ಭಾರತದ ಎಲ್ಲ ಪ್ರದೇಶಗಳ ಜನರಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ಗಾಂಧೀಜಿಯವರು ೧೯೪೮ರಲ್ಲಿ ಜನವರಿಯಲ್ಲಿ ಉಪವಾಸ ಹೂಡಲು ನಿರ್ಧರಿಸಿದರು. ಗಾಂಧೀಜಿಯವರ ಈ ನಿರ್ಧಾರ ಕೇವಲ ಒಬ್ಬ ಮಹಿಳೆಗೆ ಮಾತ್ರ ಗೊತ್ತಿತ್ತು. ಆ ಮಹಿಳೆ ಸುಶೀಲಾ ನಯ್ಯರ್.

ಇದು, ಗಾಂಧೀಜಿಯವರು ಇದುವರೆಗೆ ಹೂಡಿದ ಉಪವಾಸಗಳಲ್ಲಿ ಹದಿನಾರನೆಯದು. ಹಿಂದಿನ ಉಪವಾಸಗಳಿಗಿಂತ ಇದು ಹೆಚ್ಚು ಸ್ಫೋಟಕವಾಗಿತ್ತು. ಮೊದಲಿನ ಉಪವಾಸಗಳೆಲ್ಲ ಬ್ರಿಟಿಷ್ ರಾಜ್ಯದ ವಿರುದ್ಧ ಹೂಡಿದಂಥವು. ಆದರೆ ಈಗಿನದು ಯಾವ ಸ್ವತಂತ್ರ ಭಾರತ ಸರ್ಕಾರದ ಸ್ಥಾಪನೆಗೆ ಗಾಂಧೀಜಿ ಅಷ್ಟೆಲ್ಲ ದುಡಿದಿದ್ದರೋ ಅಂತಹ ಸರ್ಕಾರದ ಲೋಪದೋಷಗಳ ವಿರುದ್ಧ ಮಾಡುತ್ತಿರುವ ಉಪವಾಸವಾಗಿತ್ತು.

ಉಳಿದ ಉಪವಾಸಗಳಿಗಿಂತ ಈ ಉಪವಾಸದ ನಿರ್ಧಾರ ಆತಂಕಕಾರಿಯಾಗಿತ್ತು. ಗಾಂಧಿಯವರ ಈ ಇಳಿ ವಯಸ್ಸಿನಲ್ಲಿ ನಡೆಯುತ್ತಿರುವ ಈ ಉಪವಾಸ ಅವರ ಕೊನೆಯ ಉಪವಾಸವೂ ಆಗಬಹುದಿತ್ತು. ಈ ಉಪವಾಸದ ಪರಿಣಾಮ ಏನಾಗಬಹುದು ಎಂದು ಅತ್ಯಂತ ಖಚಿತವಾಗಿ ತಿಳಿದಿದ್ದುದು ಸುಶೀಲಾ ನಯ್ಯರ್ ಅವರಿಗೆ. ಏಕೆಂದರೆ ಅವರು ಕಳೆದ ಅನೇಕ ವರ್ಷಗಳಿಂದ ಗಾಂಧಿಯವರ ಆಪ್ತ ವೈದ್ಯೆಯಾಗಿದ್ದರು.

ಅತ್ಯಂತ ಸಾಧಾರಣವಾಗಿ ಕಾಣುವ, ಪುಟ್ಟ ಆಕಾರದ, ಸರಳ ಮುಖಭಾವದ ಈ ಮಹಿಳೆ ಗಾಂಧಿಯನ್ನು ಮೊದಲು ನೋಡಿದ್ದು ಶಾಲಾ ಹುಡುಗಿಯಾಗಿದ್ದಾಗ. ಆಕೆ ಪಶ್ಚಿಮ ಪಂಜಾಬ್ ಭಾಗದಿಂದ ಬಂದವರು. ತಮ್ಮ ದೊಡ್ಡ ಅಣ್ಣ ಪ್ಯಾರೇಲಾಲ್ ಅವರೊಂದಿಗೆ ಇರುವುದಕ್ಕಾಗಿ ಲಾಹೋರ್‌ನಿಂದ ಬಂದ ಸುಶೀಲಾ ಮೊದಲು ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದರು. ಅನಂತರ ವೈದ್ಯಕೀಯ ಅಭ್ಯಾಸ ಮಾಡಿದರು. ವಿಶ್ವವಿದ್ಯಾಲಯದ ಆರ್ಟ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದ ಪ್ಯಾರೆಲಾಲ್, ಗಾಂಧಿಯವರು ಕ್ವಿಟ್ ಇಂಡಿಯಾ ಕುರಿತು ಮಾತಾಡಿದ ಸಭೆಗಳಲ್ಲಿ ಭಾಗವಹಿಸಿದ್ದರು. ಅಣ್ಣನ ಮೂಲಕ ಗಾಂಧಿ ವಿಚಾರಗಳಿಂದ ಪ್ರಭಾವಿತಳಾಗಿ ಸುಶೀಲಾ ಕೂಡಾ ‘ಗಾಂಧೀ ವಲಯ’ ಸೇರಿದ್ದಳು. ಅಣ್ಣ ತಂಗಿ, ಇಬ್ಬರೂ ಈಗ ತಮ್ಮ ಬದುಕನ್ನು ರಾಷ್ಟ್ರ ಸೇವೆಗೆ ಮುಡುಪಾಗಿಡುವ ಹೊಸ್ತಿಲಲ್ಲಿದ್ದರು. ಗಾಂಧೀಜಿಯವರ ಸೇವೆಯಲ್ಲಿ ತಮ್ಮ ಜೀವನ ಕಳೆಯುವುದಕ್ಕಾಗಿ ತಮ್ಮ ವಿದ್ಯಾಭ್ಯಾಸವನ್ನು ಬಿಟ್ಟುಬರಲು ನಿರ್ಧರಿಸಿದ್ದರು. ಗಾಂಧೀಜಿಯವರಿಗೆ ವೈದ್ಯಕೀಯ ಸೇವೆ ಮಾಡಲು ಸುಶೀಲಾ, ಗಾಂಧೀಜಿಯವರು ಪ್ರಕಟಿಸುತ್ತಿದ್ದ ಮ್ಯಾಗಜೈನ್ ಹಾಗೂ ಪತ್ರಿಕೆಗಳಿಗೆ ಟಿಪ್ಪಣಿ ಬರೆಯುತ್ತಾ, ಗಾಂಧಿಯವರ ಕಾರ್ಯದರ್ಶಿ ಹಾಗೂ ಸಾಹಿತ್ಯದ ಸಹಾಯಕನಾಗಿ ಕೆಲಸ ಮಾಡಲು ಪ್ಯಾರೇಲಾಲ್ ಹೀಗೆ ಈ ಇಬ್ಬರೂ ನಿರ್ಧರಿಸಿದ್ದರು.

ಗಾಂಧೀಜಿಯವರನ್ನು ಮೊದಲು ನೋಡಿದಾಗ ಇವರಿಬ್ಬರಿಗೂ ಹೊಸ ಕ್ಷಿತಿಜವೊಂದು ತಮ್ಮ ಕಣ್ಣಮುಂದೆ ತೆರೆದುಕೊಂಡಂತಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸುವುದಕ್ಕಾಗಿ ಕಾಲೇಜುಗಳನ್ನು ತೊರೆದು ಬಂದ ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಹಾಗೂ ೨೦ ಮತ್ತು ೩೦ರ ದಶಕಗಳಲ್ಲಿ ಸಹಸ್ರಾರು ಪಾಲಿಗೆ ಗಾಂಧೀಜಿಯವರು ನಿಜವಾಗಿಯೂ ಒಂದು ಹೊಸ ದಿಗಂತವನ್ನು ತೋರಿಸಿದ್ದರು. ನಿನ್ನ ಲೇಖನಿ ಹಾಗೂ ಬೌದ್ಧಿಕ ಶಕ್ತಿಯನ್ನು ಬಳಸಿಕೊಳ್ಳಬೇಕೆಂದಿದ್ದೇನೆ’ ಎಂದು ಹೇಳಿದರು.

ಗಾಂಧಿಯವರನ್ನು ಮೊದಲು ನೋಡಿದ ತಕ್ಷಣ ಹೇಗೆನ್ನಿಸಿತು ಎಂದು ಪ್ಯಾರೆಲಾಲ್ ಮತ್ತು ಸುಶೀಲ ಅವರೂ ಸೇರಿದಂತೆ ನಾನು ನೂರಾರು ಭಾರತೀಯರನ್ನು ಕೇಳಿದ್ದೆ ಅನೇಕರು ಗಾಂಧಿ ವಿಚಾರಗಳನ್ನು ಒಪ್ಪದಿರಬಹುದು. ಆದರೆ ಪ್ರತಿಯೊಬ್ಬರೂ ಸಹ ತಮ್ಮ ಜೀವನದ ಯಾವುದೋ ಒಂದು ಘಟ್ಟದಲ್ಲಿ ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ. ಆದರೆ ಇವರೆಲ್ಲರಿಗಿಂತ ನನಗೆ ಈ ಇಬ್ಬರು ಅಣ್ಣತಂಗಿಯರ ಅಭಿಪ್ರಾಯ ಮುಖ್ಯವಾಗಿತ್ತು. ಗಾಂಧಿಯವರ ಯಾವ ಗುಣಗಳು ತಮ್ಮ ಎಲ್ಲವನ್ನೂ ಬಿಟ್ಟು ಗಾಂಧಿಯವರನ್ನು ಹಿಂಬಾಲಿಸುವಂತೆ ಜನರನ್ನು ಪ್ರೇರೇಪಿಸುತ್ತವೆ ಎಂಬುದನ್ನು ನಾನು ತಿಳಿಯಬೇಕಿತ್ತು. ಪ್ಯಾರೇಲಾಲ್ ಹೇಳಿದರು – “ಗಾಂಧಿಯವರ ಪ್ರಖರತೆ, ಕಗ್ಗಲ್ಲಿನಂಥ ಶಕ್ತಿ ಆದರೆ ಜೊತೆಗೂಡಿದ ಅವರ ಅಸಾಧಾರಣ ಶಾಂತ ಮನಃಸ್ಥಿತಿ ಅವರ ದನಿಯಲ್ಲಿರುವ ಯಾವುದೋ ಒಂದು ರೀತಿಯ ಕಾರ್ಯಪಟುತ್ವ ನನ್ನನ್ನು ಆಕರ್ಷಿಸಿದವು. ಗಾಂಧಿಯವರ ಧ್ವನಿಯ ವಿಶಿಷ್ಟತೆಯ ಬಗ್ಗೆ ಪ್ಯಾರೇಲಾಲ್ ವಿಶೇಷ ಕಾಳಜಿಯಿಂದ ವಿವರಣೆ ನೀಡಿದರು… “ಅವರು ಅತ್ಯಂತ ಅಧಿಕಾರಯುತವಾಗಿ ಮಾತಾಡುತ್ತಾರೆ. ಅಲ್ಲಿ ಅಸೀಮವಾದ ಜವಾಬ್ದಾರಿ ತುಂಬಿರುತ್ತದೆ… ಆತನಲ್ಲಿ ಪವಾಡ ಸದೃಶವಾದ ಏನೋ ಒಂದು ಶಕ್ತಿ ಇದೆ.”

“ನೀವು ಬೇರೆ ರೀತಿಯ ಪದ ಬಳಸುತ್ತಿದ್ದೀರಿ. ಬಹಳ ಜನ ಅವರ ಕುರಿತು ಹೇಳುವಾಗ ‘ಸಂತ’ ಎಂಬ ಪದ ಬಳಸುತ್ತಾರೆ” ಎಂದು ನಾನು ಹೇಳಿದೆ. ಗಾಂಧಿಗೆ ಆ ಪದ ಸೂಕ್ತವಲ್ಲ ಎಂಬ ಖಚಿತ ದನಿಯಲ್ಲಿ. “ಇಲ್ಲ… ಹಾಗಲ್ಲ” ಎಂದು ಪ್ಯಾರೇಲಾಲ್ ಹೇಳಿದರು. “ನಾನು ಗಾಂಧಿಯವರನ್ನು ನೋಡುವ ರೀತಿ ಶಿಷ್ಯನೊಬ್ಬ ಸಂತನನ್ನು ನೋಡುವ ರೀತಿಗಿಂತ ಬೇರೆ. ಆತ ಒಬ್ಬ ಪ್ರವಾದಿ, ಸಂದೇಶದೂತ. ಇದು ನನ್ನಲ್ಲಿ ಮೂಡಿರುವ ಚಿತ್ರ. ಆತನ ಈ ಸಾಮರ್ಥ್ಯದ ಎದುರು ಮಹಾಚಕ್ರವರ್ತಿಗಳೂ ಕೂಡ ಅಲ್ಪರೂ, ಏನೇನೂ ಮಹತ್ವವಿಲ್ಲದವರೂ ಆಗಿಬಿಡುತ್ತಾರೆ.”

ಅಸಹಕಾರ ಚಳುವಳಿಯ ಭೀಕರ ದಿನಗಳಲ್ಲಿ ಸುಶೀಲಾ ಮತ್ತು ಪ್ಯಾರೇಲಾಲ್ ಇಬ್ಬರೂ ಜೈಲಿನ ಒಳಗೂ ಹೊರಗೂ ಗಾಂಧಿಯವರೊಂದಿಗೇ ಇದ್ದರು. ಗಾಂಧಿಯವರ ಪತ್ನಿಗೆ ಸೆರೆಮನೆಯಲ್ಲಿ ಖಾಯಿಲೆಯಾದಾಗ ಅವರ ಕೊನೆ ಉಸಿರಿನವರೆಗೆ ಅವರನ್ನು ಸುಶೀಲಾ ಉಪಚರಿಸಿದರು. ಸ್ವಾತಂತ್ರ್ಯ ಬಂದ ನಂತರ ಭಾರತದಾದ್ಯಂತ ವ್ಯಾಪಿಸಿದ ಅನಿರೀಕ್ಷಿತ ಸುಂಟರಗಾಳಿಯ ಸಂದರ್ಭದಲ್ಲಿ ಗಾಂಧಿಯವರ ಆಹಾರ, ಪಥ್ಯ, ಬೆಳಗಿನ ಮಾಲೀಸು, ಪ್ರಾರ್ಥನಾ ಸಭೆಗೆ ಸಹಾಯ…. ಇದೆಲ್ಲವನ್ನೂ ನೋಡಿಕೊಳ್ಳುತ್ತಿದ್ದವರು ಸುಶೀಲಾ.

ಸೋಮವಾರದ ಪ್ರಾರ್ಥನಾ ಸಭೆಗಳ ಸಂದರ್ಭದಲ್ಲಿ ಸುಶೀಲಾಗೆ ಹೆಚ್ಚು ಕೆಲಸ. ಆಕೆಯ ದನಿ ಮಧುರವಾಗಿರಲಿಲ್ಲ. ಆದರೂ ಗಾಯನದ ನೇತೃತ್ವ ವಹಿಸುವುದರ ಜೊತೆಗೆ ಗಾಂಧಿಯವರ ಪ್ರಾರ್ಥನಾ ಸಭೆಯ ಭಾಷಣವನ್ನು ಇಡೀ ಜನಸಮೂಹಕ್ಕೆ ಕೇಳಿಸುವಂತೆ ಜೋರಾಗಿ ಓದಿ ಹೇಳುವ ಕೆಲಸವನ್ನು ಅವರು ಮಾಡಬೇಕಿತ್ತು. ಸೋಮವಾರ ಗಾಂಧಿಯವರ ಮೌನವ್ರತದ ದಿನ. ಉಳಿದ ಆರು ದಿನಗಳು ಗಾಂಧಿ ಎಲ್ಲ ವಿಷಯಗಳ ಬಗ್ಗೆಯೂ ಎಲ್ಲರೊಂದಿಗೂ ಮಾತಾಡುತ್ತಿದ್ದರು. ಎಳೆಯ ಮಕ್ಕಳನ್ನು ಹೇಗೆ ಬೆಳೆಸಬೇಕು. ಯಾವ ರೀತಿ ಆಹಾರ ಕೊಡಬೇಕು. ಏನೇ ಬಾಧೆಯಾದರೂ ಮಣ್ಣು ಮೆತ್ತುವ ಚಿಕಿತ್ಸೆ ಎಷ್ಟು ಒಳ್ಳೆಯದು ಎಂದು ತಾಯಂದರಿಗೆ ತಿಳುವಳಿಕೆ ಹೇಳುತ್ತಿದ್ದರು. ದೇಶವನ್ನು ಎಲ್ಲೆಂದರಲ್ಲಿ ಹಾಕಬಾರದು ಎಂದು ಗಾಂಧಿ ಬುದ್ಧಿವಾದ ಹೇಳುತ್ತಿದ್ದರು. ದೇಶವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಸರ್ಕಾರಗಳ ಮುಖ್ಯಸ್ಥರಿಗೆ ಉಪನ್ಯಾಸ ನೀಡುತ್ತಿದ್ದರು. ಆದರೆ ಸೋಮವಾರಗಳಂದು ಮಾತ್ರ ಅವರು ಒಂದೇ ಒಂದು ಶಬ್ದವನ್ನೂ ಉಚ್ಚರಿಸುತ್ತಿರಲಿಲ್ಲ. ಒಂದು ವೇಳೆ ಮಂಗಳವಾರಕ್ಕೆ ಮುಂದೂಡುವುದೂ ಕೂಡ ಸಾಧ್ಯವಿಲ್ಲ ಎಂಬಂತಹ ತುರ್ತು ವಿಷಯ ಬಂದಾಗ ಅವರು ತಮಗೇ ವಿಶಿಷ್ಟವಾದ ದೊಡ್ಡ ದೊಡ್ಡ ಗೀಚು ಅಕ್ಷರಗಳಲ್ಲಿ ಒಂದು ಸಾಲಿನಷ್ಟು ಬರೆದು ತೋರಿಸುತ್ತಿದ್ದರು.

ಗಾಂಧಿಯವರು ಧ್ಯಾನ ಮತ್ತು ಪ್ರಾರ್ಥನೆಗೆ ಹೆಚ್ಚು ಸಮಯ ವಿನಿಯೋಗಿಸುವ ದೃಷ್ಟಿಯಿಂದ ಸೋಮವಾರ ಮೌನವ್ರತ ಆಚರಿಸುತ್ತಾರೆ ಎಂಬುದು ಎಲ್ಲರಲ್ಲಿಯೂ ಇದ್ದ ಒಂದು ಸಾಮಾನ್ಯ ಅಭಿಪ್ರಾಯ. ಆದರೆ ಎಲ್ಲ ದಿನಗಳಲ್ಲಿಯೂ ಗಾಂಧೀಜಿ ಪ್ರಾರ್ಥನೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಬಹುತೇಕ ಹಿಂದೂಗಳಂತೆ ಶುಭ ಮುಹೂರ್ತದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಇಡೀ ವಾರದಲ್ಲಿ ಒಂದು ದಿನವಾದರೂ ತಾವು ಮಾತಾಡುವ ಅವಕಾಶವೇ ಇರಬಾರದು ಎಂಬುದೇ ಗಾಂಧೀಜಿಯವರು ತಮ್ಮ ಮೌನವ್ರತಕ್ಕೆ ನೀಡುತ್ತಿದ್ದ ಕಾರಣ. ಮೌನ ಆಚರಣೆಯಿಂದ ವಿಶ್ರಾಂತಿ ಸಿಗುವುದರಿಂದ ಆಯುಷ್ಯಮಾನ ಹೆಚ್ಚಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಿದೆ ಎಂದು ಗಾಂಧೀಯವರೇ ಒಂದು ಸಲ ಹೇಳಿದ್ದರು.

ಸೋಮವಾರ ಅವರು ತಮ್ಮ ವಿಚಾರಗಳನ್ನು ಹಾಗೂ ಜನರಿಗೆ ನೀಡಬೇಕಾದ ಸಲಹೆಗಳನ್ನು ಒಂದು ನೋಟ್‌ಬುಕ್‌ನಲ್ಲಿ ಬರೆದು, ಪ್ರಾರ್ಥನೆಯಾದ ನಂತರ ಜನರಿಗೆ ಅದನ್ನು ಓದುವಂತೆ ಹೇಳಿ, ಸುಶೀಲಾ ಕೈಗೆ ಕೊಡುತ್ತಿದ್ದರು. ಜನವರಿ ೧೨ರ ಆ ವಿಶೇಷ ದಿನದಂದು ಪ್ರಾರ್ಥನೆ ಆರಂಭವಾಗುವುದಕ್ಕೆ ಇನ್ನು ಐದು ನಿಮಿಷವಿದೆ ಎನ್ನುವಾಗ ಗಾಂಧಿ ಸುಶೀಲಾಗೆ ನೋಟ್‌ಬುಕ್ ಕೊಟ್ಟರು. ಪ್ರಾರ್ಥನಾ ಸಭೆ ನಡೆಯುವ ಉದ್ಯಾನಕ್ಕೆ ಹೋಗುವ ಮೊದಲು ಸುಶೀಲಾ ಒಮ್ಮೆ ಅದರಲ್ಲಿ ಬರೆದಿರುವುದರ ಮೇಲೆ ಕಣ್ಣಾಡಿಸಿದರು. Fasting is the last resort in place of sword’ ಎಂಬ ವಾಕ್ಯ ಓದುತ್ತಿದ್ದಂತೆ ಆಕೆ ಬೆಚ್ಚಿದರು. ಈ ವಾಕ್ಯದ ನಂತರ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಬರ್ಬರ ಹೋರಾಟದ ವಿರುದ್ಧ, ಸರ್ಕಾರದಲ್ಲಿರುವ ಕಾಂಗ್ರೆಸ್ಸಿನವರ ನೈತಿಕ ಅವನತಿಯ ವಿರುದ್ಧ ಹಾಗೂ ಕುಂದುತ್ತಿರುವ ಭಾರತದ ಘನತೆಯನ್ನು ಹಾಗೂ ದಕ್ಷಿಣ ಏಷಿಯಾದಲ್ಲಿ ಅದರ ಸಾರ್ವಭೌಮತೆಯನ್ನು ಪುನಃ ಸ್ಥಾಪಿಸುವ ಉದ್ದೇಶದಿಂದ ತಾವು ಉಪವಾಸ ಆರಂಭಿಸುತ್ತಿರುವುದಾಗಿ ಗಾಂಧಿ ತಿಳಿಸಿದ್ದರು.

ಭಾರತ ಅಷ್ಟೆಲ್ಲ ಕಷ್ಟಪಟ್ಟು ಸ್ವಾತಂತ್ರ್ಯ ಗಳಿಸಿದ ಆರಂಭದಲ್ಲಿಯೇ ಇಂತಹ ಧಾರ್ಮಿಕ ರಕ್ತಪಾತ ಬಿರುಗಾಳಿಯಂತೆ ಎಲ್ಲೆಡೆ ವ್ಯಾಪಿಸಿದ್ದು ಗಾಂಧಿಯವರಿಗೆ ತೀವ್ರ ಅವಮಾನವಾಗಿರಬೇಕು ಎಂದು ಅವರು ಬಯಸಿದ್ದರು. ಆದರೆ ಅಲ್ಲಿಯೇ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ನಡೆದಿದ್ದ ಹೇಯ ಕಾರ್ಯಾಚರಣೆಯಿಂದ ಅವರು ತೀರಾ ಕಂಗೆಟ್ಟರು. ದೆಹಲಿಯಲ್ಲಿ ಹಿಂದೆಂದೂ ಕಂಡು ಬರದಂತಹ ವಸತಿ ವ್ಯವಸ್ಥೆಯ ಕೊರತೆಯಿಂದಾಗಿ ದೊಂಬಿ ಗಲಭೆಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಿತ್ತು. ಸಹಸ್ರಾರು ಹಿಂದೂಗಳು ಸಿಖ್ಖರು ಪಾಕಿಸ್ತಾನದಲ್ಲಿದ್ದ ತಮ್ಮ ಮೂಲ ಮನೆಮಠಗಳನ್ನು ತೊರೆದು ದೆಹಲಿಗೆ ಓಡಿ ಬಂದಿದ್ದರು. ಆದರೆ, ಇಲ್ಲಿ ಅವರಿಗೆ ವಸತಿಯೇ ಇರಲಿಲ್ಲ. ತಮ್ಮ ಮನೆಗಳನ್ನೂ, ಹೊಲಗದ್ದೆಗಳನ್ನೂ ಪಾಕಿಸ್ತಾನದ ಮುಸ್ಲಿಮರಿಗೆ ಬಿಟ್ಟುಬಂದಿದ್ದ ಅವರು ಈಗ ದೆಹಲಿಯಲ್ಲಿ ಮುಸ್ಲಿಮರ ಮನೆಗಳನ್ನು ಬಲಾತ್ಕಾರದಿಂದ ಸ್ವಾಧೀನಪಡಿಸಿಕೊಳ್ಳತೊಡಗಿದ್ದರು. ದೆಹಲಿ ಪೊಲೀಸ್‌ನಲ್ಲಿ ಹೆಚ್ಚಿನವರೆಲ್ಲ ಹಿಂದೂಗಳು ಮತ್ತು ಸಿಖ್ಖರು. ಆದ್ದರಿಂದ ಮುಸ್ಲಿಮರ ಉಚ್ಛಾಟನೆ, ಅವರ ಮೇಲೆ ನಡೆಯುತ್ತಿದ್ದ ಹಲ್ಲೆ ಕೊಲೆ ಸುಲಿಗೆಗಳನ್ನು ಪೊಲೀಸರು ನಿಷ್ಕ್ರಿಯರಾಗಿ ನೋಡುತ್ತ ನಿಂತಿದ್ದರು. ಮುಸ್ಲಿಮರ ಮಸೀದಿಗಳು ಹಾಗೂ ಪವಿತ್ರ ಗೋರಿಗಳ ಪ್ರದೇಶಕ್ಕೆ ನುಗ್ಗಿದ ಹಿಂದೂಗಳು ಮತ್ತು ಸಿಖ್ಖರು ಅಲ್ಲಿದ್ದ ಮುಸ್ಲಿಮರನ್ನು ಬಲಾತ್ಕಾರದಿಂದ ಹೊರಕ್ಕೆ ಹಾಕಿ ತಮ್ಮ ಕುಟುಂಬಗಳೊಂದಿಗೆ ಅಲ್ಲಿ ನೆಲಸತೊಡಗಿದಾಗ, ಈ ಬಗ್ಗೆ ಏನಾದರೂ ಮಾಡಲೇಬೇಕು ಎಂದು ಗಾಂಧಿಯವರಿಗೆ ಸ್ಪಷ್ಟವಾಯಿತು. ಮುಸ್ಲಿಮರು ಶಾಂತಿಯಿಂದ ಸುರಕ್ಷಿತವಾಗಿ ತಮ್ಮ ಪ್ರಾರ್ಥನಾ ಸ್ಥಳಗಳಿಗೆ ಹೋಗುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಮನವರಿಕೆಯಾಗದ ಹೊರತು ನಾನು ಉಪವಾಸ ನಿಲ್ಲಿಸುವುದಿಲ್ಲ ಎಂಬ ಷರತ್ತನ್ನು ಗಾಂಧಿ ಹಾಕಿದರು. ಪಾಕಿಸ್ತಾನ ಎಂಬ ಮುಸ್ಲಿಂ ರಾಜ್ಯವನ್ನು ನಿರ್ಮಿಸಿದ ನಂತರವೂ ಭಾರತದ ಎಲ್ಲೆಯೊಳಗಿದ್ದ ಮುಸ್ಲಿಂ ಅಲ್ಪಸಂಖ್ಯಾತರ ಸಂಖ್ಯೆ ೪೦ ದಶಲಕ್ಷಕ್ಕೂ ಹೆಚ್ಚಾಗಿತ್ತು. ಅವರಲ್ಲಿ ಅನೇಕರು ದೇಶ ವಿಭಜನೆಯನ್ನು ವಿರೋಧಿಸಿದ್ದರು. ಅವಿಭಾಜಿತ ಭಾರತದಲ್ಲಿ ತಮ್ಮ ಬದುಕನ್ನು ಮುಂದುವರೆಸಬೇಕು. ಇಲ್ಲಿಯೇ ತಮ್ಮ ಉದ್ಯೋಗವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬುದು ಅವರ ಬಯಕೆ. ಆದರೆ ‘ಈ ದಿನ ಯಾವ ಮುಸ್ಲಿಂ ಜೀವವೂ ಹಿಂದೂ ಮತ್ತು ಸಿಖ್ಖರ ಕತ್ತಿ, ಬಾಂಬು, ಬುಲೆಟ್ಟುಗಳ ಭಯದಿಂದ ಮುಕ್ತವಾಗಿಲ್ಲ’ ಎಂದು ಗಾಂಧಿ ಬರೆದರು.

ಮಾರನೇ ದಿನ ಬೆಳಿಗ್ಗೆ ಉಪಾಹಾರದ ನಂತರ ಉಪವಾಸ ಆರಂಭವಾಗಬೇಕಿತ್ತು. ದೆಹಲಿಗೆ ಬಂದಾಗಿನಿಂದ ಇಂತಹ ಉಪವಾಸ ನಡೆಸುವ ಯೋಜನೆ ಗಾಂಧಿಯವರ ತಲೆಯಲ್ಲಿ ಇದ್ದೇ ಇತ್ತು. ಆದರೆ ಅವರು ಈ ನಿರ್ಣಯ ಕೈಗೊಳ್ಳಲು ಹಿಂಜರಿದಿದ್ದರು. ಅವರೇ ಹೇಳುವಂತೆ I did not feel sure whether it was the voice of the reason or of sat on in my breast. But for the last three days I have been listening to the call of the God’.

ಗಾಂಧೀಜಿಯವರ ಉಪವಾಸ ಕುರಿತ ಈ ಮಹತ್ವದ ಪ್ರಕಟಣೆಯನ್ನು ಮಾಡಬೇಕಿದ್ದ ಸೋಮವಾರದ ಆ ಪ್ರಾರ್ಥನಾ ಸಭೆಯಲ್ಲಿ ಜನರ ಸಂಖ್ಯೆ ಎಂದಿಗಿಂತ ಕಡಿಮೆ ಇತ್ತು. ಸೋಮವಾರ ಗಾಂಧಿಯವರು ಮಾತಾಡುವುದಿಲ್ಲ ಎಂದು ಆ ದಿನದ ಪ್ರಾರ್ಥನಾ ಸಭೆಗೆ ಹೆಚ್ಚಿನ ಜನ ಬರುತ್ತಿರಲಿಲ್ಲ. ಇಷ್ಟಾದರೂ ಕೆಲವೇ ನಿಮಿಷಗಳಲ್ಲಿ ಗಾಂಧಿಯವರ ಉಪವಾಸದ ಸುದ್ದಿ ಇಡೀ ದೇಶಕ್ಕೆ ಹಬ್ಬಿಬಿಟ್ಟಿತು. ಯಂತ್ರಯುಗದ ಬಗ್ಗೆ ಗಾಂಧಿಯವರು ಎಷ್ಟೇ ಪೂರ್ವಾಗ್ರಹ ಪೀಡಿತರಾಗಿದ್ದರೂ ಸಂವಹನಕ್ಕೆ ಸಂಬಂಧಿಸಿದ ಮಾಧ್ಯಮಗಳ ಅನುಕೂಲತೆಯನ್ನು ಮಾತ್ರ ಯಾವುದೇ ರಾಜಕೀಯ ನಾಯಕರಂತೆಯೇ ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆ ಮುಗಿದ ಕೆಲವು ದಿನಗಳಲ್ಲಿಯೇ ಅವರು ತಮ್ಮ ರಾತ್ರಿಯ ಪ್ರಾರ್ಥನಾ ಸಭೆಯ ಭಾಷಣಗಳನ್ನು ರೇಡಿಯೋ ಮೂಲಕ ದೇಶಕ್ಕೆ ಪ್ರಸಾರ ಮಾಡಲಾಂಭಿಸಿದರು. ಹೀಗಾಗಿ ಅವರು ಮಕ್ಕಳ ತಂದೆ ತಾಯಂದಿರಿಗೆ ಕೊಡುವ ಚೂರುಪಾರು ಸಲಹೆಗಳಿಂದ ಹಿಡಿದು ಸಕ್ಕರೆ ಮತ್ತು ಬಟ್ಟೆಯ ಬೆಲೆ ಹತೋಟಿ ತೆಗೆಯುವುದಕ್ಕೆ ಸಂಬಂಧಿಸಿದಂತೆ ನೀಡಿದ ಸಲಹೆಗಳನ್ನು ಒಳಗೊಂಡಂತೆ ಅವರ ಆಲೋಚನೆಗಳೆಲ್ಲವೂ ಆಕಾಶವಾಣಿಯ ಮೂಲಕ ದೇಶದ ನಾಲ್ಕೂ ಮೂಲೆಗಳನ್ನೂ ತಲುಪುವಂತಾಯಿತು.

ನಾನು ಆ ರಾತ್ರಿ ಈ ಸುದ್ದಿಯನ್ನು ಅಮೆರಿಕಾಗೆ ಪ್ರಸಾರ ಮಾಡಬೇಕಿತ್ತು. ಗಾಂಧಿಯವರ ಉಪವಾಸದ ಮಹತ್ವವನ್ನು ಅಮೆರಿಕನ್ನರಿಗೆ ತಿಳಿಸಿ ಕೊಡುವುದು ಸುಲಭಸಾಧ್ಯವಲ್ಲ. ಏಕೆಂದರೆ ಅಮೆರಿಕದಲ್ಲಿ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇಕಾದ ಸಂವಾದಿ ಸನ್ನಿವೇಶವಿಲ್ಲ. ಭಾರತದಲ್ಲಿ ಜನರು ಬೇರೆ ಬೇರೆ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಸಾಲ ಕೊಟ್ಟವನು ಸಾಲಗಾರನಾಗಿರುವವನ ಮನೆಯ ಮುಂದೆ ಉಪವಾಸ ಕುಳಿತು ಅವನ ಮನಕರಗಿ ಸಾಲ ಹಿಂದಿರುಗಿಸುವ ಹಾಗೆ ಮಾಡುತ್ತಾನೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಸಾಮೂಹಿಕ ಉಪವಾಸ ಕಾರ್ಯಕ್ರಮಗಳನ್ನು ಆಗಾಗ್ಗೆ ಏರ್ಪಡಿಸುತ್ತಿದ್ದರು. ಆದರೆ ಉಪವಾಸವನ್ನು ಗಾಂಧಿಯವರಷ್ಟು ಪರಿಣಾಮಕಾರಿಯಾಗಿ ಯಾರೂ ಬಳಸಿಕೊಂಡಿಲ್ಲ. ಗಾಂಧಿಯವರು ಜನರ ಪಾಲಿಗೆ ಒಬ್ಬ ಸೇನಾನಾಯಕನಿದ್ದಂತೆ. ಅವರ ಉಪವಾಸ ಇಡೀ ದೇಶವನ್ನೇ ಕಲಕಿಬಿಡುತ್ತಿತ್ತು. ಒಳಗೊಳಗೇ ಅಡಗಿದ್ದ ಎಲ್ಲ ವಿಚಾರಗಳನ್ನು ಅದು ಬಹು ವಿಶಿಷ್ಟ ರೀತಿಯಲ್ಲಿ ಮೇಲಕ್ಕೆ ತಂದು ಬಹಿರಂಗಗೊಳಿಸುತ್ತಿತ್ತು.

ಜವಹರಲಾಲ್ ನೆಹರೂ ಅವರೊಂದಿಗೆ ಮಾತಾಡಿದರೆ ನನ್ನ ಕೆಲಸ ಸುಲಭವಾಗಬಹುದು ಎಂದು ಅನ್ನಿಸಿತು. ನೆಹರೂ ಅವರ ಅಲೋಚನೆಯ ರೀತಿ ಪಾಶ್ಚಾತ್ಯರು ಪೌರ್ವಾತ್ಯರನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಒಂದು ಸೇತುವೆಯನ್ನು ಕಲ್ಪಿಸಬಹುದು. ನಾನು ನೆಹರೂ ಅವರನ್ನು ನೋಡಲು ಹೋದೆ. ಕೆಂಪುಕಲ್ಲಿನ ದೊಡ್ಡ ಸಚಿವಾಲಯ ಕಟ್ಟಡದ ದಕ್ಷಿಣ ಭಾಗದಲ್ಲಿರುವ ಪ್ರಧಾನಮಂತ್ರಿ ಕಛೇರಿಯಲ್ಲಿ ಅವರು ಕೂತಿದ್ದರು. ಈಗ ಎರಡು ವರ್ಷಗಳ ಮೊದಲು ನಾನು ಅವರನ್ನು ನೋಡಿದ್ದೆ. ಆಗ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಯೋಜನೆಗಳನ್ನು ರೂಪಿಸುವುದಕ್ಕಾಗಿ ಭಾರತದ ನಾಯಕರೊಂದಿಗೆ ಮಾತಾಡಲು ಮೊದಲ ಬಾರಿಗೆ ಬ್ರಿಟಿಷ್ ಕ್ಯಾಬಿನೆಟ್ ಆಯೋಗ ಬಂದಿತ್ತು. ನೆರಹರೂ ಅವರ ತಲೆಗೂದಲು ಈಗ ಮೊದಲಿಗಿಂತ ಹೆಚ್ಚು ಬೆಳ್ಳಗಾಗಿದ್ದವು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾದರು ಅದು ಅವಿಭಜಿತ ಭಾರತಕ್ಕೆ ಸಿಕ್ಕಲಿಲ್ಲ. ಬದಲು ಸ್ವಾತಂತ್ರ್ಯದೊಂದಿಗೆ ಭಾರತ ಎರಡು ಹೋಳಾಗಿತ್ತು. ಶಾಂತಿ ಮತ್ತು ಪ್ರಗತಿಗೆ ಬದಲಾಗಿ ಅಪಾರ ರಕ್ತಪಾತ ಹಾಗೂ ಪ್ರಾಣಹಾನಿಯಾಗಿತ್ತು. ಈ ನೋವಿನ ಗೆರೆಗಳು ನೆಹರೂ ಮುಖದಲ್ಲಿ ಅಚ್ಚೊತ್ತಿದ್ದವು. ಅವರ ಮುಖದಲ್ಲಿ ಯಾವಾಗಲೂ ಕಂಡು ಬರುತ್ತಿದ್ದ ಒಂದು ರೀತಿಯ ಆಧ್ಯಾತ್ಮಿಕ ಭಾವ ಈ ನೋವಿನಿಂದ ಇನ್ನೂ ಗಾಢವಾಗಿದೆ ಎಂಬುದನ್ನು ವ್ಯಕ್ತಪಡಿಸುವುದಕ್ಕೆ ನನಗೆ ಅಗತ್ಯವಾದಷ್ಟೆ ಮಾತುಗಳನ್ನು ಪಂಡಿತ್ ನೆಹರೂ ಹೇಳಿದರು.

“ತಮ್ಮನ್ನು ತಾವೇ ದಂಡಿಸಿಕೊಳ್ಳುವ ಕ್ರಿಯೆ ಭಾರತೀಯ ಮನಸ್ಸುಗಳ ಮೇಲೆ ಬಹಳ ಪ್ರಭಾವ ಬೀರುತ್ತದೆ. ‘ತಮ್ಮನ್ನು ತಾವೇ’ ಎಂಬ ಮಾತನ್ನು ನೆಹರೂ ವಿಶೇಷವಾಗಿ ಒತ್ತಿ ಹೇಳಿದರು. ಗಾಂಧಿಯವರು ಇತರ ಎಲ್ಲರಿಗಿಂತ ಭಿನ್ನವಾದ ಜನಸೇವಕ. ಭಾರತದಲ್ಲಿ ಜನರ ನಡುವೆ ಏಳುತ್ತಿರುವ ಅಡ್ಡಗೋಡೆಗಳು ಗಾಂಧಿಯವರಿಗೆ ಬಹಳ ದುಃಖ ಉಂಟು ಮಾಡಿವೆ. ಜನರ ಮನಸ್ಸನ್ನು ಪರಿವರ್ತಿಸಲು ಹಾಗೂ ಅವರನ್ನು ತಪ್ಪುದಾರಿಯಿಂದ ಸರಿದಾರಿಗೆ ತರುವುದಕ್ಕಾಗಿ ಗಾಂಧಿ ಈ ಅಂತಿಮ ಕ್ರಮ ಕೈಗೊಂಡಿದ್ದಾರೆ. ಉಪವಾಸದಿಂದ ಎರಡು ರೀತಿಯ ಕೆಲಸಗಳಾಗುತ್ತವೆ. ಸಮಸ್ಯೆಯನ್ನು ಬೇಗ ಪರಿಹರಿಸಬೇಕು ಎಂಬ ಒಂದು ತುರ್ತನ್ನು ಅದು ಉಂಟುಮಾಡುತ್ತದೆ. ಮತ್ತು ಜನರು ಹಳೆಯ ರೀತಿಯ ಆಲೋಚನೆಗಳನ್ನು ಬಿಟ್ಟು ಹೊಸ ರೀತಿ ಆಲೋಚಿಸುವಂತೆ ಮಾಡುತ್ತದೆ. ಅದು ಒಂದು ಅನುಕೂಲಕರವಾದ ಮಾನಸಿಕ ಬದಲಾವಣೆಯನ್ನು ತರುತ್ತದೆ. ಈ ಬದಲಾವಣೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಇತರರಿಗೆ ಸೇರಿದ್ದು.

“ಇದರಿಂದ ರಕ್ತಪಾತ ನಿಲ್ಲುವುದೆ? ಇಷ್ಟೆಲ್ಲ ದ್ವೇಷ ತಾಂಡವವಾಡುತ್ತಿರುವಾಗ” ಎಂದು ನಾನು ಕೇಳಿದೆ.

ನೆಹರೂ ಹೇಳಿದರು ‘ನಿಜಕ್ಕೂ ಈ ದ್ವೇಷದಲ್ಲಿ ಮುಳುಗಿ ಹೋಗಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದರೆ ಮಧ್ಯಮ ವರ್ಗದ ಮೇಲೆ ಇದು ಬಹಳ ಪ್ರಭಾವ ಬೀರುತ್ತದೆ. ಒಂದು ರೀತಿ ಚುನಾವಣಾ ಪ್ರಚಾರದಂತೆ….. ‘ಅನಂತರ, ನಾನು ಈ ಮೊದಲು ಊಹಿಸಿದ್ದನ್ನೇ ನೆಹರೂ ದೃಢಪಡಿಸಿದರು. ಅದೇನೆಂದರೆ ತಮಗೆ ಬಹಳ ಆಪ್ತರಾಗಿದ್ದಂತಹ ಸರ್ಕಾರದ ನಾಯಕರಗಳಿಗೂ ಗಾಂಧಿ ತಮ್ಮ ಉಪವಾಸದ ವಿಷಯ ತಿಳಿಸಿರಲಿಲ್ಲ. ಇದು ಸಂಪೂರ್ಣವಾಗಿ ಅವರ ಸ್ವಂತ ನಿರ್ಣಯವಾಗಿತ್ತು. ‘ನಾನು ಮಧ್ಯಾಹ್ನ ಅವರನ್ನು ಭೇಟಿಯಾಗಿದ್ದೆ. ಅವರು ಬಹಳ ಸಮಯದಿಂದ ಚಿಂತಿಸುತ್ತಿದ್ದರು. ಉಪವಾಸದ ನಿರ್ಧಾರ ತೆಗೆದುಕೊಂಡ ನಂತರ ಅವರ ಮನಸ್ಸಿನಲ್ಲಿ ನಿರಾಳಭಾವ ಮೂಡಿದೆ’ ಎಂದರು ನೆಹರೂ.

“ಈ ವಿಷಯ ನಿಮಗೆ ಮೊದಲೇ ತಿಳಿದಿದ್ದರೆ ಇದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೀರಾ?” ಎಂದು ಕೇಳಿದೆ. “ಸಾಮಾನ್ಯವಾಗಿ ಯಾರೇ ಆದರೂ ಹಾಗೆ ಪ್ರಯತ್ನಿಸುವುದು ಸಹಜ. ಆದರೆ, ಅವರ ಕೆಲಸದ ರೀತಿಯಲ್ಲಿ ಏನೋ ಒಂದು ವಿಕ್ಷಿಪ್ತತೆ ಇರುತ್ತದೆ” ಎಂದರು ನೆಹರೂ.

ನಾನು ಪ್ರಧಾನಿ ನೆಹರೂ ಅವರೊಂದಿಗೆ ಮಾತಾಡಿ ಹಿಂದಿರುಗುವಾಗ ರಾತ್ರಿ ಬಹಳ ಹೊತ್ತಾಗಿತ್ತು. ಮಧ್ಯರಾತ್ರಿಯಾಗಿದ್ದರೂ ಕೂಡ ವಿಷಯ ಪ್ರಸಾರದ ಕೆಲಸವನ್ನು ನಾನಿನ್ನೂ ಆರಂಭಿಸಿರಲಿಲ್ಲ. ನಾನು ನೋಡಬೇಕಾದ ಇನ್ನೂ ಒಬ್ಬ ವ್ಯಕ್ತಿಯಿದ್ದರು. ಆ ವ್ಯಕ್ತಿ ಒಬ್ಬ ಮಹಿಳೆ. ಆಕೆ ಗಾಂಧಿಯವರಿಗೆ ತೀರ ನಿಕಟವಾಗಿದ್ದ ಕೆಲವೇ ಕೆಲವರ ಪೈಕಿ ಒಬ್ಬಳು.

ಗಾಂಧೀಜಿಯವರು ಪಾಶ್ಚಾತ್ಯರಿಗೆ ಕಾಣಿಸುವಂತೆ ಒಬ್ಬ ಅಲೌಕಿಕ ವ್ಯಕ್ತಿಯಲ್ಲ. ಅವರೂ ಕೂಡ ಎಲ್ಲರಂತೆಯೇ ಒಬ್ಬ ಮಾನವಜೀವಿ ಎಂಬುದನ್ನು ಪಾಶ್ಚಾತ್ಯರಿಗೆ ಮನವರಿಕೆ ಮಾಡಿಕೊಡಬೇಕಾದರೆ ಗಾಂಧೀಜಿಯವರ ದಿನನಿತ್ಯದ ಜೀವನಕ್ರಮದ ಬಗ್ಗೆ ಅವರಿಗೆ ಅತ್ಯಂತ ನಿಕಟವಾಗಿದ್ದ ವ್ಯಕ್ತಿಗಳು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿತ್ತು. ಆದ್ದರಿಂದ ನಾನು ಆರೋಗ್ಯ ಸಚಿವೆ ರಾಜಕುಮಾರಿ ಅಮೃತ್‌ಕೌರ್ ಅವರ ಮನೆಗೆ ಹೋದೆ.

ಕ್ರಿಶ್ಚಿಯನ್ ಆಗಿದ್ದ ರಾಜಕುಮಾರಿ, ಕಪುರ್ತಲದ ದಿವಂಗತ ಮಹಾರಾಜರ ಮರಿ ಮೊಮ್ಮಗಳು. ಆಕೆಯ ವಿಧಿ ಬೇರೆಯೇ ತಿರುವು ಪಡೆಯದಿದ್ದರೆ ಆಕೆ ರಾಜಕುಮಾರಿಯಾಗೇ ಬದುಕಬಹುದಿತ್ತು. ಆದರೆ ಆಕೆ ಇನ್ನೂ ತುಂಬ ಚಿಕ್ಕವಳಿದ್ದಾಗ ಆಕೆಯ ತಂದೆ ಕಪುರ್ತಲವನ್ನು ಬಿಟ್ಟು ಲಾಹೋರ್‌ಗೆ ಹೋದರು. ಲಾಹೋರಿನ ಅವರ ಮನೆ ಬಂಡಾಯಗಾರರು ಸೇರುವ ಸ್ಥಳವಾಯಿತು. ಈ ಬಂಡಾಯಗಾರರಲ್ಲಿ ಒಂದು ಸಂದರ್ಭದಲ್ಲಿ ರಾಜಕುಮಾರಿ ಬಾಗಿಲಿನಿಂದ ಹೊರಗೆ ಇಣುಕಿ ನೋಡಿದರು. ಅದು ಆಕೆಗೆ ಗಾಂಧಿಯ ಮೊದಲ ದರ್ಶನ. ಗಾಂಧಿಯನ್ನು ನೋಡಿದ ಮೊದಲ ನೋಟದಲ್ಲೇ ನಾನು ಅವರಿಗೆ ಶರಣಾಗಿಬಿಟ್ಟೆ ಎಂದು ಆಕೆ ತನ್ನ ಗೆಳತಿಯೊಡನೆ ಹೇಳಿದಳಂತೆ. ಸತ್ಯ ಎಂಬ ಒಂದೇ ಒಂದು ಧರ್ಮವನ್ನು ಬೋಧಿಸುವ ಈ ಹಿಂದೂ ನಾಯಕನ ಬಗ್ಗೆ ಕ್ರಿಶ್ಚಿಯನ್ ಬಾಲೆಗೆ ಸಂಪೂರ್ಣ ನಂಬಿಕೆ, ವಿಶ್ವಾಸ ಮೂಡಿತು. ಗಾಂಧಿ ಆಶ್ರಮದಲ್ಲಿರುವುದಕ್ಕಾಗಿ ಮತ್ತು ದೇಶದಾದ್ಯಂತ ಓಡಾಡಿಕೊಂಡು ಕೆಲಸ ಮಾಡುತ್ತಿದ್ದ ಅಲೆಮಾರಿಗಳಂತಹ ಗಾಂಧೀ ಅನುಯಾಯಿಗಳೊಂದಿಗೆ ಸೇರಿಕೊಳ್ಳುವುದಕ್ಕಾಗಿ ತನ್ನನ್ನು ಕಳಿಸಬೇಕೆಂದು ಆಕೆ ತಂದೆತಾಯಿಗಳಿಗೆ ದುಂಬಾಲು ಬಿದ್ದಳು. ಸುಮಾರು ೩೦ ವರ್ಷಗಳ ಬಹುತೇಕ ಕಾಲವನ್ನು ಆಕೆ ಗಾಂಧಿಯವರಿಗಾಗಿ ಮೀಸಲಿಟ್ಟಳು. ಭಾರತದ ಸ್ವಾತಂತ್ರ್ಯ ದಿನದಂದು ಆಕೆಗೆ ಭಾರತದ ಹೊಸ ಸರ್ಕಾರದಲ್ಲಿ ಆರೋಗ್ಯ ಸಚಿವೆಯ ಖಾತೆಯನ್ನು ಕೊಡಲಾಯಿತು.

ನಾನು ರಾಜಕುಮಾರಿಯವರ ಮನೆಗೆ ಹೋದಾಗ ದೀಪಗಳು ಇನ್ನೂ ಉರಿಯುತ್ತಿದ್ದವು. ಸಚಿವೆ ನೆಲದ ಮೇಲೆ ಕುಳಿತು ಕಾಗದಪತ್ರಗಳನ್ನು ನೋಡುತ್ತಿದ್ದರು. ರಾಶಿರಾಶಿ ಕಾಗದ ಪತ್ರಗಳನಡುವೆ ನಸುಗಪ್ಪು ಬಣ್ಣದ ಸೀರೆಯಲ್ಲಿ ಕುಳಿತಿದ್ದ ಆಎಯ ಮುಖದ ಮೇಲೆ ತಲೆಗೂದಲಿನ ಸುರುಳಿಗಳು ಜೋತಾಡುತ್ತಿದ್ದವು. ಗಾಂಧಿಯವರ ಉಪವಾಸ ನಿರ್ಧಾರದ ಬಗ್ಗೆ ನಾನು ಸಂಕ್ಷಿಪ್ತವಾಗಿ ಕೇಳಿದಾಗ ಆಕೆ ವ್ಯಥೆ ತುಂಬಿದ ಮುಖವನ್ನು ಮೇಲೆತ್ತಿ ನನ್ನನ್ನೇ ದಿಟ್ಟಿಸಿದರು. ಈ ಉಪವಾಸದಿಂದ ಅವರಿಗೆ ಸಮಾಧಾನ ಶಾಂತಿ ಸಿಗುವುದಾದರೆ ನಾವೇಕೆ ಬೇಡೆವೆನ್ನೋಣ ಎನ್ನುವಾಗಲೂ ಆಕೆಯ ಮುಖದಲ್ಲಿ ಅಪಾರ ವೇದನೆಯಿತ್ತು. ದೇಶದಲ್ಲಿ ನಡೆದಿರುವ ರಕ್ತಪಾತ, ಹಿಂಸಾಚಾರಗಳಿಂದ ಗಾಂಧಿ ಎಷ್ಟು ಕಂಗಾಲಾಗಿದ್ದಾರೆ ಎಂಬುದು ಆಕೆಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಗಾಂಧೀಜಿ ಉಪವಾಸದ ನಿರ್ಧಾರದಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಆಕೆ ಒತ್ತಿ ಹೇಳಿದರು. ಕೊನೆಯಲ್ಲಿ ಆಕೆ ಹೇಳಿದರು ‘ಭಾರತ ಇಬ್ಭಾಗವಾಗಿದ್ದು ತೀರ ಅಸಹಜ. It was such an unnatural division of India…

ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯವರ ಉಪವಾಸದ ನಿರ್ಧಾರ ಪ್ರಕಟವಾದ ಕೂಡಲೇ ಆಕೆ ಗಾಂಧೀಜಿ ಬಳಿ ಹೋದಾಗ ಅವರ ಮುಖದ ಮೇಲೆ ಅಸೀಮ ಶಾಂತ ಭಾವ ಮೂಡಿದ್ದನ್ನು ಆಕೆ ಕಂಡರಂತೆ. ಈ ಮಾತನ್ನು ಹೇಳಿದರೂ ಕೂಡ ಗಾಂಧಿಯವರ ಉಪವಾಸದಿಂದ ಆಕೆಗಾಗಿದ್ದ ನೋವು, ವ್ಯಥೆ ಮತ್ತೆ ಮುಖದಲ್ಲಿ ವ್ಯಕ್ತವಾಗಿತ್ತು.

“ಈ ಉಪವಾಸವನ್ನು ಅವರು ತಡೆದುಕೊಳ್ಳಬಲ್ಲರೆ” ಎಂದು ನಾನು ಕೇಳೀದೆ. ರಾಜಕುಮಾರಿ ಮೆಲ್ಲಗಿನ ದನಿಯಲ್ಲಿ ಹೇಳಿದರು – “ಅವರು ಒಂದು ವೇಳೆ ಸತ್ತರೂ ಏನೂ ಮಾಡುವಂತಿಲ್ಲ. ನಾವು ಅವರ ಮನಸ್ಸನ್ನು ತಿರುಗಿಸುವ ಪ್ರಯತ್ನಕ್ಕೂ ಹೋಗಬಾರದು. ತಮ್ಮ ನಿರ್ಧಾರವನ್ನು ಅವರೇ ಮಾಡಬೇಕು. ಆತ ದೇವರಿಗೆ ಸೇರಿದವರು.”

* * *