[ಪಾಳುಬಿದ್ದ ಒಂದು ಕಾಳಿಕಾದೇವಾಲಯ. ಕಗ್ಗತ್ತಲು ಕವಿದುಕೊಂಡಿದೆ. ಭರತಸುತನು ಮಲಗಿದ್ದಾನೆ. ದೂರದಲ್ಲಿ ಭಾರತಾಂಬೆ ನಿಂತಿದ್ದಾಳೆ. ದೂರದಿಂದ ರಾಷ್ಟ್ರಗೀತಾಗಾನ ಕೇಳಿಬರುತ್ತದೆ. ಒಂದಿನಿತು ಬೆಳಕು ಮೂಡಿ ಕಗ್ಗತ್ತಲು ಮಬ್ಬುಗತ್ತಲಾಗುತ್ತದೆ. ಭರತಸುತನು ಒಯ್ಯೊಯ್ಯನೆ ಎಚ್ಚತ್ತು ಕುಳಿತುಕೊಂಡು, ಕಣ್ಣುಜ್ಜಿಕೊಳ್ಳುತ್ತಾ, ಭಾರತಾಂಬೆಯನ್ನು ಕಂಡು ಬೆಚ್ಚುತ್ತಾನೆ.]
ಭರತಸುತ — ಯಾರು ನೀನೆಲೆ ತಾಯೆ? ಮುಸುಗಿದೀ ಕತ್ತಲಲಿ
ಮಬ್ಬಾಗಿ ಕಾಣುತಿಹೆ!
ಭಾರತಾಂಬೆ — (ದುಃಖ ಧ್ವನಿಯಿಂದ) ಯಾರಾದರೇನಂತೆ?
ನಿನಗೇಕೆ, ಕಂದಾ?
ಭರತಸುತ — ಏಕಾಂಗಿಯಾಗಿರುವೆ!
ಜೊತೆಯಿಲ್ಲವೇ ನಿನಗೆ? ಪರದೇಶಿಯೇನು?
ಭಾರತಾಂಬೆ — ಜೊತೆಯಿದ್ದರೆನಗಂದು, ಸೌಭಾಗ್ಯವೆನಗಿದ್ದ
ಕಾಲದಲಿ.
ಭರತಸುತ — ತಾಯಿ, ಇಂದು ನಿನೇನಾಗಿರುವೆ?
ಭಾರತಾಂಬೆ — ದಿಕ್ಕಿಲ್ಲದಲೆದಾಡುತಿಹ ಭಿಕ್ಷುಕಳ್, ಕಂದ!
ಭರತಸುತ — ಏನಾಯ್ತು ನಿನ್ನ ಸಿರಿ?
ಭಾರತಾಂಬೆ — ಹೆರರ ಪಾಲಾಯ್ತು.
ಭರತಸುತ — ಮಕ್ಕಳಿಲ್ಲವೆ ನಿನಗೆ?
ಭಾರತಾಂಬೆ — ಮಕ್ಕಳಿರುವರು.
ಭರತಸುತ — ಏನು!
ಮಕ್ಕಳಿದ್ದರೂ ಕೂಡ ಭಿಕ್ಷುಕಿಯೆ ನೀನು?
ಭಾರತಾಂಬೆ — ದಾಸರಾಗಿಹರವರ್, ನನ್ನ ಮರೆತಿಹರು.
ಭರತಸುತ — ನಿನಗಿರಲು ಮನೆಯಿಲ್ಲವೇ?
ಭಾರತಾಂಬೆ — ಮನೆಯಿಹುದು. ಆದರೇನ್?
ನನಗಿರಲು ಮನೆಯಿಲ್ಲ. ಪರಕೀಯರೈತಂದು
ಬಾಳುತಿಹರಲ್ಲಿ.
ಭರತಸುತ — ತಿನ್ನುವುದಕೇನಿಹುದು?
ನಿನಗಾರು ಉಣಿಸನೀಯುವರಮ್ಮಾ!
ಭಾರತಾಂಬೆ — ಧನಧಾನ್ಯ
ಬೇಕಾದ ಹಾಗಿಹುದು. ಆದರೆನಗಿಲ್ಲ!
ಹೊಟ್ಟೆಗಿಲ್ಲದೆ ಸೊರಗಿ ಸಾಯುತಿಹೆನಯ್ಯೋ
ನನ್ನ ಮನೆಯಲಿ ನಾನೆ ತೊತ್ತಾಗಿ ಬಿದ್ದಿರುವೆ!
ಭರತಸುತ — ನೀನಾರು, ತಾಯಿ, ನಿಜವಾಗಿ ಹೇಳೆನೆಗೆ
ಬಾಡಿದರು, ನಿನ್ನ ಮೊಗದಲಿ ಕಾಂತಿ ಮಿಂಚುತಿದೆ,
ಹಳೆಯದಾದರು ನಿನ್ನ ಮಕುಟದಲಿ ಕೆಡೆದಿರುವ
ಮುತ್ತುಗಳ ಕೆತ್ತನೆಯ ಗುರುತಿಹುದು. ದನಿಯಲ್ಲಿ
ಮಾಧುರ್ಯವುಕ್ಕುತಿದೆ. ತಳಿಸುತಿವೆ ಹಸಿದಿರುವ
ಕಣ್. ಒಳಗೇನೊ ಬೆಳಕಿಹುದು. ಹೇಳಮ್ಮ,
ನೀನಾರು?
ಭಾರತಾಂಬೆ — ನನ್ನ ಗುರುತಾಗಲಿಲ್ಲವೆ, ಮಗುವೆ?
ಭರತಸುತ — (ದುರುದುರು ನೋಡಿ ನಿರಾಶೆಯಿಂದ)
ಕತ್ತಲಲಿ ನಾ ಕಾಣೆ. ನೀನೆ ಹೇಳಮ್ಮಾ.
ಭಾರತಾಂಬೆ — ಗುರುತು ಹೇಳುವ ಮುನ್ನ ಭಿಕ್ಷೆ ಬೇಡುವೆ ನಾನು.
ನೀಡುವೆಯಾ? ಹೇಳು!
ಭರತಸುತ — ಕೈಲಾದುದೆಲ್ಲವನು
ನೀಡುವೆನು; ಹೇಳಮ್ಮಾ…….. ಧನವು ಬೇಕೇನು?
ಭಾರತಾಂಬೆ — ನಿನ್ನ ಧನವೆನಗೇಕೆ? ನಾ ಧನಿಕಳಾಗಿದ್ದವಳ್.
ಧನವೆನ್ನ ಕಾಪಾಡಲಿಲ್ಲ. ಧನಕಾರಣಮೆ
ಕೆಟ್ಟೆನಯ್.
ಭರತಸುತ — ಮತ್ತೇನು ಬೇಕಮ್ಮ? ಅನ್ನ?
ಭಾರತಾಂಬೆ — ಇನಿತು ದಿನ ಹಸಿದಿರುವೆ. ನನಗದರ ಭಯವಿಲ್ಲ.
ಅನ್ನದಿಂದಲೆ ನನ್ನ ಬಾಳು ಬುದುಕಿಲ್ಲ.
ಭರತಸುತ — ಮತ್ತೇನು? (ನಿಡು ಚಿಂತಿಸಿ)
ಉಡಲು ದುಗುಲವು ಬೇಕೆ? ತೊಡಲೊಡವೆಗಳ್?
ಭಾರತಾಂಬೆ — ಹರಕು ಬಟ್ಟೆಯೆ ಸಾಕು! ಮುರುಕು ಮುಗುಡವೆ ಸಾಕು!
ನನಗೇಕೆ ಆತರಳೆಯರ ವೈಯಾರ?
ಉಂಡುಟ್ಟು ಕಂಡೆಸೆದುದಲ್ತೆ? ನಾ
ಹಳೆಯ ಕಾಲದ ಮುದುಕಿ!
ಭರತಸುತ — ಮುದುಕಿಯಾದರು ತರಳೆಯಂತೆಯೆ ತೋರುತಿಹೆ.
ಭಾರತಾಂಬೆ — ಅಹುದು, ಮಗು, ಆದರದು ಧನಧಾಯ್ಯದಿಂದಲ್ಲ.
ಅನ್ನದಿಂದಲೂ ಅಲ್ಲ, ಉಡುಗೆಯಿಂದೂ ಅಲ್ಲ.
ಭರತಸುತ — ಮತ್ತೇತರಿಂದ?
ಭಾರತಾಂಬೆ — ಒಳಗಿರುವ ಬೆಳಕಿಂದ!
(ಧ್ವನಿ ಬದಲಾಯಿಸಿ ದಿಟ್ಟ ದರ್ಪದಿಂದ)
ನಾ ಬೇಡುತಿರುವುದನ್ ನೀಡಲ್ ಸಮರ್ಥನೇ
ನೀನ್?
ಭರತಸುತ — (ನಮ್ರನಾಗಿ)
ಇನ್ನೇನು ಕೊಡಲಮ್ಮ? ಹೇಳು, ನೋಡುವೆನು.
ಭಾರತಾಂಬೆ — ದಾನಿಯಾಡುವ ನುಡಿಗಳಲ್ಲವಿವು, ಮಗೂ.
ಏನು ಬೇಡುವೆನೆಂದು ಬೆದರಿಕೆಯೆ ನಿನಗೆ?
ಭರತಸುತ — (ತಡೆ ತಡೆದು) ಹೌದಮ್ಮ, ಸಂದೇಹ!
ಭಾರತಾಂಬೆ — ತಪ್ಪಾಯ್ತು! ತೆರಳುವೆನ್!
(ಹೊರಡಲೆಳಸುತ್ತಾಳೆ.)
ಭರತಸುತ — (ತಟ್ಟಕ್ಕನೆ ಎದ್ದುನಿಂತು)
ನಿಲ್ಲಮ್ಮ. (ಕೈ ಚಾಚಿ ಮುಂಬರಿವುತ್ತ)
ನೀನಾರು ಎಂಬುದನು ಹೇಳದೆಯೆ ಹೋಗುವೆಯಾ?
ಭಾರತಾಂಬೆ — ದಾನಿಗಳನರಸುತ್ತ ಹೋಗುವೆನು. ನಿನಗಿಲ್ಲ
ದಾನಮಾಡುವ ಹೃದಯ.
ಭರತಸುತ — ನೀನಾರ್ ತಿಳಿಸದನ್.
ನಿನಗೆಲ್ಲ ನೀಡುವೆನ್.
ಭಾರತಾಂಬೆ — ತಿಳಿಸಲ್, ಬೆದರ್ವೆ ನೀನ್.
ಬಿಕ್ಷೆ ನೀಡುವೆಯೇನ್? ನಾನಾರ್ ಎಂಬುದನ್
ಪೇಳ್ವೆನ್ ಅನಂತರಂ. ನೋಡಲ್ಲಿ, ಅಲ್ಲಿ!
(ಕಾಳಿಕಾವಿಗ್ರವನ್ನೂ ತೋರಿಸುತ್ತಾಳೆ. ಇಬ್ಬರೂ ನೋಡುವರು.)
ಆರ ಮನೆಯಿದು? ನೀ ಬಲ್ಲೆಯೇನ್?
ಭರತಸುತ — ಬಲ್ಲೆನಮ್ಮಾ. ಮಾಕಾಳಿಯಾಲಯಂ.
ಭಾರತಾಂಬೆ — ಮುರಿದಿಂತು ಹಾಳಾದುದೇಕೆ?
ಭರತಸುತ — ನಾನರಿಯೆನ್!
ಭಾರತಾಂಬೆ — ನಾ ಬಲ್ಲೆ. ಹೇಳುವೆನು ಕೇಳು:
ಭಕ್ತರೆದೆಯಲ್ಲವಳ ನರ್ತನವಿಲ್ಲದಾಯ್ತು!
ಅವಳ ದರ್ಶನಕಳುಕಿದರ್.
ನೆತ್ತರಿನ ನಾಲಗೆಯ ನೋಡಿ ಬೆದರಿದರ್;
ರುಂಡಗಳ ಮಾಲೆಯನು ಕಂಡು ನಡುಗಿದರು!
ಕರಿಯ ಬಣ್ಣವ ಕಂಡು ಹೇಸಿದರು.
ಕೈಯ ಕತ್ತಿಯ ಕಿತ್ತು, ಕೊಳಲನಿಟ್ಟರು ಅಲ್ಲಿ.
ರುಂಡಮಾಲೆಯನಿಳ್ದು ರಚಿಸಿದರು ವನಮಾಲಿಯಂ.
ಶಿವನೆದೆಯ ಮೇಲವಳು ಕುಣಿವುದನು ಬಿಡಿಸಿ
ಕೊಳಲೂದಿ ಕುಣಿವಂತೆ ಮಾಡಿದರು
ಗೋಪಿಯರೊಡನೆ.
ಅದರಿಂದ ವೀರತ್ವವಳಿದುದಯ್.
ರೌದ್ರಮಂ ಪೂಜಿಪುದ ಮರೆತಿಹರ್;
ಅದರಿಂದ ಪಾಳ್ ಬಿದ್ದುದೀ ದೇಗುಲಂ.
(ಧ್ವನಿ ಸೌಮ್ಯವಾಗಿ)
ವತ್ಸ, ಮಾಕಾಳಿ ಪೂಜಕನೆ ನೀನ್?
ಭರತಸುತ — ಅಹುದಮ್ಮ.
ಭಾರತಾಂಬೆ — (ಅಚ್ಚರಿಯಿಂದ ಎಂಬಂತೆ)
ಆದರೂ ಬೇಡಿದುದ ನೀಡಲಂಜಿದೇನ್?
ಭರತಸುತ — (ನಾಚಿ ತೆಲೆಬಾಗಿ) ಕೇಳಮ್ಮ, ನೀಡುವೆನು.
ಭಾರತಾಂಬೆ — ನೆತ್ತರನ್ ಕಂಡಳ್ಕುವೆಯ, ಹೇಳು?
ಭರತಸುತ — ನೆತ್ತರೊಳ್ ಮುಳುಗಿದರು ಬೆದರೆನ್.
ಭಾರತಾಂಬೆ — ಕತ್ತಿಯನ್ ಕಂಡಳ್ಕುವೆಯ ಹೇಳ್?
ಭರತಸುತ — ಕೂರಸಿಯನಲರೆಂದು ಮುಡಿಯುವೆನ್.
ಭಾರತಾಂಬೆ — ಕಂಪಿಸದೆ ಧರಿಸಬಲ್ಲೆಯ ಸೆರೆಯ ಸಂಕೋಲೆಯನ್?
ಸಿಡಿಗುಂಡಿನೆದುರಿನಲಿ ಎದೆಯೊಡ್ಡಿ ನಿಲ್ವೆಯೇನ್?
ಭರತಸುತ — ನಿಲ್ಲುವೆನ್, ತಾಯಾಣೆ!
ಭಾರತಾಂಬೆ — ಯಜ್ಞಗೈವೆಯ ನನಗೆ ನಿನ್ನ ದೇಹಮನ್?
ಭರತಸುತ — ಸಂತೋಷದಿಂದ.
ಭಾರತಾಂಬೆ — ಪಾಪಕಂಜುವೆಯೇನ್!
ಭರತಸುತ — (ತಡೆತಡೆದು)
ಅಂಜುವೆನ್, ತಾಯಿ
ಭಾರತಾಂಬೆ — ನನಗೋಸುಗಂ?
ಭರತಸುತ — (ಚಿಂತಿಸುತ್ತಾ ಸುಮ್ಮನಿರುತ್ತಾನೆ.)
ಭಾರತಾಂಬೆ — ಚಿಂತಿಸುವೆ ಏಕೆ? ಅಂಜದಿರು! ಕಾಯುವೆನು
ನಾನು! ನನಗಾಗಿ ಏನು ಬೇಕಾದರೂ
ಮಾಡು: ಹೊಣೆಗಾರಳಾನ್!
ಭರತಸುತ — ಮಾಡುವೆನು; ನಿನಗಾಗಿ. ಸ್ವಾರ್ಥಮಂ ಕರ್ಮಮಂ
ಫಲಬುದ್ಧಿಯಂ ತ್ಯಜಿಸಿ, ಮಾಡುವೆನು ನಿನಗಾಗಿ.
ಭಾರತಾಂಬೆ — ನೀನಿನ್ನು ನನ್ನವನ್.
ಭರತಸುತ — ಎಂದೆಂದು ನಿನ್ನವನೆ! ನೀನಾರು, ಮಾತಾಯಿ?
ಭಾರತಾಂಬೆ — ವೇದಗಳ ಹೆತ್ತವಳ್! ಯೋಗಿಗಳ ಪಡೆದವಳ್!
ಲೋಕಕ್ಕೆ ವೀರರನು ಕೊಟ್ಟವಳ್!
ಮಾನವಗೆ ಬುದ್ಧಿನೀಡಿದ ತಾಯಿ,
ನಾನ್ ಭಾರತಾಂಬೆ! (ಸುಯ್ದು)
ಗುರುತಾಯಿತೇ ಈಗ?
ಭರತಸುತ — (ಬದ್ಧಾಂಜಲಿಯಾಗಿ) ಜನನಿ, ನಿನಗೇತಕೀ ದುರವಸ್ಥೆ?
ಭಾರತಾಂಬೆ — ಸೆರೆಯಾಳು ನಾನು. ನೋಡು,
ಕೈಕಾಲ್ಗಳಂ ಬಿಗಿದ ಸಂಕೋಲೆಗಳ್!
(ತೋರುತ್ತಾಳೆ.)
ಭರತಸುತ — (ರೋಷದಿಂದ) ಕಳಚುವೆನ್, ತಾಯಿ!
ಭಾರತಾಂಬೆ — ಬಲವಿರಲ್ ಕಳಚಬಲ್ಲೆಯ ಕಾಣ್.
ಭರತಸುತ — (ಪ್ರಯತ್ತಿಸಿ, ಸೋತು ಏದುತ್ತಾ)
ಕಬ್ಬಿಣದ ಸಂಕೋಲೆಗಳ್, ತಾಯಿ,
ತುಂಡುಮಾಡಲು ನನಗೆ ಬಲವಿಲ್ಲ.
(ನೋಡಿ ಅಚ್ಚರಿಯಿಂದ)
ಬೀಗವಿದೆ! ಬೀಗ ಹಾಕಿದ ದುರುಳನಾರಮ್ಮಾ?
ಭಾರತಾಂಬೆ — ನಾನರಿಯೆ, ಯಾರು ಹಾಕಿದರೆಂದು.
ಪರಕೀಯರೆಂದೊಮ್ಮೆ ಯೋಚಿಸುವೆ,
ನನ್ನವರೆ ಎಂದೊಮ್ಮೆ ಗೋಳಿಡುವೆ. (ನೀಳ್ದನಿಯಿಂದ)
ಆರೆಂದರಿಯೆನ್!….
ನಾನು ಮಲಗಿದ್ದಂದು ಬೀಗ ಹಾಕಿದರಪ್ಪಾ!
ಕೀಲಿ ಕೈ ಇಲ್ಲ.
ಭರತಸುತ — ಕೀಲಿಕೈ ಆರ ಬಳಿ ಇರುವುದಮ್ಮಾ!
ಭಾರತಾಂಬೆ — ಹೇಳಲಂಜುವೆ, ಮಗೂ.
ಭರತಸುತ — (ಕೆಚ್ಚಿನಿಂದ)
ಹೇಳು. ಜೀವವ ತೆತ್ತು ಬಂಧನವ ಬಿಡಿಸುವೆನ್.
ಭಾರತಾಂಬೆ — ಗುಟ್ಟಾಗಿ ಹೇಳುವೆನು, ಕೇಳು. (ಕಿವಿಯಲ್ಲಿ ಹೇಳುತ್ತಾಳೆ.)
ಭರತಸುತ — (ಕೋಪಾತಿಶಯದಿಂದ)
ಹೇ ದುಷ್ಟ, ನಿನ್ನನಿದುವರೆಗೂ ಗೆಳೆಯನೆಂದೇ
ತಿಳಿದು ಮರುಳಾದೆ!…… ತಪ್ಪಾಯಿತಮ್ಮಾ;
ಅಪರಾಧಿ ನಾನ್! ಕೀಲಿ ಕೈಯನು ತಂದು ಬಿಡಿಸುವೆನ್.
ಭಾರತಾಂಬೆ — (ವಾತ್ಸಲ್ಯದಿಂದ)
ತರಲು ಹೋದವರಲ್ಲಿ ಒಬ್ಬನಾದರು ಮರಳಿ
ಬರಲಿಲ್ಲ. ನಿನ್ನ ಗತಿ?
ಭರತಸುತ — ಮೃತ್ಯು, ಅಥವಾ ಸಿದ್ಧಿ!
ಭಾರತಾಂಬೆ — ದುಡುಕದಿರು, ವತ್ಸ, ದುಡುಕದಿರ್. ಎಚ್ಚರಿಕೆ!
ಭರತಸುತ — ನಿನ್ನ ಕೃಪೆಯೊಂದಿರಲಿ, ಗೆಲ್ಲುವೆನ್!
ಮಡಿದರೂ ನಿನಗಾಗಿ ಕದನದಲಿ ಮಡಯುವೆನ್!
ಹರಸಿ ಕಳುಹಮ್ಮಾ.
ಭಾರತಾಂಬೆ — (ಆಶೀರ್ವಾದ ಮುದ್ರೆಯಿಂದ)
ವಿಜಯೀ ಭವ! ಹೋಗಿ ಬಾ, ಕಂದ ಬೇಗ ಬಾ!
[ಭರತಸುತನು ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ತಾಯಿ ಕೈಯೆತ್ತಿ ಹರಸುತ್ತಾಳೆ. ಮತ್ತೆ ರಾಷ್ಟ್ರಗೀತಗಾನ ಮೆಲ್ಲನೆ ಮೊದಲಾಗಿ ಬರುಬರುತ್ತಾ ಸಮುದ್ರಘೋಷೋಪಮವಾಗಿ ಉಕ್ಕುತ್ತದೆ.]
Leave A Comment