ಬಲರಾಜ್ ಸಾಹನಿಪ್ರಸಿದ್ಧ ಚಿತ್ರ ನಟ, ಸ್ವತಂತ್ರ ಮನೋವೃತ್ತಿಯ ವ್ಯಕ್ತಿ. ಬಡವರು, ಕಷ್ಟದಲ್ಲಿರುವವರು ಎಂದರೆ ನೈಜವಾದ ಅನುಕಂಪ. ಭಾರತದಲ್ಲಿ ಸಮಾಜವಾದಿ ರಾಷ್ಟ್ರ ನಿರ್ಮಾಣ ವಾಗಬೇಕು, ಅದಕ್ಕೆ ತಕ್ಕ ವಾತಾವರಣವನ್ನು ಜನ ಸೃಷ್ಟಿಸಬೇಕು ಎಂದು ಅವರ ಕಳಕಳಿ. ಜನರ ಜೀವನದಲ್ಲಿ ಬೆರೆತು ಹೋಗಿದ್ದ ಮಹಾ ಕಲಾವಿದರು ಅವರು.

 ಬಲರಾಜ್ ಸಾಹನಿ

 

ಚಲನಚಿತ್ರ ನೋಡಬೇಕೆಂದು ಎಷ್ಟು ಜನಕ್ಕೆ ಆಸೆ! ವಯಸ್ಸಾದವರು, ತರುಣರು, ಎಳೆಯರು, ನಗರದವರು, ಹಳ್ಳಿಯವರು ಎಲ್ಲರೂ ಚಲನಚಿತ್ರ ನೋಡಿ ಆನಂದ ಪಡುತ್ತಾರೆ. ಚಲನಚಿತ್ರದಂತೆ ರಂಗಭೂಮಿಯೂ ಕೂಡ ಒಂದು ಮನರಂಜನೆ ಮಾಧ್ಯಮ.

ತಮ್ಮ ಅಭಿನಯ, ವಾಗ್ಮಿತೆಯಿಂದ ಮೂವತ್ತು ವರ್ಷಗಳ ಕಾಲ ಇಡೀ ಹಿಂದೂಸ್ಥಾನದ ಜನರ ಮನಸ್ಸನ್ನು ಗೆದ್ದ ಒಬ್ಬ ಮಹಾನಟರಾಗಿದ್ದರು ಬಲರಾಜ್ ಸಾಹನಿ. ಭಾರತೀಯ ಚಲನಚಿತ್ರ, ರಂಗಭೂಮಿ ಎರಡರಲ್ಲೂ ತಮ್ಮದೇ ಆದ ವಿಶಿಷ್ಟ ವಿದ್ವತ್ತನ್ನು ಧಾರೆ ಎರೆದು ಭಾರತದ ಸ್ಥಾನವನ್ನು ಎತ್ತರಕ್ಕೇರಿಸಿದ ಮಹಾಚೇತನ. ಸಾಹನಿಯವರ ಜೀವನ ಒಂದು ಸಾಹಸಪೂರ್ಣ ಕಥೆ. ಹಲವು ಕ್ಷೇತ್ರಗಳ ಸಂಗಮ.

ಬಾಲ್ಯ

ಆಗಿನ್ನೂ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ ದೇಶದಲ್ಲಿ ಎಲ್ಲೆಲ್ಲೂ ಸ್ವಾತಂತ್ರ್ಯದ ಹೋರಾಟ ನಡೆದಿತ್ತು. ಇಂಥ ಸನ್ನಿವೇಶದಲ್ಲಿ ಬಲರಾಜ್ ೧೯೧೨ರ ಮೇ ೧ ರಂದು ಪಂಜಾಬ್‌ನ ರಾವಲ್ಪಿಂಡಿಯಲ್ಲಿ ಜನ್ಮ ತಾಳಿದರು. ಸಿರಿವಂತ ತಂದೆ, ಊರಿನ ಜನಕ್ಕೆ ಲಾಲಾಜಿ ಎಂದು ಅಚ್ಚು ಮೆಚ್ಚಾಗಿದ್ದರು. ಆರ್ಯ ಸಮಾಜದ ಅನುಯಾಯಿ ಗಳಾಗಿದ್ದರು. ಮನೆಯಲ್ಲಿ ತುಂಬಾ ಕಟ್ಟು ನಿಟ್ಟು. ಹೇಳದೆ ಕೇಳದೆ ಎಲ್ಲೂ ಹೋಗುವಂತಿಲ್ಲ. ಐದು ಹೆಣ್ಣು ಮಕ್ಕಳ ನಂತರ ಹುಟ್ಟಿದ ಬಲರಾಜ್‌ರನ್ನು ಕಂಡರೆ ತಂದೆಗೆ ಬಲುಪ್ರೀತಿ. ಧರ್ಮಪರಾಯಣರಾಗಿದ್ದ ಅವರಿಂದಲೇ ಮಗನಿಗೆ ಸಂಸ್ಕೃತ ಪಾಠ. ಮಾತೃಭಾಷೆ ಪಂಜಾಬಿ ಯಾದರೂ ಬಲರಾಜ್‌ರಿಗೆ ಸಂಸ್ಕೃತದ ಓದು ಬಲುಪ್ರಿಯ. ಎಂಟು ವರ್ಷ ವಯಸ್ಸಿದ್ದಾಗಲೇ ವಾಲ್ಮೀಕಿ ರಾಮಾಯಣ ವನ್ನು ಪೂರಾ ಓದಿದ್ದರು. ಒಮ್ಮೆ ರಾಮಾಯಣದ ಶ್ಲೋಕಗಳ ಧಾಟಿಯಲ್ಲೆ ಶ್ಲೋಕವೊಂದನ್ನು ಬರೆದು ಆರ್ಯ ಸಮಾಜದ ವಾರ್ಷಿಕೋತ್ಸವವೊಂದರಲ್ಲಿ ಹಾಡಿದ್ದರು.

ರಾವಲ್ಪಿಂಡಿ ಹೇಳಿಕೊಳ್ಳುವುದಕ್ಕಷ್ಟೆ ಪಟ್ಟಣ. ಆದರೆ ಎಲ್ಲೆಲ್ಲೂ ಹಳ್ಳಿಯ ವಾತಾವರಣ. ದಿನನಿತ್ಯದ ಉಪಯೋಗದ ವಸ್ತುಗಳಿಗೆ ಬೆಲೆ ಕಡಿಮೆ. ತಿನ್ನುವುದಕ್ಕೆ ಕೊರತೆ ಇಲ್ಲ. ಆದರೆ ಹೆದರಿಕೆಯ ಜೀವನ. ಇಂಥ ಪರಿಸ್ಥಿತಿಯಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದರು. ತಮ್ಮ ಭೀಷ್ಮ ಇವರ ಒಡನಾಡಿ.

ಶಾಲಾ ದಿನಗಳು

ಸಾಹನಿಯವರ ಆರಂಭದ ವಿದ್ಯಾಭ್ಯಾಸ ರಾವಲ್ಪಿಂಡಿಯಲ್ಲೆ ಜರುಗಿತು. ಶಾಲೆಯಲ್ಲಿ ಬುದ್ಧಿವಂತರೆನಿಸಿ ಕೊಂಡಿದ್ದರು. ಮುಖ್ಯೋಪಾಧ್ಯಾಯರಿಗೆ ಪ್ರೀತಿ ಪಾತ್ರರಾಗಿದ್ದರು. ಚಿಕ್ಕಂದಿನಿಂದಲೇ ಸಾಹನಿಯವರಿಗೆ ಓದು ಎಂದರೆ ಪರಮಪ್ರೀತಿ. ಶಾಲೆಯಲ್ಲಿ ಸಣ್ಣ ಸಣ್ಣ ವಾಕ್ಯಗಳನ್ನು ಕೊಟ್ಟು ಅದರ ಆಧಾರದ ಮೇಲೆ ಕಥೆ ಬರೆಯಲು ಹೇಳುತ್ತಿದ್ದರು. ಸಾಹನಿಯನಿಯವರಿಗೆ ಅಂದಿನಿಂದಲೇ ಸಾಹಿತ್ಯದ ಗೀಳು ಹತ್ತಿತ್ತು. ಕಲೆ ಸಾಹಿತ್ಯ ಎರಡರಲ್ಲೂ ಅವರಿಗೆ ಅಭಿರುಚಿ ಉಂಟಾಯಿತು.

ನಮ್ಮ ದೇಶಕ್ಕೆ ಆಗತಾನೇ ಚಲನಚಿತ್ರಗಳು ಬಂದಿದ್ದವು. ಅಲ್ಲಲ್ಲೆ ಅವುಗಳ ಪ್ರದರ್ಶನ. ರಾವಲ್ಪಿಂಡಿಗೂ ‘ಬಯಾಸ್ಕೋಪ್’ ಬಂತು. ಹೆಚ್ಚಾಗಿ ಮೂಕಿ ಚಿತ್ರಗಳ ಪ್ರದರ್ಶನ. ಸಾಹನಿಯವರಿಗೆ ಅದನ್ನು ನೋಡುವ ಆಸೆ ತಂದೆಗೆ ಆಗದು. ಅದನ್ನು ನೋಡಿದ ಮಕ್ಕಳು ಎಳೆಯ ಪ್ರಾಯದಲ್ಲೆ ಓದುವುದನ್ನು ಗಮನಿಸುವುದಿಲ್ಲ ಎಂಬುದು ಅವರ ಭಾವನೆಯಾಗಿತ್ತು. ಅದೂ ಅಲ್ಲದೆ ಆಗಿನ ಸಿನಿಮಗಳು ನೋಡುವಷ್ಟು ಗುಣಮಟ್ಟದ್ದಾಗಿರಲಿಲ್ಲ. ತಾಯಿಯ ಕೃಪೆಯಿಂದ ತಮ್ಮ ಭೀಷ್ಮನೊಡನೆ ಸಾಹನಿ ಸಿನಿಮ ನೋಡಿಬಂದರು. ಮತ್ತೊಂದು ದಿನ ಯಾರೋ ಸಿನಿಮ ತೋರಿಸುತ್ತಿದ್ದರು. ಸಾಹನಿಯವರಿಗೆ ಸಹಜವಾಗಿ ಅದನ್ನು ನೋಡುವ ಕಾತರ. ಸ್ನೇಹಿತರೊಡನೆ ಹೋದರು. ದುಡ್ಡು ಕೊಡದೆ ಒಳಗೆ ಹೋಗುವಂತಿಲ್ಲ. ಕೈಲಿ ದುಡ್ಡಿಲ್ಲ, ಗೆಳೆಯರು ಬಿಡಬೇಕಲ್ಲ! ಅಲ್ಲೇ ಇದ್ದ ಒಂದು ಎತ್ತರದ ಮರ ಹತ್ತಿದರು. ಅಲ್ಲಿಂದ ಸಿನಿಮ ಚೆನ್ನಾಗಿ ಕಾಣುತ್ತಿತ್ತು. ಸಾಹನಿಯವರೂ ಅಂತೆಯೇ ಮಾಡಿದರು.

ಸಾಹನಿ ಮೊದಲು ಸಿನಿಮದ ಕಥೆ ಗಮನಿಸು ತ್ತಿದ್ದರು. ಚಲನಚಿತ್ರಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಕಲಿತುಕೊಳ್ಳಲು ತವಕಿಸುತ್ತಿದ್ದರು. ನಟ ನಟಿಯರ ಅಭಿನಯವನ್ನು ವಿಮರ್ಶಿಸುತ್ತಿದ್ದರು.

ಕಾಲೇಜಿನಲ್ಲಿ

ಸಾಹನಿ ಮೆಟ್ರಿಕ್ಯುಲೇಶನ್ ಮುಗಿಸಿ ಇಂಟರ್ ಸೇರಿದರು. ಬ್ರಿಟಿಷರು ನಮ್ಮ ದೇಶವನ್ನಾಳುತ್ತಿದ್ದ ಕಾಲ ಅದು ಸ್ವದೇಶಿ ವಸ್ತುಗಳನ್ನು ಧರಿಸುವಂತಿರಲಿಲ್ಲ. ಬಿಳಿಯರಿಗೆ ತಲೆಬಾಗಿ ನಡೆಯುವ ಸ್ಥಿತಿ. ಜನರಲ್ಲಿ ಯೋಚನಾಶಕ್ತಿಯೇ ಕುಗ್ಗಿ ಹೋಗಿತ್ತು. ಸಾಹನಿಯವರಿಗೆ ದೇಶದ ಹೀನ ಸ್ಥಿತಿಯ ಅರಿವಾಗಿತ್ತು.

ರಾವಲ್ಪಿಂಡಿಯಲ್ಲಿ ಇಂಗ್ಲಿಷ್ ಸಿನಿಮಗಳೇ ಬರುತ್ತಿದ್ದವು. ಭಾರತೀಯ ಮೂಕ ಚಲನಚಿತ್ರಗಳಿಗೂ ಇಂಗ್ಲಿಷ್ ಹೆಸರುಗಳಿರುತ್ತಿದ್ದವು. ವಿಕ್ಟರ್, ಹ್ಯೂಗೋ, ಚಾರ್ಲ್ಸಡಿಕನ್ಸ್‌ರಂತಹ ಪ್ರಸಿದ್ಧ ಪಾಶ್ಚಾತ್ಯ ಬರಹಗಾರರ ಕಥೆಗಳನ್ನಾಧರಿಸಿದ ಇಂಗ್ಲಿಷ್ ಸಿನಿಮಗಳೂ ಬರುತ್ತಿದ್ದವು.  ಪರದೆಯ ಮೇಲೆ ಇಂಗ್ಲಿಷ್ ವಾಕ್ಯಗಳನ್ನು ತೋರಿಸ ಲಾಗುತ್ತಿತ್ತು. ಇದರಿಂದ ಭಾಷಾಜ್ಞಾನವು ಹೆಚ್ಚುತ್ತಿತ್ತು. ಸಾಹನಿಯವರು ಇಂಥ ಚಿತ್ರಗಳನ್ನು ನೋಡಿದರು. ಅದು ಅವರಿಗೆ ಕಲಿಯುವ ಸಾಧನ ಕೂಡ. ಇಂಗ್ಲಿಷ್ ಚಿತ್ರಗಳ ನಟರ ಅಭಿನಯ ಅದ್ಭುತವಾಗಿರುತ್ತಿತ್ತು. ಒಂದೇ ಒಂದು ಬೇಸರದ ಸಂಗತಿ ಎಂದರೆ ಚಿತ್ರ ಮುಗಿದೊಡನೆ ಪ್ರೇಕ್ಷಕರು ಯಾರೇ ಇರಲಿ ಎದ್ದು ನಿಂತು ‘ಗಾಡ್ ಸೇವ್ ದಿ ಕಿಂಗ್’ ಎಂದು ಹೇಳಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಗೌರವ ಸಲ್ಲಿಸಬೇಕಾಗುತ್ತಿತ್ತು. ಸ್ವಲ್ಪ ತಡವಾದರೂ ಏಟು ತಿನ್ನಬೇಕಾಗುತ್ತಿತ್ತು. ಸಾಹನಿಯವರಿಗೆ ಇದು ಸಹಿಸಲಾರದ ಸಂಗತಿಯಾಯಿತು.

೧೯೩೦ರಲ್ಲಿ ಸಾಹನಿ ರಾವಲ್ಪಿಂಡಿ ಬಿಟ್ಟು ಲಾಹೋರಿನ ಸರ್ಕಾರಿ ಕಾಲೇಜನ್ನು ಸೇರಿದರು. ಲಾಹೋರ್ ಪಂಜಾಬಿನ ದೊಡ್ಡ ಪಟ್ಟಣ, ಒಳ್ಳೆ ಸಾಂಸ್ಕೃತಿಕ ಕೇಂದ್ರವೂ ಹೌದು. ಸಾಹನಿಯವರಿಗೆ ಉಡಲು ಉಣಲು ಕೊರತೆಯಿರಲಿಲ್ಲ. ಅವರ ಜೀವನಕ್ಕೆ ದೊಡ್ಡ ಓದು ಓದಿ ಯಾವುದೂ ಕೆಲಸ ಹುಡುಕಬೇಕಿರಲಿಲ್ಲ. ‘ಮನಸ್ಸಿನ ಸಂತೋಷಕ್ಕಾಗಿ ಓದುತ್ತೇನೆ’ ಎಂದು ಕಾಲೇಜ್ ಸೇರಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕ ಬುಖಾರಿಯವರು ಸಾಹನಿಯವರ ಮೇಲೆ ಪ್ರಭಾವ ಬೀರಿದರು. ಕಾಲೇಜಿನ ನಾಟಕ ಮಂಡಳಿಯ ಹಲವಾರು ನಾಟಕಗಳಲ್ಲಿ ಸಾಹನಿ ಪಾತ್ರವಹಿಸಿದರು. ಅಲ್ಲಿಂದ ಅವರಿಗೆ ಕಲೆ ಪ್ರಧಾನ ವಿಷಯ ವಾಯಿತು. ಬುಖಾರಿಯವರು ಸಾಹನಿಯವರಲ್ಲಿದ್ದ ಪ್ರತಿಭೆಗೆ ಜೀವ ತುಂಬಿದರು.‘ಮನುಷ್ಯನಿಗೆ ಗುರಿ ಒಂದಿರಬೇಕು. ಆ ಗುರಿ ಮುಟ್ಟಲು ಎಷ್ಟೇ ಕಷ್ಟಗಳು ಬಂದರೂ ಅವನು ಅದನ್ನು ಎದುರಿಸಬೇಕು’ ಎಂದು ಅವರು ಸಾಹನಿಯವರಿಗೆ ಬುದ್ಧಿವಾದ ಹೇಳುತ್ತಿದ್ದರು. ಈ ಮಾತುಗಳನ್ನು ಸಾಹನಿ ಎಂದೂ ಮರೆಯಲಿಲ್ಲ. ಕಾಲೇಜಿನಲ್ಲಿ ಚೇತನ್ ಆನಂದ್ (ಪ್ರಸಿದ್ಧ ನಟ ದೇವಾನಂದರ ಸಹೋದರ) ಇವರ ಒಳ್ಳೆಯ ಮಿತ್ರರು. ಲಾಹೋರಿನಲ್ಲಿ ಇವರ ಇನ್ನೊಬ್ಬ ಒಳ್ಳೆ ಮಿತ್ರ ಪ್ರಸಿದ್ಧ ಕತೆಗಾರ ಕೃಷ್ಣ ಚಂದರ್. ಸಾಹನಿ ಕಾಲೇಜಿನಲ್ಲಿದ್ದಾಗ ಇಂಗ್ಲಿಷನಲ್ಲಿ ಕವಿತೆಗಳನ್ನು ಹೆಣೆಯುತ್ತಿದ್ದರು. ಕಾಲೇಜ್ ಪತ್ರಿಕೆಯೊಂದರಲ್ಲಿ ಅವು ಅಚ್ಚಾದವು.

೧೯೩೧ರಲ್ಲಿ ಭಾರತದಲ್ಲಿ ಪ್ರಥಮ ವಾಕ್ಚಿತ್ರ ‘ಆಲಂ ಅರಾ’ ತಯಾರಾಯಿತು. ಅದರಲ್ಲಿ ಹಿಂದಿ ಚಿತ್ರರಂಗದ ನಟ ಸಾಮ್ರಾಟ್ ಪೃಥ್ವಿರಾಜ್ ಕಪೂರರು ಅಭಿನಯಿಸಿದ್ದರು. ಲಾಹೋರಿನಲ್ಲಿ ಸಾಹನಿ ಆ ಚಿತ್ರವನ್ನು ನೋಡಿದರು. ಮುಂದೆ ಕಲ್ಕತ್ತೆಯ ನ್ಯೂ ಥಿಯೇಟರ‍್ಸ್ ಸಂಸ್ಥೆ ತಯಾರಿಸಿದ ‘ಪೂರ್ಣಭಕ್’ ಸಿನಿಮ ನೋಡಿದ ಬಳಿಕ ಸಾಹನಿ ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಒಲವು ಮೂಡಿತು. ದೇಶಭಕ್ತಿ ಜಾಗೃತವಾಯಿತು.

ಶಾಂತಿನಿಕೇತನದಲ್ಲಿ

ಸಾಹನಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಗಳಿಸಿದರು. ಕೆಲಕಾಲ ರಾವಲ್ಪಿಂಡಿಯಲ್ಲಿದ್ದು ವಸ್ತ್ರಗಳನ್ನು ಮಾರುವ ಕೆಲಸ ಮಾಡಿದರು. ಆದರೆ ಅವರ ಪ್ರಪಂಚವೇ ಬೇರೆ. ಅವರ ಕಲಾಪ್ರೇಮ ಇನ್ನೂ ಹೋಗಿರಲಿಲ್ಲ. ಅದೂ ಅಲ್ಲದೆ ಎಂ.ಎ. ಮಾಡಿದ್ದ ಅವರಿಗೆ ಈ ಉದ್ಯೋಗ ನಡೆಸಲು ಕಷ್ಟವೇ ಆಗಿತ್ತು. ದಮಯಂತಿ ಎಂಬಾಕೆ ಯೊಡನೆ ಅವರ ವಿವಾಹವಾಯಿತು. ದಮಯಂತಿ ಸಾಹನಿ ಬಿ. ಎ. ಪದವೀಧರೆ, ಸಂಗೀತ ಹಾಗೂ ಸಾಹಿತ್ಯ  ಪ್ರಿಯೆ ಯಾಗಿದ್ದರು.  ೧೯೩೭ರಲ್ಲಿ ಸಾಹನಿ ತಮ್ಮ ಪತ್ನಿಯೊಂದಿಗೆ ಕಲ್ಕತ್ತೆಗೆ ಬಂದರು. ಅಲ್ಲಿ, ಹಿಂದಿಯ ಖ್ಯಾತ ಬರಹಗಾರ ರಾಗಿದ್ದ ಹಜಾರಿಪ್ರಸಾದ್ ದ್ವಿವೇದಿಯವರ ಕೃಪೆಯಿಂದ ಶಾಂತಿನಿಕೇತನದಲ್ಲಿ ಅಧ್ಯಾಪಕ ಹುದ್ದೆ ದೊರೆಯಿತು. ವಿಶ್ವಕವಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ್ದ ಶಾಂತಿನಿಕೇತನಕ್ಕೆ ವಿಶ್ವವಿದ್ಯಾನಿಲಯದಷ್ಟೇ ಮಹತ್ವವಿತ್ತು. ತಿಂಗಳಿಗೆ ೫೦ ರೂಪಾಯಿ ಸಂಬಳವಾದರೂ ಸಾಹನಿ ಅಧ್ಯಾಪಕ ವೃತ್ತಿ ಹಿಡಿದರು. ಆ ಕೆಲಸ ಅವರಿಗೆ ತೃಪ್ತಿ ನೀಡಿತ್ತು.

ಶಾಂತಿನಿಕೇತನದಲ್ಲಿ ಸಾಹಿನಿ ಹಲವಾರು ವಿಚಾರ ಪ್ರಚೋದಕ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದರು. ತಾವೂ ಅಭಿನಯಿಸುತ್ತಿದ್ದರು. ಸ್ತ್ರೀಪಾತ್ರಗಳನ್ನೂ ನಿರ್ವಹಿಸಿದರು.

ಒಂದು ಘಟನೆ

ಶಾಂತಿನಿಕೇತನದ ಒಬ್ಬ ವಿದ್ಯಾರ್ಥಿ ಆಂಗ್ಲ ನಾಟಕಕಾರ ಬರ್ನಾಡ್ ಶಾ ರವರ ‘ಆರ್ಮ್ಸ್ ಅಂಡ್ ದಿ ಮ್ಯಾನ್’ ನಾಟಕವನ್ನು ಹಿಂದಿಗೆ ಅನುವಾದಿಸಿದ್ದ. ಸಾಹನಿ ಅವರಿಗೆ ಅದು ಬಲು ಮೆಚ್ಚುಗೆಯಾಯಿತು. ‘ಎಲ್ಲರೂ ಸೇರಿ ಅಭಿನಯಿಸೋಣ’ ಎಂದರು. ಅವರದೇ ನಿರ್ದೇಶನ. ನಾಟಕವಾಡುವ ದಿನ ಹತ್ತಿರ ಬಂತು. ಪಾತ್ರಧಾರಿಗಳಿಗೆ ಪೋಷಾಕು ವಸ್ತ್ರ ಬೇಕಲ್ಲ? ನಾಟಕದಲ್ಲಿ ಕೆಲವು ಸೈನಿಕರ ಪಾತ್ರಗಳ ಅಗತ್ಯವಿತ್ತು. ಅವರಿಗೆ ಬಂದೂಕು, ಕತ್ತಿ, ಬೂಟುಗಳು, ಶಿರಸ್ತ್ರಾಣ (ಹೆಲ್ಮೆಟ್) ಎಲ್ಲವನ್ನೂ ಒದಗಿಸಬೇಕಾಗಿತ್ತು. ಇವೆಲ್ಲವನ್ನು ಕಲಕತ್ತೆಯಿಂದ ಬಾಡಿಗೆಗೆ ತರಬೇಕಾಗಿತ್ತು. ಅದಕ್ಕೆ ಹಣ ಬೇಕು. ಎಲ್ಲಿಗೆ ಹೋಗುವುದು? ನಾಟಕವನ್ನೆ ನಿಲ್ಲಿಸಿ ಬಿಡೋಣ ಎಂದಿತು ಅವರ ಮನಸ್ಸು. ಈ ವಿಷಯ ಶಾಂತಿನಿಕೇತನದ ಪ್ರಸಿದ್ಧ ಕಲಾಕಾರ ನಂದಲಾಲ್ ಬೋಸರ ಕಿವಿಗೆ ಬಿತ್ತು. ಓಡಿ ಬಂದರು ಸಾಹನಿ ಅವರನ್ನು ಕಲಾಭವನಕ್ಕೆ ಕರೆದೊಯ್ದು ಕೇಳಿದರು.

‘ಸಾಹನಿ, ಸೈನಿಕರ ವಸ್ತುಗಳು ಬೇಕು ಎನ್ನುತ್ತಿ ಒಳ್ಳೆಯದು. ಆದರೆ ಬರ್ನಾಡ್ ಶಾರ ನಾಟಕ ನಮ್ಮ ದೇಶ ಕುರಿತದ್ದಲ್ಲ. ಬೇರೆ ದೇಶದ್ದು. ಅಲ್ಲಿನ ಸೈನಿಕರ ಉಡುಪು ಎಂತಹದು ನೀನು ಬಲ್ಲೆಯಾ?’

ಸಾಹನಿ ‘ಇಲ್ಲ’ ಎಂದು ಹೇಳಿ ಕುಳಿತರು. ‘ಹಾಗಾದರೆ, ತಡಿ’ ಎನ್ನುತ್ತ ನಂದಲಾಲ್ ಬೋಸ್ ಕಲಾಭವನದ ಗ್ರಂಥ ಭಂಡಾರದಿಂದ ಒಂದು ದೊಡ್ಡ ಪುಸ್ತಕ ತಂದರು. ಅದರಲ್ಲಿ ಎಲ್ಲಾ ದೇಶಗಳ ಸೈನಿಕರ ಉಡುಪುಗಳ ಚಿತ್ರಗಳನ್ನು ಬಣ್ಣದಲ್ಲಿ ಮುದ್ರಿಸಲಾಗಿತ್ತು. ಬೋಸರು ಸಾಹನಿ ಅವರಿಗೆ ಅದನ್ನು ತೋರಿಸಿದರು. ಸಾಹನಿ ಪುಸ್ತಕದಲ್ಲಿ ತಮಗೆ ಬೇಕಾದ ವಿವರಗಳಿರುವ ಚಿತ್ರವನ್ನು ತೋರಿಸಿದರು. ಬೋಸರು ಶಾಲಾ ವಿದ್ಯಾರ್ಥಿಗಳನ್ನು ಕರೆಯಿಸಿ ಮಣ್ಣು, ಸಿಮೆಂಟ್ ಟಿಶ್ಯೂಕಾಗದ ಮುಂತಾದವುಗಳಿಂದ ಸೈನಿಕರ ಸಲಕರಣೆಗಳನ್ನು ತಯಾರಿಸಲು ಹೇಳಿದರು. ವಿದ್ಯಾರ್ಥಿ ಗಳಿಗೂ ಬೇಸರ ವಾಗಲಿಲ್ಲ. ಎರಡೇ ದಿನಗಳಲ್ಲಿ ಎಲ್ಲ ತಯಾರಾದವು. ಹೆಚ್ಚು ಖರ್ಚಾಗಲಿಲ್ಲ. ಸಾಹನಿಯವರಿಗೆ ಸಂತೋಷವಾಗಿ ಬೋಸರಿಗೆ ಕೃತಜ್ಞತೆ ಸಲ್ಲಿಸಿದರು. ಬೋಸರೆಂದರು ‘ನೋಡು, ಯಾವಾಗಲೂ ಒಂದು ಮಾತನ್ನು ನೆನಪಿಡು. ಸಾವಿರಾರು ರೂಪಾಯಿ ಖರ್ಚುಮಾಡಿ ಎಂಥ ದಡ್ಡನಾದರೂ ನಾಟಕವಾಡಬಹುದು. ಆದರೆ ಅದೇ ನಾಟಕವನ್ನು ಕೇವಲ ಹತ್ತೇ ರೂಪಾಯಿನ ಖರ್ಚಿನಲ್ಲಿ ಆಡಿತೋರಿಸುವವನು ನಿಜವಾದ ಕಲಾಕಾರ’.

ಸೇವಾಗ್ರಾಮದ ಸೇವಕನಾಗಿ

ದಮಯಂತಿಯವರ ಸಲಹೆಯಂತೆ ಸಾಹನಿ ಕಲ್ಕತ್ತೆಗೆ ಹೋಗಿ ಖ್ಯಾತ ನಿರ್ದೇಶಕ ಪಿ.ಸಿ. ಬರುವಾರನ್ನು ನೋಡಿ ಬಂದರು. ಬರುವಾ ಸಾಹನಿಯವರಿಗೆ ತಮ್ಮ ಚಿತ್ರದಲ್ಲಿ ಒಂದು ಪಾತ್ರ ಕೊಡುತ್ತೇನೆಂದು ಹೇಳಿದರು. ಆದರೆ ಸಾಹನಿಯವರಿಗೆ ಚಲನಚಿತ್ರ ಸೇರಲು ಇನ್ನೂ ಮನಸ್ಸಾಗದೆ ತಮ್ಮ ಪತ್ನಿಯೊಡನೆ ೧೯೩೯ರಲ್ಲಿ ಸೇವಾಗ್ರಾಮಕ್ಕೆ ಬಂದರು. ಸೇವಾಗ್ರಾಮ ಮಹಾರಾಷ್ಟ್ರದ ವರ್ಧಾದಿಂದ ಐದು ಮೈಲಿ ದೂರದಲ್ಲಿನ ಮಾದರಿ ಗ್ರಾಮ. ಮಹಾತ್ಮ ಗಾಂಧೀಜಿಯವರಿಂದ ರೂಪಿತವಾಗಿತ್ತು. ಬಲರಾಜ್ ಸಾಹನಿಯವರಿಗೆ ಅಲ್ಲಿಯ ವಾತಾವರಣ ತುಂಬಾ ಹಿಡಿಸಿತು. ಅವರ ಮೃದು ಸ್ವಭಾವಕ್ಕೆ ಸರಿಯಾದ ಸ್ಥಳವಾಗಿತ್ತದು. ಅಲ್ಲಿ ಶಿಕ್ಷಕರಾದ ಮೇಲೆ ಸಿನಿಮಾ ಖಯಾಲಿ ಬಿಟ್ಟು ಹೋಗಿತ್ತು. ಸೇವಾ ಗ್ರಾಮದಲ್ಲಿ ಆಗಾಗ ದೇಶದ ಪ್ರಸಿದ್ಧ ನಾಯಕರುಗಳಾಗಿದ್ದ ಜವಹರಲಾಲ್ ನೆಹರೂ, ವಲ್ಲಭಾಬಾಯಿ ಪಟೇಲ್, ಮೌಲಾನಾ ಅಜಾದ್ ಮೊದಲಾದವರುಗಳನ್ನು  ನೋಡುವ, ಭೇಟಿ ಮಾಡುವ ಸುಯೋಗ ಒದಗಿತು. ಶಿಕ್ಷಣ ಸಂಸ್ಥೆಗೆ ಜಾಕೀರ್ ಹುಸೇನ್ ಮುಖ್ಯಸ್ಥರು. ಅಲ್ಲಿದ್ದಾಗಲೇ ಸಾಹನಿ ‘ಹಂಸ’ ಮೊದಲಾದ ಹಿಂದಿ ಪತ್ರಿಕೆಗಳಿಗೆ ಕಥೆಗಳನ್ನು ಬರೆಯತೊಡಗಿದರು. ಸಾಹಿತ್ಯದ ಅಭ್ಯಾಸವೂ ಜೊತೆಗೆ ನಡೆಯಿತು.

ಬಿ.ಬಿ.ಸಿ ಸುದ್ದಿಗಾರರಾಗಿ

ಸಾಹನಿ ೧೯೪೦ ರಲ್ಲಿ ಲಂಡನ್ನಿಗೆ ಪ್ರಯಾಣ ಬೆಳೆಸಿದರು. ಗಂಡ ಹೆಂಡತಿ ಇಬ್ಬರಿಗೂ ಬಿ.ಬಿ.ಸಿ. ವಾರ್ತಾಪ್ರಸಾರ ಇಲಾಖೆಯಲ್ಲಿ ಕೆಲಸ. ಬಲರಾಜ್ ಸಾಹನಿ ಅವರು ಸುದ್ದಿಗಾರರಾಗಿ ಸೇರಿದರು. ಲಂಡನ್ನಿನ ಭೋಗ ಜೀವನವನ್ನು ನೋಡಿ ಸಾಹನಿ ಅವರಿಗೆ ಆಶ್ಚರ್ಯ ವಾಯಿತು. ಆದರೆ ಅವರು ಅದಕ್ಕೆ ಮಾರು ಹೋಗಲಿಲ್ಲ. ತಮ್ಮ ದೇಶದ ಸ್ಥಿತಿಯನ್ನು ಲಂಡನ್ ಜೀವನಕ್ಕೆ ಹೋಲಿಸಿ ನೋಡಿದರು. ರೇಡಿಯೊ ನಿಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಬಾಬ್ ಹೋಪ್, ಬಾಬ್ ಡೇನಿಯಲ್, ವಿವಿಯನ್ ಲೀ ಮೊದಲಾದ ಪ್ರಸಿದ್ಧ ಕಲಾವಿದರನ್ನೂ ಹತ್ತಿರದಿಂದ ನೋಡುವ ಅವಕಾಶ ಲಭಿಸಿತು. ಇಂಥವರ ಕಾರ್ಯಕ್ರಮಗಳನ್ನು ನೋಡಿದಾಗ ‘ಕಲೆಗೆ ಪ್ರೇರಣೆ ಯಾವುದೋ ದಿವ್ಯ ಲೋಕದಿಂದ ಬರುವುದಿಲ್ಲ. ಸ್ವಯಂ ಶ್ರಮ, ಸಂಯಮ ಮತ್ತು ಅನುಸಂಧಾನಗಳಿಂದ ಕಲೆ ಸಿದ್ಧಿಸುವುದು’ ಎಂಬುದು ಅವರಿಗೆ ಅರಿವಾಯಿತು. ಲಂಡನ್‌ನಲ್ಲಿ ಯೂನಿಟಿ ಥಿಯೇಟರ್‌ನ ಸದಸ್ಯರಾಗಿ ಅಲ್ಲಿ ಪ್ರದರ್ಶಿತವಾಗುತ್ತಿದ್ದ ನಾಟಕಗಳನ್ನು ದಂಪತಿಗಳಿಬ್ಬರೂ ತಪ್ಪದೆ ನೋಡುತ್ತಿದ್ದರು. ಕೆಲವು ರಷ್ಯನ್ ಸಿನಿಮಗಳನ್ನು ನೋಡಿದರು. ಅವು ಬಹಳ ಹಿಡಿಸಿದವು. ರಷ್ಯನ್ ಸಾಹಿತ್ಯ ವನ್ನು ಓದಿ ಅಲ್ಲಿನ ವಿಚಾರಗಳನ್ನು ತಿಳಿದು ಕೊಂಡರು. ಲಂಡನ್‌ನಲ್ಲಿ ಅವರು ‘ಸರ್ಕಸ್’ ಎಂಬ ಚಿತ್ರವನ್ನು ನೋಡಿದರು. ಅದರಲ್ಲಿ ‘ಕಪ್ಪು-ಬಿಳಿ, ಜಾತಿ-ಪಂಥ ಇವುಗಳಲ್ಲಿ ಭೇದ-ಭಾವ ತೋರಿಸುವುದು ಸರಿಯಲ್ಲ’ ಎಂಬುದನ್ನು ಪರಿಣಾಮ ಕಾರಿಯಾಗಿ ಚಿತ್ರಿಸಲಾಗಿತ್ತು. ಸಾಹನಿ ಲಂಡನ್ನಿನಲ್ಲಿ ನಾಲ್ಕು ವರ್ಷ ಕಳೆದರು. ಅಲ್ಲಿಗೆ ಬರುವ ಮುನ್ನ ತಮ್ಮ ಪ್ರೀತಿಯ ಪುತ್ರ ಅಜಯ್ ಸಾಹನಿ (ಇಂದಿನ ಚಿತ್ರರಂಗದ ಖ್ಯಾತ ನಟ ಪರೀಕ್ಷಿತ್ ಸಾಹನಿ)ಯನ್ನು ತಾಯಿಯ ಬಳಿ ಬಿಟ್ಟಿದ್ದರು.

ಲಂಡನ್‌ನಲ್ಲಿದ್ದಾಗ ಸಾಹನಿ ಅವರಿಗೆ ಚಲನಚಿತ್ರ, ರಂಗಭೂಮಿ ಇವುಗಳಲ್ಲಿ ವಿಶೇಷ ಅಭಿರುಚಿ ಬೆಳೆಯಿತು. ಭಾರತಕ್ಕೆ ಹಿಂದಿರುಗಲು ಮನಸ್ಸು ಮಾಡಿದರು.

ಮುಂಬಯಿಗೆ

೧೯೪೪ ರಲ್ಲಿ ಸಾಹನಿ ಮುಂಬಯಿಗೆ ಬಂದರು. ಮುಂಬಯಿ ಕಲಾಕೇಂದ್ರ. ಪ್ರಸಿದ್ಧ ಚಿತ್ರ ನಿರ್ಮಾಪಕರ ತೌರೂ ಹೌದು. ವಿ ಶಾಂತರಾಮರು ತಮ್ಮ ಪ್ರಭಾತ್ ಸ್ಟುಡಿಯೊ ಮೂಲಕ ಹೆಸರಾಗಿದ್ದರು. ಸಿನಿಮದಲ್ಲಿ ನಟಿಸ ಬೇಕೆಂಬ ಆಸೆ ಹೊತ್ತು ಮುಂಬಯಿಗೆ ಬಂದವರೆಷ್ಟೊ ಮಂದಿ. ಬಹು ಮಂದಿಗೆ ಅಲ್ಲಿ ಕಾದಿದ್ದುದು ನಿರಾಸೆಯೇ. ಒಂದು ಸಿನಿಮದಲ್ಲಿ ಸಣ್ಣ ಪಾತ್ರವನ್ನೊಂದು ಗಿಟ್ಟಿಸಿಕೊಳ್ಳಲು ನಾಲ್ಕಾರು ದಿನಗಳು ಕಾಯಬೇಕಾಗಿತ್ತು. ತುಂಬಾ ದುಡ್ಡು ಮಾಡಬಹುದೆಂಬ ಕಲ್ಪನೆಯಿಂದಲೇ ಸಿನಿಮ ಸೇರಲು ಹಲವರು ತವಕಿಸುತ್ತಿದ್ದರು. ಬಲರಾಜ್ ಸಾಹನಿ ಅವರಿಗೆ ಮಂಬಯಿಯಲ್ಲಿ ತಮ್ಮ ಹಳೆಯ ಮಿತ್ರ ಚೇತನ್ ಆನಂದರು ದೊರೆತರು. ಅವರು ಚಿತ್ರ ತೆಗೆಯುವ ಆಸೆ ಹೊತ್ತಿದ್ದರು. ಅವರ ಮೂಲಕ ಸಾಹನಿ ಅವರಿಗೆ ಡೇವಿಡ್ ಅಬ್ರಹಾಂ, ಕರನ್ ದಿವಾನ್, ಶ್ಯಾಮ್ ಮೊದಲಾದ ನಟರ ಪರಿಚಯವಾಯಿತು.

ಚೇತನ್ ಆನಂದರ ಮನೆಯಲ್ಲಿ ಸಾಹನಿ ಹೆಂಡತಿ, ಮಗಳೊಡನೆ ಉಳಿದುಕೊಂಡರು.

ನಿರಾಶೆಯ ಸುಳಿಯಲ್ಲಿ

ಹೊಸನಟರೆಂದರೆ ನಿರ್ಮಪಕರಿಗೆ ಚೆಲ್ಲಾಟ ವಾಡುವ ವಿಷಯವಾಗಿತ್ತು. ‘ಏಳುಗಂಟೆಗೆ ಬನ್ನಿ’ ಎಂದು ತಿಳಿಸಿ ಹತ್ತು ಗಂಟೆಯಾದರೂ ಪತ್ತೆ ಇರುತ್ತಿರಲಿಲ್ಲ. ಅದೇ ಹೆಸರು ಮಾಡಿದ್ದ ನಟ ನಿಶ್ಚಿತ ಅವಧಿಗಿಂತ ನಾಲ್ಕು ಗಂಟೆ ತಡವಾಗಿ ಬಂದರೂ, ಅವರನ್ನು ಗೌರವದಿಂದ ಕಾಣುತ್ತಿದ್ದರು. ಇಂಥ ಪ್ರಸಂಗಗಳು ಸಾಹನಿಯವ ರಿಗಾಗುತ್ತಿರಲಿಲ್ಲ. ಸಮಯಕ್ಕೆ ಅವರು ವಿಶೇಷ ಮಹತ್ವ ನೀಡಿದ್ದರು. ಉತ್ತಮ ಅಭಿನಯಕ್ಕಾಗಿ ಹಾತೊರೆಯು ತ್ತಿದ್ದರು.   ಸದಾ ಚಿಂತನೆ ಮಾಡುತ್ತಿದ್ದರು. ಈ ಸಮಯ  ದಲ್ಲಿ ಅವರ ಸೋದರ ಮಾವ ಜೆ.ಎನ್. ಸಾಹನಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿದ್ದರು. ಅವರ ನೆರವಿನಿಂದ ಖ್ಯಾತ ಚಿತ್ರಕಥಾ ಲೇಖಕ ಇಂದ್ರರಾಜ್ ಆನಂದರನ್ನು ಭೇಟಿ ಮಾಡಿದರು. ಅಲ್ಲೂ ಅವರ ಅಭಿರುಚಿಗೆ ತಕ್ಕ ಸನ್ನಿವೇಶ ದೊರೆಯಲಿಲ್ಲ. ಲಂಡನ್‌ನಿಂದ ತಂದ ಹಣವೆಲ್ಲ ಖರ್ಚಾಗಿತ್ತು. ಕೆಲಸಕ್ಕಿದ್ದ ಕಾಲೇಜು ಗೆಳೆಯನ ನೆರವಿನಿಂದ ಮುಂಬಯಿಯಲ್ಲಿನ ಬ್ಯಾಂಕೊಂದ ರಲ್ಲಿ ಸಾಲಪಡೆದರು. ಅಲ್ಪ ಹಣ ಎಷ್ಟು ದಿನವಿ ದ್ದೀತು? ಖರ್ಚಾಯಿತು. ಅದನ್ನು ತೀರಿಸುವ ಬಗೆ ? ಕೆಲವು ಪುಸ್ತಕಗಳನ್ನು ಅನುವಾದಿಸುವ ಕಾರ್ಯ ಮಾಡಿದರು. ಫಲ್ಮ್ಸ್ ಡಿವಿಜನ್‌ಗೆ ಸಾಹಿತ್ಯ ಒದಗಿಸಿ ಹಣ ಸಂಪಾದಿಸಿದರು. ಬಂದ ಹಣವನ್ನು ಸಾಲಕ್ಕೆ ಕಟ್ಟಿದರು. ಚಲನಚಿತ್ರಗಳಲ್ಲಿ ನಟಿಸಬೇಕೆಂಬ ಉದ್ದೇಶವನ್ನು ತಲುಪಿದ್ದರು. ಅದಕ್ಕಾಗಿ ಸುತ್ತಾಟ ಪ್ರಯತ್ನ. ಹಣದಾಸೆಗೆ ಪಾತ್ರ ಮಾಡಬೇಕೆಂದಿದ್ದರೆ ಹೇಗೋ ಅವಕಾಶ ದೊರೆತಿರುತ್ತಿತ್ತು. ಆದರೆ ಅದು ಅವರ ಉದ್ದೇಶವಾಗಿರಲಿಲ್ಲ.

ಇಪ್ಟಾ

ಮುಂಬಯಿಯ ದೇವಘರ್ ಹಾಲ್ ಪ್ರಗತಿಶೀಲ ಲೇಖಕ ಸಂಘ ಹಾಗೂ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ನಿನ (ಇಪ್ಪಾ) ಚಟುವಟಿಕೆಗಳ ಕೇಂದ್ರ ವಾಗಿತ್ತು. ದಿನವೂ ನಾಟಕಗಳ ತರಬೇತಿ, ಚರ್ಚೆ. ಸಂಸ್ಥೆಯ ಸದಸ್ಯರಿಂದಲೇ ನಾಟಕ ರಚನೆ. ಸಾಹನಿ ಇಪ್ಪಾಗೆ ಸದಸ್ಯರಾದರು. ಅಲ್ಲಿ ಅವರಿಗೆ ದಿವಂಗತ ಅಯೂಬ್ ಖಾನ್ (ನಟ ದಿಲೀಪ್ ಕುಮಾರರ ಸಹೋದರ) ನಿರ್ದೇಶಕ ನಿತಿನ್ ಬೋಸ್, ನಾಸಿರ್ ಖಾನ್, ಕೆ.ಎ. ಅಬ್ಬಾಸ್ (ಖ್ವಾಜಾ ಅಹ್ಮದ್ ಅಬ್ಬಾಸ್) ಅವರುಗಳ ಸ್ನೇಹ ಲಭಿಸಿತು. ನಿತಿನ್ ಭೋಸ್ ‘ಮಜ್‌ದೂರ್’ ಎಂಬ ಚಿತ್ರ ತೆಗೆದಿದ್ದರು. ಬಡಜನರನ್ನು ಕುರಿತು ಸತ್ಯವನ್ನು ಪ್ರತಿಪಾದಿಸುವ ಚಿತ್ರ ಅದು. ಸಾಹನಿ ಅದನ್ನು ಮೆಚ್ಚಿಕೊಂಡರು; ಕೂಲಿ, ಬಡ ವರ್ಗದ ಜನ ಏಳಿಗೆಯಾದುದನ್ನು ಕಂಡು ಮಮ್ಮಲ ಮರುಗಿದರು. ವ್ಯಕ್ತಿಯನ್ನು ತಿಳಿಯಬೇಕಾದರೆ ಅವನು ಇರುವ ಸಮಾಜವನ್ನೂ ನೋಡಬೇಕು ಎಂಬುದು ಅವರಿಗೆ ಮನದಟ್ಟಾಯಿತು. ಒಂದು ದಿನ ಅವರಿಗೆ ರಷ್ಯದ ಮಹಾ ವ್ಯಕ್ತಿ ಕಾರ್ಲ್ ಮಾರ್ಕ್ಸನ ‘ಕ್ಯಾಪಿಟಲ್’ ಪುಸ್ತಕ ದೊರೆಯಿತು. ಪೂರಾ ಓದಿದರು. ಮಾರ್ಕ್ಸ್‌ವಾದ ಹಿಂದು ದರ್ಶನ, ವಾಸ್ತವ ಪರಿಸ್ಥಿತಿಯನ್ನು ಅರಿಯುವ ಹಾದಿಯನ್ನು ಅದು ತೋರಿಸುತ್ತದೆ ಎಂದು ಅವರಿಗೆ ಎನ್ನಿಸಿತು. ಅದು ಅವರಿಗೆ ಪ್ರಿಯವಾದ ವಿಷಯವೂ ಆಯಿತು.

ಇಪ್ಪಾದಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ಧವನ್, ಅವನಿದಾಸ್ ಗುಪ್ತ ಅವರು ನಾಟಕಗಳನ್ನು ಬರೆಯುತ್ತಿದ್ದರು. ಇವು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವ ನಾಟಕ ಗಳಾಗಿರುತ್ತಿದ್ದವು. ಇಡೀ ಹಿಂದೂಸ್ಥಾನದಲ್ಲಿ ಇಪ್ಟಾ ಒಂದು ಆಂದೋಳನವನ್ನೇ ನಡೆಸಿತು. ಬ್ರಿಟಿಷರ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿತು. ಸಾಹನಿ ಅವರು ಅಲ್ಲಿನ ನಾಟಕಗಳಲ್ಲಿ ಭಾಗವಹಿಸಿ ಅವನ್ನು ಕಲಾತ್ಮಕವನ್ನಾ ಗಿಸುತ್ತಿದ್ದರು.

ದಮಯಂತಿ ಸಾಹನಿ ಅವರಿಗೆ ಪೃಥ್ವಿರಾಜ ಕಪೂರರ ಪೃಥ್ವಿ ಥಿಯೇಟರ‍್ಸ್‌ನಲ್ಲಿ ಕೆಲಸ ದೊರೆಯಿತು. ಅವರು ಆಡುತ್ತಿದ್ದ ಜನಪ್ರಿಯ ನಾಟಕ ‘ದೀವಾರ್’ (ಗೋಡೆ) ನಲ್ಲಿ ದಮಯಂತಿ ದುಡಿದರು.

ಧರ್ತಿ ಕೆ ಲಾಲ್ (ಮಣ್ಣಿನ ಮಗ)

ಕೆ.ಎ.ಅಬ್ಬಾಸರು ಇಪ್ಟಾ ಸಂಸ್ಥೆಯ ಮೂಲಕ ಚಿತ್ರವೊಂದನ್ನು ತಯಾರಿಸಲು ಮುಂದಾದರು. ಚಿತ್ರದ ಕಥೆಗೆ ಬಂಗಾಲದ ಬರಗಾಲ ಪೀಡಿತರನ್ನು ಕುರಿತ ವಸ್ತು ವನ್ನಾರಿಸಿದ್ದರು. ಅಬ್ಬಾಸರದೇ ಕಥೆ, ನಿರ್ದೇಶನ ಸಾಹನಿ ಅವರು ಅಬ್ಬಾಸರ ಚಿತ್ರಕ್ಕೆ ‘ಧರ್ತಿ ಕೆ ಲಾಲ್’ ಎಂದು ಹೆಸರಿಟ್ಟರು. ಸಾಹನಿ ಅವರಿಗೆ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ದೊರೆಯಿತು. ರೈತರ ಜೀವನವನ್ನು ನಿರೂಪಿಸುವ ಈ ಚಿತ್ರದಲ್ಲಿ ದಮಯಂತಿ ಸಾಹನಿ, ಉಷಾ ಸೇನಗುಪ್ತ, ತೃಪ್ತಿ ಬಾಧುರಿ ಅವರೂ ನಟಿಸಿದರು. ಸಾಹನಿ ಅವರು ನಟಿಸಿದ ಮೊದಲ ಚಿತ್ರವೂ ಇದೇ ಆಯಿತು. ಚಿತ್ರವನ್ನು ಕಲಾತ್ಮಕವಾಗಿ ತಯಾರಿಸಲಾಗಿತ್ತು. ಸಾಹನಿ ಅವರದು ಹೃದಯಂಗಮ ಅಭಿನಯ. ಚಿತ್ರದ ಅಂತ್ಯ ಹೃದಯಸ್ಪರ್ಶಿಯಾಗಿತ್ತು. ಖ್ಯಾತ ನಿರ್ದೇಶಕ ಬಿಮಲ್‌ರಾಯರನ್ನು ಚಿತ್ರ ಆಕರ್ಷಿಸಿತು. ಸಾಹನಿ ಅವರಿಗೆ ‘ಧರ್ತಿ ಕೆ ಲಾಲ್’ ಭವಿಷ್ಯಕ್ಕೆ ನಾಂದಿ ಹಾಕಿಕೊಟ್ಟಿತು. ದಂಪತಿಗಳಿಬ್ಬರೂ ಚಿತ್ರ ನಟರಾದರು. ಹಣಗಳಿಸಿದರೂ ಅದನ್ನು ದೇಶ ಸೇವೆ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದರು ಸಾಹನಿ. ಅನಂತರ ‘ಗುಡಿಯಾ’ದಲ್ಲಿ ಅಭಿನಯಿಸಿದರು.

ಮರಳಿ ರಾವಲ್ಪಿಂಡಿಗೆ

೧೯೪೭ ರ ಏಪ್ರಿಲ್ ೧೭ ರಂದು ದಮಯಂತಿ ಸಾಹನಿ ನಿಧನರಾದರು. ಸಾಹನಿ ಅವರು ದುಃಖ ತಡೆಯದಾದರು. ಈಗ ಅವರು ಇಬ್ಬರು ಮಕ್ಕಳಿಗೆ ತಂದೆ ಪರೀಕ್ಷಿತ್‌ಸಾಹನಿಗೆ ತಂಗಿ ಶಬ್ನಮ್. ಮಕ್ಕಳನ್ನು ಕರೆದುಕೊಂಡು ರಾವಲ್ಪಿಂಡಿಗೆ ಹೋದರು. ಆ ವೇಳೆಗೆ ಪಂಜಾಬ್ ಒಡೆದಿತ್ತು. ಇಬ್ಬಾಗವಾಗಿತ್ತು. ಗಲಭೆ ಎಲ್ಲೆಲ್ಲೋ ಹಲವು ರಾಜಕೀಯ ಪಕ್ಷಗಳು ತಲೆ ದೋರಿದ್ದವು. ತಮ್ಮ ಭೀಷ್ಮ ಸಾಹನಿ ಊರಿನಲ್ಲಿ ಪ್ರಮುಖ ರಾಜಕಾರಣಿ ಯಾಗಿದ್ದರು. ಬಲರಾಜ್ ಸಾಹನಿಯವರ ಆರೋಗ್ಯ ಕೆಟ್ಟಿತು. ವೈದ್ಯರ ಸಲಹೆಯಂತೆ ಕಾಶ್ಮೀರಕ್ಕೆ ಹೋದರು. ಅಲ್ಲಿ ನಿಸರ್ಗದ ರಸದೌತಣ ಅವರಿಗೆ ಸುಖವನ್ನು ಕೊಟ್ಟಿತು. ಸ್ವಲ್ಪ ಕಾಲ ಅಲ್ಲಿ ತಂಗಿದ್ದರು. ಪಂಜಾಬಿ ಸಾಹಿತ್ಯದ ಅಧ್ಯಯನ ಮಾಡುವ ಸಿದ್ಧತೆಯಲ್ಲಿದ್ದರು. ಒಂದು ದಿನ ಪ್ರಸಿದ್ಧ ಲೇಖಕ ಅಮೃತಲಾಲ್ ನಾಗರ್ ಅವರ ಪತ್ರ ಬಂತು. ಅವರು ಸಾಹನಿಯವರನ್ನು ಮುಂಬಯಿಗೆ ಆಹ್ವಾನಿಸಿದ್ದರು. ವೀರೇಂದ್ರ ದೇಸಾಯಿಯವರು ತೆಗೆಯುವ ‘ಗುಂಜನ್’ ಚಿತ್ರಕ್ಕೆ ಸಾಹನಿ ಗೊತ್ತಾಗಿದ್ದರು.

ಮತ್ತೆ ಮುಂಬಯಿಗೆ

೧೯೪೭ರ ಕೊನೆಯಲ್ಲಿ ಸಾಹನಿ ತಮ್ಮ ಮಕ್ಕಳೊಂದಿಗೆ ಮುಂಬಯಿಗೆ ಬಂದರು. ‘ಗುಂಜನ್’ ಚಿತ್ರದಲ್ಲಿ ನಟಿಸಿದರು. ಚಿತ್ರ ಅಷ್ಟು ಹೆಸರು ಮಾಡಲಿಲ್ಲ. ಹಣವನ್ನೂ ಗಳಿಸಲಿಲ್ಲ. ಇದರಿಂದ ಸಾಹನಿ ನಿರಾಶ ರಾಗಲಿಲ್ಲ. ಇಪ್ಟಾ ಸಂಸ್ಥೆ ಇನ್ನೂ ಕೆಲಸ ಮಾಡುತ್ತಿತ್ತು. ಅಲ್ಲಿ ರಾಮರಾವ್ ಎಂಬುವರು ಮುಖ್ಯ ಕಾರ್ಯದರ್ಶಿ. ಸಾಹನಿ ‘ಜಾದೂಕಿ ಕುರ್ಸಿ’ ಎಂಬ ನಾಟಕ ಬರೆದರು. ರಾಮರಾವ್ ನಾಟಕವನ್ನಾಡಲು ನಿಶ್ಚಯಿಸಿದರು. ಮೋಹನ್ ಸೆಹಗಲ್‌ರದು ನಿರ್ದೇಶನ. ನಾಟಕದಲ್ಲಿ ಜವಹರ್‌ಲಾಲ್ ನೆಹರೂರವರ ನೀತಿಗಳನ್ನು ಅಣಕಿಸುವ ವಿಚಾರಗಳಿದ್ದವು. ನಾಟಕ ಜಯಭೇರಿ ಹೊಡೆಯಿತು. ಸಾಹನಿ ಅವರ ಅಭಿನಯ ಅಮೋಘವಾಗಿತ್ತು. ನಾಟಕದ ಪ್ರತಿಗಳಿಗೆ ಬಹಳವಾಗಿ ಬೇಡಿಕೆ ಬಂದವು. ಆದರೆ ಸಾಹನಿ ಅವರಿಗೆ ತಮ್ಮ ತಪ್ಪು ಅರಿವಾಗಿತ್ತು. ಜವಹಾರ್‌ಲಾಲ್ ನೆಹರೂರವರಂತಹ ಹಿರಿಯ ವ್ಯಕ್ತಿಯನ್ನು ಅಣಕಿಸಿ ತಾವೊಂದು ದೊಡ್ಡ ತಪ್ಪು ಮಾಡಿದ್ದೇನೆಂದು ಪಶ್ಚಾತ್ತಾಪ ಪಟ್ಟರು. ನಾಟಕದ ಪ್ರತಿಗಳನ್ನು ಯಾರಿಗೂ ಹಂಚಲಿಲ್ಲ.

ಸಾಹನಿ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಹಲವಾರು ಅವಕಾಶಗಳು ದೊರೆತವು. ಕೆ. ಆಸೀಫರು ತಯಾರಿಸಿದ ‘ಹಲ್ ಚಲ್’ ನಲ್ಲಿ ಒಳ್ಳೆಯ ಪಾತ್ರ ದೊರೆಯಿತು. ಈ ಚಿತ್ರದಲ್ಲಿ ದಿಲೀಪ್ ಕುಮಾರ್. ನರ್ಗೀಸ್ ನಟಿಸಿದ್ದರು. ಸಾಹನಿಯವರದು ಜೇಲರನ ಪಾತ್ರ. ಪಾತ್ರಕ್ಕೆ ಜೀವಕಳೆ ತುಂಬಲು ಜೈಲನ್ನು ಸಂದರ್ಶಿಸಿ ಅಲ್ಲಿನ ರೀತಿ ನೀತಿಗಳನ್ನು ಕಂಡು ಬಂದರು. ನಾಟಕಗಳಲ್ಲಿ ಅಭಿನಯಿಸುವುದನ್ನು ಬಿಡಲಿಲ್ಲ, ಪೃಥ್ವಿ ಥಿಯೇಟರ‍್ಸ್ ನಾಟಕಗಳಲ್ಲೂ ಭಾಗವಹಿಸಿದರು.  ಬಲವಂತ ಗಾರ್ಗಿ ಅವರ ’ಸಿಗ್ನಲ್ ಮನ್ ದೂಲಿ’ ನಾಟಕಗಳನ್ನು ನಿರ್ದೇಶಿಸಿದರು.

೧೯೪೯ರಲ್ಲಿ ಸಾಹನಿ ಸಂತೋಷ್ ಎಂಬಾಕೆ ಯನ್ನು ಮದುವೆಯಾದರು. ಸಂತೋಷ್ ಉತ್ತಮ ನಟಿಯಾಗಿದ್ದರು.

ಹಮ್ ಲೋಗ್‌ನ  ಮರೆಯಲಾರದ ಪಾತ್ರ

ಸ್ಥಾನಭ್ರಷ್ಟರನ್ನು ಕುರಿತ ಚಿತ್ರ ‘ಹಮ್ ಲೋಗ್’ ನಲ್ಲಿ ಸಾಹನಿಯವರದು ವಿಶಿಷ್ಟ ಅಭಿನಯ. ಚಿತ್ರಕ್ಕೆ ಅವರದೇ ಸಂಭಾಷಣೆ, ಚಿತ್ರಕಥೇ. ಸಾಹನಿ ಅವರ ರಾಜನೀತಿ, ಸಾಮಾಜಿಕ ವಿಷಯಗಳಲ್ಲಿನ ಜ್ಞಾನ ಚಿತ್ರದ ಯಶಸ್ಸಿಗೆ ನೆರವಾಯಿತು. ನ್ಯಾಯಾಲಯದಲ್ಲಿ ಭಾಷಣ ನೀಡುವ ಅಭಿನಯವನ್ನು ನೋಡಲೆಂದೇ ಜನ ಚಿತ್ರವನ್ನು ಹಲವು ಬಾರಿ ನೋಡಿದರು.

ಚಿತ್ರಗಳಲ್ಲಿ ಜೀವಂತ ಅಭಿನಯಕ್ಕಾಗಿ ಸಾಹನಿ ಪ್ರಯತ್ನಿಸುತ್ತಿದ್ದರು. ಪಾತ್ರಗಳನ್ನು ಚೆನ್ನಾಗಿ ತಿಳಿಯುತ್ತಿದ್ದರು. ಪ್ರತಿದಿನ ಚಿತ್ರೀಕರಣ ಮುಗಿಸಿ ಮನೆಗೆಬಂದು ‘ನಾನೆಂದೂ ನಟನಾಗಲಾರೆ’ ಎಂದು ಯೋಚಿಸುವರು. ಎಷ್ಟೋ ದಿನ ರಾತ್ರಿ ನಿದ್ದೆ ಮಾಡದೆ ಆಲೋಚನಾ ಮಗ್ನರಾಗಿದ್ದುದು ಉಂಟು.

ದೋ ಬಿಘಾ ಜಮೀನ್

ಹಮ್‌ಲೋಗ್ ಚಿತ್ರದ ನಂತರ ಸಾಹನಿಯವರಿಗೆ ಬೇಡಿಕೆ ಹೆಚ್ಚಾಯಿತು. ಅವರಿಂದ ಚಿತ್ರಕಥೆ ಸಂಭಾಷಣೆ ಬರೆಸಲು ಎಷ್ಟೋ ನಿರ್ಮಾಪಕರು ಇಪ್ಪತ್ತು ಸಾವಿರ ರೂಪಾಯಿಗಳು ಕೊಡಲು ಮುಂದೆ ಬಂದರು. ಬಿಮಲ್‌ರಾಯರು ಬಂಗಾಳದ ಖ್ಯಾತ ನಿರ್ದೇಶಕರು. ಅವರ ನಿರ್ದೇಶನದಲ್ಲಿ ಸೂಕ್ಷತೆ, ಕಲಾವಂತಿಕೆ ಇರುತ್ತಿತ್ತು. ಕಲ್ಕತ್ತೆಯಲ್ಲಿ ಅವರದು ದೊಡ್ಡ ಹೆಸರು. ಸಾಹನಿ ಅವರಿಗೆ ತಮ್ಮ  ‘ದೋ ಬಿಘಾ ಜಮೀನ್’ ಚಿತ್ರದಲ್ಲಿ ಒಂದು  ಮುಖ್ಯ ಪಾತ್ರಕೊಡಬೇಕೆಂದು ತೀರ್ಮಾನಿಸಿದರು. ರೈತರ ಸಹಜವಾದ ಜೀವನದ ಸಮಸ್ಯೆಗಳನ್ನು ಯಥಾವತ್ತಾಗಿ ಪರಿಣಾಮಕಾರಿಯಾಗಿ ಚಿತ್ರಿಸಬೇಕೆಂಬ ಗುರಿ ಅವರದಾಗಿತ್ತು. ಸಾಹನಿ ಅವರದು ರೈತನ ಪಾತ್ರ. ಆ ಚಿತ್ರದಲ್ಲಿ ರೈತನೊಬ್ಬ ತನ್ನ ಎರಡು ಎಕರೆ ಜಮೀನನ್ನು ರೈತನಿಗೆ ಒತ್ತೆ ಇಟ್ಟಿರುತ್ತಾನೆ. ಅದನ್ನು ಬಿಡಿಸಿಕೊಳ್ಳಲು ಕಲ್ಕತ್ತಕ್ಕೆ ಬಂದು ರಿಕ್ಷಾ ಎಳೆದು ಒಂದಿಷ್ಟು ಹಣ ಸಂಪಾದಿಸಿ ಕಾಸಿಗೆ ಕಾಸು ಮಾಡಿ ಕೂಡಿ ಹಾಕುತ್ತಿರುತ್ತಾನೆ. (ಆಗಿನ ರಿಕ್ಷಾಗಳನ್ನು ಎಳೆಯುವವನೇ ಕುದುರೆಯಂತೆ ಎಳೆಯಬೇಕಾಗಿತ್ತು.) ನಿರೂಪರಾಯ್ ಎಂಬಾಕೆಗೆ ರೈತನ ಹೆಂಡತಿ ಪಾತ್ರ ಎಂದು ನಿಯೋಜಿಸಿದರು. ನಿರೂಪರಾಯ್ ರೈತ ಕುಟುಂಬದಲ್ಲೆ ಹುಟ್ಟಿ ಬೆಳೆದವರು. ಅಭಿನಯ ಅಷ್ಟು ಕಷ್ಟವಲ್ಲ. ಸಾಹನಿ ರೈತನ ಅಭಿನಯವನ್ನು ಜೀವಂತವಾಗಿಸಬೇಕೆಂದು ಅಭ್ಯಾಸಕ್ಕೆ ತೊಡಗಿದರು. ಚಿತ್ರೀಕರಣಕ್ಕೆ ಮೂರುದಿನ ಮೊದಲೇ ಕಲ್ಕತ್ತೆಗೆ ಚಿತ್ರದ ತಂಡ ಹೋಗಿತ್ತು. ಸಾಹನಿಕಲ್ಕತ್ತೆಯಲ್ಲಿ ರೈತ ಜನರ ಚಲನವಲನಗಳನ್ನು ಗಮನಿಸಿದರು.

ಒಂದು ದಿನ

ಕಲ್ಕತ್ತೆಯ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಬಳಿ ಒಂದು ದೃಶ್ಯದ ಚಿತ್ರೀಕರಣ. ಆ ದೃಶ್ಯದಲ್ಲಿ ಸಾಹನಿ ಕೈರಿಕ್ಷಾ ಓಡಿಸಬೇಕಿತ್ತು. ಅವರಿಗೆ ಅಂದು ಆರೋಗ್ಯ ಸರಿ ಇರಲಿಲ್ಲ. ಚಿತ್ರೀಕರಣ ಅರ್ಧಕ್ಕೆ ನಿಂತಿತು. ರಿಕ್ಷಾದಲ್ಲೇ ಕುಳಿತಿದ್ದರು. ಸಾಹನಿ ದೂರದಲ್ಲಿ ನಿಂತು ಚಿತ್ರೀಕರಣ ನೋಡುತ್ತಿದ್ದ ಇಳಿವಯಸ್ಸಿನ, ನರೆತ ಗಡ್ಡದ ಮುಖದ ಬಲಹೀನ ವ್ಯಕ್ತಿಯೊಬ್ಬ ಸಾಹನಿ ಅವರ ಬಳಿಗೆ ಬಂದ. ಅವನೂ ರಿಕ್ಷಾ ಓಡಿಸುವವನೆ. ‘ಸ್ವಾಮಿ, ಇಲ್ಲಿ ಏನು ನಡೆಯುತ್ತಿದೆ?’ಎಂದ ‘ಚಿತ್ರ ತೆಗೆಯುತ್ತಿದ್ದಾರೆ’ ಎಂದರು ಸಾಹನಿ.

‘ತಾವು ಪಾತ್ರ ವಹಿಸುತ್ತ್ತೀರಾ? ನಿಮ್ಮ ಪಾತ್ರವೇನು? ವೃದ್ಧ ಕೇಳಿದ. ಸಾಹನಿ ಚಿತ್ರಕಥೆಯನ್ನು ವಿವರಿಸಿ ವೃದ್ಧನಿಗೆ ಹೇಳಿದರು. ಕಥೆ ಕೇಳುತ್ತಿದ್ದಂತೆ ರಿಕ್ಷಾದವನ ಕಣ್ಣಲ್ಲಿ ನೀರು. ಅವನಿಗೆ ಬಿಹಾರದ ಹಳ್ಳಿಯಲ್ಲಿ ಎರಡು ಎಕರೆ ಜಮೀನಿತ್ತು. ಜಮೀನು ಒಬ್ಬ ಶ್ರೀಮಂತನ ಅಧೀನದಲ್ಲಿತ್ತು. ಅದನ್ನು ಬಿಡಿಸಿಕೊಳ್ಳಲು ಹದಿನಾರು ವರ್ಷಗಳಿಂದ ಕಲ್ಕತ್ತೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಆ ವೃದ್ಧ, ಇನ್ನು ಆ ಕೆಲಸ ಆಗಿರಲಿಲ್ಲ. ತನ್ನ ಕಥೆ ಹೇಳಿ ಅಳುತ್ತಾ ಹೊರಟುಹೋದ.

ಸಾಹನಿ ಅವರಿಗೆ ಕ್ಷಣಕಾಲ ಏನೂ ತೋಚಲಿಲ್ಲ.  ವೃದ್ಧನ ಚಿತ್ರ ಅವರ ಮನಸ್ಸಿನಲ್ಲಿ ನಟ್ಟಿತು.‘ಅಭಿನಯವನ್ನು ಪುಸ್ತಕಗಳಿಂದ ಓದಿ ತಿಳಿದುಕೊಳ್ಳಬೇಕಿಲ್ಲ. ಇಂಥ ನೈಜ ಘಟನೆಗಳಿಂದಲೂ ಜೀವನದ ಅನುಭವದಿಂದಲೂ ಕಲೆ ಬರಬೇಕಷ್ಟೆ’ ಎಂಬುದನ್ನು ಸಾಹನಿ ಅರ್ಥಮಾಡಿ ಕೊಂಡರು. ‘ದೋ ಬಿಘಾ ಜಮೀನ್’ನಲ್ಲಿ ಅವರದು ಇಂಥದೇ ಒಂದು ಪಾತ್ರವಿತ್ತು. ಅದ್ಭುತವಾಗಿ ನಟಿಸಿದರು. ಅದರ ಸ್ಫೂರ್ತಿ ತಾವು ಸಂಧಿಸಿದ ಆ ವೃದ್ಧನೇ ಎಂದು ಎಲ್ಲರಿಗೂ ಹೇಳಿದರು. ಅವರ ನಟನೆಯನ್ನು ಕಲ್ಕತ್ತೆಯ ‘ಅಮೃತ ಬಜಾರ್’ ಪತ್ರಿಕೆ ಬಹುವಾಗಿ ಪ್ರಶಂಸಿಸಿತು. ‘ದೋ ಬಿಘಾ ಜಮೀನ್’ ಕಲಾ ದೃಷ್ಟಿಯಿಂದ ಅಪಾರ ಯಶಸ್ಸು ಕಂಡಿತು.

ಹಲವಾರು ಚಿತ್ರಗಳಲ್ಲಿ

ಬಲರಾಜ್ ಸಾಹನಿ ಮೂವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದರು. ಮೊದಲು ಹತ್ತು ವರ್ಷಗಳಲ್ಲಿ ಹತ್ತು ಚಿತ್ರಗಳಲ್ಲಿ ಅಭಿನಯಿಸಿದರೆ ಮತ್ತೆ ಹದಿನೆಂಟು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅಭಿನಯ ಕ್ಷೇತ್ರದಲ್ಲಿ ಅವರು ತಮ್ಮದೇ ಆದ ವಿಶಿಷ್ಟ ದರ್ಜೆ-ವರ್ಗವನ್ನು ಸ್ಥಾಪಿಸಿಕೊಂಡವರು. ಯಾವುದೇ ಚಿತ್ರವಿರಲಿ, ಬಲರಾಜ್ ಸಾಹನಿ ಅಭಿನಯಿಸಿದ್ದಾರೆ ಎಂದರೆ ಅಲ್ಲಿ ವಿಶಿಷ್ಟ ಅಸ್ತಿತ್ವ, ಜೀವಂತಿಕೆ ಪ್ರಾಪ್ತಿ ಇರುತ್ತಿತ್ತು. ರಂಗಭೂಮಿ ಹಾಗೂ ಚಿತ್ರಗಳಲ್ಲಿ ಹೆಚ್ಚಾಗಿ ಸುಖಾಂತ ಪಾತ್ರಗಳನ್ನೇ ನಿರ್ವಹಿಸಿದರು. ಜನರು ಮೆಚ್ಚಿದ್ದು ಅವರು ಅಭಿನಯಿಸುತ್ತಿದ್ದ ದೀನದಲಿತರ ಪಾತ್ರಗಳನ್ನೆ.

ಅವರು ನಟಿಸಿದ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ.‘ಸೀಮಾ’, ‘ಅನೂರಾಧಾ’, ‘ಲಾಜ್‌ವಂತಿ’, ‘ಚೋಟೆ ಬಹನ್’, ‘ಔಲಾದ್’, ‘ಭಾಬಿ’, ‘ಪಿಂಜರೇ ಕಿ ಪಂಛಿ’, ‘ಬದ್‌ನಾಮ್’, ‘ಕಾಬೂಲಿವಾಲಾ’, ‘ಕಠ್ ಪುತಿ’, ‘ಬಾಜಿ’, ‘ಹಕೀಕತ್’, ‘ಸಂಘರ್ಷ’, ‘ಗರ್ಮ್‌ಕೋಟ್’, ‘ಜಂಗಲ್‌ಮ ಮೆ ಮಂಗಲ್’, ‘ವಖ್’, ‘ಅನ್ ಪಡ್’, ‘ಗರಂ ಹವಾ’ ‘ಹಿಂದುಸ್ಥಾನ್ ಕಿ ಕಸಮ್’ ಮೊದಲಾದವು.

ಅವರ ಜೀವಿತ ಕಾಲದ ಎಲ್ಲ ಹಿರಿಯ ಕಿರಿಯ ನಟನಟಿಯರೂ ಅವರೊಂದಿಗೆ ನಟಿಸಿದ್ದಾರೆ ಎನ್ನಬಹುದು. ಕನ್ನಡ ಚಿತ್ರರಂಗದ ಪಂಡರಿಬಾಯಿಯವರೂ ಅವರ ಜತೆ ನಟಿಸಿದವರಲ್ಲಿ ಒಬ್ಬರು. ನಿರೂಪರಾಯ್, ರತನ್ ಕುಮಾರ್, ನಾನಾಫಾಲ್‌ಸೇಕರ, ನರ್ಗಿಸ್, ಶೀಲಾ ಕಾಶ್ಮೀರಿ, ಶುಭಾಕೋಟೆ, ದುರ್ಗಾಕೋಟೆ, ಪದ್ಮಿನಿ, ಜೈರಾಜ್, ಡೇವಿಡ್, ಮನಮೋಹನಕೃಷ್ಣ, ದಿಲೀಪ್‌ಕುಮಾರ್, ಲೀಲಾ ನಾಯ್ಡು, ಕಾಮಿನಿ ಕೌಶಲ್, ಸಿತಾರಾ, ರಾಜ್‌ಕುಮಾರ್, ಹೇಮಮಾಲಿನಿ, ಪರೀಕ್ಷಿತ್ ಸಾಹನಿ, ಐ.ಎಸ್. ಜೋಹರ್, ಮೀನಾಕುಮಾರಿ, ನೂತನ್, ಮಾಲಾಸಿನ್ಹ, ಶಶಿಕಪೂರ್ ಮೊದಲಾದ ಹಳೆಯ ಹಾಗೂ ಹೊಸ ಪೀಳಿಗೆಯ ತಾರೆಯರು ಅವರೊಟ್ಟಿಗೆ ಅಭಿನಯಿಸಿದ್ದಾರೆ. ಖ್ಯಾತ ನಟ ದೇವಾನಂದರಿಗೆ ಸಾಹನಿ ಗುರುಗಳಂತೆ, ಸಾಹನಿ ಅವರಿಗೆ ಅವರಲ್ಲಿ ವಿಶೇಷ ಗೌರವ.

ತಂದೆ-ಮಗ-ಮಗಳು

ಮಗ ಪರೀಕ್ಷಿತ್ ಸಾಹನಿ ಇಂದು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಸಾಹನಿ ತಮ್ಮ ಮಗನನ್ನು ಹತ್ತು ವರ್ಷ ವಯಸ್ಸಿರುವಾಗಲೇ ಚಿತ್ರಗಳಲ್ಲಿ ಅಭಿನಯಿಸಲು ಬಿಟ್ಟಿದ್ದರು. ಬಾಲಕ ಪರೀಕ್ಷಿತ್ ರಾಜ್‌ಕಪೂರರ ‘ಬೂಟ್ ಪಾಲಿಷ್’ ಚಿತ್ರದಲ್ಲಿ ಅಭಿನಯಿಸಿದ್ಧ. ತಂದೆ ಮಕ್ಕಳ ಸಂಬಂಧ ಅನ್ನೋನ್ಯವಾಗಿತ್ತು. ೧೯೬೨ ರಲ್ಲಿ ಸಾಹನಿ ಮಗನನ್ನು ರಷ್ಯಾಕ್ಕೆ ಕಳುಹಿಸಿದರು. ಅಲ್ಲಿ ಪರೀಕ್ಷಿತ್ ಚಿತ್ರನಿರ್ದೇಶನದ ಬಗೆಗೆ ಶಿಕ್ಷಣ ಪಡೆದರು. ಬಲರಾಜ್ ಸಾಹನಿಯವರೂ ರಷ್ಯ ನೋಡಿ ಬಂದರು. ಮುಕ್ತ ಮನಸ್ಸಿನಿಂದ ತಂದೆ ಮಗ ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದರು. ‘ಮನುಷ್ಯ ತನ್ನ ಕಾಲ ಮೇಲೆ ನಿಲ್ಲಬೇಕು. ಇತರರಲ್ಲಿ ಗೌರವ ತೋರಬೇಕು’ ಎಂದು ಸಾಹನಿ ಮಗನಿಗೆ ಸದಾ ಹೇಳುತ್ತಿದ್ದರು. ‘ಮನುಷ್ಯ ತಲೆ ಬಾಗಿ ನಡೆಯಬೇಕು. ಮರದಲ್ಲಿ ಹೆಚ್ಚು ಹಣ್ಣುಗಳಿದ್ದರೆ ಅದು ಬಗ್ಗಿರುತ್ತದೆ’ ಎಂದು ಸೂಕ್ಷ್ಮತೆಯನ್ನು ಹೇಳುತ್ತಿದ್ದರು. ಮಗನ ಜೊತೆ ಸಾಹನಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೂ ಉಂಟು-ಇವುಗಳಲ್ಲಿ ‘ಪವಿತ್ರ ಪಾಪಿ’ ಒಂದು ಚಿತ್ರ. ಮಗನಲ್ಲಿ ಅಪಾರ ಪ್ರೀತಿ ತೋರುತ್ತಿದ್ದರು ಸಾಹನಿ. ಅಂತೆಯೇ ಮಗಳು ಶಬ್ನಮ್ ಕಂಡರೆ ಕೂಡ. ಆದರೆ ಶಬ್ನಮ್ ಬಹು ಬೇಗ ತೀರಿ ಕೊಂಡಳು. ಇದರಿಂದ ಸಾಹನಿಯವರಿಗೆ ತುಂಬಾ ದುಃಖವಾಯಿತು.

ಸಾಹನಿ ಸಾಹಿತ್ಯ

ಕಾಲೇಜಿನಲ್ಲಿದ್ದಾಗಲೆ ಸಾಹನಿ ಸಾಹಿತ್ಯವನ್ನು ಮೆಚ್ಚಿದರು. ಅಧ್ಯಯನ ಮಾಡಿದ್ದರು. ಕವಿತೆ, ಕಥೆಗಳನ್ನು ಬರೆಯುವುದರಲ್ಲಿ ಅವರದು ಎತ್ತಿದ ಕೈ. ಚಿತ್ರರಂಗದಲ್ಲಿ ಅವರು ಬರಹಗಾರರೆಂದು ವಿಶಿಷ್ಟ ಗೌರವ ಪಡೆದಿದ್ದರು. ಮೊದಲಿನಿಂದಲೂ ಅವರು ಭಾಷಣ ಕಲೆಯನ್ನು ರೂಢಿಸಿಕೊಂಡಿದ್ದರು. ಹಲವು ವಿಷಯಗಳನ್ನು ಕುರಿತು ಅವರು ಅಲ್ಲಲ್ಲಿ ಉಪನ್ಯಾಸ ನೀಡಿದ್ದೂ ಉಂಟು. ಪಂಜಾಬ್ ವಿಶ್ವವಿದ್ಯಾಲಯದ ಘಟಿಕೋತ್ಸವವೊಂದರಲ್ಲಿ ವಿದ್ಯಾರ್ಥಿ ಗಳನ್ನುದೇಶಿಸಿ ಮಾನವೀಯ ವಿಚಾರಗಳನ್ನು ಕುರಿತು ಮಾತನಾಡಿದರು. ಸಾಹನಿಯವರ ಸಣ್ಣ ಕಥೆಗಳ ಸಂಗ್ರಹ ಒಂದು ಪ್ರಕಟವಾಗಿದೆಯಲ್ಲದೆ ಪಾಕಿಸ್ತಾನ ಮತ್ತು ರಷ್ಯ ಗಳಲ್ಲಿಯ ತಮ್ಮ ಪ್ರವಾಸ ಕಥನವನ್ನು ಬರೆದಿದ್ದಾರೆ. ‘ಮೇರಿ ಫಿಲ್ಮಿ ಆತ್ಮ ಕಥಾ’ ಎಂಬ ಉತ್ತಮ ಬರವಣಿಗೆ ಅವರದಾಗಿದೆ. ಹಿಂದಿ ಭಾಷೆಯ ಈ ಗ್ರಂಥದಲ್ಲಿ ಅವರು ಜೀವನದುದ್ದಕ್ಕೂ ಕಂಡುಂಡ ನೋವು ನಲಿವುಗಳನ್ನು ಚತ್ರರಂಗದಲ್ಲಿನ ಅನುಭವಗಳನ್ನು ವಿಶ್ಲೇಷಿಸಿ ಹೇಳಿದ್ದಾರೆ. ಪಂಜಾಬಿ, ಬಂಗಾಳಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳನ್ನು ಬಲ್ಲವರಾಗಿದ್ದ ಸಾಹನಿ ಸಾಹಿತ್ಯದ ಆರಾಧಕರಾಗಿದ್ದರು.

ಕಡೆಯದಿನ

೧೯೭೩ ಏಪ್ರಿಲ್ ೧೪ ರಂದು ಸಾಹನಿ ಪಂಜಾಬಿಗೆ ಹೋಗಬೇಕಿತ್ತು. ಅಲ್ಲಿ ಒಂದು ತಿಂಗಳ ಕಾಲ ಇದ್ದು ತಾವು ಬರೆಯುತ್ತಿದ್ದ ಕಾದಂಬರಿಯೊಂದನ್ನು ಮುಗಿಸುವ ಆಸೆ ಹೊತ್ತಿದ್ದರು. ಆಗಲೇ ಕಾದಂಬರಿ ೩೦೦ ಪುಟಗಳಾಗಿದ್ದವು. ರೈಲ್ವೆ ಟಿಕೇಟು ಸಹ ಕೊಂಡಾಗಿತ್ತು. ಆದರೆ ವಿಧಿಯ ಕೈವಾಡವೆ ಬೇರೆಯಾಗಿತ್ತು. ಹಿಂದಿನ ದಿನವೇ ಅವರು ಕಡೆಯುಸಿರೆಳೆದರು. ಸಾಯುವ ದಿನ ಕೂಡ ಎಂದಿನಂತೆ ನಗುಮುಖದಿಂದಲೇ ಇದ್ದರು. ‘ಅಮಾನತ್’ ಚಿತ್ರದ ಚಿತ್ರೀಕರಣಕ್ಕೆಂದು ಬೆಳಿಗ್ಗೆ ಜುಹುವಿನಲ್ಲಿದ್ದ ತಮ್ಮ ಮನೆ ಬಿಡಲು ಸಿದ್ಧರಾಗುತ್ತಿದ್ದಾಗ ಅಸ್ವಸ್ಥರಾದರು. ಸಂಜೆ ಸಾಹನಿ ಇನ್ನಿಲ್ಲವಾದರು. ೧೯೭೩ರ ಏಪ್ರಿಲ್೧೩ ರಂದು ಮಹಾನಟ ಸಾಹನಿ ಕಣ್ಮರೆಯಾದರು. ಭಾರತೀಯ ಚಲನಚಿತ್ರ ಹಾಗೂ ರಂಗಭೂಮಿಯ ಒಬ್ಬ ವಿಚಾರಶೀಲ ಕಲಾವಿದನನ್ನು ಕಳೆದು ಕೊಂಡಂತಾಯಿತು.

ವ್ಯಕ್ತಿ-ಗೌರವ-ಸ್ವಭಾವ

ಬಲರಾಜ್ ಸಾಹನಿಯವರಲ್ಲಿದ್ದ ವಿಶಿಷ್ಟ ಕಲಾವಂತಿಕೆಯನ್ನು ಗಮನಿಸಿದ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿತು. ಸಾಹನಿ ಅಭಿನಯಿಸಿದ್ದ ‘ದೋ ಬಿಘಾ ಜಮೀನ್’ ಚಿತ್ರವನ್ನು ರಷ್ಯಾ, ಚೀನಾ, ಪ್ರಾನ್ಸ್, ಸ್ವಿಟ್ಜರ್‌ಲೆಂಡ್ ಮೊದಲಾದ ದೇಶಗಳಲ್ಲಿ ಪ್ರದರ್ಶಿಸಲಾಗಿತ್ತು. ಅವರು ಅಭಿನಯಿಸಿದ “ಅನುರಾಧಾ” ಚಿತ್ರ ೧೯೬೦ರ ಶ್ರೇಷ್ಠ ಚಿತ್ರವೆಂದು ಪರಿಗಣಿಸಲ್ಪಟ್ಟಿತು. ಈ ಚಿತ್ರದಲ್ಲಿ ಅವರು ವೈದ್ಯನ ಪಾತ್ರವನ್ನುಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅವರ ‘ಗರಂ ಹವಾ’ ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸುವ ಚಿತ್ರವಾಗಿತ್ತು. ಸಾಹನಿಯವರು ತಮ್ಮೆಲ್ಲ ಅಭಿನಯಶಕ್ತಿಯನ್ನು ಚಿತ್ರದ ಯಶಸ್ಸಿಗೆ ಧಾರೆ ಎರೆದಿದ್ದರು. ‘ಗರಂ ಹವಾ’ ೧೯೭೩ ರ ಶ್ರೇಷ್ಠ ಚಿತ್ರವೆಂದು ಪರಿಗಣಿಸಲ್ಪಟ್ಟಿತು.

ಸಾಹನಿಯವರಿಗೆ ಯಾವುದೇ ತತ್ವದಲ್ಲಿ ಕುರುಡು ನಂಬಿಕೆ ಇರಲಿಲ್ಲ. ತಮಗೆ ಸತ್ಯವೆಂದು ಕಂಡದ್ದನ್ನು ಅವರು ಒಪ್ಪಿದರು. ಮಾರ್ಕ್ಸ್‌ವಾದದಲ್ಲಿ ಅವರಿಗೆ ಗೌರವವಿತ್ತು. ಭಾರತ-ರಷ್ಯ ಸ್ನೇಹವರ್ಧನೆಗೆ ಕಾರಣರಾದವರಲ್ಲಿ ಸಾಹನಿಯವರೂ ಒಬ್ಬರು. ಭಾರತೀಯ ಸಂಸ್ಕೃತಿಯೆಂದರೆ ಸಾಹನಿಯವರಿಗೆ ಮಹಾ ಪ್ರೇಮ.

ರಾಜಕೀಯ ಪಕ್ಷದಲ್ಲಿ ಸಾಹನಿ ಭಾಗವಹಿಸಿದ್ದೂ ಉಂಟು. ಒಮ್ಮೆ ಗಲಭೆಯೊಂದರ ನಡುವೆ ಸಾಹನಿ ಬಂಧಿತರಾಗಿ ಎರಡು ಮೂರು ತಿಂಗಳು ಜೈಲುವಾಸವನ್ನೂ ಅನುಭವಿಸಿದರು. ಕೆಳದರ್ಜೆ ನೌಕರರ ಪರವಾಗಿ ಅವರು ಸಾರ್ವಜನಿಕ ವೇದಿಕೆಯ ಮೇಲೆ ನಿಂತು ವಾದಿಸಿದ್ದೂ ಉಂಟು. ಸಮಾಜವಾದಿಗಳಾಗಿದ್ದರು ಸಾಹನಿ.

ಸಾಹನಿ ಹೆಚ್ಚು ಹಣ ಮಾಡಲಿಲ್ಲ ಆದರೆ ಅವರು ಹೇಳುತ್ತಿದ್ದರು ‘ನಾನು ಬಡವನಲ್ಲ. ಆದರೆ ಬಡವರ ಮಿತ್ರ’ ಎಂದು.

‘ನಮ್ಮ ಚಿತ್ರಗಳಲ್ಲಿ ಪಾಶ್ಚಿಮಾತ್ಯ ಸಂಗೀತದ ಅನುಕರಣೆ ಹೆಚ್ಚು’ ಎಂದವರಿಗೆ ಅವರು  ‘ಪಶ್ಚಿಮ ಪೂರ್ವದ ಮೇಲೆ, ಪೂರ್ವ ಪಶ್ಚಿಮದ ಮೇಲೆ ತಮ್ಮ ಪ್ರಭಾವದ ಮುದ್ರೆ ಒತ್ತಲೇ ಬೇಕು. ಇದು ಅನಿವಾರ್ಯ’ ಎಂದು ಹೇಳುತ್ತಿದ್ದರು.

ಜುಹುವಿನ ನಾಗರಿಕರು ಮತ್ತು ಮುಂಬಯಿಯ ಮುನಿಸಿಪಲ್ ಕಾರ್ಪೋರೇಶನ್ ಒಟ್ಟಾಗಿ ಸೇರಿ ಮುಂಬಯಿಯ ಟರ್ನರ್‌ರಾಯಲ್ ಲೇನಿಗೆ ೧೯೭೮ರ ನವೆಂಬರಿನಲ್ಲಿ ಬಲರಾಜ್ ಸಾಹನಿ ರಸ್ತೆ ಎಂದು ಪುನರ್ನಾಮಕರಣ ಮಾಡಿದರು. ಇದು ಸಿನಿಮಾ ನಟನೊಬ್ಬನಿಗೆ ಸಂದ ಗೌರವ.

ತೆರೆದ ಬಾಗಿಲು

ಸಾಹನಿ ಅವರ ಮನೆ ಯಾರಿಗೇ ಆಗಲಿ ತೆರೆದಿರುತ್ತಿತ್ತು. ಮೇಲು ಕೀಳೆಂಬ ಭೇದವಿಲ್ಲದೆ ಜನ ಅವರಲ್ಲಿಗೆ ಬಂದು ಹೋಗುತ್ತಿದ್ದರು. ತಮ್ಮ ಮನೆ ಬಾಗಿಲು ಕಾಯಲು ಪಠಾಣರನ್ನು ಅವರೆಂದೂ ನೇಮಿಸಲಿಲ್ಲ. ಸಹಾಯ ಬೇಡಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಒಮ್ಮೆ ಒಬ್ಬ ಹುಡುಗ ಸಾಹನಿ ಅವರ ಸಹಾಯ ಬೇಡಿ ಬಂದ. ಹಣ ಕೇಳುತ್ತಿದ್ದಾನೆಂದು ಸಾಹನಿ ಹಣ ಕೊಡಲು ಮುಂದಾದರು. ಹುಡುಗ ‘ಬೇq’ ಎಂದ. ಸಾಹನಿ ಮತ್ತೇನು ಬೇಕು ಎಂದು ಕೇಳಿದರು. ‘ನನಗೆ ಎಲ್ಲಿಯಾದರು ಒಂದು ಕೆಲಸ ಕೊಡಿಸಿ’ ಎಂದ ಆ ದಿಟ್ಟ ಹುಡುಗ.

ಸಾಹನಿ ದಂಗಾದರು. ಅದೆಲ್ಲ ಸರ್ಕಾರದ ಕೆಲಸವಲ್ಲವೆ ಎಂದುಕೊಂಡರು. ನಿರುದ್ಯೋಗ, ಬಡತನದ ಬಗ್ಗೆ ಅವರದು ಚಿಂತಿಸುವ ಮನಸ್ಸು, ಹುಡುಗ ಬಿಡಲೇ ಇಲ್ಲ. ಅವನು ಬೇರಾರೂ ಆಗಿರದೆ ತಮ್ಮ ಮಿತ್ರ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಯೋಗಿನಾಥರ ಅಣ್ಣನ ಮಗ.  ಇಂಥವನು ಬೀದಿ ಭಿಕಾರಿಯಾಗಿದ್ದ. ಅವನು ಪೆನ್ನುಗಳನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾಗ ಪೊಲೀಸರು ಬಂಧಿಸಿ ಎರಡುದಿನ ಜೈಲಿನಲ್ಲಿಟ್ಟು ಹೊರಗೆ ಬಿಟ್ಟಿದ್ದರು. ಸಾಹನಿ ಅವನಿಗೆ ಭರವಸೆ ನೀಡಿದರು. ಸಹಾಯ ಮಾಡಿದರು. ಇದೇ ರೀತಿ ಬದರುದ್ದೀನ್ ಎಂಬ ಹುಡುಗ ಅವರಿಂದ ಪ್ರೋತ್ಸಾಹ ಪಡೆದ ಕಲಾವಿದ. ಮುಂದೆ ಅವನೇ ಹಾಸ್ಯನಟ ಜಾನಿ ವಾಕರ್ ಆದ.

ಮಹಾನಟ ಸಾಹನಿ

ಬಲರಾಜ್‌ಸಾಹನಿ ಮಹಾ ನಟರಾಗಿದ್ದರು. ಪುಟ್ಟ ಕಲಾವಿದರಿಗೆ ಅವರು ಸ್ಫೂರ್ತಿಯ ಸೆಲೆ. ಇಂದೂ ಅವರು ನಟಿಸಿದ ಚಿತ್ರಗಳು ಬಂದಾಗ ಜನ ಕುತೂಹಲದಿಂದ ನೋಡುತ್ತಾರೆ. ಅವರದೇ ಒಂದು ಹಾದಿ; ಶಿಸ್ತಿನ ಹಾದಿ. ಅವರೊಂದು ಚಲನಚಿತ್ರ ರಂಗದ ಕಿರಣವಾಗಿದ್ದರು. ಅವರ ಬದುಕು ಅಂತೆಯೇ, ಬೆಳಕಿನ ಸೂಜಿ. ಜನ ಜೀವನದಲ್ಲಿ ಅವರು ಹಿಂದೂ ಮುಸ್ಲಿಮ್ ಗಲಭೆಗಳಾದಾಗ ಹಿಂದೂಗಳಾಗಿದ್ದ ಸಾಹನಿ ಮುಸ್ಲಿಮರ ಪ್ರದೇಶಕ್ಕೆ ಹೋಗಿ ಅಲ್ಲಿ ಎರಡು ವಾರ ವಾಸ ಮಾಡಿದರು, ಭಾರತ ಜಾತ್ಯಾತೀತ ಎಂದು ತೋರಿಸಿಕೊಟ್ಟರು.

ಚಲನಚಿತ್ರಗಳಲ್ಲಿ ಅಭಿನಯಿಸಿ ಅವರು ಹಣ ಗಳಿಸಿದರು. ಆದರೆ ಜನರ ಮನಸ್ಸನ್ನು ತಿದ್ದುವ ನಾಟಕಗಳನ್ನು ತಾವೇ ಬರೆದು, ನಿರ್ದೇಶಿಸಿ, ಅಭಿನಯಿಸಿ ತಮ್ಮ ಖರ್ಚಿನಲ್ಲಿ ಪ್ರದರ್ಶಿಸಿದರು. ಸಾಯುವ ಒಂದು ಗಂಟೆಗೆ ಮೊದಲು ಹೈದರಾಬಾದಿನಲ್ಲಿ ಒಂದು ಆಸ್ಪತ್ರೆ ಕಟ್ಟಿಸುವ ಯೋಚನೆಯಲ್ಲಿದ್ದರು. ಜನಕ್ಕೆ ಮುಟ್ಟಿಸಬೇಕಾದ ಹೊಸ ವಿಚಾರಗಳಿವೆ ಎನ್ನಿಸಿದಾಗ ತಮ್ಮ ವೆಚ್ಚದಲ್ಲಿ ಪ್ರವಾಸ ಮಾಡುತ್ತಿದ್ದರು. ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ೧೯೭೨ರಲ್ಲಿ ಜವಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತ ಅವರು, ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು. ಇಲ್ಲಿನ ಪ್ರಜೆಗಳು ಮನಸ್ಸಿನ ಬಂಧನ ಗಳಿಂದ ಬಿಡುಗಡೆ ಪಡೆಯಬೇಕು ಎಂದು ಒತ್ತಿ ಹೇಳಿದರು. ತಾನೇ ಯೋಚಿಸಿ ತೀರ್ಮಾನ ಮಾಡುವ ಧೈರ್ಯ ವಿಲ್ಲದವನು, ಅಧಿಕಾರ-ಹಣ ಇವುಗಳಿಗೆ ಹೆದರುವವನು ನಿಜವಾಗಿ ಸ್ವತಂತ್ರನಲ್ಲ ಎಂದರು. ಕಲಾವಿದನಿಗೆ ಸಾಮಾಜಿಕ ಹೊಣೆ ಇದೆ, ನಾಟಕ ಬರೆಯುವವನು, ಚಲನಚಿತ್ರ ನಿರ್ಮಾಪಕ, ನಟ-ಎಲ್ಲರೂ ಸಮಾಜಕ್ಕೆ ನಾವೇನು ಮಾಡುತ್ತಿದ್ದೇವೆ? ಎಂದು ಪ್ರಶ್ನಿಸಿಕೊಳ್ಳಬೇಕು ಎಂದರು. ಓಬೀರಾಯನ ಕಾಲದ ಯೋಚನೆಗಳನಿಟ್ಟುಕೊಂಡು ಅಥವಾ ಇತರ ದೇಶಗಳನ್ನು ಅನುಕರಿಸಿ ಚಿತ್ರಗಳನ್ನಾಗಲಿ ಕವನವನ್ನಾಗಲಿ ಕಾದಂಬರಿಗಳನ್ನಾಗಲಿ, ನಾಟಕಗಳನ್ನಾಗಲಿ ಸೃಷ್ಟಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಪ್ರತಿ ದೇಶಕ್ಕೆ ತನ್ನದೇ ಆದ ಸಮಸ್ಯೆಗಳಿರುತ್ತವೆ. ಅವಕ್ಕೆ ತಾನೇ ಪರಿಹಾರಗಳನ್ನು ಕಂಡುಕೊಳ್ಳಬೇಕು, ಆದರೆ ನಮಗಿನ್ನೂ ಈ ಧೈರ್ಯ ಬಂದಿಲ್ಲ, ನಮಗೆ ನಿಜವಾಗಿ ಸಮಾಜವಾದದಲ್ಲಿ ನಂಬಿಕೆ ಇದ್ದರೆ ಹಣ, ಸ್ಥಾನ, ಅಧಿಕಾರ ಇವುಗಳಲ್ಲಿ ಹೆದರಿಕೆಯನ್ನು ಬಿಡಬೇಕು, ಆದರೆ ಇವತ್ತು ನಮ್ಮ ದೇಶದಲ್ಲಿ ನಾವು ಯಾರನ್ನು ಮೆಚ್ಚುತ್ತೇವೆ, ಯಾರ ಹಿಂದೆ ಅಲೆಯುತ್ತೇವೆ, ಯಾರಿಗೆ ಹಾರಗಳನ್ನು ಹಾಕುತ್ತೇವೆ- ಸಾಮರ್ಥ್ಯ ಇರುವವನಿಗೇ ಅಥವಾ ಅಧಿಕಾರ ಇರುವವನಿಗೇ? ಸಮಾಜವಾದ ಕಾರ್ಯಗತ ವಾಗ ಬೇಕಾದರೆ ಅಧಿಕಾರ ದಾಹ, ಶ್ರೀಮಂತಿಕೆ ಇವನ್ನು ಕಂಡು ಜನ ಅಸಹ್ಯಪಡುವಂತಾಗಬೇಕು ಆದರೆ ಇಂದು ಇಂತಹ ವಾತಾವರಣವನ್ನು ಸೃಷ್ಟಿಸಿದ್ದೇವೆಯೆ ಎಂದು ಪ್ರಶ್ನಿಸಿದರು. ಹಣ, ಅಧಿಕಾರ ಇವಕ್ಕೆ ನಮ್ಮ ಮನಸ್ಸುಗಳು ದಾಸರಾಗಿದ್ದರೆ ನಿಜವಾದ ಸ್ವಾತಂತ್ರ್ಯ ನಿಜವಾದ ಸಮಾಜವಾದ ನಮ್ಮ ಕೈಗೆ ಎಟುಕಬಹುದೆ ಎಂದರು.

ಎಲ್ಲರೂ ಯೋಚಿಸಬೇಕಾದ ಮಾತುಗಳು, ಅಲ್ಲವೆ?