[ಜೀರ್ಣೋದ್ಧಾರವಾದ ಕಾಳಿಕಾದೇವಾಲಯ ದೀಪ್ತವಾಗಿದೆ. ಆದರೆ ಒಳಗೆ ತುಸು ದೂರದಲ್ಲಿ ಗರ್ಭಗುಡಿಯಲ್ಲಿ ಮಾತ್ರ ಹಣತೆಯ ಹಂತಿ ಉರಿಯುತ್ತಿರುವುದರಿಂದ ಕಾಂತಿ ತಂಬೆಳಕು ಬೀರಿ ಹಿತಮಂದವಾಗಿದೆ. ದೇವತಾಮೂರ್ತಿ ಸುಂದರವಾಗಿ ಅಲಂಕೃತವಾಗಿದೆ. ಹೂವಿನ ಹಾರ ಮೊದಲಾದ ಚಿಹ್ನೆಗಳಿಂದ ಆಕೆ ಸುಪೂಜಿತೆ ಎಂಬುದು ಕಾಣುತ್ತದೆ. ಪರಿಮಳ ದ್ರವ್ಯಗಳ ಧೂಮ ಪವಿತ್ರವಾಗಿ ವ್ಯಾಪಿಸಿದೆ. ದೆವಾಲಯ ಸಮಸ್ತವೂ ಅಶೋಕ ಚಕ್ರಾಂಕಿತವಾದ ತ್ರಿವರ್ಣ ಧ್ವಜಗಳ ಗುಡಿತೋರಣಗಳಿಂದ ಮನೋಹರವಾಗಿ ರಂಜಿಸುತ್ತಿದೆ. ಮಾವು ಹಲಸು ಬಾಳೆ ಮೊದಲಾದ ಸಸ್ಯಯಗಳೂ ತಮ್ಮ ಕಾಣಿಕೆಯನ್ನು ಸಲ್ಲಿಸಿವೆ. ಸೂರ್ಯೋದಯವಾಗಿದೆ. ಕೋಗಿಲೆ ಮೊದಲಾದ ಹಕ್ಕಿಗಳುಲಿ ಕೇಳಿ ಬರುತ್ತದೆ. ದೇಗುಲದಾಚೆ ದೂರದಲ್ಲಿ ಮೇಘಚುಂಬಿಯದ ಧ್ವಂಜಸ್ತಂಭವೊಂದು ಗೋಚರಿಸುತ್ತದೆ. ತುದಿಯಲ್ಲಿ ಭೀಮ ಭವ್ಯಭಾವವನ್ನು ಹೃದಯದಲ್ಲಿ ಪ್ರಚೋದಿಸುವ ಒಂದು ಬೃಹದಾಕಾರದ ನವಭಾರತದ ಚಕ್ರಾಂಕಿತ ತ್ರಿವರ್ಣಕೇತನ ಹಾರಾಡುತ್ತಿದೆ. ಕೆಳಗೆ ಆ ಧ್ವಜಸ್ತಂಭದ ಸುತ್ತಲೂ ಇರುವೆ ಮುತ್ತಿದಂತೆ ಜನಸಂದಣಿ ಮುತ್ತಿದೆ. ತುಮುಲ ಜನಘೋಷ ಕೇಳಿಸುತ್ತಿದೆ. ವಿಮಾನ ಹಾರಿದ ಸದ್ದು, ಉತ್ಸವ ಸೂಚಕವಾದ ಫಿರಂಗಿಗಳ ಢಂಕಾರ ದಿಕ್ಕುದಿಕ್ಕುಗಳಿಂದ ಅನುರಣಿತವಾಗಿ ಮೊಳಗಿ ಮುಳುಗುತ್ತದೆ. “ವಂದೇ ಮಾತರಂ” “ಭಾರತ ಮಾತಾಕಿ ಜೈ” “ಮಹಾತ್ಮ ಗಾಂಧೀಕಿ ಜೈ!” ಮೊದಲಾದ ಘೋಷಣೆಗಳು ನಭೋಮಂಡಲ ಭೇದನಕರವಾಗಿ ಏಳುತ್ತವೆ. ಕೊನೆಗೆ ಧ್ವಜಗೀತಗಾನ ಸುಶ್ರಾವ್ಯವಾಗಿ ನವಚೇತನೋದ್ದೀಪಕರವಾಗಿ ಕೇಳಿಬರುತ್ತದೆ.]
ಜಯ ಜಯ ಜಯ ವಿಜಯೀ ಭವ, ಹೇ ವೈಜಯಂತಿ!
ನಿನ್ನ ನೆಳಲೊಳೇಳ್ಗೆವಡೆದು ಗೆಲ್ಗೆ ಭುವನ ಶಾಂತಿ!
ಓ ಸುವರ್ಣೆ, ಹೇ ಅವರ್ಣೆ, ನೀಲಿಮಾ ತ್ರಿವರ್ಣೆ,
ಉಷಸ್ ಪೀತೆ, ದಿವಾಶ್ವೇತೆ, ನಿಶಾನೈಲ ಜಾತೆ,
ಅಮೃತ ದಿವ್ಯ ಖಚಿತ ಭವ್ಯ ಧರ್ಮಚಕ್ರರಾಜಿತೆ
ಪ್ರೇಮ ನಿನ್ನ ಪರಮ ಅನ್ನವಾಗಲವನಿಪೂಜಿತೆ!
ಮೈತ್ರಿ ಸಹನೆ ಶಾಂತಿಗಾಗಿ ನಭೋಗಾಮಿಯಾಗು!
ಪೊಡವಿಯಾಳು! ಕಡಲ ಸೀಳು! ಗೆಲ್ಲು, ಬಾಳು, ಹೋಗು!
ಗ್ಲಾನಿಯೆಲ್ಲಿ ಹಾನಿಯೆಲ್ಲಿ ಅಲ್ಲಿ ರಕ್ಷೆಯಾಗು;
ಕ್ರೌರ್ಯವೆಲ್ಲಿ ಪಾಪವೆಲ್ಲಿ ಅಲ್ಲಿ ಶಿಕ್ಷೆಯಾಗು;
ಕ್ಷಾಮ ಕಷ್ಟ ನಷ್ಟಗಳಲಿ ನೀ ಸುಭಿಕ್ಷೆಯಾಗು;
ಸದಾಕಾಲ ಸರ್ವದೇಶ ಸಕಲ ಮಿತ್ರನಾಗು!
ಹಾರು, ಏರು, ಓ ಧ್ವಜವೆ,
ವೈನತೇಯ ಸಮದ್ವಿಜವೆ!
ಚಂದ್ರ ಚುಂಬಿ, ಸೂರ್ಯ ಚುಂಬಿ, ಖಚರ ಚರಣ ಚುಂಬಿ,
ಹಾರು, ಏರು, ನೋಡುತಿಹುದು ನಾಡು ನಿನ್ನ ನಂಬಿ!
ಅಮರ ಬಾಹು, ಅಸುರ ರಾಹು, ನೆಲಕೆ ಮುಗಿಲ ಕಾಹು;
ಕರ್ಮಜಗಕೆ ಧರ್ಮಪುರುಷನಿಟ್ಟ ಬೆರಳ ಬೇಹು:
ಹೇ ತ್ರಿವರ್ಣ ಕೇತನ,
ನೀನೆ ನಮ್ಮ ಚೇತನ;
ಪ್ರೇಮ ಧೈರ್ಯ ಸತ್ಯ ದರ್ಮ ಶಾಂತಿ ಚಿರನಿಕೇತನ!
ಜಯ ಜಯ ಜಯ ವಿಜಯೀ ಭವ, ಹೇ ವೈಜಯಂತಿ!
ಜಯ ಜಯ ಜಯ ವಿಜಯೀ ಭವ, ಹೇ ವೈಜಯಂತಿ!
[ಗೀತೆ ಪೂರೈಸುವುದರೊಳಗೆ ಭರತಸುತನು ಕೈಯಲ್ಲೊಂದು ಹೂವಿನ ಮಾಲೆ ಹಿಡಿದು ಅತ್ಯುತ್ಸಾಹದಿಂದ ಅತ್ಯುಲ್ಲಾಸದಿಂದ ನುಗ್ಗಿ ಬರುತ್ತಾನೆ. ಸುತ್ತಲೂ ಹುಡುಕು ನೋಟವಟ್ಟಿ ನೋಡುತ್ತಾನೆ. ಅಚ್ಚು ಬಿಳಿಯ ಖಾದಿಯ ಉಡುಪು ಉಟ್ಟಿದ್ದಾನೆ. ತಲೆಯಲ್ಲಿ ತ್ರಿವರ್ಣ ಧ್ವಜಾಂಕವಾದ ಖಾದಿ ಟೊಪ್ಪಿಗೆಯಿದೆ. ಎದೆಯ ಮೇಲೂ ಒಂದು ಬಾವುಟ ಚುಚ್ಚಿಕೊಂಡಿದ್ದಾನೆ.]
ಭರತಸುತ — ಗೆಲ್, ತಾಯೆ, ಗೆಲ್!
ಬಾಳ್ ತಾಯೆ, ಬಾಳ್!
ಆಳ್ ಜಗವಾಳ್!
(ಎಲ್ಲಿಯೂ ಭರತಮಾತೆಯನ್ನು ಕಾಣದೆ ಅಚ್ಚರಿಯಿಂದ ಕಣ್ಣ ಸುಳಿಸಿ)
ಎಲ್ಲಿದಳ್ ಜನನಿ? ಎತ್ತುವೊದಳ್!
ಮಕ್ಕಳೆಲ್ಲರ್ ಸಂಭ್ರಮದಿ ಕುಣಿಯುತಿರೆ,
ಸ್ವಾತಂತ್ರ್ಯದುತ್ಸವಕೆ ಸೊಗಮುಕ್ಕಿ ತಣಿಯುತಿರೆ,
ಗೆಲ್ಗೆ ತಾಯ್, ಬಾಳ್ಗೆ ತಾಯ್, ಆಳ್ಗೆ ತಾಯ್
ಎಂದನಿಬರುಂ ಕೊರಳೆತ್ತಿ ಕೂಗುತಿರೆ
ಎಲ್ಲಿದಳ್ ಜನನಿ? ಎತ್ತವೋದಳ್?
ಪೂಮಾಲೆಯಂ ನೆಯ್ದು ತೊಡಿಸಲೆಂದೋಡಿ ಬಂದೆನ್
ಸಿಂಗರಿಸಿ ಕಾಲ್ಗೆರಗಿ ನಲಿಯಲೆಂದೋಡಿ ಬಂದೆನ್! —
ಕಾಣಿಸಳ್! (ನಸುನಗುತ್ತಾ)
ಅಡಿಯ ಸಂಕೋಲೆಗಳ್ ಪರಿದುದಕೆ
ಇದೆ ಮೊದಲ ಪರಿಣಾಮವೋ ಏನ್?
ಗುಡಿಯೊಳಿನ್ನೆವರಂ ಸೆರೆಯಿರ್ದೆ ಬೇಸರಕೆ
ನಾಡನಲೆಯುವ ಸೊಗಕೆ ಬಗೆದಂದಳೇನ್?
ಅಲೆವಾಸೆಯಿರ್ಪೊಡೇನ್ ನಾಳೆ ಇರಲಿಲ್ಲವೇ?
ನಾಡೆಲ್ಲ ನೋಡುವಾಸೆಯೊಳಿರಲ್
ಇಂತು ಕಣ್ಮರೆಯಾಗುವುದೆ, ಪೂಜ್ಯೆ?
ಮೇಣ್, ಜಗದಂಬೆ ಕಾಳಿಕಾ ವಿಗ್ರಹದೊಳೇನ್
ಐಕ್ಯಮಾದಳೊ ನೋಳ್ಪೆನ್.
[ಹೋಗಿ ನೋಡುತ್ತಾನೆ. ಅಲ್ಲಿಯೂ ಅವಳು ಕಾಣಿಸದಿರಲು ಜಗದಂಬೆಯನ್ನು ಕೈಮುಗಿದು ಸ್ತುತಿಸುತ್ತಾನೆ.]
ಸರ್ವಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ.
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನೀ
ಗುಣಾಶ್ರಯೇಗುಣಮಯೇ ನಾರಾಯಣಿ ನಮೋಸ್ತು ತೇ.
ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ
ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋಸ್ತು ತೇ.
ಸರ್ವ ಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೂಸ್ತು ತೇ.
(ಜಗದಂಬೆಯಲ್ಲಿ ಭರತಮಾತೆ ಕಾಣಿಸಿಕೊಳ್ಳುತ್ತಾಳೆ)
ಇದೇನ್ ಜನನಿ, ನನಗೀ ರೂಪಾಂತರಂ?
ಭಾರತಾಂಬೆ — ನಾನೆ ಅವಳ್, ಅವಳೆ ನಾನ್, ಮಗೂ.
ಏಕೆ ಬೆಕ್ಕಸಂ ನಿನಗೆ ಸುಜ್ಞಾನಿಗೆ?
ನೀನೆ ಹಾಡುವೆಯಲ್ತೆ:
“ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ” ಎಂದು!
ಭರತಸುತ — ಅಂತೆ ಹಾಡುವೆನದು ದಿಟಂ
ಆದೊಡಂ ಇನ್ನೆಗಂ ಅದನಿಂತುಟರಿಯೆನ್.
ಕವಿಕಲ್ಪನಾ ಮಾತ್ರಮೆಂದುದಂ
ರೂಪಕೋಕ್ತಿಯ ಚಮತ್ಕಾರಮೆಂದುಂ
ಅಲಂಕಾರ ಮಾತ್ರಮೆಂದಿರ್ದೆನ್.
ಇಂದು ಸಾಕ್ಷಾತ್ಕಾರಮಾಯ್ತು ಹೃದಯಸತ್ಯಂ
ನಿನ್ನ ಕೃಪೆಯಿಂ. ದೇವಿ.
ಭಾರತಾಂಬೆ — ಋಷಿಯಲ್ಲದಾತನಾ ಕವಿತೆ ಮಿಥ್ಯೆಯಾದೊಡಂ
ಋಷಿಯಾದ ಕವಿಯ ಕಾವ್ಯಂ ಸತ್ಯಮೇಗಳುಂ!
ನಿನಗದಾವುದು ಭಯಂ? ಏಕೆನ್ನನರ್ಥಿಸಿದೆ?
ಭರತಸುತ — ಸ್ವಾತಂತ್ರ್ಯದುತ್ಸವಕೆ ಜನ ಸಮುದ್ರಂ ನೆರದು
ಸ್ವಸ್ತಿಯಂ ಘೋಷಿಸಿದೆ. ನಿನ್ನ ಕಾಣಲ್ಕಿವರ್
ಕಾತರದಿ ಕಾಯತಿಹರಲ್ಲಿ ನೋಡಲ್ಲಿ ಕಾಣ್!
[ಧ್ವಜವಂದನಾ ದೃಶ್ಯವನ್ನು ತೋರಿಸುತ್ತಾನೆ.]
ಇಲ್ಲಿ ನಿನ್ನನ್ ಕಾಣದೆಲ್ಲಿದಳ್ ತಾಯೆಂದು
ಕಾತರದಿ ಕೂಗಿದೆನ್.
ಭಾರತಾಂಬೆ — (ನಸುನಗುತ್ತ)
ನಾನಿನ್ ಅಶರೀರಿ
ಮೇಣ್ ವಿರಾಟ್ ಶರೀರಿ. ನನ್ನನೇನ್
ಆ ಅನ್ಯರೆಸಗಿದೊಲ್ ಗುಡಿಯೊಳೆಯೆ ಸೆರೆಗೈದು
ಪೂಜಿಸಲ್ ಬಗೆವಾ? ಕರ್ಬೋನ್ನ ಸಂಕೋಲೆಯಂ
ಕಳಚಿ, ಚಂಬೊನ್ನ ಮಿಳಿಗಳಿಂ
ಸ್ವಾತಂತ್ರ್ಯದರ್ಥಮಂ ಬಂಧಿಸದಿರನರ್ಥದಿಂ.
ನುಡಿವರೆಡೆಯಿಂ ಮಿಗಿಲ್ ದುಡಿವರೆಡೆ ಸೊಗಸೆನಗೆ!
ಭರತಸುತ — ಮನ್ನಿಸೆನ್ನನ್, ಪೂಜ್ಯೆ, ನಿನ್ನ ಸ್ವಾತಂತ್ರ್ಯಮಂ
ಬಂಧಿಸಲ್ ಬಗೆದಂದೆನಲ್ತು. ಉತ್ಸವಕೆ
ಬಿಜಯ ಗೆಯ್ ಎಂದು ಕೇಳಲ್ಕೆ ಬಂದೆನ್.
ಭಾರತಾಂಬೆ — ಆವುದುತ್ಸವಮೆನಗೆ?
ಭರತಸುತ — ಏಕಮ್ಮಾ! ಸ್ವಾತಂತ್ರ್ಯದುತ್ಸವಂ!
ಭಾರತಾಂಬೆ — ಆವುದಾ ಸ್ವಾತಂತ್ರ್ಯಂ?
ಭರತಸುತ — ನಾಮೆಲ್ಲರಿತ್ತ ಬಲಿದಾನಂಗಳಿಂ ಪಡೆದ
ಭಾರತ ಸ್ವಾತಂತ್ರ್ಯಂ!
ಭಾರತಾಂಬೆ — ಬಾಹ್ಯ ಬಂಧನಗಳಂ ಕಳಲ್ಚಿದಿರಿ ದಿಟಂ
ಆಂತರದ ಶೃಂಖಲೆಗಳೊಳವು ವಜ್ರೋಪಮಂ.
ಅವುಗಳಂ ಕಡಿವ ದುಡಿಮೆಯೊಳಿರ್ಪನೆಡೆಗೆ
ನಾನೆಯ್ದಿದೆನ್, ನೆರವೀಯಲೆಂದಾತಂಗೆ!
ಭರತಸುತ — ಆವೆಡೆಗೆ? ಆರವನ್? ಸ್ವಾತಂತ್ರ್ಯದುತ್ಸವಕೆ
ಮಕ್ಕಳೆಲ್ಲರ್ ಇಲ್ಲೆ ನೆರದಿರ್ಪರಮ್ಮಾ!
ಭಾರತಾಂಬೆ — ಮರೆತೆಯೇನ್? ನೀಂ ತಂದ ಕೀಲಿ ಕೈಯಂ,
ನೆತ್ತರೊಳ್ ಮುಳುಗಿರ್ದುದಂ? —
ಬೆನ್ನಟ್ಟುತಿರ್ಪುದಾ ಭೂತಮಿನ್ನುಂ!
ಖಿನ್ನನಾಗದಿರ್.
ಅನಿವಾರ್ಯಮದಕೆ ನೀನಲ್ತು ಕಾರಣಂ.
ಎಲ್ಲರುಂ ಇಲ್ಲೆ ನೆರೆದಿಹರೆಂದೆಯಲ್ತೆ?
ಎಲ್ಲಿ ತೋರೆನಗಿಲ್ಲಿ ಆ ಸ್ವಾತಂತ್ರ್ಯ ಶಿಲ್ಪಿಯಂ?
ಭರತಸುತ — (ಬೆರಗಾಗಿ ನೋಡಿ)
ಕಾಣೆನಾ ಪುಣ್ಯಾತ್ಮನಂ! ಎಲ್ಲಿದನ್, ತಾಯಿ?
ಭಾರತಾಂಬೆ — ದಿವ್ಯಶಕ್ತಿಯನಿತ್ತಪೆನ್; ಕೇಳ್: ಕಾಣ್:
(ಭರತಸುತ ಆಲಿಸುತ್ತಾನೆ: ಬಹುದೂರದಿಂದ ರಾಮನಾಮ ಇಂಪಾಗಿ ಕರುಣಪೂರ್ವಕವಾಗಿ ತೇಲಿ ಬರುತ್ತದೆ.)
ವಾಣಿ — ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾ ತೇರೇ ನಾಮ್
ಸಬಕೋ ಸನ್ಮತಿ ದೇ ಭಗವಾನ್!
ಭಾರತಾಂಬೆ — ಏನ್ ಕಾಣುತಿದೆ ನಿನಗೆ?
ಭರತಸುತ — ಬೆಟ್ಟಗಳ್; ಕಾಡುಗಳ್; ಬತ್ತದ ಪಯಿರ್ ಪಸುರೆನೆ
ಬಿತ್ತರದ ಗದ್ದೆಗಳ್; ಮಳೆಮುಗಿಲ ತುಂಬುಬಾನ್;
ಉಕ್ಕಿ ಹರಿಯುವ ಹೊಳೆಯ ಹೊನಲುಗಳ್; ಆ ಎಲ್ಲ
ಹಿನ್ನೆಲೆಯ ಚಿತ್ರಮಯ ಪಟದ ವಿಸ್ತೀರ್ಣದೊಳ್
ಅಮೃತಭಾಗೀರಥಿಯೆನಲ್ ಪರಿಯುತಿದೆ ಪಾಲ್ಪೊನಲ್,
ಬೆಳ್ಳರಳೆಯಂ ಹಿಂಜಿ ತೆರೆತೆರೆ ಹರಹಿದೊಂದು
ಬೆಳ್ಮುಗಿಲ ಹೊಳೆಯುವೋಲ್. ಕಣ್ಗಂತೆ ತೋರಿದುದೆ
ತರುತಿಹುದು ಕಿವಿಗಿಂಪು ರಾಮನಾಮದ ಗಾನಮಂ.
ಭಾರತಾಂಬೆ — ನೀನ್ ಕಾಣ್ಬುದದು ವಂಗದೇಶದೊಳ್
ನವಕಾಲಿ ಎಂಬಾಪ್ರದೇಶಂ.
ಕೆಲದಿನಗಳಿಂದಲ್ಲಿ ಮೂರ್ಖರೊಳ್ ಕೆರಲಿರ್ಪ
ಮತವೈರ ವಿಷದುರಿಗಳಂ ನಂದಿಸಲ್
ಅಮೃತಸ್ವರೂಪನಪ್ಪಾ ಸ್ವಾತಂತ್ರ್ಯ ಶಿಲ್ಪಿ
ಯಾತ್ರಿಯಾಗಿರ್ಪನರಿಯೆಯಾ ನೀನ್!
ಆ ಪ್ರವಾಸಮೆ ನಿನ್ನತೀಂದ್ರಿಯಕ್ಕಾ
ಪ್ರತಿಮಾ ವಿಧಾನದಿಂದಮೃತಪ್ರವಾಹದೊಲ್
ಗೋಚರಿಸಿತೈಸೆ! ನೀಂ ತೋರ್ದುದಕೆ ಪಿರಿಯ
ಸ್ವಾತಂತ್ರ್ಯದುತ್ಸವಂ ಅದು ಕಣಾ!
ಪೋಗಿರ್ದೆನಲ್ಲಿಗಾನ್, ದಿವ್ಯಯಾತ್ರೋತ್ಸವಕೆ,
ಶಕ್ತಿಯಾಗಲ್!
ಭರತಸುತ — (ದುಃಖದಿಂದ ವಿಷಣ್ಣನಾಗಿ)
ಎಂದಿಗಮ್ಮಾ ಮುಗಿವುದೆಮ್ಮೀ ಅಳಲ್?
ಈಗಳೀಗಳೆ ಮುಡಿದೆಮ್ಮ ಸೂರ್ಯಂಗೆ
ಮತ್ತಿದೇನೀ ಮತರಾಹು ಪೀಡೆ?
ಇನ್ನೆಗಂ ನಾಮಿತ್ತ ಬಲಿದಾನದಿಂ
ತೃಪ್ತಳಾಗಳೆ ದೇವಿ?
ಭಾರತಾಂಬೆ — (ಸಂತಯಿಸುವಂತೆ)
ಮಗೂ, ಬಲಿದಾನಕುಂಟೆ ಕೊನೆ?
ಬಲಿ ಪರಂಪರೆಯಲ್ತೆ ಸ್ವಾತಂತ್ರ್ಯಜೀವನಂ!
ಭರತಸುತ — ಬಲಿಗಂಜಿ ನಾನ್, ತಾಯಿ,
ಶಾಂತಿಸಿದ್ಧಿಗದು ಮಾರ್ಗಮಾಗಲ್ಕೆ!
ಭಾರತಾಂಬೆ — (ಮುಗುಳುನಗೆಯೊಂದನ್ನು ಸುಳಿಸಿ ಸುಯ್ದು)
ಶಾಂತಿ! ಶಾಂತಿ! — ಶಾಂತಿ ಸಿದ್ಧಿಯೆ, ಮಗೂ?
ಭರತಸುತ — ಹೌದಮ್ಮಾ.
ಭಾರತಾಂಬೆ — ಅದಕ್ಕೆ ವೆಳ್ಕುಂ ಪರಮ ಬಲಿದಾನಂ!
ನೀನ್ ಕಂಡುದಾ ಯಾತ್ರೆ ತಾನ್ ಅದಕೆ
ಪೀಠಿಕಾಮಾತ್ರಂ.
ಭರತಸುತ — (ಕಿನಿಸಿ)
ಬಿಚ್ಚಿ ನುಡಿ, ತಾಯಿ; ಮುಚ್ಚುನುಡಿಯಂ ಮಾಣ್!
ಕೈಕೊಂಡ ಯಾಗದೊಳ್ ವಿಜಯಿಯಪ್ಪನೆ ಪೇಳ್
ನಮ್ಮಾ ಮಹಾತ್ಮನ್? ವಿಷವೀಂಟಿ ಬರ್ದುಕುವನೆ?
ನೀನ್ ರಕ್ಷಿಸಲೆ ವೇಳ್ಕುಮಾತನನ್!
ಭಾರತಾಂಬೆ — ಇಲ್ಲಿ ಗೆಲ್ಲುವನದಕೆ ಸಂದೇಹವಿಲ್ಲ.
ಆದೊಡಂ….
ಭರತಸುತ — ಏನ್, ಆದೊಡಂ!….
ಭಾರತಾಂಬೆ — ಶಿಲ್ಪಿಯ ಸಮರ್ಪಣದಿ ಶಿಲ್ಪಕೃತಿಯೇಳ್ಗೆ!
ಆಲಿಸಿದೊ ಕಬ್ಬಿಗನ ಕೊರಲ್
ಸಾರುತಿದೆ ಸತ್ಯ ಸಂದೇಶಮಂ.
ವಾಣಿ — ಈಶ್ವರ ಕೃಪಾಬಲದ ಯಾಚನೆಯ ಸಲುವಾಗಿ
ಭೂಮಾತೆ ಕಳುಹಿಸಿಹ ದೂತಭಿಕ್ಷು;
ಈ ಲೋಕಮಂ ನಿರ್ನಿಮೇಷವಲೋಕಿಸುವ
ಆ ಲೋಕೃತದೊಂದಲೋಕಚಕ್ಷು;
ಸೃಷ್ಟಿಕರ್ತಂ ಸೃಷ್ಟಿ ತಾನಾಗಿ ಸೃಷ್ಟಿಯೊಳೆ
ದುಡಿಯುತಿರ್ಪುದಕವನೆ ದಿವ್ಯಸಾಕ್ಷಿ!
ಗಾಂಧಿಯೆಂಬಾ ಪೆಸರೆ ನಾಂದಿಯಾಗಲಿ ನಮ್ಮ
ಸ್ವಾತಂತ್ರ್ಯ ಸಂಭ್ರಮಕೆ. ಹಾಡು, ಪಕ್ಷಿ!
ಭಾರತಾಂಬೆ — ಗಾಂಧಿಯೆಂಬಾ ಪೆಸರೆ ನಾಂದಿಯಪ್ಪೊಡೆ ನಿಮ್ಮ
ಸ್ವಾತಂತ್ರ್ಯ ಸಂಭ್ರಮಕೆ — ಉಳಿವನಾತನ್!
ಇಲ್ಲದಿರೆ ತನ್ನ ಕೃತಿಯಭ್ಯುದಯಕಾಗಿ
ಶಿಲ್ಪಿ ತನ್ನನೆ ತಾನು ಬಲಿಗೊಡಲ್ ವೇಳ್ಕುಂ!
ಭರತಸುತ — ಅಂತಾಗದೆಂದಿಗುಂ: ಆತನಂ ಪಡೆದಿರಲ್,
ಸಿದ್ಧರಾವನಿಬರುಂ ಬೇಳ್ವೆಯಾಗಲ್!
ಭಾರತಾಂಬೆ — (ಭಾರ ಹೃದಯೆಯಾಗಿ ಸುಯ್ದು)
ಅದೆ ಆಸೆ ನನ್ನದುಂ; ಬಿದಿಯಿಚ್ಚೆ ಏನಿಹುದೊ!
(ಅಕೆಯ ಕಣ್ಣುಗಳಿಂದ ಹನಿ ಬೀಳುತ್ತವೆ.)
ಭರತಸುತ — (ಉದ್ವೇಗದಿಂದ) ಏಕಮ್ಮಾ ಈ ಅಳು?
(ಭರತಮಾತೆ ವಿಕಟವಾಗಿ ನಗುತ್ತಾಳೆ. ಅಳುವಿಗಿಂತಲೂ ಭಯಂಕರವಾಗಿದ್ದ ನಗುವಿಗೆ ಬೆಪ್ಪಾಗಿ)
ಏಕಮ್ಮಾ ಈ ನಗು!
ಭಾರತಾಂಬೆ — (ದೂರದೃಷ್ಟಿಯಾಗಿ)
ದುಃಖಾಶ್ರುತಳೆ ಆನಂದಬಾಷ್ಪಗಳ್! —
ಬಾ ಇಲ್ಲಿ, ಮಗೂ, (ಭರತಸುತನು ಬಳಿಸಾರುತ್ತಾನೆ.)
ಕಣ್ಮುಚ್ಚಿ ಪೇಳ್ ನಿನಗೆ ಕಾಣ್ಪುದನ್.
ಭರತಸುತ — (ನಿದ್ರಿಸುತ್ತಾನೆಂಬಂತೆ ಕಣ್ಮುಚ್ಚಿ ನಿಲ್ಲುತ್ತಾನೆ.)
ಎಲ್ಲಿಗೊಯ್ಯುವೆ ನನ್ನನ್ — ಅಮ್ಮಾ?…..
ಹಿಮಾಚಲವನೇರುತಿಹೆನಲ್ತೆ?….
ಏನ್ ಮೇಘಚುಂಬಿಗಳೊ ಈ ಶಿಖರಗಳ್!
ಏನ್ ಕುಳಿರ್! ಏನ್ ಐಕಿಲ್! ಏನ್ ಬೆಳ್ಪು!
ಇದಾವುದೀ ಶೃಂಗಂ?
ನಿಶ್ಯಿಕರ ಪರ್ವತಂಬೋಲ್ ಮುಗಿಲನಂಡಲೆದೆದ್ದು
ಧುಮಿಕಿ ಮರೆಯಾಗಿದೆ ನಭಃಪ್ರಪಾತದೊಳ್?
ಭಮ್ಯಮದೆ ದಿಟಂ ಧವಳಗಿರಿ!
(ಭರತಸುತನು ಬೆಚ್ಚಿ ನಡುಗಿ ಚಿರುತ್ತಾನೆ.)
ತಾಯೀ, ತಾಯೀ, ಇದೇನ್ ಭೂಮಿಕಂಪಂ!
ಶಿಕರಗಳ್ ತಲೆದಿಲೆಯುತಿವೆ!
ಪೆರ್ಮರಗಳುರುಳುತಿವೆ…… ನಿಲ್ಲಲಾರೆನ್!
ಭಾರತಾಂಬೆ — ಧೈರ್ಯಮಿರು ಕಂದಾ! ಪೇಳ್ ಮುಂಗಾಣ್ಪುದನ್!
ಭರತಸುತ — (ಏದುತ್ತಾನೆ. ಇಲೆದೊಲೆದು ಸ್ಥಿರವಾಗುತ್ತಾನೆ.)
ಅಮ್ಮಾ, ಅಮ್ಮಾ, ಅಮ್ಮಾ,
ಧವಳಗಿರಿ ತುಂಡಾಯ್ತು!
ಅಯ್ಯೊ ಉರುಳುತಿದೆ, ಉರುಳುತಿದೆ, ಉರುಳುತಿದೆ!
ಏನ್ ಭೀಮಂ, ಭಯಂಕರಂ, ರೌದ್ರದೃಶ್ಯಂ?
ಹಾ! ಹಾ! ಹಾ!
ಉರುಳಿತಾ ಮಹಾ ಸಾಗರಕೆ!……
ಅಯ್ಯೊ ಸಾಗರದ ನೀರೆಲ್ಲ ನೆಗೆದುದಂಗರಕೆ!
ಕಾರ್ಮೋಡಗಳ್ ಕವಿಯುತಿವೆ.
ಮಿಂಚುಗಳ್, ಗುಡುಗುಗಳ್, ಸಿಡಿಲುಗಳ್,
ಸುರಿಯುತಿದೆ ಪ್ರಲಯವರ್ಷಂ!
ತೊಳೆಯುತಿದೆ ರಕ್ತಕಲುಚಿತಮಾದ ಪೃಥ್ವಿಯಂ
ತನ್ನಮೃತವಾರಿಯಿಂ!…..
ಭಾರತಾಂಬೆ — ಬೆದರದಿರ್! ಮುಂದಪ್ಪುದಂ ಕಾಣ್…..
ಭರತಸುತ — ಮೋಡಗಳ್ ತೊಲಗುತಿವೆ! ಏನ್ ಬೆಳಕು!
ಹೊಂಬೆಳಗು ಚೆಲ್ಲುತಿದೆ ಬಾನ್ ದೇಶದಿಂ!….
ಹಕ್ಕಿಯಿಂಚರಮುಕ್ಕುತಿದೆ!….
ಪಚ್ಚೆ ಪಯಿರದೊ ಮುಚ್ಚಿ ಮುಸುಕತಿದೆ
ಧರಣಿದೇವಿಯ ಪೃಥಲ ವಕ್ಷಮಂ!
ದೂರದಿಂದಾವುದೋ ಕೇಳುತಿದೆ ದಿವ್ಯಗೀತಂ!
(ಎಂದು ಸುಮ್ಮನಾಗಿ ಆಲಿಸುತ್ತಾನೆ.)
ಭಾರತಾಂಬೆ — (ನಗುಮೊಗದಿಂದ)
ಮುಂದೆ?
ಭರತಸುತ — ಏನಿಂಪು! ಆಲಿಸಮ್ಮಾ!
( ‘ಜನಗಣಮನ ‘…. ಕೇಳಿ ಬರುತ್ತದೆ)
ಭಾರತಾಂಬೆ — ಕಣ್ದೆರೆದು ಕಾಣ್. ರಾಷ್ಟ್ರಧ್ವಜಂಬಿಡಿದು
ಬರುತಿಹುದು ಮಂದಿ ಸಂದಣಿಸಿ ಗುಡಿಗೆ.
ನೀಂ ಕಂಡ ದರ್ಶನದೊಳ್ ಅಖಿಳಾರ್ಥಮಂ
ತಿಳಿದು ಕಾಣ್!
ಹೃದಯ ದೌರ್ಬಲ್ಯಮಂ ಮಾಣ್!
ಸ್ವಾತಂತ್ರ್ಯ ಜೀವನಂ ಬಲಿ ಪರಂಪರೆಯೆಂಬುದಂ,
ಬಲಿದಾನ ತತ್ತ್ವಮಂ, ಭಾವಿಸಿ ಮನಂಗಾಣ್!
[ಭರತಮಾತೆ ಮೊದಲಿನಂತೆ ಕಾಳಿಕಾವಿಗ್ರದಲ್ಲಿ ವಿಲೀನೆಯಗುತ್ತಾಳೆ. ಭರತಸುತನು ಕಣ್ದೆರುದು ನೋಡಿ ಅವಳಿಗೆ ಕೈಮುಗಿದು ದಂಡಪ್ರಣಾಮ ಮಾಡುತ್ತಾನೆ. ‘ಜನಗಣಮನ ‘ ರಾಷ್ಟ್ರಗೀತೆಯ ಹಿನ್ನಲೆಯಲ್ಲಿ, ಮಹಾತ್ಮಗಾಂಧೀ ಕಿ ಜೈ! ವಂದೇಮಾತರಂ! ಮೊದಲಾದ ಘೋಷಣೆಗಳನ್ನು ಕೂಗುತ್ತ ಉತ್ಸಾಹದಿಂದ ಉನ್ಮತ್ತವಾದಂತೆ ಜನಪ್ರವಾಹ ಗುಡಿಯೊಳಗೆ ಬಂದು ಸಾಷ್ಟಾಂಗ ಪ್ರಣಾಮ ಮಾಡಿ ಎದ್ದುನಿಂತು ಕೈಮುಗಿದುಕೊಂಡು ದೇವೀ ಸ್ತೋತ್ರವನ್ನು ಹಾಡುತ್ತಿರುವ ಭರತಸುತನನ್ನು ಕಂಡು ನಿಶ್ಯಬ್ಧವಾಗುತ್ತದೆ. ಸುಮಧುರವೂ ಸ್ಪೂರ್ತಿದಾಯಕವೂ ಆಗಿ ದೇವೀಸ್ತುತಿ ಕೇಳಿಬರುತ್ತದೆ.]
ಅಂಬಾ ಶಾಂಭವಿ ಚಂದ್ರಮೌಳರಬಲಾsಪರ್ಣಾ ಉಮಾ ಪಾರ್ವತಿ |
ಕಾಳೀ ಹೈಮವತೀ ಶಿವಾ ತ್ರಿನಯನೀ ಕಾತ್ಯಾಯನೀ ಭೈರವೀ ||
ಸಾವಿತ್ರೀ ನವಯೌವನಾ ಶುಭಕರೀ ಸಾಮ್ರಾಜ್ಯಲಕ್ಷೀಪ್ರದಾ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ಮೋಹಿನಿ ದೇವತಾ ತ್ರಿಭುವನೀ ಆನಂದಸಂದಾಯಿನೀ |
ವಾಣೀ ಪಲ್ಲವಪಾಣಿ ವೇಣುಮುರಳೀಗಾನಪ್ರಿಯಲೋಲಿನೀ ||
ಕಲ್ಯಾಣೀ ಉಡುರಾಜಬಿಂಬವದನಾ ಧೂಮ್ರಾಕ್ಷ ಸಂಹಾರಿಣೀ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ನೂಪುರ ರತ್ನ ಕಂಕಣಧರೀ ಕೇಯೂರ ಹಾರಾವಳೀ |
ಜಾತೀ ಚಂಪಕ ವೈಜಯಂತಿಲಹರೀ ಗ್ರೈವೇಯ ವೈರಾಜತಾಮ್ ||
ವೀಣಾ ವೇಣು ವಿನೋದ ಮಂಡಿತಕರಾ ವೀರಾಸನಾ ಸಂಸ್ಥಿತಾ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ರೌದ್ರಿಣಿ ಭದ್ರಕಾಳಿ ಬಗಳಾ ಜ್ವಾಲಾಮುಖೀ ವೈಷ್ಣವೀ |
ಬ್ರಹ್ಮಾಣೀ ತ್ರಿಪುರಾಂತಕೀ ಸುರನುತಾ ದೇದೀಪ್ಯಮಾನೋಜ್ವಲಾ ||
ಚಾಮುಂಡಾ ಶ್ರೀತರಕ್ಷಪೋಷಜನನೀ ದಾಕ್ಷಾಯಣೀ ವಲ್ಲವೀ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ಶೂಲಧನುಃಕುಶಾಂತಕುಶಧರೀ ಅರ್ಧೇಂದು ಬಿಂಬಾಧರೀ |
ವಾರಾಹೀ ಮಧುಕೈಟಭಪ್ರಶಮನೀ ವಾಣೀರಮಾ ಸೇವಿತಾ |
ಮಲ್ಲಾದ್ಯಾಸುರ ಮೂಕದೈತ್ಯದಮನೀ ಮಾಹೇಶ್ವರೀ ಅಂಬಿಕಾ ||
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ಸೃಷ್ಟಿ ವಿನಾಶ ಪಾಲನಕರೀ ಆರ್ಯಾ ವಿಸಂಶೊಭಿತಾ |
ಗಾಯತ್ರೀ ಪ್ರಣವಾಕ್ಷರಾಮೃತರಸಃ ಪೂರ್ಣಾನುಸಂಧೀಕೃತಾ ||
ಓಂಕಾರೀ ವಿನುತಾ ಸುರಾರ್ಪಿತಪದಾ ಉದ್ದಂಡಾ ದೈತ್ಯಾಪಹಾರಿ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಅಂಬಾ ಶಾಶ್ವತ ಆಗಮಾದಿವಿನುತಾ ಆರ್ಯಾ ಮಹಾದೇವತಾ |
ಯಾ ಬ್ರಹ್ಮಾದಿ ಪಿಪೀಲಿಕಾಂತ ಜನನೀ ಯಾ ವೈ ಜಗನ್ಮೋಹಿನೀ ||
ಯಾ ಪಂಚ ಪ್ರಣವಾದಿ ರೇಫ ಜನನೀ ಯಾ ಚಿತ್ಕಳಾ ಮಾಲಿನೀ |
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ ||
ಓಂ ಶಾಂತಿಃ ಶಾಂತಿಃ ಶಾಂತಿಃ
<�)zn<@��yle=’font-size:12.0pt;font-family:”Times New Roman”,”serif”;mso-bidi-language: AR-SA’>
ಅಸ್ವತಂತ್ರೆ ಎಂಬುದನ್!
[ಭರತಸುತನು ಬರುತ್ತಾನೆ. ಅವನ ಎಡದ ಕೈಲಿದ್ದ ಮಿಂಚುಂಪೊಂಜಿನ ಬೆಳಕಿನಿಂದ ದೇಗುಲ ಬೆಳಗುತ್ತದೆ. ಅವನ ತಲೆ ಕೆದರಿದೆ. ಕೈಕಾಲುಗಳಲ್ಲಿ ಕತ್ತರಿಸಿದ ಸಂಕೋಲೆಯ ತುಂಡುಗಳಿವೆ. ರಕ್ತದ ಕಲೆ ತುಂಬಿದ ಉಡುಗೆ ಹರಿದು ಹೋಗಿದೆ. ಮುಖದ ಗಾಯಗಳು ಭಯಾನಕವಾಗಿವೆ. ಬಲಗೈಯಲ್ಲಿ ಹಿಡಿದು ಹೆಗಲಮೇಲೆ ಆತುಕೊಂಡಿದ್ದ ಧ್ವಜಕಾಷ್ಠದ ತುದಿಯಲ್ಲಿ ಚರಕ ಚಿಹ್ನೆಯ ತ್ರಿವರ್ಣ ಧ್ವಜ ತೂಗುತ್ತಿದೆ. ದೊಡ್ಡದೊಂದು ಕೀಲಿಕೈ ರಕ್ತಮಯವಾಗಿ ವಕ್ಷದ ಮೇಲೆ ನೇತಾಡುತ್ತಿದೆ. ‘ನಿನ್ನ ಸೇವೆಯೊಳಳಿವ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು‘ ಎಂಬ ಚರಣ ಮುಗಿಯುತ್ತಿರುವಾಗ ಪ್ರವೇಶಿಸುತ್ತಾನೆ. ಹೊರಗೆ ದೂರದಲ್ಲಿ ವಾದ್ಯ ಸಂಭ್ರಮ ಮೊದಲಾಗುತ್ತದೆ.]
ಭರತಸುತ — (ಧ್ವಜವೆತ್ತಿ ಉತ್ತಾಲ ಧ್ವನಿಯಿಂದ)
ಗೆಲ್, ತಾಯೆ, ಗೆಲ್!
ಭಾರತಾಂಬೆ — (ಬಂಧಿತವಾದ ಕೈಗಳನ್ನು ಎತ್ತಲೆಳಸಿ ಗದ್ಗದದಿಂದ)
ಬಾಳ್, ಮಗುವೆ, ಬಾಳ್.
ಭರತಸುತ — (ಕೊರಳೆತ್ತಿ) ಆಳ್! ಜಗವಾಳ್!
(ಮಿಂಚುಂಪೊಂಜನ್ನು ಒಂದೆಡೆ ಇಟ್ಟು, ಧ್ವಜವನ್ನು ಒಂದು ಕಡಿ ನೆಟ್ಟು ‘ವಂದೇ ಮಾತರಂ!’ ಎಂದು ಆಘೋಷಿಸುತ್ತಾ ಸಾಷ್ಟಾಂಗ ಪ್ರಣಾಮಮಾಡಿ ಎದ್ದು ನಿಂತು ಗುಡಿ ಗುಡುಗುವಂತೆ ಆಘೋಷಿಸುತ್ತಾನೆ.)
ಗೆಲ್, ತಾಯೆ, ಗೆಲ್!
ಬಾಳ್, ತಾಯೆ, ಬಾಳ್!
ಆಳ್, ಜಗವನಾಳ್!
ಭಾರತಾಂಬೆ — (ಹರ್ಷಾಧಿಕ್ಯದಿಂದ ಸಗದ್ಗದೆಯಾಗಿ)
ಬಂದೆಯಾ, ಮಗು.
ಭರತಸುತ — (ಉಲ್ಲಸಿತನಾಗಿ)
ಬಂದೆನ್! ತಂದೆನ್! ಇದೆಕೊ ಕಾಣ್!
(ವಕ್ಷದ ಮೇಲೆ ನೇಲುತ್ತಿದ್ದ ಕೀಲಿಕೈಯನ್ನು ನಿರ್ದೇಶಿಸುತ್ತಾನೆ)
ಭಾರತಾಂಬೆ — ವತ್ಸ, ಇದೇನ್ ಕೆನ್ನೀರ್!
ಭರತಸುತ — ನೆತ್ತರೊಳ್ ಮುಳುಗಿರ್ದುದನ್ ಎತ್ತಿ ತಂದೆನ್, ತಾಯಿ.
ಭಾರತಾಂಬೆ — ಪರಕೀಯ ವೈರಿಗಳ್ ಚೆಲ್ಲಿದುದೆ?
ಭರತಸುತ — ಅಲ್ತಲ್ತು, — ನಮ್ಮವರ್ ಚೆಲ್ಲಿದುದೆ!
ಪರಕೀಯ ವೈರಿಗಳ್ ಚೆಲ್ಲಿದಾ ಶೋಣಿತಮ್
ಹಸುಗೊರಸು ನೀರ್, ನಮ್ಮವರ್ ಚೆಲ್ಲಿದಾ
ಕಡಲದಿರ್! ಈ ನಿನ್ನ ಶೃಂಖಲೆಯಗಳಂ ಬಿಗಿದ
ಬೀಗಮಂ ತೆಗೆವ ಕೀಲಿಕೈ ಮುಳುಗಿರ್ದುದಾ
ಸೋದರ್ ಸೋದರರ ಮೈಯಿಂದೆ ಚೆಲ್ಲಿದಾ
ಮತವೈರ ಸಂಜಾತ ರುಧಿರ ಪ್ರವಾಹದೊಳ್!
ಭಾರತಾಂಬೆ — ಅಯ್ಯೊ ಇಲ್ಲಿಯಂ, ಬಿಡುಗಡೆಯ ಪಡೆವಲ್ಲಿಯುಂ,
ನಾನೆಂತಪ್ಪ ದುರ್ಭಾಗ್ಯೆಯೆನ್!
ಅನ್ಯರಿಂ ಪಡೆವಡೆಯೊಳಂದು ಬಲಿದಾನಂ!
ನನ್ನವರೆ ಕೊಡುವೆಡೆಯೊಳಿಂದು ಬಲಿದಾನಂ!
ಇನ್ನುಮೆನಿಕಿರ್ಕುಮೋ ಮುನ್ ಬಲಿಯ ದಾನಂ!
ಭರತಸುತ — ಅಳಲದಿರ್, ತಾಯೆ, ಅಳಲ್ಕಿದು ಪೊಳ್ತಳು.
ನಿನ್ನಂ ಮೊದಲ್ ಸ್ವತಂತ್ರೆಯಂ ಮಾಳ್ಪೆನ್.
ಅನಂತಂ ನೋಳ್ಪಮೀ ನಿನ್ನ ಸ್ವಾತಂತ್ರ್ಯದಿಂ
ಸಂಭಿವಿಪ ಸದ್ಬುದ್ಧಿಯಂ ಸಂತೃಪ್ತಿಯಂ, ಶಾಂತಿಯಂ!
[ದೂರದಿಂದ ‘ವಂದೇ ಮಾತರಂ‘ ಗೀತೆ ಕೇಳುತ್ತಿರಲು ಕೀಲಿಕೈಯಿಂದ ಬೀಗವನ್ನು ಕಳಚುತ್ತಾನೆ. ಸರಪಣಿಗಳ ಖಣಿ ಖಣಿಲ್ ಕಳಚಿ ಬೀಲುತ್ತವೆ. ಹೂಮಳೆ ಸುರಿಯುತ್ತದೆ. ಮಂಗಳವಾದ್ಯ ಮೊಳಗುತ್ತವೆ. ಭರತಸುತನು ಸ್ವಾತಂತ್ರ್ಯೆಯಾದ ಭರತಮಾತೆಯನ್ನು ಕಣ್ಣರಳಿಸಿ ನೋಡುತ್ತ ಬಹು ಕಂಠಂಗಳಿಗೆ ತನ್ನ ಕಂಠವನ್ನೂ ಸೇರಿಸಿ ಹಾಡುತ್ತಾನೆ.]
ಸರ್ವಗೀತೆ
ಲೋಕ ಮಲಗಿದಂದು ನೀ ನಟ್ಟನಡೂ ರಾತ್ರಿ
ಎಚ್ಚರಾಂತೆ, ಅವಿಶ್ರಾಂತೆ; ಆದೆ ಪುನರ್ಯಾತ್ರಿ.
ಸರ್ವಕಾಲ ಸರ್ವದೇಶ ಸರ್ವಮೋಕ್ಷ ಮಂತ್ರೇ,
ಅಸ್ವತಂತ್ರತ್ರೆ ಸುಸ್ವತಂತ್ರೆಯಾದ ವಿಶ್ವತಂತ್ರೇ.
ಏಳು ತಾಯಿ, ಬಾಳು ತಾಯಿ, ಜಗತ್ ಕsಲ್ಯಾಣಿ;
ಯುಗಯುಗಾಯು ಜಗವನಾಳು, ಧರ್ಮಚಕ್ರಪಾಣಿ;
ದಿಗ್ದಿಗಂತ ರಣಿತಮಕ್ಕೆ ನಿನ್ನ ದಿವ್ಯವಾಣಿ.
ನಡೆ ಮುಂದೆ, ನಡೆ ಮುಂದೆ, ನಡೆ ಮುಂದೆ, ರಾಣಿ!
ಶಾಂತಿ ಸತ್ಯ ಮುಕ್ತಿ ಧರ್ಮ ತತ್ತ್ವ ಮಹೋದಾತ್ತೆ,
ಕಾವ್ಯ ಶಿಲ್ಪ ನೃತ್ಯ ಗಾನ ಸಕಲ ಕಲಾವೇತ್ತೆ,
ಶ್ರದ್ಧೆಯಾಗಿ ಬುದ್ಧಿಯಾಗಿ ತಪಸ್ ಶಕ್ತಿಯಾಗಿ
ನಡಸು ನಮ್ಮನೆಲ್ಲ, ಅಮ್ಮ, ಪೂರ್ಣಸಿದ್ಧಿಗಾಗಿ!
ನಮೋ ದೇವಿ! ನಮೋ ತಾಯಿ! ನಮೋ ಭರತಮಾತೆ!
ನಮಸ್ ಸತ್ಯೆ! ನಮೋ ನತ್ಯೆ! ನಮೋ ಜಗನ್ಮಾತೆ!
Leave A Comment