“Garden city of untouchables”ನಲ್ಲಿ ಗಾಂಧಿಯವರ ತಾತ್ಕಾಲಿಕ ಬಿಡಾರ ಆರಂಭವಾಗಿ ಒಂದು ವರ್ಷವಾಗಿತ್ತು. ಕಾಂಗ್ರೆಸ್ ಹಾಗೂ ಬ್ರಿಟಿಷ್ ಸಂಧಾನಕಾರರ ಮುಂದೆ ಮನಬಂದಂತೆ ಆಟವಾಡಿ ಜಿನ್ನಾ ತನ್ನ ಗುರಿಯನ್ನು ಸಾಧಿಸಿಯೇ ಒಂದು ವರ್ಷವಾಗಿತ್ತು. ಈ ಸಂದರ್ಭದಲ್ಲಿ ನಾನು ಕರಾಚಿಯಲ್ಲಿ ಜಿನ್ನಾ ಅವರನ್ನು ಅರಮನೆಯಂತಹ ಅವರ ಮನೆಯಲ್ಲಿ ಭೇಟಿ ಮಾಡಲು ಹೊರಟೆ.

ಪಾಕಿಸ್ತಾನ ಹುಟ್ಟಿಕೊಂಡು ಒಂದು ತಿಂಗಳಾಗಿತ್ತು. ಅದರ ರಾಜಧಾನಿಯಾಗಿ ಕರಾಚಿ ತ್ವರಿತವಾಗಿ ಬೆಳೆಯುತ್ತಿತ್ತು. ಈ ನಗರದ ನದೀ ತೀರದ ಮರಳು ದಂಡೆಯಲ್ಲಿ ಸಣ್ಣಪುಟ್ಟ ಅಧಿಕಾರಿಗಳಿಗೆ ವಸತಿ ಕಲ್ಪಿಸುವುದಕ್ಕಾಗಿ ಒಂದು ಬೃಹತ್ತಾದ ಟೆಂಟ್ ಕಾಲೋನಿ ಎದ್ದಿತು. ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳಲ್ಲಿ ಪ್ರಮುಖನಾದವನು ಒಬ್ಬನೇ ಒಬ್ಬ. ಆತನೇ ಮಹಮ್ಮದಾಲಿ ಜಿನ್ನಾ. ಆದರೆ ಜಿನ್ನಾ ಇಂತಹ ಟೆಂಟಿನ ಆಶ್ರಮ ಪಡೆಯುವ ಅಗತ್ಯವಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಖಾಲಿ ಮಾಡಿದ ಅಮೃತಶಿಲೆ ಮತ್ತು ಮರಳುಗಲ್ಲಿನಿಂದ ನಿರ್ಮಿಸಿದ ದೊಡ್ಡ ಸರ್ಕಾರಿ ಬಂಗಲೆ ಅವರಿಗಾಗಿ ಕಾದಿತ್ತು. ಕ್ವೇದ್-ಈ-ಅಜಾಂ ತಮ್ಮ ತಂಗಿ ಫಾತಿಮಾ ಅವರೊಂದಿಗೆ ಗೃಹಪ್ರವೇಶ ಮಾಡಿದ್ದರು. ಟೀಕಾಕಾರರು ಹೇಳುವಂತೆ ಜಿನ್ನಾ ‘ಮೂರು ಕಿರೀಟ’ ಹಾಕಿಕೊಂಡಿದ್ದರು. ಅವರು ತಮ್ಮನ್ನು ತಾವೇ ಗೌರ‍್ನರ್ ಜನರಲ್ ಮಾಡಿಕೊಂಡಿದ್ದರು. ಪಾಕಿಸ್ತಾನದ ಏಕೈಕ ರಾಜಕೀಯ ಪಕ್ಷವಾದ ಮುಸ್ಲಿಂ ಲೀಗ್‌ನ ಅಧ್ಯಕ್ಷತೆಯನ್ನು ತಮಗೇ ಉಳಿಸಿಕೊಂಡಿದ್ದರು ಮತ್ತು ದೇಶದ ಸಂವಿಧಾನವನ್ನು ರೂಪಿಸುವ ಕಾನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಗೂ ಅವರೇ ಅಧ್ಯಕ್ಷರು.

‘ಇದು ಇಷ್ಟು ಬೇಗ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ನಮ್ಮ ಜೀವಮಾನದಲ್ಲೇ ಇದು ಕೈಗೂಡುತ್ತದೆ ಅಂತ ಅಂದುಕೊಂಡಿರಲಿಲ್ಲ’. ಫಾತಿಮಾ ಹೇಳಿದರು. ಇದನ್ನು ತಮ್ಮ ಕುಟುಂಬದ ಹೆಮ್ಮೆಯ ಸಾಧನೆ ಎಂಬಂತೆ ಫಾತಿಮಾ ಹೇಳಿದರೆ ಆಕೆಯ ಸೋದರನದು ಅತಿರೇಕದ ಪರಾಕಾಷ್ಠೆಯಾಗಿತ್ತು. ತಳದಲ್ಲಿ ಹುದುಗಿದಂತಿದ್ದ ಆತನ ಕಣ್ಣುಗಳು ಉನ್ಮಾದದಿಂದ ಕುಣಿಯುತ್ತಿದ್ದವು. ಮಿತಿಮೀರಿದ ಆನಂದೋದ್ರೇಕದ ಹೊಳೆ ಅವರ ನರನರಗಳಲ್ಲಿಯೂ ಹರಿಯುತ್ತಿರುವುದು ಅವರ ನಡವಳಿಕೆಗಳಿಂದ ವ್ಯಕ್ತ್ತವಾಗುತ್ತಿತ್ತು. ಜಗತ್ತಿನ ಬಹುದೊಡ್ಡ ಇಸ್ಲಾಮಿಕ್ ರಾಷ್ಟ್ರವನ್ನು ಸೃಷ್ಟಿಸಿದ ಸಾಧನೆಗಾಗಿ ನಾನು ಅವರಿಗೆ ಕೆಲವೊಂದು ಅಭಿನಂದನೆಯ ಮಾತುಗಳನ್ನು ಹೇಳಿದೆ.

“ಓ! ಇದು ಕೇವಲ ದೊಡ್ಡ ಇಸ್ಲಾಮಿಕ್ ರಾಷ್ಟ್ರ ಮಾತ್ರವಲ್ಲ. ಪಾಕಿಸ್ತಾನ ಇಡೀ ಜಗತ್ತಿನಲ್ಲಿ ಐದನೇ ಅತಿದೊಡ್ಡ ರಾಷ್ಟ್ರ!’ ನಾನು ಇದನ್ನು ಸಾಧಿಸಿದೆ ಎಂಬ ಜಂಭ ಅವರ ಮಾತಿನಿಂದ ತುಳುಕುತ್ತಿತ್ತು. ಇದಕ್ಕೆ ಎಷ್ಟು ಮಾನವ ಜೀವಿಗಳ ಬಲಿಕೊಡಬೇಕಾಯಿತು ಎಂಬ ಯೋಚನೆಯೇ ಆತನ ತಲೆಯಲ್ಲಿ ಸುಳಿದಂತಿರಲಿಲ್ಲ. ಹೊಸದೊಂದು ಮುಸ್ಲಿಂ ಮಾತೃಭೂಮಿಯನ್ನು ಸೃಷ್ಟಿಸುವುದಕ್ಕಾಗಿ ಬಲಿಯಾದ ಮುಸ್ಲಿಮರ ಸಂಖ್ಯೆ ಇಡೀ ಎರಡನೇ ಮಹಾಯುದ್ಧದಲ್ಲಿ ಅಮೆರಿಕಾ ಕಳೆದುಕೊಂಡ ಮಾನವ ಜೀವಿಗಳ ಸಂಖ್ಯೆಗಿಂತ ಹೆಚ್ಚಾಗಿತ್ತು. ಪಾಕಿಸ್ತಾನದ ೭೦ ದಶಲಕ್ಷ ಜನರಿಗಾಗಿ ಜಿನ್ನಾ ಏನಾದರೊಂದು ರಚನಾತ್ಮಕ ಯೋಜನೆ ಹಾಕಿಕೊಂಡಿರಬಹುದೆ! ಎಂಬ ಕುತೂಹಲದಿಂದ ‘ನೀವು ಎಂತಹ ಸಂವಿಧಾನ ಮಾಡಬೇಕೆಂದಿದ್ದೀರಿ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಿದೆ. ಅದರಲ್ಲೇನು ವಿಶೇಷ. ಅದು ಜನತಂತ್ರದ ಸಂವಿಧಾನವಾಗಿರುತ್ತದೆ. ಇಸ್ಲಾಂ ಒಂದು ಪ್ರಜಾಸತ್ತಾತ್ಮಕ ರಾಜ್ಯ’ ಎಂದರು. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ಎಂಬ ಪದ ಬಹಳ ಸಡಿಲವಾಗಿ ಬಳಕೆಯಾಗುತ್ತಿದೆ. ‘ನಿಮ್ಮ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಎಂದರೆ ಏನು?’ ಎಂದು ಕೇಳಿದೆ.

‘ಜನತಂತ್ರವನ್ನು ನಾವೇನೂ ಈಗ ಹೊಸದಾಗಿ ಕಲಿಯುತ್ತಿಲ್ಲ. ಅದು ನಮ್ಮ ರಕ್ತದಲ್ಲಿ ಇದೆ. ಬಡವರಿಗಾಗಿ ನಮ್ಮಲ್ಲಿ ಯಾವಾಗಲೂ ಒಂದು ವ್ಯವಸ್ಥೆ ಇದೆ. ಜಕತ್ ಅಂದರೆ ನಾವು ಬಡವರಿಗಾಗಿ ಮಾಡಬೇಕಾದ ಸೇವೆ’.

ಜನತಂತ್ರಕ್ಕೂ ದಾನಧರ್ಮಕ್ಕೂ ಗಂಟುಹಾಕುತ್ತಿರುವ ಅವರ ಮಾತು ನನ್ನಲ್ಲಿ ಗೊಂದಲ ಉಂಟು ಮಾಡಿತು. ಈ ಬಗ್ಗೆ ಇನ್ನಷ್ಟು ಸ್ಪಷ್ಟವಾಗಿ ಹೇಳಿ ಎಂದೆ.

‘ಹದಿಮೂರನೇ ಶತಮಾನದಿಂದಲೂ ನಮ್ಮ ಇಸ್ಲಾಮಿಕ್ ತತ್ವಗಳೆಲ್ಲ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯವನ್ನು ಆಧರಿಸಿವೆ. ‘ಅವರು ಹದಿಮೂರನೆ ಶತಮಾನದಿಂದ ಎಂದು ಹೇಳಿದ್ದು ಇನ್ನಷ್ಟು ನನ್ನ ತಲೆ ಕೆಡಿಸಿತು. ಪಾಕಿಸ್ತಾನದಲ್ಲಿ ಸಾಮಾಜಿಕ ನ್ಯಾಯ ಎಂಬ ಮಾತಿನೊಂದಿಗೆ ಮಧ್ಯಕಾಲೀನ ಕೆಲವು ಅವಶೇಷಗಳು ಬೆರೆತಿದ್ದವು. ಉದಾಹರಣೆಗೆ ಫ್ಯೂಡಲ್ ಭೂ ವ್ಯವಸ್ಥೆಯ ಅವಶೇಷಗಳು. ಈ ಬಗ್ಗೆ ಹೊಸ ಸಂವಿಧಾನ ಏನು ಮಾಡುತ್ತದೆ? ಪೈಗಂಬರ್ ಮಹಮ್ಮದರ ಕಾಲದಿಂದಲೂ ಮುಸ್ಲಿಮರ ವ್ಯವಹಾರ, ನಡವಳಿಕೆಗಳನ್ನು ನಿಯಂತ್ರಿಸುತ್ತ ಬಂದಿರುವ ಕುರಾನನ್ನು ನಿರಂಕುಶ ಅಧಿಕಾರ ಅಥವಾ ಕಟ್ಟಾ ಸಮಾಜವಾದ ಎಂಬ ಅರ್ಥ ಬರುವ ಹಾಗೆ ಉದ್ದೇಶಪೂರ್ವಕವಾಗೇ ವ್ಯಾಖ್ಯಾನಿಸಲಾಗಿದೆ. ಈ ಭೂಮಿ ದೇವರಿಗೆ ಸೇರಿದ್ದು ಎಂದು ಕುರಾನ್ ಹೇಳುತ್ತದೆ. ಈ ಬಗ್ಗೆ ಸಂವಿಧಾನದಲ್ಲಿ ಸರಿಯಾದ ಸೃಷ್ಟೀಕರಣ ನೀಡುವ ಅಗತ್ಯವಿದೆ. ಪಾಕಿಸ್ತಾನದಲ್ಲಿ ಬಹಳಷ್ಟು ಕೇಳಿ ಬರುತ್ತಿರುವ ‘ನಿಜವಾದ ಇಸ್ಲಾಮಿಕ್ ತತ್ವಗಳನ್ನು’ ಹೊಸ ರಾಷ್ಟ್ರದ ಕಾನೂನುಗಳೊಂದಿಗೆ ತಾಳೆ ಹಾಕುವ ಕೆಲಸವನ್ನಷ್ಟೆ ಲಾಯರ್ ಆಗಿರುವ ಜಿನ್ನಾ ಮಾಡಬಹುದು. ಆದರೆ ಜಿನ್ನಾ ಮಾತ್ರ ಈ ಭೂಮಿ ಪ್ರಜಾಪ್ರಭುತ್ವಕ್ಕೆ ಸಂಪೂರ್ಣ ಸಿದ್ಧವಾಗಿದೆ. ಸಂವಿಧಾನ ಪ್ರಜಾಸತ್ತಾತ್ಮಕವಾಗಿರುತ್ತದೆ ಎಂದು ಹೇಳುತ್ತಾರೆ.

ದೇಶದ ಕೈಗಾರಿಕಾ ಪ್ರಗತಿಯ ಬಗ್ಗೆ ನಿಮ್ಮ ಯೋಜನೆಗಳೇನು ಅಮೆರಿಕಾದಿಂದ ತಾಂತ್ರಿಕ ಅಥವಾ ಹಣಕಾಸಿನ ನೆರವನ್ನು ಪಡೆದುಕೊಳ್ಳುವ ಉದ್ದೇಶವೇನಾದರೂ ಇದೆಯೇ ಎಂಬ ಪ್ರಶ್ನೆಗೆ ಜಿನ್ನಾ ಹೇಳಿದರು. ಪಾಕಿಸ್ತಾನಕ್ಕೆ ಅಮೆರಿಕಾದ ಅವಶ್ಯಕತೆ ಇರುವುದಕ್ಕಿಂತಲೂ ಅಮೆರಿಕಾಗೆ ಪಾಕಿಸ್ತಾನದ ಅವಶ್ಯಕತೆ ಇದೆ. ಪಾಕಿಸ್ತಾನ ಈ ಜಗತ್ತಿನ ಕೇಂದ್ರ ಬಿಂದು. ಇಡೀ ಜಗತ್ತು ಈ ತಿರುಗಣಿಯ ಸುತ್ತ ತಿರುಗಬೇಕು ಎಂದು ತಮ್ಮ ತೋರುಬೆರಳನ್ನು ವೃತ್ತಾಕಾರವಾಗಿ ಸುತ್ತಿ ಹೇಳಿದರು. ಜಗತ್ತಿನ ಭವಿಷ್ಯ ಇದರ ನೆಲೆಯನ್ನೇ ಅವಲಂಬಿಸಿದೆ ಅನ್ನುತ್ತ ನನ್ನತ್ತ ಬಾಗಿ ಒಂದು ರಹಸ್ಯವನ್ನು ಹೇಳುವ ದನಿಯಲ್ಲಿ ‘ರಷಿಯಾ ನಮಗೆ ಬಹಳ ದೂರವೇನಿಲ್ಲ’ ಎಂದರು.

ಈ ಮೂಲಕ ಅವರ ಇಂಗಿತ ಅರ್ಥವಾಯಿತು. ಈ ಕಾರಣದಿಂದಲೇ ಅವರು ಅಮೆರಿಕಾದ ಸ್ನೇಹಕ್ಕಾಗಿ ಹಾತೊರೆಯುತ್ತಿಲ್ಲ. ಈ ಹೊಸ ದೇಶದ ರಸ್ತೆ ಸಂಪರ್ಕವಿಲ್ಲದ ಪರ್ವತಶ್ರೇಣಿಯ ಆಚೆ ಬೀದಿಯಲ್ಲಿ ಬೊಲ್ಯೆವಿಕ್ಕರ ರಾಜ್ಯವಿತ್ತು. ಕ್ವೇದ-ಇ-ಅಜಾಂ, ತಮ್ಮ ದೇಶವು ಈ ಎರಡು ಸಬಲ ರಾಷ್ಟ್ರಗಳ ನಡುವಿನ ಬಫರ್‌ನಂತಿರಬೇಕು ಎಂದು ಅಲೋಚಿಸಿರಬಹುದು. ಜಗತ್ತಿನ ಇತರ ಭಾಗಗಳಲ್ಲಿ ಅಮೆರಿಕಾ ಮಿಲಿಟರಿ ಆಸಕ್ತಿ ಹೊಂದಿರುವ ವಿಷಯವನ್ನು ಅವರು ಒತ್ತಿ ಹೇಳಿದರು.

ಅಮೆರಿಕಾ ಎಚ್ಚೆತ್ತುಕೊಂಡಿದೆ. ಗ್ರೀಸ್ ಮತ್ತು ಟರ್ಕಿಗಳಿಗೆ ಬೆಂಬಲ ಒದಗಿಸುತ್ತಿರುವ ಆ ದೇಶ ಪಾಕಿಸ್ತಾನಕ್ಕೆ ಹಣ, ಶಸ್ತಾಸ್ತ್ರ ಒದಗಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು. ಒಂದು ವೇಳೆ ರಷಿಯಾ ಈ ಕಡೆ ತಲೆಹಾಕಿದರೆ ಇಡೀ ಜಗತ್ತೇ ಅಲ್ಲೋಲಕಲ್ಲೋನ… ಎಂದರು ಜಿನ್ನಾ.

ಮುಂದಿನ ಕೆಲವು ವಾರಗಳಲ್ಲಿಯೇ ಕ್ವೇದ್-ಇ-ಅಜಾಂರ ಈ ಸಿದ್ಧಾಂತ ಪಾಕಿಸ್ತಾನದಾದ್ಯಂತ ಸರ್ಕಾರಿ ಅಧಿಕಾರಿಗಳ ಮೂಲಕ ಪ್ರತಿಧ್ವನಿತವಾಗತೊಡಗಿತು. ನಮ್ಮ ಸೈನ್ಯವನ್ನು ಅಮೆರಿಕಾ ದೇಶವೇ ನಿರ್ಮಾಣ ಮಾಡಿಕೊಡುತ್ತದೆ. ರಷ್ಯ ಪ್ರವೇಶವನ್ನು ತಡೆಯುವುದಕ್ಕಾಗಿ ಖಂಡಿತವಾಗಿ ಅಮೆರಿಕಾ ನಮಗೆ ಸಾಲಗಳನ್ನು ಕೊಟ್ಟೇಕೊಡುತ್ತದೆ ಎಂದು ಅಧಿಕಾರಿಗಳು ಹೇಳತೊಡಗಿದ್ದರು. ರಷ್ಯ ಇತ್ತ ಕಡೆ ಬರುವ ಸೂಚನೆಗಳೇನಾದರೂ ಇವೆಯೇ ಎಂದು ಕೇಳಿದಾಗ ಮಾತ್ರ ಅವರ ಮುಖಗಳಲ್ಲಿ ಖಿನ್ನತೆ ಆವರಿಸುತ್ತಿತ್ತು. ರಷ್ಯಾ ಪಾಕಿಸ್ತಾನದತ್ತ ಆಸಕ್ತಿ ವಹಿಸುವ ಸೂಚನೆಗಳನ್ನೇನೂ ತೋರಿಸಿಲ್ಲ ಎಂದು ವ್ಯಥೆ ತುಂಬಿದ ದನಿಯಲ್ಲಿ ಹೇಳುತ್ತಿದ್ದರು. ಇಷ್ಟಾಗಿಯೂ ಅವರು ಅಮೆರಿಕಾದಿಂದ ಹಣಕಾಸು ಒದಗುತ್ತದೆ ಎಂದು ದೃಢವಾಗಿ ಹೇಳುತ್ತಿದ್ದರು. ಅವರ ಉದ್ದೇಶ ಬೋಲೈವಿಸಂ ವಿರುದ್ಧ ಜಗತ್ತನ್ನು ಎತ್ತಿ ಕಟ್ಟುವುದೋ ಅಥವಾ ಹೊಸದಾಗಿ ರಾಜಕೀಯ ಅಸ್ತಿತ್ವ ಗಳಿಸಿದ ಪಾಕಿಸ್ತಾನದ ಅನಿಶ್ಚಿತ ಸ್ಥಿತಿಗೆ ಭರವಸೆ ಮೂಡಿಸುವಂತೆ ಮಾಡುವುದೋ ಗೊತ್ತಾಗುತ್ತಿರಲಿಲ್ಲ. ನನಗನ್ನಿಸುವಂತೆ ಇದು ಈ ಮುಸ್ಲಿಂ ರಾಜ್ಯದ ವಿಚಾರಗಳ ದಿವಾಳಿತನದ ದ್ಯೋತಕವಾಗಿತ್ತು. ಪುರಾತನ ಧಾರ್ಮಿಕ ಮತಾಂಧತೆಯ ಕೆಂಡದ ಮೇಲಿನ ಬೂದಿಯನ್ನೇ ಊರಿಊರಿ ಅದನ್ನು ಉರಿಯಾಗಿ ಮೇಲೆಬ್ಬಿಸುವ ಸನ್ನಾಹವನ್ನೂ ಅವರು ಮಾಡುತ್ತಿದ್ದರು.

ಪಾಕಿಸ್ತಾನಕ್ಕಾಗಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಜಿನ್ನಾ ಪದೇ ಪದೇ ಬಳಸಿದ ತಂತ್ರವೆಂದರೆ, ವಿರೋಧಿಗಳ ವಿರುದ್ಧ ವಿರೋಧಿಗಳನ್ನು ಎತ್ತಿ ಕಟ್ಟುವುದು. ಈಗ ಅವರು ಇದೇ ತಂತ್ರವನ್ನು ತಮ್ಮ ವಿದೇಶಾಂಗ ನೀತಿಗೂ ಅನ್ವಯಿಸಲು ಹೊರಟಿದ್ದರು. ಎರಡು ಮಹಾರಾಷ್ಟ್ರಗಳ ನಡುವಿನ ತಿಕ್ಕಾಟದ ಜೊತೆಗೆ ಪ್ಯಾಲೆಸ್ತೀನ್ ವಿಷಯವನ್ನೂ ಅವರು ಇದೇ ರೀತಿ ಬಳಸಿಕೊಳ್ಳತೊಡಗಿದ್ದರು. ಪಾಕಿಸ್ತಾನದ ಆಂತರಿಕ ಸಮಸ್ಯೆಗಳೇ ಸಾಕಷ್ಟಿದ್ದವು. ಇಷ್ಟಿದ್ದೂ ಅವರು ಜ್ಯೂಗಳ ವಶದಿಂದ ಪ್ಯಾಲೇಸ್ತೀನನ್ನು ವಿಮೋಚಿಸುವುದಕ್ಕಾಗಿ ಅರಬ್ಬರಿಗೆ ನೆರವಾಗಲು ವಿಮೋಚನಾ ಸೇನೆ ಕಳಿಸುವುದಾಗಿ ಉತ್ಸಾಹದಿಂದ ಹೇಳುತ್ತಿದ್ದರು. ಆದರೆ ಈ ಮಾತಿನಲ್ಲಿ ಖಚಿತತೆ ಏನೂ ಇರಲಿಲ್ಲ. ತರಬೇತಾದ ಮಾಜೀಯೋಧರನ್ನು ಈ ಪವಿತ್ರ ಕೆಲಸಕ್ಕೆ ವಿನಿಯೋಗಿಸಬೇಕೆಂದು ಮುಸ್ಲಿಂ ಮುತ್ಸದ್ದಿಗಳು ಹೇಳಿದರು. ಸರ್ಕಾರದ ಅಧಿಕೃತ ವೃತ್ತಪತ್ರಿಕೆಯಾದ ‘ಡಾನ್’, ಈ ಜ್ಯೂಯಿಷ್ ರಾಜ್ಯವನ್ನು ವಿರೋಧಿಸಿ ಬರೆಯಿತು. ಮಿಲಿಟರಿ ಮತ್ತು ಧಾರ್ಮಿಕ ದೃಷ್ಟಿಯಿಂದ ಮುಸ್ಲಿಂ ದೇಶಗಳದೇ ಒಂದು ಸುಸಜ್ಜಿತ ಬಲ ಇರಬೇಕು. ಹೀಗೆ ಮಾಡಿದಾಗ ಮಾತ್ರ ಇಸ್ಲಾಮಿನ ಉದ್ಧಾರ ಎಂದು ಅದರ ಸಂಪಾದಕೀಯದಲ್ಲಿ ಬರೆಯಲಾಯಿತು.

ಯಾರಾದರೂ ಮೂವತ್ತು ನಲವತ್ತು ವರ್ಷಗಳ ಕೆಳಗೆ ಜಿನ್ನಾ ಅವರನ್ನು ‘ಇಸ್ಲಾಂ ಧರ್ಮೋಧ್ಧಾರಕ’ ಎಂದು ಕರೆದಿದ್ದರೆ ಬೇರೆಲ್ಲರಿಗಿಂತ ಸ್ವತಃ ಜಿನ್ನಾಗೇ ಹೆಚ್ಚು ಅಚ್ಚರಿಯಾಗುತ್ತಿತ್ತೇನೋ? ಆ ದಿನಗಳಲ್ಲಿ ಯಾರಾದರೂ ಧರ್ಮದ ಬಗ್ಗೆ ಮಾತಾಡಿದರೆ ಜಿನ್ನಾ ಸಿನಿಕತನದ ನಗೆ ನಕ್ಕು ಸುಮ್ಮನಾಗುತ್ತಿದ್ದರು. ಧಾರ್ಮಿಕ ವಿದ್ವೇಷದ ಮಾತುಗಳನ್ನು ಅವರು ಖಂಡಿಸುತ್ತಿದ್ದರು. ಸ್ವಾತಂತ್ರ್ಯ ಚಳುವಳಿ ತೀವ್ರವಾಗಿ, ಇಡೀ ದೇಶ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದಾಗ ಜಿನ್ನಾ ಅವರು ಹಿಂದೂ ಮುಸ್ಲಿಂ ಏಕತೆಯ ಪ್ರತೀಕ ಎಂಬ ಶ್ಲಾಘನೆಗೆ ಪಾತ್ರರಾಗಿದ್ದರು. ಕಾಂಗ್ರೆಸ್ಸಿನಲ್ಲಿ ಬಹು ಪ್ರಮುಖರಾಗಿದ್ದ ಶ್ರೀಮತಿ ಸರೋಜಿನಿ ನಾಯ್ಡು ಜಿನ್ನಾರ ಆತ್ಮೀಯ ಗೆಳತಿ. ಜನರನ್ನು ಒಗ್ಗೂಡಿಸುವಲ್ಲಿ ಜಿನ್ನಾ ವಹಿಸಿದ ಪಾತ್ರ ಕುರಿತು, ಹೊಗಳುವ ಪದ್ಯಗಳನ್ನು ಆಕೆ ಬರೆದಿದ್ದರು. ರಾಷ್ಟ್ರೀಯ ಹೋರಾಟದ ಬಿಕ್ಕಟ್ಟಿನ ದಿನಗಳಲ್ಲಿ ಭಾರತವನ್ನು ಉದ್ಧರಿಸುವ ಅಮರ ನಾಯಕ ಎಂದು ಭವಿಷ್ಯದ ಹೊತ್ತಿಗೆಯಲ್ಲಿ ಈತನ ಹೆಸರು ಇರುತ್ತದೆ ಎಂಬ ಸಾಲುಗಳು ಅವರ ಪದ್ಯದಲ್ಲಿದ್ದವು. ಮುಂದೆ ಜಿನ್ನಾರ ಹೆಸರು ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಹೋರಾಡಿದ ಅವರ ನಾಯಕ ಎಂದೇ ದಾಖಲಾಯಿತು. ಆದರೆ ಅದರ ಅರ್ಥ ಮಾತ್ರ ಬದಲಾಗಿತ್ತು. ಆತ ಈಗ ಏಕತೆಯ ರಾಯಭಾರಿ ಎಂಬುದಕ್ಕೆ ಬದಲಾಗಿ ವೈಷಮ್ಯವನ್ನು ಹುಟ್ಟು ಹಾಕಿದ ದೂತನಾಗಿ ಪ್ರಸಿದ್ಧರಾಗಿದ್ದರು. ತಮ್ಮ ಬದುಕಿನ ಬಹುತೇಕ ವರ್ಷಗಳನ್ನು ಏಕೀಕೃತ ಭಾರತದ ಕನಸಿಗಾಗಿಯೆ ಮುಡಿಪಾಗಿಟ್ಟಿದ್ದ ಜಿನ್ನಾ ಹೀಗೆ ಬದಲಾಗಿದ್ದು ಹೇಗೆ? ಅದರ ಕಾರಣ ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಮೂವತ್ತರ ದಶಕದ ಮಧ್ಯಭಾಗದಲ್ಲಿ ಈ ವೈಮನಸ್ಯದ ಚಿಹ್ನೆ ಮೊದಲ ಬಾರಿಗೆ ಪ್ರಕಟವಾಯಿತು. ಗಾಂಧೀಜಿಯವರ ಅಸಹಕಾರ ಚಳುವಳಿಯ ಕಾರ್ಯಕ್ರಮ ಜಿನ್ನಾರಿಗೆ ಇಷ್ಟವಾಗಲಿಲ್ಲ. ನೆಹರೂ ಪ್ರಕಾರ, ಕಾಂಗ್ರೆಸ್ಸಿನಲ್ಲಿ ತುಂಬಿಕೊಂಡಿದ್ದ ಕೊಳಕು ಉಡುಪಿನ ಸಾಮಾನ್ಯ ಜನ ಜಿನ್ನಾರಿಗೆ ಇಷ್ಟವಾಗುತ್ತಿರಲಿಲ್ಲ. ಗಾಂಧಿಯವರ ಅಯಸ್ಕಾಂತದಂತಹ ವ್ಯಕ್ತಿತ್ವದ ಪ್ರಭಾವದಿಂದ ಜನಸಾಮಾನ್ಯರು ಹೊಸ ಚೇತನ ಉತ್ಸಾಹಗಳಿಂದ ತಲೆ ಎತ್ತಿದ್ದು ಅವರಿಗೆ ಸಹಿಸಲಾಗಲಿಲ್ಲ. ಇನ್ನೂ ಕೆಲವರ ಪ್ರಕಾರ ಗಾಂಧಿಯವರ ಕಾನೂನು ಭಂಗ ಕಾರ್ಯಕ್ರಮ ಜಿನ್ನಾರ ಕಾನೂನು ಪ್ರಜ್ಞೆಗೆ ಸಮ್ಮತವಾಗಲಿಲ್ಲ. ಆದರೆ ಒಂದು ಮಾತು ಮಾತ್ರ ನಿಶ್ಚಿತ. ಅವರು ಗಾಂಧಿ, ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ ಲೀಡರುಗಳಿಂದ ದೂರವಾಗುವುದಕ್ಕೆ ಹಿಂದೂ ಮುಸ್ಲಿಂ ಭೇದ ಭಾವನೆ ಮಾತ್ರ ಕಾರಣವಲ್ಲ ಎಂಬುದು. ಇದೇನೇ ಇದ್ದರೂ, ಜಿನ್ನಾರವರು ಸುಮಾರು ಮೂವತ್ತು ವರ್ಷಗಳಿಂದ ಹೆಸರಿದ್ದೂ ಇಲ್ಲದಂತಿದ್ದ ನಿರ್ಜೀವ ಮುಸ್ಲಿಂಲೀಗನ್ನು ೧೯೩೬ರಲ್ಲಿ ಪುನರುಜ್ಜೀವಗೊಳಿಸಿ ಅದನ್ನು ಧಾರ್ಮಿಕ ವೇದಿಕೆಯಾಗಿ ಮಾಡಿದರು. ಸಹಸ್ರಾರು ಮುಸ್ಲಿಮರ ದರಿದ್ರಾವಸ್ಥೆಗೆ ಹಿಂದೂಗಳು ಮೇಲುಗೈಯಾಗಿರುವುದೇ ಕಾರಣ ಎಂದು ಜಾತಿ ಬಾಂಧವರ ಕಿವಿಗಳಲ್ಲಿ ಊದಲಾರಂಭಿಸಿದರು. ಈ ಪ್ರಚಾರ ಆರಂಭವಾಗುವುದಕ್ಕೆ ಮೊದಲು ಹಿಂದೂ ಮುಸ್ಲಿಮರ ನಡುವೆ ಹಿಂದೆಂದೂ ಇಲ್ಲದಷ್ಟು ಒಗ್ಗಟ್ಟು ಉಂಟಾಗಿತ್ತು. ಬ್ರಿಟಿಷರು ಒಡೆದು ಆಳುವ ನೀತಿಯನ್ನು ಜಾರಿಗೆ ತಂದು ಈ ಒಗ್ಗಟ್ಟನ್ನು ಹಾಳುಗೆಡವಿದರು. ಉನ್ನತ ಸ್ಥಾನಗಳಲ್ಲಿದ್ದ ಕೆಲವು ಭಾರತೀಯರೂ ಸಹ ಹಿಂದೂ ಮುಸ್ಲಿಂ ಒಗ್ಗಟ್ಟನ್ನು ಕುರಿತು ಹೆದರುತ್ತಿದ್ದರು. ಒಗ್ಗಟ್ಟಿನಿಂದ ನಡೆಯುವ ಚಳುವಳಿಯಿಂದ ತಮ್ಮ ವಿಶೇಷ ಸ್ಥಾನಮಾನಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಅವರಲ್ಲಿತ್ತು. ಆಮೇಲೆ ಇನ್ನೊಂದು ನಿರ್ಣಾಯಕ ಕಾರಣ ಉದ್ಭವಿಸಿತು. ಕೈಗಾರಿಕಾ ಕ್ಷೇತ್ರದಲ್ಲಿ ಹಿಂದೂಗಳು ಯಾವಾಗಲೂ ಮುಸ್ಲಿಮರಿಗಿಂತ ಮುಂದೆ ಇದ್ದರು. ಕೆಲವು ಖ್ಯಾತ ಮುಸ್ಲಿಂ ಭೂ ಹಿಡುವಳಿದಾರರಿಗೆ ಈಗ ಕೈಗಾರಿಕಾ ಕ್ಷೇತ್ರದಲ್ಲಿ ಮಿಂಚುವ ಆಸಕ್ತಿ ಬೆಳೆಯಿತು. ಚೆನ್ನಾಗಿ ಸ್ಥಾಪಿತಗೊಂಡಿರುವ ಹಿಂದೂ ಕೈಗಾರಿಕೋದ್ಯಮಿಗಳ ಮೇಲೆ ಹಗೆಯ ಭಾವನೆ ಹೊಂದಿರುವ ಶ್ರೀಮಂತ ಮುಸ್ಲಿಮರು ತನಗೆ ಪ್ರಬಲ ಬೆಂಬಲಿಗರಾಗುತ್ತಾರೆ ಎಂದು ಜಿನ್ನಾ ಕಂಡುಕೊಂಡರು.

ಜಿನ್ನಾ ಅವರ ಹೋರಾಟದ ಉದ್ದೇಶ ದರಿದ್ರಾವಸ್ಥೆಯಲ್ಲಿದ್ದ ಮುಸ್ಲಿಮರನ್ನು ವಿಮೋಚಿಸುವುದಾಗಿತ್ತೋ ಅಥವಾ ಶ್ರೀಮಂತ ಮುಸ್ಲಿಮರಿಗೆ ಮೀಸಲು ಕ್ಷೇತ್ರಗಳನ್ನು ಗಳಿಸಿಕೊಡುವುದಾಗಿತ್ತೋ ಗೊತ್ತಾಗುವುದಿಲ್ಲ. ಆದರೆ ಪಾಕಿಸ್ತಾನದ ಮುಂದಿನ ಘಟನಾವಳಿಗಳನ್ನು ನೋಡಿದರೆ, ಜಿನ್ನಾ ತಾವು ಹೇಳಿಕೊಂಡಂತೆ ಮುಸ್ಲಿಂ ಜನಸಾಮಾನ್ಯರ ಉದ್ಧಾರಕ್ಕೆ ಹೋರಾಡುವ ಬದಲಾಗಿ ಮುಸ್ಲಿಂ ಶ್ರೀಮಂತ ವರ್ಗದ ಹಿತಾಸಕ್ತಿಗಳಿಗೆ ಹೋರಾಡಿದರು ಎಂಬುದನ್ನು ಕಂಡುಕೊಳ್ಳಬಹುದು. ಹೀಗೆ ಮಾಡುವಲ್ಲಿ ಅವರು ಯಾವುದೇ ಐಹಿಕ ಲಾಭವನ್ನು ನಿರೀಕ್ಷಿಸಿರಲಿಲ್ಲ. ವೈಯಕ್ತಿಕವಾಗಿ ಜಿನ್ನಾ ಶುದ್ಧ ಹಸ್ತದ ಮನುಷ್ಯ ಎಂದು ಪ್ರಸಿದ್ಧರಾಗಿದ್ದರು. ಈ ಕಾರಣಕ್ಕಾಗಿಯೇ ಶ್ರೀಮಂತರಂತೆಯೇ ಬಡವರೂ ಕೂಡ ಅವರನ್ನು ಆದರಿಸುತ್ತಿದ್ದರು. ಅವರು ವೈಯಕ್ತಿಕವಾಗಿ ಸಂಪತ್ತನ್ನು ಗಳಿಸಿಕೊಳ್ಳುವ ಉದ್ದೇಶವನ್ನು ಯಾವಾಗಲೂ ಹೊಂದಿರಲಿಲ್ಲ. ಈಗ ಅಧಿಕಾರ ಹಿಡಿಯುವುದೊಂದು ಅವರಿಗೆ ಮುಖ್ಯವಾಗಿತ್ತು. ಇಷ್ಟೆಲ್ಲ ಯಶಸ್ಸು, ಪ್ರಭಾವ, ಗೌರವ ಹೊಂದಿದ್ದ ವ್ಯಕ್ತಿ ಯಾಕೆ ಇದ್ದಕ್ಕಿದ್ದಂತೆ ತಮ್ಮ ಈ ಹಿಂದಿನ ರಾಜಕೀಯ ಗುರಿಗಳಿಂದ ಹಾಗೂ ಜೊತೆಗಾರರಿಂದ ಮುಖ ತಿರುವಿ ಬೇರೆ ದಾರಿ ಹಿಡಿದರು? ಅವರನ್ನು ಚೆನ್ನಾಗಿ ಅರಿತಿದ್ದ ಕೆಲವರ ಅಭಿಪ್ರಾಯದಲ್ಲಿ ಜಿನ್ನಾರ ಪ್ರಿಯ ಪತ್ನಿಯ ಸಾವು ಈ ಬದಲಾವಣೆಗೆ ಮುಖ್ಯ ಕಾರಣ.

ವಾಸ್ತವವಾಗಿ ಜಿನ್ನಾರಿಗೆ ಇಬ್ಬರು ಪತ್ನಿಯರು. ಅವರ ಬದುಕಿನ ಕಥೆಯಲ್ಲಿ ಮೊದಲ ಪತ್ನಿಯ ಉಲ್ಲೇಖವೇ ಬರುವುದಿಲ್ಲ. ಆಕೆ ನವವಧುವಾಗಿದ್ದಾಗಲೇ ತೀರಿಕೊಂಡಳು. ಜಿನ್ನಾ ಅವಳನ್ನು ನೋಡಲೇ ಇಲ್ಲ. ಈ ಮದುವೆಯಾದಾಗ ಜಿನ್ನಾ ಇನ್ನೂ ವಿದ್ಯಾರ್ಥಿ. ಮುಸ್ಲಿಮರ ಮಡಿವಂತ ಸಂಪ್ರದಾಯದ ಪ್ರಕಾರ ಮದುವೆಯಲ್ಲಿ ಆ ಹುಡುಗಿಯ ಪುರುಷ ಪ್ರತಿನಿಧಿಗಳು ಮಾತ್ರ ಇದ್ದರು. ಆಮೇಲೆ ಈ ನವವಿವಾಹಿತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ಹೋದ. ಆತ ಹಿಂದಿರುಗಿ ಬರುವಷ್ಟರಲ್ಲಿ ಹೆಂಡತಿ ತೀರಿಕೊಂಡಿದ್ದಳು.

ಜಿನ್ನಾರ ಎರಡನೇ ಮದುವೆ ಈ ಕಟ್ಟಾಸಂಪ್ರದಾಯದ ಮದುವೆಗೆ ತದ್ವಿರುದ್ಧವಾಗಿತ್ತು. ಜಿನ್ನಾರ ಹೊಸ ಹೆಂಡತಿ ಮುಸ್ಲಿಮಳಲ್ಲ. ಪಾರ್ಸಿ. ಈ ಮದುವೆಯನ್ನು ತಂದೆತಾಯಿಗಳು ಏರ್ಪಡಿಸಲಿಲ್ಲ. ಬದಲಿಗೆ ಇದು ಪ್ರೇಮವಿವಾಹವಾಗಿತ್ತು. ಈಕೆ ಹುಟ್ಟಿದ ದಿನವೇ ಜಿನ್ನಾ ಅವಳನ್ನು ನೋಡಿದ್ದರು. ಬಾಂಬೆಯ ಶ್ರೀಮಂತ ವ್ಯಾಪಾರಿಯಾಗಿದ್ದ ದಿನ್ ಶಾ ಪೆಟಿಟ್ ಜಿನ್ನಾರ ಆಪ್ತಮಿತ್ರ. ಜಿನ್ನಾ ಆಗಾಗ ಈ ಮಿತ್ರನ ಮನೆಗೆ ಬರುತ್ತಿದ್ದರು. ಒಂದು ಸಲ ಎಂದಿನಂತೆ ಮಿತ್ರನ ಮನೆಗೆ ಜಿನ್ನಾ ಬಂದರು. ಆಗಷ್ಟೇ ಹುಟ್ಟಿದ್ದ ತಮ್ಮ ಮಗುವನ್ನು ಎತ್ತಿಕೊಂಡು ಬಂದ ದಿನ್‌ಶಾ ಮಿತ್ರನ ಕೈಗೆ ಮಗುವನ್ನು ಕೊಟ್ಟು, ಈ ಮಗುವನ್ನು ಹಿಡಿದ ಮೊದಲ ವ್ಯಕ್ತಿ ನೀನೇ ಎಂದರು. ಈ ಮಗು ೧೮ ವರ್ಷದ ಹುಡುಗಿಯಾದಾಗ ನಲವತ್ತು ವರ್ಷ ವಯಸ್ಸಾಗಿದ್ದ ಜಿನ್ನಾ ಮದುವೆಯ ಪ್ರಸ್ತಾಪ ಮಾಡಿದರು. ಅವಳೋ ಉತ್ಸಾಹ ತುಂಬಿದ ರೂಪಸಿ. ಅವಳು ಮಾಡಿದ್ದೆಲ್ಲವೂ ಸಂಪ್ರದಾಯಕ್ಕೆ ವಿರುದ್ಧವಾಗೇ ಇರುತ್ತಿತ್ತು. ಆಗ ವೃತ್ತಿಪರ ನಟಿಯರಲ್ಲದೆ ಬೇರೆ ಯಾರೂ ಕೂಡ ಮೇಕಪ್ ಮಾಡಿಕೊಳ್ಳುತ್ತಿರಲಿಲ್ಲ. ಇವಳು ಮಾತ್ರ ಸದಾ ಪೌಡರ್ ಪಫ್ ಹಿಡಿದುಕೊಂಡೇ ಇರುತ್ತಿದ್ದಳು. ಕುಲೀನ ಮುಸ್ಲಿಂ ಹೆಂಗಸರು ಮುಖಕ್ಕೆ ಪರದೆ ಹಾಕಿಕೊಂಡು ದಪ್ಪದಪ್ಪ ತುಂಬು ಉಡುಗೆಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಜಿನ್ನಾ ಪತ್ನಿ ಅತ್ಯಂತ ನವಿರಾದ ತೆಳುವಾದ ಪೊರೆಯಂತಿದ್ದ ಪಾರದರ್ಶಕ ಸೀರೆಗಳನ್ನು ಉಡುತ್ತಿದ್ದಳು. ಅವಳ ನಡೆನುಡಿ ಎಲ್ಲರೂ ಆಡಿಕೊಳ್ಳುವ ವಿಷಯವಾಗಿಬಿಟ್ಟಿತ್ತು. ಜಿನ್ನಾ ಮತ್ತು ಅವರ ಕಿರಿಯ ಪತ್ನಿಯ ಮನೋಭಾವ, ಪ್ರೇಮನಿಷ್ಠೆ ಕುರಿತು ಅನೇಕ ಕಥೆಗಳಿವೆ. ಪ್ರೇಮಪತ್ರಗಳನ್ನು ಜಿನ್ನಾ ಎಂ.ಎ. ಜಿನ್ನಾ ಎಂದು ಸಹಿ ಮಾಡುತ್ತಾರೆ ಎಂದು ಆಕೆ ಗೆಳತಿಯರ ಬಳಿ ದೂರಿನಂತೆ ಹೇಳಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಜಿನ್ನಾ ಅವಳ ತಲೆದಿಂಬಿನ ಮೇಲೆ ನೂರು ರೂಪಾಯಿಯ ನೋಟನ್ನು ಇರಿಸುವುದು ಅವಳಿಗೆ ಪ್ರಿಯವಾದ ವಿಷಯವಾಗಿತ್ತು.

ಒಂದು ಸಲ ಜಿನ್ನಾ, ಬ್ರಿಟಿಷರ ಮಿಲಿಟರಿ ಬಜೆಟ್ಟನ್ನು ವಿರೋಧಿಸಿ ಬಹುಮುಖ್ಯವಾದ ಭಾಷಣ ಮಾಡುತ್ತಿದ್ದರು. ಅವರ ಮಾತಿನ ವೈಖರಿಯನ್ನು ಕೇಳುವುದಕ್ಕಾಗಿಯೇ ಅವರ ಅನುಯಾಯಿಗಳು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು. ಜಿನ್ನಾ ತಮ್ಮ ಮಾತನ್ನು ಸೊಗಸಾಗಿ ಆರಂಭಿಸಿದ್ದರು. ಎಲ್ಲರ ದೃಷ್ಟಿಯೂ ಅವರ ಮೇಲೇ ಕೇಂದ್ರೀಕೃತವಾಗಿತ್ತು. ಆಗ ಶ್ರೀಮತಿ ಜಿನ್ನಾ ಪ್ರತಿಷ್ಠಿತರಿಗೆ ಮೀಸಲಾದ ಗ್ಯಾಲರಿಗೆ ಬಂದು ಮುಂದಿನ ಸಾಲಿನಲ್ಲಿ ಕೂತವಳೇ ಹ್ಯಾಂಡ್‌ಬ್ಯಾಗಿನಿಂದ ಲಿಪ್‌ಸ್ಟಿಕ್ ಹೊರಗೆಳೆದು, ಮುಂದಿದ ಕಂಬಿಯ ಮೇಲೆ ಬಾಗಿಕೊಂಡು ತುಟಿಗೆ ಲಿಪ್‌ಸ್ಟಿಕ್ ಉಜ್ಜತೊಡಗಿದಳು. ಜಿನ್ನಾ ಸ್ನೇಹಿತರೆಲ್ಲ ಜಿನ್ನಾ ಸ್ಥಿತಿಗಾಗಿ ಅಯ್ಯೋ ಪಾಪ ಎಂದು ಮರುಗಿದರು. ಇನ್ನೊಂದು ಸಂದರ್ಭದಲ್ಲಿ ಜಿನ್ನಾ ಅವರು ಮುಸ್ಲಿಂ ಮೌಲಾನಗಳ ಜೊತೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದರು. ಆಗ ಎಂದಿನಂತೆ ಪಾರದರ್ಶಕ ಉಡುಪಿನಲ್ಲಿದ್ದ ಶ್ರೀಮತಿ ಜಿನ್ನಾ ಅವರ ಮಧ್ಯೆ ಬಂದು ಕೂತು ತಾನೂ ಮಾತಿನಲ್ಲಿ ಸೇರಿದಳು. ಆಗ ಆ ಗುಂಪಿನಲ್ಲಿ ಕುಳಿತಿದ್ದ ಶ್ರೀಮತಿ ನಾಯ್ಡು ಅವರು ಒಂದು ದಪ್ಪನೆಯ ವುಲನ್ ಶಾಲು ತಂದು ಅವಳ ಮೇಲೆ ಹೊದ್ದಿಸಿದರಂತೆ.

ಜಿನ್ನಾರ ವೈವಾಹಿಕ ಬದುಕಿನಲ್ಲಿ ಇದ್ದಕ್ಕಿದ್ದಂತೆ ಒಂದು ದೊಡ್ಡ ದುರಂತ ಎರಗಿತು. ಶ್ರೀಮತಿ ಜಿನ್ನಾ ಒಂದು ಮಗುವಿಗೆ ಜನ್ಮಕೊಟ್ಟು ಸ್ವಲ್ಪ ಕಾಲದಲ್ಲಿಯೇ ಜಿನ್ನಾ ಅವರನ್ನು ತೊರೆದು ಹೋದಳು. ಸಂಧಾನ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಪೆರಿಟೋನೈಟಿಸ್‌ನಿಂದ ತೀರಿಕೊಂಡಳು. ಆಕೆ ತ್ಯಜಿಸಿ ಹೋದಾಗ ಉಂಟಾದ ಸಾರ್ವಜನಿಕ ಲೇವಡಿ ಹಾಗೂ ಅನಂತರ ಆಕೆಯ ಹಠಾತ್ ಸಾವಿನಿಂದ ಜಿನ್ನಾ ತೀರ ಅಂತರ್ಮುಖಿಯಾದರು. ಅವರು ಉಂಡ ಕಹಿ ಒಳಗೊಳಗೇ ಮದಗಟ್ಟಿಕೊಂಡಿತು. ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಅವರು ತುಂಬ ಒಂಟಿಯಾದರು.

ಜಿನ್ನಾ ತಮ್ಮ ಹಿಂದಿನ ಬದುಕಿನಿಂದ ಸಂಪೂರ್ಣ ವಿಮುಖರಾಗಲು ಬಹುಶಃ ಅವರ ವೈಯಕ್ತಿಕ ನೋವೇ ಮುಖ್ಯ ಕಾರಣ ಎಂದು ನನಗನಿಸುತ್ತದೆ. ತಮ್ಮ ಸ್ಥಿತಿಗಾಗಿ ಅಯ್ಯೋ ಪಾಪ ಎಂದು ಮರುಗಿದ ಸ್ನೇಹಿತರಿಗೆ ಅವರು ತಮ್ಮ ಮುಖ ತೋರಿಸಲು ಬಯಸಲಿಲ್ಲ. ಪ್ರತಿಷ್ಠೆ ಹಾಗೂ ಕಹಿಯ ಭಾವನೆಯಿಂದ ಅವರು ಒಂಟಿ ದಾರಿ ಹಿಡಿದರು. ಒಂದು ವೇಳೆ ಅವರೂ ಕೂಡ ಎಲ್ಲ ಮುಸ್ಲಿಂ ರಾಷ್ಟ್ರೀಯವಾದಿಗಳಂತೆ ಇದ್ದಿದ್ದರೆ ಹಳೇ ಕಾಂಗ್ರೆಸ್ ಗುಂಪಿನ ಹಲವರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಅದಕ್ಕೆ ಬದಲು ಮುಸ್ಲಿಮರ ನಾಯಕನಾದರೆ, ಮುಂದೆ ಏನೇನೊ ಆಗಬಹುದು. ಎಷ್ಟೆಷ್ಟು ಎತ್ತರಕ್ಕೆ ಏರಬಹುದು?

ಜಿನ್ನಾ ಈ ಮೊದಲು ಎಂದೂ ಅನುಸರಿಸದಿದ್ದ ಇಸ್ಲಾಮೀ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಅನುಸರಿಸುವುದಕ್ಕೆ ಅವರ ಮಗಳು ಕಾರಣಳಾದಳು. ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾದ ತಂದೆಯ ಮೇಲ್ಪಂಕ್ತಿಯನ್ನು ಅನುಸರಿಸಿದ ಅವರ ಮುದ್ದಿನ ಮಗಳು ದೀನಾ ಪಾರ್ಸಿಯವನೊಂದಿಗೆ ಓಡಿಹೋದಳು. ಆತ ಅನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ. ಜಿನ್ನಾ ಅವಳನ್ನು ಮನೆಗೆ ಸೇರಿಸಲಿಲ್ಲ. ಈಗ ಜಿನ್ನಾರ ಜೊತೆಯಲ್ಲಿ ಏಕೈಕ ವ್ಯಕ್ತಿ ಮಾತ್ರ ಉಳಿದಿದ್ದಳು. ಆಕೆ ಫಾತಿಮಾ. ಜಿನ್ನಾ ತಂಗಿ. ಡೆಂಟಿಸ್ಟ್ ಆಗಿದ್ದ ಫಾತಿಮಾ ಅಣ್ಣನನ್ನು ನೋಡಿಕೊಳ್ಳುವುದಕ್ಕಾಗಿಯೇ ವೃತ್ತಿಯನ್ನು ತೊರೆದು ಬಂದಳು. ಆಕೆ ಅವಿವಾಹಿತೆ ಮತ್ತು ಅಣ್ಣನಂತೆಯೇ ಬಹಳ ಅಂತರ್ಮುಖಿ. ಆಕೆ ಬೇರೆ ಯಾವ ಹೆಂಗಸರನ್ನೂ ಸೇರುತ್ತಿರಲಿಲ್ಲ. ಒಂದೇ ಒಂದು ಸಲ ಮಾತ್ರ ಮಗಳು ದೀನಾ ಈ ತಡೆಯನ್ನು ಭೇದಿಸಿ ಬಂದಿದ್ದಳು. ಮುಸ್ಲಿಂ ಯುವಕನೊಬ್ಬ ಜಿನಾರ ಹತ್ಯಗೆ ಪ್ರಯತ್ನಿಸಿದಾಗ ಪಾರಾಗಿ ಬದುಕಿ ಉಳಿದ ಅವರನ್ನು ನೋಡಲು ಅವಳು ಬಂದಿದ್ದಳು. ಜಿನ್ನಾಗೆ ಹೆಚ್ಚಿನ ಹಾನಿಯೇನೂ ಆಗಿರಲಿಲ್ಲ. ಆದರೆ ದೀನಾಗೆ ಸ್ವಾಗತವಿರಲಿಲ್ಲ. ಇದಾದ ನಂತರ ಅವಳನ್ನು ಮತ್ತೆ ಎಂದೂ ಮನೆಗೆ ಬರಗೊಡಲಿಲ್ಲ. ಈ ಮಧ್ಯಂತರದ ನಂತರ ಅಣ್ಣತಂಗಿಯರು ತಮ್ಮ ಎಂದಿನ ಉತ್ಸಾಹ ಶೂನ್ಯ, ಯಾರನ್ನೂ ಸೇರದ ಬದುಕಿಗೆ ಮರಳಿದರು. ಆಮೇಲಿನ ಬೆಳವಣಿಗೆಗಳು ಅವರನ್ನು ಕರಾಚಿಯ ಭವ್ಯ ಬಂಗಲೆಗೆ ತಂದಿರಿಸಿದವು. ನಾನು ಈ ಅಣ್ಣತಂಗಿಯನ್ನು ಭೇಟಿಯಾಗಿದ್ದು ಸ್ವಾತಂತ್ರ್ಯ ದಿನಾಚರಣೆಯ ನಂತರ.

ಪಾಕಿಸ್ತಾನ ಸೃಷ್ಟಿಯಾಗುವುದಕ್ಕೆ ಮೊದಲಿನಿಂದಲೂ ಫಾತಿಮಾ ಬಗ್ಗೆ ನನಗೆ ಗೊತ್ತಿತ್ತು. ಆಕೆ ತುಂಬ ಸಂಕೋಚ ಸ್ವಭಾವದ ಮಿತಭಾಷೆಯ ಹೆಣ್ಣಾಗಿದ್ದಳು. ಪಾಕಿಸ್ತಾನದ ‘ಫಸ್ಟ್ ಲೇಡಿ’ ಸ್ಥಾನಕ್ಕೆ ಏರಿದ ನಂತರ ಆಕೆ ವಿಸ್ಮಯಕಾರಿಯಾಗಿ ಬದಲಾದಳು. ಸಭೆಗಳಲ್ಲಿ ಆಕೆಯ ಭಾಷಣಗಳಾಗುತ್ತಿದ್ದವು. ಶಂಕುಸ್ಥಾಪನೆಗೆ ಆಕೆಯ ಬರಬೇಕಿತ್ತು. ಲಿಮೋಸಿನ್ ಕಾರಿನಲ್ಲಿ ಕುಳಿತು ಪಾಕಿಸ್ತಾನೀ ಹಸಿರು ಸಮವಸ್ತ್ರದ ಬೆಂಗಾವಲಿನವರೊಂದಿಗೆ ಸುತ್ತುತ್ತಿದ್ದಳು. ಲಾಹೋರಿನ ಗುಲಾಬಿ ತೋಟಗಳಿಗೆ ಅವಳ ಗೌರವಾರ್ಥ ಗುಲಿಸ್ತಾನಿ-ಇ-ಫಾತಿಮಾ ಮೊದಲಾಗಿ ಹೆಸರಿಡಲಾಯಿತು. ಸಿಂದ್ ಪ್ರಾಂತದ ಸಾರ್ವಜನಿಕ ಚೌಕದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಿಂದ ರಾರಾಜಿಸುತ್ತಿದ್ದ ಕ್ವೀನ್ ವಿಕ್ಟೋರಿಯಾಳ ಭಾರೀ ಗಾತ್ರದ ಪ್ರತಿಮೆಯನ್ನು ತೆಗೆದು ಅದರ ಸ್ಥಳದಲ್ಲಿ ತೆಳ್ಳಗಿನ ಜಿನ್ನಾ ಪ್ರತಿಮೆ ಸ್ಥಾಪಿಸಲಾಯಿತು. ಅಣ್ಣಿನಿಗಿಂತ ೧೫-೨೦ ವರ್ಷ ಚಿಕ್ಕವಳಾಗಿದ್ದ ಫಾತಿಮಾ ತಲೆಗೂದಲೂ ಕೂಡ ಅಣ್ಣನಂತೆಯೇ ಸಂಪೂರ್ಣ ಬೆಳ್ಳಗಾಗಿದ್ದವು. ತಲೆಗೂದಲು ಬಣ್ಣಕ್ಕೆ ಹೊಂದುವಂಥ ಉಡುಪನ್ನು ಧರಿಸುವ ತಂತ್ರವನ್ನು ಅವಳೂ ಅಳವಡಿಸಿಕೊಂಡಿದ್ದಳು. ಆಕೆಯ ಮುಖವೊಂದನ್ನು ಬಿಟ್ಟು ತಲೆಯ ಮೇಲಿನಿಂದ ಪಾದದವರೆಗೂ ತಿಳಿಗೆಂಪು, ಬೂದು, ಕಂದು, ಬಿಳಿಛಾಯೆಯ ಸ್ಕಾರ್ಪ್‌ಗಳು, ದುಪ್ಪಟಾ, ಪದರುಗಳು ಇಳಿಬಿದ್ದಿರುತ್ತಿದ್ದವು. ಮುಖವನ್ನು ತೊರೆದು ತೋರಿಸುವ ವಿಷಯದಲ್ಲಿ ಮಾತ್ರ ಆಕೆ ಆಧುನಿಕ ಪದ್ಧತಿ ಹಿಡಿದಿದ್ದಳು.

ಪಾಕಿಸ್ತಾನದಲ್ಲಿ ಅಣ್ಣ-ತಂಗಿ ಜಿನ್ನಾಗಳ ಬಗೆಗಿನ ಗೌರವವು ಪೂಜೆ ಆರಾಧನೆಯ ಮಟ್ಟ ತಲುಪಿತ್ತು ಎನ್ನಬಹುದು. ಪತ್ರಿಕೆಗಳೂ, ರೇಡಿಯೋಗಳೂ ಇದೇ ಭಾವನೆಯನ್ನು ಪೋಷಿಸಿಕೊಂಡು ಬಂದವು. ಇಷ್ಟಾದರೂ ಜಿನ್ನಾರ ಆಧುನಿಕ ವಿಚಾರಗಳನ್ನು ಸಂಪ್ರದಾಯನಿಷ್ಠ ಮುಸ್ಲಿಮರು ಪೂರ್ತಿಯಾಗಿ ಒಪ್ಪಿರಲಿಲ್ಲ. ಜಿನ್ನಾ, ಮೆಕ್ಕಾ ಯಾತ್ರೆಯ ಬಗ್ಗೆ ಯೋಚಿಸುವ ತೊಂದರೆಯನ್ನೂ ತೆಗೆದುಕೊಳ್ಳಲಿಲ್ಲ. ಮದ್ಯಪಾನದ ಬಗ್ಗೆ ಇಸ್ಲಾಮಿಕ್ ನಿಷೇಧವನ್ನು ಉಲ್ಲಂಘಿಸಿ ಅವರು ಯಾವಾಗಾದರೊಮ್ಮೆ ವೈನ್ ಕುಡಿಯುತ್ತಿದ್ದರು. ಸಿಗಾರುಗಳಿಗಿಂತೂ ಲೆಕ್ಕವಿಲ್ಲ. ಮುಖಕ್ಕೆ ಪರದೆ ಹಾಕದ ಅವರ ಸೋದರಿಯ ದಿಟ್ಟತನದ ಬಗೆಗೂ ಮಡಿವಂತರಿಂದ ಬಹಳ ಟೀಕೆಗಳು ಬರುತ್ತಿದ್ದವು.

ಪಾಕಿಸ್ತಾನ ಉದ್ಭವಿಸಿದ ಹೊಸದರಲ್ಲಿ ಒಂದು ಬೃಹತ್ ರ‍್ಯಾಲಿ ನಡೆಯಿತು. ಜನರಿಂದ ಗೌರವಗಳನ್ನು ಸ್ವೀಕರಿಸುತ್ತ ಈ ಅಣ್ಣ-ತಂಗಿಯರ ಜೋಡಿ ವೇದಿಕೆಯ ಮೇಲೆ ವಿರಾಜಮಾನವಾಗಿತ್ತು. ಸ್ವಾಗತ ಭಾಷಣ ಮಾಡಿದವರು ಒಬ್ಬ ಮೌಲಾನಾ. ಆತ ಜನ ಭಾಷೆಯಾದ ಉರ್ದುವಿನಲ್ಲಿ ಮಾತಾಡಿದರು. ಪಾಶ್ಚಾತ್ಯ ಜೀವನ ಶೈಲಿಯ ಜಿನ್ನಾಗಳು ಉರ್ದು ಭಾಷೆಯ ಪಾಂಡಿತ್ಯಕ್ಕಾಗಿ ಎಂದೂ ಪ್ರಯತ್ನಿಸಿದವರಲ್ಲ. ಮೌಲಾನಾ ತಮ್ಮ ಭಾಷಣದಲ್ಲಿ ಮುಖಕ್ಕೆ ಪರದೆ ಹಾಕದ ಹೆಂಗಸರ ಬಗ್ಗೆ ಕಟು ಟೀಕೆ ಮಾಡುತ್ತಿದ್ದಾಗ ಅದು ಅರ್ಥವಾಗದ ಅಣ್ಣ-ತಂಗಿ ನಸುನಗುತ್ತಾ ತಲೆದೂಗುತ್ತಾ ಕೂತಿದ್ದರು.

ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾಗಿ ರೂಪುಗೊಂಡು ಇನ್ನೂ ಮೂರು ತಿಂಗಳು ಪೂರ್ಣವಾಗುವುದಕ್ಕೆ ಮೊದಲೇ ಜಿನ್ನಾ ಆರೋಗ್ಯ ತೀವ್ರ ಹದಗೆಟ್ಟಿತು. ಅವರ ಅನಾರೋಗ್ಯವನ್ನು ಬಹಿರಂಗಪಡಿಸಲಿಲ್ಲ. ಯಾರಾದರೂ ಕೇಳಿದರೆ ಅವರಿಗೆ ನೆಗಡಿಯಾಗಿದೆ ಎಂಬ ಉತ್ತರ ಮಾತ್ರ ಸಿಗುತ್ತಿತ್ತು. ಆದರೆ ಅವರಿಗೆ ನಿಕಟರಾಗಿದ್ದವರಿಗೆ ಮಾತ್ರ ಅವರ ವಿಷಣ್ಣ. ಮೌನ, ನಿರುತ್ಸಾಹ, ಯಾವುದೋ ಭಯವನ್ನು ಮುಚ್ಚಿಡುವಂತಿದ್ದ ಜಡತೆ, ಒಂದು ಸಣ್ಣ ನಿರ್ಧಾರವನ್ನೂ ಕೈಗೊಳ್ಳಲಾರದಂತಹ ಅಶಕ್ತತೆ, ಇದ್ದಕ್ಕಿದ್ದಂತೆ ಕೆರಳುವ ಸ್ವಭಾವಗಳು ಗೊತ್ತಾಗಿದ್ದವು. ನಾನು ಲೈಫ್ ಪತ್ರಿಕೆಯ ಮುಖಪುಟಕ್ಕಾಗಿ ಜಿನ್ನಾ ಅವರ ಇತ್ತೀಚಿನ ಚಿತ್ರ ತೆಗೆಯಲು ಬಹಳಷ್ಟು ಸಮಯ ಅವರ ಸರ್ಕಾರೀ ಸೌಧದಲ್ಲಿ ಸುತ್ತಾಡುತ್ತಿದ್ದರಿಂದ ನನಗೆ ಈ ವಿಷಯಗಳೆಲ್ಲ ಗೊತ್ತಾಗುತ್ತಿದ್ದವು.

ಆದರೂ ಕ್ವೇದ್ – ಇ – ಅಜಂನನ್ನು ಜನ ಈಗಲೂ ತಮ್ಮ ಉದ್ಧಾರಕನೆಂದೇ ಆರಾಧಿಸುತ್ತಿದ್ದರು. ತಾನು ಮಾಡಿದ ಹೊಸ ಸೃಷ್ಟಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ವತಃ ಈ ಮಹಾನ್ ನಾಯಕನಿಗೇ ಗೊತ್ತಿತ್ತು. ಈತನ ರಾಷ್ಟ್ರವನ್ನು ಜನರು ‘ಜಿನ್ನಾ ಕಟ್ಟಿದ ಮನೆ’ ಎಂದು ಕರೆಯುತ್ತಿದ್ದರು. ಭಾರತದ ಮುಖ್ಯ ದೇಹದಿಂದ ಈ ದೇಶವನ್ನು ಪ್ರತ್ಯೇಕಿಸಿದಾಗ ವಾಸ್ತವಿಕ ಸ್ಥಿತಿಗತಿಗಳನ್ನು ಒಂದಿಷ್ಟೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಇದೊಂದು ತೀರ ಅಸಹಜ ವಿಭಜನೆಯಾಗಿತ್ತು. ಜಗತ್ತಿನ ಶೇಕಡಾ ೭೫ರಷ್ಟು ಸೆಣಬನ್ನು ಪಾಕಿಸ್ತಾನ ಬೆಳೆಯುತ್ತಿತ್ತು. ಆದರೆ ಅದರ ಸಂಸ್ಕರಣ ಗಿರಣಿಗಳೆಲ್ಲ ಭಾರತದಲ್ಲಿದ್ದವು. ಭಾರತದ ೧/೩ರಷ್ಟು ಹತ್ತಿಯನ್ನು ಪಾಕಿಸ್ತಾನ ಬೆಳೆಯುತ್ತಿತ್ತು. ಆದರೆ ಅದರಲ್ಲಿದ್ದ ಗಿರಣಿಗಳ ಸಂಖ್ಯೆ ೧/೧೩ರಷ್ಟು ಮಾತ್ರ. ಭಾರತಕ್ಕೆ ಬೇಕಾದ ಬಹುಪಾಲು ಚರ್ಮ ಹಾಗೂ ತೊಗಲಿನ ಉತ್ಪನ್ನಗಳನ್ನು ಪಾಕಿಸ್ತಾನ ಉತ್ಪಾದಿಸಿದರೂ ಚರ್ಮ ಹದಗೊಳಿಸುವ ಕಾರ್ಯಾಗಾರಗಳೆಲ್ಲ ಭಾರತದಲ್ಲಿದ್ದವು. ಹೊಸ ರಾಷ್ಟ್ರದಲ್ಲಿ ಕಾಗದದ ಗಿರಣಿಗಳಿರಲಿಲ್ಲ. ಜೊತೆಗೆ ನಿರ್ವಸಿತರ ಪ್ರವಾಹ ಇನ್ನೂ ಹರಿದು ಬರುತ್ತಲೇ ಇತ್ತು. ಪಾಕಿಸ್ತಾನದ ಭೂಮಿ ಅತ್ಯಂತ ಫಲವತ್ತಾಗಿತ್ತು. ಆಹಾರ ಸ್ವಾವಲಂಬನೆ ಅದಕ್ಕಿದ್ದ ಬಹುದೊಡ್ಡ ಅನುಕೂಲತೆ. ಆದರೆ ಮತೀಯ ಯುದ್ಧ ಮುಗಿದು ಬಹುದಿನಗಳಾದರೂ ನಿಲ್ಲದ ನಿರ್ವಸಿತರ ಪ್ರವಾಹದಿಂದ ಈ ಅಂಶಕ್ಕೂ ಭೀತಿ ಒದಗಿತ್ತು.

ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರವನ್ನು ಗಳಿಸುವ ಉಗ್ರನಿಷ್ಠೆಯಲ್ಲಿ ಜಿನ್ನಾ ಇಂತಹ ಅಸಾಧ್ಯ ತೊಂದರೆಗಳನ್ನು ಎದುರು ಹಾಕಿಕೊಂಡಿದ್ದರು. ನಿಜಕ್ಕೂ ಅವರ ಉತ್ಸಾಹಕ್ಕೆ ಬಹಳ ದೊಡ್ಡ ಪೆಟ್ಟು ನೀಡಿದ್ದು ಕಾಶ್ಮೀರದ ಬಿಕ್ಕಟ್ಟು. ಭಾರತದ ಬಹುದೊಡ್ಡ ರಾಜಸಂಸ್ಥಾನವಾಗಿದ್ದ ಕಾಶ್ಮೀರದಲ್ಲಿ ಮುಸ್ಲಿಂ ಜನಸಂಖ್ಯೆ ಶೇ. ೭೭ ಇಷ್ಟಿದ್ದೂ ಅದು ಪಾಕಿಸ್ತಾನದ ತೆಕ್ಕೆಗೆ ಬರುವ ಒಲವು ಸೂಚಿಸಲಿಲ್ಲ. ಭಾರತಕ್ಕೆ ಸೇರಿಕೊಂಡ ಕಾಶ್ಮೀರ ಈ ಎರಡೂ ದೇಶಗಳ ಅಘೋಷಿತ ಯುದ್ಧಕ್ಕೆ ಕಾರಣವಾಯಿತು. ಈ ಆತಂಕದ ಕಿರಿಕಿರಿ ಬೆಳೆದಂತೆ ಕ್ವೇದ-ಇ-ಅಜಂರ ‘ನೆಗಡಿ’ಯ ತೀವ್ರತೆಯೂ ಹೆಚ್ಚುತ್ತಾ ಹೋಯಿತು. ಆತ ಇನ್ನಷ್ಟು ವಿಮುಖರಾದರು.

ಜಿನ್ನಾ ತಮ್ಮ ಸಚಿವರನ್ನು ಭೇಟಿ ಮಾಡುತ್ತಿರಲಿಲ್ಲ. ಅವರ ಅರಮನೆಯ ಸಿಬ್ಬಂದಿ ಹಾಗೂ ಸೇನಾಪತಿ ಸಹಾಯಕರುಗಳೂ ಕೂಡ ಅವರ ಬಳಿ ಹೋಗುವುದಕ್ಕೆ ಹೆದರುತ್ತಿದ್ದರು. ಇಂಥ ಸಂದರ್ಭದಲ್ಲಿ ಫಾತಿಮಾ ನನ್ನನ್ನು ಸಾಕಷ್ಟು ಒದ್ದಾಡಿಸಿ, ಪದೇ ಪದೇ ಭೇಟಿಯನ್ನು ಮುಂದೂಡಿದರೂ ಕೊನೆಗೂ ಫೋಟೋ ತೆಗೆಯಲು ಅನುಮತಿ ದೊರಕಿಸಿಕೊಟ್ಟರು. ೭೨ನೇ ವಯಸ್ಸಿನಲ್ಲೂ ಜಿನ್ನಾ ಸ್ಫುರದ್ರೂಪಿ ಆಗಿದ್ದರು. ಯಾವುದೇ ಸ್ಫುರದ್ರೂಪಿ ವ್ಯಕ್ತಿಗೆ ಫೋಟೋ ತೆಗೆಸಿಕೊಳ್ಳಲು ಒಳಗೇ ಆಸೆ ಇರುತ್ತೆ. ಇದರಿಂದಲೇ ಫೋಟೋಗೆ ಒಪ್ಪಿದರು ಎಂದು ನಾನು ಊಹಿಸಿದೆ.

ಆದರೆ ಜಿನ್ನಾ ಅವರ ಬದಲಾದ ಚಹರೆಯನ್ನು ಕಂಡು ನನಗೆ ಶಾಕ್ ಆಯಿತು. ತತ್ತರಿಸುವ ನಡಿವೆ, ಭಾವಶೂನ್ಯ ಕಣ್ಣುಗಳು, ಮೂಳೆಗಳು ಎದ್ದುಕಾಣುವ, ನರದೌರ್ಬಲ್ಯದಿಂದ ಬಿಗಿಹಿಡಿದ ಕೈಗಳು. ನಾನು ಫೋಟೋಗಳನ್ನು ತೆಗೆಯುತ್ತಿದ್ದಂತೆ ಪ್ರತಿ ಶಾಟ್ ನಂತರವೂ ಸೋದರಿ ಫಾತಿಮಾ ವಾತ್ಸಲ್ಯದಿಂದ ಜಿನ್ನಾ ಬಳಿ ಹೋಗಿ ಅವರ ಬಿಗಿಹಿಡಿದಿದ್ದ ಕೈಗಳನ್ನು ಮೆದುವಾಗಿ ಬಿಡಿಸಲು ಪ್ರಯತ್ನಿಸುತ್ತಿದ್ದಳು. ಜಿನ್ನಾ ಜೀವಮಾನದ ಅಂತಿಮ ದಿನಗಳಲ್ಲಿ ತಮ್ಮ ಬದುಕಿನ ಸಾಧನೆಗಳ ಲೆಕ್ಕಾಚಾರ ಮಾಡತೊಡಗಿದ್ದರು. ಅದೇ ಅವರ ಈ ನೋವು ತುಂಬಿದ ಗೊಂದಲದ ಮುಖಭಾವಕ್ಕೆ ಕಾರಣವಿರಬಹುದು. ಉತ್ತಮ ವಿಶ್ಲೇಷಣ ಸಾಮರ್ಥ್ಯ, ಪ್ರಖರ, ಪ್ರತಿಭೆ ಮತ್ತು ಯಾವುದೇ ಅಂಧಾಭಿಮಾನಗಳಿಲ್ಲದ ಜಿನ್ನಾಗೆ ತಾನು ಮಾಡಿದ ತಪ್ಪು ಅರಿವಾಗಿತ್ತು. ಡಾಕ್ಟರ್ ಫಾಸ್ಟಸ್‌ನಂತೆ ಅವರು ಮಾಡಿದ್ದ ವ್ಯಾಪಾರದಲ್ಲಿ ಅವರೇ ಸಿಕ್ಕಿ ಹಾಕಿಕೊಂಡಿದ್ದರು. ಹೊಸ ರಾಷ್ಟ್ರ ಉದಯಿಸಿದ ನಂತರ ಅಂಧಶ್ರದ್ಧೆಗಳು ಮೇಲುಗೈ ಪಡೆದಿದ್ದವು. ಮತನಿಷ್ಠ ನಾಯಕರು, ಕೆಲವು ‘ಹಳೆಯ ಕುಟುಂಬ’ ಗಳು ಹೇಳಿದ್ದೇ ಕೊನೆಯ ಮಾತಾಗಿತ್ತು. ಅಂಥವರು ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಜನರು ಮತೀಯ ಅಂಧಶ್ರದ್ಧೆಗಳ ಬಿಗಿಮುಷ್ಠಿಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದರು.

ಇಂಥ ಅತಿರೇಕಗಳಿಗೆ ಪ್ರತಿಯಾಗಿ ದೇಶದಲ್ಲಿ ಕೆಲವು ಆರೋಗ್ಯಕರ ಶಕ್ತಿಗಳೂ ಇದ್ದವು. ಭೂಮಿ ಮತ್ತು ರೈತರ ಸಮಸ್ಯೆಗೆ ಸ್ಪಂದಿಸುವಂತಹ ಮತ್ತು ಅದರ ಸುಧಾರಣೆಗೆ ಶ್ರಮಿಸುತ್ತಿದ್ದ ಅನೇಕ ಅಧಿಕಾರಿಗಳನ್ನು ನಾನು ಭೇಟಿ ಮಾಡಿದೆ. ದೇಶದ ಅಡಿಪಾಯವನ್ನೇ ಅಲುಗಿಸುವಂಥ ವಿಪತ್ತು, ಅಪಮಾನಗಳ ನಡುವೆಯೂ ಪಾಕಿಸ್ತಾನ ನಿರೀಕ್ಷಿಸಿದ್ದಕ್ಕಿಂತ ಚೆನ್ನಾಗಿಯೇ ಮೊದಲ ವರ್ಷವನ್ನು ದಾಟಿತು. ಸಮತೂಕದ ಬಜೆಟ್, ವ್ಯಾಪಾರದ ಸಮತೋಲನ ಹಾಗೂ ಕೈಗಾರಿಕಾ ಬೆಳವಣಿಗೆ ಉತ್ತಮ ಕಾರ್ಯಕ್ರಮಗಳು ಪಾಕಿಸ್ತಾನದ ಬೆಳವಣಿಗೆಗೆ ಸಹಾಯಕವಾದವು. ಜಲವಿದ್ಯುತ್ ಶಕ್ತಿಯ ಉತ್ಪಾದನೆಗೆ ಮೊದಲ ಆದ್ಯತೆ ನೀಡಲಾಯಿತು. ಹತ್ತು ವರ್ಷಗಳೊಳಗಾಗಿ ಕಾಟನ್ ಮಿಲ್ಲುಗಳನ್ನು ಎರಡೂವರೆ ಸಹಸ್ರ ಸ್ಪಿಂಡ್ಲ್‌ಗಳಿಗೆ ವಿಸ್ತರಿಸುವ ಯೋಜನೆ ಹಾಕಲಾಯಿತು. ಇದರ ಮೊದಲ ಐವತ್ತು ಸಾವಿರದಷ್ಟನ್ನು ಕೊಡಲು ಜಪಾನ್ ಒಪ್ಪಿಕೊಂಡಿತು. ಸಿಮೆಂಟ್ ಕಾರ್ಖಾನೆ, ಚರ್ಮ ಹದಗೊಳಿಸುವಿಕೆ, ಔಷಧ ಪದಾರ್ಥಗಳು, ರಬ್ಬರ್ ಟೈರು ಯೋಜನೆ, ಕಾಗದ ಗಿರಣಿಗಳು, ಕೃಷಿ ಸಲಕರಣೆಗಳು ಹಾಗೂ ಕಟಿಂಗ್ ಟೂಲ್‌ಗಳ ತಯಾರಿಕೆ ಇತ್ಯಾದಿಗಳಿಗಾಗಿ ಯೋಜನೆ ಹಾಕಲಾಯಿತು. ಅಮೆರಿಕಾದ ಪ್ರಮುಖ ಮೋಟಾರು ತಯಾರಕರೊಬ್ಬರು ಪಾಕಿಸ್ತಾನದಲ್ಲಿ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದರು.

ಅರ್ಥವ್ಯವಸ್ಥೆಯಲ್ಲಿ ನಿಕಟವಾದ ಸಂಬಂಧವಿರುವ ಈ ಎರಡು ಸ್ವತಂತ್ರ್ಯ ರಾಷ್ಟ್ರಗಳ ನಡುವೆ ಮಾಮೂಲು ಸಹಕಾರವಿದ್ದುದೆ ಆಗಿದ್ದರೆ ಇಬ್ಬರಿಗೂ, ಮುಖ್ಯವಾಗಿ ಚಿಕ್ಕರಾಷ್ಟ್ರವಾದ ಪಾಕಿಸ್ತಾನಕ್ಕೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಈ ಏಕತೆ ದೂರದ ಮಾತಾಗಿತ್ತು. ಪಾಕಿಸ್ತಾನದ ಅಧಿಕಾರಿಯೊಬ್ಬರು ನನ್ನ ಮುಂದೆ ಹೇಳಿದಂತೆ ಪಾಕಿಸ್ತಾನವು ಭಾರತದೊಂದಿಗೆ ಅತ್ಯಂತ ಹೆಚ್ಚಿನ ಸ್ನೇಹಪರವಾದ ಸಹಕಾರವನ್ನು ಹೊಂದಲು ಸಿದ್ಧವಾಗಿತ್ತು ಮತ್ತು ಈ ಬಗ್ಗೆ ಅದಕ್ಕೆ ಒಲವೂ ಇತ್ತು. ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ನಡುವೆ ಇದ್ದಂತಹ ಸಹಕಾರ ಈ ಎರಡು ರಾಷ್ಟ್ರಗಳ ನಡುವೆ ಇದ್ದಿದ್ದರೆ? ಆದರೆ ಈ ದೇಶಗಳು ಒಂದೇ ಆಳ್ವಿಕೆಯಲ್ಲಿ ಮುಂದುವರೆಯುವುದು, ಒಂದೇ ರೀತಿಯ ಸಂವಿಧಾನ ಹೊಂದುವುದು ಸಾಧ್ಯವೇ ಇರಲಿಲ್ಲ.

ಭಾರತದಲ್ಲಿ ಹಿಂದೂ ಕೈಗಾರಿಕೋದ್ಯಮಿಗಳ ಮೇಲುಗೈನಿಂದ ಮುಕ್ತರಾದ ಅನೇಕ ಮುಸ್ಲಿಂ ಕೈಗಾರಿಕಾ ಕುಟುಂಬಗಳಿಗೆ ಪ್ರತ್ಯೇಕ ಪಾಕಿಸ್ತಾನದ ಸ್ಥಾಪನೆಯಿಂದ ತುಂಬ ನೆಮ್ಮದಿಯಾಯಿತು. ಇದರಲ್ಲಿ ತುಂಬ ಪ್ರತಿಷ್ಠಿತ ಕೈಗಾರಿಕಾ ಕುಟುಂಬ ಇಶ್‌ಪಹಾನಿಯವರದು. ಸುಮಾರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದಿಂದ ಮಧ್ಯಪ್ರಾಚ್ಯದವರೆಗೂ ಅವರ ವ್ಯಾಪಾರೋದ್ಯಮ ಹಬ್ಬಿತ್ತು. ಪೂರ್ವ ಪಾಕಿಸ್ತಾನದ ಬಹು ಮುಖ್ಯ ಉತ್ಪನ್ನ ಹಾಗೂ ಬಂಗಾಳದ ಬಂಗಾರದ ಎಳೆ ಎಂದು ಹೆಸರಾಗಿದ್ದ ಸೆಣಬಿನ ಕೈಗಾರಿಕೆಯೊಂದಿಗೆ ಇಶ್‌ಪಹಾನಿಯವರ ಹೆಸರು ಅವಿಭಾಜ್ಯವಾಗಿ ಸೇರಿಹೋಗಿತ್ತು. ಭಾರತದ ಉಪಖಂಡದಲ್ಲಿ ಬಹುದೊಡ್ಡ ಬ್ಯಾಂಕರುಗಳಾಗಿದ್ದ ಹಬೀಬ್ ಕುಟುಂಬ, ಮಿಲಿಟರಿ ಗುತ್ತಿಗೆದಾರರಾದ ಅಮ್ಮದ್ ಆಲಿ ಮತ್ತು ವಾಸಿರ್ ಆಲಿ ಕುಟುಂಬ ಮೊದಲಾದವರೆಲ್ಲ ಜಿನ್ನಾನ ಕಟ್ಟಾ ಬೆಂಬಲಿಗರಾಗಿದ್ದರು. ಇನ್ನೂ ಅಭಿವೃದ್ಧಿ ಹೊಂದಬೇಕಾಗಿರುವ ಪಾಕಿಸ್ತಾನದಲ್ಲಿ ಅವರಿಗೆ ಅವಕಾಶಗಳ ಗಣಿ ತೆರೆದಿತ್ತು. ಕೈಗಾರಿಕೆ ಹಾಗೂ ರಾಜಕೀಯ ದೃಷ್ಟಿಯಿಂದ ಸಿಂದ್ ಪ್ರಾಂತದಲ್ಲೆಲ್ಲ ಅಗ್ರಮಾನ್ಯರಾಗಿದ್ದವರೆಂದರೆ ಹರೂನ್ ಕುಟುಂಬ. ನವರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಹರೂನ್ ಕುಟುಂಬಕ್ಕೆ ಹೆಚ್ಚಿನ ಪೂರ್ವಿಕ ಪರಂಪರೆಯಿಲ್ಲದಿದ್ದರೂ ದೇಶ ನಿರ್ಮಾಣಕ್ಕೆ ಅಗತ್ಯವಾದ ಉತ್ಸಾಹ, ವ್ಯಾಪಾರೀ ಚಾಕಚಕ್ಯತೆ ಹಾಗೂ ಅಪಾರ ಸಂಪತ್ತು ಅವರಲ್ಲಿತ್ತು. ದಿವಂಗತ ಅಬ್ದುಲ್ ಹರೂನ್ ಬಗ್ಗೆ ಅವರ ವಿಧವಾ ಪತ್ನಿ ಹೇಳುವಂತೆ ಜಿನ್ನಾ ಪ್ರತ್ಯೇಕ ರಾಷ್ಟ್ರ ಸಿದ್ಧಾಂತವನ್ನು ಕೈಗೆತ್ತಿಕೊಳ್ಳುವುದಕ್ಕೆ ಬಹಳ ಮೊದಲೇ ಹರೂನ್ ಅವರು ಪಾಕಿಸ್ತಾನಕ್ಕಾಗಿ ಕೆಲಸ ಆರಂಭಿಸಿದ್ದರು. ಇಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಸಕ್ಕರೆಯ ಪ್ರಮುಖ ಕೈಗಾರಿಕೋದ್ಯಮಿಯಾಗಿ ಸ್ವಪ್ರಯತ್ನದಿಂದ ರೂಪುಗೊಂಡಿದ್ದ ಸರ್ ಅಬ್ದುಲ್ಲಾ ಅವರು ಹಿಂದೂ ಮೇಲುಗೈಯಾಗಿರುವ ಕಾಂಗ್ರೆಸ್ಸಿನಿಂದ ದೂರ ಸಿಡಿದು ಮುಸ್ಲಿಂ ಲೀಗನ್ನು ಬಲಪಡಿಸಬೇಕು ಎಂದು ನಿರ್ಧರಿಸಿದ್ದರು. ಹರೂನ್‌ನ ನಿಕಟ ಮಿತ್ರರಾಗಿದ್ದ ಜಿನ್ನಾ ಕೆಲವು ವರ್ಷಗಳ ನಂತರ ಲೀಗ್‌ನ ನೇತೃತ್ವ ವಹಿಸಿಕೊಂಡರು. ಹರೂನ್ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ವಾದಿಸುತ್ತಿದ್ದ ಕಾಲದಲ್ಲಿ ಜಿನ್ನಾ ಇನ್ನೂ ಏಕೀಕೃತ ಭಾರತದ ಪರಿಕಲ್ಪನೆಗೇ ಅಂಟಿಕೊಂಡಿದ್ದರು. ಅಂತಿಮವಾಗಿ ಜಿನ್ನಾ ಕೂಡ ಇದೇ ವಿಚಾರವನ್ನು ಅಪ್ಪಿಕೊಂಡು ಪಾಕಿಸ್ತಾನಕ್ಕಾಗಿ ಹೋರಾಟ ಆರಂಭಿಸಿದರು. ಈ ಗುರಿಯನ್ನು ತಲುಪುವುದಕ್ಕೆ ಐದು ವರ್ಷ ಮೊದಲೇ ಹರೂನ್ ನಿಧನರಾದರು. ಆಗ ಹರೂನ್ ಅವರ ಪತ್ನಿಯನ್ನು ಸಂತೈಸುತ್ತ ‘ನಾನು ಕೇವಲ ಸ್ನೇಹಿತನನ್ನು ಕಳೆದುಕೊಳ್ಳಲಿಲ್ಲ. ನನ್ನ ಬಲಗೈಯನ್ನೇ ಕಳೆದುಕೊಂಡಿದ್ದೇನೆ’ ಎಂದು ಜಿನ್ನಾ ಹೇಳಿದ್ದರು.

ಅಬ್ದುಲ್ಲಾ ಹರೂನ್ ಹೊತ್ತಿಸಿದ ಪಂಜನ್ನು ಅವರ ಇಡೀ ಕುಟುಂಬ ನಿಷ್ಠೆಯಿಂದ ಕಾಪಾಡಿಕೊಂಡು ಬಂದಿತು. ಹೊಸ ರಾಷ್ಟ್ರದಲ್ಲಿ ಹರೂನ್ ಕುಟುಂಬದ ಪ್ರತಿಯೊಬ್ಬರೂ ಕೈಗೆ ಸಿಕ್ಕ ಎಲ್ಲ ರಾಜಕೀಯ ಹಾಗೂ ವಾಣಿಜ್ಯ ಕ್ಷೇತ್ರದ ನೇತೃತ್ವ ವಹಿಸಿದರು. ಸಕ್ಕರೆಯ ಸಿಂಡಿಕೇಟ್‌ನ ಮುಖ್ಯಸ್ಥಿಕೆ ವಹಿಸಿಕೊಂಡ ಶ್ರೀಮತಿ ಹರೂನ್, ಗಂಡ ಮಾಡುತ್ತಿದ್ದ ಲಾಭದಾಯಕವಾದ ಸೆಕೆಂಡ್ ಹ್ಯಾಂಡ್ ಉಡುಪು ತಯಾರಿಕೆ ವ್ಯವಹಾರವನ್ನೂ ಕೈಗೆತ್ತಿಕೊಂಡಳು. ಅಮೆರಿಕಾದಿಂದ ಹಳೆಯ ಬಟ್ಟೆಗಳನ್ನು ತರಿಸಿಕೊಂಡು ತಮ್ಮ ಕಾರ್ಖಾನೆಯಲ್ಲಿ ಅವುಗಳನ್ನು ಸ್ವಚ್ಛಪಡಿಸಿ, ಸರಿಪಡಿಸಿ ಮರುಮಾರಾಟ ಮಾಡುವುದು ಇಲ್ಲಿನ ವ್ಯಾಪಾರ. ಅವರ ಹಿರಿಯ ಮಗ ಯೂಸುಫ್, ಮುಸ್ಲಿಂ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷನಾದ. ಒಂದು ಅವಧಿಯವರೆಗೆ ಕರಾಚಿಯ ಮೇಯರ್ ಕೂಡ ಆಗಿದ್ದ. ಇತ್ತೀಚೆಗೆ ಸಿಂಧ್ ಪ್ರಾಂತದ ಮುಖ್ಯಸ್ಥನಾದ. ಜಿನ್ನಾ ಹೊರಡಿಸುತ್ತಿದ್ದ ‘ಡಾನ್’ ವೃತ್ತಪತ್ರಿಕೆಯ ಪ್ರಕಾಶಕನಾದ. ಬಟ್ಟೆ ಮತ್ತು ಆಟಿಕೆಗಳ ಆಮದು, ಮುಂತಾದ ವೈವಿಧ್ಯಮಯ ತಯಾರಿಕಾ ಉದ್ಯಮ ವ್ಯವಹಾರಗಳನ್ನು ನಡೆಸಿದ. ‘ಪಾಕ್‌ಏರ್’ ಎಂಬ ಹೆಸರಿನ ಹೊಸ ಏರ್‌ಲೈನ್ಸ್ ಆರಂಭಿಸಿದ.

ಕರಾಚಿಯಲ್ಲಿರುವ ಅವರ ಗುಲಾಬಿ ಬಣ್ಣದ ಭವನದ ಹೆಸರು ‘sea field ಆ ಮನೆಯಲ್ಲಿ ಎಲಿವೇಟರ್ ಇದೆ. ಗಾಜಿನ ಕಿಟಕಿ ಬಾಗಿಲುಗಳ ವರಾಂಡ. ಅತ್ಯಾಧುನಿಕ ಪೀಠೋಪಕರಣಗಳು, ಲೆಕ್ಕವಿಲ್ಲದಷ್ಟು ಸಿಟಿಂಗ್ ರೂಮುಗಳೂ, ಸ್ತ್ರೀಯರಿಗಾಗಿ ಕನ್ನಡಿ ಕೆಲಸದ ಸುಂದರವಾದ ಏಕಾಂತ ಗೃಹಗಳು. ಈ ಮನೆಯಲ್ಲಿ ಸದಾಕಾಲ ಹೆಂಗಸರ ಕಲರವವಿರುತ್ತದೆ. ಕೆಲವರು ಟೆಲಿಫೋನ್ ಸಂಭಾಷಣೆಯಲ್ಲಿ ನಿರತರಾಗಿರುತ್ತಾರೆ. ನಿರಾಶ್ರಿತರ ವಸತಿ ಸಮಿತಿಗಳನ್ನು ರಚಿಸುವುದು, ಇತ್ಯಾದಿ ಕೆಲಸ ನಡೆದಿರುತ್ತದೆ. ಭವನದ ವಿಶಾಲವಾದ ಛಾವಣಿಯ ಮೇಲೆ ಬಾವುಟ, ಲಾಠಿಗಳನ್ನು ಹಿಡಿದವರ ಕವಾಯತು ನಡೆಯುತ್ತಿರುತ್ತದೆ. ಒಂದು ಕಡೆ ಸೀರೆಗಳ ವಿನ್ಯಾಸದ ಕೆಲಸ ನಡೆದಿರುತ್ತದೆ. ಈ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುವ ಹರೂನ್ ಪತ್ನಿ ಮಾತೃ ಸ್ಥಾನದಲ್ಲಿದ್ದರೂ ಸಾಮ್ರಾಜ್ಞಿಯ ದರ್ಪ ಆಕೆಯಲ್ಲಿದೆ.

* * *