ಬಿರ್ಲಾ: ಟ್ರಸ್ಟೀಶಿಪ್ ದೂತ

ನಾನು ಹೋಟೆಲಿಗೆ ಹಿಂದಿರುಗಿದಾಗ ನನಗಾಗಿ ಒಂದು ಟಿಲಿಫೋನ್ ಸಂದೇಶವಿತ್ತು. ನಾನು ಹಿಂದಿನ ದಿನವಷ್ಟೇ ಕೇಳಿದ್ದ ಹಾಗೂ ನನಗೆ ಬಹುವಾಗಿ ಅಗತ್ಯವಾಗಿದ್ದ ಒಂದು ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು. ಮಾರನೇ ದಿನ ಮಧ್ಯಾಹ್ನ ಬಿರ್ಲಾ ಗೃಹದಲ್ಲಿ ಶ್ರೀ ಜಿ. ಬಿರ್ಲಾ ಅವರೊಂದಿಗೆ.

ಘನಶ್ಯಾಮದಾಸ್‌ಜಿ ಬಿರ್ಲಾ ಅವರ ಹೆಸರು ಬಹುವಾಗಿ ಜವಳಿ ಉದ್ಯಮದೊಂದಿಗೆ ಕೇಳಿಬರುತ್ತಿದ್ದರೂ ಅವರು ಇನ್ನೂ ಹಲವಾರು ಉದ್ಯಮಗಳಿಗೆ ಪ್ರಸಿದ್ಧರಾಗಿದ್ದರು. ಅದರಲ್ಲಿ ಮುಖ್ಯವಾದುದು ಸಕ್ಕರೆಯ ಉದ್ಯಮ. ಸಕ್ಕರೆಯ ಮೇಲಿನ ನಿಯಂತ್ರಣ ತೆಗೆಯಬೇಕು ಎಂಬ ಹೋರಾಟ ನಡೆಯುತ್ತಿದ್ದ ಕಾರಣ ಈ ಉದ್ಯಮ ಬಹಳ ಸುದ್ದಿಯಲ್ಲಿತ್ತು. ಬಿರ್ಲಾ ನಡೆಸುತ್ತಿದ್ದ ಇನ್ನಿತರ ಉದ್ಯಮಗಳೆಂದರೆ ಮೋಟಾರು ಕಾರುಗಳು, ಬೈಸಿಕಲ್‌ಗಳು, ಬಾಯ್ಲರ್‌ಗಳು, ಕ್ಯಾಲ್ಶಿಯಂ ಕಾರ್ಬೈಡ್‌ಗಳು, ಕೈಗಾರಿಕಾ ಆಲ್ಕೋಹಾಲ್, ಲಿನೋಲಿಯಮ್, ವುಲನ್, ಫ್ಲಾಕ್ಸ್, ತುಪ್ಪ, ಮಾರ್ಗರೀನ್, ಸ್ಟಾರ್ಚ್ ಕನ್‌ಫೆಕ್ಷನರಿ, ಬ್ಯಾಂಕಿಂಗ್ ಹಾಗೂ ಇನ್‌ಶೂರೆನ್ಸ್…. ಇಷ್ಟೆಲ್ಲದರ ಜೊತೆಗೆ ಅವರು ಅನೇಕ ವೃತ್ತಪತ್ರಿಕೆಗಳ ಮಾಲೀಕರಾಗಿದ್ದರು ಮತ್ತು ರೇಡಿಯೋ ಬಗ್ಗೆಯೂ ಬಹಳ ಆಸಕ್ತಿ ವಹಿಸಿದ್ದರು. ಅವರು ಕೆಲವು ಕಾಲ ಅಮೆರಿಕದಲ್ಲಿದ್ದರು. ಇಂಗ್ಲೆಂಡಿನೊಂದಿಗೆ ವ್ಯಾಪಾರವಹಿವಾಟು ಹೊಂದಿದ್ದರು. ಬಿರ್ಲಾ ಅವರನ್ನು ಇಂಡಿಯಾದ ನಂಬರ್ ೧ ಕೈಗಾರಿಕೋದ್ಯಮಿ ಎಂದು ಭಾವಿಸಲಾಗಿತ್ತು. ಅವರ ಬಗ್ಗೆ ನನಗೆ ತುಂಬ ಆಸಕ್ತಿ ಇದ್ದುದೇಕೆಂದರೆ ಸರ್ಕಾರದ ಉನ್ನತ ನಾಯಕರೊಂದಿಗೆ ಅವರಿಗೆ ನಿಕಟ ಸಂಬಂಧವಿತ್ತು. ಅದರಲ್ಲಿಯು ಗಾಂಧಿಯವರೊಂದಿಗೆ ಅವರ ಸಂಬಂಧ ವಿಶೇಷ ತೆರನಾದದ್ದು. ಗಾಂಧೀ ವಿಚಾರಗಳಿಂದ ಹೊಮ್ಮಿದ Trusteeship ಎಂಬ ಪರಿಕಲ್ಪನೆಯ ಬಗ್ಗೆ ಬಿರ್ಲಾ ದೃಷ್ಟಿ ಏನು ಎಂಬುದನ್ನು ತಿಳಿಯುವುದು ನನ್ನ ಉದ್ದೇಶವಾಗಿತ್ತು. ಗಾಂಧಿಯವರ ಸೆಕ್ರೆಟರಿಯಾಗಿದ್ದ ಪ್ಯಾರೇಲಾಲ್ ಈ ಟ್ರಸ್ಟೀಶಿಷ್‌ನ್ನು ನನಗೆ ಹೀಗೆ ವಿವರಿಸಿದ್ದರು: ಸಂಪತ್ತು ಮತ್ತು ಆಸ್ತಿಯನ್ನು ಹಾಗೇ ಲಿಕ್ವಿಡೇಟ್ ಮಾಡುವುದಕ್ಕೆ ಬದಲಾಗಿ ಅವುಗಳ ಧರ್ಮದರ್ಶಿಗಳಾಗಿ ರೂಪುಗೊಳ್ಳಲು ಬಂಡವಾಳಗಾರರು ಮತ್ತು ಸಂಪತ್ತಿನ ಮಾಲೀಕರಿಗೆ ನೀಡುವ ಅವಕಾಶವೇ ಟ್ರಸ್ಟೀಶಿಪ್. ಸಂಪತ್ತಿರುವುದು ಸ್ವಾರ್ಥಪರ ಉದ್ದೇಶಗಳಿಗೆ ಬಳಸುವುದಕ್ಕಾಗಿ ಅಲ್ಲ. ಅದು ಇಡೀ ಸಮಾಜದ ಒಳಿತಿಗಾಗಿ ಇರುವಂಥದ್ದು. ಸಂಪತ್ತಿನ ಮಾಲೀಕನಿಗೆ ಇದರಲ್ಲಿ ಕಮಿಶನ್ ಪಡೆಯುವ ಹಕ್ಕಿದೆ ಮತ್ತು ಕಮಿಶನ್ ಮೊತ್ತ ಎಷ್ಟಿರಬೇಕು ಎಂಬುದನ್ನು ಜನರೇ ನಿರ್ಧರಿಸಬೇಕು. ಇದು ಗಾಂಧಿ ವಿಚಾರ.

ಬಿರ್ಲಾ ಅವರ ದತ್ತಿಗಳ ಬಗ್ಗೆ ಪ್ಯಾರೆಲಾಲ್ ಹೇಳಿದ್ದರು, ಅದೊಂದು ಸುದೀರ್ಘ ಪಟ್ಟಿ. ಬಿರ್ಲಾ ಕಾರ್ಮಿಕರನ್ನು ಹೇಗೆಂದರೆ ಹಾಗೆ ಹೀನಾಯವಾಗಿ ನಡೆಸಿಕೊಳ್ಳಲು ಬರುವುದಿಲ್ಲ. ಗಾಂಧೀಜಿಯ ಮುಂದೆ ಅದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ ಎಂದು ಪ್ಯಾರೇಲಾಲ್ ಹೇಳಿದರು.

ನಾನು ಮಾರನೇ ದಿನ ಗೊತ್ತುಪಡಿಸಿದ ಸಮಯಕ್ಕೆ ಸರಿಯಾಗಿ ಬಿರ್ಲಾ ಗೃಹಕ್ಕೆ ಹೋದಾಗ ವಿವಿಧ ಶೈಲಿಗಳಲ್ಲಿ ಸಜ್ಜಿತವಾಗಿದ್ದ ಕೋಣೆಗಳ ಮೂಲಕ ನನ್ನನ್ನು ಒಳಗೆ ಕರೆದುಕೊಂಡು ಹೋಗಲಾಯಿತು. ಕೆಲವು ಕೋಣೆಗಳು ಪಾಶ್ಚಾತ್ಯ, ಆಧುನಿಕ ಶೈಲಿಯಲ್ಲಿ ಸಿಂಗಾರಗೊಂಡಿದ್ದರೆ ಕೆಲವು ಭಾರತೀಯ ಶೈಲಿಯಲ್ಲಿದ್ದವು. ಅಲ್ಲಿ ಯಾವುದೇ ಪೀಠೋಪಕರಣಗಳಿರಲಿಲ್ಲ, ಬದಲಿಗೆ ಸಾಂಪ್ರದಾಯಿಕವಾದ ಹಾಸುಗಳು, ಒರಗು ದಿಂಬುಗಳು ಇದ್ದವು. ಇಂತಹ ಒಂದು ಕೋಣೆಯಲ್ಲಿಯೇ ನಾನು ಹೋದವಾರ ಇನ್ನೊಬ್ಬ ‘Star guest’ ನ ಫೋಟೋ ತೆಗೆದಿದ್ದೆ. ಈ ಅತಿಥಿ ವಲ್ಲಭಭಾಯಿ ಪಟೇಲ್, ಬಿರ್ಲಾರ ನಿಕಟಮಿತ್ರ. ದೆಹಲಿಗೆ ಬಂದಾಗ ಬಹುತೇಕ ಸಂದರ್ಭಗಳಲ್ಲಿ ಪಟೇಲರು ಬಿರ್ಲಾ ಅವರಲ್ಲಿಯೇ ಇಳಿದುಕೊಳ್ಳುತ್ತಿದ್ದರು.

ನಾನೀಗ ಭವ್ಯವಾದ ಗಾಜುಗಳಿಂದಲೇ ಸಿದ್ಧಗೊಂಡಂತಿದ್ದ ಒಂದು ದೊಡ್ಡ ಡ್ರಾಯಿಂಗ್ ರೂಂನಲ್ಲಿದ್ದೆ. ಅದರ ಭವ್ಯತೆ ಲಂಡನ್, ಲುಕ್ಸಂಬರ್ಗ್ ಮೊದಲಾದ ಯಾವುದೇ ಅಂತರ ರಾಷ್ಟ್ರೀಯ ಮಟ್ಟಕ್ಕೆ ಅದು ಸರಿಸಾಟಿ ಎನ್ನುವಂತಿತ್ತು. ನನ್ನನ್ನು ನೋಡಿ ತಕ್ಷಣ ಸೋಫಾದಿಂದ ಎದ್ದು ಬಂದು ನನ್ನನ್ನು ಸ್ವಾಗತಿಸಿದರು ಬಿರ್ಲಾ. ಹಿಮಬಿಳಿಯ ಸ್ವಚ್ಛ ಖಾದಿಯ ಅಚ್ಚುಕಟ್ಟಾದ ಉಡುಪು. ಈತ ಟ್ರಸ್ಟಿಗಳ ಡೀನ್. ಯಂತ್ರಗಳಿಂದ ಬಟ್ಟೆ ತಯಾರಿಸುವ ಈ ಬಹುದೊಡ್ಡ ಉದ್ಯಮಿ ಖಾದಿ ಧರಿಸಿದ್ದು ಕುತೂಹಲಕರವಾಗಿತ್ತು. ಗಾಂಧೀ ಅನುಯಾಯಿಗಳಿಗೆಲ್ಲ ಇದೇ ಯೂನಿಫಾರಂ. ಆದರೆ ಈ ಸಡಿಲವಾದ ಇಳಿಬಿದ್ದ ಉದ್ದನೆಯ ಅಂಗಿ ಮತ್ತು ಧೋತಿ ಮಾದರಿಯ ಉಡುಪೂ ಕೂಡ ಜಗತ್ತಿನ ಯಾವುದೇ ಭಾಗದ ಉದ್ಯಮಿಗಳ ವ್ಯಕ್ತಿತ್ವದಲ್ಲಿ ಕಂಡುಬರುವ ಎಚ್ಚರದ, ವ್ಯಾವಹಾರಿಕವಾದ ಹಾಗೂ ಯಾರನ್ನು ಹಚ್ಚಿಕೊಳ್ಳದ ಅವರ ಸ್ವಭಾವವನ್ನು ಮರೆಸಲಾರದು. ೫೫ ವರ್ಷ ವಯಸ್ಸಾಗಿದ್ದ ಬಿರ್ಲಾ ವಯಸ್ಸಿಗಿಂತ ಚಿಕ್ಕವರಾಗಿ ಕಂಡರು. ಅವರ ನಡವಳಿಕೆಯಲ್ಲಿ ಸೌಹಾರ್ದತೆ ಇತ್ತು. ಯಾವುದೇ ತೋರಿಕೆಗಳಿರಲಿಲ್ಲ. ಈತ ನೇರಮಾತಿನ ಮನುಷ್ಯ ಎಂದು ನನಗೆ ಗೊತ್ತಿತ್ತು. ಹೀಗಾಗಿ ನಾನು ಬೇರೆ ಸುತ್ತು ಬಳಸಿಲ್ಲದೆ, ಟ್ರಸ್ಟೀಶಿಪ್ ಕುರಿತ ವಿಷಯಕ್ಕೆ ನೇರವಾಗಿ ಪ್ರಸ್ತಾಪಿಸಿದೆ.

ಅವರ ಉತ್ತರ ನಾನು ನಿರೀಕ್ಷಿಸಿದಷ್ಟೇ ನೆಟ್ಟನೇರವಾಗಿತ್ತು. “ಗಾಂಧೀಜಿಯವರ ತತ್ವಾನುಷ್ಠಾನ ಸುಲಭವಲ್ಲ. ಅದಕ್ಕೆ ತುಂಬ ದೃಢವಾದ ಸಂಕಲ್ಪ ಬೇಕಾಗುತ್ತದೆ. ”ಈ ಉತ್ತರದಲ್ಲಿ ಅವರು ಏನು ಹೇಳಿದ್ದರು ಮತ್ತು ಏನನ್ನು ಹೇಳದೆ ಬಿಟ್ಟಿದ್ದರು ಎಂಬುವೆರಡನ್ನೂ ನಾನು ಗಮನಿಸಿದೆ. ಅವರು ಏನು ಹೇಳಲಿಲ್ಲವೋ ಅದನ್ನು ಅವರದೇ ಗಿರಣಿಗಳ ಕಾರ್ಮಿಕರು ಹೇಳಿದ್ದರು. ಈ ಒಂದು ಸಂಕ್ಷಿಪ್ತ ವಾಕ್ಯದ ಮೂಲಕ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮಾನವನ ಮಿತಿಗಳೇನು ಎಂಬುದನ್ನು ಬಿರ್ಲಾ ಸೂಚಿಸಿದ್ದಾರೆ ಎಂದು ನನಗನ್ನಿಸಿತು. ಬಿರ್ಲಾ ಮಾತು ಮುಂದುವರೆಸಿದರು: “ಟ್ರಸ್ಟೀಶಿಪ್‌ನಂತಹ ವಿಚಾರದ ಬಗ್ಗೆ ಯಾರಾದರೂ ಒಪ್ಪಿಕೊಳ್ಳಲೇಬೇಕು. ಅದರ ಬಗ್ಗೆ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇಲ್ಲ. ಆತ ಶ್ರೀಮಂತ ವ್ಯಾಪಾರೋದ್ಯಮಿಯಾಗಿರಲಿ, ರಾಜಕಾರಣಿಯಾಗಿರಲಿ ಅಥವಾ ಡಾಕ್ಟರಾಗಿರಲಿ…  ಇದು ನಮ್ಮ ಹಿಂದೂ ತತ್ವಸಿದ್ಧಾಂತಕ್ಕೆ ಸಂಪೂರ್ಣ ಅನುಗುಣವಾಗಿಯೇ ಇದೆ. ನಾವು ಇಲ್ಲಿ ಬದುಕಬೇಕಾದ್ದು ಮಾನವರ ಸೇವೆಗಾಗಿ. ಒಬ್ಬ ವ್ಯಕ್ತಿ ಎಷ್ಟರಮಟ್ಟಿಗೆ ಧರ್ಮದರ್ಶಿಯಾಗಿರಬಲ್ಲ ಎಂಬುದು ಆತನ ಆತ್ಮಬಲವನ್ನು ಅವಲಂಬಿಸಿದೆ. ”

ಗಾಂಧಿಯವರ ವಿಚಾರ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ಕೇಳಿದೆ. ಬಿರ್ಲಾ ಹೇಳಿದರು- “ನನ್ನ ಮೇಲೆ ಅದರ ಪ್ರಭಾವ ಅಸಾಧಾರಣ. ಒಬ್ಬ ವ್ಯಾಪಾರೋದ್ಯಮಿಯಾಗಿ ನನ್ನ ಜವಾಬ್ದಾರಿಗಳೇನು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಬದುಕು ಸೇವೆಗೆ ಮೀಸಲಾಗಿದೆಯೇ ಹೊರತು ಸಂಪತ್ತನ್ನು ಸಂಚಯಿಸುವುದಕ್ಕಲ್ಲ…. “ಈ ಸಾಲನ್ನು ತಟಕ್ಕನೆ ನಿಲ್ಲಿಸಿದೆ ಅವರು ಇದು ಇನ್ನು ಸಾಕು ಎಂಬಂತೆ “ಈ ವಿಷಯ ತೀರ ವೈಯಕ್ತಿಕ ಮಟ್ಟಕ್ಕೆ ತಲುಪುತ್ತಿದೆ ಅನ್ನಿಸುತ್ತೆ.” ಎಂದರು.

ಹೀಗಾಗಿ ನಾನು ‘ಸುರಕ್ಷಿತ ಪ್ರಶ್ನಾವಲಯ’ ಪ್ರವೇಶಿಸಿದೆ. ಬಿರ್ಲಾ ಅವರು ಎಷ್ಟು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ ಎಂದು ಕೇಳಿದೆ. ಅದಕ್ಕೆ ಅವರು “ಇದು ಮುಖ್ಯವಾಗಿ ತಮ್ಮ ಅಣ್ಣನ ಆಸಕ್ತಿಯಿಂದ ನಡೆಯುತ್ತಿರುವ ಕೆಲಸ. ಆತ ತುಂಬ ಧರ್ಮಭೀರು. ನಿಜವಾಗಿ ಹೇಳುವುದಾದರೆ ನಾವು ದೇವಸ್ಥಾನಗಳನ್ನು ಕಟ್ಟಿಸುತ್ತೇವೆ. ಆದರೆ ಅದರಲ್ಲಿ ನಂಬಿಕೆ ಇಲ್ಲ” ಎಂದರು. ಈ ವಿಷಯದಲ್ಲಿ ಬಿರ್ಲಾ ಕುಟುಂಬದ ಧೋರಣೆಗೂ, ಬಿರ್ಲಾ ಕಾರ್ಮಿಕರ ಧೋರಣೆಗೂ ಇದ್ದ ಆಶ್ಚರ್ಯಕರ ಸಾಮ್ಯದಿಂದ ನಾನು ಚಕಿತಳಾದೆ. ಈ ಇಬ್ಬರಿಗೂ ದೇವಸ್ಥಾನಗಳಲ್ಲಿ ನಂಬಿಕೆ ಇರಲಿಲ್ಲ. “ನಾವು ದೇವಸ್ಥಾನಗಳನ್ನು ಕಟ್ಟಿಸುವುದು ಜನರಲ್ಲಿ ಧಾರ್ಮಿಕ ಭಾವನೆಯನ್ನು ಹರಡುವುದಕ್ಕಾಗಿ” ಎಂದರು ಬಿರ್ಲಾ.

ನಾನು, ಮಹಾತ್ಮರಿಗೆ ನಿಕಟವಾಗಿದ್ದ ಯಾರನ್ನು ಭೇಟಿಯಾದರೂ ಗಾಂಧಿಯನ್ನು ನೋಡಿದ ಕೂಡಲೇ ಅವರ ಮೇಲೆ ಯಾವ ರೀತಿಯ ಪ್ರಭಾವವಾಯಿತು ಎಂಬುದನ್ನು ಮರೆಯದೆ ಕೇಳುತ್ತಿದ್ದ. ಯಾಕೆಂದರೆ ತೀರಾ ವಿಭಿನ್ನ ಕ್ಷೇತ್ರಗಳ ಜನರನ್ನು ಸೂಜಿಗಲ್ಲಿನಂತೆ ಸೆಳೆದುಕೊಂಡಿದ್ದೇ ಗಾಂಧಿ ವ್ಯಕ್ತಿತ್ವದ ತುಂಬ ಮುಖ್ಯವಾದ ವೈಶಿಷ್ಟ್ಯ. ಗಾಂಧಿಯವರೊಂದಿಗೆ ಪ್ರಥಮ ಭೇಟಿ ಬಗ್ಗೆ ಹೇಳಿ ಎಂದು ಬಿರ್ಲಾ ಅವರನ್ನು ಕೇಳಿದೆ. ಬಿರ್ಲಾ ಹೇಳಿದರು: “ಅದು ನನಗೆ ತುಂಬ ಚೆನ್ನಾಗಿ ನೆನಪಿದೆ. ನಾನು ಗಾಂಧಿಯವರನ್ನು ಮೊದಲು ನೋಡಿದ್ದು ೧೯೧೫ರ ಡಿಸೆಂಬರ್‌ನಲ್ಲಿ. ಆಗ ನಾನು ಯುವಕ. ಗಾಂಧಿ ಆಗಷ್ಟೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದರು. ಆಫ್ರಿಕಾದಲ್ಲಿ ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಸಾಲದಷ್ಟು ಕಡಿಮೆ ಕೂಲಿಗೆ ದುಡಿಯುತ್ತಿದ್ದ. ಅಲ್ಲಿನ ಮಾಲೀಕರಿಂದ ಹೊಡೆತವನ್ನೂ ನಾನಾ ರೀತಿಯ ಅಪಮಾನಗಳನ್ನೂ ಅನುಭವಿಸುತ್ತಿದ್ದ, ಬಿಳಿಯರ ಜನಾಂಗೀಯ ಹಮ್ಮಿಗೆ ತುತ್ತಾಗಿದ್ದ ಭಾರತೀಯ ಸೋದರರ ಸೇವೆಗಾಗಿ ಗಾಂಧಿಯವರು ಕೈತುಂಬ ಹಣ ತರುತ್ತಿದ್ದ ತಮ್ಮ ಲಾ ಪ್ರಾಕ್ಟೀಸನ್ನು ಬಿಟ್ಟುಕೊಟ್ಟಿದ್ದರು. ಕಲ್ಕತ್ತಾದಲ್ಲಿ ಭಾಷಣ ಮಾಡುವಾಗ ಗಾಂಧಿಯವರು ಈ ವಿಷಯಗಳನ್ನು ಪ್ರಸ್ತಾಪಿಸಿದರು. ಇಲ್ಲದಿದ್ದರೆ ಅವರು ಅಷ್ಟೊಂದು ದೊಡ್ಡ ವ್ಯಕ್ತಿ ಎಂದು ನನಗೆ ಹೇಗೆ ಗೊತ್ತಾಗುತ್ತಿತ್ತು? ಗಾಂಧಿಯವರ ಗೌರವಾರ್ಥ ನಾವು ಒಂದು ದೊಡ್ಡ ಸತ್ಕಾರ ಕೂಟ ಏರ್ಪಡಿಸಿದೆವು. ಅದರ ಹಿಂದಿನ ಪ್ರೇರಣೆ ನಾನೇ!”

ಇಷ್ಟೊಂದು ಶ್ರೀಮಂತ ಕುಟುಂಬದಿಂದ ಬಂದಿರುವ ಹಾಗೂ ಅದಾಗಲೇ ಉದ್ಯಮರಂಗದಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ನಿಮಗೆ ಗಾಂಧಿ ಹೇಗೆ ಕಾಣಿಸಿದರು ಎಂದು ಕೇಳಿದೆ. ಬಿರ್ಲಾ ಹೇಳಿದರು: “ಮೊದಲ ಬಾರಿ ನೋಡಿದಾಗ ತುಂಬ ವಿಲಕ್ಷಣ ವ್ಯಕ್ತಿ ಅನ್ನಿಸಿತು. ಅವರ ಉಡುಪು ಮತ್ತು ಮಾತಿನ ಶೈಲಿ ವಿಚಿತ್ರವಾಗಿತ್ತು. ನನಗೆ ಒಂದು ರೀತಿಯ ಗಲಿಬಿಲಿಯಾಯಿತು. ಆದರೆ ಕ್ರಮೇಣ ಅವರ ಬಗ್ಗೆ ನನಗೆ ಅರ್ಥವಾಗುತ್ತ ಬಂತು. ಅವರು ಸಂಪೂರ್ಣ ಪ್ರಾಮಾಣಿಕತೆಯ, ನೇರ ನಡವಳಿಕೆಯ ವ್ಯಕ್ತಿ ಎಂಬುದನ್ನು ಅರ್ಥಮಾಡಿಕೊಂಡೆ. ರಾಜಕೀಯದ ಬಗ್ಗೆ ಅವರು ಹೊಸದೊಂದೇ ಕಲ್ಪನೆಯನ್ನು ಕೊಟ್ಟರು. ಅವರು ಒಬ್ಬ ಸಂತನೂ ಹೌದು ರಾಜಕಾರಣಿಯೂ ಹೌದು ಎನ್ನಿಸಿತು. ಅವರ ವಿಲಕ್ಷಣ ವ್ಯಕ್ತಿತ್ವಕ್ಕೆ ನಾವು ಹೊಂದಿಕೊಂಡೆವು. ಇಡೀ ಭಾರತ ಅವರ ವಿಲಕ್ಷಣ ಶೈಲಿಯನ್ನು ಅನುಸರಿಸಲು ಪ್ರಾರಂಭಿಸಿತು ಎಂದು ನನಗನ್ನಿಸುತ್ತದೆ. ಇದಾಗಿ ೩೨ ವರ್ಷಗಳಾದವು. ಆಗಿನಿಂದ ನಾನು ಅವರನ್ನು ಅನುಸರಿಸುತ್ತಿದ್ದೇನೆ. ನನ್ನಿಂದ ಅವರಿಗೆ ಯಾವ ಸೇವೆ ಸಾಧ್ಯವೋ ಅದನ್ನು ನೀಡುತ್ತಿದ್ದೇನೆ.”

ನಂತರ ನಾವು ಆರ್.ಎಸ್.ಎಸ್.ನ ಫೆನೆಟಿಕ್ ಹಾಗೂ ಫ್ಯಾಸಿಸ್ಟ್ ಮನೋಭಾವದ ಬಗ್ಗೆ ಮಾತಾಡಿದೆವು. ಹೀಗೆ ಮಾತಾಡುವಾಗ ಮುಂದೆ ಇನ್ನು ಕೆಲವು ದಿನಗಳಲ್ಲಿ ಇದೇ ಬಿರ್ಲಾ ಅವರ ತೋಟದ ಹಾದಿಯಲ್ಲಿ ಗಾಂಧಿಯವರು ಆರ್.ಎಸ್.ಎಸ್.ನವರ ಗುಂಡಿಗೆ ಬಲಿಯಾಗುತ್ತಾರೆ ಎಂದು ನಾನಾಗಲೀ ಬಿರ್ಲಾ ಅವರಾಗಲೀ ಊಹಿಸಿರಲಿಲ್ಲ. ಆರ್.ಎಸ್.ಎಸ್. ಕುರಿತು ಬಿರ್ಲಾ ಹೇಳಿದರು. “ಈ ಸಂಘಟನೆಯನ್ನು ಅಷ್ಟು ಗಂಭೀರವಾಗಿ ನಾನು ಪರಿಗಣಿಸುವುದಿಲ್ಲ. ಅದಕ್ಕೆ ಯಾವ ರಾಜಕೀಯ ಪ್ರಭಾವವೂ ಇಲ್ಲ. ದ್ವೇಷದ ಹೊರತಾಗಿ ಅದರಲ್ಲಿ ಯಾವ ತತ್ವವೂ ಇಲ್ಲ. ದೇಶ ಒಂದು ನೆಮ್ಮದಿಯ ಸ್ಥಿತಿಗೆ ಬಂದ ಮೇಲೆ ಯಾರಲ್ಲಿಯೂ ಇಂತಹ ದ್ವೇಷ ಉಳಿಯುವುದಿಲ್ಲ. ದ್ವೇಷದ ಮೇಲೇ ಯಾರೂ ಬದುಕುವುದು ಸಾಧ್ಯವಿಲ್ಲ.” ಹಿಂದೂ ಮಹಾಸಭಾ ಬಗ್ಗೆ ಹೇಳುತ್ತ “ಆರ್.ಎಸ್.ಎಸ್. ನಂತೆಯೇ ಮಹಾಸಭಾ ಕೂಡ ತಾನಾಗಿಯೇ ಅಳಿದುಹೋಗುತ್ತದೆ. ಭವಿಷ್ಯದ ರಾಜಕೀಯ ಪಕ್ಷಗಳು ಆರ್ಥಿಕ ನೀತಿಯನ್ನು ಆಧರಿಸಿರಬೇಕು.” ಸದ್ಯ ಮಹಾಸಭಾದ ಕುರಿತ ನನ್ನ ಪ್ರಶ್ನೆಗಳನ್ನು ಅವರು ತೀರ ವೈಯಕ್ತಿಕ ಎಂದು ಹಾರಿಸಲಿಲ್ಲವಲ್ಲ ಎಂದು ನನಗೆ ಸಮಾಧಾನವಾಯಿತು.

ಬಿರ್ಲಾ ಮನೆಯಲ್ಲಿ ಎರಡು ಪಕ್ಷಗಳಿದ್ದವು. ಈ ಕುಟುಂಬದ ಕಿರಿಯ ಸೋದರ ಗಾಂಧಿಯನ್ನು ಬೆಂಬಲಿಸಿದ್ದ. ಹಿರಿಯ ಸೋದರ ಹಿಂದೂ ಮಹಾಸಭಾಗೆ ಬಹಳ ನಿಕಟವಾಗಿದ್ದರು. ಈ ನಿಕಟತೆ ಯಾವ ಮಟ್ಟದ್ದು ಎಂಬ ಗುಟ್ಟು ಎಂದಿಗೂ ಬಹಿರಂಗವಾಗಲಿಲ್ಲ. ಸಂಪ್ರದಾಯ ನಿಷ್ಠರಾದ ಬಿರ್ಲಾ ಅವರ ಅಣ್ಣನವರು ಬೆಳಕಿಗೆ ಬಾರದೆ ತಮ್ಮಷ್ಟಕ್ಕೆ ಉಳಿದ ವ್ಯಕ್ತಿಯಾಗಿದ್ದರು. ಪ್ರಾಚೀನ ಹಿಂದೂ ಕಾನೂನಿನ ಪ್ರಕಾರ ಇವರಿಬ್ಬರೂ ಕುಟುಂಬದ ಆಸ್ತಿಗೆ ಜಂಟಿ ಪಾಲುದಾರರಾದ್ದರಿಂದ, ಅಹಿಂಸಾತತ್ವ ಹಾಗೂ ಧಾರ್ಮಿಕ ಸಹಿಷ್ಟುತೆಯ ಮೇಲೆ ಗಾಂಧಿ ಹಾಗೂ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿದ್ದ ಮನೆಯೇ ಸಹಿಷ್ಣುತೆಯೊಂದನ್ನು ಬಿಟ್ಟು ಬೇರೇನನ್ನೂ ಮಾಡಬಲ್ಲ ಹಾಗೂ ಬಹಳಷ್ಟು ಹಿಂಸಾತ್ಮಕ ಘಟನೆಗಳಿಗೆ ಕಾರಣವಾದ ಧರ್ಮಾಂಧ ಹಿಂದೂ ಮಹಾಸಭಾವನ್ನು ಪ್ರೋತ್ಸಾಹಿಸುತ್ತಿದ್ದ ಮನೆಯೂ ಆಗಿತ್ತು.

ಸ್ವಾತಂತ್ರ್ಯಾನಂತರ ಸರ್ಕಾರದ ಯೋಜನೆಗಳಲ್ಲಿ ರಾಷ್ಟ್ರೀಕರಣಕ್ಕೆ ಸಂಬಂಧಿಸಿದ ವಿಷಯ ಜ್ವಲಂತವಾಗಿತ್ತು. ಈ ಬಗ್ಗೆ ಬಿರ್ಲಾ ಅಭಿಪ್ರಾಯವನ್ನು ಕೇಳಿದೆ. “ಜನಕ್ಕೆ ಅದು ಬೇಕೆಂದೆ ಇರಲಿ” ಎಂದು ಹೇಳುತ್ತಾ ತಕ್ಷಣವೇ ಅವರು “ಅದನ್ನು ಜವಳಿ ಉದ್ಯಮಕ್ಕೆ ಅನ್ವಯಿಸಬಾರದು” ಎಂದು ಸೇರಿಸಿದರು. “ಜನ ಇದರ ಪರಿಣಾಮ ಏನು ಎಂದು ಗೊತ್ತಿಲ್ಲದೇ ಮಾತಾಡುತ್ತಿದ್ದಾರೆ. ರಾಷ್ಟ್ರೀಕರಣ ಒಂದು ಘೋಷಣೆ ಮಾತ್ರ. ರಾಷ್ಟ್ರೀಕರಣ ನೀತಿಯ ವಿಫಲತೆಗೆ ಲೇಬರ್ ಪಕ್ಷದ ಇಂಗ್ಲೆಂಡ್ ಸರ್ಕಾರವೇ ಉದಾಹರಣೆ. ಈ ನೀತಿ ಅನುಸರಿಸದಿರುವ ಅಮೆರಿಕಾಕ್ಕೆ ಬಹಳ ಅನುಕೂಲವಾಗಿದೆ ಎಂದರು. ವಾಸ್ತವವಾಗಿ ಬಿರ್ಲಾ ಅಮೆರಿಕಾ ದೇಶವನ್ನು ಬಹಳ ಮೆಚ್ಚಿಕೊಂಡಿದ್ದರು. ಆ ದೇಶದೊಂದಿಗೆ ಬ್ಯುಸಿನೆಸ್ ಮಾಡುವ ಬಗ್ಗೆ ಅವರಿಗೆ ಬಹಳ ನಿರೀಕ್ಷಣೆಗಳಿದ್ದವು. ಆದರೆ ಡಾಲರುಗಳನ್ನು ಪಡೆಯುವುದೇ ತೊಂದರೆಯಾಗಿತ್ತು. ರಾಷ್ಟ್ರೀಕರಣದ ಮಾತಿಲ್ಲದಿದ್ದರೆ ವಿದೇಶೀ ಬಂಡವಾಳವನ್ನು ಬಹಳ ಸುಲಭವಾಗಿ ಭಾರತಕ್ಕೆ ಆಕರ್ಷಿಸಬಹುದಿತ್ತು ಎಂದು ಅವರು ಭಾವಿಸಿದ್ದರು. ರಾಷ್ಟ್ರೀಕರಣದ ಅಗತ್ಯವಿಲ್ಲ. ಆದರೆ ನಮ್ಮಂತಹ ಬ್ಯುಸಿನೆಸ್‌ನವರಿಗೆ ಸಾಮಾನ್ಯ ಮನುಷ್ಯನಲ್ಲಿ ಪೂರ್ಣ ವಿಶ್ವಾಸವಿದೆ. ಒಂದಲ್ಲ ಒಂದು ದಿನ ಜನರಿಗೂ ಅರ್ಥವಾಗುತ್ತದೆ. ಇದು ಒಳ್ಳೆಯದಲ್ಲ ಎಂದು.

ಬಿರ್ಲಾ ಮಾಲೀಕತ್ವದಲ್ಲಿ ಪ್ರಕಟವಾಗುತ್ತಿದ್ದ ಹದಿನಾರು ವೃತ್ತಪತ್ರಿಕೆಗಳ ಸಂಪಾದಕೀಯದ ಪ್ರಕಾರ ಸಾಮಾನ್ಯ ಮನುಷ್ಯನಿಗೆ ಬೆಲೆ ನಿಯಂತ್ರಣವೂ ಬೇಕಾಗಿರಲಿಲ್ಲ. ಬೆಲೆ ನಿಯಂತ್ರಣದ ಬಗ್ಗೆ ಸ್ವತಃ ಬಿರ್ಲಾ ಅವರ ಅಭಿಪ್ರಾಯ ಹೀಗಿತ್ತು: “ನಾನು ಎಂದೂ ಈ ನಿಯಂತ್ರಣಗಳ ಪರ ಅಲ್ಲ. ನಾನು ಯೋಚಿಸುವುದೇ ಬೇರೆ ರೀತಿ. ಕ್ಯಾಪಿಟಲಿಸಂನ ಒಂದು ಮುಖ್ಯ ಅಂಶವೆಂದರೆ ಅಲ್ಲಿ ಮುಕ್ತ ಸ್ವರ್ಧೆಗೆ ಅವಕಾಶವಿದೆ. ಸರ್ಕಾರ ಇತ್ತೀಚೆಗೆ ಸಕ್ಕರೆಯ ಮೇಲಿನ ನಿಯಂತ್ರಣ ತೆಗೆದಿರುವುದರಿಂದ ಸಕ್ಕರೆ ಬೆಲೆ ಈಗಾಗಲೇ ಇಳಿದಿದೆ. ”ಆದರೆ ಅವರು ಮಾತಿನಲ್ಲಿ ಸತ್ಯವನ್ನು ತಿರುಚಿದ್ದರು. ಸಕ್ಕರೆ ನಿಯಂತ್ರಣದ ವಿವಾದ ಎಷ್ಟು ಬಿಸಿ ಏರಿತ್ತೆಂದರೆ ಗಾಂಧೀಜಿಯವರು ಕೂಡ ಈ ಬಗ್ಗೆ ಪಕ್ಷವಹಿಸಿ ಮಾತಾಡಬೇಕಾಯಿತು. ನಿಯಂತ್ರಣ ತೆಗೆದ ಮೇಲೆ ಸಕ್ಕರೆಯ ಬೆಲೆ ನಿಜಕ್ಕೂ ಇಳಿದಂತೇ ಆಗಿತ್ತು. ಏಕೆಂದರೆ ಕಾಳಸಂತೆಯಲ್ಲಿ ಕೊಳ್ಳುತ್ತಿದ್ದ ಬೆಲೆಗಿಂತ ಅದು ಕಡಿಮೆಯಾಗಿತ್ತು. ಆದರೆ ಕಾನೂನುಬದ್ಧ ನಿಯಂತ್ರಣ ಬೆಲೆಯಲ್ಲಿ ಕೊಳ್ಳುವವರಿಗೆ ಅದರ ಬೆಲೆ ೧೨ ಆಣೆಯಿಂದ ಒಂದು ರೂಪಾಯಿಗೆ ಹೆಚ್ಚಾಗಿತ್ತು ಮತ್ತು ಸೇರಿಗೆ ಎಂಟಾಣೆಯಾಗಿತ್ತು.

ಹೀಗಾಗಿ ಸಾಮಾನ್ಯ ಜನ ಹೆಚ್ಚು ಬೆಲೆ ತೆರುವಂತಾಗಿತ್ತು. ನಿಯಂತ್ರಣ ತೆಗೆದ ಮೇಲಂತೂ ಅದರ ಬೆಲೆ ಎರಡು ಪಟ್ಟು ಹೆಚ್ಚಾಯಿತು. ಗಾಂಧಿಯವರು ಇತ್ತೀಚಿನ ಪ್ರಾರ್ಥನಾ ಸಭೆಗಳಲ್ಲಿ ಬೆಲೆಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆಯಬೇಕು ಎಂದು ಪ್ರತಿಪಾದಿಸಿದ್ದರು. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಮಾತನ್ನೇ ಹೇಳಿದ್ದೇನೆ ಎಂದು ಅವರು ನಂಬಿದ್ದರು. ಗಾಂಧಿಯವರು ತಮ್ಮ ಸ್ನೇಹಿತರು ಹಾಗೂ ಅತಿಥೇಯರ ಪರವಾಗಿ ನಿಜವನ್ನು ತಿರುಗಿಸುತ್ತಾರೆ ಎಂದು ಊಹಿಸುವುದಕ್ಕೂ ಸಾಧ್ಯವಿರಲಿಲ್ಲ. ಗಾಂಧಿಯವರ ನಿಲುವನ್ನು ನೋಡಿ ಬಹಳ ಮಂದಿಗೆ ಆಶ್ಚರ್ಯವಾಗಿತ್ತು. ಈ ಬಗ್ಗೆ ನಿಮಗೂ ಗಾಂಧಿಯವರಿಗೂ ಒಮ್ಮತವಿದೆಯೇ ಎಂದು ಕೇಳಿದೆ. ಬಿರ್ಲಾ ಹೇಳಿದರು. “ಇಲ್ಲವೇ ಇಲ್ಲ. ಗಾಂಧೀಜಿಗೆ ಅವರದೇ ಆದ ಅಭಿಪ್ರಾಯಗಳಿವೆ. ಒಮ್ಮೊಮ್ಮೆ ನನ್ನ ಹಾಗೂ ಅವರ ಅಭಿಪ್ರಾಯಗಳು ಕಾಕತಾಳೀಯವಾಗಿ ಒಂದೇ ಆಗಿರಬಹುದಷ್ಟೆ.”

ಬಿರ್ಲಾ ಮತ್ತು ಗಾಂಧಿಯವರ ಅಭಿಪ್ರಾಯಗಳಲ್ಲಿ ಹೊಂದಿಕೆಯಾಗದ ಒಂದು ಕ್ಷೇತ್ರ ಬಹಳ ಮುಖ್ಯವಾದದ್ದು. ಆ ವಿಷಯದಲ್ಲಿ ಅವರ ನಾಟಕೀಯ ಭಿನ್ನಾಭಿಪ್ರಾಯ ಎಲ್ಲರ ಟೀಕೆಗೂ ಗುರಿಯಾಗಿತ್ತು. ಬಿರ್ಲಾ, ಯಂತ್ರದಿಂದ ಬಟ್ಟೆ ತಯಾರಿಸುವ ಉದ್ಯಮಿಯಾಗಿ ಈ ದೇಶದಲ್ಲಿ ಅಗ್ರಗಣ್ಯರಾಗಿದ್ದರು. ಆದರೆ ಯಂತ್ರದಿಂದ ತಯಾರಿಸಿದ ಬಟ್ಟೆಯ ಬಗ್ಗೆ ಗಾಂಧಿಯವರ ವಿರೋಧ ಐತಿಹಾಸಿಕವಾದದ್ದು. ಅವರ ದೃಷ್ಟಿಯಲ್ಲಿ ಚರಕಾ ಕೇವಲ ನೂಲು ತೆಗೆಯುವ ಸಾಧನವಾಗಿರಲಿಲ್ಲ. ಅದು ಒಂದು ಸಂಕೇತವಾಗಿತ್ತು. ಯಂತ್ರಕ್ಕೆ ಪ್ರತಿಯಾಗಿ ಅದು ಗುಡಿ ಕೈಗಾರಿಕೆಯನ್ನು ಪ್ರತಿನಿಧಿಸುವ ಚಿಹ್ನೆಯಾಗಿತ್ತು. ಅನಂತರ ಬಿರ್ಲಾರ ಒಂದು ಮಾತು ನನ್ನನ್ನು ವಿಸ್ಮಯಗೊಳಿಸಿತು. “ಅತಿ ಉನ್ನತ ಮಟ್ಟದ ಜೀವನಶೈಲಿಯಲ್ಲಿ ತಮಗೆ ನಂಬಿಕೆಯಲ್ಲ ಎಂಬುದು ಗಾಂಧೀ ಸಿದ್ಧಾಂತ. ” ಈ ಮಾತಿನ ಬಗ್ಗೆ ಬಿರ್ಲಾ ಹೇಳಿದ್ದು ಸರಿ ಎಂದು ಆಮೇಲೆ ನನಗೆ ಗೊತ್ತಾಯಿತು.

ಜನಸಾಮಾನ್ಯರ ಮಟ್ಟ ಬಹಳ ಮೇಲೇರುವುದನ್ನು ಗಾಂಧಿ ಬಯಸುತ್ತಿರಲಿಲ್ಲ. ಜೀವನಮಟ್ಟ ಬಹಳ ಏರಿದಾಗ ಪಾಪ ಮತ್ತು ಲೋಲುಪತೆ ಹೆಚ್ಚುತ್ತದೆ ಎಂದು ಅವರು ಭಾವಿಸಿದರು. ಬಡತನವನ್ನು ಗಾಂಧಿ ವೈಭವೀಕರಿಸುವ ರೀತಿಯನ್ನು ಒಪ್ಪಿಕೊಳ್ಳಲು ಸ್ವತಃ ನೆಹರೂ ಕೂಡ ಸಿದ್ಧವಿರಲಿಲ್ಲ. ಈ ವಿಷಯಕ್ಕೆ ಬಂದಾಗ ಬಿರ್ಲಾ ಅವರು “ನನ್ನ ಅಭಿಪ್ರಾಯವೇ ಬೇರೆ, ನಾನು ಕೈಗಾರಿಕೋದ್ಯಮಿ” ಎಂದರು.

ಈ ಸಲವಾದರೂ ಪೂರ್ಣ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಿಂದ ಗಾಂಧಿಯವರ ಯಾವ ತತ್ವಗಳೊಂದಿಗೆ ನಿಮಗೂ ಅವರಿಗೂ ಸಮ್ಮತವಿದೆ ಎಂದು ಕೇಳಿದೆ. ಬಿರ್ಲಾ ಹೇಳಿದರು “ಸತ್ಯ, ಪ್ರಮಾಣಿಕತೆ, ನೇರ ನಡವಳಿಕೆ ಹಾಗೂ ಅತ್ಯುಚ್ಚ ನಡತೆಯಲ್ಲಿ ನನಗೆ ನಂಬಿಕೆ ಇದೆ. “ಉದ್ಯಾನದ ಕೃತಕ ಕೊಳದ ಮೆಲೆ ಹಂತಹಂತವಾಗಿ ಬೀಳುತ್ತಿದ್ದ ಜಲಧಾರೆಯನ್ನು, ಎತ್ತರೆತ್ತರವಾಗಿ ಬೆಳೆಸಿದ್ದ ಮರಗಳ ಮೇಲಿನ ನೀಲಿ ಆಕಾಶವನ್ನೂ, ತಮ್ಮ ಸೌಧದ ಭವ್ಯ ಗಾಜಿನ ಕಿಟಕಿಯ ಮೂಲಕ ನೋಡುತ್ತಾ ಬಿರ್ಲಾ ಹೇಳಿದರು – “ನಾನು ಸರಳ ಜೀವನಶೈಲಿಯನ್ನು ಇಷ್ಟಪಡುತ್ತೇನೆ. ಸೇವಾ ಜೀವನದಲ್ಲಿ ನನಗೆ ನಂಬಿಕೆ ಇದೆ.” ಕೆಲವು ಕ್ಷಣ ನಮ್ಮಿಬ್ಬರ ನಡುವೆ ಮೌನ ನೆಲೆಸಿತ್ತು. “ನೀವು ನಿಮ್ಮ ಮಿಲ್ಲುಗಳಲ್ಲಿ ಇತರರಿಗಿಂತ ಹೆಚ್ಚಿನ ಸಮಾಜ ಕಲ್ಯಾಣ ಸೇವೆಗಳನ್ನು ಮಾಡುತ್ತೀರಾ ಅಥವಾ ಇತರರಿಗಿಂತ ಹೆಚ್ಚು ಕೂಲಿ ಕೊಡುತ್ತೀರಾ?’ ಎಂದು ಪ್ರಶ್ನಿಸಿದೆ. ಬಿರ್ಲಾ ಹೇಳಿದರು ‘ನಾವು ಕೊಡುವ ಮಜೂರಿ ಅತ್ಯಧಿಕ ಎಂದೇ ಹೇಳಬೇಕು. ನಾವು ಮಾಡುವ ಸಮಾಜ ಕಲ್ಯಾಣ ಸೇವಾ ಕಾರ್ಯಗಳೂ ಅತ್ಯಧಿಕವಾಗಿವೆ. ಇತರ ಕಾರ್ಖಾನೆಗಳವರು ಏನು ಸೌಲಭ್ಯ ಒದಗಿಸುತ್ತಾರೋ ಅದನ್ನು ಬಿರ್ಲಾ ಮಿಲ್ಲುಗಳು ಒದಗಿಸುತ್ತವೆ. ಆಸ್ಪತ್ರೆಗಳು, ತೀರಾ ಸಾಮಾನ್ಯ ದರದ ಬಾಡಿಗೆಗೆ ಮನೆಗಳು, ಶುಲ್ಕರಹಿತ ಶಿಕ್ಷಣ, ಶಾಲಾ ಸೌಲಭ್ಯ ಇತ್ಯಾದಿ’ ಈ ಮಾತುಗಳ ಹಿನ್ನೆಲೆಯಲ್ಲಿ ಬಿರ್ಲಾ ಕಾರ್ಮಿಕರ ಮಾತುಗಳು ನೆನಪಾದವು. ಶಾಲೆ, ಹಾಲು ಇತ್ಯಾದಿ ಸೌಲಭ್ಯಗಳೆಲ್ಲ ಮ್ಯಾನೇಜರುಗಳ ಹಾಗೂ ಹಾಜರಾತಿ ತೆಗೆದುಕೊಳ್ಳುವವರ ಮಕ್ಕಳ ಪಾಲಿಗೆ. ನಾನು ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅವುಗಳು ಈಗ ಪ್ರಸ್ತಾಪಿಸಿದ ಕಾರ್ಮಿಕ ಕಾನೂನು, ಕಾರ್ಮಿಕರ ಪರಿಹಾರ ಧನ. ಸಾಮಾಜಿಕ ವಿಮೆ ಮುಂತಾದವುಗಳಿಗೆ ಸಂಬಂಧಿಸಿದವುಗಳು. ವಿಮೆ ಬಳಕೆದಾರರೇ ಕೊಡುತ್ತಾರೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಷ್ಕರದ ಹಕ್ಕು ಇರಬೇಕು ಎನ್ನುತ್ತೀರಾ? ಎಂದೆ. ‘ಎಲ್ಲವೂ ಸರಿಯಿದ್ದ ಮೇಲೆ ಮುಷ್ಕರ ಯಾಕೆ ಬೇಕು?’ ಅಂದರು. ನಿಮ್ಮ ತತ್ವಗಳಿಗೂ ಗಾಂಧಿಯವರ ತತ್ವಗಳಿಗೂ ಎಲ್ಲೆಲ್ಲಿ ಸಾಮ್ಯವಿದೆ?’ ಯಾವ ಸಾಮ್ಯವೂ ಇಲ್ಲ. ನಾನು ಕೈಗಾರಿಕೋದ್ಯಮಿ ಮತ್ತು ಗಿರಣಿ ಮಾಲೀಕ. ಆತ ಸಂತ. ಹೀಗಿರುವಾಗ ಸಾಮ್ಯ ಎಲ್ಲಿನದು? ಆದರೆ ಅವರ ಎಲ್ಲ ಉತ್ತಮ ಅಂಶಗಳೂ ನನ್ನನ್ನು ಆಕರ್ಷಿಸಿವೆ. ನಿಮ್ಮ ಸಂಕಲ್ಪ ಒಳ್ಳೆಯದಿದ್ದರೆ ಒಳ್ಳೆಯ ವ್ಯಕ್ತಿಗಳ ಪ್ರಭಾವ ನಿಮ್ಮ ಮೇಲೆ ಆಗಿಯೇ ಆಗುತ್ತದೆ’.

ನಿಮ್ಮ ಮಿಲ್ಲುಗಳ ಕಾರ್ಮಿಕರ ಸಮಾಜ ಕಲ್ಯಾಣದ ಬಗ್ಗೆ ಗಾಂಧಿಯವರು ನಿಮಗೇನಾದರೂ ತಿಳುವಳಿಕೆ, ಸಲಹೆ ಕೊಡುತ್ತಾರಾ ಎಂದು ಪ್ರಶ್ನಿಸಿದೆ. ನನ್ನ ಮಿಲ್ಲುಗಳಲ್ಲಿ ನಾನು ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಅವರೇನೂ ಹೇಳುವುದಿಲ್ಲ ಎಂದರು. ಇರಬಹುದೇನೋ ಎಂದು ಅಂದುಕೊಳ್ಳುತ್ತಾ ನಾನು ಹೊರಟೆ. ಪ್ರತಿದಿನವೂ ಗಾಂಧಿ ನೂರಾರು ಮಂದಿಗೆ ನೂರಾರು ವಿಷಯಗಳ ಬಗ್ಗೆ ಬೋಧಿಸುತ್ತ ಇರುತ್ತಾರೆ. ಬದುಕಿನ ತೀರ ವೈಯಕ್ತಿಕ ವಿಚಾರಗಳಿಂದ ಹಿಡಿದು ರಾಷ್ಟ್ರೀಯ ನೀತಿಯ ಮೇಲೆ ಪರಿಣಾಮ ಬೀರುವಂಥ ವಿಷಯಗಳವರೆಗೂ ಅವರು ಸಲಹೆಗಳನ್ನು ಕೊಡುತ್ತಲೇ ಇರುತ್ತಾರೆ. ಗಿರಣಿಗಳಲ್ಲಿ ತಮ್ಮ ಕಾರ್ಮಿಕರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಅವರು ಬಿರ್ಲಾ ಅವರಿಗೇಕೆ ತಿಳಿ ಹೇಳಬಾರದು? ಕಾರ್ಖಾನೆಗಳ ಕಾರ್ಮಿಕರ ದುಃಸ್ಥಿತಿ ಗಾಂಧಿಯವರಿಗೆ ತಿಳಿಯದ ವಿಷಯವೇನಲ್ಲ. ಅದನ್ನು ಅವರು ಅರಿತಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಂಥ ಸ್ಥಾನದಲ್ಲಿದ್ದವರು ಬಿರ್ಲಾ. ಸಹಸ್ರಾರು ಕಾರ್ಮಿಕರ ಬದುಕಿನ ಸ್ಥಿತಿಗತಿಗಳನ್ನು ನಿರ್ಣಯಿಸುವ ಶಕ್ತಿ ಅವರಿಗಿತ್ತು.

ಸುಮಾರು ಕಾಲ ಶತಮಾನದವರೆಗೆ ಗಾಂಧಿ ಬಿರ್ಲಾ ಗೃಹದಲ್ಲಿಯೇ ತುಂಗುತ್ತಿದ್ದರು. ಇದೇ ಸೂರಿನ ಕೆಳಗೆ, ಗಾಂಧಿಯವರ ನಿಷ್ಠಾವಂತ ಅನುಯಾಯಿ ಎಂದು ಹೇಳಿಕೊಳ್ಳುವ ಈ ಕೈಗಾರಿಕೋದ್ಯಮಿಯೂ ಇದ್ದರು. ಟ್ರಸ್ಟೀಶಿಪ್‌ನ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರುವುದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಇರಲು ಸಾಧ್ಯವೇ? ಯಾವ ಕೈಗಾರಿಕೋದ್ಯಮಿಗೂ ಸಿಗದಂಥ ಗಾಂಧೀಜಿ ಸಾನಿಧ್ಯ ದೀರ್ಘಕಾಲದವರೆಗೆ ಬಿರ್ಲಾರಿಗೆ ಸಿಕ್ಕಿತ್ತು. ಆದರೂ ಬಿರ್ಲಾ ಇತರ ಕೈಗಾರಿಕೆಗಳಿಗಿಂತ ಭಿನ್ನವಾದ ಒಂದೇ ಅಂದು ಅಂಶವನ್ನೂ ಅನುಷ್ಠಾನಕ್ಕೆ ತರಲಿಲ್ಲ. ಅಲ್ಪಸ್ವಲ್ಪ ಪೆನ್ಷನ್ ಯೋಜನೆ ಅಥವಾ ಅಸ್ಪೃಶ್ಯ ಕಾರ್ಮಿಕ ಗೂಡುಗಳಲ್ಲಿ ಕಿಂಚಿತ್ ಬದಲಾವಣೆ….. ಯಾವುದನ್ನೂ ಅವರು ಮಾಡಿರಲಿಲ್ಲ. ಪ್ರತಿಸ್ಪರ್ಧಿ ಕೈಗಾರಿಕೋದ್ಯಮಿಗಳ ಕಾರ್ಮಿಕರ ಸ್ಥಿತಿಗತಿಗಳಿಗಿಂತ ಬಿರ್ಲಾ ಕಾರ್ಮಿಕರ ಸ್ಥಿತಿಗತಿಗಳು ಯಾವ ರೀತಿಯಲ್ಲೂ ಭಿನ್ನವಾಗಿರಲಿಲ್ಲ. ಆದರೆ ಅವರ ದೃಷ್ಟಿಯಲ್ಲಿ ಅದೇ ಅತ್ಯುತ್ತಮ ಸೌಲಭ್ಯವಾಗಿತ್ತು.

Trusteeshipಗೆ ದೃಢಸಂಕಲ್ಪ ಬೇಕಾಗುತ್ತದೆ ಎಂಬ ಮಾತನ್ನು ಹೇಳುವ ಮೂಲಕ ಬಿರ್ಲಾ ಮೂಲಸತ್ಯವನ್ನೇ ಹೇಳಿದ್ದರು. Trustship ಯೋಜನೆಯ ದೌರ್ಬಲ್ಯವನ್ನು ಅವರೇ ತೋರಿಸಿಕೊಟ್ಟಿದ್ದರು.

ವ್ಯಕ್ತಿ ನಿಜವಾಗಿ ಎಷ್ಟರಮಟ್ಟಿಗೆ ಧರ್ಮದರ್ಶಿಯಾಗುತ್ತಾನೆ ಎನ್ನುವುದು ಆತನ ಆತ್ಮಬಲವನ್ನು ಅವಲಂಬಿಸಿದೆ ಎಂದಿದ್ದರು ಅವರು. ಗಾಂಧಿ ಬಗೆಗೆ ಅಷ್ಟೆಲ್ಲ ಪ್ರೀತಿ ಇಟ್ಟಿದ್ದ ಬಿರ್ಲಾ ಅವರಿಗೇ ಧರ್ಮದರ್ಶಿಯಾಗಲು ಅಗತ್ಯವಾದಷ್ಟು ಪ್ರಮಾಣದ ‘ಆಧ್ಯಾತ್ಮಿಕ ಶಕ್ತಿ’ಯನ್ನು ಧರ್ಮಬುದ್ಧಿಯನ್ನು ಮೈಗೂಡಿಸಿಕೊಳ್ಳಲು ಆಗಲಿಲ್ಲ ಎಂದ ಮೇಲೆ ಗಾಂಧೀವಲಯದ ಹೊರಗಿದ್ದ ಕೈಗಾರಿಕೋದ್ಯಮಿಗಳು, ಸಂಪತ್ತಿನ ಮಾಲೀಕರು, ಮಹಾರಾಜರುಗಳು, ವ್ಯಾಪಾರೋದ್ಯಮಿಗಳು ಈ ಆಧ್ಯಾತ್ಮಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಹೇಗೆ ತಾನೇ ಸಾಧ್ಯ?

ಸೇಠ್ ದಾಲ್ಮಿಯಾ:

ಭಾರತದ ಕೈಗಾರಿಕೋದ್ಯಮಿಗಳಲ್ಲಿ ಬಲಿಷ್ಠ ತ್ರಿಮೂರ್ತಿಗಳಾದ ಬಿರ್ಲಾ, ದಾಲ್ಮಿಯಾ, ಟಾಟಾ – ಈ ಮೂವರ ಪೈಕಿ ಬಿರ್ಲಾ ಮತ್ತು ಟಾಟಾ ಅವರು Who is who in India ದಲ್ಲಿ ತಮ್ಮ ಪರಿಚಯಗಳನ್ನು ಕೊಡುವಾಗ ಅತ್ಯಂತ ಸಂಕ್ಷಿಪ್ತವಾಗಿ ಹಾಗೂ ವಸ್ತುಸ್ಥಿತಿಯ ವಿವರಗಳನ್ನು ಮಾತ್ರ ಕೊಟ್ಟಿದ್ದಾರೆ. ಅಮೆರಿಕಾದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳು ತಮ್ಮ ಜೀವನ ವಿವರಗಳನ್ನು ತಾವೇ ಬರೆದುಕೊಡುತ್ತಾರೆ. ಆದರೆ ಭಾರತದಲ್ಲಿ ತಾವು ಮಾಡಿದ ಅನಾಮಿಕ ದಾನಧರ್ಮಗಳ ವಿವರಗಳನ್ನೂ ಕೂಡ ಸೇರಿಸುವುದುಂಟು. ಇದು ತಪ್ಪೆಂದು ಅವರು ಭಾವಿಸುವುದಿಲ್ಲ. ಉಚಿತವೇ ಎಂಬ ಪ್ರಶ್ನೆ ಅವರಿಗೆ ಬಂದಂತಿಲ್ಲ. ದಾಲ್ಮಿಯಾ ವಿವರಗಳಂತೂ ಆಡಂಬರಶೈಲಿಯ ಅತ್ಯುತ್ಪ್ರೇಕ್ಷೆಯ ಬರಹದಂತಿವೆ. ‘ಅವರು ನೀಡಿರುವ ದಾನಗಳಿಗೆ ಲೆಕ್ಕವೇ ಇಲ್ಲ. ಆದರೆ ಅವರು ಪ್ರಚಾರ ಬಯಸುವುದಿಲ್ಲವಾದ್ದರಿಂದ ಬಹಳ ಜನಕ್ಕೆ ಈ ವಿಷಯ ತಿಳಿದಿಲ್ಲ….. ಒಬ್ಬ ಶ್ರೀಮಂತನಿಗೆ ಎಂದಿಗೂ ಬಡವನ ಜೀವನ ಸೌಂದರ್ಯ ತಿಳಿಯುವುದು ಸಾಧ್ಯವಿಲ್ಲವಾದ್ದರಿಂದ ಅದನ್ನು ಅನುಭವಿಸುವುದಕ್ಕಾಗಿಯೇ ಅವರು ತಮ್ಮ ಐಹಿಕ ಸಂಪತ್ತನ್ನೆಲ್ಲ ತೊರೆದಿದ್ದಾರೆ. ಸ್ವ-ಇಚ್ಛೆಯಿಂದ ಬಡತನದ ಬದುಕನ್ನು ಸ್ವೀಕರಿಸಿದ್ದಾರೆ.’ ಹೀಗೆ ಅವರ ಪ್ರವರ ಸಾಗುತ್ತದೆ.

ಸೇಠ್ ದಾಲ್ಮಿಯಾ ಅವರು ಭಾರತೀಯ ಉಪಖಂಡದಲ್ಲಿ ಪ್ರವೇಶಿಸದೇ ಇದ್ದಂತಹ ಕೈಗಾರಿಕಾ ಕ್ಷೇತ್ರ ಯಾವುದೂ ಇರಲಿಲ್ಲ. ಇವರ ಉದ್ಯಮಗಳು ಪಾಕಿಸ್ತಾನಕ್ಕೂ ಹಬ್ಬಿದ್ದವು. ಸಿಮೆಂಟ್, ಏರ್‌ಲೈನ್ಸ್, ರೈಲ್ವೆ, ವಿದ್ಯುತ್ ಕಂಪನಿಗಳು, ರಾಸಾಯನಿಕ ಕಾರ್ಖಾನೆಗಳು, ಪ್ಲೈವುಡ್, ಕಲ್ಲಿದ್ದಲ ಗಣಿಗಳು, ಸಕ್ಕರೆ, ಸೋಪು, ಮಾರ್ಗರಿನ್, ಟೆಕ್ಸ್‌ಟೈಲ್ಸ್, ಬ್ಯಾಂಕುಗಳು, ಇನ್‌ಶೂರೆನ್ಸ್ ಹಾಗೂ ವೃತ್ತಪತ್ರಿಕೆಗಳ ಒಂದು ದೊಡ್ಡ ಸರಣಿ. ಇದರಲ್ಲಿ ಬಾಂಬೆಯ ಪ್ರತಿಷ್ಠಿತ ದಿನ ಪತ್ರಿಕೆ The Times of India ಹಾಗೂ ಪಾಕಿಸ್ತಾನದ ಪ್ರಸಿದ್ಧ ಪತ್ರಿಕೆ The Civil and Military Gazette ಸೇರಿವೆ.

ಜನಸಾಮಾನ್ಯರಿಗೆ ದಾಲ್ಮಿಯಾ ತಮ್ಮ ಬಹುಸಂಖ್ಯಾತ ಉದ್ಯಮಗಳಿಗಿಂತ ಬಹುಸಂಖ್ಯಾತ ಪತ್ನಿಯರ ಕಾರಣದಿಂದ ಪ್ರಸಿದ್ಧರಾಗಿದ್ದರು. ಈ ಪತ್ನಿಯರ ಸಂಖ್ಯೆ ಬಗ್ಗೆ ಒಂದೊಂದು ವರದಿ ಒಂದೊಂದು ರೀತಿ ಇದೆ. ದಾಲ್ಮಿಯಾ ಬರೆದಿರುವ ಬೃಹತ್ ಆತ್ಮಕಥನಗಳೆಲ್ಲವೂ ಈ ಅಂಶದ ಬಗ್ಗೆ ಕುತೂಹಲದ ಘಟ್ಟಕ್ಕೆ ಬಂದು ನಂತರ ಅಸ್ಪಷ್ಟತೆಯಲ್ಲಿ ಕೊನೆಯಾಗುತ್ತಿದ್ದವು. ‘ನಾನು ಅನೇಕ ಸಲ ಮದುವೆಯಾಗಿದ್ದೇನೆ. ನಾನು ಅನೇಕ ಬಾರಿ ಪಾಪ ಮಾಡಿದ್ದೇನೆ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ಇಷ್ಟೊಂದು ಪಾಪಗಳನ್ನು ಮಾಡಲು ಧೈರ್ಯವಿರುತ್ತಿರಲಿಲ್ಲವೇನೊ’ ಎಂದು ಬರೆದಿದ್ದಾರೆ. ಇಂತಹ ಕುತೂಹಲಕಾರಿ ಅಂಶಗಳಿಂದಾಗಿಯೇ ನಾನು ದಾಲ್ಮಿಯಾ ಭವನಕ್ಕೆ ಹೋದೆ. ನವದೆಹಲಿಯಲ್ಲಿ ಈ ಭವನ ಬಿರ್ಲಾ ಗೃಹಕ್ಕೆ ಸಮೀಪದಲ್ಲಿಯೇ ಇದೆ. ಅವರ ಹೆಂಡತಿಯೊಬ್ಬರು ನನ್ನನ್ನು ಬರಮಾಡಿಕೊಂಡರು. ನಿರ್ಜೀವ ಮುಖಭಾವದ ಪುಟ್ಟ ಆಕೃತಿಯ ಹೆಂಗಸು. ತನ್ನ ಪತಿಯನ್ನು ನೋಡುವುದಕ್ಕೆ ವಿದೇಶೀ ಮಹಿಳೆ ಬಂದಿದ್ದಾಳೆ ಎಂಬ ಸಂತಸವನ್ನು ತೋರಗೂಡದ ಮುಖಭಾವದಲ್ಲಿ ಆಕೆ ನನ್ನನ್ನು ಒಂದು ದೊಡ್ಡ ಡ್ರಾಯಿಂಗ್ ರೂಂಗೆ ಕರೆದೊಯ್ದಳು. ನಮ್ಮ ಪೂರ್ವಭಾವೀ ಮಾತುಕತೆ ಆರಂಭವಾಯಿತು. ‘ಭಾರತದಲ್ಲಿ ನಿಮಗೆ ಯಾರು ಗೊತ್ತು’ ಎಂದು ಆಕೆ ಕೇಳಿದರು. ಇದೊಂದು ನಿಗೂಢ ಪ್ರಶ್ನೆ. ಆಕೆ ಯಾವ ಉದ್ದೇಶದಿಂದ ಹಾಗೆ ಕೇಳಿದ್ದಾರೆ ಎಂದು ನನಗೆ ಗೊತ್ತಾಯಿತು. ನಾನು ಏನೋ ಉತ್ತರಿಸಿದೆ. ಅದರಿಂದ ಆಕೆಗೆ ತೃಪ್ತಿಯಾಗಲಿಲ್ಲ. ಆಕೆ ಸ್ಪಷ್ಟವಾಗೇ ಕೇಳಿದರು ಬಿರ್ಲಾಗಳು ನಿಮಗೆ ಗೊತ್ತೆ? ಓ, ಇದು ಅವರಿಗೆ ಬೇಕಾಗಿದ್ದ ವಿಷಯ. ಬಿರ್ಲಾ ಮೇಲಿನ ಅಸೂಯೆಯ ಆಧಾರದ ಮೇಲೆ ದಾಲ್ಮಿಯಾ ಉದ್ಯಮ ಜಗತ್ತು ರೂಪುಗೊಂಡಿದೆ ಎಂಬುದನ್ನು ನಾನು ಕೇಳಿದ್ದೆ. ಆದರೆ ಯುವಕರೂ ಆಕರ್ಷಕ ವ್ಯಕ್ತಿತ್ವದವರೂ ಆಗಿದ್ದ ಬಿರ್ಲಾ ಎಂದಿಗೂ ತಮ್ಮ ಮೊದಲ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ಬಿರ್ಲಾ, ಗಾಂಧಿಯನ್ನು ತಮ್ಮ ಆಶ್ರಯದಲ್ಲಿಟ್ಟುಕೊಂಡರು. ದಾಲ್ಮಿಯಾ ಜಿನ್ನಾರಿಗೆ ಒತ್ತಾಸೆಯಾಗಿ ನಿಂತರು. ಬಿರ್ಲಾ, ಕಾಂಗ್ರೆಸ್ ಪಕ್ಷಕ್ಕೆ ಹಣ ಒದಗಿಸತೊಡಗಿದರು. ದಾಲ್ಮಿಯಾ ಮುಸ್ಲಿಂ ಲೀಗ್‌ಗೆ ಹಣ ಒದಗಿಸಿದರು. ಆದರೆ ದಾಲ್ಮಿಯಾ ಸಂಪ್ರದಾಯನಿಷ್ಠ ಹಿಂದೂ ಕೂಡ ಆಗಿದ್ದರಿಂದ ಹಿಂದೂ ಮಹಾಸಭೆಗೂ ತಮ್ಮ ಔದಾರ್ಯದ ಸ್ವಲ್ಪ ಭಾಗವನ್ನು ಹರಿಸಿದರು. ಸ್ವಾತಂತ್ರ್ಯ ಬಂದ ನಂತರ ಬಿರ್ಲಾ ಭಾರತದ ನಂಬರ್ ೧ ಉದ್ಯಮಿಯಾದರು. ಹೀಗಾಗಿ ದಾಲ್ಮಿಯಾ ಪಾಕಿಸ್ತಾನದ ಉದ್ಯಮ ಗಾರುಡಿನಾಗಲೂ ನಿರ್ಧರಿಸಿದರು. ಆದರೆ ಹಿಂದೂ ಮುಸ್ಲಿಂ ರಕ್ತಪಾತದ ಘರ್ಷಣೆಯಿಂದಾಗಿ ದಾಲ್ಮಿಯಾ ಹಿಂದೂಗಳ ಸಹಾನುಭೂತಿಯನ್ನು ಕಳೆದುಕೊಂಡರು. ದಾಲ್ಮಿಯಾ ಜೈನ್ ಹಣಕಾಸು ಜಾಲಕ್ಕೂ ಅದರ ಪರಿಣಾಮ ತಟ್ಟಿತು. ಪಾಕಿಸ್ತಾನದಲ್ಲಿ ಹೂಡಿಕೆ ಮಾಡಿದ್ದು ಇವರಿಗೆ ತಿರುಗುಬಾಣವಾಯಿತು. ಗಾಂಧಿ ಅನುಯಾಯಿಯಾಗುವುದಕ್ಕೆ ಕಾಲ ಮಿಂಚಿತ್ತು. ಈಗ ಹೊಸದೊಂದು ದಾರಿಯನ್ನು ಹುಡುಕಿಕೊಳ್ಳಬೇಕಿತ್ತು.

ಕಾಂಗ್ರೆಸ್ಸಿನ ಉಗ್ರ ಹಿಂದೂವಾದಿಗಳು ಗೋರಕ್ಷಣೆಯ ಶಾಸನಕ್ಕಾಗಿ ಒತ್ತಾಯಪಡಿಸಿದಾಗ ಅಲ್ಲಿ ದಾಲ್ಮಿಯಾ ಅವಕಾಶ ಕಂಡುಕೊಂಡರು. ಕಾಂಗ್ರೆಸ್ ಒಂದು ಮಿಶ್ರಸಂಸ್ಥೆಯಾಗಿತ್ತು. ಅಲ್ಲಿದ್ದ ಮುಸ್ಲಿಂ ಸದಸ್ಯರಿಗೆ ಹಸು ಪವಿತ್ರ ಪ್ರಾಣಿಯಲ್ಲ. ಕೆಲವು ಆಧುನಿಕ ಹಿಂದೂಗಳು ಎಷ್ಟರಮಟ್ಟಿಗೆ ಸಂಪ್ರದಾಯದಿಂದ ದೂರವಾಗಿದ್ದರೆಂದರೆ Beefsteakನ್ನು ಆಗಾಗ ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಗೋವನ್ನು ಕರುಣೆಯಿಂದ ವಿಷಯವನ್ನು ರಾಷ್ಟ್ರದ ಕಾನೂನಿನಲ್ಲಿ ಸ್ವೀಕರಿಸಬೇಕು ಎಂದು ಯಾರಿಗೂ ಅಷ್ಟು ತೀವ್ರವಾಗಿ ಅನ್ನಿಸುತ್ತಿರಲಿಲ್ಲ. ಇಲ್ಲಿ ಹೋರಾಟಕ್ಕೆ ಸಾಕಷ್ಟು ಅವಕಾಶವಿರುವುದನ್ನು ದಾಲ್ಮಿಯಾ ಕಂಡುಕೊಂಡರು. ಗೋವಧೆಯ ವಿರುದ್ಧ ಹೋರಾಟ ಆರಂಭಿಸಿದರೆ ಅದು ಹಿಂದೂ ಮತನಿಷ್ಠರಾದ ವೋಟುದಾರರ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಹೀಗಾಗಿ ದಾಲ್ಮಿಯಾ ಈ ವಿಷಯವನ್ನು ಗಟ್ಟಿಯಾಗಿ ಹಿಡಿದುಕೊಂಡರು.

ದಾಲ್ಮಿಯಾ ನನ್ನನ್ನು ನೋಡಲು ಸಿದ್ಧವಾಗಿದ್ದಾರೆ ಎಂದು ತಿಳಿದು ಬಂದಾಗ ನನ್ನನ್ನು ಅವರ ಭವನದ ಇನ್ನೊಂದು ಭಾಗಕ್ಕೆ ಕರೆದೊಯ್ದರು. ಶ್ರೀಮತಿ ದಾಲ್ಮಿಯಾ ಬಾಗಿಲು ತೆಗೆದು ನನ್ನನ್ನು ಒಳಗೆ ಕಳಿಸಿ ಹೋದರು.

ನಾನು ಸೇಠ್ ದಾಲ್ಮಿಯಾ ಅವರ ಸಮ್ಮುಖದಲ್ಲಿದ್ದೇನೆಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಹೊತ್ತು ಬೇಕಾಯಿತು. ಹಾಸಿಗೆಯ ಮೇಲೆ ಮಲಗಿಕೊಂಡೇ ನನ್ನನ್ನು ಬರಮಾಡಿಕೊಂಡ ಈ ಉದ್ಯಮಿಯನ್ನು ಕಂಡು ಅತ್ಯಾಶ್ಚರ್ಯವಾಯಿತು. ಆ ಕೋಣೆ ಸರಳವಾಗಿತ್ತು. ಕಾರ್ಪೆಟ್ ಕೂಡ ಇರಲಿಲ್ಲ. ಕೋಣೆಯ ಮಧ್ಯಕ್ಕೆ ಸರಿಯಾಗಿ ಹಾಸಿಗೆ. ಸುತ್ತಮುತ್ತ ಯಾವ ಪೀಠೋಪಕರಣವೂ ಇಲ್ಲ. ಹೊರಗೆ ಹೋಗದಂತೆ ತಡೆ ಒಡ್ಡಿದರೆ ಕೈಕಾಲು ಬಡಿದುಕೊಂಡು ರಂಪ ಮಾಡುವ ಮಗುವಿನ ಶೈಲಿಯಲ್ಲಿ ಮಾತಾಡುತ್ತಿದ್ದ ದಾಲ್ಮಿಯಾ ವಿಚಿತ್ರವಾದ ದೊಡ್ಡಕಣ್ಣಿನ, ತಂತಿಯಂತೆ ಸಣಕಲು ದೇಹದ ವ್ಯಕ್ತಿ. ಆತನ ಮಾತು, ನಗು ಎಲ್ಲವೂ ಜೋರು ದನಿಯಲ್ಲಿದ್ದವು. ಆತ ಏನೋ ಮಾತಾಡುತ್ತಿದ್ದ. ಅದೇನೆಂದು ನನಗೆ ಸ್ಪಷ್ಟವಾಗಲಿಲ್ಲ. ಬಹುಶಃ ಗೋವಿನ ಬಗ್ಗೆ ಮಾತಾಡುತ್ತಿರಬಹುದು ಎಂದು ಊಹಿಸಿದೆ. ಆದರೆ ಆತ ಅದಕ್ಕಿಂತ ದೊಡ್ಡ ವಿಷಯದ ಬಗ್ಗೆ ಮಾತಾಡುತ್ತಿದ್ದಾನೆ ಎಂದು ಕ್ರಮೇಣ ಅರ್ಥವಾಯಿತು. ಆತ ಇಡೀ ಜಗತ್ತಿನ ಬಗ್ಗೆಯೇ ಮಾತಾಡುತ್ತಿದ್ದರು.

‘ನಾವು ಎಲ್ಲ ಎಲ್ಲೆಗಳನ್ನೂ ಅಳಿಸಿ ಹಾಕಿ ಅಂತರರಾಷ್ಟ್ರೀಯ ವಾದವನ್ನು ಜಾರಿಗೆ ತರಬೇಕು. ರಾಷ್ಟ್ರಗಳು ಎಂದು ಕರೆಯಲ್ಪಡುವ ಈ ಅರ್ಥಹೀನ ತುಂಡುಗಳನ್ನು ನಿರ್ಮೂಲ ಮಾಡಬೇಕು. ಎಲ್ಲ ಕಡೆಯೂ ಒಂದೇ ಭಾಷೆ ಇರಬೇಕು. ಒಂದೇ ರೀತಿಯ ಕರೆನ್ಸಿ ಇರಬೇಕು. ಶಾಶ್ವತವಾದ ಸತ್ಯವನ್ನು ಅನುಸರಿಸಬೇಕು. ಏಕೈಕ ಪರಮೋಚ್ಛ ಧರ್ಮವಿರಬೇಕು. ಒಂದೇ ಬಾವುಟ – ಅದು ಏಕತೆಯ ಬಾವುಟವಾಗಿರಬೇಕು’ – ಎಂದು ಆತನ ಏಕ ಜಗತ್ತಿನ ಸಿದ್ಧಾಂತ.

ವೆಂಡೆಲ್ ವಿಲ್ಕಿಯ ‘One world ಓದಿದ್ದೀರಾ ಎಂದು ಕೇಳಿದೆ. ಅದನ್ನು ಆತ ಓದಿರಲಿಲ್ಲ. ಆತನ ಸೆಕ್ರೆಟರಿ ಓದಿದ್ದ. ‘ಆದರೇನು ಈ ಯೋಚನೆ ನನಗೆ ಮೊದಲೇ ಬಂದಿತ್ತು’ ಎಂದು ಆತ ಉತ್ಸಾಹದಿಂದ ಹೇಳಿದ. ದಾಲ್ಮಿಯಾರ ಮುಂದಿನ ಹೇಳಿಕೆಗಳು ಅವರ ಈ ‘ಏಕ ಜಗತ್ತಿನ’ ವಾದವನ್ನು ಮತ್ತಷ್ಟು ಸ್ಪಷ್ಟಪಡಿಸಿದವು. ಜನರಿಂದ ಚುನಾಯಿತರಾದ ಒಬ್ಬ ಸರ್ವಾಧಿಕಾರಿ ಇರಬೇಕು. ಆತನಿಗೆ ಅನಿರ್ಬಂಧಿತವಾದ ಅಧಿಕಾರಗಳಿರಬೇಕು ಮತ್ತು ಕನಿಷ್ಠ ಹತ್ತು ವರ್ಷ ಕಾಲಾವಕಾಶವನ್ನಾದರೂ ಆತನಿಗೆ ಕೊಡಬೇಕು. ಸರ್ವಾಧಿಕಾರಿಗಳೀಗೆ ಅಲ್ಪಕಾಲದ ಅಧಿಕಾರ ಕೊಡುವುದು ನನಗೆ ಸಮ್ಮತವಿಲ್ಲ’. ಇಂತಹ ಉಚ್ಛ ಅಧಿಕಾರಕ್ಕೆ ಆತನ ಅಭಿಪ್ರಾಯದಲ್ಲಿ ಯಾರು ತಕ್ಕವರು ಎಂಬುದನ್ನೇನೂ ಆತ ಹೇಳಲಿಲ್ಲ. ಆದರೆ ಇಂತಹ ಉದ್ದೇಶ ಸಾಧನೆಗಾಗಿ ತಾವು ತನ್ನ ಕೈಲಾದ ಸೇವೆ ಸಲ್ಲಿಸುವುದಾಗಿಯೂ ಮತ್ತು ಈ ಮಹೋದ್ದೇಶವನ್ನು ತಾನು ಏಕಾಂಗವೀರನಾಗಿಯೇ ಸಾಧಿಸುವ ವಿಶ್ವಾಸ ಹೊಂದಿರುವುದಾಗಿಯೂ ಆತ ಹೇಳಿದ.

ಆತನ ಮಾತು ನಿರರ್ಥಕವಾಗಿದ್ದರೂ ಆತನನ್ನು ನಿರರ್ಥಕವೆಂದು ಸುಲಭವಾಗಿ ತಳ್ಳಿ ಹಾಕುವಂತಿರಲಿಲ್ಲ. ಆತ ಈಗಲೂ ಕೂಡ. ಹೊಸದಾಗಿ ಸ್ವಾತಂತ್ರ್ಯ ಗಳಿಸಿದ ಭಾರತದ ಬಹುಗಣನೀಯ ಪ್ರಮಾಣದ ಸಂಪನ್ಮೂಲ, ಹಣಕಾಸು ಹಾಗೂ ಕೈಗಾರಿಕೆಗಳನ್ನು ನಿಯಂತ್ರಿಸುತ್ತಿದ್ದ ಕೆಲವೇ ಕೆಲವರಲ್ಲಿ ಒಬ್ಬನಾಗಿದ್ದ. ಎಲ್ಲರಿಗೂ ವಸತಿ, ಅನ್ನ, ಶಿಕ್ಷಣ ಇರಬೇಕು ಎಂದು ಹೇಳಿದ. ಆದರೆ ಅದನ್ನು ಹೇಗೆ ಜಾರಿಗೆ ತರಬಹುದು ಎಂಬ ಬಗ್ಗೆ ಆತನಿಗೆ ಯಾವ ಯೋಜನೆಯೂ ಇಲ್ಲವಲ್ಲ ಎಂದು ನಾನು ಚಿಂತಿಸಿದೆ. ಈಚಿನ ದಿನಗಳಲ್ಲಿ ಆತ ತನ್ನ ಮಾಲೀಕತ್ವದ ಪತ್ರಿಕೆಗಳಿಗೆ ಬರೆಯುತ್ತಿದ್ದ ಸಂಪಾದಕೀಯಗಳಲ್ಲಿ ಗೋವನ್ನು ಆರ್ಥಿಕವಾಗಿ ಬಳಸಿಕೊಳ್ಳುವುದೇ ಹಣಕಾಸಿನ ಉಬ್ಬರಕ್ಕೆ ಪರಿಹಾರ ಎಂದು ಪ್ರತಿಪಾದಿಸುತ್ತಿದ್ದ. ಇಷ್ಟಿದ್ದೂ ಆತನ ವಿಶಾಲ ಕೈಗಾರಿಕಾ ಸಾಮ್ರಾಜ್ಯದ ಜನರ ಜೀವನ ನಿರ್ವಹಣಾ ವೆಚ್ಚ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗುತ್ತಲೇ ನಡೆದಿತ್ತು.

ಇಷ್ಟೆಲ್ಲ ಏಕ ಪರಿಕಲ್ಪನೆಯ ಬಗ್ಗೆ ಹೇಳುವ ಈ ವ್ಯಕ್ತಿ ಅನೇಕ ಪತ್ನಿಯರನ್ನು ಹೊಂದಿರುವುದು ಸರಿಯೇ ಎಂದು ನಾನು ಕೇಳಿದೆ. ಇದಕ್ಕೆ ಆತನ ಉತ್ತರ ‘ತಾನು ಇದನ್ನು ಕೂಲಂಕುಷವಾಗಿ ವಿಚಾರಿಸಿದ ನಂತರ ಇದನ್ನು ವಿರೋಧಿಸುವ ನಿರ್ಧಾರಕ್ಕೆ ಬಂದಿರುವುದಾಗಿ’ ತಿಳಿಸಿದ. ‘ನಾನು ಬಹುಪತ್ನಿತ್ವದ ಬಗ್ಗೆ ಪೂರ್ಣವಾಗಿ ಬರೆಯಬೇಕೆಂದುಕೊಂಡಿದ್ದೇನೆ ಇತರರಿಗೆ ಹೀಗೆ ಮಾಡಬೇಡಿ ಎಂದು ಎಚ್ಚರಿಕೆ ಕೊಡುವ ಸಲುವಾಗಿ. ಇದರಿಂದ ನನಗೆ ಯಾವ ಸುಖವೂ ಇಲ್ಲ. ತೊಂದರೆಗಳೇ ಹೆಚ್ಚು. ಈ ತೊಂದರೆಗಳನ್ನು ನಾನು ಕರ್ಮಫಲ ಎಂದು ಭಾವಿಸಿದ್ದೇನೆ. ಇವೆಲ್ಲವೂ ನಮ್ಮ ಆತ್ಮಶುದ್ಧಿಗಾಗಿ ಒದಗಿದ ಕರ್ಮಫಲಗಳು…’

ಈ ಮಾತೆಲ್ಲ ಮುಗಿದ ನಂತರ ಆತನಿಂದ ಬೀಳ್ಕೊಳ್ಳುವುದಕ್ಕಾಗಿ ಎದ್ದು ನಿಂತು ಕೈಕುಲುಕಲು ಹೋದೆ. ಹಾಗೆ ನಾನು ಕೈಯನ್ನು ಮುಂದೆ ಚಾಚಿದ್ದು ಅಪರಾಧವಾಯಿತು ಎಂಬ ದನಿಯಲ್ಲಿ. ಆತ ‘ಇಲ್ಲ, ಇಲ್ಲ, ಸ್ತ್ರೀಯರೊಂದಿಗೆ ಅದು ಸಲ್ಲದು. ಪತಿಯಾದವನು ಮಾತ್ರ ಸ್ತ್ರೀಯ ಹಸ್ತಗಳನ್ನು ಸ್ಪರ್ಶಿಸಬಹುದು’ ಎನ್ನುತ್ತ ಕೈಜೋಡಿಸಿ ಮುಗಿದು ‘ಹೋಗಿಬನ್ನಿ’ ಎಂದ.

ಟಾಟಾ:

ಜಹಂಗೀರ್ ರತನ್‌ಜೀ ದಾದಾಬಾಯ್ ಟಾಟಾ ಅವರಿಗೂ, ಆಡಂಬರ ಶೈಲಿಯ ದಾಲ್ಮಿಯಾಗೂ ಹೋಲಿಕೆಯೇ ಇಲ್ಲ. ಏಷಿಯಾದಲ್ಲೇ ದೊಡ್ಡದಾದ ಉಕ್ಕಿನ ಉದ್ಯಮದ ಅಧ್ಯಕ್ಷರು, ಜೊತೆಗೆ ಇಂಡಿಯನ್ ಏರ್‌ಲೈನ್ಸ್‌ನ ಸ್ಥಾಪಕರು. ಆದರೆ ತೀರ ಸರಳ ನಡವಳಿಕೆಯ ಟಾಟಾರನ್ನು ನೋಡಿದಾಗ ಅದೊಂದೂ ಗೊತ್ತಾಗುವುದಿಲ್ಲ. ಅವರದು ತೆಳು ದೇಹ, ಕಿರಿಮೀಸೆ, ಸದಾ ಯೂರೋಪಿಯನ್ ಶೈಲಿಯ ವೇಷಭೂಷಣ. ಅವರ ತಾಯಿ ಫ್ರೆಂಚ್ ಮೂಲದವರು. ಅವರ ಪಾಶ್ಚಾತ್ಯ ಶೈಲಿಗೆ ಬಹುಶಃ ಇದೇ ಕಾರಣ. ಅವರ ನಡವಳಿಕೆಯಲ್ಲಿ ಫ್ರೆಂಚ್‌ತನ ಎಷ್ಟೋ ಸಲ ತಲೆ ಹಾಕುತ್ತದೆ. ಕೆಲವೊಮ್ಮೆ ಪ್ರಸನ್ನವಾದ, ಕೆಲವೊಮ್ಮೆ ಕಿರಿಕಿರಿ ಎನಿಸುವ ವ್ಯಕ್ತಿತ್ವ. ಜಾಗರೂಕ ಪ್ರವೃತ್ತಿ. ಕಾಮಿಕ್ ಬುಕ್ಸ್ ಅವರಿಗೆ ಬಹಳ ಪ್ರಿಯ.

Who is whoನಲ್ಲಿ ಟಾಟಾ ಅವರ ಪರಿಚಯ ಸಂಕಿಪ್ತವಾಗಿದ್ದು ಅದರಲ್ಲಿ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ ಒಂದೇ ಒಂದು ಉಲ್ಲೇಖವಿದೆ. ‘First pilot to qualify in India, holding a flying licence since 1929′ ೧೯೩೨ರಲ್ಲಿ ಅವರು ಕೆಲವು ಅಂಚೆ ವಿಮಾನಗಳನ್ನು ಹಾರಿಸಿದ್ದರು. Who is whoನಲ್ಲಿ ಅವರ ದಾನಧರ್ಮಗಳ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ ಆಕರ್ಷಕವಾಗಿ ಮುದ್ರಿಸಿರುವ ಅವರ bookletಗಳಿಂದ ತಿಳಿದುಬರುವಂತೆ ಟಾಟಾ ಅವರ ಮೂರು ತಲೆಮಾರಿನವರೂ ಅತ್ಯಂತ ಉಚ್ಚಮಟ್ಟದ ಜೀವನ ನಡೆಸಿದವರು. ಸ್ಟಾಕ್ ಹೋಲ್ಡರುಗಳಿಗೆ ಆಕರ್ಷಕ ಡಿವಿಡೆಂಡುಗಳನ್ನು ಕೊಟ್ಟಿದ್ದಾರೆ. ಜೊತೆಗೆ ಮಾತೃ ಉದ್ಯಮವಾದ ಟಾಟಾಸ್ಟೀಲ್ಸ್‌ನಿಂದ ಬರುವ ಲಾಭದಲ್ಲಿ ಶೇ. ೮೫ರಷ್ಟನ್ನು ಟಾಟಾ ಟ್ರಸ್ಟ್‌ಗಾಗಿ ಮೀಸಲಿಡಲಾಗಿದೆ. ದಾನಧರ್ಮದ ಕಾರ್ಯಗಳೆಲ್ಲ ಅದರ ವತಿಯಿಂದಲೇ ನಡೆಯುತ್ತದೆ.

ಬಡತನ, ರೋಗರುಜಿನಗಳ ಬೇರುಗಳನ್ನು ನಿರ್ಮೂಲನ ಮಾಡುವ ಉದ್ದೇಶದಿಂದ ರೂಪಿತವಾದ ಈ ಟ್ರಸ್ಟ್ ಕ್ಯಾನ್ಸರ್ ಸಂಶೋಧನೆಗಾಗಿ ಒಂದು ಆಸ್ಪತ್ರೆಗೆ ದತ್ತಿ ನೀಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುವವರಿಗಾಗಿ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತದೆ. ಟ್ರಸ್ಟಿನ ನಿಧಿಗಳಿಂದ ಟಾಟಾ ಉದ್ಯೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಬರಗಾಲ ಹಾಗೂ ಪ್ರವಾಹ ಪೀಡಿತರ ಪರಿಹಾರ ನಿಧಿಗೆ ಹಣ ನೀಡುತ್ತದೆ.

Institute of Social Sciences, Child Guidance Clinic, ಮೊದಲಾದವುಗಳಿಗೆ ಬೆಂಬಲ, ಬೆಂಗಳೂರಿನ Indian Institute of Science (ಇದರಲ್ಲಿ ಮೆಟಲರ್ಜಿ, ಏರೊನಾಟಿಕ್ಸ್, ಬಯೋಕೆಮಿಸ್ಟ್ರಿ ಮೊದಲಾದ ಇಲಾಖೆಗಳಿವೆ) ಗೆ ಕೊಡುಗೆ. ಬಾಂಬೆ ಸರ್ಕಾರದೊಂದಿಗೆ ಜಂಟಿಯಾಗಿ ನಡೆಸಲಾಗುತ್ತಿರುವ Tata Institue of Fundamental Research in Theroretical Physics and Cosmic Radiation ಇತ್ಯಾದಿಗಳು ಉಲ್ಲೇಖನೀಯ.

ಟಾಟಾ, ಪಾರ್ಸಿ ಮತದವರು. ಪಾರ್ಸಿ ಸಮುದಾಯ ಬಹಳ ಪ್ರಸಿದ್ಧವಾದುದು. ಜೆ.ಆರ್.ಡಿ. ಯವರ ತಾತ ಜೇಮ್‌ಶೆಡ್‌ಜಿ ನುಸುರ್ ವಾನ್‌ಜಿ ಟಾಟಾರವರು ಭಾರತದ ಕೈಗಾರಿಕಾ ನಿರ್ಮಾಪಕರೆಂದು ಪ್ರಸಿದ್ಧಿ ಪಡೆದಿದ್ದಾರೆ. ಭಾರತೀಯ ಕೈಗಾರಿಕೆಗಳನ್ನು ಭಾರತೀಯರೇ ನಡೆಸುವ ಸಾಮರ್ಥ್ಯ ಬರಬೇಕಾದರೆ ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳನ್ನೂ, ತಂತ್ರಜ್ಞಾನಿಗಳನ್ನೂ ತಯಾರಿಸುವುದೇ ಅತ್ಯಂತ ಸರಿಯಾದ ಮಾರ್ಗ ಎಂಬುದನ್ನು ಅವರು ಅರ್ಥಮಾಡಿಕೊಂಡರು. ದೇಶದಲ್ಲಿಯೇ ವಿಜ್ಞಾನ ಸಿಬ್ಬಂದಿಯನ್ನು ತರಬೇತುಗೊಳಿಸುವುದಕ್ಕಾಗಿ ಅವರು Indian Institute of Science ಸ್ಥಾಪಿಸಿದರು. ದೇಶೀಯ ಅರ್ಥವ್ಯವಸ್ಥೆಗೆ ಆಧಾರವಾಗಿ ಕಬ್ಬಿಣ ಮತ್ತು ಉಕ್ಕು ಪರಿಯೋಜನೆಗೆ ಹಾಗೂ ವಿದ್ಯುತ್ವನ್ನು ಅಗ್ಗದಲ್ಲಿ ಒದಗಿಸಿ ಕಲ್ಲಿದ್ದಲ ನಿಕ್ಷೇಪಗಳನ್ನು ಸಂರಕ್ಷಿಸುವುದಕ್ಕಾಗಿ ಜಲವಿದ್ಯುತ್ ಯೋಜನೆಗಳಿಗೆ ತಳಪಾಯ ಹಾಕಿದರು. ಅವರ ಹೆಸರಿನಲ್ಲಿಯೇ ಈಗ ನಿರ್ಮಾಣವಾಗಿರುವ ಜೆಮ್‌ಶೆಡ್‌ಪುರ ಎಂಬ ಉಕ್ಕಿನ ನಗರದ ಕನಸು ನನಸಾಗುವುದಕ್ಕೆ ಮೊದಲೇ ಅವರು ತೀರಿಕೊಂಡರು. ಕಬ್ಬಿಣದ ಅಪಾರ ನಿಕ್ಷೇಪವಿರುವ ಬಿಹಾರದ ಅರಣ್ಯ ಪ್ರದೇಶದಲ್ಲಿ ಕಾಡನ್ನು ಕಡಿದು ಈ ನಗರವನ್ನು ಕಟ್ಟಲಾಗಿದೆ. ೧೯೧೪ರ ಹೊತ್ತಿಗೆ ಈ ಸ್ಥಾವರವು ವಾಣಿಜ್ಯ ಮಟ್ಟದಲ್ಲಿ ಉಕ್ಕನ್ನು ಉತ್ಪಾದಿಸುತ್ತಿತ್ತು. ಈ ಉದ್ಯಮವು ಎರಡು ಮಹಾಯುದ್ಧಗಳ ಅವಧಿಯಲ್ಲಿ ಬೃಹತ್ತಾಗಿ ಬೆಳೆಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಟಾಟಾ ಉದ್ಯಮವು ಇಡೀ ಬ್ರಿಟಿಷ್ ಕಾಮನ್ ವೆಲ್ತ್ ದೇಶಗಳಲ್ಲಿಯೇ ಅತಿ ಹೆಚ್ಚು ಪ್ರಮಾಣದ ಉಕ್ಕನ್ನು ಉತ್ಪಾದಿಸುತ್ತಿತ್ತು ಮತ್ತು ಇಡೀ ಜಗತ್ತಿನಲ್ಲಿಯೇ ಅದು ಮೂರನೆಯ ಅತಿ ದೊಡ್ಡ ಕಬ್ಬಿಣ ಮತ್ತು ಉಕ್ಕು ಸ್ಥಾವರವಾಗಿತ್ತು.

ನಲವತ್ನಾಲ್ಕು ವರ್ಷ ವಯಸ್ಸಿನ ಜೆಆರ್‌ಡಿ ಟಾಟಾ ಅವರು ಬಹುಶಃ ಜಗತ್ತಿನಲ್ಲಿಯೇ ಅತಿ ಬುದ್ಧಿವಂತ ಕೈಗಾರಿಕೋದ್ಯಮಿ ಪಾಶ್ಚಿಮಾತ್ಯ ವಿಧಾನಗಳನ್ನು ಸರಿಯಾಗಿ ಅರಿತಿದ್ದ ಉದ್ಯಮಿಯಾಗಿದ್ದಾರೆ. ಅವರ ಆಸಕ್ತಿಯ ವಿವಿಧ ಕ್ಷೇತ್ರಗಳಿಗೆ ವ್ಯಾಪಿಸಿದೆ. ರೈಲುಗಾಡಿಗಳ ನಿರ್ಮಾಣ, ವಿಮಾನ ಜೋಡಣೆ, ಬಾಂಬೆಯ ಪ್ರತಿಷ್ಠಿತ ಹೋಟೆಲುಗಳ ನಿರ್ವಹಣೆ, ಬಣ್ಣಗಳು, ಸೋಪು, ಮಾರ್ಗರಿನ್, ಸಿಮೆಂಟ್, ಟೆಕ್ಸ್‌ಟೈಲ್ಸ್, ಕೈಗಾರಿಕಾ ರಾಸಾಯನಿಕಗಳು, ಜಲವಿದ್ಯುತ್, ಅಣು ಸಂಶೋಧನೆ ಇತ್ಯಾದಿ. ಅವರು ಜಾಗತಿಕ ವಾಯುಯಾನದ ಆರಂಭಕಾರರಾಗಿದ್ದಾರೆ. ಜಗತ್ತಿನ ಹೆಜ್ಜೆ ಗತಿಯೊಂದಿಗೆ ಸರಿಹೆಜ್ಜೆ ಹಾಕಿದವರು ಟಾಟಾ. ಕೇವಲ ವಾಯುಯಾನದ ವಿಷಯದಲ್ಲಿ ಮಾತ್ರವೇ ಅಲ್ಲ, ಕಾರ್ಮಿಕಶಕ್ತಿ ಇಂದು ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ ಎಂಬುದನ್ನು ಕೂಡ ಅವರು ಜಗತ್ತಿನ ವಿದ್ಯಮಾನಗಳಿಂದ ತಿಳಿದುಕೊಂಡವರು. ಕಾರ್ಮಿಕ ಶಕ್ತಿಯ ಅಭಿವೃದ್ಧಿಯನ್ನು ಕಂಡು ಅವರು ಆತಂಕಗೊಂಡವರೂ ಅಲ್ಲ. ತೀರಾ ನಗಣ್ಯವಾಗಿರುವ ಕಮ್ಯುನಿಸ್ಟರ ಬಗ್ಗೆ ಅವರು ಚಿಂತಿಸಲಿಲ್ಲ. ಆದರೆ ಸಮಾಜವಾದಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೈಗಾರಿಕೆಯನ್ನು ಕುರಿತು ಸಮಾಜವಾದಿಗಳ ಅರೆಬರೆ ಜ್ಞಾನದ ಬಗ್ಗೆ ಅವರು ಚಿಂತೆಗೀಡಾದರು.

ಜೆ.ಆರ್.ಡಿ. ಟಾಟಾ ಅವರ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳಿದ್ದರೂ ಅವೆಲ್ಲವುಗಳಲ್ಲಿಯೂ ಒಂದಾದರೂ ಸತ್ಯಾಂಶ ಇದ್ದೇ ಇತ್ತು.

ಟಾಟಾ ಒಬ್ಬ ಪ್ರಗತಿಪರ ಕೈಗಾರಿಕೋದ್ಯಮಿಯಾಗಿದ್ದಾರೆ. ಲಾಭವನ್ನು ಹಂಚಿಕೊಳ್ಳುವ ಬೋನಸ್ ಯೋಜನೆಯನ್ನು ಅವರು ಕೊಟ್ಟರು. ಉದ್ಯೋಗಿಗಳಿಗೆ ಸರಾಸರಿಗಿಂತ ಉತ್ತಮ ಮಟ್ಟದ ಸೌಲಭ್ಯಗಳನ್ನು ಒದಗಿಸಿದರು. ಪಾಶ್ಚಾತ್ಯ ಕಾರ್ಮಿಕ ಸಂಬಂಧಗಳ ಸ್ವರೂಪವನ್ನು ಅರಿತಿರುವ ಅವರಿಗೆ ಅನುಭವವಿಲ್ಲದ ಭಾರತೀಯ ಕಾರ್ಮಿಕ ನಾಯಕರ ದೌರ್ಬಲ್ಯಗಳ ಸ್ಪಷ್ಟ ಅರಿವಿದೆ.

ಟಾಟಾ ಅವರಲ್ಲಿ ಸಂಸ್ಥೆಯ ಕೈಯೇ ಮೇಲಾಗಿರುವ ಕಾರ್ಮಿಕ ಸಂಘಟನೆ ಇತ್ತು. ಸಂಸ್ಥೆಯ ನಿಷ್ಠಾವಂತರೇ ಅದರ ಸಿಬ್ಬಂದಿ. ಸರ್ಕಾರದಿಂದ ಹೊಸದಾಗಿ ಪ್ರಾಯೋಜಿತವಾದ ಇಂಟಕ್‌ನಲ್ಲಿ ಅದು ಸೇರಿಕೊಂಡಿತು. ಇತರ ಸಂಘಟನೆಗಳು ರೂಪುಗೊಳ್ಳುವುದಕ್ಕೆ ಅವಕಾಶ ಕೊಡದಂತೆ ಅದು ಕಾರ್ಯ ನಿರ್ವಹಿಸುತ್ತಿತ್ತು. ಇದೇ ಸಂದರ್ಭದಲ್ಲಿ ತಿಳಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಮೊದಲ ಜೆಮ್‌ಶೆಡ್‌ಜಿಯವರು ತಮ್ಮ ಕಾರ್ಮಿಕರಿಗಾಗಿ ರೂಪಿಸಿದ ವಸತಿ ಯೋಜನೆ ಇಂದಿಗೂ ಸಹ ಭಾರತದಲ್ಲಿಯೇ ಅತ್ಯುತ್ತಮ ಎನಿಸಿಕೊಂಡಿದೆ. ಟಾಟಾ ಉಕ್ಕು ಕೈಗಾರಿಕೆಯ ಜೆಮ್‌ಶೆಡ್‌ಪುರ ಕೇಂದ್ರವು ಅದ್ಭುತವಾಗಿ ಬೆಳೆದಿದೆ. ಇದರಲ್ಲಿ ಮೂರನೇ ಒಂದರಷ್ಟು ಕಾರ್ಮಿಕರಿಗೆ ಅಚ್ಚುಕಟ್ಟಾದ ಮನೆಗಳು ಹಾಗೂ ಮನೆಯ ಸುತ್ತ ಕೈತೋಟ ಇದೆ. ಇದಕ್ಕೆ ಅವರು ಕನಿಷ್ಟ ಬಾಡಿಗೆಯನ್ನು ಮಾತ್ರ ಕೊಡಬೇಕು. ಇನ್ನುಳಿದ ಕಾರ್ಮಿಕರು ಖಾಸಗಿ ಮಾಲಿಕರ ಬಾಡಿಗೆ ಮನೆಗಳಲ್ಲಿ ಇಕ್ಕಟ್ಟಾದ ಪರಿಸರದಲ್ಲಿ ಬದುಕುತ್ತಿದ್ದಾರೆ. ಕೆಲವೊಂದು ಕೊರತೆಗಳಿದ್ದರೂ, ಜೆಮ್‌ಶೆಡ್‌ಪುರದಲ್ಲಿ ಆಸ್ಪತ್ರೆ, ಮಕ್ಕಳಿಗೆ ಉಚಿತ ಹಾಲು, ಮಹಿಳಾ ಕಾರ್ಮಿಕರಿಗೆ ಪ್ರಸೂತಿ ರಜೆಯ ಸೌಲಭ್ಯ ಮುಂತಾದವುಗಳಿಂದ ಇದು ಭಾರತದಲ್ಲಿ ಅತ್ಯಂತ ಪ್ರಗತಿಪರ ಕಾರ್ಖಾನೆ ಎಂದು ನನಗನ್ನಿಸಿತು. ಅಲ್ಲಿನ ರಿಯಾಯಿತಿ ದರದ ಕ್ಯಾಂಟೀನ್ ಸೌಲಭ್ಯವಂತೂ ನನ್ನನ್ನು ಎಲ್ಲಕ್ಕಿಂತ ಹೆಚ್ಚು ಆಕರ್ಷಿಸಿತು.

ಟಾಟಾ ವರ್ಕ್‌ಶಾಪಿನಲ್ಲಿ ಮಾತಾಡಲು ಮುಕ್ತ ವಾತಾವರಣವಿತ್ತು. ಅಲ್ಲಿ ಯಾವುದೇ ಜಾತೀಯ, ಧಾರ್ಮಿಕ ಪೂರ್ವಾಗ್ರಹಗಳು ಕಂಡು ಬರಲಿಲ್ಲ. ನಾನು ಅಲ್ಲಿದ್ದಾಗ ಉದ್ಯೋಗಿಗಳ ಒಂದು ವಾರಪತ್ರಿಕೆಯನ್ನು ನೋಡಿದೆ. ಅದರಲ್ಲಿ ಲೇವಾದೇವಿಗಾರರಿಂದ ಶೋಷಣೆಗೊಳಗಾದ ಅಸ್ಪೃಶ್ಯ ಕಾರ್ಮಿಕರ ಸಹಾಯಕ್ಕಾಗಿ ನಡೆಯಬೇಕಾಗಿರುವ ಚಳುವಳಿಯ ಸ್ವರೂಪ ಕುರಿತು ಒಂದು ಸುದೀರ್ಘ ಲೇಖನವಿತ್ತು.

ಜನಾಂಗೀಯ ಭೇದ ನೀತಿಯನ್ನು ಟಾಟಾ ದ್ವೇಷಿಸುತ್ತಿದ್ದರು. ಅವರು ಇತ್ತೀಚೆಗೆ ಅಮೆರಿಕೆಗೆ ಭೇಟಿ ನೀಡಿದ್ದರು. ಅಲ್ಲಿನ ದಕ್ಷಿಣ ಪ್ರದೇಶದಲ್ಲಿ ಕುಡಿಯುವ ನೀರಿನ ಕಾರಂಜಿಗಳ ಮೇಲೆ ಬಿಳಿಯರಿಗೆ, ಕರಿಯರಿಗೆ ಎಂಬ ಲೇಬಲುಗಳನ್ನು ಹಚ್ಚಿ ಅವುಗಳನ್ನು ಪ್ರತ್ಯೇಕಿಸಲಾಗಿತ್ತು. ಟಾಟಾ ಅವರಿಗೆ ನೀರು ಕುಡಿಯಬೇಕಿತ್ತು. ಬಿಳಿ ಮೈಬಣ್ಣದ, ಅಚ್ಚುಕಟ್ಟಾದ ಯೂರೋಪಿಯನ್ ಉಡುಪು ಧರಿಸಿದ ಟಾಟಾ ನೋಡಲು ಯೂರೋಪಿಯನ್ನರಂತೇ ಇದ್ದರು. ಆದರೂ ಅವರು ವರ್ಣೀಯರಿಗೆ ಮೀಸಲಾದ ಕಾರಂಜಿಯಲ್ಲಿಯೇ ನೀರು ಕುಡಿದದ್ದನ್ನು ಕಂಡು ಅವರೊಂದಿಗೆ ಇದ್ದ ಅಧಿಕಾರಿಗಳು ಚಕಿತರಾದರು!

* * *