ಹಂತಕನು ಗುಂಡುಗಳನ್ನು ಹಾರಿಸಿದಾಗ ನಾನು ಆ ಜಾಗದಿಂದ ಕೆಲವೇ ಬೀದಿಗಳಷ್ಟು ಆಚೆಗಿದ್ದೆ. ನನಗೆ ಸುದ್ದಿ ತಿಳಿಸಲು ನನ್ನ ಸ್ನೇಹಿತರು ತಕ್ಷಣವೇ ನನ್ನನ್ನು ಹುಡುಕಿಕೊಂಡು ಬಂದಿದ್ದರು. ಸ್ವಲ್ಪ ಹೊತ್ತಿಗೆಲ್ಲ ನಾನು ಅಲ್ಬುಕರ್ಕ್ ರಸ್ತೆಯ ಆ ಭವನದ ಬಳಿ ಬಂದಿದ್ದೆ. ಭಾರತದಲ್ಲಿ ಸುದ್ದಿ ಬಹಳ ಬೇಗ ಹರಡುತ್ತದೆ. ಅಷ್ಟರಲ್ಲಾಗಲೆ ಸಾವಿರಾರು ಜನ ದುರಂತದ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಬಿರ್ಲಾ ಭವನದ ಸುತ್ತ ಸೇರಿದ ಜನರ ಗುಂಪಿನ ನಡುವೆ ದಾರಿ ಮಾಡಿಕೊಂಡು ಒಳಹೋಗುವುದೆ ಕಷ್ಟವಾಯಿತು. ಆದರೆ ಅಲ್ಲಿದ್ದ ಕಾವಲುಗಾರರು ನನ್ನ ಗುರುತು ಹಿಡಿದು ನನ್ನನ್ನು ಒಳಗೆ ಬಿಟ್ಟರು. ಗಾಂಧೀಜಿಯನ್ನು ಮಲಗಿಸಿದ್ದ ಕೋಣೆಗೆ ನಾನು ಹೋದೆ. ಗಾಂಧೀಜಿ ಮೃತರಾಗಿ ಇನ್ನೂ ಒಂದು ಗಂಟೆ ಕಾಲವೂ ಕಳೆದಿರಲಿಲ್ಲ. ಅವರ ತಲೆ ಅವರ ಕಾರ್ಯದರ್ಶಿ ಬ್ರಿಜ ಕೃಷ್ಣರವರ ತೊಡೆಯ ಮೇಲಿತ್ತು. ಗಾಂಧೀಜಿ ಬದುಕಿದ್ದಾಗಲೂ ಸದಾ ಅವರ ಸುತ್ತಮುತ್ತಲಲ್ಲೆ ಇರುತ್ತಿದ್ದ ಸೋದರನ ಮೊಮ್ಮಕ್ಕಳು, ಸೊಸೆಯರು ಮೊದಲಾದ ಬಂಧುಬಳಗದವರೆಲ್ಲ ಸಮೀಪದಲ್ಲಿಯೇ ಇದ್ದರು. ಗಾಂಧಿಯವರ ಮುಖ ಆಗಲೇ ಬದಲಾಗಿತ್ತು. ಅವರು ನಿದ್ದೆಯಲ್ಲಿದ್ದಾಗಲೂ ಷವರ ಮುಖಕ್ಕೆ ಅಸಾಧಾರಣ ಎಚ್ಚರದ ಸ್ಥಿತಿಯನ್ನು ತಂದುಕೊಡುತ್ತಿದ್ದ ಕಾಂತಿಯುಕ್ತ ಕಂದುಚರ್ಮ ತನ್ನ ಬಿಗಿ ಕಳೆದುಕೊಂಡಿತ್ತು. ಕೋಣೆಯೊಳಗೆ ಗಾಢವಾದ ಮೌನ. ಕೆಲವರು ಅಳುತ್ತಿದ್ದರು. ಅಲ್ಲಿ ಆವರಿಸಿದ್ದ ಮೌನದಲ್ಲಿ ಗೀತಾಪಠಣ ಮಾತ್ರ ಕಿವಿಗೆ ಕೇಳಿಸುತ್ತಿತ್ತು. ಗಾಂಧೀಜಿಗೆ ಸ್ವಲ್ಪ ದೂರದಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಕುಳಿತಿದ್ದ ಹೆಂಗಸರ ಗುಂಪು ಗೀತಾಪಠಣ ಮಾಡುತ್ತಿತ್ತು. ಹಿಂದೂಗಳಲ್ಲಿ ಯಾರಾದರೂ ಸಾವಿಗೀಡಾದಾಗ ಪಠಣ ಮಾಡಲಾಗುವ ಗೀತೆಯ ಭಾಗ ಅದು. ಗಾಂಧೀಜಿಯವರ ಸಂದರ್ಭಕ್ಕೆ ಈ ಪಠಣ ಇನ್ನೂ ವಿಶೇಷವಾಗಿ ಹೊಂದಿಕೊಳ್ಳುತ್ತಿತ್ತು. ಅರ್ಜುನ ತನ್ನ ಸೋದರರು, ರಕ್ತಸಂಬಂಧಿಗಳೊಂದಿಗೆ ಪರಸ್ಪರ ಹೋರಾಡಲು ಮನಸ್ಸು ಬಾರದೆ ಶಸ್ತ್ರವನ್ನು ಕೆಳಗಿಳಿಸುತ್ತಾನೆ. ಶ್ರೀ ಕೃಷ್ಣ ಅವನನ್ನು ಕುರಿತು ನಮ್ಮ ಕೆಲಸವನ್ನು ನಾವು ಮಾಡಬೇಕು. ಅದರ ಫಲಾಫಲಗಳು ಭಗವಂತನಿಗೆ ಸೇರಿವೆ. ಎಲ್ಲವೂ ಭಗವಂತನಿಂದಲೇ ಬರುತ್ತದೆ. ಕೊನೆಗೆ ಎಲ್ಲವೂ ಭಗವಂತನಿಗೇ ಸೇರುತ್ತದೆ ಎಂದು ಬೋಧಿಸುತ್ತಾನೆ.

ಹೆಂಗಸರ ಪಠಣ ಹಾಗೇ ಮುಂದುವರೆದಿತ್ತು. ಆ ಕೋಣೆಯಲ್ಲಿ ತುಂಬಿದ್ದ ಗಾಢ ದುಃಖವನ್ನು ಕಲಕುವಂತೆ ಗಾಜು ಒಡೆದ ಶಬ್ದ ಕೇಳಿಸಿತು. ಹೊರಗಿನ ಜನರ ನೂಕುನುಗ್ಗಲಿನ ಒತ್ತಡಕ್ಕೆ ಕಿಟಕಿ ಬಾಗಿಲುಗಳ ಗಾಜು ಒಡೆದಿದ್ದವು. ಮಹಾತ್ಮರ ಕೊನೆಯ ದರ್ಶನಕ್ಕಾಗಿ ಜನರ ಹಂಬಲವನ್ನು ವರ್ಣಿಸುವುದು ಸಾಧ್ಯವಿಲ್ಲ. ಮಹಾತ್ಮಾಜಿ ಸಾಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೇವಲ ಹತ್ತು ದಿನಗಳ ಹಿಂದೆಯಷ್ಟೇ ಗಾಂಧೀಜಿಯ ಮೇಲೆ ಯಾರೋ ನಾಡಬಾಂಬನ್ನು ಎಸೆದಿದ್ದರು. ಕೆಲವೇ ಗಜಗಳ ಅಂತರದಲ್ಲಿ ಅದು ಗುರಿ ತಪ್ಪಿತ್ತು. ಆದರೆ ಅದು ಗಾಂಧಿಯವರನ್ನು ಹತ್ಯೆ ಮಾಡಬೇಕೆಂದಿದ್ದ ಮತಾಂಧ ಹಿಂದೂ ಹಂತಕರ ಮೊದಲ ಪ್ರಯತ್ನವೆಂದು ಯಾರಿಗೂ ಗೊತ್ತಾಗಲಿಲ್ಲ. ಗಾಂಧಿಯವರು ಇತ್ತೀಚಿನ ಉಪವಾಸ ಆರಂಭಿಸಿದಾಗ ಅವರ ಪ್ರಾಣದ ಬಗ್ಗೆ ತೀವ್ರ ಆತಂಕದ ಸ್ಥಿತಿ ಉಂಟಾಗಿತ್ತು. ಅಂತಹ ಸಂದರ್ಭದಲ್ಲಿಯೂ ಯಾರನ್ನಾದರೂ ಗಾಂಧಿಯವರ ಪ್ರಾಣಕ್ಕೆ ಅಪಾಯವಿದೆಯೇ ಎಂದು ಪ್ರಶ್ನಿಸಿದರೆ ಇಲ್ಲ. ನಾವು ಅದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಆ ಸಾವು ಸಂಭವಿಸಿಯೇ ಬಿಟ್ಟಿತು.

ಆ ದುರಂತ ತುಂಬಿದ ಕೋಣೆಯಿಂದ ನಾನು ಮೆಲ್ಲಗೆ ಹೊರಗೆ ಬಂದೆ. ದುಃಖಿಸುತ್ತಿದ್ದ ಜನಗಳ ಮಧ್ಯೆ ದಾರಿಮಾಡಿಕೊಂಡು ಗಾಂಧಿಯವರು ಕೊನೆಯುಸಿರೆಳದ ಜಾಗಕ್ಕೆ ಹೋದೆ. ಅಲ್ಲಿ ಬೆಳಕಿನ ಪ್ರಭೆಯೊಂದು ಹರಡಿತ್ತು. ಯಾರೋ ಒಂದು ಮೇಣದ ಬತ್ತಿ ಹಚ್ಚಿಟ್ಟಿದ್ದರು. ಕತ್ತಲು ತುಂಬಿದ ರಾತ್ರಿಯಲ್ಲಿ ಅದರ ಹೊಂಬಣ್ಣದ ಬೆಳಕು ಹರಡಿತ್ತು. ಕೆಲವು ಕಡ್ಡಿಗಳನ್ನು ಆ ಸ್ಥಳದಲ್ಲಿ ತ್ರಿಕೋನಾಕೃತಿಯಲ್ಲಿ ಜೋಡಿಸಿ ಸ್ಥಳದ ಗುರುತು ಮಾಡಿದ್ದರು. ಗಾಂಧಿಯವರು ಬಿದ್ದ ಸ್ಥಳವನ್ನು ನಿಖರವಾಗಿ ಗುರುತಿಸುವುದಕ್ಕಾಗಿ ಒಂದು ತಗಡಿನ ಡಬ್ಬಿಯನ್ನು ಅಲ್ಲಿಟ್ಟಿದ್ದರು. ಸ್ವತಃ ಗಾಂಧಿಯವರೇ ಅಲ್ಲಿದ್ದಾರೇನೋ ಎಂಬಂತೆ ಜನರು ಅದರ ಮುಂದೆ ಭಕ್ತಿಯಿಂದ ಬಾಗಿ ನಮಸ್ಕರಿಸುತ್ತಿದ್ದರು. ಹೀಗೆ ನಮಸ್ಕರಿಸುತ್ತಿದ್ದವರಲ್ಲಿ ಎಲ್ಲ ಧರ್ಮಗಳವರೂ ಇದ್ದರು. ಅಲ್ಲಿದ್ದ ಮಣ್ಣನ್ನು ಕರವಸ್ತ್ರಗಳಲ್ಲಿ ಕಟ್ಟಿಕೊಂಡು ಹೋಗುತ್ತಿದ್ದರು.

ಆಗ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಹೊಸ ಸಂಚಲನ ಉಂಟಾಯಿತು. ಗುಂಪಿನೊಂದಿಗೆ ನಾನೂ ತಳ್ಳಿಸಿಕೊಂಡ ಭವನದ ಮುಂಭಾಗಕ್ಕೆ ಬಂದಿದ್ದೆ. ಅಲ್ಲಿ ನೆಹರೂ ಜನರನ್ನುದ್ದೇಶಿಸಿ ಮಾತಾಡುವುದಕ್ಕಾಗಿ ಮತ್ತೊಮ್ಮೆ ಬಿರ್ಲಾ ಗೇಟಿನ ಮೇಲೆ ಹತ್ತಿ ನಿಂತಿದ್ದರು. ಬೀದಿ ದೀಪದ ಬೆಳಕು ಅವರ ಮೇಲೆ ಬಿದ್ದಿತ್ತು. ಗಾಂಧೀಜಿಯ ಸಾವಿನ ನೋವು ಮತ್ತು ಆಘಾತ ನೆಹರೂ ಮುಖದಲ್ಲಿ ವ್ಯಕ್ತವಾಗಿತ್ತು. “ಮಹಾತ್ಮಾಜಿ ತೀರಿಕೊಂಡರು. ಮಹಾಬೆಳಕೊಂದು ಆರಿಹೋಯಿತು. ನಮ್ಮೆಲ್ಲರ ಮೇಲೂ ದುಃಖ ವ್ಯಥೆಯ ಕಾರ್ಮೋಡ ಕವಿದಿದೆ. ಗಾಂಧಿಯವರು ಸ್ವರ್ಗದಿಂದಲೇ ನಮಗೆ ದಾರಿ ತೋರಿಸುತ್ತಾರೆ. ಆದರೆ ಈ ಮೊದಲು ಕಷ್ಟ ಎದುರಾದಾಗಲೆಲ್ಲ ಸಮಾಧಾನ ಪಡೆಯುವುದಕ್ಕಾಗಿ ಅವರ ಬಳಿ ಓಡುತ್ತಿದ್ದಂತೆ ಈಗ ಮಾಡುವುದಕ್ಕಾಗುವುದಿಲ್ಲ…’’ ಈ ಮಾತಗಳನ್ನು ಹೇಳುವಾಗ ನೆಹರೂ ನಿಜವಾಗಿಯೂ ದುಃಖ ತಡೆಯಲಾರದೆ ಅಳತೊಡಗಿದರು. ಬಹುಶಃ ಬೇರೆ ಯಾವ ನಾಯಕರೂ ಸಹ ತೊಂದರೆಯ ಸಂದರ್ಭದಲ್ಲಿ ಸಮಾಧಾನ ಹಾಗೂ ಧೈರ್ಯಕ್ಕಾಗಿ ಗಾಂಧಿಯವರನ್ನು ನೆಹರೂ ಅವರಷ್ಟು ಹೆಚ್ಚಾಗಿ ಅವಲಂಬಿಸಿರಲಿಲ್ಲ. ನೆಹರೂ ಅತ್ತಾಗ ಇತರ ಸಾವಿರಾರು ಮಂದಿ ಅಳತೊಡಗಿದ್ದರು. ನಂತರ ನೆಹರು ತುಂಬಾ ಪ್ರಯಾಸದಿಂದ ತಮ್ಮಮಾತಿನ ಕೊನೆಯ ವಾಕ್ಯಗಳನ್ನು ಹೇಳಿದರು: “ಗಾಂಧೀಜಿಯವರು ಯಾವ ಆದರ್ಶಗಳಿಗಾಗಿ ಬದುಕಿದ್ದರೋ ಮತ್ತು ಯಾವ ಉದ್ದೇಶಕ್ಕಾಗಿ ಮೃತರಾದರೋ ಅಂತಹ ಆದರ್ಶಗಳಿಗಾಗಿ ನಮ್ಮನ್ನು ನಾವು ಮುಡಿಪಾಗಿಟ್ಟುಕೊಳ್ಳುವ ಮೂಲಕ ಮಾತ್ರವೇ ಅವರ ಆತ್ಮಕ್ಕೆ ನಮ್ಮ ಅತ್ಯುತ್ತಮ ಸೇವೆ ಸಲ್ಲಿಸಬಹುದು.’’

ಆ ರಾತ್ರಿಯೆಲ್ಲ ಹಳೆಯ ದೆಹಲಿ ಮತ್ತು ಹೊಸ ದೆಹಲಿಯ ರಸ್ತೆಗಳಲ್ಲಿ ಜನವೋ ಜನ. ಈ ದುರಂತ ಸಂಭವಿಸಿದ ಎಷ್ಟೋ ಗಂಟೆಗಳ ನಂತರ ಮೊತ್ತಮೊದಲಬಾರಿಗೆ ಹಂತಕನ ಹೆಸರು ಕೇಳಿ ಬಂತು. ಈ ಕೃತ್ಯಮಾಡಿದವನು ಪೂನಾದ ಒಬ್ಬ ಆರ್.ಎಸ್.ಎಸ್. ಪತ್ರಿಕಾ ಸಂಪಾದಕ. ವಕ್ರ ಮನಸ್ಸಿನ ಯುವಕ ನಾಥೂರಾಂ ವಿನಾಯಕ ಗೊಡ್ಸೆ ಎಂದು ತಿಳಿಯಿತು. ಆತನನ್ನು ತಕ್ಷಣವೇ ಬಂಧಿಸಿ, ಲಾಕಪ್‌ನಲ್ಲಿಡಲಾಗಿತ್ತು. ಆದರೆ ದುಃಖಿತ ಜನರ ದೃಷ್ಟಿಯಲ್ಲಿ ಇದು ಯಾರೋ ಒಬ್ಬ ವ್ಯಕ್ತಿ ಮಾಡಿದ ಕೃತ್ಯವಾಗಿರಲಿಲ್ಲ. ಮುಖಹೀನ ಶಕ್ತಿಯೊಂದು ಈ ಕೃತ್ಯ ಮಾಡಿತ್ತು. ಅಷ್ಟರಮಟ್ಟಿಗೆ ಅಭಿಪ್ರಾಯ ಸರಿಯಾಗೇ ಇತ್ತು.

ಧರ್ಮ ಸಹಿಷ್ಣುತೆಯ ಬಗ್ಗೆ ಇಡೀ ದೇಶದಲ್ಲಿ ಅತ್ಯಂತ ಶಕ್ತಿಯುತವೂ ಸ್ಪಷ್ಟವೂ ಆಗಿದ್ದ ಏಕೈಕ ದನಿಯಾಗಿದ್ದರು ಗಾಂಧಿ. ಆದರೆ ಈ ದನಿಯ ವಿರುದ್ಧದ ದನಿಗಳು ಉಳಿಯಬೇಕಾದರೆ ಗಾಂಧಿಯವರ ದನಿಯನ್ನು ಆಡಗಿಸಲೇಬೇಕಿತ್ತು. ಗಾಂಧಿಯವರನ್ನು ಒಬ್ಬ ಹಿಂದೂ ಧರ್ಮೀಯನೇ ಕೊಂದಿದ್ದೂ ಕೂಡ ಆಕಸ್ಮಿಕವೇನಿಲ್ಲ. ಗಾಂಧಿಯವರು ಯಾವ ಹಿಂದೂ ಧರ್ಮದ ವಿಶಾಲ ದೃಷ್ಟಿಕೋನವನ್ನು ಮತ್ತು ಉತ್ತಮಿಕೆಯನ್ನು ಎತ್ತಿಹಿಡಿದಿದ್ದರೋ ಅವರನ್ನು ಇಲ್ಲವಾಗಿಸಿದವನು ಅದೇ ಹಿಂದೂ ಧರ್ಮದಲ್ಲಿ ಅತ್ಯಂತ ಕೆಟ್ಟದ್ದು ಹಾಗೂ ಅತಿರೇಕವಾದ್ದು ಏನೇನಿದೆಯೋ ಅದರ ಪ್ರತೀಕವಾಗಿದ್ದ.

ಬಹುದೀರ್ಘಕಾಲದಿಂದ ಬೆಳೆಸಿಕೊಂಡು ಬಂದ ಧಾರ್ಮಿಕ ವೈರತ್ವಗಳ ಇತಿಹಾಸ ಗಾಂಧಿಯವರ ಹತ್ಯೆಯ ಮೂಲಕ ತನ್ನ ಪರಾಕಾಷ್ಠ ಸ್ಥಿತಿ ಮುಟ್ಟಿತ್ತು. ವಿದೇಶೀಯರ ಒಡೆದು ಆಳುವ ನೀತಿ ಹಿಂದೂ ಮುಸ್ಲಿಮರು ಒಂದುಗೂಡದಂತೆ ಏನೇನು ಮಾಡಬೇಕೋ ಅವೆಲ್ಲವನ್ನೂ ಮಾಡಿತ್ತು. ಈ ಒಡಕಿನ ಲಾಭ ಪಡೆದವರು ಮುಸ್ಲಿಂ ಮೂಲಭೂತವಾದಿಗಳು. ಇದರಷ್ಟೇ ಮೂಲಭೂತವಾದಿಯಾಗಿದ್ದ ಹಿಂದೂ ಧರ್ಮ ಆರ್.ಎಸ್.ಎಸ್.ನ್ನು ಹುಟ್ಟಹಾಕಿ ಅವರಿಗೆ ಉತ್ತರ ಕೊಟ್ಟಿತ್ತು. ಗೋಡ್ಸೆಯ ವಿಚಾರಣೆ ನಡೆದಗ ಈ ಮತಾಂಧ ಯುವ ಚಳುವಳಿಗೆ ಪ್ರೋತ್ಸಾಹ ಕೊಟ್ಟಂತಹ ರಾಜ್ಯಗಳಲ್ಲಿಯೇ ಅದರ ಜಾಡು ಸಿಕ್ಕಿದ್ದು ಕೂಡ ಆಕಸ್ಮಿಕವೇನಲ್ಲ. ಈ ಜಾಡು ಗ್ವಾಲಿಯರ್‌ನಿಂದ ಆಳ್ವಾರ್‌ವರೆಗೆ ಹೋಗಿತ್ತು. ಆಳ್ವಾರ್ ಮಹಾರಾಜ ತನ್ನ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ಹತ್ತಿಕ್ಕುವುದಕ್ಕಾಗಿ ಮತೀಯ ಕಲಹವನ್ನು ಸಮರ್ಥವಾಗಿ ಬಳಸಿಕೊಂಡಿದ್ದ. ಆತನ ಅರಮನೆ ಆರ್.ಎಸ್.ಎಸ್.ನವರು ಸಭೆ ಸೇರುವ ಸ್ಥಳವಾಗಿತ್ತು. ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಸಂದೇಹದ ಮೇಲೆ ಬಂಧಿತರಾದವರಲ್ಲಿ ಈ ರಾಜನೂ ಒಬ್ಬನಾಗಿದ್ದ. ಆದರೆ ಆರಂಭದ ಹಂತದಲ್ಲಿ ಈ ಹತ್ಯೆಯಲ್ಲಿ ಭಾಗಿಯಾದವರ ಸುಳಿವುಗಳೇನೂ ಕೇಳಿಬರಲಿಲ್ಲ ಮತ್ತು ಸ್ವತಃ ಹಂತಕನ ಬಗ್ಗೆಯೂ ಕೂಡ ಆತನ ಹೆಸರಿನಿಂದ ಆತ ಉಚ್ಚಕುಲಕ್ಕೆ ಸೇರಿದವನು ಎಂಬುದೊಂದನ್ನು ಬಿಟ್ಟರೆ ಉಳಿದ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಈ ಹತ್ಯೆಯನ್ನು ಯಾರೋ ಒಬ್ಬ ವ್ಯಕ್ತಿ ನಡೆಸಿದ್ದಾನೆ ಎಂದು ಭಾವಿಸಿದ್ದ ಜನರು ಆ ಪಾಪಿ ಅಂಗುಲ ಅಂಗುಲವಾಗಿ ನರಳಿ ಸಾಯುತ್ತಾನೆ. ಅವನು ಜೀವನದ ಕೊನೆಯ ಕ್ಷಣದವರೆಗೆ ಇದಕ್ಕಾಗಿ ಪರಿತಪಿಸುವುದು ಖಂಡಿತ ಎಂದು ಶಾಪ ಹಾಕುತ್ತಿದ್ದರು.

ಬೆಳಕು ಮೂಡವ ಹೊತ್ತಿಗೆ ಬಿರ್ಲಾ ಭವನದ ಹುಲ್ಲು ಹಾಸು, ಉದ್ಯಾನ, ಸುತ್ತಮುತ್ತಲ ಮನೆಗಳ ಮೇಲೆ, ಅಲ್ಬುಕರ್ಕ್ ರಸ್ತೆ ಹಾಗೂ ಆ ರಸ್ತೆಗೆ ಸೇರುವ ಎಲ್ಲ ರಸ್ತೆಗಳಲ್ಲೂ ಜನಪ್ರವಾಹ ಹರಿದು ಬರತೊಡಗಿತ್ತು. ಅಂಥಹ ಜನಸಾಗರದ ದೃಶ್ಯವನ್ನು ನಾನು ಈ ಮೊದಲು ಎಲ್ಲಿಯೂ ನೋಡಿರಲಿಲ್ಲ. ಎತ್ತರೆತ್ತರದ ಛಾವಣಿಗಳನ್ನುಳ್ಳ ಬಿರ್ಲಾ ಭವನ ಈ ದುಃಖ ಸಾಗರದ ಮಧ್ಯೆ ತಲೆ ಎತ್ತಿ ನಿಂತ ಬಂಡೆಗಲ್ಲಿನಂತೆ ಅಚಲವಾಗಿತ್ತು. ಅದರ ಮೇಲಿನ ಅಂತಸ್ತಿನಲ್ಲಿ ಎಲ್ಲರಿಗೂ ಕಾಣುವಂತೆ ಗಾಂಧೀಜಿಯ ದೇಹವನ್ನು ಇರಿಸಿದ್ದರು. ಗಾಂಧಿಯ ಮುಖ ಶಾಂತವಾಗಿತ್ತು. ಯಾವುದೇ ಭಾವನೆಗಳನ್ನು ತೋರಗೊಡದೆ ನಿರ್ಮಲವಾಗಿತ್ತು. ಗಾಂಧಿಯವರ ದೇಹಕ್ಕೆ ಹೊದಿಸಿದ್ದ ಅಚ್ಚ ಬಿಳಿಯ ಬಟ್ಟೆ ಸೂರ್ಯನ ಬೆಳಕಿನಲ್ಲಿ ಇನ್ನಷ್ಟು ಪ್ರಖರವಾಗಿ ಕಾಣುತ್ತಿತ್ತು. ಗಾಂಧಿಯವರ ಜೊತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರ ನಿಕಟವರ್ತಿಗಳು ಗಾಂಧಿಯವರ ದೇಹದ ಅಕ್ಕಪಕ್ಕಗಳಲ್ಲಿ ನಿಂತಿದ್ದರು. ಗಾಂಧಿಯವರಿಗೆ ಅತ್ಯಂತ ಹತ್ತಿರದವರು ಮತ್ತು ನಿಷ್ಠಾವಂತರೆಂದರೆ ನೆಹರೂ ಮತ್ತು ಪಟೇಲ್. ಅವರು ಗಾಂಧೀಜಿಯ ತಲೆಯ ಬದಿಯಲ್ಲಿ ನಿಂತಿದ್ದರು. ಅದೇ ವಾರ ಪಟೇಲರು ನನ್ನೊಂದಿಗೆ ಮಾತಾಡುತ್ತಾ ಆರ್.ಎಸ್.ಎಸ್. ಯುವಕರಲ್ಲಿ ಕಂಡುಬರುತ್ತಿರುವ ಭಾವನೆ ಕೇವಲ ತಾತ್ಕಾಲಿಕ ಎಂದು ತಳ್ಳಿ ಹಾಕಿದನ್ನು ನೆನೆಸಿಕೊಂಡಾಗ ದುಃಖವಾಯಿತು.

ಸುಶೀಲಾ ಒಬ್ಬರನ್ನು ಹೊರತುಪಡಿಸಿ ಆಶ್ರಮದ ನಿಕಟವರ್ತಿಗಳೆಲ್ಲ ಅಲ್ಲಿದ್ದರು. ಕೆಲವೇ ದಿನಗಳ ಹಿಂದೆ ಈ ಮಹಿಳಾ ವೈದ್ಯೆ ಶಾಂತಿನಿಯೋಗದ ನೇತೃತ್ವ ವಹಿಸಿ, ಪಾಕಿಸ್ತಾನಕ್ಕೆ ಹೋಗಿದ್ದರು. ಅವರು ಹೋಗಿದ್ದ ಸ್ಥಳದ ಹೆಸರು ಬಹಾವಲ್‌ಪುರ. ಅದು ಒಬ್ಬ ಮುಸ್ಲಿಂ ನವಾಬಾದ ಆಳ್ವಿಕೆಯಲ್ಲಿತ್ತು. ಅಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ಪುನಃ ಅತ್ಯಾಚಾರಗಳು ನಡೆದಿದ್ದವು. ಒಬ್ಬ ಹಿಂದೂ ಮಹಿಳೆ ಇಂತಹ ನಿಯೋಗವನ್ನು ಒಯ್ಯುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೆ ಆಕೆಯ ಕುಟುಂಬ ಮೂಲತಃ ಇದೇ ಸ್ಥಳಕ್ಕೆ ಸೇರಿತ್ತು. ಅಲ್ಲಿ ನಡೆದ ಹಿಂಸಾಕೃತ್ಯಗಳಿಗೆ ಆಕೆಯ ಬಂಧುಗಳು ತುತ್ತಾಗಿದ್ದರು. ಜೈಲುವಾಸದ ದಿನಗಳಲ್ಲೂ ಗಾಂಧಿಯವರ ಯೋಗಕ್ಷೇಮ ವಹಿಸಿಕೊಂಡು ಜೊತೆಯಲ್ಲೆ ಸುಶೀಲಾಗೆ, ಗಾಂಧಿಯವರ ಸಂದೇಹವಾಹಕಳಾಗಿ ಕೈಗೊಂಡ ಈ ಕೊನೆಯ ಕಾರ್ಯಭಾರದಿಂದಾಗಿ ಗಾಂಧಿಯ ಅಂತಿಮ ಕ್ಷಣದಲ್ಲೇ ಅವರ ಬಳಿ ಇರುವ ಅವಕಾಶ ತಪ್ಪಿಹೋಯಿತು.

ಬೆಳಿಗ್ಗೆ ಹನ್ನೊಂದು ಗಂಟೆಗೆ ಸರಿಯಾಗಿ ಗಾಂಧಿಯವರ ದೇಹವನ್ನು ಇಳಿಸಿದರು. ಹೂವುಗಳಿಂದ ಅಲಂಕೃತವಾದ ಸಶಸ್ತ್ರ ವಾಹನದ ಮೇಲೆ ದೇಹ ಇರಿಸಿದರು. ನೆಹರೂ, ಪಟೇಲ್, ಬಲದೇವ್‌ಸಿಂಗ್ (ರಕ್ಷಣಾ ಮಂತ್ರಿ) ಈ ಅಂತಿಮ ಯಾತ್ರೆಯ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಗಾಂಧಿಯವರ ದೇಹದ ಮೇಲೆ ತ್ರಿವರ್ಣಧ್ವಜವನ್ನು ಹೊದಿಸಲಾಯಿತು. ಅಂತಿಮ ಮೆರವಣಿಗೆ ಹೊರಟಿತು. ಜನಜಂಗುಲಿಯ ನಡುವೆ ಏನೋ ಗಡಿಬಿಡಿಯಾದಂತೆ ಕಂಡಿತು. ನಾನು ಯಾವುದೋ ಕಟ್ಟಡದ ಛಾವಣಿಯ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದೆ. ಶವವಾಹನದ ಬಳಿ ಮಹಿಳೆಯೊಬ್ಬರು ನಡೆದು ಬರತ್ತಿದ್ದರು. ಆಕೆ ಸುಶೀಲಾ ಎಂದು ತಿಳಿಯಿತು. ಪಾಕಿಸ್ತಾನದಲ್ಲಿ ಸುಶೀಲಾಗೆ ಸುದ್ದಿ ತಲುಪಿತ್ತು. ಒಂದು ವಿಶೇಷ ವಿಮಾನದಲ್ಲಿ ಅದೇ ಸಮಯಕ್ಕೆ ಸರಿಯಾಗಿ ಬಂದಿದ್ದಳು. ಗಾಂಧಿಯವರ ಪಾದದ ಮೇಲೆ ಬಿದ್ದು ಆಕೆ ಜೋರಾಗಿ ಅಳತೊಡಗಿದ್ದಳು.

ಅತ್ಯಂತ ದೊಡ್ಡ ಮೆರವಣಿಗೆ ಮುಂದಕ್ಕೆ ಚಲಿಸಿತು. ಅದು ಐದು ಮೈಲುಗಳ ಹಾದಿಯನ್ನು ಕ್ರಮಿಸಬೇಕಾಗಿತ್ತು. ದೇಶದ ಎಲ್ಲ ಭಾಗಗಳಿಂದ ಉಪನದಿಗಳಂತೆ ಹರಿದು ಬಂದ ಜನ ಈ ಮಹಾನದಿಯನ್ನು ಸೇರಿದ್ದರು. ಅನೇಕ ತಿಂಗಳುಗಳ ನಂತರ ಮುಸ್ಲಿಮರು ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿರುವ ಮುಸ್ಲಿಮರು ಈ ದಿನ ತಮ್ಮ ತಂದೆಯನ್ನು ಕಳೆದುಕೊಂಡರು ಎಂದು ಯಾರೋ ಹೇಳಿದ್ದು ಕೇಳಿಸಿತು. ಈ ಮೆರವಣಿಗೆಯ ಮುಂಭಾಗದಲ್ಲಿ ಮಿಲಿಟರಿ ವಿನ್ಯಾಸದ ಸಶಸ್ತ್ರ ವಾಹನಗಳಿದ್ದವು. ಅಂತಿಮ ಯಾತ್ರೆಯ ವ್ಯವಸ್ಥೆಯನ್ನು ಮಾಡಲು ಸೇನೆಯನ್ನು ಕರೆಸಲಾಗಿತ್ತು. ಇದರಿಂದ ಈ ಮೆರವಣಿಗೆಗೆ ಬೇರೆಯದೇ ಛಾಯೆ ಬಂದಂತಿತ್ತು. ಇದರ ಹಿಂದೆ ಗೌರ‍್ನರ್ ಜನರಲ್ ಅವರ ಅಂಗರಕ್ಷಕ ಪಡೆಯ ರಾವುತ ದಳ. ಇದರ ಹಿಂದೆ ಕೆಂಪು ನೀಲಿ ಸಮವಸ್ತ್ರದ ರಜಪುತಾನ ರೈಫಲ್ ದಳ ಹಾಗೂ ಇತರ ಮಿಲಿಟರಿ ಘಟಕಗಳು. ಇವರ ಹಿಂದೆ ಗಾಂಧಿಯವರ ಪಾರ್ಥಿವ ಶರೀರದ ಸಶಸ್ತ್ರ ವಾಹನ. ನನ್ನ ಹಿಂದಿದ್ದ ಯಾರೋ ಹೇಳುತ್ತಿದ್ದರು. ಅಹಿಂಸೆಯನ್ನು ಬೋಧಿಸಿದ ಮಹಾತ್ಮನನ್ನು ಮಿಲಿಟರಿ ವಾಹನದಲ್ಲಿ ತೆಗೆದುಕೊಂಡು ಹೋಗುವುದನ್ನು ನೋಡಿದರೆ ಕಣ್ಣೀರು ಉಕ್ಕುತ್ತದೆ ಎಂದು. ಈ ವಾಹನದ ಹಿಂದೆ ಖದ್ದರ್ ಉಡುಗಿನ ಜನರ ಗುಂಪು ನಡೆದುಕೊಂಡು ಬರುತ್ತಿತ್ತು. ಇದು ಮೆರವಣಿಗೆಗೆ ಸ್ವಲ್ಪ ಶಾಂತಿಯ ಕಲೆ ಮೂಡಿಸಿತ್ತು.

ಶವದಹನದ ಸ್ಥಳದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಪೇರಿಸಲಾಗಿದ್ದ ಜಾಗದವರೆಗೆ ನಾನು ಹೋದೆ. ಮೂವರು ಹಿಂದೂ ಪುರೋಹಿತರು ಆ ಕೊರಡುಗಳ ಮೇಲೆ ತುಪ್ಪಸುರಿಯುತ್ತಿದ್ದರು. ಜೊತೆಗೆ ಸುಗಂಧಿತ ಕರ್ಪೂರವನ್ನು ಹಾಕುತ್ತಿದ್ದರು. ಆ ಸ್ಥಳಕ್ಕೆ ಹೊಂದಿಕೊಳ್ಳುವುದಿಲ್ಲ ಎನಿಸವಂಥ ಒಂದು ದೊಡ್ಡ ಗುಂಪು ಬಂತು. ಅದರಲ್ಲಿ ಬೇರೆ ಬೇರೆ ರೀತಿಯ ಜನ ಇದ್ದರು. ಅವರೆಲ್ಲ ಕ್ಯಾಂಪ್‌ಫೈರಿ ಸುತ್ತ ಕುಳಿತುಕೊಳ್ಳುವಂತೆ ನೆಲದ ಮೇಲೆ ಕುಳಿತರು. ಇದರಲ್ಲಿ ಲಾರ್ಡ್ ಮತ್ತು ಲೇಡಿ ಮೌಂಟ್ ಬ್ಯಾಟನ್, ಚೈನಾದ ರಾಯಭಾರಿ, ಮೌಲಾನಾ ಆಜಾದ್, ಗಾಂಧಿಯವರನ್ನು ಮಿಕಿಮೌಸ್ ಎಂದು ತಮಾಷೆಯಿಂದ ಕರೆಯುತ್ತಿದ್ದ ಕವಯಿತ್ರಿ ಸರೋಜಿನಿನಾಯ್ಕ, ರಾಜಕುಮಾರಿ ಆಮೃತ್‌ಕೌರ್ ಮೊದಲಾದವರೆಲ್ಲ ಇದ್ದರು.

ಜನರ ಗುಂಪು ನುಗ್ಗಿಕೊಂಡು ಬಂದಾಗ ಅಲ್ಲಿ ಕುಳಿತವರೆಲ್ಲ ತರಾತುರಿಯಿಂದ ಮೇಲೇಳಬೇಕಾಯಿತು. ಮೆರವಣಿಗೆ ಹತ್ತಿರ ಬಂದಿತ್ತು. ಪುರೋಹಿತರು ಮಂತ್ರಪಠಣ ಆರಂಭಿಸಿದ್ದರು. ಗಾಂಧಿಯವರ ದೇಹವನ್ನು ಚಿತೆಗೆ ಅರ್ಪಿಸುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗಳು ಮೇಲೆದ್ದವು. ಜನರ ನೂಕುನುಗ್ಗಲು ಇನ್ನಷ್ಟು ಹೆಚ್ಚಾಯಿತು. ಜನರನ್ನು ಚದುರಿಸಲು ಕುದುರೆಗಳ ಮೇಲಿದ್ದ ಪೊಲೀಸ್ ದಳದವರು ಲಾಠಿ ಬೀಸಿದ್ದರಿಂದ ಇನ್ನಷ್ಟು ಗೊಂದಲಾಯಿತು. ಮಾರನೆಯ ಬೆಳಿಗ್ಗೆ ನೆಹರೂ ಅತ್ಯಂತ ಖಿನ್ನವಾದ ದನಿಯಲ್ಲಿ ಕೆಲವು ಮಾತುಗಳನ್ನು ಹೇಳಿದರು. “ನಮ್ಮ ಅತಿ ಅಮೂಲ್ಯ ಸಂಪತ್ತನ್ನು ನಾವು ರಕ್ಷಿಸಿಕೊಳ್ಳಲಿಲ್ಲ’’ ಎಂದರು. ಆಮೇಲೆ ಸಾಂಪ್ರಾದಾಯಿಕ ವಿಧಿಗಳೊಂದಿಗೆ ಚಿತಾಭಸ್ಮವನ್ನು ಭಾರತದ ಪವಿತ್ರ ನದಿಗಳನ್ನು ಹಾಕಲಾಯಿತು.

ರಾತ್ರಿಯೆಲ್ಲ ಉಳಿದ ಈ ಅಜರಾಮರ ಬೆಂಕಿಯ ಒಂದೊಂದು ಪುಟ್ಟ ಜ್ವಾಲೆ ಅಲ್ಲಿದ್ದ ಸಹಸ್ರಾರು ಮಂದಿಯಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ ಬೆಳಗುತ್ತದೆ ಎಂದು ನಾನು ಕಲ್ಪಿಸಿಕೊಂಡೆ. ಬಾಪೂ ಬಯಸಿದಂತೆಯೇ ಯಾವುದೇ ಬಲವಂತವಿಲ್ಲದೆ ಆಂತರಿಕ ಪರಿವರ್ತನೆಯ ಮೂಲಕವೇ ಜನರು ಸರಿಯಾದ ಪಥದಲ್ಲಿ ಮುಂದುವರೆಯುತ್ತಾರೆ ಎಂದು ಭಾವಿಸಿದೆ. ಧರ್ಮಸಹಿಷ್ಣುತೆ ಮತ್ತು ಏಕತೆಗಾಗಿ ಅವರು ಮಾಡಿದ ಬಲಿದಾನ ಭಾರತಕ್ಕೆ ಒಂದು ತಿರುವು ತರಬಹುದು ಎಂದು ನಿರೀಕ್ಷಿಸಿದೆ. ಬೆಳಕು ತೋರಿಸುವುದಕ್ಕಾಗಿ ಗಾಂಧಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ್ದರು.

* * *