ಹೆಡೆಯಂತಾಡುವ ಸೊಡರಿನ ಕುಡಿಗೆ
ಜ್ವಾಲಾರೂಪದ ಸಾವಿನ ಮುಡಿಗೆ
ಮೋಹಿಸಿ ಮುದ್ದಿಸಲೆಳಸುವ ಚಿಟ್ಟೆ
ಹಾರಿತು, ರೆಕ್ಕೆಗಳುರಿಯನು ಮುಟ್ಟೆ.
ಬಿದ್ದಿತು ಭೂಮಿಗೆ “ಅಯ್ಯೋ” ಎಂದು
ನರಳಿತು ಜ್ವಾಲೆಯ ಜಿಹ್ವೆಗೆ ಸಂದು.
ಏನೂ ಅರಿಯದ ಮೋಹಿನಿಯಂತೆ
ಸೊಡರಿನ ಕುಡಿ ಹೆಡೆಯಾಡಿಸಿತು.
ದೀಪದ ಬುಡದಲಿ ಮಲಗಿದ ಕತ್ತಲು
ಚಿಟ್ಟೆಯ ಮೆಲ್ಲನೆ ಮುದ್ದಿಸಿತು.

ಕೆಳಗಡೆ ನರಳುತ ಬಿದ್ದ ಪತಂಗ
“ಅಯ್ಯೋ ಸಾಕೀ ಮೋಹದ ಸಂಗ”
ಎನ್ನುತ ನೋವಿಗೆ ಹೊರಳುತಿರೆ.
ಸೊಡರಿನ ಕುಡಿಯದು ನಸು ಬಳುಕಾಡಿರೆ
ಮೋಹದ ನರ್ತಕಿಯಂದದಲಿ,
ಮತ್ತದೊ ಬರುತಿದೆ ಬೇರೆ ಪತಂಗ
ಕುಣಿಯುತ ನಲಿಯುತ ಹಾರಾಡಿ
ಯೌವನ ಮದದಲಿ ಭೋರಾಡಿ.

ಕೆಳಗಡೆ ನರಳುತ ಬಿದ್ದಾ ಕೀಟ,
ಕೂಗಿತು ‘ಅಯ್ಯೋ ಬೇಡವೊ ಆಟ
ಹೆಡೆಯಂತಾಡುವ ಕುಡಿಯಲ್ಲಿ
ನೋಡಿದೊ ಬಿದ್ದಿಹೆ ನಾನಿಲ್ಲಿ,
ಗರಿಸೀಯಲು ಈ ಮಣ್ಣಿನಲಿ
ಹೂವಲ್ಲವೊ ಅದು ಬೆಂಕಿಯಜ್ವಾಲೆ
ನುಂಗುವ ಕಾಲನ ಕಣ್ಣಿಯಮಾಲೆ’

ಸೊಡರನು ಮುದ್ದಿಸಲೆಳಸುವ ಚಿಟ್ಟೆ
ಹಾಸ್ಯದಿ ನಕ್ಕಿತು ಇದ ನೋಡಿ ;
ಕಳಗಡೆ ನರಳುತ ಬಿದ್ದಾ ಚಿಟ್ಟೆ
ಸುಯ್ಯಲನಿಟ್ಟಿತು ಹನಿಗೂಡಿ.

ಬೆಳುಬೆಳಗುತ ಬಳುಕಾಡುವ ಕುಡಿ
ಬಾ ಬಾರೆನ್ನುತ ನರ್ತಿಸಿತು,
ಭೋಗಾವೇಶದಿ ಹಾರುವ ಚಿಟ್ಟ್ಟೆ
ದೀಪದ ಕುಡಿಯೆಡೆ ಧಾವಿಸಿತು !