ಅಂದು ಭಾನುವಾರ ನಾನು ಟೇಬಲ್ಲಿನ ಮೇಲೆ ಇಂಗ್ಲೆಂಡಿನ ಮ್ಯಾಪು ಬಿಡಿಸಿ ಹರಹಿಕೊಂಡು ಮುಂದಿನ ಕೆಲವು ದಿನಗಳಲ್ಲಿ ಬರ್ಟನ್ ಎಂಬ ಈ ಊರಿನಿಂದ ಹೆಚ್ಚು ದೂರವಲ್ಲದ ಅಳತೆಯೊಳಗೆ ನನ್ನ ಪಾಡಿಗೆ ನಾನೊಬ್ಬನೇ ಹೋಗಿ ನೋಡಿಕೊಂಡು ಬರಬಹುದಾದ ಮುಖ್ಯವಾದ ಸ್ಥಳಗಳು ಯಾವ್ಯಾವುವು ಎಂದು ಲೆಕ್ಕ ಹಾಕುತ್ತಿದ್ದೆ. ನನ್ನ ಪುಟ್ಟ ಮೊಮ್ಮಗಳು ಪಕ್ಕದ ಮಂಚದ ಮೇಲೆ ತನ್ನ ಆಟದ ಸಾಮಾನುಗಳನ್ನು ಹರಡಿಕೊಂಡು ಬೊಂಬೆಗೆ ತಲೆ ಬಾಚುತ್ತಿದ್ದಳು. ಬಣ್ಣ ಬಣ್ಣದ ಮ್ಯಾಪನ್ನು ಹರಹಿಕೊಂಡು ಕೂತ ನನ್ನನ್ನು ಗಮನಿಸಿ ಇದಕ್ಕಿದ್ದ ಹಾಗೆ ಅವಳು ಹತ್ತಿರ ಬಂದು ಕುತೂಹಲದಿಂದ ‘ಇದೇನು ತಾತ?’ ಅಂದಳು. ‘ಇದು ಇಂಗ್ಲೆಂಡಿನ ಮ್ಯಾಪು ಮರೀ. ಇದೋ ನೋಡು ಇಲ್ಲೊಂದು ಚಿಕ್ಕೆ ಥರಾ ಕಾಣುತ್ತಲ್ಲ, ಇದೇ ನಾನೂ ನೀನೂ ಈಗ ಇರೋ ಊರು – ಬರ್ಟನ್’ ಎಂದೆ. ಹೌದಾ ಎಂದು ಕಣ್ಣರಳಿಸಿ, ‘ಮತ್ತೇ ಮತ್ತೇ ಚನ್ನಪಟ್ನ ತೋರಿಸು’ ಅಂದಳು. ‘ಚನ್ನಪಟ್ನ?  ಅದು ಇಲ್ಲಿಲ್ಲ ಪಾಪೂ. ಅದಿರೋದು ಇಂಡಿಯಾದಲ್ಲಿ’ ಎಂದೆ. ಹಿಂದೆ ಕೆಲವು ತಿಂಗಳ ಹಿಂದೆ ಅವಳು ಬೆಂಗಳೂರಿನಲ್ಲಿದ್ದಾಗ ಒಂದು ಸಲ ನಾನು, ಚನ್ನಪಟ್ಟಣದ ಬಣ್ಣದ ಆಟದ ಸಾಮಾನು ತಂದುಕೊಟ್ಟಿದ್ದೆ. ಆ ನೆನಪು ಅವಳಿಗೆ. ಈ ಮನಸ್ಸಿನ ಭೂಗೋಳ ಇದೆಯಲ್ಲ, ಅದು ವಾಸ್ತವದ ಭೂಗೋಳಕ್ಕಿಂತ ಭಿನ್ನವಾದದ್ದು. ಅಲ್ಲಿ ಎಲ್ಲವೂ ಏಕಕಾಲಕ್ಕೆ ಒಂದರ ಜತೆಗೊಂದು ಇರುತ್ತವೆ.

ಇಂಗ್ಲೆಂಡಿನಲ್ಲಿ ಸಂಚರಿಸುವಾಗ ನನಗೆ, ಎಷ್ಟೋ ವೇಳೆ ಕಾರಲ್ಲೋ ರೈಲಲ್ಲೋ ಕೂತು ಪಯಣಿಸುವಾಗ, ಅತ್ತ ಇತ್ತ ಹರಡಿಕೊಂಡ ದಟ್ಟವಾದ ಹಸುರನ್ನೂ, ವಿಸ್ತಾರವಾದ ಹೊಲವನ್ನೂ ನೋಡುತ್ತ ಥಟ್ಟನೆ ನಾನು ನಮ್ಮ ಕನ್ನಡ ನಾಡಿನ ಮೈಸೂರು – ಮಂಡ್ಯ ಪರಿಸರದಲ್ಲಿದ್ದೇನೆಯೋ – ಅಂತಲೂ, ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್‌ನ ಕಾಡು ಮೇಡುಗಳ ನಡುವೆ ಹೋಗುತ್ತಿದ್ದಾಗ, ಇದೇನು ನಾನು ನಮ್ಮ ಸಹ್ಯಾದ್ರಿಯ ಪರಿಸರದ ಮಲೆನಾಡಿನ ಯಾವುದೋ ಒಂದು ಕಡೆ ಇದ್ದೇನೆಯೋ – ಅಂತಲೂ, ಭಾಸವಾಗುತ್ತಿತ್ತು. ಆದರೆ ಅಲ್ಲಿನ ಸ್ವಚ್ಛವಾಗಿ ತೊಳೆದಿರಿಸಿದಂಥ ಹೆದ್ದಾರಿಗಳ ಸೊಗಸು, ರೈಲು ಪ್ರಯಾಣದ ಅಚ್ಚುಕಟ್ಟು ಹಾಗೂ ದಕ್ಷತೆಗಳು ಗಮನಕ್ಕೆ ಬಂದ ಕೂಡಲೆ, ಅಲ್ಲ, ಅಲ್ಲ, ಇದು ನಮ್ಮ ದೇಶದ ಪರಿಸರ ಅಲ್ಲ, ಇದು ಬೇರೊಂದು ದೇಶ – ಎಂಬ ಅರಿವಾಗುತ್ತಿತ್ತು. ಅದು ಹೊರತು, ಇಲ್ಲೂ ಅದೇ ನೆಲ, ಅದೇ ಜಲ, ಅದೇ ಆಕಾಶ; ಜನ, ಜನದ ಚಹರೆ, ವೇಷ, ಭಾಷೆ ಅದೊಂದಿಷ್ಟು ಬೇರೆ. ಮೂಲತಃ ನಾವೆಲ್ಲ ಈ ಒಂದೇ ನೆಲಕ್ಕೆ ಸೇರಿದವರೇ. ದೇಶ ಭಾಷೆ ಗಡಿ ಎಲ್ಲ ನಾವು ಮಾಡಿಕೊಂಡದ್ದೇ.

ಅಂತೂ ಇಂಗ್ಲೆಂಡಿನ ಮ್ಯಾಪು ಬಿಡಿಸಿ ಬರ್ಟನ್ ಆಚೆ ಈಚೆ ಇರುವ ಕೆಲವು ಊರುಗಳನ್ನು ಗುರುತು ಹಾಕಿಕೊಂಡು ನಾನೊಬ್ಬನೇ ಸುಮ್ಮನೆ ಸುತ್ತಿಬಂದೆ. ಬೆಳಗ್ಗೆ ಒಂದಷ್ಟು ಉಪಹಾರ ಮಾಡಿ, ಒಂದಷ್ಟು ಸ್ಯಾಂಡ್ ವಿಚ್ ಮತ್ತು ಹಣ್ಣಿನರಸದ ಪ್ಯಾಕೆಟ್‌ಗಳನ್ನು ಹೆಗಲ ಚೀಲದಲ್ಲಿ ತುಂಬಿಕೊಂಡು, ಮೈಗೆ ಬೆಚ್ಚನೆಯ ಉಡುಪು ತೊಟ್ಟು,, ಛತ್ರಿಯನ್ನೂ ಜತೆಗಿರಿಸಿಕೊಂಡು ಮನೆಯಾಚೆ ಸ್ವಲ್ಪ ದೂರ ನಡೆದು ಬಸ್ಸನ್ನೋ, ಟ್ಯಾಕ್ಸಿಯನ್ನೋ ಹಿಡಿದು ರೈಲ್ವೆ ಸ್ಟೇಷನ್ನಿಗೆ ಹೋಗಿ, ಬೇಕಾದ ರೈಲು ಹಿಡಿದು ಹೊರಟೆನೆಂದರೆ ತಿರುಗಿ ಬರುತ್ತಿದ್ದುದು ಸಂಜೆಗೇ. ಬಸ್‌ಸ್ಟಾಪ್‌ಗೆ ಮನೆಯಿಂದ ಹತ್ತೇ ನಿಮಿಷ. ಯಾವ ಯಾವ ಬಸ್ಸು ಯಾವ ಯಾವ ವೇಳೆಗೆ ಬರುತ್ತದೆಂಬ ಸೂಚನಾಫಲಕ ಬಸ್‌ಸ್ಟಾಪ್‌ಗೆ ಲಗತ್ತಾಗಿಯೇ ಇತ್ತು. ಅದಕ್ಕನುಸಾರವಾಗಿ ನನ್ನ ಪಯಣವನ್ನು ಹೊಂದಿಸಿಕೊಂಡು ನಿಂತರೆ, ರೈಲ್ವೆ ಸ್ಟೇಷನ್ ಮೂಲಕ ಟೌನ್ ಸೆಂಟರಿಗೆ ಹೋಗುವ ಹದಿನೈದನೆಯ ನಂಬರಿನ ಬಸ್ಸು ನನಗೆ ತೀರಾ ಬಳಕೆಯಾದದ್ದು. ಒಂದರ ಹಿಂದೊಂದು, ಹತ್ತು-ಹದಿನೈದು ನಿಮಿಷಗಳ ಅಂತರಗಳಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ಬಸ್ಸು ಬರುತ್ತಿದ್ದ ಕಾರಣ ಎಂದೂ ಬಸ್ಸಲ್ಲಿ ನೂಕು ನುಗ್ಗಲು ಇಲ್ಲ. ನಿಂತುಕೊಂಡು ಜೋತಾಡುವವರೂ ಇಲ್ಲ. ಕೂರಲು ಎಷ್ಟು ಅವಕಾಶಗಳಿವೆಯೋ ಅಷ್ಟೇ ಜನಕ್ಕೆ ಪ್ರವೇಶ. ಆ ಸೀಟುಗಳು ತುಂಬಿದರೆ ಹೊರಗೆ ಇನ್ನೂ ಹತ್ತಬಹುದಾದವರು ಇದ್ದರೆ ಅವರು ಕೆಲವೇ ನಿಮಿಷಗಳಲ್ಲಿ ಹಿಂದಿನಿಂದ ಬರುವ ಬೇರೊಂದು ಬಸ್ಸನ್ನು ಹಿಡಿಯಬೇಕು ಅಷ್ಟೆ. ನಮ್ಮಲ್ಲಿಯಂತೆ ಬಸ್ಸುಗಳ ತುಂಬ ಜನ ಕಿಕ್ಕಿರಿದು, ಬಾಗಿಲ ಹೊರಗೆ ಜೋತಾಡುವ, ಬಸ್ಸುಗಳು ಸಕಾಲಕ್ಕೆ ಬರುವುದೇ ಪೂರ್ವಜನ್ಮದ ಪುಣ್ಯವೆಂದು ಭಾವಿಸಿ ಧನ್ಯವಾಗುವ, ಬಸ್ಸು ಬಂದರೆ ಅಸ್ತವ್ಯಸ್ತವಾಗಿ ಧಾವಿಸಿ ಅದರೊಳಕ್ಕೆ ತೂರುವ, ಇಂಥ ‘ಅಪರೂಪದ’ ದೃಶ್ಯಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಾದವುಗಳು. ಬಸ್ಸು ಬಂದ ಕೂಡಲೆ, ಅದರ ಬಾಗಿಲುಗಳು ತಾವಾಗಿಯೇ ತೆರೆದುಕೊಂಡು, ಬಸ್ಸೊಳಗೆ ಪ್ರವೇಶಿಸಿ ಡ್ರೈವರ್‌ಗೆ ನಿಗದಿತವಾದ ಹಣ ತೆತ್ತು ಟಿಕೆಟ್ ಪಡೆದು, ಹವಾನಿಯಂತ್ರಿತವಾದ ಬಸ್ಸಲ್ಲಿ ಕೂತೆನೆಂದರೆ, ಹತ್ತು – ಹದಿನೈದು ನಿಮಿಷಗಳಲ್ಲಿ ರೈಲ್ವೆ ಸ್ಟೇಷನ್. ಒಂದೊಂದು ಸಲ ನಾನು ಹಿಡಿಯಬೇಕಾದ ರೈಲಿಗೆ, ಇನ್ನೂ ಕೆಲವೇ ನಿಮಿಷಗಳಿವೆ, ಬಸ್ ಸ್ಟಾಪಿಗೆ ನಡೆದು ಹೋಗಿ ಬಸ್ಸು ಹಿಡಿಯುವುದರಿಂದ ಒಂದಷ್ಟು ತಡವಾಗಬಹುದು ಅನ್ನಿಸಿದರೆ,  ಅಥವಾ ಇನ್ನೆಲ್ಲಿಗೋ ಹೋಗಬೇಕೆನ್ನಿಸಿದರೆ ಮನೆಯಿಂದಲೇ ಒಂದು ನಿರ್ದಿಷ್ಟ ನಂಬರಿಗೆ ಫೋನ್  ಮಾಡಿ ಇಂಥ ಕಡೆಗೆ ಟ್ಯಾಕ್ಸಿ ಕಳುಹಿಸಿಕೊಡಿ ಎಂದರೆ ಕೆಲವೇ ನಿಮಿಷಗಳಲ್ಲಿ ಟ್ಯಾಕ್ಸಿ ಬಂದು ಮನೆ ಬಾಗಿಲಿಗೆ ನಿಲ್ಲುತ್ತದೆ. ನಾನು ಕಂಡಂತೆ ಇಲ್ಲಿ ಟ್ಯಾಕ್ಸಿ ಡ್ರೈವರ್‌ಗಳೆಲ್ಲ ನೂರಕ್ಕೆ ಎಂಬತ್ತರಷ್ಟು ಪಾಕಿಸ್ತಾನಿಗಳು. ಬರ್ಟನ್‌ದಂಥ ಸಣ್ಣ ಊರಿನಲ್ಲೂ ಸಾಕಷ್ಟು ಸಂಖ್ಯೆಯ ಟ್ಯಾಕ್ಸಿಗಳ ಚಾಲಕರು ಇವರೇ. ಈ ಟ್ಯಾಕ್ಸಿಗಳಿಗೆ ಒಂದು ನಿಯಂತ್ರಣ ಕೇಂದ್ರ ಕಛೇರಿ ಇರುತ್ತದೆ. ಅಲ್ಲಿಂದಲೇ ಆ ವ್ಯವಸ್ಥಾಪಕರು ಈ ಟ್ಯಾಕ್ಸಿಗಳ ಸಂಚಾರಪಥವನ್ನು ನಿರ್ದೇಶಿಸುತ್ತಿರುತ್ತಾರೆ. ಈ ಟ್ಯಾಕ್ಸಿಗಳು, ಪ್ರಯಾಣಿಕರನ್ನು ಕೂರಿಸಿಕೊಂಡು, ಉದ್ದೇಶಿತ ದಾರಿಗಳಲ್ಲಿ ಧಾವಿಸುತ್ತಿರುವಾಗ, ಸದಾ ಈ ಟ್ಯಾಕ್ಸಿಗಳ ಚಾಲಕರು ತಮ್ಮ ಟ್ರಿಪ್ ಮುಗಿದ ಕೂಡಲೆ ಮತ್ತೆ ಎಲ್ಲಿ ಯಾರನ್ನು ಪಿಕ್‌ಅಪ್ ಮಾಡಬೇಕೆಂಬ ಸಂದೇಶಗಳು ನಿಸ್ತಂತು ವಾರ್ತಾಪ್ರಸಾರದ ಮೂಲಕ ಬರುತ್ತಲೇ ಇರುತ್ತವೆ. ಹೀಗಾಗಿ ಈ ಟ್ಯಾಕ್ಸಿಗಳ ನಿಯಂತ್ರಣ ಕೇಂದ್ರ ಕಛೇರಿಗೆ ಫೋನ್ ಮಾಡಿದರೆ, ಅತಿ ಶೀಘ್ರವಾಗಿ ಟ್ಯಾಕ್ಸಿಗಳು ನಾವು ನಿಂತ ಕಡೆಗೆ ಬರುತ್ತವೆ. ಟ್ಯಾಕ್ಸಿಯ ದರಗಳು ಕೂಡಾ ಅಂಥ ದುಬಾರಿಯೇನೂ ಅಲ್ಲ. ಟ್ಯಾಕ್ಸಿಯೊಳಗೆ ಕೂತ ಒಡನೆಯೆ ನಮ್ಮ ಮುಖ ನೋಡಿದ ಚಾಲಕ, ಇಂಗ್ಲಿಷ್ ಭಾಷೆಯ ಹಾಡನ್ನು ಬಂದ್ ಮಾಡಿ, ಕೂಡಲೆ ಹಿಂದಿ ಸಿನಿಮಾ ಹಾಡುಗಳನ್ನು ತನ್ನ ಟೇಪ್ ರೆಕಾರ್ಡಿನ ಮೂಲಕ ಹಾಕುತ್ತಾನೆ. ಟ್ಯಾಕ್ಸಿ ಮುಂದುವರಿಯುತ್ತದೆ. ರೈಲ್ವೆ ಸ್ಟೇಷನ್ನಿನ ಹತ್ತಿರ ಇಳಿದು ನಾನು ಹೋಗಬೇಕಾದ ಕಡೆಯ ರೈಲು ಹಿಡಿಯಲು ಧಾವಿಸುತ್ತೇನೆ.

ಹೀಗೆ ನಾನು ಡಾರ್ಬಿ, ಬರ್ಮಿಂಗ್‌ಹ್ಯಾಂ, ನಾಟಿಂಗ್ ಹ್ಯಾಂ, ಆಕ್ಸ್‌ಫರ್ಡ್, ಎಡಿನ್‌ಬರೋ, ಗ್ಲಾಸ್ಗೋ – ಇಂಥ ಊರುಗಳನ್ನು ಸುತ್ತಾಡಿದೆ. ಈ ದೇಶದಲ್ಲಿ ರೈಲು ಇಳಿದ ಒಡನೆಯ ಪಕ್ಕದಲ್ಲಿ ಬಸ್ ಸ್ಟೇಷನ್‌ಗಳು, ಮಾಹಿತಿ ಕೇಂದ್ರಗಳು, ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಟುಗಳು. ಬಹುಶಃ ಈ ಊರುಗಳ ರಚನೆಯ ಮಾದರಿಯೇ ಇದೆಂದು ತೋರುತ್ತದೆ. ಡಾರ್ಬಿಯ ಈಗಲ್ ಮಾರ್ಕೆಟ್,  ನಾಟಿಂಗ್ ಹ್ಯಾಂನ ಬ್ರಾಡ್ ಷಾ ಹಾಗೂ ವಿಕ್ಟೋರಿಯಾ ಮಾರ್ಕೆಟ್, ಬರ್ಮಿಂಗ್‌ಹ್ಯಾಂನ ಪ್ಯಾಲಸೇಡ್ ಮತ್ತು ಬುಲ್‌ರಿಂಗ್ ಮಾರ್ಕೆಟ್ಟುಗಳು, ಇಂಗ್ಲೆಂಡಿನಾಚೆಯ ಎಡಿನ್ ಬರೋ ನಗರದ ವೇವರ್ಲಿ ಮಾರ್ಕೆಟ್ – ಹೀಗೆ. ಇವನ್ನೆಲ್ಲ ಒಂದು ಸಲ ಒಳಹೊಕ್ಕರೆ ಹೊರಗೆ ಬರುವ ದಾರಿ ಯಾವುದೆಂದು ಕಕ್ಕಾಬಿಕ್ಕಿಯಾಗಿಸುವಷ್ಟು ವಿಸ್ತಾರ ಇವುಗಳದು. ಅವುಗಳೊಳಗಿನ ವಸ್ತುವೈವಿಧ್ಯ ಪ್ರಪಂಚದೊಳಗೆ, ಕುತೂಹಲಕ್ಕಾದರೂ ಸುಮ್ಮನೆ ಸುತ್ತುವುದು ಒಂದು ಒಳ್ಳೆಯ ಅನುಭವ. ಜತೆಗೆ, ಪ್ರತಿಯೊಂದು ಊರಿನಲ್ಲೂ ಮ್ಯೂಸಿಯಂಗಳಿವೆ. ಅವುಗಳಲ್ಲಿ ಸ್ಥೂಲವಾಗಿ ಎರಡು ವಿಧ. ಒಂದು ಕೇವಲ ಸ್ಥಳೀಯವಾದ ಇತಿಹಾಸ ಪುರಾಣ ಹಾಗೂ ಇನ್ನಿತರ ವಿಶೇಷ ಸಂಗತಿಗಳಿಗೆ ಸಂಬಂಧಿಸಿದ್ದು; ಇನ್ನೊಂದು, ಸಾರ್ವತ್ರಿಕ ಆಸಕ್ತಿಗೆ ಸಂಬಂಧಿಸಿದ್ದು. ಅಲ್ಲಿ ಕಲೆ, ಸಾಹಿತ್ಯ, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯವಾದ ವಿಷಯಗಳಿಗೆ ಪ್ರಾಧಾನ್ಯ. ಡಾರ್ಬಿ ಹಾಗೂ ನಾಟಿಂಗ್‌ಹ್ಯಾಂಗಳಲ್ಲಿ ಆಯಾ ಊರುಗಳಿಗೆ ಸಂಬಂಧಪಟ್ಟ ಚರಿತ್ರೆ ಪುರಾಣ ಮತ್ತು ಆಯಾ ಊರುಗಳಿಗೆ ವಿಶಿಷ್ಟವಾದ ಸಂಗತಿಗಳನ್ನು ಪರಿಚಯ ಮಾಡಿಕೊಡುವ ಮ್ಯೂಸಿಯಂಗಳಿವೆ. ನಾಟಿಂಗ್ ಹ್ಯಾಂ ಅಂತೂ ಮುಖ್ಯವಾಗಿ  ಇಂಗ್ಲೆಂಡಿನ ಜಾನಪದ ಕಥಾನಾಯಕನಾಗಿ, ಮಕ್ಕಳ ಮನಸ್ಸನ್ನು ಸೂರೆಗೊಂಡ ರಾಬಿನ್ ಹುಡ್ ಇದ್ದ ಪರಸರ. ರಾಬಿನ್ ಹುಡ್‌ನ ಶೌರ್ಯ ಸಾಹಸಾದ್ಭುತಗಳನ್ನು ನಾಟ್ಯೀಕರಿಸಿ ತೋರುವ ಪ್ರದರ್ಶನವೊಂದು  ಬೆಳಗಿಂದ ಸಂಜೆಯ ತನಕ, ಮಕ್ಕಳ ಆಕರ್ಷಣೀಯ ಕೇಂದ್ರವಾಗಿದೆ. ‘ವಿಲಿಯಂ ದಿ ಕಾಂಕರರ್’ ಎಂಬ ದೊರೆ ಕಟ್ಟಿಸಿದ ಹತ್ತನೆಯ ಶತಮಾನದ ಸುಭದ್ರವಾದ ಕೋಟೆಯೊಂದು, ಪ್ರವಾಸಿಗಳನ್ನು ಸದಾ ತನ್ನೆಡೆ ಸೆಳೆದುಕೊಳ್ಳುತ್ತದೆ. ಸೈನಿಕ ಠಾಣೆಯ ಪ್ರಬಲವಾದ ನೆಲೆಯಾಗಿ ಇದು ಚಾರಿತ್ರಿಕವಾದ ಮಹತ್ವವನ್ನು ಬಹುಕಾಲ ಕಾಯ್ದುಕೊಂಡು ಬಂದಿತ್ತು. ಈ ಕೋಟೆಯ ಮೇಲೆ ಇರುವ ಅರಮನೆಯನ್ನು ಒಂದು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಂಗ್ಲೆಂಡಿನ ಸುಪ್ರಸಿದ್ಧ ಚಿತ್ರಕಾರರ ವರ್ಣಚಿತ್ರಗಳನ್ನೂ, ಪ್ರಾಚೀನ ಯುದ್ಧ ಕಲೆಯ ಹಾಗೂ ಆಧುನಿಕ ಸಮರ ವೀರರಿಗೆ ಸಂಬಂಧಪಟ್ಟ ವಿಶೇಷ ಸಂಗತಿಗಳನ್ನೂ ಮಾಹಿತಿಗಳನ್ನೂ ಪರಿಚಯ ಮಾಡಿಕೊಡುವ ವಿಭಾಗವೊಂದು ಈ ಮ್ಯೂಸಿಯಂನಲ್ಲಿದೆ. ಬರ್ಮಿಂಗ್ ಹ್ಯಾಂನಲ್ಲಂತೂ ರ‍್ಯಾಫೇಲ್ ಪೂರ್ವದ, ಚಿತ್ರಕಾರರ ವರ್ಣಚಿತ್ರಗಳನ್ನು ಒಳಗೊಂಡ ದೊಡ್ಡದೊಂದು ಕಲಾಶಾಲೆಯೇ ಇದೆ. ಆಕ್ಸ್‌ಫರ್ಡ್‌ನಲ್ಲಂತೂ ಮ್ಯೂಸಿಯಂಗಳು ಆ ವಿಶ್ವವಿದ್ಯಾಲಯ ನಗರಿಯ ಒಂದು ಭಾಗವೇ ಆಗಿವೆ. ಇದೊಂದು ಕಾಲೇಜುಗಳ ನಗರ. ಇತಿಹಾಸ ಪ್ರಸಿದ್ಧವಾದ ಮೂವತ್ತೊಂಬತ್ತು ಕಾಲೇಜುಗಳು ಇಲ್ಲಿವೆ. ದಾರಿಯ ಎರಡೂ ಬದಿಗೆ ಅತ್ಯಂತ ಪ್ರಸಿದ್ಧವೂ ಪ್ರಾಚೀನವೂ ಆದ ಕಾಲೇಜುಗಳು, ಗ್ರಂಥಾಲಯಗಳು, ಚರ್ಚುಗಳು ವಸ್ತು ಪ್ರದರ್ಶನಾಲಯಗಳು, ಥಿಯೇಟರುಗಳು, ನದಿಯ ಮೇಲೆ ತೇಲುವ ದೋಣಿಗಳು, ವಿಸ್ತಾರವಾದ ಹಸುರು ಉಕ್ಕುವ ಉದ್ಯಾನಗಳು. ಜಗತ್ತಿನ ವಿವಿಧ ಕ್ಷೇತ್ರಗಳ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳು ಅಧ್ಯಯನ ಮಾಡಿದ ಈ ಪರಿಸರದಲ್ಲಿರುವ ಹಲವು ಶೈಕ್ಷಣಿಕ ಮ್ಯೂಸಿಯಂಗಳಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತಿಹಾಸವನ್ನೇ ಪರಿಚಯ ಮಾಡಿಕೊಡುವ ಮ್ಯೂಸಿಯಂ ಮುಖ್ಯವಾದುದಾಗಿದೆ.

ಅದೊಂದು ದಿನ ನಾನು ಬರ್ಮಿಂಗ್‌ಹ್ಯಾಂ ರೈಲು ನಿಲ್ದಾಣದಲ್ಲಿಳಿದು, ಎಸ್ಕುಲೇಟರಿನ ಮೇಲೇರಿ ಮೊದಲ ಹಂತಕ್ಕೆ ಬಂದೊಡನೆ ಪ್ಯಾಲಸೇಡ್ ಎಂಬ ವಾಣಿಜ್ಯ ಸಂಕೀರ್ಣದ ಝಗಮಗದ ಅಂಗಡಿಗಳೊಂದೊಂದನ್ನೇ ನೋಡುತ್ತ, ಅದರದೇ ಒಂದು ವಿಸ್ತರಣವಾಗಿರುವ ಬುಲ್‌ರಿಂಗ್ ಎಂಬ ಹನ್ನೆರಡನೆಯ ಶತಮಾನದಷ್ಟು ಹಳೆಯದಾದ ಮತ್ತೊಂದು ವೃತ್ತಾಕಾರವಾದ ಮಾರ್ಕೆಟ್ಟಿನಲ್ಲಿ ಅಲೆದು, ಅದರ ಕೆಳಗೇ ಹೊರಭಾಗದಲ್ಲಿರುವ, ನಮ್ಮೂರುಗಳ ಹಣ್ಣು – ತರಕಾರಿ ಮಾರ್ಕೆಟ್ಟುಗಳನ್ನು ನೆನಪಿಗೆ ತರುವ  ಗಜಿಬಿಜಿಯ ಗೊಂದಲದ, ಸದ್ದಿನ ಸಂತೆಯನ್ನು ಹಾಯ್ದು, ನ್ಯೂಸ್ಟ್ರೀಟನ್ನು ಪ್ರವೇಶಿಸಿದೆ. ಬೀದಿ ತುಂಬ ಜನ ಜನ ಜನ. ಕರಿಯರು, ಬಿಳಿಯರು, ಯಾವ್ಯಾವುದೋ ದೇಶ ವಿದೇಶಗಳವರು; ಈ ನಡುವೆ ಸಾಕಷ್ಟು ಸಂಖ್ಯೆಯ ಭಾರತೀಯರೂ – ವಿದೇಶಿ ಪೋಷಾಕುಗಳಲ್ಲಿ, ಸೀರೆಗಳಲ್ಲಿ, ಚೂಡಿದಾರ್‌ಗಳಲ್ಲಿ. ಮಹಿಳೆಯರು; ಸರದಾರ್‌ಜಿಗಳು, ಪಂಜಾಬಿಗಳು ಇತ್ಯಾದಿ ಇತ್ಯಾದಿ. ಬರ್ಮಿಂಗ್‌ಹ್ಯಾಂನ ಮಾರ್ಕೆಟ್‌ಗಳ ಅನೇಕ ಅಂಗಡಿಗಳೂ ಇವರವೇ. ಈ ದೇಶದ ಯಾವ ಊರುಗಳಲ್ಲಿ ನೋಡಿದರೂ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತಾರೆ. ಹಿಂದೆ ನಮ್ಮ ದೇಶ, ಭಾರತ – ಪಾಕಿಸ್ತಾನ ಎಂದು ವಿಭಜನೆಯಾದಾಗ, ಉತ್ತರ ಭಾರತದಿಂದ ಈ ಕಡೆಗೆ ವಲಸೆ ಬಂದ ಜನರೇ ಈಗ ಇಲ್ಲಿ ಬಗೆ ಬಗೆಯ ಉದ್ಯೋಗಗಳನ್ನು ಕೈಕೊಂಡು ನೆಲಸಿದ್ದಾರೆ. ಈ ಭಾರತೀಯರನ್ನು ಬಿಟ್ಟರೆ, ಹೆಚ್ಚು ಸಂಖ್ಯೆಯಲ್ಲಿ ಕಾಣಿಸುವವರು ಆಫ್ರಿಕಾದ ಕರಿಯರು. ಹಿಂದೆ ಹೇಗೋ ಏನೊ, ಈಗಂತೂ ಈ ಕರಿಯರನ್ನಾಗಲಿ ಅಥವಾ ಭಾರತೀಯರನ್ನಾಗಲಿ, ಈ ಬಿಳಿ ಜನದ ನಾಡಿನಲ್ಲಿ ಯಾರೂ ಅವರನ್ನು ತೀರಾ ಪರಕೀಯರೆಂಬಂತೆ ‘ವರ್ಣದ್ವೇಷ’ದ ಕಣ್ಣಿನಿಂದ ನೋಡುವ ಪ್ರವೃತ್ತಿ ಇಲ್ಲವೇ ಇಲ್ಲ. ಏನೋ ಒಂದು ಬಗೆಯ ಸ್ವಾತಂತ್ರ್ಯ ಹಾಗೂ ಧೈರ್ಯದ ನಡವಳಿಕೆ ಎಲ್ಲರಲ್ಲೂ ತೋರುತ್ತದೆ. ಬಿಳಿ ಹುಡುಗಿಯರ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಕರಿಯರನ್ನೂ, ಕರಿ ಹುಡುಗಿಯ ಸೊಂಟವನ್ನು ತಬ್ಬಿಕೊಂಡು ನಡೆಯುವ ಬಿಳಿಯರನ್ನೂ ಹೆಜ್ಜೆ ಹೆಜ್ಜೆಗೂ ಕಾಣಬಹುದು. ಇಲ್ಲಿನ ಬಿಳಿಯರು ನೋಡಲು ಸಾಕಷ್ಟು ಲಕ್ಷಣವಾಗಿಯೆ ಇದ್ದಾರೆ. ಅತ್ಯಂತ ಚೈತನ್ಯಪೂರ್ಣವಾದ ಜನ. ಗಂಡಸರು ಅಡಿಯಿಂದ ಮುಡಿಯವರೆಗೆ ಬಟ್ಟೆ ತೊಟ್ಟಿದ್ದರೆ, ಹೆಂಗಸರಂತೂ ಕನಿಷ್ಠ ವಸ್ತ್ರಧಾರಿಣಿಯರು, ನಮ್ಮಲ್ಲಾದರೋ ಹೆಂಗಸರು, ಗಂಡಸರ ನಡುವೆ ಕುಸಿದು ಕುಗ್ಗಿ, ಒಂದು ಥರಾ ನಾಚಿಕೆಯ, ಸಂಕೋಚದ ದುರ್ಬಲ ಪ್ರಾಣಿಗಳಂತೆ ವರ್ತಿಸಿದರೆ, ಇಲ್ಲಿ ಹೆಂಗಸರು ತಾವು ಯಾರಿಗೇನು ಕಡಮೆ ಎಂಬ ಧೈರ್ಯದಿಂದ ತಲೆಯೆತ್ತಿ ದಿಟ್ಟತನದಿಂದ ನಡೆದುಕೊಳ್ಳುತ್ತಾರೆ. ತಮಗೆ ದೈವದತ್ತವಾದ ದೇಹದ ಚೆಲುವನ್ನು ಅದೊಂದು ‘ವರ’ವೆಂಬಂತೆ ಪ್ರದರ್ಶಿಸುವುದರಲ್ಲಿ ಅವರಿಗೆ ಯಾವ ಹಿಂಜರಿಕೆಯೂ ಇಲ್ಲ. ಅವರೆಲ್ಲ ಲವಲವಿಕೆಯ ಚಿಲುಮೆಗಳು; ಕುದುರೆ ನಡಿಗೆಯ, ಉತ್ತುಂಗ ಸ್ತನೆಯರು. ಈ ಉತ್ಸಾಹಗಳ ನಡುವೆ ಹಾದು ನಾನು, ಕೌನ್ಸಿಲ್ ಹಾಲ್ ಒಳಗೆ ಬಂದೆ. ಕೌನ್ಸಿಲ್ ಹಾಲ್ ಎನ್ನುವುದು ಗ್ರೀಕ್ ಮಾದರಿಯ ಸ್ತಂಭ ರಚನೆಯ ಒಂದು ಎತ್ತರವಾದ ಭವನ. ಅದರ ಮುಂದೆ ವೃತ್ತಾಕಾರವಾದ ಒಂದು ಚಿಲುಮೆ.  ಆ ಚಿಲುಮೆಯ ನಡುವೆ ಬೆತ್ತಲೆಯಾಗಿ ನೀರಿಗೆ ಮೈಯೊಡ್ಡಿಕೊಂಡು ಮಲಗಿದ ತರುಣನೊಬ್ಬನ ಶಿಲ್ಪ. ಆ ಚಿಲುಮೆಯಿಂದ ಚಿಮ್ಮಿದ ನೀರು, ಅಲ್ಲಿಂದ ಕೆಳಮುಖವಾಗಿ ಹಾಸಿಕೊಂಡ ಸೋಪಾನ ಪಂಕ್ತಿಗಳ ಮೇಲೆ ಜುಳು ಜುಳು ಶಬ್ದ ಮಾಡುತ್ತ ಇಳಿದು, ಒಳಗೆಲ್ಲೋ ಕಾಣೆಯಾಗುತ್ತದೆ. ಈ ಸೋಪಾನ ಪಂಕ್ತಿಗಳ ಎರಡೂ ಬದಿಗೆ ಜನ ಸಂಚಾರದ ಕಿರುಮೆಟ್ಟಿಲುಗಳ ಅಂಗಳಗಳು. ಈ ಅಂಗಳದ ಬದಿಗೆ ಅಲ್ಲಲ್ಲಿ ಕೂತು ವಿಶ್ರಮಿಸಲು ಪೀಠಗಳು. ಆ ಪೀಠಗಳ ಮೇಲೆ ಕೂತ ಪ್ರವಾಸಿಗಳು. ಕುಣಿದಾಡುವ ಮಕ್ಕಳು. ಮಕ್ಕಳ ಸುತ್ತ ಬಹುಸಂಖ್ಯೆಯ ಬೂದು ಬಣ್ಣದ ಪಾರಿವಾಳಗಳು. ಆ ಪಾರಿವಾಳಗಳಿಗೆ ಬ್ರೆಡ್ಡಿನ ಚೂರುಗಳನ್ನೆಸೆಯುತ್ತ, ಆಗಾಗ ಅವುಗಳನ್ನು ಕೈಯೊಳಗೆ ಹಿಡಿದುಕೊಳ್ಳಲು ಧಾವಿಸುತ್ತ ಖುಷಿಪಡುವ ತರುಣ ತರುಣಿಯರು. ಹರಿವ ನೀರಿನ ಮೇಲೆ, ಗಂಭೀರವಾಗಿ ನಿಂತ ಕೌನ್ಸಿಲ್ ಹಾಲ್ ಭವನದ ಮೇಲೆ, ಹಾರಾಡುವ ಪಾರಿವಾಳಗಳ ಮೇಲೆ, ಕುಣಿದಾಡುವ ಮಕ್ಕಳ ಮೇಲೆ, ಒಳ್ಳೆಯ ಹಿತವಾದ ಬಿಸಿಲು. ಬಹುಶಃ ಅಪರೂಪದ ಈ ಬಿಸಿಲೇ ಈ ಎಲ್ಲ ಸಂತೋಷಗಳಿಗೂ ಕಾರಣವಾಗಿತ್ತೊ ಏನೋ ಅನ್ನುವಂಥ ಲಕಲಕಿಸುವ ಹಗಲು.

ಇಂಗ್ಲೆಂಡಿನ ಎರಡನೆಯ ದೊಡ್ಡ ನಗರವೆಂದು ಹೇಳಲಾದ ಬರ್ಮಿಂಗ್ ಹ್ಯಾಂ ಅನ್ನು ಸುತ್ತಾಡಿ ನೋಡಲು ನಾನು ಕೌನ್ಸಿಲ್ ಹಾಲ್ ಪಕ್ಕದ ‘ವಿಕ್ಟೋರಿಯಾ ಚೌಕ’ ಎಂದು ಕರೆಯಲಾಗಿರುವ ಸ್ಥಳದಿಂದ ಹೊರಡುವ ನಗರ ಸಂಚಾರೀ ಪ್ರವಾಸಿ ಬಸ್ಸೊಂದನ್ನು ಪ್ರವೇಶಿಸಿ ಇಡೀ ದಿನ ಸಂಚರಿಸಲನುಕೂಲವಾದ ಟಿಕೆಟ್ಟನ್ನು ಕೊಂಡುಕೊಂಡೆ. ಈ ದೇಶದ ಪ್ರಯಾಣದೊಳಗಿನ ಒಂದು ವಿಶೇಷವೆಂದರೆ ಅರುವತ್ತು ದಾಟಿದ ನನ್ನಂಥ ವಯೋವೃದ್ಧರಿಗೆ – ಸೀನಿಯರ್ ಸಿಟಿಜನ್ಸ್‌ಗೆ – ರೈಲು ಹಾಗೂ ಬಸ್ಸುಗಳಲ್ಲಿ ರಿಯಾಯಿತಿಯ ಸೌಲಭ್ಯವಿದೆ. ನಾನು ಇಂಗ್ಲೆಂಡಿಗೆ ಬಂದ ಮೊದಲ ದಿನಗಳಲ್ಲೆ, ಬರ್ಟನ್ ರೈಲ್ವೆ ಸ್ಟೇಷನ್ನಿಗೆ ಹೋಗಿ, ನನ್ನ ಪಾಸ್‌ಪೋರ್ಟ್ ತೋರಿಸಿ ‘ಸೀನಿಯರ್ ರೇಲ್‌ಕಾರ್ಡ್’ ಅನ್ನು ಮಾಡಿಸಿದೆ. ಈ ಕಾರ್ಡನ್ನು ತೋರಿಸಿದರೆ, ರೈಲುಗಳ ಪ್ರಯಾಣಕ್ಕೆ ನಿಗದಿತವಾದ ದರದಲ್ಲಿ ಸಾಕಷ್ಟು ರಿಯಾಯಿತಿಯನ್ನು ಪಡೆಯಬಹುದು. ನಿದರ್ಶನಕ್ಕೆ ಹೇಳುವುದಾದರೆ ಬರ್ಟನ್‌ದಿಂದ ಲಂಡನ್ನಿಗೆ, ರೈಲಲ್ಲಿ ಹೋಗಿ ಹಿಂದಿರುಗಿ ಬರುವ ಪ್ರಯಾಣದ ಟಿಕೆಟ್ ದರ ಐವತ್ತೇಳು ಪೌಂಡ್. ಆದರೆ ರೇಲ್ ಕಾರ್ಡ್ ಇರುವ ನನ್ನಂಥ ‘ಸೀನಿಯರ್ ಸಿಟಿಜನ್’ಗೆ ಕೇವಲ ಹತ್ತೊಂಬತ್ತು ಪೌಂಡ್‌ಗಳು. ಆದರೆ ಈ ಬಗೆಯ ರಿಯಾಯಿತಿ ಟಿಕೆಟ್‌ನವರಿಗೆ ಕೆಲವು ನಿರ್ಬಂಧದ ಷರತ್ತುಗಳೂ ಇವೆ. ಅವೆಂದರೆ ‘ಪೀಕ್ ಅವರ್’ ಎಂದು ಹೇಳಲಾಗುವ ಗಂಟೆಗಳಲ್ಲಿ ಪ್ರಯಾಣ ಮಾಡುವಂತಿಲ್ಲ; ವಾರಾಂತ್ಯದ ಶುಕ್ರವಾರದ ದಿನ  ಈ ಟಿಕೆಟ್ ಬಳಸಿ ಪ್ರಯಾಣ ಮಾಡುವಂತಿಲ್ಲ – ಇತ್ಯಾದಿ. ಈ ನಿರ್ಬಂಧಗಳನ್ನು ಒಪ್ಪಿಕೊಂಡೂ ಈ ರಿಯಾಯಿತಿಗಳನ್ನು ಬಳಸಿಕೊಳ್ಳುವಂತೆ ನಮ್ಮ ಪ್ರಯಾಣದ ಯೋಜನೆಗಳನ್ನು ರೂಪಿಸಿಕೊಂಡರೆ ಸಾಕಷ್ಟು ಹಣವನ್ನು ಉಳಿಸಬಹುದು. ನಗರ ಸಂಚಾರೀ ಬಸ್‌ಗಳಲ್ಲೂ ಈ ಬಗೆಯ ರಿಯಾಯಿತಿ ಉಂಟು, ಹಾಗೂ ಊರಿಂದ ಊರಿಗೆ ಸಂಚಾರ ಮಾಡುವ ಬಸ್ಸುಗಳ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಹೀಗಾಗಿ ನಾನು ಬರ್ಮಿಂಗ್ ಹ್ಯಾಂ ನಗರ ಸಂಚಾರಕ್ಕೆ, ನಿಗದಿತ ದರವಾದ ಆರೂವರೆ ಪೌಂಡ್ ಬದಲಿಗೆ, ರಿಯಾಯಿತಿಯಾಗಿ ನಾಲ್ಕೂವರೆ ಪೌಂಡ್‌ಗಳನ್ನು ಕೊಡಬೇಕಾಯಿತು. ಟಿಕೆಟ್ ಪಡೆದು ಬಸ್ಸಲ್ಲಿ ಕೂತೆ. ಬಸ್ಸಿನೊಳಗೆ ಮೈಕು ಹಿಡಿದು ಮಾರ್ಗದರ್ಶನಕ್ಕೆ ಕೂತವಳು ಒಬ್ಬ ದಢೂತಿ ಮಹಿಳೆ. ಬಸ್ಸು ಚಲಿಸತೊಡಗಿದಂತೆ ಅವಳ ನಿರರ್ಗಳವಾದ ಮಾಹಿತಿ ಭಾಷಣ ಪ್ರಾರಂಭವಾಯಿತು. ಸುಮಾರು ಒಂದೂವರೆ ಗಂಟೆಯ ಕಾಲದ ಈ ವೃತ್ತಪಥ ಸಂಚಾರದಲ್ಲಿ ಆಕೆ ಊರಿನ ಬೀದಿಗಳ ವೈಶಿಷ್ಟ್ಯಗಳನ್ನೂ, ಮುಖ್ಯವಾದ ಕಟ್ಟಡಗಳ ರಚನಾ ವಿಶೇಷಗಳನ್ನೂ, ಆ ನಗರದ ಚಾರಿತ್ರಿಕ ಹಿನ್ನೆಲೆಯನ್ನೂ, ಪರಿಚಯ ಮಾಡಿಕೊಡುತ್ತಾಳೆ. ಇಂಥ ಎಲ್ಲ ಊರುಗಳಲ್ಲೂ, ಇಂಥ ಸಂಚಾರೀ ಬಸ್ಸುಗಳಲ್ಲಿ ನಿರರ್ಗಳ ವಾಗ್ಧಾರೆಯ ಈ ಮಾರ್ಗದರ್ಶಕರು ಕೊಡುವ ಮಾಹಿತಿಗಳು ಸಾಕಷ್ಟು ಅಧಿಕೃತವಾಗಿರುತ್ತವಾದರೂ ನಿರೂಪಣೆಯ ಕ್ರಮದಲ್ಲಿ ಸಾಕಷ್ಟು ಉತ್ಪ್ರೇಕ್ಷೆ ಹಾಗೂ ವೈಭವಿಸಿ ಹೇಳುವ ಪ್ರವೃತ್ತಿಯೊಂದು ಕ್ರಿಯಾಶೀಲವಾಗಿರುತ್ತದೆ ಎಂದು ನನ್ನ ಭಾವನೆಯಾಗಿದೆ. ಅದಕ್ಕೆ ಸ್ಥಳೀಯ ಅಭಿಮಾನವೂ ಕಾರಣವಿರಬಹುದು. ನನ್ನ ಕೈಗೆ, ಟಿಕೆಟ್ ಜೊತೆಗೆ ಕೊಡಲಾದ ನಕ್ಷೆಯ ಪ್ರಕಾರ ಪ್ರವಾಸಿಯಾದವನು ನೋಡಬಹುದಾದ ಸ್ಥಳಗಳು ಇಲ್ಲಿ ಸಾಕಷ್ಟಿವೆಯಾದರೂ, ಆ ಎಲ್ಲವನ್ನೂ ಚಲಿಸುವ ಬಸ್ಸಲ್ಲಿ ಕೂತು ಒಳಗಿನಿಂದ ನೋಡುವ ಬದಲು, ಆಯ್ಕೆ ಮಾಡಿಕೊಂಡು ಕೆಲವನ್ನಾದರೂ ವಿವರವಾಗಿ ನೋಡುವುದು ಹೆಚ್ಚು ಪ್ರಯೋಜನಕಾರಿ ಎನ್ನಿಸಿದ್ದರಿಂದ ನಾನು ಮೊಟ್ಟ ಮೊದಲಿಗೆ ‘ಸಮುದ್ರ ಜಗತ್ತು’ (Sea world) ಎಂಬ ಪ್ರೇಕ್ಷಣೀಯ ಸ್ಥಳದಲ್ಲಿ  ಬಸ್ಸಿಳಿದು – ಮತ್ತೆ ಹಿಂದಿನಿಂದ ಇದೇ ಸ್ಥಳಕ್ಕೆ ಬರುವ ಬಸ್ಸಿನ ಸಮಯವನ್ನು ಕೇಳಿ ತಿಳಿದುಕೊಂಡು – ‘ಸಮುದ್ರ ಜಗತ್ತು’ ಎಂಬ ಪ್ರದರ್ಶನಾಲಯವನ್ನು ಹುಡುಕಿಕೊಂಡು ಹೊರಟೆ. ಹೋಗಿ ನೋಡುತ್ತೇನೆ. ಆಗಲೇ ಅಲ್ಲೊಂದು ದೊಡ್ಡ ಕ್ಯೂ. ಸ್ವಲ್ಪ ಹೊತ್ತಿನಲ್ಲೆ ‘ಬಹುಸಂಖ್ಯೆಯ ಸಂದರ್ಶಕರ ಕಾರಣದಿಂದ ನಿಮ್ಮ ಪ್ರವೇಶ ತಡವಾಗಬಹುದು’ ಎಂಬ ಬೋರ್ಡೊಂದನ್ನು ಕೆಲಸಗಾರನೊಬ್ಬ ತಂದು ನಮ್ಮ ಎದುರಿನ ಗೋಡೆಗೆ ತಗಲು ಹಾಕಿದ. ಇನ್ನು ಈ ಪ್ರದರ್ಶನಾಲಯ ನನ್ನ ಇಡೀ ದಿನದ ಯೋಜನೆಯನ್ನೆ ತಲೆಕೆಳಗು ಮಾಡಿದರೂ ಮಾಡಬಹುದು ಎಂಬ ಆತಂಕ ನನ್ನನ್ನು ಕಾಡಿದರೂ, ಆದದ್ದಾಗಲಿ ಎಂದು, ಸ್ಥಗಿತಗೊಂಡ ಆ ಜನಪಂಕ್ತಿಯಲ್ಲಿ ಸುಮ್ಮನೆ ನಿಂತೆ.

ಬಹುಶಃ ಒಳಕ್ಕೆ ಪ್ರವೇಶಾವಕಾಶ ಪಡೆದುಕೊಂಡ ಮೊದಲ ತಂಡಗಳವರ ವೀಕ್ಷಣೆ ಮುಗಿದು, ಅವರು ಮತ್ತೊಂದು ಬಾಗಿಲ ಮೂಲಕ ಹೊರಕ್ಕೆ  ಹೋದದ್ದರಿಂದಲೋ ಏನೊ, ಸುಮಾರು ಇಪ್ಪತ್ತು ನಿಮಿಷಗಳ ನಂತರ ನಮ್ಮ ಪಂಕ್ತಿ ಮುಂದಕ್ಕೆ ಚಲಿಸತೊಡಗಿತು. ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದುಕೊಂಡು ಸಮುದ್ರ ಜಗತ್ತಿನ ಆ ಗೋಲಾಕಾರವಾದ ಮ್ಯೂಸಿಯಂ ಅನ್ನು ಪ್ರವೇಶಿಸಿದೆ. ಎರಡು ಗಾಜು ಗೋಡೆಗಳ ನಡುವೆ ಮುಂದುವರೆದಂತೆ ನಾವೇ ಕಡಲೊಳಗೆ ನಿಂತ ಅನುಭವ. ನಮ್ಮ ಎರಡೂ ಕಡೆ ಮತ್ತೆ ಮೇಲೆ, ಬಗೆ ಬಗೆಯ ಸಾಗರ ಜಲಚರಗಳ ಸಂಚಾರ. ನೂರಾರು ಆಕೃತಿಗಳ ಮೀನುಗಳು, ಸುದೀರ್ಘವಾದ ಹಾವುಗಳು, ಷಾರ್ಕುಗಳು, ತಿಮಿಂಗಿಲಗಳು ಇತ್ಯಾದಿ. ಸುಮಾರು ಒಂದು ಗಂಟೆಯ ಕಾಲ ನಾವು ಅತ್ತಿತ್ತ ಅಸಂಖ್ಯ ವಿನ್ಯಾಸಗಳಲ್ಲಿ ಚಲಿಸುವ ಜಲಚರಗಳ ನಡುವೆ ಪಯಣ ಮಾಡುತ್ತ, ಒಂದೆಡೆ ಲಿಫ್ಟ್‌ಗಳ ಮೂಲಕ ಸಮುದ್ರ ಜಗತ್ತಿನ ಗರ್ಭದಾಳಕ್ಕೆ ಇಳಿಯುತ್ತೇವೆ. ಅದು ಸಮುದ್ರದಾಳ ಅಲ್ಲ; ಸಮುದ್ರದ ಆಳವನ್ನು ಕಲ್ಪಿಸುವ ಒಂದು ಭ್ರಮೆ. ಈ ಭ್ರಮಾಲೋಕದಲ್ಲಿ ಮತ್ತಷ್ಟು ಚಿತ್ರ ವಿಚಿತ್ರವಾದ ಜಲಚರಗಳ ಗಡಿಬಿಡಿ. ಮತ್ತೆ ಕಡಲಾಳದ ಭ್ರಮಾಜಗತ್ತಿನಿಂದ ಮೇಲಕ್ಕೆ ಬಂದು, ನನ್ನ ಬಸ್ ಸ್ಟಾಪ್ ಅನ್ನು  ಹುಡುಕಿ ಒಂದೈದು ನಿಮಿಷ ಕಾದೆ. ಆಗಲೇ ವೇಳೆ ಮಧ್ಯಾಹ್ನ ಒಂದೂಕಾಲು. ಬಸ್ಸು ಬಂತು, ಮತ್ತೆ ಪಯಣ ಮುಂದುವರಿಸಿದೆ. ಬಟಾನಿಕಲ್ ಗಾರ್ಡನ್ ಪಕ್ಕದಲ್ಲಿ ‘ನೇಚರ್ ಸೆಂಟರ್’ ಅನ್ನು ದಾಟಿಕೊಂಡು ಬಸ್ಸು ಚಲಿಸಿತು. ವಿವಿಧ ಸಸ್ಯ ವಿಶೇಷಗಳ, ವಿಸ್ತಾರವಾದ ಉದ್ಯಾನವನ್ನೂ, ಪ್ರಾಣಿ ಪ್ರಪಂಚವನ್ನೊಳಗೊಳ್ಳುವ ‘ನೇಚರ್ ಸೆಂಟರ್’ ಅನ್ನೂ, ಬಸ್ಸಿನ ತೆರೆದ ಛಾವಣಿಯ ಮೇಲಿನಿಂದಲೇ ವೀಕ್ಷಿಸುತ್ತ, ಕ್ಯಾಡ್‌ಬರಿ ತಯಾರಿಕೆಯ ಕೇಂದ್ರವನ್ನು ತಲುಪಿದೆ. ಮಕ್ಕಳ ಬಾಯಲ್ಲಿ ಮಾಧುರ್ಯವನ್ನುಕ್ಕಿಸುವ ಕ್ಯಾಡ್‌ಬರಿ ಚಾಕಲೇಟಿನ ವಾಸನೆ ಇಡೀ ಆವರಣವನ್ನೆ ತುಂಬಿಕೊಂಡಿತ್ತು. ಮುಂದೆ ಬಸ್ಸು ಪ್ರವೇಶಿಸಿದ್ದು,  ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದ ಆವರಣವನ್ನು ಅದೊಂದು ಅತ್ಯಂತ ಸುಂದರವಾದ ಹಾಗೂ ಪ್ರಶಾಂತವಾದ ಪರಿಸರ ಈ ಪರಿಸರದಿಂದ ಮುಂದೆ ಬಸ್ಸು ಪ್ರವೇಶಿಸಿದ್ದು, ಆಭರಣಗಳ ಪೇಟೆ ಬೀದಿಯನ್ನು. ಬರ್ಮಿಂಗ್‌ಹ್ಯಾಂನ ಈ ಪೇಟೆ ವಜ್ರದ ಒಡವೆಗಳಿಗೆ ತುಂಬ ಹೆಸರುವಾಸಿಯಾದದ್ದು. ಬಸ್ಸು ಇನ್ನೂ ಹಲವು ಬೀದಿಗಳನ್ನು ಹಾಯ್ದು, ಮಧ್ಯಾಹ್ನ ಮೂರೂವರೆಯ ವೇಳೆಗೆ, ತಾನು ಸಂಚಾರವನ್ನು ಪ್ರಾರಂಭಿಸಿದ ವಿಕ್ಟೋರಿಯಾ ಚೌಕಕ್ಕೆ ಬಂದು ನಿಂತಿತು. ಕೇವಲ ಸಮುದ್ರ ಜಗತ್ತನ್ನು ಮಾತ್ರ ವಿವರವಾಗಿ ನೋಡಲು ಸಾಧ್ಯವಾದ ಈ ಸಂಚಾರದಲ್ಲಿ ನನ್ನನ್ನು ಬೆರಗುಗೊಳಿಸಿದ್ದು ನಗರದ ಕಟ್ಟಡಗಳ ವಿನ್ಯಾಸ. ಇಂಗ್ಲೆಂಡಿನ ಈ ನಗರಗಳೆಲ್ಲ ಅಷ್ಟೆ. ಅಚ್ಚು ಕಟ್ಟಾಗಿ, ಒಂದು ಬಗೆಯ ಶಿಸ್ತು ಮತ್ತು ಗಾಂಭೀರ‍್ಯವನ್ನು ಉಳಿಸಿಕೊಂಡ ರಚನೆಗಳು. ಅಮೆರಿಕಾದ ಗಗನಚುಂಬಿಗಳ ನಾಗರಿಕ ಹುತ್ತಗಳ ಸಮುದಾಯದಂತೆ ಅಲ್ಲ. ಇಂಗ್ಲೆಂಡಿನ ನಗರಗಳಿಗೆ  ಮಾದರಿ, ಗ್ರೀಕ್ ಮತ್ತು ರೋಮನ್ ಶಿಲ್ಪ. ಯೂರೋಪಿನ ನಗರಗಳೂ ಹೀಗೆಯೇ. ಒಂದರ್ಥದಲ್ಲಿ ಇಂಗ್ಲೆಂಡ್ ಯೂರೋಪಿಯನ್ ಪರಂಪರೆಯ ವಿಸ್ತರಣೆಯೇ. ಬರ್ಮಿಂಗ್  ಹ್ಯಾಂ ಊರೊಳಗೆ ಅಲ್ಲಲ್ಲಿ ಕಾಣುವ ಕಾಲುವೆ (ಕೆನಾಲ್)ಗಳೂ, ವೆನಿಸ್‌ನ ನೆನಪನ್ನು ತರುವಂತಿವೆ. ‘ಕಾಲುವೆಗಳ ನಗರ’ ವಾದ ವೆನಿಸ್ ಅನ್ನು ಹೊರತುಪಡಿಸಿದರೆ, ಇಂಗ್ಲೆಂಡಿನಲ್ಲಿ ಕಾಲುವೆಗಳಿರುವ ನಗರ ಇದೊಂದೇ ಎಂದು ಹೇಳುತ್ತಾರೆ. ಒಂದು ಕಾಲಕ್ಕೆ ಲಂಡನ್ನನ್ನೂ ಬರ್ಮಿಂಗ್ ಹ್ಯಾಂ ಅನ್ನೂ ಕೂಡಿಸುವ ಸಂಚಾರ ವ್ಯವಸ್ಥೆ ಈ ಕಾಲುವೆಗಳ ಮೂಲಕ ನಡೆಯುತ್ತಿತ್ತಂತೆ. ಈಗ ಸಂಚಾರಕ್ಕೆ ಬೇರೆಯ ವ್ಯವಸ್ಥೆಗಳು ಏರ್ಪಟ್ಟಿರುವ ಕಾರಣದಿಂದ ಈ ಕೆನಾಲ್‌ಗಳು ಪ್ರವಾಸಿಗಳ ಮನೋರಂಜನೆಯ ದೋಣಿ ವಿಹಾರಕ್ಕೆ ಮಾತ್ರ ಬಳಕೆಯಾಗುತ್ತಿದೆ.

ಮೂರೂವರೆಯಿಂದ ನಾಲ್ಕೂವರೆಯವರೆಗೆ, ಬರ್ಮಿಂಗ್‌ಹ್ಯಾಂನ ಕಲಾ ಪ್ರದರ್ಶನಾಲಯವನ್ನು ನೋಡಿಕೊಂಡು, ಪಕ್ಕದ ರೆಸ್ಟೋರ‍್ಯಾಂಟಿನಲ್ಲಿ ಟೀ ಕುಡಿದು, ರಸ್ತೆಯಿಕ್ಕೆಲಗಳಲ್ಲಿದ್ದ ಕೆಲವು ಪುಸ್ತಕದ ಅಂಗಡಿಗಳನ್ನು ಹೊಕ್ಕು ನನಗೆ ಬೇಕಾಗಿದ್ದ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ. ಸಂಜೆ ನಾಲ್ಕು ಮುಕ್ಕಾಲು ಸಮೀಪಿಸಿದಂತೆ, ನಾನು ಮಧ್ಯಾಹ್ನ ಕಂಡ ಜನ ಸಂಚಾರದ ನಿಬಿಡತೆ ಆಗಲೇ ತೆಳ್ಳಗಾಗಿತ್ತು. ಇನ್ನೇನು ಐದು ಗಂಟೆ ಸಮೀಪಿಸುತ್ತಿದೆ ಅನ್ನುವ ಹೊತ್ತಿಗೆ ಅಂಗಡಿಗಳು ಪಟಪಟನೆ ತಮ್ಮ ಬಾಗಿಲು ಮುಚ್ಚುತ್ತವೆ. ಕೆಲವು ಪಬ್ಬುಗಳು ಮತ್ತು ಮನೋರಂಜನೆಯ ಕ್ಲಬ್ಬುಗಳ ಹೊರತು ಉಳಿದೆಲ್ಲ ವ್ಯವಹಾರವು ನೋಡನೋಡುತ್ತಲೇ ಬಂದ್ ಆಗುತ್ತದೆ. ಸಂಜೆಯಾದೊಡನೆ ಗೂಡಿಗೆ ಗರಿಗೆದರಿ ಹಾರುವ ಹಕ್ಕಿಗಳಂತೆ, ಸಂಜೆಯ ಐದು ಗಂಟೆಯಾಗುತ್ತಲೇ ಜನ ಮನೆಗಳ ಕಡೆಗೆ ಧಾವಿಸುತ್ತಾರೆ. ಆರು ಗಂಟೆಯ ಹೊತ್ತಿಗಂತೂ ಬೀದಿಗಳು ಬಿಕೋ ಅನ್ನುತ್ತವೆ. ಭಾನುವಾರವಂತೂ ನಿಜವಾದ ಅರ್ಥದಲ್ಲಿ ರಜಾ, ಎಲ್ಲ ಚಟುವಟಿಕೆಗಳಿಗೂ. ದೇವರು ಈ ಜಗತ್ತನ್ನು ಆರು ದಿನಗಳ ಕಾಲ ಸೃಷ್ಟಿಸಿ, ಏಳನೆಯ ದಿನ ವಿಶ್ರಾಂತಿ ತೆಗೆದುಕೊಂಡನೆಂದು ಹೇಳುತ್ತದೆ ಬೈಬಲ್. ಹೀಗಾಗಿ ಭಾನುವಾರಗಳ ಬಿಡುವನ್ನು ನೋಡಬೇಕಾದರೆ – ಈ ದೇಶಗಳಲ್ಲಿ ಮಾತ್ರ ಸಾಧ್ಯ.

ಜನಸಂಚಾರ ವಿರಳವಾಗುತ್ತ, ವ್ಯವಹಾರಗಳು ಸ್ತಬ್ಧವಾಗುತ್ತ ಇದ್ದ ಬರ್ಮಿಂಗ್ ಹ್ಯಾಂನ ಮುಖ್ಯ ಬೀದಿಯಿಂದ ನಾನು, ರೈಲ್ವೆ ಸ್ಟೇಷನ್ ಅನ್ನು ಪ್ರವೇಶಿಸುವ ಮಾರ್ಗದ ಬುಲ್‌ರಿಂಗ್ ಮತ್ತು ಪ್ಯಾಲಸೇಡ್ ವಾಣಿಜ್ಯ ಸಂಕೀರ್ಣಗಳನ್ನು ಹೊಕ್ಕೆ. ಅಲ್ಲೂ ಅದೇ ಕತೆ. ಝಗಮಗ ಬೆಳಕಿನ ಅಂಗಡಿಗಳೆಲ್ಲಾ ಒಂದೊಂದಾಗಿ ಮುಚ್ಚಿಕೊಳ್ಳುತ್ತಿದ್ದವು. ನಾನು ಕೊಂಡ ರಿಯಾಯಿತಿ ದರದ ‘ರಿಟರ್ನ್ ಟಿಕೆಟ್’ ಪ್ರಕಾರ, ಆರು ಗಂಟೆಗೆ  ಮೊದಲಿನ ರೈಲನ್ನು ಹಿಡಿಯುವಂತಿರಲಿಲ್ಲ. ಹೀಗಾಗಿ ಇನ್ನೂ ಒಂದು ಗಂಟೆ ಮಾಡುವುದೇನೆಂದು ತಿಳಿಯದೆ, ‘ಪ್ಯಾಲಸೇಡ್’ ನ ವಾಣಿಜ್ಯ ಸಂಕೀರ್ಣದಲ್ಲಿ ಅಲ್ಲಲ್ಲಿ ಹಾಕಿದ ಬೆಂಚಿನ ಮೇಲೆ ಕುಳಿತೆ. ಕೆಲವೇ ಕೆಲವರು ನನ್ನಂತೆ ಅಲ್ಲಿ  ಕೂತಿದ್ದರು. ಐದು ಇಪ್ಪತ್ತರ ವೇಳೆಗೆ, ಆ ಸ್ಥಳದ ಎರಡೂ ಕಡೆಯ ಅಂಗಡಿಗಳ ಬಾಗಿಲುಗಳೂ ಮುಚ್ಚಿಕೊಂಡದ್ದಲ್ಲದೆ, ಧ್ವನಿವರ್ಧಕದ ಮೂಲಕ ‘ಮಹನೀಯರೆ ಮತ್ತು ಮಹಿಳೆಯರೇ ಈಗ ಈ ಮಾರುಕಟ್ಟೆಯ ಎಲ್ಲ ವ್ಯವಹಾರವೂ ಸ್ಥಗಿತವಾಗುತ್ತದೆ. ಅಂಡಿಗಳೆಲ್ಲಾ ಬಂದ್ ಆಗುತ್ತವೆ. ಏಕಾಂಗಿಯಾಗಿ ಇಂಥ ಕಡೆ ನೀವಿರುವುದು ಕ್ಷೇಮವಲ್ಲ’ – ಎಂಬ ಎಚ್ಚರಿಕೆಯ ಮಾತುಗಳು ಮೊಳಗತೊಡಗಿದವು. ಐದು ಗಂಟೆಯವರೆಗೂ ನೂಕುನುಗ್ಗಲಿನ ವ್ಯವಹಾರದ ನೆಲೆಯಾಗಿದ್ದ ಈ ಪರಿಸರ, ಜನವಿಹೀನತೆಯಿಂದ, ಕ್ಷೇಮಕರವಲ್ಲದ ಭಯ – ಭೀತಿಯ ನೆಲೆಯಾಗುವುದು ಇಲ್ಲಿನ ವಾಸ್ತವಗಳಲ್ಲಿ ಒಂದು ಎಂಬ ಅರಿವಾಗಿ ನಾನೂ ನನ್ನಂತೆ ಕೂತ ಕೆಲವರೂ, ಆ ಸ್ಥಳದಿಂದ ಕೆಳಗೆ ಇಳಿದು ಜನ ಸಂಚಾರಭರಿತವಾದ ರೈಲ್ವೆ ಸ್ಟೇಷನ್ನಿನ ಕಾರಿಡಾರ್‌ಗಳನ್ನು ಆಶ್ರಯಿಸಬೇಕಾಯಿತು. ದಿನವೂ ಇಲ್ಲಿನ ಟಿ.ವಿಗಳಲ್ಲಿ ವರದಿಯಾಗುತ್ತಿರುವ ಕೊಲೆ- ಸುಲಿಗೆ – ಅತ್ಯಾಚಾರದ ವಾರ್ತೆಗಳು, ಇಲ್ಲಿನ ಸಾಮಾಜಿಕ ವಾಸ್ತವತೆಯ ಒಂದು ಮುಖದ ಪರಿಚಯವನ್ನು ಆಗಲೇ ಮಾಡಿಕೊಟ್ಟಿದ್ದವು. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ಹದಿ ಹರೆಯದವರದು. ಬಹುತೇಕ ಕೊಲೆ ಹಾಗೂ ಅತ್ಯಾಚಾರಗಳಲ್ಲಿ ತೊಡಗುವವರು ಇವರೇ. ಅನೇಕ ವೇಳೆ ಕೊಲೆ ಅನ್ನುವುದು ಇವರಿಗೆ ಒಂದು ಆಟ. ಅದರಲ್ಲೂ ಶುಕ್ರವಾರದ ನಡುರಾತ್ರಿಗಳಲ್ಲಿ, ವಾರಾಂತ್ಯದ ಕುಡಿತದ ಮೋಜುಗಳಲ್ಲಿ ಮಗ್ನರಾಗಿ, ಪಾರ್ಕುಗಳಲ್ಲೋ ರಸ್ತೆಯ ಬದಿಗಳಲ್ಲೋ, ಅಸ್ತವ್ಯಸ್ತವಾಗಿ ಎಚ್ಚರವಿಲ್ಲದೆ ಬಿದ್ದ ಹುಡುಗ ಹುಡುಗಿಯರನ್ನು ಪೋಲೀಸಿನವರು ವ್ಯಾನುಗಳಲ್ಲಿ ತಂದು ಆಸ್ಪತ್ರೆಗಳಿಗೆ ದಾಖಲು ಮಾಡುವುದಂತೂ ಸಾಮಾನ್ಯದ ಸಂಗತಿಯಾಗಿದೆ ಎಂದು ಇಲ್ಲಿನ ವೈದ್ಯರು ಹೇಳುತ್ತಾರೆ.

ಬರ್ಮಿಂಗ್ ಹ್ಯಾಂ ರೈಲ್ವೆ ಸ್ಟೇಷನ್ನಿನ ಉದ್ದವಾದ ಮೊಗಸಾಲೆಯಲ್ಲಿ ನಿಂತು, ಎರಡೂ ಕಡೆಗೆ ತೋರಿಸಲಾದ ಬಾಣದ ಗುರುತುಗಳ ಬದಿಗೆ ಸ್ಪಷ್ಟವಾಗಿ ಕಾಣುವ ಪ್ಲಾಟ್‌ಫಾರಂಗಳ ಸಂಖ್ಯೆಯ ನಡುವೆ, ಹನ್ನೊಂದನೆ ನಂಬರ್ ಪ್ಲಾಟ್‌ಫಾರಂಗೆ ಇಳಿದು, ಆರೂವರೆಯ ರೈಲು ಹಿಡಿದು ಸುರಕ್ಷಿತವಾಗಿ ಹಿಂದಕ್ಕೆ ಬಂದೆ. ಮೊಮ್ಮಗಳು ಸ್ಕೂಲಿನಿಂದ, ಮಗ – ಸೊಸೆ ಆಸ್ಪತ್ರೆಯಿಂದ ತಮ್ಮ ವಸತಿಗೆ ಹಿಂದಿರುಗಿ ನನಗಾಗಿ ಕಾಯುತ್ತಿದ್ದರು. ಕೊಂಚ ಹೊತ್ತು ಟಿ.ವಿ. ನೋಡಿ, ಸುಮಾರು ಎಂಟು ಗಂಟೆಯ ಹೊತ್ತಿಗೆ ಡೈನಿಂಗ್ ರೂಂನಲ್ಲಿ ಊಟಕ್ಕೆಂದು ಕೂತೆವು. ಊಟದ ಜತೆ ನೆಂಚಿಕೊಳ್ಳಲು ಒಂದಿಷ್ಟು ಹಪ್ಪಳ ಸಂಡಿಗೆಯನ್ನು ಕರಿಯುತ್ತೇನೆ ಕೊಂಚ ತಡೆಯಿರಿ ಎಂದಳು ನನ್ನ ಸೊಸೆ. ಆಕೆ ಹಾಟ್‌ಪ್ಲೇಟ್ ಮೇಲೆ ಬಾಣಲೆಯಿರಿಸಿ ಎಣ್ಣೆ ಸುರಿವಿ, ಹಪ್ಪಳ, ಸಂಡಿಗೆಗಳನ್ನು ಕರಿಯಲು ಪ್ರಾರಂಭಿಸಿದ ಒಂದೆರಡು ನಿಮಿಷಗಳಲ್ಲೇ ಶುರುವಾಯಿತು ಫೈರ್ ಅಲಾರಮ್ಮಿನ – ಘಂಟಾನಾದ. ಒಂದೇ ಸಮನೆ ಢಣಾ ಢಣಾ ಢಣಾ ಎಂದು ಕಿವಿಗಡಚಿಕ್ಕುವ ಅಲಾರಮ್ಮಿನ ಅನುರಣನಕ್ಕೆ, ಕೂಡಲೇ ಸ್ಟೌವ್ ಅನ್ನು ಆರಿಸಿ, ನಾವೆಲ್ಲರೂ ಬಾಗಿಲು ದಬ್ಬಿಕೊಂಡು, ಮೆಟ್ಟಲಿಳಿದು ಕೆಳಗೆ ಧಾವಿಸಿ ಹೊರಗೆ ಬಂದು ನಿಂತೆವು. ಹೀಗೆಯೇ ನಮ್ಮ ಬ್ಲಾಕಿನ ಒಂಬತ್ತೂ ಮನೆಗಳ ಮಂದಿ ಅವರವರ ಮನೆಗಳಿಂದ ಧಡಧಡ ಕೆಳಗೆ ಇಳಿದು ಹೊರಗೆ ಬಂದು ನಿಲ್ಲತೊಡಗಿದರು.

ನಾವಿರುವ ಡಿ. ಬ್ಲಾಕಿನಲ್ಲಿ ಒಂಬತ್ತು ಮನೆಗಳು. ಪ್ರತಿಯೊಂದು ಮನೆಯಲ್ಲೂ ಮೂರು ಬೆಡ್‌ರೂಂಗಳು, ಒಂದು ಡ್ರಾಯಿಂಗ್ ರೂಂ, ಕಿಚನ್, ಬಾತ್ ರೂಂ ಇತ್ಯಾದಿ. ನೆಲಕ್ಕೆಲ್ಲಾ ಕಾರ್ಪೆಟ್. ಗೋಡೆಗಳೆಲ್ಲಾ ಮರದವು. ಪ್ರತಿಯೊಂದು ಕೊಠಡಿಯಲ್ಲೂ ಫೈರ್ ಅಲಾರಂ ಜೋಡಿಸಲಾಗಿದೆ. ಮನೆಯ ಒಳಗೆ ಹೊರಗೆ ಬೆಂಕಿ ಅಪಘಾತದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡುವ ಸೂಚನೆಗಳಿವೆ. ಇವೆಲ್ಲ ತೀರಾ ಸುಲಭವಾಗಿ ಬೆಂಕಿಗೆ ಈಡಾಗುವ ಸಾಧ್ಯತೆ ಮತ್ತು ಭಯಗಳಿರುವ ಮಯನಿರ್ಮಿತ ಅರಗಿನ ಮನೆಗಳೋ ಎಂಬಂಥ ಮುನ್ನೆಚ್ಚರಿಕೆಯಲ್ಲಿ ಬದುಕಬೇಕಾದ ಸಂದರ್ಭ ಇಲ್ಲಿನದು. ಪ್ರತಿ ಬುಧವಾರದ ಬೆಳಿಗ್ಗೆ ಅಭ್ಯಾಸವಾಗಲಿ ಎಂದು ಎಲ್ಲ ಫ್ಲಾಟ್‌ಗಳಲ್ಲೂ ಫೈರ್ ಅಲಾರಂ ಸ್ವಲ್ಪ ಹೊತ್ತು ಬಡಿದುಕೊಳ್ಳುತ್ತದೆ.

ಯಾವಾಗ, ಊಟಕ್ಕೆ ಕೂತಾಗ ರಾತ್ರಿ ಏಕಾಏಕಿ ಹಪ್ಪಳ ಸಂಡಿಗೆ ಕರಿದ ಹೊಗೆ ಕೊಂಚ ಹೆಚ್ಚಾಗಿ, ಅಡುಗೆ ಮನೆಯ ಮೇಲ್ ಛಾವಣಿಯಲ್ಲಿ ಅಳವಡಿಸಿದ್ದ ಅತಿ ಸೂಕ್ಷ್ಮವಾದ ಫೈರ್ ಅಲಾರಂ ಬಡಿದುಕೊಳ್ಳತೊಡಗಿತೋ, ಆಗ ಅದನ್ನು ನಾವು ಯಾರೂ ನಿಲ್ಲಿಸಲು ಸಾಧ್ಯವಾಗದ ಕಾರಣ – ನಾವು ಹೇಗಿದ್ದೆವೋ ಹಾಗೆ ಕೆಳಗೆ ಧಾವಿಸುವುದೊಂದೇ ಮಾರ್ಗ. ಆಚೀಚೆಯ ಮನೆಗಳವರಿಗಂತೂ ಅದೊಂದು ಭಯದ  ಹಾಗೂ ಅಪಾಯದ ಸೂಚನೆ. ನಾವು ಹೊರಗೆ ಧಾವಿಸಿ, ಅಲ್ಲಿ ಜಮಾಯಿಸಿದ  ಜನರ ನಡುವೆ ನಿಂತಾಗ ಎಲ್ಲರಿಗೂ ಇಷ್ಟು ಮನೆಗಳಲ್ಲಿ ಯಾವ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನುವ ಪ್ರಶ್ನೆ. ಆ ಪ್ರಶ್ನೆಗೆ ಉತ್ತರವೆಂಬಂತೆ ಕೆಲವೇ ಕ್ಷಣಗಳಲ್ಲಿ ಧಾವಿಸಿ ಬಂದವು., ಫೈರ್ ಬ್ರಿಗೇಡ್ ವ್ಯಾನುಗಳು – ಅಗ್ನಿಶಾಮಕ ಸಾಧನ ಸಾಮಗ್ರಿಗಳ ಸಮೇತ. ಯಾವ ಒಂದು ಮನೆಯಲ್ಲಿ ಈ ಬಗೆಯ ಫೈರ್ ಅಲಾರಂ ಬಡಿದುಕೊಂಡರೂ ಕೂಡಲೇ ಸುದ್ದಿ ಮುಟ್ಟುವುದು ಫೈರ್ ಬ್ರಿಗೇಡ್ ಕಚೇರಿಗೆ. ಅಂತೂ ಫೈರ್ ಬ್ರಿಗೇಡ್ ಸಿಬ್ಬಂದಿ, ಯಾವ ಫ್ಲಾಟಿನಲ್ಲಿ ಬೆಂಕಿ ಹತ್ತಿಕೊಂಡಿರಬಹುದೋ ಎಂದು – ಅಲಾರಮ್ಮಿನ ಸದ್ದು ನಿಲ್ಲದ, ನಮ್ಮ ಫ್ಲಾಟನ್ನು ಒಳಹೊಕ್ಕು ನೋಡುತ್ತಾರೆ, ನಮ್ಮ ಅಡುಗೆಮನೆ ತುಂಬ ಹಪ್ಪಳ – ಸಂಡಿಗೆ ಕರಿದ ಕಂಪು – ಹೊಗೆ ಆವರಿಸಿಕೊಂಡಿದೆ. ಅನಂತರ ಅವರು ಯಾವ ದೊಡ್ಡ ಅನಾಹುತವೂ ಆಗಿಲ್ಲವಲ್ಲ ಎಂದು (ಬಹುಶಃ ನಿರಾಶರಾಗಿ!) ನಮ್ಮ ಮನೆಯೊಳಗಿನ ಅಲಾರಂನ್ನು ‘ಆಫ್’ ಮಾಡಿ ಹೊರಟೇ ಹೋದರು. ನಮ್ಮ ಪಾಪುವಿಗಂತೂ ಗಾಬರಿ, ಸಂಭ್ರಮ ಎಲ್ಲಾ.