ಗಾಂಧಿಯವರು ದೆಹಲಿಗೆ ಬಂದಾಗ ಒಂದು ಸಲ, ಪ್ರತಿ ಸಾರಿಯಂತೆ ಬಿrflAgÀರ್ಲಾ ಗೃಹದಲ್ಲಿ ತಂಗದೆ ಅಸ್ಪೃಶ್ಯರೊಂದಿಗೆ ಅವರ ಭಂಗಿ ಕಾಲೋನಿಯಲ್ಲಿ ತಂಗಲು ನಿರ್ಧರಿಸಿದರು. ಅವರ ಈ ನಿರ್ಧಾರ ಸಾರ್ವಜನಿಕರ ಕುತೂಹಲವನ್ನು ಬಡಿದೆಬ್ಬಿಸಿತು. ಅವರು ಹರಿಜನರೊಂದಿಗೆ ಇರಲು ನಿರ್ಧರಿಸಿದ್ದು ಇದೇ ಮೊದಲ ಸಲವೇನಲ್ಲ. ಆದರೆ ಇದು ಯಾಕೆ ಕುತೂಹಲ ಕೆರಳಿಸಿತೆಂದರೆ ತೀರಾ ಉನ್ನತ ಮಟ್ಟದ ಮಾತುಕತೆಗಾಗಿ ಬಂದಿದ್ದ ಸಂದರ್ಭದಲ್ಲಿ ಅವರು ಈ ಸ್ಥಳದಲ್ಲಿ ತಂಗುವ ನಿರ್ಧಾರ ಮಾಡಿದ್ದರು.

೧೯೪೬ರಲ್ಲಿ ಬ್ರಿಟಿಷ್ ಕ್ಯಾಬಿನೆಟ್ ನಿಯೋಗವನ್ನು ಭೇಟಿ ಮಾಡುವುದಕ್ಕಾಗಿ ಭಾರತದ ಎಲ್ಲೆಡೆಯ ನಾಯಕರು ದೆಹಲಿಗೆ ಧಾವಿಸತೊಡಗಿದ್ದರು. ಮುಂಬರುವ ಸ್ವಾತಂತ್ರ್ಯದ ರೂಪುರೇಖೆಯನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿತ್ತು. ಬ್ರಿಟಿಷ್ ಸಚಿವರಾದ ಸರ್. ಸ್ಟಾಫರ್ಡ್ ಕ್ರಿಪ್ಸ್, ಲಾರ್ಡ್ ಪೆಥಿಕ್ ಲಾರೆನ್ಸ್, ಭಾರತದ ಸ್ಟೇಟ್ ಕಾರ್ಯದರ್ಶಿ ಹಾಗೂ ಫಸ್ಟ್ ಲಾರ್ಡ್ ಆಫ್ ದಿ ಅಡ್ಮಿರಾಲಿಟಿ ಎ.ವಿ. ಅಲೆಕ್ಸಾಂಡರ್ ಈ ನಿಯೋಗದಲ್ಲಿದ್ದರು. ಗಾಂಧಿಯವರ ಆಗಮನಕ್ಕಾಗಿ ಭಂಗಿ ಕಾಲೋನಿಯಲ್ಲಿ ಏಳು ದಿನಗಳಿಂದಲೂ ಭರಾಟೆಯಿಂದ ಸಾಗಿದ್ದ ಸಿದ್ಧತೆಯ ಕ್ರಮಗಳನ್ನು ಪರಿಶೀಲಿಸುವುದಕ್ಕಾಗಿ ದೆಹಲಿಯ ಪತ್ರಕರ್ತ ಸದಸ್ಯರು ಪ್ರತಿದಿನವೂ ಭಂಗಿಕಾಲನಿಗೆ ಭೇಟಿ ಕೊಡುತ್ತಿದ್ದರು. ಭಂಗಿ ಕಾಲೋನಿಯ ಅರ್ಧದಷ್ಟು ಜನರನ್ನು ಬೇರೆ ಕಡೆಗೆ ಕಳಿಸಲಾಗಿತ್ತು. ಎಲ್ಲಿಗೆ ಎಂದು ಗೊತ್ತಾಗಲಿಲ್ಲ. ಬಹುಶಃ ಮೂಲ ಸ್ಥಿತಿಯಲ್ಲೇ ಇದ್ದ ವಸತಿ ಭಾಗಗಳ ಕಡೆ ಕಳಿಸಿರಬಹುದು. ಅವರಿಗೆ ಸೇರಿದ ಚಾಲ್‌ಗಳನ್ನು ಕಿತ್ತುಹಾಕಿ ಅವುಗಳ ಸ್ಥಳದಲ್ಲಿ ಅಚ್ಚುಕಟ್ಟಾದ ಪುಟ್ಟ ಪುಟ್ಟ ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಈ ಗುಡಿಸಲುಗಳು ಎತ್ತರವಾಗಿದ್ದವು. ನೆಟ್ಟಗೆ ನಿಂತೇ ಅವುಗಳನ್ನು ಪ್ರವೇಶಿಸಬಹುದಾಗಿತ್ತು. ಅಸ್ಪೃಶ್ಯರ ಚಾಲ್‌ಗಳಲ್ಲಿನಂತೆ ಬಗ್ಗಿಕೊಂಡು ತೆವಳಿಕೊಂಡು ಹೋಗಬೇಕಾಗಿರಲಿಲ್ಲ. ಇದಿಷ್ಟು ಬಿಟ್ಟರೆ ಈ ಹೊಸ ವಸತಿಯಲ್ಲಿ ಇನ್ನೇನೂ ಆಡಂಬರಗಳಿರಲಿಲ್ಲ. ಅಲ್ಲಿಯ ಕಿಟಕಿಗಳಿಗೆ ಹಾಕಿದ ಕುಸ್‌ಕುಸ್ ಎಂಬ ನಾರಿನ ಪರದೆಗಳು ವಿಶೇಷವಾಗಿ ನನ್ನ ಗಮನ ಸೆಳೆದವು. ಅವುಗಳಿಗೆ ನೀರನ್ನು ಸಿಂಪಡಿಸಿದರೆ ಒಳಪ್ರದೇಶ ತಂಪಾಗಿರುತ್ತಿತ್ತು. ಸುವಾಸಿತವಾಗಿರುತ್ತಿತ್ತು. ಗಾಂಧಿಯವರು ಬಂದು ತಂಗುವುದಕ್ಕೆ ಮೊದಲೇ ಅಲ್ಲೆಲ್ಲ ಚೆನ್ನಾಗಿ ನೀರು ಹನಿಸಿದ್ದಿಂದ ಗಾಂಧೀಜಿಯವರು ಅಲ್ಲಿದ್ದಷ್ಟು ದಿನವೂ ಆ ಜಾಗ ತಂಪಾಗಿಯೇ ಇತ್ತು. ಅಲ್ಲಿದ್ದ ಒಂದು ಚಿಕ್ಕ ಗುಡಿಗೆ ಹೊಸದಾಗಿ ಸುಣ್ಣ ಬಳಿಸಲಾಯಿತು. ಅದರ ಸುತ್ತ ಒಂದು ವೇದಿಕೆಯ ನಿರ್ಮಾಣವಾಯಿತು. ಈ ಕೆಲಸದಲ್ಲಿ ತೊಡಗಿದ್ದ ಒಬ್ಬನನ್ನು ನಾನು ಮಾತಾಡಿಸಿದೆ. ಆತ ದೀನಾನಾಥ್ ತಿಯಾಂಗ್, ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಾಂಧಿಯವರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ನಾವು ಇಪ್ಪತ್ತು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ. ೯ನೇ ದಿನ ಎಲೆಕ್ಟ್ರಿಕ್ ಫ್ಯಾನ್, ಟೈಪ್‌ರೈಟರುಗಳು, ಟೆಲಿಫೋನುಗಳನ್ನು ಹಿಡಿದುಕೊಂಡು ಇನ್ನೊಂದು ಗುಂಪು ಬಂತು. ಇದನ್ನು ಓಡಿ ನಮಗೆ ಅಂದರೆ ವರದಿಗಾರರಿಗೆ ನಿಜಕ್ಕೂ ಹೊಟ್ಟೆಕಿಚ್ಚಾಯಿತು. ದೆಹಲಿಯಲ್ಲಿ ವಿದ್ಯುತ್ ಫ್ಯಾನುಗಳಿಗೆ ತುಂಬ ಕೊರತೆ. ಟೈಪ್‌ರೈಟರುಗಳನ್ನು ದೊರಕಿಸಿಕೊಳ್ಳುವುದೂ ತುಂಬ ಕಷ್ಟವಿತ್ತು. ಟೆಲಿಫೋನ್ ಹಾಕಿಸಬೇಕಿದ್ದರಂತೂ ನೂರಾರು ಅಡೆತಡೆಗಳಿದ್ದವು. ಹತ್ತನೇ ದಿನ ಗಾಂಧಿ ಅಲ್ಲಿಗೆ ಆಗಮಿಸಿದರು. ಹೆಚ್ಚಿನ ವಿಶೇಷವೇನೂ ಇರಲಿಲ್ಲ. ಆದರೆ ಗೇಟಿನ ಹೊರಗೆ ಕೆಲವು ಅಸ್ಪೃಶ್ಯರು ನಿಂತು ಕಪ್ಪುಬಾವುಟ ಪ್ರದರ್ಶಿಸಿದರು. ಅವರೆಲ್ಲ ಡಾ. ಅಂಬೇಡ್ಕರ್ ಅವರ ಅನುಯಾಯಿಗಳು. ಅಂಬೇಡ್ಕರ್ ಒಬ್ಬ ಅಪ್ರತಿಮ ವಕೀಲ. ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಪಡೆದವರು. ಗಾಂಧಿ ಮತ್ತು ಕಾಂಗ್ರೆಸ್ಸಿನವರು ಅಸ್ಪೃಶ್ಯರಿಗೆ ಸಾಕಷ್ಟು ರಾಜಕೀಯ ಸಂರಕ್ಷಣೆ ಒದಗಿಸಿಲ್ಲ ಎಂಬ ಕಾರಣಕ್ಕಾಗಿ ಅವರು ಅನೇಕ ವರ್ಷಗಳಿಂದ ಗಾಂಧಿ ವಿರೋಧೀ ಪಕ್ಷವನ್ನು ನಡೆಸುತ್ತಿದ್ದರು. (ಸ್ವಾತಂತ್ರ್ಯ ಬಂದ ನಂತರ ಡಾ. ಅಂಬೇಡ್ಕರರು ಕಾನೂನು ಸಚಿವರಾದರು. ಹೊಸ ಸಂವಿಧಾನವನ್ನು ರೂಪಿಸಲು ನೆರವಾದರು. ಅದರ ಪ್ರಕಾರ ಅಸ್ಪೃಶ್ಯರಿಗೆ ಸಮಾನ ಅವಕಾಶ ಸಿಗುವಂತೆ ಮಾಡಿದರು) ವ್ಯವಸ್ಥಿತವಾಗಿ ಅಲ್ಪ ಪ್ರಮಾಣದಲ್ಲಿ ನಡೆದ ಈ ಕಪ್ಪುಬಾವುಟ ಪ್ರದರ್ಶನವನ್ನು ಹೊರತುಪಡಿಸಿದರೆ ಆಶ್ರಮವು ಭಂಗಿ ಕಾಲನಿಯಲ್ಲಿ ವ್ಯವಸ್ಥಿತವಾಗಿ ನೆಲೆಗೊಂಡು ಮುಂದುವರೆಯಿತು.

ಲೈಫ್ ಪತ್ರಿಕೆಯ ಭಾರತದ ರಾಜಕೀಯ ನೇತಾರರ ಒಂದು ಲೇಖನಮಾಲಿಕೆ ಆರಂಭಿಸಿತ್ತು. ಅದಕ್ಕಾಗಿ ನಾನು ನೆಗೆಟಿವ್‌ಗಳನ್ನು ನ್ಯೂಯಾರ್ಕ್‌ಗೆ ತುರ್ತಾಗಿ ಕಳಿಸಬೇಕಿತ್ತು ಮಹಾತ್ಮಾ ಅವರು ಚರಕಾದಿಂದ ನೂಲು ತೆಗೆಯುತ್ತಿರುವ ಫೋಟೋ ತೆಗೆಯಲು ನಿರ್ಧರಿಸಿ ಗಾಂಧಿಯವರ ಕಾರ್ಯದರ್ಶಿಗಳಲ್ಲಿ ಒಬ್ಬರನ್ನು ಅನುಮತಿ ಕೇಳಿದೆ. ಗಾಂಧಿಯವರ ಕಾರ್ಯದರ್ಶಿ ಪ್ಯಾರೇಲಾಲ್ ಅವರೊಂದಿಗೆ ನನ್ನ ಭೇಟಿಯಾಗಿದ್ದು ಹೀಗೆ.

‘ನಿಮಗೆ ಚರಕಾದಲ್ಲಿ ನೂಲಲು ಬರುತ್ತದೆಯೇ’ ಎಂದು ಪ್ಯಾರೇಲಾಲ್ ಕೇಳಿದರು.

‘ನನಗೆ ನೂಲು ತೆಗೆಯಲು ಬರುವುದಿಲ್ಲ. ಗಾಂಧಿಯವರು ಚರಕಾದಿಂದ ನೂಲು ತೆಗೆಯುವ ಚಿತ್ರ ತೆಗೆಯಲು ಬಂದೆ’ ಎಂದು ಹೇಳಿದೆ.

‘ಚರಕಾದಲ್ಲಿ ಹೇಗೆ ನೂಲು ತೆಗೆಯುತ್ತಾರೆ ಅಂತ ನಿಮಗೆ ಗೊತ್ತೆ’ ಎಂದು ಅವರು ಮತ್ತೆ ಕೇಳಿದರು. ‘ನನಗೆ ಗೊತ್ತಿಲ್ಲ. ಕ್ಯಾಮರಾ ಮಾತ್ರ ನನಗೆ ಗೊತ್ತು’ ಎಂದೆ.

‘ಅತ್ಯಂತ ಸೂಕ್ಷ್ಮವೂ, ಜಟಿಲವೂ ಹಾಗೂ ಅದ್ಭುತವೂ ಆದ ಸ್ಪಿನ್ನಿಂಗ್ ವ್ಹೀಲ್ ಬಗ್ಗೆ ನೀವು ಮೊದಲೇ ತಿಳಿದುಕೊಳ್ಳದೆ ಮಹಾತ್ಮಾಜಿಯವರ ಚಿತ್ರವನ್ನು ಹೇಗೆ ತೆಗೆಯಲು ಸಾಧ್ಯ? ಚರಕಾ ಮಾನವನ ಪ್ರತಿಭೆ ಸೃಷ್ಟಿಸಿದ ಅದ್ಭುತ. ಅದು ಕಷ್ಟಜೀವಿಗಳ ಪಾಲಿಗೆ ನೆರವಾಗಲು ಅವರ ಮಟ್ಟಕ್ಕೆ ಇಳಿದು ಬಂದ ಒಂದು ಯಂತ್ರ’ ಎಂದು ಪ್ಯಾರೆಲಾಲ್ ಹೇಳಿದರು.

ಇದು ಗಾಂಧೀಜಿಯವರ ಪ್ರಮುಖ ಸಿದ್ಧಾಂತ, ಸೂತ್ರ. ಮನುಷ್ಯನನ್ನು ಬಿಡಿಯಾಗಿ ನೋಡಿದಾಗ ನಗಣ್ಯ. ನೀರಿನ ಒಂದು ಹನಿಯಂತೆ. ಆದರೆ ಮನುಷ್ಯರೆಲ್ಲರೂ ಒಂದಾದರೆ ಆ ಸಮೂಹವು ಸಾಗರದಂತೆ ಬಲಶಾಲಿ, ಶಕ್ತಿಶಾಲಿ, ಸಹಸ್ರಾರು ನೀರಹನಿಗಳು ಒಂದು ಗೂಡಿ ಸಾಗರವಾದಾಗ ಅದರ ಮೇಲೆ ನೌಕಾದಳವೇ ಸಾಗಬಹುದು. ಮನುಷ್ಯರ ವಿಷಯದಲ್ಲೂ ಹೀಗೇ ಅವರೆಲ್ಲ ಒಂದಾದಾಗ ಇಂತಹ ಸಾಮರ್ಥ್ಯ ಬರುತ್ತದೆ. ಚರಕಾ, ಶ್ರಮಜೀವಿಗಳ ವಿಜ್ಞಾನವನ್ನು ಸಂಕೇತಿಸುತ್ತದೆ ಅತ್ಯಂತ ಸಂಕೀರ್ಣ ಸಂಯೋಜನೆ ಇರುವ ಕಾರ್ಖಾನೆಯ ಯಂತ್ರೋಪಕರಣಗಳಿಗೂ ಸರಳವಾದ ಚರಕಾಕ್ಕೂ ಹೋಲಿಸಿ ನೋಡಿ. ಕೈಯಿಂದ ತಿರುಗಿಸುವ ಈ ಚರಕಾದಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಸಾಮರ್ಥ್ಯವನ್ನು ಕಾಣಬಹುದು. ಪ್ಯಾರೇಲಾಲ್ ಹೇಳುತ್ತಲೇ ಇದ್ದರು.

ನಾನು ಬಂದ ಕೆಲಸದ ಬಗ್ಗೆ ಇವರು ಮಾತಾಡುತ್ತಲೇ ಇಲ್ಲವಲ್ಲ ಎಂದು ನನಗೆ ಆತಂಕವಾಗಿತ್ತು. ‘ನೀವು ಹೀಗೆ ಮಾತಾಡಿ ನಾನು ಫೋಟೋಗ್ರಫಿ ಬಿಟ್ಟು ಚರಕ ಹಿಡಿಯುವಂತೆ ಮಾಡುತ್ತೀರಿ ಅಷ್ಟೆ’ ಎಂದು ನಯವಾಗಿ ನನ್ನ ಆಕ್ಷೇಪಣೆ ಸೂಚಿಸಿದೆ.

‘ನನ್ನ ಉದ್ದೇಶವೂ ಅದೇ. ಕೈಯಿಂದ ತಿರುಗಿಸುವ ಈ ಚರಕದ ತುಂಬ ಮಹತ್ವದ ಸಾಧನೆ ಏನೆಂದರೆ ಉಕ್ಕು ಮತ್ತು ಲೋಹದ ಬಳಕೆಯೇ ಇಲ್ಲದಂತೆ ಮಾಡುವುದು. ಇಲ್ಲಿ ನೋಡಿ ಯಾವುದೇ ಬಾಲ್‌ಬೇರಿಂಗ್‌ಗಳಿಲ್ಲ. ಒಂದು ಮೊಳೆ ಕೂಡ ಇಲ್ಲ. ಇದರಲ್ಲಿ ಬಳಕೆಯಾಗಿರುವ ಸಾಮಗ್ರಿಗಳೆಲ್ಲ ಸ್ಥಳೀಯವಾಗಿ ಸಿಗುವಂಥವು. ಈ ಮಣ್ಣಿನಲ್ಲಿ ಬೆಳೆಯುವ ಹೂವುಗಳಂತೆ ಸಹಜವಾಗಿ ಈ ನೆಲದಲ್ಲೇ ಸಿಗುವಂಥವು.’ ಎಂದು ಪ್ಯಾರೇಲಾಲ್ ಹೇಳಿದರು.

ನನಗೆ ಸಹನೆ ಮೀರುತ್ತಿತ್ತು. ಅವರ ಮಾತನ್ನು ಮಧ್ಯದಲ್ಲೇ ತಡೆಯುತ್ತ ಹೇಳಿದೆ ‘ಹೌದೇನು, ನೋಡಿ ಚರಕ ಮತ್ತು ಫೋಟೋಗ್ರಫಿ ಎರಡೂ ಸಹ ಕರಕುಶಲ ಕೆಲಸಗಳೇ ಅಲ್ಲವೇ?’

‘ಇರಬಹುದು, ಆದರೆ ಇವರೆಡರಲ್ಲಿ ಚರಕಾನೇ ಮುಖ್ಯ’ ಎಂದರು ಪ್ಯಾರೇಲಾಲ್. ನನ್ನ ಪರಿಸ್ಥಿತಿ ಚರಕದ ನೂಲುಹುರಿಯಲ್ಲಿ ಸಿಕ್ಕಿಕೊಂಡ ಕೀಟದಂತಾಗಿತ್ತು. ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದಷ್ಟೂ ಅವರ ಮಾತಿನ ಎಳೆಗಳಲ್ಲಿ ನಾನು ಇನ್ನಷ್ಟು ಸಿಕ್ಕಿಕೊಳ್ಳುತ್ತಿದ್ದೆ. ಅವರು ಚರಕ ಬಗ್ಗೆ ಹೇಳುತ್ತಲೇ ಇದ್ದರು. ಅದರ ದಾರಗಳು, ಅಡ್ಡಡ್ಡ ಕತ್ತರಿ ಪಟ್ಟಿಗಳು. . . . ಸ್ಪ್ರಿಂಗ್ ಕ್ರಿಯೆ. . . ತಿರುಗುವಾಗ ಹೇಗೆ ಒಂದಿಷ್ಟೂ ಘರ್ಷಣೆ ಇರುವುದಿಲ್ಲ. . . . . ಚಕ್ರ ಎಷ್ಟು ನೇರವಾಗಿ. . . ದೃಢವಾಗಿ ಇರುತ್ತದೆ ಇತ್ಯಾದಿ. ಒಟ್ಟಿನಲ್ಲಿ ಚರಕ ಎಂಬ ಶಿಲುಬೆಗೆ ನನ್ನನ್ನು ಏರಿಸಿದಂತಾಗಿತ್ತು.

‘ನಿಮಗೆ ಇನ್ನೊಂದು ಸೂಚನೆ ಕೊಡುತ್ತೇನೆ. ನಿಮ್ಮ ಕ್ಯಾಮರಾ ಗಾಂಧಿಯವರ ಬಾಹ್ಯ ಆಕಾರವನ್ನು ಸೆರೆಹಿಡಿದರೆ, ಚರಕ ಕುರಿತ ನಿಮ್ಮ ಬರಹ ಅವರ ಅಂತರಂಗವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ನೀವು ಚರಕ ತತ್ವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ತುಂಬ ಅಗತ್ಯ. ಮಂಗಳವಾರದ ನಂತರ ಈ ಬಗ್ಗೆ ನಿಮಗೆ ಬಿಡುವಾಗಿ ತಿಳಿಸುತ್ತೇನೆ. ಈವತ್ತು ನನಗೆ ಸಮಯವಿಲ್ಲ. ಹರಿಜನ್‌ಗೆ ಎಡಿಟೋರಿಯಲ್ ಬರೆಯಬೇಕು. ಈವತ್ತು ಸಾಕಷ್ಟು ತಿಳಿಸಿದ್ದೇನೆ. ಇದನ್ನು ಸರಿಯಾಗಿ ಅರಗಿಸಿಕೊಳ್ಳಿ, ಚಿಂತಿಸಿ. ಆಮೇಲೆ ನನ್ನ ಹತ್ತಿರ ಬನ್ನಿ. ನಿಮಗೆ ನೂಲುವುದನ್ನು ಹೇಳಿಕೊಡುತ್ತೇನೆ ಎಂದರು. ‘ಆದರೆ ಈ ದಿನವೇ ನನಗೆ ಕಲಿಸಿ ಮತ್ತು ಮೊದಲೇ ಗೊತ್ತುಪಡಿಸಿದಂತೆ ನಾನು ಈ ದಿನವೇ ಗಾಂಧೀ ಫೋಟೋ ತೆಗೆಯಬೇಕು’ ಎಂದು ನಾನು ಪರಿಪರಿಯಾಗಿ ಈ ಸೆಕ್ರೆಟರಿಯನ್ನು ಕೇಳಿಕೊಂಡೆ. ನನ್ನ ಒತ್ತಾಯವೆಲ್ಲವೂ ಅಹಿಂಸಾತ್ಮಕವಾಗೇ ಇತ್ತು. ಆದರೂ ಏನೂ ಪ್ರಯೋಜನವಾಗಲಿಲ್ಲ.

ಚರಕಾದಿಂದ ನೂಲು ತೆಗೆಯುವ ನನ್ನ ಪಾಠ ಕುಂಟುತ್ತಾ ಸಾಗಿತ್ತು. ಚರಕಾ ಕಲಿಕೆಗೂ ಅವರವರ ಬುದ್ಧಿಶಕ್ತಿಗೂ ನೇರ ಸಂಬಂಧವಿದೆ ಎಂದು ಹೊಗಳುವಂತಹ ಅವಕಾಶ ಪ್ಯಾರೇಲಾಲ್‌ಗೆ ಸಿಗಲಿಲ್ಲ! ನಾನು ವಿಚಿತ್ರ ತಪ್ಪುಗಳನ್ನು ಮಾಡಿದೆ. ದಾರ ತುಂಡಾಗುತ್ತಿತ್ತು. ಈ ಫಜೀತಿ ಪಡುವಾಗ ಬಾಲ್‌ಬೇರಿಂಗುಗಳು. ಉಕ್ಕಿನ ಭಾಗಗಳು ಇರುವ ಯಂತ್ರಯುಗ ನನಗೆ ಇನ್ನಷ್ಟು ಆಕರ್ಷಕವಾಗಿ ಕಾಣತೊಡಗಿತು. ಅಂತೂ ಅಂತಿಮವಾಗಿ ನಾನು ನನ್ನ ಉಪಕರಣವನ್ನೆತ್ತಿಕೊಂಡು ಗಾಂಧಿಯವರ ಗುಡಿಸಲಿಗೆ ಹೋಗಲು ಅನುಮತಿ ಸಿಕ್ಕಿತು.

ಹೋಗುವಾಗ ‘ನೋಡಿ ಒಂದು ಮಾತು ಗಮನಿಸಿ, ಅವರು ನಿಮ್ಮ ಕಡೆ ಯಾವ ಗಮನವನ್ನು ಕೊಡುವುದಿಲ್ಲ’ ಎಂದರು ಪ್ಯಾರೇಲಾಲ್.

ನನಗೆ ಗೊತ್ತಾಯಿತು. ಅದು ಗಾಂಧಿಯವರ ಮೌನವ್ರತದ ದಿನ. ಒಳ್ಳೆಯದೇ ಆಯಿತು. ಅವರು ನನ್ನ ಕಡೆ ಗಮನ ಕೊಡದಿದ್ದರೆ ನನ್ನ ಕೆಲಸಕ್ಕೆ ಯಾವ ತಡೆಯೂ ಇರುವುದಿಲ್ಲ ಎಂದುಕೊಂಡೆ.

ನೀವು ಯಾವುದೇ flash bulb ಬಳಸಬಾರದು ಎಂದರು ಪ್ಯಾರೇಲಾಲ್. ಈ ಮಾತು ಮಾತ್ರ ನನ್ನನ್ನು ಕಂಗೆಡಿಸಿತು. ಗುಡಿಸಲಿನ ಒಳಗೆ ಬೆಳಕು ತುಂಬ ಕಡಿಮೆ ಇರುವುದು ಹೊರಗಿನಿಂದಲೇ ಗೊತ್ತಾಗುತ್ತಿತ್ತು. ಫ್ಲಾಶ್‌ನಿಂದ ಅವರ ಕಣ್ಣಿಗೆ ತೊಂದರೆಯಾಗುತ್ತೆ ಎಂದರು ಪ್ಯಾರೇಲಾಲ್. ಪ್ರಾರ್ಥನಾ ಸಭೆಗಳಲ್ಲಿ ಗಾಂಧಿಯವರು ತಾಯಂದಿರಿಗೆ ತಿಳುವಳಿಕೆ ಹೇಳುವಾಗ ನಿಮ್ಮ ಎಳೆಯ ಮಕ್ಕಳಿಗೆ ನೇರವಾಗಿ ಸೂರ್ಯನನ್ನು ತೋರಿಸಿ ಎಂದು ಹೇಳುತ್ತಿದ್ದರು. ಹೀಗೆ ಮಾಡುವುದರಿಂದ ದೃಷ್ಟಿ ಸುಧಾರಿಸುತ್ತದೆ ಎಂದು ಗಾಂಧಿಯವರ ತಿಳುವಳಿಕೆ ಇರಬೇಕು. ಇಂತಹ ಮತ್ತು ಇನ್ನಿತರ ವಾದಗಳನ್ನು ಮುಂದಿಟ್ಟು ಮೂರು ಫ್ಲಾಶ್ ಬಲ್ಬ್‌ಗಳನ್ನು ಉಪಯೋಗಿಸುವುದಕ್ಕೆ ನಾನು ಅನುಮತಿ ಪಡೆದುಕೊಂಡೆ. ಫೋಟೋಗ್ರಾಫಿಕ್ ಸಲಕರಣೆಗಳನ್ನೆಲ್ಲ ಎತ್ತಿಕೊಂಡು ಒಳಗೆ ಹೋದೆ. ಒಳಗೆ ನಾನಂದುಕೊಂಡದಕ್ಕಿಂತ ಪರಿಸ್ಥಿತಿ ಕೆಟ್ಟದಾಗಿತ್ತು. ಹೊರಗಿನ ಬೆಳಕು ಸ್ವಲ್ಪಮಟ್ಟಿಗೆ ಬರುತ್ತಿತ್ತು. ಆದರೆ ನಾನು ಎಲ್ಲಿ ಕೇಂದ್ರೀಕರಿಸಬೇಕಿತ್ತೋ ಅಲ್ಲೇ ಬೆಳಕಿರಲಿಲ್ಲ. ಗಾಂಧೀಜಿಯವರ ತಲೆಯ ನೇರಕ್ಕೆ ಮೇಲಿದ್ದ ಕಿಟಕಿಯಿಂದ ಒಂದೇ ಒಂದು ಬೆಳಕಿನ ಕಿರಣ ನನ್ನ ಲೆನ್ಸ್‌ಗೆ ಸರಿಯಾಗಿ ಬೀಳುತ್ತಿತ್ತು. ಅವರ ಕಂದ ಬಣ್ಣದ ದೇಹ ಗುಡಿಸಲಿನ ಗೋಡೆಯ ಹಿನ್ನೆಲೆಯೊಂದಿಗೆ ಲೀನವಾಗಿತ್ತು. ಯಾವುದೇ ರೀತಿಯ shading ಅಥವಾ ಕೈಚಳಕದಿಂದಲೂ ಅದನ್ನು ಸರಿಪಡಿಸಲು ಸಾಧ್ಯವಾಗುವಂತಿರಲಿಲ್ಲ. ಅವರು ನ್ಯೂಸ್‌ಪೇಪರುಗಳ ಒಂದು ದೊಡ್ಡ ರಾಶಿಯನ್ನಿಟ್ಟುಕೊಂಡು ಪೇಪರಿನ ಮೇಲೆ ಬಾಗಿ ಓದುತ್ತಾ ಕುಳಿತಿದ್ದರು. ಹೀಗಾಗಿ ಅವರ ಮುಖಲಕ್ಷಣಗಳೆಲ್ಲವೂ ಮರೆಯಾಗಿ ಹೋಗಿದ್ದವು. ಪ್ಯಾರೇಲಾಲ್ ಮೊದಲೇ ಹೇಳಿದಂತೆ ಗಾಂಧಿ ನನ್ನ ಕಡೆ ಯಾವ ಗಮನವನ್ನೂ ಕೊಡಲಿಲ್ಲ. ಅದಕ್ಕೆ ನಾನು ಋಣಿಯಾಗಿರಬೇಕು.

ನನ್ನ ಕ್ಯಾಮರಾದ ಭಾಗಗಳು ಸಾಮಾನ್ಯವಾಗಿ ಸರಿಯಾಗಿ ಕೆಲಸ ಮಾಡುತ್ತವೆ. ಆದರೆ ಯಾರಾದರೂ ಬಹುಮುಖ್ಯವಾದ ಹಾಗೂ ಜಟಿಲ ವ್ಯಕ್ತಿತ್ವದ ಫೋಟೋ ತೆಗೆಯುವ ಸಂದರ್ಭದಲ್ಲೇ ವಿಚಿತ್ರವಾಗಿ ವರ್ತಿಸುತ್ತವೆ. ಕೆಲಸ ಮಾಡದೆ ಮುಷ್ಕರ ಹೂಡುತ್ತವೆ. ಈಜಿಪ್ಟಿನ ದೊರೆ ಫರೂಕ್, ಚರ್ಚಿಲ್, ಇಥಿಯೋಪಿಯಾದ ಚಕ್ರವರ್ತಿ, ಪೋಪ್….. ಮೊದಲಾದವರ ಚಿತ್ರ ತೆಗೆಯುವಾಗೆಲ್ಲ ಇಂಥದೇ ಪರಿಸ್ಥಿತಿಯಾಗಿತ್ತು. ತಂಪು ವಾತಾವರಣದಿಂದ ಬಿಸಿವಾತಾವರಣಕ್ಕೆ ಬಂದರೂ ನನ್ನ ಸಲಕರಣೆಗಳ ಸ್ವಭಾವ ಸುಧಾರಿಸಲಿಲ್ಲ. ಫ್ಲಾಶ್ ಬಲ್ಬುಗಳನ್ನು ಬಳಸುವುದಕ್ಕೆ ಮೊದಲು ಕ್ಯಾಮರಾ ಸ್ವಲ್ಪ ಹೊಂದಿಕೊಳ್ಳಲಿ ಎಂದು ಕೆಲವು  slowtime shots ತೆಗೆದೆ. ತಾನಾಗೇ ರಿಲೀಸ್ ಆಗುವ ಕಡೆ ಶಟರ್ ಚಲಿಸದೆ ಹಾಗೇ ಕಚ್ಚಿಕೊಂಡಿತ್ತು. ಅದನ್ನು ಹೇಗೋ ಸರಿಪಡಿಸಿಕೊಂಡೆ. ಆಗ ಬ್ಲೇಡ್ ಅರೆಸ್ಟರ್ ಗ್ಯಾಜೆಟ್ ಅಡ್ಡಕ್ಕೆ ನುಗ್ಗಿತು. ಫಿಲ್ಮನ್ನು ಇನ್ನೂ ಅರ್ಧ ಎಳೆದಿದ್ದಾಗ ಫಿಲ್ಮ್‌ಪ್ಯಾಕ್‌ಗಳಲ್ಲಿದ್ದ ಪೇಪರ್‌ಪುಲ್‌ಗಳು ಹರಿದವು. ಟ್ರೈಪಾಡನ್ನು ನಿಲ್ಲಿಸಲು ಯತ್ನಿಸಿದಾಗ ಅದರ ಎರಡು ಕಾಲುಗಳು ಅರ್ಧದಷ್ಟು ಮಾತ್ರ ಈಚೆ ಬಂದವು. ಮೂರನೇ ಕಾಲು ಸರಿಯಾಗಿ ಉದ್ದಕ್ಕೆ ಚಾಚಿಕೊಂಡಿತು.

ಗಾಂಧಿ ಪೇಪರ್ ಕ್ಲಿಪಿಂಗ್‌ಗಳನ್ನು ಪಕ್ಕಕ್ಕಿಟ್ಟು ಚರಕದಲ್ಲಿ ದಾರ ತೆಗೆಯಲು ಆರಂಭಿಸಿದರು. ಮೊದಲು flash bulb ಉಪಯೋಗಿಸಿ ಬಿಡೋಣ ಎಂದು ನಿರ್ಧರಿಸಿದೆ. ಎರಡನೇ ಷಾಟ್ ಸರಿಯಾಗಿ ಬಂತು. ಅಂತ ಅಂದುಕೊಳ್ಳುವಷ್ಟರಲ್ಲಿ ನಾವು slideನ್ನು ಪಕ್ಕಕ್ಕೆ ಜರುಗಿಸಿರಲಿಲ್ಲ ಎಂದು ನೆನಪಾಯಿತು. ಮೂರನೇ ಷಾಟ್ ತೆಗೆಯುವ ಮೊದಲು ಎಲ್ಲವನ್ನೂ ಸರಿಯಾಗಿ ಚೆಕ್ ಮಾಡಿದೆ. ಗಾಂಧಿಯನ್ನು ಸರಿಯಾಗಿ ಗಮನಿಸಿದೆ. ಅವರ ಕಂದುಬಣ್ಣದ ಕೈ ಬಿಳಿಯ ದಾರವನ್ನು ಹಿಡಿದು ಕುಶಲತೆಯಿಂದ ಮೇಲೆತ್ತಿ ಎಳೆಯುವಾಗ ಸರಿಯಾಗಿ ಕ್ಲಿಕ್ ಮಾಡಿದೆ. ಸದ್ಯ ಎಂದು ಎಲ್ಲವನ್ನೂ ಬಾಚಿಕೊಂಡು ಹೊರಗೋದೆ. ಯಂತ್ರ ಯುಗ ಇಷ್ಟೊಂದು ಕೈಕೊಡುತ್ತೆ ಎಂದು ನನಗೆ ಗೊತ್ತಿರಲಿಲ್ಲ! ಅಂತಿಮವಾಗಿ ನಾನು ತೆಗೆದ ಚಿತ್ರವನ್ನು ನಾನು ಕಣ್ಣಾರೆ ನೋಡುವವರೆಗೂ ನನಗೆ ಯಂತ್ರಯುಗದಲ್ಲಿ ವಿಶ್ವಾಸವೇ ಹೊರಟುಹೋಗಿತ್ತು!

ಇದಾದ ನಂತರದ ವಾರಗಳಲ್ಲಿ ನಾನೂ ಕೂಡ ಎಲ್ಲ ಬಾತ್ಮೀದಾರರಂತೆ ಆಶ್ರಮಕ್ಕೆ ಪದೇ ಪದೇ ಹೋಗುತ್ತಿದ್ದೆ. ಬ್ರಿಟಿಷ್ ಭಾರತೀಯ ಮಾತುಕತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಭಂಗಿ ಕಾಲೋನಿ ಒಂದು ರೀತಿ summer white house ಆಗಿತ್ತು. ಸಂಪುಟ ಸಚಿವರ ಸಮಾವೇಶಗಳು ವೈಸ್‌ರೀಗಲ್ ಪ್ಯಾಲೇಸ್‌ನಲ್ಲಿ ನಡೆಯುತ್ತಿದ್ದವು. ಗಾಂಧಿಯವರು ಸರ್ಕಾರದಲ್ಲಿ ಯಾವುದೇ ಅಧಿಕಾರ ಸ್ಥಾನವನ್ನು ಹಿಡಿಯದಿದ್ದರೂ, ಹಿಡಿಯುವ ಅಪೇಕ್ಷೆ ಅವರಿಗಿಲ್ಲದಿದ್ದರೂ ಅವರೊಂದಿಗೆ ಸಮಾಲೋಚಿಸದೆ ಯಾವ ಮುಖ್ಯ ನಿರ್ಣಯವೂ ಆಗುತ್ತಿರಲಿಲ್ಲ. ಅತ್ಯಂತ ಪ್ರತಿಷ್ಠಿತ ತ್ರಿಮೂರ್ತಿಗಳಾದ ಸ್ಟಾಫರ್ಡ್‌ಕ್ರಿಪ್ಸ್, ಲಾರ್ಡ್‌ಪೆಥಿಕ್ ಲಾರೆನ್ಸ್ ಹಾಗೂ ಫಸ್ಟ್ ಲಾರ್ಡ್ ಆಫ್ ಅಡ್ಮಿರಾಲಿಟಿಯೂ ಸೇರಿದಂತೆ ಗಣ್ಯವ್ಯಕ್ತಿಗಳೆಲ್ಲರೂ ಅಸ್ಪೃಶ್ಯರ ವಸತಿ ಪ್ರದೇಶಕ್ಕೆ ಪ್ರವಾಹದಂತೆ ಬಂದು ಹೋಗುತ್ತಿದ್ದರು.

ಆದರೆ ದೆಹಲಿಯ ಬಹುಮುಖ್ಯರಾದ ಇಬ್ಬರು ಮಾತ್ರ ಈ ಸ್ಥಳಕ್ಕೆ ಬರಲಿಲ್ಲ. ಇವರಲ್ಲಿ ಒಬ್ಬರು ಮಹಮ್ಮದ್ ಆಲಿ ಜಿನ್ನಾ, ಅವಿಭಜಿತ ಭಾರತದ ಬದ್ಧ ವಿರೋಧಿ. ಅವರ ಪ್ರತ್ಯೇಕ ಪಾಕಿಸ್ತಾನವನ್ನು ರೂಪಿಸುವ ತಂತ್ರದಲ್ಲಿ ತೊಡಗಿದ್ದರು. ಅವರನ್ನು ಗಾಂಧಿಯ ಬಾಗಿಲಿಗೆ ಬರುತ್ತಾರೆಂದು ನಿರೀಕ್ಷಿಸುವಂತಿರಲಿಲ್ಲ. ಇನ್ನೊಬ್ಬರು ಹರ್ಬರ್ಟ್ ಹೂವರ್. ಅವರು ಭಾರತದಲ್ಲಿ ಬಂದೊದಗಲಿರುವ ಕ್ಷಾಮವನ್ನು ಎದುರಿಸುವುದಕ್ಕಾಗಿ ಅಮೆರಿಕಾದ ಆಹಾರ ಧಾನ್ಯಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ನಾಯಕರೊಂದಿಗೆ ಸಮಾಲೋಚಿಸಲು ಬಂದಿದ್ದ ಅಮೆರಿಕಾದ ಫುಡ್ ಕಮಿಷನ್ನಿನ ಮುಖ್ಯಸ್ಥರಾಗಿದ್ದರು. ಈ ಸಮಾವೇಶ ವೈಸ್‌ರೀಗಲ್ ಭವನದಲ್ಲಿ ನಡೆಯುತ್ತಿದ್ದುದರಿಂದ ಹೂವರ್, ಗಾಂಧಿಯ ಬಳಿ ಬರಬೇಕಾಗಲಿಲ್ಲ. ಗಾಂಧಿಯವರೇ ಆ ಸಮಾವೇಶಕ್ಕೆ ಹೋಗಬೇಕಿತ್ತು.

ಜನರಿಗೆ ವಿತರಿಸಬೇಕಾದ ಆಹಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಭಿಪ್ರಾಯ ತಿಳಿಸಲು ಜಿನ್ನಾ ಅವರನ್ನೂ ಸಹ ಹೂವರ್ ಭೇಟಿಗೆ ಆಮಂತ್ರಿಸಲಾಗಿತ್ತು. ಹೂವರ್‌ಗೆ ಅಂಥ ಇಚ್ಛೆ ಇದ್ದರೆ, ಅವರೇ ತಮ್ಮಲ್ಲಿಗೆ ಬರಲಿ ಎಂದು ಜಿನ್ನಾ ಹೇಳಿ ಕಳಿಸಿದ್ದರು. ಈ ಮಾತನ್ನು ಕೇಳಿದಾಗ ಹೂವರ್‌ಗೆ ಬಹಳ ಅಚ್ಚರಿಯಾಯಿತು. ಏಕತೆ ಇಲ್ಲವೇ ವಿಭಜನೆ ಎಂಬ ವಿವಾದ ಭುಗಿಲೆದ್ದು ಎಲ್ಲೆಲ್ಲೂ ಜಿನ್ನಾ ಹೆಸರೇ ಕೇಳಿ ಬರುತ್ತಿದ್ದ ಈ ಸಂದರ್ಭದಲ್ಲಿ ಹೂವರ್ ಅವರು ಅಷ್ಟೇ ತೀಕ್ಷ್ಣವಾಗಿ Who is Jinnah? Never heard of him ಎಂದು ಪ್ರತಿಕ್ರಿಯಿಸಿದರು. ಈ ಪ್ರತಿಕ್ರಿಯೆ ಮುಸ್ಲಿಮೇತರ ಜನಕ್ಕೆ ತುಂಬ ಇಷ್ಟವಾಯಿತು. ಪದೇ ಪದೇ ಅವರ ಮಾತನ್ನು ಉಲ್ಲೇಖಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು.

ಗಾಂಧಿಯವರೊಂದಿಗೆ ಮಾತಾಡ ಬಯಸಿದ ಗಣ್ಯವ್ಯಕ್ತಿಗಳೇ ಆಗಲಿ ಸಾಮಾನ್ಯ ಜನರೇ ಆಗಲಿ ಬೆಳಗಿನ ಜಾವದಲ್ಲಿಯೇ ಗಾಂಧಿಯವರನ್ನು ಭೇಟಿ ಮಾಡಬೇಕಿತ್ತು. ಗಾಂಧಿಯವರು ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ಉದ್ಯಾನದಲ್ಲಿ ಒಂದು ಮೈಲಿಯಷ್ಟು ದೂರ ನಡೆಯುತ್ತಿದ್ದರು. ತಮ್ಮನ್ನು ಸಂದರ್ಶಿಸಲು ಬಂದವರೊಂದಿಗೆ ಗಾಂಧಿ ನಡೆದುಕೊಂಡು ಹೋಗುವಾಗಲೇ ಮಾತಾಡಿ ಮುಗಿಸುತ್ತಿದ್ದರು. ಗಾಂಧಿಯವರ ವೇಗದ ನಡಿಗೆಯೊಂದಿಗೆ ಹೊಂದಿಕೊಳ್ಳಲು ವೇಗವಾಗಿ ಓಡಬೇಕಿತ್ತು. ಗಾಂಧಿಯ ಹಿಂದೆಯೇ ಓಡಿಕೊಂಡು ಬರುತ್ತಿದ್ದ ಆಪ್ತಕಾರ್ಯದರ್ಶಿಗಳಿಗೆ ಗಾಂಧಿ ನಡೆಯುತ್ತಲೇ ಸೂಚನೆಗಳನ್ನು ಕೊಡುತ್ತಿದ್ದರು. ನೆಹರೂ, ಪಟೇಲ್ ಮೊದಲಾದ ರಾಜಕೀಯ ನಾಯಕರುಗಳೊಂದಿಗೆ ಮಾತುಕತೆಯೂ ಈ ಸಮಯದಲ್ಲಿ ನಡೆಯುತ್ತಿತ್ತು. ಯಾರು ಎಷ್ಟೇ ಮುಖ್ಯವ್ಯಕ್ತಿಯಾಗಿರಲಿ, ಗಾಂಧಿ ಭೇಟಿ ಸಮಯ ನೀಡುತ್ತಿದ್ದುದು ಬೆಳಗಿನ ಐದು ಅಥವಾ ಆರು ಗಂಟೆಗೆ. ನಡಿಗೆಯೊಂದಿಗೆ ಮಾತನ್ನೂ ಮುಗಿಸಬಹುದು ಎಂಬುದು ಅವರ ಲೆಕ್ಕಚಾರ. ‘ವಾಕಿಂಗ್‌ಗೆ ಸಮಯವೇ ಆಗುವುದಿಲ್ಲ’ ಎಂಬ ಮಾತನ್ನು ಯಾರು ಹೇಳಿದರೂ ಗಾಂಧಿ ಒಪ್ಪಿಕೊಳ್ಳುವುದಿಲ್ಲ. ಊಟ ಬಿಡುವುದೋ ಅಥವಾ ವಾಕಿಂಗ್ ಬಿಡುವುದೋ ಎಂಬ ಪ್ರಶ್ನೆ ಬಂದರೆ ನಾನು ಊಟ ಬಿಡುತ್ತೇನೆಯೇ ಹೊರತು ನಡಿಗೆಯನ್ನಲ್ಲ ಎನ್ನುತ್ತಾರೆ ಗಾಂಧಿ. ‘ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅವರ ತಂತ್ರ ಇದು’ ಎಂದು ಪ್ಯಾರೇಲಾಲ್ ಹೇಳಿದರು. ಈ ಅವಧಿಯಲ್ಲಿ ನನ್ನ physical fitness ಪರೀಕ್ಷೆ ಎದುರಾಯಿತು. ಗಾಂಧಿವಾದದ ಸಂಭ್ರಮದಲ್ಲಿ ನಾನೂ ಬೆಳಗಿನ ವಾಕ್ ಮಾಡತೊಡಗಿದ. ಬೆಳಿಗ್ಗೆ ನಾಲ್ಕೂವರೆಗೆ ಏಳುತ್ತಿದ್ದೆ. ಒಬ್ಬ ಟ್ಯಾಕ್ಸಿ ಡ್ರೈವರ್‌ನ್ನು ಹಿಡಿದು ಆಶ್ರಮದವರೆಗೆ ಹೋಗುತ್ತಿದ್ದೆ. ಆರು ಗಂಟೆಗೆ ಗಾಂಧಿಯವರ ವಾಕ್ ಪ್ರಾರಂಭವಾಗುತ್ತದೆ ಎಂದು ಹೇಳಿದ್ದರು. ಆದರೆ ನಾನು ಹೋದ ದಿನ ಗಾಂಧಿ ಐದು ಗಂಟೆಗೇ ಹೋಗಿರುತ್ತಿದ್ದರು. ನಾನು ಐದು ಗಂಟೆಗೆ ಬಂದಾಘ ಗಾಂಧಿ ಮತ್ತು ಅವರ ಶಿಷ್ಯರು ಇನ್ನಾವುದೋ ಹೊಸ ಜಾಗಕ್ಕೆ ಹೋಗಿದಾರೆ ವ್ಯಾಯಾಮಕ್ಕೆ ಎಂದು ತಿಳಿದುಬರುತ್ತಿತ್ತು. ಗಾಂಧಿಯವರು ಹೊರಡುವ ಸಮಯಕ್ಕೂ ನಾನು ಅಲ್ಲಿರುವ ಸಮಯಕ್ಕೂ ಒಂದು ವೇಳೆ ತಾಳೆಯಾದ ಸಂದರ್ಭದಲ್ಲಿ ಬೆಳಕು ಕಡಿಮೆ ಇರುತ್ತಿತ್ತು ಜೊತೆಗೆ ಫ್ಲಾಶ್ ಬಲ್ಬ್ ಉಪಯೋಗಿಸಕೂಡದೆಂಬ ನಿಷೇಧದಿಂದಾಗಿ ಉತ್ತಮ ನೆಗೆಟಿವ್ ಅಸಾಧ್ಯವಾಗುತ್ತಿತ್ತು. ನಾನು ತೋಟದ ಒಂದು ತುದಿಯಲ್ಲಿ ಗಾಂಧಿ ಮತ್ತು ಅವರೊಂದಿಗೆ ಹೋಗುತ್ತಿದ್ದ ಆಶ್ರಮವಾಸಿಗಳನ್ನು ಗಮನಿಸುತ್ತ ಕೂರುತ್ತಿದ್ದೆ. ಅದು ಯಾವುದೋ ಮಧ್ಯಕಾಲೀನ ದೃಶ್ಯದಂತೆ ಕಾಣುತ್ತಿತ್ತು. ಶಾರ್ಟ್‌ಹ್ಯಾಂಡ್ ನೋಟ್‌ಬುಕ್ ಹಿಡಿದು ಗಾಂಧಿಯ ಹಿಂದೆ ಓಡುತ್ತಿದ್ದ ಸೆಕ್ರೆಟರಿಗಳು ಆ ದೃಶ್ಯಕ್ಕೆ ಅಭಾಸವಾಗಿ ಕಾಣುತ್ತಿದ್ದರು. ನಾನು ಒಂದು ಅದ್ಭುತ ಚಿತ್ರವನ್ನು ಹೇಗೆ ತೆಗೆಯಬೇಕು ಎಂದು ಯೋಚಿಸುತ್ತ ಕೂರುತ್ತಿದ್ದೆ.

ನಾನು ಪದೇ ಪದೇ ಇಲ್ಲಿ ಕಾಣಿಸಿಕೊಳ್ಳುವುದನ್ನು ಗಾಂದಿ ಗಮನಿಸಿದ್ದರು. ನೋಡಿದ ಕೂಡಲೇ ಸ್ನೇಹಪರವಾದ ಏನಾದರೊಂದು ಮಾತು ಹೇಳುವಷ್ಟು ಅವರು ನನ್ನನ್ನು ಗಮನಿಸಿದ್ದರು. ನನ್ನನ್ನು ಅವರು ಮಾತಾಡಿಸಿದ್ದೇನೂ ಇಲ್ಲ. ಆದರೆ ನನ್ನ ಕಡೆ ನೋಡುತ್ತ ಏನನ್ನೋ ತಮಾಷೆಯಾಗಿ ಚುಟುಕಾಗಿ ಹೇಳಿದರು ಎಂದು ಗೊತ್ತಾಗುತ್ತಿತ್ತು. ಅವರ ನನಗೊಂದು ಮುದ್ದಿನ ಹೆಸರು ಕೊಟ್ಟಿದ್ದರು. ನಾನು ನನ್ನ ಫೋಟೋಗ್ರಾಫಿಕ್ ಸಲಕರಣೆಗಳೊಂದಿಗೆ ಅವರ ಮುಂದೆ ಕಾಣಿಸಿಕೊಂಡರೆ ಸಾಕು ‘There is the toruturer gain ಎನ್ನುತ್ತಿದ್ದರು.

ಒಂದು ಬೆಳಿಗ್ಗೆ ಗಾಂಧಿ, ಭಂಗಿ ಕಾಲೋನಿ ಪಕ್ಕದ ವಾಲಿಬಾಲ್ ಮೈದಾನದಲ್ಲಿ ವಾಕ್ ಹೊರಟಿದ್ದರು. ನಾನು ಎತ್ತರದ ಎರಡು ಮರಗಳ ಮಧ್ಯದ ಜಾಗಕ್ಕೆ ಎದುರಾಗಿ ಒಂದು ಪಕ್ಕ ನನ್ನ ಸಲಕರಣೆಗಳೊಂದಿಗೆ ತಳ ಊರಿದ್ದೆ. ಒಂದು ವೇಳೆ ಗಾಂಧಿಯವರು ಸೂರ್ಯನ ಬಿಸಿಲು ಬರುವಷ್ಟು ಹೊತ್ತಿನ ತನಕ ದೀರ್ಘ ವಾಕ್ ಮಾಡಿದರೆ ಬೆಳಕಿನ ಮೊದಲ ಧಾರೆ ಈ ಮರಗಳ ಮಧ್ಯೆ ತೂರಿಬರುತ್ತದೆ ಎಂದು ಅಂದಾಜು ಮಾಡಿದ್ದೆ. ಗಾಂಧಿಯವರ ಚಿತ್ರ ತೆಗೆಯಲು ಇದಕ್ಕಿಂತ ಒಳ್ಳೆಯ ಅವಕಾಶವಿರಲಾರದು. ಈ ದಿನ ಬೇರೆ ಯಾವ ಗಣ್ಯರೂ ಅವರೊಂದಿಗೆ ಇರಲಿಲ್ಲ. ಗಾಂಧಿಯ ಅಕ್ಕಪಕ್ಕ ಮತ್ತು ಹಿಂದೆ ಆಶ್ರಮವಾಸಿಗಳು ಸೈನಿಕರ ಶ್ರೇಣಿಯಲ್ಲಿರುವಂತೆ ಇದ್ದರು. ಗಾಂಧಿ ಎಂದಿನಂತೆ ಇಬ್ಬರು ಹುಡುಗಿಯರ ಭುಜಗಳ ಮೇಲೆ ಕೈಹಾಕಿಕೊಂಡಿದ್ದರು. ಅವರ ಎಡಪಕ್ಕದಲ್ಲಿ ಅಭಾ. ಬಲಕ್ಕೆ ಅವರ ಮೊಮ್ಮಗಳು ಸೀತಾ. ಗಾಂಧಿ ತಮ್ಮ ಉದ್ದನೆಯ ಕಾಲುಗಳನ್ನು ದೂರದೂರಕ್ಕೆ ದೃಢವಾಗಿ ಹಾಕುತ್ತಾ ನಡೆಯುವಾಗ ಅವರ ಐದು ಶಿಲಿಂಗುಗಳ ವಾಚು ಸೊಂಟದಿಂದ ತೂಗಾಡುತ್ತಿತ್ತು. ಅವರು ಹೀಗೇ ವಾಲಿಬಾಲ್ ಕೋರ್ಟ್‌ನಲ್ಲಿ ಹಿಂದೆ ಮುಂದೆ ಓಡಾಡುತ್ತಿದ್ದಾಗ ಪೂರ್ವದಿಕ್ಕು ಪ್ರಕಾಶಮಾನವಾಗತೊಡಗಿತ್ತು. ವಾಲಿಬಾಲ್ ಕೋರ್ಟಿನಲ್ಲಿ ಅವರು ಕೊನೆಯ ತಿರುವು ತೆಗೆದುಕೊಂಡಾಗ ಸೂರ್ಯನ ಮೊದಲ ಹೊಂಗಿರಣ ಮರಗಳ ಮಧ್ಯದಿಂದ ತೂರಿಬಂದಿತು. ಗಾಂಧಿ ನನ್ನ ಮುಂದಿನಿಂದ ನಡೆದುಹೋಗುತ್ತ ‘ನಿನ್ನ ಪ್ರಯತ್ನಗಳೆಲ್ಲ ವಿಫಲವಾದವು’ ಎಂದು ನಕ್ಕರು. ಆದರೆ ಅವರ ಎಣಿಕೆ ಸರಿ ಇರಲಿಲ್ಲ. ನಾನು ಬೇರೆ ಬೇರೆ focal length ಗಳಿರುವ ಎರಡು ಕ್ಯಾಮರಾಗಳನ್ನು ನನಗೆ ಬೇಕಾಗಿದ್ದ ಕಡೆ ಮುಖಮಾಡಿ ಇಟ್ಟಿದ್ದೆ. ಅವರು ಈ ಸೂರ್ಯಕಿರಣಗಳ ಕೆಳಗೆ ಹಾದುಹೋಗುವಾಗ ನನಗೆ ಎರಡು ಅದ್ಭುತ ನೆಗೆಟಿವ್‌ಗಳು ಸಿಕ್ಕವು. ಒಂದು ಚಿತ್ರದಲ್ಲಿ ಗಾಂಧಿ ಮತ್ತು ಅವರ ಅನುಯಾಯಿಗಳ ಸಂಪೂರ್ಣ ಶ್ರೇಣಿ ಇದ್ದಿತು. ಇನ್ನೊಂದು, ಮಹಾತ್ಮರ closeup. ಅದರಲ್ಲಿ ಅವರು ಅಭಾ ಮತ್ತು ಸೀತಾ ಭುಜಗಳ ಮೇಲೆ ಕೈಹಾಕಿ ಬಾಗಿದ ಚಿತ್ರ. ಈ ಗುಂಪು ಅಸ್ಪೃಶ್ಯರ ಕಾಲೋನಿಯಲ್ಲಿ ಮರೆಯಾಯಿತು. ಎಂದಿನಂತೆ ವಾಕಿಂಗ್ ಮುಗಿದ ನಂತರ ಗಾಂಧೀಜಿಗೆ ಎರಡು ಗಂಟೆಗಳ ಕಾಲ ಮಸಾಜು ನಡೆಯುತ್ತಿತ್ತು. ಅದನ್ನು ಮಾಡುತ್ತಿದ್ದವರು ಸುಶೀಲಾ ಅಥವಾ ಆಶ್ರಮದ ಯಾರಾದರೊಬ್ಬ ಮಹಿಳೆ.

ಬೇಗ ಮಳೆಯಾಗದೆ ದೆಹಲಿ ಬಿಸಿಯೇರುತ್ತಿತ್ತು. ಭಯಾನಕ ಬಿಸಿಲಿನ ದಿನಗಳು. ಮಾನ್ಸೂನ್ ಮಳೆಗಾಗಿ ಎಲ್ಲರೂ ಕಾತರಿಸುತ್ತಿದ್ದರು. ಕ್ಯಾಬಿನೆಟ್ ಸಮಾವೇಶವನ್ನು ಆದಷ್ಟು ಬೇಗ ಮುಗಿಸಬೇಕೆಂದು ಭಗೀರಥ ಪ್ರಯತ್ನ ಮಾಡಿದರೂ ಚರ್ಚೆಗಳು ಮುಂದಕ್ಕೆಳೆದುಕೊಂಡು ಹೋದವು. ಸ್ವಾತಂತ್ರ್ಯದ ರೂಪುರೇಷೆಗಳು ಇನ್ನೂ ಅಸ್ಪಷ್ಟವಾಗೇ ಮಸುಕಾಗಿಯೇ ಉಳಿದವು. ನಗರದ ರಸ್ತೆಗಳು, ಕಟ್ಟಡಗಳಿಂದ ಬಿಸಿಲಿನ ಧಗೆ ರಾಚುತ್ತಿತು. ರಾಜಕಾರಣಿಗಳು ಮಂತ್ರಿಗಳು ಉಳಿದೆಲ್ಲ ಜೀವಂತ ಪಶುಪ್ರಾಣಿಗಳೂ ಮೇಲುಸಿರು ಬಿಡುವಂತಾಯಿತು. ಅಂತಿಮವಾಗಿ ಕ್ಯಾಬಿನೆಟ್ ಸಮಾವೇಶವನ್ನು ತಂಪಾದ ಸ್ವಚ್ಛ ಹವೆಯ ಪರ್ವತ ಪ್ರದೇಶಕ್ಕೆ ಸ್ಥಳಾಂತರಿಸಿದರು. ಇಡೀ ರಾಜಕಾರಣಿಗಳ ಸಮೂಹ ಹಿಮಾಲಯದ ತಪ್ಪಲಿನ ತಂಪು ಶಿಖರ ಪ್ರದೇಶ – ಸಿಮ್ಲಾದ ಕಡೆಗೆ ಚಲಿಸಿತು.

ಗಾಂಧಿ ಮತ್ತು ಅವರ ಆಶ್ರಮವನ್ನು ಸ್ಥಳಾಂತರಿಸುವುದು ಒಂದು ದೊಡ್ಡ ಸಂಗತಿಯೇ ಆಯಿತು. ಇದರಲ್ಲಿ ನಮ್ಮಲ್ಲಿ ಅನೇಕರು ಪಾಲುಗೊಂಡೆವು. ಗಾಂಧಿ ಸರಳ ಜೀವನದಲ್ಲಿ ನಂಬುಗೆ ಇಟ್ಟವರಾದ್ದರಿಂದ ರೈಲಿನ ಮೂರನೇ ದರ್ಜೆಯ ಬೋಗಿಯಲ್ಲಿ ಅವರ ಪ್ರಯಾಣ. ಭಾರತದಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸಬೇಕಾದರೆ ಸಾಕಷ್ಟು ಶಕ್ತಿಯೂ ಅಗತ್ಯ. ನ್ಯೂಯಾರ್ಕ್ ಮತ್ತು ಲಂಡನ್ ಸಬ್‌ವೇಗಳಲ್ಲಿ ತುಂಬ ಜನದಟ್ಟಣೆಯಿರುವ ಸ್ಟೇಷನ್ನಿನಲ್ಲಿ ಮಾತ್ರ. ಈ ರೀತಿ ಇದ್ದರೆ ಭಾರತದಲ್ಲಿ ಅದು ಮಾಮೂಲು ಸ್ಥಿತಿ. ಪ್ರಯಾಣಿಕರು ರೈಲಿನ ಛಾವಣಿ, ಕಿಟಕಿಗಳಿಗೂ ಜೋತು ಬಿದ್ದಿರುತ್ತಾರೆ. ಆದ್ದರಿಂದ ಗಾಂಧಿ ಮೂರನೇ ದರ್ಜೆಯಲ್ಲ್ಲಿ ಪ್ರಯಾಣಿಸಿದಾಗ ಮಹಾತ್ಮರು ಅವರ ಆಶ್ರಮವಾಸಿಗಳು, ಅವರ ಮೇಕೆಗಳು ಎಲ್ಲಕ್ಕೂ ಸ್ಥಳ ಕಲ್ಪಿಸುವುದಕ್ಕಾಗಿ. ಅವರು ಹಸುವಿನ ಹಾಲನ್ನು ಕುಡಿಯುತ್ತಿರಲಿಲ್ಲ. ಹೀಗಾಗಿ ಅವರೊಂದಿಗೆ ಮೇಕೆಗಳೂ ಕೂಡ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದವು. ಸಿಮ್ಲಾ ಪ್ರಯಾಣಕ್ಕಾಗಿ ಇಡೀ ಮೂರನೇ ದರ್ಜೆಯ ಎಲ್ಲ ಭೋಗಿಗಳನ್ನೂ ಗಾಂಧಿಯವರಿಗಾಗಿ ಪಡೆದುಕೊಳ್ಳಬೇಕಾಯಿತು. ನಾವು ಕೆಲವು ಬಾತ್ಮೀದಾರರೂ ಹಾಗೂ ಕೆಲವು ಕಾಂಗ್ರೆಸ್ ಪಾರ್ಟಿ ಲೀಡರುಗಳು ಗಾಂಧಿಯವರ ರೈಲಿನಲ್ಲಿ ಪ್ರಯಾಣಿಸಿದೆವು.

ಆ ಕಾಲದಲ್ಲಿ ನಾನೇ ಏಕಮಾತ್ರ ಮಹಿಳಾ ಬಾತ್ಮೀದಾರಳು. ನನಗಾಗಿ ಶವಪೆಟ್ಟಿಗೆಯಂತಿದ್ದ ಒಂದು ಪುಟ್ಟ ಕಂಪಾರ್ಟ್‌ಮೆಂಟಿನ ವ್ಯವಸ್ಥೆಯಾಯಿತು. ನಮ್ಮ ಮುಂದಿನ ಬೋಗಿಯಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪಾರ್ಟಿ ಅಧ್ಯಕ್ಷರು. ನಮ್ಮ ಹಿಂದಿನ ಬೋಗಿಯಲ್ಲಿ ಸ್ವತಃ ಗಾಂಧಿ ಹಾಗೂ ಅವರ ಮೇಕೆಗಳಿದ್ದ ವಿಷಯ ನನಗೆ ತಿಳಿದದ್ದು ಅನಂತರವೇ.

ಎಲ್ಲ ಮುಗಿಸಿಕೊಂಡು ಹತ್ತು ದಿನಗಳಾದ ನಂತರ ಹಿಂದಿರುಗಿದ ಮೇಲೂ ದೆಹಲಿ ಕುಲುಮೆಯಂತೇ ಇತ್ತು. ಜಿನ್ನಾ ಎಷ್ಟು ಪಟ್ಟು ಹಿಡಿದು ತಮ್ಮ ಆಟ ಆಡಿದ್ದರೆಂದರೆ ಮಾತುಕತೆಗಳೆಲ್ಲವೂ ಸ್ಥಗಿತಗೊಂಡಿದ್ದವು. ದೆಹಲಿಯಲ್ಲಿ ಮಾತುಕತೆಗಳು ಮುಂದುವರೆದವು. ನೇತಾರರು ವೈಸ್‌ರಾಯ್ ಪ್ಯಾಲೇಸಿನಿಂದ ಭಂಗಿ ಕಾಲೋನಿಯವರಿಗೆ ತರಾತುರಿಯಲ್ಲಿ ಓಡಾಡಿದರು. ಬಿಸಿಲಿನ ತಾಪ ತಡೆಯುವುದಕ್ಕಾಗಿ ಗಾಂಧಿ ಒಂದು ದೊಡ್ಡ ಬಿಳಿಯ ಟರ್ಕಿ ಟವಲನ್ನು ನೀರಿನಲ್ಲಿ ನೆನಸಿ ತಲೆಯ ಮೇಲೆ ಸುತ್ತಿಟ್ಟುಕೊಳ್ಳುತ್ತಿದ್ದರು. ಉದ್ದನೆಯ ಕಾಲುಗಳ ಮೇಲೆ ದಪ್ಪ ತಲೆಯ ಆಕಾರ ಒಂದು ಅಣಬೆಯಂತೆ ಕಾಣುತ್ತಿತ್ತು. ಜಿನ್ನಾ ಅಚ್ಚ ಬಿಳಿಯ ಸೂಟಿನಲ್ಲಿರುತ್ತಿದ್ದರು. ಎಲ್ಲ ವೃತ್ತಪತ್ರಿಕೆಗಳು ಮತ್ತು ಎಲ್ಲ ವೇದಿಕೆಗಳಲ್ಲಿ ಕಾಂಗ್ರೆಸ್ ಹಾಗೂ ಲೀಗ್, ಮುಸ್ಲಿಂ ಮತ್ತು ಹಿಂದೂ ಆರೋಪ ಪ್ರತ್ಯಾರೋಪಗಳ ವಿಷಯವೇ ತುಂಬಿರುತ್ತಿತ್ತು. ಇದರ ನಡುವೆ ಗಾಂಧಿಯವರ ದನಿ ಮಾತ್ರವೇ ಶಾಂತವಾಗಿರುತ್ತಿತ್ತು ಮತ್ತು ದೃಢವಾಗಿರುತ್ತಿತ್ತು. ಇನ್ನಿತರ ಎಷ್ಟೋ ವಿನಿಮಯಗಳ ಬಗ್ಗೆ ಅವರು ಚುರುಕಾಗಿ ಪ್ರತಿಕ್ರಿಯಿಸಿದರೂ ಮುಖ್ಯ ವಿಷಯದ ಮೇಲಿನ ದೃಷ್ಟಿಕೋನದಿಂದ ವಿಚಲಿತರಾಗಲಿಲ್ಲ. ಧಾರ್ಮಿಕ, ರಾಜಕೀಯ ವಿವಾದಗಳು ಭುಗಿಲೆದ್ದು ದೇಶ ಅಪಾಯದ ಕಡೆಗೆ ಸಾಗುತ್ತಿರುವ ವಿಷಯ ಅವರಿಗೆ ತಿಳಿದಿತ್ತು. ಇಷ್ಟಾಗಿಯೂ ಜಿನ್ನಾ ಎಷ್ಟು ಉಪಾಯದಿಂದ ಈ ಆಟ ಆಡಿದ್ದರೆಂದರೆ ಕೆಲವೇ ತಿಂಗಳಲ್ಲಿ ಅವರು ಪಾಕಿಸ್ತಾನವನ್ನು ಗೆದ್ದುಕೊಂಡುಬಿಟ್ಟರು.

ಗಾಂಧಿಯವರ ಪ್ರಾರ್ಥನಾ ಸಭೆ ಸಂಜೆಯ ತಂಪು ಹೊತ್ತಿನಲ್ಲಿ ಎಂದಿನಂತೆ ನಡೆಯುತ್ತಿತ್ತು. ಪ್ರಾರ್ಥನಾ ಸಭೆಗೆ ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದ ಜನರಿಗಾಗಿ ಅಸ್ಪೃಶ್ಯರ ಕಾಲನಿಯ ಒಂದು ಪಕ್ಕದಲ್ಲಿ ಒಂದು ವಿಶಾಲ ಕಟ್ಟೆಯನ್ನು ನಿರ್ಮಿಸಲಾಯಿತು. ಬಂದ ಜನರು ಸೂರ್ಯಾಸ್ತದವರೆಗೆ ಅಲ್ಲಿ ಕುಳಿತಿರುತ್ತಿದ್ದರು. ಕೆಲವೊಂದು ಸಲ ೫೦ ಸಾವಿರದಿಂದ ಒಂದು ಲಕ್ಷದಷ್ಟು ಜನ ಬರುತ್ತಿದ್ದರು. ಗಾಂಧಿಯವರು ತಮ್ಮ ಹೃದಯಕ್ಕೆ ಹತ್ತಿರವಾದ ವಿಷಯಗಳ ಬಗ್ಗೆ ಹೇಳುವುದನ್ನು ಈ ಜನ ಕಿವಿಗೊಟ್ಟು ಕೇಳುತ್ತಿದ್ದರು. ಮುಖ್ಯ ವಿಷಯವಾಗಿದ್ದ ಸ್ವಾತಂತ್ರ್ಯವನ್ನು ಕುರಿತು ಹೇಳುವುದೇ ಅಲ್ಲದೆ ಆರೋಗ್ಯ, ಆಹಾರಕ್ರಮ, ಎಲ್ಲ ವಯಸ್ಸಿನವರಿಗೂ ಮಡ್‌ಪ್ಯಾಕ್ ಎಷ್ಟು ಒಳ್ಳೆಯದು. ರೈತರಿಗೆ ಗೋವಿನಿಂದ ಎಷ್ಟು ಉಪಯೋಗ, ಟ್ರಾಕ್ಟರ್‌ನಿಂದ ಏನು ಉಪಯೋಗ ಎಂಬುದರ ತುಲನಾತ್ಮಕ ವಿಶ್ಲೇಷಣೆ ಇತ್ಯಾದಿ. ಟ್ರಾಕ್ಟರ್ ಮತ್ತು ದನ ಇವೆರಡೂ ನೇಗಿಲನ್ನು ಎಳೆಯುತ್ತವೆ. ಆದರೆ ಈ ಸಾಮ್ಯ ಇಲ್ಲಿಗೇ ಕೊನೆ. ಯಾಕೆಂದರೆ ಹಸು ಮಾಡುವಂಥ ಅನೇಕ ಕೆಲಸಗಳನ್ನು ಟ್ರಾಕ್ಟರು ಮಾಡಲಾಗದು. ಹಾಲು, ತುಪ್ಪ, ಸಗಣಿಗಳನ್ನು ಹಸು ಕೊಡುತ್ತದೆ. ಸಗಣಿಯನ್ನು ಕೇವಲ ಗೊಬ್ಬರವಾಗಿ ಬಳಸಿದರೆ ಸಾಲದು, ಪುರಾತನ ಕಾಲದಿಂದ ಬಂದ ಪದ್ಧತಿಯ ಪ್ರಕಾರ ಅದನ್ನು ನೆಲಕ್ಕೆ ಹೊಸ್ತಿಲಿಗೆ ಬಳಿಯಬೇಕು. ಅದರಲ್ಲಿ ಅಂಟಿಸೆಪ್ಟಿಕ್ ಗುಣಗಳಿವೆ ಎಂದು ಬೋಧಿಸುತ್ತಿದ್ದರು.

ಅವರು ಪ್ರಾರ್ಥನಾ ಸಭೆಗಳಲ್ಲಿ ಹೇಳುತ್ತಿದ್ದ ಯಂತ್ರ ವಿರೋಧಿ ವಿಚಾರಗಳಿಂದ ನಾನು ವಿಚಲಿತಗೊಳ್ಳುತ್ತಿದ್ದೆ. ಯಾಕೆಂದರೆ ಗಾಂಧಿ ಈ ಮಾತುಗಳನ್ನೆಲ್ಲ ಹೇಳುತ್ತಿದ್ದುದು ಮೈಕ್ರೋಫೋನ್ ಮೂಲಕ ಮತ್ತು ಪ್ರಾರ್ಥನಾ ಸಭೆಯ ನಂತರ ವೇದಿಕೆಯಿಂದಿಳಿದ ಗಾಂಧಿ ಸೀದಾ ಬಿರ್ಲಾ ಅವರ ಹಾಲು ಬಿಳುಪಿನ ಪೆಕಾರ್ಡ್ ಕಾರಿನಲ್ಲಿ ಕುಳಿತು ಅಸ್ಪೃಶ್ಯರ ಕಾಲೋನಿಗೆ ಹೋಗುತ್ತಿದ್ದರು.

ಚುರುಕಾದ ಆತ್ಮೀಯ ಮಾತುಕತೆಗೆ ಪ್ರಸಿದ್ಧರಾಗಿದ್ದ ಶ್ರೀಮತಿ ಸರೋಜಿನಿ ನಾಯ್ಡು ಅವರು ಗಾಂಧಿಯವರನ್ನು ಕುರಿತು ಮಾಡಿದ ಈ ಟೀಕೆ ಅತ್ಯಂತ ಪ್ರಸಿದ್ಧ ‘ಗಾಂಧಿಯವರನ್ನು ಬಡತನದಲ್ಲಿಡಲು ಎಷ್ಟೊಂದು ಖರ್ಚಾಗುತ್ತದೆ. ಇದೇನಾದರೂ ಗಾಂಧಿಯವರಿಗೆ ಗೊತ್ತಿದ್ದರೆ’ ಈ ಮಾತನ್ನೂ ಕೂಡ ಸರೋಜಿನಿ ಹೇಳಿದ್ದು ಗಾಂಧಿಯನ್ನೂ ಕುರಿತ ಪ್ರೀತಿಯಿಂದೇ!

* * *