ಮಾರನೇ ಬೆಳಿಗ್ಗೆ ನಾನು ನವದೆಹಲಿಯ ಅಲ್ಬುಕರ್ಕ್ ರಸ್ತೆಯಲ್ಲಿರುವ ಬಿರ್ಲಾ ಭವನಕ್ಕೆ ಹೋದೆ. ಗಾಂಧಿ ಅಲ್ಲೇ ಇರುತ್ತಿದ್ದರು. ನಾನು ಹೋದಾಗ ಅವರ ತಮ್ಮ ಉಪವಾಸಕ್ಕೆ ಮೊದಲಿನ ಕೊನೆಯ ಆಹಾರವನ್ನು ಸೇವಿಸುತ್ತಿದ್ದರು. ಉಪಹಾರ ಮುಗಿಸಲು ಅವರಿಗೆ ಅರ್ಧಗಂಟೆ ಬೇಕಾಯಿತು. ಹಾಗೆಂದರೆ ಅವರು ಎಂದಿಗಿಂತ ಹೆಚ್ಚು ತಿಂದರು ಎಂದರ್ಥವಲ್ಲ. ಆ ಸಸ್ಯಾಹಾರದ ಪ್ರತಿಯೊಂದು ತುತ್ತನ್ನೂ ಅವರು ನಿಧಾನವಾಗಿ ಎಚ್ಚರಿಕೆಯಿಂದ ಅಗಿದು ತಿನ್ನುತ್ತಿದ್ದರು. ನಾನು ಬಿರ್ಲಾ ಭವನದ ಹುಲ್ಲುಹಾಸಿನ ಅಂಚಿನಲ್ಲಿ ನಿಂತು ನೋಡುತ್ತಿದ್ದೆ. ಉದ್ಯಾನವನದ ಮಧ್ಯೆ ಒಂದು ಮಂಚದ ಮೇಲೆ ಗಾಂಧಿ ಕಾಲುಮಡಚಿ ಕೂತಿದ್ದರು. ಅವರ ಪಕ್ಕ ಕೂತಿದ್ದ ಪ್ರಮುಖ ವ್ಯಕ್ತಿ, ಈ ದೇವಮಾನವನಿಗೆ ತಮ್ಮ ನಿರ್ಧಾರವನ್ನು ಬದಲಿಸುವಂತೆ ಹೇಳುತ್ತಿರಬಹುದೇನೋ ಎಂದು ನಾನು ಯೋಚಿಸಿದ್ದೆ.

ನಾನು ನಿಂತಿದ್ದ ಸ್ಥಳಕ್ಕೆ ಆ ಪ್ರಮುಖ ವ್ಯಕ್ತಿಯ ಬೆನ್ನು ಮಾತ್ರ ಕಾಣುತ್ತಿತ್ತು. ಆದರೂ ಬೆನ್ನುಭಾಗದಿಂದಲೇ ಅವರನ್ನು ಸರ್ದಾರ್ ವಲ್ಲಭಬಾಯ್ ಪಟೇಲ್ ಎಂದು ಸ್ಪಷ್ಟವಾಗಿ ಗುರುತಿಸಬಹುದಿತ್ತು. ಉದ್ದಕ್ಕೆ ಇಳಿಬಿದ್ದ ಅವರ ಉಡುಪು ಮತ್ತು ಬಿಸಿಲಿಗೆ ಹೊಳೆಯುತ್ತಿದ್ದ ದೊಡ್ಡ ತಲೆಯನ್ನು ನೋಡಿದಾಗ ರೋಮನ್ ಸೆನೆಟರ್ ವಿಗ್ರಹಗಳ ನೆನಪಾಗುತ್ತಿತ್ತು. ವಲ್ಲಭಬಾಯ್ ಪಟೇಲರು ಪ್ರಧಾನಮಂತ್ರಿ ನೆಹರೂ ಅವರ ಡೆಪ್ಯೂಟಿ ಆಗಿದ್ದರೂ ಕೂಡ ಅನೇಕ ಮಂದಿಯ ದೃಷ್ಟಿಯಲ್ಲಿ ಅವರು ನೆಹರೂಗಿಂತ ಹೆಚ್ಚು ಪ್ರಭಾವಶಾಲಿಯಾದ ವ್ಯಕ್ತಿಯಾಗಿದ್ದರು. ಇನ್ನೂ ಕೆಲವರು ಭಾರತದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಕ್ತಿಯೆಂದರೆ ಸರ್ದಾರ್ ಪಟೇಲ್ ಎನ್ನುತ್ತಿದ್ದರು. ಗಾಂಧಿಯವರು ಹಿಂದಿನ ಸಂಜೆ ಮಾಡಿದ ಅತ್ಯಂತ ಕೌತುಕದ ಘೋಷಣೆಯ ನಂತರ ಈ ನಿರ್ಧಾರದಿಂದ ಅತ್ಯಂತ ಮುಜುಗರಕ್ಕೊಳಗಾದ ವ್ಯಕ್ತಿ ಪಟೇಲರು ಎಂದು ಜನ ಹೇಳತೊಡಗಿದ್ದರು.

ಗಾಂಧಿಯವರ ಮಂಚದ ಬಳಿ, ಪಟೇಲರು ಹಸಿರು ಬಣ್ಣದ ಬೆತ್ತದ ಕುರ್ಚಿಯಿಂದ ಮುಂದಕ್ಕೆ ಬಾಗಿಕೊಂಡು ಕುಳಿತಿದ್ದರು. ಮಾತಾಡುವಾಗ ಅವರ ಕೈ ಅತ್ತಿತ್ತ ಆಡುತ್ತಿತ್ತು ಅವರಿಬ್ಬರ ವಯಸ್ಸಿನಲ್ಲಿ ಕೆಲವೇ ವರ್ಷಗಳ ಅಂತರವಿತ್ತು. ಸ್ವಾತಂತ್ರ್ಯಕ್ಕಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಪಟೇಲರು ಗಾಂಧಿಜಿಯವರ ಬಲಗೈ ಬಂಟನಂತಿದ್ದರು. ಅನೇಕ ಸಲ ಅವರು ಗಾಂಧಿಯವರೊಂದಿಗೆ ಜೈಲುವಾಸ ಅನುಭವಿಸಿದ್ದರು. ಇಪ್ಪತ್ತರ ದಶಕದ ಮಧ್ಯದಲ್ಲಿ ಅವರು ತೆರಿಗೆ ಸಂದಾಯದ ವಿರುದ್ಧ ಬಾರ್ಡೋಲಿಯಲ್ಲಿ ಸತ್ಯಾಗ್ರಹ ನಡೆಸಿದಾಗ ಅವರಿಗೆ ‘ಸರ್ದಾರ್’ ಎಂಬ ಬಿರುದು ಸಿಕ್ಕಿತ್ತು. ಗಾಂಧಿ ಪಟೇಲರು ಮಾತಾಡುವಾಗ ಅಡುಗೆ ಮನೆಯಿಂದ ಹೊರಬಂದ ಉಪಹಾರದ ತಟ್ಟೆಗಳು ನನ್ನ ಮುಂದೆಯೇ ಹಾದುಹೋದವು. ಹೀಗಾಗಿ ಗಾಂಧಿಯವರ ಕೊನೆಯ ಉಪಹಾರದಲ್ಲಿದ್ದ ಪದಾರ್ಥಗಳು ಯಾವುವು ಎಂಬುದನ್ನು ತಿಳಿದಂತಾಯಿತು. ಮಡಿವಂತ ಹಿಂದೂಗಳ ಆಹಾರ ಪಥ್ಯಕ್ರಮವನ್ನೇ ಗಾಂಧಿ ಅನುಸರಿಸುತ್ತಿದ್ದರು. ಅವರು ಮಾಂಸ ತಿನ್ನುತ್ತಿರಲಿಲ್ಲ. ಹಿಂದೂಗಳು ಗೋವನ್ನು ಪೂಜ್ಯಭಾವನೆಯಿಂದ ಕಾಣುತ್ತಾರೆ. ಗಾಂಧೀಜಿಯೂ ಇದನ್ನು ಪಾಲಿಸುತ್ತಿದ್ದರು. ಹೀಗಾಗಿ ಅವರು ಹಸುವಿನ ಹಾಲಿಗೆ ಬದಲಾಗಿ ಮೇಕೆಯ ಹಾಲನ್ನು ಕುಡಿಯುತ್ತಿದ್ದರು. ಬೆಳಗಿನ ಉಪಹಾರದಲ್ಲಿದ್ದ ಪದಾರ್ಥಗಳೆಂದರೆ ಮೇಕೆಯ ಹಾಲಿನ ಮೊಸರಿನಲ್ಲಿ ಬೆರೆಸಿದ ಬೇಯಿಸಿದ ಸೊಪ್ಪು ಮತ್ತು ಕತ್ತರಿಸಿದ ಸೇಬು ಹಾಗೂ ಕಿತ್ತಳೆ ಚೂರುಗಳು.

ಬಿರ್ಲಾ ಅವರ ತೋಟದಲ್ಲಿ ಗಾಂಧಿಯವರಿಗಾಗಿ ವ್ಯವಸ್ಥೆ ಮಾಡಿದ್ದ ಮೇಜಿನ ಮೇಲಿದ್ದ ಬಿಳಿಯ ಹಾಸು ಹಾಗೂ ಬೆಳ್ಳಿಯ ಪಾತ್ರೆಗಳು ಎದ್ದು ಕಾಣುತ್ತಿದ್ದವು. ಜನವರಿಯ ಮುಂಜಾವಿನಲ್ಲಿ ಆ ದೃಶ್ಯ ಇನ್ನಷ್ಟು ಸುಂದರವಾಗಿತ್ತು. ಹೂವಿನ ಪಾತಿಗಳಿಗೆ ಕೆಂಪು ಇಟ್ಟಿಗೆಗಳ ಅಂಚು ಆ ಬಣ್ಣದ ಹಿನ್ನೆಲೆಯಲ್ಲಿ ಅರಳಿದ ಚೆಂಡು ಹೂ ಮತ್ತು ನಾಸ್ಟೂರಿಯಂಗಳು ಮನೋಹರವಾಗಿದ್ದವು. ಗಾಂಧೀಜಿಯವರ ಉಪಾಹಾರದ ಮೇಜಿನ ಹಿಂದೆ ಗಂಟೆಯಾಕಾರದ ಹೂಗಳ ಬಳ್ಳಿ ಕಮಾನಿಗೆ ಹಬ್ಬಿತ್ತು. ಅವರ ಮಂಚಕ್ಕೆ ಸ್ವಲ್ಪ ದೂರದಲ್ಲಿ ಅಲಂಕಾರಿಕ ಇಟ್ಟಿಗೆಗಳಿಂದ ರಚಿಸಲಾಗಿದ್ದ ಕೊಳದಿಂದ ಹರಿಯುತ್ತಿದ್ದರ ತೊರೆಯೊಂದಿಗೆ ನೇರಳೆ ಬಣ್ಣದ ಹೂ ಬಳ್ಳಿಗಳು ಚಾಚಿಕೊಂಡಿದ್ದವು. ನಾನು ಭಾರತದಲ್ಲಿದ್ದಷ್ಟು ಕಾಲವೂ ನನ್ನನ್ನು ಅಚ್ಚರಿಗೊಳಿಸಿದ ಒಂದು ಸಂಗತಿಯೆಂದರೆ ಸಹಸ್ರಾರು ಜನರ ದೃಷ್ಟಿಯಲ್ಲಿ ಸರಳತೆಯ ಪ್ರತೀಕವಾಗಿದ್ದ ಗಾಂಧೀಜಿ. ಭಾರತದ ಅತ್ಯಂತ ಶ್ರೀಮಂತ ಜವಳಿ ಉದ್ಯಮಿಯ ಮನೆಯಲ್ಲಿರಲು ಒಪ್ಪಿಕೊಂಡಿದ್ದೇಕೆ? ನನಗೆ ಎಂದಾದರೂ ಅವಕಾಶ ಸಿಕ್ಕಿದ್ದರೆ ಈ ಬಗ್ಗೆ ಗಾಂಧಿ ಏನು ಹೇಳುತ್ತಾರೆ ಎಂದು ಕೇಳಿಬಿಡುತ್ತಿದ್ದೆ.

ಸಾಮಾನ್ಯ ಮನುಷ್ಯರ ದೃಷ್ಟಿಯಲ್ಲಿ ಬಿರ್ಲಾ ಎಂದರೆ ಭಾರೀ ಕೈಗಾರಿಕೋದ್ಯಮದ ಪ್ರತೀಕ ಮತ್ತು ಪಟೇಲರು ಇದಕ್ಕೆ ವಕ್ತಾರ. ಜನಸಾಮಾನ್ಯರು ಪಟೇಲರನ್ನು ಶ್ರೀಮಂತರೊಂದಿಗೆ, ನೆಹರೂ ಅವರನ್ನು ಎಡಪಂಥೀಯ ಮನೋಭಾವದೊಂದಿಗೆ ಸಮೀಕರಿಸುತ್ತಿದ್ದರು. ಪಟೇಲರು ಕೈಗಾರಿಕೋದ್ಯಮಿಗಳ ಹಾಗೂ ಮಹಾರಾಜರುಗಳ ಪರವಾಗಿ ಮಾತಾಡಿದರೆ ನೆಹರೂ ಸಾಮಾನ್ಯ ಮನುಷ್ಯನ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪಟೇಲ್ ಮತ್ತು ನೆಹರೂ ಅವರ ಧೋರಣೆಗಳಲ್ಲಿನ ಈ ಘರ್ಷಣೆ ಯಾವಾಗಲೂ ಕುದಿಯುತ್ತಿದ್ದ ಸ್ಫೋಟಕ ಸ್ಥಿತಿಯಲ್ಲಿ ಇರುತ್ತಿತ್ತು. ಆದರೂ ಅದು ಎಂದೂ ಸ್ಫೋಟಗೊಳ್ಳಲಿಲ್ಲ.

ಪಟೇಲರು ಒಳಾಡಳಿತ ವ್ಯವಹಾರಗಳ, ಸಂಸ್ಥಾನಗಳ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಹೊಣೆ ವಹಿಸಿಕೊಂಡಿದ್ದರು. ಸಂಪುಟವು ಪಟೇಲರ ಗುಂಪು ನೆಹರೂ ಗುಂಪು ಎಂದು ಸಮಾನವಾಗಿ ಇಬ್ಬಾಗಗೊಂಡಿತ್ತು. ಯಾರು ಇದರಲ್ಲಿ ನಿಜವಾಗಿಯೂ ಬಲಶಾಲಿಗಳು ಎಂಬುದನ್ನೇನಾದರೂ ಬಹಿರಂಗವಾಗಿ ಪರೀಕ್ಷೆಗೊಡ್ಡಿ ವ್ಯವಸ್ಥೆಯನ್ನು ಅನೇಕ ವರ್ಷಗಳಿಂದಲೇ ರೂಪಿಸಿಕೊಂಡು ಬಂದಿದ್ದರು ಎಂಬ ಅಂಶ ಗೋಚರಿಸುತ್ತಿತ್ತು. ನೆಹರೂಗೆ ಪಟೇಲರಿಗಿಂತ ಹೆಚ್ಚಿನ ದೂರದೃಷ್ಟಿಯಿದ್ದರೂ ಮತ್ತು ಎಷ್ಟೇ ಜನಪ್ರಿಯರಾಗಿದ್ದರೂ, ಅಪಾರ ಸಂಖ್ಯೆಯ ನಿಷ್ಠಾವಂತ ಅನುಯಾಯಿಗಳನ್ನು ಪಡೆದಿದ್ದರೂ ಪಟೇಲರು ಸಾಧಿಸಿದ್ದನ್ನು ಅವರು ಸಾಧಿಸಿರಲಿಲ್ಲ.

ಹಿಂದಿನ ರಾತ್ರಿ ಗಾಂಧಿಯವರ ಬಹುಮಹತ್ವದ ಉಪವಾಸ ನಿರ್ಣಯ ಪ್ರಕಟವಾದ ಮೇಲಂತೂ ಪ್ರಧಾನಮಂತ್ರಿ ಮತ್ತು ಉಪಪ್ರಧಾನ ಮಂತ್ರಿಯ ನಡುವಿನ ಭಿನ್ನಾಭಿಪ್ರಾಯಗಳಿಂದ ಸರ್ಕಾರವೇ ಇಬ್ಭಾಗವಾಗಿ ಬಿಡುತ್ತದೆ ಎಂಬ ಗುಸುಗುಸು ಸುದ್ದಿಗೆ ಮತ್ತೆ ಜೀವ ಬಂದಂತಿತ್ತು. ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಯ ಜೊತೆಗೆ ಈಗ, ಅದು ಪರಿಹಾರವಾಗುವ ತನಕ ಗಾಂಧಿಯವರು ಉಪವಾಸ ನಿಲ್ಲಿಸುವುದಿಲ್ಲ ಎಂಬ ಷರತ್ತು ಸೇರಿಕೊಂಡಿತ್ತು. ಇದರಿಂದ ಏನೇನಾಗಲಿದೆಯೋ ಎಂಬ ಸ್ಫೋಟಕ ಸ್ಥಿತಿ ನಿರ್ಮಾಣವಾಗಿತ್ತು.

ಗಾಂಧಿಯವರು ಅತ್ಯಂತ ನಿಧಾನವಾಗಿ ತಮ್ಮ ಕೊನೆಯ ಉಪಾಹಾರ ಮಾಡುತ್ತಿದ್ದಾಗ, ಅವರೊಂದಿಗೆ ಮಾತಾಡುತ್ತಿದ್ದ ಪಟೇಲರ ಹಸ್ತವಿನ್ಯಾಸಗಳ ತೀವ್ರತೆ ಹೆಚ್ಚುತ್ತಾ ಹೋಯಿತು. ಗಾಂಧಿಯವರ ಉಪವಾಸದ ನಿರ್ಧಾರ ಸರ್ಕಾರವನ್ನು ಎಂತಹ ಬಿಕ್ಕಟ್ಟಿಗೆ ಸಿಕ್ಕಿಸಿದೆ ಎಂಬ ಅಂಶವನ್ನು ಪಟೇಲರು ಗಾಂಧಿಯವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಊಹಿಸಬಹುದಿತ್ತು. ಅನೇಕ ಮುಸ್ಲಿಮರನ್ನು ನಂಬುವುದಕ್ಕಾಗುವುದಿಲ್ಲ ಎಂದು ಕೇವಲ ಒಂದು ವಾರದ ಹಿಂದೆ ಪಟೇಲರು ಹೇಳಿಕೆ ನೀಡಿದ್ದರು. ಲಕ್ನೋದಲ್ಲಿ ಭಾಷಣ ಮಾಡುತ್ತಾ ಅವರು ಆರ್.ಎಸ್.ಎಸ್. ಎಂಬ ಮೊದಲ ಅಕ್ಷರಗಳಿಂದ ಗುರುತಿಸಲಾಗುವ ಕಟ್ಟಾ ಹಿಂದೂ ಯುವಕರ ಚಳುವಳಿಗೆ ಸಾರ್ವಜನಿಕವಾಗಿಯೇ ಉತ್ತೇಜನ ವ್ಯಕ್ತಪಡಿಸಿದ್ದರು.

ಈ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹೊಸದಾಗಿ ಸೇರಿಕೊಂಡಿದ್ದವರೆಲ್ಲ ಮುಖ್ಯವಾಗಿ ಆಫೀಸುಗಳ ಗುಮಾಸ್ತರು ಅಥವಾ ವ್ಯಾಪಾರಿ ಕುಟುಂಬಗಳಿಂದ ಬಂದ ಹುಡುಗರು, ದೈಹಿಕ ಬಲ, ಶಿಸ್ತನ್ನು ಬೆಳೆಸುವುದು ಈ ಸಂಘಟನೆಯ ಉದ್ದೇಶ ಎಂದು ಅವರು ಮೇಲೆ ಹೇಳಿಕೊಳ್ಳುತ್ತಿದ್ದರು. ಯಾವುದೇ ಖಾಲಿ ಜಾಗವಿರಲಿ ಅಲ್ಲಿ ಬೆಳಗಿನ ಹೊತ್ತು ಈ ಯುವಕರು ಗುಂಪು ಸೇರುತ್ತಿದ್ದರು. ಕವಾಯತು ಮಾಡುತ್ತಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಒಂದು ಲೋಟ ಹಾಲು ಸಿಗುತ್ತಿತ್ತು. ಇದು ಕಡಿಮೆ ಆದಾಯದ ಗುಂಪುಗಳಿಗೆ ಬಲವಾದ ಆಕರ್ಷಣೆಯಾಗಿತ್ತು. ಈ ಹಾಲಿನ ಖರ್ಚನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಎಂದಿಗೂ ಬಹಿರಂಗವಾಗುತ್ತಿರಲಿಲ್ಲ. ಆದರೂ ಕೆಲವು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಹಾಗೂ ಕೆಲವು ಮಹಾರಾಜರುಗಳು ಇದಕ್ಕೆ ಅನುಕೂಲ ಒದಗಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ತಮ್ಮದು ರಾಜಕೀಯ ಸಂಘಟನೆಯಲ್ಲ ಎಂದು ಆರ್.ಎಸ್.ಎಸ್. ಹೇಳುತ್ತಿತ್ತು. ಆದರೂ ಈ ತರುಣರು ಕುಡಿಯುತ್ತಿದ್ದ ಹಾಲಿನೊಂದಿಗೆ ಜನಾಂಗೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ತಿಳುವಳಿಕೆಯೂ ಸಾಕಷ್ಟು ಒಳಸೇರುತ್ತಿತ್ತು. ಅವರ ರಹಸ್ಯ ಸಾಹಿತ್ಯದ ಕೆಲವು ಭಾಗಗಳನ್ನು ಓದುವ ಆವಕಾಶ ನನಗೆ ಸಿಕ್ಕಿತ್ತು. ಹಿಂದೂ ಪಾರಮ್ಯದ ಬಗ್ಗೆ ಅದರಲ್ಲಿದ್ದ ಪ್ರತಿಯೊಂದು ಸಾಲೂ ಸಹ, ಜರ್ಮನಿಯಲ್ಲಿ ೩೦ರ ದಶಕದಲ್ಲಿ ತಲೆ ಎತ್ತಿದ ಜನಾಂಗೀಯವಾದವು ತಮ್ಮದೇ ಶ್ರೇಷ್ಠ ಜನಾಂಗ, ಎಂದು ಹೇಗೆ ಅಲ್ಲಿನ ಜನರಿಗೆ ಬೋಧಿಸುತ್ತಿತ್ತೋ ಅದನ್ನೇ ನೆನಪಿಸುವಂತಿತ್ತು.

ಪ್ರಜಾಪ್ರಭುತ್ವದ ಧೋರಣೆಗಳು ಸರಿಯಾಗಿಲ್ಲ. ಮುಸ್ಲಿಮರನ್ನು ಹಿಂದೂ ರಾಷ್ಟ್ರದ ಸಂಪೂರ್ಣ ಅಧೀನದಲ್ಲಿರುವ ವಿದೇಶೀಯರು ಎಂದು ಪರಿಗಣಿಸಬೇಕು ಎಂಬ ಆರ್.ಎಸ್.ಎಸ್. ನಿಲುವು ನಂಬಿಕೆಗಳನ್ನು ನೋಡಿದಾಗ ಈ ಯುವ ಚಳುವಳಿಯು ಪಶ್ಚಿಮದ ಫ್ಯಾಸಿಸ್ಟ್ ಹಾಗೂ ಸರ್ವಾಧಿಕಾರಿ ಧೋರಣೆಯಂತೆಯೇ ಬೆಳೆಯುವ ಹಾಗೂ ಜ್ಯೂಗಳ ವಿರುದ್ಧ ನಾಜಿಗಳು ವರ್ತಿಸಿದಂತೆ ಇವರೂ ಕೂಡ ಅಲ್ಪಸಂಖ್ಯಾತರ ವಿರುದ್ಧ ವರ್ತಿಸುವ ಅಪಾಯ ಎದ್ದು ಕಾಣುತ್ತಿತ್ತು.

ಈ ಸಂಘಟನೆಯು, ಹಿಂದೂ ಮಹಾಸಭೆ ಎಂಬ ದೊಡ್ಡ ಸಂಘಟನೆಯೊಂದರ ಕವಲಾಗಿದ್ದು ಧಾರ್ಮಿಕ ಸಂಪ್ರದಾಯಗಳು ಹಾಗೂ ಜಾತೀಯ ಆಚಾರ ವಿಚಾರಗಳನ್ನು ಸಂರಕ್ಷಿಸಿಕೊಳ್ಳುವುದು ಮಹಾಸಭಾದ ಉದ್ದೇಶವಾಗಿತ್ತು ಮತ್ತು ೨೦೦೦ ವರ್ಷಗಳ ಹಿಂದಿನ ಪರಿಶುದ್ಧ ಹಿಂದೂ ಧರ್ಮವನ್ನು ಪುನರ್ ಸ್ಥಾಪಿಸಬೇಕು ಎಂದು ಅದು ಪ್ರತಿಪಾದಿಸುತ್ತಿತ್ತು. ಧಾರ್ಮಿಕ ದೊಂಬಿ ಗಲಭೆಗಳು ನಡೆದಾಗ ಇದರದು ಮುಖ್ಯಪಾತ್ರ. ರಾಷ್ಟ್ರೀಯ ಜೀವನದಲ್ಲಿ ಮುಸ್ಲಿಮರಿಗೆ ಯಾವುದೇ ಸ್ಥಾನ ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಈ ಉಗ್ರ ಸಂಘಟನೆಗೆ ಕಾಂಗ್ರೆಸ್ಸಿನಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಪಟೇಲರು ಲಕ್ನೊದಲ್ಲಿ ಭಾಷಣ ಮಾಡುವಾಗ ಸೂಚಿಸಿದ್ದರಿಂದ ಎಲ್ಲೆಡೆಯೂ ಕೋಲಾಹಲ ಮೂಡಿತ್ತು. ಇದಕ್ಕೆ ಪ್ರತಿಯಾಗಿ ನೆಹರೂ ಅವರು ಪ್ರಜೆಗಳು ಯಾವ ಧರ್ಮಕ್ಕೇ ಸೇರಿದವರಾಗಿರಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಉಗ್ರವಾಗಿ ಪ್ರತಿಪಾದಿಸುತ್ತಿದ್ದರು. ಸ್ವತಃ ಉಚ್ಛವರ್ಗಕ್ಕೆ ಸೇರಿದ್ದ ನೆಹರೂ ಅಪ್ರತಿಮ ಧೈರ್ಯ ತೋರಿಸಿದ್ದರಿಂದ ಎಲ್ಲ ಧರ್ಮಗಳ ಜನರ ಗೌರವವನ್ನೂ ಸಂಪಾದಿಸಿದ್ದರು. ಅವರ ಧೈರ್ಯ ಯಾವ ರೀತಿಯದೆಂದರೆ ಒಂದು ಸಲ ಮುಸ್ಲಿಂ ಅಂಗಡಿಗಳನ್ನು ಲೂಟಿ ಮಾಡುತ್ತಿದ್ದ ಹಾಗೂ ಮುಸ್ಲಿಂ ವ್ಯಾಪಾರಿಗಳನ್ನು ಕೊಲೆ ಮಾಡುತ್ತಿದ್ದ ಹಿಂದೂಗಳನ್ನು ನೋಡಿದ ಅವರು ಕೂಡಲೇ ಕಾರಿನಿಂದಿಳಿದು ಹಿಂದೂಗಳನ್ನು ಬರಿಗೈನಿಂದಲೇ ಹೊಡೆದಿದ್ದರು.

ಪಟೇಲ್ ಮತ್ತು ಗಾಂಧೀಜಿಯ ನಡುವೆ ಈ ಅಲ್ಪಸಂಖ್ಯಾತ ಸಮಸ್ಯೆಯ ಬಗ್ಗೆ ಅದೇನು ವಾದವಿವಾದ ನಡೆದಿತ್ತೋ ಏನೋ ಆದರೆ ಬಣ್ಣಬಣ್ಣದ ಉಡುಪುಗಳಲ್ಲಿದ್ದ ಹೆಂಗಸರು ಗುಂಪುಗುಂಪಾಗಿ ಬಂದು ಪೋರ್ಟಿಕೋದಲ್ಲಿ ಸದ್ದಿಲ್ಲದೆ ಕುಳಿತಾಗ ಇದುವರೆಗಿನ ನಾಟಕೀಯ ಸನ್ನಿವೇಶಕ್ಕೆ ಮತ್ತಷ್ಟು ರಂಗು ಬಂದಂತಾಯಿತು. ಹೀಗೆ ಬಂದವರಲ್ಲಿ ಮುಸ್ಲಿಂ ಹೆಂಗಸರೇ ಹೆಚ್ಚಾಗಿದ್ದರು. ಕೊನೆಗೊಮ್ಮೆ ಸರ್ದಾರರು ತಾವು ಹೇಳಲಿದ್ದ ಮುಖ್ಯ ವಿಷಯಕ್ಕೆ ಬಂದಂತಿತ್ತು. ಅವರು ಆಕಾಶದತ್ತ ಬೆರಳು ಮಾಡಿ ಆಕಾಶವೇ ಕಳಚಿ ಬೀಳುವುದೇನೋ ಎಂದು ಸೂಚಿಸುತ್ತಿದ್ದಂತೆ ಕಂಡಿತು. ಅನಂತರ ಅವರು ಕುರ್ಚಿಯಿಂದೆದ್ದು ಥಟ್ಟನೆ ಹೊರಟು ಹೋದರು.

ಉಪವಾಸವನ್ನು ಔಪಚಾರಿಕವಾಗಿ ಆರಂಭಿಸುವ ಗಳಿಗೆ ಹತ್ತಿರವಾಯಿತು. ಈ ಗಳಿಗೆಗೆ ಸಾಕ್ಷಿಯಾಗಿ ಬಂದಿದ್ದ ಗಂಡಸರ ಹಾಗೂ ಹೆಂಗಸರ ಗುಂಪು ಗಾಂಧಿಯವರ ಮಂಚಕ್ಕೆ ಸಮೀಪ ಸರಿಯಿತು. ಈ ಗುಂಪಿನಲ್ಲಿ ನೆಹರೂ ಸೋದರಳಿಯನ ಹೆಂಡತಿ ಮತ್ತು ಪಟೇಲರ ಮಗಳೂ ಕೂಡ ಇದ್ದರು. ನಾನು ಗಾಂಧಿಯವರಿಂದ ಕೇವಲ ಒಂದು ಮಾರು ದೂರದಲ್ಲಿದ್ದೆ. ಅವರು ಬೇಯಿಸಿದ ಸೊಪ್ಪಿನ ಕೊನೆಯ ತುತ್ತನ್ನು ಬಾಯಿಗಿಟ್ಟುಕೊಂಡರು ಹಾಗೂ ಮೇಕೆ ಹಾಲಿನ ಕೊನೆಯ ಗುಟುಕನ್ನು ಕುಡಿದರು. ತಮ್ಮ ಪ್ರಸಿದ್ಧವಾದ ಐದು ಶಿಲಿಂಗ್ ಬೆಲೆಯ ಗಡಿಯಾರವನ್ನು ಎದುರಿಗಿಟ್ಟುಕೊಂಡರು. ಗಾಂಧಿಯವರ ಹಳೆಯ ಗಡಿಯಾರವನ್ನು ಯಾರೋ ಒಬ್ಬ ಕದ್ದಿದ್ದ. ಅನಂತರ ಗಡಿಯಾರದ ತಯಾರಕರು ಈಗಿನ ಹೊಸ ಗಡಿಯಾರವನ್ನು ಕೊಟ್ಟಿದ್ದರು. ಈಗ ಗಾಂಧಿಯವರ ದೇಹದ ಮೇಲೆ ಉಪವಾಸದ ಪರಿಣಾಮವೇನಾಗಬಹುದು ಎಂದು ಅವರಿಗೆ ತಿಳಿದಿತ್ತು. ಗಾಂಧಿ ಆ ಹೆಂಗಸರ ಕಡೆ ತಿರುಗಿ, ತೀರ ಸಮೀಪದಲ್ಲಿರುವವರಿಗೆ ಮಾತ್ರವೇ ಕೇಳಿಸುವಷ್ಟು ಮೆಲ್ಲಗಿನ ದನಿಯಲ್ಲಿ ‘ನಾನೇನು ಮಾಡಬೇಕೆನ್ನುತ್ತೀರಿ? ಇಡೀ ಜಗತ್ತೇ ಹುಚ್ಚುಹುಚ್ಚಾಗಿ ವರ್ತಿಸುತ್ತಿದೆ. ನಾನೂ ಹಾಗೆ ಮಾಡಲಿ? ಇಲ್ಲ ನಾನು ಹುಚ್ಚನಾಗುವುದು ದೇವರಿಗಾಗಿ ಮಾತ್ರ’ ಅಂದರು. ಗಡಿಯಾರದ ಮುಳ್ಳು ಹನ್ನೊಂದು ತೋರಿಸಿತು. ಉಪವಾಸ ಆರಂಭವಾಗಿತ್ತು.

ಗಾಂಧೀಜಿ ಯಾವ ಧಾರ್ಮಿಕ ಐಕ್ಯತೆಗಾಗಿ ಉಪವಾಸವನ್ನು ಆರಂಭಿಸಿದ್ರೋ ಅಂತಹ ಉಪವಾಸವನ್ನು ಪ್ರಾರ್ಥನೆಯಿಂದಲೇ ಆರಂಭಿಸುವುದು ಸಾಂಕೇತಿವಾಗಿತ್ತು. ಈ ಪ್ರಾರ್ಥನೆ ಜಗತ್ತಿನ ಮೂರು ಬಹುದೊಡ್ಡ ಧರ್ಮಗಳ ಪ್ರಾರ್ಥನೆಗಳನ್ನು ಒಳಗೊಂಡಿತ್ತು. ಮೊದಲು ಕುರಾನಿನ ಕೆಲವು ಭಾಗಗಳ ಪಠಣವಾಯಿತು. ನಂತರ ಮಹಿಳೆಯರು ಕ್ರಿಶ್ಚಿಯನ್ ಸ್ತೋತ್ರಗಳನ್ನು ಆಯ್ಕೆ ಮಾಡಿದ್ದರು. ಅವು ಭವಿಷ್ಯದ ಸೂಚನೆಯಂತಿದ್ದವು. When I survey the wondorous cross on which the price of glory died. . . ‘ ನಂತರ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಾಯಿತು. ಭಗವದ್ಗೀತೆಯ ಈ ಸಾಲುಗಳು ದೇವರ ಹಾಗೂ ಮಾನವ ಜೀವಿಗಳ ವಿಷಯದಲ್ಲಿ ತಮ್ಮ ಕರ್ತವ್ಯಗಳೇನು ಎಂಬುದನ್ನು ಹೇಳುತ್ತಿದ್ದನು. ಕೊನೆಯದು ರಾಮಧುನ್. ಆದರೆ ಇದಕ್ಕೆ ಗಾಂಧಿಯವರ ಸ್ವಂತದ ರಚನೆಯನ್ನೂ ಸೇರಿಸಲಾಗಿತ್ತು. ಹಿಂದೂ ಮುಸ್ಲಿಮರ ಸೋದರತ್ವವನ್ನು ಸಾರುವ ಹಾಗೂ ಎಲ್ಲ ದೇವರೂ ಒಬ್ಬನೇ. ಎಲ್ಲರಿಗೂ ದೇವರೊಬ್ಬನೇ ಎಂಬುದನ್ನು ಹೇಳುವ ರಚನೆ ಪ್ರಸ್ತುತ ಸಂದರ್ಭಕ್ಕೆ ಬಹಳ ಸೂಕ್ತವಾಗಿತ್ತು. ಈ ರಚನೆಯ ಕೊನೆಯ ಸಾಲುಗಳು –

ಈಶ್ವರ ಅಲ್ಲಾ ತೇರೋನಾಮ್
ಸಬ್ಕೋ ಸನ್ಮತಿ ದೇ ಭಗವಾನ್. . .

ಸಾಯಂಕಾಲ ನಾವು ಪುನಃ ಪ್ರಾರ್ಥನಾ ಸಮಯಕ್ಕೆ ಬಂದೆವು. ಗಾಂಧೀಜಿಯವರ ಸಂಜೆಯ ಪ್ರಾರ್ಥನಾ ಸಭೆಗಳಲ್ಲಿ ಯಾವುದೋ ಒಂದು ರೀತಿಯ ಆತ್ಮೀಯ ವಾತಾವರಣ ತುಂಬಿರುತ್ತಿತ್ತು. ಬಿರ್ಲಾ ಭವನದ ಭವ್ಯ ಉದ್ಯಾನವನದ ಔಪಚಾರಿಕ ವ್ಯವಸ್ಥೆಯೂ ಅದನ್ನು ಅಳಿಸುವುದು ಸಾಧ್ಯವಿರಲಿಲ್ಲ. ಸುತ್ತಮುತ್ತಲಿನ ಜನ ಗುಂಪುಗುಂಪಾಗಿ ಬರುತ್ತಿದ್ದರು. ಸದ್ದು ಮಾಡದೆ ನೆಲದ ಮೇಲೆ ಕುಳಿತ ಅವರ ಮನಸ್ಸುಗಳು ಕುಂದಿದ್ದವು. ಅವರೆಲ್ಲ ಕೆಳದನಿಯಲ್ಲಿ ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. ಯಾವುದೋ ಮಗು ಅತ್ತಾಗ ಕೂಡಲೇ ಅದನ್ನು ಸಮಾಧಾನ ಪಡಿಸಿದರು. ಗಾಂಧಿ ಬರುತ್ತಾರೋ ಇಲ್ಲವೋ ಎಂದು ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ್ದರು.

ಜನವರಿ ತಿಂಗಳ ನಿರ್ಮಲ ಆಕಾಶದಿಂದಿಳಿದ ಸಂಜೆಯ ಸೂರ್ಯನ ಕಿರಣಗಳಲ್ಲಿ ಮನೋಹರವಾದ ಹುಲ್ಲಿನ ಹಾಸು ಹೊಳೆಯುತ್ತಿತ್ತು. ನೀಳ ಕಂದು ಬಣ್ಣದ ಕಾಲುಗಳನ್ನು ಉದ್ಯಾನದ ಕಾಲುಹಾದಿಯಲ್ಲಿ ದೃಢವಾಗಿ ಊರುತ್ತ ಗಾಂಧಿ ಬಂದರು. ಅವರ ದುರ್ಬಲ ತೋಳುಗಳು ಎರಡು ಚಿಕ್ಕಮಕ್ಕಳ ಹೆಗಲುಗಳ ಮೇಲಿದ್ದವು. ಉದ್ಯಾನದ ಆವರಣದ ಕಮಾನಿನ ಕೆಳಗೆ ಹಾಕಿದ್ದ ಚೌಕಾಕಾರದ ಹಾಸಿನ ಮೇಲೆ ಅವರು ಕುಳಿತರು. ಗಾಂಧಿಯವರ ಮುಂದಿದ ಎಲ್ಲ ಮೈಕ್ರೋಫೋನುಗಳ ಮೇಲೂ ‘ಚಕಾಗೊ’ ಎಂಬ ದೊಡ್ಡ ಅಕ್ಷರಗಳ ಲೇಬಲ್ ಇತ್ತು.

ಮಹಾತ್ಮರ ಸುತ್ತ ಹಾಡುತ್ತಿರುವವರ ದನಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಚಾರಿ ನನ್ನ ಕಿವಿಯಲ್ಲಿ ಹೇಳಿದ. ಆತ ಪೀಪಲ್ಸ್ ಏಜ್‌ನ ಕರೆಸ್ಪಾಂಡೆಂಟ್. ಅವರು ಅತ್ಯುತ್ತಮ ಹಾಡುಗಾರ.

ಪ್ರಾರ್ಥನೆ ಮುಗಿಯುತ್ತ ಬಂದಂತೆ ಎಲ್ಲ ಕಡೆ ಒಂದು ರೀತಿಯ ಸ್ತಬ್ಧತೆ ಕವಿಯಿತು. ಮುಕ್ತಾಯ ಹಂತದಲ್ಲಿ ಗಾಂಧಿಯೂ ದನಿ ಸೇರಿಸಿದರು. ಹೆಂಗಸರು ಗೀತೆಯ ಕೊನೆಯ ಸಾಲುಗಲಿಗೆ ಲಯಬದ್ಧವಾಗಿ ಕೈತಟ್ಟುತ್ತಿದ್ದರು. ಗಾಂಧಿಯವರು ಮಾತಾಡುವುದನ್ನೇ ನಿರೀಕ್ಷಿಸುತ್ತ ಜನ ಮೌನವಾಗಿದ್ದರು.

ಗಾಂಧಿಯವರು ತಮ್ಮ ಮಾತಿನ ಮೊದಲಿನಲ್ಲಿಯೇ ತಾವು ಈ ದಿನ ಎಂದಿಗಿಂತ ಸ್ವಲ್ಪ ದೀರ್ಘವಾಗಿ ಮಾತಾಡುವುದಾಗಿ ವಿನಂತಿಸಿಕೊಂಡರು. ಸುಮಾರು ಆರು ಅಥವಾ ಎಂಟು ನಿಮಿಷಗಳ ಕಾಲ ಮಾತಾಡಿದರೆ ಸಾಕು ಎಂಬುದು ಅವರ ಪದ್ಧತಿ. ನಾಳೆಯಿಂದ ನಿಮ್ಮ ಬಳಿ ಬಂದು ಮಾತಾಡುತ್ತೇನೋ ಇಲ್ಲವೋ ಹೇಳಲಾರೆ. ಆದರೆ ಒಬ್ಬ ಹುಡುಗಿಯಂತೂ ಬರುತ್ತಾಳೆ. ಪ್ರಾರ್ಥನೆ ಎಂದಿನಂತೆ ಪಡೆದುಕೊಂಡು ಹೋಗುತ್ತದೆ ಎಂದರು. ಅನಂತರ ಅವರು ತಾವು ಉಪವಾಸ ಆರಂಭಿಸಲು ಕಾರಣವೇನು ಎಂಬುದನ್ನು ಸರಳವಾಗಿ ತಿಳಿಸಿದರು. ಅವರು ಹಿಂದೂಸ್ತಾನಿಯಲ್ಲಿ ಅತ್ಯಂತ ನಿಧಾನವಾಗಿ ಮಾತಾಡುತ್ತಿದ್ದಾಗ ನನ್ನ ಭಾರತೀಯ ಸ್ನೇಹಿತರು ಅದರ ಭಾಷಾಂತರವನ್ನು ಆಗಿಂದಾಗಲೇ ನನ್ನ ಕಿವಿಯಲ್ಲಿ ಹೇಳುತ್ತಿದ್ದರು. ಇಲ್ಲಿ ಹಿಂದೂಗಳೂ ಮುಸ್ಲಿಮರೂ ಸಿಖ್ಖರೂ ಸೋದರರಂತೆ ಬದುಕಬೇಕು. ಈಗ ನಡೆಯುತ್ತಿರುವುದನ್ನು ನಿಲ್ಲಿಸದಿದ್ದರೆ ನಮಗೆ ಭವಿಷ್ಯವೇ ಇಲ್ಲ. ಬೇರೆ ಎಲ್ಲೋ ಇರುವ ಮುಸ್ಲಿಮರು ಏನೇ ಮಾಡಿದರೂ ಸಹ ಹಿಂದೂಗಳಾಗಲೀ, ಸಿಖ್ಖರಾಗಲೀ ಪ್ರತೀಕಾರ ಕ್ರಮ ಕೈಗೊಳ್ಳಬಾರದು. ನಾನು ಮುಸ್ಲಿಮರ ಪರವಾಗಿ ಉಪವಾಸ ಮಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸ್ವಲ್ಪ ಮಾತ್ರ ನಿಜ. ನಾನು ಉಪವಾಸ ಮಾಡುತ್ತಿರುವುದು ನನ್ನ ಶುದ್ಧೀಕರಣಕ್ಕಾಗಿ’.

ಇದೇ ಅದರ ಉಪವಾಸದ ನಿಜವಾದ ಕಾರಣ ಎಂದು ನನಗನ್ನಿಸಿತು. ಅವರು ಸ್ವತಃ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಂಡಿದ್ದರು. ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅವರಿಗೆ ತಮ್ಮದೇ ಆದ ಧಾರ್ಮಿಕ ನಿಲುವು ಇತ್ತು. ಇದು ಮಾನವನ ಸೋದರತ್ವದಲ್ಲಿ ಅವರು ಹೊಂದಿದ್ದ ನಂಬಿಕೆ. ಇಂತಹ ನಂಬಿಕೆ ಕ್ರಿಶ್ಚಿಯನ್ ಧರ್ಮಕ್ಕೆ ಎಷ್ಟು ಅಗತ್ಯವೋ ಹಿಂದೂ ಧರ್ಮಕ್ಕೂ ಅಷ್ಟೇ ಅಗತ್ಯ. ಈಗ ಅವರ ಅಹಿಂಸಾತತ್ವಕ್ಕೆ ದೊಡ್ಡದೊಂದು ಸವಾಲು ಎದುರಾಗಿತ್ತು. ಭಾರತದಾದ್ಯಂತ ವ್ಯಾಪಿಸಿದ ಈ ಹಿಂಸಾತ್ಮಕ ಅವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಕ್ಕೆ ಅವರು ಸಿದ್ಧವಿರಲಿಲ್ಲ. ರಕ್ತಪಾತದ ಇನ್ನೊಂದು ಕಲ್ಕತ್ತ, ಇನ್ನೊಂದು ಪಂಜಾಬನ್ನು ಸಹಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿತ್ತು. ಗಾಂಧಿಯವರು ತಮ್ಮ ಬದುಕಿನ ಅತ್ಯಂತ ಕಠಿಣವಾದ ಸವಾಲನ್ನು ಈಗ ಎದುರಿಸುತ್ತಿರುವುದು ಸ್ಪಷ್ಟವಾಗಿತ್ತು. ಇದು ಅಂತರಂಗದ ದ್ವೇಷವನ್ನು ಜಯಿಸಬೇಕಾದ ಸಮರವಾಗಿತ್ತು. ಮೂವತ್ತು ಮೂರು ವರ್ಷಗಳ ಕಾಲ ಅವರು ಹೊರಗಿನ ಶಕ್ತಿಯೊಂದರ ವಿರುದ್ಧ ಹೋರಾಡಿದ್ದರು. ಅಹಿಂಸೆ ಎಂಬ ಶಸ್ತ್ರ ಹಿಡಿದು ಜನರನ್ನು ಸ್ವಾತಂತ್ರ್ಯ ಸಮರದಲ್ಲಿ ತೊಡಗಿಸಿದ್ದರು. ಈಗ ಅವರಿಗೆ ಇದಕ್ಕಿಂತ ಕಠಿಣ ಕೆಲಸ ಎದುರಾಗಿತ್ತು. ಇದು ಮಾನವರ ಹೃದಯಗಳಲ್ಲಿರುವ ತಾಳ್ಮೆ ಮತ್ತು ಏಕತಾಭಾವನೆಯನ್ನು ಗೆದ್ದುಕೊಳ್ಳುವ ಕೆಲಸ. ಗಾಂಧಿಯವರು ಅತ್ಯಂತ ಶಾಂತವಾದ ದನಿಯಲ್ಲಿ ಮಾತಾಡುತ್ತಿರುವಾಗ ಜನರ ಅಂತರಂಗದ ಬಲವನ್ನು ಸಾಕಾರಗೊಳಿಸುವಂಥ ನಿಜವಾದ ಸಾಮರ್ಥ್ಯ ಅವರಿಗೆ ಮಾತ್ರ ಇದೆ ಅನ್ನಿಸಿತು. ಯಾಕೆಂದರೆ ಅವರು ಬೇರೆ ಇನ್ಯಾರಿಗಿಂತಲೂ ಜನರ ಹೃದಯಗಳಿಗೆ ಆಪ್ತವಾಗಿದ್ದರು.

ಸುಮಾರು ಆರುನೂರಕ್ಕೂ ಹೆಚ್ಚು ಜನರಿದ್ದ ಆ ಸಭೆ ಗಾಂಧಿಯವರ ಪ್ರತಿಯೊಂದು ಮಾತನ್ನೂ ನೆಟ್ಟಕಿವಿಯಿಂದ ಆಲಿಸುತ್ತಿತ್ತು. ‘ಭಾರತದ ಈ ಒಕ್ಕೂಟದಲ್ಲಿರುವ ಹಿಂದೂಗಳು ಮತ್ತು ಸಿಖ್ಖರು ಅತ್ಯಂತ ಪರಾಕ್ರಮಶಾಲಿಗಳಾಗಿರಬೇಕು. ಅವರು ಈ ಧೈರ್ಯದ ಎಂತಹ ಪರಾಕಾಷ್ಟ ಸ್ಥಿತಿ ತಲುಪಬೇಕೆಂದರೆ ಒಂದು ವೇಳೆ ಪಾಕಿಸ್ತಾನದಲ್ಲಿ ಪ್ರತಿಯೊಬ್ಬ ಹಿಂದೂ, ಪ್ರತಿಯೊಬ್ಬ ಸಿಖ್ಖನ ಕೊಲೆಯಾದರೂ ಕೂಡ ಒಬ್ಬನೇ ಒಬ್ಬ ಮುಸ್ಲಿಮನಿಗೂ ತೊಂದರೆಯಾಗದಂತೆ ಅವರು ನೋಡಿಕೊಳ್ಳಬೇಕು. ಇಲ್ಲಿ ಒಬ್ಬ ಮುಸ್ಲಿಮನ ಕೊಲೆಯಾಯಿತೆಂದರೆ ಅದು ಹೇಡಿತನವೇ ಹೊರತು ಧೈರ್ಯವಲ್ಲ. ನನ್ನ ಉಪವಾಸದಿಂದ ಮುಸ್ಲಿಮರ ಮೇಲೆ ಭಾರೀ ಜವಾಬ್ದಾರಿ ಹೊರಿಸಿದಂತಾಗುತ್ತದೆ. ಅವರೂ ಕೂಡ ಭಾರತದ ಒಕ್ಕೂಟದಲ್ಲಿ ಸೋದರರಂತೆ ಬದುಕಬೇಕು ಮತ್ತು ಅವರ ಸರ್ಕಾರಕ್ಕೆ ವಿಧೇಯರಾಗಿರಬೇಕು. ಇದು ಅವರ ಕೃತ್ಯಗಳಲ್ಲಿ ವ್ಯಕ್ತವಾಗಬೇಕು’. ಈ ಮಾತುಗಳ ನಂತರ ಗಾಂಧೀ ಇದ್ದಕ್ಕಿದ್ದಂತೆ ಇನ್ನೊಂದು ವಿಷಯಕ್ಕೆ ಧುಮುಕಿದರು. ಇದುವರೆಗೆ ಈ ವಿಷಯ ಗುಸುಗುಸು ಸುದ್ದಿಯಾಗಿತ್ತು ಅಷ್ಟೇ. ಸರ್ಕಾರದಲ್ಲಿ ಒಡಕು ಮೂಡಲಿದೆ ಎಂಬ ಈ ಗುಸುಗುಸು ಸುದ್ದಿಯ ಬಗ್ಗೆ ತನಿಖೆ ನಡೆಸಿದ್ದ ನಾವು ಗಾಂಧಿಯವರು ಆ ವಿಷಯವನ್ನೇ ನೇರವಾಗಿ ಕೈಗೆತ್ತಿಕೊಂಡಾಗ ಚಕಿತರಾದೆವು.

“ನೆಹರೂ ಗಾಂಧಿ ಸರಿಯಾಗಿದ್ದಾರೆ, ಪಟೇಲರು ಮಾತ್ರ ಕೆಟ್ಟವರು ಎಂದು ಕೆಲವರು ಹೇಳುತ್ತಾರೆ. ಆದರೆ, ಈ ರೀತಿಯ ಅಭಿಪ್ರಾಯ ಸರಿಯಲ್ಲ. ಸರ್ದಾರರು ಏನಾದರೂ ತಪ್ಪು ಮಾಡಿದರೆ ತಪ್ಪು ಎಲ್ಲಿದೆ ಎಂದು ಅವರಿಗೆ ತೋರಿಸುವುದನ್ನು ಬಿಟ್ಟು ಅವರು ಕೆಟ್ಟವರು ಎಂದು ದೂರುವುದು ಸರಿಯಲ್ಲ. ಎಲ್ಲ ಮುಸ್ಲಿಮರನ್ನೂ ನಾನು ನಂಬಲಾರೆ. ನೆನ್ನೆಯವರೆಗೂ ನಮ್ಮ ಶತ್ರುಗಳಾಗಿದ್ದು ಈಗ ನಾವು ನಿಮ್ಮ ಸ್ನೇಹಿತರು ಎಂದು ಹೇಳುವ ಮುಸ್ಲಿಂ ಲೀಗ್‌ನ ಜನರನ್ನು ನಾನು ನಂಬಲಾರೆ’ ಎಂದು ಸರ್ದಾರ್ ಹೇಳಿದ್ದಾರೆ.

ಕುಟುಂಬದಲ್ಲಿರುವ ಸೋದರನಿಗೆ ತನ್ನ ಅನುಮಾನಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ನಿಮ್ಮ ನಾಲಗೆ ಬಹಳ ಹರಿತ ಎಂದು ಸರ್ದಾರ್ ಅವರಿಗೆ ನಾನು ಯಾವಾಗಲೂ ಹೇಳುವುದುಂಟು. ಸರ್ದಾರ್ ಮತ್ತು ನೆಹರೂ ಸರ್ಕಾರವನ್ನು ಜೊತೆಯಾಗಿ ನಡೆಸುತ್ತಿದ್ದಾರೆ. ಸರ್ದಾರರು ಜನರ ಪ್ರತಿನಿಧಿ. ಈ ಜನರಲ್ಲಿ ಮುಸ್ಲಿಮರೂ ಸೇರಿದ್ದಾರೆ. ಈ ಮಾತಿನ ಮೂಲಕ ಗಾಂಧಿಯವರು ಸರ್ದಾರರಿಗೆ ಅವರ ಕರ್ತವ್ಯಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಗಮನವನ್ನು ನೀಡಬೇಕಾದ ಅಗತ್ಯವನ್ನು ತಿಳಿಸುತ್ತಿದ್ದಾರೆ ಎಂದು ನನಗನ್ನಿಸಿತು. ಇದು ನೆಹರೂ ಮತ್ತು ಪಟೇಲರನ್ನು ಒಟ್ಟಿಗೆ ತರುವ ಪ್ರಯತ್ನ ಮಾತ್ರವೇ ಆಗಿರಲಿಲ್ಲ. ಇದರಲ್ಲಿ ಗಾಂಧಿಯವರೂ ಸೇರಿದ್ದರು. ಈ ಮೂರೂ ಜನ ತ್ರಿಮೂರ್ತಿಗಳಿದ್ದಂತೆ. ಮೂವತ್ತು ವರ್ಷಗಳ ಕಾಲ ಅವರು ಜೊತೆಯಾಗಿ ಸ್ವಾತಂತ್ರ್ಯ ಗಳಿಸುವ ದಾರಿಯನ್ನು ತೋರಿಸಿದ್ದರು. ಆದರ್ಶವಾದಿಯಾಗಿದ್ದ ನೆಹರೂ ಅವರನ್ನು ಗಾಂಧಿಯವರು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ನಾಮಕರಣ ಮಾಡಿದ್ದರು. ಪಟೇಲರದು ಒಬ್ಬ ರಾಜಕೀಯ ತಜ್ಞನ ನುರಿತ ಕೈ ಮತ್ತು ಹರಿತ ನಾಲಗೆಯಾಗಿತ್ತು.

“ನಾನು ಎಷ್ಟು ಕಾಲ ಉಪವಾಸ ಮಾಡಬಹುದು? ಭಾರತದಲ್ಲಿರುವ ಎಲ್ಲ ಧರ್ಮಗಳ ಜನರೂ ಸೋದರರಂತೆ ಬೆರೆತು ನಿರ್ಭೀತಿಯಿಂದ ಓಡಾಡುವವರೆಗೆ. ಹೀಗಾಗದಿದ್ದಲ್ಲಿ ನನ್ನ ಉಪವಾಸಕ್ಕೆ ಮುಕ್ತಾಯವೇ ಇಲ್ಲ.”

ಆ ಮುಸ್ಸಂಜೆಯಲ್ಲಿ ಅಷ್ಟೊಂದು ಕಾಳಜಿಯಿಂದ ಮಾತಾಡುತ್ತಿದ್ದ ಪುಟ್ಟ ಆಕಾರದ ಗಾಂಧಿಯವರು ಒಂದು ಮಹಾನ್ ಚೇತನ ಎಂಬ ಭಾವನೆ ಪ್ರಾರ್ಥನಾ ಸಭೆಯಲ್ಲಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಿದೆ ಎಂದು ನನಗನ್ನಿಸಿತು. ಈ ದೇಶವನ್ನು ಕಬಳಿಸುತ್ತಿದ್ದ ದ್ವೇಷಾಗ್ನಿಯ ವಿರುದ್ಧ ಹೋರಾಡಲು ಅವರು ತಮ್ಮ ಬಡಕಲು ದೇಹದಲ್ಲಿ ಉಳಿದಿದ್ದ ಎಲ್ಲ ಶಕ್ತಿಯನ್ನೂ ಒಟ್ಟುಗೂಡಿಸುವಂತಿತ್ತು. ‘ನಾನು ಒಂಟಿಯಲ್ಲ. ದಾರಿಯಲ್ಲಿ ಕತ್ತಲು ಕವಿದಿದ್ದರೂ ದೇವರು ನನ್ನ ಜೊತೆಗಿದ್ದಾನೆ’ ಎಂದು ತಮ್ಮ ಮಾತನ್ನು ಮುಕ್ತಾಯಗೊಳಿಸುತ್ತ ಹೇಳಿದರು.

ಗಾಂಧಿಯವರು ಎದ್ದು ಹೊರಡುವುದಕ್ಕೆ ಸುಶೀಲಾ ಮತ್ತು ಅಭಾ ನೆರವಾದರು. ಗುಂಪು ಮೌನವಾಗಿ ಅವರಿಗೆ ದಾರಿಬಿಟ್ಟುಕೊಟ್ಟಿತು. ಸೊಂಟು ಮುಚ್ಚುವಷ್ಟು ಅರಿವೆಯನ್ನು ಸುತ್ತಿಕೊಂಡಿದ್ದ ಆ ತೆಳುಕಂದು ಬಣ್ಣದ ದೇಹ ಮನೆಯ ಕಡೆ ಮರೆಯಾಯಿತು. ನಾವು ಗಾಂಧೀಜಿಯನ್ನು ಮತ್ತೆ ನೋಡುತ್ತೇವೆಯೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ತಲೆ ಎತ್ತಿತು.

ಆತನಲ್ಲಿ ನಿಜವಾಗಿ ದೈವಿಕಶಕ್ತಿ ಇದೆ ಎಂದು ಹೇಳಿದ ದನಿಯನ್ನು ನಾನು ಗುರುತಿಸಿದೆ. ಅಂಚೆ ಕಛೇರಿಯ ಗುಮಾಸ್ತನಾಗಿದ್ದ ಆತ ಈ ಮಾತನ್ನು ನನ್ನ ಕಿವಿಯಲ್ಲಿ ಮೆಲ್ಲಗೆ ಉಸುರಿದ. ‘ಅವರು ದೇವರೇ, ದೇವರಂತೆಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಆದರೆ ಈಗಿನ ಪವಾಡದಲ್ಲಿ ಅವರು ಯಶಸ್ವಿಯಾದರೆ ಅದು ಅವರ ಬದುಕಿನ ದೊಡ್ಡ ಪವಾಡ’ ಎಂದನಾತ.

* * *