ಈ ಭಯಾನಕ ವಲಸೆ ಯಾಕೆ ನಡೆಯಿತು? ಸಹಸ್ರಾರು ಜನರನ್ನು ಅವರ ಪೂರ್ವಿಕರ ನೆಲೆಗಳಿಂದ ಬಲಾತ್ಕಾರವಾಗಿ ಎಬ್ಬಿಸಿ ಯಾವುದೋ ಗೊತ್ತಿಲ್ಲದ ಮತ್ತು ಯಾರಿಗೂ ಬೇಡದ ಈ ಭರವಸೆಯ ನಾಡಿಗೆ ಓಡಿಸಿದ್ದು ಯಾಕೆ? ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆ ಪಡೆಯುವುದಕ್ಕಾಗಿ ಹಿಂದೂಗಳು, ಮುಸ್ಲಿಮರು ಅನೇಕ ವರ್ಷಗಳಿಂದ ಜೊತೆಜೊತೆಯಾಗಿ ನಿಂತು ಹೋರಾಡಿದ್ದರು. ಇನ್ನೇನು ಸ್ವಾತಂತ್ರ್ಯ ಕೈಗೆ ಸಿಕ್ಕಿತು ಎನ್ನುವಾಗ ಭಾರತ ಧಾರ್ಮಿಕ ಕಾರಣಗಳಿಂದ ಹರಿದು ಚೂರಾಯಿತು. ಯಾಕೆ?

ಭಾರತವನ್ನು ಸೀಳುವ ಪ್ರತ್ಯಕ್ಷ ಘಟನೆ ಆರಂಭವಾಗಿದ್ದು ಕಲ್ಕತ್ತದ ಬೀದಿಗಳಲ್ಲಿ ಆದರೆ ಅದರ ನಿರ್ಣಯವಾಗಿದ್ದು ಮುಂಬೈನಲ್ಲಿ. ಅದು ಒಬ್ಬ ವ್ಯಕ್ತಿಯ ನಿರ್ಧಾರವಾಗಿತ್ತು ಮತ್ತು ಈ ನಿರ್ಧಾರವನ್ನು ಕೈಗೊಂಡ ವ್ಯಕ್ತಿ ಏನೂ ಆಗಿಲ್ಲವೆಂಬಂತೆ ಶಾಂತವಾಗಿ. ಏನೋ ಲೆಕ್ಕಾಚಾರ ಹಾಕುತ್ತ ವಿರಕ್ತನಂತೆ ಕುಳಿತಿದ್ದ. ಒಂದು ಪ್ರತ್ಯೇಕ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸಬೇಕೆಂಬ ಈ ನಿರ್ಧಾರ ನಾವಂದುಕೊಂಡಂತೆ ಯಾರೋ ಒಬ್ಬ ಪುರಾತನ ವೇಷಭೂಷಣದ, ನೀಳಗಡ್ಡದ, ದೈವಾಂಶಸಂಭೂತ ಮುಸ್ಲಿಮನಿಂದ ಬಂದದ್ದಲ್ಲ. ಅದು ಬಂದಿದ್ದು ಇಂಗ್ಲಿಷ್ ಶಿಕ್ಷಣ ಪಡೆದ ಪಾಶ್ಚಾತ್ಯ ವೇಷಭೂಷಣ ಧರಿಸಿದ, ಚೊಕ್ಕವಾಗಿ ಮುಖ ಕ್ಷೌರ ಮಾಡಿದ, ಅಲುಗಿನಷ್ಟೆ ಹರಿತವಾದ ಬುದ್ಧಿಯುಳ್ಳ ಮತ್ತು ಅಟಾರ್ನಿ ಅಟ್ ಲಾ ಆದ ಒಬ್ಬ ಮುಸ್ಲಿಮನಿಂದ, ಮುಸ್ಲಿಂ ಲೀಗ್‌ನ ನೇತಾರ ಹಾಗೂ ಪಾಕಿಸ್ತಾನದ ರೂವಾರಿ ಮಹಮದ್ ಆಲಿ ಜಿನ್ನಾ ಸ್ವತಂತ್ರ ಏಕೀಕೃತ ಭಾರತಕ್ಕಾಗಿ ಗಾಂಧೀ, ನೆಹರೂ ಜೊತೆ ಹೋರಾಟ ಮಾಡಿದ್ದ. ಆದರೆ ಪ್ರತ್ಯೇಕ ಪಾಕಿಸ್ತಾನವನ್ನು ಸಾಧಿಸುವ ಆಕಾಂಕ್ಷೆಯಿಂದ ಆತ ತನ್ನ ಬದುಕಿನ ಕೊನೆಗಾಲದಲ್ಲಿ ಹಿಂದಿನದೆಲ್ಲ ಸಂಪೂರ್ಣ ಮರೆತ. ೧೯೪೮ರ ಸೆಪ್ಟಂಬರ್ ತಿಂಗಳಿನಲ್ಲಿ ತನ್ನ ೭೬ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆಯುವ ಮೊದಲೇ, ಜಗತ್ತಿನ ಬಹುದೊಡ್ಡ ಇಸ್ಲಾಮಿಕ್ ರಾಷ್ಟ್ರದ ನೇತಾರನಾಗುವ ಜಿನ್ನಾ ಕನಸು ನನಸಾಯಿತು.

ಭಾರತಕ್ಕೆ ಒಂದು ಅವಿಭಜಿತ ದೇಶವಾಗಿಯೇ ಸ್ವಾತಂತ್ರ್ಯ ದೊರಕುವ ನಿರೀಕ್ಷೆ ಇನ್ನೇನು ಕೈಗೂಡುವುದರಲ್ಲಿದ್ದಾಗ ಕನಸುಗಳನ್ನೆಲ್ಲ ನುಚ್ಚುನೂರು ಮಾಡುವಂತಹ ನಿರ್ಣಯವನ್ನು ಜಿನ್ನಾ ಯಾವಾಗ ಕೈಗೊಂಡನೋ ಬಹುಶಃ ಆ ಕ್ಷಣವೇ ಆತನ ಅಧಿಕಾರದ ಪರಾಕಾಷ್ಟ ಸ್ಥಿತಿ ಎಂದು ನನಗನ್ನಿಸುತ್ತದೆ. ಜಿನ್ನಾ ತೀರಿಕೊಳ್ಳುವುದಕ್ಕೆ ಸರಿಯಾಗಿ ಎರಡು ವರ್ಷಗಳ ಮೊದಲು ಇಂತಹ ಒಂದು ನಿರ್ಣಯವನ್ನು ಕೈಗೊಂಡಿದ್ದ.

೧೯೪೬ರ ಜುಲೈ ಕೊನೆಯ ಭಾಗದಲ್ಲಿ ಮಲಬಾರ್ ಹಿಲ್‌ನ ಮೇಲಿದ್ದ ತನ್ನ ಗೃಹದಲ್ಲಿ ಜಿನ್ನಾ ಒಂದು ಪತ್ರಿಕಾಗೋಷ್ಠಿ ಕರೆದ. ಈ ಪತ್ರಿಕಾಗೋಷ್ಠಿ ಅದುವರೆಗಿನ ಇತಿಹಾಸವನ್ನೇ ತಿರುವುಮುರುವು ಮಾಡಿತ್ತು. ಕ್ವ್ಯಾದೇ-ಇ-ಅಜಂ ಅಥವಾ ಮಹಾನ್ ನಾಯಕ ಪತ್ರಿಕಾಗೋಷ್ಠಿ ಕರೆಯುವುದೇ ಅಪರೂಪ. ಹಾಗೆಂದೇ ವಿದೇಶಿ ಹಾಗೂ ಸ್ವದೇಶಿ ಪತ್ರಕರ್ತರೆಲ್ಲ ತರಾತುರಿಯಿಂದ ಪತ್ರಿಕಾಗೋಷ್ಠಿಗೆ ಧಾವಿಸಿ ಬಂದಿದ್ದರು. ಹೀಗೆ ಬಂದಿದ್ದಕ್ಕೂ ಸಾರ್ಥಕ ಎನಿಸುವಂಥ ಭಾರೀ ಸುದ್ದಿಯೇ ಅವರಿಗೆ ಸಿಕ್ಕಿತು. ಪ್ರತ್ಯಕ್ಷ ಹೋರಾಟದ ದಿನ ಬರುತ್ತದೆ ಎಂದು ಜಿನ್ನಾ ದಿಟ್ಟವಾಗಿ ಘೋಷಿಸಿದರು. ಸರಿಯಾಗಿ ಇದಾದ ಎರಡು ವಾರಗಳ ನಂತರ ನಡೆದ ಒಂದು ಘಟನೆಯು, ಮುಂದಿನ ಹನ್ನೆರಡು ತಿಂಗಳು ಕಾಲ ನಡೆದ ಭಾರೀ ದಾರುಣವಾದ ಕ್ಷೋಭೆ, ಗಲಭೆಗಳಿಗೆ ನಾಂದಿಯಾಯಿತು. ಅದು ಕೊನೆಗೊಂಡಿದ್ದು ಭಾರತದ ವಿಭಜನೆಯಲ್ಲಿ ಹಾಗೂ ಹೇಳತೀರದಷ್ಟು ಹಿಂಸಾತ್ಮಕ ತಲ್ಲಣ ತುಂಬಿದ ಜನವಲಸೆಯಲ್ಲಿ. ಅಲ್ಲಿಯ ತನಕ ಹೇಗೋ ಪರಿಹಾರವಾಗಿ ಬಿಡುತ್ತದೆ ಮತ್ತು ಸ್ವಾತಂತ್ರ್ಯದ ನಂತರ ಅವಿಭಜಿತ ಭಾರತ ಅಸ್ತಿತ್ವಕ್ಕೆ ಬರುತ್ತದೆ ಎಂದೇ ಅಂದುಕೊಂಡಿದ್ದೆವು. ಈ ವಿಭಜನೆಯ ಪರವಾಗಿ ಜಿನ್ನಾ ವಾದವೇನು ಎಂಬುದು ಎಲ್ಲರಿಗೂ ಗೊತ್ತಿತ್ತು. ಆತನ ಪ್ರಕಾರ ಭಾರತದಲ್ಲಿ ಹಿಂದೂಗಳ ಸಂಖ್ಯೆ ಪ್ರತಿ ಒಬ್ಬ ಮುಸ್ಲಿಮನಿಗೆ ಮೂರರಷ್ಟಿದೆ. ಹಿಂದೂ ಪ್ರಾಬಲ್ಯವು ಮುಸ್ಲಿಮರನ್ನು ಹೊಸಕಿಹಾಕುತ್ತದೆ. ಹಿಂದೂಗಳು ಹಸುವನ್ನು ಪೂಜಿಸುತ್ತಾರೆ. ಆದರೆ ಮುಸ್ಲಿಮರು ಅದನ್ನು ತಿನ್ನುತ್ತಾರೆ, ಧರ್ಮ, ಪದ್ಧತಿ, ಸಂಸ್ಕೃತಿ ಈ ಎಲ್ಲ ದೃಷ್ಟಿಯಿಂದಲೂ ಹಿಂದೂಗಳು ಮತ್ತು ಮುಸ್ಲಿಮರು ಭಿನ್ನ. ಇದು ಜಿನ್ನಾ ರೀತಿಯ ನಿಲುವು. ಅವರ ಪ್ರಕಾರ, ಹಿಂದೂ ಮುಸ್ಲಿಮರ ನಡುವೆ ಯಾವುದೇ ಜನಾಂಗೀಯ ಭೇದವಿಲ್ಲವಾದ್ದರಿಂದ ಅವರಲ್ಲಿ ಒಡಕು ಮೂಡುವ ಸಾಧ್ಯತೆ ಕಡಿಮೆ. ಭಾರತದಲ್ಲಿರುವ ೯೫% ಮುಸ್ಲಿಮರೆಲ್ಲ ಮತಾಂತರಗೊಂಡ ಹಿಂದೂಗಳೇ ಆಗಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಜಿನ್ನಾ ಅವರ ಅಜ್ಜ ಹಿಂದೂ ಆಗಿದ್ದ ಎಂಬ ಅಂಶವನ್ನು ಅವರು ಎತ್ತಿ ಹೇಳಲು ಮರೆಯುತ್ತಿರಲಿಲ್ಲ. ಇಂತಹ ಒಂದು ನಿರ್ಣಾಯಕ ಘಟ್ಟದಲ್ಲಿ, ಭಾರತದ ಫ್ಯೂಡಲಿಸ್ಟ್ ಶಕ್ತಿಗಳ ವಿರುದ್ಧ ದೃಢವಾದ ಕ್ರಮ ಕೈಗೊಳ್ಳಲು ವಿಫಲರಾಗಿದ್ದೇ ಭಾರತದ ನೇತಾರರ ಒಂದು ದೊಡ್ಡ ದೌರ್ಬಲ್ಯ. ಬರಿಯ ಘೋಷಣೆಗಳಿಂದಲೇ ಜನರನ್ನು ಸಂಮೋಹಗೊಳಿಸುವ ಶಕ್ತಿಗೆ ಇದ್ದ ವ್ಯಕ್ತಿಗೆ ಶತಮಾನಗಳಿಂದ ಜನರಲ್ಲಿ ಮಡುಗಟ್ಟಿಕೊಂಡು ಬಂದಿದ್ದ ನೋವು ಸಂಕಷ್ಟಗಳನ್ನು ಒಂದು ಧಾರ್ಮಿಕ ವಿದ್ವೇಷವಾಗಿ ಪರಿವರ್ತಿಸುವುದಕ್ಕೆ ಯಾವ ಕಷ್ಟವೂ ಆಗಲಿಲ್ಲ. ಪಾಶ್ಚಾತ್ಯ ಶೈಲಿಯ ಉಡುಗೆತೊಡುಗೆ ಹಾಗೂ ಆಧುನಿಕ ನಡವಳಿಕೆಗಳ ಮಹತ್ವಾಕಾಂಕ್ಷೀ ವಕೀಲನೊಬ್ಬ ಧರ್ಮವನ್ನು ಬ್ರೀಫ್‌ಕೇಸಿನಿಂದ ಒಂದು ದಸ್ತಾವೇಜನ್ನು ತೆಗೆದು ತೋರಿಸುವ ರೀತಿಯಲ್ಲಿ ಬಳಸಿಕೊಂಡಿದ್ದ.

ಆ ಮಧ್ಯಬೇಸಿಗೆಯ ಮುಂಜಾನೆ ಪತ್ರಿಕಾಗೋಷ್ಠಿ ಕರೆದಿದ್ದ ಜಿನ್ನಾ ಯಾರ ಮೇಲಾದರೂ ಪ್ರಭಾವ ಬೀರುವಂಥ ವ್ಯಕ್ತಿತ್ವ ಹೊಂದಿದ್ದವನೇ. ಆತ ಮನೆಯ ವಿಶಾಲವಾದ ವರಾಂಡದಲ್ಲಿ ನಿಂತುಕೊಂಡು ವರದಿಗಾರರನ್ನು ಬರಮಾಡಿಕೊಳ್ಳುತ್ತಿದ್ದ. ಶಿಸ್ತಾಗಿ ಹೊಲೆದಿದ್ದ ಸೂಟು, ಟೈ. ಸಾಕ್ಸ್‌ಗಳಲ್ಲಿ ಕಂಗೊಳಿಸುತ್ತಿದ್ದ ಅವನ ಸರ್ವವೇಷಭೂಷಣವೂ ಅವನ ತಲೆಗೂದಲಿಗೆ ಮ್ಯಾಚ್ ಆಗುವಂತಿತ್ತು. ಆತ ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಸೌಹಾರ್ದಯುತವಾಗಿದ್ದರೂ ಔಪಚಾರಿಕವಾಗಿತ್ತು. ಒಂಟಿ ಗಾಜಿನ ಕನ್ನಡಕವನ್ನು ಕಣ್ಣಿಗೆ ಸಿಕ್ಕಿಸಿಕೊಂಡು ಆತ ಭಾಷಣ ಶುರು ಮಾಡುತ್ತಿದ್ದಂತೆ ಪ್ರಜ್ಞಾಪೂರ್ವಕವಾಗಿ ಆತ ಏನೋ ಅಭಿನಯ ಮಾಡುತ್ತಿದ್ದಾನೆ ಎಂದು ತೋರುತ್ತಿತ್ತು. ಹಿಂದೆ ಆತ ಇಂಗ್ಲೆಂಡಿನಲ್ಲಿದ್ದಾಗ ಷೇಕ್ಸ್‌ಪಿಯರ್‌ನ ನಾಟಕಗಳಲ್ಲಿ ಅಭಿನಯಿಸುತ್ತಿದ್ದ. ಆದರೆ ಅದು ಆತನ ಬದುಕಿನ ಇಸ್ಲಾಮೇತರ ಅಧ್ಯಾಯ.

ಪತ್ರಿಕಾಗೋಷ್ಠಿಯಲ್ಲಿ ಆತನ ಮಾತು ಸ್ವಗತ ಭಾಷಣದಂತಿತ್ತು. ಮಂಜುಗಡ್ಡೆಯಷ್ಟು ತಣ್ಣಗಿದ್ದ ಆತನ ದನಿಯಲ್ಲಿ ಮುಂದೆ ಬರಲಿರುವ ಉರಿಬೆಂಕಿಯಂತಹ ಘಟನೆಗಳ ಸೂಚನೆಯಿತ್ತು. ‘ನಾವು ಒಂದು ಹೋರಾಟವನ್ನು ಆರಂಭಿಸಲು ಸಿದ್ಧತೆ ನಡೆಸಿದ್ದೇವೆ. ಅದರ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಜಿನ್ನಾ ಹೇಳಿದರು. ಬಹು ರಹಸ್ಯವಾದ ವಿಚಾರವೊಂದನ್ನು ಕುತೂಹಲ ಕೆರಳಿಸುವ ರೀತಿಯಲ್ಲಿ ಹೊರಗೆಡಹುವಂತೆ ಆತ ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುವುದಕ್ಕಾಗಿ ನಾವು ಆತನ ಸಮೀಪವೇ ಕುಳಿತಿದ್ದರೂ ಉಸಿರಾಟದ ಸದ್ದೂ ಮಾಡದಷ್ಟು ಮೌನವಾಗಿದ್ದೆವು. ಆತ ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿಯನ್ನು ಬಾಯ್ಕಾಟ್ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ. ಲೀಗ್ ಮತ್ತು ಕಾಂಗ್ರೆಸ್‌ಗಳೆರಡನ್ನೂ ಒಳಗೊಂಡ ಒಂದು ಮಧ್ಯಂತರ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರ ಮಾಡಬೇಕೆಂದಿರುವ ಬ್ರಿಟಿಷ್ ಯೋಜನೆಯನ್ನು ಸಾರಸಗಟಾಗಿ ತಿರಸ್ಕರಿಸುತ್ತಿದ್ದೇವೆ ಎಂದ. ‘ಹಿಂದೂಗಳದೇ ಮೇಲುಗೈಯಾಗಿರುವ ಕಾಂಗ್ರೆಸ್‌ನ ವಿರುದ್ಧ ಆತ ತನ್ನ ವಾಕ್ ಪ್ರವಾಹವನ್ನು ಹರಿಯಬಿಟ್ಟಾಗ ಆತನ ದನಿ ಯಾವುದೇ ಏರಿಳಿತಗಳಿಲ್ಲದೆ ಭಾವನಾರಹಿತವಾಗಿತ್ತು. ಬ್ರಿಟಿಷರ ದಾಸ್ಯ ಕೊನೆಗೊಳ್ಳುತ್ತ ಬಂದ ಈ ಘಟ್ಟದಲ್ಲಿ ಅವರ ಧಾಳಿಯೆಲ್ಲಾ ವಿರೋಧ ಪಕ್ಷದ ಕಡೆಗೆ ತಿರುಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಂವಿಧಾನಿಕ ವಿಧಾನಗಳನ್ನು ಮೀರುವ ಅನಿವಾರ್ಯತೆ ಒದಗಿದೆ. ನಾವು ಈಗ ಕೈಗೊಂಡಿರುವ ನಿರ್ಣಯ ಬಹಳ ಗಂಭೀರವಾದುದು. ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನವನ್ನು ಕೊಡದಿದ್ದರೆ ಅವರು ನೇರ ಹೋರಾಟಕ್ಕಿಳಿಯುತ್ತಾರೆ. ‘ನೇರ ಹೋರಾಟ’ ಎಂಬ ನುಡಿಗಟ್ಟು ಕೇಳುತ್ತಿದ್ದಂತೆ ನಮ್ಮ ಕಿವಿಗಳು ನೆಟ್ಟಗಾದವು. ಈ ನೇರ ಹೋರಾಟ ಯಾವ ರೀತಿಯದು ಎಂಬುದೇ ನಮ್ಮೆಲ್ಲರ ಕುತೂಹಲವನ್ನು ಕೆಣಕಿದ ಸಂಗತಿ. ಹೋಗಿ ಕಾಂಗ್ರೆಸ್ಸಿನವರನ್ನು ಕೇಳಿ, ಅವರ ಯೋಜನೆಗಳೇನಿವೆಯೋ ಕೇಳಿ’ ಎಂದು ಜಿನ್ನಾ ಅಬ್ಬರಿಸಿದ. ಅವರು ನಿಮ್ಮಲ್ಲಿ ವಿಶ್ವಾಸವಿರಿಸಿದರೆ ನಾನೂ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದ. ಒಂದೇ ಕ್ಷಣ ಸಂಪೂರ್ಣ ನೀರವ, ನಿಶ್ಯಬ್ದ. ಮನೆಯ ಮುಂದಿನ ಹಸಿರು ಹುಲ್ಲುಹಾಸಿನ ಮೇಲೆ ಗುಟುಕರಿಸುತ್ತಿದ್ದ ಪಾರಿವಾಳಗಳ ಸದ್ದು ಮಾತ್ರ ಕೇಳುತ್ತಿತ್ತು. ತಾನು ಹೇಳುವ ವಿಷಯಕ್ಕೆ ಏನೇನೂ ಹೊಂದಿಕೆಯಾಗದ ದನಿಯಲ್ಲಿ ಜಿನ್ನಾ ಮತ್ತೆ ತನ್ನ ಮಾತನ್ನು ಮುಂದುವರೆಸಿದ. ‘ನಾನೊಬ್ಬನೇ ಕೈಯೊಡ್ಡಿ ಕೇಳಿಕೊಳ್ಳಬೇಕು ಎಂದು ನೀವೂ ಯಾಕೆ ನಿರೀಕ್ಷಿಸುತ್ತೀರಿ? ನನಗೂ ಕೂಡ ತೊಂದರೆ ಕೊಡಲು ಬರುತ್ತದೆ’ ಎಂದು ಮಾತು ಮುಗಿಸಿದ.

ಮಾರನೇ ದಿನ ಕ್ವೈದೆ-ಇ-ಅಜಂ, ಮುಸ್ಲಿಂ ಜನಸಮುದಾಯದೆದುರು ಭಾಷಣ ಮಾಡುವುದಕ್ಕಾಗಿ ಡಬಲ್‌ಬ್ರೆಸ್ಟಡ್ ಸೂಟ್‌ನ ವೇಷ ಬದಲಾಯಿಸಿ ಮುಸ್ಲಿಂ ವೇಷ ಹಾಕಿಕೊಂಡ. ತಲೆಯ ಮೇಲೊಂದು ತುರ್ಕಿಟೋಪಿ. ಜಿನ್ನಾನ ದೊಡ್ಡದೊಡ್ಡ ಭಾವಚಿತ್ರಗಳು ವೇದಿಕೆಯನ್ನಲಂಕರಿಸಿದ್ದವು. ಇಂದಿನಿಂದ ಇನ್ನು ಎರಡು ವಾರಕ್ಕೆ ಸರಿಯಾಗಿ ಅಂದರೆ ಆಗಸ್ಟ್ ೧೬, ನೇರ ಹೋರಾಟದ ದಿನ ಎಂದು ಘೋಷಿಸಿದ ಜಿನ್ನಾ ಕಾಂಗ್ರೆಸ್ಸಿನ ವಿರುದ್ಧ ದೋಷಾರೋಪಣೆಗಳ ಸುರಿಮಳೆ ಸುರಿಸಿದ, ನಿಮಗೆ ಶಾಂತಿ ಬೇಕಿದ್ದರೆ ನಾವು ಯುದ್ಧ ಮಾಡುವುದಿಲ್ಲ ಎಂದು ಪ್ರಕಟಿಸಿದ. ನಿಮಗೆ ಯುದ್ಧ ಬೇಕಿದ್ದರೆ ನಾವು ಯಾವುದೇ ಹಿಂಜರಿಕೆಯಿಲ್ಲದೆ ಯುದ್ಧದ ಆಹ್ವಾನವನ್ನು ಸ್ವೀಕರಿಸುತ್ತೇನೆ. ನಮಗೆ ಬೇಕಿರುವುದು divided india ಇಲ್ಲವೇ Destroyed India. ಈ ಮಾತುಗಳನ್ನು ಕೇಳುತ್ತಿದ್ದಂತೆ ಮುಸ್ಲಿಂ ಬೆಂಬಲಿಗರು ಆಸನಗಳ ಮೇಲೆ ಕುಪ್ಪಳಿಸಿದರು. ತುರ್ಕಿ ಟೋಪಿಗಳು ಗಾಳಿಯಲ್ಲಿ ಹಾರಾಡಿದವು.

ಈಗ ಆರು ರಾಜಕಾರಣಿಗಳ ನಡುವಿನ ಯುದ್ಧವಾಗಿತ್ತು. ಎರಡೂ ಪಕ್ಷಗಳ ನಡುವೆ ಪರಸ್ಪರ ದೋಷಾರೋಪಣ ಪತ್ರಗಳ ವಿನಿಮಯವಾಯಿತು. ಕಾಂಗ್ರೆಸ್‌ನಲ್ಲಾಗಲೀ ಲೀಗ್‌ನಲ್ಲಾಗಲೀ ಸಹಿಷ್ಣುತೆಯ ಮಾತೇ ಇರಲಿಲ್ಲ. ದೋಷಾರೋಪಣೆಯ ಕೆಂಡದಂಥ ಮಾತುಗಳು ಭಾರತೀಯರ ಮೇಲೆ ಭಯಂಕರ ಪರಿಣಾಮ ಉಂಟು ಮಾಡಿದವು. ನಿರ್ಣಾಯಕವಾದ ಆ ಹದಿನೈದು ದಿನಗಳಲ್ಲಿ ಭಾವೋದ್ರೇಕದ ಉನ್ಮಾದ ಬೆಳೆಯುತ್ತಾ ಹೋಯಿತು. ಭೀತಿ ಮತ್ತು ವಿನಾಶದ ಮುನ್ಸೂಚನೆಯ ವಾತಾವರಣದಲ್ಲಿ ನೇರ ಹೋರಾಟದ ದಿನ ಉದಯಿಸಿತು.

ನಾನು ತಿಳಿದಿರುವ ಪ್ರಕಾರ ಆ ದಿನದಂದು ನಡೆದ ಎಲ್ಲ ಘಟನೆಗಳೂ ಕಲ್ಕತ್ತದ ಒಂದು ಚಿಕ್ಕ ಟೀ ಅಂಗಡಿಯಿಂದ ಆರಂಭವಾದವು. ಕಲ್ಕತ್ತದಲ್ಲಿ ಭೀಕರ ಗಲಭೆಗಳಾಗುತ್ತಿರುವ ಸುದ್ಧಿ ಕೇಳುತ್ತಿದ್ದಂತೆಯೇ ನಾನು ಮುಂಬೈನಿಂದ ವಿಮಾನ ಹತ್ತಿ ನೇರವಾಗಿ ಕಲ್ಕತ್ತಕ್ಕೆ ಬಂದಿಳಿದೆ. ನಗರದ ಮಾಮೂಲು ಜೀವನ ಎಷ್ಟು ಅಸ್ತವ್ಯಸ್ತವಾಗಿತ್ತೆಂದರೆ ಪಾಳುಬಿದ್ದ ಬಜಾರ್ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತಲುಪಲು ಸಾಕಷ್ಟು ಬಲ ಹಿಡಿಯಿತು. ನೇರ ಹೋರಾಟವನ್ನು ಕಣ್ಣಾರೆ ಕಂಡವರಲ್ಲಿ ಉಳಿದುಕೊಂಡಿದ್ದ ಏಕೈಕ ವ್ಯಕ್ತಿಯನ್ನು ಹುಡುಕುತ್ತ ಬಂದ ನನಗೆ ಆ ವ್ಯಕ್ತಿ ಅಂದರೆ ನಂದಲಾಲ, ತನ್ನ ಟೀ ಅಂಗಡಿಯ ಮುರುಕು ಅವಶೇಷಗಳ ನಡುವೆ ಕಾಣಿಸಿಕೊಂಡ.

೩೬ ಹ್ಯಾರಿಸನ್ ರಸ್ತೆಯಲ್ಲಿ, ಯಾವಾಗಲೂ ಗಲಭೆಯ ಸಾಧ್ಯತೆ ಇರುವಂತಹ ಸ್ಥಳದಲ್ಲೆ, ನಂದಲಾಲನ ‘ಈಸ್ಟ್ ಬೆಂಗಾಲ್ ಕ್ಯಾಬಿನ್’ ಇತ್ತು. ಅಲ್ಲಿ ಹಿಂದೂಗಳೇ ಹೆಚ್ಚಾಗಿರುವ ಒಂದು ಮುಖ್ಯರಸ್ತೆಯ ಅಡ್ಡವಾಗಿ ಮುಸ್ಲಿಂ ಅಂಗಡಿಗಳ ಒಂದು ಬೀದಿ ಇದೆ. ನಂದಲಾಲ ಸಾಂಪ್ರದಾಯಿಕ ಉಡುಗೆಯಲ್ಲಿದ್ದ. ಅನೇಕ ಬಂಗಾಳಿಗಳಂತೆ ಅವನು ಸಾಕಷ್ಟು ವಿದ್ಯಾವಂತ ಮತ್ತು ಸ್ವಲ್ಪ ಮಟ್ಟಿಗೆ ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದ.

ಮುಂಭಾಗದಲ್ಲಿ ಉದ್ದವಾಗಿ ಚಾಚಿಕೊಂಡ ಒಲೆಯಿರುವ ಈಸ್ಟ್ ಬೆಂಗಾಲ್ ಕ್ಯಾಬಿನ್ ನಮ್ಮ ನೆಡಿಕ್ಸ್ ಸ್ಟ್ಯಾಂಡ್‌ನ ಏಷಿಯಾ ಆವೃತ್ತಿಯಂತಿತ್ತು. ಅದರ ಎದುರಿಗಿದ್ದ ಮಿನರ್ವ ಬ್ಯಾಂಕಿಂಗ್ ಕಾರ್ಪೋರೇಷನ್ನಿನ ಹಿಂದೂ ಗುಮಾಸ್ತರುಗಳೇ ಈ ಟೀ ಅಂಗಡಿಗೆ ಆಗಾಗ್ಗೆ ಬರುವಂಥ ಗ್ರಾಹಕರು. ಅದೇ ರೀತಿ ಸಮೀಪದಲ್ಲೆ ಇದ್ದ happy home boarding house ನ ಜನರೂ ಸಹ ಈ ಅಂಗಡಿಗೆ ಆಗಾಗ್ಗೆ ಬರುವಂಥವರೇ. ನಂದಲಾಲ ಈ ಎರಡು ಹಿಂದೂ ಕಟ್ಟಡಗಳ ಆಶ್ರಯದ ಸುರಕ್ಷಿತ ನೆರಳಿನಲ್ಲಿದ್ದ. ಅದರ ಮಿರ್ಜಾಪುರ ರಸ್ತೆಯ ಮೂಲೆಯಿಂದಲೇ ಮುಸ್ಲಿಮರ ನೆಲೆ ಆರಂಭವಾಗುತ್ತಿತ್ತು.

ಆಗಸ್ಟ್ ೧೬ರಂದು ಬೆಳಗ್ಗೆ ನಂದಲಾಲ ಒಲೆ ಹಚ್ಚಿದ. ಎಂದಿನಂತೆ ಸಿಹಿ ಮಿಠಾಯಿಗಳು ತುಂಬಿದ ತಟ್ಟೆಗಳನ್ನು ಒಪ್ಪವಾಗಿ ಜೋಡಿಸಿಟ್ಟ. ಅವನ ಕಿರಿಯ ಮಗ ಮಾವಿನಕಾಯಿಯ ಉಪ್ಪಿನಕಾಯಿ ಮತ್ತು ಚಟ್ನಿ ತುಂಬಿದ ಜಾಡಿಗಳನ್ನು ತಂದಾಗ ರಸ್ತೆಯಲ್ಲಿ ಯಾಕೋ ಇವತ್ತು ಜನರೇ ಇಲ್ಲವಲ್ಲ ಅಂದ ನಂದಲಾಲ. ಕಲ್ಕತ್ತದ ಮುಖ್ಯ ಬೀದಿಗಳಲ್ಲಿ ಆರಾಮಾಗಿ ಓಡಾಡಿಕೊಂಡಿರುವ ದನಗಳು ಎಂದಿನಂತೆ ರಸ್ತೆಯ ಮಧ್ಯೆ ಮಲಗಿದ್ದವು. ಆ ದಿನ ಮೊದಲ ಟ್ರಾಮ್‌ಕಾರು ಹ್ಯಾರಿಸನ್ ರಸ್ತೆಗೆ ಆಗಮಿಸಿದಾಗ ಮಲಗಿದ್ದ ದನಗಳು ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಆಚೆಗೆ ಸರಿದವು. ಈ ಟ್ರಾಮ್‌ಕಾರನ್ನು ನೋಡುತ್ತಿದ್ದಂತೆ ಈ ದಿನ ಎಲ್ಲ ದಿನಗಳಂತಿಲ್ಲ ಎಂಬ ಅಂಶ ನಂದಲಾಲನಿಗೆ ಖಚಿತವಾಯಿತು. ಮಾಮೂಲು ದಿನಗಳಲ್ಲಿ ಜನ ಅದರಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದರು. ಜಾಗ ಸಾಲದೆ ಅದರ ಪ್ಲಾಟ್‌ಫಾರಂ, ಮೆಟ್ಟಿಲು ಹಾಗೂ ಹಿಂಭಾಗದಲ್ಲೂ ಜೋತಾಡಿಕೊಂಡಿರುತ್ತಿದ್ದರು. ಈ ದಿನ ಅದು ಸಂಪೂರ್ಣ ಖಾಲಿಯಿತ್ತು.

ಅದಾದ ನಂತರ ಘಟನೆಗಳು ಎಷ್ಟು ಬೇಗ ಸಂಭವಿಸಿದ್ದವೆಂದರೆ ಅವುಗಳನ್ನು ಒಂದು ಕ್ರಮದಲ್ಲಿ ನೆನಪಿಸಿಕೊಳ್ಳುವುದೇ ನಂದಲಾಲ್‌ಗೆ ಅಸಾಧ್ಯವಾಯಿತು. ಮೊದಲು ಹ್ಯಾರಿಸನ್ ರಸ್ತೆಯಲ್ಲಿ ಅಬ್ಬರಿಸುತ್ತ ಎರಡು ಲಾರಿಗಳು ಬಂದವು. ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಇಟ್ಟಿಗೆ ಚೂರುಗಳನ್ನು ಶೀಸೆಗಳನ್ನು ಹಿಡಿದಿದ್ದ ಜನರು ಲಾರಿಗಳಿಂದ ಕೆಳಗೆ ಧುಮುಕಿದ್ದೆ ಹಿಂದೂ ಅಂಗಡಿಗಳನ್ನೆಲ್ಲಾ ಧ್ವಂಸ ಮಾಡತೊಡಗಿದಾಗ ಅವರು ಮುಸ್ಲಿಂ ಗೂಂಡಾಗಳು ಎನ್ನುವುದು ನಂದಲಾಲ್‌ಗೆ ಖಚಿತವಾಯಿತು. ಕೆಲವರು happy homeನ ಪಕ್ಕದಲ್ಲಿದ್ದ ಫರ್ನೀಚರ್ ಅಂಗಡಿಗೆ ನುಗ್ಗಿದರು. ಅಲ್ಲಿದ್ದ ಪೀಠೋಪಕರಣಗಳು ಹಾಸುಗಳನ್ನು ಕಿತ್ತುಕಿತ್ತು ರಸ್ತೆಗೆ ಎಸೆದರು. ಇನ್ನೂ ಕೆಲವರು ಬೆಂಗಾಲ್ ಕ್ಯಾಬಿನ್‌ನತ್ತ ನುಗ್ಗಿದರು. ಕೂಡಲೇ ನಂದಲಾಲ್ ಬೇಗಬೇಗನೇ ಕಿಟಕಿ ಬಾಗಿಲುಗಳನ್ನು ಮುಚ್ಚಿದ. ಮನೆಯೊಳಗೆ ಓಡುವಂತೆ ಮಗನಿಗೆ ತಿಳಿಸಿದ.

ರಸ್ತೆಯ ಮೇಲೆ ಕಲ್ಲುಗಳು ಮಳೆ ಸುರಿದಂತೆ ಬೀಳುತ್ತಿದ್ದವು. ನಂದಲಾಲ್ ಕಿಟಕಿಯ ಸಲಾಕೆಯನ್ನು ಹಾಕಿ ಮುಗಿಸುವಷ್ಟರ ಹೊತ್ತಿಗೆ ಅವನ ದೇಹದ ನಾನಾ ಭಾಗಗಳಿಗೆ ಕಲ್ಲುಗಳ ಹೊಡೆತ ಬಿದ್ದು, ರಕ್ತ ಸುರಿಯುತ್ತಿದ್ದರೂ ಅದು ಅವನಿಗೆ ಅರಿವೇ ಆಗಿರಲಿಲ್ಲ. ಗೂಂಡಾಗಳು ಅವನ ಅಂಗಡಿಯ ಹತ್ತಿರಕ್ಕೆ ಬರುವಷ್ಟರ ಹೊತ್ತಿಗೆ ಅವನು ಮನೆಯೊಳಗಡೆ ಸೇರಿಕೊಂಡಿದ್ದ. ಬಾಗಿಲ ಮೇಲೆ ದಬದಬನೆ ಬಡಿಯುತ್ತಿರುವ ಸದ್ದು ಅವನಿಗೆ ಕೇಳಿಸುತ್ತಿತ್ತು. ಬಾಗಿಲಿಗೆ ಎರಡು ಬಲವಾದ ಸಲಾಕೆಯ ಅಗುಳಿಗಳನ್ನು ಹಾಕಿದ್ದ. ನಂತರ ಅವನು ಒಳಗಿನ ಅಂಗಳಕ್ಕೆ ಓಡಿದ. ಅಲ್ಲಿ ವಠಾರದ ಮನೆಗಳು ಇದ್ದವು. ಅವುಗಳನ್ನು ಆವರಿಸಿದಂತೆ ಗೋಡೆಯಿತ್ತು. ಗೋಡೆ ಹತ್ತಿ ಬರುತ್ತಿದ್ದ ಗೂಂಡಾಗಳು ಹೊಡಿ ಹೊಡಿ ಎಂದು ಕೂಗುತ್ತಿದ್ದರು. ಗೋಡೆಯ ಮೇಲಿಂದ ಒಂದು ತಲೆ ಕಾಣಿಸಿಕೊಂಡಿತ್ತು. ಅದರ ಹಿಂದೆಯೇ ಇನ್ನು ಅನೇಕ ತಲೆಗಳು ಕಂಡವು. ಅಷ್ಟು ಹೊತ್ತಿಗೆ ನಂದಲಾಲನ ಮನೆಯಲ್ಲಿದ್ದ ಜನರೆಲ್ಲ ತಾರಸಿ ಹತ್ತಿ ಅಲ್ಲಿಂದ ಪ್ರತಿ ಧಾಳಿ ಆರಂಭಿಸಿದ್ದರು. ಗೋಡೆ ಹತ್ತುತ್ತಿದ್ದವರ ಮೇಲೆ ಹೂ ಕುಂಡಗಳನ್ನು ಎತ್ತಿ ಎತ್ತಿ ಹಾಕುತ್ತಿದ್ದಂತೆ ಅವರೆಲ್ಲ ಪರಾರಿಯಾದರು.

ಈ ಯಶಸ್ವಿ ಪ್ರತಿ ಧಾಳಿಯ ನಂತರ ಅವರ ಗಮನ ನಂದಲಾಲನ ಕಡೆಗೆ ಹರಿಯಿತು. ಕೆಲವರು ಅವನ ಸಹಾಯಕ್ಕೆ ಧಾವಿಸಿದರು. ಮನೆಯತ್ತ ಹತ್ತಿ ಬರುವ ಮೆಟ್ಟಿಲುಗಳ ಮೇಲೆ ಕೈಗೆ ಸಿಕ್ಕ ಬೆಂಚು ಟೇಬಲುಗಳನ್ನು ಇಟ್ಟು ಧಾಳಿಕಾರರು ಮೆಟ್ಟಿಲು ಹತ್ತಿ ಬರದಂತೆ ತಡೆ ನಿರ್ಮಿಸಿದರು. ಮೊಗಸಾಲೆಯಲ್ಲಿದ್ದ ಬೈಸಿಕಲ್ಲುಗಳನ್ನು ನಂದಲಾಲ ಆ ವಸ್ತುಗಳ ಮಧ್ಯೆ ತುರುಕಿದ. ನಂತರ, ಕುಟುಂಬದ ಹೆಂಗಸರೆಲ್ಲ ಗುಂಪಾಗಿ ಮುದುರಿಕೊಂಡು ಕೂತಿದ್ದ ಮೇಲಿನ ಹಜಾರಕ್ಕೆ ಆತ ಧಾವಿಸಿದರು.

ನಂದಲಾಲ್ ಮೆಲ್ಲಗೆ ಕಿಟಕಿಯಿಂದ ಹೊರಗಿಣುಕಿ ನೋಡಿದ. ರಸ್ತೆಯಲ್ಲಿ ಅಂತಹ ಉದ್ರೇಕ, ಕ್ಷೋಭೆ, ಜನಸಂದಣಿಯನ್ನು ಹಿಂದೆಂದೂ ಅವನು ನೋಡಿರಲಿಲ್ಲ. ಹ್ಯಾಪಿ ಹೋಂನ ಎದುರಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿರಾಶಿ ಸೋಫಾ ಹಾಸುಗಳ ಮೇಲೆ ಮುರಿದ ರಿಕ್ಷಾಗಳು. ಆ ರಾಶಿಯಿಂದ ಉರಿಯುವ ಬೆಂಕಿಯ ಜ್ವಾಲೆಗಳು ಮೇಲೇಳುತ್ತಿದ್ದವು. ಗಾಳಿಗೆ ಹೊಗೆ ಚೆದುರಿದಾಗ ಕೆಲವು ವ್ಯಕ್ತಿಗಳು ಬ್ಯಾಂಕ್ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ಜನರತ್ತ ಶೀಸೆಗಳನ್ನು ತೂರಿ ಎಸೆಯುತ್ತಿದ್ದುದು ಕಂಡು ಬಂತು. ನೆಲಕ್ಕೆ ಬಿದ್ದ ಸೀಸೆಗಳು ಹ್ಯಾಂಡ್ ಗ್ರೆನೇಡ್‌ಗಳಂತೆ ಸಿಡಿಯುತ್ತಿದ್ದವು. ಸಮೃದ್ಧ ಲಕ್ಷ್ಮಿ ಎಂಬ ರೆಡಿಮೇಡ್ ಬಟ್ಟೆಗಳ ಅಂಗಡಿಯ ಮುಂದೆ ತೂಗುಹಾಕಿದ್ದ ಬಟ್ಟೆಗಳು ಬೆಂಕಿ ಹತ್ತಿ ಉರಿಯುತ್ತಿದ್ದವು. ಈ ಅಂಗಡಿಗಳ ಹಿಂದಿದ್ದ ಜನವಸತಿಯ ಸ್ಥಳದಿಂದಲೂ ಬೆಂಕಿಯ ಜ್ವಾಲೆಗಳು ಮೇಲೇಳುತ್ತಿದ್ದವು. ಇದೆಲ್ಲವೂ ಗೂಂಡಾಗಳು ವ್ಯವಸ್ಥಿತವಾಗಿ ನಡೆಸಿದ ದೊಂಬಿ ಎಂದು ನಂದಲಾಲನಿಗೆ ಅರ್ಥವಾಯಿತು. ಭಾರತದಲ್ಲಿ ಗೂಂಡಾಗಿರಿಯೂ ಕೂಡ ಒಂದು ವೃತ್ತಿ. ಕಲ್ಕತ್ತದಂತಹ ಬಂದರು ಶಹರಿನಲ್ಲಿ ಅವರ ಕಳ್ಳಸಾಗಾಣಿಕೆಯ ದಂಧೆ ಬಿರುಸಾಗಿ ನಡೆಯುತ್ತದೆ. ಮುಷ್ಕರಗಳನ್ನು ಹತ್ತಿಕ್ಕಲು ಅಥವಾ ಕೋಮುಗಲಭೆಗಳನ್ನು ಉಂಟು ಮಾಡಲು ಇವರ ಸೇವೆಯನ್ನು ಬಾಡಿಗೆಗೆ ಪಡೆಯುವುದೂ ಉಂಟು.

ಹೊತ್ತೇರಿದ ನಂತರ ನಂದಲಾಲ್ ಮನೆಯ ಛಾವಣಿ ಮೇಲೇರಿ ನೋಡಿದ. ಮುಸ್ಲಿಂ ಸ್ವಯಂ ಸೇವಾಕರ್ತರು ಧರಿಸುವಂತಹ ಹಸಿರು ತೋಳು ಪಟ್ಟಿಯನ್ನು ಧರಿಸಿದ್ದ ಹುಡುಗರು ರಿಪ್ಪನ್ ಕಾಲೇಜಿನ ಕಡೆ ಓಡುತ್ತಿದ್ದರು. ಜನಸಂದಣಿಯೂ ಈಗ ಕಾಲೇಜಿನ ದಿಕ್ಕಿನ ಕಡೆಗೇ ತಿರುಗಿತು. ಭಾರತದ ಎಲ್ಲ ಕಾಲೇಜುಗಳಂತೆ ರಿಪ್ಪನ್ ಕಾಲೇಜೂ ಸಹ ಕುದಿಕುದಿಯುವ ರಾಜಕಾರಣದ ಮೂಸೆಯಾಗಿತ್ತು. ಇತ್ತೀಚೆಗೆ ಹಿಂದೂ ಮುಸ್ಲಿಂ ಭಿನ್ನಾಭಿಪ್ರಾಯದ ಮೇಲೆ ಒತ್ತು ಹೆಚ್ಚಾದಂತೆ ರಾಜಕಾರಣವನ್ನು ಆವರಿಸಿದ್ದ ಧರ್ಮಾಂಧತೆ ವಿದ್ಯಾರ್ಥಿಗಳ ಕ್ಷೇತ್ರವನ್ನೂ ಹೊಕ್ಕಿತ್ತು. ಒಂದು ಬೀದಿಯ ಆಚೆಗಿದ್ದ ಆ ಕಾಲೇಜಿನ ಕೋಟೆಯಂತಹ ಆವರಣದಲ್ಲಿ ಏನೇನಾಗುತ್ತಿದೆ ಎಂಬುದು ನಂದಲಾಲ್‌ಗೆ ಕಾಣುವಂತಿರಲಿಲ್ಲ. ಆದರೆ ಕಾಲೇಜಿನ ಸೂರಿನ ಮೇಲೆ ಭಯಂಕರ ಹೊಡೆದಾಟ ನಡೆದಿತ್ತು. ಆ ದಿನ ಬೆಳಿಗ್ಗೆಯಷ್ಟೇ ಅಲ್ಲಿನ ಹಿಂದೂ ವಿದ್ಯಾರ್ಥಿಗಳು ಧ್ವಜಸ್ತಂಭದ ಮೇಲೆ ಹಾರಿಸಿದ್ದ ಕಾಂಗ್ರೆಸ್ ಪಕ್ಷದ ಮೂರು ಬಣ್ಣದ ಬಾವುಟದ ಸುತ್ತ ಯುವಕರು ಕಾದಾಡುತ್ತಿದ್ದರು. ವಿರೋಧಿ ಗುಂಪಿನವರು ಮುಸ್ಲಿಂ ಲೀಗ್‌ನ ಬಾವುಟ ಹಿಡಿದು ಧ್ವಜಸ್ತಂಭದ ಕಡೆಗೆ ನುಗ್ಗುತ್ತಿದ್ದರು. ಅಂತಿಮವಾಗಿ ಇಸ್ಲಾಮಿಕ್ ನಕ್ಷತ್ರ ಮತ್ತು ಚಂದ್ರನ ಚಿಹ್ನೆ ಇರುವ ಹಸಿರು ಧ್ವಜ ಸ್ಥಂಭದ ಮೇಲೆ ಹಾರಾಡಿತು. ಕೆಳಗೆ ನಿಂತಿದ್ದೆ ಗುಂಪಿನಿಂದ ಅಲ್ಲಾ ಹೋ ಅಕ್ಬರ್ ಎಂಬ ಒಕ್ಕೊರಳಿನ ದನಿ ರಸ್ತೆಗಳವರೆಗೂ ಹರಿದು ಬಂತು.

ರಸ್ತೆಗಳಲ್ಲಿ, ಓಣಿಗಳಲ್ಲಿ ಹಿಂದೂಗಳಿಂದ ‘ಜೈಹಿಂದ್’ ಎಂಬ ಕೂಗು, ಮುಸ್ಲಿಮರಿಂದ, ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಕೂಗು ಕೇಳಿಸುತ್ತಿತ್ತು. ಇದ್ದಕ್ಕಿದ್ದ ಹಾಗೆ ಈ ಶಬ್ದಗಳನ್ನು ಮರೆಮಾಡುವಂತಹ ಒಂದು ಹೊಸ ಶಬ್ದ ಕೇಳಿಸಿತು. ಕಾಲೇಜಿನ ಎದುರಿಗಿದ್ದ ಒಂದು ಅಪಾರ್ಟ್‌ಮೆಂಟಿನ ಕಿಟಕಿಯಿಂದ ಪಟಪಟನೆ ಗುಂಡುಗಳು ಹಾರುವ ಸದ್ದು. ಸದ್ದನ್ನು ಕೇಳುತ್ತಿದ್ದಂತೆ ನಂದಲಾಲನ ಕೈಕಾಲುಗಳು ತಣ್ಣಗಾದವು. ಭಾರತದಲ್ಲಿ ಗಲಭೆಗಳ ಸಂದರ್ಭದಲ್ಲಿ ಗುಂಡಿನ ಬಳಕೆ ಅಪರೂಪ. ದೊಂಬಿಯಲ್ಲಿ ತೊಡಗಿದ ಜನ ಹೊಸದೊಂದು ಉನ್ಮಾದಕ್ಕೆ ಸಿಲುಕಿದ್ದರು. ಹ್ಯಾರಿಸನ್ ರಸ್ತೆಯಲ್ಲಿ ಜನ ಭಯಭೀತರಾಗಿ ಕಂಗೆಟ್ಟು ಓಡಿದರು.

ಇದಾದ ನಂತರ ಅನೇಕ ದಿನಗಳವರೆಗೆ ದೊಂಬಿ ಹಾಗೇ ಮುಂದುವರೆಯಿತು. ನಂದಲಾಲ ತನ್ನ ಕುಟುಂಬ ಹಾಗೂ ಬಂಧುಗಳ ಜೊತೆ ಮಹಡಿಯ ಹಜಾರದಲ್ಲಿ ಅಡಗಿಕೊಂಡೇ ಇರಬೇಕಾಯಿತು. ಇಟ್ಟಿಗೆ ಕಲ್ಲಿನ ಚೂರುಗಳು ಕಿಟಕಿ ಬಾಗಿಲುಗಳ ಮೇಲೆ ಬೀಳುವ ಶಬ್ದ ಕೇಳಿಸುತ್ತಲೇ ಇತ್ತು. ಮಕ್ಕಳು ಹಸಿವಿನಿಂದಲೋ, ಭಯದಿಂದಲೋ ಒಂದೇ ಸಮನೆ ಅಳುತ್ತಿದ್ದವು.

ಒಂದು ರಾತ್ರಿ ನಂದಲಾಲ್‌ನ ನೆರೆಹೊರೆಯ ಮುಸ್ಲಿಮನೊಬ್ಬ ಹಿಂದೂ ಕಾಲೇಜಿನ ಒಂಭತ್ತು ಹುಡುಗಿಯರನ್ನು ನಂದಲಾಲನ ಬಳಿಗೆ ಕರೆತಂದ. ನಂದಲಾಲನಿಗೆ ಪರಮಾಶ್ಚರ್ಯ. ಮುಸಲ್ಮಾನರಲ್ಲಿ ದಯಾಪರವಾದ ಭಾವನೆ ಇರುತ್ತದೆಂಬುದು ಅವನಿಗೆ ಮರೆತೇ ಹೋದಂತಾಗಿತ್ತು. ಗುಲ್ಜಾರ್ ರಿಪೇರ್ ಕಂಪನಿಯ ಮಾಲೀಕ ಈ ಹುಡುಗಿಯರನ್ನು ರಕ್ಷಿಸುವ ಯೋಜನೆ ರೂಪಿಸಿದ್ದ. ಆ ಅಂಗಡಿಯ ಹಿಂದಿನ ಓಣಿ ಈಸ್ಟ್ ಬೆಂಗಾಲ್ ಕ್ಯಾಬಿನ್‌ಗೆ ಅಂಟಿಕೊಂಡಂತೆ ಇತ್ತು. ಆ ಹುಡುಗಿಯರಿಗೆ ಮುಸ್ಲಿಮರಂತೆ ಬುರ್ಖಾ ಹಾಕಿ ಮುಸ್ಲಿಮರಿಂದ ತಾಣದಿಂದ ಹಿಂದೂಗಳ ಬಳಿಗೆ ರಹಸ್ಯವಾಗಿ ದಾಟಿಸಿಕೊಂಡು ತರಲಾಗಿತ್ತು. ನಂದಲಾಲನ ಮನೆಯ ಅಂಗಳ ಹಿಂದೂ ಮುಸ್ಲಿಂ ಬೀದಿಗಳಿಗೆ ಸಂಪರ್ಕ ಕಲ್ಪಿಸುವಂತೆ ಇದ್ದುದರಿಂದ ಹುಡುಗಿಯರಿಗೆ ನಂದಲಾಲ ಮಾತ್ರವೇ ಸರಿಯಾದ ಆಶ್ರಯ ಕೊಡಬಲ್ಲ ಎಂದು ಈ ಯೋಜನೆಯನ್ನು ರೂಪಿಸಿದರು ನಿಶ್ಚಯಿಸಿದರು.

ನಾಲ್ಕನೇ ದಿನದ ಹೊತ್ತಿಗೆ ದೊಡ್ಡ ದೊಡ್ಡ ಅಸ್ತ್ರಗಳು ಬಳಕೆಯಾಗುವಷ್ಟು ಗಲಭೆಯಲ್ಲಿ ಪ್ರಗತಿಯಾಗಿತ್ತು. ಸೋಡಾ ಬಾಟಲಿಗಳ ಬದಲಿಗೆ ಕಬ್ಬಿಣದ ದೊಡ್ಡದೊಡ್ಡ ಸಲಾಕೆಗಳು ಬಳಕೆಗೆ ಬಂದಿದ್ದವು. ಈ ಕಂಬಿಗಳನ್ನು ತರುವುದು ಕಷ್ಟವೇನಾಗಿರಲಿಲ್ಲ. ಶ್ರದ್ಧಾನಂದ ಪಾರ್ಕಿಗೆ ಸುತ್ತುವರೆದಿದ್ದ ಬೇಲಿಗಳಿಗೆ ಬಳಸಲಾಗಿದ್ದ ಕಂಬಿಗಳನ್ನು ದೊಂಬಿಯ ಜನ ಸುಲಭವಾಗಿ ಕಿತ್ತು ತಂದಿದ್ದರು. ಈ ಸಲಾಕೆಗಳ ಬಡಿದಾಟ ಅತಿ ಭಯಾನಕ ಸ್ಥಿತಿ ತಲುಪುವ ವೇಳೆಗೆ ಮೂರು ಮಿಲಿಟರಿ ಟ್ಯಾಂಕುಗಳು ಬಂದಿಳಿದವು. ಮೆಶಿನ್ ಗನ್ನುಗಳಿಂದ ಗುಂಡಿನ ಸುರಿಮಳೆಯಾಯಿತು. ಎಷ್ಟೋ ವಿಳಂಬದ ನಂತರ ಪೊಲೀಸರು ಕಾಣಿಸಿಕೊಂಡರು.

ಮಿಲಿಟರಿ ಬೆಂಗಾವಲಿಲ್ಲದ ಹೊರತು ಈ ಜಾಗಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರು ನಿಶ್ಚಯಿಸಿ ಬಿಟ್ಟಿದ್ದರು. ಇದಕ್ಕೆ ಕಾರಣವೂ ಇತ್ತು. ಹಿಂದೂ ಮುಸ್ಲಿಮರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರಿಗೆ ನಿಷ್ಠೆಯಿಂದಿದ್ದ ಪೊಲೀಸರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಸಾಕಷ್ಟು ಬಲಪ್ರಯೋಗ ಮಾಡಿದ್ದರು. ಈ ಕಾರಣಕ್ಕೆ ಜನ ತಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂಬ ಭಯ ಅವರನ್ನು ಕಾಡುತ್ತಿತ್ತು. ಮಿಲಿಟರಿಯವರು ಕ್ರಮ ಕೈಗೊಂಡ ನಂತರ ಹಾಗೂ ಅಂತಿಮವಾಗಿ ಹಿಂದೂ ಮುಸ್ಲಿಂ ನಾಯಕರು ತಮ್ಮ ಅಭಿಪ್ರಾಯ ಭೇದ ಮರೆತು ಜನರಿಗೆ ಜಂಟಿಯಾಗಿ ಮನವಿ ಮಾಡಿಕೊಂಡ ನಂತರ ದೊಂದು ಗಲಭೆಗಳು ತಣ್ಣಗಾಗುತ್ತ ಬಂದವು.

ಐದನೇ ದಿನ ಕಲ್ಕತ್ತದಲ್ಲಿ ಶಾಂತಿ ನೆಲೆಸಿತು. ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಇಟ್ಟಿಗೆ ಚೂರುಗಳು ಒಡೆದ ಬಾಟಲಿಗಳು, ಕೊಳೆತು ಊದಿಕೊಂಡ ದನಗಳ ಅವಶೇಷಗಳು, ಸುಟ್ಟು ಕರಕಲಾದ ವಾಹನಗಳು… ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹೆಣಗಳನ್ನು ದಾಟಿಕೊಂಡು ವಿಕ್ಟೋರಿಯಾ ಗಾಡಿಗಳು ಮುಂದೆ ಹೋಗುತ್ತಿದ್ದವು. ಅಧಿಕೃತ ಎಣಿಕೆಯ ಪ್ರಕಾರ ಈ ಗಲಭೆಗಳಲ್ಲಿ ಸತ್ತವರ ಸಂಖ್ಯೆ ಆರು ಸಾವಿರ. ಅನಧಿಕೃತ ಮೂಲಗಳ ಪ್ರಕಾರ ಹದಿನಾರು ಸಾವಿರ. ಡೆಟ್ರಾಯಿಟ್ ನಗರದಷ್ಟು ದೊಡ್ಡದಾದ ಈ ಮಹಾನಗರದಲ್ಲಿ ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲ ಹೆಣಗಳ ಮೇಲೂ ರಣಹದ್ದುಗಳು ಹಾರಾಡುತ್ತಿದ್ದವು. ಅವುಗಳ ಹರಡಿದ ರೆಕ್ಕೆಗಳಿಂದ ಇಡೀ ನಗರವೇ ಕತ್ತಲು ಕವಿದಂತೆ ಕಪ್ಪಾಗಿತ್ತು.

ಸಹಸ್ರಾರು ಮಂದಿ ಕಲ್ಕತ್ತ ಬಿಟ್ಟು ಹೋಗಲಾರಂಭಿಸಿದರು. ಜಗತ್ತಿನಲ್ಲೇ ಬಹು ದೊಡ್ಡದಾದ ಹುಗ್ಲೀ ನದಿಯ ಉಕ್ಕಿನ ಸೇತುವೆಯ ಮೇಲೆ ಗಂಡಸರು, ಹೆಂಗಸರು, ಮಕ್ಕಳು ಜಾನುವಾರುಗಳ ಒಂದು ಪ್ರವಾಹವೇ ಹರಿದಿತ್ತು. ಅವರೆಲ್ಲರ ಗುರಿಯೂ ಒಂದೆ – ಅದು ಹೌರಾ ರೈಲ್ವೆ ಸ್ಟೇಷನ್. ರೈಲುಗಳು ಅಷ್ಟೆಲ್ಲ ಮಂದಿಯನ್ನು ತುಂಬಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಜನ ಮುಂದಿನ ರೈಲಿಗಾಗಿ ಕಾಯುತ್ತಾ ಪ್ಲಾಟ್‌ಫಾರಂನ ಮೇಲೆ ಹಾಗೇ ಗುಂಪುಗುಂಪಾಗಿ ಕುಳಿತರು. ಹೀಗೆ ಕೂರುವಾಗಲೇ ಹಿಂದೂಗಳದೇ ಒಂದು ಗುಂಪು, ಮುಸ್ಲಿಮರದೇ ಒಂದು ಗುಂಪು ಎಂದು ಸಹಜವಾಗಿಯೇ ಎರಡು ಗುಂಪಾಗಿತ್ತು. ಬಿಳಿಯ ಬಣ್ಣದ ಹಸುಗಳು, ಅವುಗಳನ್ನು ಸುತ್ತುವರೆದು ಕುಳಿತಿದ್ದ ಕುಟುಂಬಗಳಿಂದ ಹಿಂದೂಗಳ ಗುಂಪನ್ನು ಸುಲಭವಾಗಿ ಗುರುತಿಸಬಹುದಾಗಿತ್ತು. ಯಾವುದಾದರೊಂದು ರೈಲು ಕಂಡರೆ ಸುರಕ್ಷಿತ ಎಂದು ತಿಳಿದುಕೊಂಡಿದ್ದ ಹಳ್ಳಿಯನ್ನು ಹೇಗೋ ತಲುಪಿಬಿಟ್ಟರೆ ಸಾಕು ಎಂದಷ್ಟೇ ಅವರ ನಿರೀಕ್ಷೆ.

ಈ ನಿರ್ವಿಸಿತರು ಎಷ್ಟು ಬೇಗನೇ ತಮ್ಮ ಹಳ್ಳಿಗಳನ್ನು ಸೇರಬೇಕೆಂದಿದ್ದರೋ ಅದಕ್ಕಿಂತ ಬೇಗನೆ ಗಲಭೆ ಅವರ ಹಳ್ಳಿಗಳನ್ನು ತಲುಪಿಬಿಟ್ಟಿತ್ತು. ಭಾರತದಲ್ಲಿ ಇಡೀ ವರ್ಷ ಭುಗಿಲೆದ್ದ ಈ ದೊಂಬಿ, ಗಲಭೆ, ಪ್ರತೀಕಾರಗಳ ಸರಣಿ ಪ್ರಕ್ರಿಯೆಗೆ ಕಲ್ಕತ್ತ ಒಂದು ಆರಂಭ ಬಿಂದು ಮಾತ್ರ.

ಈ ಸರಣಿ ದುರಂತದ ಎರಡನೆಯ ಕೇಂದ್ರ ಬಿಂದು ಆಗ್ನೇಯ ಬಂಗಾಳದಲ್ಲಿದ್ದ ನೌಖಾಲಿ.

ಜೌಗು ಕೆಸರು ತುಂಬಿದ್ದ ಪ್ರದೇಶದಲ್ಲಿ ಕೆಲವು ಹಿಂದೂಗಳೊಡನೆ ನಾನು ಮಾತಾಡಿದೆ. ಇಡೀ ಹಳ್ಳಿಯ ಜನರು ತಮ್ಮ ನೆಲೆಯನ್ನು ತೊರೆದು ನದೀ ತೀರ ಪ್ರದೇಶಕ್ಕೆ ಬಂದಿದ್ದರು. ಇಸ್ಲಾಂಗೆ ಬಲಾತ್ಕಾರದ ಮತಾಂತರ, ತಮ್ಮ ದೇವರ ವಿಗ್ರಹಗಳನ್ನು ನೀರಿಗೆಸೆಯುವಂತೆ ಮಾಡಿದ ಒತ್ತಾಯ. ಗೋಮಾಂಸ ತಿನ್ನುವಂತೆ ಬಲಾತ್ಕಾರ, ಮೊದಲಾದ ಗೋಳಿನ ಕಥೆಗಳನ್ನು ಹೇಳಿಕೊಂಡರು. ಮುಸ್ಲಿಂ ಗೂಂಡಾಗಳು ಮನೆಯ ಕಿಟಕಿ ಕಟ್ಟೆಯ ಮೇಲೆ ಹಸಿಮಾಂಸ ತಂದಿಟ್ಟರು. ನಮ್ಮ ಮನೆ ಅಪವಿತ್ರವಾಯಿತು ಎಂದು ಒಬ್ಬ ಹೆಂಗಸು ರೋದಿಸಿದಳು.

ಗಾಂಧೀಜಿಯವರಿಗೆ ನೌಖಾಲಿ ಸಂಚಾರದ ಕಷ್ಟವನ್ನು ತಾಳಿಕೊಳ್ಳಲು ವಯಸ್ಸು ಮೀರಿದ್ದರೂ ಅದನ್ನು ಲೆಕ್ಕಿಸದೆ ಕೆಸರು ತುಂಬಿದ ಅರಣ್ಯ ಪ್ರದೇಶದಲ್ಲಿ ಬರಿಗಾಲಿನಲ್ಲಿ ನಡೆದಾಡುತ್ತ ಗ್ರಾಮೀಣ ಜನರಲ್ಲಿ ಆತ್ಮವಿಶ್ವಾಸವನ್ನು ಮತ್ತೆ ಮೂಡಿಸುವ ಪ್ರಯತ್ನ ಮಾಡಿದ್ದರು. ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಗೇಣಿದಾರರು ಎಲ್ಲರೂ ಒಗ್ಗಟ್ಟಾಗಿರಬೇಕು ಎಂಬ ಅಂಶವನ್ನು ಒತ್ತಿ ಹೇಳತೊಡಗಿದ್ದರು. ಇಷ್ಟೆಲ್ಲ ಗಲಾಟೆ ಗಲಭೆಗಳ ನಡುವೆಯೂ ಐವತ್ತು ಲಕ್ಷ ಹಿಂದೂ ಮತ್ತು ಮುಸ್ಲಿಂ ಗೇಣಿದಾರರು ಒಟ್ಟಾಗಿ, ಬಹುಕಾಲದಿಂದ ಇತ್ಯರ್ಥವಾಗದೆ ಉಳಿದಿದ್ದ ಭೂಸುಧಾರಣೆಗಳಿಗಾಗಿ ತೇಭಾಗ ಚಳುವಳಿಯಲ್ಲಿ ಹೋರಾಡತೊಡಗಿದ್ದು ಗಮನಾರ್ಹವಾಗಿತ್ತು. ಅಲ್ಲಿ ಧಾರ್ಮಿಕ ಸಂಘರ್ಷದ ಮಾತೇ ಇರಲಿಲ್ಲ. ಆದರೆ ಹಿಂದೂ ಮುಸ್ಲಿಂ ಸೌಹಾರ್ದದ ಈ ಸಣ್ಣಪುಟ್ಟ ದ್ವೇಷಗಳ ನಡುವೆ, ಉರಿಯುತ್ತಿರುವ ಹಳ್ಳಿಗಳಿದ್ದವು. ಮತಾಂಧತೆಯ ಬೆಂಕಿ ಉರಿಯುತ್ತಿತ್ತು. ಬಂಗಾಳದ ಸಂಘರ್ಷದ ಕಿಡಿಗಳು ಪಶ್ಚಿಮದ ಬಿಹಾರದತ್ತ ಹಾರಿದವು. ಅಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಹಿಂದೂಗಳು ನಿರ್ದಯವಾಗಿ ಸೇಡು ತೀರಿಸಿಕೊಂಡರು. ಬಿಹಾರದಿಂದ ಬೆಂಕಿಯ ಉರಿನಾಲಿಗೆಗಳು ಪಂಜಾಬಿನತ್ತ ಚಾಚಿದವು. ಅಲ್ಲಿ ಎಂತಹ ಸ್ಫೋಟಕ ಸ್ಥಿತಿ ಉಂಟಾಯಿತೆಂದರೆ ಅದರ ಮುಂದೆ ಕಲ್ಕತ್ತದ ಗಲಭೆಗಳು ಏನೂ ಅಲ್ಲ ಎನ್ನುವಂತಾಯಿತು. ತಿಂಗಳುಗಟ್ಟಲೆ ನಡೆದ ಹಿಂಸಾತ್ಮಕ ದೊಂಬಿಗಳು ಭಾರತ ಪಾಕಿಸ್ತಾನಗಳ ಭೇದಭಾವನೆಯನ್ನು ಇನ್ನಷ್ಟು ತೀವ್ರಗೊಳಿಸಿದವು. ಜಿನ್ನಾ ವಾದಕ್ಕೆ ಇನ್ನಷ್ಟು ಒತ್ತು ಸಿಕ್ಕಿತು. ಅಂತೂ ನಂದಲಾಲ್ ಯಾವತ್ತು ತನ್ನ ಮನೆಬಾಗಿಲಲ್ಲಿಯೇ ಸ್ಫೋಟಗೊಂಡ ನೇರ ಹೋರಾಟವನ್ನು ನೋಡಿದನೋ ಆ ದಿನದಿಂದ ಸರಿಯಾಗಿ ಒಂದು ವರ್ಷಕ್ಕೆ ಒಂದು ದಿನ ಕಡಿಮೆ ಅಂದರೆ ಆಗಸ್ಟ್ ೧೫, ೧೯೪೭ ರಂದು ರಕ್ತಮಯ ಭಾರತದಿಂದ ರಕ್ತಮಯ ಪಾಕಿಸ್ತಾನವನ್ನು ಕತ್ತರಿಸಿ ತೆಗೆಯಲಾಯಿತು.

* * *