ಗಾಂಧೀಜಿಯ ಉಪವಾಸದಾದ್ಯಂತವೂ ಹಾಗೂ ಮತೀಯ ಐಕ್ಯತೆಗಾಗಿ ಅವರು ಸಾರಿದ ಯುದ್ಧದಾದ್ಯಂತವೂ ಒಂದು ಗುಂಪು ಮಾತ್ರ. ಸದಾಕಾಲ ಗಾಂಧೀಜಿಯವರ ಬೆಂಬಲಕ್ಕಿತ್ತು. ಈ ಗುಂಪಿನ ಸದಸ್ಯರಿಗೆ ಮಹಾತ್ಮರ ಕೆಲವೊಂದು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇತ್ತಾದರೂ ಅವರು ಗಾಂಧಿಯವರಿಗೆ ಸತತ ಒತ್ತಾಸೆಯಾಗಿ ನಿಂತರು. ಹೀಗೆ ಒತ್ತಾಸೆಯಾಗಿ ನಿಂತ ಗುಂಪೇ ಕಾರ್ಮಿಕ ವರ್ಗ.

ಮತೀಯ ಹೆಸರಿನಲ್ಲಿ ಅತ್ಯಂತ ಪೈಶಾಚಿಕ ಸ್ವರೂಪದ ಗಲಭೆ ಹೋರಾಟಗಳು ನಡೆದಾಗ ಈ ಮಹಾಸನ್ನಿಯಿಂದ ದೂರ ನಿಂತ ವರ್ಗವೆಂದರೆ ಕಾರ್ಮಿಕ ವರ್ಗ. ಹಿಂದೂ ಮುಸ್ಲಿಂ ದ್ವೇಷದ ಸೋಂಕು ಇವರಿಗೆ ತಟ್ಟಲೇ ಇಲ್ಲ ಎನ್ನಬಹುದು. ಇದು ಸಹಜವೇ ಆಗಿತ್ತು. ಯಾಕೆಂದರೆ ಮಾಲೀಕರು ಮತ್ತು ಕಾರ್ಮಿಕ ಸಂಬಂಧದ ಮೇಲೆ ಊಳಿಗಮಾನ್ಯ ಪದ್ಧತಿಯ ಕರಾಳ ನೆರಳು ಇನ್ನೂ ಹಾಗೇ ಉಳಿದಿದ್ದ ಸಂದರ್ಭದಲ್ಲಿ ಕಾರ್ಮಿಕ ವರ್ಗವು ಆ ಸಂಬಂಧವಾಗಿ ಮಾಡಬೇಕಾಗಿದ್ದ ಹೋರಾಟವೇ ಸಾಕಷ್ಟಿತ್ತು. ಕಾರ್ಮಿಕ ಸಂಘಟನೆಯನ್ನು ದುರ್ಬಲಗೊಳಿಸುವುದಕ್ಕೆ ಅಥವಾ ಅಲ್ಲಿ ಮುಷ್ಕರವೇಳುವಂತೆ ಮಾಡುವುದಕ್ಕೆ ಮತೀಯ ಗಲಭೆಗಳನ್ನು ಬಳಸಿಕೊಂಡ ಸಂದರ್ಭಗಳನ್ನು ಅವರು ಕಂಡಿದ್ದರು. ಹೀಗಾಗಿ ಗಾಂಧೀಜಿಯವರ ಉಪವಾಸ ಸಂದರ್ಭದಲ್ಲಿ ಬಿರ್ಲಾ ಗೇಟುಗಳೊಳಗೆ ಪ್ರವೇಶಿಸಿದ ಶಾಂತಿ ಸಂದೇಶದ ಮೆರವಣಿಗೆಗಳಲ್ಲಿ ಕಾರ್ಮಿಕ ಸಂಘಟನೆಗಳ ಮೆರವಣಿಗೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಬಸ್ಸು ಮತ್ತು ಟ್ರಾಮ್‌ಕಾರು ಆಪರೇಟರುಗಳು, ಲೋಕೋಮೊಟಿವ್‌ಗಳ ನಿರ್ವಹಣಾ ಅನುಪಾಲನಾ ಕಾರ್ಮಿಕರು, ಅಚ್ಚುಮೊಳೆ ಜೋಡಿಸುವವರು. ಸರ್ಕಾರಿ ಗುಮಾಸ್ತರು….. ಹೀಗೆ ಅನೇಕ ಸಂಘಟನೆಗಳವರು ತಮ್ಮ ತಮ್ಮ ಬ್ಯಾನರುಗಳನ್ನು ಹಿಡಿದುಕೊಂಡು ಬಂದಿದ್ದರು. ಎಲ್ಲ ಕಾರ್ಮಿಕ ಸಂಘಟನೆಗಳವರೂ ಶಾಂತಿ ಪಾಲಿಸುತ್ತೇವೆ ಎಂಬ ಪ್ರಮಾಣ ವಚನದೊಂದಿಗೆ ತಮ್ಮ ನಿಯೋಗಗಳನ್ನು ಕಳಿಸಿದ್ದರು. ಗಾಂಧೀಜಿಯವರ ಜೀವವನ್ನು ಉಳಿಸಿಕೊಳ್ಳಬೇಕೆಂಬ ಮನವಿಯನ್ನು ಕಳಿಸಿದ್ದರು. ಆದರೆ ಇವುಗಳಲ್ಲಿ ಅಗತ್ಯವಾಗಿ ಇರಲೇಬೇಕಾದ ಒಂದು ಸಂಘಟನೆ ಮಾತ್ರ ಇರಲಿಲ್ಲ. ಅದರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಹೀಗೆ ಗೈರುಹಾಜರಾಗಿದ್ದ ಸಂಘಟನೆ ಯಾವುದೆಂದರೆ ಎಲ್ಲವುಗಳಿಗಿಂತ ಬಹು ದೊಡ್ಡದಾದ ಜವಳಿ ಕಾರ್ಮಿಕರದು. ಜವಳಿ ಉದ್ಯಮವು ದೆಹಲಿಯಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ಬಹು ದೊಡ್ಡ ಉದ್ಯಮವೆನಿಸಿಕೊಂಡಿತ್ತು ಮತ್ತು ಭಾರತದ ಅತಿ ದೊಡ್ಡ ಜವಳಿ ಗಿರಣಿಯ ಮಾಲೀಕರು ಶ್ರೀ ಬಿರ್ಲಾ. ಉಪವಾಸ ಆರಂಭವಾದ ನಂತರ ಕೆಲವೊಂದು ನೇಕಾರರು ವೈಯಕ್ತಿಕವಾಗಿ ಬಿರ್ಲಾ ಭವನದೊಳಗೆ ಬಂದಿದ್ದರು. ಆದರೆ ಇಂತಹ ಒಂದು ಅತಿದೊಡ್ಡ ಸಂಘಟನೆಯ ಸಂಘಟಿತ ರೂಪದ ಮೆರವಣಿಗೆ ಬಿರ್ಲಾ ಗೇಟಿನೊಳಗೆ ಬರಲೇ ಇಲ್ಲ.

ಇದು ನನಗೆ ಬಹಳ ಕುತೂಹಲಕಾರಿಯಾಗಿ ಕಂಡಿತು. ಉಪವಾಸದ ಭರಾಟೆ ಎಲ್ಲ ಶಾಂತವಾದ ನಂತರ ಒಂದು ದಿನ ಹಳೇ ದೆಹಲಿಯ ದೂರದ ಮೂಲೆಯಲ್ಲಿರುವ ಗಿರಣಿ ಜಿಲ್ಲೆಗೆ ಹೋದೆ. ದೆಹಲಿ, ಹೇಗೆ ಹೇಗೋ ಚಾಚಿಕೊಂಡಿರುವ ಬಹುದೊಡ್ಡ ನಗರ. ಅದು ವಾಸ್ತವವಾಗಿ ಒಟ್ಟು ಎಂಟು ನಗರಗಳು ಸೇರಿ ಆದ ಒಂದು ಸಂಯುಕ್ತ ನಗರ. ಇದರಲ್ಲಿ ಏಳು ನಗರಗಳು ಹಳೆಯವು. ಒಂದು ಹೊಸದು. ಹೊಸದೆಹಲಿಯಿಂದ ದೂರದ ಕಾರ್ಖಾನೆ ಸ್ಥಳಗಳ ಭಯಾನಕ ರಸ್ತೆಗಳು, ಇಕ್ಕಟ್ಟಿನ ಓಣಿಗಳನ್ನು ನೋಡುತ್ತಿದ್ದಂತೆ ದೆಹಲಿಯ ಕಣ್ಣುಕೋರೈಸುವ ಆಧುನಿಕ ಸರ್ಕಾರಿ ಕಟ್ಟಡಗಳು, ಬಹು ಅಂತಸ್ತುಗಳ ಹೋಟೆಲುಗಳು, ರಾಜ ಮಹಾರಾಜರುಗಳ ಭವ್ಯ ಗುಮ್ಮಟದ ಅರಮನೆಗಳು ಮರೆತೇ ಹೋಗುತ್ತವೆ.

ಬಿರ್ಲಾ ಮಾಲಿಕತ್ವದ ಬಹುದೊಡ್ಡ ಗಿರಣಿಗಳೆಲ್ಲ ಇರುವುದು ಶಾಬ್ದಿ ಮಂಡಿಯಲ್ಲಿ. ಅಲ್ಲಿನ ಪೇಟೆ ಪ್ರದೇಶದ ಅಂಕುಡೊಂಕಿನ ಇಕ್ಕಟ್ಟಿನ ರಸ್ತೆಗಳಲ್ಲಿ ಟ್ರಾಮ್ ಕಾರುಗಳು, ಬಸ್ಸುಗಳು, ಎತ್ತಿನ ಬಂಡಿಗಳು, ಕುದುರೆಗಾಡಿಗಳು ಒಂದನ್ನೊಂದು ಉಜ್ಜಿಕೊಂಡೇ ಹೋಗಬೇಕು. ಕಾರ್ಖಾನೆ, ಅಂಗಡಿ, ಉಪಾಹಾರದ ಸ್ಥಳಗಳ ನಡುವೆ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ಉಸಿರುಕಟ್ಟಿದಂತೆ ಸಿಕ್ಕಿ ಹಾಕಿಕೊಂಡಿರುವ ಕಾರ್ಮಿಕರ ವಸತಿಗಳು.

ಇಂತಹ ಒಂದು ವಸತಿ ಸ್ಥಳಕ್ಕೆ ನಾನು ಹೋದೆ. ನನ್ನ ಅದೃಷ್ಟಕ್ಕೆ ಇಂಗ್ಲಿಷ್ ಅರ್ಥವಾಗುವ ಯಾರಾದರೊಬ್ಬ ವ್ಯಕ್ತಿ ಸಿಗಬಹುದೇ ಎಂದು ನಿರೀಕ್ಷಿಸುತ್ತ ಸಂದಿಗೊಂದಿಗಳನ್ನು ನುಗ್ಗಿಕೊಂಡು ಹೋಗುತ್ತಾ ಸಣ್ಣಸಣ್ಣ ಬಿಲಗಳಂತಹ ಕೋಣೆಗಳಿರುವ ಜಾಗಕ್ಕೆ ಕಾಲಿಟ್ಟೆ. ಇಂತಹ ಸಾಲುಸಾಲು ಮನೆಗಳಿರುವುದನ್ನು ಬಸ್ತಿ ಎನ್ನುತ್ತಾರೆ. ಅಲ್ಲಿ ಒಂದು ಕಡೆ ನೀರಿನ ನಲ್ಲಿ. ಅದರ ಪಕ್ಕದ ಮಣ್ಣುದಿಬ್ಬದ ಮೇಲೆ ಹಲವು ಮಂದಿ ಗಂಡಸರು, ಹೆಂಗಸರು, ಮಕ್ಕಳು ನಿಂತೋ ಕುಳಿತೋ ಇದ್ದರು.

ನಾನು ಆ ಜಾಗಕ್ಕೆ ಕಾಲಿಟ್ಟ ಕೂಡಲೇ ನೂರಾರು ಮಂದಿ ನನ್ನನ್ನು ಪ್ರಶ್ನಾರ್ಥಕವಾಗಿ ಸುತ್ತುವರೆದರು. ಅವರು ನನ್ನನ್ನು ನಾನು ಅವರನ್ನು ಕುತೂಹಲದಿಂದ ನೋಡುತ್ತಾ ನಿಂತೆವು. ಇವರು ಅದೇ ಜನ. ಜಗತ್ತಿನ ಯಾವುದೇ ಊರಿನ ಗಿರಣಿ ಪ್ರದೇಶಗಳಲ್ಲಿ ಕಾಣುವಂತಹ ಬಡಕಲು ದೇಹ, ಉಬ್ಬಿದ ನರಗಳು, ಕುಶಲ ಕೈಗಳು, ಕಾತರ ನಿರೀಕ್ಷೆ ತುಂಬಿದ ಕಣ್ಣಿನ ಚುರುಕು ಜನ. ಇವರೆಲ್ಲ ಇವರಿಗೇ ವಿಶಿಷ್ಟವಾದ ಸೀರೆ, ಧೋತಿಗಳಲ್ಲಿದ್ದರು ಮತ್ತು ಸಾಮಾನ್ಯವಾಗಿ ಗಿರಣಿ ಕೆಲಸದಲ್ಲಿ ಬಿಳುಚಿಕೊಂಡ, ಬಣ್ಣವನ್ನು ಮರೆಮಾಚುವ ಕಪ್ಪುಚರ್ಮದವರು ಎಂಬುದೊಂದು ವ್ಯತ್ಯಾಸ ಬಿಟ್ಟರೆ ನಾನು ಫೋಟೋ ತೆಗೆಯಲು ಭೇಟಿ ನೀಡಿದ ಯೂರೋಪಿನ್ ನೂರಾರು ಕಾರ್ಖಾನೆ ಪ್ರದೇಶಗಳಲ್ಲಿನ ಯಾವುದೋ ಒಂದು ಪ್ರದೇಶದಲ್ಲಿದ್ದೇನೆ ಅಂತಲೇ ಅನ್ನಿಸುತ್ತಿತ್ತು. ನನ್ನ ಬಗ್ಗೆ ಇವರಿಗಿದ್ದ ಅಚ್ಚರಿ ತಣ್ಣಗಾಗುತ್ತಿದ್ದಂತೆ ಅವರಿಗೂ ನನಗೂ ಇದ್ದ ಅಡೆತಡೆ ಮಾಯವಾಯಿತು. ನಮ್ಮನ್ನು ನೋಡುವುದಕ್ಕೆ ಯಾರು ಬರುತ್ತಾರೆ ಎಂದು ಒಬ್ಬ ವ್ಯಕ್ತಿ ಹೇಳಿದ. ಹಾಗೆ ಹೇಳಿದ ವ್ಯಕ್ತಿಯ ಕೆಲಸ ಸೀರೆಯ ಅಂಚುಗಳಿಗಾಗಿ ಮಗ್ಗಗಳಲ್ಲಿ ಬಣ್ಣದ ದಾರಗಳನ್ನು ಅಣಿಗೊಳಿಸುವುದು. ಸಣ್ಣ ನೀಲಿ ಅಥವಾ ಕೆಂಪು ನೇಯ್ಗೆಯ ಅಂಚಿನ ಬಿಳಿಯ ಸೀರೆಗಳು ಇಲ್ಲಿ ಹತ್ತಿರವೇ ಇದ್ದ ಒಂದಾನೊಂದು ಬಿರ್ಲಾ ಗಿರಣಿಯ ಮುಖ್ಯ ಉತ್ಪಾದನೆ. ಮಾತಾಡಿದ ವ್ಯಕ್ತಿಯ ಹೆಸರು ರಾಮದಾಸ್. ಅವನು ಚಿಕ್ಕ ಹುಡುಗನಾಗಿದ್ದಾಗ ಯಾವುದೋ ಇಂಗ್ಲಿಷ್ ಕುಟುಂಬದಲ್ಲಿ ಸೇವಕನಾಗಿದ್ದನಂತೆ. ಹೀಗಾಗಿ ಅವನಿಗೆ ಅಲ್ಪಸ್ವಲ್ಪ ಇಂಗ್ಲಿಷ್ ಅರ್ಥವಾಗುತ್ತಿತ್ತು. ರಾಮದಾಸ್‌ನ ಭಾಷಾಂತರದ ನೆರವಿನಂತೆ ನನ್ನ ಹಾಗೂ ಗಿರಣಿ ಕಾರ್ಮಿಕರ ಸಂಭಾಷಣೆ ಮುಂದಕ್ಕೆ ಬೆಳೆಯಿತು.

ನಾನು ಇಲ್ಲಿಗೆ ಯಾಕೆ ಬಂದೆ ಎನ್ನುವುದನ್ನು ಅವರಿಗೆ ಹೇಳಬೇಕಿರಲಿಲ್ಲ. ಯಾಕೆಂದರೆ ಗಾಂಧಿಯವರ ಇತ್ತೀಚಿನ ಉಪವಾಸದ ವಿಷಯ ಎಲ್ಲರ ಬಾಯಲ್ಲಿಯೂ ಇದ್ದ ಮಾತು. ಗಾಂಧಿಯ ಹೆಸರು ಪ್ರಸ್ತಾಪಿತವಾಗುತ್ತಿದ್ದಂತೆ ರಾಮದಾಸ್ ಭಾಷಾಂತರಿಸುವುದಕ್ಕೂ ಮೊದಲೇ ಎಲ್ಲರೂ ಅವರ ಅಭಿಪ್ರಾಯ ಹೇಳತೊಡಗಿದರು. ‘ಗಾಂಧೀಜಿ ಈ ದೇಶಕ್ಕೆ ಒಳ್ಳೆಯವರಿರಬಹುದು. ಆದರೆ ನಮಗಲ್ಲ. ಯಾಕೆಂದರೆ ಅವರು ಬಿರ್ಲಾ ಮನೆಯಲ್ಲಿದ್ದಾರೆ’ ಇನ್ನೊಬ್ಬ ಹೇಳಿದ ‘ಗಾಂಧೀಜಿ ಬಹುದೊಡ್ಡ ಮನುಷ್ಯನಿರಬಹುದು. ಆದರೆ ನಮಗಾಗಿ ಏನೂ ಮಾಡಲಿಲ್ಲ. ಅವರು ಬಿರ್ಲಾ ಋಣದಲ್ಲಿದ್ದಾರೆ. ಅವನ ಅನ್ನ ತಿನ್ನುತ್ತಿದ್ದಾರೆ. ಹೀಗಿದ್ದಾಗ ನಮಗೆ ಏನು ಸಹಾಯ ಮಾಡುತ್ತಾರೆ? ಇಲ್ಲಿ ಗುಂಡು ಹಾರಿಸಿದಾಗಲೂ ಅವರು ಸುಮ್ಮನಿದ್ದರು’. (ನಾನು ಈ ಬಗ್ಗೆ ವಿವರವಾಗಿ ವಿಚಾರಿಸೋಣ ಎಂದುಕೊಂಡೆ. ಅಷ್ಟರಲ್ಲಿ ಮಾತು ಮುಂದಕ್ಕೆ ಹೋಯಿತು.) ‘ಗಾಂಧೀಜಿ ಬಿರ್ಲಾ ಮನೆಯಲ್ಲಿದ್ದಾರೆ. ಆತನಿಗೆ ಅವರಿಂದ ಏನೋ ಅನುಕೂಲ ಆಗುತ್ತಿರಬೇಕು’. ಕಾರ್ಮಿಕರಿಗಂತೂ ಬಿರ್ಲಾ ಒಳ್ಳೆಯವನಲ್ಲ. ಆದರೆ ಹೊರ ಜಗತ್ತಿಗೆ ಬಹುದೊಡ್ಡ ಮನುಷ್ಯನಂತೆ ತೋರಿಸಿಕೊಳ್ಳುತ್ತಾನೆ. ತನ್ನ ದೊಡ್ಡಸ್ತಿಕೆ ತೋರಿಸುವುದಕ್ಕಾಗಿ ದೇವಸ್ಥಾನಗಳನ್ನು ಕಟ್ಟಿಸುತ್ತಾನೆ.’

ಬಿರ್ಲಾ ನಿರ್ಮಾಣದ ದೇವಸ್ಥಾನಗಳನ್ನು ನೋಡಿದವರು ಅವುಗಳ ಸೌಂದರ್ಯವನ್ನು ಮರೆಯುವಂತಿಲ್ಲ. ನವದೆಹಲಿಯಲ್ಲಿ ಬಿರ್ಲಾಗಳು ದೇವಸ್ಥಾನ ಕಟ್ಟಿಸಿದ್ದನ್ನು ಬಹುದೊಡ್ಡ ಧಾರ್ಮಿಕ ಕಾರ್ಯ ಎಂದು ಜನ ಭಾವಿಸಿದ್ದರು. ಈ ಜವಳಿ ಜಗತ್ತಿನ ಮಹಾರಾಜನ ಹಿರಿಯ ಸೋದರ ತುಂಬಾ ಆಸ್ತಿಕನಾದ ಹಿಂದೂವಾಗಿದ್ದು ಆತ ಇಷ್ಟು ಭವ್ಯವಲ್ಲದಿದ್ದರೂ ಇನ್ನು ಅನೇಕ ಕಡೆ ಇಂಥದೇ ದೇವಾಲಯಗಳನ್ನು ನಿರ್ಮಿಸಿದ್ದರು.

‘ಆ ದೇವಸ್ಥಾನಗಳನ್ನು ಕಟ್ಟಿದ್ದು ನಮ್ಮ ಬೆವರಿನಿಂದ’ ಎಂದು ಆ ಜನ ಹೇಳಿದರು. ಮಹಾಯುದ್ಧದ ವರ್ಷಗಳಲ್ಲಿ ಅಧಿಕೃತ ಸರ್ಕಾರಿ ಲೆಕ್ಕ ಪರಿಶೋಧನೆಗಳ ಪ್ರಕಾರ ಜವಳಿ ಕೈಗಾರಿಕೆಗೆ ಶೇಕಡ ೫೦೦ ರಿಂದ ೭೦೦ ರಷ್ಟು ಲಾಭ ಗಳಿಕೆಯಾಗಿತ್ತು. ‘ನಮಗೇಕೆ ಬೇಕು ಈ ದೇವಸ್ಥಾನಗಳು. ಬೆವರು ಸುರಿಸಿ ಕೆಲಸ ಮಾಡುವ ಜನಕ್ಕೆ ‘ದೇವಸ್ಥಾನ ಕಟ್ಟಿಕೊಂಡು ಏನಾಗಬೇಕು?’ ‘ಅದೇ ಮರ, ಕಾಂಕ್ರೀಟ್ ಹಾಕಿ ನಮಗೆ ಸ್ವಲ್ಪವಾದರೂ ಚೆನ್ನಾಗಿರುವ ಮನೆಗಳನ್ನು ಕಟ್ಟಿಕೊಡಬಹುದಲ್ಲ’. ಇನ್ನೂರೈವತ್ತು ಜನಕ್ಕೆ ಒಂದೇ ಕಕ್ಕಸು’ ಎಂದು ಅವರು ಬಾಗಿಲೇ ಇಲ್ಲದ ಒಂದು ಹಳೆಯ ಕೋಣೆಯತ್ತ ಬೆರಳು ಮಾಡಿ ತೋರಿಸಿದರು. ಅಲ್ಲಿ ಗೋಪ್ಯತೆಗೆ ಅವಕಾಶವೇ ಇರಲಿಲ್ಲ. ಹೆಂಗಸರೂ ಅದನ್ನೇ ಬಳಸಬೇಕಿತ್ತು. ಧರ್ಮಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಮಾನಕ್ಕೆ ಕೊಡುವ ಹಿಂದೂ ಹೆಂಗಸರ ಸ್ಥಿತಿ ಹೇಗಿರಬಹುದು? ಅಲ್ಲಿ ಒಂದೇ ಒಂದು ನಲ್ಲಿ ಇತ್ತು. ಅರವತ್ತು ಮನೆಗಳಿಗೆ ಅದೊಂದೇ ನಲ್ಲಿ. ಸ್ನಾನಕ್ಕೆ ಎಲ್ಲಿಯೂ ಪ್ರತ್ಯೇಕ ಜಾಗವಿರಲಿಲ್ಲ. ದಿನವೂ ಸ್ನಾನ ಎಂಬುದೂ ಕೂಡ ಹಿಂದೂಗಳಿಗೆ ಒಂದು ಧಾರ್ಮಿಕ ವಿಧಿ. ಶುಚಿತ್ವಕ್ಕೂ ದೈವತ್ವಕ್ಕೂ ಇಷ್ಟೊಂದು ನಿಕಟ ಸಂಬಂಧವಿರುವಾಗ ಕೇವಲ ಒಂದು ನಲ್ಲಿಯಲ್ಲಿ ಇಷ್ಟು ಜನರ ಅಗತ್ಯ ಪೂರೈಸುವುದು ಹೇಗೆ? ಆದ್ದರಿಂದಲೇ ಅವರಿಗೆ ದೇವಸ್ಥಾನದಲ್ಲಿ ಕೂಳವಿರುವುದಕ್ಕಿಂತ ತಮಗೆ ಉತ್ತಮ ನಲ್ಲಿ, ಸರಿಯಾದ ನೀರಿನ ವ್ಯವಸ್ಥೆ ಇರಬೇಕಿತ್ತು ಅನ್ನಿಸಿದ್ದು ಸಹಜವೇ ಆಗಿತ್ತು. ಬಿರ್ಲಾ ದೇವಾಲಯಗಳಲ್ಲಿ ಎಲ್ಲರಿಗೂ ಪ್ರವೇಶ ನೀಡಿರುವ ಬಗ್ಗೆ ಅವರ ಪ್ರಕಟಣೆಯ ಪತ್ರಿಕೆಗಳು ಬಹಳ ಪ್ರಚಾರ ನೀಡುತ್ತಿದ್ದವು. ಸವರ್ಣೀಯ ಹಿಂದೂಗಳ ಜೊತೆಗೆ ಅಸ್ಪೃಶ್ಯರಿಗೂ ದೇವಸ್ಥಾನದ ಪ್ರವೇಶ ನೀಡುವುದು ಒಳ್ಳೆಯದೇ ಆಯಿತು ಎಂದು ರಾಮದಾಸ್ ಹೇಳಿದ. ಅವನು ಸವರ್ಣೀಯನಾಗಿದ್ರೂ ಈ ಮಾತು ಹೇಳಿದ್ದ. ಆದರೆ, ಅನೇಕ ಸವರ್ಣೀಯರು, ಅಸ್ಪೃಶ್ಯರು ಪ್ರವೇಶಿಸಿದಂತಹ ದೇವಾಲಯಗಳನ್ನು ಬಹಿಷ್ಕರಿಸಿದರು. ಸರಿಯಾದ ತಿಳುವಳಿಕೆಯ ಜನ ಈ ಭೇದಭಾವದ ಆಚರಣೆಯನ್ನು ವಿರೋಧಿಸಿದ್ದರು. ದೇವಸ್ಥಾನಕ್ಕೆ ಹೋದ ಮೇಲೆ ಎಲ್ಲರೂ ಭಕ್ತರೇ ತಾನೇ! ಇದು ರಾಮದಾಸನ ವಿಚಾರಧಾರೆ. ಅದೇ ರೀತಿ ಕಾರ್ಖಾನೆಯಲ್ಲಿ ಕೆಲಸ ಮಾಡುವವರೆಲ್ಲ ಕಾರ್ಮಿಕರೇ ತಾನೆ? ಅಸ್ಪೃಶ್ಯರನ್ನು ಕುರಿತು ಬಿರ್ಲಾ ಜನ ಅಷ್ಟೊಂದು ಕೊಚ್ಚಿಕೊಳ್ಳುತ್ತಿದ್ದರು. ಗಾಂಧೀಜಿ ತಮ್ಮ ಪತ್ರಿಕೆಗೆ ‘ಹರಿಜನ್’ ಎಂದು ಹೆಸರಿಟ್ಟಿದ್ದರು. ಗಾಂಧೀಜಿಯ ಹೆಸರು ಹೇಳುವ ಜನ ಇಲ್ಲಿಗೆ ಬಂದು ಬಿರ್ಲಾ ಅವರದೇ ಸ್ವಂತ ಗಿರಣಿಗಳಲ್ಲಿ ಹರಿಜನರು ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ನೋಡಬಾರದೆ? ನಾನು ಈಗ ನೋಡಿದ ಬಸ್ತಿಯಲ್ಲಿನ ನೆಲಕ್ಕೆ ಗಾರೆ ಇತ್ತು. ನೀರು ಹರಿದು ಹೋಗಲು ತೆರೆದ ಚರಂಡಿಗಳಾದರೂ ಇದ್ದವು. ಆದರೆ ಅಸ್ಪೃಶ್ಯರ ಮನೆಗಳಲ್ಲಿ ಮಣ್ಣಿನ ನೆಲ, ಕೊಳಕು ನೀರು ಹರಿದು ಮನೆಯ ಮುಂದೆ ನಿಂತಿರುತ್ತಿತ್ತು. ಅವರು ವಾಸಿಸುತ್ತಿದ್ದ ‘ಚಾಲ್’ ಗಳಿಗೆ ಹೋಲಿಸಿದರೆ ಬಸ್ತಿಗಳೇ ಅರಮನೆಗಳು. ಕೆಲವು ಬಸ್ತಿಗಳು ಮಾತ್ರ ಉಳಿದ ಬಸ್ತಿಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದವು. ಆದರೆ ಅವು ಕಾರ್ಮಿಕರಿಗಾಗಿ ಇರಲಿಲ್ಲ. ಕಾರ್ಮಿಕರನ್ನು ಕೆಲಸಕ್ಕೆ ತರುವ, ಬೇಡದಿದ್ದಾಗ ಓಡಿಸುವ ಮಧ್ಯವರ್ತಿಗಳಿಗೆ ಅವು ಮೀಸಲು. ಕಾರ್ಖಾನೆ ನಡೆಸುತ್ತಿದ್ದ ಸ್ಕೂಲುಗಳು ಹಾಗೂ ಹಾಲಿನ ವಿತರಣೆ ಮೊದಲಾದ ಸೌಲಭ್ಯಗಳೆಲ್ಲ ಸಿಗುತ್ತಿದ್ದುದು ಕಾರ್ಖಾನೆಯ ಇಂತಹ ನಿಷ್ಠಾವಂತ ಸೇವಕರಿಗೆ ಹಾಗೂ ಅವರ ಮಕ್ಕಳಿಗೆ ಮಾತ್ರ.

ಇಲ್ಲಿದ್ದ ಕಾರ್ಮಿಕರ ಪಾಲಿಗೆ. ಕೆಲಸಕ್ಕೆ ಸೇರಿಸಿಕೊಳ್ಳುವ ಹಾಗೂ ಕೆಲಸದಿಂದ ಓಡಿಸುವ ವ್ಯವಸ್ಥೆ ಒಂದು ದುಃಸ್ವಪ್ನ. ಯಾವಾಗ ತೆಗೆದುಹಾಕುತ್ತಾರೋ ಎಂಬ ಭಯದ ಕತ್ತಿ ಸದಾ ತೂಗುತ್ತಲೇ ಇರುತ್ತಿತ್ತು. ಒಂದೇ ಗಿರಣಿಯಲ್ಲಿ ೧೫ ರಿಂದ ೨೫ ವರ್ಷಗಳಷ್ಟು ಕಾಲ ಕೆಲಸ ಮಾಡಿದವನೂ ಕೂಡ ಯಾವುದೇ ಕ್ಷಣದಲ್ಲಿ ಕೆಲಸ ಕಳೆದುಕೊಳ್ಳಬಹುದಿತ್ತು. ಬಿಟ್ಟು ಹೋಗುವಾಗ ಅವರಿಗೆ ಕೊಡಬೇಕಾದ ಹಣ ದಲ್ಲಾಳಿಗಳ ಪಾಲಾಗುತ್ತಿತ್ತು. ಗಿರಣಿಯಲ್ಲಿ ಹಿಂದಿನವಾರ ನಡೆದ ಕಾರ್ಮಿಕರ ಹಾಗೂ ಮ್ಯಾನೇಜರುಗಳ ದೊಡ್ಡ ಸಭೆಯಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಬೇಕು ಎಂದು ಅವರು ಅಂದುಕೊಂಡಿದ್ದರು. ಆದರೆ ಯಾವಾಗಲೂ ಆಗುವಂತೆ ‘ಕಂಪನಿಯ ಜನ’ ಮಾತ್ರ ಮೈಕಿನ ಬಳಿ ಕೂತಿದ್ದರು. ಯಾರಾದರೂ ಮಾತಾಡಲು ಎದ್ದು ನಿಂತರೆ ಅವನನ್ನು ಕಮ್ಯುನಿಸ್ಟ್ ಎಂದು ಕರೆದು ಕೆಲಸದಿಂದ ಓಡಿಸಲಾಗುತ್ತಿತ್ತು.

ಈಗ ಹೊಸದೊಂದು ಬೆಳವಣಿಗೆ ನಡೆದಿತ್ತು. ಕಾರ್ಮಿಕ ಸಂಘಟನೆಗಳನ್ನು ಇನ್ನೊಂದು ರೀತಿಯಲ್ಲಿ ಏರ್ಪಡಿಸುವ ಕೆಲಸ ಬಹುದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ಈ ಬಗ್ಗೆ ಆಸಕ್ತಿ ವಹಿಸಿದ್ದವರು ಬೇರೆ ಯಾರೂ ಅಲ್ಲ. ಸ್ವತಃ ಬಿರ್ಲಾ ಮತ್ತ್ತು ಪಟೇಲ್. ಈ ಹೊಸ ಸಂಘಟನೆಯ ಹೆಸರು ಇಂಟಕ್ (intuc) ಇಂಟಿಕ್ ಅಸ್ತಿತ್ವಕ್ಕೆ ಬಂದು ಹಳೆಯ ಭಾರತೀಯ ಕಾರ್ಮಿಕ ಒಕ್ಕೂಟದ ಸ್ಥಾನವನ್ನು ಆಕ್ರಮಿಸತೊಡಗಿತ್ತು. ಇದಕ್ಕೆ ಗೃಹ ಸಚಿವರಾದ ಪಟೇಲರ ಬಲವಾದ ಒತ್ತಾಸೆ ಇದ್ದುದರಿಂದ, ಸರ್ಕಾರದ ಪ್ರಾಯೋಜಕತ್ವದಲ್ಲಿದ್ದ ಅನೇಕ ಕಂಪನಿಗಳು ಅದರಲ್ಲಿ ಸೇರಿಕೊಳ್ಳತೊಡಗಿದ್ದವು. ಇದರಿಂದ ಅದು ವಿಶಾಲ ವ್ಯಾಪ್ತಿಯನ್ನು ಪಡೆದುಕೊಳ್ಳತೊಡಗಿತ್ತು. ಮುಷ್ಕರಗಳನ್ನು ಮಾಡದಿರುವುದೇ ಇಂಟಕ್‌ನ ನಿರ್ಣಯ ಎಂಬುದನ್ನು ಪಟೇಲರು ತಮ್ಮ ಭಾಷಣಗಳ ಮೂಲಕ ಪ್ರಚಾರ ಮಾಡುತ್ತಿದ್ದರು. ಈ ನಿರ್ಣಯವನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸುವ ಯೋಜನೆಯೂ ಇತ್ತು. ನನ್ನ ಸುತ್ತ ಕುಳಿತಿದ್ದ ಕಾರ್ಮಿಕರಿಗೆ ಇಂಟಕ್‌ನಲ್ಲಿ ವಿಶ್ವಾಸವಿರಲಿಲ್ಲ. ಮತ್ತು ಈಗ ನಡೆದಿರುವ ಬೆಳವಣಿಗೆಯ ಬಗ್ಗೆ ಅವರು ತೀವ್ರ ತಳಮಳಗೊಂಡಿದ್ದರು. ಎಲ್ಲರೂ ಇನ್ನಷ್ಟು ಒತ್ತೊತ್ತಾಗಿ ಸರಿದು ಕೂರುತ್ತಾ ‘ನಾವೆಲ್ಲರೂ ಕುರಿಗಳಂತೆ ಅನುಸರಿಸಬೇಕು ಎಂಬುದು ಇಂಟಕ್‌ನವರ ನಿರೀಕ್ಷೆ’ ಎಂದು ಹೇಳಿದರು.

ಅವರ ಮಾತು ಇಲ್ಲಿಂದ ಸಂಬಳ ಭತ್ಯೆಗಳ ಕಡೆಗೆ ಹರಿಯಿತು. ತುಟ್ಟಿಭತ್ಯೆ ಜೀವನವೆಚ್ಚ ಇತ್ಯಾದಿಯಾಗಿ ಅವರು ಪಡೆಯುವುದಕ್ಕೂ ಭಯಾನಕವಾಗಿ ಏರುತ್ತಿದ್ದ ಬೆಲೆಗಳಿಗೂ ತಾಳೆ ಇರಲಿಲ್ಲ. ಯುದ್ಧದ ವರ್ಷಗಳಲ್ಲಿ ಜವಳಿ ಕೈಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅವರಿಗೆ ೫೦%ರಷ್ಟು ತುಟ್ಟಿಭತ್ಯೆಯ ಹೆಚ್ಚಳ ಸಿಕ್ಕಿತ್ತು. ಆದರೆ ಅದೇ ಅವಧಿಯಲ್ಲಿ ಬೆಲೆಗಳು ೩೦% ಏರಿದ್ದವು ಮತ್ತು ಈ ಮೂರುಪಟ್ಟಿನ ಏರಿಕೆಯೂ ಸಹ ಸರ್ಕಾರದ ಸೂಚಿಯಲ್ಲಿ ಪ್ರಕಟಿಸಲಾಗಿದ್ದ ‘ನಿಯಂತ್ರಣ’ ಬೆಲೆಗಳಿಗೆ ಅನ್ವಯಿಸುತ್ತಿತ್ತು. ಇದರಲ್ಲಿ ಕಾಳಸಂತೆಯ ಬೆಲೆಗಳು ಸೇರದಿದ್ದುದು ಸಹಜ. ಈಗ ಬೆಲೆಗಳ ನಿಯಂತ್ರಣ ತೆಗೆದುಹಾಕುವ ಎಲ್ಲ ಸಾಧ್ಯತೆಯೂ ಇತ್ತು. ಹಿಟ್ಟು ಮತ್ತು ಸಕ್ಕರೆ ಮೊದಲಾದವುಗಳ ನಿಯಂತ್ರಣ ತೆಗೆದುಹಾಕುವ ಬಗ್ಗೆ ಪತ್ರಿಕೆಗಳು ತೀವ್ರವಾಗಿ ಪ್ರತಿಭಟಿಸಿದವು. ಮುಖ್ಯವಾಗಿ ಬಿರ್ಲಾ ಮಾಲಿಕತ್ವದ ವೃತ್ತಪತ್ರಿಕೆಗಳು ಹಾಗೂ ಗಾಂಧೀಜಿಯವರೇ ಪ್ರಕಟಿಸುತ್ತಿದ್ದ ಹರಿಜನ ಪತ್ರಿಕೆ ಕೂಡ ಪ್ರತಿಭಟಿಸಿದವು ಎಂದು ಒಬ್ಬ ಕಾರ್ಮಿಕ ಒತ್ತಿ ಹೇಳಿದ. ನಿಯಂತ್ರಣ ಬೆಲೆಗಳೂ ಕೂಡ ಉಸಿರುಕಟ್ಟಿಸುವಂತಿದ್ದವು. ಸಾಮಾನ್ಯ ಜನರಿಗೆ ಅಗತ್ಯವಾದ ವಸ್ತುಗಳು, ಸ್ವತಃ ಗಿರಣಿ ಕಾರ್ಮಿಕರೇ ನೂಲು ತೆಗೆದು ನೇಯ್ದು ಹತ್ತಿ ಬಟ್ಟೆಗಳೂ ಸಹ ಕಾಳಸಂತೆಯಲ್ಲಿ ಮಾಯವಾಗಿ ಹೊಸ ಬೆಲೆಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದವು. ಆ ಬೆಲೆಗೆ ಕೊಂಡುಕೊಳ್ಳುವ ಸಾಮರ್ಥ್ಯ ಶ್ರೀಮಂತರಿಗೆ ಮಾತ್ರ ಸಾಧ್ಯವಿತ್ತು. ‘ನಾವು ಅಷ್ಟೆಲ್ಲ ನೇಯ್ದು ಸಾವಿರಾರು ಗಜ ಬಟ್ಟೆ ಎಲ್ಲಿಗೆ ಹೋಗುತ್ತೆ? ನಮ್ಮ ಇಡೀ ಜೀವಮಾನದಲ್ಲಿ ಒಂದು ಶರ್ಟೇ ಗತಿ’ ಎಂದು ಒಬ್ಬ ಹೇಳಿದ.

ನಾವು ಎಷ್ಟೊ ಹೊತ್ತು ಮಾತಾಡಿದ್ದೆವೆಂದರೆ ಸೂರ್ಯಮುಳುಗಿದ್ದೇ ಗೊತ್ತಾಗಿರಲಿಲ್ಲ. ನನಗೆ ಇದ್ದಕ್ಕಿದ್ದಂತೆ ಚಳಿಯಾಗ ತೊಡಗಿದಾಗ ಅದು ನನ್ನ ಅರಿವಿಗೆ ಬಂತು. ಭಾರತದಲ್ಲಿ ಬಿರುಬಿಸಿಲಿನ ಹಗಲು ಕಳೆದು ಸೂರ್ಯ ಮುಳುಗುತ್ತಿದ್ದಂತೆ ಅದೆಲ್ಲಿಂದ ಇಷ್ಟು ಚಳಿ ನುಗ್ಗುತ್ತದೋ! ಈ ಹವಾಮಾನದ ವ್ಯತ್ಯಾಸಕ್ಕೆ ನನಗೆ ಇದುವರೆಗೆ ಹೊಂದಿಕೊಳ್ಳಲಾಗಿರಲಿಲ್ಲ. ಚಳಿಯನ್ನು ತಾಳಲಾರದೆ ನಾನು ಹೊರಡೋಣ ಎಂದು ಹೊರಟಾಗ ನೀವು ಇನ್ನೊಂದು ಜಾಗವನ್ನು ನೋಡಬೇಕು ಎಂದು ಅವರು ಕೇಳಿಕೊಂಡರು. ಬಸ್ತಿಗಳಲ್ಲಿ ಅವಕಾಶಕ್ಕಿಂತ ಹೆಚ್ಚು ಜನ ಇದ್ದರೂ ಅವರವರು ಅವರ ಕುಟುಂಬಗಳೊಂದಿಗೆ ವಾಸಿಸುವಷ್ಟು ಸ್ಥಳಾವಕಾಶವಾದರೂ ಇರುತ್ತಿತ್ತು. ಆದರೆ ಇದಕ್ಕಿಂತ ಹೆಚ್ಚು ಟಿಪಿಕಲ್ ಆದ ಮನೆಗಳನ್ನು ನಾನಿನ್ನೂ ನೋಡಿರಲಿಲ್ಲ. ಅವರು ಕರೆದುಕೊಂಡು ಹೋದ ಜಾಗ ವಿಚಿತ್ರವಾಗಿತ್ತು. ಗೂಡುಗಳು ಇದಕ್ಕಿಂತ ಸರಳವಾಗಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಸರಳವಾಗಿದ್ದವು. ಒಂದು ವಿಶಾಲವಾದ ಕೋಣೆಯೊಳಗೆ ಸಮಾನಾಂತರವಾಗಿ ಕಟ್ಟಿದ ಉದ್ದನೆಯ ಸಾಲುಸಾಲು ಗೂಡುಗಳು, ಒಂದೇ ಗೋಡೆಯ ಎರಡು ಬದಿಗಳಲ್ಲಿ ಒಂದೇ ರೀತಿಯ ಸಣ್ಣ ಸಣ್ಣ ಬಿಲದಿಂತಹ ಗೂಡುಗಳು ಇಂತಹ ಒಂದು ಕೋಣೆಯೊಳಗೆ ರಾಮದಾಸ್ ನನ್ನನ್ನು ಕರೆದುಕೊಂಡು ಹೋದ. ಅದರ ಅಳತೆ ಸುಮಾರು ೯ x ೧೨ ಅಡಿ ಇರಬಹುದು. ಆ ಕೋಣೆಗೆ ಒಂದೇ ಸಣ್ಣ ಕಿಟಕಿ. ಸ್ವಲ್ಪ ಹೊತ್ತೇರಿದ ನಂತರ ಅದರ ಮೂಲಕ ಸ್ವಲ್ಪ ಬೆಳಕು ಇಣುಕುತ್ತಿರಬಹುದು. ನೆಲದ ಮೇಲೆ ಒತ್ತೊತ್ತಾಗಿ ಸುರುಳಿ ಸುತ್ತಿಕೊಂಡಂತೆ ಬಿದ್ದಿದ್ದ ಆಕೃತಿಗಳೆಲ್ಲ ಮಲಗಿದ್ದ ಮನುಷ್ಯರವು ಎಂದು ತಕ್ಷಣ ಗುರುತಿಸುವುದು ನನಗೆ ಸಾಧ್ಯವಾಗಲಿಲ್ಲ. ಒಂದೊಂದು ಕೋಣೆಯಲ್ಲಿ ಇಪ್ಪತ್ತೈದು ಜನ ಇರುತ್ತಾರೆ ಎಂದು ರಾಮದಾಸ್ ಹೇಳಿದ. ಆತನ ದನಿ ಕೇಳಿ ಮಲಗಿದ್ದ ಕೆಲವು ಆಕೃತಿಗಳು ಮಿಸುಕಾಡಿದವು. ಕೆಲವು ಎದ್ದು ಕುಳಿತವು. ಇವರೆಲ್ಲರೂ ನೇಕಾರರೇ. ಅವರಿಗೆ ತಿಂಗಳಿಗೆ ಸರಾಸರಿ ೩೫ ರೂಪಾಯಿಯ ಸಂಬಳ. ಜೊತೆಗೆ ತುಟ್ಟಿಭತ್ಯೆ ಸೇರಿದರೆ ೪೪ ರೂಪಾಯಿ. ಅವರು ಮಲಗುತ್ತಿದ್ದೀ ನೆಲದ ತುಣುಕಿಗೆ ಬಾಡಿಗೆ ಕೊಡಬೇಕಿತ್ತು. ವಾರಕ್ಕೆ ತಲಾ ಎರಡು ರೂಪಾಯಿ ೧೨ ಆಣೆ. ಮೊದಲ ನೋಟಕ್ಕೆ ಈ ಬಾಡಿಗೆ ನ್ಯಾಯಸಮ್ಮತವಾಗಿದೆ ಅನ್ನಿಸಿತು. ಇದರಿಂದ ಮಾಲೀಕನಿಗೆ ಎಷ್ಟು ಸಿಗುತ್ತದೆ ಎಂದು ಲೆಕ್ಕ ಹಾಕಿದೆ. ಇಲ್ಲಿ ನೀರು, ಲೈಟು ಒಲೆ ಮೊದಲಾದ ಯಾವ ಅನುಕೂಲವೂ ಇರಲಿಲ್ಲ. ಪ್ರತ್ಯೇಕ ಕಕ್ಕಸೂ ಇರಲಿಲ್ಲ. ಇಷ್ಟು ಸ್ಥಳಾವಕಾಶಕ್ಕೆ ಕಂಪನಿಯು ತಿಂಗಳಿಗೆ ೨೫ ಪೌಂಡುಗಳಿಗೆ ಸಮನಾದ ಬಾಡಿಗೆಯನ್ನು ವಸೂಲು ಮಾಡುತ್ತಿತ್ತು. ಯಾರೋ ಒಬ್ಬರು ಒಂದೇ ಒಂದು ಕ್ಯಾಂಡಲ್ ಹಚ್ಚಿ ಮೇಲಿಟ್ಟರು. ಮಲಗಿದ್ದವರೆಲ್ಲ ಪೂರ್ತಿಯಾಗಿ ಎದ್ದು ತಮ್ಮ ಅನಿಸಿಕೆಗಳನ್ನು ಹೇಳತೊಡಗಿದರು. ‘ನೋಡಿ, ನಾವು ಒಟ್ಟಿಗೆ ಕೂರುವಷ್ಟು ಜಾಗವಿಲ್ಲ. ಮಲಗಲು ಹೇಗೆ ಜಾಗ ಆಗುತ್ತೆ ಮಿಲ್‌ನಲ್ಲಿ ಮೂರು ಶಿಫ್ಟ್ ಇರುವುದರಿಂದ ಇಷ್ಟಾದರೂ ಆಗುತ್ತದೆ. ಕೆಲವರು ಶಿಫ್ಟ್‌ನಲ್ಲಿದ್ದಾಗ ಉಳಿದವರು ಮಲಗುತ್ತಾರೆ. ನಮಗೆ ರಜೆ ಸಿಗುವುದೂ ಕಷ್ಟ. ನಾವೆಲ್ಲ ಒಟ್ಟಿಗೆ ಸೇರುವುದಕ್ಕೂ ಅವಕಾಶವಿಲ್ಲ’. ನೀವು ರಜಾದಿನ ಏನು ಮಾಡುತ್ತೀರಿ ಎಂದು ಸುಮಾರು ೧೪ ವರ್ಷವಿರಬಹುದಾದ ಒಬ್ಬ ಹುಡುಗನನ್ನು ಕೇಳಿದೆ. ಜಮುನಾದಾಸ್ ಎಂಬ ಹೆಸರಿನ ಆ ಹುಡುಗ ನನ್ನ ಪ್ರಶ್ನೆಗೆ ಉತ್ತರಿಸಲು ತೀರ ನಾಚಿಕೊಂಡು ಬರಿಗಾಲಿನಿಂದ ನೆಲ ಕೆರೆಯುತ್ತ ನಿಂತ. ನಾನು ಬಿಡಲಿಲ್ಲ. ನನಗೆ ತಿಳಿದು ಬಂದ ಪ್ರಕಾರ ರಜಾದಿನಗಳಲ್ಲೂ ಈ ಹುಡುಗರು ಆಟ ಆಡುತ್ತಿರಲಿಲ್ಲ. ಭಾನುವಾರ ಮತ್ತು ಇತರ ಯಾವುದಾದರೂ ರಜಾದಿನಗಳಲ್ಲಿ ಅವರು ಬಟ್ಟೆ ಒಗೆದುಕೊಳ್ಳುತ್ತಿದ್ದರು. ಜಮುನಾದಾsಜಿ, ತಾನು ಒಂದೆರಡು ವರ್ಷ ಶಾಲೆಗೆ ಹೋಗಿದ್ದೆ ಎಂದು ಹೇಳುವಾಗ ಅವನ ಕಾಂತಿಹೀನ ಕಣ್ಣುಗಳಲ್ಲಿ ಲವಲವಿಕೆಯ ಬೆಳಕು ಚಿಮ್ಮಿತು. ಅವನು ಆಟ ಆಡುವುದನ್ನು ನಿಲ್ಲಿಸಿ ಎಷ್ಟು ದಿನಗಳಾಗಿದ್ದವೋ. ಇವನಿಗಿಂತ ಚಿಕ್ಕ ಹುಡುಗರೂ ಕೂಡ ಈ ಮಿಲ್ಲಿನಲ್ಲಿ ಎಂಟು ಗಂಟೆಗಳ ಕಾಲ ದುಡಿಯುತ್ತಾರೆ ಎಂದು ಕೆಲವರು ಹೇಳಿದರು. ಆಹಾರ ಪದಾರ್ಥಗಳಲ್ಲಿ ತುಟ್ಟಿ, ಹೊಟ್ಟೆ ತುಂಬುವಷ್ಟು ಆಹಾರವೂ ಅವರ ಪಾಲಿಗೆ ಸಾಧ್ಯವಿರಲಿಲ್ಲ. ಆಟ ಆಡಲು ಶಕ್ತಿ ಎಲ್ಲಿಂದ ಬರಬೇಕು. ಎಷ್ಟೋ ಮಂದಿ ತಮ್ಮ ಕುಟುಂಬಗಳನ್ನು ಹಳ್ಳಿಯಲ್ಲಿಯೇ ಬಿಟ್ಟು ಬಂದಿದ್ದರು. ಆ ಕುಟುಂಬಗಳ ಪೋಷಣೆಗೂ ಇವರು ದುಡಿದಿದ್ದನ್ನು ಬಳಸಿಕೊಳ್ಳಬೇಕಿತ್ತು. ಇಂತವರಿಗೆ ಹೊಟ್ಟೆತುಂಬ ಊಟ ಮಾಡುವುದಕ್ಕೂ ಅವರು ದುಡಿದದ್ದು ಸಾಧ್ಯವಾಗುತ್ತಿರಲಿಲ್ಲ. ಕುಟುಂಬಗಳನ್ನು ಇಲ್ಲೇ ತಂದಿಟ್ಟುಕೊಳ್ಳಲು ವಸತಿಯ ಸಮಸ್ಯೆ. ಎಲ್ಲರಂತೆ ಇವರಿಗೂ ತಮ್ಮ ಕಣ್ಣುಮುಂದೆಯೇ ತಮ್ಮ ಮಕ್ಕಳು ಬೆಳೆಯಬೇಕು ಎಂಬ ಆಸೆ ಇತ್ತು. ನೀರಿಗೆ, ಸೀಮೆಎಣ್ಣೆಗೆ ಕ್ಯೂ ನಿಂತು ಕಾದು ತರುವುದಕ್ಕೆ ಮನೆಯಲ್ಲಿ ಜನರಿಲ್ಲವಾದ ಕಾರಣ ಇವರಲ್ಲಿ ಕೆಲವರು ಆ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಮತ್ತೆ ಇವರಲ್ಲಿಯೇ ಒಬ್ಬ ಅಡುಗೆಯ ಕೆಲಸ ವಹಿಸಿಕೊಂಡಿರುತ್ತಿದ್ದ. ಆದರೂ ತಮ್ಮ ಕುಟುಂಬಗಳಿಂದ ತಾವು ದೂರವಾಗಿರುವ ವ್ಯಥೆಯನ್ನು ಅವರು ಅನುಭವಿಸುತ್ತಿದ್ದರು. ಇದರೆ ಜೊತೆಗೆ, ಈಗ ಮತೀಯ ಗಲಭೆಗಳು ನಡೆಯುತ್ತಿರುವುದರಿಂದ ಊರಿನಲ್ಲಿರುವ ತಮ್ಮ ಕುಟುಂಬಗಳ ಗತಿ ಏನಾಗಿದೆಯೋ ಎಂಬ ಆತಂಕವೂ ಸೇರಿ ಅವರು ಇನ್ನಷ್ಟು ದುಃಖಗೊಂಡಿದ್ದರು. ಬರುವ ಹಣ ಹೊಟ್ಟೆ ಬಟ್ಟೆಗೇ ಸಾಲದಿರುವಾಗ ಗಲಭೆಗಳಿಂದಾಗಿ ಇರುವ ಮನೆಮಠಗಳಿಗೆ ಏನಾದರೂ ಹಾನಿಯಾದರೆ ಎಂಬ ಚಿಂತೆಯೂ ಸೇರಿತ್ತು.

ಡಿಸೆಂಬರ್ ೮ ರಂದು (ಗಾಂಧೀಜಿ ಉಪವಾಸ ಆರಂಭಿಸುವುದಕ್ಕೆ ಕೇವಲ ೫ ವಾರಗಳ ಮೊದಲು) ಈ ಗಿರಣಿ ಕೆಲಸಗಾರರು ತಮ್ಮ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂದು ಮ್ಯಾನೇಜರ್ ಹತ್ತಿರ ಹೋಗಿ ಕೇಳಿದ್ದರು. ಬೆಲೆಗಳು ಏರುತ್ತಿವೆ. ನಮ್ಮ ಕುಟುಂಬಗಳನ್ನು ಸಾಕುವುದಕ್ಕೇ ಆಗುತ್ತಿಲ್ಲ ಎಂದಾಗ ನಿಮಗೆ ನಾವು ಕೊಡುವ ಸಂಬಳದಿಂದ ತೃಪ್ತಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಬಹುದು ಎಂದು ಅವನು ಹೇಳಿದ್ದ. ಕಾರ್ಮಿಕರು ಸುಮ್ಮನಾಗಲಿಲ್ಲ. ಹೆಚ್ಚು ಹೆಚ್ಚು ಕಾರ್ಮಿಕರು ಬಂದು ಸೇರ ತೊಡಗಿದಾಗ ಮ್ಯಾನೇಜರ್ ಕಿಟಕಿಯಿಂದ ತಲೆ ಹೊರಗೆ ಹಾಕಿ ಈ ಜನ ಮಾತು ಕೇಳುತ್ತಿಲ್ಲ. ಒತ್ತಾಯ ಮಾಡುತ್ತಿದ್ದಾರೆ ಎಂದು ಯಾರಿಗೋ ಹೇಳಿದ. ಆಮೇಲೆ ಅವನು ಫೋನಿನಲ್ಲಿ ಮಾತಾಡಿದ್ದನ್ನು ಕೆಲಸಗಾರರು ನೋಡಿದರು. ಅವನು ಫೋನ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಾಲ್ಕು ಮಂದಿ ಕಾನ್‌ಸ್ಟೇಬಲ್‌ಗಳು ಬಂದರು. ರೈಫಲ್ ತುದಿಯಿಂದ ತಿವಿದು ಜನರನ್ನು ಕಾಂಪೋಂಡಿನಿಂದ ಹೊರಗೆ ಅಟ್ಟತೊಡಗಿದರು. ಅಷ್ಟೇ ಅಲ್ಲ ಯಾವ ಮುನ್ನೆಚ್ಚರಿಕೆಯನ್ನೂ ಕೊಡದೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದರು. ಒಬ್ಬ ಕಾರ್ಮಿಕ ಸತ್ತ. ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡರು.

ಈ ಬಗ್ಗೆ ಗಾಂಧೀಜಿಯವರಿಗೆ ವಿಷಯ ತಿಳಿಸುವುದಕ್ಕಾಗಿ ಐದು ಜನ ಕಾರ್ಮಿಕರ ನಿಯೋಗ ಬಿರ್ಲಾ ಭವನದ ಕಡೆಗೆ ಹೊರಟಿತು. ನವದೆಹಲಿಯಲ್ಲಿರುವ ಅಲ್ಬುಕರ್ಕ್ ರಸ್ತೆಗೂ ಹಳೆ ನಗರದಲ್ಲಿರುವ ಶಾಬ್ಜಿಮಂಡಿಗೂ ಬಹಳ ದೂರದ ಹಾದಿ. ಅವರ ದುರಾದೃಷ್ಟ. ಅಷ್ಟು ದೂರ ಅವರು ಬರುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆ ದಾಟಿತ್ತು. ಕಾವಲುಗಾರರು ಅವರನ್ನು ಗೇಟಿನಲ್ಲಿಯೇ ತಡೆದು ನಾಳೆ ಬನ್ನಿ ಎಂದು ತಿಳಿಸಿದರು. ಮಾರನೇ ದಿನ ಈ ಐದೂಬಂದಿ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಪುನಃ ಬಂದರು. ಆದರೆ ಗಾಂಧಿಯವರಿಗೆ ಡಿಸೆಂಬರ್ ೧೩ರವರೆಗೆ ಬಿಡುವೇ ಇಲ್ಲ ಎಂದು ತಿಳಿಸಲಾಯಿತು. ಅಂದರೆ ಇನ್ನು ನಾಲ್ಕು ದಿನ ಗಾಂಧಿಯನ್ನು ನೋಡುವಂತಿರಲಿಲ್ಲ. ೧೩ನೇ ತಾರೀಖು ಬಂದರು ಉಪಯೋಗವೇನೋ ಆಗಲಿಲ್ಲ. ಬಿರ್ಲಾ ಮನೆಯಲ್ಲಿ ಅವರು ವಾಸವಾಗಿರುವುದರಿಂದ ಗಾಂಧೀಜಿಯವರು ಬಹುಶಃ ಕಾರ್ಮಿಕರ ಸಮಸ್ಯೆಗೆ ಸರಿಯಾಗಿ ಗಮನಕೊಡುವುದಿಲ್ಲ ಎಂದು ಕಾರ್ಮಿಕರು ನಿರ್ಧರಿಸಿದರು.

ಆದರೂ ಯಾವುದೇ ಮುನ್ಸೂಚನೆ ಇಲ್ಲದೆ, ಕಾಂಪೌಂಡಿನೊಳಗಿದ್ದ ಕೆಲಸಗಾರರ ಗುಂಪಿನ ಮೇಲೆ ಗುಂಡು ಹಾರಿಸಿದ್ದರಿಂದ ಅವರು ಮತ್ತಷ್ಟು ಕೆರಳಿದರು. ಹೇಗಾದರೂ ನ್ಯಾಯ ಪಡೆಯಬೇಕು ಎಂದು ನಿರ್ಧರಿಸಿದರು. ಇದಕ್ಕಾಗಿ ಅವರು ಸರ್ಕಾರದ ಮೇಲೆ ಬೇರೆ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಪಟೇಲರೂ ಸೇರಿದಂತೆ ಎಲ್ಲರ ಮನೆ ಬಾಗಿಲನ್ನೂ ತಟ್ಟಿದರು. ಗೃಹಮಂತ್ರಿ ಪಟೇಲರ ಮನೆಬಾಗಿಲು ಇವರಿಗೆ ತೆರೆಯದಿರುವುದರ ಬಗ್ಗೆ ಆಶ್ಚರ್ಯವೇನೂ ಇಲ್ಲ. ಮುಷ್ಕರರಹಿತ ಕಾರ್ಖಾನೆಗಳು ಎಂಬ ಇಂಟಕ್ ನಿಲುವನ್ನು ತಾವಾಗಿಯೇ ಒಪ್ಪಿಕೊಳ್ಳುವಂತಾಗಬೇಕು ಎಂಬ ದೃಷ್ಟಿಯಿಂದ ಎಡಬಿಡದೆ ಪ್ರಚಾರ ಭಾಷಣಗಳಲ್ಲಿ ತೊಡಗಿದ್ದ ಪಟೇಲ್ ಅವರಿಗೆ ಸಮಯ ಸಿಗದಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಕಾರ್ಮಿಕರ ನಗರ ಎಂದು ಪ್ರಸಿದ್ಧವಾಗಿದ್ದ ಮುಂಬೈನಲ್ಲಿ ಇತ್ತೀಚೆಗೆ ಮೂರು ವರ್ಷ ಕಾಲ ಮುಷ್ಕರವೇ ಇರಕೂಡದು ಎಂಬ ನಿಲುವನ್ನು ಪ್ರತಿಭಟಿಸಿ ನಗರದಾದ್ಯಂತ ಒಂದು ದಿನದ ಹರತಾಳ ನಡೆದಿತ್ತು. ಇದಕ್ಕೆ ಪಟೇಲ್ ಅವರ ಪ್ರತಿಕ್ರಿಯೆ strikes are a nuisance’ ನಿಜಕ್ಕೂ ಮರೆಯಲಾಗದ ಮಾತು! ಅಂತೂ ಈ ಐದು ಮಂದಿ ನೇಕಾರರ ಗುಂಪು ಎಬ್ಬಿಸಬಹುದಾಗಿದ್ದ ಒಂದು ಸಣ್ಣ ಕಿರಿಕಿರಿಯನ್ನೂ ಸಹ, ಸ್ವಲ್ಪ ಧೈರ್ಯವಾಗಿ ಮಾತಾಡುತ್ತಿದ್ದ ಒಬ್ಬ ಕಾರ್ಮಿಕನ ಬಂಧನ ಹಾಗೂ ಉಳಿದ ನಾಲ್ವರನ್ನೂ ಬೇರೆ ಬೇರೆ ಕಡೆಗೆ ಚದುರಿಸುವ ಮೂಲಕ ಸದ್ದಿಲ್ಲದೆ ಅಡಗಿಸಲಾಯಿತು.

ನಾನು ಹೊರಟಾಗ, ಕತ್ತಲಲ್ಲಿ ಇನ್ನಷ್ಟು ಕಪ್ಪಾಗಿ ಕಾಣುತ್ತಿದ್ದ ತೆರೆದ ಚರಂಡಿಗಳ, ಎತ್ತರದ ಗೋಡೆಗಳ ನಡುವಿನಿಂದ ರಾಮದಾಸ್ ಹುಷಾರಾಗಿ ನಮ್ಮನ್ನು ಕರೆದುಕೊಂಡು ಬರುತ್ತಿದ್ದಾಗ ಒಂದು ಮಾತು ಹೇಳಿದ – ‘ಸ್ವಾತಂತ್ರ್ಯ ಬಂದ ನಂತರ ಹೀಗೆಲ್ಲ ವಿಚಾರಣೆಯಿಲ್ಲದೆ ಯೂನಿಯನ್ ಲೀಡರುಗಳನ್ನು ಜೈಲಿನಲ್ಲಿಡುವುದಿಲ್ಲ ಎಂದು ಅಂದುಕೊಂಡಿದ್ದೆವು. ಆದರೆ ಈಗಲೂ ಹಾಗೇ ನಡೆಯುತ್ತಿದೆ’.

ನಾವು ಟ್ಯಾಕ್ಸಿ ಬಳಿ ಬಂದೆವು. ಡ್ರೈವರ್ ಸ್ಟೀರಿಂಗ್ ಮೇಲೆ ತಲೆ ಇಟ್ಟು ಗೊರಕೆ ಹೊಡೆಯುತ್ತ ಮಲಗಿದ್ದ. ಅದನ್ನು ನೋಡಿ ನಾವು ನಕ್ಕ ಸದ್ದಿಗೆ ಅವನಿಗೆ ಎಚ್ಚರವಾಯಿತು. ಗಲಿಬಿಲಿಗೊಂಡು ಎದ್ದು ಕುಳಿತ. ನಾನು ಟ್ಯಾಕ್ಸಿಯಲ್ಲಿ ಕೂರುತ್ತಿದ್ದಾಗ ರಾಮದಾಸ್ ಹೇಳಿದ – ‘ಬ್ರಿಟಿಷ್ ಸಾಮ್ರಾಜ್ಯಾಧಿಪತ್ಯ ಕೊನೆಯಾದ ಮೇಲೆ ಒಂದಂತೂ ಏನೂ ವ್ಯತ್ಯಾಸವಾಗಿಲ್ಲ. ಹಾಗೇ ಇದೆ. ಗಳಿಸಿದ ಲಾಭವನ್ನೆಲ್ಲ ತಾನೇ ಇಟ್ಟುಕೊಳ್ಳುವ ಸ್ವಾತಂತ್ರ್ಯ ಮಾಲೀಕನಿಗಿದೆ. ಗಲಾಟೆ ಮಾಡದೆ ಶಾಂತಿಯನ್ನು ಪಾಲಿಸಿಕೊಂಡು ಹೋಗಬೇಕಾದ ಸ್ವಾತಂತ್ರ್ಯ ಕಾರ್ಮಿಕರಿಗಿದೆ.

* * *