ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಜೊತೆ ಜೊತೆಗೇ, ದೇಶಗಳ ಇತಿಹಾಸದಲ್ಲಿ ಅತ್ಯಂತ ಅಪರೂಪದ ಘಟನೆಯೊಂದನ್ನು ನೋಡುವ ಅವಕಾಶ ಜಗತ್ತಿಗೆ ಸಿಕ್ಕಿತು. ಅಂದರೆ ಒಂದು ದೇಶಕ್ಕಾಗಿ ಹೋರಾಟ ನಡೆದು ಎರಡು ದೇಶಗಳು ಒಟ್ಟಿಗೆ ಜನ್ಮ ತಾಳಿದ್ದವು. ಈ ಜನನ ಅತ್ಯಂತ ನೋವು ಪ್ರಯಾಸಗಳಿಂದ ಕೂಡಿತ್ತು.

ಭಾರತ ಮತ್ತು ಪಾಕಿಸ್ತಾನ ಎಂಬ ಈ ಎರಡೂ ದೇಶಗಳ ಐತಿಹಾಸಿಕ ಆರಂಭದ ದಿನಗಳನ್ನು ನೋಡುವ ಮತ್ತು ದಾಖಲಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ.

೧೯೪೭ರ ಶರತ್ಕಾಲದಲ್ಲಿ ಉತ್ತರ ಭಾರತದ ಪಂಜಾಬ್ ಪ್ರದೇಶಕ್ಕೆ ನಾನು ಹೋದೆ. ಹೊಸದಾಗಿ ಹುಟ್ಟುವ ಈ ಸಾರ್ವಭೌಮ ರಾಷ್ಟ್ರಗಳ ಫೊಟೋ ತೆಗೆಯುವುದು ನನ್ನ ಉದ್ದೇಶ. ಈ ದೇಶಗಳ ನಡುವೆ ಅಪಾರ ಜನಸಮೂಹ ವಿನಿಮಯದ ಕೆಲಸ ನಡೆಯುತ್ತಿತ್ತು. ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ನಮ್ಮ ಆಕ್ಸ್‌ಫರ್ಡ್ ರಸ್ತೆಯ ಚಾರಿಂಗ್ ಕ್ರಾಸನ್ನು ನೆನಪಿಸುವಂತಿದ್ದವು. ಆದರೆ ಇಲ್ಲಿ ಎರಡು ದಿಕ್ಕುಗಳಲ್ಲಿ ಮೋಟಾರು ಕಾರುಗಳಿಗೆ ಬದಲಾಗಿ ಎತ್ತಿನ ಗಾಡಿಗಳು, ಹೆಂಗಸರನ್ನು ಹೊತ್ತು ಸಾಗುತ್ತಿದ್ದ ಕತ್ತೆಗಳು, ಚಿಕ್ಕ ಮಕ್ಕಳನ್ನು ಕೈಲಾಗದ ಮುದುಕರನ್ನು ಹೆಗಲ ಮೇಲೆ ಹೊತ್ತಿದ್ದ ಪುರುಷರ ಸಾಲು ಸಾಲುಗಳು ಕಾಣುತ್ತಿದ್ದವು.

ಎಷ್ಟೋ ಗರ್ಭಿಣಿಯರಿಗೆ ರಸ್ತೆಯಲ್ಲೇ ಹೆರಿಗೆಯಾಯಿತು. ರಸ್ತೆಯಲ್ಲಿ ನಡೆಯುತ್ತಲೇ ಬಳಲಿಕೆಯಿಂದ ಕುಸಿದು ಬಿದ್ದು ಜನ ಸಾಯುತ್ತಿದ್ದರು. ಕೆಲವರು ಕಾಲರಾದಿಂದ ಸತ್ತರು. ಆದರೆ ಇದಕ್ಕೂ ಹೆಚ್ಚಿನ ಮಂದಿ ಇನ್ನು ನಮ್ಮಿಂದ ಸಾಧ್ಯವಿಲ್ಲ ಎಂದು ರಸ್ತೆಯಲ್ಲೇ ಕುಳಿತುಬಿಟ್ಟರು. ಕೆಲವು ಮಕ್ಕಳು ಸಾವನ್ನು ಎದುರು ನೋಡುತ್ತ ಹೀಗೆ ಕುಸಿದು ಕುಳಿತ ತಂದೆತಾಯಿಗಳ, ಅಜ್ಜಂದಿರ ಕೈಹಿಡಿದು ಮುಂದಕ್ಕೆ ಕರೆದೊಯ್ಯುವಂತೆ ಎಳೆಯುತ್ತಿದ್ದವು. ಆದರೆ ಅವರು ಇನ್ನು ಮೇಲೇಳುವುದಿಲ್ಲ ಎಂದು ಅವುಗಳಿಗೆ ಗೊತ್ತಿರಲಿಲ್ಲ. ಪಾಕಿಸ್ತಾನ ಎಂದರೆ ಪರಿಶುದ್ಧರ ಭೂಮಿ ಎಂದರ್ಥ. ಆದರೆ, ಅನೇಕ ಪರಿಶುದ್ಧರು ಆ ಭೂಮಿಯನ್ನು ತಲುಪಲೇ ಇಲ್ಲ. ಅವರು ಹೊರಟಿದ್ದ ಕನಸಿನ ನಾಡಿನ ದಾರಿಯ ಉದ್ದಕ್ಕೂ ಗೋರಿಗಳ ಸಾಲಿತ್ತು.

ಎತ್ತುಗಳ ತುಳಿತದಿಂದ ಎದ್ದ ಧೂಳು ಇಡೀ ರಸ್ತೆ ಉದ್ದಕ್ಕೂ ಮೋಡದಂತೆ ಮೇಲೆದ್ದಿತ್ತು. ಕತ್ತಲಾಗುತ್ತಿದ್ದಂತೆ ಜನ ರಸ್ತೆಯ ಬದಿಯಲ್ಲೇ ತಂಗುತ್ತಿದ್ದರು. ಅಲ್ಲೆ ಚಿಕ್ಕದಾಗಿ ಬೆಂಕಿ ಹಾಕಿಕೊಂಡು ಚಪಾತಿಗಳನ್ನು ಬೇಯುಸುತ್ತಿದ್ದರು. ಮೇಲೆ ಕವಿದಿದ್ದ ಧೂಳಿನೊಂದಿಗೆ ಈ ಬೆಂಕಿಯ ಬೆಳಕೂ ಸೇರಿ ಬೆಂಕಿಯ ಮೋಡವೊಂದು ಅವರೆಲ್ಲರನ್ನೂ ಆವರಿಸಿದಂತೆ ಕಾಣುತ್ತಿತ್ತು.

ಈ ದೇಶಗಳ ಎರಡೂ ಕಡೆಯ ಗಡಿಗಳಿಂದ ಬರುವ ಬೃಹತ್ ಜನಪ್ರವಾಹ ಬೈಬಲ್ ಕಾಲದ ವಾತಾವರಣವೊಂದನ್ನು ನೆನಪಿಗೆ ತರುತ್ತಿತ್ತು. ಹಳೆಯ ಒಡಂಬಡಿಕೆಯ ಕಾಲದಲ್ಲಿ ನಡೆದ ಇಸ್ರೇಲಿಗಳ ವಲಸೆ ಬಹುಶಃ ಇದೇ ರೀತಿ ಇದ್ದಿರಬೇಕು. ಇಸ್ರೇಲಿನ ಜನಸಂಖ್ಯೆ ಎಂಟು ಲಕ್ಷ. ಗ್ರಂಥದಲ್ಲಿ ಪುರುಷರ ಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಎಂಟು ಲಕ್ಷ ಎಂದು ಹೇಳಿದೆ. ಹೆಂಗಸರೂ ಹಾಗೂ ಮಕ್ಕಳ ಸಂಖೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆ ಸಂಖ್ಯೆ ಖಂಡಿತ ಅದರ ಮೂರು ಪಟ್ಟು ಅಥವಾ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇಷ್ಟಿದ್ದರೂ ಸಹ ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಮುಸ್ಲಿಂ, ಸಿಖ್, ಹಿಂದೂಗಳ ಈ ಜನವಲಸೆಯ ಎದುರು ಎಕ್ಸೊಡಸ್‌ನಲ್ಲಿ ತಿಳಿಸಿದ ಜನವಲಸೆ ಏನೇನೂ ಅಲ್ಲ. ನಾನು ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಸುಮಾರು ಐದು ದಶಲಕ್ಷ ಮಂದಿ ರಸ್ತೆಗಳಲ್ಲಿ ಇದ್ದರು. ಇನ್ನೂ ಅನೇಕ ಲಕ್ಷ ಮಂದಿ ಇವರೊಂದಿಗೆ ಸೇರಿಕೊಳ್ಳಲಿದ್ದರು. ಇದು ಲಕ್ಷಾಂತರ ನತದೃಷ್ಟ ಜನಕ್ಕೆ ಸ್ವಾತಂತ್ರ್ಯದಿಂದ ಸಿಕ್ಕ ಮೊದಲ ಕಹಿ ಫಲ.

ಭಾರತದ ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಕಾಲದಿಂದ ನಡೆದ ಹೋರಾಟದ ಕೊನೆಯ ಘಟ್ಟದಲ್ಲಿ ಈ ಎರಡು ದೇಶಗಳ ಸಿದ್ಧಾಂತ ಹುಟ್ಟಿಕೊಂಡಿತ್ತು. ಭಾರತದ ಎಲ್ಲ ಧರ್ಮಗಳವರೂ ಒಗ್ಗಟ್ಟಿನಿಂದಲೇ ಹೋರಾಡುತ್ತ ಬಂದಿದ್ದರು. ಅಂತಿಮ ಘಟ್ಟದಲ್ಲಿ ವಿಭಜನೆಗಾಗಿ ಪಟ್ಟು ಹಿಡಿಯಲಾಯಿತು. ಇನ್ನೇನೋ ಉದ್ದೇಶಗಳನ್ನು ಹೊಂದಿದ್ದ ನಾಯಕರು ಅವಸರವಸರವಾಗಿ ಭೂಪಟದ ಮೇಲೆ ವಿಭಜನೆಯ ಗೆರೆಗಳನ್ನು ಎಳೆದಿದ್ದರು. ಜನರ ಅಗತ್ಯತೆಗಳಿಗೂ ಇವರ ಉದ್ದೇಶಗಳಿಗೂ ತಾಳೆಯೇ ಇರಲಿಲ್ಲ. ಇವರು ಮಾಡಿದ ಕೆಲಸದಿಂದ ಜನಸಾಮಾನ್ಯರ ಬದುಕು ಅನಿರೀಕ್ಷಿತವಾಗಿ ತೀವ್ರ ತರವಾದ ಬದಲಾವಣೆಗೆ ತುತ್ತಾಗಿತ್ತು. ವಾಸ್ತವವಾಗಿ ಹಿಂದೂ ವ್ಯಾಪಾರಿಗಳು ಮತ್ತು ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳಿಗೂ ಮುಸ್ಲಿಂ ವ್ಯಾಪಾರಿಗಳು ಹಾಗೂ ಗಿರಣಿ ಕಾರ್ಮಿಕರ ಸಮಸ್ಯೆಗಳಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಭಾರತದ ಯಾವ ಕಡೆಯ ಜನರಿಗೇ ಆಗಲಿ ಅವರಿಗೆ ಬೇಕಾಗಿದ್ದುದು ಜೀವನ ಮಟ್ಟದ ಸುಧಾರಣೆ, ಶಿಕ್ಷಣ, ರೈತರಿಗೆ ಭೂಮಿ, ಭೂಮಿಯ ಫಲವತ್ತತೆಯಲ್ಲಿ ಸ್ವಾತಂತ್ರ್ಯ ಬಂದರೆ ಸಾಕು ತಮ್ಮ ಬದುಕು ಎಲ್ಲ ವಿಧದಲ್ಲಿಯೂ ಶ್ರೀಮಂತವಾಗಿ ಬಿಡುತ್ತದೆ, ಸುಧಾರಿಸುತ್ತದೆ ಎಂದು ಜನ ನಂಬಿದ್ದರು. ಆದರೆ ಭಾರತದ ವಿಭಜನೆ ಈ ಕನಸಿಗೆ ತಡೆ ಹಾಕಿತು. ಪ್ರಗತಿಯನ್ನು ಮುಂದೂಡಿತು. ಯಾಕೆಂದರೆ ಇದು ಆರ್ಥಿಕವಾಗಿ ಅನುಕೂಲಕಾರಿಯಲ್ಲದ ಹಾಗೂ ಅವಾಸ್ತವಿಕವಾದ ವಿಭಜನೆಯಾಗಿತ್ತು. ಆದರೂ ಈ ವಿಭಜನೆಯ ಗೆರೆ ಎಳೆದಾಗ ಈ ಅವಾಸ್ತವಿಕತೆಯನ್ನು ವಾಸ್ತವಗೊಳಿಸಲು ಜನರೇ ಮುಂದಾಗಿದ್ದರು.

ಗಡಿರೇಖೆ ಯುದ್ದಕ್ಕೂ ಇವರ ಪ್ರವಾಹ ಇಮ್ಮುಖವಾಗಿ ಹರಿದಿತ್ತು. ಹಿಂದೂಗಳು ಮತ್ತು ಸಿಖ್ಖರು ಭಾರತದ ಒಕ್ಕೂಟದ ಕಡೆಗೆ ಬಂದರು. ಮುಸ್ಲಿಮರು ತಮ್ಮ ಹೊಸ ನಾಡಿನ ಕಡೆಗೆ ಹೊರಟರು. ಅದು ತಮ್ಮ ಕನಸಿನ ನಾಡಾಗುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಅವರಿಗೆ ಒಳಗೊಳಗೇ ಭಯ ತುಂಬಿತ್ತು. ತಮ್ಮ ನಾಯಕ ಎಂಥವನೋ ಎಂಬ ಸಂದೇಹ ಕಾಡಿತ್ತು. ಅವರ ನಿರೀಕ್ಷೆಯು ತೂಗುಯ್ಯಾಲೆಯಾಡುತ್ತಿತ್ತು. ಭೂಪಟದ ಮೇಲೆ ಸುಮ್ಮನೆ ಎಳೆದ ಗೆರೆಯಲ್ಲಿ ಈಗ ಜನರ ಮೂಡತೊಡಗಿದ್ದರು. ತಾವೇ ಬೇರೆ ಅವರೇ ಬೇರೆ ಎಂಬ ಮತ ವಿರೋಧ ಸ್ಪಷ್ಟವಾಗಿ ಒಡೆದು ಕಾಣುತ್ತಿತ್ತು. ಒಟ್ಟಿನಲ್ಲಿ ಇದು ಮಕ್ಕಳಾಟವಾಗಿರಲಿಲ್ಲ. ಮಾನವ ಸಂಕಷ್ಟಗಳ ಮೇಲೆ ಮಹಾ ಪ್ರಯೋಗವನ್ನು ನಡೆಸಿದ ಹಾಗಿತ್ತು. ಕೇವಲ ಪೆನ್ನುಗಳಿಂದ ಹಾಕಿದ ಗೆರೆಗಳು, ಮೊದಲೇ ಬವಣೆ ಪಡುತ್ತಿದ್ದ ಜನರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದ್ದವು. ಇದು ಸಾಲದೆಂಬಂತೆ ೧೯೦೦ ರಿಂದೀಚಿನ ಎಲ್ಲ ವರ್ಷಗಳಿಗಿಂತ ಈ ವರ್ಷ ಉತ್ತರಭಾರತವು ಭಾರೀ ಪ್ರವಾಹದ ವಿಕೋಪಕ್ಕೆ ತುತ್ತಾಗಿತ್ತು. ಪಂಚನದಿಗಳ ನಾಡು ಎಂದು ಹೆಸರಾದ ಪಂಜಾಬಿನಲ್ಲಿ ಐದು ನದಿಗಳೂ ಈ ಸಲ ದಡ ಮೀರಿ ಹರಿದಿದ್ದವು. ಕಾಲುವೆ ರೂಪದಲ್ಲಿ ನಿರ್ಮಿಸಲಾಗಿದ್ದ ಎಲ್ಲ ಮಣ್ಣಿನ ತಡೆಗೋಡೆಗಳೂ ಪ್ರವಾಹದ ಹಾವಳಿಯಲ್ಲಿ ಧೂಳೀಪಟವಾಗಿದ್ದವು. ಪ್ರವಾಹದ ನೀರು ಹೊಲಗಳ ಮೇಲೆ ಉಕ್ಕಿ ಹರಿದಿತ್ತು. ನಿರಾಶ್ರಿತ ವಲಸೆಗಾರರು ಪ್ರವಾಹದ ನಡುವೆ ಸಿಕ್ಕಿ ಬಿದ್ದಿದ್ದರು. ಸ್ವತಃ ನಾವೇ ಒಂದು ಸಲ ಉಕ್ಕಿ ಹರಿಯುತ್ತಿದ್ದ ರಾವಿ ನದಿಯ ಪ್ರವಾಹದಲ್ಲಿ ಸಿಕ್ಕಿ ಬಿದ್ದೆವು. ಮೊದಲೇ ಎಚ್ಚರಿಕೆ ಸಿಕ್ಕಿದ್ದರಿಂದ ಅದರಿಂದ ಪಾರಾಗಲು ಸಾಧ್ಯವಾಯಿತು. ಆದರೆ ನನಗಿದ್ದಂತಹ ಸೌಲಭ್ಯಗಳು ಸಹಸ್ರಾರು ಮಂದಿ ರೈತರ ಪಾಲಿಗೆ ಇರಲಿಲ್ಲ. ಅವರಿಗೆ ಮೊದಲೇ ಎಚ್ಚರಿಕೆ ಕೊಡಲು ಯಾರೂ ಇರಲಿಲ್ಲ. ಜೀಪಿನಂತಹ ಅನುಕೂಲ ಅವರಿಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಿಯಾಶ್ ನದಿ ಬಹಳಷ್ಟು ಜನರನ್ನು ಬಲಿ ತೆಗೆದುಕೊಂಡಿತು. ನದಿ ಮತ್ತು ರೈಲ್ವೆ ದಿಬ್ಬದ ಮಧ್ಯದಲ್ಲಿದ್ದ ಒಂದು ಸ್ಥಳದಲ್ಲಿ ಸುಮಾರು ನಾಲ್ಕು ಸಾವಿರ ಮುಸ್ಲಿಮರು ಒಂದು ರಾತ್ರಿ ಬಿಡಾರ ಹೂಡಿದ್ದರು. ಮಾರನೇ ಬೆಳಿಗ್ಗೆ ಅದರಲ್ಲಿ ಬದುಕುಳಿದವರು ಒಂದು ಸಾವಿರ ಮಂದಿ ಮಾತ್ರ. ಆ ಪ್ರದೇಶ ರಣರಂಗದಂತಾಗಿತ್ತು. ಎಲ್ಲೆಲ್ಲೂ ಮಗುಚಿಬಿದ್ದಿದ್ದ ಎತ್ತಿನಗಾಡಿಗಳು, ತೇಲಾಡುತ್ತಿದ್ದ ಪಾತ್ರೆ ಸಾಮಾನುಗಳು, ಕೆಸರು ಮಣ್ಣಿನಲ್ಲಿ ಸಿಕ್ಕಿಕೊಂಡಿದ್ದ ವ್ಯವಸಾಯದ ಉಪಕರಣಗಳು, ಇದಾದ ಕೆಲವು ದಿನಗಳ ನಂತರ ಈ ಪ್ರವಾಹದಿಂದ ಬದುಕುಳಿದವರ ಒಂದು ಬಿಡಾರ ಪ್ರದೇಶವನ್ನು ನೋಡುವ ಅವಕಾಶ ನನಗೆ ಸಿಕ್ಕಿತು. ಅಲ್ಲಿ ರಾತ್ರಿ ತಂಗಲು ಅವರು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಒಬ್ಬಾತ ರಸ್ತೆ ಬದಿಯಲ್ಲಿ ಗೋರಿ ತೋಡುತ್ತಿದ್ದ. ಆತನ ಹೆಸರು ರಸಿಕ್. ಆತ ಮೂಲತಃ ಜಲಂಧರ್‌ನವನು. ಅಲ್ಲಿ ಆತನಿಗೂ ಆತನ ಸೋದರರಿಗೂ ಸೇರಿದಂತೆ ಹತ್ತು ಎಕರೆಗಳಷ್ಟು ಕಿತ್ತಲೆ ಹಣ್ಣಿನ ತೋಪಿತ್ತು. ಈತನ ಎರಡು ವರ್ಷದ ಮಗ ಈ ಮಧ್ಯಾಹ್ನ ಸತ್ತಿದ್ದ. ಅವನಿಗಾಗಿ ಈ ಗೋರಿ. ತನ್ನ ಮಗನನ್ನು ಹೂಳುವುದಕ್ಕೆ ಸೂಕ್ತ ಸ್ಥಳ ಸಿಗುವವರೆಗೆ ಆತ ಎಷ್ಟೋ ದೂರದಿಂದ ಮಗನ ಹೆಣವನ್ನು ಹೊತ್ತುಕೊಂಡು ನಡೆದಿದ್ದ. ಇದಕ್ಕೆ ಎರಡು ದಿನಗಳ ಹಿಂದಿನ ರಾತ್ರಿ ಅವರೆಲ್ಲ ರಾತ್ರಿ ತಂಗಲು ಎಂದಿಗಿಂತ ಹೆಚ್ಚು ಪ್ರಶಸ್ತ ಸ್ಥಳ ಸಿಕ್ಕಿದೆ ಎಂಬ ಸಂತೋಷದಿಂದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಪಾಕಿಸ್ತಾನದ ಗಡಿ ಕೇವಲ ೫೦ ಮೈಲುಗಳಷ್ಟು ದೂರವಿತ್ತು. ಮಧ್ಯರಾತ್ರಿ ಜನರ ಗದ್ದಲದಿಂದ ರಸಿಕ್‌ಗೆ ಎಚ್ಚರವಾಯಿತು. ಎದ್ದು ನೋಡಿದ. ನೀರಿನ ಮಟ್ಟ ಭರದಿಂದ ಮೇಲೇರುತ್ತಿತ್ತು. ರಸಿಕ್ ಮತ್ತು ಅವನ ಕುಟುಂಬದ ಜನರೆಲ್ಲ ಎತ್ತಿನ ಗಾಡಿಯ ಮೇಲೇರಿದರು. ನೀರು ಗಾಡಿಯ ಚಕ್ರಗಳ ಗುಂಭದವರೆಗೆ ಏರಿತು. ಎರಡು ರಾತ್ರಿ ಎರಡು ಹಗಲು ಅವರು ಪ್ರವಾಹದ ಮಧ್ಯೆ ಗಾಡಿಯ ಮೇಲೆ ಅನ್ನ ನೀರಿಲ್ಲದೆ ನಿಂತಿದ್ರು. ಅವರ ಜೊತೆಗೆ ಬರುತ್ತಿದ್ದ ಅನೇಕರು ಅವರ ಕಣ್ಣೆದುರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಈ ಪ್ರಯಾಣ ಮುಗಿದ ನಂತರ ಮತ್ತೆ ಬದುಕನ್ನು ಆರಂಭಿಸುವುದಕ್ಕಾಗಿ ಅವರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಜಾನುವಾರುಗಳು ನೀರಿನಲ್ಲಿ ಮುಳುಗಿದ್ದವು. ನೀರಿನ ಮಟ್ಟ ಕೆಳಗಿಳಿದಾಗ ರಸಿಕ್ ಕುಟುಂಬ ಕೆಳಗಿಳಿದು ಪ್ರಯಾಣ ಮುಂದುವರೆಸಿತು. ಆದರೆ ಆ ಆಯಾಸ ಬಳಲಿಕೆಯನ್ನು ತಾಳಿಕೊಳ್ಳಲಾರದ ಅವನ ಮಗ ಮಧ್ಯಾಹ್ನ ಸತ್ತು ಹೋದ.

ವಲಸೆ ಹೋಗುತ್ತಿದ್ದ ಜನರನ್ನು ಈ ಪ್ರವಾಹ ಮತ್ತು ಹಸಿವಿಗಿಂತ ಹೆಚ್ಚು ಭೀಕರವಾಗಿ ಕಾಡಿದ್ದು ವಿರೋಧಿ ಮತದವರ ಧಾಳಿಯ ಭೀತಿ. ರಸ್ತೆಯಲ್ಲಿ ವಲಸೆಗಾರರ ಮೇಲೆ ಯಾವಾಗ ಬೇಕಾದರೂ ಧಾಳಿ ನಡೆಯಬಹುದಿತ್ತು. ದೇಶವನ್ನು ಎರಡು ಹೋಳು ಮಾಡಿದ್ದ ರಾಜಕೀಯ ಒತ್ತಡಗಳು ಎಷ್ಟರಮಟ್ಟಿಗೆ ಮತೀಯ ದ್ವೇಷವನ್ನು ಕೆರಳಿಸಿದ್ದವೆಂದರೆ ಜನರ ಆಲೋಚನಾ ವಿಧಾನವೇ ಬದಲಾಗಿತ್ತು. ತಮ್ಮ ಧರ್ಮಕ್ಕೆ ಸೇರಿಲ್ಲದ ಯಾವುದೇ ಜನರೂ ಲೂಟಿ, ಸುಲಿಗೆ ಕೊಲೆಗೆ ಬಲಿಯಾಗುತ್ತಿದ್ದರು. ರಸ್ತೆಯ ಪ್ರಯಾಣಕ್ಕಿಂತ ರೈಲು ಪ್ರಯಾಣ ಇನ್ನಷ್ಟು ಅಪಾಯಕಾರಿಯಾಗಿತ್ತು. ನಿರಾಶ್ರಿತರನ್ನು ತುಂಬಿಕೊಂಡ ರೈಲುಗಾಡಿ ಹಳಿ ಬದಲಾಯಿಸುವಾಗ ಮತ್ತು ಬೇರೆ ಡಬ್ಬಿಗಳನ್ನು ಜೋಡಿಸಲೆಂದು ನಿಲ್ಲಿಸಿದ ಸಂದರ್ಭದಲ್ಲಿ ಅವುಗಳ ಮೇಲೆ ಸುಲಭವಾಗಿ ಆಕ್ರಮಣ ನಡೆಯುತ್ತಿತ್ತು. ಅಮೃತಸರದಲ್ಲಿದ್ದ ರೈಲ್ವೆ ನಿಲ್ದಾಣವಂತೂ ಮುಸ್ಲಿಮರಿಗೆ ನಡುಕ ಹುಟ್ಟಿಸುವ ತಾಣವಾಗಿತ್ತು. ಅಮೃತಸರ ಸಿಖ್ಖರ ಪವಿತ್ರ ಯಾತ್ರಾಸ್ಥಳ. ಆದ್ದರಿಂದ ಅದು ಉಗ್ರಮತೀಯರ ಕೇಂದ್ರಸ್ಥಾನ. ಪಾಕಿಸ್ತಾನವನ್ನು ಪ್ರವೇಶಿಸುವ ಮೊದಲು ರೈಲು ಹಾದು ಹೋಗಬೇಕಿದ್ದ ಕೊನೆಯ ದೊಡ್ಡ ಜಂಕ್ಷನ್ ಇದು. ಹೀಗೆ ಧಾಳಿಗೆ ತುತ್ತಾಗಿ ಧ್ವಂಸವಾಗಿದ್ದ ರೈಲು ನಿಲ್ದಾಣವನ್ನು ನಾನು ನೋಡಿದೆ. ಅಲ್ಲಿ ಸಾವಿರಾರು ಮುಸ್ಲಿಂ ನಿರಾಶ್ರಿತರು ಪ್ರಾಣ ಕಳೆದುಕೊಂಡಿದ್ದರು. ಉದ್ದುದ್ದ ಗಡ್ಡಗಳನ್ನು ಬಿಟ್ಟುಕೊಂಡು ಗಾಢನೀಲಿಯ ಪೇಟ ಕಟ್ಟಿದ್ದ ಉಗ್ರ ಅಕಾಲಿಪಂಥದ ಸಿಖ್ಖರು ಪ್ಲಾಟ್‌ಫಾರಂನ ಉದ್ದಕ್ಕೂ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತಿದ್ದರು. ಅವರೆಲ್ಲ ಒಳ್ಳೆಯ ಅನುಕೂಲಸ್ಥರಂತೆಯೇ ಕಾಣುತ್ತಿದ್ರು. ಈ ದೇಶಭಕ್ತರು ಮೊಣಕಾಲುಗಳ ನಡುವೆ ಉದ್ದನೆಯ ಬಾಗಿದ ಕತ್ತಿಗಳನ್ನಿಟ್ಟುಕೊಂಡು ಮುಂದಿನ ರೈಲು ಬರುವುದನ್ನೇ ತಣ್ಣಗೆ ನಿರೀಕ್ಷಿಸುತ್ತಿದ್ದವರು. ಆದರೆ, ಮುಸ್ಲಿಮರು ಮಾತ್ರವೇ ಹೀಗೆ ಬಲಿಯಾಗುತ್ತಿದ್ದರೆಂದಲ್ಲ. ಪಾಕಿಸ್ತಾನ ಗಡಿಯಿಂದ ಭಾರತವನ್ನು ಪ್ರವೇಶಿಸುವುದಕ್ಕೆ ಮೊದಲು ಸಿಗುತ್ತಿದ್ದ ಕೊನೆಯ ಜಂಕ್ಷನ್ ಲಾಹೋರ್. ಅದನ್ನು ದಾಟಿ ಬರುವಾಗ ಸಿಖ್ಖರು ಇಂಥದೇ ಬರ್ಬರ ಧಾಳಿಗೆ ತುತ್ತಾಗುತ್ತಿದ್ದರು. ಪಾಕಿಸ್ತಾನದ ಹೆದ್ದಾರಿಗಳಲ್ಲಿ ಬರುತ್ತಿದ್ದ ಹಿಂದೂ ಸಿಖ್ ನಿರಾಶ್ರಿತರನ್ನು ಕಂಡರೆ ಮುಸ್ಲಿಮರ ಕೋಪ ಕೆರಳುತ್ತಿತ್ತು.

ಲೈಫ್‌ಗಾಗಿ ನಾನು ಈ ‘great migration’ ಫೋಟೋ ಸರಣಿ ಸಿದ್ಧಪಡಿಸುತ್ತಿದ್ದೆ. ನನ್ನ ಜೊತೆಗೆ ಲೀ ಎಟಿಂಗ್‌ಟನ್ ಫ್ರಿಜೆಲ್ ಇದ್ದಳು. ನಾನು ತೆಗೆಯುವ ಚಿತ್ರಗಳಿಗೆ ಶೀರ್ಷಿಕೆ ರಚಿಸುವುದು ಆಕೆಯ ಕೆಲಸ. ಹೀಗೆ ನಾವು ನಮಗೆ ಬೇಕಾದ ಸಾಮಗ್ರಿ ಸಂಗ್ರಹಿಸುತ್ತ ಪಂಜಾಬಿನ ಸುಮಾರು ನಾನೂರು ಮೈಲು ಉದ್ದಗಲಗಳಲ್ಲಿ ಸಂಚರಿಸಿದ್ದೆವು. ಈ ಕೆಲಸ ಹೆಂಗಸರಿಗೆ ಅಸಾಧ್ಯ ಎಂದು ನಮಗೆ ಎಚ್ಚರಿಕೆ ಕೊಟ್ಟಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನ ವ್ಯವಸ್ಥೆ ಸಿಗುವುದು ಕಷ್ಟವಾಗುತ್ತದೆ ಎಂದಿದ್ದರು. ಧಾಳಿಕೋರರು ಹೆಂಗಸರನ್ನು ಅಪಹರಿಸಿದ ಭಯಂಕರ ಘಟನೆಗಳು ವರದಿಯಾಗಿದ್ದವು. ಈ ಅಪಹರಣ ವರದಿಗಳ ಬಗ್ಗೆ ನಾನಾಗಲೀ, ಲೀ ಆಗಲಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಪ್ರತಿದಿನದ ನಮ್ಮ ಪ್ರಯಾಣಕ್ಕೆ ಸರಿಯಾದ ಡ್ರೈವರ್‌ನನ್ನು ಹೊಂದಿಸಿಕೊಳ್ಳುವುದು ನಮಗೆ ನಿರಂತರ ಸಮಸ್ಯೆಯಾಗಿತ್ತು. ನಮ್ಮ ಡ್ರೈವರ್ ನಾವು ಯಾವ ಭಾಗದಲ್ಲಿ ಸಂಚರಿಸುತ್ತೇವೋ ಅಲ್ಲಿನ ಧಾರ್ಮಿಕ ವಾತಾವರಣಕ್ಕೆ ಹೊಂದಿಕೆಯಾಗುವಂಥವನಾಗಿರಬೇಕಿತ್ತು. ಗಡಿ ಪ್ರದೇಶವನ್ನು ದಾಟುವಾಗ ಯಾವ ಧರ್ಮಗಳ ವಿರುದ್ಧವೆನಿಸದಂಥವನಾಗಿರಬೇಕಿತ್ತು. ಈ ಸಂದರ್ಭಕ್ಕಾಗಿ ನಾವು ಬ್ರಿಟಿಷ್ ಕ್ಯಾಪ್ಟನ್ ಒಬ್ಬರ ಸೇವೆಯನ್ನು ಪಡೆದುಕೊಂಡವು. ಪಾಕಿಸ್ತಾನ ಸೇನೆಯಲ್ಲಿ ಅವರು ಅಧಿಕಾರಿಯಾಗಿದ್ದರು. ಅವರು ನಮ್ಮ ಅಗತ್ಯತೆಗೆ ತಕ್ಕಂತಿದ್ದರು. ಆ ದಿನವೆಲ್ಲ ನಮ್ಮ ಕಣ್ಣಿಗೆ ಕಂಡದ್ದು ತುಂಬ ದುಃಖ ತರುವಂಥ ಸಂಗತಿಗಳು. ನಾವು ಮೊತ್ತ ಮೊದಲ ಬಾರಿಗೆ ಕಾಲರಾ ವ್ಯಾಧಿಯ ವಿಕೋಪವನ್ನು ನೋಡಿದೆವು. ಕಸೂರ್ ಎಂಬಲ್ಲಿ ಸ್ವಲ್ಪ ಸುಧಾರಿತವೆಂದು ಹೇಳಬಹುದಾದ ಆಸ್ಪತ್ರೆಗೆ ಭೇಟಿಕೊಟ್ಟೆವು. ಅಲ್ಲಿ ಕಾಲರಾದಿಂದ ನರಳುತ್ತಿದ್ದ ಸುಮಾರು ೮೦೦ ಮಂದಿ ರೋಗಿಗಳು ಜಾಗವಿಲ್ಲದೆ ನೆಲದ ಮೇಲೆ ಮಲಗಿದ್ದರು. ಅವರಲ್ಲಿ ಕೆಲವರು ಬದುಕಿಕೊಳ್ಳಬಹುದು ಎಂದು ಹೇಳಿದರಾದರೂ ಅವರನ್ನು ನೋಡಿದಾಗ ನಮಗೆ ಅಂಥ ಭರವಸೆಯೇನೂ ಮೂಡಲಿಲ್ಲ. ಅವರಿಗೆ ಎಂತಹ ಚಿಕಿತ್ಸೆ ಸಿಗುತ್ತದೆ ಎಂಬುದರ ಮೇಲೆ ಅವರ ಉಳಿವು ಅಳಿವು ಅವಲಂಬಿಸಿತ್ತು. ಬಹುಶಃ ನನ್ನನ್ನು ತುಂಬ ಕಂಗಾಲು ಮಾಡಿದ ದೃಶ್ಯ ಇದೇ ಇರಬೇಕು. ಇವರೆಲ್ಲ ಅಮಾಯಕ ರೈತರು. ತಮ್ಮ ಪೂರ್ವಿಕರ ಕಾಲದಿಂದ ನೆಲೆಸಿದ್ದ ಮನೆಗಳನ್ನು ಅನಿವಾರ್ಯವಾಗಿ ತೊರೆದು ಬಂದಿದ್ದರು. ತಮ್ಮ ಕನಸಿನ ನಾಡು ಸಿಗುತ್ತದೆ ಎಂದು ನಂಬಿ ಬಂದಿದ್ದವರು ಕೆಲವರು.

ಒಂದು ಸಲ ಸಂಜೆಯಾಗುತ್ತಿದ್ದಂತೆ ನಾವು ಲಾಹೋರಿಗೆ ಹಿಂದಿರುಗುತ್ತಿದ್ದಾಗ ಅಲ್ಲಿನ ಒಂದು ಹೊಲದಲ್ಲಿ ಜನರ ಗುಂಪು ಕಂಡಿತು. ಅವರೆಲ್ಲ ಚೂಪು ಕತ್ತಿಗಳನ್ನು ಸಿಕ್ಕಿಸಿದ್ದ ಉದ್ದಕೋಲುಗಳನ್ನು ಹಿಡಿದಿದ್ದರು. ಅಲ್ಲಿಂದ ಮುಂದೆ ರಸ್ತೆಯಲ್ಲಿ ತಿರುವು ತೆಗೆದುಕೊಂಡಾಗ ನಿರಾಶ್ರಿತರನ್ನು ತುಂಬಿಕೊಂಡ ಒಂದು ಟ್ರಕ್ ಹೋಗುತ್ತಿದ್ದುದು ಕಂಡು ಬಂತು. ಅದರಲ್ಲಿದ್ದವರೆಲ್ಲ ಹಿಂದೂಗಳು. ಈ ಮುಸ್ಲಿಂ ಪ್ರದೇಶದಲ್ಲಿ ಅವರು ಸಿಕ್ಕಿಕೊಂಡಿದ್ದರು. ನಾವು ಮೊದಲು ಹೊಲದಲ್ಲಿ ನೋಡಿದ ಜನ ಭರ್ಜಿಗಳನ್ನು ಹಿಡಿದು ಇವರನ್ನು ಅಟ್ಟಿಸಿಕೊಂಡು ಬರುತ್ತಿದ್ದರು. ಓಡಿಬಂದ ಜನ ಟ್ರಕ್ ಮೇಲೆ ಹತ್ತಿ ಅಲ್ಲಿದ್ದ ಬಟ್ಟೆ ಬರೆ ವಸ್ತುಗಳನ್ನೆಲ್ಲ ಎಳೆದಾಡಿ ಕೆಳಕ್ಕೆಸೆದರು. ಒಬ್ಬ ಕೈಕೊಡಲಿಯಿಂದ ಜನರನ್ನು ಕೊಚ್ಚುತ್ತಿದ್ದ. ಟ್ರಕ್‌ನಲ್ಲಿದ್ದವರು ಭಯದಿಂದ ಅರಚುತ್ತಿದ್ದರು. ನಮ್ಮ ಜೀಪವನ್ನು ಡ್ರೈವ್ ಮಾಡುತ್ತಿದ್ದ ಕ್ಯಾಫ್ಟನ್ ಜೀಪಿನಿಂದ ಹೊರಹಾರಿ, ಅಲ್ಲಿಂದ ದೂರ ಹೋಗುವಂತೆ ಆಕ್ರಮಣಕಾರರಿಗೆ ಅಪ್ಪಣೆ ಮಾಡಿದ. ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ. ಆದರೆ ಟ್ರಕ್ ಮುಂದೆ ಹೋಗದಂತೆ ದಪ್ಪತಂತಿಯ ಮೇಲೆ ಅಡ್ಡವಾಗಿತ್ತು. ಈ ತಡೆಯನ್ನು ಕ್ಯಾಪ್ಟನ್ ತೆಗೆದುಹಾಕುತ್ತಿದ್ದಾಗ ಧಾಳಿಕೋರರು ಪುನಃ ಹಿಂಭಾಗದಿಂದ ಟ್ರಕ್ ಮೇಲೆ ಹತ್ತಿದರು. ಕೈಯಲ್ಲಿದ್ದ ಭರ್ಜಿ ಕೊಡಲಿಗಳನ್ನು ಮನಬಂದತ್ತ ಬೀಸುತ್ತಿದ್ದರು. ಈ ಸ್ಥಳದಿಂದ ನಾವು ಕೇವಲ ಮೂರು ಗಜಗಳ ಅಂತರದಲ್ಲಿದ್ದೆವು. ಕ್ಯಾಪ್ಟನ್ ಅವರಲ್ಲಿ ಒಬ್ಬನ ಮೇಲೆ ಗುಂಡು ಹಾರಿಸಿದ. ಇತರರು ಟ್ರಕ್ಕಿನಿಂದ ಇಳಿದು ಕತ್ತಲಲ್ಲಿ ಓಡಿ ಮರೆಯಾದರು. ನಮ್ಮ ಜೀಪು ಮುಂದೆ ಹೊರಟಾಗ ಎಲ್ಲಿಂದಲೋ ಕೆಲವು ಗುಂಡುಗಳು ಹಾರಿದ ಶಬ್ದ ಕೇಳಿಸಿತು.

ಜನವಲಸೆಯನ್ನು ಹಿಂಬಾಲಿಸುತ್ತ ನಾವು ವಾರಗಟ್ಟಲೆ ತಿರುಗಾಡಿದೆವು. ನಮ್ಮ ಬಟ್ಟೆಬರೆಗಳು ಧೂಳಿನಿಂದ ರಟ್ಟಿನಂತಾಗಿದ್ದವು. ಕೂದಲು ಬೂದಿಬಣ್ಣಕ್ಕೆ ತಿರುಗಿತ್ತು. ಕ್ಯಾಮರಾಗಳಲ್ಲಿಯೂ ಧೂಳು ಕಟ್ಟಿಕೊಂಡಿತ್ತು. ನಾವೂ ಕೂಡ ಈ ಓಡಾಟದಲ್ಲಿ ಎಷ್ಟು ಸುಸ್ತಾಗಿದ್ದೆವೆಂದರೆ ನಮ್ಮ ಕಣ್ಣ ಮುಂದೆಯೇ ನಡೆದ ಎಷ್ಟೋ ಹೃದಯವಿದ್ರಾವಕ ಘಟನೆಗಳ ಫೋಟೋ ತೆಗೆಯುವುದನ್ನು ಬಿಟ್ಟುಬಿಟ್ಟೆವು. ನನ್ನ ನೆಗೆಟಿವ್‌ಗಳೆಲ್ಲ ಮುಗಿದೆವು. ಲೀ ಎಲ್ಲ ಫೋಟೋಗಳಿಗೂ ಸೂಕ್ತ ಇನ್ನೊಂದು ಕ್ಯಾಪ್ಶನ್ ಬರೆದಳು. ವಿಮಾನದಲ್ಲಿ ಅವುಗಳನ್ನು ಲೈಫ್‌ಗೆ ಕಳಿಸಿದೆವು. ಆಮೇಲೆ ಲೀ ಇನ್ನೊಂದು ಹೊಸ ಯೋಜನೆಯ ಮೇಲೆ ಜಗತ್ತಿನ ಇನ್ನೊಂದು ಭಾಗಕ್ಕೆ ಹೋದಳು. ಇಷ್ಟೆಲ್ಲ ಆದರೂ ಸಹಸ್ರ ಸಹಸ್ರ ರೈತಾಪಿ ಜನರ ಈ ದುರಂತ ಪ್ರಯಾಣ ನಡೆದೇ ಇತ್ತು. ಮುಂದೇನು ಎಂದು ಅವರಿಗೆ ಗೊತ್ತಿರಲಿಲ್ಲ. ಪಾಕಿಸ್ತಾನವನ್ನು ಬಿಟ್ಟು ಹೊರಟಿದ್ದ ಸಿಖ್ ಮತ್ತು ಹಿಂದೂಗಳ ಸಂಖ್ಯೆ ಸುಮಾರು ನಾಲ್ಕು ದಶಲಕ್ಷ. ಇದಕ್ಕೆ ಪ್ರತಿಯಾಗಿ ಭಾರತದಿಂದ ಪಾಕಿಸ್ತಾನದ ಕಡೆ ಹೊರಟಿದ್ದ ಮುಸ್ಲಿಮರ ಸಂಖ್ಯೆ ಆರು ದಶಲಕ್ಷ. ಹೀಗಾಗಿ ಈ ಪರಿಶುದ್ದ ಪುಟ್ಟನಾಡು ಈ ಸಂಖ್ಯಾಬಾಹುಳ್ಯದಿಂದಲೇ ಕುಸಿದುಹೋಗುವ ಅಪಾಯದಲ್ಲಿದ್ದಂತೆ ತೋರುತ್ತಿತ್ತು.

ಮುಸ್ಲಿಂ ರೈತರು ಭಾರತದಲ್ಲಿ ಎಲ್ಲೆಲ್ಲಿದ್ದರೂ ಅದು ಮುಖ್ಯವಲ್ಲ. ಆದರೆ ಈಗ ಪಾಕಿಸ್ತಾನಕ್ಕೆ ಬಂದ ಮೇಲೆ ಇಂಥ ಸ್ಥಳದಲ್ಲಿ ನೆಲೆಸಬೇಕು ಎಂದು ಅವರು ನಿರ್ಧರಿಸಿಕೊಂಡು ಬಿಟ್ಟಿದ್ದರು. ಹೀಗೆ ಅವರು ನಿರ್ಧರಿಸಿಕೊಂಡಿದ್ದ ಸ್ಥಳದ ಹೆಸರು ಲ್ಯಾಲ್‌ಪುರ. ಪ್ರತಿಯೊಬ್ಬರೂ ಅಲ್ಲಿಯೇ ಹೊಲ ಮಾಡಿಕೊಳ್ಳುವ ಆಸೆಯಿಟ್ಟುಕೊಂಡಿದ್ದರು. ಯಾಕೆಂದರೆ ಇಡೀ ಭಾರತ ಉಪಖಂಡದಲ್ಲಿ ಇದರಷ್ಟು ಫಲವತ್ತಾದ ಭೂಮಿ ಇನ್ನೊಂದಿರಲ್ಲ. ಪೂರ್ವ ಮತ್ತು ಪಶ್ಚಿಮ ಪಂಜಾಬಿನ ನಡುವೆ ರಾಷ್ಟ್ರೀಯ ವಿಭಜನಾ ಗೆರೆ ಎಳೆದಾಗ ಲ್ಯಾಲ್‌ಪುರ ಪಾಕಿಸ್ತಾನಕ್ಕೆ ಸೇರಿಕೊಂಡು ಬಿಟ್ಟಿತು. ಕೇವಲ ಮೂವತ್ತು ವರ್ಷಗಳ ಹಿಂದೆ ಲ್ಯಾಲ್‌ಪುರ ಸಿಕ್ಕುಸಿಕ್ಕಾದ ಕಾಡು ಪ್ರದೇಶವಾಗಿತ್ತು. ಭಾರತದ ವೀರಾಗ್ರಣಿಗಳು ಎಂದು ಪ್ರಸಿದ್ಧರಾಗಿದ್ದ ಹಾಗೂ ಅತ್ಯಂತ ಕಷ್ಟಪಟ್ಟು ದುಡಿಯುವುದಕ್ಕೆ ಹೆಸರಾಗಿದ್ದ ಸಿಖ್ಖರು ಇಲ್ಲಿ ಬಂದು ನೆಲೆಸಿದ್ದು ಕುತೂಹಲಕಾರಿ. ಮೊದಲನೇ ಮಹಾಯುದ್ಧದಲ್ಲಿ ಹೋರಾಡಿದ್ದಕ್ಕೆ ಬಳುವಳಿಯಾಗಿ ಈ ಕಾಡು ಪ್ರದೇಶದಲ್ಲಿ ಅವರಿಗೆ ಭೂಮಿಯನ್ನು ಕೊಡಲಾಗಿತ್ತು. ಇಲ್ಲಿ ಬಂದು ನೆಲೆಸಿದ ಸಿಖ್ಖರು ಕಾಡನ್ನು ಸವರಿದರು. ಕಾಲುವೆ ತೋಡಿದರು. ಉಳುಮೆ ಮಾಡಿದರು. ಕೇವಲ ಒಂದೇ ಒಂದು ತಲೆಮಾರಿನೊಳಗಾಗಿ ಈ ಭೂಮಿಯಲ್ಲಿ ಇವರು ಗೋಧಿ, ಹತ್ತಿ ಹಾಗೂ ಎಣ್ಣೆಬೀಜಗಳ ಸಮೃದ್ಧ ಬೆಳೆ ತೆಗೆಯತೊಡಗಿದರು. ಬಲವಾದ ಸುತ್ತುಗೋಡೆಯಿರುವ ಹಳ್ಳಿಗಳನ್ನು ಕಟ್ಟಿಕೊಂಡರು. ಪ್ರತಿ ಹಳ್ಳಿಯ ಮಧ್ಯೆ ಒಂದು ಗುರುದ್ವಾರ. ಎಲ್ಲರೂ ಆರಾಧನೆಗಾಗಿ ಅಲ್ಲಿ ಸೇರುತ್ತಿದ್ದರು.

ಮುಸ್ಲಿಮರಂತೆ ಸಿಖ್ಖರು ಕೂಡ ಏಕದೇವೋಪಾಸಕರು, ಹಿಂದೂಗಳಂತೆ ನೂರಾರು ದೇವರುಗಳನ್ನು (ಜೊತೆಗೆ, ಮರ, ನದಿ, ಗೋವು ಸೇರಿದಂತೆ) ಪೂಜಿಸುವವರಲ್ಲ. ಹೀಗಿದ್ದೂ ಇವರಿಬ್ಬರೇ ಯಾಕೆ ಬದ್ಧವೈರಿಗಳಂತೆ ಸೆಣಸಾಡಿದರು ಎಂಬುದು ಅರ್ಥವಾಗದ ಸಂಗತಿ. ಈ ಕಾರಣದಿಂದಲೇ ನನಗೆ ಈ ‘ಧಾರ್ಮಿಕ ಯುದ್ಧಗಳೆಲ್ಲ ನಿಜಕ್ಕೂ ಧಾರ್ಮಿಕ ಕಾರಣಕ್ಕಾಗೇ ನಡೆಯುತ್ತಿವೆಯೋ ಎಂಬ ಪ್ರಶ್ನೆ ಕಾಡತೊಡಗಿತ್ತು. ಬಹುಶಃ ಇವರೆಲ್ಲ ಧರ್ಮದ ಸೋಗಿನಲ್ಲಿ ಇನ್ನಾವುದೋ ಉದ್ದೇಶಕ್ಕೆ ಹೋರಾಡುತ್ತಿದ್ದಾರೆ ಎನ್ನಿಸಿತು. ಇಂತಹ ಧಾರ್ಮಿಕ ವೈಮನಸ್ಯಗಳ ಪ್ರಾಯೋಗಿಕ ಅನುಕೂಲಗಳೇನು ಎಂಬುದು ಮುಂದೆ ನನಗೆ ಮನವರಿಕೆಯಾಯಿತು.

ರಸ್ತೆಗಳಲ್ಲಿ ನನಗೆ ಎದುರಾದ ಸಿಖ್ಖರು ಹೇಳಿದ ಪ್ರಕಾರ ‘ಏನು ನಡೆಯುತ್ತಿದೆ ಎಂದು ಗೊತ್ತಾಗುವುದಕ್ಕೂ ಮೊದಲೇ ದುರಂತ ಬಂದೆರಗಿತ್ತು ನಾವು ನಮ್ಮ ನಾಡನ್ನು ಬಿಟ್ಟು ಹೋಗಬೇಕಾಗಬಹುದು ಎಂದು ನಮ್ಮ ನಾಯಕರು ನಮಗೆ ತಿಳಿಸಲೇ ಇಲ್ಲ. ಅಷ್ಟೆಲ್ಲ ಶ್ರಮಪಟ್ಟು ಸುಧಾರಿಸಿದ್ದ ಭೂಮಿಯನ್ನು ನಾವು ಬಿಟ್ಟುಬರಬೇಕಾಯಿತು’ ಎಂದು ಅವರು ಹೇಳಿದರು. ‘ಇಡೀ ಪಂಜಾಬನ್ನು ನಮಗೇ ಬಿಟ್ಟುಕೊಡುತ್ತಾರೆ ನಮಗೆ ನಮ್ಮದೇ ಆದ ಸಿಖ್ ಸ್ಥಾನ ಸಿಗುತ್ತೆ ಎಂದು ನಾವು ಅಂದುಕೊಂಡಿದ್ದೆವು’. ಎಂಬ ಮಾತನ್ನಂತೂ ಪದೇ ಪದೇ ಅವರು ಹೇಳುತ್ತಿದ್ದರು. ಮುಖ್ಯವಾಗಿ ಲ್ಯಾಲ್‌ಪುರ ಜಿಲ್ಲೆಯನ್ನು ಬಿಟ್ಟುಹೋಗಬೇಕಾದವರಂತೂ ಇಂತಹ ಹಠಾತ್ ಉಚ್ಛಾಟನೆಯಿಂದ ದಂಗಾಗಿದ್ದರು. ಇಲ್ಲಿದ್ದ ಹಳ್ಳಿಗಳಲ್ಲಿ ಮುಸ್ಲಿಮರ ಸಂಖ್ಯೆ ಶೇಕಡಾ ೨೫ ರಿಂದ ೪೦ ರಷ್ಟು ಮಾತ್ರ. ಸಿಖ್ ರೈತರೊಂದಿಗೆ ಅವರ ಸಂಬಂಧ ಸ್ನೇಹಮಯವಾಗಿತ್ತು. ಸುತ್ತಮುತ್ತಲ ಜಿಲ್ಲೆಗಳಲ್ಲಿ ರಕ್ತಪಾತ ಆರಂಭವಾದಾಗ, ಇಲ್ಲಿ ನಿಮಗೆ ಏನೂ ತೊಂದರೆಯಾಗುವುದಿಲ್ಲ. ನಾವೆಲ್ಲ ಸೋದರರಂತೆ ಬಾಳುತ್ತಿದ್ದೇವೆ ಎಂದು ಮುಸ್ಲಿಮರು ಹೇಳಿದ್ದರು. ಆದರೆ ವಿಭಜನೆಯನ್ನು ಸಾಧಿಸುವುದಕ್ಕಾಗಿ ಹುಟ್ಟುಹಾಕಿದ್ದ ವಿದ್ವೇಷದ ಭಾವನೆ ಎಲ್ಲ ನಿಯಂತ್ರಣವನ್ನೂ ಮೀರಿ ವ್ಯಾಪಿಸಿತ್ತು. ವಿಭಜನೆಗೆ ಧಾರ್ಮಿಕ ಆಧಾರವೇ ಮುಖ್ಯ ಕಾರಣವಾದಾಗ ಎಲ್ಲರೂ ಬರ್ಬರವಾಗಿ ವರ್ತಿಸಿದ್ದರು. ಎಲ್ಲೋ ಅಲ್ಲೊಂದು ಇಲ್ಲೊಂದು ಗುಂಪು ಸರಿಯಾಗಿ ಯೋಚಿಸುತ್ತಿದ್ದರೂ ಈ ಭಯೋತ್ಪಾದಕತೆಯನ್ನು ಅಡಗಿಸಲು ಅವರಿಂದ ಸಾಧ್ಯವಾಗಲಿಲ್ಲ.

ಈ ಬಿಕ್ಕಟ್ಟು ಹೇಗೆ ಬೆಳೆಯಿತು ಎಂದು ಗುರುದಿತ್ ಸಿಂಗ್ ವಿವರಿಸಿದ. ೧೮ ಮೈಲುದ್ದದವರೆಗೆ ಇದ್ದ ಹಾಗೂ ಸಾವಿರಾರು ಎತ್ತಿನ ಗಾಡಿಗಳು ಒಂದರ ಹಿಂದೊಂದರಂತೆ ಶಿಸ್ತಾಗಿ ಚಲಿಸುತ್ತಿದ್ದ ವಲಸೆಯ ಪ್ರವಾಹದಲ್ಲಿ ಗುರುದಿತ್ ಸಿಂಗ್ ಮತ್ತು ಅವನ ಸಹೋದರರು ಹಾಗೂ ಅವರ ಪತ್ನಿಯರ ಇಡೀ ಕುಟುಂಬವೂ ಒಂದಾಗಿತ್ತು. ಹೀಗೇ ಹೋಗುತ್ತಿರುವಾಗ ಅವರ ಗಾಡಿಯ ಚಕ್ರ ಮುರಿದ ಕಾರಣ ಅದನ್ನು ಸರಿಪಡಿಸುವುದಕ್ಕಾಗಿ ಅವರ ಒಂದು ಕಡೆ ಸ್ವಲ್ಪ ಕಾಲ ನಿಲ್ಲಲೇಬೇಕಾಯಿತು. ಗಾಡಿಯ ಮೇಲೆ ಬೈಸಿಕಲ್ಲುಗಳು, ಹಾಸಿಗೆಗಳು, ಕೃಷಿ ಉಪಕರಣಗಳು, ಅಡುಗೆ ಸಾಮಾನುಗಳು ಹೀಗೆ ಹೊರಲಾರದಷ್ಟು ಹೊರೆಯನ್ನು ಏರಿಸಿದ್ದರು. ಉದ್ದುದ್ದ ಗಡ್ಡಗಳು, ರೋಮಭರಿತ ತೋಳುಗಳು, ಧೂಳು ಮುಸುಕಿದ ಹುಬ್ಬುಗಳು, ಜಡ್ಡುಗಟ್ಟಿದ ತಲೆಗೂದಲು ಆ ಕುಟುಂಬದ ಗಂಡಸರೆಲ್ಲ ಸೇರಿ ಗಾಡಿಯ ಚಕ್ರವನ್ನು ಸರಿಪಡಿಸಲು ಹೆಣಗಾಡುತ್ತಿದ್ದಾಗ ಈ ಭೂಮಿಯ ಮೇಲಿನ ಯಾವುದೋ ವಿಚಿತ್ರ ದೈತ್ಯ ಪೀಳಿಗೆಯವರಂತೆ ಕಾಣುತ್ತಿದ್ದರು. ಗುರುದಿತ್ ಸಿಂಗ್ ಇದ್ದ ಹಳ್ಳಿಯ ಜನ ಹಳ್ಳಿಯನ್ನು ಬಿಡಲೇಬೇಕಾಗಿ ಬಂದ ಪರಿಸ್ಥಿತಿ ನಿರ್ಮಾಣವಾಗಿದ್ದು ಹೀಗೆ : ಮೊದಲನೆಯ ರಾತ್ರಿ, ಹಳ್ಳಿಯ ಗೋಡೆಯ ಹೊರಗೆ ಕಬ್ಬಿನ ಹೊಲದಲ್ಲಿ ಕೆಲವೊಂದು ಮುಸ್ಲಿಮರು ಗುಂಪು ಗೂಡಿ, ಎಲ್ಲ ಹೊರಗೆ ಬನ್ನಿ ಎಂದು ಕೂಗಾಡುತ್ತಿದ್ದರು. ಆ ರಾತ್ರಿ ಅಷ್ಟಕ್ಕೇ ಮುಗಿಯಿತು. ಮಾರನೇ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಳ್ಳಿಯನ್ನು ಸುತ್ತುವರೆದರು. ಅವರೆಲ್ಲ ಇಲ್ಲಿನವರಲ್ಲ; ಯಾವುದೋ ದೂರದ ಕಡೆಯಿಂದ ಬಂದ ಮುಸ್ಲಿಮರು. ಮಧ್ಯರಾತ್ರಿಯ ಹೊತ್ತಿಗೆ ‘ಅಲ್ಲಾ ಹೋ ಅಕ್ಬರ್’ ಎಂದು ಕೂಗಲಾರಂಭಿಸಿದರು. ಮನೆಯ ಛಾವಣಿಗಳನ್ನು ಹತ್ತಿ ನೋಡಿದ ಸಿಖ್ಖರಿಗೆ ದೂರದಲ್ಲಿ ಕೆಂಪು ಬೆಂಕಿಯ ಜ್ವಾಲೆಗಳು ಕಾಣಿಸಿದವು. ಇತರ ಹಳ್ಳಿಗಳನ್ನು ಹೀಗೇ ಸುತ್ತುವರೆದು ಬೆಂಕಿ ಹಚ್ಚಿದ್ದಾರೆ ಎಂದು ಅರ್ಥವಾಯಿತು. ಇನ್ನೂ ಬೆಳಕಾಗಿರಲಿಲ್ಲ. ಆಗ ಮುಸ್ಲಿಂ ಶಾಲಾ ಮಾಸ್ತರರೊಬ್ಬರು ನೀವು ಯಾರೂ ಇಲ್ಲಿಂದ ಹೋಗಬೇಡಿ. ನಾವು ಮೊದಲಿನಿಂದಲೂ ನಿಮ್ಮೊಂದಿಗೆ ಶಾಂತಿಯಿಂದ ಬಾಳಿದ್ದೇವೆ. ನಿಮಗೆ ನಾವು ರಕ್ಷಣೆ ಕೊಡುತ್ತೇವೆ. ಸಾಯುವುದಿದ್ದರೆ ನಿಮ್ಮೊಂದಿಗೆ ನಾವೂ ಸಾಯುತ್ತೇವೆ ಎಂದು ಸಿಖ್ಖರಿಗೆ ಹೇಳಿದರು. ಆದರೆ ಮಾರನೇ ರಾತ್ರಿ ಕಬ್ಬಿನ ಹೊಲದಿಂದ ಜೋರಾಗಿ ನಗಾರಿಗಳನ್ನು ಬಡಿಯುವ ಶಬ್ದ ಕೇಳಿಸಿತು. ಇದು ಆಕ್ರಮಣದ ಸೂಚನೆ ಎಂದು ಸಿಖ್ಖರಿಗೆ ಅರ್ಥವಾಯಿತು. ದೂರದಲ್ಲಿ ಎಲ್ಲೆಲ್ಲೂ ಬೆಂಕಿಯ ಜ್ವಾಲೆಗಳು ಉರಿಯುತ್ತಿದ್ದವು. ಮಧ್ಯರಾತ್ರಿಯಾಗಿದ್ದಾಗ ಶಾಲಾ ಮಾಸ್ತರರು ಬಂದರು. ‘ನಾವು ಏನೂ ಮಾಡುವಂತಿಲ್ಲ’ ಎಂದು ಹೇಳಿ ಒಂದು ಪತ್ರವನ್ನು ಸಿಖ್ಖರ ಕೈಗೆ ಕೊಟ್ಟರು. ಅಲ್ಲಿದ್ದ ಜನರಲ್ಲಿ ಹೆಚ್ಚು ವಿದ್ಯಾವಂತನಾಗಿದ್ದ ಮಾಸ್ತರನಿಂದ ಒತ್ತಾಯಪೂರ್ವಕವಾಗಿ ಆ ಪತ್ರವನ್ನು ಬರೆಸಲಾಗಿತ್ತು. ಅದರ ಒಕ್ಕಣೆ ಹೀಗಿತ್ತು. ‘ಇದು ನಮ್ಮ ದೇಶ. ನೀವು ಈ ಜಾಗವನ್ನು ಬಿಟ್ಟು ಹೋಗಬೇಕು. ಈ ಭೂಮಿ ಮತ್ತು ಇಲ್ಲಿನ ಆಸ್ತಿಯೆಲ್ಲವೂ ಪಾಕಿಸ್ತಾನಕ್ಕೆ ಸೇರಿರುವುದರಿಂದ ನೀವು ಇಲ್ಲಿನ ಯಾವುದೇ ಚರಸ್ವತ್ತನ್ನೂ ತೆಗೆದುಕೊಂಡು ಹೋಗಬಾರದು’ ಪತ್ರ ಕೊಡುವಾಗ ಮಾಸ್ತರರು ಅಳುತ್ತಿದ್ದರು.

ಮುಂದೆ ಬೆಲೂಕಿ ಎಂಬ ಸ್ಥಳದಿಂದ ದೊಡ್ಡ ವಲಸೆ ಹೊರಡುತ್ತಿದೆ ಎಂದು ತಿಳಿದುಕೊಂಡ ಗ್ರಾಮಸ್ಥರು ಟೌನ್‌ಹಾಲ್‌ಗೆ ಪತ್ರ ಬರೆದು ತಮಗೆ ಬೆಂಗಾವಲು ಕಳಿಸಬೇಕೆಂದು ಮನವಿ ಮಾಡಿಕೊಂಡರು. ಜಿಲ್ಲಾ ಮ್ಯಾಜಿಸ್ಟ್ರೇಟರು ಅವರ ರಕ್ಷಣೆಗಾಗಿ ಸೈನಿಕರನ್ನು ಕಳಿಸಿದರು. ಗ್ರಾಮಸ್ಥರು ಎತ್ತಿನ ಗಾಡಿಗಳಲ್ಲಿ ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ತಮ್ಮ ಸಾಮಾನು ಸರಂಜಾಮನ್ನು ಹೇರಿಕೊಂಡು ಹೊರಟರು. ಲೂಟಿಗಾರರು ಲೂಟಿ ಮಾಡದಂತೆ ಎಲ್ಲ ಮನೆಗಳಿಗೂ ಮ್ಯಾಜಿಸ್ಟ್ರೇಟ್ ಬೀಗ ಹಾಕಿಸಿದ. ಸ್ವತಃ ಮುಸ್ಲಿಮನಾಗಿದ್ದ ಆತ ವ್ಯವಸ್ಯಾಯದಲ್ಲಿ ಪರಿಣಿತನಾಗಿದ್ದ. ಜನ ಊರು ಬಿಟ್ಟು ಹೋಗುವುದನ್ನು ದುಃಖದಿಂದ ನೋಡುತ್ತ ನಿಂತಿದ್ದ. ಬೇರೆ ಕಡೆಯಿಂದ ಇಲ್ಲಿಗೆ ವಲಸೆ ಬರುವ ಜನರ ಕೃಷಿ ವಿಧಾನ ಬೇರೆ ರೀತಿಯಿರುತ್ತದೆ. ಇಲ್ಲಿನ ನೀರಾವರಿ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಅವರಿಗೆ ತಕ್ಷಣ ಸಾಧ್ಯವಾಗುವುದಿಲ್ಲ ಎಂದು ಅವನು ಚಿಂತಿಸುತ್ತಿದ್ದ.

ಜನರ ವಲಸೆ ಆರಂಭವಾದಾಗಿನಿಂದ ಈ ಇಡೀ ಪ್ರದೇಶದ ಕೊಯಿಲು, ಬಿತ್ತನೆ ಮೊದಲಾದ ಕೆಲಸಗಳೆಲ್ಲವೂ ಅಸ್ತವ್ಯಸ್ತಗೊಂಡಿದ್ದವು. ಮುಂದಿನ ಬೆಳೆ ವಿಳಂಬವಾಗುವುದರಿಂದ ಆಹಾರದ ತೀವ್ರ ಕೊರತೆ ಎದುರಾಗಲಿತ್ತು. ನಿರಾಶ್ರಿತರ ವಲಸೆ ಹೆಚ್ಚುತ್ತಲೇ ಇದ್ದುದರಿಂದ ಇದನ್ನು ತಪ್ಪಿಸಲು ಬರುವಂತಿರಲಿಲ್ಲ.

ಪ್ರತಿಯೊಬ್ಬರೂ ಒಂದಲ್ಲ ಒಂದು ನಷ್ಟಕ್ಕೆ ಗುರಿಯಾಗಿದ್ದರು. ಅಮೃತಸರದಲ್ಲಿ ನೆಲೆಸಿದ್ದ ಒಬ್ಬ ಶ್ರೀಮಂತ ಮುಸ್ಲಿಂ ಮಹಿಳೆಯ ಮನೆಯ ಭಾಗ ಭಾರತಕ್ಕೆ ಸೇರಿಹೋದದ್ದರಿಂದ ತನ್ನ ಅಮೂಲ್ಯ ಆಭರಣಗಳನ್ನೆಲ್ಲ ಬಾವಿಗೆ ಹಾಕಿ ಗಡಿದಾಟಿ ಪಾಕಿಸ್ತಾನಕ್ಕೆ ಬಂದಿದ್ದಳು. ಅನಂತರ ಯಾರಾದರೊಬ್ಬ ಮುಳುಗುಗಾರ ಸಿಕ್ಕರೆ ಆ ಸ್ಥಳಕ್ಕೆ ಹೋಗಿ ಆಭರಣಗಳನ್ನು ತೆಗೆದುಕೊಂಡು ಬರಬೇಕೆಂದು ಹುಚ್ಚಿಯಂತೆ ಪರದಾಡುತ್ತಿದ್ದಳು. ಒಬ್ಬಾತ ಕುದುರೆ ತಳಿ ಬೆಳೆಸುವುದರಲ್ಲಿ ನಿಷ್ಣಾತ. ಅವನು ದೇಶದಲ್ಲಿಯೇ ಅತ್ಯುತ್ತಮವಾದ ಕುದುರೆ ತಳಿಗಳನ್ನು ನಿರ್ಮಿಸಿದ್ದ. ವಿಭಜನೆಯ ನಂತರ ಆತ ಪಾಕಿಸ್ತಾನದಲ್ಲಿ ಉಳಿದ. ಆತನ ಬಳಿ ಹೆಣ್ಣು ಕುದುರೆಗಳು ಮಾತ್ರ ಉಳಿದವು. ಪ್ರತಿ ಬೇಸಿಗೆಯಲ್ಲಿಯೂ ಬೀಜದ ಕುದುರೆಗಳನ್ನು ಮೇಯುವುದಕ್ಕಾಗಿ ಕಾಶ್ಮೀರದ ಬೆಟ್ಟದ ತಪ್ಪಲಲ್ಲಿ ಬಿಡುವುದು ಅವನ ಪದ್ಧತಿಯಾಗಿತ್ತು. ಈಗ ಆ ಭಾಗವೆಲ್ಲ ಭಾರತಕ್ಕೆ ಸೇರಿದ್ದರಿಂದ ಬೀಜದ ಕುದುರೆಗಳು ಭಾರತದಲ್ಲೇ ಉಳಿದವು. ಕಾಶ್ಮೀರದ ಆ ಭಾಗದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿತ್ತಾದ್ದರಿಂದ ಆ ಭಾಗ ಭಾರತಕ್ಕೆ ಸೇರಬಹುದೆಂಬ ಊಹೆಯೂ ಆತನಿಗಿರಲಿಲ್ಲ.

ಹೀಗೆ ಸಮಸ್ಯೆಗಳು ಹೆಚ್ಚುತ್ತಲೇ ಇದ್ದವು. ಪಾಕಿಸ್ತಾನದ ಬ್ಯಾಂಕುಗಳ ಕೆಲಸ ನಿಂತುಹೋಗಿತ್ತು. ಗುಮಾಸ್ತರೆಲ್ಲ ಹಿಂದೂಗಳು. ಹೀಗಾಗಿ ಅವರು ಭಾರತಕ್ಕೆ ಹೋಗಿಬಿಟ್ಟರು. ಇಡೀ ಅಂಗಡಿ ಬೀದಿಗಳು ನಿರ್ಜನವಾಗಿದ್ದವು. ಅಂಗಡಿಗಳೆಲ್ಲ ಬಹುತೇಕವಾಗಿ ಹಿಂದೂಗಳಿಗೆ ಸೇರಿದ್ದವು. ಅವರು ನಗದು ಹಣ ತೆಗೆದುಕೊಂಡು ಭಾರತಕ್ಕೆ ಹೋದರು. ಹತ್ತಿ ಮಾರಾಟದ ಕೇಂದ್ರ ಕಟ್ಟಡ ಈಗ ಬಿಕೋ ಎನ್ನುತ್ತಿತ್ತು. ಹತ್ತಿಯ ದಲ್ಲಾಳಿಗಳೆಲ್ಲ ಹಿಂದೂಗಳು. ಸುಮಾರು ಮುನ್ನೂರು ಮಂದಿ ಬ್ರೋಕರುಗಳಲ್ಲಿ ಕೇವಲ ಹತ್ತು ಮಂದಿಯನ್ನು ಬಿಟ್ಟು ಉಳಿದವರೆಲ್ಲ ಭಾರತಕ್ಕೆ ಪಲಾಯನ ಮಾಡಿದ್ದರು. ಕೇವಲ ಹತ್ತು ಮಂದಿಯನ್ನು ಬಿಟ್ಟು ಉಳಿದವರೆಲ್ಲ ಭಾರತಕ್ಕೆ ಪಲಾಯನ ಮಾಡಿದ್ದರು. ಪಾಕಿಸ್ತಾನದ ಬಂಗಾರದ ಎಳೆ ಎಂದು ಪ್ರಸಿದ್ಧವಾಗಿದ್ದ ಸೆಣಬಿನ ಸಂಪತ್ತೆಲ್ಲವೂ ಕೊಳ್ಳುವವರಿಲ್ಲದೆ ಗಡಿ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿತ್ತು. ಏಕೆಂದರೆ ಸೆಣಬಿನ ಗಿರಣಿಗಳು ಭಾರತದಲ್ಲಿದ್ದವು. ಉಕ್ಕಿನ ಗಿರಣಿಗಳು ಭಾರತದಲ್ಲಿದ್ದವು. ಪಾಕಿಸ್ತಾನದಲ್ಲಿ ಒಂದೇ ಒಂದು ಬೆಂಕಿ ಪೊಟ್ಟಣದ ಕಾರ್ಖಾನೆ ಇರಲಿಲ್ಲ. ಇದಕ್ಕೆ ಪ್ರತಿಯಾಗಿ ಭಾರತದಲ್ಲಿನ ತೊಗಲು ಕೆಲಸಗಾರರು, ಬಟ್ಟೆ ಹೊಲಿಯುವವರು, ಮೆಕ್ಯಾನಿಕ್‌ಗಳು, ಎಲೆಕ್ಟ್ರಿಶಿಯನ್‌ಗಳೆಲ್ಲ ಮುಸ್ಲಿಮರಾಗಿದ್ದು ಅವರೆಲ್ಲ ಭಾರತ ಬಿಟ್ಟು ಹೋಗಿದ್ದರು. ಇದರಿಂದ ಟೆಲಿಫೋನ್ ಜಾಲಕ್ಕೆ ಬಹಳ ಧಕ್ಕೆಯಾಗಿತ್ತು. ಡಯಲ್‌ಫೋನುಗಳನ್ನು ರಿಪೇರಿ ಮಾಡುವವರೇ ಇಲ್ಲವಾಗಿತ್ತು. ನಗರಗಳ ನಡುವೆ ಸಂಪರ್ಕ ಅತ್ಯಂತ ಕಷ್ಟವಾಯಿತು.

ನಾನು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದೂವರೆ ವರ್ಷದ ಮೊದಲು ಬಂದವಳು. ಆಗಿನಿಂದಲೂ ಅಧಿಕಾರಕ್ಕಾಗಿ ನಿರಂತರ ಹೋರಾಟ ನಡೆಯುವುದನ್ನು ನೋಡುತ್ತಲೇ ಇದ್ದೆ. ಅಂತಿಮವಾಗಿ ಸ್ವತಂತ್ರವಾದ, ಒಂದು ಏಕೀಕೃತ ರಾಷ್ಟ್ರದ ಬದಲಿಗೆ ಅಂಗವಿಕಲವಾದ ಅವಳಿ ಜವಳಿಗಳು ಹುಟ್ಟಿದ್ದವು. ಜಗಳದ ಆರಂಭದಲ್ಲಿಯೇ ರಕ್ತಪಾತ ಶುರುವಾಗಿತ್ತು. ಪಾಕಿಸ್ತಾನಕ್ಕಾಗಿ ಹೋರಾಡುವವರು ನಮಗೆ ಪ್ರತ್ಯೇಕ ರಾಷ್ಟ್ರ ಬೇಕು ಇಲ್ಲದಿದ್ದರೆ ನಾವು ಶಾಂತಿಯಿಂದಿರಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಅಂತೂ ಅವರ ಪ್ರತ್ಯೇಕ ರಾಷ್ಟ್ರದ ಕನಸು ನನಸಾಗಿತ್ತು. ಆದರೆ ಜನಕ್ಕೆ ಶಾಂತಿ ಸಿಗಲಿಲ್ಲ. ತಾವು ಸಾಧಿಸಿದ್ದೇನು ಎಂಬುದು ಇಷ್ಟು ಬೇಗ ಅವರಿಗೆ ಗೊತ್ತಾಗುವುದು ಸಾಧ್ಯವಿರಲಿಲ್ಲ. ಮುಸಲ್ಮಾನರ ಪಾಕಿಸ್ತಾನ ಹೀಗಿರುತ್ತೆ ಎಂದು ಯಾರಿಗೆ ಗೊತ್ತಿತ್ತು ಎಂದು ಈ ವಲಸೆಯಲ್ಲಿ ಬೇಸತ್ತು ಹೋಗಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ಹೇಳುತ್ತಿದ್ದ.

ನಮಗೆ ಸಿಖ್‌ಸ್ತಾನ ಸಿಗುತ್ತದೆ ಎಂದು ಹೇಳುತ್ತಿದ್ದ ಸಿಖ್ಖರು ಈಗ ಅಷ್ಟೆಲ್ಲ ತಾವು ಹಸನು ಮಾಡಿಟ್ಟಿದ್ದ ಭೂಮಿಯನ್ನು ಬಿಟ್ಟು ಬರುವಾಗ ನಮಗೆ ಸುಖವೆಂಬುದು ಇನ್ನು ಕನಸೇ ಸರಿ ಎಂದರು. ಗಡ್ಡಪೇಟಗಳಿಗೆಲ್ಲ ದಟ್ಟವಾಗಿ ಧೂಳು ಮೆತ್ತಿಕೊಂಡಿದ್ದರೂ ಒಂದಿಷ್ಟೂ ಬೇಸರಿಸದೆ ಆತ್ಮಗೌರವದಿಂದ ಇದ್ದ ಒಬ್ಬ ಸಿಖ್ ವ್ಯಕ್ತಿ ಹೇಳಿದ ಮಾತು ನನಗಿನ್ನೂ ನೆನಪಿದೆ. ಆತ ಹೇಳಿದ “ಈ ಮುಸಲ್ಮಾನರ ಭವಿಷ್ಯವೂ ಕೂಡ ಅಂಧಕಾರಮಯವಾಗಿದೆ. ಅವರೂ ನಮ್ಮಂತೆಯೇ ನಿಸ್ಸಹಾಯಕರು. ನಮ್ಮಂತೇ ಅವರೂ ತಮ್ಮ ಮನೆ ಮಾರುಗಳನ್ನು ಕಳೆದು ಕೊಂಡಿದ್ದಾರೆ. ನಮ್ಮ ಹಾಗೆ ಅವರೂ ದುರದೃಷ್ಟದ ಬಲಿಪಶುಗಳು.”

* * *