್ತೀಚಿನ ಉಪವಾಸದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಅವರು ಸಂದರ್ಶನ ನೀಡುವ ಸ್ಥಿತಿಯಲ್ಲಿದ್ದಾರೋ ಇಲ್ಲವೋ ಎಂಬ ಬಗ್ಗೆ ನನಗೆ ಕೊನೇ ಘಳಿಗೆಯವರೆಗೆ ಖಾತರಿ ಇರಲಿಲ್ಲ. ವಾಸ್ತವವಾಗಿ ಭಾರತದಲ್ಲಿ ಇದು ನನ್ನ “ಎರಡನೆಯ ಕೊನೇ ದಿನ’’ವಾಗಿತ್ತು. ಎರಡೂವರೆ ವಾರಗಳ ಹಿಂದೆ ಅಮೆರಿಕಾಕ್ಕೆ ಹಿಂದಿರುಗಲು ನಾನು ವಿಮಾನಕ್ಕೆ ಬುಕ್ ಮಾಡಿಸಿದ್ದೆ. ನಾನು ಹೊರಡುವ ಹಿಂದಿನ ರಾತ್ರಿ ಗಾಂಧಿಯವರ ಉಪವಾಸದ ನಿರ್ಧಾರ ಪ್ರಕಟವಾಯಿತು. ಇಂಥ ಸಂದರ್ಭವನ್ನು ತಪ್ಪಿಸುವುದು ಸರಿಯಲ್ಲ ಎಂದು ತಕ್ಷಣವೇ ನನ್ನ ಪ್ರವಾಸವನ್ನು ರದ್ದುಪಡಿಸಿದ್ದೆ.

ಬಿರ್ಲಾ ಭವನದ ಹಿಂಭಾಗದಲ್ಲಿರುವ ತೋಟದ ಭಾಗಕ್ಕೆ ನಾನು ಬಂದಾಗ ಗಾಂಧಿಯವರು ಬಿಸಿಲು ಬೀಳುವ ಕಡೆ ಮಂಚದ ಮೇಲೆ ಕೂತಿದ್ದರು. ಇಷ್ಟು ತೀವ್ರ ಉಪವಾಸದ ನಂತರವೂ ಅವರ ಲವಲವಿಕೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವರನ್ನು ಕೇಳಬೇಕಾದ ಮೊದಲ ಪ್ರಶ್ನೆಯನ್ನು ಈ ವಿಷಯದಿಂದಲೇ ಆರಂಭಿಸುತ್ತೇನೆ ಎಂದುಕೊಂಡೆ. ಅವರು ತಮ್ಮ ಮುಂದಿದ್ದ ಚರಕವನ್ನು ಸರಿಯಾಗಿಟ್ಟುಕೊಂಡು ಕೂರುವ ತನಕ ನಾನು ಮಾತನಾಡದೆ ಮೌನವಾಗಿ ಅವರನ್ನು ಗಮನಿಸುತ್ತ ಕುಳಿತೆ. ಅವರು ಚರಕಾದ ಪಕ್ಕದಲ್ಲಿ ಒಂದು ನೀಲಿ ಕಾಗದ ಹರಡಿಟ್ಟರು. ಅದು ಹಿಂಜಿದ ಹತ್ತಿಯನ್ನು ಇಡಲು. ಸ್ವಲ್ಪ ಹತ್ತಿಯನ್ನು ಕೈಗೆ ತೆಗೆದುಕೊಂಡು ಅದನ್ನು ನಾಲ್ಕು ಸಮಾನಾಂತರ ಎಳೆಗಳಾಗಿ ಎಳೆದರು. ತಲೆಯ ಮೇಲೆ ಒಂದು ಸ್ಟ್ರಾಹ್ಯಾಟ್ ಹಾಕಿಕೊಂಡು ಅದರ ಪಟ್ಟಿಯನ್ನು ಗಲ್ಲದ ಬಳಿ ಕಟ್ಟಿಕೊಂಡರು. ಆಗ ನಾನು ನನ್ನ ಮೊದಲ ಪ್ರಶ್ನೆ ಕೇಳಿದೆ. ಆ ಸಂದರ್ಭಕ್ಕೆ ಆ ಪ್ರಶ್ನೆ ತುಂಬ ಸಿಲ್ಲಿಯಾಯಿತೇನೋ ಅನ್ನಿಸಿತ್ತು. ಆದರೆ ಈಗ ಹಾಗನ್ನಿಸುತ್ತಿಲ್ಲ. “ನಾನು ನೂರಾ ಇಪ್ಪತ್ತೈದು ವರ್ಷ ಬದುಕುತ್ತೀನಿ ಎಂದು ನೀವು ಯಾವಾಗಲೂ ಹೇಳುತ್ತಿರುತ್ತೀರಿ. ಯಾವ ಭರವಸೆಯಿಂದ ಹಾಗೆ ಹೇಳುತ್ತೀರಿ’’ ಎಂದೆ. ಈ ಪ್ರಶ್ನೆಗೆ ಗಾಂಧಿಯವರು ನೀಡಿದ ಉತ್ತರಕ್ಕೆ ನಾನು ಬೆಚ್ಚಿಬಿದ್ದೆ. ಅವರು ಹೇಳಿದರು “I have lost the hope”. ಯಾಕೆ ಹೀಗೆ ಎಂದು ಕೇಳಿದೆ. ಗಾಂಧಿ ಹೇಳಿದರು – “ಯಾಕೆಂದರೆ ಈ ಜಗತ್ತಿನಲ್ಲಿ ಏನೇನೋ ಭಯಂಕರವಾದುದೆಲ್ಲ ಆಗುತ್ತಿದೆ. ಅಂಧಕಾರ, ಹುಚ್ಚಾಟಗಳು ತುಂಬಿದ ಈ ಜಗತ್ತಿನಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ. ನನಗೆ ಬದುಕುವ ಆಸೆಯಿಲ್ಲ’’ ಎಂದರು. “ಆದರೆ ನನ್ನ ಸೇವೆ ಅಗತ್ಯವಾದರೆ ಅಥವಾ ಆ ರೀತಿ ನನಗೆ ಅಪ್ಪಣೆಯಾದರೆ ನಾನು ನೂರಾ ಇಪ್ಪತ್ತೈದು ವರ್ಷ ಇರುತ್ತೇನೆ’’ ಎಂದರು. ಹೀಗೆ ಹೇಳಿ ಲಯಬದ್ಧವಾಗಿ ಚರಕಾ ಕೆಲಸ ಮುಂದುವರೆಸಿದರು.

ನಾನು ಈಗ ಟ್ರಸ್ಟೀಶಿಪ್‌ನ ಪ್ರಶ್ನೆಯನ್ನು ಕೈಗೆತ್ತಿಕೊಂಡೆ. ಭಾರತದ ಈಗಷ್ಟೇ ಸ್ವಾತಂತ್ರ್ಯ ಗಳಿಸಿದ್ದು ಈ ದೇಶವನ್ನು ಹೇಗೆ ಬೇಕೋ ಹಾಗೆ ರೂಪಿಸುವ ಅವಕಾಶವಿರುವುದರಿಂದ ಈ ಸಂದರ್ಭಕ್ಕೆ ಈ ಪ್ರಶ್ನೆ ಸೂಕ್ತ ಎನ್ನಿಸಿತು. “ನಿಮ್ಮ ದೃಷ್ಟಿಯಲ್ಲಿ ಉತ್ತಮ ಟ್ರಸ್ಟಿ ಯಾರು’’ ಎಂದು ಕೇಳಿದೆ.

“ಯಾರು ಟ್ರಸ್ಟೀಶಿಪ್‌ನ ತತ್ವವನ್ನು ಪಾಲಿಸುತ್ತಾರೋ ಮತ್ತು ಆ ಮನೋಭಾವಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಾರೋ ಅವರು’’ ಎಂದರು ಗಾಂಧಿ.

“ಭಾರತದ ಕೈಗಾರಿಕೋದ್ಯಮಿಗಳಲ್ಲಿ ನಿಮ್ಮ ಪ್ರಕಾರ ಯಾರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ’’ ಎಂದು ಕೇಳಿದೆ.

“ನನಗೆ ಗೊತ್ತಿರುವವರಲ್ಲಿ ಯಾರೂ ಆ ಪ್ರಕಾರ ಇಲ್ಲ ಇಂದರು. ನಿಮ್ಮ ಟ್ರಸ್ಟೀಶಿಪ್ ಆದರ್ಶಕ್ಕನುಗುಣವಾಗಿ ನಡೆದುಕೊಳ್ಳುವಂಥವರೊಬ್ಬರು ರೂಪುಗೊಳ್ಳಲು ಇನ್ನೂ ಎಷ್ಟು ಕಾಲ ಬೇಕು ಎಂಬ ಪ್ರಶ್ನೆಗೆ “ಭವಿಷ್ಯದಲ್ಲಿರುವುದು ಯಾರಿಗೆ ಗೊತ್ತು?’’ ಎಂದರು. ಆದರೆ ಈ ಉತ್ತರದಿಂದ ನನಗೆ ಸಮಾಧಾನವಾಗಲಿಲ್ಲ. ಈ ತತ್ವದ ಪ್ರಯೋಜನ ಪಡೆದುಕೊಳ್ಳಲು ಸಾವಿರಾರು ಜನ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಇಂತಹ ಒಂದು ಆದರ್ಶವನ್ನು ಸ್ಪಷ್ಟವಾಗಿ ವಿವರಿಸದೆ ಸುಂದರವಾದ ಮಾತುಗಳ ಹಿಂದೆ ತಲೆಮರೆಸಿಕೊಳ್ಳುವುದು ಸರಿಯಲ್ಲ ಎಂದು ಪ್ರತಿಭಟಿಸಿದೆ.

“ನೋಡಿ, ನಿಮ್ಮ ಸಮೀಪವರ್ತಿಗಳಲ್ಲಿ ಯಾರಾದರೊಬ್ಬರು, ನಾನು ಟ್ರಸ್ಟಿಯಾಗಬೇಕು ಎಂದು ನಿಮ್ಮ ಹತ್ತಿರ ಹೇಳಿದರೆ ನೀವು ಅವರಿಗೆ ಏನು ಹೇಳುತ್ತೀರಿ’’ ಎಂದು ಕೇಳಿದೆ.

ಅದಕ್ಕೆ ಗಾಂಧಿಯವರು “ಹಾಗೆ ನೋಡುವುದಾದರೆ ಹೆಚ್ಚು ದೂರ ಹೋಗುವ ಅಗತ್ಯವಿಲ್ಲ. ಈ ಭವನದ ಮಾಲೀಕರೇ ಇದ್ದಾರೆ. ಆತ ಟ್ರಸ್ಟಿಯಾಗುವ ಬಯಕೆ ಹೊಂದಿದ್ದಾರೆ. ಅವರೊಬ್ಬರೇ ಅಲ್ಲ. ನಾನು ಹೇಳಿದ ಅರ್ಥದಲ್ಲಿ ನಡೆದುಕೊಳ್ಳಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅವರು ನನಗೆ ಮೋಸಮಾಡುವುದಿಲ್ಲ ಎಂದು ಆಶಿಸುತ್ತೇನೆ.’’ ಇದ್ದಕ್ಕಿದ್ದಂತೆ ಚರಕಾ ತಿರುಗುವುದು ನಿಂತಿತು. ಗಾಂಧಿ ಮೌನ ತಾಳಿದರು. ಅನಂತರ ತುಂಬ ನಿಧಾನವಾಗಿ, ಬಹಳ ಕಾಲದಿಂದ ಮುಚ್ಚಿಯೇ ಇದ್ದ ಬಾಗಿಲನ್ನು ತೆಗೆಯುತ್ತಿರುವ ಹಾಗೆ ಅವರು ಹೇಳಿದರು “ಬಿರ್ಲಾ ನನಗೆ ಮೋಸ ಮಾಡುತ್ತಿದ್ದಾರೆ ಎಂದೇನಾದರೂ ಗೊತ್ತಾದ ಒಂದು ಕ್ಷಣವೂ ಅವರ ಮನೆಯಲ್ಲಿ ನಾನಿರುವುದಿಲ್ಲ. ಬಿರ್ಲಾ ಹೇಳುವುದರಲ್ಲಿ ನನಗೆ ವಿಶ್ವಾಸವಿರುವುದರಿಂದ ನಾನು ಇಲ್ಲಿದ್ದೇನೆ. ಅವರು ನನಗೆ ತುಂಬ ಸಮಯದಿಂದ ಗೊತ್ತು.’’ ಅನ್ನುತ್ತಾ ಒಂದು ಎರಡು ಎಂದು ಲೆಕ್ಕ ಹಾಕಿ “ಮೂವತ್ತೆರಡು ವರ್ಷಗಳಿಂದ ನನ್ನ ಜೊತೆಗಿದ್ದಾರೆ. ಅವರು ವಂಚಿಸುತ್ತಾರೆ ಎಂದು ನನಗನ್ನಿಸಿಲ್ಲ’’ ಎಂದರು. ಬಿರ್ಲಾ ಬಗ್ಗೆ ಇಷ್ಟೆಲ್ಲಾ ಹೇಳಿದ್ದಕ್ಕಾಗಿ ಅವರು ಏನೋ ಗೊಂದಲಕ್ಕೊಳಗಾದಂತೆ ಕಂಡರು.

“ನಾನು ಬಿರ್ಲಾ ಅವರನ್ನು ಮಾತ್ರ ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಒಟ್ಟು ಪರಿಕಲ್ಪನೆಯ ಬಗ್ಗೆ ಕೇಳುತ್ತಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸುತ್ತ ಇದನ್ನು ಯಾವ ರೀತಿಯಲ್ಲಿ ಆಚರಣೆಗೆ ತರಬೇಕು? ಉದಾಹರಣೆಗೆ ಒಬ್ಬ ಕೈಗಾರಿಕೋದ್ಯಮಿ ವರ್ಷಕ್ಕೆ ಅರ್ಧ ಮಿಲಿಯನ್ ರೂಪಾಯಿ ಲಾಭ ಮಾಡುತ್ತಾನೆ. ಕಾರ್ಮಿಕರು ತಿಂಗಳಿಗೆ ಪಡೆಯುವ ವೇತನ ೨೪ ರೂಪಾಯಿಗಳಾಗಿರುತ್ತವೆ. ಆಗ ಹೇಗೆ’’ ಎಂದೆ?

“ಟ್ರಸ್ಟಿಯಾದವನು ಒಂದೇ ಒಂದು ಪೈಸೆಯನ್ನೂ ತನಗಾಗಿ ಮಾಡಿಕೊಳ್ಳಮಾರದು. ಗಳಿಸಿದ್ದರ ಕಮಿಷನ್ ಮೇಲೆ ಮಾತ್ರ ಅವನಿಗೆ ಹಕ್ಕು. ತಾನು ಯಾರಿಗೆ ಟ್ರಸ್ಟಿಯೋ ಅವರ ಅಂದರೆ ತನ್ನ ಪೋಷಕರು (Guards) ಇಲ್ಲ ಇಲ್ಲ ಈ ಪದವೂ ಸರಿಯಿಲ್ಲ ತನ್ನ “ಕಾವಲುಗಾರರ’’ (Wards) ಎಂಬ ಪದ ಸರಿಹೋಗಬಹುದೇನೋ ಅವರ ಸಮ್ಮತಿಯಿಂದ ಅವನು ತನ್ನ ಕಮಿಶನ್ ತೆಗೆದುಕೊಳ್ಳಬೇಕು. ನೀನು ತಿಂಗಳಿಗೆ ಐದು ರೂಪಾಯಿಗಳಿಗಿಂತ ಹೆಚ್ಚು ತೆಗೆದುಕೊಳ್ಳಬಾರದು ಎಂದು ಕಾವಲುಗಾರರ ಹೇಳಿದರೆ ಅವನು ಅದನ್ನು ಪಾಲಿಸಬೇಕು. ಇಲ್ಲದಿದ್ದರೆ ಟ್ರಸ್ಟನ್ನು ಬಿಟ್ಟುಕೊಡಬೇಕು.

“ನೀವು ಇದನ್ನು ಬಿರ್ಲಾಗೆ ಹೇಳಿದ್ದೀರಾ? ಈ ಬಗ್ಗೆ ಅವರ ಹತ್ತಿರ ಮಾತಾಡಿದ್ದೀರಾ?’’

ಗಾಂಧಿಯವರು “ಹೂಂ ಯಾಕಿಲ್ಲ?’’ ಎಂದರು. ಈಗ ಒಳಬಾಗಿಲು ಮುಚ್ಚಿಕೊಳ್ಳುತ್ತಿದೆ ಅನ್ನಿಸಿತು. “ಯಾಕಿಲ್ಲ’’ ಎಂದು ಅವರು ಮತ್ತೊಮ್ಮೆ ಹೇಳಿದಾಗ ಬಾಗಿಲು ಇನ್ನು ತೆರೆಯಲಾರದಂತೆ ಮುಚ್ಚಿಕೊಂಡಿದೆ ಎಂದು ಅರ್ಥಮಾಡಿಕೊಂಡೆ. ಈ ಮೂವತ್ತೆರಡು ವರ್ಷಗಳಲ್ಲಿ ಗಾಂಧಿಯವರು ಎಂದಾದರೊಂದು ದಿನ ಕೆಲವೇ ಮೈಲುಗಳಷ್ಟು ದೂರ ಹೋಗಿ ನೋಡಿಕೊಂಡು ಬಂದಿದ್ದರೆ ತಾವು ಟ್ರಸ್ಟಿಯಲ್ಲಿಟ್ಟಿದ್ದ ನಂಬಿಕೆಗೆ ಅನುಗುಣವಾಗಿ ಟ್ರಸ್ಟ್ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಸ್ವತಃ ಕಂಡುಕೊಳ್ಳಬಹುದಾಗಿತ್ತು. ಅಥವಾ ಇದಕ್ಕಿಂತ ಮುಖ್ಯವಾಗಿ ಟ್ರಸ್ಟೀಶಿಪ್ ತತ್ವದಲ್ಲಿ ತಾವಿಟ್ಟಿರುವ ವಿಶ್ವಾಸ ಸರಿ ಇದೆಯೇ ಇಲ್ಲವೇ ಎಂದು ಕಂಡುಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅಥವಾ ಒಂದು ವೇಳೆ ನೋಡಿದ್ದರೂ ತಾವು ಏನು ನೋಡಿದರೋ ಅದನ್ನು ತಾವು ನಂಬಿಕೊಂಡ ತತ್ವಕ್ಕೆ ಹೋಲಿಸಿ ನೋಡಲು ಹೋಗುತ್ತಿರಲಿಲ್ಲ. ಈ ರೀತಿಯ ಧೋರಣೆಯನ್ನು ನನ್ನ ಭಾರತೀಯ ಸ್ನೇಹಿತರು ಕುರುಡುಗಣ್ಣು ಎಂದು ಕರೆಯುತ್ತಿದ್ದರು. ಇದು ಗಾಂಧಿಯವರಿಗೆ ಮಾತ್ರ ವಿಶಿಷ್ಟವಾದ ಲಕ್ಷಣವಲ್ಲ. ಉಚ್ಚ ಆದರ್ಶಗಳನ್ನು ಹೇಳುವ ಭಾರತದ ಇನ್ನೂ ಅನೇಕ ನಾಯಕರುಗಳ ಸ್ವಭಾವದಲ್ಲಿಯೂ ಈ ಅಂಶ ಕಾಣುತ್ತಿತ್ತು. ಇದು ಪಾಶ್ಚಿಮಾತ್ಯ ಜಗತ್ತಿನಲ್ಲಿಯೂ ತೀರ ಗೊತ್ತಿರದ ಅಂಶವೇನಾಗಿರಲಿಲ್ಲ. ಆದರೆ ಗಾಂಧಿಯಂತಹ ತೀರ ಸರಳವಾದ, ನಾಯಕನಲ್ಲಿ ಮತ್ತು ಸತ್ಯವನ್ನು ಅಷ್ಟೊಂದು ಪ್ರೀತಿಸುವ ವ್ಯಕ್ತಿಯಲ್ಲಿ ಕಂಡುಬಂದಿದ್ದು ಸ್ವಲ್ಪ ವಿಸ್ಮಯಗೊಳಿಸುವ ಸಂಗತಿಯಾಗಿತ್ತು. ಗಾಂಧೀಜಿಯವರ ಅನೇಕ ವಿಚಾರಗಳಲ್ಲಿ ವಿರೋಧಾಭಾಸಗಳಿದ್ದರೂ ಸತ್ಯವನ್ನು ಕುರಿತ ಅವರ ನಿಷ್ಠೆ ಮಾತ್ರ ತುಂಬ ನಿಜವಾದುದಾಗಿತ್ತು.

ಗಾಂಧಿಯವರಿಗೆ ಪ್ರಿಯವಾದ ಹರಿಜನರು ಮತ್ತು ಇತರ ಕಾರ್ಮಿಕ ಜನರು ದರಿದ್ರಾವಸ್ಥೆಯಲ್ಲಿ ಜೀವಿಸುತ್ತಿದ್ದರೂ ಅವರ ಸ್ಥಿತಿಗತಿಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಗಾಂಧಿಯವರಿಗೆ ಪ್ರಚೋದನೆಯಾಗಲಿಲ್ಲ. ಹೀಗಾಗುವುದಕ್ಕೆ ಅವರಲ್ಲಿ ಆಳವಾಗಿ ಮೇರೂರಿದ ಮತ್ತು ಸ್ವಭಾವತಃ ಅವರಲ್ಲಿ ರೂಪುಗೊಂಡಿದ್ದ ದೃಷ್ಟಿಕೋನವೇ ಕಾರಣ. ಗಾಂಧಿಯವರು ಕೇವಲ ಬಿರ್ಲಾ ಅಥವಾ ಬಿರ್ಲಾಗಳು, ದಾಲ್ಮಿಯಾಗಳು, ಮಹಾರಾಜರುಗಳನ್ನು ಹಾಗೂ ಸಂಪತ್ತಿನ ಮಾಲೀಕರನ್ನು ಮಾತ್ರ ರಕ್ಷಿಸಹೊರಟಿರಲಿಲ್ಲ. ಹಳೆಯ ವ್ಯವಸ್ಥೆಯನ್ನು, ಸರಳವಾದ ಯಂತ್ರಪೂರ್ವ ಯುಗವನ್ನು ಹಾಗೆ ಕಾಪಾಡಿಕೊಳ್ಳುವುದು ಅವರ ಗುರಿಯಾಗಿತ್ತು. ಇದು ಬದಲಾಗುವುದು ಅವರಿಗೆ ಬೇಕಿರಲಿಲ್ಲ.

ಈ ಸಮಾಜವನ್ನು ಪುನರ್ರಚಿಸುವುದು ಗಾಂಧಿಯವರ ಗುರಿಯಾಗಿರಲಿಲ್ಲ. ಪ್ರತಿಯೊಂದು ಮಾನವ ಹೃದಯವನ್ನೂ ಪರಿವರ್ತಿಸುವುದು ಅವರ ಗುರಿಯಾಗಿತ್ತು. ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿಯ ಒಳ್ಳೆಯತನ ಈಚೆ ಬರುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. “ಬಡವನಾಗಿರುವ ಮನುಷ್ಯ ಬಡವನಾಗೇ ಇರಬೇಕು. ಅವನಿಗೆ ಸಂಪತ್ತು ದೊರೆತರೆ ಆಸೆ ಹೆಚ್ಚುತ್ತದೆ. ಐಶ್ವರ್ಯವು ಮೈಗಳ್ಳತನಕ್ಕೆ ಪಾಪಕೃತ್ಯಗಳಿಗೆ ಎಡೆಮಾಡಿಕೊಡಬಹುದು. ವ್ಯಕ್ತಿಯು ನೂರಾರು ಮಂದಿಯ ಭವಿಷ್ಯವನ್ನು ನಿರ್ಧರಿಸುವಂತಹ ಶ್ರೀಮಂತಿಕೆ. ಅಧಿಕಾರವನ್ನು ಹೊಂದಿದ್ದರೆ ಆತನ ಹೃದಯ ಪರಿವರ್ತನೆ ಮಾಡುವುದೂ ಅಷ್ಟೇ ಮುಖ್ಯ. ಆದರೆ ಮಹಾರಾಜನಲ್ಲೇ ಆಗಲೀ, ಕೈಗಾರಿಕೋದ್ಯಮಿಯಲ್ಲೇ ಆಗಲಿ ಈ ಬದಲಾವಣೆ ಅಂತಃಪರಿವರ್ತನೆಯಿಂದ ಸಾಧ್ಯವಾಗಬೇಕೇ ಹೊರತು ಬಲಾತ್ಕಾರದಿಂದಲ್ಲ’’ ಎಂದರು ಗಾಂಧಿ.

“ಈ ವ್ಯಕ್ತಿಗಳಲ್ಲಿ ಯಾರಿಗಾದರೂ ನಾನು, ನೀವು ನಿಮ್ಮಲ್ಲಿರುವುದೆನ್ನಲ್ಲ ಕೊಟ್ಟುಬಿಡಬೇಕು ಎಂದು ಹೇಳಿದ್ದೇ ಆದರೆ ಅಲ್ಲಿಗೆ ನನ್ನ ಸೇವೆಯ ಉದ್ದೇಶವೇ ಕೊನೆಗೊಂಡಂತೆ’’ ಎಂದು ಗಾಂಧಿ ಹೇಳಿದರು.

“ಹಾಗೇಕೆ?’’ ಎಂದು ನಾನು ಕೇಳಿದೆ.

“ನಾಳೆ ಯಾರಾದರೊಬ್ಬರು ನನ್ನನ್ನು ಕುರಿತು ಆತ ಮೂಲತಃ ಒಬ್ಬ ಸರ್ವಾಧಿಕಾರಿ, ಹಿಟ್ಲರ್ ಎಂಬುದು ನಮಗೆ ಗೊತ್ತೇ ಇರಲಿಲ್ಲ’’ ಎಂದು ಹೇಳಿದರೆ ಇನ್ನೇನು?

ನನಗೆ ಇದು ಅರ್ಥವಾಗಲಿಲ್ಲ. ಇಂತಹ ಸಂತನಾದ, ಋಜುರ್ಮಾಗದಲ್ಲಿ ನಡೆಯುತ್ತಿರುವ ಹಾಗೂ ತಾನು ಬಹುಕಾಲದಿಂದ ನಂಬಿಕೊಂಡು ಬಂದ ವಿಚಾರವನ್ನು ಜಾರಿಗೆ ತರಲು ಶ್ರಮಿಸುತ್ತಿರುವ ಗಾಂಧಿಯವರ ವಿಧಾನಕ್ಕೆ ಸರ್ವಾಧಿಕಾರತ್ವ ಎಂಬ ಪದ ಪ್ರಯೋಗಿಸಬಹುದೇ? ಕೈಗಾರಿಕೋದ್ಯಮಿಗಳನ್ನು ಹಾಗೂ ಫ್ಯೂಡಲ್ ಮಹಾರಾಜರನ್ನು ಟ್ರಸ್ಟೀಶಿಪ್‌ನ ದಾರಿಯಲ್ಲಿ ಕರೆದೊಯ್ಯುವುದು ಹಿಟ್ಲರ್‌ಶಾಹಿಯಾಗುವುದೆ? ಟ್ರಾಕ್ಟರ್‌ಗಿಂತ ನೇಗಿಲಿಗೆ ಹೆಚ್ಚು ಗೌರವ ಇರುವ, ಯಂತ್ರ ಸ್ಪರ್ಶವಿರುವ ವಸ್ತುಗಳಿಗಿಂತ ಮಾನವನ ಹಸ್ತಗಳಿಂದ ತಯಾರಾದ ವಸ್ತುಗಳಿಗೆ ಹೆಚ್ಚಿನ ಮೌಲ್ಯವಿರುವ ಮಧ್ಯಕಾಲೀನ ಯುಗ ಗಾಂಧಿಯವರಿಗೆ ಪ್ರಿಯವಾಗಿತ್ತು. ಭೂಸುಧಾರಣೆ ತರುವುದಕ್ಕಾಗಿ ಇಲ್ಲಿ ಭೂಮಾಲೀರಕನ್ನೆಂತೋ ಹಾಗೇ ಬೆಳೆಯ ಗೇಣಿದಾರನ್ನು ಮನವಿ ಮಾಡಿಕೊಳ್ಳಬೇಕೆಂದು ಗಾಂಧೀ ವಿಚಾರವಾಗಿತ್ತು. ಟ್ರಸ್ಟೀಶಿಪ್ ಎಂದರೆ ಅದು ರಾಜರಿಗೂ, ಬಡವರಿಗೂ ಒಂದೇ ರೀತಿಯ ಹಕ್ಕುಗಳನ್ನು ಪ್ರತಿಪಾದಿಸುವ ಕನಸು ಎಂದು ಗಾಂಧಿಯವರು ಒಮ್ಮೆ ವಿವರಿಸಿದ್ದರು. ಬಹುಶಃ ಈ ವಿಷಯದಲ್ಲಿ ಗಾಂಧಿಯವರಿಗೂ ಅವರ ಕೆಲವು ನಿಷ್ಠಾವಂತ ಅನುಯಾಯಿಗಳಿಗೂ ಸಹಮತ ಮೂಲಲ್ಲೇ ಇಲ್ಲ. ಗಾಂಧಿಯವರಿಗೆ ಬೇರೆಲ್ಲರಿಗಿಂತ ಹೆಚ್ಚು ನಿಕಟವಾಗಿದ್ದ ವ್ಯಕ್ತಿ ನೆಹರೂ. ಈ ವ್ಯತ್ಯಾಸ ಕುರಿತು ಅವರು ಅನೇಕ ಸಲ ಮಾತಾಡಿದ್ದರು. ಬರೆದಿದ್ದರು. ಗಾಂಧಿಯವರು ಈ ಎರಡರ ನಡುವೆ ಸಮನ್ವಯ ತರಲು ವಿಫಲರಾಗಿದ್ದಾರೆ ಎಂದೂ ಅವರು ಹೇಳಿದ್ದರು. ನೆಹರೂ ಅವರ ಪ್ರಕಾರ ಒಂದು ವ್ಯವಸ್ಥಿತ ಅರ್ಥವ್ಯವಸ್ಥೆ ಇಲ್ಲದೆ ಹಿಂದುಳಿದಿರುವ ಭರತವನ್ನು ಸುಧಾರಿಸಬೇಕಾದರೆ ರಾಜ್ಯದ ನಿಯಂತ್ರಣದಲ್ಲಿ ಕೈಗಾರಿಕಾ ಯೋಜನೆಗಳನ್ನು ರೂಪಿಸುವ ಅಗತ್ಯವಿತ್ತು. ಎರಡು ಹೊತ್ತಿನ ಕೂಲಿಗೆ ಗತಿಯಿಲ್ಲದಿರುವ ಸಹಸ್ರಾರು ಜನರಿಗೆ ಸರಿಯಾದ ರೀತಿಯಲ್ಲಿ ಆಹಾರ ಒದಗಿಸಬೇಕಾದರೆ ಆದಷ್ಟು ಬೇಗನೆ, ಪೂರ್ಣಪ್ರಮಾಣದಲ್ಲಿ ವೈಜ್ಞಾನಿಕ ಕೃಷಿಯನ್ನು ಜಾರಿಗೆ ತರುವುದು ಅಗತ್ಯ ಎಂದು ನೆಹರೂ ಹೇಳುತ್ತಿದ್ದರು.

“ನೀವು, ವ್ಯವಸಾಯದಲ್ಲಿ ವಿಜ್ಞಾನ ಮತ್ತು ಯಂತ್ರಗಳ ಬಳಕೆಯನ್ನು ವೈಯಕ್ತಿಕವಾಗಿ ವಿರೋಧಿಸುತ್ತೀರಾ’’ ಎಂದು ಗಾಂಧಿಯವರನ್ನು ಕೇಳಿದೆ. ಇದಕ್ಕೆ “ಹೌದು’’ ಎಂದು ಹೇಳಿದ ಗಾಂಧಿಯವರು “ಟ್ರ್ಯಾಕ್ಟರ್‌ನ ಬಳಕೆ ಮನುಷ್ಯನ ಶ್ರಮಕ್ಕೆ ಬದಲಿಯಾಗಿ ಬರುತ್ತದೆ. ಇದರಿಂದ ಮನುಷ್ಯನ ಕೈಗಳಿಗೆ ಕೆಲಸವಿಲ್ಲದಂತಾಗುತ್ತದೆ. ರಾಜ್ಯದ ನಿಯಂತ್ರಣದಲ್ಲಿರುವ ಅಥವಾ ರಾಷ್ಟ್ರೀಕೃತ ಕೈಗಾರಿಕೆಗಳಿಂದ ದೇಶವು ಗುಲಾಮರ ರಾಷ್ಟ್ರವಾಗುತ್ತದೆ’’ ಎಂದರು. ಭಾರತದ ಬಡತನ ಹಾಗೂ ಹಿಂದುಳಿದಿರುವಿಕೆಯ ನಿವಾರಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ “ಜನ ಪರಿಶ್ರಮದಿಂದ, ಮಿದುಳನ್ನು ಬಳಸಿ ಕೆಲಸ ಮಾಡಬೇಕು. ಕೈ ಕಸುಬುಗಳಿಂದ ಭಾರತವು, ಅಮೆರಿಕಾವಷ್ಟೇ ಅಲ್ಲ ಜಗತ್ತಿನ ಬೇರಾವುದೇ ದೇಶಕ್ಕಿಂತ ಸಂತೋಷಭರಿತ ದೇಶವಾಗಬಹುದು.’’ ಎಂದು ನನ್ನತ್ತ ನೋಡಿ ನಕ್ಕರು. “ಆದರೆ ಅದೆಲ್ಲ ಬರೀ ಬಡಾಯಿ ಅಷ್ಟೆ’’ ಎಂದರು.

“ಇಲ್ಲ, ಇದು ಬಡಾಯಿಯ ಮಾತಲ್ಲ. ಈಚಿನ ದಿನಗಳಲ್ಲಿ ಅಮೆರಿಕ ಸಂಪೂರ್ಣ ಸಂತೋಷಭರಿತವೇನೂ ಆಗಿಲ್ಲ’’ ಎಂದೆ. ಅಮೆರಿಕಾ ವಿಷಯ ಬಂದ ಕೂಡಲೇ ನಾನು ಗಾಂಧಿಯವರೊಂದಿಗೆ ಬಹಳ ದಿನಗಳಿಂದಲೂ ಚರ್ಚಿಸಬೇಕು ಅಂದುಕೊಂಡಿದ್ದ ವಿಷಯವನ್ನು ಪ್ರಸ್ತಾಪಿಸಿದೆ. ಪರಮಾಣು ಅಸ್ತ್ರಗಳ ತಯಾರಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರಮಾಣು ಯುದ್ಧ ಭೀತಿಯ ಬಗ್ಗೆ ಪ್ರಸ್ತಾಪಿಸಿದೆ. ಹಿಂಸೆಯ ಪರಮಾತಿರೇಕವಾದ ಪರಮಾಣು ಅಸ್ತ್ರಗಳು ನಮ್ಮ ಅನಿಶ್ಚಿತ ಕೈಗಳಲ್ಲಿವೆ. ಈ ವಿಷಯದಲ್ಲಿ ಈ ಶಾಂತಿದೂತನ ಮಾರ್ಗದರ್ಶನವೇನಿರಬಹುದು ಎಂಬುದು ನನ್ನ ಕುತೂಹಲವಾಗಿತ್ತು. ಗಾಂಧಿಯವರೊಡನೆ ನಾನು ಈ ವಿಷಯಗಳ ಬಗ್ಗೆ ಮಾತಾಡುತ್ತಿರುವಾಗ ಗಾಂಧಿಯವರನ್ನು ಕುರಿತು ನನ್ನ ಮನೋಭಾವ ಬದಲಾಗುತ್ತಿರುವುದರ ಅನುಭವ ನನಗೆ ಆಗತೊಡಗಿತು. ಈ ಮನುಷ್ಯ ಸೊಂಟಕ್ಕೆ ತುಂಡು ಪಂಚೆ ಸುತ್ತಿದ್ದ ಎತ್ತಿನ ಗಾಡಿ ಸಂಸ್ಕೃತಿಯ ಬಗ್ಗೆ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಪರಿಹಾರಗಳ ಬಗ್ಗೆ ಚಿತ್ರವಿಚಿತ್ರ ವಾದವಿಚಾರಗಳನ್ನುಳ್ಳ ಒಬ್ಬ ವಿಚಿತ್ರ ಆಸಾಮಿಯಾಗಿರದೆ ಒಬ್ಬ ಮಹಾಪುರುಷರಾಗಿ ಕಾಣತೊಡಗಿದ್ದರು.

ಭಾರತದ ಸಹಸ್ರಾರು ಮಂದಿ ಬಾಪು, ತಂದೆ ಎಂದು ಒಪ್ಪಿಕೊಂಡಿರುವ ಈ ವ್ಯಕ್ತಿಯು ನಿಸ್ಸಂದೇಹವಾಗಿಯೂ ಒಬ್ಬ ಮಹಾಪುರುಷ ಎಂದು ನನಗೆ ಮನವರಿಕೆಯಾಗಲು ಸಾಕಷ್ಟು ಕಾಲ ಹಿಡಿಯಿತು. ನನ್ನಂತಹ ಅಮೆರಿಕನ್ ಪ್ರಜೆಗೆ ಯಂತ್ರ ಯುಗ ಕುರಿತ ಅವರ ಪ್ರಾಚೀನ ಆಲೋಚನಾಧಾರೆ ಒಪ್ಪಿತವಾಗುವುದು ಕಷ್ಟ, ಯಂತ್ರವನ್ನು ನಿಜಕ್ಕೂ ಅದ್ಭುತ ಸೃಷ್ಟಿ ಎಂದು ಒಪ್ಪಿಕೊಂಡಿರುವ ನನಗೆ ಗಾಂಧಿಯವರ ವಿಚಾರಗಳು ಈಗಲೂ ಒಪ್ಪಿಗೆಯಾಗುವುದಿಲ್ಲ.

ಆದರೆ, ತೀರಾ ಅವ್ಯವಸ್ಥೆಯಲ್ಲಿದ್ದ ದೇಶವನ್ನು ಗಾಂಧಿ ಎಷ್ಟೊಂದು ಧೈರ್ಯದಿಂದ ಮತ್ತು ಅಧಿಕಾರಯುತವಾಗಿ ಮುನ್ನಡೆಸಿದ್ದನ್ನು ನೋಡಿದಾಗ ಮೊದಲ ಬಾರಿಗೆ ನನಗೆ ಗಾಂಧಿಯವರು ಈ ದೇಶಕ್ಕೆ ಎಷ್ಟೊಂದು ಮುಖ್ಯ ಎಂಬುದು ಮನದಟ್ಟಾಗಿತ್ತು. ಇತ್ತೀಚಿನ ದಿನಗಳಲ್ಲಿ ಭಾರತದ ಒಂದು ಮಹತ್ವದ ಸಂದರ್ಭವನ್ನು ನಾನು ನೋಡಿದ್ದೆ. ಧಾರ್ಮಿಕ ವಿದ್ವೇಷದ ಬೆಂಕಿಯನ್ನು ತಣಿಸಲು ಗಾಂದಿ ತಮ್ಮ ಜೀವನವನ್ನೇ ಪಣವಾಗಿಟ್ಟಿದ್ದರು. ನೆಹರೂ ಹೇಳಿದಂತೆ, ಮುಳುಗಿಹೋಗುತ್ತಿರುವ ಜಗತ್ತಿನಲ್ಲಿ ತಮ್ಮ ಉದ್ದೇಶ ಸಾಧನೆಗೆ ಬದ್ಧವಾಗಿದ್ದ ಗಾಂಧಿಯವರು ಒಂದು ಅಚಲಶಿಲೆಯಂತಿದ್ದರು. ಸತ್ಯದ ಬೆಳಕನ್ನು ತೋರಿಸಿದ್ದರು. ನಮ್ಮಪಾಶ್ಚಿಮಾತ್ಯ ಜಗತ್ತು ಸಹ ಇದೇ ರೀತಿ ಮುಳುಗುವ ಅಪಾಯದಲ್ಲಿದೆ. ಇಂಥ ಸಂದರ್ಭದಲ್ಲಿ ನಾವು ಗಾಂಧಿಯವರ ದೃಢ ನಿಲುವಿನಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕಾಗಿದೆ ಎಂದು ನನಗನ್ನಿಸಿತು.

“ಅಮೆರಿಕಾ ಅಟಂಬಾಂಬ್ ತಯಾರಿಕೆಯನ್ನು ನಿಲ್ಲಿಸಬೇಕೆ?’’ ಎಂದು ಗಾಂಧಿಯನ್ನು ಕೇಳಿದೆ. ಅವರು ಒಂದಿಷ್ಟೂ ಹಿಂಜರಿಕೆಯಿಲ್ಲದೆ “ಹೌದು ನಿಲ್ಲಸಬೇಕು’’ ಎಂದು ಹೇಳಿದರು. ಈ ವಿಷಯದ ಬಗ್ಗೆ ನಾವು ತುಂಬಾ ಹೊತ್ತು ಮಾತಾಡಿದೆವು. ಗಾಂದೀಜಿ ಮಧ್ಯೆಮಧ್ಯೆ ಏನನ್ನೋ ಆಲೋಚಿಸುತ್ತಾ ಒಮ್ಮೊಮ್ಮೆ ಮೌನ ತಾಳುತ್ತಾ, ಅತ್ಯಂತ ಕಾಳಜಿಯಿಂದ ಮಾತಾಡಿದರು. ನಾನು ಅವರ ಮಾತುಗಳನ್ನು ಬರೆದುಕೊಳ್ಳುತ್ತಾ ಹೋದೆ. ಆದರೆ ಜಗತ್ತಿಗೆ ಇದು ಅವರು ಕೊಟ್ಟ ಕೊನೆಯ ಸಂದೇಶವಿರಬಹುದು ಎಂದು ನಮ್ಮಿಬ್ಬರಿಗೂ ಆಗ ತಿಳಿಯಲಿಲ್ಲ. ಗಾಂಧಿಯ ಸಮ್ಮುಖದಲ್ಲಿರುವಾಗ ಯಾರೋ ಒಬ್ಬ ಅಸಾಧಾರಣ ಪುರುಷನ ಎದುರಿಗಿರುವಂತೆ ಅನ್ನಿಸುತ್ತಿತ್ತೆ ಎಂದು ನನ್ನನ್ನು ಅನೇಕರು ಕೇಳಿದ್ದಾರೆ. ಅದಕ್ಕೆ “ಹೌದು’’ ಎಂಬುದೇ ನನ್ನ ಉತ್ತರ. ಬೇರೆ ಎಲ್ಲ ದಿನಗಳಿಗಿಂತ ಆ ಕೊನೆಯ ದಿನ ನನಗೆ ಹಾಗನ್ನಿಸಿತು. ನನ್ನನ್ನು ಅಷ್ಟೆಲ್ಲ ಕಾಡುತ್ತಿದ್ದ ಸಂದಿಗ್ಧತೆಗಳು ದೂರವಾಗಿದ್ದವು. ನಮ್ಮೆಲ್ಲರಿಗಿ,ತ ಅವರು ಬಹಳ ಮುಂದೆ ಹೋಗಿದ್ದರು. “ಗಾಂಧೀ ಈ ಮಣ್ಣಿನ ಮನುಷ್ಯನಲ್ಲ. ಆತ ತುಂಬ ಅಪರೂಪದ ಕಮ್ಮಟದಲ್ಲಿ ವಿಶೇಷ ವಸ್ತುವಿನಿಂದ ಎರಕಗೊಂಡ ವ್ಯಕ್ತಿ’’ ಎಂದು ನೆಹರೂ ಹೇಳುತ್ತಿದ್ದರು. ಗಾಂಧಿಯವರನ್ನು ಕೊನೆಯ ಗಳಿಗೆಯಲ್ಲಿ ನೋಡುವಾಗ ಯಾರೋ ಅಲೌಕಿಕ ವ್ಯಕ್ತಿಯೊಬ್ಬ ಆ ಕಣ್ಣುಗಳೊಳಗಿಂದ ನೋಡುತ್ತಿದ್ದಾನೆ ಅನ್ನಿಸಿತು.

“ಆಟಂಬಾಬನ್ನೂ ನೀವು ಅಸಿಂಸೆಯಿಂದಲೇ ಎದುರಿಸುತ್ತೀರಾ?’’ ಎಂದು ನಾನು ಕೇಳಿದೆ.

“ಹೌದು, ಅದಕ್ಕೆ ನಾನು ಹೇಗೆ ಉತ್ತರಿಸಲಿ’’ ಎನ್ನುತ್ತ ವೇಗವಾಗಿ ಚರಕಾ ತಿರುಗಿಸಿದರು ಗಾಂಧಿ. “ನಾನು ಅದನ್ನು ಪ್ರಾರ್ಥನಾ ಕ್ರಿಯೆಯಿಂದ (Prayerful Action) ಎದುರಿಸುತ್ತೇನೆ.’’

“ಅದು ಯಾವ ರೂಪದಲ್ಲಿರುತ್ತದೆ’’ ಎಂದು ನಾನು ಕೇಳಿದೆ. ಅದಕ್ಕೆ ಅವರು ಹೇಳಿದರು “ನಾನು ಭೂಗತನಾಗುವುದಿಲ್ಲ. ಅಡಗುದಾಣಗಳಿಗೆ ಹೋಗುವುದಿಲ್ಲ. ನಾನು ಹೊರಗೆದ್ದು ಬಂದು ತಲೆ ಎತ್ತಿ ನಿಲ್ಲುತ್ತೇನೆ. ತನ್ನ ಬಗ್ಗೆ ಈ ವ್ಯಕ್ತಿಗೆ ಯಾವ ದುರದ್ದೇಶವೂ ಇಲ್ಲ ಎಂದು ನನ್ನ ಮುಖದಲ್ಲಿ ಪೈಲಟ್‌ಗೆ ಕಾಣುವಂತೆ ನಿಲ್ಲುತ್ತೇನೆ. ಅಷ್ಟು ದೂರದಿಂದ ಪೈಲಟ್‌ಗೆ ನನ್ನ ಮುಖ ಕಾಣುವುದಿಲ್ಲ ಎಂದು ಗೊತ್ತು. ಆದರೆ ನಮ್ಮ ಹೃದಯದಲ್ಲಿ ಆತನ ವಿರುದ್ದ ಯಾವುದೇ ಕೇಡಿನ ಭಾವನೆಯಿಲ್ಲ ಎಂಬುದು ಆತನಿಗೆ ಗೊತ್ತಾಗುತ್ತದೆ. ಆಗ ಆತನ ಕಣ್ಣು ತೆರೆಯುತ್ತದೆ. ಹಿರೋಶಿಮಾದಲ್ಲಿ ಸತ್ತ ಆ ಸಹಸ್ರಾರು ಮಂದಿ ಕೂಡ ಇಂಥದೇ ಪ್ರಾರ್ಥನಾ ಕ್ರಿಯೆಯಲ್ಲಿ ಸತ್ತಿದ್ದರೆ ಹೃದಯದಲ್ಲಿ ಇಂಥ ಪ್ರಾರ್ಥನೆ ತುಂಬಿಕೊಂಡು ಬಯಲಿಗೆ ಬಂದಿದ್ದರೆ ಆ ಯುದ್ದ ಇಷ್ಟು ಕಲಂಕಕರವಾದ ರೀತಿಯಲ್ಲಿ ಕೊನೆಯಾಗುತ್ತಿಲಿಲ್ಲ. ಈಗಿನ ಪ್ರಶ್ನೆಯೆಂದರೆ ಗೆದ್ದವರು ಯಾರು? “Whether the victors are really victors or victims?” ಗಾಂಧಿ ತುಂಬ ನಿಧಾನವಾಗಿ ಮಾತಾಡುತ್ತಿದ್ದರು. ಅವರ ದನಿ ತುಂಬ ಮೆಲುವಾಗಿತ್ತು. “ನಮ್ಮದೇ ದುರಾಸೆ ಹಾಗೂ ಕರ್ತವ್ಯಲೋಪಗಳಿಂದಾಗಿ ಜಗತ್ತು ಈಗ ಶಾಂತಿಯನ್ನು ಕಳೆದುಕೊಂಡಿದೆ. ಇದು ನಿಜಕ್ಕೂ ಭಯಂಕರ’’ ಎಂದರು. ನನ್ನ ಸಮಯ ಮುಗಿದಿತ್ತು. ನಾನು ಹೊರಡುತ್ತೇನೆ ಎಂದು ಗಾಂಧಿಯವರಿಗೆ ಕೈ ಜೋಡಿಸಿ ನಮಸ್ಕಾರ ಹೇಳಿದೆ. ಆದರೆ ಗಾಂಧಿಯವರು ನನ್ನತ್ತ ಕೈ ಚಾಚಿ ಪಾಶ್ಚಾತ್ಯಶೈಲಿಯಲ್ಲಿ ಹಾರ್ದಿಕವಾಗಿ ಕೈಕುಲಿಕಿದರು. ನಾನು ಅವರತ್ತ ತಿರುಗಿ “Good Bye, Good luck” ಹೇಳಿ ಹೊರಬಂದೆ.

ಇದಾಗಿ ಕೆಲವೇ ಗಂಟೆಗಳಾಗಿದ್ದವು. ಅಟಂಬಾಂಬನ್ನು ಸಹ ಅಹಿಂಸೆಯಿಂದಲೇ ಎದುರಿಸಬಹುದು ಎಂದು ನಂಬಿದ್ದ ಈ ವ್ಯಕ್ತಿ ರಿವಾಲ್ವರ್‌ನ ಬುಲೆಟ್‌ಗೆ ಬಲಿಯಾಗಿದ್ದ. ನಮಗೆಲ್ಲ ಈಗ ತಿಳಿದಿರುವಂತೆ ಅವರು ಕೆಳಗೆ ಬೀಳುವಾಗ ಕೈಗಳನ್ನು ಪ್ರಾರ್ಥನಾ ಭಂಗಿಯಲ್ಲಿ ಮೇಲೆತ್ತಿ ಹಿಡಿದ್ದರು. ಅವರ ಬಾಯಿಂದ “ರಾಮ್’’ ಎಂಬ ಶಬ್ದ ಹೊರಟಿತ್ತು.

* * *