[ಪಾಳು ಬಿದ್ದಿರುವ ಕಾಳಿಕಾ ದೇವಾಲಯ. ಕಗ್ಗತ್ತಲು ಬದಲಾಗಿ ಮಬ್ಬು ಕತ್ತಲೆ ಕವಿದಿದೆ. ಕಾಳಿಕಾ ವಿಗ್ರಹಕ್ಕೆ ತುಸು ದೂರದಲ್ಲಿ ಭಾರತಾಂಬೆ ಯಾತನಾ ಕ್ಲಿಷ್ಟವೂ ವಿಷಣ್ಣದೀನವೂ ಆಗಿರುವ ಮುಖ ಮುದ್ರೆಯಿಂದ ನಿಲ್ಲಲಾರದೆ ಎಂಬಂತೆ ನಸುಬಾಗಿ ನಿಂತಿದ್ದಾಳೆ. ಕೈಕಾಲುಗಳಲ್ಲಿ ಕಬ್ಬಿಣದ ಸಂಕೋಲೆಗಲಿವೆ. ಒಂದು ಸರಪಳಿ ಭುಜದ ಮೇಲಿಂದ ಕಾಳೋರಗದಂತೆ ನೇತುಬಿದ್ದು ವಕ್ಷಮಧ್ಯೆ ಹರಿದಿಳಿದಿದೆ. ಆಕೆಯ ಬಟ್ಟೆ ಮಾಸಲು, ಚಿಂದಿ ಚಿಂದಿ. ಕಿರೀಟ ಮುತ್ತು ರತ್ನಗಳೆಲ್ಲ ಉದುರಿ ಶಿಥಿಲವಾಗಿದೆ. ಕೂದಲು ಬಾಚದೆ ಹಿಕ್ಕದೆ ಗಂಟು ಗಂಟಾಗಿ ಕೆದರಿದೆ. ಕಣ್ಣುಗಳಿಂದ ತೊರ ಹನಿಗಳ ಉದುರಿದ ಗುರುತು ಕಾಣಿಸುತ್ತಿದೆ. ನಡು ನಡುವೆ ಸುಯ್ಯುತ್ತಾಳೆ. ಕಷ್ಟದಿಂದ ಕತ್ತೆತ್ತಿ ಭರತಸುತನು ಹೋದತ್ತಕಡೆ ನಿರೀಕ್ಷಣಾದೃಷ್ಟಿಯಾಗುತ್ತಾಳೆ. ಬಿಮ್ಮೆನ್ನುವ ಪಾಳು ಮೌನದಲ್ಲಿ ಶೃಂಖಲೆಗಳ ಖಣಿ ಖಣಿಲು ವಿಕಟವಾಗಿ ಕೇಳಿಸುತ್ತದೆ.]

ಭಾರತಾಂಬೆ — ಓ ಎಂದಿಗೈತಹೆ, ಮಗೂ, ಮಗೂ, ಮಗೂ?
ಎಂದಿಗೀ ಶೃಂಖಲಾ ಸಂಟದಿನೆನ್ನಂ
ವಿಮುಕ್ತೆಯಂ ಮಾಳ್ಪೆ? ಎಂದಿಗೀ ಕವಿದಿರ್ಪ
ತಮೋಭಾರಮಂ ತವಿಪಯ್‌, ಜ್ಯೋತಿಯಿಂದೀ ದೇಗುಲಂ
ಬೆಳಗುವೋಲ್‌? ಎಂದಿಗೀ ದೈನ್ಯ ದಾರಿದ್ರ್ಯಮಂ
ಛೇದಿಸಿ, ಹೃದಂಬುಜದಿ ಗೌರವಶ್ರೀಯಂ
ಪ್ರಚೋದಿಸುವೆ? ಓ ಎಂದಿಗೈತಹೆ, ಮಗೂ? ಮಗೂ!
(ಗೂಬೆಯೊಂದು ಗೂ ಗು ಎಂದೂಳ್ದು ಹಾರಿ ಹೋಗುತ್ತದೆ. ಭಾರತಾಂಬೆ ಕಡೆ ನೋಡಿ)
ಬಹನೊ ಬಾರನೊ? ಶಕುನಮಾವುದಂ ಸೂಚಿಸಿತೊ
ಆ ಇರುಳ್‌ಗಣ್‌ವಕ್ಕಿ! (ಕಾಳಿಕಾ ವಿಗ್ರಹದ ಕಡೆ ತಿರುಗಿ)
ಮಹೇಶ್ವರಿ, ಮಹಾಕಾಳಿ,
ಮಾಲಕ್ಷ್ಮಿ ಮೇಣ್‌ ಮಹಾಸರಸ್ವತಿ ಸರ್ವಮುಂ
ನೀನಾಗಿಯುಂ, ತಾಯಿ, ಲೀಲಾಮಯೀ, ಜಗನ್ಮಾತೆ,
ಇಂದಾವ ಕ್ರೀಡಾವಿನೋದಕೀ ವೇಷಮಂ
ತಳೆದಿರ್ಪೆ? ಸರ್ವಶಕ್ತಳ್ ನೀನ್‌ ಅಶಕ್ತೆಯೋಲ್‌
ಕೆಮ್ಮನಿಹೆ! ಸರ್ವಭುವನಶ್ರೀ ನೀನ್‌ ದರಿದ್ರೆಯೋಲ್‌
ಬಿನ್ನಗಿಹೆ! ನನ್ನ ಕಂದಂಗಿನಿತು ಕೃಪೆದೋರ್;
ಅನುಗ್ರಹಿಸು ನನ್ನನುಂ.
(ಗೂಬೆ ಹಾರಿಹೋದ ಕಂಡಿಯಿಂದ ಒಂದು ಕಿರಣ ಪ್ರವೇಶಿಸಿ ನೇರವಾಗಿ ಭಾರತಾಂಬೆಯ ಮೇಲೆ ಬೀಳುತ್ತದೆ.)
ಅರಿತೇನೀಗಳ್‌, ಬರ್ಪ
ಈ ಬೆಳಕಿಗಳ್ಕಿ ಪಾರ್ದೋಡಿದತ್ತಾ ನಿಶಾಪ್ರೇಮಿ!
ಆವುದೀ ಕಿರಣಮಾಶಾಹಸ್ತಮೆಂಬಂತೆ
ಬಂದುದೀ ತಾಯಿಯಾಶೀರ್ವಾದ ದೂತನೋಲ್‌?
(ದೂರದಿಂದ ಜನಘೋಷವನ್ನು ಮೀರಿವಂದೇ ಮಾತಂಗೀತೆ ಬರಬರುತ್ತ ಸ್ಪಷ್ಟತರವಾಗಿ ಕೇಳಬರುತ್ತದೆ. ಭಾರತಾಂಬೆ ಹರ್ಷ ಚಕಿತೆಯಾಗಿ ಆಲಿಸುತ್ತ ನಿಲ್ಲುತ್ತಾಳೆ.)

ವಾಣಿ — ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜಶೀತಲಾಂ
ಸಸ್ಯಶ್ಯಾಮಲಾಂ ಮಾತರಂ,
ವಂದೇ ಮಾತರಂ!

ಭಾರತಾಂಬೆ — ಆವುದೀ ದಿವ್ಯ ಗೇಯಂ, ಮಾಧುರ್ಯಸ್ವರ್ಧುನಿಯವೋಲ್‌
ತೆರೆತೆರೆಯೆ ತಾನುಕ್ಕಿ ಪೊನಲ್ವರಿದು ಬಂದುಪುದು?
ಮಂತ್ರಶಕ್ತಿಯೆ ಮೂಡಿ ಗಾನರೂಪವನಾಂತು
ಬಂದಂತೆ ಬರ್ಪುದೆನ್ನೀ ಹೃದಯ ಗಹ್ವರದಿ
ಶಕ್ತಿ ತಾಂ ಸಂಚರಿಸೆ!
ಕೀಲಿಕೈಯಂ ತರಲ್‌ ಪೋದ ಕಂದನ ಕೊರಳೊ?
ಮೇಣ್‌ ಬಾನ್‌ಬಟ್ಟೆಯನ್‌ ಅಲೆವ ಆವನಾದರದೊರ್ವ
ಸಗ್ಗಿಗನ ಕಂಠದಿಂ ಬುಗ್ಗೆಯುಕ್ಕುವ ಉಲಿಯೊ?
ಅಃ ಏನಿಂಚರಂ? — ತೇಲಿ ಬಂದುಪುದು
ನಿರಾಶಾ ತಮಂಧಮಂ ತವಿಪ ರವಿಯುದಯದೋಲ್‌!

ವಾಣೀ — ಶುಭ್ರಜ್ಯೋತ್ನ್ಯಾ ಪುಲಕಿತಯಾಮಿನೀಮ್‌
ಫುಲ್ಲಕುಸುಮಿತ ದ್ರುಮದಲ ಶೋಭಿನೀಮ್‌
ಸುಹಾಸಿನೀಮ್‌ ಸುಮಧುರ ಭಾಷಿಣೀಮ್‌
ಸುಖದಾಂ ವರದಾಂ ಮಾತರಂ!
ವಂದೇ ಮಾತರಂ!

ಭಾರತಾಂಬೆ — ಬೆಳ್ದಿಂಗಳ್‌! ಬೆಳ್ದಿಂಗಳಂ ಮಿಂದಿರುಳ್‌!
ಅರಳಿದರಲಂ ಮೆರೆವ ಬಾನೆತ್ತರದ
ಕಾಡುಮಲೆ ಕೊಡುಗಳ್‌
ಏನ್‌ ಪಯಿರ್ನಗೆಯೊ! ಏನ್‌ ಪಕ್ಕಿಯಿಂಚರಮೊ!
ಕೋಗಿಲೆಯ ನಿಡುಸರಮೊ? ಗಿಳಿಗಳುಲಿಯೊ?
ಅಃ ಈ ಕತ್ತಲೆಯ ಸೆರೆಯ ಒಬ್ಬೊಂಡಿಗಳ್‌ ನನಗೆ
ಮಾತುಗಳೆ ತೂಂತಿಟ್ಟವೋಲ್‌ ಮೆರೆಯುತಿವೆ ಬಗಗಣ್ಗೆ
ಚೆಲ್ವು ಚಿತ್ರಂಗಳ್ ಮೇಣ್‌ ಇಂಚರಂಗಳ್‌
ನಾನಾಗುವಾಸೆಗೊಡ್ಡಿರ್ಪ ಕನ್ನಡಿಯ ತೆರದಿ
ನನ್ನಿರ್ಪ ದುಸ್ಥಿತಿಯ ಮೂದಲಿಸುತಿಹುದಲ್ತೆ!
ನಮೆಯುತಿರೆ ನಾನಿಂತು — ಅಯ್ಯೊ
ಎಂದಿಗಾಗುವೆನಂತು?

ವಾಣೀ — ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಅನೇಕ ಕೋಟಿ ಭುಜೈರ್ಧೃತ ಖರ ಕರವಾಲೇ!

ಭಾರತಾಂಬೆ — ದಿಟಂ ನಾನಬಲೆಯಲ್ತು.
ನಾನಬಲೆಯೆಂಬರಾರ್?

ವಾಣೀ — ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುಬಲ ವಾರಿಣೀಂ ಮಾತರಂ
ವಂದೇ ಮಾತರಂ!

ಭಾರತಾಂಬೆ — ಧೈರ್ಯಮಂ ತುಂಬುತಿದೆ ಧೀರ ಗೀತಂ:
ಋಷಿಯಲ್ಲದನ್ಯರ್ಗೆ ಸಾಧ್ಯಮಲ್ತೀ ಸಾಹಸಂ!

ವಾಣೀ — ತುಮಿ ವಿದ್ಯಾ ತುಮಿ ಧರ್ಮ,
ತುಮಿ ಹೃದಿ ತುಮಿ ಮರ್ಮ,
ತ್ವಂ ಹಿ ಪ್ರಾಣಾಃ ಶರೀರೆ!
ಬಾಹು ತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಯ್‌ ಪ್ರತಿಮಾ ಗಡಿ ಮಂದಿರೇ ಮಂದಿರೇ!

ಭಾರತಾಂಬೆ (ಕಾಳಿಕಾಮೂರ್ತಿಯ ಕಡೆ ಕೈಮುಗಿದು)
ನೀನೆ ವಿದ್ಯೆ, ನೀನೆ ಧರ್ಮ,
ನೀನೆ ಸತ್ತ್ವ, ನೀನೆ ಮರ್ಮ,
ತೋಳ್ಗಳಲ್ಲಿ ನೀನೆ ಶಕ್ತಿ
ಹೃದಯದಲ್ಲಿ ನೀನೆ ಭಕ್ತಿ.
ಗುಡಿಗುಡಿಯೊಳೂ ನೀನೆ ಮೂರ್ತಿ
ಸರ್ವ ಹೃದಯ ತಪಃಸ್ಪೂರ್ತಿ,
ಹೇ ಜಗದ್ಧಾತ್ರಿ!

ವಾಣೀ — ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ,
ವಂದೇ ಮಾತರಂ!
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ
ವಂದೇ ಮಾತರಂ!

ಭಾರತಾಂಬೆ (ಕಾಳಿಕಾ ವಿಗ್ರಹವನ್ನು ದೃಷ್ಟಿಸಿ ಸುಸ್ಮಿತೆಯಾಗಿ ಧೀರ ಭಾವದಿಂದ ಒಂದೊಂದು ನುಡಿಯನ್ನೂ ಬಿಡಿಬಿಡಿಯಾಗಿ ಹೇಳಿಕೊಂಡು ರಸಾಸ್ವಾದನೆ ಮಾಡುತ್ತಾಳೆ.)
ದುರ್ಗೇ: ದಶಪ್ರಹರಣ ಧಾರಿಣೀ! ಕೊಲ್ವವಳ್‌!
ಕಮಲೇ: ಕಮಲದಲ ವಿಹಾರಿಣೀ! ಚೆಲ್ವಿಗೆ ನೆಲೆ ನೀ ಲಕ್ಷ್ಮಿ!
ವಾಣೀ: ಜಾಣ್ಮೆಯ ಕಣಿ — ಸರಸ್ವತಿ! ನಮೋ!
ನೀನಮಲೆ, ನೀನತುಲೆ! ಸುಜಲೆ, ಸುಫಲೆ!
ಶ್ಯಾಮಲೆ! ಸರಲೆ! ಸುಸ್ಮಿತೆ! ಭೂಷಿತೆ!
ಧರಣೀಂ ಭರಣೀಂ ಮಾತರಂ
ವಂದೇ ಮಾತರಂ!
ಎಂತಪ್ಪ ಮಂತ್ರಗಾನಂ! ನನ್ನೊಣಗು ಮೆಯ್ಯೊಳುಂ
ಚೋದಿಸಿತು ದಿವ್ಯ ಚೈತನ್ಯಮಂ : ಆಲಿಸಿರೆ,
ಆಲಿಸುತ್ತಾಲಿಸುತ್ತೇನ್ನನೇ ನಾ ಮರೆತು
ನಾನೆ ಆ ಬಣ್ಣನೆಯ ದೇವಿಯಾಗಿರ್ದೆನಲ್ತೆ!
(ಕಂಡಿಯಿಂದ ಬರುತ್ತಿದ್ದ ಕಿರಣ ಕಾಂತಿ ಒಯ್ಯನೆ ಮೋಡ ಕವಿದಂತೆ ಮರೆಯಾಗುತ್ತದೆ. ತನ್ನ ದುಃಸ್ಥಿತಿಯನ್ನು ನೋಡಿಕೊಳ್ಳುತ್ತ ಮತ್ತೆ)
ಅಯ್ಯೊ ಆ ದೇವಿಯರ್? ನಾನಾರ್?
ಅವಳ್‌ ಸರ್ವಸ್ವತಂತ್ರೆ, ನಾನೊ ಪೂರ್ಣ ಪರತಂತ್ರೆ. —
ಇನ್ನೆಂದೊ ನನಗೆ ಆ ಮುಕ್ತಿ? —
ಪಿಂತಿರುಗಿ ಬಂದಪನೊ ಆ ನನ್ನ ಕಂದನ್‌,
ತಂದಪನೊ ಕೀಲಿಕಯ್ಯನ್‌
ಮೇಣ್‌ ಇತರರಂದದೋಳ್‌ ಬಲಿವೋದಪನೊ ಪಗೆಗೆ?
ಆವ ಸೆರೆಯೊಳ್‌ ಕೊರಗುತಿರ್ಪನೊ?
ಆರ ಹಿಂಸೆಗೆ ನರಳುತಿರ್ಪನೊ?
ಮೇಣ್‌ ಗಾಯಗೊಂಡಿನ್ನೆಲ್ಲಿ ಕೊಳೆಯುತಿರ್ಪನೊ?
ಎನಿತೊ ಬರಿಸಗಳಾಯ್ತು; ಇನ್ನೆಲ್ಲಿ ಬಂದಪನ್‌?
(ಮತ್ತೆ ಮೋಡ ಸರದಿಂತಾಗಿ ಕಿರಣಕಾಂತಿ ಹೆಚ್ಚಿ ಮೊದಲಿನಂತೆ ಸ್ವಷ್ಟವಾಗುತ್ತದೆ. ಮತ್ತೆ ಜನಘೋಷ ಕೇಳಿಬರುತ್ತದೆ. ‘ನಡೆ ಮುಂದೆಎಂದ ರಣಗೀತೆ ಕೇಳಿಬರುತ್ತದೆ.)

ವಾಣೀ — ನಡೆ ಮುಂದೆ! ನಡೆ ಮುಂದೆ!
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ!
(ಢಂ ಢಂ ಎಂದು ಗುಂಡುಗಳ ಸದ್ದು ಕೇಳಿಸುತ್ತದೆ. ಒಡನೆಯೆ ರಣಗೀತೆ.)
ಬೆಚ್ಚ ಬಿಡು, ನೆಚ್ಚ ನೆಡು,
ಕೆಚ್ಚೆದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
(ಸತ್ತೆನಯ್ಯೋ — ನೀರು, ನೀರು, ನೀರು ಎಂಬ ಕೂಗು ಕೇಳಿಸುತ್ತದೆ.)
ಅಳಿವೆ ನಾನ್‌, ಅಳಿವೆ ನೀನ್‌,
ನಮ್ಮೆಲುಬುಗಳ ಮೇಲೆ
ಮೂಡುವುದು ನೋಡು ಅದೊ
ನವಭಾರತದ ಲೀಲೆ!……
ಆತ್ಮ ಅಚ್ಯುತವೆಂದು
(ಮತ್ತೆ ಗುಂಡಿನ ಶಬ್ಚ. ಖಡ್ಗಗಳ ಝಣತ್ಕಾರ ವೀರಘೋಷ.)
ಮೃತ್ಯು ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ! ನಡೆ ಮುಂದೆ!
ನುಗ್ಗಿ ನಡೆ ಮುಂದೆ!……
(ಇದಕ್ಕಿದ್ದ ಹಾಗೆ ಕಿರಣಕಾಂತಿ ಕೆಂಪಾಗಿ ರಕ್ತವರ್ಣ ಗುಡಿಯ ತುಂಬ ಹಬ್ಬುತ್ತದೆ. ಭಾರತಾಂಬೆಯ ಮುಖಮ್ಲಾನತೆ ಮಣ್ದು ವೀರಶ್ರೀ ಉಗ್ರವಾಗಿ ಶೋಭಿಸತೊಡಗುತ್ತದೆ. ಶೃಂಖಲೆಯ ಲೋಹನಾದ ಸ್ಪಂದಿಸುತ್ತದೆ. ಆಕೆಯ ಕಣ್ಣು ಭಯಂಕರ ದೀಪ್ತಿಯಿಂದ ಬೆಳಗುತ್ತದೆ.)

ಭಾರತಾಂಬೆ — ಮಗೂ, ನನ್ನ ಬಿಡುಗಡೆಯ ಜನ್ನಕ್ಕೆ ನೀಂ
ಪೊತ್ತಿಸಿದ ಬೆಂಕೆಯಿದು ಈ ಕ್ರಾಂತಿ!
ಹರಕೆಯಿದೊ : ಉರಿಗೆ ನೀನೊಳಗಾಗದಿರು!
(ಜನಘೋಷದ ರೌದ್ರತೆ ಹೆಚ್ಚುತ್ತದೆ. ‘ವಂದೇ ಮಾತರಂ ‘, ‘ಮಹಾತ್ಮಾ ಗಾಧಿಕೀ ಜಯ್‌ ‘ ಮೊದಲಾದ ಘೋಷಗಳು ಹಾಹಾಕಾರವನ್ನೂ ಮೀರಿ ಕೇಳಿ ಬರುತ್ತದೆ. ದೊಡ್ಡದೊಂದು ಅಗ್ನಿಜ್ವಾಲೆಯ ದೀಪ್ತಿ ದೇವಸ್ಥಾನವನ್ನೆಲ್ಲಾ ಕಂಪಗೆ ಬೆಳಗಿ ಭೀಕರವಾಗುತ್ತದೆ.)

ಭಾರತಾಂಬೆ — ಏನಿದೀ ಬೆಂಕಿ?
ಗೋಪುರೋಪಮವೆದ್ದು ಗಗನಮಂ ತಿವಿಯುತಿದೆ!
ವಸ್ತ್ರ ದಹನದ ಧೂಮವಾಸನೆಯೊ?
ಮನೆಮನೆಗಳುರಿವ ಕೌರಿನ ಹೊಗೆಯೊ? —
ಮಗೂ, ಸರ್ವ ದೇವರುಗಳೂ ನಿನಗಕ್ಕೆ ರಕ್ಷೆ!
(ಭಾರತಾಂಬೆ ಕಿವಿಗೊಡುತ್ತಾಳೆ.)

ವಾಣೀ — ವೇದಋಷಿ ಭೂಮಿಯಲಿ ನಾಕನರಕಗಳಿಂದು
ಸಾವು ಬುದಕಿನ ಕಟ್ಟಕಡೆಯ ಹೋರಾಟದಲಿ
ಸಂಧಿಸಿವೆ. ಮಾನವನೆದೆಯ ಕಾಳಕೂಟದಲಿ
ಅಮೃತವನೆ ಹಾರೈಸಿ, ಬಲಿರಕ್ತದಲಿ ಮಿಂದು,
ಕಾದಿಹೆವು ಕಣ್ಣೀರು ತುಂಬಿ, ನಾಗರಿಕತೆಯ
ನಾಗಿನಿಯು ಪ್ರಗತಿನಾಮಕ ಫಣೆಯ ಮೇಲೆತ್ತಿ
ಚುಂಬಿಸಿಯೆ ಕೊಲ್ಲಲೆಳಸುತಿದೆ: — ಹಿಂದಿನ ಬುತ್ತಿ
ಸಮೆಯುತಿದೆ. ಇಂದಿನ ಮಹಾ ತಪಸ್ಸಿನ ಚಿತೆಯ
ರಕ್ತಿಮ ವಿಭೂತಿಯೊಳೆ ಮುಂದಿನ ನವೋದಯದ
ಧವಳಿಮ ಪಿನಾಕಧರನೈತಹನು : ಮತ್ತೊಮ್ಮೆ
ಭಾರತಾಂಬೆಯು ಜಗದ ಬೆಳಕಾಗುವಳು : ಹೆಮ್ಮೆ
ಗೌರವಗಳಿಂದ ಜನಗಣದ ಕಟು ನಿರ್ದಯದ
ಲೋಭ ಬುದ್ಧಿಯ ಹೀನ ಕುಟಿಲತೆಯನುರೆ ನೀಗಿ
ಮೆರೆವಳು ತಪಸ್ವಿನಿಯೆ ಚಕ್ರಮರ್ತಿನಿಯಾಗಿ!

ಭಾರತಾಂಬೆ — ನನ್ನ ಮಂಗಳ ಗತಿಯನಿಂತುಲಿವ ನಿನಗೆ
ಕೋಟಿ ಮಂಗಳಮಕ್ಕೆ, ಕವಿಕುಮಾರ.
ನಿನ್ನ ಶುಭದಾದೇಶಮದು ಶೀಘ್ರದಿಂ ಸಲ್ಗೆ!
ನಿನ್ನ ಜನನಿಯ ಕೀರ್ತಿ ಲೋಕತ್ರಯದಿ ನಿಲ್ಗೆ!
ಪುಣ್ಯ ಸಂಸ್ಕೃತಿ ಗೆಲ್ಗೆ! ಶಾಂತಿ ಬಾಳ್ಗೆ!
(ಮತ್ತೆ ರಕ್ತಕಾಂತಿ ಮಾಣ್ದು ಶ್ವೇತವರ್ಣದ ದೀಪ್ತಿ ದೇವಾಲಯವನ್ನು ವ್ಯಾಪಿಸುತ್ತದೆ.)
ಮತ್ತಿದೇನ್‌? ಮಾಣ್ದುದಾ ಶೋಣಿತ ಜ್ವಾಲೆ!
ಶಾಂತಿಯಂ ಪಸರಿಸಿಹುದೀ ಧವಳಾಗ್ನಿ ಲೀಲೆ!
(ನೋಡುತ್ತಾ ಕಿವಿಗೊಡುತ್ತಾಳೆ.)

ವಾಣೀ — ಈ ಮಹಾ ಸ್ವಾತಂತ್ರ್ಯರಣಯಾಗಧೂಮದಲಿ
ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ; ನಿಶ್ಚಲಂ
ರಂಜಿಸುತ್ತಿದೆ — ಶಾಂತಿಯಲಿ ಹಿಮಮಹಾಚಲಂ
ರಾರಾಜಿಪಂತೆ ನೀಲಿಮ ನಭೋಧಾಮದಲಿ.
ಲೋಕಲೋಚನದಂತರಾಳದಾರಾಮದಲಿ
ವಿಶ್ವಕಂಪನಕಾರಿಯಾದ ದರ್ಮದ ಬಲಂ
ಮೂರ್ತಿಗೊಳೆ ಮೂಡಿದೀತನು ಮಹಾತ್ಮನೆ ವಲಂ!
ಬಾಳು ಪಾವನಮಾದುದೀತನಿಂ ಭೂಮಿಯಲಿ!
ಓ ಮಹಾತ್ಮನೆ, ನಿನ್ನ ಸಾನ್ನಿಧ್ಯ ತೀರ್ಥದಲಿ
ಮಾನವನ ಮೋಹ ಮದ ಮಾತ್ಸರ್ಯಗಳು ಮಿಂದು
ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ
ಭಾರತಾಂಬೆಯ ಸಿರಿವಸಿರಿನಿಂದಲೈತಂದು
ಧರ್ಮದಲಿ ನೆಚ್ಚುಗೆಡುತಿದ್ದೆಮಗೆ ನೀನಿತ್ತೆ!
ಪ್ರಚ್ಛನ್ನ ಕಲ್ಕಿ ಓ, ದೃಢಭಕ್ತಿಯನು ಮತ್ತೆ!

ಭಾರತಾಂಬೆ — ಧನ್ಯೆ ನಾನಾತನಂ ಪಡೆದು! —
ಇಂದು ಭುವನಕೆ ಮಾನ್ಯೆ ನಾನಾತನಿಂ!
ಬಹುಯುಗ ತಪಸ್ಯೆಯಿಂ ಪಡೆದಿರ್ಪೆನಾತನಂ,
ಲೋಕಕ್ಕೆ ಶಾಂತಿದೂತನಂ!
ಕಂದರೊಳ್‌ ಕಂದನಂ
ನನ್ನ ಹೃದಯಾನಂದನಂ!

[ಮತ್ತೆ ಮಬ್ಬು ಮುಸುಗುತ್ತದೆ. ನಿಶ್ಯಬ್ದವಾಗಿ ಕತ್ತಲೆ ಹೆಚ್ಚುತ್ತಾ ಹೋಗಿ ಕಗ್ಗತ್ತಲೆ ಕವಿಯುತ್ತದೆ. ದೂರದಲ್ಲಿ ಸಿಡಿಮದ್ದಿನ ಸದ್ದು ಕೇಳಿಸುತ್ತದೆ. ಜನರ ರಣಘೋಷ ವಿಮಾನಗಳ ಝಂಕಾರ ಇತ್ಯಾದಿ ತಾಯಿಯ ಅಳು, ಹಸುಳೆಯ ನರಳು ಇತ್ಯಾದಿ. ಭಾರತಾಂಬೆ ಸುಯ್ದು ಸಂತಪಿಸುತ್ತಾಳೆ.]

ಭಾರತಾಂಬೆ — ಇರುಳ್‌, ಪಗಲ್‌; ಪಗಲ್‌, ಇರುಳ್‌.
ಮತ್ತಿದೇನ್‌ ಕವಿದುದೀ ಕಲ್‌ಗತ್ತಲೆ!
ಯುದ್ಧ ಭೂತಂ ತೊಳಲುತಿದೆ ಬರಿಬತ್ತಲೆ!

ವಾಣೀ — ಸುತ್ತಿದನು ಪೃಥ್ವಿಯಂ ಸಮರ ಶೇಷಂ, ತನ್ನ
ನಾನಾ ರಣದ ಫಣೆಗಳಂ ನಿಮಿರಿ, ಮೃತ್ಯುಮಯ
ಗರಳದಿಂ ದೇಶದೇಶದ ಬಾಳ್ಗೆ ಕಷ್ಟ ಭಯ
ಶೋಕ ರುಜೆ ದಾಸ್ಯಗಳನಡಕಿ. ಕೊಲ್ಲುವ ಮುನ್ನ
ಕಾಳಕೂಟವ ಕುಡಿವ ಕೈಲಾಸಪತಿಯೆಲ್ಲಿ?….

ಭಾರತಾಂಬೆ — ಎಂದಿಗಿದು ಮುಗಿಯುವುದೊ ಆ ದೇವನೆಯೆ ಬಲ್ಲ.
ಕತ್ತಲೆಯೆ ನುಂಗುತಿದೆ ಲೋಕ ಲೋಕವನೆಲ್ಲ.
ಸಹಿಪೆನೆಂತೀ ಕ್ರೂರ ದಾಸ್ಯಮಂ?
(ಕತ್ತಲಲ್ಲಿ ಕಾಣಿಸದೆ ಒಂದು ಧ್ವನಿ ಮಾತ್ರ ಕೇಳಿಸುತ್ತದೆ.)

ಧ್ವನಿ — ಸತ್ತವರ ಕರೆಯು, ಓ ಕೂಗುತಿದೆ, ಅದೊ ಕೇಳು,
ಭೂತಕಾಲದ ಗರ್ಭಗೋರಿಯಿಂದ;
ಆಲಿಸಿಯು ಅದನು ನೀ ಸುಮ್ಮನಿರುವೆಯ ಹೇಳು,
ದೇಶಮಾತೆಯು ಹಡೆದ ವೀರಕಂದಾ?
ಏಳಿರೈ ಸೋದರಿರ, ನಿಮಗಾಗಿ ಮಡಿದೆಮ್ಮ
ಮರೆಯದಿರಿ, ನಿಮ್ಮಣ್ಣತಮ್ಮದಿರನು….
ಇರಲಿ ಹೂವಿನ ಮಾಲೆ, ಇರಲಿ ರೇಶ್ಮೆಯ ವಸನ,
ಇರಲಿ ಮುತ್ತಿನ ಹಾರ! ಕೈಗತ್ತಿ ಬರಲಿ!
ಇರಲಿ ಹೊಸ ಹೆಣ್ಣು ಮದುವೆಯ ಸೊಗಸು ಶೃಂಗಾರ;
ಬರಲಿ ಕಾರಾಗಾರ! ಮೃತ್ಯುವೈತರಲಿ!
ರಕ್ತಹೃದಯದ ಬಿಸಿಯ ರಕ್ತತರ್ಪಣವಿತ್ತು
ತಣಿಸಿರೈ ಸತ್ತರಾ ಬಯಕೆ ತೆತ್ತು;
ಇಲ್ಲದಿರೆ ನಿಮಗಾಗಿ ಸತ್ತೆಮಗೆ ಸೊಗವಿಲ್ಲ,
ಬದುಕಿರುವ ನಿಮಗುಮಾ ಬದುಕೆ ಮಿತ್ತು!
ಇಂದು ರಕ್ತದ ಬಿಂದು, ಮುಂದೆ ಸೌಖ್ಯದ ಸಿಂಧು!
ಎಂದು ಸಾಹಸಕೇಳಿ, ಹೀಜರಿಯ ಬೇಡಿ!
(ಒಬ್ಬ ಬಾಲಕನ ಛಾಯೆ ಸುಳಿಯುತ್ತದೆ.)

ಭಾರತಾಂಬೆ — ನೀನಾರು, ಮಗು?
ಆವ ತಾಯಿಯ ಕರುಳ್ಗೆ ಉರಿಯಿಕ್ಕಿ ಬಂದಿರುವೆ?

ಛಾಯಾಧ್ವನಿ — ಏಕಮ್ಮ ನಿನಗೀ ನಿರಾಶೆ?

ಭಾರತಾಂಬೆ — ಕತ್ತಲೊಳ್‌ ಕಾಣಿಸದೆ ಆರವರ್ ನುಡಿವವರ —

ಛಾಯಾಧ್ವನಿ — ನಾನಮ್ಮ — ಛಾಯಾಧ್ವನಿ!

ಭಾರತಾಂಬೆ — ಛಾಯಾಧ್ವನಿ? ಆರ ಛಾಯಾಧ್ವನಿ?

ಛಾಯಾಧ್ವನಿ — ಆರೊಬ್ಬನದು ಅಲ್ತು. ತಾಯ ಬಿಡುಗಡೆಗಾಗಿ
ದುಡಿದು ಮಡಿದಾ ಕೋಟಿ ಜೀವಗಳ್ಗಾಂ ಪ್ರತಿಮೆ.
ತಂದಿಹೆನ್ ನಿನಗೊಂದು ವಾರ್ತೆಯನ್‌.

ಭಾರತಾಂಬೆ — ಮಂಗಳಮೊ? ಮೇಣ್‌….

ಛಾಯಾಧ್ವನಿ — ಮಂಗಳದ ಸಂದೇಶಮದು, ಜನನಿ.

ಭಾರತಾಂಬೆ — ಕೋಟಿ ಅಮಂಗಳಗಳಿಂ ಒಂದಲ್ತೆ
ಮೂಡಿತೀ ಮಂಗಳಧ್ವನಿ! (ಸುಯ್ವಳ್‌)

ಛಾಯಾಧ್ವನಿ — ಶೋಕಮಂ ಬಿಡು, ತಾಯಿ : ಸ್ವಾತಂತ್ರ್ಯಸಂಗ್ರಾಮದೊಳ್‌
ಸಂತೋಷದಿಂ ಮಡಿದರೆಮ್‌.
ನೀನಳಲ್‌ ಕುಂದಪ್ಪುದೆಮ್ಮಾ ಸಂತಸಕೆ. —
ನಟ್ಟನಡು ರಾತ್ರಿಯೊಳ್‌ ದಟ್ಟಯ್ಸತಿರೆ ಇರುಳ್‌
ನಿನಗೆ ಬಿಡುಗಡೆಯಪ್ಪುದಾ ಭರತಸುತನಿಂ! —
ಬೀಳ್ಕೊಳ್ಳುವೆನ್‌ — ಪರಸೆಮ್ಮನಮ್ಮಾ.

ಭಾರತಾಂಬೆ — ನಿಮಗೆಲ್ಲರ್ಗಂ ಸುಗತಿಯಕ್ಕೆ
ಜನ್ಮ ಜನ್ಮದೊಳುಂ ನನಗೆ ನೀಮನಿಬರುಂ
ಮಕ್ಕಳಕ್ಕೆ! — (ತನ್ನೊಳ್ತಾನೆ)
ಎನಿತು ಮಕ್ಕಳ್‌ ನನ್ನ ಸಲುವಾಗಿ
ತಂದೆ ತಾಯಂದಿರನ್‌ ತೊರೆದಗಲಿದರ್?
ಎನಿತು ಪೆಂಡಿರ್ ತಮ್ಮ ಗಂಡಂದಿರನ್‌
ಮೀರಿ ಮಡಿದರ್?
ಎನಿತು ಸತಿಯರ್ ತಮ್ಮ ಮಾಂಗಲ್ಯಮಂ
ಸ್ವಾತಂತ್ರ್ಯ ದೇವತೆಗೆ ಬಲಿದಾನವಿತ್ತು
ಕಣ್ಬನಿಯ ಕಡಲೊಳಳ್ದಿಹರ್!
ಎನಿತು ಮನೆಗಳ್‌ ಮುರಿದುವೆನಿತು ಸಂಸಾರಗಳ್‌
ಸಿರಿಯಳಿದು ಗತಿಗೆಟ್ಟುವಡವಿಪಾಲಾಗಿ:
ಬಲಿಪರಂಪರೆವೇಳ್ಕುಮೀ ಸ್ವಾತಂತ್ರ್ಯ ಸಾಧನೆಗೆ.
ಪಡೆಯೆ ಬಲಿದಾನಂ;
ಪಡೆದುದಂ ಪಿಡಿಯೆ ಬಲಿದಾನಂ;
ಪಿಡಿದುದಂ ನಡೆಯೆ ಬಲಿದಾನಂ!
ಬಲಿದಾನಕುಂಟೆ ಕೊನೆ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯಜೀವನಂ!
(ದೂರದಿಂದ ಒಂದ ಗಾನವಾಣಿ ಕೇಳಿಸುತ್ತದೆ. ಬರುಬರುತ್ತಾ ಹತ್ತಿರ ಹತ್ತಿರವಾಗಿ ಸುಸ್ಪಷ್ಟವಾಗುತ್ತದೆ.)

ವಾಣಿ — ಭಾರತಾಂಬೆಯೆ, ಜನಿಸಿ ನಿನ್ನೊಳು ಧನ್ಯನಾದೆನು, ದೇವಿಯೆ;
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು ತಾಯಿಯೆ.
ನಿನ್ನ ಕಂಗಳ ಪುಣ್ಯಕಾಂತಿಯೊಳೆನ್ನ ಕಂಗಳ ತೆರೆದೆನು;
ನಿನ್ನ ಅಂಕದ ಮಂಗಳಾಂಗಣದಲ್ಲಿ ನಲಿಯುತ ಮೆರೆದೆನು;
ನಿನ್ನ ಮೈಮೆಯ ಬರೆವೆನು; ನಿನ್ನ ಹೆಸರನೆ ಕರೆವೆನು;
ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು.

ಭಾರತಾಂಬೆ — ಆರ ದನಿಯಿದು? ಮನಕ್ಕಿನಿತು ಆಹ್ಲಾದಮಂ
ತರುತಿಹುದು! ಸುಪರಿಚಿತಮೆಂಬಂತೆ ಸೊಗಸುತಿದೆ.
ಸ್ವಾತಂತ್ರ್ಯ ಸಂತೋಷ ಸುಖಗಳಂ ಮೊಗಸುತಿದೆ!
ಭರತಸುತನೈತರ್ಪನೆಂಬ ಸಂದೇಶಮನ್
ಆಲಿಸಿದ ಕಿವಿಗೆ ತನಿ ಜೇನಿಂಪನುಣಿಸುತಿದೆ.
(ತೆಕ್ಕನೆ ಕಣ್ನಟ್ಟು)
ಇದೇನ್‌ ಬೆಳಕು! ಮಿಂಚಿ ಕೋರೈಸುತಿದೆ!
ಕತ್ತಲೆಯ ಗಬ್ಬದಿಂ ಕೇಸುರಿಯ ಆಸೆವೂ
ಮಲರಿ ಬರುವಂತೆ ಬಳಿಸಾರುತಿಹುದು!
ಓವೋ, ಪೊಂಚು ಪಿಡಿದೈತರ್ಪನೆನ್ನ ಕಂದಂ!
ಕಯ್ಯೊಳೇನ್ ಬಾವುಟಂ!
ಕತ್ತರಿಸಿ ತುಂಡಾದ ಸಂಕೋಲೆಗಳ್‌
ನೇಲುತಿವೆ ಕೈ ಕಾಲ್ಗಳಿಂ!
ತಲೆಗೆದರಿ ತೋರ್ಪನುನ್ಮತ್ತನೋಲ್‌,
ಮತ್ತದೇನ್‌ ನೆತ್ತರ್! ಪರಿದುಡುಗೆ!
(ಓಡಿಹೋಗಿ ಅವನನ್ನು ಆಲಿಂಗಿಸಲು ಪ್ರಯತ್ತಿಸುತ್ತಾಳೆ. ಆದರೆ ಕೈಕಾಲುಗಳ ನಿಗಳ ಬಂಧನದ ದೆಸೆಯಿಂದ ಹತಾಶಳಾಗಿ)
ಅಯ್ಯೊ ಮರೆತಿದ್ದೆ ನಾನ್‌
ಅಸ್ವತಂತ್ರೆ ಎಂಬುದನ್‌!
[ಭರತಸುತನು ಬರುತ್ತಾನೆ. ಅವನ ಎಡದ ಕೈಲಿದ್ದ ಮಿಂಚುಂಪೊಂಜಿನ ಬೆಳಕಿನಿಂದ ದೇಗುಲ ಬೆಳಗುತ್ತದೆ. ಅವನ ತಲೆ ಕೆದರಿದೆ. ಕೈಕಾಲುಗಳಲ್ಲಿ ಕತ್ತರಿಸಿದ ಸಂಕೋಲೆಯ ತುಂಡುಗಳಿವೆ. ರಕ್ತದ ಕಲೆ ತುಂಬಿದ ಉಡುಗೆ ಹರಿದು ಹೋಗಿದೆ. ಮುಖದ ಗಾಯಗಳು ಭಯಾನಕವಾಗಿವೆ. ಬಲಗೈಯಲ್ಲಿ ಹಿಡಿದು ಹೆಗಲಮೇಲೆ ಆತುಕೊಂಡಿದ್ದ ಧ್ವಜಕಾಷ್ಠದ ತುದಿಯಲ್ಲಿ ಚರಕ ಚಿಹ್ನೆಯ ತ್ರಿವರ್ಣ ಧ್ವಜ ತೂಗುತ್ತಿದೆ. ದೊಡ್ಡದೊಂದು ಕೀಲಿಕೈ ರಕ್ತಮಯವಾಗಿ ವಕ್ಷದ ಮೇಲೆ ನೇತಾಡುತ್ತಿದೆ. ‘ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನುಎಂಬ ಚರಣ ಮುಗಿಯುತ್ತಿರುವಾಗ ಪ್ರವೇಶಿಸುತ್ತಾನೆ. ಹೊರಗೆ ದೂರದಲ್ಲಿ ವಾದ್ಯ ಸಂಭ್ರಮ ಮೊದಲಾಗುತ್ತದೆ.]

ಭರತಸುತ (ಧ್ವಜವೆತ್ತಿ ಉತ್ತಾಲ ಧ್ವನಿಯಿಂದ)
ಗೆಲ್‌, ತಾಯೆ, ಗೆಲ್‌!

ಭಾರತಾಂಬೆ (ಬಂಧಿತವಾದ ಕೈಗಳನ್ನು ಎತ್ತಲೆಳಸಿ ಗದ್ಗದದಿಂದ)
ಬಾಳ್‌, ಮಗುವೆ, ಬಾಳ್‌.

ಭರತಸುತ (ಕೊರಳೆತ್ತಿ) ಆಳ್‌! ಜಗವಾಳ್‌!
(ಮಿಂಚುಂಪೊಂಜನ್ನು ಒಂದೆಡೆ ಇಟ್ಟು, ಧ್ವಜವನ್ನು ಒಂದು ಕಡಿ ನೆಟ್ಟುವಂದೇ ಮಾತರಂ!’ ಎಂದು ಆಘೋಷಿಸುತ್ತಾ ಸಾಷ್ಟಾಂಗ ಪ್ರಣಾಮಮಾಡಿ ಎದ್ದು ನಿಂತು ಗುಡಿ ಗುಡುಗುವಂತೆ ಆಘೋಷಿಸುತ್ತಾನೆ.)
ಗೆಲ್‌, ತಾಯೆ, ಗೆಲ್‌!
ಬಾಳ್‌, ತಾಯೆ, ಬಾಳ್‌!
ಆಳ್‌, ಜಗವನಾಳ್‌!

ಭಾರತಾಂಬೆ (ಹರ್ಷಾಧಿಕ್ಯದಿಂದ ಸಗದ್ಗದೆಯಾಗಿ)
ಬಂದೆಯಾ, ಮಗು.

ಭರತಸುತ (ಉಲ್ಲಸಿತನಾಗಿ)
ಬಂದೆನ್‌! ತಂದೆನ್‌! ಇದೆಕೊ ಕಾಣ್‌!
(ವಕ್ಷದ ಮೇಲೆ ನೇಲುತ್ತಿದ್ದ ಕೀಲಿಕೈಯನ್ನು ನಿರ್ದೇಶಿಸುತ್ತಾನೆ)

ಭಾರತಾಂಬೆ — ವತ್ಸ, ಇದೇನ್‌ ಕೆನ್ನೀರ್‌!

ಭರತಸುತ — ನೆತ್ತರೊಳ್‌ ಮುಳುಗಿರ್ದುದನ್‌ ಎತ್ತಿ ತಂದೆನ್‌, ತಾಯಿ.

ಭಾರತಾಂಬೆ — ಪರಕೀಯ ವೈರಿಗಳ್‌ ಚೆಲ್ಲಿದುದೆ?

ಭರತಸುತ — ಅಲ್ತಲ್ತು, — ನಮ್ಮವರ್ ಚೆಲ್ಲಿದುದೆ!
ಪರಕೀಯ ವೈರಿಗಳ್‌ ಚೆಲ್ಲಿದಾ ಶೋಣಿತಮ್‌
ಹಸುಗೊರಸು ನೀರ್, ನಮ್ಮವರ್ ಚೆಲ್ಲಿದಾ
ಕಡಲದಿರ್! ಈ ನಿನ್ನ ಶೃಂಖಲೆಯಗಳಂ ಬಿಗಿದ
ಬೀಗಮಂ ತೆಗೆವ ಕೀಲಿಕೈ ಮುಳುಗಿರ್ದುದಾ
ಸೋದರ್ ಸೋದರರ ಮೈಯಿಂದೆ ಚೆಲ್ಲಿದಾ
ಮತವೈರ ಸಂಜಾತ ರುಧಿರ ಪ್ರವಾಹದೊಳ್‌!

ಭಾರತಾಂಬೆ — ಅಯ್ಯೊ ಇಲ್ಲಿಯಂ, ಬಿಡುಗಡೆಯ ಪಡೆವಲ್ಲಿಯುಂ,
ನಾನೆಂತಪ್ಪ ದುರ್ಭಾಗ್ಯೆಯೆನ್‌!
ಅನ್ಯರಿಂ ಪಡೆವಡೆಯೊಳಂದು ಬಲಿದಾನಂ!
ನನ್ನವರೆ ಕೊಡುವೆಡೆಯೊಳಿಂದು ಬಲಿದಾನಂ!
ಇನ್ನುಮೆನಿಕಿರ್ಕುಮೋ ಮುನ್‌ ಬಲಿಯ ದಾನಂ!

ಭರತಸುತ — ಅಳಲದಿರ್, ತಾಯೆ, ಅಳಲ್ಕಿದು ಪೊಳ್ತಳು.
ನಿನ್ನಂ ಮೊದಲ್‌ ಸ್ವತಂತ್ರೆಯಂ ಮಾಳ್ಪೆನ್‌.
ಅನಂತಂ ನೋಳ್ಪಮೀ ನಿನ್ನ ಸ್ವಾತಂತ್ರ್ಯದಿಂ
ಸಂಭಿವಿಪ ಸದ್ಬುದ್ಧಿಯಂ ಸಂತೃಪ್ತಿಯಂ, ಶಾಂತಿಯಂ!

[ದೂರದಿಂದವಂದೇ ಮಾತರಂಗೀತೆ ಕೇಳುತ್ತಿರಲು ಕೀಲಿಕೈಯಿಂದ ಬೀಗವನ್ನು ಕಳಚುತ್ತಾನೆ. ಸರಪಣಿಗಳ ಖಣಿ ಖಣಿಲ್ಕಳಚಿ ಬೀಲುತ್ತವೆ. ಹೂಮಳೆ ಸುರಿಯುತ್ತದೆ. ಮಂಗಳವಾದ್ಯ ಮೊಳಗುತ್ತವೆ. ಭರತಸುತನು ಸ್ವಾತಂತ್ರ್ಯೆಯಾದ ಭರತಮಾತೆಯನ್ನು ಕಣ್ಣರಳಿಸಿ ನೋಡುತ್ತ ಬಹು ಕಂಠಂಗಳಿಗೆ ತನ್ನ ಕಂಠವನ್ನೂ ಸೇರಿಸಿ ಹಾಡುತ್ತಾನೆ.]

ಸರ್ವಗೀತೆ

ಲೋಕ ಮಲಗಿದಂದು ನೀ ನಟ್ಟನಡೂ ರಾತ್ರಿ
ಎಚ್ಚರಾಂತೆ, ಅವಿಶ್ರಾಂತೆ; ಆದೆ ಪುನರ್ಯಾತ್ರಿ.
ಸರ್ವಕಾಲ ಸರ್ವದೇಶ ಸರ್ವಮೋಕ್ಷ ಮಂತ್ರೇ,
ಅಸ್ವತಂತ್ರತ್ರೆ ಸುಸ್ವತಂತ್ರೆಯಾದ ವಿಶ್ವತಂತ್ರೇ.
ಏಳು ತಾಯಿ, ಬಾಳು ತಾಯಿ, ಜಗತ್‌ ಕsಲ್ಯಾಣಿ;
ಯುಗಯುಗಾಯು ಜಗವನಾಳು, ಧರ್ಮಚಕ್ರಪಾಣಿ;
ದಿಗ್‌ದಿಗಂತ ರಣಿತಮಕ್ಕೆ ನಿನ್ನ ದಿವ್ಯವಾಣಿ.
ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ರಾಣಿ!
ಶಾಂತಿ ಸತ್ಯ ಮುಕ್ತಿ ಧರ್ಮ ತತ್ತ್ವ ಮಹೋದಾತ್ತೆ,
ಕಾವ್ಯ ಶಿಲ್ಪ ನೃತ್ಯ ಗಾನ ಸಕಲ ಕಲಾವೇತ್ತೆ,
ಶ್ರದ್ಧೆಯಾಗಿ ಬುದ್ಧಿಯಾಗಿ ತಪಸ್‌ ಶಕ್ತಿಯಾಗಿ
ನಡಸು ನಮ್ಮನೆಲ್ಲ, ಅಮ್ಮ, ಪೂರ್ಣಸಿದ್ಧಿಗಾಗಿ!
ನಮೋ ದೇವಿ! ನಮೋ ತಾಯಿ! ನಮೋ ಭರತಮಾತೆ!
ನಮಸ್‌ ಸತ್ಯೆ! ನಮೋ ನತ್ಯೆ! ನಮೋ ಜಗನ್ಮಾತೆ!