ಇದು ಯುಗಾಂತರಗಳ ಕಥೆ. ಲೋಕಗಳ ಒಡೆತನಕ್ಕಾಗಿ ದೇವತೆಗಳಿಗೂ ದೈತ್ಯರಿಗೂ ಆಗಾಗ ಹೋರಾಟ ಯುದ್ಧಗಳಾಗುತ್ತಿದ್ದುವು. ಯುದ್ಧದಲ್ಲಿ ಒಮ್ಮೆ ದೇವತೆಗಳು ಗೆದ್ದರೆ, ಮತ್ತೊಮ್ಮೆ ದೈತ್ಯರಿಗೆ ಜಯ ಲಭಿಸುತ್ತಿತ್ತು. ಸೋತ ಗುಂಪಿನವರು ಗೆದ್ದವರ ಮೇಲೆ ಸೇಡು ಹಿಡಿದು ಸಮಯ ನೋಡಿ ಹೋರಾಟಕ್ಕೆ ಇಳಿಯುತ್ತಿದ್ದರು. ಹೀಗೆ ದೇವತೆಗಳಿಗೂ ದೈತ್ಯರಿಗೂ ವೈರ ಬೆಳೆದಿತ್ತು. ಯುದ್ಧ ಭಯ ಮತ್ತು ಸಾವು ನೋವುಗಳಿಂದ ಪ್ರಜೆಗಳಿಗೆ ನೆಮ್ಮದಿಯಿರಲಿಲ್ಲ.

ತ್ರೇತಾಯುಗದ ಆರಂಭ ಕಾಲದಲ್ಲಿ ಒಂದು ದೊಡ್ಡ ಯುದ್ಧ ನಡೆದು ದೇವತೆಗಳು ಜಯಶಾಲಿಗಳಾದರು. ದೈತ್ಯರಾಜನಾದ ಹಿರಣ್ಯಕಶಿಪು ಮಡಿದ ಮೇಲೆ ಆತನ ಮಗ ಪ್ರಹ್ಲಾದನು ಭೂಮಂಡಲದ ದೊರೆಯಾದನು. ಪ್ರಹ್ಲಾದನ ಮಗ ವಿರೋಚನ. ವಿರೋಚನನ ಪತ್ನಿ ದೇವಾಂಬೆ. ಇವರ ಪುತ್ರನೇ ಬಲಿ.

ಬಲಿಕುಮಾರನಿಗೆ ಅಜ್ಜನಾದ ಪ್ರಹ್ಲಾದನೆಂದರೆ ಬಹಳ ಗೌರವ. ಏಕೆಂದರೆ ಚಿಕ್ಕಂದಿನಿಂದಲೂ ಅವನು ಅಜ್ಜನ ತೊಡೆಯಲ್ಲೇ ಆಟವಾಡಿ ಬೆಳೆದವನು. ಅವನಿಗೆ ಸದ್ಗುಣಗಳ ಪಾಠ ಅಜ್ಜನಿಂದಲೇ ಲಭಿಸಿತು. ಬಲಿ ಕುಮಾರನು ವೇದವಿದ್ಯೆ ಮತ್ತು ಯುದ್ಧ ವಿದ್ಯೆಯಲ್ಲಿ ಪರಿಣತನಾದನು; ದೈತ್ಯ ವೀರರೊಳಗೆ ಅಗ್ರಗಣ್ಯನಾಗಿ ‘ಬಲಿ’ ಎಂಬ ಹೆಸರಿಗೆ ತಕ್ಕಂತೆ ಬಲಶಾಲಿಯಾದನು. ವಿಂಧ್ಯಾವಳಿ ಎಂಬ ಋಷಿಕನ್ಯೆಯೊಡನೆ ಬಲಿಗೆ ಮದುವೆಯೂ ಆಯಿತು. ಪ್ರಹ್ಲಾದನು ಅವನನ್ನು ಯುವರಾಜನನ್ನಾಗಿ ನೇಮಿಸಿದನು.

ಯುವರಾಜನಾದ ಮೇಲೆ ಬಲಿಗೆ ಒಂದು ಯೋಚನೆ ಹೊಳೆಯಿತು. ‘ದೇವತೆಗಳು ನಿರಂತರವಾಗಿ ದೈತ್ಯರ ಮೇಲೆ ವೈರವನ್ನು ಸಾಧಿಸುತ್ತಿರುವುದರಿಂದ ದೈತ್ಯರು ಭಯಗ್ರಸ್ತರಾಗಿದ್ದಾರೆ. ದೇವತೆಗಳಿಗೆ ಸಮನಾದ ಯೋಗ್ಯತೆಯನ್ನು ನಾನು ಗಳಿಸಬೇಕು. ಆಗ ಮಾತ್ರ ಈ ಭಯವನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸುತ್ತೇನ’ ಎಂದು ನಿರ್ಧರಿಸಿದನು. ಬಲಿ ತಪಸ್ಸಿಗೆ ಹೊರಟನು.

ನಿರ್ಜನವಾದ ಅರಣ್ಯದಲ್ಲಿ ಬಲಿಯು ಕಠಿಣವಾದ ತಪಸ್ಸಿಗೆ ಕುಳಿತನು. ಬ್ರಹ್ಮದೇವನು ಪ್ರತ್ಯಕ್ಷವಾಗುವವರೆಗೆ ಆತನು ಅನ್ನ ಪಾನೀಯಗಳನ್ನು ಮುಟ್ಟಲಿಲ್ಲ, ಚಳಿ ಮಳೆ ಗಾಳಿಗೆ ಹೆದರಲಿಲ್ಲ. ಅವನ ಘೋರವಾದ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಕಾಣಿಸಿಕೊಂಡನು. ‘ದೇವನೇ, ನನಗಾಗಿ ನಾನು ಏನನ್ನೂ ಬೇಡುವುದಿಲ್ಲ. ಆದರೆ ದೇವತೆಗಳ ಭಯದಿಂದ ರಾಕ್ಷಸರು  ದುರ್ಬಲರಾಗಿದ್ದಾರೆ. ದೇವತೆಗಳ ಭಯವಿಲ್ಲದ ಹಾಗೆ ನನಗೆ ಇಂದ್ರತ್ವವೂ ಅಮರತ್ವವೂ ಲಭಿಸುವಂತೆ ವರವನ್ನು ಕೊಡು” ಎಂದು ಬಲಿ ಬೇಡಿದ. ಬ್ರಹ್ಮನು ವರವನ್ನು ಕರುಣಿಸಿದ. ಬಲಿ ರಾಜಧಾನಿಗೆ ಹಿಂದಿರುಗಿದ.

ಬಲಿಯ ರಾಜ್ಯಾಭಿಷೇಕ

ಅಂದು ದೈತ್ಯರಾಜಧಾನಿಯಲ್ಲಿ ಸಂಭ್ರಮವೋ ಸಂಭ್ರಮ! ಎಲ್ಲೆಲ್ಲೂ ಸುಣ್ಣ ಬಣ್ಣಗಳಿಂದ ಅಲಂಕರಿಸಿದ ಮನೆಗಳು, ತಳಿರು ತೋರಣಗಳು, ಚಿತ್ರಾಲಂಕಾರಗಳು ಕಂಗೊಳಿಸಿದುವು. ಗೀತವಾದ್ಯಗಳು, ಮಂಗಳ ದುಂದುಭಿಗಳು ಮೊಳಗಿದುವು. ‘ಇಂದು ಬಲಿಗೆ ರಾಜ್ಯಾಭಿಷೇಕ. ಆತನು ನಮ್ಮ ಮಹಾರಾಜನಾಗುತ್ತಾನೆ’ ಎಂದು ಪ್ರಜೆಗಳು ಹರ್ಷದಿಂದ ಘೋಷಿಸುತ್ತಿದ್ದರು.

ಬಲಿರಾಜನು ತಪಸ್ಸಿದ್ಧಿಯನ್ನು ಪಡೆದುಕೊಂಡು ಬಂದಕೂಡಲೇ ಅವನಿಗೆ ರಾಜ್ಯಾಭಿಷೇಕ ಮಾಡಬೇಕೆಂದು ಪ್ರಹ್ಲಾದನು ಯೋಚಿಸಿದನು. ಆದರೆ ಮೊದಮೊದಲು ಬಲಿಯು ಅದಕ್ಕೊಪ್ಪದೇ ತನ್ನ ಅಜ್ಜನೇ ರಾಜನಾಗಿರಬೇಕೆಂದು ಒತ್ತಾಯ ಪಡಿಸಿದ್ದರಿಂದ ಕೆಲವು ವರ್ಷ ಸುಮ್ಮನಿರಬೇಕಾಯಿತು.  ಕೊನೆಗೊಮ್ಮೆ ಪ್ರಹ್ಲಾದನು ಮೊಮ್ಮಗನನ್ನು ಒತ್ತಾಯಪಡಿಸಿ ರಾಜ್ಯಾಭಿಷೇಕಕ್ಕೆ ಒಪ್ಪಿಸಿದನು. ಬಲಿಯು ಅಜ್ಜನು ರಾಜಧಾನಿಯಲ್ಲಿಯೆ ಇರಬೇಕೆಂದು ಪ್ರಾರ್ಥಿಸಿ ಒಪ್ಪಿಸಿದನು. ಬಲಿಯ ಪಟ್ಟಾಭಿಷೇಕಕ್ಕಾಗಿ ನೂರಾರು ಮಂದಿ ಅರಸರು ಕಾಣಿಕೆಗಳೊಡನೆ ಬಂದು ರಾಜನಗರಿಯಲ್ಲಿ ಕಿಕ್ಕಿರಿದರು. ಬಹು ಸಂಭ್ರಮದಿಂದ ರಾಜ್ಯಭಿಷೇಕ ನಡೆಯಿತು. ಅಲ್ಲಿಗೆ ಆಗಮಿಸಿದ್ದ ಗಂಧರ್ವ, ಯಕ್ಷ, ಸಿದ್ಧ, ದೈತ್ಯ ರಾಜರೆಲ್ಲರೂ ಬಲಿ ಮಹಾರಾಜನ ಸ್ನೇಹವನ್ನು ಕೋರಿ ಉಡುಗೊರೆಗಳನ್ನು ಅರ್ಪಿಸಿದರು.

ಬಲಿಯ ರಾಜ್ಯಾಭಿಷೇಕಕ್ಕೆ ಬರದವರೆಂದರೆ ದೇವತೆಗಳು ಮಾತ್ರ. ಸ್ವರ್ಗದ ಒಡೆಯನಾದ  ಇಂದ್ರನು ಬಲಿಯ ತಪಸ್ಸಿದ್ದಿಯನ್ನು ಕೇಳಿದಾಗಲೇ ರೋಷಗೊಂಡಿದ್ದನು. ಬಲಿರಾಜನ ಪರಾಕ್ರಮದಿಂದ ದೈತ್ಯರು ಪ್ರಬಲರಾಗುತ್ತಿರುವುದನ್ನು ಕೇಳಿ ಅವನಿಗೆ ಭಯವೂ ಚಿಂತೆಯೂ ಕಾಡತೊಡಗಿತ್ತು.

ಬಲಿಯ ದಿಗ್ವಿಜಯ

ಬಲಿಯು ರಾಜನಾಗುತ್ತಲೇ ದೈತ್ಯರಿಗೆ ಎಲ್ಲಿಲ್ಲದ ಉತ್ಸಾಹಬಂದಿತು. ದೇವತೆಗಳ ಭಯದಿಂದ ತಲೆ ಮರೆಸಿಕೊಂಡಿದ್ದ ಅನೇಕ ಮಂದಿ ವೀರರು ಮತ್ತು ವಿದ್ವಾಂಸರು ಈಗ ಬಲಿರಾಜನ ಆಶ್ರಯದಲ್ಲಿ ಒಟ್ಟುಗೂಡಿದರು.

ಬಲಿಯು ರಾಜ್ಯ ಪರಿಪಾಲನೆಗೆ ಸಹಾಯಕವಾಗುವಂತೆ ಬುದ್ಧಿವಂತರೂ  ಯೋಗ್ಯರೂ ಆದ ಅಧಿಕಾರಿಗಳನ್ನು ನೇಮಿಸಿದನು. ತಪಸ್ಸಿನಿಂದ ಮಹಿಮೆಯನ್ನು ಗಳಿಸಿದ್ದ ಶುಕ್ರಾಚಾರ್ಯರು ಆತನ ಪುರೋಹಿತರಾದರು.

ಬಲಿಯು ಮಾಡಬೇಕಾಗಿದ್ದ ಮೊದಲನೆಯ ಕಾರ್ಯವೆಂದರೆ ನೆರೆಹೊರೆಯಲ್ಲೂ ಮತ್ತು ದೂರದ ರಾಜ್ಯಗಳಲ್ಲೂ ಆಳುತ್ತಿದ್ದ ಅರಸರನ್ನು ಗೆದ್ದು ತನ್ನ ಆಜ್ಞೆಗೆ ಒಳಪಡಿಸುವುದು. ಇದಕ್ಕೆ ಕಾರಣವೂ ಇತ್ತು. ದೂರದ ರಾಜ್ಯಗಳನ್ನಾಳುತ್ತಿದ್ದ ಕೆಲವು ಅರಸರು ಲೋಭಿಗಳೂ, ದುಷ್ಟರೂ ಆಗಿದ್ದರು.  ತಮ್ಮ ಇಷ್ಟಬಂದಂತೆ ಪ್ರಜೆಗಳನ್ನು ದೋಚುತ್ತ ಹಿಂಸಿಸುತ್ತಿದ್ದರು. ಇದರಿಂದ ಎಲ್ಲೆಲ್ಲೂ ಬಡತನ ತುಂಬಿಕೊಂಡಿತ್ತು. ದುರ್ಬಲರಿಗೂ ಅನಾಥರಿಗೂ ಸರಿಯಾದ ರಕ್ಷಣೆಯಿರಲಿಲ್ಲ. ಕೆಲವರಂತೂ ಹಿಂಸೆ ತಾಳಲಾರದೆ ಊರುಗಳನ್ನೇ ಬಿಟ್ಟು ಹೋಗಿದ್ದುದರಿಂದ ಭೂಮಿಗಳು ಬೆಳೆಯಿಲ್ಲದೆ ಬಂಜರು ಬಿದ್ದಿದ್ದವು.

ಬಲಿಮಹಾರಾಜನು ಪ್ರಹ್ಲಾದನ ಸಲಹೆಯನ್ನು ಪಡೆಯುವುದಕ್ಕಾಗಿ ಆತನ ಅರಮನೆಗೆ ಬಂದನು. ಪ್ರಹ್ಲಾದನು ಮೊಮ್ಮಗನನ್ನು ಆದರದಿಂದ ಬರಮಾಡಿಕೊಂಡನು. ಬಲಿಯು ಹೇಳತೊಡಗಿದನು.

“ಅಜ್ಜ, ಪ್ರಜೆಗಳು ನೆಮ್ಮೆದಿಯಿಂದಿರಬೇಕಾದರೆ ಅರಸರು ಒಳ್ಳೆಯವರಗಿರಬೇಕಷ್ಟೆ. ದುಷ್ಟರಾಜರನ್ನು ದಮನ ಮಾಡಿ ಅವರು ನಮ್ಮ ಶಾಸನಕ್ಕೆ ಒಳಪಡುವಂತೆ ಮಾಡಲು ಹೊರಟ್ಟಿದ್ದೇನೆ. ನನ್ನನ್ನು ಆಶೀರ್ವದಿಸಿರಿ”.

ಪ್ರಹ್ಲಾದನು “ಕುಮಾರ, ಈ ಸನ್ನಿವೇಶದಲ್ಲಿ ಕ್ಷಮೆ, ಪರಾಕ್ರಮ ಎರಡೂ ಬೇಕು. ಸತತವಾಗಿ ಎರಡೂ ಒಳ್ಳೆಯದಲ್ಲ. ಅಧರ್ಮ ಮತ್ತು ಹಿಂಸೆಗಳನ್ನು ನೋಡಿಯೂ ಸಹ ಅದನ್ನು ನಿವಾರಿಸದೆ ಕ್ಷಮಿಸುತ್ತಾ ಹೋದರೆ ಅಂತಹವನನ್ನು ತನ್ನವರೇ ಉದಾಸೀನ ಮಾಡುತ್ತಾರೆ. ಯಾವಾಗಲೂ ಪರಾಕ್ರಮವನ್ನೇ ಪ್ರದರ್ಶಿಸುವ ರಾಜನಿಗೆ ತನ್ನವರೇ ವಿರೋಧಿಗಳಾಗುವರಲ್ಲದೆ ಪ್ರಜೆಗಳೂ ಸಹ ಸರ್ಪವನ್ನು ಕಂಡವರಂತೆ ಹೆದರುತ್ತಾರೆ. ಆದುದರಿಂದ ನೀನು ಕ್ಷಮಾವಂತನಾಗಿದ್ದುಕೊಂಡೇ ಪರಾಕ್ರಮಿಸಬೇಕು; ದರ್ಪ ಎಂದಿಗೂ ಹಿತವಲ್ಲ” ಎಂದು ಹೇಳಿದನು. ಆಶೀರ್ವದಿಸಿ ಪ್ರಹ್ಲಾದನು ಬಲಿಯನ್ನು ಬೀಳ್ಕೊಟ್ಟನು.

ಬಲಿಮಹಾರಾಜನು ಸೈನ್ಯಗಳನ್ನು ಕೂಡಿಸಿಕೊಂಡು ಮಂತ್ರಿ ಸೇನಾನಿಗಳೊಡನೆ ದಿಗ್ವಿಜಯಕ್ಕೆ ಹೊರಟನು. ರಣಶೂರನಾದ ಆತನ ಮುಂದೆ ನಿಲ್ಲ ಬಲ್ಲವರಾರು? ಅನೇಕ ಅರಸರು ಯುದ್ಧವಿಲ್ಲದೆಯೇ ಶರಣಾಗತರಾದರು. ಕೆಲವರು ಸೋತು ಶರಣಾದರು. ಮತ್ತೆ ಕೆಲವರು ಬಲಿರಾಜನಿಗೆ ಸ್ನೇಹಿತರಾದರು. ಹೀಗೆ ಇಡೀ ಭೂಮಂಡಲವನ್ನು ಗೆದ್ದು ಬಲಿಯು ಸಾಮ್ರಾಟನಾದನು.

ವಿಶ್ವಜಿದ್ಯಜ್ಞ

ದಿಗ್ವಿಜಯ ಮಾಡಿ ಬಂದ ಮೇಲೆ ರಾಜಧಾನಿಯಲ್ಲಿ ಬಲಿ ಸಾಮ್ರಾಟನು ಮಂತ್ರಿಗಳ ಮತ್ರು ಪ್ರಜೆಗಳ ದೊಡ್ಡ ಸಭೆ ಸೇರಿಸಿದನು. ತುಂಬು ಸಭೆಯಲ್ಲಿ ಗುರುಗಳಾದ ಶುಕ್ರಾಚಾರ್ಯರನ್ನು ಪೂಜಿಸಿ ಕೈ ಮುಗಿದು “ಗುರುದೇವ ನಿಮ್ಮ ಮಾರ್ಗದರ್ಶನದಿಂದ ನಾನು ಚಕ್ರವರ್ತಿಯಾದೆ. ನಾನು ತಂದಿರುವ ಐಶ್ವರ್ಯರಾಶಿಯನ್ನು ತಮಗೆ ದಕ್ಷಿಣೆಯಾಗಿ ಸಮರ್ಪಿಸುತ್ತಿದ್ದೇನೆ. ಸ್ವೀಕರಿಸಿ” ಎಂದನು.

ಶುಕ್ರಾಚಾರ್ಯರು ನಗುತ್ತ ನುಡಿದರು.

“ದಾನವರಾಜ, ಈ ಐಶ್ವರ್ಯ ಪ್ರಜೆಗಳದು. ಅದು ಅವರಿಗೆ ವಿನಿಯೋಗವಾಗುವಂತೆ ವಿಶ್ವಜಿದ್‌ ಯಜ್ಞವನ್ನು ಮಾಡು. ನಾನು ಅಪೇಕ್ಷಿಸುವ ಎರಡು ಗುರು ದಕ್ಷಿಣೆಗಳನ್ನು ನೀನು ಕೊಡಬೇಕು!”

“ಹಾಗೆಯೇ ಆಗಲಿ, ನೀವು ಅಪೇಕ್ಷಿಸುವ ಮೊದಲ ದಕ್ಷಿಣೆಯೇನು?”

“ದೈತ್ಯರಲ್ಲಿ ಧರ್ಮವನ್ನು ನೆಲೆಗೊಳಿಸು. ಇದು ಮೊದಲನೆಯದು”.

“ಆಯಿತು, ಇಂದಿನಿಂದ ನನ್ನ ರಾಜ್ಯ ಧರ್ಮ ಸಾಮ್ರಾಜ್ಯವಾಗುತ್ತದೆ. ತಮ್ಮ ಎರಡನೆಯ ಅಪೇಕ್ಷೆಯೇನು?”

“ಲೋಕದ ಬಡತನವನ್ನು ನೀಗಲು ದಾನಗುಣವನ್ನು ಬೆಳೆಸಿಕೋ”.

“ಅಪ್ಪಣೆ ಗುರುದೇವ. ಇಂದಿನಿಂದ ದಾನವು ನನ್ನ ವ್ರತ. ಇದು ನನ್ನ ಪ್ರತಿಜ್ಞೆ. ನನ್ನಲ್ಲಿಗೆ ಯಾರೇ ಆಗಲಿ ಬಂದು ಬೇಡಿದ ಯಾವುದೇ ವಸ್ತುವನ್ನಾದರೂ ಇಲ್ಲವೆನ್ನದೆ ದಾನ ಮಾಡುತ್ತೇನೆ!”

ಬಲಿಯ ಈ ಪ್ರತಿಜ್ಞೆ ಇಡೀ ಲೋಕಗಳನ್ನೇ ಬೆರಗುಮಾಡಿತು. ಸ್ವರ್ಗದಲ್ಲಿನ ದೇವತೆಗಳೂ ಸಹ ಈ ಸುದ್ಧಿಯನ್ನು ಕೇಳಿ ಬೆದರಿದರು.

ಬಲಿ ಚಕ್ರವರ್ತಿ ವಿಶ್ವಜಿದ್‌ ಯಜ್ಞ ಮಾಡಿದನು. ಅದುವರೆಗೆ ಯಾವ ದೈತ್ಯ ರಾಜನೂ ಇಂತಹ ಯಜ್ಞ ಮಾಡಿರಲಿಲ್ಲ. ದೈತ್ಯರಿಗೆ ಬಲಿರಾಜನು ಕಟ್ಟಪ್ಪಣೆ ಮಾಡಿದನು. “ದೈತ್ಯರೇ, ಹಿಂಸೆಯ ಮಾರ್ಗವನ್ನು ಬಿಟ್ಟು ಕೀರ್ತಿವಂತರಾಗಿರಿ. ಧರ್ಮಕ್ಕೆ ವಿರುದ್ಧವಾಗಿ ನಡೆಯುವವರನ್ನು ಉಗ್ರವಾಗಿ ಶಿಕ್ಷಿಸುತ್ತೇನೆ. ಬಲಿಯ ರಾಜ್ಯದಲ್ಲಿ ಅನ್ಯಾಯ ಮತ್ತು ಅಧರ್ಮಕ್ಕೆ ಸ್ಥಾನವಿಲ್ಲವೆಂದು ಲೋಕದ ಮೂಲೆಮೂಲೆಗಳಿಗೂ ಸಾರಿರಿ”.

ಮಾನವರು ಬಡತನ ಮತ್ತು ಕಷ್ಟಗಳಿಗೆ ಬಹಳ ಬೇಗನೆ ಬೆದರುವವರಲ್ಲವೆ? ದೈತ್ಯರಿಗೆ ಹೆದರುವುದರಿಂದಲೇ ಅವರು ದೇವತೆಗಳನ್ನು ಪೂಜಿಸಿ ಸ್ವರ್ಗದ ಸುಖಕ್ಕಾಗಿ ಅಂಗಲಾಚುವರೆಂಬ ವಿಷಯ ಬಲಿಗೆ ಗೊತ್ತಿತ್ತು. ಬಲಿಯು ಮಾನವರಿಗೆ ಭರವಸೆ ನೀಡುತ್ತ, “ಪ್ರಜೆಗಳೇ, ನಿಮ್ಮ ಸುಖವೇ ನನ್ನ ಸುಖ. ಬಲಿಯ ರಾಜ್ಯದಲ್ಲಿ ಇನ್ನು ಬಡತನಕ್ಕೆ ನೆಲೆಯಿಲ್ಲ. ನೀವು ಸ್ವರ್ಗವನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಈ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡುತ್ತೇನೆ” ಎಂದು ಘೋಷಿಸಿದನು. ತನ್ನ ಮಾತಿನಂತೆಯೇ ನಡೆದುಕೊಂಡನು.

ಆದರ್ಶ ರಾಜ್ಯ

ಪ್ರಹ್ಲಾದ, ಶುಕ್ರಾಚಾರ್ಯ, ಶಂಬರ ಮೊದಲಾದ ಹಿರಿಯರು ಬಲಿಯ ಸಾಮ್ರಾಜ್ಯದ ಉದ್ಧಾರಕ್ಕೆ ಬೇಕಾದ ಕಾನೂನುಗಳನ್ನು ರಚಿಸಿದರು. ಅದರಂತೆ ರಾಜ್ಯದಲ್ಲಿ ಪ್ರಜೆಗಳ ಊಟ, ವಸತಿ ಹಾಗೂ ಸುಖಜೀವನಕ್ಕೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಲಾಯಿತು. ಬೆಟ್ಟ ಗುಡ್ಡಗಳಿಗೂ ಅರಣ್ಯಗಳಿಗೂ ಹೊರಟು ಹೋಗಿದ್ದ ಋಷಿ ಮುನಿಗಳು ಈ ನಿರ್ಭಯವಾಗಿ ತಪೋವನಗಳಲ್ಲಿ ನೆಲೆಸಿ ಯಜ್ಞಯಾಗಗಳನ್ನು ಮಾಡತೊಡಗಿದರು.  ಎಲ್ಲರೂ ನಿರಾತಂಕವಾಗಿ ತಮ್ಮ ವ್ರತಗಳನ್ನು ಅನುಸರಿಸಲು ಸಾಧ್ಯವಾಯಿತು. ದೇಶದಲ್ಲಿ ಶಾಂತಿ ಸಮೃದ್ಧಿಗಳು ಬೆಳಗಿದವ

ಇಂದಿನಿಂದ ನನ್ನ ರಾಜ್ಯ ಧರ್ಮಸಾಮ್ರಾಜ್ಯವಾಗುತ್ತದೆ’

ಬಲಿಮಹಾರಾಜನು ಸಾಮ್ರಾಜ್ಯದ ಮೂಲೆ ಮೂಲೆಗಳಿಗೂ ತಾನೇ ಸಂಚರಿಸಿ ಪ್ರಜೆಗಳ ಸಂತೋಷವನ್ನು ಕಂಡನು. ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುವ ಬೆಳೆಗಳನ್ನು ನೋಡಿ ಆತನಿಗೆ ಆನಂದವಾಯಿತು. ‘ಬಲಿ ಮಹಾರಾಜನು ಧರ್ಮಾತ್ಮ , ಸತ್ಯವಂತ, ದಾನವೀರ, ಭೂಮಿಯನ್ನು ಸ್ವರ್ಗವನ್ನಾಗಿ ಮಾಡಲು ಅವತರಿಸಿರುವ ದೇವತೆ’ ಎಂದು ಎಲ್ಲರ ಬಾಯಲ್ಲೂ ಹೊಗಳಿಕೆಯ ಮಾತೇ ಮಾತು! ಭೋಗಭಾಗ್ಯಗಳಿಗಾಗಿ ಈಗ ದೇವತೆಗಳನ್ನು ಬೇಡುವವರೇ ಇಲ್ಲವಾಯಿತು. ಭೂಲೋಕದಲ್ಲಿ ಸುಖ ಶಾಂತಿಗಳು ನೆಲೆಸಿ ಸುಭಿಕ್ಷವಾಯಿತು. ಬಡತನವಿಲ್ಲದ ಪ್ರಜೆಗಳು ಆನಂದದಿಂದ ನಲಿದರು.

ದೇವತೆಗಳ ಸಂಚು

ಲೋಕಗಳಲ್ಲಿ ವ್ಯಾಪಿಸಿರುವ ಬಲಿ ಸಾಮ್ರಾಟನ ಕೀರ್ತಿಯಿಂದ ಸ್ವರ್ಗದ ಒಡೆಯನಾದ ಇಂದ್ರನಿಗೆ ಹೊಟ್ಟೆಯಲ್ಲಿ ಕೊಳ್ಳಿಯಿಟ್ಟಂತಾಯಿತು. ಅವನು ದೇವತೆಗಳ ಸಭೆಯನ್ನು ಸೇರಿಸಿ “ಬಲಿಯು ಪ್ರಬಲನಾದರೆ ನಮ್ಮ ಇಂದ್ರ ಪದವಿಗೆ ಅಪಾಯ. ಅವನ ರಾಜ್ಯದಲ್ಲಿ ಅನ್ಯಾಯ, ಆಧರ್ಮಗಳು ಬೆಳೆದಾಗಲೇ ಅವನನ್ನು ದಮನ ಮಾಡಲು ಸಾಧ್ಯ. ಇದಕ್ಕಾಗಿ ಅಲ್ಲಿನ ಪ್ರಜೆಗಳನ್ನು ಪ್ರಚೋದಿಸಲು ಕಲಿಪುರುಷನನ್ನು ಕಳುಹಿಸೋಣ. ಮಳೆ ಬೆಳೆಗಳಿಲ್ಲದೆ ಪ್ರಜೆಗಳು ಬಲಿಯ ಮೇಲೆ ದಂಗೆಯೇಳುವಂತೆ ಮಾಡುವುದೊಂದೇ ಈಗ ನಮ್ಮ ಕರ್ತವ್ಯ” ಎಂದನು. ಅದರಂತೆ ಬಲಿ ರಾಜ್ಯವಾದ ಭೂಲೋಕದಲ್ಲಿ ಅಶಾಂತಿಯನ್ನು ಮೂಡಿಸಲು ಕಲಿಪುರುಷನು ಹೊರಟನು.

ಸ್ವರ್ಗದ ಮೇಲೆ ಬಲಿಯ ವಿಜಯ

ಇತ್ತ ಬಲಿಯ ರಾಜಸಭೆಯಲ್ಲೂ ಮಂತ್ರಿ ಸೇನಾನಿಗಳು ಆಲೋಚಿಸಿದರು. ದೈತ್ಯರೆಲ್ಲರೂ ಒಕ್ಕೊರಲಿನಿಂದ “ಪ್ರಭು, ಭೂಲೋಕವೆಲ್ಲ ನಮ್ಮದಾಗಿದೆ. ತಮ್ಮ ಪರಾಕ್ರಮದ ಮುಂದೆ ಆ ಇಂದ್ರನು ನಿಲ್ಲಲಾರ. ಆದುದರಿಂದ ಸ್ವರ್ಗವನ್ನೂ ಗೆದ್ದು ದೇವತೆಗಳ ದರ್ಪವನ್ನು ಇಳಿಸಿ ಮೂರು ಲೋಕಗಳ ಒಡೆತನವನ್ನು ನಾವು ಪಡೆದುಕೊಳ್ಳಬೇಕು. ತಮಗೆ ಬ್ರಹ್ಮನು ಇಂದ್ರತ್ವವನ್ನೂ ಅಮರತ್ವವನ್ನೂ ವರವಾಗಿ ಅನುಗ್ರಹಿಸಿದ್ದಾನೆ. ಅದನ್ನು ಸಾರ್ಥಕಪಡಿಸಿಕೊಳ್ಳಲು ಈಗ ಸಕಾಲವಾಗಿದೆ” ಎಂದರು.

ಶುಕ್ರಾಚಾರ್ಯರು ನಿರ್ಧರಿಸಿದ ಶುಭ ಮುಹೂರ್ತದಲ್ಲಿ ಸ್ವರ್ಗಕ್ಕೆ ಮುತ್ತಿಗೆ ಹಾಕಲು ದೈತ್ಯ ಸೇನೆಗಳು ಸಿದ್ಧವಾದವು. ರಣದುಂದುಭಿಗಳ ಧ್ವನಿ ಸ್ವರ್ಗದ ರಾಜಧಾನಿಯಾದ ಅಮರಾವತಿಯನ್ನು ತಲ್ಲಣಗೊಳಿಸಿತು.

ಇಂದ್ರನೂ ಸಹ ದೇವತೆಗಳನ್ನೆಲ್ಲ ಒಟ್ಟುಗೂಡಿಸಿ ಐರಾವತದ ಮೇಲೆ ಕುಳಿತು ಸಾಕಷ್ಟು ಪರಾಕ್ರಮದಿಂದಲೇ ದೈತ್ಯರನ್ನು ಎದುರಿಸಿದನು. ಆದಿತ್ಯರು, ವರುಣ, ಕುಬೇರ, ಯಮ – ಮೊದಲಾದವರೆಲ್ಲರೂ ಒಂದಾಗಿ ಅನೇಕ ದಿನಗಳ ಕಾಲ ಯುದ್ಧ ಮಾಡಿದರು. ಆದರೆ ದೈತ್ಯ ಸೇನೆಯ ಮುಂದೆ ಅವರ ಆಟ ಸಾಗದೆ ಪಲಾಯನ ಮಾಡತೊಡಗಿದರು. ಬಲಿಯ ಶಸ್ತ್ರಾಸ್ತ್ರಗಳಿಂದ ಪೆಟ್ಟು ತಿಂದು ಓಡಿದ ಇಂದ್ರನು ದಿಕ್ಕು ತೋಚದೆ ಗುರುಗಳಾದ ಬೃಹಸ್ಪತ್ಯಾಚಾರ್ಯರನ್ನು ಮೊರೆ ಹೊಕ್ಕನು. ಬೃಹಸ್ಪತ್ಯಾಚಾರ್ಯರು ಇಂದ್ರನನ್ನು ಕುರಿತು, “ದೇವೇಂದ್ರ, ಯುದ್ಧದಿಂದ ಲಾಭವಿಲ್ಲ. ಬಲಿಯನ್ನು ಈಗ ನೀನು ಗೆಲ್ಲಲಾರೆ. ಧರ್ಮ, ಸತ್ಯ, ನ್ಯಾಯ ಪರಿಪಾಲನೆಯಿಂದ ಅವನು ತೇಜಸ್ವಿಯಾಗಿದ್ದಾನೆ. ಆದುದರಿಂದ ಕೆಲವು ಕಾಲ ನೀನು ತಲೆಮರೆಸಿಕೊಳ್ಳುವುದೇ ಲೇಸು” ಎಂದರು. ಸರಿ, ಇಂದ್ರನೂ ಸೇರಿದಂತೆ ದೇವತೆಗಳು ಸ್ವರ್ಗವನ್ನು ಬಿಟ್ಟು ಓಡಿದರು.

ಸ್ವರ್ಗವನ್ನು ಗೆದ್ದು ದೈತ್ಯರು ಶಂಖಧ್ವನಿ ಮಾಡಿದರು. ಶುಭ ಮುಹೂರ್ತದಲ್ಲಿ ಬಲಿ ಚಕ್ರವರ್ತಿಯನ್ನು ಸ್ವರ್ಗ ಸಿಂಹಾಸನದಲ್ಲಿ ಕುಳ್ಳರಿಸಿ ದೈತ್ಯರು ದ್ಯೆತ್ಯೇಂದ್ರನನ್ನಾಗಿ ಅಭಿಷೇಕ ಮಾಡಿದರು. ದಿಕ್ಪಾಲಕರು, ಸೂರ್ಯ, ಚಂದ್ರ, ಮೊದಲಾದ ದೇವತೆಗಳ ಅಧಿಕಾರ ಪದವಿಗಳಲ್ಲಿ ತನ್ನವರನ್ನು ನೇಮಿಸಿ, ಬಲಿ ಚಕ್ರವರ್ತಿಯು ರಾಜಧಾನಿಗೆ ಹಿಂತಿರುಗಿದನು.

ಮಾರನೆಯ ದಿನವೇ ಶುಕ್ರಾಚಾರ್ಯರು ಬಲಿ ಚಕ್ರವರ್ತಿಯನ್ನು ಕುರಿತು, “ದಾನವರಾಜ, ನಿನ್ನ ದಾನ ಪರಾಕ್ರಮಗಳಿಂದ ಸ್ವರ್ಗವೂ ನಿನ್ನದಾಯಿತು. ಪಾತಾಳವಂತೂ ನಿನ್ನ ವಶದಲ್ಲೇ ಇರುವುದರಿಂದ ಮೂರು ಲೋಕಗಳೂ ನಿನ್ನವಾದವು. ಆದರೆ ಸೃಷ್ಟಿಕರ್ತನಾದ ಬ್ರಹ್ಮ ಮತ್ತು ನಿಯಾಮಕನಾದ ವಿಷ್ಣು ವ್ಯವಸ್ಥೆ ಮಾಡಿದ್ದ ಅಧಿಕಾರಗಳನ್ನು ದೇವತೆಗಳಿಂದ ಕಿತ್ತು ದೈತ್ಯರಿಗೆ ಕೊಟ್ಟಿದ್ದೀಯೆ. ಈಗ ದೇವತೆಗಳು ಸುಮ್ಮನಿರಲಾರರು. ಸೇಡು ತೀರಿಸಕೊಳ್ಳುವ ಪ್ರಯತ್ನ ಮಾಡಿಯೇ ಮಾಡುತ್ತರೆ. ಇಂದ್ರ ಪದವಿ ನಿನಗೆ ಶಾಶ್ವತವಾಗಿ ಉಳಿಯಬೇಕಾದರೆ ನೂರು ಅಶ್ವಮೇಧ ಯಜ್ಞಗಳನ್ನು ಮಾಡಬೇಕು. ಇಂದಿನಿಂದ ಅದಕ್ಕೆ ಸಿದ್ಧನಾಗು” ಎಂದು ಸೂಚಿಸಿದರು.

ಯಜ್ಞಗಳಿಗಾಗಿ ನರ್ಮದಾ ನದಿಯ ವಿಸ್ತಾರವಾದ ತಪೋವನದ ಬಯಲಿನಲ್ಲಿ ಯಜ್ಞಶಾಲೆಯ ನಿರ್ಮಾಣವಾಯಿತು. ರಾಣಿ ವಿಂಧ್ಯಾವಳಿಯೊಡನೆ ಬಲಿ ಚಕ್ರವರ್ತಿಯು ದೀಕ್ಷೆಯನ್ನು ಕೈಗೊಂಡನು.

ದೇವತೆಗಳ ಮೊರೆ

ರಾಜ್ಯವನ್ನು ಕಳೆದುಕೊಂಡ ಇಂದ್ರನು ದೇವತೆಗಳೊಡನೆ ಮೇರು ಪರ್ವತದ ತಪ್ಪಲಿನಲ್ಲಿರುವ ಅದಿತಿ ದೇವಿಯ ಆಶ್ರಮಕ್ಕೆ ಬಂದನು. ಆಕೆಯು ದೇವಮಾತೆ , ಇಂದ್ರನ ತಾಯಿ. ಎಷ್ಟಾದರೂ ತಾಯಿಗೆ ಮಕ್ಕಳ ಮೇಲೆ ಕರುಣೆಯಲ್ಲವೆ? ಅಂತೆಯೇ ತಂದೆ ಯಾದ ಕಶ್ಯಪನೂ ಮರುಗಿದನು. ಅವರೆಲ್ಲರೂ ಗುಂಪಾಗಿ ಬ್ರಹ್ಮ ನಲ್ಲಿಗೆ ಬಂದರು.

ಬ್ರಹ್ಮನು “ದೇವತೆಗಳೇ, ನೀವೆಲ್ಲರೂ ವಿಷ್ಣುವನ್ನು ಕುರಿತು ತಪಸ್ಸು ಮಾಡಿರಿ. ಋಷಿದಂಪತಿಗಳಾದ ಈ ಕಶ್ಯಪ-ಅದಿತಿಯರು ತಮ್ಮ ತಪಸ್ಸಿನಿಂದ ವಿಷ್ಣುವನ್ನು ಮೆಚ್ಚಿಸಿ ಆತನನ್ನು ಪುತ್ರನನ್ನಾಗಿ ಪಡೆಯಲಿ. ಆತನೊಬ್ಬನೇ ಬಲಿಯನ್ನು ನಿಗ್ರಹಿಸಿ ನಿಮ್ಮನ್ನು ಅನುಗ್ರಹಿಸಬಲ್ಲನು” ಎಂದನು. ದೇವತೆಗಳೂ ಅದಿತಿ-ಕಶ್ಯಪರೂ ತಪಸ್ಸು ಮಾಡಲು ತೆರಳಿದರು 

ವಾಮನನು ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟನು.

 ಅದಿತಿದೇವಿಯ ತಪಸ್ಸು ಸಾಮಾನ್ಯವಲ್ಲ. ಶ್ರೀಮನ್ನಾರಾಯಣನು ಆಕೆಯ ಮುಂದೆ ಕಾಣಿಸಿಕೊಂಡು ಕೇಳಿದನು: “ದೇವಮಾತೆ, ನಿನ್ನ ಕೋರಿಕೆಯನ್ನು ಈಡೇರಿಸುತ್ತೇನೆ. ನಿನಗೇನು ಬೇಕೋ ಕೇಳು”.

“ದೇವದೇವನೇ, ನಿನಗೆ ತಿಳಿಯದ ವಿಷಯವೇನೂ ಇಲ್ಲ. ದೈತ್ಯರು ಬಲಿಯ ಸಹಾಯದಿಂದ ನನ್ನ ಪುತ್ರನಾದ ಇಂದ್ರನ ರಾಜ್ಯವನ್ನು ಆಕ್ರಮಿಸಿದರು. ನನ್ನ ಸಂತಾನವೆನಿಸಿದ ದೇವತೆಗಳ ಅಧಿಕಾರವನ್ನು ಕಸಿದುಕೊಂಡರು. ಆದರೆ ನನ್ನ ಪುತ್ರನಿಗೆ ಇಂದ್ರ ಪದವಿಯನ್ನು ಕೊಟ್ಟವನು ನೀನೇ ಅಲ್ಲವೆ? ನನ್ನ ಪುತ್ರರಿಗೆ ಸ್ವರ್ಗಾಧಿಪತ್ಯ ಹೋಯಿತೆಂಬುದಕ್ಕಿಂತಲೂ ದೈತ್ಯರು ನಿನ್ನ ಶಾಸನವನ್ನೇ ಮೀರಿ ದರ್ಪದಿಂದ ವರ್ತಿಸುವುದನ್ನು ನೋಡಿಯೂ ನೀನು ಸುಮ್ಮನಿರುವುದು ನನಗೆ ದುಃಖವೆನಿಸಿದೆ. ನೀನು ಇಂದ್ರನ ತಮ್ಮನಾಗಿ ನನ್ನ ಗರ್ಭದಲ್ಲಿ ಜನಿಸಿ ಬಲಿಯನ್ನು ನಿಗ್ರಹಿಸಬೇಕು. ದುರ್ಬಲರಾಗಿರುವ ದೇವತೆಗಳಿಗೆ ಸಹಾಯಕನಾಗಿ ಲೋಕಗಳ ಒಡೆತನ ಕೊಡಸಬೇಕು!”

ಅವಳ ಪ್ರಾರ್ಥನೆಯನ್ನು ಕೇಳಿದ ನಾರಾಯಣ ನು, “ನಿನ್ನ ಬೇಡಿಕೆಯೇನೋ ಸರಿ. ಆದರೆ ಬಲಿಚಕ್ರವರ್ತಿಯು ಧರ್ಮಾತ್ಮ, ಸತ್ಯಸಂಧ. ಹಿಂದಿನ ದುರಾತ್ಮರಾದ ದೈತ್ಯರನ್ನು ನಿಗ್ರಹಿಸುವಾಗ ನಾವು ಯುದ್ಧ ಮತ್ತು ಹಿಂಸೆಯ ಮಾರ್ಗವನ್ನು ಅನುಸರಿಸಿದೆವು. ಬಲಿಯ ವಿಷಯದಲ್ಲಿ ಇದು ಸಾಧ್ಯವಿಲ್ಲ. ಆದ್ದರಿಂದ ಬೇರೊಂದು ಉಪಾಯದ ಮಾರ್ಗವನ್ನು ಅನುಸರಿಸಬೇಕಾಗಿದೆ. ನಾನು ಅದಿತಿಯ ಗರ್ಭದಲ್ಲಿ ವಾಮನಮೂರ್ತಿಯಾಗಿ ಅವತರಿಸುತ್ತೇನೆ!” ಎಂದು ಸಂತೈಸಿದನು.

ನಾರಾಯಣನ ವರದಾನದಿಂದ ತೃಪ್ತರಾದ ದೇವತೆಗಳು ಕಾಲವನ್ನು ನಿರೀಕ್ಷಿಸುತ್ತ ಸಪೋನಿರತರಾಗಿದ್ದರು.

ಬಲಿಗೆ ಪ್ರಹ್ಲಾದನ ಶಾಪ

ಬಲಿ ಚಕ್ರವರ್ತಿಯು ಅಶ್ವಮೇಧ ಯಜ್ಞಗಳನ್ನು ಪ್ರಾರಂಭಿಸಿ ಹಲವು ವರ್ಷಗಳೇ ಉರುಳಿದ್ದುವು. ಒಂದರ ಹಿಂದೊಂದು ತೊಂಬತ್ತೊಂಬತ್ತು ಯಜ್ಞಗಳು ಸಮಾಪ್ತವಾದುವು. ನೂರನೇ ಯಜ್ಞಕ್ಕಾಗಿ ವೈಭವದ ಸಿದ್ಧತೆಗಳಾಗತೊಡಗಿದುವು. ಈ ಯಜ್ಞ ಮುಗಿದರೆ ಆತನು ಶಾಶ್ವತವಾಗಿ ಇಂದ್ರನಾಗುವನು.

ಅದುವರೆಗೆ ಕಟ್ಟುನಿಟ್ಟಾಗಿ ಧರ್ಮದ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದ ದೈತ್ಯರಿಗೆ ಸ್ವಲ್ಪ ದರ್ಪ ಬಂದಿತು. ದೇವತೆಗಳನ್ನು ಆರಾಧಿಸುತ್ತಿದ್ದ ಅನೇಕರನ್ನು ಹೆದರಿಸಿ ಬೆದರಿಸಿದರು. ‘ನಮ್ಮ ಬಲಿರಾಜನೇ ಇಂದ್ರ, ಮೂರೂ ಲೋಕಗಳಿಗೂ ದೈತ್ಯರೇ ಒಡೆಯರು, ದೇವತೆಗಳನ್ನು ಯಾರೂ ಪೂಜಿಸಕೂಡದು’ ಎಂದು ಅವರು ಸಾರತೊಡಗಿದರು.

ಇದ್ದಕ್ಕಿದ್ದಂತೆಯೇ ಭೂಲೋಕದಲ್ಲಿ ಕೆಲವು ಆತಂಕಗಳಾದುವು.  ಕೆಲವೆಡೆ ಭೂಕಂಪಗಳಾದುವು, ನದೀ ಪ್ರವಾಹಗಳು ಊರುಗಳ ಮೇಲೆ ಹರಿದವು, ಇನ್ನು ಕೆಲವೆಡೆ ಬೆಂಕಿಯ ಅನಾಹುತಗಳಾದುವು. ಯಜ್ಞ ದೀಕ್ಷೆಯಲ್ಲಿದ್ದ ಬಲಿರಾಜನಿಗೆ ಏನೊಂದೂ ಅರ್ಥವಾಗದೆ ಪ್ರಹ್ಲಾದನಲ್ಲಿಗೆ ಬಂದು, “ಅಜ್ಜ, ಈ ಉತ್ಪಾತಗಳಿಗೆ ಏನು ಕಾರಣ? ಇದೇನು ದೇವತೆಗಳ ಮಾಯೆಯೋ ಹೇಗೆ?” ಎಂದನು.

ಪ್ರಹ್ಲಾದನು ವಿಷ್ಣುಭಕ್ತ, ದಿವ್ಯಜ್ಞಾನಿ. ಆತನು ಧ್ಯಾನ ಸಮಾಧಿಯಿಂದ ಎಲ್ಲವನ್ನು ಅರಿತು ಹೇಳಿದನು. “ದರ್ಪದಿಂದಿರುವ ದೈತ್ಯರನ್ನು ನಿಗ್ರಹಿಸಲು ವಿಷ್ಣು ಅವತರಿಸಿದ್ದಾನೆ. ಮುಂದೆ ಆಗುವ ಅನರ್ಥಕ್ಕೆ ಗುರುತಾಗಿ ಈ ತೊಂದರೆಗಳು ಸಂಭವಿಸಿವೆ!”

ಬಲಿಗೆ ಆ ಮಾತನ್ನು ಕೇಳಿ ರೋಷ ಬಂದಿತು. ಕಣ್ಣುಗಳನ್ನು ಕೆಂಡದಂತೆ ಮಾಡಿಕೊಂಡನು, “ಅಜ್ಜ, ದೇವತೆಗಳಿಗೆ ನಾವು ಹೆದರಬೇಕೆ? ನಮ್ಮ ಒಬ್ಬೊಬ್ಬ ದೈತ್ಯವೀರನೂ ಭೂಮಂಡಲವನ್ನೇ ಹೊತ್ತು ತರಬಲ್ಲನು. ಹೀಗಿರುವಾಗ ಒಬ್ಬ ವಿಷ್ಣು ನಮ್ಮನ್ನು ಏನು ಮಾಡಬಲ್ಲನು?” ಎಂದನು.

“ಛಿ, ಅವಿವೇಕಿ, ಸರ್ವನಿಯಾಮಕನಾದ ಶ್ರೀಹರಿಯನ್ನು ನಿಂದಿಸುವಷ್ಟು ನಾಲಿಗೆ ಬಂದಿತೇ ನಿನಗೆ? ನಾನು ಹರಿಭಕ್ತನೆಂಬುದನ್ನು ತಿಳಿದಿದ್ದು ಹೀಗೆ ಮಾತಾಡನಾಡಿದ್ದೀಯೆ. ಶೀಘ್ರದಲ್ಲೇ ನೀನು ರಾಜ್ಯ ಭ್ರಷ್ಟನಾಗುವೆ!”

ಬಲಿ ಮಹಾರಾಜನಿಗೆ ತನ್ನ ತಪ್ಪಿನ ಅರಿವಾಯಿತು. ನಿಜವಾಗಿ ಬಲಿಯು ಹರಿದೂಷಕನಲ್ಲ. ತನ್ನ ಪರಾಕ್ರಮದ ಹೆಮ್ಮೆಯಲ್ಲಿ ಮೈಮರೆತು ಆತನ ಬಾಯಿಂದ ಮಾತುಗಳು ಹೊರಬಿದ್ದಿದ್ದುವು. ಪಾಶ್ಚಾತ್ತಾಪದಿಂದ ಆತನ ಕಣ್ಣುಗಳು ಹನಿಗೂಡಿ ಕೊರಳು ಕಟ್ಟಿತು. ಪ್ರಹ್ಲಾದನ ಪಾದಗಳಲ್ಲಿ ಬಿದ್ದು ಕ್ಷಮೆ ಬೇಡುತ್ತ.  “ಅಜ್ಜ,  ಪ್ರಸನ್ನನಾಗು. ಕೊಬ್ಬಿನಿಂದ ಮಾತನಾಡಿದ ನನಗೆ ಸರಿಯಾದ ಶಾಪವನ್ನೇ ಕೊಟ್ಟಿರಿ. ರಾಜ್ಯ ಹೋಗುವುದೆಂಬ ದುಃಖ ನನಗಿಲ್ಲ. ಅದನ್ನು ಹೇಗಾದರೂ ಮತ್ತೆ ಪಡೆದೇನು. ಆದರೆ ನಿಮ್ಮಂಥ ಗುರು ನನಗೆ ಎಲ್ಲಿ ಸಿಕ್ಕಬೇಕು? ನಿಮ್ಮನ್ನು ನೋಯಿಸಿದೆನೆಂಬ ದುಃಖ ನನಗೆ ಹೆಚ್ಚಾಗಿದೆ” ಎಂದನು.

ಪ್ರಹ್ಲಾದನಿಗೂ ಕನಿಕರವಾಯಿತು. ಮೊಮ್ಮಗನನ್ನು ಹಿಡಿದೆತ್ತಿ, “ಮಗೂ, ಸಿಟ್ಟಿನಲ್ಲಿ ಏನೋ ಆಡಿಬಿಟ್ಟೆನಪ್ಪ”. ಹಣೆಬರಹವನ್ನು ತಪ್ಪಿಸಬಲ್ಲವರಾರು? ವಿಷಾದಿಸಬೇಡ. ಶ್ರೀಹರಿಯಲ್ಲೆ ಮನಸ್ಸಿಟ್ಟು ಯಜ್ಞವನ್ನು ಪೂರೈಸು. ನಿನ್ನ ಕೀರ್ತಿ ಚಿರಾಯುವಾಗಲಿ” ಎಂದು ಹರಸಿದನು.

ಪುಟ್ಟ ವಟು ವಾಮನ

ಬಲಿಚಕ್ರವರ್ತಿಯ ವಿಶಾಲವಾದ ಯಜ್ಞ ಮಂಟಪದಲ್ಲಿ ವೇದಘೋಷಗಳು, ಮಂಗಳವಾದ್ಯಗಳು ಮೊಳಗುತ್ತಿದ್ದವು. ಶುಕ್ರಾಚಾರ್ಯರು ಮುಂದೆ ನಿಂತು ಈ ನೂರನೇ ಅಶ್ವಮೇಧ ಯಜ್ಞದ ಹೊಣೆ ವಹಿಸಿದ್ದರು. ಮೂರುಲೋಕಗಳಿಂದ ಋಷಿ ಮುನಿಗಳೇ ಅಲ್ಲದೆ ಸಿದ್ಧ ಗಂಧರ್ವ ಯಕ್ಷರಾದಿಯಾಗಿ ಬಂದ ಪ್ರಜೆಗಳು ಕಿಕ್ಕಿರಿದಿದ್ದರು. ಒಂದೆಡೆ ರಾಶಿರಾಶಿಯಾಗಿ ಸುರಿದ ಮುತ್ತು ರತ್ನಗಳನ್ನೂ ಗೋವುಗಳನ್ನೂ ಒಡವೆ ವಸ್ತ್ರಗಳನ್ನೂ ದಾನ ಮಾಡಲಾಗುತ್ತಿತ್ತು. ದಿವ್ಯಪೀತಾಂಬರವನ್ನುಟ್ಟ ಬಲಿಚಕ್ರವರ್ತಿಯು ತನ್ನ ಧರ್ಮಪತ್ನಿಯಾದ ವಿಂಧ್ಯಾವಳಿಯೊಡನೆ ಅಗ್ನಿಹೋತ್ರದ ಮುಂದೆ ಕುಳಿತು ಹೋಮ ಮಾಡುತ್ತಿದ್ದನು.

ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಸಮೀಪಿಸಿ ಮೆಲ್ಲನೆ ಇಂತೆಂದರು: “ಬಲಿರಾಜ, ಇದು ಯಜ್ಞ ಪೂರ್ತಿಯಾಗುವ ಸಮಯ. ಈಗ ನೀನು ಎಚ್ಚರದಿಂದಿರಬೇಕು. ಏಕೆಂದರೆ ದೇವತೆಗಳ ಮೋಸವನ್ನು ಯಾರು ಬಲ್ಲರು? ಕೊನೆಗೆ ಅವರು ಆ ವಿಷ್ಣುವನ್ನೇ ಯಜ್ಞಭೂಮಿಗೆ ಕಳುಹಿಸಬಹುದು!”

“ಹೌದೇ ಆಚಾರ್ಯ? ಒಂದು ವೇಳೆ ಆತನೇ ಬಂದರೆ ನಾನು ಹೇಗೆ ನಡೆದುಕೊಳ್ಳಬೇಕೋ ತಿಳಿಸಿರಿ”.

“ನನ್ನ ಸಲಹೆ ಇಷ್ಟು. ವಿಷ್ಣು ನಿನ್ನಲ್ಲಿ ಬಂದು ಏನನ್ನಾದರೂ ದಾನ ಬೇಡಿದರೆ ಉಪಾಯವಾಗಿ ನಿರಾಕರಿಸು.  ದೇವ, ಸರ್ವಸಮರ್ಥನಾದ ನಿನಗೆ ದಾನ ಕೊಡುವಷ್ಟು ಸಾಮರ್ಥ್ಯ ನನಗಿಲ್ಲ ಎಂದು ಹೇಳಿ ಕಳುಹಿಸಿಬಿಡು!”.

“ಆಚಾರ್ಯ”, ಇದೆಂತಹ ಮಾತು! ನಿಮಗೆ ತಿಳಿದಂತೆ ದಾನವೆ ನನ್ನ ವ್ರತ. ದಾನದ ಪುಣ್ಯದಿಂದಲೇ ನನ್ನ ರಾಜ್ಯದಲ್ಲಿ ದುಃಖ, ಬಡತನ , ರೋಗಗಳಿಲ್ಲದೆ ಸುಖವಾಗಿದ್ದಾರೆ. ಹಿಂಧೆ ದಧೀಚಿ, ಶಿಬಿಗಳಂತಹ ಮಹಾತ್ಮರು ದಾನವಾಗಿ ತಮ್ಮ ದೇಹಗಳನ್ನೇ ಕೊಡಲಿಲ್ಲವೆ? ಬೇಡಿದವರಿಗೆ ಪ್ರಾಣವನ್ನಾದರೂ ಕೊಡಬಲ್ಲ ನಾನು ಈಗ ಯಾರಿಗೂ ‘ಇಲ್ಲ’ ಎಂದು ಹೇಳಲಾರೆ. ನಮ್ಮಲ್ಲಿರುವ ಯಾವುದೇ ಪ್ರಿಯವಸ್ತುವನ್ನು ನಾವೇ ಅನುಭವಿಸುವುದಕ್ಕಿಂತಲೂ ಇತರರಿಗೆ  ದಾನಮಾಡುವುದರಲ್ಲೇ ಆನಂದವಲ್ಲವೇ? ದಾ ನ ಮಾಡುವ ಕಾಲದಲ್ಲಿ ನೀವು ವಿಘ್ನವನ್ನು ಒಡ್ಡಕೊಡದೆಂದು ಕೋರುತ್ತೇನೆ!”

ಹೀಗೆ ಅವರಿಬ್ಬರೂ ಮಾತನಾಡುತ್ತಿರುವಾಗಲೇ ಯಜ್ಞ ಶಾಲೆಯಲ್ಲಿ ಗುಜುಗುಜು ಗದ್ದಲವಾಯಿತು. ‘ದಾರಿ, ದಾರಿ ಬಿಡಿ’ ಎನ್ನುತ್ತ ಎಲ್ಲರೂ ಪಕ್ಕಕ್ಕೆ ಸರಿಯುತ್ತಿದ್ದರು. ಬಲಿರಾಜನೂ ವಿಂಧ್ಯಾವಳಿಯೂ ಸಂಭ್ರಮದಿಂದ ಎದ್ದು ನಿಂತು ಪ್ರವೇಶದ್ವಾರದ ಕಡೆಗೆ ನೋಡಿದರು. ಎಂಟುವರ್ಷ ವಯಸ್ಸಿನ ಪಟ್ಟು ವಟು , ಬ್ರಹ್ಮಚಾರಿ ನಡೆದು ಬರುತ್ತಿದ್ದಾನೆ! ಹೊಳೆಹೊಳೆಯುವ ಮುಖದಲ್ಲಿ ನಗೆ , ಜಡೆಯುಳ್ಳ ಶಿರದ ಮೇಲೆ ಕೊಡೆ, ನಾರು ಬಟ್ಟೆ ಉಟ್ಟಿರುವ ಆತನ ಬರಿಮೈ ಮೇಲೆ ಯಜ್ಞೋಪವೀತ, ಕೈಗಳಲ್ಲಿ ದಂಡ ಮತ್ತು ಕಮಂಡಲು, ಬಗಲಲ್ಲಿ ಕೃಷ್ಣಾಜಿನ, ನೊಸಲಲ್ಲಿ ಚಂದನತಿಲಕ! ವಿದ್ಯೆಗಳ ರಾಶಿಯೇ ಬಾಲಕನ ರೂಪ ತಳೆದಂತೆ ನಡೆಯುತ್ತಿರುವ ಆತನು ನೇರವಾಗಿ ಬಲಿಯ ಕಡೆಗೆ ಬರುತ್ತಿದ್ದಾನೆ.  ಎಲ್ಲರೂ ನಿಶ್ಯಬ್ದವಾಗಿ ನೋಡುತ್ತಿದ್ದಾರೆ. “ಬಲಿ ಮಹಾರಾಜನೇ, ಸ್ವಸ್ತಿ. ನಿನಗೆ ಶುಭವಾಗಲಿ!” ಎಂದನು ಬಾಲವಟು.

ಬಲಿಚಕ್ರವರ್ತಿ, ವಿಂಧ್ಯಾವಳಿ ಮತ್ತು ಪುತ್ರನದ ಬಾಣ ಹಾಗೂ ಅಲ್ಲಿದ್ದವರು ಬೆರಗಾಗಿ ಸ್ವಲ್ಪ ಹೊತ್ತು ಆತನನ್ನೇ ನೋಡುತ್ತಿದ್ದರು. ಬಾಲವಟು ತನ್ನ ಮಾತುಗಳನ್ನು ಮುಂದುವರಿಸಿದನು. “ದೈತ್ಯಪತಿಯೇ, ಇದು ಅದ್ಭುತವಾದ ಯಜ್ಞ. ಮುಗಿಲಿಗೇರುವ ಜ್ವಾಲೆಗಳುಳ್ಳ ಈ ಅಗ್ನಿಕುಂಡ, ಭಕ್ಷ್ಯಭೋಜ್ಯಗಳ ಔತಣಗಳು, ರಾಶಿ ರಾಶಿಯಾಗಿ ಮಾಡುತ್ತಿರುವ ಮುತ್ತು ರತ್ನಗಳ ದಾನ , ನಿನ್ನ ಮೇಲಿನ ಅಭಿಮಾನದಿಂದ ಇಲ್ಲಿ ನೆರೆದಿರುವ ಲಕ್ಷಾಂತರ ಪ್ರಜೆಗಳು,  ಮೊಳಗುತ್ತಿರುವ ವೇದ ಘೋಷ-ಇವುಗಳಿಂದ ನೀನು ಎಂತಹ ಧರ್ಮಾತ್ಮನೆಂಬುದು ವೇದ್ಯವಾಗಿದೆ. ಇಂತಹ ಶ್ರೇಷ್ಠವಾದ ಯಜ್ಞಕ್ಕೆ ತಕ್ಕಂತೆ ಶ್ರೇಷ್ಠವಾದ ದಾನವನ್ನೂ ನೀನು ಕೊಡಬೇಕು!”

ಬಲಿಚಕ್ರವರ್ತಿಗೆ ಹೆಮ್ಮೆಯೆನಿಸಿತು. ಪತ್ನಿಯ ಕಡೆ ತಿರುಗಿ, “ವಿಂಧ್ಯಾವಳಿ, ಈ ಪುಟ್ಟ ವಟುವಿನ ಮುದ್ದು ಮಾತುಗಳು ಎಷ್ಟು ಸಾರವತ್ತಾಗಿವೆ! ವಿದ್ಯಾರತ್ನದಂತಿರುವ ಈ ಮಹಾತ್ಮನ ದರ್ಶನದಿಂದ ನಮ್ಮ ಕಣ್ಣುಗಳು ಪುನೀತವಾದುವು. ಬಂಗಾರದ ಕಲಶದಲ್ಲಿ ನೀರು ತಾ, ಈತನ ಪಾದಗಳನ್ನು ತೊಳೆದು ಧನ್ಯರಾಗೋಣ!” ಎಂದನು.

ವಿಂಧ್ಯಾವಳಿಯೊಡನೆ ಬಲಿರಾಜನು ಬಾಲವಟುವಿನ ಪಾದಗಳನ್ನು ತೊಳೆದು, ಗಂಧ ಪುಷ್ಪಗಳಿಂದ ಪೂಜಿಸಿ ನಮಸ್ಕರಿಸಿದನು. ಆತನನ್ನು ಶ್ರೇಷ್ಠವಾದ ಆಸನದಲ್ಲಿ ಕುಳ್ಳಿರಿಸಿ ಮಾತನಾಡಿಸಿದನು. “ಮಹಾತ್ಮನೇ, ಮೂರ್ತಿ ಚಿಕ್ಕದಾಗಿದ್ದರೂ ವಿದ್ಯೆಯ ತೇಜಸ್ಸಿನಿಂದ ಜ್ಞಾನ ಶ್ರೇಷ್ಠನಾಗಿರುವ ನೀನು ಯಾರು? ನಿನ್ನ ರೂಪ ಕಣ್ಣಿಗೆ ಹಬ್ಬವಾಗಿದೆ, ನಿನ್ನ ಮಾತು ಕಿವಿಗೆ ಮಧುರವಾಗಿದೆ. ನಿನಗಾಗಿ ಏನು ಮಾಡಲಿ? ಏನು ಕೊಡಲಿ? ಏನು ಬೇಕಾದರೂ ಅಥವಾ ಎಲ್ಲವನ್ನೂ ಬೇಕಾದರೆ ಬೇಡಿಕೋ, ಕೊಡುತ್ತೇನೆ” ಎಂದನು.

“ದಾನವೇಂದ್ರ, ಮೂರು ಲೋಕದ ಅಧಿಪತಿಯಾಗಿರುವ ನೀನು ಕೊಡುವವನೆಂದು ತಿಳಿದೇ ಬೇಡಲು ಬಂದಿದ್ದೇನೆ. ನಾನು ಕಶ್ಯಪ ಮುನಿಯ ಪುತ್ರ, ನನ್ನ ಹೆಸರು ವಾಮನಮೂರ್ತಿ. ಬ್ರಹ್ಮಚಾರಿಯಾದ ನನಗೆ ರಾಜ್ಯರತ್ನ ಧನಗಳ ಅಗತ್ಯವಿಲ್ಲ. ಇದೀಗ ಉಪನಯನವಾಗಿ ಬ್ರಹ್ಮೋಪದೇಶ ಪಡೆದು ಬಂದಿರುವ ನಾನು ಗುರುದಕ್ಷಿಣೆ ಸಲ್ಲಿಸಬೇಕಾಗಿದೆ. ನನ್ನ ಗುರು ಭರದ್ವಾಜನ ಅಗ್ನಿ ಹೋತ್ರಕ್ಕಾಗಿ ಭೂಮಿ ಬೇಕಾಗಿದೆ. ಆದ್ದರಿಂದ ನೀನು ನನ್ನ ಶರೀರಕ್ಕೆ ಅನುಗುಣವಾಗಿ ನನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ಕೊಡು, ಅಷ್ಟು ಸಾಕು!”

ಹರಿಯ ಕೈಯ ಮೇಲೆ ಬಲಿಯ ಕೈ

ವಾಮನಮೂರ್ತಿಯ ಬೇಡಿಕೆಯನ್ನು ಕೇಳಿ ಬಲಿ ನಕ್ಕುಬಿಟ್ಟನು.  ವಾಮನಮೂರ್ತಿಯೊಡನೆ ಇಂತೆಂದನು “ಶ್ರೇಷ್ಠನೆ, ನನ್ನಲ್ಲಿ ಒಮ್ಮೆ ಬೇಡಿದವರು ಮತ್ತೊಮ್ಮೆ ಯಾರಲ್ಲೂ ಬೇಡುವ ಅಗತ್ಯವೇ ಇರಬಾರದು. ನನ್ನ ಒಡೆತನದಲ್ಲಿರುವ ಭೂ-ಸ್ವರ್ಗ ಪಾತಾಳಗಳಲ್ಲಿ ಒಂದು ಲೋಕವನ್ನೇ ಬೇಕಾದರೂ ಕೊಡಲು ಸಿದ್ಧನಿದ್ದೇನೆ. ನೀನು ಬೇಡುತ್ತಿರುವ ಚಿಕ್ಕಭೂಮಿಯನ್ನು ದಾನಮಾಡಲು ನನಗೇ ಲಜ್ಜೆಯಾಗುತ್ತಿದೆ. ಇದಿಷ್ಟರಿಂದ ನಿನಗೇನು ಪ್ರಯೋಜನ? ಹೋಗಲಿ, ಹೆಚ್ಚು ಭೂಮಿಯನ್ನಾದರೂ ಬೇಡಿಕೋ.

“ರಾಜನೇ, ಇಷ್ಟರಿಂದಲೇ ನನಗೆ ಕಾರ್ಯಸಿದ್ಧಿಯಾಗುತ್ತದೆ. ಆದುದರಿಂದ ನಾನು ಕೇಳಿದಂತೆ ಮೂರು ಹೆಜ್ಜೆಗಳ ಭೂಮಿಯನ್ನು ಧಾರೆಯೆರೆದು ದಾನ ಮಾಡು!”

“ಸರಿ, ನಿಮ್ಮಿಷ್ಟದಂತೆಯೇ ಆಗಲಿ. ಚಿನ್ನದ ಹರಿವಾಣವನ್ನು ತರುತ್ತೇನೆ” ಎಂದು ಹೇಳಿ ಬಲಿ ಚಕ್ರವರ್ತಿ ಕುಟೀರದೊಳಕ್ಕೆ ಹೋದನು. ಕೂಡಲೆ ಶುಕ್ರಾಚಾರ್ಯರು ಹಿಂಬಾಲಿಸಿ ಬಂದು ಬಲಿಯೊಡನೆ ನುಡಿದರು, “ಬಲಿರಾಜ, ಇದೇನು ನಿನ್ನ ಅವಿವೇಕ? ಯಾರ ಸಲಹೆಯನ್ನೂ ಕೇಳದೆ ದಾನ ಕೊಡುವುದಾಗಿ ತುಟಿಮೀರಿ ಮಾತುಕೊಟ್ಟೆಯಲ್ಲ! ಈ ಕಪಟವೇಷದ ವಾಮನನು ಯಾರೆಂದು ತಿಳಿದೆ? ಅವನು ದೇವತೆಗಳ ಪಕ್ಷಪಾತಿಯಾಗಿ; ನಿನ್ನ ಶತ್ರುವಿನಂತೆ ಬಂದಿರುವ ವಿಷ್ಣು!”

“ಹೌದೇ ಗುರುದೇವ? ಯಾವ ದೇವದೇವನಾದ ಪರಮಾತ್ಮನನ್ನು ಒಲಿಸಲು ಜ್ಞಾನಿಗಳು ಹಗಲಿರುಳು ತಪಸ್ಸು ಮಾಡುವರೋ ಆ ನಾರಾಯಣನು ನನ್ನಲ್ಲಿ ದಾನ ಬೇಡಲು ತಾನಾಗಿ ಬಂದನೇ? ದಾನ ಬೇಡಲು ಹೀಗೆ ಕುಗ್ಗಿ ವಾಮನನಾದನೇ? ಮನೆಗೆ ಬಂದ ಭಗವಂತನಿಗೆ ದಾನ ಮಾಡುವ ಭಾಗ್ಯ ನನಗೆ ಲಭಿಸಿದೆ. ಇದು ಯಾವುದೋ ಪೂರ್ವಜನ್ಮದ ಪುಣ್ಯಫಲ!”

“ಬಲಿಯೆ, ಇದು ಮೂರ್ಖತನದ ಹೆಮ್ಮೆ. ಈಗಾಲಾದರೂ ಬುದ್ಧಿಯಿಂದ ನನ್ನ ಮಾತಿನಂತೆ ನಡೆದುಕೋ. ಆತ್ಮ ರಕ್ಷಣೇಗಾಗಿ ಕೊಟ್ಟ ಮಾತಿಗೆ ತಪ್ಪಿದರೂ ಪಾಪವಿಲ್ಲ. ಆದ್ದರಿಂದ ದಾನ ಕೊಡಬೇಡ. ಇದರಿಂದ ದೈತ್ಯರ ಮತ್ತು ನಿನ್ನ ವಿನಾಶ ನಿಶ್ಚಿತ. ದಾನ ಪಡೆದೊಡನೆ ಈ ಶ್ರೀಹರಿ ಹಿಂದೆ ಹಿರಣ್ಯಕಶಿಪುವನ್ನು ನಿಗ್ರಹಿಸಿದಂತೆ ನಿನ್ನನ್ನೂ ತುಳಿಯದೆ ಬಿಡುವುದಿಲ್ಲ.”

“ಗುರುದೇವ, ವಿಪತ್ತುಗಳಿಗೆ ಹಿಂಜರಿಯದೆ ಮಾಡುವ ದಾನವೇ ಶ್ರೇಷ್ಠ. ಶ್ರೀಹರಿ ಕೈಚಾಚಿ ಕೇಳಿದರೆ ನನ್ನ ತಲೆಯನ್ನೇ ಬೇಕಾದರೂ ಕತ್ತರಿಸಿ ಕೊಡಬಲ್ಲೆ. ಬೇಡುವ ಭಗವಂತನ ಕೈ ಕೆಳಗಾಗಿ, ನೀಡುವ ನಿನ್ನ ಕೈ ಮೇಲಾಗುವುದಕ್ಕಿಂತ ಹೆಚ್ಚಿನ ಕೀರ್ತಿಯುಂಟೆ? ದಯವಿಟ್ಟು ನನ್ನನ್ನು ತಡೆಯಬೇಡಿ.”

ಬಲಿಚಕ್ರವರ್ತಿ ಚಿನ್ನದ ಹರಿವಾಣದೊಡನೆ ನೇರವಾಗಿ ಬಂದೇಬಿಟ್ಟನು. ವಾಮನಮೂರ್ತಿಯನ್ನು ಕುರಿತು ದಾನ ವೀರನಾದ ಬಲಿ, “ದೇವದೇವ, ಇದೋ ಕೊಟ್ಟೆ, ಕೈ ಚಾಚು” ಎಂದನು. ವಾಮನನು ಕೆಳಕ್ಕೆ ಕೈ ಚಾಚಿದನು. ಬಲಿಯು ಆತನ ಕೈಯ ಮೇಲೆ ತುಲಸೀದಳದೊಡನೆ ತನ್ನ ಕೈ ನೀಡಿದನು. ರಾಣಿ ವಿಂಧ್ಯಾವಳಿಯು ಬಂಗಾರದ ಕಮಂಡಲುವಿನಿಂದ ದಾನೋದಕವನ್ನು ಹರಿಸಿದಳು. ಪುರೋಹಿತವರ್ಗದವರು ದಾನಮಂತ್ರ ಪಠಿಸಿದರು.

ಒಮ್ಮೆಲೇ ದಿಕ್ಕುಗಳು ಪ್ರತಿಧ್ವನಿಸುವಂತೆ ಸ್ವರ್ಗದ ದುಂದುಭಿಗಳು ಮೊಳಗಿದವು, ಅಂತರಿಕ್ಷದಿಂದ ಬಲಿ-ವಾಮನರ ಮೇಲೆ ಹೂಮಳೆ ಸುರಿಯಿತು.

ವಾಮನನು ತ್ರಿವಿಕ್ರಮನಾದನು

ವಾಮನಮೂರ್ತಿ ಈಗ ಚಿಕ್ಕ ಶರೀರದವನಾಗಿರಲಿಲ್ಲ. ಎಲ್ಲರೂ ನೋಡುತ್ತಿರುವಂತೆಯೇ ಆತನ ಶರೀರ ಇಷ್ಟರಿಂದ ಅಷ್ಟ ಆಗಿ, ಮತ್ತಷ್ಟಾಗಿ, ಇನ್ನಷ್ಟಾಗಿ ಬೆಳೆಯುತ್ತಲೇ ಹೋಯಿತು. ತನ್ನ ಪಾದದ ಮೊದಲ ಹೆಜ್ಜೆಯಿಂದ ಭೂಮಿಪಾತಾಳಲ ಓಕಗಳನ್ನು ಅಳದುಕೊಂಡನು. ಸ್ವರ್ಗವೇ ಮೊದಲಾದ ಮೇಲಿನ ಲೋಕಗಳನ್ನು ತನಗೆ ಬರಬೇಕಾದ ಎರಡನೇ ಹೆಜ್ಜೆಯ ಭೂಮಿಯನ್ನಾಗಿ ಅಳೆದುಕೊಂಡನು.

“ಬಲಿರಾಜ, ನಿನ್ನ ಒಡೆತನದ ಎಲ್ಲ ಭೂಮಿಯೂ ನನ್ನ ಎರಡು ಹೆಜ್ಜೆಗಳಿಗೆ ಸಾಕಾದುವು. ಇನ್ನು ಮೂರನೆಯ ಹೆಜ್ಜೆಗೆ ಸ್ಥಳವೆಲ್ಲಿ?” ಎಂದನು ವಾಮನ.

ಇದನ್ನೆಲ್ಲ ನೋಡುತ್ತಿದ್ದ ದೈತ್ಯರು ಸುಮ್ಮನಿರುತ್ತಾರೆಯೆ? ಬಲಿರಾಜನ ಆಶ್ರಯದಲ್ಲಿ ಲೋಕಗಳನ್ನೇ ಆಕ್ರಮಿಸಿಕೊಂಡು ಆಳಬೇಕೆಂದಿದ್ದ ಅವರಿಗೆ ರೋಷ ಉಕ್ಕಿತು. ಎಲ್ಲರೂ ಆಯುಧಗಳನ್ನು ಹಿಡಿದು ವಾಮನನ ಮೇಲೆ ನುಗ್ಗಿಬಂದರು. ಭಯಂಕರವಾದ ಕೋಲಾಹಲವೆದ್ದಿತು. ಕೈ ಜೋಡಿಸಿ ನಿಂತಿದ್ದ ಬಲಿಯು ದೈತ್ಯರನ್ನು ತಡೆದು “ದೈತ್ಯರೇ, ಹಿಂದೆ ಸರಿಯಿರಿ. ಈತನು ಲೋಕ ಪ್ರಭುವಾದ ವಿಷ್ಣು. ಆತನ ಒಲವಿನಿಂದಲೇ ನೀವೆಲ್ಲ ಒಮ್ಮೆ ದೇವತೆಗಳನ್ನೂ ಜಯಿಸಿದ್ದಿರಿ. ಈಗ ಆತನು ದೇವತೆಗಳನ್ನೂ ಜಯಿಸಿದ್ದಿರಿ. ಈಗ ಆತನು ದೇವತೆಗಳಿಗೆ ಒಲಿದಿದ್ದಾನೆ. ಆದ್ದರಿಂದ ದೇವತೆಗಳು ನಿಮ್ಮನ್ನು ಗೆಲ್ಲುವುದು ಸಹಜ” ಎಂದನು. ದೈತ್ಯರು ಆಗ ಹಿಂಜರಿದರು.

ಬಲಿಚಕ್ರವರ್ತಿಗೆ ಭಗವಂತಹ ಅನುಗ್ರಹ

ಬಾಣಾಸುರನಿಗೆ ತನ್ನ ತಂದೆಯ ಸ್ಥಿತಿಯನ್ನು ಕಂಡು ದುಃಖವೆನಿಸಿತು. ಅವನು ವಾಮನನೊಡನೆ ಇಂತೆಂದನು, “ಜಗತ್ಪಿತಿಯೇ, ನನ್ನ ತಂದೆ ನಿನಗೆ ದಾನಕೊಟ್ಟನೇ ಹೊರತು ಅಪರಾಧ ಮಾಡಲಿಲ್ಲ. ಚಿಕ್ಕ ಶರೀರದಿಂದ ದಾನ ಕೇಳಿ ಅದ್ಭುತ ಶರೀರದಿಂದ ಅಳೆದುಕೊಂಡ ಇದ್ದು ನಿನಗೆ ನ್ಯಾಯವೇ? ನನ್ನ ತಂದೆ ಭೂಮಿ ಎಲ್ಲವನ್ನೂ ಕೊಟ್ಟಿದ್ದಾನೆ. ಈಗ ಅವನಲ್ಲಿ ಉಳಿದಿರುವುದೇನು? ನಿಷ್ಪಕ್ಷ ಪಾತದಿಂದಿರಬೇಕಾದ ನೀನು ದೇವತೆಗಳ ಪಕ್ಷ ವಹಿಸಿ ಅನ್ಯಾಯಕ್ಕೆ ಕೈ ಹಾಕಬಾರದಾಗಿತ್ತು.”

ಬಾಣನ ಮಾತಿಗೆ ವಾಮನಮೂರ್ತಿಯೆಂದನು, “ಬಾಣಾಸುರ, ದಾನ ಪಡೆದವನು ನಾನು, ನನ್ನ ಶರೀರದಿಂದಲೇ ಭೂಮಿ ಅಳೆದುಕೊಂಡೆನೇ ಹೊರತು ಬೇರೆಯವರ ಶರೀರದಿಂದಲ್ಲ. ಇನ್ನು ದೇವತೆಗಳ ಪಕ್ಷ ವಹಿಸಿದ್ದಕ್ಕೆ ಕಾರಣ ಹೇಳುತ್ತೇನೆ. ಶಚೀಪತಿಯಾದ ಶುಕ್ರನಿಗೆ ಇಂದ್ರಪದವಿಯನ್ನು ಕೊಟ್ಟು ಲೋಕಗಳ ವ್ಯವಸ್ಥೆಯನ್ನು ಮಾಡಿದವನು ನಾನು. ಆತನ ಅಧಿಕಾರಾವಧಿ ಮುಗಿಯುವ ಮೊದಲೇ ಇಂದ್ರ ಪದವಿಯನ್ನು ಆಕ್ರಮಿಸುತ್ತಿರುವ ಬಲಿರಾಜನನ್ನು ಶಾಸನ ಮಾಡಬೇಕಾಯಿತು.”

ಅನಂತರ ವಾಮನನು ನಗುತ್ತ ಇಂತೆಂದನು, “ಬಲಿರಾಜ, ಇದು ಕೇವಲ ಪರೀಕ್ಷೆ ಅಷ್ಟೆ.  ನೀನು ವಿಪತ್ತಿನಲ್ಲೂ ದಾನಕ್ಕೆ ಹಿಂಜರಿ ಯಲಿಲ್ಲ. ರಾಜ್ಯವನ್ನೆಲ್ಲ ನಾನು ಪಡೆದುಕೊಂಡರೂ ದುಃಖಿಸಲಿಲ್ಲ. ಬಂಧಿಸಿದರೂ ನೋಯಲಿಲ್ಲ; ಬಂಧು ಮಿತ್ರರು ನಿನ್ನನ್ನು ಬಿಟ್ಟುಹೋದರೂ ವ್ಯಥೆ ಪಡಲಿಲ್ಲ; ಗುರುವಾದ ಶುಕ್ರಾಚಾರ್ಯರು ಶಪಿಸಿದರೂ ಸತ್ಯವನ್ನು ಕೈ ಬಿಡಲಿಲ್ಲ. ನಿನ್ನ ತಾಳ್ಮೆ ಯಾರಿಗಿದೆ? ನಿನ್ನ ಕೀರ್ತಿಯಿಂದ ನಿನಗೆ ದೇವತೆಗಳಿಗಿಂತಲೂ ಹೆಚ್ಚಿನ ಸ್ಥಾನ ಲಭಿಸಿದೆ. ನೀನು ಕಲ್ಪಾಂತದವರೆಗೆ ಚಿರಾಯುವಾಗು. ನಿನಗೆ ಇನ್ನೇನು ಬೇಕೋ ಕೇಳು.”

“ಲೋಕೇಶ್ವರ, ನಿನ್ನ ನಿಗ್ರಹಕ್ಕೆ ನಾನು ನೋಯುವುದಿಲ್ಲ. ದರ್ಪವು ಬಹಳ ಕೆಟ್ಟದ್ದು. ಮದಾಂಧರಾದ ದೈತ್ಯರಿಗೆ ನೀನು ಮಾಡಿದ ಶಾಸ್ತ್ರಿಯಿಂದ ಒಳ್ಳೆಯ ಶಿಕ್ಷಣ ಲಭಿಸಿತು. ಇವೆಲ್ಲವನ್ನೂ ನಾನು ಸಹಿಸಬಲ್ಲೆ. ಆದರೆ ಕೊಟ್ಟ ಮಾತಿಗೆ ತಪ್ಪಿದವನೆಂಬ ಅಪಕೀರ್ತಿಯನ್ನು ನನ್ನ ತಲೆಗೆ ಹೊರಿಸಬೇಡ. ನಿನ್ನ ಮೂರನೆಯ ಹೆಜ್ಜೆಯನ್ನು ನನ್ನ ತಲೆಯ ಮೇಲೆ ಅಳೆದುಕೊಂಡು ನಾನು ಕೊಟ್ಟ ದಾನವನ್ನು ಪೂರ್ಣಗೊಳಿಸು!”

ಬಲಿರಾಜನ ಬೇಡಿಕೆಯನ್ನು ವಾಮನಮೂರ್ತಿಯು ಈಡೇರಿಸಿದನು. ಬಲಿಯು ಶ್ರೀಹರಿಯ ಪಾದವನ್ನು ತನ್ನ ತಲೆಯಮೇಲೆ ಹೊತ್ತು ಋಣಮುಕ್ತನಾದನು. ಎಲ್ಲರೂ, “ಭಕ್ತರಾಜ, ದಾನವೀರ, ಲೋಕಪೂಜ್ಯ, ಬಲಿ ಚಕ್ರವರ್ತಿ!” ಎಂದು ಘೋಷಿಸಿ ಕಣ್ಣುಗಳಿಂದ ಆನಂದಬಾಷ್ಪ ಹರಿಸಿದರು.

ವಾಮನನು ತಾನು ದಾನಾವಾಗಿ ಪಡೆದ ಮೂರು ಲೋಕಗಳ ಒಡೆತನವನ್ನು ಇಂದ್ರನಿಗೆ ವಹಿಸಿಕೊಟ್ಟನು. ದೇವತೆಗಳು ಸಂತೋಷದಿಂದ ವಾಮನನನ್ನು ಹೊಗಳಿ ಬಲಿಚಕ್ರವರ್ತಿಯ ದಾನವನ್ನು ಕೊಂಡಾಡಿದರು. ಎಲ್ಲರ ಎದುರಿನಲ್ಲೇ ವಾಮನಮೂರ್ತಿ ಇಂತೆಂದನು:

“ದಾನವೇಂದ್ರ, ನಿನಗೆ ಪಾತಾಳ ಭೂಮಿಯ ಸುತಲ  ಲೋಕವನ್ನು ಕೊಟ್ಟಿದ್ದೇನೆ. ಅಷ್ಟೇ ಅಲ್ಲ, ಒಂದು ವರವನ್ನು ಕೊಡುತ್ತೇನೆ. ಸುತಲಲೋಕದಲ್ಲಿ ನಾನು ಜನಾರ್ಧನ ರೂಪಿನಿಂದ ನಿನ್ನ ದುರ್ಗಪಾಲಕನಾಗಿ ಬಾಗಿಲು ಕಾಯುತ್ತ ಶತ್ರುಗಳನ್ನು ನಿಗ್ರಹಿಸುತ್ತೇನೆ.  ನಿನಗೆ ಬೇಕಾದ ಇನ್ನೊಂದು ವರವನ್ನು ಕೇಳಿಕೋ.

‘ಗುರುದೇವ, ವಿಪತ್ತುಗಳಿಗೆ ಹಿಂಜರಿಯದೆ ಮಾಡುವ ದಾನವೇ ಶ್ರೇಷ್ಠ’

“ಸ್ವಾಮಿಯೇ, ನೀನು ನನ್ನ ದುರ್ಗಪಾಲಕನಾಗಿ ಬ್ರಹ್ಮ-ರುದ್ರ-ಲಕ್ಷ್ಮಿಯರಿಗೂ ಸಿಕ್ಕದಂತಹ ನಿತ್ಯದರ್ಶನ ಭಾಗ್ಯವನ್ನು ಕೊಟ್ಟೆ. ಇನ್ನು ಬೇಡುವುದೇನಿದೆ? ಆದರೂ ನಿನ್ನ ಆಜ್ಞೆಯಂತೆ ಇನ್ನೊಂದು ವರ ಬೇಡುತ್ತೇನೆ. ಸುತಲಕ್ಕೆ ಹೋದರೂ ನಾನು ನನ್ನ ಈ ರಾಜ್ಯದ ಪ್ರಜೆಗಳನ್ನು ಮರೆಯಲಾರೆ. ಆದ್ದರಿಂದ ವರ್ಷಕ್ಕೊಮ್ಮೆ ಯಾರಾದರೂ ನನ್ನ ಪ್ರಜೆಗಳ ಆನಂದವನ್ನು ನಾನು ನೋಡುವ ಹಾಗೆ ವರವನ್ನು ಕೊಡು”.

“ತಥಾಸ್ತು, ನಿನ್ನಿಷ್ಟದಂತೆಯೇ ಆಗಲಿ. ನನಗೆ ದಾನವನ್ನು ಕೊಟ್ಟ ಈ ಪುಣ್ಯದಿನವನ್ನು ಪ್ರತಿವರ್ಷವೂ ಮಾನವರು ಹಬ್ಬವಾಗಿ ಆಚರಿಸುವರು. ಅಂದು  ಈ ಭೂಮಿಯು ಬಲಿಯ ರಾಜ್ಯವಾಗಿರುತ್ತದೆ. ಜನರು ಹಗಲಿನಲ್ಲಿ ನಿನ್ನನ್ನು ಪೂಜಿಸಿ, ರಾತ್ರಿಯಲ್ಲಿ ಆದರ್ಶ ಮತ್ತು ಹರ್ಷಸೂಚಕವಾಗಿ ದೀಪಗಳನ್ನು ಬೆಳಗಿಸುತ್ತಾರೆ!”

ಹೀಗೆಂದು ವರವನ್ನಿತ್ತು ವಾಮನನು ಬ್ರಹ್ಮನೊಡನೆ ಹೊರಟು ಹೋದನು. ಭಕ್ತನಾದ ಬಲಿಯು ಪ್ರಹ್ಲಾದನೇ ಮೊದಲಾದ ಬಂಧು ಮಿತ್ರರೊಂದಿಗೆ ಕೆಳಗಿನ ಸುತಲಲೋಕದಲ್ಲಿ ನೆಲೆಸಿದನು. ಅಲ್ಲಿ ಜನಾರ್ಧನ ಸ್ವಾಮಿಗಾಗಿ ಸುಂದರ ದೇವಾಲಯವನ್ನು ಕಟ್ಟಿಸಿದನು. ಶ್ರೀಹರಿಯು ತನ್ನ ಮಾತಿನಂತೆ ಜನಾರ್ಧನ ರೂಪಿನಿಂದ ಬಲಿರಾಜನ ಗೃಹರಕ್ಷಕನಾಗಿ ಅಲ್ಲಿ ನೆಲೆಸಿದನು.

ಬಲಿಪಾಡ್ಯಮಿದೀಪಾವಳಿ

ಭಕ್ತ ರಾಜನಾದ, ಬಲಿಚಕ್ರವರ್ತಿ ತನ್ನ ದಾನದಿಂದ ಭಗವಂತನನ್ನು ಒಲಿಸಿದ, ದಾನದಿಂದಲೇ ಲೋಕಪ್ರಿಯನಾದ, ದಾನದಿಂದಲೇ ಆತನ ರಾಜ್ಯ ಸುಭಿಕ್ಷವಾಯಿತು, ದಾನದಿಂದಲೇ ದೇವರೂ ಸಹ ಮೆಚ್ಚಿ ಆತನ ಗೃಹರಕ್ಷಕನಾದನು.

ಬಲಿಚಕ್ರವರ್ತಿ ವಾಮನಮೂರ್ತಿಗೆ ಭೂದಾನ ಮಾಡಿದ್ದು ಕಾರ್ತಿಕ ಮಾಸದ ಶುದ್ಧ ಪಾಡ್ಯಮಿಯಂದು. ಅಶ್ವಯುಜ ಅಮಾವಾಸ್ಯೆಯ ದೀಪಾವಳಿಯ ಮರುದಿನದ ಈ ತಿಥಿಯನ್ನು ‘ಬಲಿ ಪಾಡ್ಯಮಿ’ ಎನ್ನುತ್ತೇವ. ಭಾರತೀಯರಿಗೆ ಇದು ಪವಿತ್ರವಾದ ಹಬ್ಬ. ಆ ದಿನ ನಾವು ಕೊಡುವ ದಾಣಗಳು ಬಲಿರಾಜನಿಗೂ ಭಗವಂತನಿಗೂ ಪ್ರಿಯವಾಗುತ್ತವೆ ಎಂದು ನಂಬಿಕೆ. ಅಂದು ಬೆಳಿಗ್ಗೆ ಅಭ್ಯಂಜನ ಮಾಡಿ ಹೊಸ ಬಟ್ಟೆ ಧರಿಸುತ್ತೇವೆ. ನಡುಮನೆಯಲ್ಲಿ ಪಂಚವರ್ಣದ ರಂಗೋಲಿ ಹಾಕಿ ಬಲಿಚಕ್ರವರ್ತಿಯನ್ನೂ ಆತನ ಪತ್ನಿಯಾದ ವಿಂಧ್ಯಾವಳಿಯನ್ನೂ ಪೂಜಿಸುತ್ತೇವೆ. ಕೆಲವರು ಮಣ್ಣಿನಿಂದಲೋ ಗೋಮಯದಿಂದಲೋ ಬಣ್ಣ ಬಣ್ಣಗಳಲ್ಲಿ ಏಳು ಸುತ್ತಿನ ಕೋಟೆ ಕಟ್ಟಿ ಬಲಿರಾಜನನ್ನು ಪೂಜಿಸುವುದುಂಟು. ರಾತ್ರಿ ಮನೆಯ ಹೊಸ್ತಿಲುಗಳಲ್ಲೂ ದೇವಮಂದಿರಗಳಲ್ಲೂ ಎಲ್ಲೆಲ್ಲೂ ಸಾಲುಸಾಲಾಗಿ ದೀಪಗಳನ್ನು ಬೆಳಗುತ್ತೇವೆ. ಬಲಿಯ ರಾಜ್ಯವನ್ನು ನೆನಪು ಮಾಡಿಕೊಂಡು “ಬೇಗನೆ ಬಲಿಯ ಆದರ್ಶ ರಾಜ್ಯ ಭೂಮಿಯಲ್ಲಿ ಬರಲಿ” ಎಂದು ಹರ್ಷದಿಂದ ಘೋಷಿಸುತ್ತೇವೆ.