ಮಾರನೇ ದಿನ ಬೆಳಿಗ್ಗೆ ನಾನು ಒಂದು ಟ್ಯಾಕ್ಸಿ ಹಿಡಿದಾಗ ಆದ ಅನುಭವದಿಂದ ಗಾಂಧಿಯವರು ಮುಂದೆ ಸಾಧಿಸಿದ ಪವಾಡದ  ಸ್ವರೂಪ ನನಗೆ ಸರಿಯಾಗಿ ಅರ್ಥವಾಯಿತು. ಟ್ಯಾಕ್ಸಿಕ್ಯಾಬ್‌ನ ಡ್ರೈವರ್‌ ಒಬ್ಬ ಸಿಖ್. ಪುಟ್ಟಪುಟ್ಟ ನೀಲಿ ಗುಲಾಬಿ ಮೊಗ್ಗುಗಳ ವಿನ್ಯಾಸವಿದ್ದ ಅತ್ಯಂತ ಕಲಾತ್ಮಕವಾಗಿ ಸುರುಳಿಸುರುಳಿಯಾಗಿ ಸುತ್ತಿದ ಪೇಟ ಧರಿಸಿದ್ದ ಅವನು. ಅಸಮಾಧಾನದಿಂದ ಕುದಿಯುತ್ತಿದ್ದ ಅವನ ಕಣ್ಣುಗಳಿಗೂ ಅಂದವಾದ ಅವನ ತಲೆ ಉಡುಪಿಗೂ ಸಾಮರಸ್ಯವಿದ್ದಂತೆ ಕಾಣಲಿಲ್ಲ. ಅವನು ಅಲ್ಪಸ್ವಲ್ಪ ಇಂಗ್ಲಿಷ್ ಕೂಡ ಮಾತಾಡಬಲ್ಲ ಎಂದು ಗೊತ್ತಾದ ಮೇಲೆ ನಾನು ಎಲ್ಲರನ್ನೂ ಕೇಳುತ್ತಿದ್ದಂತೆ ಗಾಂಧಿ ಉಪವಾಸದ ಬಗ್ಗೆ ಅವನ ಅಭಿಪ್ರಾಯವನ್ನೂ ಕೇಳಿದೆ. ಹಾಗೆ ಕೇಳಿದ ಕೂಡಲೇ’ ಆ ಮುದುಕ ಉಪವಾಸ ಮಾಡಲಿ, ಸಾಯಲಿ’ ಎಂಬ ಅತ್ಯಂತ ಕಹಿಯಾದ ಮಾತು ಅವನಿಂದ ಹೊರಟಿತು. ‘ಗಾಂಧಿ ಜಿನ್ನಾ ಇಬ್ಬರೂ ಸಾಯಲಿ. ಈ ಒಡಕು ಹುಟ್ಟಿದ್ದೆ ಜಿನ್ನಾನಿಂದ. ಅದರಿಂದ ಸಿಖ್ಖರಿಗೆ ಎಷ್ಟೆಷ್ಟು ಕಷ್ಟನಷ್ಟಗಳಾಗಿವೆ. ಹೀಗಿದ್ದೂ ಗಾಂಧಿ ನಮ್ಮ ವಿರುದ್ಧ ಉಪವಾಸ ಮಾಡುತ್ತಿದ್ದಾನೆ. ಈ ಇಬ್ಬರು ಮುದುಕರೂ ಸತ್ತರೆ ಸಾಯಲಿ, ಇವರೇ ನಮ್ಮ ಎಲ್ಲ ತೊಂದರೆಗಳಿಗೆ ಕಾರಣ’ ಎಂದ.

ಸಿಖ್ ಮತ್ತು ಹಿಂದೂ ನಿರಾಶ್ರಿತರು ಮುಸ್ಲಿಮರ ಮಸೀದಿ ಗೋರಿಗಳನ್ನು ಬಳಸಬಾರದು ಎಂದು ಗಾಂಧಿ ನಿಷೇಧಿಸಿದ್ದು ಈ ಸಿಖ್ಖನಿಗೆ ಎಲ್ಲಿಲ್ಲದ ಕೋಪ ಬರಿಸಿತ್ತು. ಅವನ ಮನೆಗೆ ತಂಗುವುದಕ್ಕೆ ಬರತೊಡಗಿದ್ದ ನೆಂಟರಿಷ್ಟರ ಪ್ರವಾಹ ಎಷ್ಟು ಹೆಚ್ಚಾಗಿತ್ತೆಂದರೆ ಎಂಥ ಸಾಧು ಸ್ವಭಾವದವನಿಗೂ ಅದರಿಂದ ತಲೆ ಕೆಟ್ಟು ಹೋಗುವಂತಿತ್ತು. ಅವನ ಹೆಂಡತಿಯ ಸಕಲ ಬಂಧು ಬಳಗವೂ ಪಾಕಿಸ್ತಾನವನ್ನು ತೊರೆದು ದೆಹಲಿಗೆ ಬಂದಿತ್ತು. ಅವರ ವಸತಿಗಾಗಿ ಆಗಷ್ಟೆ ಮುಸ್ಲಿಂ ಗೋರಿಯೊಂದರ ಬಳಿ ತಕ್ಕ ವ್ಯವಸ್ಥೆ ಮಾಡಿ ಬಂದಿದ್ದ. ಅಷ್ಟರಲ್ಲಿ ಗಾಂಧಿಯವರು ಎಲ್ಲ ನಿರಾಶ್ರಿತರೂ ಮುಸ್ಲಿಮರ ಪವಿತ್ರ ಸ್ಥಳಗಳನ್ನು ಬಿಟ್ಟು ಈಚೆ ಬರಬೇಕು. ಅಲ್ಪ ಸಂಖ್ಯಾತರು ತಮ್ಮ ಆರಾಧನಾ ಸ್ಥಳಗಳಿಗೆ ಮುಕ್ತವಾಗಿ ಹೋಗಿ ಬರುವಂತಾಗಬೇಕು ಎಂದು ಒತ್ತಡ ತಂದಿದ್ದರು. ಹೀಗಾಗಿ ಈ ಡ್ರೈವರನ ಪುಟ್ಟಮನೆ ಚಿಕ್ಕಪ್ಪಗಳು, ಚಿಕ್ಕಮಗಳು, ಅತ್ತೆಯರು, ದಾಯಾದಿಗಳು ಹಾಗೂ ಅವರ ಸಂಬಂಧಿಗಳಿಂದ ಕಿಕ್ಕಿರಿದು ಹೋಗಿತ್ತು ಇನ್ನೂ ಅನೇಕರು ಮನೆಯೊಳಗೆ ಜಾಗ ಸಿಗದೆ ಬಯಲಿನಲ್ಲಿ ಉಳಿದಿದ್ದರು.

ನಮ್ಮ ಟ್ಯಾಕ್ಸಿಕ್ಯಾಬ್ ಅಲ್ಬುಕರ್ಕ್‌ನಲ್ಲಿ ರಸ್ತೆ ಪ್ರವೇಶಿಸಿ ಬಿರ್ಲಾಭವನ ಸಮೀಪಿಸಿತು. ಆ ಭವನದ ಗೇಟಿನ ಹೊರಗೆ ನಿಂತಿದ್ದ ನೂರಾರು ಜನರು ಘೋಷಣೆಗಳನ್ನು ಕೂಗುತ್ತಿದ್ದರು. ‘ಗಾಂಧಿ ಮುರ್ದಾಬಾದ್’ ಎಂಬ ಈ ಘೋಷಣೆಯನ್ನು ನಾನು ಕೇಳಿದ್ದು ಅದೇ ಮೊದಲು. ಉಳಿದ ಜನರಿಗಿಂತ ಸ್ವಲ್ಪ ಶಾಂತವಾಗಿ ಕಂಡು ಬಂದ ಕೆಲವು ಹಿಂದೂಗಳನ್ನು ಸಿಖ್ಖರನ್ನೂ ನಾನು ಸಮೀಪಿಸಿ ಅವರನ್ನು ಪ್ರಶ್ನಿಸುತ್ತಿದ್ದ ಹಾಗೆಯೇ ನೂರಾರು ಮಂದಿ ನನ್ನನ್ನು ಮುತ್ತಿಕೊಂಡರು. ಇಂಗ್ಲಿಷನ್ನು ಬಲ್ಲ ಕೆಲವರು ಉತ್ಸಾಹದಿಂದ ತಮ್ಮ ಅಭಿಪ್ರಾಯಗಳನ್ನು ಹೇಳತೊಡಗಿದರು. ಮುಸ್ಲಿಮರನ್ನು ನಂಬಲೇಬಾರದು ಎಂದು ಸರ್ದಾಜಿಯೇ ಹೇಳಿದ್ದಾರೆ. ಹೋದ ವಾರವಷ್ಟೇ ಲಕ್ನೋದಲ್ಲಿ ಅವರು ಈ ಮಾತು ಹೇಳಿದ್ದಾರೆ ಎಂದು ಒಬ್ಬ ಹಿಂದೂ ಯುವಕ ಹೇಳಿದ. ಅವನು ಕಪ್ಪು ಸ್ವಸ್ತಿಕ ಚಿಹ್ನೆಯ ಕೇಸರಿ ತೋಳುಪಟ್ಟಿ ಕಟ್ಟಿಕೊಂಡಿದ್ದ. ಹಿಂದೂ ಮಹಾಸಭಾದವರ ಈ ಲಾಂಛನ ನೋಡಿದಾಗಲೆಲ್ಲ ನಾಜಿ ಬ್ಯಾಡ್ಜ್‌ಗಳಿಗೂ ಇದಕ್ಕೂ ಇರುವ ಸಾಮ್ಯ ನನಗೆ ಥಟ್ಟನೆ ನೆನಪಾಗುತ್ತಿತ್ತು.

ಈ ಸರ್ಕಾರ ಯಾವುದಾದರೊಂದು ವಸತಿ ಯೋಜನೆಯನ್ನೇ ಯಾಕೆ ಮಾಡಬಾರದು. ದೆಹಲಿಯಲ್ಲಿ ನಲವತ್ತು ಸಾವಿರ ಮನೆಗಳನ್ನು ಕಟ್ಟಲಿ, ಉಪವಾಸಕ್ಕೆ ಬದಲು ಅಂಥ ಯೋಜನೆಗಳನ್ನಾದರೂ ಮಾಡಿದರೆ ಈ ಗಲಭೆಗಳು ಬೇಗ ಬಗೆಹರಿಯಬಹುದು. ಹೀಗೆ ಹೇಳಿದವನು ವಯಸ್ಸಾದ ಒಬ್ಬ ಹಿಂದೂ ನಿರಾಶ್ರಿತ ಹಣ್ಣುಗಳ ಸಗಟು ವ್ಯಾಪಾರಿಯಾಗಿದ್ದ ಅವನು ವಾಸಿಸುತ್ತಿದ್ದ ರಾವಲ್ಪಿಂಡಿಯ ಭಾಗ ಈಗ ಪಾಕಿಸ್ತಾನಕ್ಕೆ ಸೇರಿಹೋಗಿತ್ತು. ದೆಹಲಿಯಲ್ಲಿ ಖಾಲಿಯಿರುವ ಅರಮನೆಗಳಲೆಲ್ಲ ಜನರಿಗೆ ವಸತಿ ಕೊಡಲಿ ಎಂದು ಇನ್ನೊಬ್ಬ ಹಿಂದೂ ಯುವಕ ಹೇಳಿದ. ಅವನು ಲಾಹೋರಿನ ಎಲೆಕ್ಟ್ರಿಕಲ್ ವರ್ಕರ‍್ಸ್ ಯೂನಿಯನ್ನಿನ ಕಾರ್ಯದರ್ಶಿ ಎಂದು ನಂತರ ತಿಳಿಯಿತು. ಹೌದಲ್ಲವೇ ಎಷ್ಟು ಅರ್ಥಪೂರ್ಣವಾದ ಸೂಚನೆ ಎಂದು ಯೋಚಿಸಿದರೆ ಗಾಂಧಿ ತತ್ವದ ಅನುಷ್ಠಾನಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇರಲು ಸಾಧ್ಯವೇ? ಮಹಾರಾಜರುಗಳು, ಬಂಡವಾಳಶಾಹಿಗಳು ತಮ್ಮ ಎಲ್ಲ ಸಂಪತ್ತು ಜನರಿಗೇ ಸೇರಿದ್ದು ಎಂದು ಘೋಷಿಸುವುದಾದರೆ ಎಷ್ಟು ಆದರ್ಶವಾಗಿರುತ್ತದೆ. ಆದರೆ ಕಿನ್ನರ ಕಥಾಲೋಕದಲ್ಲಿ ಇಂಥ ಸಂಗತಿಗಳು ಭಾರತದಲ್ಲಿ ವಾಸ್ತವವಾಗಲು ಸಾಧ್ಯವೇ ಇರಲಿಲ್ಲ.

ನಾನು ಈ ಜನರ ಮಧ್ಯೆ ನಿಂತಿದ್ದಾಗ ಬಿರ್ಲಾ ಭವನದ ಮುಂಬಾಗಿಲು ತೆರೆಯಿತು. ನೆಹರೂ, ಪಟೇಲ್, ಮೌಲಾನಾ ಅಜಾದರು ಅಲ್ಲಿಂದ ಹೊರಬಂದರು. ಒಳ್ಳೆಯ ವಿದ್ವಾಂಸರಾಗಿದ್ದ ಮೌಲಾನಾ ಅಜಾದರು ಭಾರತದ ಶಿಕ್ಷಣ ಸಚಿವರಾಗಿದ್ದರು. ಈ ಮೂವರೂ ಗಾಂಧೀಜಿಯೊಂದಿಗೆ ಮಾತುಕತೆ ನಡೆಸಿ ಹೊರಬಂದಿದ್ದು ಸ್ಪಷ್ಟವಾಗಿತ್ತು. ಮೂವರೂ ಅವರವರ ಕಾರು ಹತ್ತಿದ್ದರು. ಕೊನೆಯದು ನೆಹರೂ ಕಾರು, ಮೊದಲಿನವರೆಡೂ ರಸ್ತೆ ಸೇರಿದವು. ನೆಹರೂ ಕಾರು ಗೇಟಿನಿಂದ ಇನ್ನೇನು ಹೊರಗೆ ತಿರುಗಿಕೊಳ್ಳಬೇಕು ಅನ್ನುವಷ್ಟರಲ್ಲಿ ಜನ ಮತ್ತೆ ಕೂಗ ತೊಡಗಿದರು. ‘ಸರ್ದಾರ್ ಪಟೇಲ್ ಜಿಂದಾಬಾದ್’ ಎಂಬ ಕೂಗು ಒಂದು ಕಡೆ. ‘ಗಾಂಧಿ ಮುರ್ದಾಬಾದ್’ ಎಂಬ ಕೂಗು ಇನ್ನೊಂದು ಕಡೆ ಕೇಳುತ್ತಿತ್ತು. ಈ ಘೋಷಣೆ ಕಿವಿಗೆ ಬೀಳುತ್ತಿದ್ದಂತೆ ಕೋಪದಿಂದ ಕೆಂಪಾಗಿದ್ದ ನೆಹರೂ ಕಾರಿನಿಂದ ಹೊರಗೆ ಬಂದರು. ‘ಇಂಥ ಮಾತನ್ನು ಯಾರಾದರೂ ಹೇಳುತ್ತಾರೆಯೇ, ಬೇಕಿದ್ದರೆ ನನ್ನನ್ನು ಮೊದಲು ಕೊಲ್ಲಿ’ ಎಂದು ನೆಹರೂ ಚೀರಿದಾಗ ಗುಂಪು ತಣ್ಣಗಾಯಿತು. ಜನ ಮೆಲ್ಲಗೆ ಚೆದುರತೊಡಗಿದರು.

ಆ ಸಂಜೆ ಪ್ರಾರ್ಥನಾ ಸಭೆಯಲ್ಲಿ ಹೆಚ್ಚಿನ ಜನ ಸೇರಿರಲಿಲ್ಲ. ಆದರೆ, ಪ್ರಾರ್ಥನೆಗಾಗಿಯೇ ಬಂದ ಜನ ಗಾಂಧೀಜಿ ಬಗ್ಗೆ ಬಹಳ ಭಕ್ತಿ ಗೌರವ ಇಟ್ಟುಕೊಂಡ ಜನರಾಗಿದ್ದರು. ಗಾಂಧೀಜಿಯವರು ಉಪವಾಸದಿಂದ ಎಷ್ಟು ಬಳಲಿರಬಹುದು ಎಂದು ಅವರೆಲ್ಲ ಕಳವಳಗೊಂಡಿದ್ದರು. ನಾನು ಹಾಗೇ ನೋಡುತ್ತಿದ್ದಾಗ ನನ್ನ ಭಾರತೀಯ ಸ್ನೇಹಿತ ಕಣ್ಣಿಗೆ ಕಂಡ. ಆತನ ಹೆಸರು ಬೇಡಿ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪದವೀಧರ. ಸಾಕಷ್ಟು ಹೆಸರು ಮಾಡಿದ್ದ ಲೇಖಕನೂ ಹೌದು. ಅಷ್ಟೇ ಅಲ್ಲ ಸಿಖ್ ಧರ್ಮವನ್ನು ಸ್ಥಾಪಿಸಿದ ಸಂತ ಗುರುನಾನಕರ ನೇರ ಸಂತತಿಯವನೂ ಆಗಿದ್ದ. ಆತನ ಧಮನಿಗಳಲ್ಲಿ ಸಂತನ ರಕ್ತ ಹರಿಯುತ್ತಿದ್ದರೂ ಯಾವುದೇ ರೀತಿಯ ಮತಮೋಹ ಆತನಲ್ಲಿರಲಿಲ್ಲ. ಆತನ ಉಡುಪು ಸಾಂಪ್ರದಾಯಿಕ ಶೈಲಿಯಲ್ಲಿತ್ತು. ಆದರೂ ಆತ ಬಹಳ ಪ್ರಗತಿಪರ, ಸುಧಾರಿತ ಹಾಗೂ ವಿಶಾಲಮನಸ್ಸಿನವನಾಗಿದ್ದ.

ಗಾಂಧಿಯವರ ಉಪವಾಸ ಹೆಚ್ಚು ಜನರನ್ನು ಸೆಳೆಯುತ್ತಿಲ್ಲವಲ್ಲ ಎಂದು ನಾನು ಆಶ್ಚರ್ಯ ವ್ಯಕ್ತಪಡಿಸಿದೆ. ಅದಕ್ಕೆ ಅಷ್ಟು ಬೇಗ ಆ ನಿರ್ಣಯಕ್ಕೆ ಬರಬೇಡಿ. ಇನ್ನೆರಡು ದಿನ ಕಳೆಯಲಿ ಆಗ ನೋಡಿ ಗಾಂಧಿಯವರ ಜೀವದ ಬಗ್ಗೆ ಆತಂಕ ಹೇಗೆ ಹೆಚ್ಚಾಗುತ್ತದೆ. ಅವರ ಉಪವಾಸ ಮುಂದುವರೆದಂತೆ ಜನರ ಮನೋಭಾವವೇ ಬೇರೆಯಾಗುತ್ತದೆ ಎಂದು ಹೇಳಿದ. ಗಾಂಧೀಜಿಯವರ ಈ ಹಿಂದಿನ ಅನೇಕ ಉಪವಾಸಗಳ ಪರಿಣಾಮವನ್ನು ಆತ ತಿಳಿದಿದ್ದ.

ಆ ಸಂಜೆಯ ಸಭೆಯಲ್ಲಿ ಸೈನಿಕ ಸಮವಸ್ತ್ರದಲ್ಲಿ ಬಂದ ಕೆಲವು ತರುಣರಿದ್ದರು. ಅವರೆಲ್ಲ ಭಾರತೀಯ ಸೇನೆಯ ಯೋಧರು. ಪಾಕಿಸ್ತಾನದಿಂದ ಕಾಶ್ಮೀರವನ್ನು ಪ್ರವೇಶಿಸಿ ಅಲ್ಲಿನ ಹಳ್ಳಿಗಳನ್ನು ಸುಡುತ್ತ, ಜನರನ್ನು ಹೆದರಿಸುತ್ತಾ, ಹೆಂಗಸರನ್ನು ಅಪಹರಿಸುತ್ತಾ, ಮುಸ್ಲಿಂ ಹಿಂದೂ ಎಂಬ ಭೇದವಿಲ್ಲದೆ ರೈತರ ಸುಲಿಗೆಯಲ್ಲಿ ತೊಡಗಿದ್ದ ಮಹಮ್ಮದೀಯ ಬುಡಕಟ್ಟು ಜನರೊಂದಿಗೆ ಕಾಶ್ಮೀರದ ಮುಂಚೂಣಿಯಲ್ಲಿ ಹೋರಾಡುತ್ತಿದ್ದ ಈ ಯೋಧರು ರಜೆಯ ಮೇಲೆ ದೆಹಲಿಗೆ ಬಂದಿದ್ದರು. ಪರ್ವತ ಪ್ರದೇಶದ ದಾರಿಗಳಲ್ಲಿ ಚಳಿಗಾಲದ ಹಿಮ ಬೀಳುವುದು ಹೆಚ್ಚಾಗುತ್ತಿದ್ದಂತೆ ಆ ಧಾಳಿಕೋರರು ಗೆರಿಲ್ಲಾ ಹೋರಾಟಕ್ಕೆ ತೊಡಗಿದ್ದರು. ಹೀಗಾಗಿ ಈ ಯೋಧರಿಗೆ ಸ್ವಲ್ಪ ರಜೆ ಸಿಕ್ಕಿತ್ತು. ಬೇಡಿಯೂ ಕೂಡ ಕಾಶ್ಮೀರದಿಂದ ಬಂದವರೇ ಜನರ ಚಳುವಳಿಯಲ್ಲಿಯೂ ಅವರು ಪಾಲ್ಗೊಂಡಿದ್ದರು. ಈ ಯೋಧರೊಂದಿಗೆ ಮಾತಾಡಲು ಅವರ ಭಾಷಾಂತರ ನೆರವಾಯಿತು. ಗಾಂಧಿಯವರು ತಮ್ಮ ಜೀವವನ್ನು ಹೀಗೆ ಅಪಾಯಕ್ಕೆ ಒಡ್ಡಿಕೊಳ್ಳುವುದು ಸರಿಯಲ್ಲ. ಅವರು ಚೆನ್ನಾಗಿ ತಿಂದು ಬಲವಾಗಿರಬೇಕು ಎಂದು ಒಬ್ಬ ಸೈನಿಕ ಹೇಳಿದ. ಅವರೇ ಉಪವಾಸ ಕುಳಿತು ಬಿಟ್ಟರೆ ಹೇಗೆ. ನಾವೇನಾದರೂ ಉಪವಾಸ ಕುಳಿತರೆ ಕಾಶ್ಮೀರವನ್ನು ಧಾಳಿಕೋರರು ಸಂಪೂರ್ಣ ಆಕ್ರಮಿಸಿ ಬಿಡುತ್ತಾರೆ ಎಂದು ಒಬ್ಬ ವೈರ್‌ಲೆಸ್ ಆಪರೇಟರ್ ಆಗಿದ್ದವನು ಹೇಳಿದ. ಭಾರತದಲ್ಲಿ ನಾವು ಮುಸ್ಲಿಮರಿಗೆ ರಕ್ಷಣೆ ನೀಡಬೇಕು ಆದರೆ ಹೋರಾಟ ನಡೆಯುತ್ತಿರುವ ಕಾಶ್ಮೀರದಲ್ಲಿ ಇದು ಹೇಗೆ ಸಾಧ್ಯ ಎಂದು ಇನ್ನೊಬ್ಬ ತನ್ನ ಗೊಂದಲವನ್ನು ಹೇಳಿಕೊಂಡ.

ಈ ಬಗ್ಗೆ ನಾನು ಇನ್ನಷ್ಟು ಚೆನ್ನಾಗಿ ಚರ್ಚಿಸಬೇಕು ಎಂದುಕೊಂಡಿದ್ದೆ. ಅಷ್ಟರಲ್ಲಿ ಹೆಂಗಸರ ಗುಂಪೊಂದು ಪ್ರಾರ್ಥನಾ ಸಭೆಯ ಬಳಿ ಹೋಯಿತು. ಅವರು ಪ್ರಾರ್ಥನೆ ಆರಂಭಿಸುವುದನ್ನೇ ನಾವು ಕಾಯುತ್ತಾ ಕುಳಿತೆವು. ಆದರೆ ಅವರೂ ಕೂಡ ಯಾರಿಗೋ ಕಾಯುತ್ತಿದ್ದಂತೆ ಕಂಡಿತು. ಆಗ ಗಾಂಧಿಯವರೇ ಸ್ವತಃ ಅಭಾ ಮತ್ತು ತಮ್ಮ ಸೋದರನ ಮೊಮ್ಮಗಳ ಮೇಲೆ ಕೈ ಊರಿಕೊಂಡು ಸಭೆಗೆ ಬಂದಾಗ ನಮಗೆ ನಂಬುವುದೇ ಕಷ್ಟವಾಯಿತು.

ಗಾಂಧಿ ಸಾಕಷ್ಟು ಬಳಲಿದ್ದರು. ಮೈಕಿನ ಮೂಲಕ ಅವರ ದನಿ ಅತ್ಯಂತ ಕ್ಷೀಣವಾಗಿ ಕೇಳಿಸುತ್ತಿತ್ತು. ಕೆಲವೊಮ್ಮೆ ಏನೂ ಕೇಳಿಸುತ್ತಿರಲಿಲ್ಲ. ಇದಲ್ಲದೆ ಆ ಮೈಕೂ ಸರಿಯಾಗಿರಲಿಲ್ಲ. ಅದರ ದೋಷದಿಂದಾಗಿ ಗಾಂಧಿಯವರ ಮಾತು ಇನ್ನಷ್ಟು ಕೇಳದಂತಾಗಿತ್ತು. ಆದರೆ ಅಸ್ಪಷ್ಟವಾಗಿ ಕೇಳಿಸಿದಷ್ಟರಿಂದಲೇ ನಮಗೆ ಅರ್ಥವಾಗಿದ್ದೇನೆಂದರೆ ನೆನ್ನೆಯ ದಿನದ ಮಾತಿನಲ್ಲಿ ಅವರು ಭಾರತದ ಆಂತರಿಕ ಪರಿಸ್ಥಿತಿ ಬಗ್ಗೆ ಹೇಳಿದ್ದರು. ಈ ದಿನ ಅವರ ಮಾತು ಪಾಕಿಸ್ತಾನವನ್ನು ಕುರಿತು ಇತ್ತು. ಪಾಕಿಸ್ತಾನದ ಕರಾಚಿಯಲ್ಲಿ ಇತ್ತೀಚೆಗೆ ನಡೆದ ಸಿಖ್ಖರ ಬರ್ಬರ ಹತ್ಯೆ ಕುರಿತು ಅವರು ಪ್ರಸ್ತಾಪಿಸಿದರು ಮತ್ತು ಗುಜರಾತ್ ರೈಲ್ವೆ ನಿಲ್ದಾಣದಲ್ಲಿ ನಿರಾಶ್ರಿತರ ರೈಲೊಂದರ ಮೇಲೆ ಆಕ್ರಮಣ ಮಾಡಿ ಅಲ್ಲಿದ್ದ ನೂರಾರು ಮಂದಿ ಹಿಂದೂ ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿರುವ ಘಟನೆಯನ್ನು ಪ್ರಸ್ತಾಪಿಸಿದರು. ಇಂತಹ ಘಟನೆಗಳಿಗೆ ಪಾಕಿಸ್ತಾನ ತಡೆಹಾಕಬೇಕು ಎಂದು ಹೇಳಿದರು. ಪಾಕಿಸ್ತಾನ ಹೆಸರಿಗೆ ತಕ್ಕಂತೆ ‘ಪಾಕ್’ (ಪರಿಶುದ್ಧ) ಆಗಬೇಕು ಇಂತಹ ಪರಿಶುದ್ಧ ಭೂಮಿಯನ್ನು ನಾನು ಪ್ರತಿಯೊಬ್ಬ ಮುಸ್ಲಿಮರ ದೈನಂದಿನ ಜೀವನದಲ್ಲಿ ಕಾಣಬಯಸುತ್ತೇನೆ. ಕೇವಲ ಕಾಗದದ ಮೇಲಲ್ಲ. ಭಾರತವೂ ಕೂಡ ಹೆಮ್ಮೆಯಿಂದ ಪಾಕಿಸ್ತಾನವನ್ನು ಅನುಕರಿಸುವಂತಾಗಬೇಕು. ನಾನೇನಾದರೂ ಬದುಕಿದ್ದರೆ, ಪಾಕಿಸ್ತಾನವನ್ನು ಮೀರಿಸುವಂತೆ ಬದುಕಿ ಎಂದು ಭಾರತೀಯರಿಗೆ ಹೇಳುವಂತಾಗಬೇಕು. ನನ್ನ ಉಪವಾಸಕ್ಕೆ ನೀವು ಕೊಡಬಹುದಾದ ಪ್ರತಿಫಲ ಅದೇ. ಅದಕ್ಕಿಂತ ಕಡಿಮೆಯ ಯಾವ ಪ್ರತಿಫಲವನ್ನೂ ನಾನು ಒಪ್ಪಲಾರೆ ಎಂದರು. ಈ ಹಂತದಲ್ಲಿ ಮೈಕು ಮತ್ತೆ ಗದ್ದಲ ಮಾಡಲಾರಂಭಿಸಿತು. ಅದನ್ನು ಸರಿಪಡಿಸುವ ಹೊತ್ತಿಗೆ ಗಾಂಧಿಯವರು ಹೇಳುತ್ತಿದ್ದ ಮಾತುಗಳು – ಇವು – ‘ಆಗ ನನ್ನ ಜೀವನದ ಸಂಧ್ಯಾ ಕಾಲದಲ್ಲಿ ನಾನು ಈ ಜನ್ಮದಲ್ಲಿ ನನ್ನ ಕನಸು ನನಸಾದುದಕ್ಕಾಗಿ ಮಗುವನಿನಂತೆ ಕುಣಿದು ಕುಪ್ಪಳಿಸುತ್ತೇನೆ. ಇಂತಹ ಕನಸಿನ ಸಾಕಾರಕ್ಕಾಗಿ ಯಾರು ತಾನೆ ತಮ್ಮ ಬದುಕನ್ನು ಬಲಿದಾನ ಮಾಡಲು ಇಚ್ಛಿಸುವುದಿಲ್ಲ? ಆಗ ಮಾತ್ರ ನಾವು ಭಾರತದಲ್ಲಿ ನಿಜವಾದ ಸ್ವಾತಂತ್ರ್ಯ ಕಾಣುತ್ತೇವೆ’.

ಮಾರನೇ ದಿನ ಜನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನಾ ಸಭೆಗೆ ಸೇರಿದ್ದರು. ಆದರೆ ಆ ದಿನ ಗಾಂಧಿ ಬರಲಿಲ್ಲ. ಸುಶೀಲಾ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಪ್ರಾರ್ಥನೆ ಮುಗಿದ ನಂತರ ಜನರೆಲ್ಲ ‘ಗಾಂಧಿ ದರ್ಶನ’ಕ್ಕಾಗಿ ಒತ್ತಾಯಿಸತೊಡಗಿದರು. ಜನರ ಒತ್ತಾಯ ಹೆಚ್ಚಾದಾಗ ಗಂಡಸರು, ಹೆಂಗಸರು ಬೇರೆ ಸಾಲು ಮಾಡಿಕೊಂಡು ಗಾಂಧೀ ದರ್ಶನಕ್ಕೆ ಬರಬಹುದೆಂದು ತಿಳಿಸಲಾಯಿತು. ನಾನು ಆ ಸಾಲಿನಲ್ಲಿ ಸೇರಿಕೊಂಡೆ. ಬಿರ್ಲಾ ಭವನದ ಉದ್ಯಾನವನದ ನಡುವೆ ಸಂಜೆ ಬೆಳಕಿನಲ್ಲಿ ನಿಧಾನವಾಗಿ ನಾವು ಮುಂದೆ ಸಾಗಿದೆವು. ಕೈ ಸಾಲೆಯಲ್ಲಿ ಗಾಂಧಿಯವರ ಮಂಚವಿತ್ತು. ಅತ್ಯಂತ ಬಡಕಲು ದೇಹದ ಗಾಂಧಿ ಗಾಢನಿದ್ದೆಯಲ್ಲಿರುವಂತೆ ಮಲಗಿದ್ದರು.

ಅಲ್ಲಿ ಮಲಗಿದ್ದ ಪುಟ್ಟ ಶರೀರ ಹಾಗೂ ಅವರನ್ನು ಸುತ್ತುವರೆದು ಭಕ್ತಿಯಿಂದ ಮೌನವಾಗಿ ಸಾಗುತ್ತಿದ್ದ ಜನರ ಸಾಲನ್ನು ಕಂಡಾಗ ನನಗಾದ ಭಾವನೆಯನ್ನು ಹೇಗೆ ತಿಳಿಸಬೇಕೆಂಬುದೇ ಗೊತ್ತಾಗುತ್ತಿಲ್ಲ. ಒಬ್ಬ ಪ್ರಮುಖ ವ್ಯಕ್ತಿ ಮಲಗಿರುವುದನ್ನು ಸಾರ್ವಜನಿಕರಿಗೆ ಪ್ರದರ್ಶಿಸುವ ಇಂತಹ ಸಂಗತಿಯನ್ನು ಯೂರೋಪಿನಲ್ಲಾಗಲೀ, ಅಮೆರಿಕಾದಲ್ಲಾಗಲೀ, ಊಹಿಸುವುದೇ ಅಸಾಧ್ಯ. ತಮ್ಮ ನಾಯಕನ ಬಗೆಗೆ ಅಸಾಧಾರಣವಾದ ಆಪ್ತತೆ ಹಾಗೂ ಅದನ್ನು ಬಹಿರಂಗವಾಗಿ ಪ್ರದರ್ಶಿಸುವ ಇಂತಹ ಮನೋಭಾವ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಬೇರೆಲ್ಲಿಯೂ ನಾನು ನೋಡಲಿಲ್ಲ.

ಇದಾದ ನಂತರ ಸಾರ್ವಜನಿಕರೂ ಕೂಡ ಉಪವಾಸ ಕೈಗೊಳ್ಳತೊಡಗಿದರು. ಪ್ರತಿದಿನ ಪ್ರತಿ ಗಂಟೆಯೂ ಶಾಂತಿ ಸೂಚಕ ಮೆರವಣಿಗೆ ಹಾಗೂ ಶಾಂತಿಪಾಲನಾ ಪಡೆಗಳ ಬೃಹತ್ ಸಭೆಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಬೆಂಗಾವಲಿನಲ್ಲಿ ಸಾಗುತ್ತಿದ್ದ ಟ್ರಕ್ಕುಗಳ ಮೇಲೆ ‘ಮಹಾತ್ಮಾಜಿಯವರ ಜೀವ ನಮ್ಮ ಜೀವಕ್ಕಿಂತ ಅಮೂಲ್ಯ ಎಂಬ ಬ್ಯಾನರ್‌ಗಳು, ವಿಶ್ವವಿದ್ಯಾಲಯಗಳ ಪ್ರೊಫೆಸರುಗಳೂ, ವಿದ್ಯಾರ್ಥಿಗಳೂ ಮಹಾತ್ಮರಿಗೆ ಮೊದಲು ನಾವು ಸಾಯುತ್ತೇವೆಂದು ಘೋಷಿಸಿದರು. ಗಲಭೆಗಳಿಗೆ ತುತ್ತಾದವರ ವಿಧವೆಯರು, ಅನಾಥರಾದ ಮಕ್ಕಳು ಸಹಾನುಭೂತಿಯ ಉಪವಾಸ ಮಾಡಿದರು. ಅವರಿಗೆ ಸಿಗುತ್ತಿದ್ದ ಆಹಾರ ಪಡಿತರದ ದೃಷ್ಟಿಯಿಂದ ಹೇಳುವುದಾದರೆ ಅವರ ಉಪವಾಸ ಎಂದೋ ಆರಂಭವಾಗಿತ್ತು. ಅವರೆಲ್ಲ ಬಿರ್ಲಾ ಭವನಕ್ಕೆ ಹೋಗಿ, ನಾವು ಪ್ರತೀಕಾರದಲ್ಲಿ ತೊಡಗುವುದಿಲ್ಲ. ನಮ್ಮ ಹಾಗೇ ಸಂಕಟಕ್ಕೆ ತುತ್ತಾಗಿರುವ ಮುಸ್ಲಿಂ ವಿಧವೆಯರ ಬಗ್ಗೆ ಮುಸ್ಲಿಂ ಅನಾಥ ಮಕ್ಕಳ ಬಗ್ಗೆ ಸಹಾನುಭೂತಿಯಿಂದ ವರ್ತಿಸುತ್ತೇನೆ ಎಂದು ಗಾಂಧೀಜಿಯ ಮುಂದೆ ಪ್ರಮಾಣ ಮಾಡಿದರು. ಅನೇಕ ಮಹಾರಾಜರುಗಳು ತಮ್ಮ ರೋಲ್ಸ್‌ರಾಯ್ಸ್‌ಗಳಲ್ಲಿ ಬಿರ್ಲಾಭವನಕ್ಕೆ ಬಂದರು. ಉಪವಾಸ ನಿಲ್ಲಿಸುವಂತೆ ಗಾಂಧಿಯವರನ್ನು ಕೇಳಿಕೊಂಡರು. ಬಾಂಬೆಯ ಅಸ್ಪೃಶ್ಯರು ಗಾಂಧೀಜಿಯವರಿಗೆ ಒಂದು ಟೆಲಿಗ್ರಾಂ ಮನವಿ ಕಳಿಸಿ ನಿಮ್ಮ ಜೀವದ ಜೋಪಾನದ ಹೊಣೆ ನಮ್ಮದು ಎಂದು ತಿಳಿಸಿದ್ದರು.

ಇದೆಲ್ಲದರ ಮಧ್ಯೆ ಸುಶೀಲಾ ದಿನವೂ ಒಂದು ಚಿಕ್ಕ ಬೆರಳಚ್ಚು ಪ್ರಕಟಣೆಯನ್ನು ಸಿದ್ಧಪಡಿಸಿ ಬಿರ್ಲಾ ಭವನದ ಗೇಟಿನ ಹೊರಗೆ ಗೋಡೆಯ ಮೇಲೆ ಅಂಟಿಸುತ್ತಿದ್ದರು. ಅದರಲ್ಲಿ ಮಹಾತ್ಮರು ಹೇಗೆ ನಿದ್ದೆ ಮಾಡಿದರು. ಅವರ ಮೂತ್ರಪಿಂಡಗಳ ಕಾರ್ಯಸ್ಥಿತಿ ಯಾವ ರೀತಿ ಇದೆ ಎಂಬ ವಿವರಗಳು ಇರುತ್ತಿದ್ದವು. ಕೋಮು ಸಾಮರಸ್ಯದ ಬಗ್ಗೆ ತಮಗೆ ಯಾವುದೇ ವರದಿ ಬಂದಾಗ ಗಾಂಧಿಯವರು ‘ನನ್ನ ಉಪವಾಸವನ್ನು ಮುರಿಯುವುದಕ್ಕಾಗಿ ನನಗೆ ಮೋಸ ಮಾಡಬೇಡಿ. ನೀವು ಹಾಗೇನಾದರೂ ಮಾಡಿದರೆ ಅದು ನೀವು ನನಗೆ ಬಹುದೊಡ್ಡ ಘಾಸಿ ಮಾಡಿದಂತೆ. ನಾನೂ ನರಳುತ್ತೇನೆ. ಭಾರತವೂ ನರಳುತ್ತದೆ’ ಎಂದು ಹೇಳುತ್ತಿದ್ದರು.

ಈ ಮಧ್ಯೆ ಒಂದು ಸಂಜೆಯ ಸುಂದರ ಅನುಭವವನ್ನು ಮರೆಯಲಾರೆ. ಉಪವಾಸದ ಐದನೇ ದಿನ ಮುಗಿಯುತ್ತ ಬಂದಿತ್ತು. ಮೆರವಣಿಗೆಗಳ ಗಾತ್ರ ದಿನೇದಿನೇ ಬೆಳೆಯುತ್ತ ಬೃಹತ್ ಪ್ರಮಾಣ ತಲುಪಿತ್ತು. ಉರ್ದು ಪಾರ್ಕಿನಲ್ಲಿ ಭಾರೀ ಸಭೆ. ಕೆಂಪುಕೋಟೆಯಿಂದ ಜುಮ್ಮಾ ಮಸೀದಿಯವರೆಗಿನ ವಿಶಾಲ ಆವರಣದಲ್ಲಿ ಕಿಕ್ಕಿರಿದು ಸೇರಿದ್ದರು. ಆ ಸಭೆಯಿಂದ ಸುಮಾರು ಐದು ಸಾವಿರದಷ್ಟು ಸೈಕಲ್ ಸವಾರರೂ ಪ್ರಾರ್ಥನಾ ಸಭೆಗೆ ಬಂದರು. ಇವರ ಹಿಂದೆ ರೈಲ್ವೆ ಕಾರ್ಮಿಕರ ಸಂಘ, ಅಂಚೆ ಮತ್ತು ತಂತಿ ಇಲಾಖೆಯ ನೌಕರರು, ಸರ್ಕಾರಿ ಮುದ್ರಣಾಲಯದ ನೌಕರರ ಸಂಘ, ಮಿಲಿಟರಿ ಲೆಕ್ಕಿಗ ಗುಮಾಸ್ತರು, ದೆಹಲಿಯ ವುಮೆನ್ಸ್ ಲೀಗ್‌ಗಳ ಮೆರವಣಿಗೆಗಳು ಒಂದರ ಹಿಂದೊಂದರಂತೆ ಬಂದವು. ಅದು ರೋಮಾಂಚನಕಾರಿಯಾದ ದೃಶ್ಯ. ಬಣ್ಣಬಣ್ಣದ ಬ್ಯಾನರ್‌ಗಳು, ಬಿರ್ಲಾ ಗೇಟಿನೊಳಗೆ ಪ್ರವೇಶಿಸಿದವು. ಹುಲ್ಲುಹಾಸಿನ ಮೇಲೆ, ಹೂಪಾತಿಗಳಲ್ಲಿ, ಅಮೃತಶಿಲೆ ಹಾಸಿದ ವಿಶಾಲ ತಾರಸಿಯ ಮೇಲೆ ಎಲ್ಲೆಲ್ಲೂ ಜನ, ಕತ್ತಲು ಆವರಿಸುತ್ತಿತ್ತು. ಆದರೂ ಬಿರ್ಲಾ ಭವನದ ದೊಡ್ಡ ದೊಡ್ಡ ಕಿಟಕಿಗಳಿಂದ ತೂರಿ ಬರುತ್ತಿದ್ದ ಬೆಳಕಲ್ಲಿ ಆ ಜನ ಪ್ರವಾಹದಲ್ಲಿಯೂ ಕೆಲವರನ್ನು ಗುರುತಿಸಲು ಸಾಧ್ಯವಾಯಿತು. ಇನ್ನೂ ಮೆರವಣಿಗೆಗಳು ಬರುತ್ತಲೇ ಇದ್ದವು. ಧಾರ್ಮಿಕ ಒಗ್ಗಟ್ಟನ್ನು ಕಾಪಾಡುತ್ತೇವೆ. ಮಹಾತ್ಮರ ಜೀವಕ್ಕಾಗಿ ನಮ್ಮ ಜೀವವನ್ನು ಪಣಕೊಡುತ್ತೇವೆ ಎಂದು ಜನ ಕೂಗುತ್ತಲೇ ಇದ್ದರು.

ಈ ಘೋಷಣೆಗಳ ಕೂಗು ತಾರಕಕ್ಕೆ ಮುಟ್ಟಿದಾಗ, ಗಾಂಧಿಯವರ ಆರೋಗ್ಯ ತಪಾಸಣೆಗೆ ಬರುತ್ತಿದ್ದ ಇಬ್ಬರು ವೈದ್ಯರಲ್ಲಿ ಒಬ್ಬರಾದ ಡಾ. ಜೀವರಾಜ ಮೆಹ್ತಾ ಪೋರ್ಟಿಕೋಗೆ ಬಂದು ಪ್ರದರ್ಶನಕಾರರನ್ನು ಕುರಿತು ಇಲ್ಲೇನು ಜಾತ್ರೆ ನೋಡಲು ಬಂದಿದ್ದೀರಾ. ಯಾಕಿಷ್ಟು ಕೂಗಾಡುತ್ತಿದ್ದೀರಿ ಎಂದು ಜನರನ್ನು ಬೈಯುತ್ತಿದ್ದ ಕ್ಷಣದಲ್ಲಿಯೇ ನೆಹರೂ ಬಂದರು. ಅವರಿಗೆ ಜನರ ಮನೋಭಾವ ಅರ್ಥವಾಯಿತು. ಗಾಂಧಿಯವರು ಶ್ರಮಿಸುತ್ತಿರುವುದೇ ಈ ಉದ್ದೇಶಕ್ಕಾಗಿ ಎಂಬುದನ್ನು ಅರ್ಥಮಾಡಿಕೊಂಡೆ ಅವರು ಕೂಡಲೇ ಅಲ್ಲಿದ್ದ ಒಂದು ಸಿಮೆಂಟ್ ಕಟ್ಟೆಯನ್ನೇರಿ ಏನೋ ಹೇಳಿದರು. ಅದು ನನಗೆ ಕೇಳಿಸಲಿಲ್ಲ. ಆದರೆ ಅವರು ಇಂದು ಪ್ರಾರ್ಥನಾ ಸಭೆಯಲ್ಲಿ ಭಾಷಣ ಮಾಡುವುದಾಗಿ ಹೇಳಿದ್ದಾರೆ ಎಂಬುದು ಜನರ ಮಾತಿನಿಂದ ತಿಳಿಯಿತು. ನೆಹರೂ ಭಾಷಣಕ್ಕಾಗಿ ಜನರೆಲ್ಲ ತರಾತುರಿಯಲ್ಲಿ ಉದ್ಯಾನದ ಹಿಂಭಾಗಕ್ಕೆ ಹೋಗತೊಡಗಿದರು. ಹಿಂದೂಸ್ತಾನಿ, ಇಂಗ್ಲಿಷ್‌ಗಳೆರಡರಲ್ಲೂ ಅತ್ಯಂತ ಸುಂದರವಾಗಿ ಮಾತಾಡಬಲ್ಲ ನೆಹರೂ ಈ ಸಂದರ್ಭದಲ್ಲಿ ಹಿಂದೂಸ್ತಾನಿಯಲ್ಲಿ ಮಾತಾಡುವುದು ಖಚಿತವಾಗಿತ್ತು. ನೆಹರೂ ಹೇಳುವ ಪ್ರತಿಯೊಂದು ಮಾತನ್ನು ನಾನು ಕೇಳಿಸಿಕೊಳ್ಳಬೇಕಾಗಿತ್ತು. ಅದಕ್ಕಾಗೇ ಒಳ್ಳೆಯ ಅನುವಾದಕರಿಗಾಗಿ ಹುಡುಕಾಡಿದೆ. ಎಂತಹ ಗುಂಪಿನಲ್ಲೂ ಎದ್ದು ಕಾಣುವ ಬೇಡಿ ತಕ್ಷಣ ಕಣ್ಣಿಗೆ ಕಂಡರು. ಪಂಡಿತ್ ನೆಹರೂ, ಪ್ರಾರ್ಥನಾ ಸ್ಥಳದಲಿದ್ದ ಪುಟ್ಟ ವೇದಿಕೆ ಹತ್ತಿದ್ದರು. ಗದ್ದಲ ಮಾಡದಂತೆ ಕೂರಬೇಕೆಂದು ಜನರನ್ನು ವಿನಂತಿಸಿಕೊಂಡರು. ನೆಹರೂ ಯಾವುದೇ ಸಿದ್ಧತೆ ಇಲ್ಲದೆ ತಮ್ಮ ಭಾಷಣ ಆರಂಭಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕೆಂಬುದು ನಮ್ಮ ಕನಸಾಗಿತ್ತು. ಏಷಿಯಾದ ಭವಿಷ್ಯ ಹೇಗಿರಬೇಕು ಎಂಬುದನ್ನು ನಾನು ನನ್ನ ಹೃದಯದಲ್ಲಿಯೇ ರೂಪಿಸಿಕೊಂಡಿದ್ದೆ. ಭಾರತ ಒಂದು ಗುಲಾಮ ರಾಷ್ಟ್ರವಾಗಿದ್ದರೂ ಕೂಡ ಈ ಸಾಧನೆಯಲ್ಲಿ ಯಶಸ್ವಿಯಾಯಿತು. ಈ ಪ್ರಕ್ಷುಬ್ದ ಜಗತ್ತಿನಲ್ಲಿ ಭಾರತ ಒಂದು ಮಹಾನ್ ಸರ್ವತಂತ್ರ ರಾಷ್ಟ್ರವಾಗಿ ಬೇರೆಯವರಿಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ನಾವು ಭಾವಿಸಿದ್ದೆವು. ಇದು ನಮ್ಮ ಯುವಕರೆಲ್ಲರ ಅಭೀಪ್ಸೆಯಾಗಿತ್ತು. ನಮ್ಮ ಹೆಮ್ಮೆಯ ವಿಷಯವಾಗಿತ್ತು. ದೇಶಗಳ ಸ್ವಾತಂತ್ರ್ಯ ಇರುವುದು ಭೂಪಟಗಳ ಮೇಲಲ್ಲ; ಸ್ವಾತಂತ್ರ್ಯದ ಭಾವನೆ ಜನರ ಹೃದಯಗಳಿಂದ ಉಕ್ಕುವಂಥದ್ದು.

ಹೊರಗಿನ ಯಾವುದೇ ಶಕ್ತಿಯೂ ಭಾರತವನ್ನು ಮುಕ್ತಗೊಳಿಸುವುದು ಸಾಧ್ಯವಿಲ್ಲ ಎಂಬ ಮಾತನ್ನು ನೆಹರೂ ಹೇಳಿದಾಗ ನಾನು ಈ ಮಾತಿನ ಬಗ್ಗೆ ಯೋಚಿಸತೊಡಗಿದೆ. ನಾನು ಭಾರತದಲ್ಲಿದ್ದ ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಇಲ್ಲಿನ ನೂರಾರು ಮಂದಿಯೊಂದಿಗೆ ಮಾತಾಡಿದ್ದೆ. ಆಗ ನನಗೆ ಗೊತ್ತಾದ ಒಂದು ಅಂಶವೇನೆಂದರೆ ಸ್ವಾತಂತ್ರ್ಯವನ್ನು ಬ್ರಿಟಿಷ್ ಕಾಮನ್‌ವೆಲ್ತ್ ತಾನಾಗಿಯೇ ಭಾರತಕ್ಕೆ ಬಿಟ್ಟುಕೊಟ್ಟಿತ್ತು ಎಂಬುದು ಒಂದು ತಪ್ಪು ಕಲ್ಪನೆ. ಭಾರತವು ಪಡೆದುಕೊಂಡ ಪ್ರತಿಯೊಂದು ರಿಯಾಯಿತಿ ಹಾಗೂ ಅನುಕೂಲವೂ ಸಹ ಹೋರಾಟ ಮತ್ತು ಬಲಿದಾನ ನಂತರವೇ ಬಂದದ್ದು. ಮೊದಲ ಮಹಾಯುದ್ಧದ ನಂತರ ನಡೆದ ಜನರ ಚಳುವಳಿಗಳಲ್ಲಿ ಸಾವಿರಾರು ಜನ ಬಂಧನಕ್ಕೊಳಗಾದರು. ವರ್ಷಾನುಗಟ್ಟಲೆ ಜೈಲುಗಳಲ್ಲಿದ್ದರು (ನೆಹರೂ ಇದರ ಸಂಪೂರ್ಣ ಅನುಭವ ಪಡೆದರು) ಹಂತಹಂತವಾಗಿ ಸ್ವಾತಂತ್ರ್ಯದೆಡೆಗೆ ಸಾಗುವ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಅಂತಿಮವಾಗಿ royal indian navy ಯಲ್ಲಿ ಶ್ರೇಣೀಕರಣದ ಬಗ್ಗೆ ಬಂಡಾಯವೆದ್ದಾಗ ಈ ಹೋರಾಟ ಕೊನೆಯ ಘಟ್ಟ ಮುಟ್ಟಿತ್ತು. ಬ್ರಿಟನ್ನಿನ ಸ್ವಂತದ ಸಶಸ್ತ್ರಪಡೆಗಳವರೇ ನೌಕಾನೆಲೆಗಳಿಂದ ಹೊರಬಿದ್ದು ಬೀದಿಗಳಲ್ಲಿ ಹೋರಾಟ ನಡೆಸುತ್ತಿದ್ದ ಜನರ ಜೊತೆ ಸೇರಿದ್ದರು. ಇಂತಹ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತವು ಹಿಂದೆ ಸರಿಯುವುದಲ್ಲದೆ ಅದಕ್ಕೆ ಬೇರೆ ಮಾರ್ಗವೇ ಉಳಿದಿರಲಿಲ್ಲ. ಆದರೆ ಬ್ರಿಟಿಷರು ಎಷ್ಟೇ ನ್ಯಾಯಸಮ್ಮತವಾಗಿ ಗಂಭೀರವಾಗಿ ಹೊರಹೋದಂತೆ ಕಂಡರೂ ಅವರು ಒಡೆದು ಆಳುವ ನೀತಿಯನ್ನು ಬಳುವಳಿಯಾಗಿ ಬಿಟ್ಟುಹೋಗಿದ್ದರು. ಈಗ ಸ್ವಾತಂತ್ರ್ಯ ಬಂದಿತ್ತು. ಆದರೆ ಭಾರತ ಒಡೆದು ಎರಡು ಹೋಳಾಗಿತ್ತು. ಭಾರತ ತನ್ನ ಸ್ವಾತಂತ್ರ್ಯದ ಫಲವನ್ನು ಅನುಭವಿಸುವುದಕ್ಕೆ ಮೊದಲೇ, ಉದ್ಭವಿಸಿದ ಈ ಕಹಿಯನ್ನು ಹೇಗಾದರೂ ನಿವಾರಿಸಬೇಕಾದ್ದರಿಂದ, ಕ್ಷಣಕ್ಷಣಕ್ಕೂ ಆರೋಗ್ಯ ಕ್ಷೀಣಿಸುತ್ತಿದ್ದ ಗಾಂಧಿ ತಮ್ಮ ಅಂತಿಮ ಮಹಾನ್ ಹೋರಾಟ ನಡೆಸಿದ್ದರು.

ನೆಹರೂ ಭಾಷಣ ಮುಂದುವರೆಸುತ್ತ ‘ಮೂವತ್ತು ವರ್ಷಗಳ ಹಿಂದೆ ಗಾಂಧೀಜಿ ಈ ದೇಶದ ರಂಗದ ಮೇಲೆ ಕಾಣಿಸಿಕೊಂಡರು. ನೋಡಿದವರಿಗೆ ವಿಚಿತ್ರ ಎನ್ನಿಸುವ ವ್ಯಕ್ತಿ. ಉಡುಪಿನಲ್ಲಿ ಯಾವ ಸೌಂದರ್ಯವೂ ಇಲ್ಲ. ಮಾತಿನಲ್ಲಿ ಯಾವುದೇ ತೋರಿಕೆ ಇಲ್ಲ. ಅವರು ಉನ್ನತ ಹಂತದ ರಾಜಕೀಯ ವ್ಯವಹಾರಗಳಲ್ಲಿ ತೊಡಗಲಿಲ್ಲ. ಅವರು ಹೇಳಿದ್ದು ಇಷ್ಟೇ. ಸತ್ಯವನ್ನು ಬಿಡಬೇಡಿ. ನಮ್ಮ ಗುರಿ ಒಳ್ಳೆಯದಾಗಿದ್ದರೆ ಅದಕ್ಕೆ ನಾವು ಹಿಡಿಯುವ ದಾರಿಯೂ ನ್ಯಾಯಬದ್ಧವಾಗಿರಬೇಕು. ನಾವು ಸ್ವತಂತ್ರರಾಗಬೇಕಾದರೆ ಮೊದಲು ನಮ್ಮ ನಮ್ಮಲ್ಲಿರುವ ಬಂಧನಗಳನ್ನು ಬಿಡಿಸಿಕೊಳ್ಳಬೇಕು. ವಿಮೋಚಿತರಾದ ಜನರು ಮಾತ್ರ ಸ್ವತಂತ್ರ ಭೂಮಿಯ ಆಸ್ತಿವಾರವನ್ನು ಹಾಕಲು ಸಾಧ್ಯ. ಇದು ಗಾಂಧಿ ಬೋಧಿಸಿದ ಪಾಠ. ಋಜುಮಾರ್ಗವನ್ನು ಬಿಟ್ಟು ನಡೆದರೆ ನಮ್ಮ ನಾಶವಾದಂತೆಯೇ.

ಕತ್ತಲು ಪೂರ್ತಿ ಕವಿದಿತ್ತು. ನೆಹರೂ ಅಸ್ಪಷ್ಟವಾಗಿ ಕಾಣಿಸುತ್ತಿದ್ದರು. ಅವರ ದನಿ ಮಾತ್ರ ಕತ್ತಲನ್ನು ಸೀಳಿಕೊಂಡು ಬರುತ್ತಿತ್ತು. ಆಗ ಯಾರೋ ಒಬ್ಬ ವ್ಯಕ್ತಿ ತನ್ನ ಬೈಸಿಕಲ್ ಲೈಟನ್ನು ಹಾಕಿ ನೆಹರೂ ಕಡೆಗೆ ತಿರುಗಿಸಿದ. ಆಗ ಸಭೆಯಲ್ಲಿದ್ದ ಇತರ ಬೈಸಿಕಲ್‌ಗಳವರೂ ಬೈಸಿಕಲ್ ದೀಪ ಹಾಕಿ ಇದೇ ರೀತಿ ಸಭೆಯತ್ತ ತಿರುಗಿಸಿದರು. ಇಡೀ ಉದ್ಯಾನದಲ್ಲಿ ಮಿಣುಕು ಹುಳುಗಳು ಮಿನುಗುತ್ತಿರುವಂತೆ ಒಂದು ಮನೋಹರವಾದ ದೃಶ್ಯ ರೂಪುಗೊಂಡಿತು.

ನೆಹರೂ ಹೇಳುತ್ತಿದ್ದರು – ನಾನು ಧಾರ್ಮಿಕ ಶ್ರದ್ಧೆಯವನಲ್ಲ, ಆದರೆ ನಾವು ಪೂರ್ವದಲ್ಲಿ ಏನು ಕರ್ಮ ಮಾಡುತ್ತೇವೋ ಅದಕ್ಕೆ ತಕ್ಕ ಬೆಲೆ ಸಲ್ಲಿಸಬೇಕಾಗುತ್ತದೆ ಎಂಬುದನ್ನು ನಾನು ನಂಬುತ್ತೇನೆ. ಇಂತಹ ಕೃತ್ಯಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಅದು ಒಂದು ರಾಷ್ಟ್ರವೇ ಆಗಿರಲಿ, ದೇಶವೇ ಆಗಿರಲಿ ಅದು ಇಂದು ಏನು ಬಿತ್ತುತ್ತದೆ ಅದರ ಫಲವನ್ನು ನಾಳೆ ಅನುಭವಿಸಲೇಬೇಕು. ನಾವು ಸ್ವಾತಂತ್ರ್ಯ ಗಳಿಸಿರಬಹುದು. ಆದರೆ, ದುಃಖ ನಮ್ಮನ್ನು ಆವರಿಸಿದೆ. ನಾನು ಮತ್ತೆ ಮತ್ತೆ ಯೋಚಿಸುತ್ತೇನೆ. ನಮ್ಮ ಯಾವ ತಪ್ಪಿಗಾಗಿ ಇಂದಿನ ದುಃಸ್ಥಿತಿ ಒದಗಿತು?

ಭಾರತದ ಆಧ್ಯಾತ್ಮಿಕ ಮುಂದಾಳತ್ವದಲ್ಲಿ ಏಷಿಯನ್ ರಾಷ್ಟ್ರಗಳ ಮಹಾ ಒಕ್ಕೂಟ ಸ್ಥಾಪಿತವಾಗಬೇಕು ಎಂಬ ಕನಸನ್ನು ನೆಹರೂ ಕಂಡಿದ್ದರು. ಈ ವಿಷಯವನ್ನು ಇಂದಿನ ಭಾಷಣದಲ್ಲಿ ಅವರು ಪ್ರಸ್ತಾಪಿಸಬಹುದು ಎಂದು ನಾನು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಹೊಸ ಭಾರತವನ್ನು ಕುರಿತು, ಏಷಿಯಾದಲ್ಲಿ ಭಾರತ ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ಕುರಿತು ಮತ್ತು ಏಷಿಯಾದ ಮೂಲಕ ಜಗತ್ತಿನಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಕುರಿತು ತಮ್ಮ ಕನಸನ್ನು ನೆಹರೂ ವಿವರಿಸತೊಡಗಿದರು. ‘ನನ್ನ ಈ ಕನಸು ಈಗಲೂ ಇದೆ. ಅದು ಇನ್ನೂ ಅಳಿಸಿಹೋಗಿಲ್ಲ. ಆದರೆ ನನ್ನ ಒಂದೇ ಒಂದು ಆತಂಕವೇನೆಂದರೆ ನಮ್ಮ ಈ ಬದುಕಿನ ಅಲ್ಪಾಯುಷ್ಯದ ಅವಧಿಯಲ್ಲಿ ಅದು ನನಸಾಗುವುದನ್ನು ನೋಡುವ ಭಾಗ್ಯ ನಮಗಿದೆಯೇ?’

‘ನಮ್ಮ ಹೃದಯವನ್ನೇ ಒಡೆಯುವಂತಹ ಈ ನಿರಾಶಾದಾಯಕ ಸ್ಥಿತಿಯಲ್ಲಿ ಒಂದು ಭರವಸೆ ಏನೆಂದರೆ ಗಾಂಧಿಯಂತಹ ವ್ಯಕ್ತಿಯನ್ನು ಹುಟ್ಟುಹಾಕಿದ ಸತ್ವಶಾಲಿ ಭೂಮಿ ನಮ್ಮದು. ಇನ್ನೊಬ್ಬ ಗಾಂಧಿ ಇನ್ನೂ ಒಂದು ಸಾವಿರ ವರ್ಷಗಳ ನಂತರ ಹುಟ್ಟಬಹುದು. ಸದ್ಯಕ್ಕೆ ಗಾಂಧಿಯವರು ತಮ್ಮ ೭೦ ವರ್ಷಗಳ ಅನುಭವದಿಂದ ಕೊಟ್ಟಿರುವ ಮಾರ್ಗದರ್ಶನದಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳೋಣ. ಅವರು ನಮ್ಮನ್ನು ಹೊಸ ಗುರಿಯತ್ತ ಕೊಂಡೊಯುತ್ತಾರೆಯೇ ಹೊರತು ಭ್ರಮಾಲೋಕದ ಕಡೆಗಲ್ಲ” ಎಂದು ನೆಹರೂ ಮಾತು ಮುಗಿಸಿದರು.

ರಾತ್ರಿ ನಾನು ನೆಹರೂ ಅವರೊಂದಿಗೆ ಡಿನ್ನರ್ ವೇಳೆಗೆ ಭೇಟಿಯನ್ನು ಗೊತ್ತುಪಡಿಸಿದ್ದೆ. ನೆಹರೂ ಭಾಷಣ ಮುಗಿಯುತ್ತಿದ್ದಂತೆ ನಾನು ಬೇಗ ಬೇಗ ಆ ಜಾಗದಿಂದ ಹೊರಟೆ. ಜನರ ಹಾಗೂ ಬೈಸಿಕಲ್‌ಗಳ ಮಧ್ಯದಿಂದ ಜಾಗ ಮಾಡಿಕೊಂಡು ಹೋಗುವುದು ಪ್ರಯಾಸವೇ ಆಯಿತು. ಗೇಟಿನ ಬಳಿ ಬರುವಷ್ಟರಲ್ಲಿ ಅಲ್ಲೊಂದು ಘರ್ಷಣೆ ನಡೆಯುತ್ತಿತ್ತು. ಸಭೆಗೆ ಬರಲು ಪ್ರಯತ್ನಿಸುತ್ತಿದ್ದ ಸಿಖ್ಖರ ನಿಯೋಗವೊಂದು ತನಗೆ ಸ್ಥಳಾವಕಾಶ ಸಿಗಲಿಲ್ಲ ಎಂದು ಕೂಗಾಡುತ್ತಿತ್ತು. ‘ನಮಗೆ ಇಲ್ಲಿ ಜಾಗವಿಲ್ಲ. ನಮಗೆ ಭಾರತದಲ್ಲಿ ಜಾಗವಿಲ್ಲ, ಆದರೂ ಮುಸ್ಲಿಮರ ಬಗ್ಗೆ ಈ ನಾಯಕರು ಕೃಪೆ ತೋರಿಸುತ್ತಿದ್ದಾರೆ’ ಎಂಬುದು ಅವರ ಆಕ್ರೋಶ. ಪೊಲೀಸರು ಲಾಠಿ ಬೀಸತೊಡಗಿದ್ದರು.

ಇಷ್ಟಾಗುವಾಗ ಇದ್ದಕ್ಕಿದ್ದಂತೆ ನೆಹರೂ ನನ್ನ ಸಮೀಪವೇ ಬಂದಿದ್ದರು. ಮರುಕ್ಷಣವೇ ಗೇಟಿಗೆ ಅಂಟಿಕೊಂಡಿದ್ದ ಕಾಂಕ್ರೀಟ್ ಗೋಡೆ ಹತ್ತಿ ಸಮತೋಲನ ಮಾಡಿಕೊಂಡು ನಿಂತರು (ಆಗ ನೆಹರೂಗೆ ೫೯ರ ವಯಸ್ಸು ಅವರು ಪ್ರತಿದಿನವೂ ವ್ಯಾಯಾಮದ ಅಂಗವಾಗಿ ಶೀರ್ಷಾಸನ ಮಾಡುತ್ತಿದ್ದರು) ಆ ದೊಡ್ಡ ಜನರ ಗುಂಪನ್ನುದ್ದೇಶಿಸಿ ಹಾಸ್ಯಮಯ ಶೈಲಿಯಲ್ಲಿ ಮಾತಾಡಿದರು. ‘ನೋಡಿ ನಮ್ಮ ಹಿಂದೆ ಕೆಲವೇ ಲಾಠಿಗಳಿವೆ. ಆದರೆ ಮಹಾತ್ಮರ ಹಿಂದೆ ನೋಡಿ ಎಷ್ಟಿವೆ ಅಂತ!’ ಶ್ರೋತೃಗಳಿಗೆ ತಕ್ಕಂತೆ ನೆಹರೂ ಶೈಲಿ ಬದಲಾಗಿತ್ತು. ಅವರ ಸಾಮರ್ಥ್ಯಕ್ಕೆ ನಾನು ಬೆರಗಾದೆ. ಸಭೆಯಲ್ಲಿ ಮಾತಾಡುವಾಗ ಅವರು ಎಷ್ಟು ಗಂಭೀರವಾಗಿದ್ದರು. ಅವರ ಮಾತುಗಳು ಆಲೋಚನಾಪೂರಿತವಾಗಿದ್ದವು. ತಮ್ಮ ತಲೆಯಲ್ಲಿರುವ ಆಲೋಚನೆಗಳಿಗೆ ದನಿಕೊಡುವ ರೀತಿಯಲ್ಲಿ ಆ ನಿಶ್ಯಬ್ದ ಜನ ಸಮೂಹದೆದುರು ಅವರು ಮಾತಾಡಿದ್ದರು. ಈಗ ಇಲ್ಲಿ ಎಷ್ಟು ತಮಾಷೆಯಾಗಿ ಮುಕ್ತವಾಗಿ ಮಾತಾಡುತ್ತಿದ್ದಾರೆಂದರೆ ಗಲಾಟೆ ಮಾಡುತ್ತಿದ್ದ ಜನರನ್ನೆಲ್ಲ ಅವರ ಮಾತು ಆಕರ್ಷಿಸಿಬಿಟ್ಟಿತ್ತು.

ನೆಹರೂ ಇನ್ನೂ ಅಲ್ಲಿದ್ದ ಹಾಗೆಯೇ ನಾನು ಹೊರಟುಹೋದೆ. ರಾತ್ರಿ ಅವರನ್ನು ಊಟದ ವೇಳೆಯಲ್ಲಿ ಭೇಟಿ ಮಾಡಿದೆ. ಬೇಯಿಸಿದ ಮ್ಯಾಕ್ರೋನಿ ಊಟವನ್ನು ಮುಗಿಸಿ ನಾವು ಮೇಲೆದ್ದಾಗ ನೆಹರೂ ಹೇಳಿದರು ಈಗ ನಾನು ಉಪವಾಸ ಆರಂಭಿಸುತ್ತಿದ್ದೇನೆ. ಇಡೀ ದೆಹಲಿ ನಾಳೆ ಉಪವಾಸವಿರುತ್ತದೆ…..’ ನಾನು ಅಲ್ಲಿಂದ ಹೊರಡುವಾಗ ತುಂಬಾ ಚಿಂತಾಕ್ರಾಂತರಾಗಿದ್ದ ಕಾಂಗ್ರೆಸ್ ಪಕ್ಷದ ಒಬ್ಬ ಅಧಿಕಾರಿ ಬಂದರು. ಗಾಂಧಿಯವರ ತೂಕದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಅವರು ಆತಂಕಕಾರಿಯಾದ ಸುದ್ದಿ ತಂದಿದ್ದರು. ಇನ್ನು ಇಪ್ಪತ್ನಾಲ್ಕು ಗಂಟೆ ಮಾತ್ರ ಅವಕಾಶ. ಅನಂತರ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಹೇಳಿದರು.

ಮಾರನೇ ಬೆಳಿಗ್ಗೆ ನಾನು ಬಿರ್ಲಾ ಭವನಕ್ಕೆ ಹೋದೆ. ಕಾತರದಿಂದ ಕಾಯುತ್ತಿದ್ದ ಜನಗಳ ಜೊತೆಗೆ ನಿಂತುಕೊಂಡೆ. ಮಧ್ಯಾಹ್ನ ೧೨ ಗಂಟೆ ಕಳೆದು ಕೆಲವು ನಿಮಿಷಗಳಾಗಿರಬಹುದು. ಅಷ್ಟರಲ್ಲಿ ಒಳಗಿನಿಂದ ಹೆಂಗಸರು ಸಂತಸದಿಂದ ಚೀರಾಡಿದ್ದು ಕೇಳಿಸಿತು. ನಾನು ಕ್ಯಾಮರಾ ಹಿಡಿದು ಒಳಗೆ ಓಡಿದೆ. ಸುಶೀಲಾ, ಗಾಂಧಿಯವರ ಸೋದರಳಿಯನ ಮೊಮ್ಮಗಳು ಇನ್ನಿತರ ಹಲವರು ಅಲ್ಲಿದ್ದರು. ಪ್ರತಿಯೊಬ್ಬರೂ ಸಂತೋಷದಿಂದ ನಗುತ್ತಿದ್ದರು. ಉತ್ಸಾಹದಿಂದ ಚೀರಾಡುತ್ತಿದ್ದರು. ಗಾಂಧಿ ಉಪವಾಸವನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದರು.

ಶಾಂತಿ ಒಪ್ಪಂದದ ಕಾರ್ಯಕ್ರಮ ಸಿದ್ಧವಾಗಿತ್ತು. ಮೊದಲು ಎಂದೂ ಯಾವ ಒಪ್ಪಂದಕ್ಕೂ ಬರದ ಸಿಖ್ ಮತ್ತು ಹಿಂದೂ ಧರ್ಮದ ವಿವಿಧ ಬಣಗಳನ್ನು ಪ್ರತಿನಿಧಿಸುವ ನಾಯಕರು ಗಾಂಧಿಯವರ ಸಮ್ಮುಖದಲ್ಲಿ ಇದಕ್ಕೆ ಸಹಿ ಮಾಡಿದರು. ಈ ಪ್ರತಿನಿಧಿಗಳಲ್ಲಿ ಸುಧಾರಣವಾದಿಗಳು, ಫೆನೆಟಿಕ್‌ಗಳು ಎಲ್ಲ ಇದ್ದರು. ಪಟ್ಟಿಯ ಇನ್ನೊಂದು ತುದಿಯಲ್ಲಿದ್ದ ಸಹಿದಾರರೆಂದರೆ ಹಿಂದೂ ಪಾರಮ್ಯವನ್ನು ಎತ್ತಿ ಹಿಡಿಯುವ ಹಿಂದೂ ಮಹಾಸಭಾದ ಮುಖಂಡರು ಹಾಗೂ ಅಷ್ಟೇ ಮತನಿಷ್ಠೆಯ ಸಿಖ್ ಧರ್ಮದ ಅಕಾಲಿ ಶಾಹಿದಿ ಜಾತಾದವರು. ಎಂದೂ ಯಾರಿಗೂ ಕಾಣಿಸಿಕೊಳ್ಳದ ಮತ್ತು ಬಹುತೇಕ ನಿಗೂಢವೇ ಆಗಿದ್ದ ಆರ್.ಎಸ್.ಎಸ್. ಅಧ್ಯಕ್ಷರೇ ಸ್ವತಃ ಆ ಬೆಳಿಗ್ಗೆ ಅಲ್ಲಿ ಸಹಿ ಮಾಡಲು ಬಂದಿದ್ದರಂತೆ. ಇದನ್ನು ಕೇಳಿದಾಗ ಗಾಂಧಿ ನಿಜವಾಗಿ ಪವಾಡವನ್ನೇ ಸಾಧಿಸಿದ್ದಾರೆ ಅಥವಾ ಆರ್.ಎಸ್.ಎಸ್. ನಾಯಕರು ಇಲ್ಲಿ ವ್ಯಂಗ್ಯ ಮಾಡಿದ್ದಾರೆ ಎಂದು ನನಗನ್ನಿಸಿತು. ಆರ್.ಎಸ್.ಎಸ್. ಬಣದವರ ಧ್ಯೇಯವಾಕ್ಯ ‘ಇಸ್ಲಾಮನನ್ನು ಬುಡಸಮೇತ ನಿರ್ಮೂಲ ಮಾಡಬೇಕು’ ಎಂಬುದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತ್ತ.

ಪಾಕಿಸ್ತಾನದ ಹೈಕಮಿಷನರ್ ಕೂಡ ಖುದ್ದಾಗಿ ಬಂದಿದ್ದರು. ಪಾಕಿಸ್ತಾನ ಹಾಗೂ ಭಾರತದಲ್ಲಿರುವ ಗಾಂಧಿ ಅನುಯಾಯಿಗಳಿಂದ ಟೆಲಿಗ್ರಾಮುಗಳ ಮಹಾಪೂರವೇ ಹರಿದು ಬಂದಿತ್ತು. ಡೆಸ್ಕು ಮೇಜು ಕಿಟಕಿಯ ಕಟ್ಟೆ…. …. ಎಲ್ಲೆಲ್ಲೂ ಟೆಲಿಗ್ರಾಮುಗಳು.

ಕೋಣೆಯ ಮೂಲೆಯಲ್ಲಿದ್ದ ನೆಲದ ಮೇಲೆ ಕುಳಿತಿದ್ದ ಗಾಂಧೀಜಿ ಸಣಕಲು ಕೈಯಲ್ಲಿ ಟೆಲಿಗ್ರಾಂ ಹಿಡಿದು ಮುಗುಳ್ನಗುತ್ತಿದ್ದರು.

ಆಭಾ, ಹಣ್ಣಿನರಸದ ಉದ್ದನೆಯ ಗಾಜಿನ ಲೋಟಾ ಹಿಡಿದುಕೊಂಡು ಬಂದಳು. ಗಾಂಧಿಯ ಮುಂದೆ ಅವಳು ಮೊಣಕಾಲೂರಿ ಕುಳಿತಾಗ ಗಾಂಧಿ ಅವಳಿಗೆ ಮುದ್ದುಕೊಟ್ಟರು. ಹಣ್ಣಿನ ರಸದ ಮೊದಲ ಗುಟುಕನ್ನು ಕುಡಿಯುವ ಮೊದಲೇ ಮೈಕ್ ಎಲ್ಲಿ ಎಂದು ಕೇಳಿದರು. ಜನಸೇನೆಗೆ ಈಗಲೂ ಜನರಲ್ ಆಗಿಯೇ ಉಳಿದ ಗಾಂಧಿ, ಉಪವಾಸ ನಿಲ್ಲಿಸುವ ನಿರ್ಧಾರವನ್ನು ತಮಗಾಗಿ ಕಾಯುತ್ತಾ ಕುಳಿತ ಜನರಿಗೆ ಮೊದಲು ತಿಳಿಸಬೇಕಾದ ಕರ್ತವ್ಯವನ್ನು ಮರೆಯಲಿಲ್ಲ. ಅತ್ಯಂತ ಕ್ಷೀಣ ದನಿಯಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದರು. ಸಂಪುಟದಲ್ಲಿದ್ದ ಮುಸ್ಲಿಂ ಸಚಿವ ಮೌಲಾನಾ ಆಜಾದ್ ಹಾಗೂ ಪಂಡಿತ್ ನೆಹರೂ ಒಬ್ಬರಾದ ನಂತರ ಒಬ್ಬರಂತೆ ಹಣ್ಣಿನ ರಸವನ್ನು ಗಾಂಧಿಯವರಿಗೆ ಕೊಡುವ ಸಂಪ್ರದಾಯ ಮಾಡಿದರು. ಅನಂತರ ಹೆಂಗಸರು ಕಿತ್ತಳೆಯ ತೊಳೆಗಳಿದ್ದ ದೊಡ್ಡ ದೊಡ್ಡ ಟ್ರೇಗಳನ್ನು ತಂದರು. ಗಾಂಧಿ ಅದರ ಮೇಲೆ ಕೈ ಇಟ್ಟಾಗ ಅದು ಗಾಂಧೀ ಪ್ರಸಾದವಾಯಿತು. ಎಲ್ಲರ ಮುಂದೂ ತಟ್ಟೆಗಳನ್ನು ಹಿಡಿದಾಗ ಎಲ್ಲರೂ ಕಾತರದಿಂದ ಕೈಚಾಚಿ ತೆಗೆದುಕೊಂಡರು. ತಮಗೆ ಸಿಕ್ಕ ತೊಳೆಯ ಚೂರುಗಳನ್ನು ಪಕ್ಕದವರಿಗೂ ಹಂಚಿದರು. ಮೇಜಿನ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದ ವಿದೇಶಿಯಳಾದ ನನಗೂ ಕೂಡ ಗಾಂಧಿ ಪ್ರಸಾದವನ್ನು ಕೊಡಲು ಅವರು ಮರೆಯಲಿಲ್ಲ. ಗಾಂಧಿಯವರ ಉಪವಾಸ ಇq ರಾಷ್ಟ್ರದ ಭಾವನೆಗಳನ್ನು ಕಲಕಿತ್ತು. ಆತ್ಮಶೋಧನೆಗೆ ಪ್ರೇರಣೆ ನೀಡಿತ್ತು. ಯಾವಾಗಲೂ ಆಸ್ಫೋಟಿಕ ಸ್ಥಿತಿಯಲ್ಲಿ ಇರುತ್ತಿದ್ದ ಕೆಲವು ಗಡಿ ಪ್ರದೇಶಗಳಲ್ಲಿ ಹಾಗೂ ಎಲ್ಲಿ ನಿರಾಶ್ರಿತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರೋ ಅಂಥ ಎಲ್ಲೋ ಒಂದೆರಡು ಕಡೆ ಕೆಲವು ಹಿಂಸಾತ್ಮಕ ಘಟನೆಗಳು ನಡೆದದ್ದನ್ನು ಹೊರತುಪಡಿಸಿದರೆ ಗಾಂಧೀಜಿಯವರು ತಮ್ಮ ಜೀವವನ್ನೇ ಪಣವಾಗಿಟ್ಟು ಆಚರಿಸಿದಂಥ ಈ ಉಪವಾಸ ತನ್ನ ಕೆಲಸವನ್ನು ಸಾಧಿಸಿತ್ತು. ಇಡೀ ದೇಶದ ಅಂತರಂಗದ ಆಳವನ್ನು ಕಲಕಿತ್ತು. ಜನ ಶಾಂತಿಯತ್ತ ಮನಸ್ಸು ಮಾಡಿದ್ದರು.

ಹಿಂದೂ ಪಂಡಿತರು ಜ್ಯೋತಿಷ್ಯ ಗ್ರಂಥಗಳನ್ನು ತಡಕಾಡಿ, ಗಾಂಧಿಯವರಿಗೆ ಒಂದೂ ನೂರಾ ಇಪ್ಪತ್ತೈದು ವರ್ಷಗಳಷ್ಟು ಆಯಸ್ಸಿದೆ ಎಂದು ಅರ್ಥಹಚ್ಚಿ ಹೇಳಿದರು. ಅವರ ಪ್ರಕಾರ ಇದು ಗಾಂಧಿಯವರ ಕನಿಷ್ಠ ವಯಸ್ಸು ನೂರಾ ಮೂವತ್ತು ವರ್ಷಗಳವರೆಗೂ ಗಾಂಧಿ ಬದುಕಬಹುದು ಎಂಬ ಆಶಾವಾದವನ್ನೂ ಅವರು ಸೂಚಿಸಿದ್ದರು.

ಆದರೆ ಜೀವನದ ಅಡಿಪಾಯವೇ ತಲೆಕೆಳಗಾಗಿ ಬೇರೆ ದಾರಿಯೇ ಕಾಣದಂಥ ನಿರಾಶ್ರಿತರನ್ನು ಒಳಗೊಂಡ ಆರ್.ಎಸ್.ಎಸ್.ನ ಉಗ್ರ, ಉತ್ಸಾಹೀ ಯುವ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅವರು ದಿನವೂ ಸಿಗುವ ಹಾಲಿಗಾಗಿ, ದೈಹಿಕ ವ್ಯಾಯಾಮಕ್ಕಾಗಿ ಒಂದು ಕಡೆ ಸೇರುತ್ತಿದ್ದರು. ಎರಡು ಸಾವಿರ ವರ್ಷಗಳ ಹಿಂದಿನ ಪರಿಶುದ್ದ ಹಿಂದೂ ಧರ್ಮದ ವೈಭವವನ್ನು ಕುರಿತು ತಮ್ಮ ಕಲ್ಪನೆಗಳಲ್ಲಿ ಮೈಮರೆಯುತ್ತಿದ್ದರು.

* * *